ಹಕ್ಕಿಗಳು ಹಾರುವುದನ್ನು ನೋಡಿದ ಜನ ತಾವೂ ಹಾರಬೇಕೆಂದು ಒಮ್ಮೆಯಾದರೂ ಕನಸು ಕಾಣುತ್ತಾರೆ. ಕೆಲವರು ಮರದ ಕೊಂಬೆಯಿಂದ ಹಾರಿ ಕೈ ಕಾಲು ಮುರಿದುಕೊಳ್ಳುತ್ತಾರೆ. ಕೆಲವರು ಟೆರೇಸ್‌ನಿಂದ ಹಾರಿ ಸೊಂಟ ಮುರಿದುಕೊಳ್ಳುತ್ತಾರೆ.

”ನಮಗೇಕೆ ರೆಕ್ಕೆಗಳಿಲ್ಲ” ಪ್ರತಿಯೊಬ್ಬರ ಮನದಲ್ಲೂ ಒಮ್ಮೆಯಾದರೂ ಮೂಡುವ ಪ್ರಶ್ನೆ. ಕೈಯನ್ನು ಜೋರಾಗಿ ಬೀಸಿ ಹಾರಬಹುದೇನೋ ಎಂದು ಪ್ರಯತ್ನಿಸುವವರು ಈಗಲೂ ಇದ್ದಾರೆ. ನಾವು ಕುಪ್ಪಳಿಸಬಹುದೇ ವಿನಹ ಹಾರಲಾಗದು.

ಕೆಲವರು ಗುಡ್ಡದಿಂದಲೋ ಎತ್ತರದ ಕೊಂಬೆಯಿಂದಲೋ ಜಿಗಿದರೆ ಗಾಳಿಯಲ್ಲಿ ತೇಲಬಹುದೆಂದುಕೊಳ್ಳುತ್ತಾರೆ. ಆದರೆ ನೆಲಕ್ಕೆ ಅಪ್ಪಳಿಸಿದ ಮೇಲೆ ಎಚ್ಚರ ಬರುವುದು ಆಸ್ಪತ್ರೆಯ ಹಾಸಿಗೆಯ ಮೇಲೆ. ಹಾರಲಾಗದ ನಾವು ಸೊಳ್ಳೆಗಳಿಗಿಂತಲೂ ಕಡೆಯಾದೆವಲ್ಲಾ ಎಂದು ಹಲುಬುವವರೂ ಇದ್ದಾರೆ. ಎಷ್ಟೋ ಜನ ಹಾರಲು ಇನ್ನಿಲ್ಲದ ಪ್ರಯತ್ನ ಮಾಡಿ ಸತ್ತು ಹೋಗಿದ್ದಾರೆ. ಒಟ್ಟಾರೆ ಕೃತಕ ರೆಕ್ಕೆಗಳು ನಮಗೆ ಹಾರಲು ಅನುವು ಮಾಡಿಕೊಡುವುದಿಲ್ಲ.

ಆದರೆ ರೆಕ್ಕೆಗಳ ರೀತಿಯ ರಚನೆ ತೇಲುವಂತೆ ಮಾಡಬಲ್ಲದು ಎಂಬುದನ್ನು ಗಾಳಿಪಟ ತೋರಿಸಿಕೊಟ್ಟಿತು. ಗಾಳಿಪಟವನ್ನೇ ಹಾರಿಸಿದಾಗ ತಾವೇ ತೇಲಿದಂತಹ ಭ್ರಮೆಯು ಜನರಿಗೆ ಸ್ವಲ್ವ ಕಾಲ ಉಂಟಾಗುತ್ತದೆ. ಈ ಗಾಳಿಪಟವನ್ನೇ ದೊಡ್ಡದು ಮಾಡಿದರೆ ಎಷ್ಟು ಭಾರ ಹೊರಬಲ್ಲದು ಎಂಬ ಆಲೋಚನೆ ಮತ್ತಷ್ಟು ಪ್ರಯೋಗಕ್ಕೆ ದಾರಿಯಾಯಿತು.

 

ಹಕ್ಕಿಯಂತೆ ರೆಕ್ಕೆಗಳು, ಬಾಲ, ಚೂಪಾದ ಮೂತಿ ಹೀಗೆ ಹಾರುವ ಮಾದರಿಯ ಅನುಸರಣೆ. ಆದರೂ ತೇಲಲು ಮಾತ್ರ ಸಾಧ್ಯವಾಯಿತು. ಅದೇ ಗ್ಲೈಡರ್ ಎಂದು ಹೆಸರಾಯಿತು. ಆದರೆ ನೆಲಕ್ಕಿಳಿಯುವುದು, ನೆಲದಿಂದ ಮೇಲೇರುವುದು ಎರಡೂ ಸಮಸ್ಯೆಯೇ ಆಗಿತ್ತು. ಆಗಲೇ ಆಟೊಮೊಬೈಲ್ ಇಂಜಿನ್‌ಗಳ ಆವಿಷ್ಕಾರವಾಯಿತು. ಈ ಇಂಜಿನ್‌ಗಳು ನೆಲದ ಮೇಲೆ ಓಡಬಲ್ಲದು ಎಂದಾದರೆ ಆಕಾಶದಲ್ಲೂ ಕೆಲಸ ಮಾಡಬಹುದು ಎಂದು ತಂತ್ರಜ್ಞರಿಗೆ ಅನ್ನಿಸಿದ್ದೇ ತಡ ಮತ್ತೆ ಹಾರುವ ಯೋಚನೆಗೆ ಮತ್ತಷ್ಟು ಕ್ರಿಯಾಶೀಲತೆ ಬಂತು.

ಆಗಲೇ ಓರ್‌ವಿಲ್ಲೆ ಮತ್ತು ವಿಲ್‌ಬರ್ ಇಬ್ಬರೂ ತಮ್ಮ ಗ್ಯಾರೇಜ್‌ನಲ್ಲಿ ಒಂದು ಮಾದರಿ ಸಿದ್ಧಪಡಿಸಿದರು. ಗಟ್ಟಿಯಾದ ಹಗುರವಾದ ರೆಕ್ಕೆಗಳುಳ್ಳ ಗ್ಲೈಡರ್‌ಗೆ ಎರಡೂ ಪ್ರೊಪೇಲರ್‌ಗಳು ಹಾಗೂ ಒಂದು ಪೆಟ್ರೋಲ್ ಇಂಜಿನ್ ಜೋಡಿಸಿದರು. ಸಮುದ್ರತೀರದ ವಿಶಾಲ ಪ್ರದೇಶಕ್ಕೆ ಅದನ್ನು ಒಯ್ದರು. ಓರ್‌ವಿಲ್ಲೆ ಆ ವಿಮಾನದೊಳಗೆ ಕುಳಿತರೆ ವಿಲ್‌ಬರ್ ಇಂಜಿನ್ ಸ್ಟಾರ್‍ಟ್ ಮಾಡಿದ. ವಿಮಾನವೂ ಅತ್ತ ಇತ್ತ ಓಲಾಡುತ್ತಾ, ಸಮುದ್ರ ತೀರದ ಸುತ್ತ ತಿರುಗಿ ಇದ್ದಕ್ಕಿದ್ದಂತೆ ಮೇಲೇರಿತು. ಆದರೆ ವಿಪರೀತವಾಗಿದ್ದ ಗಾಳಿಯ ಒತ್ತಡವನ್ನು ತಡೆಯಲಾಗದೆ ಬಿದ್ದುಹೋಯಿತು. ೧೨ ಸೆಕೆಂಡ್‌ಗಳಷ್ಟು ಹಾರಿದ ವಿಮಾನ ಹಾಗೂ ರೈಟ್ ಸಹೋದರರ ಹೆಸರು ಪ್ರಖ್ಯಾತವಾಯಿತು.

ಹೀಗೆ ಮನುಷ್ಯ ಹಾರುವ ಪ್ರಯತ್ನದಲ್ಲಿ ಸಫಲನಾಗಿದ್ದ. ಮುಂದೆ ಅನೇಕ ರೀತಿಯ ವಿಮಾನಗಳು ಬಂದವು. ಹಕ್ಕಿಗಳು, ಪಕ್ಷಿಗಳ ಬಗ್ಗೆ ಸಂಶೋಧನೆ ನಡೆದಂತೆಲ್ಲಾ ವಿಮಾನ ತಯಾರಿಕೆಯಲ್ಲೂ ಅನೇಕ ಪರಿಷ್ಕಾರಗಳು ನಡೆದವು. ಹಕ್ಕಿ-ಪಕ್ಷಿಗಳ ಹಗುರವಾದ ಪುಕ್ಕಗಳು, ರೆಕ್ಕೆಯಲ್ಲಿರುವ ಹಗುರ ಆದರೆ ಗಟ್ಟಿಯಾದ ಟೊಳ್ಳಾದ ಮೂಳೆಗಳು, ಮೂತಿಯ ವಿನ್ಯಾಸ, ಬಾಲದ ವಿನ್ಯಾಸ, ಹಾರುವಾಗ ಅವು ಅದನ್ನೆಲ್ಲಾ ವಾತಾವರಣಕ್ಕೆ ತಕ್ಕಂತೆ ಮಾರ್ಪಡಿಸಿಕೊಳ್ಳುವ ರೀತಿ ಹೀಗೆ ಏನೆಲ್ಲಾ ಅಳವಡಿಸಿಕೊಂಡು ವಿಮಾನಗಳು ಸಿದ್ಧವಾಗತೊಡಗಿದ್ದವು. ಇಂದು ವಿಮಾನಗಳು ಹಕ್ಕಿ-ಪಕ್ಷಿಗಳಿಗಿಂತಲೂ ಮೇಲೇರಿ ಹಾರುತ್ತವೆ. ವೇಗವಾಗಿ ಚಲಿಸುತ್ತವೆ. ಖಂಡಾಂತರ ಪ್ರಯಾಣ ಮಾಡುತ್ತವೆ.