ಕಣಿವೆ ತಳದೊಳು ಕೊಳೆವ ಜೊಂಡಾಗದಿರು ಮಗುವೆ,
ಬೆಟ್ಟಗುಡ್ಡವ ಹೀರಿ ತೇಗವಾಗು,
ತಲೆಯ ಬಾಗದೆ ನಿಂತು, ಕೊಂಬೆ ರೆಂಬೆಯ ಚಾಚಿ
ಮಳೆ-ಬಿಸಿಲು-ಗಾಳಿಗಳ ತೊಟ್ಟಿಲಾಗು.

ಕಡಲೆಡೆಗೆ ತುಡಿವೆದೆಯ ಹತ್ತು ದಿಕ್ಕಿಗೆ ಹರಿಸಿ
ಯಾವುದೇ ‘ಸಹರ’ದಲಿ ಇಂಗಿಸದಿರೋ.
ತಂಗು ಒಂದೆಡೆ ನೀನು, ಅಣೆಕಟ್ಟುಗಳ ಕಟ್ಟು,
ಸುತ್ತ ಬಂಜರುನೆಲವ ಹಸುರಾಗಿಸೋ.

ಹಸುರು ಹಾವಸೆಹಬ್ಬಿ ಕೊಳೆವ ಕೊಳವಾಗದಿರು
ಲಲಿತ ನಿರ್ಮಲ ಜಲದ ಕಾಸಾರವಾಗು,
ರವಿಕಿರಣ ಮಿಡಿದಿರಲು, ಮೀನು-ಹೂ-ಹಕ್ಕಿಗಳ
ದುಂಬಿಗುಂಜಾರವದ ಸ್ವರಮೇಳವಾಗು.

ಸದ್ಯಕ್ಕೆ ಬೇಡಬಿಡು ದೂರಗಿರಿನೆತ್ತಿಗಳ
ಮಂಜಿನಾಚೆಗೆ ನಿಂತು ಕರೆವ ತಾರೆ.
ಇರುವ ಹಣತೆಗೆ ಮೊದಲು ಎಣ್ಣೆಬತ್ತಿಯನೂಡು,
ಹಳೆಯ ಪಣತದ ಕಾಳ ಮಾಡದಿರು ಸೂರೆ.

ಕಣ್ಣೆತ್ತಿಯೂ ನೋಡದಿರು ಈ ದೊಡ್ಡವರ ಸಣ್ಣ-
ತನದತ್ತ ; ಬಿಟ್ಟುಬಿಡು ಅವರನ್ನು ಅತ್ತಕಡೆಗೆ.
ಕೆಟ್ಟ ಇಟ್ಟಿಗೆಯಿಂದ ಕಟ್ಟದಿರು ಹೊಸ ಮನೆಯ,
ನಾಳಿನಾಸೆಯಶಿಖರ ನೀನೆ ನಮಗೆ !