ಇದು ಈ ಸಂಗ್ರಾಹಕನ ಒನಕೆವಾಡುಗಳ ಮೂರನೆಯ ಸಂಕಲನ. ಉತ್ತರ ಕನ್ನಡದ ಜನಜೀವನ ಚಿತ್ರಣ ಒನಕೆವಾಡುಗಳಲ್ಲಿ ಕಾಣುವಷ್ಟು ಇತರ ಸಾಹಿತ್ಯ ಪ್ರಕಾರಗಳಲ್ಲಿ ಕಾಣುವದಿಲ್ಲ. ಇವು ಹಳ್ಳಿಯ ಹೆಂಗಸರ ಭಾವಗೀತೆಗಳು. ಇಲ್ಲಿಯ ತ್ರಿಪದಿಗಳಲ್ಲಿ ಹಳ್ಳಿಯ ಜೀವನ ಜೋಕಾಲಿಯನ್ನು ಕಾಣಬಹುದು.

ಹೆಚ್ಚಾಗಿ ಹೆಂಗಸರೇ ಭತ್ತ ಕಟ್ಟುವದಾದರೂ ಹಿಂದಿನ ಕಾಲದಲ್ಲಿ ಗಂಡಸರೂ ಸಹ ಭತ್ತ ಕುಟ್ಟುವಲ್ಲಿ ಹೆಂಗಸರಿಗೆ ನೆರವಾಗುತ್ತಿದ್ದರೆಂದು ಕಾಣುತ್ತದೆ. ಇದಕ್ಕೆ ಮದುವೆಯಲ್ಲಿ ವಧೂವರರು ಕೂಡಿಯೇ ಭತ್ತ ಕುಟ್ಟುವ ಪದ್ಧತಿಯಿದ್ಧುದು ಆಧಾರವಾಗಿದೆ. ಇಂಥ ಹಾಡುಗಳಲ್ಲಿ ಒಂದನ್ನು ಈ ಸಂಗ್ರಾಹಕನ “ಸುವ್ವೀ ಸುವ್ವೀ ಸುವ್ವಾಲೆ” ಎಂಬ ಸಂಕಲನದಲ್ಲಿ ನೋಡಬಹುದು. ಅಲ್ಲಿ ಅಣ್ಣ ತಂಗಿಯರಿಗೆ ಸಂಬಂಧಿಸಿದ ಕಥೆಯೊಂದಿದೆ.

ಇಲ್ಲಿ “ಮದುವೆಯ ಮುಹೂರ್ತದ ಭತ್ತ ಮೆರಿಯುವ ಹಾಡು” ಬಂದಿದೆ. ಇಲ್ಲಿ ಮದುವೆಯ ಸಿದ್ಧತೆಯಲ್ಲಿ ಭತ್ತ ಕುಟ್ಟಿ ಅಕ್ಕಿಯನ್ನು ಮಾಡುವ ಕೆಲಸದಲ್ಲಿ ಹೆಂಗಸರು ತೊಡಗಿದುದರ ವರ್ಣನೆಯಿದೆ. ಇದು ಮದುವೆಯ ಹಾಡುಗಳಲ್ಲಿ ಸೇರುವುದಾದರೂ ಭತ್ತ ಕುಟ್ಟುವಾಗಲೇ ಹೇಳುವುದರ ಮೂಲಕ ಭತ್ತ ಕುಟ್ಟುವ ಹಾಡುಗಳ ಸಾಲಿನಲ್ಲಿಯೂ ಸೇರುವಂಥದು.

ಈ ಹಾಡು ಗಣಪತಿಯ ಸ್ತುತಿಯಿಂದ ಪ್ರಾರಂಭವಾಗುವುದರಿಂದ ಮದುವೆಯನ್ನು ನಿಶ್ಚಯಿಸಿದ ದಿನವೇ ಭತ್ತ ಕುಟ್ಟುವ ಸಂಪ್ರದಾಯವಿತ್ತೆಂದೂ ಆಗ ಈ ಕಾರ್ಯದ ತಯಾರಿಯ ಕೆಲಸ ಮಾಡುತ್ತ ಈ ಹಾಡನ್ನು ಹೇಳಿ ಭತ್ತ ಕುಟ್ಟುತ್ತಿದ್ದರೆಂದೂ ಹೇಳಬಹುದು.

ಮನೆಯ ನೆಲ-ಗೋಡೆಗಳಿಗೆ ಹಲಿ (ಚಿತ್ರ) ಬರೆಯುವ ಕಾರ್ಯಕ್ರಮದಲ್ಲಿ ಚಿತ್ರಾಂಬರ ಕದುರು (ಕದಿರು) ಮತ್ತು ಸೂರ್ಯನ ಕದಿರು ಬರೆಯುವರೆಂದು ಹಾಡಿನಲ್ಲಿ ಹೇಳಿದೆ. ಇಲ್ಲಿ ಬಳಸುವ ಒನಿಕೆ ಚಂದನದ ಒನಿಕೆ. ಅದಕ್ಕೆ ಶೃಂಗಾರವಾಗಿ ಕಾಣಲು ಮುತ್ತಿನ ಪಂತಿಯನ್ನು ಇಟ್ಟು ಉಪಯೋಗಿಸುವರೆಂಬ ಬಣ್ಣನೆಯಲ್ಲಿ ಹಳ್ಳಿಯ ಹೆಂಗೆಳೆಯರ ಸೌಂದರ್ಯ ದೃಷ್ಟಿಯನ್ನು ಕಾಣಬಹುದು. ಹೀಗೆಯೇ ನೆರೆಮನೆಯ ಅಕ್ಕ- ತಂಗಿಯರನ್ನು ಕರೆವಾಗ “ಗಂಧದ ಬಗತಲೆ (ಬೈತಲೆಯ) ಗಮನೆ (ಸುವಾಸಿನಿ) ಯರೇ” ಎಂಬ ಮಾತಿನಲ್ಲಿಯೂ ಕಾಣಬಹುದು.

ಭತ್ತ ಕುಟ್ಟಿದ ಒನಿಕೆ ಅಂಥಿಂಥದಾಗಿರಬಾರದು. ಪಾಂಡವರು ಮತ್ತು ಕೌರವರು ಕೆತ್ತಿದ ಒನಿಕೆ. ಅಂಥ ಒನಿಕೆಯಾದರೆ ಚೆಂಡಾಡಿದಂತೆ “ನಾನು ಭತ್ತವನ್ನು ಮೆರೆಯುತ್ತೇನೆ” ಎಂದು ಒಬ್ಬಳು ಹೇಳಿದ್ದಾಳೆ.

ಒಬ್ಬಳೇ ಭತ್ತ ಮೆರಿಯುವಲ್ಲಿ ಸೊಗಸಿಲ್ಲ. ಹಳ್ಳಿಗರಿಗೆ ಜನರ ಗುಂಪಿನಲ್ಲಿ ಕೆಲಸ ಮಾಡುವುದೇ ಆನಂದದ ವಿಷಯ. ಹದಿನಾರು ಜನ ಒನಿಕೆಗಳನ್ನು ಹಿಡಿದು ಭತ್ತ ಕುಟ್ಟುವುದೇ ಅವರಿಗೆ ಉತ್ಸಾಹಕರ. “ಗೋಕುಲದಲ್ಲಿರುವ (ಹದಿನಾರು) ಗಿಳಿಗಳು ನಾವು. ಚೆಲ್ಲಾಡಿ ಭತ್ತ ಮೆರಯೋಣ” ಎಂದು ಒಬ್ಬಳು ಹಾರೈಸಿದ್ದಾಳೆ. ಹಸಿರು ಸೀರೆಯುಟ್ಟುಕೊಂಡು ಪರಸ್ಪರ ಗಿಳಿಗಳಂತೆ ಮಾತಾಡುತ್ತಾ. ಹಾಡುತ್ತ ಮೆರಿವುದರಲ್ಲಿರುವ ಸೊಗಸು ಗುಮ್ಮಕ್ಕಿ (ಗೂಗಿ) ಯಂತೆ ಒಬ್ಬಳೇ ಸುಮ್ಮನೆ ಮೆರಿವುದರಲ್ಲಿಲ್ಲ.

ಮನದಲ್ಲಿ ಬಹಳ ಸಿರವಂತರಾದರೂ ಹಳ್ಳಿಯ ಒಕ್ಕಲಿಗರು ಬಡವರೇ. ತೆಳ್ಳನ್ನ ಗಂಜಿಯೂಟವನ್ನು ಉಂಡು, ಭತ್ತ ಕುಟ್ಟುವ ಶ್ರಮದ ಕೆಲಸದಲ್ಲಿ ತೊಡಗಿದಾಗ ಇಡೀ ದಿನದ ಆ ಕೆಲಸದಲ್ಲಿ ಹೊಟ್ಟೆ ಹಸಿಯದೆ ಇರುತ್ತದೆಯೇ? ಆದರೆ ಆ ಗರತಿ ಹಸಿವಾದರೆ ತಣ್ಣೀರನ್ನು ಕುಡಿದು, ಯಂತ್ರದಂಥ (ಜಂತನುದ) ಒನಿಕೆಯನ್ನು ಹಿಡಿದು ತಾಯವ್ವಿಯ ಮೊಲೆ ಹಾಲನ್ನು ಕುಡಿದ ಬಾಲ್ಯದ ಸುಖದ ದಿನಗಳನ್ನು ನೆನೆಯುವೆನೆಂದು ಭಾವಪೂರ್ಣವಾಗಿ ಹೇಳುತ್ತಾಳೆ.

ಭತ್ತದ ಕಳ (ಕಣ)ದ ಸುತ್ತಲು, ಎತ್ತು ಬಂದು ಭತ್ತವನ್ನು ಮೆಟ್ಟಬಾರದೆಂದು ಸಂಪಿಗೆಗಿಡಗಳ ಸಸಿಗಳನ್ನು ಸುತ್ತಲೂ ನೆಟ್ಟರಂತೆ. ಇಲ್ಲಿ ಸಂಪಿಗೆ ಗಿಡ ದೊಡ್ಡದಾಗಿ ಹೂಗಳನ್ನು ಬಿಡಬಹುದು, ಅವನ್ನು ಮುಡಿಯಬಹುದೆಂಬ ಆಸೆಯಿಂದ ನೆಟ್ಟಿರಬಹುದು. ಆದರೆ ಸಸಿಗಳಿಂದ ಎತ್ತುಗಳಿಗೆ ತಡೆಕಟ್ಟಲಾದೀತೇ? ಅವರ ಮನೆಯವರ ಅಚ್ಚು ಮೆಚ್ಚಿನ ಹಂಡೆತ್ತು (ಬಿಳಿ ಬಣ್ಣದ ವರ್ತುಲಗಳು ಮೈಮೇಲಿರುವ ಎತ್ತು) ಬಂದು ಅಂಗಳದಲ್ಲಿ ಹರವಿದ ಭತ್ತವನ್ನು ತಿಂದಿತು. ದೊಡ್ಡದಾದ ಮೇಲೆ ಬೇಲಿಯ ಆಧಾರವಾಗುವದಾದರೂ ಸಸಿಗಳ ಪ್ರಯೋಜನ ಆ ಕಾರಣದಿಂದ ಇಲ್ಲ. ಇಲ್ಲಿ ಸಂಪಿಗೆ ಗಿಡಗಳು ದೊಡ್ಡವಾಗಿ ಹೂ ಬಿಟ್ಟು ಮುಡಿಯಲು ಅನುಕೂಲ ಮಾಡುವದರೊಂದಿಗೆ ದೊಡ್ಡವಾದ ಮೇಲೆ ಬೇಲಿಯಂತೆ ಉಪಯೋಗವಾಗಲೂ ಬಹುದಾಗಿತ್ತು. ಆದರೆ ಅಷ್ಟರ ತನಕ ಸಂಪಿಗೆ ಸಸಿಗಳಿಗೂ ಬೇರೆ ಬೇಲಿಯ ರಕ್ಷಣೆ ಬೇಕಾಗಿತ್ತು. ಯಶಸ್ಸು ಬರಬೇಕಾದರೆ ವ್ಯವಹಾರಜ್ಞಾನವೂ ಅವಶ್ಯವಾಗಿದೆ.

ಹೆಣ್ಣು ಮಕ್ಕಳ ಮದುವೆ ಬಹಳ ಚಿಕ್ಕ ವಯಸ್ಸಿನಲ್ಲಿ ಆಗುತ್ತಿದ್ದುದರಿಂದ ಮದುವೆಯಾದ ಹುಡುಗಿಯರೇ ತಮ್ಮ ಅನುಭವಗಳನ್ನು ಹಾಡಿನ ರೂಪದಲ್ಲಿ ಹೇಳುವುದನ್ನು ಹೆಚ್ಚಾಗಿ ಕಾಣಬಹುದು. ಆದರೂ ಮದುವೆಯಾಗದ ಹುಡುಗಿಯರ ಹಾಡುಗಳೂ ಇಲ್ಲಿರುತ್ತವೆ.

ಹೆಣ್ಣು ಮಕ್ಕಳಿಗೆ ಹೂಗಳೆಂದರೆ ಜೀವ. ಒಬ್ಬಳು “ತನ್ನ ತಂದೆಯ ಮನೆಯಲ್ಲಿ ನೆಲವೆಲ್ಲ ಸಂಪಿಗೆ ಗಿಡಗಳಿಂದ ಆವೃತವಾಗಿದೆ. ಅದರಿಂದ ತಂದೆಯ ಮನೆಯ ಪಟ್ಟಣ (ವೈಭವ) ಬಿಟ್ಟು ನಾನು ಉಳಿಯಲಾರೆನು.” ಎಂದು ಹೇಳುತ್ತಾಳೆ. ಆದರೆ ತಂದೆ ತಾಯಿ- ಅಣ್ಣ- ತಮ್ಮ ಎಷ್ಟು ಪ್ರೀತಿವಂತರಾದರೂ ಹೆಚ್ಚು ದಿನ ತಂದೆಯ ಮನೆಯಲ್ಲಿ ಉಳಿದರೆ ಹಗುರವಾದ ಅನುಭವ ಅವಳಿಗೆ ಬರುತ್ತದೆ. ತಿಂಗಳಿಗಿಂತ ಹೆಚ್ಚು ಉಳಿದರೆ ಹಂಗಿಸಿ ತಿಳಿಯನ್ನು ಹೊಯ್ಯುತ್ತಾರೆ ಎಂದು ಅವಳು ಹೇಳುವುದು ಇತರ ಹೆಣ್ಣು ಮಕ್ಕಳ ಅನುಭವದ ಹಾಡುಗಳಲ್ಲಿ ಬೇರೆ ರೀತಿಯಲ್ಲಿ ಅಭಿವ್ಯಕ್ತಿ ಪಡೆದಿರುತ್ತದೆ. “ಗಂಜಿಯ ಕುಡಿದರೂ ಗಂಡನ ಮನಿ ಲೇಸ” ಎಂದು ಗರತಿಯ ಹಾಡಿನ ಗರತಿ ಹಾಡಿದ್ದಾಳೆ.

ಆದರೆ ತಂದೆಯ ಮನೆಗೆ ಹೋಗದೆ ಬಹಳ ದಿನವಾದರೆ ಹೆಣ್ಣು ಮಕ್ಕಳಿಗೆ ತುಂಬಾ ಬೇಸರ ಬರುತ್ತದೆ. ಅತ್ತೆಯ ಅಂಕೆಯಲ್ಲಿ ಗಂಡನ ಅಂಕೆಯಲ್ಲಿದ್ದು ತಂದೆಯ ಮನೆಯ ಕರೆ ಬಂದಾಗ ಹೋಗಲಾಗದಿದ್ದರೆ ಕನ್ನ ಕೊಯ್ದಾದರೂ ರಾತ್ರಿಯಲ್ಲಿ ಕಳ್ಳತನದಿಂದ ಮನೆಯವರಿಗೆ ತಿಳಿಯದಂತೆ ತೌರಿಗೆ ಹೋಗುವ ಬಯಕೆಯನ್ನು ಶೇವಿಗೆ ಪಾಯಸ ಉಣ್ಣಲು ಅಕ್ಕನನ್ನು ಕರೆಯ ಬಂದ ತಮ್ಮನ ಹತ್ತರ ಗುಟ್ಟಾಗಿ ಹೇಳಿಕೊಳ್ಳುತ್ತಾಳೆ ಆ ಅಕ್ಕ.

ಇನ್ನೊಬ್ಬಳು ಅಪ್ಪನ ಮನೆಯಲ್ಲಿ ಪಾಯಸ ಎಂದು ಕೇಳಿ, ಏಳು ಹೊಳೆ ದಾಟಿ ಅಪ್ಪನ ಮನೆಗೆ ಪಾಯಸ ಉಣ್ಣಲು ಬಂದೆನೆಂದು ಹೇಳುತ್ತಾಳೆ. ಇವಳಿಗೆ ಗಂಡನ ಮನೆಯಲ್ಲಿ ಪಾಯಸ ಅಪರೂಪವಂತೆ. ಅಪರೂಪವಾಗದಿದ್ದರೂ ಹೆಣ್ಣು ಮಕ್ಕಳಿಗೆ ತಂದೆಯ ಮನೆಯಲ್ಲಿ ಹೆಚ್ಚು ಕೆಲಸ ಮಾಡದೆ, ಹಿಂದಿನ ಮಧುರಸ್ಮೃತಿಗಳನ್ನು ಮೆಲಕುತ್ತ ಪಾಯಸ ಉಣ್ಣುವದು ಹೆ‌ಚ್ಚು ರುಚಿಕರವಾಗುತ್ತದೆ.

ಹೆಣ್ಣು ಮಕ್ಕಳು ಹೆಚ್ಚಾಗಿರುವವರಿಗೆ ಅಳಿಯಂದಿರೂ ಹೆಚ್ಚು. ಒಬ್ಬಳು ತನ್ನ ಅಪ್ಪನ ಮನೆಯಲ್ಲಿ ಹೆಣ್ಣು ಮಕ್ಕಳೂ ಅಳಿಯಂದಿರೂ ಸೇರಿ ಆಗುವ ಗದ್ದಲವನ್ನು ಎಲೆ- ಅಡಿಕೆ ಇಟ್ಟುಕೊಂಡು ಮಾರುವಾಗಿನ ಗದ್ದಲಕ್ಕೆ ಸರಿಮಾಡಿ ಹೇಳಿದ್ದಾಳೆ. ಇಷ್ಟೆಲ್ಲಾ ಜನರಿಗೆ ವೀಳ್ಯದೆಲೆ- ಅಡಿಕೆ ಅಗಿದು ಉಗುಳಲು ತಂದು ಹಾಕಿದ ಎಲೆ- ಅಡಿಕೆ ರಾಶೀ ಸಂತೆಯ ನೆನಪನ್ನು ಸಹಜವಾಗಿ ತಂದು ಕೊಡುತ್ತದೆ.

ತಾಯಿಗೆ ತನ್ನ ಮಕ್ಕಳ ಮೇಲೆ ಇರುವ ವಾತ್ಸಲ್ಯವನ್ನು ಹೆಣ್ಣು ಮಕ್ಕಳು ಚೆನ್ನಾಗಿ ವರ್ಣಿಸಿದ್ದಾರೆ. ಒಬ್ಬಳ ತಾಯಿ ಕೈಬೀಸಿ ನಡೆದರೆ ಅಗ್ರಹಾರ ಊರಿನ ಜಾತ್ರೆಯಲ್ಲಿ ತೇರನ್ನು ಎಳೆದ ಹಾಗೆ ಅವಳ ತಾಯಿ ನಡೆವ ಚಂದ ಕಾಣುತ್ತದೆ. ಹೊನ್ನಾವರ ತಾಲೂಕಿನ ಅಗ್ರಹಾರದ ಗಣಪತಿ ದೇವಾಲಯದ ತೇರು ಗೋಕರ್ಣ, ಮಂಜಗುಣಿ ಇತ್ಯಾದಿ ಕಡೆಗಿನ ತೇರುಗಳಷ್ಟು ದೊಡ್ಡದಲ್ಲ ಅದರಿಂದ ಗಿಡ್ಡಿಯಾದ ತಾಯಿಯನ್ನು ಆ ತೇರಿಗೆ ಹೋಲಿಸಿರಬೇಕು ಕೈಬೀಸಿ ನಡೆವಾಗ ಆ ಎರಡೂ ಕೈಗಳು ತೇರಿನ ಎಳೆವ ಎರಡು ಹಗ್ಗಗಳ ನೆನಪನ್ನು ತರುತ್ತವೆ.

ತಂದೆ-ತಾಯಿ-ಮಕ್ಕಳ ವಾತ್ಸಲ್ಯವನ್ನು ನಮ್ಮ ಹೆಣ್ಣು ಮಕ್ಕಳು ಬಹಳ ಚೆನ್ನಾಗಿ ಹಾಡುಗಳಲ್ಲಿ ವರ್ಣಿಸಿದ್ದಾರೆ. ತಾಯಿಯಿದ್ದರೆ ತವರುಮನೆ ಎಂಬ ಮಾತು ಗಾದೆಮಾತಿನಂತಾಗಿದೆ. “ತಾಯಿಯಿಲ್ಲದ ತವರುಮನೆಗಿಂತ ಅಡವಿಯ ವಸ್ತಿಯೇ ಮೇಲು” ಎಂದು ಹೇಳುವ ಹೆಣ್ಣುಮಕ್ಕಳ ತಂದೆ, ಬೇರೆ ಹೆಂಡತಿಯನ್ನು ಮದುವೆಯಾಗಿದ್ದಿರಬೇಕು, ಇಲ್ಲವೆ ಅಣ್ಣನ ಹೆಂಡತಿಯ ದರಬಾರ ಜೋರಾಗಿದ್ದಿರಬೇಕು. “ಅಕ್ಕ ಇದ್ರಿ ಭಾವಾ, ರೊಕ್ಕ ಇದ್ರೆ ಪೇಟೆ” ಎಂಬುದೂ ಒಂದು ಗಾದೆಮಾತಿನಂತಿದೆ.

ತವರ ಮನೆಯ, ಅದರಲ್ಲಿಯೂ ತಾಯಿಯ ಮೇಲಿನ ಅಭಿಮಾನ ಸ್ವಾಭಿಮಾನಿಗಳಾದ ಹೆಣ್ಣು ಮಕ್ಕಳಿಗೆ ವಿಶೇಷವಾಗಿರುತ್ತದೆ. “ಅತ್ತೆ ಬಯ್ದರೆ ಹೆತ್ತಮ್ಮ ಬಯ್ದಂತೆ” ಎಂದು ತಿಳಿ ಎಂಬುದು ಬೇರೆ ಸಂಗ್ರಹದಲ್ಲಿದೆ. ಇಲ್ಲಿ “ಅತ್ತೆ ಬಯ್ದರೆ ಹಿತ್ತಿಲಿಗೆ ಹೋಗಿ ಮರುಗಬೇಡ; ಅವಳಿಗೆ ಎದಿರಾಡಬೇಡ; ಹೆತ್ತಮ್ಮನಿಗೆ ಹೆಸರನ್ನು ತರಬೇಡ” ಎಂದ ತಾಯಿಯ ಉಪದೇಶವಿರುತ್ತದೆ. ಇನ್ನೊಬ್ಬ ಹೆಣ್ಣು ಮಗಳ ತಾಯಿ ಬಹಳ ಗಟ್ಟಿಗಿತ್ತಿಯಾಗಿದ್ದಿರಬೇಕು. ಅವಳು “ಆಕಾಶವೇ ಕಡಿದುಕೊಂಡು ಬಿದ್ದರೂ ಆಕೆಗೆ (ಅತ್ತಿಗೆಗೆ? ಅಥವಾ ಭಾವನ ಹೆಂಡತಿಗೆ?) ಅಂಜುವವಳಲ್ಲ; “ಅಂಜಿದರೆ ನನ್ನ ಅಮ್ಮನ ಮಗಳಲ್ಲ” ಎನ್ನುತ್ತಾಳೆ. ತನ್ನ ತಾಯಿಗೆ ಬಯ್ಯುವವನನ್ನು ನಾಯಿಯ ಜನ್ಮದವನೆಂದು ಬಯ್ಯಲು ಹಿಂಜರಿಯುವದಿಲ್ಲ.

ಒಬ್ಬಳ ತಂದೆಗೆ ಎಪ್ಪತ್ತೇಳು ವರ್ಷ ವಯಸ್ಸು ಹಾಲು ಹೊಯ್ದ ಮರವೆಂದು ಬಣ್ಣಿಸಿ. ಮರಕ್ಕೆ ಚಿತ್ರ ಬರೆದಂತೆ ಅವನಿಗ ಕೂದಲು ಗಡ್ಡ ಮೀಸೆಯೆಲ್ಲಾ ಹಣ್ಣಾದರೂ (?) ಅವನ ಆಯುಷ್ಯವನ್ನು ಹೆಚ್ಚಿಸಬೇಕೆಂದು ದೇವರನ್ನು ಪ್ರಾರ್ಥಿಸುತ್ತಾಳೆ. ಸಾಮಾನ್ಯವಾಗಿ ಮುದುಕರು “ವಡೆಮರ” ಎಂದು ಗಣಿಸಲ್ಪಡುತ್ತಾರೆ. ಅಂದರೆ ಅವರು ಬಿದ್ದು ಹೋದರೆ (ಸತ್ತರೆ) ಅವರ ಹೆಸರಿನಲ್ಲಿ ವಡೆ ಮಾಡಿಕೊಂಡು ತಿನ್ನಬಹುದೆಂಬುದೇ ಇದಕ್ಕೆ ಕಾರಣ. ಉದ್ದಿನ ವಡೆ ಶ್ರಾದ್ಧದಲ್ಲಿ ಹಳೆಯರ ದಿನಗಳಲ್ಲಿ ಅವಶ್ಯವಾದ ಕಜ್ಜಾಯ ಉಣ್ಣುವ ಸಂಧಿ ದೊರೆಯುವದಾದರೂ ಇಲ್ಲಿ ಮಗಳಿಗೆ ತನಗೆ ಹಾಲು ಹೊಯ್ದ ಮರ ಬಹಳ ಕಾಲ ಬೀಳದೆ ಬದುಕಲಿ ಎಂದು ಅನಿಸುವದು ತಂದೆಯ ವಾತ್ಸಲ್ಯದ ಸುಂದರ ಚಿತ್ರವಾಗಿದೆ.

ತವರಿನ ಬಳಗ ಹೆಚ್ಚಲಿ ಎಂದು ಮಗಳ ಹಾರೈಕೆ. ತಾಯಿಯ ಮನೆಯಲ್ಲಿ ಕಳಸ ಹಿಡಿಯುವಲ್ಲಿ ಮಂಗಳ ಕಾರ್ಯಗಳಾಗಲು, ಮುತ್ತೈದೆಯರು ಹೆಚ್ಚಾಗಲಿ ಎಂದು ಹೆಣ್ಣುಮಗಳು ಹಾರೈಸಿದ್ದಾಳೆ. ಆದರೆ, ಎಲ್ಲಾ ಬಳಗದವರಿಗೂ ಅವಳ ಕುರಿತು ಅಕ್ಕರೆಯಿರುವುದಿಲ್ಲ. ಆಗ ಮಗಳು ತಾಯಿಯ ಹತ್ತರ ಶೋಕಿಸುತ್ತಾಳೆ. “ಕಂಚಿಗೆ ಕಾಯಿ ಬಂದಿ (ಭಾರ): ನಿಂಬೆಗೆ ಎಲೆ ಬಂದಿ, ನಾನು ನಿನ್ನ ಬಳಗಕ್ಕೆ ಬಂದಿ” ಎಂದು ದುಃಖ ಮಾಡುತ್ತಾಳೆ. ಬಳಗವನ್ನು ನೆನೆದರೆ ಕಣ್ಣೀರು ಬರುತ್ತದೆ. ಆ ಕಣ್ಣೀರು ಗೌರಿದೇವಿಯೆಂಬ ಕೆರೆ ತುಂಬುವಷ್ಟು ಬರುತ್ತದೆ. “ಅದರಲ್ಲಿ ತುಂಬೆಯ ಹೋ ತೇಲಾಡಿ ಬಳಿದು ಬಂದಿತು” ಎಂದು ತನ್ನ ದುಃಖವನ್ನು ಬಣ್ಣಿಸುತ್ತಾಳೆ.

ಅಣ್ಣ – ತಮ್ಮಂದಿರ ಕುರಿತಾದ ಹಲವಾರು ಹಾಡುಗಳು ಈ ಸಂಗ್ರಹದಲ್ಲಿವೆ. ಅಣ್ಣ- ತಮ್ಮಂದಿರು ಬಾಳಿದ್ದರೆ ತನ್ನ ತೌರುಮನೆ ಎಂಬ ತಿಳಿವಳಿಕೆ ಸಾಮಾನ್ಯವಾಗಿ ಹೆಣ್ಣುಮಕ್ಕಳಿಗುಂಟು.

ಅಣ್ಣ – ತಮ್ಮಂದಿರ ಚೆಲುವಿಕೆಯನ್ನೂ ಠೀವಿಯನ್ನೂ ಬಣ್ಣನೆ ಮಾಡುವ ಪ್ರವೃತ್ತಿ ಬಹಳ ಕಾಣುತ್ತದೆ. ಅರಸನ ಪ್ರಧಾನಿಯಾದ ಅಣ್ಣನನ್ನು ಒಬ್ಬಳು ಕನಸಿನಲ್ಲಿ ಕಾಣುತ್ತಾಳೆ. ಅವನು ಮಲ್ಲಿಗೆಯನ್ನು ಮುಡಿವ ಭೋಗಿ. ಸಾವಿರ ಕುದುರೆಗಳ ಸರದಾರ ಅವನು ಕಾಸೆಯ ನಡುಕಟ್ಟು ಬಿಗಿದು ಕುದುರೆಯೇರಿ ಬರುತ್ತಾನೆ. ಅವನು ಚೆಂಡನ್ನು ಆಡಲಿಕ್ಕೆ ಕುದುರೆಯೇರಿ ಹೋಗುವಾಗಲೂ ಅವನ ತೋಳಿಗೆ ಚಂದ್ರಾಣಿ ಬಿಲ್ಲು (ಸಂಗಾಣಿ= ಬತ್ತಳಿಕೆ) ಇರುತ್ತದೆ. ಅವನ ತೋಳು ಸಂಗ್ರಾಮದ ತೋಳು. ಉಪಕಾರಿಯಾದ ಅಣ್ಣ ಸತ್ತಿಗೆಯಿಲ್ಲದೆ ತಿರುಗುವವನಲ್ಲ. ಇಲ್ಲದೆ ಒರಗುವವನಲ್ಲ! ಅವನಿಗೆ ಜಳಕಕ್ಕೆ ಯಾಲಕ್ಕಿ ಹಾಕಿ ಪರಿಮಳಿತವಾದ ದ್ರೌಪದಿ (ಹೆಂಡತಿ) ನೀರೇ ಬೇಕು. ಅವನು ಸಭೆಯಲ್ಲಿ ಮಾತಾಡಿದರೆ ಅವನ ಬಾಯಿಂದ ಮುತ್ತು ಸುರಿದಂತೆ. ಅವನ ಮಾತು ಅಷ್ಟು ಸುಂದರವಾಗಿರುತ್ತದೆ.

ತನ್ನ ತಂದೆಗೆ ಅಂಬು- ಬಿಲ್ಲು ಹಿಡಿವ (ಶೂರನಾದ) ಮಗ ಬೇಕು ಎಂಬುದೇ ಅವಳ ಹಾರೈಕೆ. ದೊಡ್ಡ ಅಕ್ಕ ಬರುವಾಗ ದೊಡ್ಡ ಗುಡ್ಡದ ಮೇಲೆ ಮೊಗಲರು ತಡೆದಾಗ ಅಣ್ಣಂದಿರು ಕತ್ತಿಯ ಮೇಲೆ ಹೋಗಿ ಅಕ್ಕನನ್ನು ಕರೆತರುತ್ತಾರೆ. ಇದು ನೂರಾರು ವರ್ಷಗಳ ಹಿಂದಿನ ಅರಾಜಕತೆಯ ಕಾಲದ ತ್ರಿಪದಿಯಾಗಿದ್ದಿರಬೇಕು.

ಆದರೆ ಒಬ್ಬಳ ಅಣ್ಣ ಯುದ್ಧದಲ್ಲಿ ಕತ್ತಿಯನ್ನು ಉಪಯೋಗಿಸುವವನಲ್ಲ. ಅವನ ಕತ್ತಿ ತೆಂಗಿನ ಸುಳಿಯ ಮೇಲೆ ಆಡಿ ಬರುತ್ತದೆ ಎಂದಿರುವಲ್ಲಿ ತೆಂಗಿನ ಗೊನೆ ಕೊಯ್ದು, ಅದರ ಹೆಂಡವನ್ನು ತೆಗೆವ ಕಸಬು ಅಣ್ಣನದು ಎಂದು ಅವಳು ತಿಳಿಸಿದ್ದಾಳೆ. ತೆಂಗಿನ ಗೊನೆ ಹೆಂಡ ತೆಗೆವ ಕಸಬಿನಲ್ಲಿ ನಾಮಧಾರಿಗಳು ಪಳಗಿದವರಾಗಿದ್ದರು.

ತಮ್ಮನ ಕುರಿತಾದ ತ್ರಿಪದಿಗಳಲ್ಲಿ ಅಕ್ಕ ತನ್ನ ಕಿರಿಯ ತಮ್ಮನನ್ನು ಬಹಳ ಸುಂದರವಾಗಿ ವರ್ಣಿಸುತ್ತಾಳೆ. ತಮ್ಮನಿಗೆ ಮೀಸೆ ಬಂತು; ಅವನು ಪ್ರಾಯದ ಸೊಬಗನ್ನು ಪಡೆದ ಎಂದು ತೌರಿನಲ್ಲಿ ಸಂಭ್ರಮವಂತೆ. ಕೊಂಬಿಲ್ಲದಾನೆಗೆ ಕೊಂಬು ಬಂತು ಎಂದು ಅವನ ಮೀಸೆ ಒಡದುಬಂದುದನ್ನು ಬಣ್ಣಿಸುವ ರೀತಿ ನೂತನವಾಗಿದೆ. ಆದರೆ ಈ ಕೊಂಬುಗಳು ಆನೆಯ ಕೋಂಬುಗಳಂತೆ ಬಿಳಿಯವಲ್ಲ. ಕರಿದು ! ಇದೇ ವ್ಯತ್ಯಾಸ.

ಹುಲಿಯನ್ನು ಹೊಡೆಯಲು ರಂಜಕ (ಕೋವಿಮದ್ದು) ಬುರುಡೆಯನ್ನು ಹಿಡಿದು ಹೊರಟ ತಮ್ಮ ಮೂರು ಈಡು (ಕೋವಿಗುಂಡು ಹೊಡೆವುದು) ಗಳಿಗೆ ಮೂರು ಹುಲಿ ಹೊಡೆದನೆಂದು ತಂಗಿ ಆರತಿ ಬೆಳಗಿದಳು. “ಹುಲಿ ಹೊಡೆದಾಗಿನ ಹಾವು (ದೃಷ್ಟಿಯ ಹಾವು?) ತೊಲಗಲಿ” ಎಂದು. ಮುಡಿಯಾಳದ ಜಲ್ಲಿಯನ್ನು ಮುಡಿದು ಬರುವ ತಮ್ಮನ ಸೊಬಗನ್ನು ನೋಡಿ ಜಡೆಯ ಸೂಳೆಯರು ಕೈತಡೆದರಂತೆ !!

ಹೆಣ್ಣುಮಕ್ಕಳನ್ನು ಬಡವರ ಮನೆಗೆ ಕೊಡುವುದರಿಂದ ಅನೇಕ ತರದ ಕಷ್ಟಗಳನ್ನು ಅವರು ಸೋಸಬೇಕಾಗಿ ಬರುತ್ತದೆ. ತಂದೆಯ ಮನೆಯಲ್ಲಿ ಸಿರಿವಂತರರಾಗಿದ್ದರಂತೂ ಗಂಡನ ಮನೆಯ ಬಡತನ ಮತ್ತಿಷ್ಟು ತಾಪದಾಯಕವಾಗುತ್ತದೆ. ಒಬ್ಬಳು “ಅಣ್ಣ ತಮ್ಮ” ಎಂಬ ಭಾಗದಲ್ಲಿ “ಹೊನ್ನ ಕೇದಿಗೆಯನ್ನು ಕೆನ್ನೆಗೆ ಮುಡಿದು ಕೊಂಡು ಅಣ್ಣಂದಿರ ನಡುವೆ ಓಡಿಯಾಡಿಕೊಂಡು ಇರುತ್ತಿದ್ದೆನು; ಅಣ್ಣನು ಈ ಊರ ಜನರು (ತನ್ನ) ಗಂಡನ ಮನೆಯ ಕುರಿತು ಮಾಡಿದ ಬಣ್ಣನೆಗೆ ಮರುಳಾಗಿ ತನ್ನನ್ನು ಈ ಮನೆಗೆ ಕೊಟ್ಟ” ಎಂದು ದುಃಖಿಸಿದ್ದಾಳೆ. ಅಣ್ಣನು ಮದುವೆ ಮಾಡಿ ಕೊಡುವಾಗ ಚಿನ್ನವನ್ನು ತುಂಬಿಯ ಹೊಗಳ ಹಾಗೆ ತುಂಬಿಯೇ ಮದುವೆ ಮಾಡಿ ಕೊಟ್ಟಿದ್ದನು. ಆಮೇಲೆ ಅವರಿಗೆ ಬಡತನ ಬಂದಿರಬೇಕು. ಕೊಟ್ಟಿದ್ದು, ಕೊಂಡಿದ್ದು ಎಲ್ಲಿಯ ವರೆಗೆ ಬರುತ್ತದೆ?” ಎನ್ನುವ ಮಾತು ವಾಡಿಕೆಯಲ್ಲಿದೆ.

“ಬಡವರ ಮನೆಯಲ್ಲಿ ಕೊಡಪಾನ (ತಾಮ್ರದ ಬಿಂದಿಗೆ) ರಂಧ್ರಮಯವಾದದ್ದು. ಆದರೂ ಹಾಗೆಂದು ಕೊಟ್ಟಿಗೆಗೆ ಹೋಗಿ ಮರುಗಬೇಡ. ಗಂಡನ ಮನೆಕೆಲಸವನ್ನು ಕಂಡ ಹಾಗೆಯೇ ಗೆಯ್ಯಬೇಕು. ಗುಂಡುಗಲ್ಲಿನ ಹಾಗೆ ಇದ್ದು (ಚಿಂತೆಯಲ್ಲಿ ಕರಗದೆ) ಕೆಲಸಮಾಡಿ, ಹಂಗಿಲ್ಲದ ಊಟ ಉಣ್ಣಬೇಕು” ಎಂದು ಅಣ್ಣನು ಬುದ್ಧಿವಾದ ಹೇಳುತ್ತಾನೆ. ಬಡತನದ ಕಷ್ಟವನ್ನು ಬೇರೆ ಕಡೆ ಹೋಗಿ, ಮನೆಯ ಛಿದ್ರ (ದೋಷ) ವನ್ನು ಪ್ರಚಾರ ಮಾಡಬಾರದು.

ಆದರೆ ಬಡತನದ ಮೂಲಕ ಅನೇಕ ಅವಶ್ಯವಿರುವ ವಸ್ತುಗಳಿರದೆ ಬೇರೆಯ ಮನೆಯಿಂದ ಕಡ (ಎರವಲು) ತರಬೇಕಾಗುತ್ತದೆ. ತಮ್ಮಯ್ಯನ ಮದುವೆಗೆ ಹೋಗುವಾಗ “ಬೆರಳಿಗೆ ನಿಮ್ಮ ಉಂಗುರವನ್ನೂ ಕೊರಳಿಗೆ ಬಂದಿಯನ್ನೂ ಕೊಡಿರವ್ವಾ!” ಎಂದು ಬೇರೆ ಮನೆಯವರ ಹತ್ತರ ಗೋಗರೆಯಬೇಕಾಗುತ್ತದೆ. ಇದು ಬಡವರ ಕಷ್ಟದ ವಾಸ್ತವಿಕ ಚಿತ್ರಣ.

ಬಡತನವಿದ್ದರೂ ಅದರಲ್ಲಿಯೇ ತೃಪ್ತಿಯಿಂದಿದ್ದು ದೇವರ ಹತ್ತರ ತಮ್ಮ ಮೂಗಿನ ಮೂಗುತಿ, ಕರಿಮಣಿ, ಕಾಲುಂಗುರಗಳ ಆಯುಷ್ಯ ಹಿರಿದಾಗಲಿ ಎಂದು ಹಾರೈಸುವ ಅಕ್ಕತಂಗಿಯರಿಂದ ಗಂಡಂದಿರ ಮನೆ, ಬಡವರ ಮನೆಯಾದರೂ ಉದ್ಧಾರವಾಗುತ್ತದೆ. ಒಬ್ಬಳು ಹೇಳುತ್ತಾಳೆ ತಾನು ಬಾಳೆಯ ಸುಳಿಯ ಹಾಗೆ ಕಳಕಳಿಸಿ ನಗುತ್ತ ಬಾಳ್ವೆ ಮಾಡುತ್ತೇನೆ. ಯಾಕೆಂದರೆ ಬಾಡಿದ ಎಲೆ ಬಾಳೆಗೆ ಸೊಬಗಲ್ಲ. ಅದರಂತೆ ಬಾಡಿದ ಮೊರೆಯಿಂದ ಬಾಳಿಗೆ ಶೋಭೆಯೆಲ್ಲ- ಎಂಬುದನ್ನು “ಬಾಡೀದಾ ಯೆಲಿ (ಎಲೆ)ಯೂ ಬಾಳಿಗೂ ರೀತಿಯಲ್ಲ” ಎಂದು ಕೌಶಲ್ಯದಿಂದ ಹೇಳಿದ್ದಾಳೆ. ಇಲ್ಲಿ “ಬಾಳಿಗೂ” ಎಂಬ ಮಾತಿನ ಶ್ಲೇಷಾರ್ಥವುಂಟು.

ಒಬ್ಬ ತಮ್ಮ ಅಕ್ಕನಿಗೆ ಹೇಳುತ್ತಾನೆ, “ನೀನು ಉಣ್ಣುವ ಗಂಜಿ ಬಹಳ ತೆಳ್ಳಗೆ; ಅದರಲ್ಲಿ ಹುಡುಕಿದರೂ ಒಂದು ಅಗಳು ಇಲ್ಲವಾದರೂ ಅದನ್ನೇ ತೃಪ್ತಿಯಿಂದ ಉಣ್ಣು; ಮಗನಿಗೂ ನೀಡು; ಮಿಕ್ಕಿದ ಗಂಜಿ ತಿಳಿಯನ್ನು ಕೊಟ್ಟಿಗೆಯ ದನಗಳಿಗೆ ಹಾಕಿ ಅವುಗಳ ಹಾಲನ್ನು ಕರೆದುಣ್ಣು” ಎಂದು ಬೋಧಿಸಿದ್ದಾನೆ.

“ಅಣ್ಣ ನಮ್ಮವನಾದರೂ ಅತ್ತಿಗೆ ನಮ್ಮವಳಲ್ಲ” ಎಂಬ ಅನುಭವ ಸಾರ್ವತ್ರಿಕವಾಗಿದೆ. ಮದುವೆಯಾಗಿ ಹೋಗುವ ಮೊದಲೂ ಅತ್ತಿಗೆ ನಾದಿನಿಯರಲ್ಲಿ ವಿರಸವಿರುವದು ಸಾಮಾನ್ಯವಾಗಿದೆ. ಚಿಕ್ಕ ಪ್ರಾಯದ ಹೆಣ್ಣುಮಕ್ಕಳನ್ನು ಮದುವೆ ಮಾಡಿಕೊಂಡು ತರುವ ಪದ್ಧತಿ ಹಿಂದಿನ ಕಾಲದಲ್ಲಿ ಇತ್ತು. ತಂಗಿಯು ಅಣ್ಣನ ಹೆಂಡತಿ ಚಿಕ್ಕವಳೆಂದು ಹಾಸ್ಯಮಾಡುವ ಹಾಡು ಸ್ವಾರಸ್ಯವಾಗಿದೆ.

“ಕಾಕಿಗೆ ಕಣ್ಣಿಲ್ಲಾ ಬೆಕ್ಕಿಗೆ ಬೂರಿಲ್ಲಾ….. ಆಡಲಿಕ್ಕೆ ಹೋದ ಅತ್ತಿಗೆಗೆ ಮೊಲೆಯಿಲ್ಲ ! ಅಣ್ಣಯ್ಯ, ತೂತು ಪರಟೆಯನ್ನು ಅವಳ ಎದೆಗೆ ಕಟ್ಟಿ ಮೊಲೆ ಮಾಡು. ತೊಟ್ಟಿಯ ಕಾಯಿಯ ತೊಟ್ಟನ್ನು ತಂದು ಮೊಲೆ ತೊಟ್ಟನ್ನು (ಚೂಚಕವನ್ನು) ಕಟ್ಟು; ಗೋಟಕ ಎಂಬ ಹಿಡದ ಕಾಯಿಯ ಸೋನೆಯನ್ನು ತಂದು ಹಾಲನ್ನು ಮಾಡು” ಎಂದು ಅಣ್ಣ ಹತ್ತರ ಫಾರ್ಸು (ಹಾಸ್ಯ) ಮಾಡುತ್ತಾಳೆ ತಂಗಿ.

ತಮ್ಮನ ಹೆಂಡತಿ ಬಹಳ ಚಿಕ್ಕವಳು ಎಂದು ಅಕ್ಕನು ತುಂಬಿದ ವಾತ್ಸಲ್ಯದಿಂದ ಅತ್ತಿಗೆ ಮನೆ ಕೆಲಸಕ್ಕೆ ಚಿಕ್ಕವಳು ಎಂದು ಹೇಳುವ ಹಾಡೂ ಇರುವದಾದರು ಅತ್ತಿಗೆ ಮೈದುನಿಯರ ಜಗಳದ ಹಾಡುಗಳೇ ಹೆಚ್ಚಾಗಿವೆ.

ಒಬ್ಬಳು ಗಂಡನ ತಂಗಿ ಉಂಡವಳೆಂದು ತಾನು ಊಟ ಮಾಡದಿದ್ದರೂ ಅವಳ ಊಟವನ್ನು ಹಳಿಯಲು ಬಂಡಿಯ ತೇಗನ್ನು ತೇಗುತ್ತಾಳೆ, ಮತ್ತು ಬಾಯಿ ದೊಡ್ಡ ಮಾಡಿಕೊಂಡು ಜಗಳ ಮಾಡುತ್ತಾಳೆ. ಮಗನನ್ನು ಹಿಡಿದುಕೊಂಡೇ ಬಾಯಿ ಮಾಡುತ್ತ ಬರುವ ಅತ್ತಿಗೆಯೊಡನೆ ಜಗಳವಾಡಲು ಅವಳ ನಾದಿನಿ ಕರೆಯುತ್ತಾಳೆ. “ಮಗನನ್ನು ತೊಟ್ಟಿಲಿನಲ್ಲಿ ಒರಗಿಸು; ಬೇಕಷ್ಟು ಹೊತ್ತು ಜಗಳಾಡುವಾ” ಎನ್ನುತ್ತಾಳೆ. ಇಬ್ಬರ ಜಗಳಗಳ ಮೂರು ತ್ರಿಪದಿಗಳು ಇಲ್ಲಿ ಉಂಟು.

ಅತ್ತಿಗೆ “ಮೇಲೋಗರಕ್ಕೆ ಮೇಲಿನ ಹುಳಿರಸವಿಲ್ಲದ ಬೋಳು ಅಮಟೆಕಾಯಿಯನ್ನು ಬಿಳಿ ಸಿಗಡಿಗೆ ಸೇರಿಸಿ ಕಾಡ ಅಮಟೆಕಾಯಿಗಳನ್ನೂ ಸೇರಿಸಿ ಅಮಟೆಕಾಯಿ ಹುಳಿ ಮಾಡಿ ಬಡಿಸಿದ” ಎಂದು ದೂರುತ್ತಾಳೆ. ಆಗ ಅತ್ತಿಗೆ ಹಿಂಜರಿಯದೆ. “ಅಡಿಕೆಯ ಹಾಳೆಯಲ್ಲಿ ಅಂಬಲಿ ಹಾಕಿಕೊಂಡು ಉಣ್ಣಲೂ ಗತಿಯಿಲ್ಲದ ಬಡತನ ನಿನ್ನ ತೌರುಮನೆಯಲ್ಲಿದೆ” ಎಂದು ಅತ್ತಿಗೆಯ ತೌರಮನೆಯನ್ನು ಹಳಿದು ಅವಳನ್ನು ಕೆಣಕುತ್ತಾಳೆ. ಅವಳು ಕಾಲಿನ ಕೆಸರು. ಓಣಿಯಲ್ಲಿ ಬಿದ್ದ ಕೊಳಕು ಮಾವಿನ ಹಣ್ಣು ನೀನು. ಯಾಕೆ ನನ್ನ ಕುಲವನ್ನು ಹಳಿದೆ? ಎಂದು ತನ್ನ ಸಿಟ್ಟನ್ನು ತೋಡಿಕೊಳ್ಳತ್ತಾಳೆ. ಹರಿವೆ ಸೊಪ್ಪಿನ, ಹಾಗೂ ಕೆಸುವಿನ ಮೇಲೋಗರ ಉಂಡಿದ್ದಕ್ಕೂ (ಹೆಚ್ಚು ಉಂಡಳೆಂದು) ಅತ್ತಿಗೆ ಮೂದಲಿಸುತ್ತಾಳೆ. ಅದರಿಂದ ನೊಂದ ನಾದಿನಿ ಕತ್ತಿಲಿ ಕಡಿದ ಗಾಯ ಮಾದರೂ. ಕೆಟ್ಟ ನಾಲಿಗೆಯ ಹೊಯ್ಮಾಲಿ ಬಯ್ದ ಮಾತಿನ ಗಾಯ ಮಾಯದೆಂದು ಹೇಳುತ್ತಾಳೆ. ಸರ್ವಜ್ಞನ ತ್ರಿಪದಿಯೊಂದರಲ್ಲಿ ಇಂಥದೇ ಭಾವವಿದೆ.

ನಲ್ಲ ನಲ್ಲೆಯರ ಸರಳ ಸುಂದರವಾದ ಪ್ರೇಮವನ್ನು ಕಲಿಯದ ಒಕ್ಕಲಗಿತ್ತಿಯರು, ತಮ್ಮ ಸಹಜವಾದ ಭಾವನೆಯಿಂದ ತುಂಬ ಆತ್ಮೀಯತೆಯಿಂದ ಬಣ್ಣಿಸಿದ್ದಾರೆ. ಕೆಲವರು ಉರಿಪಿಂಡದಂಥ ಸಿಟ್ಟಿನ ಗಂಡಂದಿರಿದ್ದರೂ ಕತ್ತಿಯನ್ನು ಮಸೆದು ನುಂಗುವ ಅಂಥ ಜನ ಹೆಚ್ಚಿಲ್ಲ. ಹೆಂಡತಿಯನ್ನು ಅಚ್ಛೆಯಿಂದ “ಗಿಡ್ಡಿ !”, “ಮದ್ದಾನೆ !”, “ಮುದ್ರೆಉಂಗುರವೇ !” ಎಂದು ಕರೆಯುತ್ತಾನೆ ನಲ್ಲ.

ಮೋಹದ ಗಂಡನು ಮೋಹಕ್ಕೆ ನೇವಳದಿಂದ ಒಂದು ಪೆಟ್ಟನ್ನು ಹೊಡೆದಿದ್ದನಂತೆ. ನೋವಿಲ್ಲ (ಮನಸ್ಸಿನಲ್ಲಿ ಇಲ್ಲ) ಆದರೆ ಪೆಟ್ಟಿನ ಉರಿ ಬಹಳ ಎಂದು ಅತ್ತೆಯ ಹತ್ತರ ದೂರುತ್ತಾಳೆ ಒಬ್ಬಳು.

ಒಬ್ಬಳ ನಲ್ಲನು ಅವಳು ತಿರುಗುವ ಹಾದಿಯಲ್ಲೆಲ್ಲ ನಿಂದು ಅವಳ ಹತ್ತರ ನಲ್ಮೆಯಿಂದ ಬರುತ್ತಾನೆ. ಅವನಿಗೆ ತನ್ನ ಹೆಂಡತಿ ಮಾಡಿದ ಅಡಿಗೆಯೆಲ್ಲಾ ರುಚಿ ಇಂಥದೇ ಬೇಕೆಂಬುದಿಲ್ಲ. ಆದರೆ ವೀಳ್ಯವನ್ನು ಹಾಕುವಾಗ ಮಾತ್ರ ಸೋದಿಸಿ (ಒಳ್ಳೆಯ ಎಲೆಗಳನ್ನೇ ಆರಿಸಿ), ಬಿಳಿ ಎಲೆಯನ್ನು ಮೆಲ್ಲುವ ಸೊಗಸುಗಾರಿಕೆಯಿದೆ. ಅವನು ಹೆಂಡತಿಯ ಹತ್ತರ “ಜಾಣ ಹೆಂಡತಿಯಾಗು”,  ರಸಿಕತನದಿಂದ ತನ್ನ ಜೊತೆಗೆ ಕೋಣೆಯಲ್ಲಿ ಸಮಯವನ್ನು ಕಳೆ; ಕದ ತೆರೆಯುವಾಗ ಜರ್ರ ಎಂಬ ಸಪ್ಪಳವಾಗುವಂಥದಿರಬೇಕು, ಮತ್ತು ಏಳು ದಿನಗಳಿಗೆ ಒಂದು ಸಲ ಬೆಳಗಾದರೆ ಸಾಕು; ನಲ್ಲೆ ಮಗ್ಗುಲಿನಲ್ಲಿದ್ದರೆ ಏಳು ಹಗಲು, ಏಳು ರಾತ್ರಿಗಳೆಲ್ಲ ರಾತ್ರಿಯ ರೂಪದಲ್ಲಿಯೇ ಕಳೆಯಬಹುದು” ಎಂದು ಹೇಳುತ್ತಾನೆ.

ನಲ್ಲೆಗೆ ಅವಳ ಗಂಡನ ಹೆಸರು ಹೇಳುವುದೆಂದರೆ ನಾಚಿಕೆ. ಅವನು ಅವಳಿಗೆ ಅಸ್ವಂತಮಾರಾಯ. ಅಶ್ವತ್ಥ ವೃಕ್ಷದ ಹಾಗೆ ಪೂಜೆಗೆ ಅರ್ಹನಾದವನು. ಪಟ್ಟೆ ಧೋತರವನ್ನು ಹೆಗಲಿನ ಮೇಲೆ ಇಟ್ಟುಕೊಂಡು ಪಟ್ಟಣದಲ್ಲಿ ತಿರುಗಾಡಿ ಬರುವದೇ ಒಂದು ಚೆಂದ. ನಲ್ಲ ಸ್ವಲ್ಪ ದೂರ ಹೋದರೆ ಅವಳಿಗೆ ಅವನು ಪರದೇಶಕ್ಕೆ ಹೋದ ಹಾಗೆಯೇ ಅನಿಸುತ್ತದೆ. ಅವನು ಬಿಸಿಲಿನಲ್ಲಿ ಹೋಗುವಾಗ “ತಂಪು ಗಾಳಿಯಿಂದ ಬಿಸಿಲು ತೊಲಗಬೇಕು. ಚಂದ್ರನಷ್ಟು ತಂಪಾದ ದಾಳಿಂಬದ ಮರದ ನೆರಳಾಗಲಿ” ಎಂದು ಹಾರೈಸುತ್ತಾಳೆ. ದಾಳಿಂಬ ಗಿಡದ ನೆರಳು ಹೆಚ್ಚು ತಂಪು ಎಂಬ ನಂಬಿಗೆಯಿಂದ ಹೀಗೆ ಹೇಳಿರಬೇಕು.

ಒಬ್ಬಳು ಹೂಗಳ ಚಂದವನ್ನು ಕಂಡು ಹೂಗಳನ್ನು ಕೊಯ್ಯು ಹೋದಳು ಆದರೆ, “ಹೂ ಮುಡಿದ ಚಂದವನ್ನು ನೋಡಿ ಸಂತೋಷಪಡುವ ಹಾಗೂ ತನ್ನ ಸಂತೊಷವನ್ನು ನೋಡುವ ಪುರಷ ಮನೆಯಲ್ಲಿಲ್ಲ. ಎಲ್ಲಿ ಹೋಗಿದ್ದಾನೆ?”. ಎಂದು ಅತ್ತೆಯನ್ನು ಕೇಳಿದಳು. ತಾನು ಅನುಭವಿಸುವ ಸಂತೋಷದಲ್ಲಿ ತನ್ನ ಗಂಡನೂ ಭಾಗಿಯಾಗಬೇಕು ಎಂದು ನಲ್ಲೆಗೆ ಅನಿಸುತ್ತದೆ. “ಗೋವೆಗಾಗಲಿ ಗುತ್ತಿಗಾಗಲಿ ನಿನ್ನ ಪುರುಷ ಹೋಗಲಿಲ್ಲ. ನಿನ್ನ ಸಲುವಾಗಿ ಮುತ್ತನ್ನು ಗೆಲ್ಲಲು ಹೋಗಿದ್ದಾನೆ.” ಎನ್ನುತ್ತಾಳೆ ಅತ್ತೆ. ಇಲ್ಲಿ ಪ್ರಿಯಳ ಸಂತೋಷವನ್ನು ಹೆಚ್ಚು ಗೊಳಿಸುವ ಸಲುವಾಗಿ ಗಂಡನ ಅಗಲಿಕೆಯ ನೋವನ್ನು ಸಹಿಸಲು ಸಿದ್ಧನಾದ. ಪ್ರೀತಿಯೇ ಇದಕ್ಕೆ ಕಾರಣವಾಯಿತು.

ಒಳ್ಳೊಳ್ಳೆ ಹೂಗಳನ್ನು ಕೊಯ್ದು ಬೆಳ್ಳಿಯ ಗಿಂಡಿಯಲ್ಲಿಟ್ಟು. “ಕೊಡಿಯಳದ ಭೂಮಿಪಾಲಕನ ಮಗಳಿಗೆ ಕೊಟ್ಟು ಬಾ” ಎಂದು ಗಿಳಿಯ ಹತ್ತರ ಹೇಳುವಷ್ಟು ನಲ್ಲೆಯು ದೂರವಿದ್ದರೂ ಅವರನ್ನು ಪ್ರೇಮಿಸುವ ನಲ್ಲರೊಂದು ಬಗೆ, ತನ್ನ ಬಳಿಯಲ್ಲಿಯೇ ಮಡದಿಯಿದ್ದರೂ ಇತರ ಹೆಣ್ಣುಗಳಿಗಾಗಿ ಹಾರೈಸಿ ಅವರ ಮೋಹ ಮಾಡಲು ಆಶಿಸುವ ಗಂಡಸರು ಇನ್ನೊಂದು ಬಗೆ. ಇಲ್ಲಿಯ ಕೊಡಿಯಳ ದಕ್ಷಿಣ ಕನ್ನಡದ ಕೊಡಿಯಾಲವೇ ಎಂದು ವಿಚಾರ ಮಾಡಬೇಕು.

ಸುರಗಿ ಹೂಗಳ ಪರಿಮಳ ಧರಿಸಿದ ನಲ್ಲನ ಹತ್ತರ ನಲ್ಲೆ ಕೇಳುತ್ತಾಳೆ. “ಯಾವ ಊರಿಗೆ ಹೋಗಿ. ಯಾವ ಹೂ ಮುಡಿದು, ಯಾರ ತೋಳಲ್ಲಿ ಒರಗಿ ಬಂದಿರಿ?” ಎಂದು. ಅದಕ್ಕೆ ಅವನು “ಎಲ್ಲಿಯೂ ಹೋಗಲಿಲ್ಲ. ಸುರಗಿಯ ಮರದ ಹೂ ಅರಳಿ ನೆಲಕ್ಕೆ ಬಿದ್ದ ಜಾಗದಲ್ಲಿ ಒರಗಿದ್ದೆನು. ಅದರಿಂದ ನನ್ನ ಪಾವುಡವೆಲ್ಲ ಸುರಗಿ ಹೂಗಳ ಪರಿಮಳವನ್ನು ಹೊಂದಿದೆ” ಎನ್ನುತ್ತಾನೆ. ಆದರೆ ಇದನ್ನು ಹೋಲುವ ಬೇರೆ ಪಾಠಗಳಿಂದ ಅವನು ಬೇರೆಯವಳೊಡನೆ ಪ್ರಣಯದಾಟವಾಡಿ ಬಂದ ಸೂಚನೆಯಿದೆಯೆಂದು ಹೇಳಲು ಆಸ್ಪದವುಂಟು.

Every thing is fair in Love and War. ಇಲ್ಲಿ ಸತ್ಯ ನಡೆಯುವದಿಲ್ಲ ಸೂಳೆಯ ಮನೆಗೆ ಹೋಗುವವನೊಬ್ಬನು ಹೆಂಡತಿಯ ಕಣ್ಣೀರಿನಿಂದ ಮನಕರಗಿ, ಸೂಳೆಯ ಮನೆಯನ್ನು ಬಿಟ್ಟೆನೆಂದು ಹಲವು ದೇವರ ಆಣೆ ಹಾಕಿ ಭಾಷೆ ಕೊಡುತ್ತಾನೆ. ಆದರೆ ಈ ಎಲ್ಲ ಆಣೆಗಳಿಗೆ ಬೆಲೆಯಿದೆಯೇ ಎಂಬುದ ಸಂದೇಹಾಸ್ಪದವಾಗಿದೆ.

ಒಬ್ಬನು ಸಂಜೆಗೆ ಬೇರೆ ಹೆಣ್ಣಿನ ಮನೆಗೆ ಮೋಹದಿಂದ ಹೋದಾಗ ಆ ಹೆಣ್ಣು ಕೇಳುತ್ತಾಳೆ. “ನಿನ್ನ ಮೈಮೇಲೆ ಅಂಗಿಯಿಲ್ಲವೋ ಮಡದಿ ಮನೆಯಲ್ಲಿಲ್ಲವೋ?” ಎಂದು ಕೇಳುತ್ತಾಳೆ. ಇಲ್ಲಿ ಅಂಗಿ ಹೆಣ್ಣಿಗೆ ಪ್ರತೀಕವಾಗಿ ನಿಲ್ಲುತ್ತದೆ. ಮತ್ತು ಅಂಗಿಯ ಮೇಲೆ ಅಂಗಿ ಎಂದು ಸುರುವಾಗುವ ಹಾಡಿನಲ್ಲಿ ಹೆಂಡತಿ ಇದ್ದರೂ ಬೇರೆ ಹೆಣ್ಣನ್ನು ಅನುಭವಿಸುವವನು ಎಂಬ ಅರ್ಥವೇ ಇದೆ.

“ಗರತಿಯ ಹಾಡು” ಗ್ರಂಥದಲ್ಲಿನ ಪ್ರಸಿದ್ಧ ಪದ್ಯ

ಅಂಗಿ ಮೇನಂಗೀ ಛಂದೇನೋ ನನ ರಾಯ
ರಂಬಿಯ ಮೇಲೆ ಪ್ರತಿರಂಬಿ | ಬಂದರ |
ಛಂದೇನೋ ರಾಯಾ ಮನಿಯಾಗ ||

ಎಂಬ ಪದ್ಯದ ಹೋಲಿಕೆ ಮಾಡಬೇಕು. ಇಲ್ಲಿನ ಗರತಿ

ಅಂಗೀ ಮೇನಂಗೀsss ಚೆಂದಕ ತಟ್ಟಿದ್ದಾರೆ
ರಂಬಿ ಮನೆ ರಂಬೇss ರತ್ ರಂಬೇsss || (ಬೀಗ್) ಹೋಗ್ವೋರಾ,
ನಂಬೂಗೀ ನನುಗ್ಯೆಂತಾ ಬರವಸು?

ಅಂಗಿಯ ಮೇಲೆ ಅಂಗಿಯನ್ನು ಚೆಂದ ಕಾಣುವ ಸುಲುವಾಗಿ ಧರಿಸಿ, ರಂಭೆಯಾದ ನಾನಿರುವಾಗ ರತಿರಂಭೆಯಂಥ ಹೆಚ್ಚಿನ ಚೆಲುವೆಯರ ಮನೆಗೆ ಹೋಗುವವರನ್ನು ಹೇಗೆ ನಂಬಲಿ? ಎಂದು ಕೇಳುತ್ತಾಳೆ.

ಅತ್ತೆ- ಸೊಸೆಯಂದಿರ ಸಂಬಂಧ ಸಾಮಾನ್ಯವಾಗಿ ಎಣ್ಣೆ- ಸೀಗೆ ಸಂಬಂಧವಾಗಿರುತ್ತಿತ್ತು. ಎಷ್ಟು ಕಷ್ಟ ಮಾಡಿ ಕೆಲಸ ಮಾಡಿದರೂ ಅತ್ತೆಗೆ ಸಾಲುತ್ತಿರಲಿಲ್ಲ. ಕಟಕಟೆ ಮಾಡುವ ಸ್ವಭಾವ. ಇದಕ್ಕೆ ಬೇಸತ್ತು ಒಬ್ಬ ಸೊಸೆ ಹೊತ್ತ ನೀರಿನ ಕೊಡವನ್ನು ಕೈಬಿಟ್ಟು ನೆಲಕ್ಕೆ ಬೀಳಿಸುತ್ತಾಳೆ. ಇನ್ನು ಕೆಲವು ಅತ್ತೆಯಂದಿರು ಸೊಸೆ ಹೆಚ್ಚು ತಿಂದು ಹಾಳು ಮಾಡುವಳೆಂದು ಕಳ್ಳತನದಲ್ಲಿ ಅಕ್ಕಿ- ಭತ್ತ ಮಾರುವಳೆಂದು ಅಕ್ಕಿ ಕಣಜಕ್ಕೆ ಬೀಗ ಮಾಡಿಸುತ್ತಿದ್ದರು.

ಆದರೆ ಎಲ್ಲ ಅತ್ತೆಯಂದಿರೂ ಹಾಗಿರಲಿಲ್ಲ. ಒಬ್ಬಳು ತನ್ನ ಅತ್ತೆ- ಮಾವ ಬಹಳ ಉತ್ತಮರೆಂದು ಹೊಗಳುತ್ತಾಳೆ. ಅತ್ತೆ ಮುದುಕಿಯಾದರೂ ಅವಳ ಕಿರುಜಡೆ ಸಹ ಬೆನ್ನಿಗೆ ಇಳಿಯುತ್ತದೆ. ಅಂಥ ಅತ್ತೆ- ಮಾವ ಇವರ ಜತೆ ಸಂಸಾರ ಹೊನ್ನಿನ ಹಾಸುಗೆಯ ಮೇಲೆ ತಲೆದಿಂಬನ್ನಿಟ್ಟುಕೊಂಡು ಒರಗಿದ ಹಾಗೆ ಎಂದು ಹೇಳುತ್ತಾಳೆ. ಅಂಥ ಅತ್ತೆಯ ಹತ್ತರ “ಅತ್ತ್ಯಮ್ಮಾ, ನಾ ನಿನ್ನ ಹೆತ್ತಮ್ಮ ಅಂಬೂನೇ, ನನ್ನ ಕಾಲಿನ ಬೆರಳು ಅಕಸ್ಮಾತ್ ನಿನಗೆ ತಾಗಿದರೆ ನಿನಗೆ ಶರಣೆಂದು ನಮಿಸುತ್ತೇನೆ” ಎನ್ನುತ್ತಾಳೆ.

ಅಳಿಯನೆಂದರೆ ಅತ್ತೆಗೆ ಬಲು ಹಿಗ್ಗು. ಅಳಿಯನು ಬಂದರೆ ಅರಸ ಬಂದನೆಂಬಷ್ಟು ಸಂಭ್ರಮ ಅವಳಿಗೆ. ಮಗಳಿಗೆ ಚಿನ್ನದ ಕೇದಿಗೆ ಮಾಡಿಸಿಕೊಟ್ಟವಳು ಅಳಿಯನಿಗ ಒಡ್ಯಾಣವನ್ನೇ ಮಾಡಿಸಿಕೊಟ್ಟಳು. ಅಳಿಯ ಬಂದರೆ ಯಾವ ಯಾವ ಕಜ್ಜಾಯಗಳನ್ನೆಲ್ಲ ಮಾಡಿ ರಾಸಿ ಹಾಕುತ್ತಾಳೆ. ಅವಳ ಪ್ರೀತಿಯ ಮಗಳನ್ನು ಅಂಗೈ ಮೇಲಿನ ಗಿಳಿಯಂತೆ ಸಂಗೋಪನ ಮಾಡುವವನೆಂದು ಅಳಿಯನ ಕುರಿತು ಅವಳಿಗೆ ಹೆಚ್ಚಿನ ಅಭಿಮಾನ.

ಒಬ್ಬಳು ಅಳಿಯನು ಕುಂದಣ ಧರಿಸಿ ಕುದಿರೆಯೇರಿ ಬಾಣದಂತೆ ಬರುವನೆಂದು ಬಣ್ಣಿಸುತ್ತಾಳೆ. ಒಬ್ಬಳಿಗೆ ಹಾಸ್ಯ ಮಾಡುತ್ತಾಳೆ. “ಅಡವಿಯ ಊರಾದ ಕಂಟ್ರಕೋಣಿನಲ್ಲಿ ನಮ್ಮ ಭಾವನವರನ್ನು ಕಂಡಿರೋ? ಅವನ ಮುಂದಿನ ಮೂರು ಹಲ್ಲುಗಳು ಮುಕ್ಕು (ಮುರಿದಿವೆ) ಅಡವಿಯ ಬಳ್ಳಿಯನ್ನು ಸುತ್ತಿ ಕತ್ತಿಕೊಕ್ಕೆ (ಕತ್ತಿ ತೂಗ ಹಾಕುವ ಸಾಧನ), ಕಟ್ಟಿಕೊಂಡಿದ್ದಾನೆ.” ಎಂದು ಹಾಸ್ಯ ಮಾಡುತ್ತಾಳೆ.

ಇನ್ನೊಬ್ಬಳ ಭಾವನಿಗೆ ಬುಗುರಿಗಡ್ಡ ! ಮೂಗಿನಲ್ಲಿ ಮೂರು ಕವಣೆ ಇಟ್ಟುಕೊಂಡಂತೆ ಮೀಸೆ ಬೆಳೆಸಿದ್ದಾನೆ. ಆದರೆ ಅವನು ಸೂಳೆಯರನ್ನು ನೋಡಿ ಹುಬ್ಬು ಹಾರಿಸುತ್ತಾನೆ ! ಅವನ ಹುಬ್ಬನ್ನು ನೋಡಿಯೇ ಅವರು ಮರುಳಾಗಬೇಕು! ಹೇಗಿದ್ದರೇನು? ಅವನು ರಸಿಕನೇ ಸರಿ.

ತೊದಲು ಮುದ್ದು ಮಾತಾಡಲು ಕಲಿತ ಬಾಲಯ್ಯನು ಯಾವ ಯಾವ ಕಲ್ಪನೆಯನ್ನು ಮನಸ್ಸಿನಲ್ಲಿ ಅರಮನೆ ಕಟ್ಟಿದ ಹಾಗೆಯೇ ಏನೋ ಕನಸು ಕಂಡು ಅದನ್ನು ತನ್ನ ಮಾತಿನಲ್ಲಿ ಹೇಳಿದ್ದಿರಬಹುದು.

ಓದುವ ಬಾಲಯ್ಯನ ದನಿಯನ್ನು ಹೊಗಳುವ ಅನೇಕ ಗೀತಗಳಿವೆ. ಅವುಗಳಲ್ಲಿ ಕಡಿದ ಅಕ್ಕಿಯನ್ನೂ ಕಡೆದ ಮಜ್ಜಿಗೆಯನ್ನೂ ಕಡಲೆದ್ದಿ ಬರುವ ತೆರೆಯನ್ನೂ ಚೆಂದವೆಂದು ಹೇಳಿರುವ ರೀತಿ ಗಮನಾರ್ಹವಾಗಿದೆ. ಹಳ್ಳಿಯ ಜನರ ಸೌಂದರ್ಯ ದೃಷ್ಟಿ ಸೊಗಸಾಗಿದೆ. ಇನ್ನನೊಂದು ಗೀತದಲ್ಲಿ ಬಾಗಿಲಲ್ಲಿರುವ ತೋಳುಚ್ಯಮ್ಮ (ತುಳಸಿಯ ಮನೆ) ಚೆಂದವೆಂದಿರುವಲ್ಲಿ ಹಳ್ಳಿಯ ಜನರು ತುಳಸಿಯ ಪೂಜೆಗೆ ಕೊಡುವ ಮಹತ್ವವನ್ನು ಕಾಣಬಹುದು.

“ಬೀದಿಯ ಕಾಮಣ್ಣ” ಎಂಬ ಶೀರ್ಷಿಕೆಯಲ್ಲಿ ಬೇರೆ ಬೇರೆ ಸನ್ನಿವೇಷಗಳಲ್ಲಿ ಹೆಣ್ಣನ್ನು ಮೋಹಿಸಿದವರ ಕುರಿತಾಗಿ ಹಾಡುಗಳಿವೆ. “ಎಳ್ಳು ಗಾಣಿಗರ ಹುಡುಗಿ”ಯ ಹತ್ತರ “ಒಬ್ಬನು ನಿನ್ನ ಮನದಲ್ಲಿ ಎಳ್ಳು (ಸ್ನೇಹ) ಇದೆಯೋ? ಅದನ್ನು ಕೊಳ್ಳುತ್ತೇನೆ.” ಎಂದಾಗ ಹಣವನ್ನು ಕೊಟ್ಟು ಕೊಳ್ಳಬೇಕೆಂದಿರುವ ಎಳ್ಳು ಬೇರೆಯೇ ಎಂಬುದು ಕಾಣುತ್ತದೆ. ಅದಕ್ಕೆ ಅವಳ ಉತ್ತರ ಸಹ ಸೂಚಕವಾಗಿದೆ. “ತನ್ನ ಗಂಡ ಆ ಎಳ್ಳನ್ನು ಕೋಂಡವನು. ಅವನ ಸಾಮಾನ್ಯನಲ್ಲ. ಇಡೀ ಹೊಸಪೇಟೆಯನ್ನೆ ಕಟ್ಟಿದ ಸಿರಿವಂತ. ಅವನನ್ನು ಬೇಟಿಯಾಗಿ ಅವನ ಹತ್ತರ ಎಳ್ಳಿನ ದರವನ್ನು ವಿಚಾರಸಿ ಬನ್ನಿ.” ಎಂದೆನ್ನುವಾಗ ತನ್ನ ನಲ್ಲನ ಪ್ರೇಮ ಮಾರಾಟದ ವಸ್ತುವಲ್ಲ ಎಂಬುದನ್ನು ಸೂಚಿಸಿದ್ದಾಳೆ.

ಒಬ್ಬಳ ಕಡಗ ಹಾಕಿಕೊಂಡು ಕೈಯ ಚೆಂದಕ್ಕೆ ಯಾರೋ ಒಬ್ಬನು ಅವಳ ಮುಂಗೈ ಹಿಡಿದನು. ಬಹುಶಃ ಅವಳು ಮದುವೆಯಾದವಳಲ್ಲ. “ನನ್ನನ್ನು ಏಕಾಏಕಿಯಾಗಿ ಯಾಕೆ ಕೈಹಿಡಿದೆ? ನನ್ನ ಕೈಹಿಡಿಯಲು, ನನಗೆ ಕರ್ತ ಅಣ್ಣ ಇದ್ದಾನೆ. ಅವನನ್ನು ಕೇಳಿ ಮುಂದೆ ವಿಚಾರಿಸು”. ಎಂದು ಸೂಚಿಸುತ್ತಾಳೆ. ಪಂಪ ಮಹಾಕವಿಯ ಭಾರತದಲ್ಲಿ ಶಂತನು ಮಹರಾಜನು ಬೇಟಿಯಾಡಲು ಹೋದವನು ಚಿಗರೆಗಂಗಳ ಚೆಲುವಿಯಾದ ಸತ್ಯವತಿಯ ಕೈಹಿಡಿದಾಗ ಅವಳು ಅವನಿಗೆ “ಬೇಡುವೊಡೆ ನೀವೆಮ್ಮಯ್ಯನಂ ಬೇಡಿರೇ”. “ನನ್ನ ಅಪ್ಪನ ಹತ್ತರ ನನ್ನನ್ನು ಬೇಡಿರಿ. (ನನ್ನ ಕೈ ಹಿಡಿಯಬೇಕಾದರೆ)” ಎಂಬುದನ್ನು ಇದು ಹೋಲುತ್ತದೆ.

“ಹಾದರಗಿತ್ತಿ” ಎಂಬ ಭಾಗದಲ್ಲಿ ವಿಷಯ ವಾಚ್ಯವಾಗಿ ಹೇಳಿದೆ. ಆದರೆ ರಾಗಿ ಕಲ್ಲನ್ನು ತಿರುವುತ್ತ ಒಬ್ಬಳು ತನ್ನ ಗೆಣೆಯನಿಗೆ ಎಚ್ಚರಿಸುವ ಹಾಡು ಸೂಚ್ಯವಾಗಿದೆ. “ನಿನ್ನ ಸಮಾಚಾರ ತೆಗೆದುಕೊಳ್ಳಲು ಅಡಗಿ ಮೇಲೆ (ಮೆತ್ತಿನ ಮೇಲೆ) ಒಬ್ಬ ಕೂತಿದ್ದಾನೆ. (ಗಂಡ ಅಥವಾ ಅವನು ನೇಮಿಸಿದ ಪುಂಡ) ತಂದ ವಸ್ತ್ರದ್ದೋ ಹಣದ್ದೋ ಮೊಟ್ಟೆಯೇನಿದೆಯೊ ಅದನ್ನು ತೊಂಡೆ ಚಪ್ಪರಕ್ಕೆ ಕಟ್ಟು; ಬಂದ ಹಾದಿ ಹಿಡಿದು ಹೋಗು” ಎಂಬಲ್ಲಿ ಕೊನೆಯೆರೆಡು ಸಾಲುಗಳಲ್ಲಿ ವಾಚ್ಯವಾಗಿ ಹೇಳಿದ್ದರೂ ಮೊದಲು ಗೋಢ ಮಾತು ಬಳಕೆಯಾಗಿದೆ. ಇಲ್ಲಿ ರಾಗಿ ಬೀಸುವ ಹಾಡು ಎಂದು ಕಾಣುವ ತ್ರಿಪದಿ ತನ್ನ ಗೆಣೆಗಾರನಿಗ ಸೂಚನೆಯನ್ನು ಇತರರಿಗೆ ತಿಳಿಯದಂತೆ ನೀಡುತ್ತದೆ. “ರಂಭೆ” ಇಲ್ಲಿ ಬಹು ಚತುರಳಾದ ಸುಂದರ ತರುಣಿ ಇದು ಅಂಥವರ ಹಾಡು. ರಂಭೆ ಸಂಬಾರ ಅರೆಯುವದು ಹಾರುವ ಹಕ್ಕಿಗೆ ಸಂಬಾರ ಅರೆಯುವದು ಎಂಬ ಅರ್ಥದಲ್ಲಿದೆ. ಮುಂಬಯಿಗೆ ಹೋಗಿ ಅಲ್ಲಿ ಯಾರಾದರೂ ತನಗೆ ಲಭ್ಯವಾಗಬಹುದೆಂದು ಅವಳು ಮಾಡುವ ಯುಕ್ತಿ ಇಲ್ಲಿ ಸೂಚಿತವಾಗಿದೆ.

ಬೆದುರ್ಯಲಿ (ಬಿದಿರಿನ ಎಲೆ). ಬಿದಿರಿನ ಎಲೆಯ ಮೇಲೆ ಚಂಡಾಡಿದರು. ಬಿದಿರೆಲೆ ಬಣ್ಣ ಹಿಡಿಯಲಿಲ್ಲ, ಎಂಬಲ್ಲಿ ಬಿದಿರಿನ ಎಲೆಗಳ ಮೇಲೆ ಚಂಡಾಡಿದರೆಂದು ಅಕ್ಷರಶಃ ತೆಗೆದುಕೊಳ್ಳಬಾರದು. ಬಿದಿರಿನ ಎಲೆ ಬಣ್ಣದ ಸೀರೆ ಉಟ್ಟ ಅವರು ಚಂಡಾಡಿದರು. ಅವರು ರಭಸದಿಂದ ಚಂಡಾಡುವಾಗ ಅವರು ಉಟ್ಟ ಬಿದಿರಿನ ಎಲೆ ಬಣ್ಣ (ಬಿದಿರಿನ ಎಲೆ ಬಣ್ಣದ ಸೀರೆ) ಕಳಚಿಬಿದ್ದರೂ ಆಟದ ಹುಮ್ಮಸ್ಸಿನಲ್ಲಿ ಅವರು ಸೀರೆ ಬೀಳದ ಹಾಗೆ ಹಿಡಿದರು, ಆಟವನ್ನು ಕೆಡಿಸಿಕೊಳ್ಳಲಿಲ್ಲ. ಇಲ್ಲಿ ಬಿದಿರೆಲೆ ಬಣ್ಣದ ಸೀರೆ ಬಿಚ್ಚಿ ಬೀಳುತ್ತಿದ್ದರೂ ಚಂಡನ್ನು ಹಿಡಯುವದನ್ನು ಬಿಡದೆ ಆಟವಾಡಿದರು ಎಂದೂ ಅರ್ಥಮಾಡಬಹುದು. ಅವರ ಆಟದ ಹುಮ್ಮಸ್ಸು ಇಲ್ಲಿ ಚೆನ್ನಾಗಿ ಪ್ರಕಟವಾಗಿದೆ.

ಸೂಳೆಯರು ಎಂಬ ಭಾಗದಲ್ಲಿ ಗೋಕರ್ಣದ ಸೂಳೆಯರು ಕುಣಿತಕ್ಕೆ ಹೆಸರಾದವರೆಂದು ಬರುತ್ತದೆ. ಹಿಂದಿನ ಕಾಲದ ಮದುವೆಗಳಲ್ಲಿ ಸೂಳೆಯರನ್ನು ಕುಣಿತದ ಸಲುವಾಗಿ ಕರೆಸುತ್ತದ್ದರು. ಜಾತ್ರೆಗಳಲ್ಲಿಯೂ ದೇವರ ಮೆರವಣಿಗೆಯಲ್ಲಿಯೂ ತಥದ ಮುಂದೂ ಅವರು ಕುಣಿಯುತ್ತಿದ್ದರು.

ಬಬ್ರುದೇವರು ಮಾಸೂರಿನ ಜಲದೇವತೆ. ಸಂಕ್ರಾಂತಿ ಹಬ್ಬದಲ್ಲಿ ಬಬ್ರುದೇವರ ಜಾತ್ರೆಯಾಗುತ್ತದೆ. ಆಗ ಹೇಳುವ ಹಾಡು ಇದು. ಬಿಳಿಯೆಲೆ ಬಿದ್ದದ್ದನ್ನು ನೋಡಿದ ಸೂಳೆಯರು ಅದನ್ನು ಕೇದಿಗೆ ಹೂವೆಂದು ತಿಳಿದು ಭ್ರಮಿಸಿ ಮುಡಿಯಲು ಹೆಕ್ಕಿದರು ಎಂಬ ಭ್ರಮಾಲಂಕಾರವಿಲ್ಲಿದೆ. ಇದನ್ನು ಭತ್ತ ಮೆರಿಯುವಾಗಲೂ ಸಹ ಹಾಡುತ್ತಾರೆ.

ಈ ಸಂಗ್ರಹದ “ಸತ್ತವರ ಹಾಡು” ಅಪೂರ್ವವಾದ ತ್ರಿಪದಿಗಳನ್ನೊಳಗೊಂಡಿದೆ. ಅಣ್ಣನು ಜೀವದಿಂದಿದ್ದಾಗ ಬಹಳ ಭಕ್ತಿಯಿಂದ ಶನಿವಾರ ವ್ರತವನ್ನು ಮಾಡುತ್ತಿದ್ದಿರಬೇಕು. ಆ ಅಣ್ಣನ ನೆನಪಿನಿಂದ ನಂದಾದೀವಿಗೆಯನ್ನು ಅವಳು ದೇವರ ಮುಂದೆ ಹಚ್ಚುತ್ತಾಳೆ. ಅಣ್ಣನೂ ಸ್ವರ್ಗದಲ್ಲಿ ಸಹ ಶನಿವಾರದ ವ್ರತವನ್ನು ಬಿಡುವುದಿಲ್ಲವೆಂಬುದು ಅವಳ ಕಡುನಂಬಿಗೆ.

ಹಾಡುಗಾರಳ ತಂದೆ ಜೀವನದಲ್ಲಿ ಬಹಳ ಹೋರಾಡಿ, ಸಾವಾಗ ಸಂಕಟಪಟ್ಟು ಸತ್ತನು. ಅವನು ಸಾಯುವಾಗ ಸಹ ಅವನು ಕಡು ಮಾವಿನಂತೆ ಬಹಳ ಒಳ್ಳೆಯ ಸವಿಗಾರನಾಗಿದ್ದನು. ಆದರೆ ತನ್ನ ಅಪ್ಪ ಸತ್ತವನು ಬಿದ್ದ ಮರದ ಹಾಗೆ. ಇದ್ದಾಗ ಮರದ ಕಡುರುಚಿಯ ಹಣ್ಣನ್ನು ತಿಂದವರು ಎಷ್ಟೋ. ಅವನಿಂದ ಉಪಕೃತರಾದವರು. ಆದರೆ ಅವನು ಸತ್ತನೆಂದು ಯಾರೂ ಮರುಗುವದಿಲ್ಲವಲ್ಲಾ ಎಂದು ಅವಳ ವ್ಯಥೆ.

“ಸುವ್ವೀ ಸುವ್ವೀ ಸುವ್ವಾಲೆ”ಯಲ್ಲಿ ಒಬ್ಬ ಹೆಣ್ಣು ಮಗಳು “ಸತ್ತರ್ ಹುಟ್ಲಿಕೆಲ್ಲ; ಬತ್‌ಮರ ಜಿಗ್ರ್‌ಲಿಕೆಲ್ಲ. ಸರ್ಗಕ್ ಹೋದೋರು ಬರ್‌ಲಿಕ್ಕೆಲ್ಲ.” ಎಂದು ವಾಸ್ತವಿ ದೃಷ್ಟಿಯಿಂದ ಹೇಳಿದ್ದಳು. ಇಲ್ಲಿನ ಹೆಂಗಸಿನ ರೀತಿ ಬೇರೆ. ಬತ್ತಿದ (ಒಣಗಿದ) ಮರವು ಚಿಗಿದರೆ, ಸತ್ತಮರ ಹುಟ್ಟಿದರೆ ಸ್ವರ್ಗಕ್ಕೆ ಹೋದವರು ಬರಬಹುದು. ಹಾಗೆ ಆಗಲಿಕ್ಕಿಲ್ಲ; ಸತ್ತವರು ತಿರುಗಿ ಹುಟ್ಟಲಿಕ್ಕೆಲ್ಲ ಎಂಬುದೇ ಇಲ್ಲಿಯ ಭಾವವಿರಬಹುದೇನೋ ಅಥವಾ ತನ್ನ ಸತ್ತ ಅಪ್ಪ ಮತ್ತೆ ಹುಟ್ಟಲೆಂಬ ಹಾರೈಕೆ ಇಲ್ಲಿರಬಹುದು.

“ಹಾರೈಕೆ”ಯಲ್ಲಿ ಕಳಸ ಅಂದರೆ ಕಲಶ ಹೊರುವ ಹೆಣ್ಣು ಸಂತಾನ. ಇನ್ನೊಬ್ಬಳು ದೇವರ ಅನುಗ್ರಹವಿದ್ದರೆ ಮಾತ್ರ ನಾವು ಎಣಿಸಿದಂತೆ ಆದೀತು. ಅಲ್ಲದಿದ್ದರೆ ನಮ್ಮ ತಂದೆ- ತಾಯಿಯರ ಮನಸ್ಸಿದ್ದ ಜಾಗದಲ್ಲಿ ಕೊಟ್ಟ ಮೇಲೆ, ನಮ್ಮ ಮನಸ್ಸಿಲ್ಲದಿದ್ದರೂ ನಮ್ಮ ಹಣೆಯಲ್ಲಿ ಬರೆದದ್ದೆಂದು ಸಮಾಧಾನ ಮಾಡಿಕೊಂಡು ಮದುವೆಯಾಗಿ ಹೋಗಬೇಕು ಎಂದು ತನ್ನ ಅಸಹಾಯಕತೆಯನ್ನು ವ್ಯಕ್ತ ಮಾಡಿದ್ದಾಳೆ. ಹಿಂದಿನ ಕಾಲದ ಹುಡುಗಿಯರು ಪ್ರೀತಿಸಿದವನನ್ನು ಮದುವೆಯಾಗಲು ಸಾಧ್ಯವಿಲ್ಲದೆ ಬೇರೆಯವನನ್ನು ಮದುವೆಯಾಗುವ ಪ್ರಸಂಗ ಬಂದಾಗ “ಹಣೆಯಲ್ಲಿ ಬರೆದದ್ದು” ಎಂದು ತಿಳಿದು ಸಮಾಧಾನ ಪಡುತ್ತಿದ್ದರು.

“ಸಂಕೀರ್ಣ” ಎಂಬ ಭಾಗದಲ್ಲಿಯೂ ಹಲವು ಅಪೂರ್ವ ಜೀವನ ಚಿತ್ರಣಗಳೂ ಭಾವಗಳೂ ಉಂಟೂ.

ಸಾಮಾನ್ಯವಾಗಿ ಒಕ್ಕಲಿಗರು ಕಳ್ಳು (ಹೆಂಡ) ಕುಡಿಯುತ್ತಾರೆ; ಮೀನ ತಿನ್ನುತ್ತಾರೆ. ಆದರೆ ಒಬ್ಬಳು ತಾವು ಕಳ್ಳು ಕುಡಿಯುವದಿಲ್ಲ; ಮೀನ ತಿನ್ನುವದಿಲ್ಲ. ನಾವು ಜೈನರು ಮತ್ತು ಲಿಂಗವನ್ನು ಕಟ್ಟಿಕೊಳ್ಳದ ಜಂಗಮರು (ವೀರಶೈವರು) ಎಂಬಲ್ಲಿ ಜೈನರೂ ವೀರಶೈವರೂ ಈ ರೀತಿ ಇರುವರೆಂಬ ತಿಳಿವಳಿಕೆಯನ್ನು ತೋರಿದ್ದಾಳೆ.

ಲಂಕಾಪಟ್ಟಣದಲ್ಲಿ ರಾತ್ರಿಯಲ್ಲಿ ತಾಯಿ ಸೀತಮ್ಮನ ಕಿವಿ ಓಲೆ (ವಜ್ರದೋಲೆ)ಯ ಬೆಳಕಿಗೆ ರಂಭೆಯರು ಚಿತ್ರ ಬರೆದರೆಂಬ ಸುಂದರ ಚಿತ್ರವಿಲ್ಲಿದೆ.

ಒಬ್ಬಳು ಹೆಂಗಸು ಇನ್ನೊಬ್ಬಳನ್ನು ಕಂಡಳು. ಅವಳ ಅಂದ ಚೆಂದವನ್ನು ನೋಡಿ ಬೆರಗಾಗಿ ನಿಂತಳು. ಆಗ ಆ ಇನ್ನೊಬ್ಬಳು ಕೇಳುತ್ತಾಳೆ. “ನಾನು ನಿನ್ನ ಕಿವಿಯಲ್ಲಿನ ಚಿನ್ನಕ್ಕಿಂತ ಹೆಚ್ಚು ಚೆಲುವಿಯೋ?” ಹೆಣ್ಣಾದರೂ ಹೆಣ್ಣಿನ ಚೆಂದಕ್ಕೆ ಮರುಳಾಗುವ ವಿಶೇಷವಿಲ್ಲಿದೆ.

ಒಬ್ಬಳು ತನ್ನ ಕಣ್ಣಿನ ರೆಪ್ಪೆಗಳನ್ನುದ್ದೇಶಿಸಿ, “ಚೆನ್ನಿಗನನ್ನು ಕಂಡಲ್ಲಿ ತಲೆ ಬಗ್ಗು! ಇಲ್ಲದಿದ್ದರೆ ನಿನ್ನಿಂದಲೇ ಜಗಳ ಬರುತ್ತದೆ” ಎಂದು ಹೇಳುವ ಭಾವವೆಷ್ಟು ಅಪೂರ್ವವಾಗಿದೆ! ಕಣ್ಣ ರೆಪ್ಪೆಗಳನ್ನು ಕಣ್ಣಗಂಗಳ ಎಂದಿರಾದರೂ ಚೆಲುವಾಗಿದೆ. ಗಂಡನ ಹೊರತು ಸುಂದರ ಪುರಷ ಬೇರೆಯಾರಾದರೂ ಕಣ್ಣಿಟ್ಟು ಗರತಿ ನೋಡಬಾರದು; ಆ ಆಸೆಯಿದ್ದರೂ ಮರ್ಯಾದೆಯ ದೃಷ್ಟಿಯಿಂದ ರೆಪ್ಪೆಗಳನ್ನು ಬಾಗಿಸಿ, ಅವನನ್ನು ನೋಡುವ ಮತ್ತು ಅದರಿಂದಾಗ ಅವನನ್ನು ಮೋಹಿಸುವ ಸಂದರ್ಭವನ್ನೇ ತಪ್ಪಿಸಬೇಕೆಂಬ ಅವಳ ಭಾವದ ಕಳಕಳಿಯಿಲ್ಲಿದೆ. “ಕಣ್ಣು ನಾಲಿಗೆ ಮನವು ತನ್ನದೆಂದೆನಬೇಡ” ಎಂದು ಸರ್ವಜ್ಞನು ಎಚ್ಚರಿಕೆ ಕೊಟ್ಟಿದ್ದನು.”

ಪೇಟೆಯ ಹೆಣ್ಣು ಮಕ್ಕಳು ಹಳ್ಳಿಯ ಹೆಣ್ಣು ಮಕ್ಕಳ ಹಾಗೆ ಸದೃಢರಲ್ಲ ಎಂಬ ಮಾತನ್ನು ಸುಂದರವಾಗಿ ಇಲ್ಲಿ ಹಾಸ್ಯ ಮಾಡಲಾಗಿದೆ. ಕಾಣಲು ಚೆಲುವಿಯರಾದ ಪೇಟೆಯ ಹೆಣ್ಣು ಮಕ್ಕಳು ಗಾಳಿ ಬೀಸಿದರೆ ಬಳಕುತ್ತಾರೆ. ನಮ್ಮ ಊರ ಗದ್ದೆ ಹಾಳಿಯ ಮೇಲೆ ಅವರು ನಡೆಯಲೂ ಅಸಮರ್ಥರು ಎನ್ನುತ್ತಾಳೆ ಇಲ್ಲಿಯ ಹಳ್ಳಿಯ ಹುಡುಗಿ.

ಇಲ್ಲಿಯ ಹಾಡುಗಳಲ್ಲಿ ಅಲಂಕಾರಗಳನ್ನು ಉಪಯೋಗಿಸಿದ ರೀತಿ ಹೊಚ್ಚ ಹೊಸದಾಗಿದೆ. ಒಬ್ಬಳ ಅಕ್ಕ ಗಿಡ್ಡವಾಗಿದ್ದಳೆಂದು ಕಾಣುತ್ತದೆ. ಅವಳು ಕೇಳುತ್ತಾಳೆ. “ಇಡಗುಂಜಿ ಬಯ್ಲಲ್ಲಿ ಗಿಡ ಸಣ್ಣ ಎಂಬವರು ಯಾರು? ಸಣ್ಣ ಗಿಡಕ್ಕೆ ತಕ್ಕ ಎಳಗಾಯಿ ಇದೆ. ನನ್ನ ಅಕ್ಕನ ನಡುವಿಗೆ ತಕ್ಕ ಗರ್ಭ ಬೆಳೆದಿದೆ.” ಇಲ್ಲಿ ದೃಷ್ಟಾಲಂಕಾರವಿದೆ.

ಕಡಿದ ಅಕ್ಕಿ ಚೆಂದ ಕಡೆದ ಮಜ್ಜಿಗೆ ಚೆಂದ
ಕಡಲೆದ್ದಿ ಬರುವ ತೆರೆ ಚೆಂದ || ನಮ್ಮನಿಯ
ಓದುವ ಬಾಲಯ್ಯನ ದನಿ ಚೆಂದ

ನಾರಿಗೆ ನಲ್ಲನ ಚಿಂತೀs ಹೋರಿಗೆ ಹುಲ್ಲಿನ ಚಿಂತೀss
ಹೂಡುವ ಚಿಂತೀss ಗೌಡಾಗೇ|| ಈ ಊರಾs
ಆಳ್ವೆನಂಬೂ ಚಿಂತೀsss ಅರಸೂಗೇsss

ಇಂಥ ಪ್ರತಿವಸ್ತೂಪಮೆಗಳು ಅನೇಕವಾಗಿವೆ. “ಕಾಲುಂಗಿಲ ನೆಡಗೇss ವತ್ತುಂಗಿಲಲಿಟ್ಟಂತೇss| ಅತ್ತುಗದಿರ ನೆಡಗೇsss ಮೈದುನೀsss”|| “ಹಲಸಿನ ಹಣ್ಣಿನಂತೆ ಹಸಿದು ಬಂದ ನಲ್ಲನೇ”| “ಗುಂಡುಗಲ್ಲಿನಾಂಗೆ ಇರಬೇಕು” “ಹಾಲಿನಂತಾ ಮಡದಿ ಒಳಗಿದ್ದಾಳೆ” “ತುಂಬಿ ಹೂವಿನಂತೆ ಪರಿಮಳ” ಅಡಕಿಯನ್ನು ಒಡೆದಂತೆ; (ಶಬ್ದವಾಗುವದು). “ಕಲ್ಲಿನಂತ ಜೀವ ಕರಗಿತು”. “ಅಳಿಯ ಬಂದರೆ ಅರಸು ಬಂದಂತೆ” ಮುಂತಾದ ಸೊಗಸಾದ ಉಪಮೆಗಳು ಹಲವಿವೆ.

ಒಬ್ಬಳು ತನ್ನ ಮಿಂಡನನ್ನು ರಾಗಿಕಲ್ಲು ಎಂದು ಸಂಬೋಧಿಸಿ ಅವನಿಗೆ ಎಚ್ಚರಿಕೆ ಕೊಡುತ್ತಾಳೆ. ಇದು ರೂಪಕಾತಿಶಯೋಕ್ತಿ ಅಲಂಕಾರ. ಒಬ್ಬಳು ಮುಡಿವಾಳ ಗಿಡದಲ್ಲಿ ಗರುಡನ ಸಾಧಕ ಮಾಡಿ ಪುರಷನನ್ನು ಮರುಳು ಮಾಡಿದಳಂತೆ. ಇಲ್ಲಿ ಗರುಡ ಎಂದರೆ ಜಾರ ಎಂಬ ಅರ್ಥವಿರಬಹುದೇನೊ. “ಗರುಡ ಬಂದಿ ನೀರು ಗೈಡಿತು” ಎಂದು ಬೇರೆ ಹಾಡಿನಲ್ಲಿಯೂ ಹೇಗೆ ಅರ್ಥ ಮಾಡಬಹುದು.

“ಸುವ್ವೀ ಸುವ್ವೀ ಸುವ್ವಾಲೆ” ಗ್ರಂಥದಲ್ಲಿ ಸೂರ್ಯ ಮುಳುಗುವದನ್ನು ಚಿನ್ನದ ಗಿಂಡಿಯೆಂದೂ ಅದರಿಂದ ಕುಂಕುಮದ ಹುಡಿ ಉದುರುವದೆಂದೂ ರೂಪಕ ವರ್ಣನೆ ಮಾಡಿದರೆ, ಇಲ್ಲಿ ಸೂರ್ಯನ ಉದಯದ ಚಿತ್ರವರ್ಣನೆಯಿದೆ. ಇಲ್ಲಿ ದೊರೆಯ ಬಗುಲಲ್ಲಿ ಬಗಲಿನಲ್ಲಿ (ಬಾಗಿಲಿನಲ್ಲಿ?) ಚಿನ್ನದ ಗಿಂಡಿಯನ್ನು ಈಡಾಡುತ್ತ ಬಾ ಎಂದು ಹೇಳಲಾಗಿದೆ. ಇದೊಂದು ಓಕುಳಿಯ ದೃಶ್ಯವಾಗಿದೆ. ಸಂಸಾರವೆಂದರೆ ಎರವಿನ ಬಂಗಾರ; ಎರವಿನ ಸಿಂಗಾರ. ನಿಜವಾದದ್ದಲ್ಲ, ಎಂದು ಚಂದವಾದ ರೀತಿಯಲ್ಲಿ ರೂಪಕ ಮಾಡಲಾಗಿದೆ.

ಇನ್ನೊಂದೆಡೆ ಗಂಡನಿಲ್ಲದೆ ಮಗನನ್ನು ಹಡೆದವಳನ್ನು ನಾನಾ ಪ್ರತೀಕಗಳಲ್ಲಿ ಬಣ್ಣಿಸಲಾಗಿದೆ ಮುಂಡೆಯಿಲ್ಲದೆ ದಂಡೆ ಮುಡಿದಳು ಎಂಬಲ್ಲಿ ಅವಳು ಗಂಡ ಸತ್ತವಳು ಎಂಬುದು ಸೂಚಿತವಾಗಿದೆ.

ಸೂಳೆಯರು ಬಿಳಿಯೆಲೆಯನ್ನು ಕೇದಿಗೆ ಹೂವೆಂದು ಹೆಕ್ಕಿದರು. ಗಂಡನ ಮನೆಯಲ್ಲಿ ಕಾಜಿನ ನೆಲಗಟ್ಟು; ಅದು ನೀರೆಂದು ಅಡಿಯಿಡಲು ಹೊಸದಾಗಿ ಮದುವೆಯಾಗಿ ಹೋದ ಹೆಣ್ಣು ಭ್ರಮಿಸಿದಳು ಎಂಬಲ್ಲಿಯೂ ಭ್ರಮಾಲಂಕಾರವಿದೆ.

ಹಾಸ್ಯದ ಹಾಡುಗಳು ಇಲ್ಲಿ ಹಲವಾರಿವೆ. “ಹಾಡು” ಎಂಬ ಭಾಗದಲ್ಲಿ ಅತ್ತಿಗೆಗೆ “ಬಚ್ಚಲಿನ ಉಡುಗರೆ ಕೊಡುತ್ತೇನೆ” ಎಂದು ಹೇಳುವಲ್ಲಿ ಹೆಂಗಸರು ಉಡುವ ಸೀರೆಗೆ ಸಂಬಂಧಿಸದ ಒಳಕಚ್ಚೆ ಎಂಬಲ್ಲಿ ಎಂಥ ಹಾಸ್ಯವಿದೆ! ಹೆಂಗಸರ ಒಳಲಂಗೋಟಿಯನ್ನು ಬಚ್ಚಲಿನಲ್ಲಿ ಒಣಗಲು ಹಾಕುತ್ತಾರೆ!

ಒಬ್ಬಳ ಅಣ್ಣ ಮಾಳಿಗೆಯೊಳಗೆ ದುರ್ಪತಿ (ಹೆಂಡತಿ) ಇಲ್ಲದೆ ಒರಗನಂತೆ! ಇಲ್ಲಿ ಒರಗು ಎಂದರೆ ನಿದ್ದೆಮಾಡು ಎಂದೂ ನಮ್ಮ ಕಡೆ ಅರ್ಥವಿದೆ. ತಮ್ಮಯ್ಯನ ಕೊನೆಮೀಸೆ ಬಂದುದನ್ನು “ಕೊಂಬಿಲ್ಲದಾನೆಗೆ ಕೊಂಬು ಬಂತು” ಎಂಬಲ್ಲಿ ಹಾಸ್ಯ ದೃಷ್ಟಿಯಿಂದ ಬಣ್ಣಿಸಲಾಗಿದೆ.

ಎಲ್ಲ ಹೆಂಗಸರು ಜಾಜಿಜೂಜಿ ದಂಡೆ ಮುಡಿದರೆ, ನಮ್ಮ ಅತ್ತಿಗೆ ಕರಡದ ಹುಲ್ಲಿನ ಪಿಂಡಿಯನ್ನು ಮುಡಿದಿದ್ದಾಳೆಂಬುದು ಮದುವೆಯ ಹಳಿವ ಹಾಡಾಗಿದ್ದಿರಬಹುದು.

ರಾಗಿ ಬೀಸುವಾಗ ರೋಗವೆಂದು ತಪ್ಪಿಸಿಕೊಂಡವಳು ರಾಗಿರೊಟ್ಟಿ- ಕೆನೆ ಮೊಸರು ತಿಂಬಾಗ ಒಳ್ಳೇ ಕೈಬಾಯಾಡಿಸಿ ತಿಂದಳಂತೆ! ಭಾವನನ್ನು ಕುರಿತ ಹಾಸ್ಯವನ್ನು ಹಿಂದೆ ನೋಡಿದ್ದೇವೆ.

ಭಟಕಳದ ಸೂಳೆಯರಿಗೆ ಹೊಟ್ಟೆಯಲ್ಲಿ ಕರುಳೇ ಇಲ್ಲವಂತೆ! ಅವರಿಗೆ ಗಿರಾಕಿಯ ಹತ್ತರ ನಿಷ್ಠುರವಾಗಿ ಹಣ ವಸೂಲ್ಮಾಡುವಾಗ ದಯೆಯೇ ಇಲ್ಲ ಎಂಬಲ್ಲಿ ಈ ರೀತಿ ಹೇಳಿದೆ. ಗೇರಸೊಪ್ಪೆಯ ಹೆಣ್ಣಾದರೂ ಜಾರಿ ಬಿದ್ದರೆ ಮಣ್ಣಾಗದೆ ಇದ್ದೀತೆ? ಸನ್ಯಾಸಿ ಕೆಟ್ಟಾ ಜಪದಲ್ಲಿ! ಅದು ಯಾವ ಜಪವೆಂದು ಬೇರೆ ಹೇಳುವದೆ ಬೇಡ. ಸುಡುಗಾಡಿಗೆ ಹೋದ ಹೆಣ, ಸೂಳೆಗಾರಿಕೆಗೆ ಕೊಟ್ಟ ಹಣ ಮತ್ತೆ ಮರಳಲಿಕ್ಕಿಲ್ಲವಂತೆ!

ಒಬ್ಬನು ಕಾಗೆಗಿಂತ ಕರಿಯವನು, ಸೂಜಿಗಿಂತ ಸಪುರ (ಸೀರ, ಸಣ್ಣ). ಅಜ್ಜ- ಅಜ್ಜಿಗಿಂತ ಹಿರಿಯನು. ಬಡ್ಡೀಮಗ ಎಂದು ಹಾದಿಯಲ್ಲಿ ಹೋಗುವವನನ್ನು ಬಣ್ಣಿಸುತ್ತಾಳೆ ಒಬ್ಬಳು. ಕಾಗೆಗೆ ಒಂದು ಕಲ್ಲು ಹೊಡೆದು ಹೋಗು; ಅಡಕೆಯ ಹಾಳೆಯ ಕೊಟ್ಟೆ (ಅಡಕೆಯ ಮೇಲಿನ ಹಾಳೆಯನ್ನು ಬಗ್ಗಿಸಿ ಮಾಡಿದ ತಟ್ಟೆಯಾಕಾರದ ಗೂಡು)ಯ ಮೋರೆಯವನೇ, (ಅಂದಗೇಡಿ) ಎಂದೂ ಅವನನ್ನು ನಿಂದಿಸುತ್ತಾಳೆ.

ಈ ಹಾಡುಗಳನ್ನು ಹೇಳಿದವರು ಹೆಚ್ಚಾಗಿ ನಾಮಧಾರಿ ಜಾತಿಯ ಹೆಂಗಸರು. ಸೌ| ಪಾರ್ವತಿ ಶಿವು ನಾಯ್ಕ ಬಾಡ, ಸೌ| ನಾಗಮ್ಮ ಹನುಮಂತ ನಾಯ್ಕ ಮೂರೂರು, ಗಣಪಿ ನಾರಾಯಣ ನಾಯ್ಕ ಮೂರೂರು, ಮಾದೇವಿ ತಿಮ್ಮಣ್ಣ ನಾಯ್ಕ ಮೂರೂರು, ಬೆಳಿಯಮ್ಮ ಪುಟ್ಟ ನಾಯ್ಕ ಹೊಸಾಕುಳಿ, ಲಕ್ಷ್ಮೀಯೇರಪ್ಪ ನಾಯ್ಕ ಕೊಡಕಣಿ, ಹೆಗಡೆ ಊರಿನ ಗೌರಿ ಶಿವಪ್ಪ ನಾಯ್ಕ, ಗೌರಿ ಮಹಾದೇವ ನಾಯ್ಕ, ಪಾರ್ವತಿ ಜಟ್ಟಿ ನಾಯ್ಕ, ಸೌಭದ್ರಿ ರಾಮ ನಾಯ್ಕ, ದೇವಿ ಗೋಯ್ದಪ್ಪ ನಾಯ್ಕ, ಬೀರು ಸುಬ್ಬಯ್ಯ ನಾಯ್ಕ, ಸೌ| ಸೋಮ ನಾರಾಯಣ ನಾಯ್ಕ, ಸೌ| ನಾಗಮ್ಮ ನಾಗಪ್ಪ ನಾಯ್ಕ, ಸೌ| ಗೋಪಿ ಕೋಂ ಬೀರಪ್ಪ ನಾಯ್ಕ, ದೇವಿ ಗೋವಿಂದ ನಾಯ್ಕ, ತಿಮ್ಮು ಮಾರಿ ನಾಯ್ಕ, ಸೌ| ಸಾವಿತ್ರಿ ರಾಮ ನಾಯ್ಕ, ದೇವಿ ಹನುಮಂತ ನಾಯ್ಕ, ಲಕ್ಷ್ಮೀ ದೇವಪ್ಪ ನಾಯ್ಕ (ಜಡೆ), ದೇವಿ ನಾಗಪ್ಪ ನಾಯ್ಕ, ನಾಗಮ್ಮ ಬೀರ ನಾಯ್ಕ, ಪರಮೇಶ್ವರಿ ಗಣಪಯ್ಯ ನಾಯ್ಕ ಮುಂತಾದ ಹೆಗಡೆಯ ಕೇರಿಯವರು… ನಾಗಮ್ಮ ನರಸ ನಾಯ್ಕ (ಊರುಕೇರಿ) ಹಾಗೂ ತಿಮ್ಮು ಮಾರಿ ನಾಯ್ಕ, ತೀರ ವೃದ್ಧೆಯರು, ತೊಂಬತ್ತರ ಮನೆಯನ್ನು ದಾಟಿದವರು. ಕು| ಕಮಲಾ ಬಲಿಯಂದ್ರ ನಾಯ್ಕ ಹದಿನಾರು ಹದಿನೇಳು ವರ್ಷದವಳು.

ಕೆಲವು ಗಾಮೊಕ್ಕಲ ಪಟಗಾರ ಹೆಂಗಸರೂ ಇಲ್ಲಿಯ ಹಾಡುಗಳನ್ನು ಹೇಳಿದ್ದಾರೆ. ಈ ಹಾಡುಗಳೆಲ್ಲಾ ಈ ನಾಮಧಾರಿ ಹೆಂಗಸರಲ್ಲೂ ಪ್ರಚಾರದಲ್ಲಿವೆ. ಉಚ್ಚಾರದ ದನಿಯಲ್ಲಿ ಇವರ ಮಾತುಗಳಲ್ಲಿ ಸ್ವಲ್ಪ ವ್ಯತ್ಯಾಸವಿದೆ. ಕೊಟ್ಟು ಎಂಬಂಥ ಒಕಾರ ಶಬ್ದ ಗಾಮೊಕ್ಕಲ ಮಾತಿನಲ್ಲಿ ಕುಟ್ಟು ಎಂದು ಉಕಾರವಾಗುತ್ತದೆ. ಮತ್ತೆ ಬೇರೆ ಶಬ್ದ ವ್ಯತ್ಯಾಸವಿಲ್ಲ. ಹೇಳುವ ಧಾಟಿಯಲ್ಲಿ ವ್ಯತ್ಯಾಸವಿರುತ್ತದೆ.

ನಾಗು ಕುಟ್ನಪ್ಪ ಪಟಗಾರ ಮಿರ್ಜಾನ, ಸೌ| ಯಮುನಾ ಗಣಪತಿ ಪಟಗಾರ ಕಮಲಾ ನಾರಾಯಣ ಪಟಗಾರ ಮಾಸೂರಿನವರು. ಪರಮೇಶ್ವರಿ ಪರಮೇಶ್ವರ ಪಟಗಾರ ಎಂಬ ವೃದ್ಧೆ ಹೆಗಡೆ ಊರಿನ ತಾರಿಬಾಗಿಲಿನವಳು.

ಈ ಸಂಕಲನದ ಹಾಡುಗಳಲ್ಲಿ ಉತ್ತಮ ಕಾವ್ಯಗುಣವಿದೆಯೆಂಬುದನ್ನು ಸಾಹಿತ್ಯ ಪ್ರಿಯರು ಅರಿಯಬಹುದಾಗಿದೆ.