ಸಂಧಿ: ಆರು

ಶಿವಪದ್ಮನು ತನ್ನ ಮಾತಾಪಿತರನ್ನು ಮರೆತು ಕುರಿಗಳನ್ನು ಕಾಯುತ್ತ ಸಂತೋಷದಿಂದ ಕೊಳಲನೂದುತ್ತ ಭುವನವೆಲ್ಲವ ತಿರುಗಿ ಬೇಸತ್ತನು. ಭಾವಶುದ್ಧದಿ ಧ್ಯಾನಿಸಲಾಗಿ ಶಿವ ಪ್ರತ್ಯಕ್ಷನಾಗಿ “ನಿನಗಾ ವಿಧದ ತೊಂದರೆಗಳಾವರಿಸಿದವು ಪೇಳ್’ ಎನಲಾಗಿ ಶಿವಪದ್ಮನು ‘ಕುರಿಗಳಂ ಕಾಯ್ದು ನಾಂ ಕೊರಗಿದೆ ಸೊರಗಿದೆ ವರಗಿರಿಗಳಂ ಸುತ್ತಿ ತವೆ ತೆರಳಿದೆ ಹೊರಳಿದೆ ಎಳೆಮರಿಗಳಂ ಹೊತ್ತು ಬಲುಬಳಲಿದೆ ತೊಳಲಿದೆ ಹೆಗ್ಗಾಡಿನೋಳ್ವಾಸಮಾದೇ ಕುರಿಗಳಂ ಕಂಡು ಕಂಡಳಕಿದೆ ಬಳಕಿದೆನತಿ ಕೆರೆಗಳಂ ಹುಡುಕಿ ನೀರ್ಗುಡಿಸಿದೆ ಪಡಿಸಿದೆ ಸುಖಹರಿಗಳಂ ನೋಡಿ ಭಯಧರಿಸಿದೆ ನಿನ್ನಯ ಪಾದವನುಜಗಳೆನಲೂ’ ಎಂದು ವಿನಮ್ರವಾಗಿ ಹೇಳಿಕೊಂಡನು. ನೀನು ಬಳಲಬೇಡ, ನಿನ್ನ ಜೊತೆಯಲ್ಲಿ ವೀರೇಶನನ್ನು ಕಳುಹಿಸುವೆ, ಕುರಿಗಳನ್ನು ಸಲಹುತ್ತ ಸುಖಿಯಾಗಿರೆಂದು ಕೈಲಾಸದತ್ತ ಹೊರಟನು. ಇತ್ತ ಶಿವನ ಒಡ್ಡೋಲಗದಲ್ಲಿ ಪರಿವಾರದೊಡನೆ ಸಂತೋಷದಿಂದಿರುವಾಗ ಒಬ್ಬ ಮುನಿಯನ್ನು ಕಂಡು ಮೂವರು ಗಂಧರ್ವರು ಪರಿಹಾಸ್ಯ ಮಾಡಿದರು. ಆಗ ಮುನಿಯು ಕೋಪದಿಂದ ಮೂವರು ಭೂಲೋಕಕ್ಕೆ ತೆರಳಿ ಬಂಕಾಪುರದ ಸೀಮೆಯಲ್ಲಿ ಕಾಂಚಾಲಮರ, ಕಾಗೆ ಮತ್ತು ಕುದಯರಕ್ಕಸಿಗಳಾಗಿ ಜನಿಸಿ ಕಷ್ಟದಿಂದ ಹಲವು ದಿನ ಜೀವಿಸಿರಿ ಎಂದು ಶಾಪವಿತ್ತನು. ಅಲ್ಲದೇ ಗುರು ರೇವಣಸಿದ್ಧನ ಶಿಷ್ಯ ಶಿವಪದ್ಮ ನಿಮಗೆ ಮುಕ್ತಿ ಕೊಟ್ಟು ಪಾಲಿಸುವನೆಂದು ತಿಳಿಸಿದನು. ಮುನಿಯ ಶಾಪದಂತೆ ಮೂವರು ಗಂಧರ್ವರು ಕಾಗೆ ಕಾಂಚಾಲ ಮತ್ತು ಕುದಯರಕ್ಕಸಿಗಳಾಗಿ ಹುಟ್ಟಿ ಕೆಲಕಾಲ ಸುಮ್ಮನಿರಲು ಒಂದು ದಿನ ರಕ್ಕಸಿಯು ಜಾಗ್ರತಾಪುರಕ್ಕೆ ಆಗಮಿಸಿದಳು. ನಿನ್ನ ಮಗಳಾದ ಚುಮಲೆಯನ್ನು ನನಗೆ ಆಹಾರವಾಗಿ ಕೊಡು ಎಂದು ಅರಸನಲ್ಲಿ ಆರ್ಭಟಿಸಿದಾಗ, ಅರಸನ ಪರಿವಾರದವರು ಒಂದೊಂದು ಮನೆಯಿಂದ ಒಬ್ಬೊಬ್ಬರನ್ನು ದಿನನಿತ್ಯ ಕಳುಹಿಸುವುದಾಗಿ ಒಪ್ಪಿಕೊಂಡರು. ಹೀಗಿರಲು ಒಂದು ದಿನ ರಾಜಕುವರಿಯ ಸರದಿ ಬಂದಾಗ, ರಾಜರಾಣಿಯರು ಬಹುದುಃಖದಿಂದ ಮಗಳು ಚುಮಲೆಯನ್ನು ಆಹಾರವಾಗಿ ಕಳುಹಿಸಿದರು. ಸುಂದರಳಾದ ರಾಜಕುವರಿಯನ್ನು ನೋಡಿದ ರಕ್ಕಸಿಯು ಮಾನವ ರೂಪವನ್ನು ಧಾರಣಮಾಡಿ ‘ಈಗೆನಗೆ ಪುತ್ರಿಯಾಗಿ ಸುಖದಿಂದಿರು’ ಎಂದಳು (೧-೧೭).

ಹೀಗೆ ಹನ್ನೆರಡು ವರುಷಗಳು ಕಳೆಯಲಾಗಿ, ಒಂದು ದಿನ ಶಿವಪದ್ಮನು ಗಣತರಪ್ತಿಗೈಯಲು ಒಪ್ಪಕೊಂಡು ಬೆಂಕಿಯನ್ನು ತರಲು ಕಾಡಿಗೆ ತೆರಳಿದನು. ದೂರದ ಮನೆಯೊಂದರಲ್ಲಿ ಹೊಗೆ ಬರುವುದನ್ನು ಕಂಡು, ಇಂಥ ದಟ್ಟ ಅರಣ್ಯದ ಮಧ್ಯದಲ್ಲಿ ಮನೆಯನ್ನು ನಿರ್ಮಿಸಿದವರಾರು ಎಂದು ಯೋಚಿಸಿಹತ್ತಿದನು. ಮನೆಯ ಹತ್ತಿರ ಹೋಗಿ ಬೆಂಕಿಯನ್ನು ಕೊಡಬೇಕೆಂದು ಏರುಧ್ವನಿಯಲ್ಲಿ ಕೇಳಿದನು. ಆಗ ಮನೆಯೊಳಗಿರು ಚಲುವೆ ಚುಮಲಾದೇವಿ ಶಿವಪದ್ಮನನ್ನು ನೋಡಿ ಮನುಷ್ಯನಾದರೆ ಇಲ್ಲಿಗೆ ಬರುವುದು ಸಾಧ್ಯವೆ? ಎಂದು ಮನದಲ್ಲಿ ಅಂದುಕೊಂಡು, ನೀನಾರು, ನಿನ್ನ ಹೆಸರೇನು? ಎಂದು ಕೇಳಿದಳು. ನಾನು ಗುರು ರೇವಣಸಿದ್ಧನ ಶಿಷ್ಯನೆಂದು ಶಿವಪದ್ಮ ಮಾರುತ್ತರ ನೀಡಿದಾಗ, ಚುಮಲಾದೇವಿಯು ತನ್ನ ವೃತ್ತಾಂತವನ್ನು ಹೇಳಿ ಇಲ್ಲಿಗೆ ಬಂದ ಕಾರಣವನ್ನು ತಿಳಿಸಿದನು. ಆಗ ಶಿವಪದ್ಮ ಗಣತೃಪ್ತಿಗೊಳಿಸಿ ಮತ್ತೆ ಮರಳಿ ಬರುವೆನೆಂದು ವಚನವಿತ್ತು ಬೆಂಕಿಯನ್ನು ತೆಗೆದುಕೊಂಡು ಹೊರಟನು (೧೮-೨೭).

ಗಣಸಮೂಹದೊಂದಿಗೆ ಭೋಜನ ಸ್ವೀಕರಿಸಿದ ರೇವಣಸಿದ್ಧನು ಶಿವಪದ್ಮನಿಗೆ ಆಶೀರ್ವದಿಸಿ ನಡೆದನು. ವಚನಕೊಟ್ಟಂತೆ ಶಿವಪದ್ಮ ಉಳಿದ ಪ್ರಸಾದವನ್ನು ತೆಗೆದುಕೊಂಡು ಚುಮಲಾದೇವಿಯತ್ತ ನಡೆದನು. ಪ್ರಸಾದವನ್ನು ಸ್ವೀಕರಿಸಿದ ಆಕೆ ಕೈಮುಗಿದು ನನ್ನನ್ನು ವರಿಸಬೇಕೆಂದು ಬಿನ್ನೈಸಿಕೊಂಡಳು. ಹೀನ ಕುಲದವಳಾದ ರಕ್ಕಸಿಯಲ್ಲಿ ಅನುದಿನವೂ ಬಾಳುವ ನಿನ್ನನ್ನು ವರಿಸುವುದಾಗುವುದಿಲ್ಲ. ನಿನ್ನ ಮನದಾಸೆಯನ್ನು ಬಿಟ್ಟುಬಿಡು ಎಂದನು. ಆ ಮಾತಿಗೆ ಚುಮಲೆಯು ‘‘ಮನಸೋತ ಮಾನುನಿಯ ಬಿಟ್ಟು ಬಳಲಿಸುವದಿದು ಘನತರವೆ ನೀಡೆನ್ನಭಯ ಬಹಬೇಗದಿ ಮುನಿಸ್ಯಾಕೆ ಸಾಕು ಸೈರಿಸು ಶಾಂತನಾಗು ಕುಂದಿಟ್ಟು ಪೋಗುವುದು ಚಿತವೇ, ಜಾತಿದೋಷವೆನಿಸಬೇಡ’’ ಎಂದರುಹಿ ತೂಗುಮಂಚದ ಮೇಲೆ ಶಿವಪದ್ಮನನ್ನು ಕೂಡ್ರಿಸಿ ಪಂಚಾಮೃತವ ಉಣಬಡಿಸಿ ರತಿಕೇಳಿಯಲ್ಲಿ ಮಗ್ನರಾದರು. ಹೀಗಿರಲು ಮಧ್ಯರಾತ್ರಿ ರಕ್ಕಸಿಯು ಬಂದು ಆರ್ಭಟಿಸಹತ್ತಿದಳು. ಆಗ ಚುಮಲೆಯು ನಿನಗೆ ಬೇಸರವಾದರೆ ನನ್ನನ್ನು ಈಗಲೇ ತಿಂದುಬಿಡು ಎಂದಾಗ ರಕ್ಕಸಿಯು, ಮಗಳೇ, ನಿನಗೆ ವೃಥಾ ಕಷ್ಟಕೊಡುವೆನೇ, ಮನೆಯಲ್ಲಿ ಹಾಯಾಗಿರು ಎಂದು ಹೇಳಿ ಆಹಾರ ಹುಡುಕುತ್ತ ಹೊರಟಳು. ಹೋಗುವಾಗ ಚುಮಲೆಯು ಹೀಗೆ ಹೊರಗೆ ಹೋದಾಗ ವೈರಿಗಳು ನಿನ್ನನ್ನು ಕೊಂದರೆ ನಾನಿಲ್ಲಿ ಒಬ್ಬಳೆ ಹೇಗಿರುವುದು ಎಂದಳು. ಈ ಮಾತಿಗೆ ರಕ್ಕಸಿಯು ಈ ಭೂಮಿಯಲ್ಲಿ ನನ್ನನ್ನು ಕೊಲ್ಲುವರುಂಟೆ, ಒಂದು ವೇಳೆ ಕೊಂದರೆ ಮನೆಯ ಮುಂದಿರುವ ಕಾಂಚಾಲ ಮರದಲ್ಲಿರುವ ಕಾಗೆಯನ್ನು ಕೊಲ್ಲಲು ಆ ಮರವು ನೆಲಕ್ಕುರುಳುವುದು. ಆಗ ನಾನು ನೆಲಕ್ಕುರುಳಿ ಸಾಯುವೆನು ಎಂಬ ಸಂಗತಿಯನ್ನು ಹೇಳಿ ಹೋದಳು. ಶಿವಪದ್ಮನು ಕಾಗೆಯನ್ನು ಕೊಲ್ಲುವ ಉಪಾಯನ್ನು ಹುಡುಕಿ ಗುರು ರೇವಣಸಿದ್ಧನನ್ನು ಸ್ಮರಿಸಿ ಕ್ಷಣಾರ್ಧದಲ್ಲಿಯೇ ಕಾಗೆಯನ್ನು ಕತ್ತರಿಸಿದಾಗ ರಕ್ಕಸಿಯು ನೆಲಕ್ಕೆ ಬಿದ್ದು ಸಾವನ್ನಪ್ಪಿತು. ಹೀಗೆ ಯತಿವರನ ಶಾಪು ಮುಗಿದು ಶಿವಪದ್ಮನಿಂದ ಮುಕ್ತಿಯನ್ನು ಹೊಂದಿ ಮೂವರು ಗಂಧರ್ವರು ಕೈಲಾಸಕ್ಕೆ ತೆರಳಿದರು (೨೮-೬೨).

ಸಂಧಿ: ಏಳು

ಇತ್ತ ಶಿವಪದ್ಮ ರಕ್ಕಸಿಯ ಅವಯವಗಳಿಂದ ಐವತ್ತೆರಡು ಬಿರುದಾವಳಿಗಳನ್ನು ಮಾಡಿ ಬಂಕಾಪುರದೊಳಿಟ್ಟು ಚುಮಲೆಯ ಜೊತೆಗೂಡಿ ಕುರಿಕಾಯುತ್ತ ಸುಖದಿಂದಿದ್ದನು. ಈ ವಿಷಯವನ್ನು ನಾರದನು ಕೈಲಾಸದಿ ಶಿವನಿಗೆ ತಿಳಿಸಲಾಗಿ, ಬಿರುದಾವಳಿಗಳನ್ನು ಕಾಯಲು ಬಾಗಿ ಬಂಕಣ್ಣನನ್ನು ಕರೆದು ‘‘ಹಾಳು ಬಂಕಾಪುರಕ್ಕೆ ಪೋಗಿ ಪದ್ಮನ ಬಿರಿದ ಮೇಳದಿಂದಿಟ್ಟು ಪಾಲಿಸು ಮುಂದೆ ಶಿವಸಿದ್ಧ ಬೀರನುದ್ಭವಿಸುತಿಹನು’ ಎಂದು ಭೂಲೋಕಕ್ಕೆ ಕಳುಹಿಸಿದನು. ಇತ್ತ ಚುಮಲಾದೇವಿಯೊಂದಿಗೆ ಶಿವಪದ್ಮ ಕುರಿಗಳನ್ನು ಸಲಹುತ್ತಿರಲು ಆಕಾಶ ಮಾರ್ಗದಿಂದ ರೇವಣಸಿದ್ಧನು ಆಗಮಿಸಿದನು. ಶಿಷ್ಯನ ಭಕ್ತಿ ಮೆಚ್ಚಿ ದೇವಗನ್ನೆಯರನ್ನು ಕರೆದು ಚುಮಲಾದೇವಿಯೊಂದಿಗೆ ಶಿವಪದ್ಮನ ಮದುವೆಯನ್ನು ಮಾಡಿ, ಆಶೀರ್ವದಿಸಿ ಭುವನದತ್ತ ತೆರಳಿದನು (೧-೮).

ಗುರುನಾಮವನ್ನು ನೆನೆಯುತ್ತ ಕುರಿಗಳ ಹಿಂಡಿನೊಂದಿಗೆ ಪದ್ಮನು ಜಾಗ್ರತಿಪುರದ ಸೀಮೆಯೊಳಗಿರು ಆದಿಗೊಂಡನ ಹೊಲಕ್ಕೆ ಬಂದನು. ಕುರಿಗಳು ಆ ಹೊಲದಲ್ಲಿ ಮೇಯ್ದು ಬೆಳೆಗಳನ್ನು ನಾಶಮಾಡುತ್ತಿರುವುದನ್ನು ನೋಡಿ ಜಾಯ್ಗೊಂಡ ಪಾಯ್ಗೊಂಡ ಅಮರಗೊಂಡರೆಲ್ಲರೂ ಕೋಪಗೊಂಡು ‘‘ಭಂಡ ನೀನಾವವನೆಲೊ ಭರದಿಂದ ಬಂದು ಕುರಿಹಿಮಡುಗಳೆಮ್ಮ ಹೊಲಮಂ ಪೊಗಿಸಿ ಭುವನದೊಳು ಪುಂಡನಂತೈ ತರುವಿ ನಿನಗೆ ನಾಚಿಕಿಲ್ಲವೆ ನೀಚ ದುರ್ನೀಚನೆ ದಂಡಿಸುವೆವೀಗ’ ಎಂದು ಬೈದು ನೂಕಾಡಿದರು. ಬಂಧುಬಳಗದವರಂತೆ ಸುಮ್ಮನಿದ್ದ ಶಿವಪದ್ಮನ ಮುಖವನ್ನು ನೋಡಿ ಮಮ್ಮಲ ಮರುಗಿ, ಮನೆಗೆ ಹೋಗೋಣ ನಡೆ, ತಾಯಿ ನಿನಗಾಗಿ ಕೊರಗಿ ಕೊರಗಿ ದುಃಖಿತಳಾಗಿದ್ದಾಳೆ ಎಂದು ಸಹೋದರರು ಪರಿಪರಿಯಿಂದ ಬೇಡಿಕೊಂಡರೂ, ಕಿವಿಗೊಡದೆ ಕುರಿಗಳೊಂದಿಗೆ ಎಂದು ಸಹೋದರರು ಪರಿಪರಿಯಿಂದ ಬೇಡಿಕೊಂಡರೂ, ಕಿವಿಗೊಡದೆ ಕುರಿಗಳೊಂದಿಗೆ ಮುಂದಕ್ಕೆ ನಡೆದನು. ಮಗ ಬಂದ ಸುದ್ಧಿಯನ್ನು ತಿಳಿದು ತಾಯಿ ಬಂದು ಪುತ್ರನನ್ನು ಬಿಗಿದಪ್ಪಿ ಗದ್ದ ತುಟಿ ಹಿಡಿದು ಚಿಕ್ಕಮಗುವಿನಂತೆ ಮಾತನಾಡಿಸಿ ಮನೆಗೆ ನಡೆ ಎಂದಳು. ಆಗ ಪದ್ಮನು ‘ಈ ಲೌಕಿಕದ ಸುಖದಾಪೇಕ್ಷೆ ಯನಗಿಲ್ಲಭವಜಾಲಮಂ ಪರಿದು ಮುಕ್ತನ ಮಾಡ್ದ ಗುರುಸಿದ್ಧಂ ಪಾಲಿಸುವೆ’’ ಎಂದು ಹೇಳಿದನು. ಇದನ್ನರಿತ ಶಿವ ಜಂಗಮವೇಷಧಾರಿಯಾಗಿ ಬಂದು ‘ಪಿತಮಾತೆಯರ ಬಿಟ್ಟು ನಿನಗಿಷ್ಟ ದೈವತಮುಂಟೆ ಸಾಕು ನಡಿನಡಿ ಜಗದಿ ದುಷ್ಟನೆಂಬದೆ ಬಿಡರು ಕೇಳಿದ ಸುಜನರೆಲ್ಲ ಜನನಿಯಂ ಮನ್ನಿಸು’ ಎಂದಾಗ ಚುಮಲೆಯನ್ನು ಕರೆದುಕೊಂಡು ಪದ್ಮನು ಮಾತಾಪಿತರ ಮನೆಗೆ ತೆರಳಿದನು. ಮಾತೆಪಿತ ಸಹೋದರರೊಂದಿಗೆ ಸುಖದಿದಿರಲು ಶಿವಪದ್ಮ ಮತ್ತು ಚುಮಲಾದೇವಿಯರಿಗೆ ರೇವಣ ಎಂಬ ಮಗ, ಕೆಲವು ದಿನಗಳ ನಂತರ ಒಬ್ಬ ಮಗಳು ಜನಿಸುವರು. ಹೀಗಿರಲು ಒಂದು ದಿನ ಗುರು ರೇವಣಸಿದ್ಧೇಶ್ವರನು ಆಗಮಿಸಿ ‘ಈಗಲೀ ಲೌಕಿಕದ ವಿಷಯದಾಪೇಕ್ಷೆಯಂ ಬಿಟ್ಟು ಕೈಲಾಸಪುರಕೆ ಬೇಗದಿ ನಡೆ ಶಿವವಲ್ಲಭನನುಜ್ಞೆ ನಿನಗಾಗಿಹುದು ಪುಸಿಯಲ್ಲ’’ ಎನಲು ಶಿವಪದ್ಮನು ನಮಸ್ಕರಿಸಿ ಕೈಲಾಸಕ್ಕೆ ನಡೆದನು. ಶಿವಪದ್ಮನ ಮಹಿಮೆಗಳನ್ನು ಮನಸಾರೆ ಮೆಚ್ಚಿದ ಶಿವನು ಚಂದ್ರಗಿರಿ ಅರಸ ನಿಲಂಕಾರ ಮಹಾರಾಜನ ಮಗ ಬರ್ಮದೇವನ ಪುತ್ರನಾಗಿ ಜನಿಸಿ ಭೂಮಿಯಲ್ಲಿ ಅಪರಿಮಿತ ಮಹಿಮೆಗಳನ್ನು ತೋರು ಎಂದು ಹರಸಿ ಕಳುಹಿಸಿದನು (೯-೨೪).

ಒಂದು ದಿನ ಪುಷ್ಪದತ್ತನು ಶಿವಪೂಜೆಗೈದು ಕೃತಕೃತ್ಯನಾಗಬೇಕೆಂದು ಸಹಸ್ರದಳದ ಕಮಲವನ್ನು ಕೀಳಲು ಒಂದೊಂದು ಕಮಲಗಳು ಉದ್ಭವಿಸಲಾಗಿ ತನಗೆ ಬೇಕಾಗುವಷ್ಟನ್ನೇ ತಂದು ಶಿವಪೂಜೆಗೈದನು. ಆ ಶಿವಲಿಂಗವನ್ನೇ ನಿತ್ಯ ಪೂಜಿಸುವ ಹರಿದೇವ ಎಂಬ ಅರಸನು ಶಿವವಾಣಿಯನ್ನು ಆಲಿಸಿ, ಗಂಗಾಜಲವನ್ನು ತಲರು ಕಾಶಿಗೆ ಹೊರಡುವಾಗ ಶಿವಲಿಂಗವನ್ನು ಪೂಜಿಸಲು ಚಂದ್ರಗಿರಿ ಅರಸ ನಿಲಂಕಾರ ಮಹಾರಾಜನ ಮಗ ಭರ್ಮಭೂಪಾಲನನ್ನು ನಿಯಮಿಸಿದನು. ಹಾಗೆಯೇ ಅವನಿಗೆ ತನ್ನ ತಂಗಿ ಸುರಾವತಿಯನ್ನು ಮದುವೆ ಮಾಡಿದನು. ವಿಧವಿಧದ ಹೂಗಳನ್ನು ತಂದು ಭಕ್ತಿಯಿಂದ ಪೂಜೆ ಮಾಡುತ್ತಿದ್ದ ಬರ್ಮದೇವನನ್ನು ಮೆಚ್ಚಿ ಶಿವನು ಹರಿದೇವನು ಬಂದರೆ ಒಳಗೆ ಬಿಡಬಾರದು ಎಂದು ದ್ವಾರಪಾಲಕರಿಗೆ ಆದೇಶವಿತ್ತನು. ಶಿವಪೂಜೆಗಾಗಿ ಒಳಗೆ ಬರಲು ದ್ವಾರಪಾಲಕರು ಶಿವನಾಜ್ಞೆಯನ್ನು ತಿಳಿಸಿದರು. ಬಹು ಕಷ್ಟಪಟ್ಟು ಹರಿದೇವನು ತನ್ನ ಕಾರ್ಯಸಾಧಿಸಿಕೊಳ್ಳಲು ಶಿವಪೂಜೆ ಮಾಡುತ್ತ ‘ಪುತ್ರನಿಲ್ಲದವನಂ ಪೂಜೆಗೊಂಬುವುದು ಯೋಗ್ಯಮೇ’ ಎಂದು ಕಪಟತನದಿಂದ ಕೇಳಿದನು. ದಿನಂಪ್ರತಿ ಬರ್ಮದೇವನು ಪೂಜೆ ಮಾಡಲು ಬಂದಾಗ ನಿನ್ನ ಪೂಜೆ ಸಾಕು ತಿರುಗಿ ನೀನು ಪಟ್ಟಣಕ್ಕೆ ನಡೆ ಎಂದು ಶಂಕರನು ಬಿರುನುಡಿಗಳನ್ನಾಡಿದನು. ಇದರಿಂದ ಚಿಂತಾಕ್ರಾಂತನಾದ ಬರ್ಮದೇವನನ್ನು ಸುರಾವತಿಯು ಕೇಳಿದಾಗ ‘ನಿನ್ನ ಅಣ್ಣ ನಿನಗೆ ಬಂಜೆ ಎಂದು ಕರೆದನು. ಅದನ್ನು ಬಿನ್ನೈಸಿಕೊಳ್ಳಲು ‘‘ಹೊನ್ನುಹೊಕ್ಕುಳ ಸುವರ್ನದ ಜಡೆಯ ಭಸ್ತಿಯಲಿ ಉಡುಪನಂ ಧಿಕ್ಕರಿಪ ಬಾಲನುದ್ಭವಿಸುವನು ನಿನ್ನುದರದಿ’ ಎಂದು ಹೇಳಿ, ಆ ಮಗುವಿಗೆ ಶಿವಸಿದ್ಧ ಬೀರನೆಂದು ಕರೆಯಬೇಕೆಂದು ಹಾರೈಸಿ ತೆರಳಿದನು (೨೫-೪೫).

ಇತ್ತ ಶಿವನ ಆಜ್ಞೆಯಂತೆ ಗುರು ರೇವಣಸಿದ್ಧನನ್ನು ಸ್ಮರಿಸುತ್ತ ಶಿವಪದ್ಮನು ಸಹೋದರನನ್ನು ಕರೆದು ಸತಿಪುತ್ರರನ್ನು ಸಂತೈಸಿ ‘ಅವನಿಯೊಳ್ಸುಖರೂಪರಾಗಿರಿ ಗುರುಲಿಂಗ ಜಂಗಮಕ್ಕಭಿನಮಿಸಿರಿ ತವೆ ಶೋಭಿಸುವ ಪಾಲ್ಮತವನುದ್ಧರಿಸಿರಿ ದುರ್ಭವದೂರ ರೇವಣಾರಾಧ್ಯನ ಸುಪಾದ ಸರೋಜವ ನಿರಂತರದಿ ಸ್ಮರಿಸಿರಿ ಸತ್ತ ಕುರಿಗಳಂ ಹೊತ್ತ ವಿಕ್ರೈಸಿರಿ’’ ಎಂದು ಹೇಳಿ ಕೈಲಾಸಕ್ಕೆ ನಡೆದನು. ಶಿವನು ನೀನೀಗ ಬರ್ಮದೇವನ ಮಡದಿಯ ಮಗನಾಗಿ ಜನ್ಮವ ಪಡೆದು ಈ ಲೋಕವನ್ನುದ್ಧರಿಸು ಎಂದು ಹರಸಿದನು. ಆಗ ಆಗ ಶಿವಪದ್ಮನು ಶಿವನಾಡಿದ ನುಡಿಗಳನ್ನು ಕೇಳಿ ನಮಸ್ಕಾರ ಮಾಡಿ ನನಗೊಬ್ಬ ಶಿಷ್ಯನನ್ನು ಕೊಡು ಎಂದು ಬೇಡಿಕೊಂಡನು. ಬಿಲ್ವಾಡಪುರದ ಸೋಮರಾಯನ ಸುಪುತ್ರ ಮಾಳಿಂಗರಾಯನನ್ನು ನಿನ್ನೊಂದಿಗೆ ಕಳುಹಿಸುತ್ತೇನೆ ಹೆದರಬೇಡ ಎಂದು ಶಿವನು ಹೇಳುತ್ತ ‘ನೀನಂದ ನುಡಿಯೆ ನಿಜಮಂತ್ರನಿಂದೆದ್ದ ಸುಕ್ಷೇತ್ರ ಮೇಣ್ ಪಿಡಿದ ಮೃತ್ತಿಕೆ ನಿನಗೆ ಹೊನ್ನಾಗಲೆಂದು ಪಂಚಾಕ್ಷರಿಯ’ ಬೋಧಿಸಿದನು. ಸುರಾವತಿಯು ಗರ್ಭಿಣಿಯಾಗಿ ಮಧುರಾನ್ನವನು ಬಯಸಿ ಅಣ್ಣನಾದ ಹರಿದೇವನಿಗೆ ಹೇಳಿಕಳುಹಿಸಿದಳು. ಸಹೋದರಿಯ ಗರ್ಭದಲ್ಲಿ ಜನಿಸುವವನು ಮುಂದೆ ತನ್ನ ಮಗಳ ಗಂಡನಾಗಿ ಬಂದು ನನ್ನನ್ನು ಪರಿಹಾಸ್ಯ ಮಾಡುವನೆಂದು ಭಾವಿಸಿ ಹರಿದೇವನು ವಿಷ ಬೆರಸಿದ ಮಧುರಾನ್ನವನ್ನು ತಂದನು. ಆದರೆ ಸುರಾವತಿಯು ಆ ಮಧುರಾನ್ನವನ್ನು ಸೇವಿಸದೆ, ಶುಭಮುಹೂರ್ತದಲ್ಲಿ ಸುವರ್ಣ ಜಡೆಯುಳ್ಳ ಸುಪುತ್ರನಿಗೆ ಜನ್ಮ ನೀಡಿದಳು. ಈ ಸುದ್ದಿಯನ್ನು ತಿಳಿದ ಹರಿದೇವನು ಜ್ಯೋತಿಷಿಯ ವೇಷಧಾರಿಯಾಗಿ ತಂಗಿಯ ಮನೆಗೆ ಬಂದು ‘ಶಿಶು ಪುಟ್ಟಿದ ಮುಹೂರ್ತವು ಹೀನವು ಒಂದು ಮಾಸಕ್ಕೆ ನಿನ್ನಾಗ್ರಜೆಗೆ ಮರಣವು, ಪುಲಿಗಳಿಹ ಗಿರಿಗಂಹರದ ಮಧ್ಯ ಕಾಂತಾರದಲಿ ಬಿಡಲ್ಕಾ ಮರಣ ತಪ್ಪುವದು’ ಎಂದು ಹೇಳಿದನು. ಈ ಮಾತನ್ನು ನಂಬಿದ ಸುರಾವತಿಯು ಮಗುವನ್ನು ಕೊದಲಿಬನದ ಹಾಲಹೇವಲಿ ಹಳ್ಳದ ವಟವೃಕ್ಷದ ಕೆಳಗೆ ಬಿಟ್ಟು ಬಂದಳು. ಪಾರ್ವತಿ ಸಹಿತ ಶಿವನು ಹಾಲಹೇವಲಿ ಹಳ್ಳಕ್ಕೆ ಧಾವಿಸಿ ಬಂದು ಸುಪ್ರೇಮದಿಂದ ಆ ಮಗುವಿಗೆ ಶಿವಸಿದ್ಧಬೀರ ಎಂದು ಹೆಸರಿಟ್ಟು ‘ಭೂಮಂಡಲದಿ ಘನಾರ್ಭಟದಿ ರಿಪುಗಳ ಗೆದ್ದು ಭುವನದೊಳ್ಬಾಳು’ ಎಂದು ಹರಸಿ ಕೊಲ್ಲಿಪಾಕಿಗೆ ಬಂದನು. ಆ ಪುರದಲ್ಲಿರುವ ಮಾದಾರ ಚನ್ನಯ್ಯನ ಮನೆಗೆ ಹೋಗಿ ಆತನೊಂದಿಗೆ ಅಂಬಲಿಯನ್ನು ಕುಡಿದು ಆನಂದ ಹೊಂದಿದನು. ಮಾರ್ಗ ಮಧ್ಯದಲ್ಲಿರುವ ವಟವೃಕ್ಷವನ್ನು ನೋಡಿ, ಈ ವೃಕ್ಷದ ಕೆಳಗೆ ವಿಶ್ರಮಿಸಿಕೊಳ್ಳುವ ಸುರಕನ್ಯೆಯರು ಗರ್ಭವತಿಯಾಗಲೆಂದು ಹರಸಿ ಮುಂದೆ ನಡೆದನು. ದೇವಗನ್ಯೆಯರು ಗರ್ಭವತಿಯರಾಗಿ ಲಕ್ಷ್ಮಮ್ಮ, ಮಾಯಮ್ಮ, ಮಂಕಮ್ಮ, ಮಕಾಳೆಮ್ಮ ಮತ್ತು ಅಕ್ಕಮ್ಮ ಎಂಬ ಮಕ್ಕಳಿಗೆ ಜನ್ಮ ನೀಡಿದರು. ಇವರೆಲ್ಲ ದೊಡ್ಡವರಾಗಿ ಕುರಿ ಮೇಯಿಸುತ್ತ ಹಾಲಹೇವಲಿ ಹಳ್ಳದತ್ತ ಬಂದರು. ಅಲ್ಲಿ ಮಗುವಿನ ಚೀತ್ಕಾರ ಧ್ವನಿಯನ್ನು ಕೇಳಿ, ಆ ಮಗು ನನಗೆ ಬೇಕು, ತನಗೆ ಬೇಕು ಎಂದು ಅಕ್ಕತಂಗಿಯರು ಜಗಳಕ್ಕೆ ನಿಂತರು. ಆಗ ಅಕ್ಕಮ್ಮ ಒಂದು ಉಪಾಯವನ್ನು ಹೇಳಿ ಮರದ ಅಡಿಯಲ್ಲಿ ನಾವೆಲ್ಲರೂ ಉಡಿ ಒಡ್ಡಿಕೊಂಡು ನಿಲ್ಲೋಣ, ಆ ಮಗು ಯಾರ ಉಡಿಯಲ್ಲಿ ಬೀಳುತ್ತದೆಯೋ ಅವರಿಗೆ ಆ ಮಗು ಸಲ್ಲತಕ್ಕದ್ದು ಎಂಬ ತೀರ್ಮಾನಕ್ಕೆ ಬಂದರು. ಮಗುವು ಅಕ್ಕಮ್ಮನ ಉಡಿಯಲ್ಲಿ ಬಿತ್ತು. ಮಗುವಿನ ಸುಲಕ್ಷಣಗಳನ್ನು ನೋಡಿ ಶಿವನು ನಿಜರೂಪದಲ್ಲಿ ಕಾಣಿಸಿಕೊಮಡು ಸಿದ್ಧಬೀರನ ಶಿರದೊಳಭವ ಕರವಿಟ್ಟು ‘ಭವನೋದ್ಧಾರವಾಗಲಿ ಸಕಲ ಯಂತ್ರಮಂತ್ರಗಳು ಸಿದ್ಧಿಯಾಗಲಿ ಪೇಳಿದನೃತ ವಚನಗಳೆಲ್ಲ ಭೂವಲಯದೊಳಗೆ ನಿರುತ ಬದ್ಧವಾಗಲಿ ರಿಪುಗಳಂ ಜೋಡುವದಕೆ ಸನ್ನುದ್ಧರಾಗಲಿ ಮುಂದೆ ಶ್ರೀ ರೇವಣಾರಾಧ್ಯಂ ಸಿದ್ಧಗುರು ನಿನಗಾಗಲೆಂದು’ ಆಶೀರ್ವದಿಸಿ ಕೈಲಾಸಕ್ಕೆ ತೆರಳಿದನು (೪೬-೯೦).

ಸಂಧಿ: ಎಂಟು

ಅಕ್ಕಮ್ಮ ಪ್ರತಿದಿನ ಶಿವನ ಅನುಜ್ಞೆಯಂತೆ ಶಿವಿಸಿದ್ಧಬೀರನಿಗೆ ಕಂಚುಬೋಳಿ ಸುಗುಡಿಯ ಕೊರಳ ಮೊಲೆಯ ಹಾಲನ್ನು ಕುಡಿಸುತ್ತ, ಆ ಪರಮ ಕುರಿಯನ್ನು ಪೂಜಿಸುತ್ತಿದ್ದಳು. ಓರಿಗೆಯ ಹುಡುಗರೊಂದಿಗೆ ಚೆಂಡಿನಾಟವಾಡಲು ಹೋಗುವ ಇಚ್ಚೆಯನ್ನು ಶಿವಸಿದ್ಧ ಬೀರ ಅಕ್ಕಮ್ಮನಿಗೆ ತಿಳಿಸಿದನು. ಪುಂಡ ಹುಡುಗರೊಡನೆ ಆಟಕ್ಕೆ ಹೋಗಿ ಪ್ರಚಂಡನೆನಿಸಿಕೊಳ್ಳಬೇಡವೆಂದು ಹೇಳಿದರೂ ಆತ ಕೇಳಲಿಲ್ಲ. ಒಂದು ದಿನ ನಡುಬೀದಿಯಲ್ಲಿ ಆಟವಾಡುತ್ತಿರುವಾಗ ಸಂಗನ ಬಸವನೆಂಬ ಶ್ರೀಮಂತನ ಮಗ ಲಿಂಗಬಸಪ್ಪನಿಗೆ ಚಂಡು ತಾಕಿ ಸತ್ತುಬಿದ್ದ. ಆಗ ಲಿಂಗಬಸಪ್ಪನ ತಂದೆತಾಯಿಯರು ತಕ್ಷಣ ಬಡಿಗೆ ಕೋಲು ಕೊತ್ವಾಲಗಳೊಂದಿಗೆ ಥಳಿಸಲು ಬಂದರು. ಆಗ ಶಿವಸಿದ್ಧ ಬೀರನು ಗುರು ರೇವಣಸಿದ್ಧನನ್ನು ಮನದಲ್ಲಿ ಸ್ಮರಿಸಿ ವಿಭೂತಿಯನ್ನು ಲಿಂಗಬಸಪ್ಪನಿಗೆ ಲೇಪಿಸಿದನು. ಆಗ ಲಿಂಗಬಸಪ್ಪ ಎಚ್ಚರಗೊಂಡನು. ಮುಂದೆ ಅಕ್ಕಮ್ಮನೊಂದಿಗೆ ಶಿವಸಿದ್ಧ ಬೀರ ದಾರಿಯಲ್ಲಿ ಬರುವಾಗ ಇಬ್ಬರೂ ಮನುಷ್ಯಾಕೃತಿಗಳಾಗಿ ಹೊರಬಂದು ಇಲ್ಲಿ ನಾಗಠಾಣ ಗ್ರಾಮವಾಗಲಿ ಎಂದು ಹರಸಿ ಬೆಳ್ಳಿಗುತ್ತಿ ಗ್ರಾಮಕ್ಕೆ ಬಂದರು. ಅಲ್ಲಿ ಸತ್ತ ಕುರಿಗಳನ್ನು ಬದುಕಿಸಿದ ಅವರಿಗೆ ಆ ಗ್ರಾಮದ ಹಿರಿಕುರುಬನಾದ ಹೇಮಣ್ಣನು ಮನೆಯೊಂದನ್ನು ಕಟ್ಟಿಸಿಕೊಟ್ಟನು (೧-೨೮).

ಹೀಗೆ ಬೆಳ್ಳಿಗುತ್ತಿ ಗ್ರಾಮದಲ್ಲಿ ಶಿವಸಿದ್ಧ ಬೀರನು ಆಟವಾಡುತ್ತಿರುವಾಗ ಬಿಲ್ಲಿನಿಂದ ಬಾಣವನ್ನು ಎಸೆಯುತ್ತಿರುವಾಗ ನೀರು ತರುವ ಏಳ್ನೂರು ತರುಣಿಯರ ತುಂಬಿದ ಕೊಡಗಳಿಗೆ ತಾಗುತ್ತದೆ. ಆ ಬಾಣದ ಏಟಿನಿಂದ ಕೊಡಗಳಿಗೆ ಒಮ್ಮೇಲೆ ತೂತು ಬಿದ್ದವು. ಆ ತರುಣಿಯರು ಕೋಪಗೊಂಡು ‘ಜನನಿ ಜನಕರ ಕಾಣದ ಪರಮ ನೀಚನೆ’ ಎಂದು ನಿಂದಿಸಿದರು. ಮನದಲ್ಲಿ ಬಹು ನೊಂದುಕೊಂಡ ಶಿವಸಿದ್ಧ ಬೀರನು ಅಕ್ಕಮ್ಮನಲ್ಲಿ ಬಂದು ನನ್ನ ತಂದೆ ತಾಯಿಗಳಾರು ಎಂಬುದನ್ನು ತಿಳಿಸಬೇಕೆಂದು ಹಟವಿಡಿದನು. ನಿನ್ನ ತಂದೆ ಭರ್ಮದೇವ, ನಿನ್ನ ತಾಯಿ ಹರಿದೇವನ ಸಹೋದರಿ ಸುರಾವತಿ, ನಿನ್ನ ಜನ್ಮಸ್ಥಳ ಇಂದುಗಿರಿ ಎಂದು ವಿವರವಾಗಿ ಹೇಳಿದಳು. ಹರಿದೇವನ ಮಗಳಾದ ಕನ್ನಿಕಾಮಾಲೆಯನ್ನು ತರುವೆನೆಂದು ಶಪಥ ಮಾಡಿ ಗುರು ರೇವಣಸಿದ್ಧನನ್ನು ಸ್ಮರಿಸುತ್ತ, ಅಕ್ಕಮ್ಮನಿಗೆ ನಮಸ್ಕರಿಸಿ ವೈಕುಂಠಪುರಕ್ಕೆ ಹೊರಟನು. ಬಳೆಗಾರನ ವೇಷತೊಟ್ಟು ಹೆಗಲ ಮೇಲೆ ಬಳೆಗಳನ್ನು ಹೊತ್ತುಕೊಂಡು ರಾಜಬೀದಿಯಲ್ಲಿ ನಡೆದು ಅರಮನೆಯನ್ನು ಪ್ರವೇಶಿಸಿದನು. ಕನ್ನಿಕಾಮಾಲೆಗೆ ಬಳೆಗಳನ್ನು ತೊಡಿಸುತ್ತ ‘ಪುಲ್ಲನೇತ್ರಿಯೇ ನಿನ್ನಗಿದು ತವರ್ಮನೆಯೋ ಮೇಣೊಲ್ಲಭನ ಮನೆಯೋ ಮತ್ತೀಖಳರ ಕಾವಲಿಯೊಳಿಟ್ಟರೇಕೆ’ ಎಂದು ಪ್ರಶ್ನಿಸಿದನು. ಅದಕ್ಕೆ ಅವಳು ಶಿವಸಿದ್ಧ ಬೀರೇಶನು ನನ್ನನ್ನು ಒಯ್ಯುತ್ತಾನೆಂಬ ಭೀತಿಯಿಂದ ನನ್ನನ್ನು ಬಂಧನದಲ್ಲಿಟ್ಟಿದ್ದಾರೆ ಎಂದು ಕಣ್ಣೀರು ಸುರಿಸ ಹತ್ತಿದಳು. ಕುಮಾರಿಯೇ ಮನದಲ್ಲಿ ನೀನು ಕೊರಗಬೇಡ. ಬೆಳ್ಳಿಗುತ್ತಿಗೆ ನಾನು ಹೋಗಿ ಶಿವಸಿದ್ಧ ಬೀರೇಶನನ್ನು ಕರೆತರುವೆ ಎನ್ನುತ್ತ ಅರಮನೆಯಿಂದ ಹೊರನಡೆದನು (೨೯-೪೫).

ಮಾರನೆಯ ದಿನ ಸಿಂಪಿಗನ ವೇಷಧಾರಿಯಾಗಿ ತರತರದ ಬಣ್ಣದ ಕುಪ್ಪಸಗಳನ್ನು ಹೊತ್ತುಕೊಂಡು ರಾಜಬೀದಿಯಲ್ಲಿ ಹೋಗುವಾಗ ದಾಸಿಯರು ರಾಜಪುತ್ರಿ ಕನ್ನಿಕಾಮಾಲೆಯ ಹತ್ತಿರ ಕರೆದುಕೊಂಡು ಹೋದರು. ಅಲ್ಲಿಯೂ ಕನ್ನಿಕಾಮಾಲೆಯು ನೀನಾರು ಎಂದು ಪ್ರಶ್ನಿಸಲಾಗಿ ‘ಇಂದುಗಿರಿ ಪುರದ ಬರ್ಮಭೂಪನ ಸತಿ ಸುರಾವತಿಯ ಸುಪುತ್ರನು ನಾನು, ಹರಿದೇವನ ಅಳಿಯ, ಗುರು ರೇವಣಸಿದ್ಧನ ಪರಮ ಶಿಷ್ಯನಾದ ಶಿವಸಿದ್ಧ ಬೀರೇಶ, ನಿನ್ನನ್ನು ಒಯ್ಯಬೇಕೆಂದು ಬಂದಿಹೆನು’’ ಎಂದನು. ಸಂತೋಷಗೊಂಡ ರಾಜಪುತ್ರಿಯನ್ನು ಕುದುರೆಯ ಮೇಲೆ ಕೂಡ್ರಿಸಿಕೊಮಡು ಶಿವಸಿದ್ಧ ಬೀರನು ಅಂತರಮಾರ್ಗವಾಗಿ ಶಿವಪುರಕ್ಕೆ ನಡೆದನು (೪೬-೬೫).

ಸಂಧಿ: ಒಂಭತ್ತು

ಶಿವಸಿದ್ಧ ಬೀರೇಶನು ಶಿವನ ಪಾದಗಳಿಗೆ ನಮಸ್ಕರಿಸುತ್ತ ನನ್ನ ಸೇವೆಗೆ ಒಬ್ಬ ಶಿಷ್ಯನನ್ನು ಕರುಣಿಸಿ ಎಂದು ಬೇಡಿಕೊಳ್ಳಲಾಗಿ, ವೀರಮಾಳಿಂಗ ನಿನ್ನ ಶಿಷ್ಯನೆಂದು ಹೇಳಿ ಬ್ರಾಹ್ಮಿ ದೇವಿಯಲ್ಲಿ ಮೊರೆಯಿಡು ಅವಳು ಆ ಶಿಷ್ಯನನ್ನು ತೋರಿಸುವಳು ಎಂದನು. ಅದರಂತೆ ಬೀರೇಶನು ಸಪ್ತಸಮುದ್ರವನ್ನು ದಾಟಿ ಬ್ರಾಹ್ಮಿದೇವಿಯಲ್ಲಿ ಭಕ್ತಿಯಿಂದ ಬೇಡಿಕೊಂಡನು. ಪ್ರಸನ್ನಳಾದ ಆಕೆ ವೀರಮಾಳಿಂಗರಾಯನ ಪೂರ್ಣ ಇತಿಹಾಸವನ್ನು ಹೀಗೆ ಅರುಹಿದಳು. ಬಿಲ್ವಾಡಪುರದ ಅರಸ ತುಕ್ಕಪ್ಪರಾಯನು ಸಹೋದರ ಸೋಮರಾಯನಿಗೆ ಕುದುರೆ ಆನೆಗಳನ್ನು ಕಾಯ್ದುಕೊಂಡಿರಲು ಒಪ್ಪಿ ಸುಖದಿಂದಿರಲು, ಒಂದು ದಿನ ಗೌಳಿಗರ ಎಮ್ಮೆ ಕೋಣಗಳು ಮಲಗಿದ್ದ ಸೋಮರಾಯನನ್ನು ಎಬ್ಬಿಸಿದವು. ಅವುಗಳನ್ನು ಹಿಂಬಾಲಿಸುತ್ತ ಹೋಗಲು ಕುಲದೇವತೆಗಳಿಗೆ ಬಲಿಕೊಟ್ಟು ಪೂಜಿಸುತಲಿದ್ದ ಗೌಳಿಗರಿಂದ ವೀಳ್ಯವ ತೆಗೆದುಕೊಂಡನು. ಇದರಿಂದ ಕುಪಿತಗೊಂಡ ಗೌಳಿಗರ ಕುಲದೇವತೆ ಅರಮನೆಯನ್ನು ಪ್ರವೇಶಿಸಿ ಸಕಲ ಸಂಪತ್ತುಗಳನ್ನು ನಾಶ ಮಾಡಿ ತುಕ್ಕಪ್ಪರಾಯನಿಗೆ ಕಷ್ಟವಕೊಟ್ಟಳು. ಆಗ ಸೋಮರಾಯನು ಸಹೋದರನ ಹುಡುಕುತ್ತಲಿರುವಾಗ ಅಡವಿಯಲ್ಲಿದ್ದ ಶವವನ್ನು ನೋಡಿ ದುಃಖಿಸಿದನು. ಕೊಳಲನೂದಲು ಹಟ್ಟಿಯಿಂದ ದನಕರುಗಳು ಹೊರಬಂದವು. ಮನೆದೇವ ಗೋರಖನಾಥ, ಸೊನ್ನಲಿಗೆ ಸಿದ್ಧಭೈರವನು ಕೂಡಿ ಅಲ್ಲಿಗೆ ಬಂದು ಸಂತೈಸುತ್ತ ದೇವಿಯ ಪೂಜೆ ಮಾಡೆಂದು ತಿಳಿಸಿದರು. ಅದರಂತೆ ಶಿವನಾಮ ಜಪಿಸುತ್ತ ಪೂಜೆ ಮಾಡಿದಾಗ ತುಕ್ಕಪ್ಪನು ಎದ್ದು ಕುಳಿತನು. ಗೋರಖನಾಥನು ತುಕ್ಕಪ್ಪನ ಮಡದಿ ಕಾನಕಾಬಾಯಿಗೆ ಮಾಣಿಕ್ಯವೊಂದನ್ನು ಕೊಟ್ಟು ‘‘ನಿನಗೋರ್ವ ಕುಲದೀಪ ಸುತನುದಯಿಸುವ ನಿನ್ನ ಮನದೊಳಗಿಹ ನಿಜಾಪೇಕ್ಷೆ ತೀರಿಸಿದೆನಾ ಬಾಲಕಗೆ ವೀರಮಾಳಿಂಗ’’ನೆಂಬ ಹೆಸರನ್ನಿಡು ಎಂದನು. ಹಾಗೆಯೇ ಸೋಮರಾಯನ ಸತಿಗೆ ಜಪಮಣಿಯೊಂದನ್ನು ನೀಡಿ, ನಿತ್ಯ ಸೇವಿಸು, ನಿನಗೂ ಸಹ ಪುತ್ರನು ಜನಿಸುವನು. ಆತನಿಗೆ ಜಕ್ಕಪ್ಪ ಎಂದು ಹೆಸರಿಡಬೇಕೆಂದನು. ಹೀಗೆ ಬ್ರಾಹ್ಮಿದೇವಿಯಿಂದ ಮಾಳಿಂಗರಾಯನ ಪೂರ್ಣ ವಿವರಗಳನ್ನು ತಿಳಿದ ಶಿವಸಿದ್ಧ ಬೀರೇಶನು ಶಿವಧ್ಯಾನ ಮಾಡುತ್ತ ಬಿಲ್ವಾಡಪುರದ ಜಲಮಾಯಿ ಕೆರೆಯ ದಡದಲ್ಲಿರುತ್ತಿದ್ದನು. ಅಲ್ಲಿಗೆ ಬಂದ ವೀರಮಾಳಿಂಗನನ್ನು ಕರೆದೊಯ್ದು ಶಿವನಿಗೆ ತೋರಿಸಿದಾಗ ‘ಸುಜ್ಞಾನಿಯುತನಾಗು ಮೇಣಾಳುಗಳಿಗರಸನಾಗು ವರಸಿದ್ಧ ಬೀರಂಗೆ ಸಚ್ಶಿಷ್ಶನಾಗು ನೀನೊರೆದದ್ದು ದಿಟವಾಗಲಿ’ ಎಂದು ಶಿರದ ಮೇಲೆ ಹಸ್ತವನ್ನಿಟ್ಟು ಹಾರೈಸಿ ಇಬ್ಬರನ್ನೂ ಭೂಲೋಕಕ್ಕೆ ಕಳುಹಿಸಿದನು. ಇವರೀರ್ವರೂ ಭೂಲೋಕಕ್ಕೆ ಬರುವಾಗ ದಾರಿಯಲ್ಲಿ ಮದವೇರಿದ ಕೋಣವೊಂದು ಶಿವಸಿದ್ಧ ಬೀರೇಶನ ಮೇಲೆರಗಲು ಕ್ಷಣಾರ್ಧದಲ್ಲಿ ಅದನ್ನು ಕೊಂದು ಹಾಕಿದನು. ಕೋಣ ಬಿದ್ದಲ್ಲಿ ಕೋಣಗನೂರು ಆಗಲೆಂದೂ, ಮುಂಡ ಬಿದ್ದಲ್ಲಿ ಮುಂಡಗನೂರು ಆಗಲೆಂದು ಹರಸಿ ಮುಂದೆ ನಡೆದನು. ಆಗ ರೇವಣಸಿದ್ಧ ಪ್ರತ್ಯಕ್ಷನಾಗಿ ಇಬ್ಬರನ್ನು ಆಶೀರ್ವದಿಸಿ ಅಪಾರ ಮಹಿಮೆಯನ್ನು ತೋರಿ ಕೈಲಾಸಕ್ಕೆ ಬನ್ನಿರಿ ಎಂದು ಹೇಳಲು, ಶಿವಸಿದ್ಧ ಬೀರೇಶನು ‘ಸದ್ಗುರುವೆಯನ್ನಂನುದ್ಧರಿಸಿದಿರಿ ಪಾಲ್ಮತೋತ್ಪತ್ಯ ಪರಿಯನೆಲ್ಲವನು ಮತ್ತೀ ಮತೋದ್ಭವರ ಸಚ್ಚರಿತಮಂ ಪೇಳೆಂದನು’’. ಆತನ ಕೋರಿಕೆಯಂತೆ ಬ್ರಹ್ಮಾಂಡ ಪುರಾಣ, ವ್ಯಾಸಪುರಾಣ ಮತ್ತು ವೇದೋಪನಿಷತ್ತುಗಳ ಆಧಾರದಿಂದ ಕುರುಬರ ಇತಿಹಾಸವನ್ನು ವಿವರಿಸಿದನು. ಕಾಂಪಿಲ್ಯ, ಪೃಥಕ, ಶೃಣಿ, ಮಹಬಲ, ಗಣಕ, ಮೃತಿ, ಕುಶಲ, ಪ್ರಭಾವ, ಕರುಣ, ಸುವರ್ಣ, ವಿಭಾಗ ಹೀಗೆ ಅನೇಕ ಗೋತ್ರಗಳ ಬಗ್ಗೆ ತಿಳಿಹೇಳಿದನು. ಬೀರೇಶ್ವರನು ತನ್ನ ಶಿಷ್ಯರಿಗೆ ಪಾರಮಾರ್ಥವನ್ನು ಉಪದೇಶಿಸಿ ಭೂಲೋಕದ ಸುಖವನ್ನು ತ್ಯಜಿಸಿ ಮಾಘಮಾಸ ಶುಕ್ಲಪಕ್ಷದ ತ್ರಯೋದಶಿ ಭಾನುವಾರ ದಿವಸ ಕೈಲಾಸಕ್ಕೆ ತೆರಳಿದನು (೧-೮೬).

ಆದ್ದರಿಂದ ಹಾಲುಮತದವರಿಗೆ ಭಾನುವಾರವೇ ಮುಖ್ಯವಾದ ಸುದಿನವಾಗಿದೆ. ಸೃಷ್ಟಿಯಲ್ಲಿ ಹಾಲುಮತದವರು ಭಸ್ಮರುದ್ರಾಕ್ಷಿಗಳನ್ನು ಧರಿಸುತ್ತ ಶಿವನನ್ನು ಧ್ಯಾನಿಸುತ್ತ ಅಹಿಂಸಾ ಪರರಾಗಿ ಬಾಳಿರೆಂದು ಹರಸಿದನು. ಮತ್ತೂ ರೇವಣಸಿದ್ಧ ಮೇಕೆ ಕುರಿಗಳ ತುಪ್ಪಟದಿಂದ ವಸ್ತ್ರಗಳನ್ನು ತಯಾರಿಸಿ ಜನರಿಗೆ ಕೊಡುತ್ತ ಕುರಿಗಳನ್ನು ಸಲಹುತ್ತ ಇರಿ ಎಂದು ತಿಳಿಸಿದನು. ಅಲ್ಲದೇ ಕುರಿಯ ಹಿಕ್ಕೆಗಳನ್ನೇ ಲಿಂಗಗಳನ್ನಾಗಿ ಮಾಡಿ ಪೂಜೆ ಮಾಡಿಕೊಂಡು ಶ್ರೀಶೈಲ ಮಲ್ಲಿಕಾರ್ಜುನನ್ನು ಕಂಡುಕೊಂಡವನು ಶಿವಶರಣ ವೀರಗೊಲ್ಲಾಳ. ಆತನ ಭಕ್ತಿಯ ಪರಾಕಾಷ್ಠೆಯನ್ನು ರೇವಣಸಿದ್ಧ ಬೀರೇಶ್ವನಿಗೆ ತಿಳಿಸಿದನು. ಹೀಗೆ ಭಕ್ತಿಪರವಶನಾಗಿ ಕೇಳುತ್ತಿದ್ದ ಬೀರೇಶ್ವರನಿಗೆ ರೇವಣಸಿದ್ಧ ವೀರಮಾಳಿಂಗರಾಯನೊಂದಿಗೆ ನೀನು ಅನಂತ ಮಹಿಮೆಗಳನ್ನು ತೋರು ಎಂದನು. ಆನಂದಭರಿತನಾದ ಬೀರೇಶ್ವರನು ಅನಂತ ಪ್ರಣಾಮಗಳನ್ನು ಸಲ್ಲಿಸಿ ಕರಮುಗಿದು ನಿಂತನು. ಆಗ ರೇವಣಸಿದ್ಧನು ಗುರುಶಿಷ್ಯರಿಬ್ಬರೂ ಸಂತೋಷದಿಂದ ಬಾಳಿರಿ ಎಂದು ಹರಸಿ ಕೊಲ್ಲಿಪಾಕಿಗೆ ಬಂದು ಸೋಮೇಶ್ವರ ಲಿಂಗದಲ್ಲಿ ಐಕ್ಯನಾದನು (೮೭-೧೦೭).

ಇತ್ತ ಬೀರೇಶ್ವರ ಮತ್ತು ಮಾಳಿಂಗರಾಯರಿಬ್ಬರು ದೇಶ ಸಂಚರಿಸುತ್ತ ಹಾಲ್ಭಾವಿ ಗ್ರಾಮಕ್ಕೆ ಬಂದರು. ಗುರುವಿನ ಆಜ್ಞೆಯಂತೆ ಮಾಳಿಂಗರಾಯ ಬಡವಿಯಾದ ಹೆಂಡದ ದೇವಮ್ಮನ ಮನೆಗೆ ಭಿಕ್ಷಕ್ಕೆ ಹೋದನು. ಆಕೆ ನೀಡಿದ ಅಂಬಲಿಯನ್ನು ಸವಿದು ಸಂತುಷ್ಟನಾಗಿ ಹೊನ್ನಿನ ದೇವಮ್ಮನಾಗು ಎಂದು ವರವಿತ್ತನು. ಮತ್ತೆ ಸಂಚಾರ ಮಾಡಿ ಮರಳಿ ಹಾಲಭಾವಿಗೆ ಬಂದರು. ಮತ್ತೆ ಎಂದಿನಂತೆ ದೇವಮ್ಮನ ಮನೆಗೆ ಭಿಕ್ಷಕ್ಕೆ ಹೋದಾಗ ಆಕೆ ಭಿಕ್ಷೆ ನೀಡಲಿಲ್ಲ. ಇದನ್ನರಿತ ಬೀರೇಶನು ಆಕೆಯ ಸಂಪತ್ತು ಹಾಳಾಗಿ ಹೋಗಲಿ ಎಂದು ಶಾಪವಿತ್ತನು. ಐಶ್ವರ್ಯವನ್ನು ಕಳೆದುಕೊಮಡ ದೇವಮ್ಮ ಮೊದಲಿನಂತೆ ಹೆಂಡದ ದೇವಮ್ಮನಾದಳು. ನಂತರ ಬಂಕಾಪುರಕ್ಕೆ ಆಗಮಿಸಿ ಬಾಗಿ ಬಂಕಣ್ಣನಿಗೆ ಆಶೀರ್ವಾದ ಮಾಡಲಾಗಿ ಆತ ಕೈಲಾಸಕ್ಕೆ ತೆರಳಿದ. ಬೀರೇಶ ನಂತರ ಕೊಲ್ಲಿಪಾಕಿ, ಹೂವಿನೂರಿಗೆ ಹೋದನು. ವೀರಮಾಳಿಂಗನ ಭಕ್ತಿಗೆ ಮೆಚ್ಚಿದ ಬೀರೇಶ ಆತನ ಪ್ರಬುದ್ಧ ಶಕ್ತಿಯನ್ನು ಪ್ರಪಂಚಕ್ಕೆ ತೋರಿಸಬೇಕೆಂದು ಕಪ್ಪೆ ಕಲಕದ ಜಲ, ಪುಳಮುಟ್ಟದ ಪುಷ್ಪಗಳನ್ನು ತಂದು ಪೂಜಿಸಬೇಕೆಂದು ಅಜ್ಞಾಪಿಸಿದನು. ಗುರುವನ್ನು ಸ್ಮರಿಸುತ್ತ ಮಾಳಿಂಗರಾಯ ಪಾಂಡ್ರಕೋಟೆಗೆ ಹೋಗಿ ಬಂದ ಆಪತ್ತುಗಳನ್ನು ಎದುರಿಸಿ ಅವುಗಳನ್ನು ತಂದು ಪೂಜಿಸಿದನು. ಶಿಷ್ಯನ ನಿಷ್ಠಾ ಭಕ್ತಿಗೆ ಮೆಚ್ಚಿದ ಬೀರೇಶನು ಮಾಳಿಂಗರಾಯನನ್ನು ದೇಶ ಸಂಚಾರಕ್ಕೆ ಕಳುಹಿಸಿದನು. ಕಲ್ಯಾಣನಗರ ಕೋಣನೂರುಗಳಿಗೆ ಹೋಗಿ ತನ್ನ ಮಹಿಮೆಗಳನ್ನು ತೋರ್ಪಡಿಸಿದನು. ಶಿಷ್ಯನ ಮಹಿಮೆಗಳನ್ನು ಅರಿತುಕೊಂಡ ಶಿವಸಿದ್ಧ ಬೀರೇಶನು ‘ಪೊಡವಿಯೊಳ್ನಿನ್ನ ಸಮ ಸೇವಕನು ಪುಟ್ಟುವುದು ದೌರ್ಲಭವೆಂದು ನುಡಿದ, ತನಯ ಕೇಳ್ಭೂಲೋಕ ಸುಖಸಾಕು ಸತಿಪುತ್ರರನು ಕೂಡಿ ನಾವೀರ್ವರೊಂದಾಗಿ ಶಿವಪುರಿಗೆ ಘನಮೋದದಿಂದ ಪೋಗುವ’ ಎಂದನು. ಆಗ ಭಕ್ತಸಮೂಹ ನಮ್ಮನ್ನು ಸಲಹುವವರಾರು ಎಂದಿತು. ಆಗ ಶಿವಸಿದ್ಧ ಬೀರೇಶ ‘ಎನ್ನನುಂ ಧ್ಯಾನಿಸಿರಿ ಮಿನುಗುತಿಹ ಬಿರ್ದಾವಳಿಗಳನ್ನು ಧರಿಸಿ ಅನುದಿನ ಸೇವಿಪರ್ಗೆ ನಾನು ಬಯಸಿದ ಫಲಗಳನ್ನು ಕೊಟ್ಟು ಪಾಲಿಸುವೆ, ಭಯಭರಿತ ಭಕ್ತಿಯಿಂ ಬಾಳ್ ಮನುಜರ್ಗೆ ಗುರು ದಯವಿಟ್ಟು ಪೋಷಿಸುವನು’ ಎಂದು ಹರಸಿ ಶಿವನಾಜ್ಞೆಯಂತೆ ನಾಲ್ವರೂ ಕೂಡಿ ಕೈಲಾಸಕ್ಕೆ ಹೋದರು (೧೦೮-೧೬೩). ಇದು ಹಾಲುಮತೋತ್ತೇಜಕ ಪುರಾಣದ ಸ್ಥೂಲವಾದ ಕಥೆ.

. ಕೃತಿ ವಿಶೇಷತೆ

೧. ಹಾಲುಮತ ಇತಿಹಾಸ ಮತ್ತು ಸಂಸ್ಕೃತಿಯನ್ನು ವಿವರವಾಗಿ ತಿಳಿಸುವ ಕೃತಿ ಇದಾಗಿದೆ.

೨. ರೇವಣಸಿದ್ಧೇಶ್ವರ ಈ ಕೃತಿಯ ಪ್ರಮುಖ ನಾಯಕ. ಜೊತೆಗೆ ಶಾಂತಮುತ್ತಯ್ಯ, ಆದಿಗೊಂಡ, ಶಿವಪದ್ಮ, ಸಿದ್ಧಬೀರೇಶ್ವರ, ವೀರಮಾಳಿಂಗರಾಯ ಮತ್ತು ಗೊಲ್ಲಾಳೇಶ್ವರ ಮುಂತಾದವರ ಸಾಧನೆ ಸಾಹಸಗಳನ್ನು ತಿಳಿಸುವ ಕಥೆಗಳು ಇಲ್ಲಿವೆ.

೩. ಇಲ್ಲಿ ಉಲ್ಲೇಖಗೊಂಡ ಸರೂರು, ಜಾಗ್ರತಪುರ, ಬಂಕಾಪುರ, ಕೊಲ್ಲಿಪಾಕಿ, ಸೊನ್ನಲಾಪುರ, ಕೋಣಗನೂರು, ಮುಂಡಗನೂರು ಮುಂತಾದವುಗಳು ಹಾಲುಮತ ಸಾಂಸ್ಕೃತಿಕ ಪ್ರಾಚೀನ ನೆಲೆಗಳು. ಈಗಲೂ ಸಹಿತ ಇಲ್ಲಿ ಕುರುಬರ ಸಂಖ್ಯೆ ಅಧಿಕ ಪ್ರಮಾಣದಲ್ಲಿದ್ದು ರೇವಣಸಿದ್ಧೇಶ್ವರ, ಸಿದ್ಧಬೀರೇಶ್ವರ ಸಿದ್ಧರಾಮೇಶ್ವರ ಇತ್ಯಾದಿ ದೈವಗಳ ಆರಾಧನೆ ನಡೆಯುತ್ತದೆ.

೪. ಈ ಕೃತಿಯ ಮೇಲೆ ಜನಪದ ಹಾಲುಮತ ಮಹಾಕಾವ್ಯದ ಪ್ರಭಾವ ಸಾಕಷ್ಟಾಗಿದೆ. ಇದಕ್ಕೆ ಇಲ್ಲಿ ಬರುವ ಉಪಕಥೆಗಳು, ಸನ್ನಿವೇಸಗಳು, ಸಾಂಸ್ಕೃತಿಕ ನಾಯಕರ ವಿವರಗಳು ನಿದರ್ಶನವಾಗಿವೆ. ಶಿವನ ಅನುಗ್ರಹ ಹಾಗೂ ರೇವಣಸಿದ್ಧೇಶ್ವರರ ಆಶೀರ್ವಾದದಿಂದ ಆದಿಗೊಂಡ, ಶಿವಪದ್ಮ, ಸಿದ್ಧಬೀರೇಶ್ವರರು ಜನಿಸುವುದು. ವೀರಮಾಳಿಂಗನನ್ನು ಶಿಷ್ಯನನ್ನಾಗಿ ಪಡೆದುಕೊಂಡದ್ದು, ಭರಮದೇವ ಮತ್ತು ಸುರಾವತಿ (ಸೂರಮ್ಮದೇವಿ) ಬೀರಪ್ಪನ ತಂದೆತಾಯಿಗಳು. ಈ ವಿಷಯದಲ್ಲಿ ಎರಡೂ ಕೃತಿಗಳಲ್ಲಿ ಸಾಮ್ಯತೆಗಳಿವೆ. ಹೀಗಾಗಿ ಇದನ್ನು ಜನಪದ ಹಾಲುಮತ ಮಹಾಕಾವ್ಯದ ಸಂಕ್ಷಿಪ್ತವಾದ ಕೃತಿಯೆಂದೂ ಹೇಳಬಹುದು. ಈ ಎರಡೂ ಪಠ್ಯಗಳನ್ನು ತೌಲನಿಕ ಅಧ್ಯಯನ ಮಾಡಬೇಕಾಗಿದೆ.

೫. ಆದಿಗೊಂಡನು ಕುರಿಕಾಯುತ್ತಿದ್ದ ತನ್ನ ಮಕ್ಕಳನ್ನು ಕರೆದು ನೇಗಿಲು ಹೂಡಿ ಹೊಲವನ್ನು ಉತ್ತಿಬಿತ್ತಿ ಬೆಳೆಯನ್ನು ತೆಗೆಯಿರಿ ಎಂದು ಹೇಳುವುದರ ಮೂಲಕ ಕುರುಬರು ಪಶುಪಾಲನೆಯಿಂದ ಕೃಷಿ ಸಂಸ್ಕೃತಿಯತ್ತ ಹೊರಳಿದುದನ್ನು ಈ ಕೃತಿ ಸೂಚ್ಯವಾಗಿ ಹೇಳುತ್ತದೆ. ಶಿವಪದ್ಮ ಎತ್ತುಗಳಿಗೆ ನೇಗಿಲ ಹೂಡಿ ಹೊಲ ಊಳುವುದು, ತಾಯಿ ಮಗನಿಗೆ ಮಧ್ಯಾಹ್ನದ ಊಟಕ್ಕೆ ಬುತ್ತಿಯನ್ನು ತರುವುದು. ಮಿಣಿ, ಮುಂಜಣ, ಎತ್ತು, ನೊಗ ಇತ್ಯಾದಿ ಕೃಷಿ ಪರಿಕರಗಳನ್ನು ಸೂಚಿಸಿರುವುದು. ಇಂಥ ಸಂಗತಿಗಳನ್ನು ಕವಿ ಚೆನ್ನಾಗಿ ದಾಖಲಿಸಲು ಪ್ರಯತ್ನಿಸಿದ್ದಾನೆ.

೬. ಪಂಡಿತ ಚನ್ನಬಸವನ ಹಾಲುಮತ ಪುರಾಣದ ಮೇಲೆ ಹಾಲುಮತೋತ್ತೇಜಕ ಪುರಾಣದ ಪ್ರಭಾವ ದಟ್ಟವಾಗಿದೆ. ಕಥೆ, ಪಾತ್ರ ಮತ್ತು ಸನ್ನಿವೇಶಗಳಲ್ಲಿ ಯಾವುದೇ ಬದಲಾವಣೆಯಿಲ್ಲ. ಭೀಮಕವಿ ವಾರ್ಧಕ ಷಟ್ಪದಿಯಲ್ಲಿ ಕೃತಿ ರಚಿಸಿದರೆ, ಪಂಡಿತ ಚನ್ನಬಸವನು ಸಾಂಗತ್ಯದಲ್ಲಿ ಬರೆದಿದ್ದಾನೆ.

೭. ರೇವಣಸಿದ್ಧನು ಶಾಂತಮುತ್ತಯ್ಯನಿಗೆ ಲಿಂಗದೀಕ್ಷೆಯನ್ನು ನೀಡಿ, ಗುರುತನದ ಪಟ್ಟವನ್ನು ಕಟ್ಟಿ ಕುರುಹಿಗಾಗಿ ಮೂರೇಣಿನ ಕರಿಯ ಕಂಥೆಯನ್ನು ನೀಡಿದ ವಿಚಾರ ತಗರ ಪವಾಡ ಮತ್ತಿತರೆ ಕೃತಿಗಳಲ್ಲಿದೆ. ಈಗಲೂ ಕುರುಬರು ರೇವಣಸಿದ್ಧನಿಗೆ ಕಂಥೆ ತೊಡಿಸುವ ಸಂಪ್ರದಾಯವನ್ನು ಚಾಚೂತಪ್ಪದೇ ಆಚರಿಸಿಕೊಂಡು ಬರುತ್ತಿದ್ದಾರೆ. ಇಂಥ ಕೆಲವು ಸಾಂಸ್ಕೃತಿಕ ಸಂಗತಿಗಳನ್ನು ಈ ಕೃತಿ ಸ್ಥೂಲವಾಗಿ ಪರಿಚಯಿಸುತ್ತದೆ.

೮. ಕುರಿಯ ಉಣ್ಣೆ ಕಂಬಳಿ ತಯಾರಿಕೆಗೆ, ಕುರಿಯ ಚರ್ಮ ಗುರುವಿನ ಗದ್ದುಗೆಗೆ, ಗುರು ಪೂಜೆಗೆ ಮತ್ತು ಡೊಳ್ಳು ತಯಾರಿಕೆಗೆ ಎಂದು ಹೇಳುವುದರ ಮೂಲಕ ಕುರುಬರ ಕುಲಕಸುಬುಗಳ ಬಗ್ಗೆ ಸೂಚ್ಯವಾಗಿ ಹೇಳಿದ್ದಾನೆ.

೯. ಈ ಕೃತಿಯಲ್ಲಿ ಅನೇಕ ಪವಾಡಮಯ ಉಪಕಥೆಗಳಿವೆ. ಉದಾ. ರೇವಣಸಿದ್ಧೇಶ್ವರ ಬಡವಿ ಗಂಗಮ್ಮನಿಗೆ ಭಾಗ್ಯವಿತ್ತದ್ದು, ಶಿವಪದ್ಮನು ರಕ್ಕಸಿಯನ್ನು ಕೊಂದದ್ದು, ಸತ್ತ ಕುರಿಗಳಿಗೆ ಪ್ರಾಣ ನೀಡಿದುದು, ಸಿದ್ಧಬೀರೇಶ್ವರನು ಸಿಂಪಿಗನಾಗಿ ಬಳೆಗಾರನಾಗಿ ಬಂದು ಕನ್ನಿಕಾಮಾಲೆಯನ್ನು ಕರೆದುಕೊಂಡು ಹೋಗಿದ್ದು, ಹೀಗೆ ಅನೇಕ ಉಪಕಥೆಗಳಿಂದಾಗಿ ಕೆಲವು ಕಡೆ ಕಥಾನಿರೂಪಣೆಯಲ್ಲಿ ಕ್ರಮಬದ್ಧತೆ ಕಂಡುಬರುವುದಿಲ್ಲ.

೧೦. ಇದು ಚರಿತ್ರೆಯ ಪುರಾಣೀಕರಣವಾಗಿದ್ದರಿಂದ ಸಹಜವಾಗಿ ಕವಿ ವರ್ಣನೆಗೆ ಹೆಚ್ಚು ಆಸಕ್ತಿ ವಹಿಸಿದ್ದಾನೆನ್ನುವುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಪುರ, ಸ್ತ್ರೀ, ಹೂದೋಟ, ವನ, ಶಿಶು ಇತ್ಯಾದಿಗಳನ್ನು ಕವಿ ಕಾವ್ಯಾತ್ಮಕವಾಗಿ ಮನದುಂಬಿ ವರ್ಣಿಸಿದ್ದಾನೆ. ಉದಾಹರಣೆಗಾಗಿ ಚುಮುಲಾದೇವಿಯ ವರ್ಣನೆಯ ಒಂದು ಪದ್ಯವನ್ನು ಇಲ್ಲಿ ಗಮನಿಸಬಹುದು.

ನಾರಿಯೋ ಮದನ ಕಠಾರಿಯೋ ಮೋಹದನು
ಸಾರಿಯೋ ಎನ್ನಮನಸೂರಿಯೋ ಸ್ಮರಯುದ್ಧ
ಧೀರೆಯೋ ವಿಟಮನೋಹಾರಿಯೋ ಪರಮಶೃಂಗಾರಿಯೋ ಭೂಸತಿಯರ
ಮೇರೆಯೋ ನವರಸಸುಪೋರಿಯೋ ಎನಗೆ ಹಿತ
ಗಾರಿಯೋ ಸೊಬಗಿನೊಯ್ಯಾರಿಯೋ ಕಡುಚಲ್ವ
ನೀರೆಯೋ ರತಿಯಾವತಾರಿಯೋ ರಂಜಿಸುವ ಜಾರಿಯೋ ಶಿವನೆ ಬಲ್ಲಾ (೬-೨೫)

೧೧. ಸಂದರ್ಭಾನುಸಾರ ಉಪಮೆಗಳನ್ನು ಕವಿ ಯಥೇಚ್ಛವಾಗಿ ಬಳಸಿದ್ದಾನೆ. ಉದಾ. ಜಲಧರನೊಳಡಗಿದ ಸರೋವರಜಸಖನಂತೆ, ನೆಲದ ಮರೆಗಿರ್ಪ ಘನನಿಧಿಯಂತೆ ಕಾಷ್ಠದೋಳ್ನೆಲೆಯಾದ ನರನಂತೆ, ಶಿಲೆಗಳೊಳ್ನೆಲಸಿದ ಪರುಷದಂತೆ (೨-೮), ಸಾಗರದಿ ಹಿಮಕರನುದಿಸಿ ಬಂದಂತೇ (೩-೨೯), ಪೆಳವನ ಬಳಿಗೆ ಗಂಗೆಯಿಳಿದು ಬಂದಂತೆ (೪-೪೬).

. ಕೃತಿ ಪರಿಷ್ಕರಣೆ

ಪ್ರಸ್ತುತ ಕೃತಿಯನ್ನು ಸಂಜೀವರಾಯನ ಕೋಟೆಯ ಶ್ರೀ ಕೆ. ಸಣ್ಣತಿಮ್ಮಪ್ಪನವರ ಕೈಬರಹದ ಪ್ರತಿಯಿಂದ ಪರಿಷ್ಕರಿಸಲಾಗಿದೆ. ೮ x ೬.೫’ ಆಕಾರದ ಆಧುನಿಕ ಕಾಗದರೂಪದ ಹಸ್ತಪ್ರತಿ. ಅಕ್ಷರಗಳು ದುಂಡಾಗಿದ್ದು ಕೃತಿ ಸಮಗ್ರವಾಗಿದೆ. ಕಲ್ಲಚ್ಚಿನ ಪ್ರತಿಯನ್ನು ಯಥಾವತ್ತಾಗಿ ನಕಲು ಮಾಡಲಾಗಿದೆ. ಇದು ೧೯೧೬ರಲ್ಲಿ ಮುದ್ರಣಗೊಂಡಿದೆ. ಹೀಗಾಗಿ ಕವಿಯು ಬದುಕಿದ್ದಾಗಲೇ ಈ ಕೃತಿ ಮುದ್ರಣಗೊಂಡಿದ್ದರಿಂದ ಮುದ್ರಣದ ವಿವರ, ಕವಿಯ ಉಪೋದ್ಘಾತ, ಗ್ರಂಥ ಪ್ರಕಟಣೆಗೆ ಧನಸಹಾಯ ಸಲ್ಲಿಸಿದವರ ಮಾಹಿತಿ ಇತ್ಯಾದಿ ವಿವರಗಳಿವೆ.

ಆರಂಭದಲ್ಲಿ

‘‘ಓಂ ಶ್ರೀಗಣೇಶಾಯನಮಃ | ಶ್ರೀಶಾರದಾದೇವಿಯೇನಮಃ | ಶ್ರೀ ರೇವಣ
ಸಿದ್ಧೇಶ್ವರಾಯನಮಃ | ಶ್ರೀ ಗುರುಭ್ಯೋನಮಃ | ಶ್ರೀಶರಭ ಲಿಂಗಾಯ
ನಮಃ | ನೈಜಾಮ ಇಲಾಖಾ ಜಿಲ್ಲಾ ಗುಲಬರ್ಗಾ ತಾ.ಶಾಹಾಪುರ ಪೈಕಿ
ರಸ್ತಾಪುರದ ಭೀಮಕವಿಯಿಂದ ರಚಿಸಲ್ಪಟ್ಟ ಶ್ರೀ ರೇವಣಸಿದ್ಧೇಶ್ವರ ಲೀಲಾ
ಸಂಯುಕ್ತ ಹಾಲ್ಮತೋತ್ತೇಜಕ ಪುರಾಣವು | ಇದು ಬಳ್ಳಾರಿ ಶಂಕರ
ವಿಲಾಸ ಮುದ್ರಣಾಲಯದಲ್ಲಿ ಮುದ್ರಿಸಿ ಪ್ರಕಟಿಸಲ್ಪಟ್ಟಿತ್ತು | ಇಸವಿ
೧೯೧೬, ಸನ್ ೧೩೨೫”|

ಎಂದು ಆರಂಭವಾಗುವ ಈ ಕೃತಿಯನ್ನು ಶ್ರೀ ಕೆ. ಸಣ್ಣತಿಮ್ಮಪ್ಪನವರು ಅಚ್ಚುಕಟ್ಟಾಗಿ ಪ್ರತಿ ಮಾಡಿಕೊಂಡಿದ್ದಾರೆ. ಈ ಪ್ರತಿಯನ್ನು ಮೂಲ ಆಕರವಾಗಿ ಬಳಸಿಕೊಂಡು ಪರಿಷ್ಕರಿಸಲಾಗಿದೆ.