ತ್ತೀಚಿನ ವರ್ಷಗಳಲ್ಲಿ ಹಾಲುಮತ ಇತಿಹಾಸ ಮತ್ತು ಸಂಸ್ಕೃತಿಗೆ ಸಂಬಂಧಿಸಿದಂತೆ ಕಾವ್ಯ ಪುರಾಣಗಳು ಪ್ರಕಟಗೊಂಡಿದೆ. ಇವುಗಳಲ್ಲಿ ಜನಪದ ಹಾಲುಮತ ಮಹಾಕಾವ್ಯ (ಸಂ. ವೀರಣ್ಣ ದಂಡೆ, ೨೦೦೦), ತಗರ ಪವಾಡ (ಸಂ. ಎಂ.ಎಂ. ಕಲಬುರ್ಗಿ, ಸಿ.ಕೆ. ಪರಶುರಾಮಯ್ಯ, ಎಫ್.ಟಿ. ಹಳ್ಳಿಕೇರಿ, ೨೦೦೪), ಸಿದ್ಧಮಂಕ ಚರಿತೆ (ಸಂ. ಎಂ.ಎಂ. ಕಲಬುರ್ಗಿ, ವೈ.ಸಿ. ಭಾನುಮತಿ, ೨೦೦೪) ಬಹುಮುಖ್ಯವಾಗಿದೆ. ಈಗ ರಸ್ತಾಪುರ ಭೀಮಕವಿಯ ‘ಹಾಲುಮತೋತ್ತೇಜಕ ಪುರಾಣ’ ಪ್ರಕಟವಾಗುತ್ತಿದೆ. ಹಾಲುಮತ ಸಮುದಾಯದ ಪ್ರಾಚೀನ ಇತಿಹಾಸ, ಸಾಂಸ್ಕೃತಿಕ ನಾಯಕರ ಚರಿತ್ರೆ, ಕುಲಕಸಬು, ಸಂಪ್ರದಾಯ ಆಚರಣೆಗಳನ್ನು ತಿಳದುಕೊಳ್ಳುವಲ್ಲಿ ಇವು ತುಂಬ ಮಹತ್ವದ ಆಕರವೆನಿಸುತ್ತವೆ.

ರೇವಣಸಿದ್ಧೇಶ್ವರ, ಸಿದ್ಧರಾಮೇಶ್ವರ, ಶಾಂತಮುತ್ತಯ್ಯ, ಸಿದ್ಧಮಂಕ, ಆದಿಗೊಂಡ, ಶಿವಪದ್ಮ, ಬೀರೇಶ್ವರ, ವೀರ ಗೊಲ್ಲಾಳೇಶ್ವರ, ಮಾಳಿಂಗರಾಯರಂಥ ಅನೇಕ ಹಾಲುಮತ ಸಾಂಸ್ಕೃತಿಕ ನಾಯಕರ ಇತಿವೃತ್ತ, ಅವರು ಸಮುದಾಯದ ಏಳಿಗೆಗಾಗಿ ಹೋರಾಡಿದ ಸಂದರ್ಭಗಳನ್ನು ಇಂಥ ಕಾವ್ಯ ಪುರಾಣಗಳು ಚೆನ್ನಾಗಿ ಚಿತ್ರಿಸಿವೆ. ಮೌಖಿಕರೂಪದಲ್ಲಿದ್ದ ಕುರುಬರ ಚರಿತ್ರೆಯನ್ನು ಜನಪದ ಹಾಲುಮತ ಮಹಾಕಾವ್ಯವು ಸುದೀರ್ಘವಾಗಿ ಹೇಳುತ್ತದೆ. ಮಧ್ಯಕಾಲೀನ ಕನ್ನಡದ ಸಂದರ್ಭದಲ್ಲಿ ರಚನೆಗೊಂಡ ತಗರ ಪವಾಡ ಮತ್ತು ಸಿದ್ಧಮಂಕ ಚರಿತೆಗಳು ಕುರುಬರು ಕಲ್ಯಾಣದಲ್ಲಿ ಸತ್ತಕುರಿಯನ್ನು ಹಾಲಿನ ಕಂಬಿಯ ಮೇಲೆ ಹೊತ್ತು ತಂದ ವಿಷಯವನ್ನಾಧರಿಸಿದ ಕೃತಿಗಳಾಗಿವೆ. ಇವುಗಳ ಮುಂದುವರಿಕೆಯೆನ್ನುವಂತೆ ಕಳೆದ ಶತಮಾನದಲ್ಲಿ ಬಸವಣ್ಣೆಪ್ಪ ನೀಲಪ್ಪ ಹಳವಳ್ಳಿ ಅವರ ಹಾಲುಮತದ ಪುರಾಣವು (೧೯೧೦), ರಸ್ತಾಪುರ ಭೀಮಕವಿಯ ಹಾಲುಮತೋತ್ತೇಜಕ ಪುರಾಣ (೧೯೧೬) ಮತ್ತು ಪಂಡಿತ ಚನ್ನಬಸವ ಕವಿಯ ಹಾಲುಮತದ ಪುರಾಣವು (೧೯೫೯) ಎಂಬ ಕೃತಿಗಳು ರಚನೆಗೊಂಡಿವೆ.

“ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ಪುರಾಣ ವಿಪುಲ, ಚರಿತ್ರೆ ವಿರಳ. ಈ ಚರಿತ್ರೆ ವಲಯದಲ್ಲಿಯೇ ಪುರಾಣದ ಚರಿತ್ರೀಕರಣ, ಚರಿತ್ರೆಯ ಪುರಾಣೀಕರಣ ಎಂಬ ಇನ್ನೆರಡು ಪ್ರಕಾರಗಳು ನಮ್ಮಲ್ಲಿ ಹುಟ್ಟಿಕೊಂಡಿವೆ.” (ತಗರ ಪವಾಡ ಪ್ರಸ್ತಾವನೆ ಪುಟ. ೩) ಪ್ರಸ್ತುತ“ ‘‘ಹಾಲುಮತೋತ್ತೇಜಕ ಪುರಾಣ’”’ವು ಚರಿತ್ರೆಯ ಪುರಾಣೀಕರಣ ವರ್ಗಕ್ಕೆ ಸೇರುವ ಕೃತಿಯಾಗಿದೆ.

ಈ ಕೃತಿಯ ನಾಯಕ ರೇವಣಸಿದ್ಧೇಶ್ವರ. ಈತನ ಸಮ್ಮುಖದಲ್ಲಿಯೇ ಎಲ್ಲ ಘಟನೆಗಳು ಜರುಗುತ್ತವೆ. ಈತನ ಸುತ್ತ ಶಾಂತಮುತ್ತಯ್ಯ, ಆದಿಗೊಂಡ, ಶಿವಪದ್ಮ, ಬೀರೇಶ್ವರ, ವೀರಗೊಲ್ಲಾಳೇಶ್ವರ, ಮಾಳಿಂಗರಾಯ ಮತ್ತವರ ಪರಿವಾರದವರ ಚರಿತ್ರೆ ರೂಪುಗೊಂಡಿದೆ. ಹೀಗಾಗಿ ಪರಂಪರಾನುಗತವಾಗಿ ಚಿತ್ರಿತಗೊಂಡಿರುವ ಈ ನಾಯಕರ ಚರಿತ್ರೆಯನ್ನು ಈ ಕೃತಿಯಲ್ಲಿ ಕಾಣಬಹುದು.

. ಕವಿಯ ಇತಿವೃತ್ತ

ರಸ್ತಾಪುರದ ಭೀಮಕವಿ ಈ ಕೃತಿಯ ಕರ್ತೃ. ಭೀಮಾಖ್ಯ (೧-೧೧, ೯-೧೬೨), ಭೀಮನಾಯಕ (ಪ್ರತಿಸಂಧಿಯ ಕೊನೆ) ಎಂದು ಕವಿ ತನ್ನನ್ನು ಕರೆದುಕೊಂಡಿದ್ದಾನೆ. “ರಸ್ತಾಪುರದ ಪತಿ ಶರಭಲಿಂಗನ ಪಾದದ್ವಯವನನುದಿನದಲಿ ಪಾಲ್ಮಜ ಜಂಬುಲಿಂಗನ ಪ್ರೇಮಾಸುತನಾದ ಭೀಮಾಖ್ಯ ರಚಿಸಿದಂ ಮುದದಿಂದ ಕ್ಷಿತಿಯೊಳಗೆ ಲಕನಾಪುರದ ಗೌಡ ಹನುಮಂತರೆಡ್ಡಿ ಗುರುವನ ದಯದಿಂದ” ಈ ಕೃತಿಯನ್ನು ರಚಿಸಿದ್ದೇನೆಂದು ಸ್ಪಷ್ಟವಾಗಿ ಹೇಳಿಕೊಂಡಿದ್ದಾನೆ. ಹೀಗಾಗಿ ಕವಿಯ ವಿಚಾರದಲ್ಲಿ ಯಾವುದೇ ಸಂದೇಹಗಳಿಗೆ ಆಸ್ಪದವಿಲ್ಲ. ಜನಮಾನಸದಲ್ಲಿ ಈತನ್ನು “ರಸ್ತಾಪುರ ಭೀಮಕಕವಿ” ಎಂದು ಕರೆಯಲಾಗುತ್ತಿದೆ. ರಸ್ತಾಪುರ ಕವಿಯ ಸ್ಥಳ. ಇದು ಗುಲಬರ್ಗಾ ಜಿಲ್ಲೆಯ ಶಹಪೂರ ತಾಲೂಕಿನ ಒಂದು ಗ್ರಾಮ. ತಾಲ್ಲೂಕು ಕೇಂದ್ರದಿಂದ ೧೫ ಕಿ.ಮೀ.ಗಳ ಅಂತರದಲ್ಲಿದೆ. ತಂದೆ ಜಂಬುಲಿಂಗ, ತಾಯಿ ಭೀಮವ್ವ, ಗುರು ಲಕನಾಪುರದ ಗೌಡ ಹನುಮಂತರೆಡ್ಡಿ ಎಂಬುದು ಆತನ ಕೃತಿಗಳಿಂದ ತಿಳಿದುಬರುತ್ತದೆ. ಎಂ.ಎಸ್. ಲಠ್ಠೆ ಅವರು ಈತನ ಕಾಲವನ್ನು ಕ್ರಿ.ಶ. ೧೮೭೭ ಎಂದು ತಮ್ಮ ಜನಪದ ಕವಿಚರಿತೆಯಲ್ಲಿ ದಾಖಲಿಸಿದ್ದಾರೆ. ಹಾಲುಮತೋತ್ತೇಜಕ ಪುರಾಣವನ್ನು ಮುಕ್ತಾಯಗೊಳಿಸಿದ ಕಾಲವನ್ನು ಕವಿ ಕೊನೆಯ ಭಾಗದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದ್ದಾನೆ. “ಶಾಲಿವಾಹನ ಶಕದ ಪದಿನೆಂಟುನೂರ ಮೂವತ್ತು ನಾಲ್ಕನೆಯ ಸೇರಿದ ಮಹಾಪರಿಧಾವಿ ನಾಮಸಂವತ್ಸರಾಶ್ವೀಜ ಶುಕ್ಲಪಕ್ಷ ದಶಮಿ ಸದಮಲಾದಿತ್ಯವಾರಕ್ಕೆ ಬಹುಸಾಂಗದಿಂದಿದು ಪೇಳಿ ಮುಗಿಸಿದಂ” (೯-೧೬೨) ಎಂದಿರುವುದರಿಂದ ಈ ಕೃತಿಯ ಕಾಲ ಕ್ರಿ.ಶ. ೧೯೧೨. ಹೀಗಾಗಿ ೧೯ನೆಯ ಶತಮಾನದ ಕೊನೆಯ ಭಾಗದಿಂದ ೨೦ನೆಯ ಶತಮಾನದ ಮಧ್ಯಭಾಗದವರೆಗೆ ಕವಿ ಬದುಕಿದ್ದನೆಂದು ಹೇಳಬಹುದು. ಶರಭಲಿಂಗೇಶ್ವರ ಪುರಾಣ, ಮಹಾಂತೇಶ್ವರ ಪುರಾಣ, ಚರಬಸವೇಶ್ವರ ಪುರಾಣ, ಶಂಕರ ಕೈವಲ್ಯ ಕಲ್ಪದ್ರುಮ ಮುಂತಾದವು ಕವಿಯ ಇತರೆ ಕೃತಿಗಳು. ಕರಿಭಂಟ ಕಮಲಾಕ್ಷಿ, ಕುಶಲವರ ಕಾಳಗ, ರಾಮರಾಜ್ಯ ವಿಯೋಗ, ಸತ್ಯಶೀಲ ಕಲ್ಪಿತಕಥಾ ಇತ್ಯಾದಿ ಬಯಲಾಟಗಳನ್ನು ಸಹ ಭೀಮಕವಿ ರಚಿಸಿದ್ದಾನೆ.

. ಕೃತಿ ಸ್ವರೂಪ

ಈ ಕೃತಿಯನ್ನು ಹಾಲುಮತೋತ್ಪತ್ಯ ಚಾರಿತ್ರ‍್ಯ, ಹಾಲುಮೋತ್ತೇಜಕ ಪುರಾಣ, ಶ್ರೀ ರೇವಣಸಿದ್ಧೇಶ್ವರ ಲೀಲಾಸಂಯುಕ್ತ ಹಾಲ್ಮತೋತ್ತೇಜಕ ಪುರಾಣ ಎಂದು ಕವಿಯು ಕರೆದಿದ್ದಾನೆ. ಇಲ್ಲಿ ಪುರಾಣ ಮತ್ತು ಚರಿತ್ರೆಯ ಅಂಶಗಳು ಸಮಾವೇಶಗೊಂಡಿರುವುದರಿಂದ ಕವಿಯು ಎರಡು ರೀತಿಯಾಗಿ ಕರೆದಿರಬಹುದು. ಅದೇನೆ ಇದ್ದರೂ ಸಾಮಾನ್ಯವಾಗಿ ಎಲ್ಲ ಜನರು “ಹಾಲುಮತೋತ್ತೇಜಕ ಪುರಾಣ” ಎಂದು ಕರೆಯುತ್ತಿರುವುದರಿಂದ ಅದೇ ಶೀರ್ಷಿಕೆಯನ್ನು ಇಲ್ಲಿ ಉಳಿಸಿಕೊಳ್ಳಲಾಗಿದೆ. ೯ ಸಂಧಿ, ೫೯೮ ವಾರ್ಧಕ ಷಟ್ಪದಿಯನ್ನೊಳಗೊಂಡ ಈ ಕೃತಿಯು ರೇವಣಸಿದ್ಧೇಶ್ವರ, ಶಿವಪದ್ಮ, ಶಿವಸಿದ್ಧ ಬೀರೇಶ್ವರ, ವೀರಗೊಲ್ಲಾಳೇಶ್ವರ ಮತ್ತು ಮಾಳಿಂಗರಾಯರ ವೃತ್ತಾಂತವನ್ನು ಸಾಧ್ಯಂತವಾಗಿ ನಿರೂಪಿಸುತ್ತದೆ. ಪ್ರತಿ ಸಂಧಿಯ ಆರಂಭದ ಅರ್ಧ ವಾರ್ಧಕ ಷಟ್ಪದಿ ‘ಸೂ‘ಚನೆ” ಯಲ್ಲಿ ಆಯಾ’ ಸಂಧಿಯ ಕಥೆಯನ್ನು ಸಂಕ್ಷಿಪ್ತವಾಗಿ ಹೇಳಲಾಗಿದೆ. ಹಾಗೆಯೇ ಪ್ರತಿ ಸಂಧಿಯ ಮೊದಲನೆಯ ಪದ್ಯದಲ್ಲಿ ಕವಿಯು ಶಿವನನ್ನು ನಾನಾ ರೀತಿಯಾಗಿ ಸ್ತುತಿಸಿದ್ದಾನೆ. ಉದಾಹರಣೆಗೆ ಒಂದು ಪದ್ಯವನ್ನು ಇಲ್ಲಿ ಗಮನಿಸಬಹುದು.

ವರದೇವದೇವ ಶಂಕರ ಸದಾಶಿವ ದಿಶಾಂ
ಬರ ಸೋಮನಾಮ ಸುಖದಾತ ರಜತಾದ್ರಿ ಮಂ
ದಿರ ಕಾಲಕಾಲದುರಿತೌಘತಿಮಿರ ಪ್ರಭಾಕರ ಪಂಚಸುಂದರಾಸ್ಯ
ಸುರಪಾಲ ಫಾಲನಯನಾಬ್ಧಿಸಂಜಾತ ಶೇ
ಖರ ರಾಜರಾಜ ಶುಕಸನಕಾದಿ ಮುನಿನುತ್ಯ
ಸಿರಿನಾಥನಾಥನೀ ಕೃತಿಗೆ ಜಯವಿತ್ತು ಸಲಹಲಿಯೆನ್ನನತಿ ಮುದದೊಳು (೪-೧)

ಹಾಗೆಯೇ ಕೃತಿ ಬರೆದವರಿಗೆ ಓದಿದವರಿಗೆ ಕೇಳಿದವರಿಗೆ ಪಠಿಸಿದವರಿಗೆ ದೊರೆಯುವ ಪ್ರತಿಫಲಗಳನ್ನು ಕವಿಯು ಪ್ರತಿ ಸಂಧಿಯ ಕೊನೆಯಲ್ಲಿ ಪುನರಾವರ್ತನೆ ಮಾಡಿದ್ದಾನೆ.

ಈ ಸುಚಾರಿತ್ರಮಂ ಬರದೋದಿದರ್ಗೆ ಮೇಣ್
ಲೇಸಾಗಿಯಿದರರ್ಥವಾಧ್ಯಾಂತ ಪೇಳ್ದರ್ಗೆ
ಬೇಸರಿಯದುರೆ ಭಕ್ತಿಯಿಂದ ಕೇಳಿದವರ್ಗೆ ಪದುಳದಿಂ ಪಠಿಸಿದರ್ಗೆ
ಭಾಸಿತ ಸಕಲ ಭೋಗಭಾಗ್ಯಮೋಕ್ಷಂಗಳ ವಿ
ಲಾಸದಿಂದಿತ್ತು ದುರಿತೌಘಮಂ ಸಂಹರಿಸಿ
ವಾಸ ರಸ್ತಾಪುರ ಶ್ರೀ ಶರಭಲಿಂಗೇಂದ್ರ ರಕ್ಷಿಸುವನಿಹಪರದೊಳು

ಕೆಲವು ಕಡೆ ಆದಿಪ್ರಾಸ ದೋಷದಿಂದ ಕೂಡಿದ್ದು, ವಾರ್ಧಕ ಷಟ್ಪದಿ ಛಂದಸ್ಸು ಅಲ್ಲಲ್ಲಿ ನಿಯಮವನ್ನು ಮೀರಿ ಬಳಕೆಗೊಂಡಿದೆ.

. ಕಥಾಸಾರ
ಸಂಧಿ: ಒಂದು

ಗಂಗಾಧರ, ನಂದಿಕೇಶ, ವಿಘ್ನರಾಜ, ಷಣ್ಮುಖರಿಗೆ ಶರಣು. ಶಿವನ ರೂಪವಾಗಿ ಬಂದು ಅಮಿತ ಮಹಿಮೆಗಳನ್ನು ತೋರುವ ಶಿವಯೋಗಿ ಸಿದ್ಧರ ಸಿದ್ಧ ಸೊನ್ನಲಿಗೆ ಗುರು ಸಿದ್ಧರಾಮೇಶ್ವರನನ್ನು ಸ್ತುತಿಸುವೆ. ವರಕಾಳಿದಾಸ, ಭವಭೂತಿ, ಮಲುಹಣ, ಬಾಣ, ಕೆರೆಯ ಪದ್ಮರಸ, ಮೊಗ್ಗೆಯ ಮಾಯಿದೇವ, ಪಾಲ್ಕುರಿಕೆ ಸೋಮಾರಾಧ್ಯ, ಹಂಪೆಯ ಹರಿಹರ, ಭೀಮಕವಿ, ಗುರುಪಂಡಿತೇಶ, ರಾಘವಾಂಕ, ಚಾಮರಸ, ಉದ್ಧಟ, ನಿಜಗುಣ ಶಿವಯೋಗಿ, ಮಲ್ಲಣಾರ‍್ಯ ಮೊದಲಾದ ಶಿವಕವಿಗಳಿಗೆ ವಂದಿಸುವೆನು (೧-೯).

ಕೃತಿಯ ಹೆಸರು ಹಾಲ್ಮತೋತ್ಪತ್ಯ ಚಾರಿತ್ರ, ಕೃತಿಯ ಕರ್ತೃ ಜಗದ್ಗುರು ರೇವಣಸಿದ್ಧ, ಈ ಕೃತಿಯನ್ನು ರಸ್ತಾಪುರದ ಆರಾಧ್ಯದೈವ ಶರಭಲಿಂಗೇಶ್ವರನ ಪಾದದ್ವಯದಲ್ಲಿ ಅನುದಿನವೂ ಸ್ತುತಿಗೈವ ಜಂಬುಲಿಂಗನ ಪ್ರೀತಿಯ ಮಗನಾದ ಭೀಮಾಖ್ಯನು ಲಕನಾಪುರದ ಗೌಡ ಹನುಮಂತರೆಡ್ಡಿ ಗುರುವರನ ದಯದಿಂದ ರಚಿಸಿದ್ದಾನೆ. ಪ್ರಾಚೀನ ಕವಿಗಳು ಹೇಳಿದ ಶಬ್ದಾರ್ಥಗಳನ್ನು ಯೋಚಿಸಿ ಕಾವ್ಯವನ್ನು ಸಕಲರಿಗೂ ತಿಳಿಯುವಂತೆ ರಚಿಸುವೆನು. ಒಂದು ವೇಳೆ ದೋಷಗಳಿದ್ದರೆ ತಾವೆ ತಿದ್ದಿ ತೀಡಿ ಶುದ್ಧವಾಗುವಂತೆ ಮಾಡಿರಿಯೆಂದು ಪಂಡಿತರಿಗೆ ನಮಿಸುವೆನು. ಲೋಕದಲ್ಲಿ ಕವಿಯೆನಿಸಬೇಕೆಂಬ ಹಂಬಲದಿಂದ ಕಾವ್ಯವನ್ನು ರಚಿಸಿದವನಲ್ಲ. ಆದ್ದರಿಂದ ನನ್ನನ್ನು ನಿರಾಕರಿಸಿ ವಿವೇಕ ಗುಣಗಳನ್ನು ಅವಲೋಕಿಸಿ ಸುಗುಣಗಳನ್ನು ಸಾಕಾರದಿಂದ ಸ್ವೀಕರಿಸಬೇಕೆಂದು ಸುವಿವೇಕಿಗಳಿಗೆ ಎರಗಿ ಶಿವನ ದಯದಿಂದ ಈ ಕೃತಿಯನ್ನು ರಚಿಸಿದ್ದೇನೆ. ಈ ಭೂಮಿಯಲ್ಲಿ ಮೆರೆವ ರಸ್ತಾಪುರದ ವೀರಮಹೇಶ ಶಾಂತೇಶನ ಅರ್ಧಾಂಗಿ ಸುವಿಚಾರಿ ಚನ್ನಮ್ಮ ಒಡಲಲ್ಲಿ ಹುಟ್ಟಿ ಬಾಲಲೀಲೆಯನ್ನು ಕಳೆದು ಸಿದ್ಧರಾಮನ ಉಪದೇಶದಿಂದ ಪಾರಮಾರ್ಥವನ್ನು ತಿಳಿದು ಶಿವನನ್ನು ಪಾಲಿಸಿದ ಧೀರ ಶರಭೇಂದ್ರನು ಈ ಕೃತಿಗೆ ಮಂಗಲವಿತ್ತು ಕಾಪಾಡಲಿ (೧೦-೧೪).

ಸಂಧಿ: ಎರಡು

ಕೊಲ್ಲಿಪಾಕಿಯ ಸೋಮಲಿಂಗದಿಂದ ಉದ್ಭವಿಸಿದ ರೇವಣಸಿದ್ಧನು ಭಕ್ತರನ್ನು ಉಲ್ಲಾಸದಿಂದ ರಕ್ಷಿಸಿ ಶಾಂತಮುತ್ತಯ್ಯನಿಗೆ ಲಿಂಗದೀಕ್ಷೆ ಮಾಡಿದನು. ಇಂದ್ರ ಮುಂತಾದ ದಿಕ್ಪಾಲಕರು, ಭಾರಧ್ವಜ, ಭೃಗು, ಕಶ್ಯಪ, ವಶಿಷ್ಟ ಮೊದಲಾದ ಮುನಿಗಳಿಂದ, ಗುಹಗಣಪ ರುದ್ರ ಭೈರವ ಇತ್ಯಾದಿ ಗಣಂಗಳ ಮಧ್ಯೆ ಶಿವನು ಭೃಂಗಿ ನಾಟ್ಯವನ್ನು ನೋಡುತ್ತ ಸರಸದಿಂದ ಇರುತಿರಲು ಸಭೆಗೆ ರೇವಣಸಿದ್ಧ ಭರದಿಂದ ಆಗಮಿಸಿ ದಾರುಕನ ದಾಟಿ ಮನದಲ್ಲಿ ಮರಗಿಕೊಂಡನು. ಗಣಗಳಲ್ಲಿ ಒಬ್ಬನಾದ ದಾರುಕನನ್ನು ಸಂತೈಸಿ ಶಿವನು ರೇವಣಸಿದ್ಧನಿಗೆ ನಿನಗೊಂದು ಜನ್ಮ ಬಂದಿತು. ಇಂದು ಬೇಗನೇ ಹೋಗಿ ಮರ್ತ್ಯದಲ್ಲಿ ಜನಿಸಿ ಬಾಳು ಎಂದನು. ಈ ಮಾತನ್ನು ಕೇಳಿದ ರೇವಣಸಿದ್ಧ ಕಾರುಣ್ಯವಿತ್ತು ಪರಿಪಾಲಿಸು ಎಂದು ಶಿವನ ಪಾದಗಳಿಗೆ ಎರಗಿದನು. ಅಂಜದಿರು ಕಂಗೆಡದಿರು ಬಾಲಕ ಎಂದು ಹರುಷದಿಂದ ಶಿವನು ಭೂಮಿಯಲ್ಲಿ ನಿರಂತರ ಪವಾಡ ಮಾಡುತ್ತಿರು. ನಿನಗೆ ಮಂಗಲವನ್ನುಂಟು ಮಾಡುತ್ತೇನೆಂದು ಹೇಳಿ ರೇವಣಸಿದ್ಧನನ್ನು ಸಂತೋಷದಿಂದ ಕಳುಹಿಸಿದನು (೧-೪).

ಕೊಲ್ಲಿಪಾಕಿಯ ಸೋಮೇಶ್ವರ ದೇವಾಲಯದ ಭಕ್ತರೆಲ್ಲ ಸೋಮವಾರ ಶಿವನ ಭಜಿಸುತ್ತಿದ್ದರು. ಆಗ ಮೆಲ್ಲಗೆ ಲಿಂಗ ಬಿರಿಯಲು ನೆಲ ಅದುರಿತು. ಇದನ್ನು ನೋಡಿದ ಭಕ್ತರು ಕುಣಿದಾಡಿದರು. ಸೂರ್ಯ ಚಂದ್ರ ಮೊದಲಾದ ದಿಕ್ಪಾಲಕರು ತಲ್ಲಣಗೊಂಡರು. ತಕ್ಷಣದಲ್ಲಿ ಸಮುದ್ರ ಕದಡಿ ಆದಿಶೇಷನ ಪಡೆಯು ಅಲ್ಲಿಂದ ಹಿಂತೆಗೆಯಿತು. ದೇವಗಣ ಕೊಂಡಾಡುತ ಮಳೆಗರಿಸಿ ಶವಿನ ವೇಷದಿಂದ ರೇಣುಕರು ರೇವಣಾಚಾರ‍್ಯನೆಂಬ ಹೆಸರಿನಿಂದ ಸರ್ವಾಂಗಕ್ಕೆಲ್ಲ ವಿಭೂತಿಯನ್ನು ಧರಿಸಿ, ರುದ್ರಾಕ್ಷಿಗಳನ್ನು ಹಾಕಿಕೊಂಡು, ಪ್ರಾಣಿಗಳ ಕಾಯುವ ರೂಪದಲ್ಲಿ, ದಂಡ ಲಾಕುಳ ಹಿಡಿದು ಆನಂದದಿಂದ ಸಜ್ಜಾದನು. ಅಷ್ಟಾಂಗಯೋಗ, ಚತುರಾಶ್ರಮ, ಷಟ್ಚಕ್ರ, ಷಟ್ಸ್ಥಲದೀಕ್ಷಾ ಮಂತ್ರ. ಮುದ್ರಾಭೇದ ಎಂಬವುಗಳನ್ನು ಮುನಿಗೆ ತಿಳಿಸಿ ಇಷ್ಟಲಿಂಗ ಪೂಜಿಸುತಲಿ ರೇವಣಸಿದ್ಧ ಆತುರಗೊಂಡು ಆಕಾಶಮಾರ್ಗದಿಂದ ನೇರವಾಗಿ ಅಗಸ್ತ್ಯಾಶ್ರಮಕೆ ಬಂದನು. ಆ ಆಶ್ರಮದಲ್ಲಿ ಕೆಲ ದಿವಸವಿದ್ದು ನಂತರ ಕಾಂಚೀಪುರಕ್ಕೆ ಆಗಮಿಸಿ ಒಲವಿನಿಂದ ಏಕಾಮ್ರನಾಥನನ್ನು ಕಂಡು ಸಲ್ಲೀಲೆಯಿಂದ ಸಂಚಿರಿಸಿದನು (೫-೮).

ಆ ಪುರಕ್ಕೆ ಅರಸನಾದ ಚೋಳನೃಪ ವಿಷ್ಣು ಪ್ರತಿಮೆಗೆ ಹದಿನಾರು ಬಗೆಯ ಉಪಚಾರಗಳಿಂದ ಪೂಜಿಸುತಿದ್ದನು. ಆ ಪ್ರತಿಮೆಯ ಅಲ್ಲಾಡುತ ನಿಂತಿರಲು ಪುಳಕಗೊಂಡು ಭೂಪತಿ ಸಂತೈಸುತ್ತ ಪಿಣ್ಣಾಂಕ ಸಿದ್ಧಗಿರಿ ಚಾಪನೊರ ಮಗ ಮರುಳೇಶನು ದೀಪರಿಮ ಹೆಸರು ಪಡೆದು ನಮಸ್ಕರಿಸಿ ಉತ್ತರ ಭಾಗಕ್ಕೆ ನಡೆದನು. ಯತಿಯ ಶಾಪದಿಂದ ಮಾಸನೂರಿನ ಅಕ್ಷಯಾತ್ಮಕನ ಮಂದಿರದ ಮುಂದಿನ ಭಾಗದಲ್ಲಿರುವ ವೃಕ್ಷದಲ್ಲಿ ಕುಣಿಗಳಾಗಿ ವಾಸಿಸುತ್ತ ನಿದ್ರಿಸುತ್ತಿರುವ ಮಾನವರನ್ನು ಯಕ್ಷ ಮಿಥುನವು ಭಕ್ಷಿಸುತ್ತಿದ್ದವು. ಸಿದ್ದೇಂದ್ರ ಅವುಗಳನ್ನು ಕೊಂದು ಕಮ್ಮಾರನಿಂದ ತಕ್ಷಣದಲ್ಲಿ ಸುರಗಿ ಹಾಗೂ ಕರಕಠಾರಿಗಳೆಂಬ ಎರಡು ಆಯುಧಗಳನ್ನು ವಿರಚಿಸಿದನು. ಮಾಸನೂರು ಎಂಬ ಪುರದ ಹೆಮ್ಮಡುವಿನಲ್ಲಿ ಮಿಸುಕದಂತೆ ಆಯುಧಗಳೆರಡನ್ನು ಜೋಪಾನವಾಗಿಟ್ಟು ಅವುಗಳನ್ನು ಆಕಾಶಕ್ಕೆ ನೆಗೆದು ವೇಗದಿಂದ ಉಜ್ಜೈನಿಗೆ ತಂದನು. ಅಲ್ಲಿ ಧರಣೇಂದ್ರ ವಿಕ್ರಮಾರ್ಕನಿಗೆ ಆ ಆಯುಧಗಳ ಮಹಿಮೆಯನ್ನು ಹೇಳಿ ರಾಜಾಚರಣೆಯನ್ನು ತಿಳಿಸಿ ನೀತಿಯುತನ ಮಾಡಿದನು. ಕೆಲವು ದಿವಸ ಅಲ್ಲಿದ್ದು ಆಕಾಶಕ್ಕೆ ನೆಗೆದು ಶಿವನಿಲಯಗಳ ನೋಡುತ್ತ ಬರುತ್ತಿರಲು ಅತ್ತ ಪ್ರಜ್ವಲಿಸುತ್ತಿರುವ ಸರೂರು ಎಂಬ ಪುರದಿ ಹಿಂಡಿನ ಶಾಂತಮುತ್ತಯ್ಯನಿದ್ದನು. ಆತನಿಗೆ ಸುವ್ವಿಮುತ್ತಯ್ಯ, ಜಗಮುತ್ತಯ್ಯ, ಲಲಿತಶಾಂತಯ್ಯರೆಂಬ ಚಲುವಾದ ಮಕ್ಕಳಿದ್ದರು. ಅವರು ಕೆಲವು ದಿವಸ ಗೋವುಗಳನ್ನು ಸಾಕುತ್ತ ಸಂತೋಷದಿಂದ ಸಂಚರಿಸಿ ಕಲ್ಲಿನ ಕೆರೆಯ ಒಂದು ಭಾಗದಲ್ಲಿ ಮನೆಯನ್ನು ಕಟ್ಟಿಕೊಂಡು ಪ್ರೇಮದಿಂದ ಜನರಿಗೆ ಸತತವಾಗಿ ಹನ್ನೆರಡು ವರ್ಷ ಕಂಬಿ ಹಾಲನ್ನು ಕೊಟ್ಟು ಉಲ್ಲಾಸದಿಂದ ಇದ್ದರು. ಹೀಗಿರುವಾಗ ಒಂದು ದಿನ ಅಲ್ಲಿಗೆ ಸಿದ್ದೇಂದ್ರನು ಬಂದು ಅಮೃತವನ್ನು ನೀಡೆಂದು ಕೇಳಿದನು. ಆಗ ಶಾಂತಮುತ್ತಯ್ಯನು ಸಿದ್ದೇಂದ್ರನನ್ನು ಬರಮಾಡಿಕೊಂಡು ಪಾದಪದ್ಮಗಳಿಗೆ ನಮಸ್ಕರಿಸಿದನು (೯-೧೪).

ಸಿದ್ಧಗುರುವರನು ಶಾಂತಮುತ್ತಯ್ಯನ ಪಿಡಿದೆತ್ತಿ ಸಮಾಧಾನ ಮಾಡಿ ‘‘ಸಿದ್ಧಿಸಲಿ ನೀನಂದ ನುಡಿಗಳವನಿಯೊಳು’’’ ಎಂದು ಉದ್ಧರಿಸಿ ಲಿಂಗದೀಕ್ಷೆಯನ್ನು ನೀಡಿ ‘‘ಕ್ಷೀರಕುಲಕಧ್ಯಕ್ಷನಂಗೊಳಿಸಿ ಗುರುಕಂಕಣವ ಧರಿಸಿ ಕರಕೆ ಘನ ಕಂಗೊಳಿಪ ತೆರದಿ ಪಟ್ಟವಗಟ್ಟಿ ಗುರುನಾಮಶಾಸನವಗೈದು‘’’ ಹಾಲನ್ನು ಸೇವಿಸಿ ಮುನ್ನಡೆದನು. ಅಲ್ಲಿಂದ ಗಾಣಿಗ ವೃತ್ತಿಯಲ್ಲಿದ್ದ ಕಲ್ಲಿಶೆಟ್ಟಿಯ ಮನೆಗೆ ಹೋಗಿ ಸಂಪದವನಿತ್ತು ರೇವಣಸಿದ್ಧ ಪೊರಮಟ್ಟು ಮಂಗಲವಾಡ ನಗರಕ್ಕೆ ಬಂದು ಮಾಯಕ್ಕನ ಮನೆಯನ್ನು ಪ್ರವೇಶಿಸಿದನು. ಇತ್ತ ಲಂಕಾಪುರದಲ್ಲಿ ವಿಭೀಷಣ ಯತಿವೇಷವನ್ನು ಧರಿಸಿ ಆಕಾಶಮಾರ್ಗದಿಂದ ಮಂಗಳವೇಢೆ ನಗರವನ್ನು ಪ್ರವೇಶಿಸಿ, ಮೂರು ಕೋಟಿ ಲಿಂಗಗಳ ಪ್ರತಿಷ್ಠಾಪನ ಕಾರ್ಯ ನಿಮ್ಮಿಂದ ನೆರವೇರಬೇಕಾಗಿದೆ. ಬಹುಬೇಗ ಲಂಕಾಪುರಕ್ಕೆ ಆಗಮಿಸಿ ಲಿಂಗಪ್ರತಿಷ್ಠಾಪಿಸು ಎಂದು ಬಿನ್ನವಿಸಿದನು. ಅಸುರನಾಡಿನ ಆ ಮಾತಿಗೆ ಮನಃಪೂರ್ವಕವಾಗಿ ಒಪ್ಪಿ ರೇವಣಸಿದ್ಧನು ಲಂಕಾಪುರಿಗೆ ತೆರಳಿದನು. ಅಲ್ಲಿ ಮೂರುಕೋಟಿ ಲಿಂಗಗಳನ್ನು ಪ್ರತಿಷ್ಠಾಪಿಸಿ ಅಲ್ಲಿರದೆ ಸಮುದ್ರವನ್ನು ದಾಟಿ ವಾಯುಮಾರ್ಗವಾಗಿ ಅತಿವೇಗವಾಗಿ ಕಲ್ಯಾಣ ಪಟ್ಟಣಕ್ಕೆ ಬಂದನು (೧೫-೨೯).

ಬಿಜ್ಜಳರಾಯನ ಅರಮನೆಯನ್ನು ಪ್ರವೇಶಿಸಿ ನಿರ್ಲಜ್ಜೆಯಿಂದ ಏರುಧ್ವನಿಯಲ್ಲಿ ದೇಹಿ ಎಂದು ಕೂಗಿದನು. ಆಗ ಅರಸನು ಎನ್ನ ಅಪರಾಧವನ್ನು ಮನ್ನಿಸು ಎಂದು ಬೇಡಿಕೊಂಡನು. ರೇಣಸಿದ್ಧನು ಕೃಪೆದೋರಿ ಅಗ್ನಿಜ್ವಾಲೆಯನ್ನು ನಂದಿಸಿ ಅರಸನಿಗೆ ರಾಜನೀತಿಯನ್ನು ತಿಳಿಸಿ ಅತ್ಯಂತ ಸಂತೋಷಭರಿತನಾಗಿ ಆಕಾಶ ಮಾರ್ಗವಾಗಿ ಕೊಲ್ಲಾಪುರಕ್ಕೆ ಆಗಮಿಸಿದನು. ಅಲ್ಲಿದ್ದ ಕುಟಿಲ ಸಿದ್ಧರನ್ನು ಜಯಿಸಿ, ಗೋರಕ್ಷಕನನ್ನು ಕಾಪಾಡಿದನು. ಇತ್ತ ಬಿಜ್ಜಳನು ಮಾಸನೂರಿನ ಮಡುವಿನಲ್ಲಿ ಅತ್ಯುತ್ತಮವಾದ ಸುರಗಿಯನ್ನು ಹೊರತೆಗೆಯಲು ಹನ್ನೆರಡು ಸಾವಿರ ಬಾಲೆಯರನ್ನು ಬಲಿಕೊಡಲು ಸಿದ್ಧನಾದನು. ಆಗ ರೇವಣಸಿದ್ಧ ಆಗಮಿಸಿ ತನ್ನ ಕರುಣಕಟಾಕ್ಷದಿಂದ ಆ ಬಾಲೆಯರನ್ನು ಬಂಧನದಿಂದ ಮುಕ್ತಗೊಳಿಸಿ ಬಿಜ್ಜಳನ ಮಗಳನ್ನು ಮದುವೆಯಾದನು. ಅಲ್ಲಿ ಕೆಲದಿನವಿದ್ದು ಬಿಜ್ಜಳನಿಂದ ಸತ್ಕಾರವನ್ನು ಸ್ವೀಕರಿಸಿ ರೇವಣಸಿದ್ಧ ಕೇರಳ ವಿದರ್ಭ ಮುಂತಾದ ದೇಶಗಳನ್ನು, ಅಲ್ಲಿಯ ಪುಣ್ಯಕ್ಷೇತ್ರಗಳನ್ನು ಬೇಸರವಿಲ್ಲದೇ ನೋಡುತ್ತ ಶಿವದೇವಾಲಯಗಳನ್ನು ನಿರ್ಮಿಸಿದನು. ಜಪತಪ ನೀತಿ ನೇಮಗಳನ್ನು ಬಿಡದೆ ಆಚರಿಸುತ್ತ ಅರವಟ್ಟಿಗೆಗಳನ್ನು ಸ್ಥಾಪಿಸಿ ರಾಜಪುತ್ರಿಯೊಂದಿಗೆ ಕಲ್ಯಾಣ ಪಟ್ಟಣಕ್ಕೆ ಆಗಮಿಸಿದನು (೩೦-೩೬).

ಲೋಕಕಲ್ಯಾಣಕ್ಕಾಗಿ ಕೆರೆಯನ್ನು ನಿರ್ಮಿಸಬೇಕೆಂದು ಯೋಚಿಸಿ, ವಿಸ್ತಾರವಾದ ಸ್ಥಳವನ್ನು ಗುರುತಿಸಿ, ತಾನೆ ಗುದ್ದಲಿ ಪಿಕಾಸಿಗಳನ್ನು ತೆಗೆದುಕೊಂಡು ನೆಲವನ್ನು ಅಗೆದು ಕೆರೆಯ ಕಾರ್ಯವನ್ನು ಕೆಲ ದಿನಗಳವರೆಗೆ ನಡೆಸಿದನು. ಅಷ್ಟರಲ್ಲಿ ಚೋಳರಾಜನ ಮಗಳು ಗರ್ಭವತಿಯಾದಳು. ಆಗ ರೇವಣಸಿದ್ದ ಅವಳನ್ನು ಕರೆದು ‘‘ನನ್ನ ಒಡವೆಯನ್ನು ನನಗೆ ಕೊಟ್ಟು ನೀನು ತವರಿಗೆ ಹೋಗಿ ಸಂತೋಷದಿಂದ ವಿಶ್ರಾಂತಿ ಪಡೆ’ ಎಂದು ಪ್ರೀತಿಯಿಂದ ಹೇಳಿ ಅವಳ ಗರ್ಭವನ್ನು ಸೀಳಿ ಮೂರು ತಿಂಗಳ ಪಿಂಡ ತೆಗೆದು ಅದನ್ನು ಕೆರೆಯ ದಂಡೆಯಲ್ಲಿ ಹೂಳಿಟ್ಟು ತನ್ನ ಕಾಯಕವನ್ನು ಮುಂದುವರಿಸಿದನು. ಆಗ ಆರು ತಿಂಗಳೊಳಗೆ ಕೆರೆಯನ್ನು ನಿರ್ಮಿಸಿ, ಹೂಳಿಟ್ಟ ಪಿಂಡವನ್ನು ತೆಗೆಯಲು ಗುರು ರೇವಣಸಿದ್ಧನ ಪ್ರತಿರೂಪದಂತಿರುವ ಆ ಶಿಶುವಿಗೆ ರುದ್ರಮುನಿ ಎಂದು ಹೆಸರಿಟ್ಟು ಸತಿಯಾದ ಬಿಜ್ಜಳರಾಯನ ಮಗಳಿಗೆ ಒಪ್ಪಿಸಿದನು. ಅವಳು ಸಂತೋಷದಿಂದ ಆ ಶಿಶುವನ್ನು ಆರೈಕೆ ಮಾಡುತ್ತಿದ್ದಳು. ಕೆಲದಿನಕೆ ಆ ಮಗು ಬೆಳೆದು ಎಂಟು ವರುಷದವನಾಗಲು ಜನ ನೋಡಿ ಆಶ್ಚರ್ಯಚಕಿತರಾದರು. ತನ್ನ ಅನುರೂಪದಂತಿರುವ ರುದ್ರಮುನಿಯನ್ನು ಕರೆದು ರೇವಣಸಿದ್ಧನು ದೀಕ್ಷೆಯನ್ನು ಕೊಟ್ಟು, ತತ್ವಗಳನ್ನು ಬೋಧಿಸಿದನು. ನಂತರ ಅಲ್ಲಿಂದ ಸತಿಸುತರೊಡಗೂಡಿ ಸಂತೋಷದಿಂದ ನಂಬಿದ ಭಕ್ತಸಮೂಹವನ್ನು ರಕ್ಷಿಸುತ್ತ ಹಾವಿನಹಾಳು ಗ್ರಾಮಕ್ಕೆ ಆಗಮಿಸಿದನು. ಆ ಗ್ರಾಮದಲ್ಲಿರುವ ಕಲ್ಲಯ್ಯನು ರೇವಣಸಿದ್ಧನನ್ನು ಸದ್ಭಕ್ತಿಯಿಂದ ಸತ್ಕರಿಸಿದನು. ಆಗ ನಿಜಶಿಷ್ಯನಾದ ಕಲ್ಲಯ್ಯನ ಅಪೇಕ್ಷೆಯಂತೆ ರುದ್ರಮುನಿಯಿಂದ ಶಿವದೀಕ್ಷೆಯನ್ನು ಕೊಡಿಸಿ, ಶ್ರೀ ಕಲ್ಲಿನಾಥನ ದರ್ಶನವನ್ನು ಮಾಡಿಸಿ ರೇವಣಸಿದ್ಧ ಭರದಿಂದ ಸೊನ್ನಲಾಪುರದತ್ತ ಹೊರಟನು (೩೭-೪೨).

ಅಲ್ಲಿ ಸಿದ್ಧರಾಮ ಜನಿಸುವ ವಿಷಯವನ್ನು ಸುಗ್ಗಲೆಗೆ ಪರಿಪರಿಯಿಂದ ತಿಳಿಸಿ, ನೇರವಾಗಿ ಶಾಂತಮುತ್ತಯ್ಯನಿರುವ ಸರೂರು ಕ್ಷೇತ್ರಕ್ಕೆ ಬಂದನು. ಶಿಷ್ಯನಾದ ಶಾಂತಮುತ್ತಯ್ಯನೊಡನೆ ರೇವಣಸಿದ್ಧನು ಹರಭವನಗಳನ್ನು ನೋಡುತ್ತ ಕೊಲ್ಲಾಪುರಕ್ಕೆ ನಡೆದನು. ಶಿಷ್ಯನನ್ನು ಊರೊಳಗೆ ಕಳುಹಿಸಲಾಗಿ ಅಲ್ಲಿಯ ಸಿದ್ಧರು ಆತನೊಡನೆ ವಾದಕ್ಕಿಳಿದರು. ಆ ವಾದದಲ್ಲಿ ಗೆದ್ದು ಶಾಪ ಕೊಟ್ಟು ಅವರನ್ನೆಲ್ಲ ನರಕುರಿಗಳನ್ನಾಗಿ ಮಾಡಿ ಬೇಗದಿಂದ ಬರುತ್ತಿರಲು ಮುಂಡಾಸುರನು ಕೋಪಗೊಂಡು ಅಡ್ಡಗಟ್ಟಿದನು. ಆ ರಕ್ಕಸನನ್ನು ಮೂರು ಭಾಗ ಸೀಳಿ ಧೈರ್ಯದಿಂದ ಬರುತ್ತಿರು ಶಾಂತಮುತ್ತಯ್ಯನ ನಿಜಚಾರಿತ್ರವನ್ನು ನೋಡಿ, ರೇವಣಸಿದ್ಧನು ಮೂರಡಿಯ ಕಂತೆಯನ್ನು ಮಾಡಿ ಧರಿಸೆಂದನು. ಆಗ ಶಿಷ್ಯನು ಗುರುವಿನ ಆಜ್ಞೆಯನ್ನು ಮೀರದೇ ಮೂರಡಿಯ ಕಂತೆಯನ್ನು ಧರಿಸಿ ಜಗದೊಳು ಪ್ರಖ್ಯಾತನಾದನು. ಸಚ್ಛರಿತನಾದ ರೇವಣಸಿದ್ಧನು ನರಕುರಿಗಳನ್ನು ನೋಡಿ, ಆಶ್ಚರ್ಯಚಕಿತನಾಗಿ ಶಿಷ್ಯನ ಪರಾಕ್ರಮಕ್ಕೆ ಮೆಚ್ಚಿದನು. ಈ ಕುರಿಗಳ ಕೂದಲು ಕಂಬಳಿ ಗದ್ದುಗೆಗೆ, ಚರ್ಮವು ಗುರುಪಾದ ಪೂಜೆಗೆ ಉಪಯೋಗವಾಗುವ ಘನ (ಡೊಳ್ಳು) ವಾದ್ಯಗಳಿಗಾಗಲಿ ಎಂದು ಹೇಳುತ್ತ ಶಾಂತಮುತ್ತಯ್ಯನನ್ನು ಆಶೀರ್ವದಿಸಿ ಆಕಾಶಕ್ಕೆ ಜಿಗಿದನು (೪೩-೪೭).

ಸಂಧಿ: ಮೂರು

ಒಂದು ದಿನ ಕೈಲಾಸಪುರದಲ್ಲಿ ಶಿವನ ಎಡಬಲದಲ್ಲಿದ್ದ ಇಬ್ಬರು ಗಂಧರ್ವರು ಕುರೂಪಿಯಾದ ಮುನಿಯೊಬ್ಬನನ್ನು ನೋಡಿ ಹಾಸ್ಯದಿಂದ ನಕ್ಕರು. ಇದರಿಂದ ಕೋಪಗೊಂಡ ಶಿವನು ನರಲೋಕದ ಕುಡುವಕ್ಕಲಿಗರಲ್ಲಿ ಸತಿಪತಿಗಳಾಗಿ ಜನಿಸಿರೆಂದು ಶಾಪವಿತ್ತನು. ಆಗ ಗಂಧರ್ವರು ಮುನಿವರನ ಪಾದಗಳಿಗೆ ನಮಸ್ಕರಿಸುತ್ತ, ಇದಕ್ಕೆ ನಿಶ್ಯಾಪ ನೀಡೆಂದು ಧನ್ಯತೆಯಿಂದ ಬೇಡಿಕೊಂಡರು. ಆಗ ಮುನಿವರನು ನಿಮಗೆ ನಿಶ್ಯಾಪ ಕಾಲವನ್ನು ಹೇಳುವೆನು ಗಂಧರ್ವರೇ ಕೇಳಿರಿ. ನೀವಿಬ್ಬರೂ ಸತಿಪತಿಗಳಾಗಿ ಭೂಲೋಕದಲ್ಲಿ ಹುಟ್ಟುವಿರಿ. ಒಂದು ಶುಭ ದಿನದೊಳು ಬಾಲಕನೋರ್ವನು ತಮಗೆ ಜನಿಸುವನು. ಆಗ ನಿಶ್ಯಾಪವನ್ನು ಪರಿಪಾಲಿಸುವೆನೆಂದು ಅಭಯವಿತ್ತನು. ಮುನಿನಾಥನು ಆಡಿದ ಭಯದ ಮಾತಿಗೆ ಗಂಧರ್ವರು ‘‘ನಮಗೆ ಮಗು ಹುಟ್ಟುವ ಸುದಿನ ಯಾವಾಗ ಬರುತ್ತದೆ? ಮೇಲಾಗಿ ಆ ಮಗುವಿನ ಲಕ್ಷಣಗಳನ್ನು ತಿಳಿಸಿರಿ’ ಎಂದು ವಿನೀತರಾಗಿ ಕೇಳಿಕೊಂಡರು. ಆಗ ಮುನಿವರನು ಭವಿಷ್ಯ ವಾಣಿಯನ್ನು ನುಡಿದು ರಕ್ಷಿಸುವ ಶಿವನನ್ನು ಭಕ್ತಿಯಿಂದ ಪ್ರಾರ್ಥಿಸಿರಿ ಎಂದು ಗಂಧರ್ವರುಗಳಿಗೆ ಹೇಳಿದನು. ಶಿವನು ಗಂಧರ್ವರನ್ನು ಮೆಚ್ಚಿ ನಿಮಗೇಕ್ಕೆ ಈ ಗತಿ ಬಂದಿತೆಂದು ಕೇಳಿದನು. ಆಗ ಅವರೀರ್ವರೂ ತಮ್ಮ ಪುರಾವೃತ್ತವನ್ನು ಶಂಕರನ ಸನ್ನಿಧಿಯೊಳು ಅರುಹಿದರು. ಮುನಿಯೊಬ್ಬನನ್ನು ಕಂಡು ಹಾಸ್ಯಗೈದಿದ್ದಕ್ಕೆ ಕೋಪಗೊಂಡು ನರಕಕ್ಕೆ ಹೋಗಿರೆಂದು ಹೇಳಿದನು. ಅದಕ್ಕೆ ಶಾಪಮುಕ್ತರನ್ನಾಗಿ ಮಾಡಿ ಎಂದು ನಾವು ಕೇಳಿಕೊಂಡರೆ ತಮ್ಮಡಿಗೆ ಹೋಗಿರೆಂದು ಹೇಳಿದನು. ಅದಕ್ಕಾಗಿ ತಮ್ಮಲ್ಲಿಗೆ ಬಂದಿದ್ದೇವೆಂದು ಗಂಧರ್ವರೀರ್ವರೂ ಹೇಳಿದರು (೧-೧೦).

ಯೋಗೀಶ ನಿಮ್ಮನ್ನು ಶಪಿಸಿದನೇ ಎನ್ನುತ್ತ ಶಿವನು ‘‘ಚಿಂತೆಯನ್ನು ಬಿಟ್ಟು ಏಕಚಿತ್ತದಿಂದ ಕೇಳಿರಿ, ಸಂತೋಷದಿಂದ ನಿಶ್ಯಾಪವನ್ನು ಹೇಳುವೆನು. ನೀವು ನರರಲ್ಲಿ ಸತಿಪತಿಗಳಾಗಿ ಹುಟ್ಟುವಿರಿ. ಆಗ ಮನ್ಮಥನನ್ನು ಮೀರಿಸುವಂಥ ಮಗ ನಿಮಗೆ ಜನಿಸುವನು. ಇದರಿಂದ ನಿಮ್ಮ ಶಾಪ ಪರಿಹಾರವಾಗುವುದು’ ಎಂದು ಹೇಳಿದನು. ಲೋಕರೂಢಿಯಂತೆ ನವಮಾಸ ಕಾಲ ತೆಗೆದುಕೊಳ್ಳದೆ ಶಿಶುವು ಐದನೆಯ ತಿಂಗಳ ಕೊನೆಗೆ ಜನಿಸಿ ಹುಣ್ಣಿಮೆಯ ಚಂದ್ರನಂತೆ ಬೆಳೆಯುವನು. ಈ ನುಡಿಗಳನ್ನು ಕೇಳಿ ಗಂಧರ್ವರು ನಮಿಸಿದಾಗ, ಶಿವನು ಅವರಿರ್ವರಿಗೆ ಅಪ್ಪಣೆ ನೀಡಿ ನರಲೋಕಕ್ಕೆ ಕಳುಹಿಸಿದನು. ಇತ್ತ ಮಧ್ಯಭಾಗದೊಳಿರುವ ಕೀರ್ತಿವೆತ್ತ ಜಾಗ್ರತಪುರದಲ್ಲಿ ಗಂಧರ್ವರೀರ್ವರು ಮುದ್ದುಗೊಂಡ ಮುದ್ದಾಯಿ ಎಂಬ ದಂಪತಿಗಳಾಗಿ ಹುಟ್ಟಿದರು. ಮುದ್ದಾಯಿ ಗರ್ಭದಿಂದ ಅವತರಿಸಿ ಬಂದ ಮಗುವನ್ನು ನೋಡಿ ತಾಯಿ ಕೆಲಸ ಯುವತಿಯರಿಗೆ ಬಾಲಕನನ್ನು ತೋರಿಸುತ್ತ ಮನದಲ್ಲಿ ಸಂತೋಷಗೊಂಡಳು. ಈ ದಂಪತಿಗಳು ತಮ್ಮ ಮಗುವಿಗೆ ಹನ್ನೆರಡನೆಯ ದಿನಕೆ ನಾಮಕರಣವನ್ನು ಮಾಡಿ ಪ್ರೀತಿಯಿಂದ ಆದಿಗೊಂಡ ಎಂಬ ಹೆಸರನ್ನಿಟ್ಟರು. ಆದಿಗೊಂಡನು ಬಾಲಲೀಲೆಗಳನ್ನು ಕಳೆದು ದೊಡ್ಡವನಾದನು. ಇತ್ತ ಮುದ್ದುಗೊಂಡನ ಸಹೋದರಿಯ ಗರ್ಭದಿಂದ ಶುಭಮುಹೂರ್ತದಲ್ಲಿ ಹೆಣ್ಣು ಕೂಸು ಹುಟ್ಟಿತು. ಅದಕ್ಕೆ ಚುಂಚಲೆ ಎಂದು ಹೆಸರಿಟ್ಟು ಕೊಂಡಾಡಿದರು. ಇದನ್ನೆಲ್ಲ ನೋಡಿದ ಮುದ್ದುಗೊಂಡನು ತನ್ನ ಮಗನಿಗೆ ಸರಿಯಾದ ಜೋಡಿಯೆಂದು ಸಂತೋಷಪಟ್ಟನು. ಕೆಲಕಾಲ ಕಳೆದ ನಂತರ ಆದಿಗೊಂಡನಿಗೆ ಚುಂಚಲೆಯನ್ನು ತೆಗೆದು ಸಂಭ್ರಮದಿಂದ ಮದುವೆ ಮಾಡಿದರು. ಶಿವನ ಕರುಣದಿಂದ ವಧುವರರು ಸಂಪ್ರೀತಿಯಿಂದ ಇರಲು, ಚೆಲುವಾದ ಆಯಗೊಂಡ, ಪಾಯ್ಗೊಂಡ, ಅಮರಗೊಂಡ ಮತ್ತ ಜಾಯ್ಗೊಂಡ ಎಂಬ ನಾಲ್ಕು ಮಕ್ಕಳನ್ನು ಪಡೆದರು. ಆದಗೊಂಡನು ಕೆಟ್ಟ ಮಕ್ಕಳು ಹುಟ್ಟಿರುವುದಕ್ಕೆ ಶಪಥವನು ತಾಳಿ ಧರೆಗುರುಳಲು ಚುಂಚಲೆ ಕೈಯನ್ನು ಚಾಚಿ ಪ್ರೀತಿಯಿಂದ ಪ್ರಿಯನನ್ನು ಹಿಡಿದೆತ್ತಿ, ಶ್ರೀಮಂತ ಗುಣಗಳನ್ನು ಹೊಂದಿದ ನೀನು ಚಿಂತೆಯನ್ನು ಬಿಡು. ಮತಿಹೀನನಾಗಿ ಚಿಂತಿಸಬೇಡ. ಶಾಪ ಪರಿಹಾರವಾಗುವ ಕೊನೆಯ ಕಾಲದಲ್ಲಿ ಸತ್ಪುತ್ರ ಹುಟ್ಟದಿಹನೇ ಎಂದು ವಲ್ಲಭನನ್ನು ಸಂತೈಸಿದಳು. ಅಷ್ಟರಲ್ಲಿ ಗುರು ರೇವಣಸಿದ್ಧ ಶಿವನನ್ನು ಸ್ತುತಿಸುತ್ತ ಬಹುಪರಾಕೆನ್ನುತ್ತ ತನ್ನ ಶಿಷ್ಯರೊಂದಿಗೆ ಜಾಗ್ರತಿ ಪಟ್ಟಣಕೆ ಬಂದನು (೧೧-೨೨).

ರೇವಣಸಿದ್ಧ ತಾಂಡವನಾಡಿ ಪುರವನ್ನು ನೋಡುತ್ತ ಬೀದಿಯಲ್ಲಿ ಸಂತಸದಿಂದ ನಲಿದಾಡಿ ಶಿವನನ್ನು ಸ್ಮರಿಸುತ್ತಲಿದ್ದನು. ಆಗ ಬಂದ ಶಿಷ್ಯಸಮೂಹಕ್ಕೆ ರೇವಣಸಿದ್ಧನು ‘ಇದು ಶಿವಕ್ಷೇತ್ರ, ಶಿವನಿಲಯವಿದು’’ ಎಂದು ಅತ್ಯಂತ ಪ್ರೀತಿಯಿಂದ ಈ ಪುಣ್ಯಸ್ಥಳದ ಮಹಿಮೆಯನ್ನು ವಿವರಿಸಿದನು. ಈ ಪುರದಲ್ಲಿ ಸತ್ಯಯುತನಾದ ಆದಿಗೊಂಡನ ಅರ್ಧಾಂಗಿಯು ಮನೆಕೆಲಸಗಳನ್ನು ಮಾಡಿಕೊಂಡು ಸುಖದಿಂದಿರುವಳು. ಆಕೆಯ ಹೊಟ್ಟೆಯಲ್ಲಿ ಶಿವಯೋಗಿಯೊಬ್ಬ ಜನಿಸುವನು. ಆತನಿಂದ ಈ ಜಾಗ್ರತಪುರವು ನಿತ್ಯವೈಭವದಿಂದ ಮೆರೆಯುವುದು ಎಂದು ಶಿಷ್ಯರಿಗೆ ಹೇಳಿದನು. ವರಗುರು ರೇವಣಸಿದ್ಧನ ನುಡಿಗಳನ್ನು ಕೇಳಿದ ಶಿಷ್ಯರು “ಎಲೆ ಗುರುವೆ ಭುವನ ಪ್ರಸಿದ್ಧಮಾದ ದಂಪತಿಗಳೆಮಗೆ ತೋರಬೇಕು’’ ಎಂದು ಬಿನ್ನವಿಸಿಕೊಂಡರು. ಆಗ ರೇವಣಸಿದ್ಧನು ಶಿಷ್ಯಸಮೂಹದೊಡನೆ ಕೂಡಿಕೊಂಡು ಕುಡು ವಕ್ಕಲಿಗರ ಸಾಲುಮನೆಗಳತ್ತ ಬಂದನು. ಅಲ್ಲಿದ್ದ ಚುಂಚಲೆಯ ರಕ್ಷಿಪುದೆಂದು ಸಿದ್ಧನ ಪಾದಕೆರಗಿದಳು. ಮುನಿವರನು ಪುಳಕದಿಂದ ಆ ದೇವಿಯನ್ನು ಸಂತೈಸುತ್ತ ನಿನ್ನ ಪೂರ್ವ ಪುಣ್ಯದ ಫಲದಿಂದ ನಿನ್ನ ಉದರದಲ್ಲಿ ಐದು ತಿಂಗಳೊಳಗಾಗಿ ಪ್ರಜ್ವಲಿಸು ಸುಪುತ್ರನು ಜನಿಸುವನು ಎಂದು ಹರಸಿದನು. ಆಗ ಚುಂಚಲೆ ಸಂತೋಷದಿಂದ ಆ ಶಿಶುವಿಗೆ ಯಾವ ಹೆಸರನ್ನಿಡಬೇಕೆಂದು ಕೇಳಲು, ಪರಮೇಶ್ವರನ ಅನುಗ್ರಹದಿಂದ ಅವತರಿಸಿದ ಆ ಚಲುವಾದ ಕೂಸಿಗೆ ‘‘ಶಿವಪದ್ಮ’ ಎಂಬ ಹೆಸರು ಸರಿಯಾದುದು ಎಂದು ಮುದದಿಂದ ಚುಂಚಲೆಗೆ ತಿಳಿಸಿದನು (೨೩-೩೨).

ಆದಿಗೊಂಡನು ಅವಿರಳ ಜ್ಞಾನಿಯಾದ ರೇವಣಸಿದ್ಧನವರ ಪಾದಕ್ಕೆರಗಿ ಭಕ್ತಿಭಾವದಿಂದ ‘‘ಮಹಿಮೋತ್ತಮನೇ, ನಿನ್ನ ನುಡಿ ಕೇಳಲು ಹಿತವಾಗಿದೆ. ನನ್ನ ಸತಿಗೆ ಗರ್ಭೋತ್ಪತ್ತಿಯಿಲ್ಲ, ಇನ್ನು ಸುತನೆಲ್ಲಿ ಬರುತ್ತಾನೆ. ಸುಳ್ಳು ಮಾತನಾಡದಿರಿ’’ ಎಂದು ಕೈಮುಗಿದನು. ವನಿತೆ ಚುಂಚಲೆಯ ಬಸುರಿಂದ ವರ ಶಿವಯೋಗಿ ಜನಿಸುವುದು ಸತ್ಯ ಎನ್ನಲು, ಆದಿಗೊಂಡನು ನಮಸ್ಕರಿಸಿ ವಿನಯದಿಂದ ಸ್ತುತಿಸುತ್ತ ರೇವಣಸಿದ್ಧನನ್ನು ಭಕ್ತಿಭಾವದಿಂದ ಕಳಿಸಿ ಸತಿಯೊಡನೆ ಸುಖಿಯಾಗಿದ್ದನು. ಹೀಗಿರಲು ಅಂಗನಾಮಣಿ ಚುಂಚಲೆಯು ಗರ್ಭವನ್ನು ಧರಿಸಿದುದನ್ನು ಮಂಗಲಾತ್ಮಕನಾದ ಪತಿಯು ನೋಡಿ ಪ್ರೀತಿಯಿಂದ ಎಲೆ ಕಾಂತೆ, ನಿನ್ನ ವೃದ್ಧಾಪ್ಯದ ಲಕ್ಷಣಗಳು ಮಾಯವಾಗಿ ತಾರುಣ್ಯತ್ವದ ಕಳೆ ಕಂಗೊಳಿಸುವುದು. ಚಕ್ರೇಶನಾದ ರೇವಣ ಸಿದ್ಧೇಶ್ವರನು ಹೇಳಿದ ಗರ್ಭೋತ್ಪತ್ಯದ ಮಾತು ಸತ್ಯವಾದುದು ಎಂದು ಮೋಹದಿಂದ ಅಬಲೆಗೆ ಹೇಳಿದನು. ಪತಿಯ ಮಾತಿಗೆ ತಲೆ ತಗ್ಗಿಸಿ ಸಡಗರದಿಂದಿರುವ ಚುಂಚಲೆಯ ಕಡುಚೆಲುವನಾದ ಪುತ್ರನನ್ನು ಅಪೇಕ್ಷಿಸಿದಳು. ಐದು ತಿಂಗಳು ತುಂಬಲು ಒಂದು ದಿನ ರಾತ್ರಿಯಲ್ಲಿ ತನ್ನ ಗೆಳತಿ ನಾಗಲೆಯೊಂದಿಗೆ ನಿಜಮಂದಿರದಿ ಮಲಗಿಕೊಂಡಳು. ಆಗ ಶಿವನ ಚಿತ್ಕಳೆಯ ರೂಪದಲ್ಲಿರುವ ಮಗುವೊಂದು ತಂದೆತಾಯಿಗಳನ್ನು ಸದ್ಗತಿಗೆ ಕಳಿಸಬೇಕೆನ್ನುವಂತೆ ಚುಂಚಲೆಯ ಮಗ್ಗುಲಲ್ಲಿ ಕಾಣಿಸಿಕೊಂಡಿತು. ಶಿವನ ರೂಪವನ್ನು ಹೊಂದಿದ ಆ ಮಗುವು ಕಡುಚೆಲುವನ್ನು ಹೊಂದಿದ್ದಿತು. ಸಿರಿ ಸರಸ್ವತಿ ರುದ್ರಕನ್ಯೆಯರು ಚನ್ನೆಯರು ಸಂತೋಷದಿಂದ ಗಿರಿಜೆಯೊಡನೆ ಕೂಡಿ ಬಾಲಕನಿಹ ಸ್ಥಳಕೆ ಆಗಮಿಸಿದಳು. ಗಿರಿಜೆಯು ಕೂಸನ್ನು, ಹಿಡಿದೆತ್ತಿ ಮುದ್ದಾಡಿಸಿ ‘‘ಹರನ ಸಕಲೈಶ್ವರ್ಯ ಸಚ್ಚಕ್ತಿ ಮನೋನಿಗ್ರಹ ಇಂದ್ರಿಯನಿಗ್ರಹ ನಿನಗೆ ಸದಾಕಾಲಕ್ಕೂ ದೊರೆಯಲಿ’’ ಎಂದು ಪ್ರೀತಿಯಿಂದ ಹರಸಿ ಬಾಗಿನವ ಕೊಟ್ಟು ಕೈಲಾಸಪುರಕೆ ತೆರಳಿದಳು (೩೩-೪೯).

ಸಂಧಿ: ನಾಲ್ಕು

ಆದಿಗೊಂಡನು ನಿದ್ರೆಯಿಂದ ಎದ್ದು ಸುವಿವೇಕದಿಂದ ಸಂತೋಷದಿಂದ ಮುಸುಕಿನಲ್ಲಿ ಮರೆಯಾದ ಬಾಲಕನ್ನು ತನ್ನ ಸತಿಯ ಸಮ್ಮುಖದಲ್ಲಿ ದಿಟ್ಟಿಸುತ್ತ, ಈತ ನನಗೆ ಯೋಗ್ಯವಾಗಿಹ ಪುತ್ರ ಎಂದು ಹೇಳಿದನು. ಆಶ್ಚರ‍್ಯದಿಂದ ಈ ಮಾತನ್ನು ಕೇಳಿದ ಚುಂಚಲೆಯು ಮೃದುವಾದ ತನ್ನ ಕೈಗಳಿಂದ ತನ್ನ ಹೊಟ್ಟೆಯ ಭಾಗವನ್ನು ಮುಟ್ಟಿಕೊಂಡು ನೋಡಲು ಬಸುರಿಲ್ಲವಾಯಿತು. ಶಿವನ ಕಳೆಯನ್ನು ತುಂಬಿಕೊಂಡು ಪರಿಸೂಸುವ ಕಂದನನ್ನು ಹಿಡಿದೆತ್ತಿ ಗಂಡನಿಗೆ ತೋರಿಸಿ ‘‘ನೀನಂದ ನುಡಿ ಸತ್ಯ, ಸತ್ಪುತ್ರನಹುದು’ ಎಂದು ಇಬ್ಬರೂ ಆಡಿಕೊಂಡರು. ಅಷ್ಟರೊಳಗೆ ಮಲಗಿದ್ದ ನಾಗಲೆಯು ಅವಸರದಿಂದ ಎದ್ದು ನನ್ನ ಕನಸಿನಲ್ಲಿ ಸಿರಿಸರಸ್ವತಿ ಗೌರಿಯರು ಬಂದು ಜೋಗುಳವನ್ನು ಹಾಡಿ ಶಿವಪದ್ಮನೆಂದು ಹೆಸರಿಟ್ಟು ಪುಷ್ಪವೃಷ್ಟಿಯಗರಿಸಿ, ಪರಶಿವನ ಸಕಲ ಸಾಮರ್ಥ್ಯವು ನಿನಗಾಗಲೆಂದು ಹಾರೈಸಿ ಸ್ವರ್ಗಕ್ಕೆ ಪಯಣಿಸಿದರು. ಅಷ್ಟರಲ್ಲಿ ನನಗೆ ಎಚ್ಚರವಾಯಿತು ಎಂದಳು. ಇದನ್ನು ಕೇಳಿದ ಆದಿಗೊಂಡನು ಆನಂದದಿಂದ ಮಗನ ಹಸನ್ಮುಖವನ್ನು ನೋಡಿ ಸದಮಲಜ್ಞಾನಿಯಾಗುವನೆಂದು ನಿರ್ಧರಿಸಿದನು (೧-೧೦).

ಮಗು ಜನಿಸಿದ ಹನ್ನೆರಡನೆಯ ದಿನದಿ ಮನೆಯನ್ನು ಚನ್ನಾಗಿ ಶೃಂಗರಿಸಿ ಮುತ್ತೈದೆಯರನ್ನು ಕರೆಸಿ, ರನ್ನತೊಟ್ಟಿಲಲ್ಲಿಟ್ಟು ಜೋಗುಳವ ಹಾಡಿ ಸಂತೋಷ ಸಂಭ್ರಮದಿಂದ ಶಿವಪದ್ಮನೆಂದು ನಾಮಕರಣವ ಮಾಡಿದರು. ಮಗನ ಬಾಲಲೀಲೆಗಳನ್ನು ಕಂಡು ತಾಯಿ ಚುಂಚಲೆಯು ಹಿರಿಹಿರಿ ಹಿಗ್ಗಿದಳು. ಸಿದ್ಧನ ದಯದಿಂದ ಶಿವಪದ್ಮನು ದಿನದಿನಕೆ ಬೆಳೆಯುತ್ತ ಐದು ವರ್ಷಗಳನ್ನು ಪೂರೈಸಿದನು. ಪದ್ಮಾಸನದಲ್ಲಿ ಕುಳಿತು ಭಕ್ತಿಯಿಂದ ಶಿವನನ್ನು ಸದಾ ಸ್ಮರಣೆ ಮಾಡುತ್ತಿರುವ ಮಗನು ಎಂಟು ವರ್ಷದವನಾದಾಗ ಮದುವೆ ಮಾಡಬೇಕೆಂದು ತಂದೆತಾಯಿಗಳು ಮನದೊಳಗೆ ಯೋಚಿಸಿದರು. ಆದಿಗೊಂಡನು ತನ್ನ ಸಹೋದರಿಯ ಮಗಳಾದ ಜಿಂಕಾದೇವಿಯೊಂದಿಗೆ ಶಿವಪದ್ಮನ ಮದುವೆಯನ್ನು ವೈಭವಯುತವಾಗಿ ನೆರವೇರಿಸಿದನು (೧೧-೩೧).

ಇತ್ತ ರೇವಣಸಿದ್ಧನು ಶಿವಪದ್ಮನನ್ನು ನೋಡಬೇಕೆಂದು ಜಾಗ್ರತಿಪುರಕ್ಕೆ ಆಗಮಿಸಿದನು. ಪುರವನ್ನು ಪ್ರವೇಶಿಸುವಾಗ ಗಂಗಮ್ಮನೆಂಬ ಕಡುಬಡವಿಯ ಮನೆಗೆ ತೆರಳಿದನು. ಆ ಬಡವಿ ತಡಮಾಡದೆ ಸಿದ್ಧನ ಪಾದಗಳಿಗೆ ವಂದಿಸಿದಳು. ಆಗ ರೇವಣಸಿದ್ಧ ಆಕೆಯ ಸುಭಕ್ತಿ ಸದ್ಭಾವಕ್ಕೆ ಮೆಚ್ಚಿ ‘‘ಭಾವೆ ನಿನ್ನಯ ಗುಣಕೆ ಬೆಲೆಯಿಲ್ಲ, ಬಡತನಮಿದಾವ ಕರ್ಮದಿ ನಿನಗೆ ಪ್ರಾಪ್ತಿಸಿತೊ ನಾನರಿಯೆ’’ ಎಂದು ಅಲ್ಲಿಯೇ ಭೋಜನ ಮುಗಿಸಿಕೊಂಡು ಹೊರಡಲನುವಾದನು. ಗಂಗಮ್ಮ ಗದ್ದುಗೆಯ ಕೆಳಗಿರಿಸಿ ವಿಸ್ಮರಣದಿ ಇಲ್ಲಿಟ್ಟು ಪೋಗುವದಿದುತ್ತಮವೇ, ಗುರುವರನೇ ಸಲ್ಲದೆನಗೀ ಹೊನ್ನು ತೆಗೆದುಕೊಳ್ಳಿರಿ ಬೇಗ ವಲ್ಲೆ ನಿಮ್ಮಯ ಪದಾರ್ಥವ’’ ಎಂದು ಬಿನ್ನೈವಿಸಿಕೊಂಡಳು. ‘ಪರರಿತ್ತ ಧನಮೆಲ್ಲ ಮೇಣೆನ್ನದಲ್ಲ’ ಎನ್ನುತ್ತ ರೇವಣಸಿದ್ಧನು ಶಿವನು ನಿನ್ನ ಭಕ್ತಿಗೆ ಮೆಚ್ಚಿ ಕೊಟ್ಟಿರುವನು. ಇದು ನಿನಗೆ ಸಲ್ಲತಕ್ಕದೆಂದು ಹೇಳಿ ಆಶೀರ್ವದಿಸಿ ಅಲ್ಲಿಂದ ಆದಿಗೊಂಡನ ಮನೆಗೆ ಬಂದು ಆದರಾತಿಥ್ಯವನ್ನು ಸ್ವೀಕರಿಸಿ ಶಿವಪದ್ಮನನ್ನು ಮನದಣಿವಂತೆ ಮುದ್ದಿಸಿದನು. ಚುಂಚಲೆಯು ಗುರುಪಾದಕೆರಗಿದಾಗ ರೇವಣಸಿದ್ಧನು ಪಂಚಾಕ್ಷರವ ಜಪಿಸಿ ಜಯಶೀಲಳಾಗೆಂದು ಹರಸಿದನು. ಶಿವಪದ್ಮನು ‘‘ದೀನರಕ್ಷಕ, ದೇವ ಯನಗಿಷ್ಟಲಿಂಗಮಂ ಧರಿಸಿ ಶಿವಮಂತ್ರವನ್ನು ಸಾನುರಾಗದಿ ಬೋಧಿಸು’’ ಎಂದನು. ಆಗ ಶಿವಪದ್ಮನಿಗೆ ಶಿವ ಪಂಚಾಕ್ಷರಿ ಮಂತ್ರವನ್ನು ಬೋಧಿಸಿ ‘ಕುರಿಗಳಂ ಸಲಹು ಸತತ, ನೀನೀ ಕುರಿಗಳನ್ನು ಕಾಯುತ ಚಂದಮಾಗಿಹ ಶ್ರೀಗಿರಿಯ ಸಮೀಪಕ್ಕೆ ನಡಿ ಹಿಂದೆ ನಾನು ಬಂದು ನಿನ್ನನ್ನು ರಕ್ಷಿಸುವೆನು’ ಎಂದು ಆಶೀರ್ವದಿಸಿ ರೇವಣಸಿದ್ಧನು ತೆರಳಿದನು (೩೨-೫೧).

ಸಂಧಿ: ಐದು

ಗುರು ರೇವಣಸಿದ್ಧನ ಧ್ಯಾನಿಸುತ್ತ ನ್ಯಾಯ ನೀತಿ ಧರ್ಮದಿಂದ ಕೈಯಲ್ಲಿ ಕೋಲು, ತಲೆಯ ಮೇಲೆ ಕಂಬಳಿ ಹೊದ್ದುಕೊಂಡು ಬೆಟ್ಟದ ಬುಡದಲ್ಲಿ ಗುಡಿಸಲನ್ನು ನಿರ್ಮಿಸಿಕೊಂಡು ಶಿವಪದ್ಮನು ಕುರಿಕಾಯುತ ಸಂತೋಷದಿಂದಿದ್ದನು. ಹೀಗಿರಲು ಇತ್ತ ಕೈಲಾಸದಲ್ಲಿ ಒಬ್ಬ ಖೇಚರನು ಬಂದು ಪರಮೇಶ್ವರನಿಗೆ ನಮಸ್ಕರಿಸಿ ಥಟ್ಟನೆ ಹಿಂದಕ್ಕೆ ಸರಿದನು. ಆಗ ಹಿಂದೆ ನಿಂತಿದ್ದ ಯತಿಯೊಬ್ಬನಿಗೆ ಆ ಖೇಚರನ ಕಾಲು ತಗುಲಲು, ಭೂಲೋಕದಲ್ಲಿ ನರನಾಗಿ ಹುಟ್ಟು ಎಂದು ಶಾಪವಿತ್ತನು. ಆ ಶಾಪ ಪರಿಹಾರಕ್ಕಾಗಿ ಶಿವನಲ್ಲಿ ಖೇಚರನು ಬೇಡಿಕೊಂಡನು. ಆಗ ಶಿವನು ‘‘ನೀಂ ಧರೆಗೆ ಪೋಗಿ ಜಾಬಾಲಮುನಿಯಾಗಿ ಪುಟ್ಟು, ಸದುಗುಣದಿ ಕೂಡಿ ಯೋಗಾಭ್ಯಾಸವ ಮಾಡು ಘನಮುದದಿಂದ ನಿನ್ನ ಕಾರ್ಯಕ್ಕಾಗಿ ನೂತನ ಪುರದ ಭೂಪ ಗಂಗಾಧರಂಗೆ ಸುತನಾಗೆನ್ನ ಚಿತ್ಕಲಾಂಶವು ಜನಿಪುದು’ ಎಂದು ಅಭಯವಿತ್ತನು. ಆಗ ಖೇಚರನು ವಿರಕ್ತನಾಗಿ ಭೂಮಿಯೊಳುದ್ಭವಿಸಿ ಗಿರಿ ತಟದಿ ಯೋಗಾಭ್ಯಾಸದಲ್ಲಿ ನಿರತನಾದನು (೧-೬).

ಗಂಡುಮಗುವೊಂದು ಜನಿಸಿದ್ದರಿಂದ ರಾಜ ಗಂಗಾಧರ ರಾಣಿ ಚಂಗಲಾದೇವಿಯರು ಸಂತೋಷದಿಂದಿದ್ದರು. ಮಹೇಶ್ವರನು ಮೃತ್ಯದೇವಿಯ ಕರೆದು, ಭೂಲೋಕಕ್ಕೆ ಹೋಗಿ ನೂತನಪುರದ ರಾಜಕುಮಾರನ ರುಂಡವನ್ನು ಕತ್ತರಿಸಿಕೊಂಡು ತಪಸ್ಸಿನಲ್ಲಿ ಕುಳಿತಿರುವ ಜಾಬಾಲ ಮುನಿಯ ಸನ್ನಿಧಿಯಲ್ಲಿಟ್ಟು ಬಾ ಎಂದನು. ಅದರಂತೆ ಮೃತ್ಯುದೇವತೆಯು ಆ ಕಾರ್ಯವನ್ನು ಮಾಡಿದಳು. ಚಂಗಲೆಯು ಎಚ್ಚರಗೊಂಡು ಕೂಸಿನ ಮೇಲಿರುವ ಬಟ್ಟೆಯನ್ನು ತೆಗೆದು ನೋಡಿ ‘‘’ಈಗಲೀ ಸುತನುತ್ತಮಾಂಗಮಂ ಕತ್ತರಿಸಿ ಪೋಗಿರ್ಪರಯ್ಯಯ್ಯೊ ಮಾಡಲಿನ್ನೇನು’’ ಎಂದು ರೋಧಿಸತೊಡಗಿದಳು. ಆಗ ರಾಜನು ಮಂತ್ರಿಯನ್ನು ಕರೆದು ಮಗನ ರುಂಡವನ್ನು ಕತ್ತರಿಸಿದ ದುಷ್ಟರನ್ನು ಹುಡುಕಿ ತಲೆಗತ್ತರಿಸಬೇಕೆಂದು ಆದೇಶಿಸಿದನು. ರಾಜನ ಅಪ್ಪಣೆಯನ್ನು ಒಪ್ಪಿ ಮಂತ್ರಿಯು ಶೂರರನ್ನು ಕಳುಹಿಸಿದನು. ಆ ಶೂರರು ಕಾಡು ಗುಡ್ಡ ಬೆಟ್ಟಗಳನ್ನು ತಿರುಗಿ ಗಿಡದಡಿಯಲ್ಲಿ ಕುಳಿತಿದ್ದ ಮುನಿಯ ಮುಂದಿದ್ದ ರುಂಡವನ್ನು ನೋಡಿ ಕಣ್ಣೀರಿಡುತ್ತ ರಾಜನಲ್ಲಿಗೆ ಬಂದು ತಿಳಿಸಿದರು. ಕೋಪದಿಂದಿದ್ದ ರಾಜನು ಹಲ್ಗಿರಿಯುತ್ತ ಚಂದ್ರಾಯುಧದಿಂದ ಜಾಬಾಲ ಮುನಿಯ ರುಂಡವನ್ನು ಕತ್ತರಿಸಿ ಹಾಕಿದನು. ಭೂಮಿಯ ಮೇಲೆ ಬಿದ್ದ ಆ ಮುನಿಯ ರಕ್ತದಲ್ಲಿ ಬಗೆಬಗೆಯಾದ ಅಸಂಖ್ಯಾತ ಕುರಿಗಳು ಉದ್ಭವಿಸಿದವು. ರಾಜನು ಆಶ್ಚರ್ಯಚಕಿತನಾಗಿ ರಾಹುತರು ಮಂತ್ರಿಗಳಿಗೆ ಆ ಕುರಿಗಳನ್ನು ಕಾಯಲು ಹೇಳಿದನು. ಇತ್ತ ಶಾಪ ವಿಮುಕ್ತನಾದ ಜಾಬಾಲಮುನಿಯು ಖೇಚರರೂಪವನ್ನು ಪಡೆದು ಶಿವಧ್ಯಾನ ಮಾಡುತ್ತ ಸಂತೋಷದಿಮದ ಶಿವಸಭೆಗೆ ಹೋದನು (೧೮-೩೩).

ರಾಹುತರು ಮಂತ್ರಿಗಳು ಕುರಿಗಳನ್ನು ಕಾಯ್ದು ಸಾಕಾಗಿದೆ ಎನ್ನಲು, ಸ್ವತಃ ರಾಜನೇ ಕಾಯಲು ಪ್ರಾರಂಭಿಸಿದನು. ಆತನೂ ಬೇಸತ್ತು ಶಿವನನ್ನು ಧ್ಯಾನಿಸಿದನು. ಇದನ್ನು ಕಂಡ ಶಿವನು ಮನಸಿನ ವ್ಯಸನ ಬಿಟ್ಟು ನೀವು ಮನೆಗೆ ನಡೆಯಿರಿ ಎಂದು ಹೇಳಿ ಬರ್ಮನಿಗೆ ಈ ಕೆಲಸವನ್ನು ಒಪ್ಪಿಸಿದನು. ಆತನೂ ಕೈಯಲ್ಲಿ ಕೋಲನ್ನು ಹಿಡಿದುಕೊಂಡು ಹೊಳೆ ಹಳ್ಳಗಳ ದಂಡೆಯಲ್ಲಿ ಹಲವು ದಿನ ಕುರಿಗಳನ್ನು ಕಾಯ್ದು ಬೇಸತ್ತಾಗ ಶ್ರೀ ಹರಿಯನ್ನು ನಿಯಮಿಸಿದನು. ಆತನೂ ಕಂಬಳಿಯ ಧರಿಸಿ ಕುರಿಗಳನ್ನು ಸಂರಕ್ಷಿಸುತ ಗುಡ್ಡಗಾಡುಗಳನ್ನು ತಿರುಗಿ ಬೇಸರಗೊಂಡಾಗ, ಕೊನೆಗೆ ಶಿವನೇ ಕುರಿಗಳನ್ನು ಕಾಯಲು ಪ್ರಾರಂಭಿಸಿದನು. ಚಿಗುರೆಲೆಗಳನ್ನು ಕತ್ತರಿಸಿ ಹಾಕುತ್ತ ತಿಳಿ ನೀರನ್ನು ಕುಡಿಸುತ್ತ ಕುರಿಮರಿಗಳನ್ನು ಬಗಲೊಳಗೆ ಹಿಡಿದು ಕೊಂಡು ಅತೀ ಪ್ರೀತಿಯಿಂದ ಅವುಗಳನ್ನು ರಕ್ಷಿಸಿಹತ್ತಿದನು. ನಡೆದೂ ನಡೆದೂ ಸಾಕಾಗಿ ಕುರಿಗಳನ್ನು ಬಿಟ್ಟು ಶಿವನು ಕೈಲಾಸಕ್ಕೆ ಬಂದನು. ಆಗ ಪಾರ್ವತಿಗೆ ಎಲ್ಲ ವೃತ್ತಾಂತವನ್ನು ವಿವರಿಸಿದನು. ಎಲ್ಲ ವೃತ್ತಾಂತವನ್ನು ಕೇಳಿಸ ಪಾರ್ವತಿಯು ಕುರಿಗಳನ್ನು ಕಾಯಲು ಆರಂಭಿಸಿದಳು. ಆಕೆಯೂ ಮಗ ಗಣಪನನ್ನು ಕಂಕುಳಲ್ಲಿಟ್ಟುಕೊಂಡು ಕುರಿಕಾಯುತ್ತ ಕಾಡು ಗುಡ್ಡಗಳನ್ನು ಅಲೆಯುತ್ತ ಜಾಗ್ರತಿಪುರ ಪ್ರದೇಶಕ್ಕೆ ಬಂದಳು. ಆ ಪ್ರದೇಶದ ಎಡಬಲದ ಗುಡ್ಡಗಳಲ್ಲಿ ಮೂರು ಕಣ್ಣುಳ್ಳ ಹುತ್ತವನ್ನು ಹುಡುಕಿ ಶಿವಪಂಚಾಕ್ಷರಿ ಮಂತ್ರವನ್ನು ಜಪಿಸುತ್ತ, ಆ ಹುತ್ತದೊಳಗೆ ಎಲ್ಲ ಕುರಿಗಳನ್ನು ನೂಕಿದಳು. ಕುರಿಗಳಿಗೆ ತೊಂದರೆಯಾಗದಂತೆ ತನ್ನ ಮೊಲೆಯ ಹಾಲಿನಿಂದ ಮಣ್ಣನ್ನು ಹದಮಾಡಿ ಮುಚ್ಚಿ ಮುತ್ತಿನ ಮೂಗುತಿಯ ಮುದ್ರೆಯನ್ನೊತ್ತಿದಳು. ಅದಕ್ಕೆ ವೀರಭದ್ರನನ್ನು ಕಾವಲಿಟ್ಟು ಆ ಮೂಗುತಿ ಮುತ್ತುಗದ ಮರವಾಗಿ ಬೆಳೆಯಲೆಂದು ಹರಿಸಿ ಹೋದಳು (೧೮-೩೩).

ಇತ್ತ ಜಾಗ್ರತಿ ಪಟ್ಟಣದಲ್ಲಿ ಶಿವಪದ್ಮನು ಶುದ್ಧಮನದಿಂದ ನಿತ್ಯ ಕುರಿಗಳನ್ನು ಕಾಯುತ್ತ ಸುಖದಿಂದಿರಲು, ಹೆಂಡತಿ ಜಿಂಕಾದೇವಿಯು ಗರ್ಭವತಿಯಾದ ಸುದ್ಧಿ ಕೇಳಿ ಆನಂದಭರಿತನಾಗಿ ಗುರುವನ್ನು ಧ್ಯಾನಿಸಿದನು. ರೇವಣಸಿದ್ಧನು ಪ್ರತ್ಯಕ್ಷನಾಗಿ ಜಿಂಕಾದೇವಿಯ ಹೊಟ್ಟೆಯನ್ನು ಅಮೃತ ಹಸ್ತದಿಂದ ಮುಟ್ಟಿ, ಅನುರೂಪನಾದ ಮಗನು ಜನಿಸುವನು. ಅವನಿಗೆ ನನ್ನ ಹೆಸರನ್ನಿಡಿರಿ ಎಂದು ಹಾರೈಸಿದನು. ಅದರಂತೆ ಜನಿಸಿದ ಮಗುವಿಗೆ ರೇವಣ್ಣನೆಂದು ನಾಮಕರಣ ಮಾಡಿ ಕಾಲ ಕಳೆಯುತಿದ್ದರು. ಒಂದು ದಿನ ಆದಿಗೊಂಡನು ತನ್ನ ಎಲ್ಲ ಮಕ್ಕಳನ್ನು ಹತ್ತಿರಕ್ಕೆ ಕರೆದು ‘‘ಎಲೆ ಸುತರೆ ಎಮ್ಮ ಹಿರಿಯರ‍್ಮಾಡುತಿರ್ದ ಹೊಲನೆಲಗಳಂ ಬಿಟ್ಟು ಕುರಿಗಳಂ ಕಾಯ್ವುದೊಂದೆ ಘನಕೆಲಸಮಂ ಮಾಡುತ್ತ ಸೋಮಾರಿತನದಿಂದ ವರ್ತಿಸುವದುಚಿತವಲ್ಲ’’, ನೇಗಿಲ ಹೂಡಿ ಹೊಲ ಹಸನು ಮಾಡಿದರೆ ಮಂದೆ ಸೊಗಸಾದ ಬೆಳೆ ಬಂದು ಪಶುಪಕ್ಷಿಗಳು ಬದುಕುವವಲ್ಲದೆ ನಮಗೂ ಸುಖ ಸಿಗುವುದು ಎಂದು ತಿಳಿ ಹೇಳಿದನು. ಈ ಮಾತುಗಳನ್ನು ಕೇಳಿದ ಜಾಯ್ಗೊಂಡ ಪಾಯ್ಗೊಂಡರು ವ್ಯವಸಾಯ ಮಾಡಲು ತಮ್ಮಿಂದ ಸಾಧ್ಯವಿಲ್ಲವೆಂದರು. ಆದರೆ ಶಿವಪದ್ಮನು ತಂದೆಯ ಮಾತಿಗೆ ಮರುನುಡಿಯದೆ ನೇಗಿಲ ತೆಗೆದುಕೊಂಡು ಎತ್ತುಗಳನ್ನು ಹೂಡಿಕೊಂಡು ಹೊಲದತ್ತ ನಡೆದನು. ಮನದಲ್ಲಿ ಗುರು ರೇವಣಸಿದ್ಧನನ್ನು ನೆನೆದು, ಹೊಲ ಊಳಲು ಆರಂಭಿಸಿದನು. ಮಧ್ಯಾಹ್ನದ ಹೊತ್ತಿಗೆ ತಾಯಿಯ ಮಗನಿಗೆ ಬುತ್ತಿಯನ್ನು ತಂದು ಊಟಕ್ಕೆ ಕರೆದಳು. ಅಷ್ಟರಲ್ಲಿ ಇನ್ನುಳಿದ ಮಕ್ಕಳು, ಶಿವಪದ್ಮನ ಮೇಲೆ ಇಷ್ಟೇಕೆ ಮಮತೆ ಎಂದು ಪ್ರಶ್ನಿಸಿದರು. ತಂದ ಬುತ್ತಿಯನ್ನು ಎಲ್ಲರೂ ಸೇರಿ ಉಂಡು ಉಳಿದುದನ್ನು ಚಲ್ಲಾಡಿ ಹಾಸ್ಯಮಾಡಿದರು. ನಂತರ ಶಿವಪದ್ಮನು ಗುರುವಿನ ಧ್ಯಾನದಿಂದ ಪರಮಾನ್ನವನ್ನು ಸೇವಿಸಿದನು. ಇದನ್ನೆಲ್ಲ ಕಣ್ಣಾರೆ ಕಂಡ ತಾಯಿ ಚುಂಚಲೆಯು ನಿಜವಾಗಿ ಈತ ಗುರುಪುತ್ರನೆಂದು ಕೊಂಡಾಡಿದಳು. ಸಂತೃಪ್ತಿಗೊಂಡ ಶಿವಪದ್ಮನು ಮತ್ತೆ ಹೊಲವನ್ನು ಊಳುತ್ತಿರುವಾಗ ಮೂರು ಕಣ್ಣಿನ ಹುತ್ತ ನೇಗಿಲಿಗೆ ತಾಕಿತು. ನೆಲವು ಬೀರಿ ಎಲ್ಲ ಕಡೆ ಅಗ್ನಿಯು ಹೊತ್ತಿಕೊಂಡು ಹುಲ್ಲು ಗಿಡಕಂಠಿತಗಳು ನಾಶವಾದವು. ಅಗ್ನಿಯ ಶಾಖದಿಂದ ಎತ್ತುಗಳು, ಪಶುಪಕ್ಷಿಗಳು ನೆಲಕ್ಕೆ ಉರುಳಿಬಿದ್ದು ನರಳಿದವು. ಇದನ್ನೆಲ್ಲ ಶಿವಪದ್ಮನು ನೋಡಿ ಕಣ್ಣೀರು ಸುರಿಸುತ್ತ ಗುರು ರೇವಣಸಿದ್ಧನನ್ನು ಧ್ಯಾನಿಸಿದನು. ಆಗ ಭಸ್ಮವನ್ನು ಎರಚಲು ಅಗ್ನಿಯು ನಂದಿತು. ಎತ್ತುಗಳನ್ನು ಎಬ್ಬಿಸಿಕೊಂಡು ಹಿಂದೆ ನೋಡಿದಾಗ ಹೊಸ ಬಣ್ಣದಿಂದ ಕಂಗೊಳಿಸುವ ಕುರಿಗಳ ಗುಂಪು ಕಾಣಿಸಿಕೊಂಡಿತು. ಅವುಗಳನ್ನು ನೋಡಿ ಆಶ್ಚರ್ಯಚಕಿತನಾದ ಶಿವಪದ್ಮ ಇವು ಎಲ್ಲಿಂದ ಹುಟ್ಟಿ ಬಂದವು ಎನ್ನುತ್ತ, ನೇಗಿಲು ಈಸುಗಳನ್ನು ಹೊತ್ತುಕೊಂಡು ಅವುಗಳನ್ನು ಸಲಹುತ್ತ ನಡೆದನು (೩೪-೫೭).