ಕರ್ನಾಟಕದ ಪ್ರಮುಖ ಜನಸಮುದಾಯಗಳಲ್ಲಿ ಹಾಲುಮತ ಸಮುದಾಯವೂ ಒಂದು. ಚಾರಿತ್ರಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಬಹುದೊಡ್ಡ ಪರಂಪರೆಯನ್ನು ಹೊಂದಿದ ಇವರನ್ನು ಸಾಮಾನ್ಯವಾಗಿ ಕುರುಬರೆಂದು ಕರೆಯಲಾಗುತ್ತದೆ. ಪ್ರಾಚೀನ ಕಾಲದಿಂದಲೂ ಪಶುಪಾಲನೆ, ಕುರಿಸಾಗಣೆ, ಕಂಬಳಿ ತಯಾರಿಕೆ ಹಾಗೂ ಕೃಷಿಯನ್ನು ಪ್ರಧಾನ ಉದ್ಯೋಗವನ್ನಾಗಿ ಮಾಡಿಕೊಂಡು ಬಂದಿದ್ದಾರೆ. ತಮ್ಮ ಸಂಸ್ಕೃತಿಯ ಮೂಲ ಸೊಗಡನ್ನು, ಪರಂಪರಾಗತ ಜೀವನ ಪದ್ಧತಿಯನ್ನು ಯಥಾವತ್ತಾಗಿ ಉಳಿಸಿಕೊಂಡು ಬಮದ ಜನ ಸಮುದಾಯಗಳಲ್ಲಿ ಕುರುಬರು ಪ್ರಮುಖರೆನಿಸುತ್ತಾರೆ. ಇಂದಿಗೂ ನಡೆಯುವ ಹಬ್ಬಗಳು, ಆಚರಣೆಗಳು, ಉತ್ಸವಗಳು, ನಂಬಿಕೆಗಳು ಇದಕ್ಕೆ ನಿದರ್ಶನವಾಘಿವೆ. ಈ ಜನಸಮುದಾಯವೇ ದಕ್ಷಿಣ ಭಾರತದ ಮೂಲನಿವಾಸಿಗಳೆಂದು ಓಪರ್ಟ, ಥರ್ಸ್ಟನ್, ಸಾಂತೈಮರ, ಶಂಬಾ ಜೋಷಿ, ಚಿಂತಾಮಣಿ ಢೇರೆಯವರಂಥ ಹಲವರು ವಿದ್ವಾಂಸರ ಅಭಿಪ್ರಾಯವಾಗಿದೆ.

ಕೊಲ್ಲಿಪಾಕಿಯ ರೇವಣಸಿದ್ಧೇಶ್ವರ, ಸೊನ್ನಲಾಪುರದ ಸಿದ್ಧರಾಮೇಶ್ವರ, ಅರಕೇರಿಯ ಅಮೋಘಸಿದ್ಧೇಶ್ವರ, ಶಿವಶರಣ ವೀರಗೊಲ್ಲಾಳ, ಹುಲಜಂತಿ ಮಾಳಿಂಗರಾಯ ಮುಂತಾದವರು ಹಾಲುಮತ ಸಮುದಾಯದ ಅರಾಧ್ಯ ದೈವವಾಗಿದ್ದಾರೆ. ಬೀರಲಿಂಗೇಶ್ವರ, ಮೈಲಾರಲಿಂಗೇಶ್ವರ, ಮಾಳಿಂಗೇಶ್ವರ, ಇಟ್ಟಪ್ಪ ಮೊದಲಾದವರು ಈ ಸಮುದಾಯದ ಸಾಂಸ್ಕೃತಿಕ ವೀರರಾಗಿದ್ದಾರೆ. ಕರ್ನಾಟಕದಾದ್ಯಂತ ಇಂಥ ಅನೇಕ ಮಹಾನುಭಾವರ, ವೀರನಾಯಕರ ಹೆಸರಿನಲ್ಲಿ ಮಠಮಾನ್ಯಗಳು ಗುಡಿಗುಂಡಾರಗಳಿವೆ. ನಿರ್ದಿಷ್ಟ ಅವಧಿಯಲ್ಲಿ ಜಾತ್ರೆ ಉತ್ಸವಗಳು ಇಲ್ಲಿ ನೆರವೇರುತ್ತವೆ. ಇಂಥ ವಿಶಿಷ್ಟ ಪರಂಪರೆಯನ್ನು ಹೊಂದಿದ ಈ ಜನಸಮುದಾಯದ ಸಾಹಿತ್ಯ ಸಂಸ್ಕೃತಿ, ಕಲೆಗಳ ಸರ್ವೇಕ್ಷಣೆ, ಸಂಗ್ರಹ ಸಂಶೋಧನೆ, ಅಧ್ಯಯನ ಮತ್ತು ಪ್ರಕಟಣೆಯ ಉದ್ದೇಶ ದಿಂದ ಕನ್ನಡ ವಿಶ್ವವಿದ್ಯಾಲಯದಲ್ಲಿ ಹಾಲುಮತ ಅಧ್ಯಯನ ಪೀಠವು ಸ್ಥಾಪನೆಗೊಂಡಿದೆ.

ಪೀಠದ ಉದ್ದೇಶಗಳು

೧. ಸಂಶೋಧನೆ

೧. ಹಾಲುಮತ ಸಾಹಿತ್ಯ ಸಂಸ್ಕೃತಿಗೆ ಸಂಬಂಧಿಸಿದಂತೆ ಶಾಸನಗಳು, ಕಾವ್ಯ ಪುರಾಣಗಳು, ಮೌಖಿಕ ಪರಂಪರೆಯನ್ನು ಕಥೆ ಹಾಡುಗಳು, ನಂಬಿಕೆಗಳು ಹೀಗೆ ಅಧಿಕ ಪ್ರಮಾಣದ ಆಕರ ಸಾಮಗ್ರಿಗಳಿವೆ. ಜನಪದ ಹಾಲುಮತ ಮಹಾಕಾವ್ಯ, ತಗರ ಪವಾಡ, ಸಿದ್ಧಮಂಕ ಚರಿತೆ, ಭೀಮಕವಿಯ ಹಾಲುಮತೋತ್ತೇಜಕ ಪುರಾಣ, ರೇವಣಸಿದ್ಧೇಶ್ವರ ಪುರಾಣ, ಗೊಲ್ಲಾಳಯ್ಯನ ಪುರಾಣ, ಮಾಳಿಂಗರಾಯನ ಕಾವ್ಯ, ಮೈಲಾರಲೀಂಗನ ಕಾವ್ಯ, ಅಮೋಘ ಸಿದ್ಧೇಶ್ವರ ಪುರಾಣ ಇಂಥ ಹತ್ತಾರು ಕಾವ್ಯ ಪುರಾಣಗಳನ್ನು ತೌಲನಿಕವಾಗಿ ಅಧ್ಯಯನಕ್ಕೊಳಪಡಿಸುವುದು.

೨. ಹಾಲುಮತ ಗುರುಪರಂಪರರಯಲ್ಲಿ ಬರುವ ರೇವಣಸಿದ್ಧೇಶ್ವರಮ ಅಮೋಘಸಿದ್ಧೇಶ್ವರ, ಸಿದ್ಧರಾಮೇಶ್ವರ, ಸಿದ್ಧಮಂಕ, ಶಾಂತಮುತ್ತುಯ್ಯ, ಬೀರಲಿಂಗೇಶ್ವರ, ಮೈಲಾರಲಿಂಗೇಶ್ವರ, ಮಾಳಿಂಗೇಶ್ವರರ ಹೆಸರಿನಲ್ಲಿ ಅನೇಕ ದೇವಾಲಯ, ಮಠಮಂದಿರ ಹಾಗೂ ಶಿಲ್ಪಗಳಿವೆ. ಕರ್ನಾಟಕದಲ್ಲಿಯೇ ಅಂದಾಜು ಒಂದು ಸಾವಿರದಷ್ಟು ದೇವಾಲಯ, ಮಠ ಮಂದಿರಗಳಿವೆ. ವ್ಯಾಪಕ ಕ್ಷೇತ್ರಕಾರ್ಯದ ಮೂಲಕ ಸರ್ವೇಕ್ಷಣೆ ಕೈಕೊಳ್ಳುವುದು.

೩. ಮೌಖಿಕ ಪರಂಪರೆಯಲ್ಲಿ ಈ ಸಮುದಾಯದ ಸಂಸ್ಕೃತಿ ಕಲೆ ಕುರಿತು ಹಾಡು ಕಥೆಗಳಿವೆ. ಅವುಗಳನ್ನು ದಾಖಲಿಸಿ ಪ್ರಕಟಿಸುವುದು. ಕುರುಬರ ವಿಶಿಷ್ಟ ಕಲೆ ಡೊಳ್ಳು. ಈ ಕಲೆಯ ಪ್ರದರ್ಶನ ಸಂದರ್ಭದಲ್ಲಿ ಹಾಡುವ ಹಾಡುಗಳಿಗೆ ಡೊಳ್ಳಿನ ಹಾಡುಗಳೆಂದು ಕರೆಯಲಾಗುತ್ತಿದೆ. ಹಾಗೆಯೇ ರ‍್ವಾಣಗಳು, ಚೌಡಿಕೆ ಹಾಡುಗಳು, ಕರಡಿ ಮಜಲಿನ ಹಾಡುಗಳು ಹೀಗೆ ಅನೇಕ ರೀತಿಯ ಹಾಡುಗಳನ್ನು ಸಂಗ್ರಹಿಸುವುದು. ಉದಾಹರಣೆಗೆ ಡೊಳ್ಳಿನ ಹಾಡುಗಳನ್ನೇ ಗಮನಿಸಿ ಹೇಳುವುದಾದರೆ ಕರ್ನಾಟಕದಾದ್ಯಂತ ಸರ್ವೇಕ್ಷಣೆ ನಡೆಸಿದರೆ ಅಂದಾಜು ಎರಡು ಸಾವಿರ ಹಾಡುಗಳು ಲಭ್ಯವಾಗುತ್ತವೆ, ಅವುಗಳನ್ನು ಸಂಪುಟಗಳ ರೂಪದಲ್ಲಿ ಪ್ರಕಟಿಸುವುದು.

೪. ಹಬ್ಬ ಹರಿದಿನ, ಉತ್ಸವ, ಜಾತ್ರೆಗಳಲ್ಲಿ ಈ ಸಮುದಾಯಕ್ಕೆ ಸಂಬಂಧಿಸಿದಂತೆ ಕೆಲವು ವಿಶಿಷ್ಟ ಆಚರಣೆ ಮತ್ತು ಸಂಪ್ರದಾಯಗಳಿವೆ. ಅವೆಲ್ಲವುಗಳು ದಾಖಲೀಕರಣಗೊಳ್ಳಬೇಕಿದೆ. ಹಾಗೆಯೇ ಕರ್ನಾಟಕ ಚಿಕ್ಕನಾಯಕನಹಳ್ಳಿ, ಸರೂರು, ಬಂಕಾಪುರ, ಶ್ರೀರಾಮಪುರ, ತಾಳಿಕಟ್ಟೆ, ಅರಕೇರಿ, ಮೈಲಾರ, ಚಿಂಚಲಿ, ಕೊಣ್ಣೂರು, ದೇವರಗುಡ್ಡ, ಮಹಾರಾಷ್ಟ್ರದ ಪಟ್ಟಣ ಕಡೋಲಿ, ಕೊಲ್ಲಾಪುರ, ಸೊಲ್ಲಾಪುರ ಹುಲಜಂತಿ, ಮೊದಲಾದವು ಈ ಸಮುದಾಯದ ಪ್ರಮುಖ ಧಾರ್ಮಿಕ ಕೇಂದ್ರಗಳಾಗಿವೆ. ಈ ಕೇಂದ್ರಗಳ ಚಾರಿತ್ರಿಕ ಮತ್ತು ಸಾಂಸ್ಕೃತಿಕ ಮಹತ್ವವನ್ನು ಕುರಿತು ಅಧ್ಯಯನ ನಡೆಸುವುದು.

೫. ನಾಡು ನುಡಿ ಸಮಾಜಕ್ಕಾಗಿ ಹಾಲುಮತ ಸಮುದಾಯದ ಅನೇಕ ಗಣ್ಯಮಾನ್ಯರು, ಮಹನೀಯರು, ಧಾರ್ಮಿಕ ವ್ಯಕ್ತಿಗಳು ದುಡಿದಿದ್ದಾರೆ. ಅವರ ಜೀವನ ಚರಿತ್ರೆ ಮತ್ತು ಸಾಧನೆಗಳನ್ನು ಕುರಿತು ಅಧ್ಯಯನ ಮಾಡಿ ಪುಸ್ತಕರೂಪದಲ್ಲಿ ಪ್ರಕಟಿಸುವುದು.

೭. ಹಾಲುಮತಕ್ಕೆ ಸಂಬಂಧಿಸಿದಂತೆ ಕೆಲವು ಪಾರಿಭಾಷಿಕ ಪದಗಳು ಪ್ರಾಚೀನ ಕಾಲದಿಂದಲೂ ಬಳಕೆಗೊಳ್ಳುತ್ತ ಬಂದಿವೆ. ಅವೆಲ್ಲಗಳನ್ನು ಕ್ರೋಢಿಕರಿಸಿ ಹಾಲುಮತ ಪದಕೋಶವನ್ನು ಸಿದ್ಧಪಡಿಸುವುದು. ಉದಾ. ಕರಿಯ ಕಂತೆ, ಭಂಡಾರಿ, ಕೋಲಕಾಕರು, ಹರಿವಾಣದವರು, ಕಟ್ಟೆಮನೆ, ಒಡೆಯರು, ಕಾಲಿಲ್ಲದ ಅಯ್ನೋರು, ಇತ್ಯಾದಿ.

೮. ಹಾಲುಮತ ವಿಶ್ವಕೋಶಗಳನ್ನು ಸಾಹಿತ್ಯ, ಕಲೆ, ಧರ್ಮ, ಸಮಾಜ, ಶಿಲ್ಪ ಇತ್ಯಾದಿ ವಿಷಯಾನುಸಾರ ವರ್ಗೀಕರಿಸಿ ಸಂಪುಟಗಳಲ್ಲಿ ಪ್ರಕಟಿಸುವುದು.

೯. ಹಾಲುಮತಕ್ಕೆ ಸಂಬಂಧಿಸಿದ ಪ್ರಾಚೀನ ಹಸ್ತಪ್ರತಿ, ಶಾಸನ, ಶಿಲ್ಪ, ಕಲೆ, ಜಾನಪದಗಳಿಗೆ ಸಂಬಂಧಿಸಿದ ವಸ್ತು ಸಂಗ್ರಹಾಲಯವನ್ನು ಸ್ಥಾಪಿಸುವುದು. ಆ ಮೂಲಕ ಅವುಗಳನ್ನು ಸಂರಕ್ಷಿಸುವುದು.

೧೦. ಹಾಲುಮತ ಸಾಹಿತ್ಯ ಸಂಸ್ಕೃತಿ, ಕಲೆ, ಸಮುದಾಯ ಕುರಿತು ನಾಡಿನ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಸಮ್ಮೇಳನ, ವಿಚಾರ ಸಂಕಿರಣ ಹಾಗೂ ವಿಶೇಷ ಉಪನ್ಯಾಸಗಳನ್ನು ಏರ್ಪಡಿಸುವುದು.

೨. ದಾಖಲೀಕರಣ ಮತ್ತು ವಿಶ್ಲೇಷಣೆ

ಹಾಲುಮತ ಸಂಸ್ಕೃತಿಗೆ ಸಂಬಂಧಿಸಿದ ಸಂಪ್ರದಾಯ, ಆಚರಣೆ, ಜಾತ್ರೆ ಉತ್ಸವಗಳನ್ನು ಆಡಿಯೊ ವಿಡಿಯೊ ಮೂಲಕ ನೇರವಾಗಿ ಚಿತ್ರಿಕರಿಸಿ ಅಧ್ಯಯನಕ್ಕೆ ಅನುಕೂಲ ಮಾಡಿ ಕೊಡುವುದು.

೩. ಪ್ರಕಟಣೆ

ಹಾಲುಮತ ಸಾಹಿತ್ಯ, ಸಂಸ್ಕೃತಿ, ಕಲೆ, ಜಾನಪದ, ಆಚರಣೆ, ಸಂಪ್ರದಾಯಗಳನ್ನು ಅಧ್ಯಯನ ಮಾಡಿ ಅವುಗಳ ಫಲಿತಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸುವುದು. ಹಾಗೆಯೇ ವಿಚಾರ ಸಂಕಿರಣ, ವಿಶೇಷ ಉಪನ್ಯಾಸಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸುವುದು. ಇದಿಷ್ಟು ಹಾಲುಮತ ಅಧ್ಯಯನ ಪೀಠದ ಪ್ರಮುಖ ಉದ್ದೇಶಗಳು.

ಹೀಗೆ ಹಾಲುಮತ ಸಂಸ್ಕೃತಿಯ ಸಂಶೋಧನೆ, ದಾಖಲೀಕರಣ, ವಿಶ್ಲೇಷಣೆ ಮತ್ತು ಪ್ರಕಟಣೆಯನ್ನು ಉದ್ದೇಶವಾಗಿಟ್ಟುಕೊಂಡು ಸ್ಥಾಪಿತವಾದ ಹಾಲುಮತ ಅಧ್ಯಯನ ಪೀಠದಿಂದ ಪ್ರಸಕ್ತ ಶೈಕ್ಷಣಿಕ ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಅವುಗಳಲ್ಲಿ ಹಾಲುಮತ ಸಂಸ್ಕೃತಿ ಸಮ್ಮೇಳನವನ್ನು ಏರ್ಪಡಿಸುವುದು, ಡೊಳ್ಳಿನ ಹಾಡುಗಳನ್ನು ಸಂಗ್ರಹಿಸುವುದು. ಹಾಲುಮತ ಕಾವ್ಯ ಪುರಾಣಗಳನ್ನು ಪರಿಷ್ಕರಿಸುವುದು. ಈ ಹಿನ್ನಲೆಯಲ್ಲಿ ರಸ್ತಾಪುರ ಭೀಮಕವಿಯ ಹಾಲುಮತೋತ್ತೇಜಕ ಪುರಾಣವನ್ನು ಪರಿಷ್ಕರಿಸಿ ಈಗ ಪ್ರಕಟಿಸಲಾಗುತ್ತಿದೆ. ಇದು ಹಾಲುಮತ ಅಧ್ಯಯನ ಮಾಲೆಯ ಮೊದಲನೆಯ ಪ್ರಕಟನೆಯಾಗಿದೆ.

ಈ ಕೃತಿಯನ್ನು ಪರಿಶೀಲಿಸಿ ಪ್ರಕಟಣೆಗೆ ಅನುಮತಿ ನೀಡಿದ ಹಿಂದಿನ ಕುಲಪತಿಗಳಾದ ಡಾ. ಕೆ.ವಿ. ನಾರಾಯಣ, ಇಂದಿನ ಕುಲಪತಿಗಳಾದ ಡಾ. ಹಿ.ಚಿ. ಬೋರಲಿಂಗಯ್ಯ, ಕುಲಸಚಿವರಾದ ಶ್ರೀ ವಿ. ಶಂಕರ್, ಪ್ರಸಾರಾಂಗದ ನಿರ್ದೇಶಕರಾದ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಮತ್ತು ಹಸ್ತಪ್ರತಿಯನ್ನು ಆಮೂಲಾಗ್ರವಾಗಿ ಪರಿಶೀಲಿಸಿ ಪ್ರಕಟಣೆಗೆ ಶಿಫಾರಸ್ಸು ಮಾಡಿದ ಸಲಹಾ ಸಮಿತಿಯ ಸದಸ್ಯರಿಗೆ ನಾನು ಕೃತಜ್ಞನಾಗಿದ್ದೇನೆ.

ಹಾಲುಮತೋತ್ತೇಜಕ ಪುರಾಣವನ್ನು ಕಲ್ಲಚ್ಚಿನ ಪ್ರತಿಯಿಂದ ವ್ಯವಸ್ಥಿತವಾಗಿ ನಕಲು ಪ್ರತಿ ಮಾಡಿಕೊಂಡು ಸಂರಕ್ಷಣೆ ಮಾಡಿಕೊಂಡು ಬಂದವರು ಬಳ್ಳಾರಿ ಜಿಲ್ಲೆಯ ಸಂಜೀವ ರಾಯನಕೋಟೆ ಗ್ರಾಮದ ಶ್ರೀ ಕೆ. ಸಣ್ಣತಿಮ್ಮಪ್ಪನವರು. ಈ ಪ್ರತಿಯನ್ನು ದೊರಕಿಸಿ ಕೊಡುವಲ್ಲಿ ನನಗೆ ನೆರವಾದವರು ಹೊಸಪೇಟೆಯ ಹಾಲುಮತ ಸಾಂಸ್ಕೃತಿಕ ವೇದಿಕೆಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ. ವೈ.ಎಚ್. ಹಳ್ಳಿಕೇರಿಯವರು. ಇವರೀರ್ವರ ಸಾಹಿತ್ಯ ಸಂಸ್ಕೃತಿ ಪ್ರೀತಿಗೆ ಧನ್ಯವಾದಗಳು.

ಪುಟವಿನ್ಯಾಸಗೊಳಿಸಿದ ಪ್ರಸಾರಾಂಗದ ಸಹಾಯಕ ನಿರ್ದೇಶಕ ಶ್ರೀ ಬಿ. ಸುಜ್ಞಾನಮೂರ್ತಿ ಮತ್ತು ಅಂದವಾದ ಮುಖಪುಟ ರಚಿಸಿದ ಕಲಾವಿದ ಕೆ.ಕೆ. ಮಕಾಳಿ, ಪದ್ಯಗಳ ಅಕಾರಾದಿಯನ್ನು ಸಿದ್ಧಪಡಿಸುವಲ್ಲಿ ನೆರೆವು ನೀಡಿದ ಸೊಬಟಿ ಚಂದ್ರಪ್ಪ ಮತ್ತು ಸತ್ಯನಾರಾಯಣ ಅವರ ಸಹಕಾರವನ್ನು ಪ್ರೀತಿಯಿಂದ ನೆನೆಯುತ್ತೇನೆ.