ಅತ್ತ ಶಂಕರನು ರೇವಣನೆಡೆಗೆ ಚರನಂ ಕಳಿ
ಸುತ್ತ ಶಿವಪದ್ಮನಂ ಲೌಕೀಕ ವಿಷಯ ಬಿಡಿಸು
ಇತ್ತಿತ್ತ ಕರತರುವದೆಂದಾಜ್ಞೆಯಿತ್ತು ಸಮ್ಮೋದದಿಂ ಕಳಿಸಲಾಗ
ಚಿತ್ತಜಾಂತಕನೊರೆದ ನುಡಿಗಾತನೊಪ್ಪಿ ಜಸ
ವೆತ್ತಸವ ಜಾಗ್ರತಾಪುರವನೊಳ ಪೊಕ್ಕು ಶಿ
ಷ್ಯೋತ್ತಮನ ಬಳಿಗಿಳಿದು ಸಾಕು ವಿಷಯದ ಸುಖಮಂ ಬಾರೆಂದು ಕೈಲಾಸಕೆ ||೪೬||

ಗುರ್ವಾಜ್ಞೆಕನುಸರಿಸಿ ಮಾತೆಪಿತರಿಗೆ ನಮಿಸಿ
ತುರ್ವಿಯಿಂ ಬಿಟ್ಟು ನಾಂ ಪೋಗುವೆನು ಪ್ರೇಮದಿ
ಶರ್ವನಾಭನ ಪುರಾಲಯಕ್ಕೆಂದು ಮೃದುಮಧುರೋಕ್ತಿಗಳು ಬೀರಲನಿತರೊಳಗೆ
ಸರ್ವರರಿವಂತಾದಿಗೊಂಡ ಚುಂಚಲದೇವಿ
ಯರ್ವದನ ಕಳೆಗುಂದುತಸುವಳಿದು ಭರದಿ ಗಂ
ಧರ್ವರೂಪಂ ತಳೆದು ನಿಶ್ಸಾಪರಾಗಿ ಸುರಲೋಕಮಂ ಸೇರ್ದರಿತ್ತ ||೪೭||

ಶಿವಪದ್ಮನಾಗ್ರಜರಂ ಸಂತೈಸಿ ನಿಜಕುವರ
ರೇವಣನ ಮೇಣುಭಯ ಸತಿಯರಂ ಕರೆದು
ಅವನಿಯೊಳ್ಸುಖರೂಪರಾಗಿರರಿ ಗುರುಲಿಂಗಜಂಗಮಕ್ಕಭಿನಮಿಸಿರಿ
ತವೆ ಶೋಭಿಸುವ ಪಾಲ್ಮತವನುದ್ಧರಿಸಿರಿ ದು
ರ್ಭವದೂರ ರೇವಣಾರಾಧ್ಯನಸುಪಾದ ಸರೋ
ಜನ ನಿರಂತರದಿ ಸ್ಮರಿಸಿರಿ ಸತ್ತ ಕುರಿಗಳಂ ಹೊತ್ತು ವಿಕ್ರೈಸಿರೆಂದೂ ||೪೮||

ಈ ವಿಧದಿ ಸತಿಸುತರ್ಗೊರದು ಪುರಬಿಟ್ಟು ಸ
ದ್ಭಾವದಿಂದಂತರಗಮನನಾಗಿ ಶ್ರೀಗುರುಸಿದ್ಧ
ದೇವನಂ ಸ್ಮರಿಸುತ್ತ ಸರ್ವಜನ ನೋಡುತಿರೆ ನಡೆದನತಿ ತವಕದಿಂದಾ
ಭೂವಲಯದೊಳಗಿರ್ಪ ಸಕಲ ಪ್ರಾಣಿಗಳನ್ನು
ಪಾವನ ಮಾಡಿ ಶಿವಪುರಿಗೆ ಪೋಗುವೆನೆಂದು
ಕೋವಿದರು ಪದ್ಮಂಗೆ ಜಯಜಯವೆನುತೊಯ್ಯನೊಯ್ಯನೇ ಕರವ ಬಡಿದರು ||೪೯||

ಬಳಿಕ ತ್ರಿಪುರಾಂತಕಂ ಪದ್ಮನೈ ತರುವದಂ
ತಿಳಿದು ಸುರಪಾದಿ ಕಿನ್ನರ ಕಿಂಪುರಷರನ್ನು
ಕಳಿಸಲವರಾಗಮಿಸಿ ವಿಭವಾತಿಶಯದಿದಿರ್ಗೊಂಡು ಪೂಮಳೆಗರಿಸುತ
ವಿಳಸಿತ ಪಟಹ ಭೇರಿಭೂರಿ ದುಂದಭೆಗಳಂ
ಮೊಳಗಿ ಜಯಘೋಷದಿಂದೊಡಗೂಡಿ ಶಿವಸಭೆಯ
ನಿಲಯಮಂ ಪೊಕ್ಕು ಶಂಕರನ ಸನ್ನಿಧಿಗೆ ಪೋಗುತ್ತಿರಲ್ಕಾ ಸಮಯದಿ ||೫೦||

ಸುರಮುನಿಗಳೆದ್ದು ಕೊಂಡಾಡಿದರು ಪಾಡಿದರು
ಹರಗಣಂಗಳು ಜಯವ ಬೀರಿದರು ಸಾರಿದರು
ಹರಿಬ್ರಹ್ಮಗಳೊಂದುಗೂಡಿದರು ನೋಡಿದರು ಮಾಡಿದರು ಸತ್ಕಾರಮಂ
ಸಿರಿಸರಸ್ವತಿಯರುರೆ ಪರಸಿದರು ಚರಿಸಿದರು ಗಿರಿಜಾತೆ
ಮರುಕಮಂ ಹಚ್ಚಿದಳು ಮೆಚ್ಚಿದಳು ಸುರಸ್ತ್ರೀ
ಯರಾರತಿಯನೆತ್ತಿದರು ಮುತ್ತಿದರು ಸುತ್ತಿದರು ಜಗದೀಶನು || ೫೧||

ಹರಪದ್ಮನತಿ ಸರಸವೆರಸಿ ಮನವಿರಸಿ
ಭಾಸುರಗಣಸ್ತೋಮಕ್ಕೆ ನಮಿಸಿ ಸಂಭ್ರಮಿಸಿ
ಸುರವರ ಹರಬ್ರಹ್ಮನಂ ನೋಡಿ ಮುದಗೂಡಿ ಗೌರೀಶನಸುನಾಮಗಳನು
ನೆರೆನುತಿಸಿ ಮನವಸ್ಥಿರ ಬಗೆದು ಕರಮುಗಿದು ಪಾದ
ಕ್ಕೆರಗಿದಂ ಸದ್ಭಕ್ತಿ ತಳೆದು ಭಯಕಳೆದು
ಪರತರ ದೇವ ಸಲಹೆಂದು ನುಡಿದು ದೃಢವಿಡಿದು ಪರಿಪರಿಯಿಂದ ಬೇಡಿಕೊಂಡ ||೫೨||

ಮೇದಿನಿವಲಯದಿಂದ ಬಂದ ಸುತನಂ ಕಂಡು
ಆದುದೀಶಂಗೆ ಸುಖಮೃದುನುಡಿಗಳಂ ಗ್ರಹಿಸಿ
ಮೋದದಿಂ ಪದ್ಮನಂ ಪಿಡಿದೆತ್ತ ಮುದ್ದಾಡಿ ಸತ್ಸಮಾಜದೊಳಿರುತಿಹ
ಆ ದಿವಿಜ ವೃಂದಮಂ ಆ ಸಿದ್ಧಸಾಧ್ಯರಂ
ಆದರದಿ ನೋಡೆಂದು ಕರಸನ್ನೆಯಿಂದ ಜಗ
ದಾದಿದೇವಂ ಮುಗುಳ್ನಗೆಯೊಳಾತಂಗೆ ತೋರಿಸಿದಾ ಬಹುಚಿತ್ರಗಳನು ||೫೩||

ಇಂದುಧರ ಪದ್ಮನಿಗೆ ಪೇಳಿದಂ ಪುಳಕದಿಂ
ಹಿಂದೆ ಭಿಲ್ಲಾಸುರನ ನಾಶಗೈವದಕೆನ್ನ
ಕಂದ ವೀರೇಶನಂ ಭುವನಕ್ಕೆ ಕಳಿಸಲವ ಬೀರಾವತಾರ ಧರಿಸಿ
ಮಂದಮತಿಯಾದ ಖಳನ ಕೊಂದು ಕುರುಬರಂ
ಚಂದದಿಂದುದ್ಧರಿಸಿ ಬಂದನಿಲ್ಲಿಗೆ ಮರಳಿ
ಇಂದು ನೀ ಬರ್ಮನ ಮಡದಿ ಸುರಾವತಿಯ ಗರ್ಭಾಬ್ಧಿಯೊಳಗುದ್ಭವಿಸುತ ||೫೪||

ಶಿವಸಿದ್ಧ ಬೀರನೆಂಬಭಿದಾನದಿಂ ಸಕಲ
ಭುವನದೋಳ್ಮಹಿಮಗಳ ತೋರೆಂದು ಪದ್ಮಂಗೆ
ಶಿವನೊರೆಯಲದಕ್ಕೊಪ್ಪಿ ಸಾಷ್ಟಾಂಗವೆರಗಿ ನಾಂ ಪೋಗಿ ಭೂತಲದೊಳುದಿಸಿ
ಶಿವಭಕ್ತಿಯಂ ಬೆಳಸಿ ಘನಮಹಿಮೆ ತೋರುವೆನು
ಸುವಿಲಾಸದಿಂದೆನ್ನಗೋರ್ವ ಶಿಷ್ಯನಂ ಕೊಟ್ಟು
ಅವನಿಗಿಳಿಸೆಂದಾ ಪಾದವಿಡಿದು ಪರಿಪರಿಯಿಂದ ಬೇಡಿಕೊಂಡನು ವಿನಯದಿಂದಾ ||೫೫||

ಮೃಡ ಮೆಚ್ಚಿ ಮಗನೆ ನೀನಳ್ಕಬೇಡ ಬಳಲಬೇಡ
ಅಡಿಮುಂದಕಿಡು ನಿನ್ನ ಸೇವಕ್ಕೆ ನಾ ಕಳಿಸಿ
ಕೊಡುವೆ ಕೆಲದಿನಕೆ ಬಿಲ್ಲಾಳಸೋಮನ ಪುತ್ರ ವೀರಮಾಳಿಂಗನನ್ನು
ಮಿಡುಕುವದಿದುಚಿತವಲ್ಲಿಳೆಯೊಳಗೆ ನೀನಂದ
ನುಡಿಯೆ ನಿಜಮಂತ್ರನಿಂದೆದ್ದ ಸುಕ್ಷೇತ್ರ ಮೇಣ್
ಪಿಡಿದ ಮೃತ್ತಿಕೆ ನಿನಗೆ ಹೊನ್ನಾಗಲೆಂದು ಪಂಚಾಕ್ಷರಿಯ ಬೋಧಿಸಿದನು ||೫೬||

ಬಳಿಕ ಶಿವಪದ್ಮಂ ಸುರಾವತಿಯ ಗರ್ಭಾಬ್ದಿಯೊಳ
ಗಿಳಿದು ಒಂದೆರಡು ಮಾಸಗತಮಾಗೆ ಶಶಿ
ಕಳೆಯಂತೆ ತೋರ್ಪ ತರುಣಿಯ ಮುಖವು ಬಿಳ್ಪೇರಿಸು ಪ್ರಕಾಶವು ಹೆಚ್ಚಿತು
ಒಳಗೊಳಗೆ ಶಿಶು ಬೆಳೆಯಲುದರ ಪ್ರದೇಶದೊಳ್
ಪೊಳೆವ ತ್ರಿವಳಿಗಳು ನೆರೆ ಮಾಸಿದವು ಬೇಗದಿಂ
ಬಳುಕುವತಿ ಬಡನಡುವು ಗಡುತರಮಾಯ್ತಿಡಿಯಿಡಲ್ಗತಿಯು ಬಹುಜಡವಾಯಿತು ||೫೭||

ಕಂಜಾಕ್ಷಿ ತರತರದ ಮಧುರಾನ್ನವನು ಬಯಸಿ
ಭುಂಜಿಸುವದಂ ಕಂಡು ಪಟ್ಟಣದೊಳಿರ್ಪ ಕೆಲ
ಮಂಜುಳಾಂಗಿಯರೊಂದುಗೂಡುತವರೊಳಗೋರ್ವಳಂದಳಿಂ ನೋರ‍್ವಳಿಂಗೆ
ಬಂಜೆತನದಿಂ ಬಳಲುತಿಹ ಸುರಾವತಿಗೆ ಸ್ಮರ
ಭಂಜನನ ಕರುಣದಿಂ ಗರ್ಭಂ ಧರಿಸಿ ಸುಖ
ಪುಂಜದೋಳ್ಕೂಡಿದಳಿವಳ ಸುಕೃತಮೆಂತುಂಟೋ ಪೇಳಲಚ್ಚರಿಯಾದುದು ||೫೮||

ಇರುತಿರುತ್ತಾ ಸುದತಿಗೊದಗಿದವು ಶರಮಾಸ
ಗಿರಿವರಂ ಪೇಳ್ದ ನುಡಿ ದಿಟವಾದುದೆಂದರಿದು
ಹರುಷಮಂ ತಳೆದು ವರವೈಕುಂಠಪುರದೊಳಿಹ ತನ್ನಣ್ಣನಾದ ಹರಿಗೆ
ಪರಮಾನ್ನ ಮೊದಲಾದ ಪಂಚಭಕ್ಷಗಳನ್ನು
ನೆರಗೈಸಿ ಕಟ್ಟೋಗರವಕೊಂಡು ಬಾರೆಂದು
ಚರನೋರ್ವನಂ ಕರೆದು ತನ್ನಯ ರಹಸ್ಯಮಂ ಪೇಳಿ ಕಳಿಸಿದಳು ತ್ವರದಿ ||೫೯||

ಆ ಚರಂ ವೈಕುಂಠಪುರಿಗೆ ಚರಿಸುತ ಹರಿಗೆ
ಸೂಚಿಸಲ್ಕಾತನತ್ಯಂತ ಕೋಪವ ತಾಳಿ
ಯೋಚಿಸಿದ ತಂಗಿಯ ಸುತನು ಪುಟ್ಟಿ ಮುಂದೆನ್ನ ಸುತೆಯಳಂನೊಯ್ವ ಭರದಿ
ಭೂಚಕ್ರದೊಳಗೆನ್ನಗಪಹಾಸ್ಯಮೆಂದು ತಿಳಿದಾ
ಚತುರಮುಖ ಜನಕ ವೈರತ್ವದಿಂ ಮನದು
ರಾಚಾರಕಿಳಿಸಿ ವಿಷಬೆರಸಿ ಕಟ್ಟೋಗರವಗೈಸಿ ಚರಿಸಿದನಲ್ಲಿಗೆ ||೬೦||

ಆ ಸುರಾವತಿಯ ನಿಜಮಂದಿರಕೆ ಹರಿ ಬರ
ಲ್ಕಾ ಸುದತಿ ನಿದ್ರೆ ಹೊಂದಿರೆ ಗರ್ಭದೊಳು
ಶಿಶುವು ತಾ ಸುಮ್ಮನಿರದೇ ಕನಸಿನೊಳು ನಿಜ ಜನನಿಗೊರದಿತು ನಿನ್ನಗಣ್ಣನಾದ
ಭಾಸುರ ಶ್ರೀಪತಿಯು ವಿಷಬೆರಸಿದನ್ನಮಂ
ಮೋಸದಿಂ ತರುವನೀಂ ಸ್ವೀಕರಿಸಬೇಡ ಸುವಿ
ಲಾಸಗೊಳಬೇಡ ಪುಸಿಯಣಿಸಬೇಡೀ ನುಡಿಯಲ್ಕೆಯಚ್ಚತ್ತಳವಳು ||೬೧||

ಅವಸರದಿ ದ್ವಾರಕೈತರಲಾಗ್ರಜನ ಮುಖವ
ನವಲೋಕಿಸುತ್ತ ಮತ್ತೊಳಗವಳು ಪೋಗಲ್ಕೆ
ಜವದಿಂದೆ ಗೃಹಬಿಟ್ಟು ಗ್ರಾಮ ಪ್ರವೇಶಮಂ ಮಾಡಿದನು ಕಪಟದಿಂದೆ
ತವೆ ಶೋಭಿಸುವ ಪುರದ ಸಾಲ್ವೀಧಿಗಳ ನೋಡಿ
ಸುವಿವೇಕದಿಂದೆ ಸಂಚರಿಸಿ ಮನಸಿನ ಕಾರ‍್ಯ
ಭುವಿಯೊಳಿನ್ನೆಂತು ಗೆಲಿಸಲಿಯನ್ನಗಪಹಾಸ್ಯವಾಯಿತೆಂದೊಳ ಸೊರಗಿದಂ ||೬೨||

ಇತ್ತ ಬರ್ಮನ ಮಡದಿ ಮರಳಿ ದ್ವಾರಕ್ಕೆ ಬಂ
ದಿತ್ತಂಡ ಮನಿಸಿನಿಂದ ಆಗ್ರಜನು ಪೋದುದಂ
ಚಿತ್ತದೊಳ್ತಿಳಿದು ಸುತಪೇಳ್ದ ನುಡಿ ದಿಟವೆಂದು ಕೆಲಕಾಲ ಕಳಿಯಲಾಗ
ಮತ್ತೇಭಿಗಾಮಿನೆಗೆ ನವಮಾಸ ತುಂಬಿ ವರ
ಕೃತ್ತಿವಾಸನ ಕರುಣದಿಂ ಶುಭಮುಹೂರ್ತದೋಳ್
ಪೆತ್ತಳು ಸುಪುತ್ರನ ಸುವರ್ಣದ ಜಡೆಗಳಿಂದಲಾ ಶಿಶು ವಿರಾಜಿಸುತಿರೆ ||೬೩||

ಶಿವನ ದಯದಿಂದಲಾ ಶಿಶು ಶಶಿಯ ತೆರದಿಂದೆ
ತವೆ ಪ್ರಕಾಶದಿ ತನ್ನ ಪಿತಮಾತೆಯರ್ಗೆ ಉ
ತ್ಸವದೋರುತಿರುಲಿತ್ತ ವೈಕುಂಠವಾಸನಾಗಿರ್ದ ಶ್ರೀಗೋವಿಂದನು
ಜವದಿಂದೆ ಪಂಚಾಂಗಮಂ ಪಿಡಿದು ವೇಷಾಂತರದಿ
ಭವನಮಂ ಬಿಟ್ಟು ಮಾರ್ಗವ ಪತ್ತಿಸಲೆ ರಂಜಿ
ಸುವ ಚಂದ್ರಗಿರಿಪುರವ ಪೊಕ್ಕು ಶಕುನವ ಪೇಳುತರಸಿನ ಮನೆಗೆ ಬಂದನು ||೬೪||

ಪಟ್ಟಶಾಲೆಯೊಳು ಕೂತುರ್ಭಕಗೆ ಮುದದಿ ಮೊಲೆ
ಗೊಟ್ಟು ವಿಶ್ರಮಿಸುವ ಸುರಾವತಿಯಂ ಕರೆದು ಶಿಶು
ಪುಟ್ಟಿದ ಮುಹೂರ್ತವು ಹೀನವು ಒಂದು ಮಾಸಕ್ಕೆ ನಿನ್ನಾಗ್ರಜೆಗೆ ಮರಣವು
ಕೆಟ್ಟೆನಯ್ಯಯ್ಯೋ ದುಷ್ಟುತ್ರನುದ್ಭವಿಸುತೊಡ
ಹುಟ್ಟಿದೆನ್ನಣ್ಣಗಪಮೃತ್ಯು ಒದಗಿಸಿತೆ ದಯ
ವಿಟ್ಟು ಮುಂದಿದಕೆ ಪ್ರಾಯಶ್ಚಿತ್ತವೇನೆನಗೆ ಪೇಳಿ ಪಾಲಿಪುದೆಂದಳು ||೬೫||

ಎಲೆ ಸುರಾವತಿ ನಿನ್ನ ಪುತ್ರನಂನೊಯ್ದು ಹರಿ
ಪುಲಿಗಳಿಹ ಗಿರಿಗಂಹರದ ಮಧ್ಯ ಕಾಂತಾರದಲಿ ಬಿ
ಡಲ್ಕಾ ಹರಿಗೆ ಮರಣ ತಪ್ಪುವದೆಂದು ಪೇಳಲಾ ತರುಣಿಮಣಿಯು
ಹಲವು ಮಾತೇನೆನ್ನ ಪ್ರಾಣಮೊಂದಿರಲಿಂಥ
ಚಲುವಸುತನಂ ಕಾಂಬೆ ಒಡಹುಟ್ಟಿದಾಗ್ರಜಕು
ವಲಯದೊಳ್ದೊರಕನೆಂದಾಲೋಚಿಸುತ ಸುತನಂ ಬಿಡುವದಕೆ ಸಿದ್ಧಳಾದಳು ||೬೬||

ಹರಿಕಪಟಮಂ ಪೇಳಿ ವೈಕುಂಠಪುರಿಗೆ ತಾಂ
ತೆರಳಲಾವರ ಸುರಾವತಿ ಮಹಾದುಃಖದಿಂ
ಮರಮರನೆ ಮರುಗಿ ಮಗನಂ ಜರೆದು ಮೌನದಿಂ ಚಾರರಂ ಕರೆದು ಭರದಿ
ತರುಳನಂ ಪಿಡಿದೆತ್ತಿ ತಂದಾಗ ತೊಟ್ಟಿಲದೊ
ಳಿರಿಸಿಜರದಂಬರವ ಪೊದಿಸುತ್ತವರ ಕರಕೆ
ಹರುಷಮಂ ತೊರೆದಿತ್ತು ಗೃಹದಿಂದ ಕಳಿಸಿದಳು ಸತ್ಪುತ್ರನೆಂದರಿಯದೆ ||೬೭||

ಬಲು ಭರದಿ ತೊಟ್ಟಿಲವ ಪೊತ್ತುಕೊಂಡಾ ಚರರು
ನಿಲಯಮಂ ಬಿಟ್ಟು ಕೂದಲಿನ ಬನದ ಹಾಲಹೇ
ವಲಿಹಳ್ಳಕ್ಕೆ ತಂದು ವಟವೃಕ್ಷಮಂ ನೋಡಿ ತೊಟ್ಟಿಲವ ನೆರಳಿಗಿಳಿಸಿ
ಬಲುಭಾಗದೊಳಿರ್ಪ ಬಾವಿಯಂ ಕಾಣುತಲಿ
ಜಲಪಾನಕಾಗಿ ಸರ್ವರು ಕೂಡಿ ತೃಷಿಯಿಂದ
ಲಲಿತಮಾನಸರಾಗಿ ಮೈಮರೆದು ತೊಟ್ಟಿಲವ ಬಿಟ್ಟು ಒಳಗಿಳಿದರವರು ||೬೮||

ಅತ್ತ ಶಂಕರನು ಈ ಶಿಶುವಿನ ಮಹಾಕಷ್ಟಮಂ
ಚಿತ್ತದಿಂದರಿದು ವಾಯುವ್ಯನಂ ಕರೆದೊರೆದ
ನಿತ್ಯಭುವಿಯೊಳಗೆ ಹೇವಲಿಹಳ್ಳದಂತ್ಯದಿಹ ವಟವೃಕ್ಷ ನೆರಳಿನಲ್ಲಿ
ಉತ್ತಮೋತ್ತುಮ ಪುತ್ರನವತರಿಸಿರುವನವನಂ
ಪೊತ್ತು ತಂದಿಳಿಸಿ ಜಲಪಾನಕ್ಕೆ ಭಟರೆಲ್ಲ
ಮೊತ್ತಗೂಡುತ ಬಾವಿಯೊಳಗಿಳಿದಿಹರು ಬಾಲನಂ ಪೋಷಿಸುವದೆಂದನು ||೬೯||

ಮೃಡನಾಜ್ಞೆಯಂತೆ ನಿಲನಾಕ್ಷಣದೊಳತಿ ವೇಗ
ದೊಡನೆ ಚಂಡಪ್ರಚಂಡದಿ ಬೀಸಲಾ ಮರಂ
ತಡಿಯದವನಿಗೆ ಬಾಗುತೇಳ್ವನಿತ್ತದೊಳಾಗಲಾ ಬಾಲನ ತೊಟ್ಟಿಲ
ಗಿಡದಂತ್ಯಶಾಖೆಗೆದು ಸಿಲ್ಕಿ ಮೇಲ್ಭಾಗದೆಸೆ
ಗಡರಲ್ಕೆ ಮಾರುತಂ ಶಾಂತರೂಪಮಂ ತಾಳಿ
ಜಡಪಾನಗೈದು ಭಟರತಿ ಭರದಿ ಬಂದು ನೋಡ್ದಡೆ ತೊಟ್ಟಿಲವಲಿಲ್ಲದಿರಲು ||೭೦||

ಭೂರಿವಿಸ್ಮಯದಿಂದಿದೇಂ ತಿಳಿಯದೆಂದು ತ್ವರ
ಸಾರಲವರೈವರೆದೆಗುಂದಿ ಕಂಪಿಸಿ ರಕ್ತ
ಗಾರಿ ತಕ್ಷಣದೊಳಸುವಳಿದರಾ ಶಿವಕಲಾಭರಿತನಸು ಮಹಿಮೆಯಿಂದ
ಮಾರಾರಿ ಶಿಶುವಿನಂ ನೋಡಬೇಕೆಂದು ಗಂ
ಭೀರದಿಂ ಗಿರಿಜಾತೆ ಸಹಿತ ಸುರಪತಿ ಬ್ರಹ್ಮ
ನಾರದಾದಿ ಪ್ರಮುಖ ಮುನಿಗಳಂ ಕೂಡಿ ಹೇವಲಿಹಳ್ಳಕ್ಕೆ ತಂದರು ||೭೧||

ವಟವೃಕ್ಷದಗ್ರದೋಳ್ನೇತಾಡ್ವ ತೊಟ್ಟಿಲವ
ನಿಟಿಲಾಕ್ಷ ಕಂಡು ಸುರನಾರಿಯರ ಕರದಿಂದೆ
ಪಟುಪರಾಕ್ರಮಿ ಸಿದ್ಧಬೀರನೆಂಬಭಿದಾನವಿಡಿಸಲಾಗುಮೆಯು ಮುದದಿ
ಲಟಲಟನೆ ಮುದ್ದಿಟ್ಟು ಭಸ್ಮಮಂ ಧರಿಸಿ ದೂ
ರ್ಜಟಿಯ ಸತ್ವವ ಬಲಿದು ಭೂಮಂಡಲದಿ ಘನಾ
ರ್ಭಟದಿ ರಿಪುಗಳ ಗೆದ್ದು ಭುವನದೋಳ್ಬಾಳೆಂದು ಪರಸಿದಳು ಪಲತೆರದೊಳು ||೭೨||

ನಂದಿರೂಢನು ಘನಾನಂದದಿಂ ಬಾಲಕನ
ಮಂದಚರಿತಗಳನ್ನು ಮಂದಹಾಸದಿ ಪೇಳಿ
ಇಂದುವದನಕೆ ಮುದ್ದುಗೊಟ್ಟು ಸುಪ್ರೇಮದಿಂ ಅಂಬರವನಂಗ ಕೊಡಿಸಿ
ಬಂದ ತ್ರಿದಶರ್ಗೆ ನಿರ್ಬಂಧಪಡಿಸಿದ ಮುಂದೆ
ಕಂದನಂ ನಾವಗುಂಬಿಡದೆ ಸಂರಕ್ಷಿಸುವ
ದೆಂದು ವಿಧವಿಧದಿಂದೆ ಪೇಳ್ದನವಸರದಿ ಕೈಸನ್ನೆಯಂ ಮಾಡುತಾಗ ||೭೩||

ವರಸುರ್ವಾಣಧೇನುವಿಗೆ ನಿತ್ಯದೊಳು ಪಾ
ಲ್ಗರಿದು ಪಾಲಿಸುವಂತೆ ದಿಕ್ಪಾಲರಂ ಕಾವ
ಲಿರುವಂತೆ ಮಾರುತನಿಗೆ ಶಾಂತಿಗೊಳುವಂತೆ ಸುರವರನೀಕ್ಷಿಸುವಂತೆ ನೇಮ
ವಿರಿಸಿ ಪರಮೇಶ್ವರಂ ಪರಿತೋಷದಿಂದ ತ
ತ್ತರುಳನಂ ತೊಟ್ಟಿಲದೊಳಿಟ್ಟು ರಜತಾಚಲದ
ವರಪಥವ ಪಿಡಿದು ಸುಕ್ಷೇತ್ರಗಳ ನೋಡುತ್ತ ಕೊಲ್ಲಿಪಾಕಿಗೆ ಬಂದನು ||೭೪||

ರಾಜಬೀದಿಯೊಳು ಸಲೆ ರಾಜಿಸುವ ತತ್ಪುರದ
ರಾಜನಾರಾಮದೊಳಗಿರ‍್ವ ವೃಕ್ಷದ ಕೆಳಗೆ
ರಾಜಶೇಖರನಿಳಿದು ಜಪತಪಕ್ಕನುವಾಗಿ ಕೂತಿರೆ ಕುತೂಹಲದೊಳು
ಓಜಿಯಿಂ ಸೋಮೇಶನೃಪ ಬಂದು ಶಿವನ ಪಾದ
ರಾಜೀವಕೆರಗಿ ಪೇಳಿದೆನ್ನ ಗೃಹಕೈದು
ಭೋಜನವ ಮಾಳ್ಪುದೆಂದತ್ಯಧಿಕ ಭಕ್ತಿಯಿಂದ ಕರಮುಗಿದು ಬೇಡಿಕೊಂಡ ||೭೫||

ಜಗದೀಶ್ವರಂ ನೃಪನ ನುಡಿಗೊಪ್ಪಿ ಪುಳಕದಿಂ
ದಗಜಾತೆ ಸಹಿತ ರಾಜಾಲಯಕ್ಕೈ ತರಲು
ಲಗಿಬಿಗಿಯೊಳಾ ಭೂಪ ಸಾಸಿರೆಡೆಗಳ ಮಾಡಿ ಭಜಿಸಿ ಪೂಜಿಸಿದನಾಗ
ನಿಗಮವೇದ್ಯನು ನರೇಂದ್ರನ ದಿವ್ಯ ಭಕ್ತಿಯ ಸು
ಬಗೆಯ ತಿಳಿವದಕೆ ಬಿಟ್ಟೋಡಿದನು ಬಯಲಾಗಿ
ಪಗಲ ಮಧ್ಯದೊಳು ಮಾದಿಗರ ಚನ್ನಯ್ಯನಾಲಯವನೊಳಪೊಕ್ಕ ಭರದಿ ||೭೬||
ಚನ್ನಯ್ಯ ಸಾಷ್ಟಾಂಗಗೈದೆದ್ದು ಬಂದ ಬಗೆ
ಯನ್ನು ಕೇಳಲ್ಕೆ ಶಿವ ಕ್ಷುದ್ಭಾಧೆಯಿಂ ಬಂದೆ
ಅನ್ನವನು ನೀಡಿಸಲವಂ ಪೇಳ್ದ ನಾವು ಮಾದಿಗರು ನಿಮಗುಚಿತಮಲ್ಲ
ಇನ್ನಿಲ್ಲಿ ನಿಲ್ಲದಾಚೆಗೆ ನಡಿಯರೆನೆ ಮೃಡಂ
ಮುನ್ನನಾಂ ಬಂದ ಮನೆಯಿಂ ಬಿಟ್ಟು ಮುಂದೆಸೆಗೆ
ಬನ್ನ ಬಟ್ಟಡಿಯಿಡಲ್ಕೊಲ್ಲೆ ನೀಡೆನಗೆ ಪಾಕವಂ ತಂದು ಪ್ರೀತಿಯಿಂದ ||೭೭||

ನಂಬಿಗೆಯನಿಟ್ಟು ಚನ್ನಯ್ಯ ಪಾಕವನು ತಂ
ದಂಬಿಕಾ ವಲ್ಲಭಗೆ ನೀಡಿ ನೀ ಸೇವಿಸಂ
ತೆಂಬ ವಾಕ್ಯವ ಕೇಳಿ ಘನಹರುಷದಾಳಿ ಮುಗುಳೆಂದನಾ ಪರಮಾತ್ಮನು
ಡಾಂಭಿಕರ ಮನೆಗೆ ಪೋಗುವೆನೆ ನಾಂ ನಿನ್ನಂತೆ
ಅಂಬಲೆಯ ನೀಡಿದರೆ ಸೇವಿಪನೆ ನೀನೆನ್ನೂ
ಳಿಂಬಿಂನಿಂ ಕೂತು ಸಹಭೋಜನವ ಮಾಡಿದರೆ ಸ್ವೀಕರಿಸುತಿಹನೆಂದನು || ೭೮ ||

ಹರನು ಚನ್ನಯ್ಯನೋಳ್ಸಹ ಭೋಜನಂಗೈದು
ಪರಮಸಂತೋಷದಿಂದಿರಲಿತ್ತ ಭೂಪಾಲ
ಅರಮನೆಯೊಳಭವನಿಲ್ಲದೆ ಬಗೆಯನರಿತು ಪರಿಪರಿಯಿಂದ ಚಿಂತಿಸಿದನು
ಭರದಿಂದ ಮಾದಿಗರ ಮನೆಯಿಂದ ಪರಮಾತ್ಮ
ಚರಿಸಿ ಮಾಯದಿ ಬಂದು ಮೋದದಿದರಮನೆಯೊ
ಳಿರುತಿರಲ್ಕರಸ ಕಂಡಿದುವರೆಗೆ ಮಾಯದಿಂದೆಲ್ಲಿರ್ದಿರೆಂದು ನುಡಿದ ||೭೯||

ಎಲೆ ಭಕ್ತ ಕೇಳು ಮಾದಿಗರ ಚನ್ನಯ್ಯನೊಳು
ಸಲೆ ಪಾಕಗೈದೆ ನಿಮ್ಮಯ ಭಕ್ತಿಗೆಣೆಯುಂಟೆ
ಕಲಿಯುಗದ ಸುಖಸಾಕು ಶಿವಪುರಿಗೆ ಬಾರೆಂದಭಯ ಕೊಟ್ಟ ಸರ್ವೇಶನು
ವಿಲಸಿತ ಮಧ್ಯಮಾರ್ಗದೊಳ್ ವಟವೃಕ್ಷ ಕಂಡು ಆ
ತಳದಿದರ ಬುಡದಿ ವಾಸಿಸಿದಂಗನೆಯರು ಗರ್ಭವ ಧರಿಸಲೆಂದು ಪೇಳಿ ||೮೦||

ಆ ವೃಕ್ಷಕ್ಕೆ ವರವಿತ್ತು ಶಂಕರಂ ಮುಂದಕ್ಕೆ
ತಕ್ಷಣವೆಗಮಿಸಿನು ದೇವಗನ್ನಿಯರಿತ್ತ
ಸಕ್ಷಮದಿ ತತ್ತರುವಿನೆಡೆಗೆ ಬಂದದರ ನೆರಳಲ್ಲಿ ವಿಶ್ರಮಿಸುತಿರಲು
ಅಕ್ಷಯಾತ್ಮಕನ ನಿರ್ಬಂಧದಂತಬಲೆಯರು
ಕುಕ್ಷಿಗಡುತರಮಾಗಿ ನವಮಾಸ ಕಳೆದೋರೆ
ಈಕ್ಷಿಸುತ ತಂತಮ್ಮೊಳಗೆ ಚಿಂತಿಸಿದರು ಕುಂದಿಟ್ಟನೇತಕೆ ಶಂಕರ ||೮೧||

ಸುರರಿದಂ ಕಂಖಡೊಡೆಮ್ಮನು ದಂಡಿಸುವರೆಂದು
ಪರಿಪರಿಯೊಳೆತ್ನೈಸಿ ಚಳ್ಳುಗುರಿನಿಂದುದರ
ಚರಚರನೆ ಸೀಳಿ ಶಿಶುಗಳನೈದು ಮೊತ್ತಗೂಡಿಸಿ ತೆಪ್ಪದೊಳು ಹಾಕುತ
ತವರನದಿಗೆ ಬಿಟ್ಟು ತಮ್ಮಯ ಸ್ಥಲಕೆ ಸಾರಲವು
ಹರಿದು ಬಂದೊಂದು ತಟಕತಿ ಶೀಘ್ರದಿಂ ಬಂದು
ವರಿಯಲಿದು ಅತಿಚೋದ್ಯಮವಾಗಿ ಕಾಂಬುವದುಯೇನೆಂಬೆ ಶಂಕರನ ಮಹಿಮೆ ||೮೨||

ನದಿಯ ತಟದಲಿ ಹಟ್ಟಿ ಚಾಮರಾಯೊಂಬೋರ್ವ
ಮುದಿಮಾನುಷನು ಕುರಿಗಳಂ ಕಾವುತಿರಲವನ
ಬದಿಗೆ ತಿಪ್ಪಂಬಲ್ಕಾ ಪಂಚಶಿಶುಗಳಂ ದಿಟ್ಟವರಿದೀಕ್ಷಿಸಿದನು
ಬೆದರದೆ ಅವುಗಳಂ ಕೊಂಡು ಮನೆಗೆ ಬಂದವಸ
ರದಿ ಸದಮಲಜ್ಞಾನಿ ಶಾಂಭವಿಯಂಬ ತನ್ನ ನಿಜ
ಸುದತಿಯಂ ಕರೆದು ಕೂಸುಗಳೈದವಂ ಕೊಟ್ಟು ಹರುಷಾಬ್ದಿಯೋಳ್ಮುಳಿಗಿದಂ ||೮೩||

ಸತಿ ಶಾಂಭವಿಯು ಮುಪ್ಪಿಗೀ ಶಿಶುಗಳೆನ್ನಗೆ ದೊ
ರೆತವೆಂದು ಸ್ತ್ರೀಯರಂ ಕರೆಸಿ ತೊಟ್ಟಿಲಳಿಟ್ಟು
ಹಿತದಿ ಲಕ್ಷ್ಮೀ ಮಾಯಿ ಮಾಕಾಂಳಿ ಮಂಕಮ್ಮ ಅಕ್ಕಮ್ಮನೆಂಬಾಖ್ಯವ
ಚತುರತೆಯೊಳಿಟ್ಟು ಸುತೆಯರಂ ಕಂಡು ಹಿಗ್ಗುತಲು
ಸತತೆ ಪಾಲ್ಪೆಣ್ಣೆಯನ್ನಿತ್ತು ಬೆಳಸುತ್ತಲಿರೆ
ಮತಿವಂತರಾಗಿ ಪ್ರಾಯಕ್ಕೆ ಬರಲವರು ಕುರಿಗಾಯ್ವದಕೆ ಪೋಗ್ವೆವೆನಲು ||೮೪||

ಮಾತಾಪಿತರು ಮೋಹದಿಂದಪ್ಪಣೆಯನು ಕೊ
ಟ್ಟಾತುರದಿ ಕಳಿಸಲ್ಕೆ ಕೋಲು ಕರದಲಿ ಪಿಡಿದು
ಪ್ರೀತಿಯಿಂದೈವರು ಕುರಿಗಳಂ ಮೇಸುತ್ತ ಹಾಲಹೇವಲಿಹಳ್ಳಕ್ಕೆ
ಖ್ಯಾತದಿಂದೈತರಲ್ಕಾತ ವೃಕ್ಷದ ಮೇಲೆ
ನೇತಾಡುತಿಹ ತೊಟ್ಟಿಲದೊಳಿರ್ಪ ಶಿಶು ಪರಮ
ಪ್ರೀತಿಯಿಂ ಚೀತ್ಕಾಗಧ್ವನಿಗಯ್ಯಲಾಗವರಿದೇಂ ಚೋದ್ಯವೆಂದರಾಗ ||೮೫||

ಅವರೈವರಕ್ಕತಂಗಿಯರೊಳಗೆ ಭೇದವು
ದ್ಫವಿಸಿ ತಶ್ಚಿಶುವನ್ನನಗೆ ನನಗೆನ್ನುತ ಮನದಿ
ತವೆವಾದಿಪುದಕೆ ಪ್ರಾರಂಭಿಸಲ್ಕೆ ಅಕ್ಕಮ್ಮನೊಂದು ಯುಕ್ತಿಯಂತೆಗೆದಳು
ಶಿವನೆಮ್ಮೊಳಂತಃಕರುಣವಿಟ್ಟು ತರುಳನಂ
ನವರಸದೊಳಾರುಡಿಯೊಳಿಳಿಸುವನೋ ಅವರ್ಗೆ ಸ
ಲ್ಲುವದೆಂದು ಪಂತಮಂ ಗಟ್ಟಿ ಪೇಳಿದಳು ನಿಷ್ಕಾಪಟ್ಯ ಬುದ್ಧಿಯಿಂದ ||೮೬||

ಪರಮೇಶ್ವರನಂ ಪ್ರಾರ್ಥಿಸುತ ಪಂಚಸ್ತ್ರೀಯರಾ
ತರುವಿನ ಕೆಳಗೆ ಪಂಕ್ತಿಗೊಂಡುಡುಡಿಯನೊಡ್ಡಿ ನಿಂ
ತಿರಲಾ ಭವ ಆ ಸಿದ್ಧಬೀರನಂ ಅಕ್ಕಮ್ಮನ ಉಡಿಯೊಳೊಗೆದನು ಸೂಕ್ಷ್ಮದಿಂ
ಚರಣವಿಲ್ಲದ ಪೆಳೆವನಡಿಗೆ ಗಂಗೆಯು ತಾನೆ
ಚರಿಸಿ ಬಂದಂತೆ ದಾರಿದ್ರನಾಲಯಕೆ ವರ
ಸಿರಿದೇವಿ ಮೆಚ್ಚಿ ಬಂದಂತೆಮಗೆ ಶಿಶು ತಾನೆ ದೊರೆತುದೆಂದಾ ಮೋದದಿ ||೮೭||

ಮಗುವಿನ ಸುಲಕ್ಷಣಗಳಂ ನೋಡಿ ತವಕದಿಂ
ಮೊಗಕೆ ಮೊಗವಿಟ್ಟು ಮುದ್ದಂಗೈದು ದಿನಗಳಿಯ
ಲಗಜಾರಮಣನು ಅಕ್ಕಮ್ಮನಿಗೆ ನಿಜರೂಪದೋರಿ ಸನ್ಮೋಹದಿಂದೆ
ಮಿಗೆ ರಂಜಿಸುವ ಸಿದ್ಧಬೀರನಿತಿಹಾಸಮಂ
ಬಗೆಬಗೆಯೊಳಾದ್ಯಂತ ತಿಳಿಸುತಲಿ ಸುತೆಯೆ ನಿ
ನ್ನಗೆ ಸುಖವನಿತ್ತಾಸುಬಾಲಕಂ ಮುಂದೆ ಪಾಲಿಪನೀಗಲವನ ಪೊರೆಯ್ಯೆ ||೮೮||

ಸಿದ್ಧಬೀರನ ಶಿರದೊಳಭವ ಕರವಿಟ್ಟು ಭುವ
ನೋದ್ಧಾರವಾಗಲಿ ಸಕಲಯಂತ್ರ ಮಂತ್ರಗಳು
ಸಿದ್ಧಿಯಾಗಲಿ ಪೇಲಿದನೃತ ವಚನಗಳೆಲ್ಲ ಭೂವಲಯದೊಳಗೆ ನಿರುತ
ಬದ್ಧವಾಗಲಿ ರಿಪುಗಳಂ ಜೋಡುವದಕೆ ಸ
ನ್ನುದ್ದರಾಗಲಿ ಮುಂದೆ ಶ್ರೀ ರೇವಣಾರಾಧ್ಯಂ ಪ್ರ
ಸಿದ್ಧಗುರು ನಿನಗಾಗಲೆಂದು ಆಶೀರ್ವದಿಸಿ ಕೈಲಾಸಗಿರಿಗೈದಿದಂ ||೮೯||

ಈ ಸುಚಾರಿತ್ರಮಂ ಬರದೋದಿದರ್ಗೆ ಮೇಣ್
ಲೇಸಾಗಿ ಯಿದರರ್ಥವಾಧ್ಯಾಂತ ಪೇಳ್ದರ್ಗೆ
ಬೇಸರಿಯದುರೆ ಭಕ್ತಿಯಿಂದ ಕೇಳಿದವರ್ಗೆ ಪದುಳದಿಂ ಪಠಿಸಿದರ್ಗೆ
ಭಾಸಿತ ಸಕಲ ಭೋಗಭಾಗ್ಯಮೋಕ್ಷಂಗಳ ವಿ
ಲಾಸದಿಂದಿತ್ತುಕುರಿತೌಘಮಂ ಸಂಹರಿಸಿ
ವಾಸ ರಸ್ತಾಪುರ ಶ್ರೀ ಶರಭಲಿಂಗೇಂದ್ರ ರಕ್ಷಿಸುವನಿಹಪರದೊಳು ||೯೦||

ಇಂತೆಬಲ್ಲಿಗೆ ಶರಭೇಶ್ವರ ಪಾದಾಬ್ಜಭೃಂಗನು
ವಿಶಿಷ್ಠವಿದ್ವಜ್ಜನ ವಿಧೇಯನು ಆದ ಭೀಮನಾಯಕ
ಕವಿಯಂ ಪ್ರಣೀತಮಪ್ಪ ಹಾಲ್ಮತೋತ್ತೇಜಕ ಪುರಾಣದಲ್ಲಿ
ಅಂತು ಸಂಧಿ ೭ಕ್ಕಂ ಪದನು ೩೭೦ಕ್ಕೆ ಮಂಗಲಂ ಮಹಾಶ್ರೀಶ್ರೀಶ್ರೀ