ಸೂಚನೆ ||

ಇಂದುಗಿರಿ ಪುರಬಿಟ್ಟು ಬೆಳ್ಳಗುತ್ತೀಪುರಕೆ
ಬಂದಲ್ಲಿ ನಿಂದು ವೈಕುಂಠಕ್ಕೆ ಪೋಗಿ ಹರಿ
ನಂದನೆಯ ಪಾಣಿಗ್ರಹಣಗೈದು ಶಿಷ್ಯರಿಲ್ಲದಕೆ ಶಿವಪುರಿಗೆ ಪೋಗ್ವಂ

ಚಿದ್ರೂಪ ಚಿನ್ಮಯ ನಿರಂಗಮುನಿಸಂಗ ಹೈ
ಮಾದ್ರಿಜಾಹೃದ್ವನಜ ಭೃಂಗಪುರಭಂಗ ವಿಲ
ಸಾದ್ರಜರಾಜಸಖತುಂಗ ನಿಜಲಿಂಗ ಪನ್ನಂಗಧರ ಮಂಗಲಾಂಗ
ಕ್ಷುದ್ರವ್ರಜೋಪದ್ರನಾಶ ಪರಮೇಶ ಭವ
ಚಿದ್ರಸುರವರನುತ ಸುಖಂಕರಸು ಶಂಕರ ಸು
ರದೃಮ ಗಿರೀಶ ವೀರಭದ್ರ ಪಿತರುದ್ರ ಭವನೇಶನೆಮ್ಮಂ ಪೊರೆಯಲಿ ||೧||

ಅಕ್ಕಮ್ಮನತ್ಯಧಿಕ ತ್ವರದಿ ಕುರಿಗಳನು ತ
ನ್ನಕ್ಕನವರಿಂ ಮೊತ್ತಗೊಳಿಸಿ ತೊಟ್ಟಿಲವ ಪೊ
ತ್ತಕ್ಕರದಿ ಪಥವಿಡಿದು ಐವರೊಂದಾಗಿ ಸ್ವಗೃಹಕೆ ಬಂದರು ಬೇಗದಿ
ಚಿಕ್ಕ ಬಾಲನಂ ಕಂಡು ಮಾತಾಪಿತರ್ಗಳಿದು
ಸಿಕ್ಕಿತೆಲ್ಲೆಮೆಗೊರೆಯಬೇಕೆಂದೆನಲ್ಕವರು
ಮುಕ್ಕಣ್ಣ ಪೇಳ್ದ ಸಂಗತಿಯ ವಿಸ್ತಾರಮಂ ಪೇಳಿಕೊಂಡರು ಮುದದೊಳು ||೨||

ಪಿತಮಾತೆಯರು ಕೇಳಿ ಸಂತುಷ್ಟರಾಗಿ ವರ
ಸುತನಸಮಮಾಡಿ ಶಿವಸಿದ್ಧಬೀರನಂ ಸದಾ
ಹಿತದಿ ಪಾಲಿಸುತ್ತಿರಲ್ಕೆರಡು ವರುಷಗಳು ತುಂಬಿದವಾಗ ಸುಕುಮಾರಗೆ
ಚತುರತನದಿಂ ಬಾಲಲೀಲೆಯಂ ತೋರಿ ತನ
ಗತಿ ಪ್ರೇಮಳಾದಕ್ಕನೊಳು ತೊದಲ್ನುಡಿಗಳಂ
ಶೃತಿಸುವದಕಾರಂಭಗೈದು ದಟ್ಟಡಿಯಿಡುತ ಚರಿಸುವದಕನುವಾದನು ||೩||

ತಮ್ಮನ ಸುಬಾಲಲೀಲೆಗಳು ಕಂಡಕ್ಕಮ್ಮ
ಸುಮ್ಮಾನಗೊಳುತಿರಲ್ಕೊಂದು ದಿನ ಸಿದ್ಧಬೀ
ರಂ ಮಹಾಕೋಪದಿಂ ಮರಿಗಳುಡೆಂ ಜಲದ ಕ್ಷೀರವಂ ತಂದು ತಂದು
ದುಮ್ಮಾನಗೊಳದೆನಗೆ ಕುಡಿಸಿದಿರಿದುವರಿಗೆ ಮುಂದಂ
ಮಮ್ಮ ಸಾಕುಸಾಕೆಂದು ಪಾಲೊಲ್ಲೆನೆಂ
ದುಮ್ಮಳಿಸಲವಳು ಘನವೆಸನಗೊಂಡು ಗಜಾರಮಣನ ಸನ್ನುತಿಗೈದಳು ||೪||

ಇಂದುಧರ ಮೆಚ್ಚಿ ಖೇಚರಗೆ ಪೇಳಲ್ಯಾತ
ಬಂದನಕ್ಕಮನ ನಿಜಲಯಕ್ಕೆ ಮೋದದಿಂದೆನೆಲೆ
ಹಿಂದೊಂದು ದಿನ ಸಕಲಸುರಯಕ್ಷರೊಂದಾಗಿರಲೈಭವನ
ಸುಂದರಿ ಸುಪಾರ್ವತೆಗೆ ಗಂಧರ್ವನಾರಿತಾಂ
ನಿಂದಿಸಲ್ಕಾ ಶಿವೆಯು ಕಡುಕೋಪವನು ತಾಳು
ಮಂದಭಾಗ್ಯಳೆವ ಸುಂದರಿಯೊಳಗೆ ಕುರಿಯಾಗಿ ಪುಟ್ಟೆಂದು ಶಾಪವಿತ್ತಳು ||೫||

ಅಗಲಾ ಸುರನಾಗಿ ಬೆದರಿ ಬಾಯ್ಬಿಟ್ಟು ಬೆಂ
ಡಾಗಿ ಕರಮುಗಿದು ನಿಶ್ಸಾಪ ಕೇಳಿದೊಡೆ ಭೂ
ಭಾಗದೊಳ್ ಸಿದ್ಧಬೀರೇಶನೆಂಬೋರ‍್ವ ಘನಮಹಿಮ ಜನಿಸುವವನಿಗೆ
ರಾಗದಿಂ ನಿನ್ನ ಮೊಲೆಗಳಿಂ ಪಾಲ್ಗರಿದು
ಬೇಗದಿಂ ಕೊಡಲವಂ ಸ್ವೀಕರಿಸಿದಡೆ ಶಾಪ
ನೀಗಿ ಮೊದಲಿನ ರೂಪ ಬರುವದಿದು ಪುಸಿಯಲ್ಲವೆಂದು ಪೇಳಿದನವಳಿಗೆ ||೬||

ಅದರಂತೆ ಗಂಧರ‍್ವನಾರಿ ತಾಂ ನಿನ್ನ ಕುರಿ
ಯುದರದೋಲ್ಸುಟ್ಟಿರ್ಪಳಾ ಕುರಿಯ ಗುರ್ತು ಸ
ಮ್ಮುದದಿ ಕೇಳದು ಕಂಚುಬೋಳಿಯ ಸುಗುಡಿಯು ಮತ್ತೆ ಕೊರಳಲ್ಲಿ ಮಲೆಯಿಂದ ಮೆರೆವದು
ಇದನೆಲ್ಲ ನೀನರಿದು ಹಿಂಡಿನೋಳ್ಪಡುಕಿ ಚಂ
ದದಿ ತೋರ್ಪುಗಳ ಮೊಲೆಯ ಪಾಲ್ಗರಿದು ಪ್ರೇ
ಮದಿಂ ಚದುರೆ ನಿನ್ನನುಜನೆನಿಸಿದ ಸಿದ್ಧಬೀರಂಗೆ ಕುಡಿಸೆಂದು ಬಯಲಾದನು ||೭||

ಅಕ್ಕಮ್ಮನತಿ ಶೀಘ್ರದಿಂದೆದ್ದು ಹಿಂಡಿನೊಳ
ಪೊಕ್ಕು ಖೇಚರನೊರೆದ ಕಂಚು ಬೋಳಿಯನು ಹಿಡಿ
ದಕ್ಕರದಿ ಹರನಾಮಂ ಸ್ಮರಿಸಿ ಕೊರಳಮಾಲೆ ಪಿಡಿಯಲ್ಕೆ ಪಾಲ್ಗರಿಯಲು
ಚಕ್ಕನೆ ಮನೆಗೆ ಬಂದು ಸಿದ್ಧಬೀರಗೆ ಕೊಡಲು
ತಕ್ಕ ಪಾಲೆಂದು ಸೇವಿಸಲಾಕೆ ನಿತ್ಯದೊಳು
ಮಿಕ್ಕ ಕುರಿಗಳನುಳಿದು ಸುಗುಡಿಯ ಕೊರಳ ಮೊಲೆಯು ಕರೆಯುತಿರ್ದಳು ನೇಮದಿ ||೮||

ಈ ಪರಿಯೊಳವನು ಕೆಲಗಾಲಗಳೆದೆನ್ನದೋ
ಳಾಪೇಕ್ಷ ಮಾಡಲಾಗಕ್ಕಮ್ಮ ತನ್ನಗೆಪ
ರೋಪಕಾರವಗೈದ ಕಂಚುಬೋಳಿಯ ಬಳಿಗೆ ಬಂದು ಸಂಪ್ರೀತಿಯಿಂದ
ನೀ ಪರಮಪುಣ್ಯಯುತ ಕಕುರಿಯಂದೆನ್ನುತ್ತ ನಿ
ಷ್ಕಾಪಟ್ಯದಿಂ ಪೂಜೆಗೈಯ್ಯಲದು ಜವದಿ ನಿ
ಶ್ಯಾಪವಾಗುತ್ತಸುವಳಿದು ಬಿತ್ತು ಭೂಮಿಯಲಿ ಕಂಡು ಬೆರಗಾದಳವಳು ||೯||

ಸತ್ತ ಕುರಿಯಂ ತಮ್ಮ ಹಟ್ಟಿಯೊಳು ಹೂಳಿ ಏಕ
ಚಿತ್ತದಿಂದಲಿ ಸಮಾಧಿಯಂಗೈದು ಪೂಜಿಸದೆ
ಳುತ್ತುಂಗ ಬಲ ಸಿದ್ಧಬೀರ ಚಿಕ್ಕಾಟಕ್ಕೆ ಪೋದ ಸರಿಬಾಲರೊಳಗೆ
ಚಿತ್ತರದ ಚಂಡಿನಾಟವ ಕಂಡು ಮನವನದ
ಕಿತ್ತು ಬಂದಕ್ಕನಿಗೆ ಕಂತುಕವ ಮಾಡಿಸೆಂ
ದೊತ್ತರದಿ ಕರೆಕರೆಯಗಯ್ಯಲವಳನುಜಂಗೆ ಪೇಳಿದಳದೆಂತೊಡೆ ||೧೦||

ಉಂಡಾಡು ಮನೆಯೊಳಗೆ ಚಂಡಿನಾಟಕ್ಕೆ ನೀಂ
ಕಂಡ ಹುಡುಗರ ಕೂಡಿಕೊಂಡು ಪೋದರೆ ನಿನಗೆ
ದಂಡಿಸುವೆನೀಗವರ ಪಂಡಿತರು ಮೆಚ್ಚುವರೆ ಪುಂಡ ಶಿವಸಿದ್ಧಬೀರ
ಭಂಡಪೋರರುಗಳಿಹ ತಂಡಕ್ಕಡಿಯನಿಡಲು
ಮಂಡೆಗೆ ಬಡಿದು ಮಾನ ಕೊಂಡು ಬಿಡುವೆನು ಮನದಿ
ಖಂಡಿತದ ನುಡಿ ಪೇಳ್ವೆ ಹಿಂಡು ಜನರೊಳು ನೀಂ ಪ್ರಚಂಡನೆನಿಸದಿರೆಂದಳು ||೧೧||

ಬೇಡ ಕಂಡುಕದಾಟ ಕೀಳಹುಡುಗರ ಬೇಟ
ಮಾಡು ಮಧುರದ ಊಟಯನಗಿಡುತಿಹರೆ ಕಾಟ
ಬೇಡಿಕೊಂಬುವೆನಕಟ ಇಡುವದೆನ್ನೊಳು ನೋಟಕರ ಕರೆಯದೊಳಿತಲ್ಲವು
ಕೇಡು ಬರುವುದು ಸಿದ್ಧಬೀರ ಕೇಳಿದು ಬದ್ದ
ಕೋಡಿ ಆಟಕೆ ಸಿದ್ಧನಾಗುವರೆ ಸನ್ನುದ್ಧ
ನಾಡೊಳಗಿರುವ ವೃದ್ಧಜನರಿಗಿದು ವಿರುದ್ಧಯಂದು ಬುದ್ಧಿಯ ಪೇಳ್ದಳು ||೧೨||

ಸಡಗರದಿ ಅಕ್ಕಮ್ಮನಂದ ನುಡಿ ಕೇಳದಿರೆ
ದಿಡಿಗಿನಿಂ ಧನ ಕರದಲಿ ಕೊಂಡು ಕಮ್ಮಾರ
ರೊಡಿಯ ಪದ್ಮಣ್ಣನ ಬಳಿಗೆ ಪೋಗಿ ರತ್ನಕಂಡುಕಗೈಸಿ ವೀಯಲಾಗ
ಮೃಡಸಿದ್ಧ ರೇವಣನು ಬಂದು ಬೀರೇಶಂಗೆ
ಸಡಗರದಲಿ ಲಿಂಗದೀಕ್ಷೆಯನಿತ್ತು ಮುದದಿಂದ
ಮೃಡನ ಪಂಚಾಕ್ಷರೀ ಮಂತ್ರಮಂ ಬೋಧಿಸುತ್ತ ಸಿದ್ಧ ಪೋಗುತಲಿತ್ತ ||೧೩||

ಅಂಗಜಹರನ ಸ್ಮರಿಸಿ ಕಂಡುಕವನೆಗರಿಸುತ
ಮಂಗಲಾತ್ಮಕ ಸಿದ್ಧರೇವಣನ ನುತಿಸಿ ನಿಲು
ವಂಗಿ ಮುಂಡಾಸ ಧರಿಸುತ ಸಿದ್ಧಬೀರ ತಾಂ ಬಂದ ನಡುಬೀದಿಯೊಳಗೆ
ಅಂಗಡಿಗಳಿಹ ಬೈಲ ಮುಂಭಾಗದೊಳಗಲ್ಲಿ
ಸಂಗನಬಸವನೆಂಬ ತುಂಗಧನಿಕನ ಪುತ್ರ
ಲಿಂಗಬಸಪ್ಪನಿರಲವಗೆ ಕಂತುಕದಿಂದೆ ಪೊಡೆಯಲಸುವಳಿದು ಬಿದ್ದ ||೧೪||

ನೋಡಿದಂ ಬೀರೇಶ ಬಿದ್ದ ಬಾಲಕನ ಬಿ
ಟ್ಟೋಡಿದಂ ಮೆಲ್ಲನಡಿಯಿಡುತ ಬರುಬರುತ ತ್ವರೆ
ಮಾಡಿದಂ ಬೇರೆ ಪಥವಿಡಿದು ಸ್ವಗೃಹಕೆ ಬಮದೊಡಿಯ ಗುರುವಿನ ಧ್ಯಾನದಿ
ಕೂಡಿದಂ ಭಜಿಸಿ ಪೂಜಿಸಿ ನಮಿಸಿ ವರಗಳಂ
ಬೇಡಿದಂ ತದ್ಗುರುವಿನಮಳ ಮಹಿಮೆಗಳ
ಕೊಂಡಾಡಿದಂ ವೆಸನವಿಲ್ಲದೆ ಧೈರ‍್ಯಪರನಾಗಿ ಮನೆಯೊಳಗೆ ವಾಸಿಸಿದನು ||೧೫||

ಇತ್ತ ಕೆಲಬಾಲರೊಂದಾಗಿ ಭರದಿಂ ಪೋಗಿ
ಸತ್ತ ಹುಡುಗನ ತಂದೆತಾಯಿಗುಸುರಲ್ಕವರು
ತತ್ತರದಿ ರೋಧಿಸುತ್ತೆದೆಗುಂದಿ ಮನನೊಂದು ಪರವಶದಿ ಬಂದರಾಗ
ಮತ್ತಮಾ ತರುಳ ಮೃತಿ ಹೊಂದಿರ್ದುಂ ನೋಡಿ
ಸುತ್ತನಿಂದಿರ್ದ ಬಾಲರ್ಗೆ ಕೇಳಿದರಿವನ
ನೆತ್ತಿಯೊಳ್ಪೊಡೆದ ಪಾಪಿಷ್ಟನಾಮಂ ಯಮಗೆ ತ್ವರದಿಂದೆ ಪೇಳೆಂದರು ||೧೬||

ಬೀರನೆಂಬುವ ಹುಡುಗ ಮಣಿಮಯದ ಚಂಡಿನಿಂ
ಹಾರಿ ಹೊಡೆಯಲು ಲಿಂಗಬಸವ ಭೂಮಿಗೆ ಬಿದ್ದು
ಭೂರಿಶ್ರಮೆಯಿಂದ ಒದ್ದಾಡಿ ಮರಮರುಗಿ ಪ್ರಾಣವ ಬಿಟ್ಟನೆಂದೊರೆದರು
ಮೀರಿತವರಿಗೆ ದುಃಖಕೋಲ್ಗುದಿಗೆ ಕತ್ತಿಕ
ಠಾರಿ ತಕ್ಕೊಂಡು ಕೆಲರೋಡಿ ಬಂದಕ್ಕನಿಗೆ ದೂರಿ
ದುರ್ವಾಕ್ಯದಿಂ ಬೇದುದಂ ಕೇಳಿ ಬೀರೇಶನೆದುರಿಗೆ ಬಂದನು ||೧೭||

ಕೊಲ್ಲಿದ ದುರಾತ್ಮನೈತಂದನೆಂದವಸರದಿ
ಬಲ್ಲಿದರು ಪೋಗಿ ಖಡ್ಗವನೆತ್ತಿ ಕಡಿಯಲ್ಕೆ
ಸಲ್ಲಲಿತ ವಜ್ರಕ್ಕೆ ಪೊಡೆದಂತೆಯಾಗಲತಿ ವಿಸ್ಮಯಂಬಟ್ಟರವರು
ಬಲ್ಲವರು ಬೀರನಂ ಕರೆದು ಕೊಂಡವಸರದೊ
ಳಲ್ಲಿಂದ ಲಿಂಗಬಸವನು ಬಿದ್ದಸ್ಥಲಕೆ ಬರಲು
ಯಲ್ಲರರಿವಂತೆ ಭಸ್ಮವ ತಳೆದು ಪ್ರಾಣಪ್ರತಿಷ್ಟೆಯಂಗೈದನಾಗ ||೧೮||

ನೆರದ ಜನರೆಲ್ಲ ಶಿವಸಿದ್ಧ ಬೀರನಂ ಕಂಡು
ನರನಲ್ಲಿವಂ ಜಗಕೆ ಶಿವನ ದಯದಿಂ ಬಂದ
ಪರಮ ಮಹಿಮಾಂಕನೆಂದೆಡಬಲದಿ ಕೆಲರು ತಂತಮ್ಮೊಳಗೆ ಮಾತಾಡ್ದರು
ಸುರನೀತನೆಂದು ಕೈಸನ್ನೆ ಮಾಡ್ದರು ಕೆಲರು
ಪರಮಾತ್ಮನೇ ಭುವನಕಿಳಿದನೆಂದರು ಕೆಲರು
ಪರಿಪರಿಯೊಳರ್ಚಿಸಿ ನಮಸ್ಕರಿಸಿದರು ಕೆಲರು ಕೊಂಡಾಡಿದರ್ಕೆಲಬರು ||೧೯||

ಮಾರನೆಯ ದಿನದೊಳಕ್ಕಮ್ಮನಿಲ್ಲಿರಲನುಜ
ಗಾರೇನು ಮೋಸಮಂ ಮಾಳ್ಪರೋ ತಿಳಿಯದೆಂ
ದಾರೈಸಿ ಯೋಚನೆಯೊಳಾ ಸಿದ್ಧಬೀರನಂ ಕೊಂಡು ಸ್ವಗೃಹವ ಬಿಟ್ಟು
ಧಾರುಣಿಯೊಳೆಸವ ಬೆಳ್ಳಿಯಗುತ್ತಿ ಪಟ್ಟಣದ
ದಾರಿಯಂ ಪಿಡಿಯಲ್ಕೆರಸಿಕೋತ್ತಮರು ಬಂದು
ಭೂರಿವಿಶ್ವಾಸದಿಂ ಪೇಳಿದರು ನೀತಿಯಂ ಪತಗುಟ್ಟಿ ನಿಂತರವರು ||೨೦||

ಇಲ್ಲಿರಲು ಮುಂದೆ ಮಗನರ್ಥಗಳು ಸಂಧಿಸುವ
ವೆಲ್ಲರೊಂದಾಗಿ ಪರಿಪರಿಯೊಳಿರುಯಂಬುವದು
ಸಲ್ಲದೆಂದೀರ್ವರೊಂದಾಗಿ ತಲೆತಗ್ಗಿಕೊಂಡೆಡಬಲವ ನೋಡ್ದರವರು
ಮೆಲ್ಲಮೆಲ್ಲನೆ ಮುಂದಡಿಗಲಿಡುತೆ ಪುಳಕದಿಂ
ದೆಲ್ಲರಿಗೆ ಪೇಳುತರಿಂದಪ್ಪಣೆಯಕೊಂಡು
ನಿಲ್ಲದೆ ಚರಿಸಲಾಗ ಪುರಜನರು ಬೆರಗಾಗಿ ನಿಂತು ನೋಡುತಲಿರ್ದರು ||೨೧||

ಮುಂದಕ್ಕೆ ಪೋಗಿ ಶಿವಸಿದ್ಧಬೀರಂ ಮರಳಿ
ಹಿಂದಕ್ಕೆ ನೋಡುತಿರೆ ನಿಂತ ಜನರರಿವಂತೆ
ಕಂದುಗೊರಲನ ಸ್ಮರಿಸುತಕ್ಕನಂ ಕೂಡಿಕೊಂಡಲಿರ್ಪ ಹುತ್ತಿನೊಳಗೆ
ಚಂದದಿಂ ಪೊಕ್ಕರೀರ್ವರು ಸರ್ಪರೂಪದಿಂ
ಹಿಂದೆನಿಂದಿರ್ದ ಜನರೋಡಿ ಹುತ್ತಿನ ಬಳಿಗೆ
ಬಂದು ನೋಡಲ್ಕೆ ಮುಂದಕೆ ಹೆಜ್ಜೆಯಿಲ್ಲದಿರೆ ತಿರುಗಿದರು ತಮ್ಮಪುರಿಗೆ ||೨೨||

ಹುತ್ತಿನೊಳಗಿರ್ಪ ಬೀರೇಶ ಮೇಣಕ್ಕಮ್ಮ
ಚಿತ್ತಶುದ್ಧದಿ ಮೇಲಕ್ಕೈತಂದು ಮುಂದಿಲ್ಲಿ
ಚಿತ್ತರದ ನಾಗಠಾಣೆಂಬ ಪುರಪುಟ್ಟಲೆಂದರಿಕೆಗೊಟ್ಟರು ಹರುಷದಿ
ವತ್ತರದಿ ಬೆಳ್ಳಿಗುತ್ತಿಗೆ ಬರಲ್ಕೆಲರು ಕಳೆ
ವೆತ್ತ ಬೀರನಂ ಕಂಡು ಬೆರಗಾಗಿ ತಂತಮ್ಮ
ಮೊತ್ತಗೂಡ್ದಲ್ಲಲ್ಲಿ ಹಿಂದುಮುಂದಾಗಿ ವರ್ಣಿಸಿದರಾತಾಶ್ಚರ‍್ಯದಿ ||೨೩||

ನಗೆಮುಖದ ನಸುದೆರೆದಬಾಯಿ ನುಣ್ಪಿಡಿದಂಗ
ಮಿಗೆರಂಜಿಸುವ ಸುವರ್ಣಚ್ಛಾಉಯವಿಡಿದ ಜಡೆ
ಸೊಗಸಿನಿಂ ಬಿಗಿದು ಕಟ್ಟಿದ ಕಾಶಿಯರೆವಿರಿದ ಕುಂದುಮಲ್ಲಿಗೆಯ ಪಲ್ಲು
ಸುಗುಣ ಸುಂದರ ಸುಕಳೆ ಸರಸಿರುಹಸಮನಯನ
ನಗಧರಾತ್ಮಜನಸಮರೂಪಮಂ ಕಂಡಿವಂ
ಅಗಣಿತ ಮಹಿಮನಾಗಿ ತೋರ್ಪಸುರನಾವನೋ ಧರೆಗಿಳಿದನೆಂದರವರು ||೨೪||

ಅನುಜಕರಾಗ್ರ ಪಿಡಿದಕ್ಕಮ್ಮನೈ ತರುವ
ದನು ಕಂಡು ಲಂಬೋದರನ ದಂತಿಮುಖಕೆ ಭೂ
ಜನರು ಬೆದರುವರೆಂದು ನರವದನಮಂ ಧರಿಸಿ ಪುತ್ರನಂ ಕರೆದುಕೊಂಡು
ಜನನಿ ಗಿರಿಜಾತೆ ಗೌರವದಿಂದ ಭವನದೊಳು
ಮಿನುಗುತಿಹ ಸುಕ್ಷೇತ್ರ ನೋಡಲೋಸುಗ ಬಂದ
ಳೆನುತ ತಂತಮ್ಮೊಳಗೆ ಮಾತಾಡುತೆದ್ದು ಬಂದೀಕ್ಷಿಸಿದರುಲ್ಲಾಸದಿ ||೨೫||

ನೆರೆದ ಜನರೊಳಗೋರ್ವ ಹೇಮಣ್ಣನೆಂಬ ಹಿರಿ
ಗುರುಬನವಸರದಿಂದೆ ಬಂದು ವಂದಿಸಿ ನಿಮ್ಮಾ
ಪುರಮಾವುದಾವ ಪೆಸರರುಹು ಜತೆಯಾಗಿರ್ಪ ತರುಳನಿವನಾರೆಂದನು
ಧರೆಯೊಳೆನಗಕ್ಕಮ್ಮನೆಂಬರೆನಗನುಜನಿವ
ಹರಸಿದ್ಧ ಬೀರನೆಂಬಭಿದಾನ ಮರಳಿ ಕೇಳ್
ಮೆರೆವ ಮಂದಲಗಿರಿ ನಗರವು ಜನ್ಮಸ್ಥಾನವೆಂದು ಪೇಳ್ದಳು ಪುಳಕದಿ ||೨೬||

ಅನಿತರೋಳ್ರೋಗದಿಂದಸುವಳಿದ ಕುರಿಗಳಂ
ಘನವೆಸನದಿಂ ಪೊತ್ತುಕೊಂಡು ಬರುವ
ದನ್ನೋಡುತಯಿದೇತಕೆ ಸತ್ತವೆಂದಕ್ಕಮ್ಮನವಸರದಿ ಕೇಳಿದುದುಕಾ ಮನುಜರು
ಹಿರಿರೋಗದಿಂದಳಿಹವೆನಲಾಗ ಬೀರೇಶ
ಗುರುನಾಮಮಂ ಸ್ಮರಿಸಿ ಭಸ್ಮವ ತಳಿಯಲಾಕ್ಷಣದಿ
ಕುರಿಗಳೆದ್ದಡಿಯಿಡಲು ಹೇಮಣ್ಣ ಬೆರಗಾಗಿ ಸ್ವಗೃಹಕೆ ಕರೆದೊಯ್ದನು ||೨೭||

ಅವರಿರುವದಕ್ಕೆ ಪಾಲ್ಮತದವರ್ಕೂಡಿ ನಿಜ
ಭವನಮಂ ರಚಿಸಿದರ್ಮತ್ತೆ ಮನೆಮೆನಗೊಂದು
ತವೆಬೆಳದ ಕುರಿಯನುಡುಗರೆಗೊಡುದೆಂದರಿಕೆ ಮಾಡಿಕೊಂಡರು ಮೋಹದಿ
ಶಿವಸಿದ್ಧಬೀರನು ಕುರಿಯಕೊಂಡು ಮಾಡಲೇಂ
ಅವಿರತ ಪೊರೆದು ತರುವರಾರೆಮಗೆನಲ್ಕೆ ವೈ
ಭವದಿಂದೆ ಹೇಮಣ್ಣ ತನ್ನ ಸುತನಂ ಕೊಟ್ಟು ಕರಮುಗಿದ ಬೀರೇಶಗೆ ||೨೮||

ಹೇಮಣ್ಣನಿತ್ತ ಗೋವಣ್ಣನಂ ಕೊಂಡು ನಿಜ
ಧಾಮಕ್ಕೆ ಪೋಗಿ ಏಳ್ನೂರು ಕುರಿಗಳಂ ಕೂಡಿಸಿ
ಪ್ರೇಮದಿಂ ರಕ್ಷಿಸೆನ ಲಕ್ಕಮ್ಮನತಿ ಮುದದೊಳವೊಂದು ಕೋಲುಕೊಟ್ಟು
ನೇಮನಿತ್ಯದಿ ಪೋಗಬೇಕೆಂದು ಪೇಳುತಿ
ತ್ತಾ ಮಹಾನಿಲಯದೊಳಗಿರ್ದು ಶ್ರೀಗುರು ಸಾರ್ವ
ಭೌಮ ಸಿದ್ದೇಶ್ವರನ ನಿರುತದಿ ನುತಿಸಿ ಸುಖಿಸುತಿರಲು ಶಿವಸಿದ್ಧಬೀರಂ ||೨೯||

ಕೆಲಕಾಲ ಕಳೆದು ತನಗೊಂದು ಬಿಲ್ಮಾಡಿಸಿ
ಘಳಿಲನೆ ತಾರೆಂದಮಿತ ವೆಸನದಿಂದಕ್ಕನೋಳ್
ಛಲವಿಡಿದು ವಿಧವಿಧದಿ ಕಾಡುತಿರಲಾಕೆ ಮಮಕಾರ ಸಂಯುಕ್ತಳಾಗಿ
ಯಲವೊ ನಿನ್ನಗೆ ಹಿಂದೆ ಚಂಡುಮಾಡಿಸಿಗೊಟ್ಟ
ಫಲದಿ ಮಂದಲಗಿರಿನಗರ ಬಿಟ್ಟು ಬಂದೆವು ವಿ
ಮಲತನದಿ ಧನುಬೇಡಿ ಮುಂದೇನನರ್ಥ ಮಾಡುವೆಯೋ ಬೇಡೆಂದೊರೆದಳು ||೩೦||

ಬಗೆಬಗೆಯೊಳೊರೆದರವ ಕೇಳದಿರಲಕ್ಕಸಾ
ಲಿಗರ ಶಿರಸಪ್ಪನ ಬಳಿಗೆ ಪೋಗಿ ತಕ್ಷಣದಿ
ಮಿಗೆ ಮೆರೆವ ಧನುವ ಮಾಡಿಸಿಕೊಂಡು ತಂದಿತ್ತಳನುಜನೊಪ್ಪಿದನದಕ್ಕೆ
ಬಿಗಿದು ಕಾಸಿಯ ಕಟ್ಟಿ ಮೀಸಲ ಮನದೊಳು ಬಿ
ಲ್ದೆಗೆದು ಪೂಜಿಸಿಕೊಂಡು ಗುರುವರನ ಸ್ಮರಿಸುತ್ತ
ವಿಗಡ ಮತೆಯಿಂ ಶರವ ಪೂಡಿ ಸಿಂಜನಿಯನೊದರಿಸುತ ನಡೆದನು ಮುಂದಕೆ ||೩೧||

ಬರದಿ ಬೈಲಿಗೆ ಬಂದು ನೀರ್ತರವ ಏಳ್ನೂರು
ತರುಣಿಯರ ತುಂಬಿದ ಕೊಡಕ್ಕೆ ಬಾಣವನೆಸೆಯ
ಲುರೆ ಛಿದ್ರ ಬೀಳಲವರತಿ ಕೋಪದಿಂ ನಿಂದು ಜನನಿ ಜನಕರ ಕಾಣದ
ಪರಮ ನೀಚನೆ ಕುಂಭಗಳಿಗೆ ಶರದಿಂ ಪೊಡೆದು
ಮರಿಯಾದೆ ಭಂಗಮಂ ಮಾಡುವದಿದೊಳ್ಳಿತವೆ
ಸರಿಯಲ್ಲವೆನಲವಂ ಮರಳಿ ಮೇಣದ ಬಾಣದಿಂ ಬಂದು ಮಾಡಿನೆಡೆದ ||೩೨||

ನಿಂದಿಸಿದ ನುಡಿಗಳವನೆದೆಯೊಳಗೆ ನೆಟ್ಟು ಜವ
ದಿಂದಾಲಯಕ್ಕೆ ಬಂದಕ್ಕನಿಗೆ ಕರಮುಗಿದು
ಅಂದನೆನ್ನಂ ಪಡೆದ ತಂದೆತಾಯಿಗಳಾರು ತಿಳಿಸೆಂದು ಹಟವಿಡಿದನು
ಚಂದದಿಂದಕ್ಕಮ್ಮನನುಜನಂ ಸಂತೈಸುತ
ತಂದಳ್ಮರಳಿ ನಿನ್ನ ಪಿತ ಭರ್ಮದೇವ ಮೇ
ಣಿಂದು ಗಿರಿನಗರ ಜನ್ಮಸ್ಥಾನ ಹರಿ ಸಹೋದರಿ ಸುರಾವತಿ ಮಾತೆಯು ||೩೩||

ಅನುಜ ಕೇಳ್ನೀನು ಪುಟ್ಟಿದ ಸಪ್ತದಿನಕೆ ನಿ
ನ್ನನು ಸೇರಿಸಿದನು ಕೂದಲಿನ ವನದ ಮಧ್ಯದೊಳ್
ಅನಿತರಲಿ ಕುರಿಗಾಯ್ವದಕ್ಕೆ ನಾಂ ಬಂದೆತ್ತಿಕೊಂಡು ತಂದೆನು ಗೃಹಕ್ಕೆ
ಯನಲವಂ ಕೇಳ್ದು ಯನ್ನಡವಿಗೆ ಕಳಿಸಿದರಾರು
ಯನಗೊರಯಬೇಕೆನಲ್ಮಗುಳಿ ಪೇಲ್ದಳು ಮುದದಿ
ದನುಜಾರಿ ತನ್ನ ಸುತೆಯಳಿಗೆ ಪತಿಯಾಗುತವನೆನುತ್ತ ಮೋಸವಗೈದನು ||೩೪||

ಅಕ್ಕನೊಳು ನಾನು ಪುಟ್ಟಿದ ಕೆಲವು ದಿನಕೀವ
ನಕ್ಕೆ ಸೇರಿಸಿದ ಸೋದರಮಾವನೆಂಬಧಮ
ರಕ್ಕಸಾಂತಕನಿರುವ ಪುರಮಾವುದಾತನಾತ್ಮಜೆಯ ಪೆಸರೇನೆಂದನು
ಮಿಕ್ಕ ಮಾತೇನಾತ ವೈಕುಂಠದೊಳಗಿರು
ಚಿಕ್ಕಪ್ರಾಯದ ಕನ್ನಿಕಾಮಾಲಿಯಂಬೋರ್ವ
ತಕ್ಕ ಸುತೆಯಿರ್ಪಳವಳಂ ನಿನ್ನಭಯಕೆ ಕಾವಲಿಯೊಳಿಟ್ಟಿರುವ ಸತತಂ ||೩೫||