ಪ್ರಮಾಣ – ಗರುಡ ಮಹಾತ್ಮೆ
ಶ್ಲೋಕ ||

ಲೋಕೋಯಂ ರಕ್ಷಿತೌಯೋಮೇ ಸತ್ಕಾರೈಃಧನಾದಾಪನಾಃ
ಸುವರ್ಣವರ್ಷದಾನೇನ ಲೋಕಾನ್ ರಕ್ಷಸ್ವಮೇ ಪ್ರಭೋ ||೧೮||

ಈಗೆಮ್ಮ ದೇಶಕ್ಕೆ ಕ್ಷಾಮಕಾಲವು ಪ್ರಾಪ್ತ
ಮಾಗಿ ಸಕಲರು ಕಷ್ಟಪಡುವರವರಂ ನೋಡ
ಲಾಗುವದಧಿಕ ತಾಪ ನಾವು ಸುಖದಿಂದಿರುವದನ್ಯಾಯವೆಂದು ನುಡಿಯೆ
ಆಗ ಪದ್ಮಂ ದೀರ್ಘವೆಸನದಿಂ ಮರಳಿ ವರ
ನಾಗಭೂಷಣ ಮೆಚ್ಚಿಸಿ ತನ್ನ ದೇಶದೋಳ್
ಬೇಗದಿಂ ಮೂರುವರೆ ಘಳಿಗೆವರಿಗೆ ಸುವರ್ಣವೃಷ್ಟಿಯನ್ನೆರಗರಿಸಿದಂ ||೮೧||

ಲೋಕಮೆಲ್ಲವನುದ್ಧರಿಸಿ ಪ್ರೇಮದಿಂದ ಕ
ನ್ಯಾಕುಬ್ಜ ಪುರಿವಾಸಿ ನೀಲಾಂಬಿಕೆಯಳನ್ನು
ಏಕಮನದಿಂ ವಿವಾಹವಾಗಿ ಕೌಲೇಯ ವೀರೇಶಮೇಣಾಕಲಟರೆಂಬ
ಸೌಕುರದಿಂ ಪೋದನದು ಮೊದಲ್ಗೊಂಡಿದ
ಕ್ಕೀ ಕಲಿಯುಗದೊನುತ್ತಿಪ್ಪರು ಸುವರ್ಣಗೋತ್ರವುಯಂದು ಕೌರಬೀಯರು ||೮೨||

ಪ್ರೀತಿಯಿಂದಾಲಿಸು ವಿಭಾಗಗೆ ಪ್ರಶಾಂಚ ಮೇ
ಣಾತಗೆ ಕನಕನವಗೆ ಮಂದಾರನುದ್ಭವಿಸಿ
ಭೂತಲದೊಳಿರಲಿತ್ತ ಭಿಲ್ಲನೆಂಬುವ ರಕ್ಕಸನು ಪಾರ್ವತಿಯನು ಕುರಿತು
ತಾತ ತವಕದಿಂದುಗ್ರ ತಪಗೈದು ವರಪಡೆದು
ಭೀತಿಗೊಳ್ಳದೆ ವಿಭುದರಂ ಪಿಡಿಯಲವರು ಗಿ
ರಿಜಾತೆಯರಸನ ಶರಣು ಹೊಂದಲಾತಂ ವೀರಭದ್ರನ ಮುಖವನೋಡ್ದನು ||೮೩||

ಪ್ರಮಾಣ – ಸ್ಕಂದ ಪುರಾಣ ಅಗಸ್ತ್ಯ ಸಂಹಿತೆಯ ೬೬ನೆಯ ಅಧ್ಯಾಯ ೧೦ನೆಯ
ಶ್ಲೋಕ ||

ಪುರಾಕೈಲಾಸ ಶಿಖರೇ ದೈತ್ಯೋಭೂತ್ಕ್ರೂರ ರಾಕ್ಷಸಃ
ಪಾರ್ವಚೀಂಚ ತಪಸ್ತಪ್ತ್ವ ವರಂಲೇಭೇತಿದಾರುಣಂ
ತೇನಮತ್ತೋಜಗತ್ಸರ್ವ ಬಾಧಯಾಮಾಸ ರಾಕ್ಷಸಃ
ತದ್ಭಾಧಾ ಶಮನಾರ್ಥಮಂವೈ ವೀರಭದ್ರೋ ಶಿವಾಕೃತಿಃ
ವೀರೇಶ್ವರಯತಿಖ್ಯಾತಃಕೌರಭೋಭೂತ್ಮಹಾಶಯಃ
ತಮೇವ ದೇವತಾಂಕೃತ್ವಾ ಕೌರಬಾ ಭಕ್ತಿತತ್ಪರಾಃ
ಆರ್ಚಯಂತಿ ಮಹಾತ್ಮನಾಂ ಬೀರೇಶ್ವರ ಮಹಾತ್ಮನಂ ||೧೯||

ಹಿಂಸಯಾ ಮಾನಸ ಕ್ರೋಧಾತ್ ಶಶಾಪಸುಮಹತ್ತರಂ
ಅಸ್ಮನ್ ಮೃಗಜಿಘೀರ್ಷತ್ವಂ ಪಾವನಾನ್ ಹರಿಣಾನ್ ಹರನ್
ಇತಃಪೂರ್ವಂ ಅಜಾಹಿಂಸನ್ ರೋಮಣೀಥ್ಹಮಕಾರಯಾ ||೨೦||

ಯನಲು ರೇವಣಸಿದ್ಧನಡಿಗೆರಗಿ ಸಿದ್ಧಬೀ
ರನು ಕೇಳ್ದನೀ ಕುರಿಗಳೆಂತು ಪುಟ್ಟಿದವು ಮೇಣಾ
ಮುನಿ ನಾರದನ ಶಾಪವೆಂತಾಯ್ತು ವಿಸ್ತರಿಸಿ ಪೇಳೆಂದು ಕರವ ಮುಗಿದನು
ತನಯನೀ ಚಿತೈಸು ವಿಂಧ್ಯಾದ್ರಿ ಪ್ರಾಂತದೋಳ್
ದನುಜಾತರಾದ ರಾಕ್ಷಸರೆಲ್ಲರೊಂದಾಗಿ
ಮುನಿಗೋದ್ವಿಜರ ಹಿಂಸೆಗೈಯುತ್ತ ಬರಲಾಗ ನಾರದ ಮುನೀಶ ನೋಡ್ಡು ||೯೨||

ಕಡುಕೋಪಮಂ ತಾಳುತಜಮೇಷ ರೂಪವ ತಾಳಿ
ಪೊಡವಿಗವತರಿಸರೀಗಳೆ ಮ್ಲೇಂಚ ಜನರು
ಕಡಿಕಡಿದು ಕತ್ತರಿಸಿ ಸ್ವೀಕರಿಸಲೆಂದನುದಿನದಿ ಶಾಪವಿತ್ತನು ಜವದಲಿ
ವಡನೆ ಶಾಪಗ್ರಸ್ತರಾದ ಕೆಲ ರಾಕ್ಷಸರು
ಬಿಡದೆ ಅಜಮೇಷ ರೂಪವಧರಿಸಿ ಪುಟ್ಟಿದರು
ನುಡಿಸತ್ಯಮೆಂದು ತಿಳಿಯಿದನು ವರ್ತಿಸೈ ಮಗನೆ ಯೋಚನೆಯ ಕಳಿಯಂದನು ||೯೩||

ಪ್ರಮಾಣ – ಸೂರ‍್ಯಸಿದ್ಧಾಂತೆ ಮನುದೀಪಿಕಾಯಾಂ ಯಜ್ಞಪುಸ್ತಾವೆ ದ್ವಿತೀಯ ಖಂಡೆ
ಶ್ಲೋಕ ||

ವಿಂಧ್ಯಾದ್ರಿ ಪ್ರಾಂತ ಭೂಮೌವೈ ಮೃಗಾಃ ಸಂಚಾರ ಮಾಪ್ನವಾನ್
ತದಾಶ್ರೀ ನಾರದಾಯೋಗಿ ಪರ‍್ಯಟನ್ ವಿವಿಧಾನ್ ವಧಾನ್
ತತ್ರಾಸಂಪ್ರೇಕ್ಷಯಾ ಮಾಸಾ ದನುಜಾನ್ ಕೋಟಿಸಾತ್ಕೃತಾನ್
ಹಾಸ್ಯಮಾನ್ ದ್ವಿಜಾನ್ ಚೈವ ಭಕ್ಷಮಾನಾನ್ ಪೃಥಕ್ ಪೃಥಕ್
ತಾನ್ ದೃಷ್ಟ್ವಾಯಧಯಾಯುಕ್ತಃ ಶಶಾಪಧರಣೀತಲೆ ಅಜಾ
ಕಾರಾಃಭವೇದ್ಯೂಯಂ ಭವಂತೋಹಿಂಸಯಿಷ್ಯಥಾ
ಯಾವನಾಶ್ಚಕಿರಾತಾಶ್ಚ ಪುಳಿಂದಾಃಕ್ರೂರರಾಕ್ಷಸಾಹಃ ||೨೧||

ಬೀರ ಕೇಳ್ವೀರ ಗೊಲ್ಲಾಳನ ಕಥೆಯ ನಿನಗೆ
ಸಾರುವೆನು ಶುದ್ಧಮನದಿಂದೆ ತಿಳಿಯೊಂದು ದಿನ
ವೀರಸೈವೋತ್ತಮರು ಕೂಡಿ ಪಡಿವೆರಸಿ ಕಾವಡಿ ಪೊತ್ತು ಸಂಭ್ರಮದಲಿ
ಮಾರಾಂತಕನ ನಾಮನೆನದುಘೇಯಂದು ಗಂ
ಭೀರದಿಂ ಪೋಗುತಿರಲಾ ಪಥದಿ ಗೊಲ್ಲಾಳ
ಭೂರಿಕುರಿಗಳ ಪಾಲಿಸುತ್ತನಿಂತಿರಲವಂ ಪರುಷೆಯವರಂ ನೋಡ್ದನು ||೯೪||

ಅವರೊಳೊಬ್ಬನಂ ತಡೆದು ವೈಭವದೊಳೆತ್ತ ಪೋ
ಗುವಿರೆಂದು ಕೇಳಲ್ಕೆ ಶ್ರೀಮಹಾಗಿರಿಗೆ ಚರಿಸು
ವೆವು ಎನಗೆ ಪಾದರಕ್ಷೆಗಳಿಲ್ಲದತಿ ಕಷ್ಟಪಡುವೆ ಬಿಸಿಲಿನ ತಾಪಕೆ
ತವಕದಿಂ ಕೊಟ್ಟು ಸುಖಗೊಳಿಸಿದರೆ ನಿನಗೆ ನಾಂ
ಶಿವಲಿಂಗವನು ತಂದು ಕೊಡುವೆನುಮ್ಮಳಿಸಬೇ
ಡ ವಿರತಂ ನಿನ್ನನತಿ ಪ್ರೇಮದೊಳು ಪಾಲಿಸುವ ಗುರುಚನ್ನಮಲ್ಲೇಶನು ||೯೫||

ಎನಲು ಗೊಲ್ಲಾಳನುರೆ ಭಕ್ತಿಪೂರಿತನಾಗಿ
ಘನವೃದ್ಧ ಚರಗೊರೆದನೆನಗಾ ಮಹಲಿಂಗ
ವನು ತಂದು ಕೊಡಲು ನಾ ನಿನಗೆ ಬಿಂದಿಗೆ ಪೊನ್ನು ಪಾದರಕ್ಷೆಯ ಕೊಡುವೆನು
ಅನುಮಾನ ಬಿಡು ಬೇಡಲಶ್ರಾವ್ಯಮಪ್ಪುದೆಂ
ದನುವಾಗಿ ಪೇಳ್ದ ನುಡಿ ಕೇಳ್ದು ಚರವೃದ್ಧನಾ
ತನ ಮಾತಿಗೊಪ್ಪಿ ಪೊನ್ನಿತು ಕಳುಪೆನ್ನ ತಡವ್ಯಾಕೆ ನಡೆ ಮನೆಗೆಂದನು ||೯೬||

ದಿಟ್ಟಗೊಲ್ಲಾಳ ದೃಢಭಕ್ತಿಯಿಂ ಚರನ ಕುರಿ
ಹಟ್ಟಿಗೆ ಕರೆದು ನೆಲದ ಮರೆಯೊಳಗೆ ತಂದೆ ಹೂ
ಳಿಟ್ಟ ಪೊನ್ನಿನ ಬಿಂದಿಗೆಯಂ ಕಿತ್ತಿಕೊಟ್ಟು ನಿಜಪಥದೆಡೆಗೆ ಬಂದು ನಿಂತು
ಅಟ್ಟಹಾಸದಿ ಕುರಿಯ ನಟ್ಟಡವಿಗೊಡೆದೂಟ
ಬಿಟ್ಟು ಬೀಸ್ಗೋಲ್ಗೆಗದ್ದವಿಟ್ಟು ಕಂಬಳಿಯಂ ಪೊದ್ದು
ಬೆಟ್ಟ ಬಟ್ಟೆಗೆ ದೃಷ್ಟಿಯಿಟ್ಟು ನಿರ್ಭಯದಿ ಫಣದೊಟ್ಟು ನೋಡುತಲಿರ್ದನು ||೯೭||

ಅತ್ತ ಚರವೃದ್ಧ ಶ್ರೀಶೈಲಕ್ಕೆ ಪೋಗಿ ದೃಢ
ಚಿತ್ತದಿಂ ಗಣತೃಪ್ತಿಗೈಸಿ ಸತ್ಕೀರ್ತಿಯಂ
ಪೆತ್ತು ವೈಭವದೊಡನೆ ಲಿಂಗಮಂ ಮರೆತು ಹಿಂದಿರುಗಿ ಬರುತಿರೆ ಪಥದೊಳು
ನೆತ್ತಿಯೊಳ್ಕಂಬಳಿಯ ಪೊದ್ದು ನಿಂತಿರ್ದ ಭ
ಕ್ತೋತ್ತಮ ದನುಗರನನ್ನೋಡುತೆದೆಗುಂದಿ ತನು
ತತ್ತರಿಸುತವಸರದಿ ಚರಣದಂಗುಲದಿ ಕುರಿಹಿಕ್ಕಿಯಂ ಕೈಕೊಂಡನು ||೯೮||

ಗೊಲ್ಲಾಳ ಪರುಷೆಯವರಂ ಕಂಡು ತನ್ನ ಮನ
ದುಲ್ಲಾಸ ಪೆಗ್ಗಳಿಸಿ ಪೊನ್ನೊಯ್ದ ಚರನ ಪಾದ
ಪಲ್ಲವಕ್ಕೆರಗಿ ಶಿವಲಿಂಗಮಂ ತಾರೆನಲ್ಕಾಗ ಜಂಗಮಜವದೊಳು
ತಲ್ಲಣವ ಬಿಟ್ಟು ಕರದೋಳ್ಪಿಡಿದ ಹಿಕ್ಕೆಯಾ
ಗೊಲ್ಲನಿಗೆ ಕೊಟ್ಟು ಗೌಪ್ಯದೊಳಿದಂ ನಿರಿಸು ನೀ
ನೆಲ್ಲಿ ಮತ್ತಾರಿಗಿದು ತೋರಿಸದೆ ಭಕ್ತಿಯಿಂದನುದಿನದಿ ಪೂಜಿಸೆಂದ ||೯೯||

ಹೆಂಡ ದೇವಮ್ಮನಿಗೆ ಹೊನ್ನಿನವಾಳಗೆಂದು
ಖಂಡಿತದಿ ನುಡಿಪೇಳಿ ಬಂದನವಳಿಂಗೆ ಭೂ
ಮಂಡಲ ಪೊನ್ನಿತ್ತು ಪೊರೆಯಂದು ವಿಧವಿಧದಿ ಬೇಡಿಕೊಳ್ಳಲ್ಕೆ ಬೀರಂ
ಕಂಡುಕಾಣದೆ ಭಕ್ತಿಹೀನಳ ಮನೆಯೊಳೆನ್ನ
ಕೊಂಡು ವರವಿತ್ತು ಬರ್ಪುರೇ ಮೂಢನಂದದಲಿ
ಖಂಡಶಶಿಶೇಖರನ ಭಜನೆಯಂ ಬಿಟ್ಟು ಈ ಪರಿ ಮಾಡ್ದ ಬಗೆಯೇನೆನೆ ||೧೧೦||

ವೀರಮಾಳಿಂಗನಚ್ಚರಿಗೊಂಡು ಗುರುಸಿದ್ಧ
ಬೀರನ ಪಾದಕ್ಕೆರಗಿ ನಾ ಕೊಟ್ಟ ವಚನಮಂ
ಪೂರೈಸಬೇಕೆಂದು ಪೇಳಲಾ ದೇವಮ್ಮಗೆ ಪರವ ಪಾಲಿಸಿ ಮುಂದಕೆ
ಸಾರಿದರು ಗುರುಶಿಷ್ಯರೊಂದಾಗಿ ಬೆಟ್ಟ ಕಂ
ಡೇರಿದರು ಮೇಕ್ಕೆ ನೋಡಿದರು ಮೃಗತಿಯ
ಸೇರಿದರು ಕಾನನವ ಕೆಲದಿನಕೆ ಮರಳಿ ಹಾಲ್ಬಾವಿಗೈತಂದರವರು ||೧೧೧||

ಭರದಿಂದೆ ಶಿಷ್ಯನಂ ಕರೆದು ಪೇಳಿದನಾಗ
ಪುರದೊಳಗೆ ಪೊಕ್ಕು ದೇವಮ್ಮನ ಮನೆಗೆ ಪೋಗಿ
ಪರಮಾನ್ನವನು ಕೊಂಡು ಬಾರೆಂದು ಕಳಿಸಲ್ಕೆ ವೀರಮಾಳಿಂಗ ತಾನು
ಗುರುಪೇಳ್ದ ತೆರದಿ ಪೋಗುತ್ತ ಭಿಕ್ಷವನು ಬಾ
ಯ್ದೆರೆದು ಬೇಡಲ್ಕವಳು ಕಡುಗೋಪದಾಳಿ ಛೀ
ತಿರುಕ ನಡಿ ನಡಿ ನಿಲ್ಲಬೇಡೆಮ್ಮ ಮನೆಯಬಿಟ್ಟೆಂದು ನಿಂದಿಸಿ ನುಡಿದಳು || ೧೧೨ ||

ತಿರುಗಿದಂ ನಿಂದೆ ನುಡಿಗಳ ಕೇಳಿ ಯುಕ್ತಿಯಿಂ
ಜರುಗಿದಂ ಮನದೊಳಗೆ ನುಡಿನೆನಸಿ ಮರಮರನೆ
ಮರುಗಿದಂ ಕಳವಳದಿ ಕೂಡಿ ಹುಚ್ಚನ ತೆರದಿ ನಾನೇಕೆ ಬಂದೆನೆಂದು
ಸೊರಗಿದಂ ಬರಬರುತ್ತ ಮನನೊಂದು ತಾಪದಿಂ
ಕೊರಗಿದಂ ನಾಚಿಕೆಯೋಳೈತಂದು ಗುರುಪಾದ
ಕ್ಕೆರಗಿದಂ ಭಕ್ತಿಭಾವದೊಳು ತನಗಾದ ಸಂಗತಿಯನೆಲ್ಲವ ಪೇಳ್ದಳು ||೧೧೩||

ಬೀರೇಂದ್ರ ಕೇಳಿ ಕಡುಗೋಪದಿಂ ಘುಡಿಘುಡಿಸಿ
ಭೂತರಿತಾಪದೊಳು ಹೊನ್ನೆಲ್ಲ ನೀಗಲಿ ಹಿಂದೆ
ತೋರಿ ಕರೆಯುತ್ತಿರುವ ಹೆಂಡದೇವಮ್ಮನೆಂಬುವದು ನಿಜಮಾಲೆಂದು
ಮೀರಿದುಗ್ರದಿ ಶಾಪವೀಯಲಾಕೆಯ ಭಾಗ್ಯ
ತೀರಿದುರ‍್ಭಾವದಿಂ ಬಡತನದ ಬಲೆಯೊಳಗೆ
ಸೇರಿ ಮಿಡುಕಿದಳು ಸಿದ್ಧರವಾಕ್ಯ ಸಟೆಯುಪ್ಪುದೇ ಧರಾವಲಯದೊಳಗೆ ||೧೧೪||

ಹಾಲಭಾವಿಯ ಬಿಟ್ಟು ಗುರುಶಿಷ್ಯರೊಂದಾಗಿ
ಮೇಲೆಸೆವ ಕುಂತಳ ಕಳಿಂಗಾಂವಂಗ
ಮಲೆಯಾಳ ನೇಪಾಳ ಕೇರಳ ಮುಖ್ಯದೇಶಗಳ ನೋಡುತ್ತ ಬೆಟ್ಟದೊಳಗೆ
ತೋಳಪುಲಿಸಿಂಗ ಮಾತಂಗಾದಿ ಭೀಕರ ಮೃ
ಗಾಳಿಗಳ ಜೈಸಿ ನದಿಯೊಳು ಸ್ನಾನಮಂಗೈದು ಸ
ಮ್ಮೇಳದಿಂ ಸುಕ್ಷೇತ್ರ ನೋಡುತ್ತ ಬೆಳ್ಳಗುತ್ತಿಯ ಪುರಕ್ಕೈತಂದರು ||೧೧೫||

ತ್ವರದಿಂದಲನುಜ ಬರಲಕ್ಕಮ್ಮ ನೋಡ್ದು ತಾ
ನಿರದೆ ಮನೆಯೊಳು ಪೋಗಿ ಕಲಶಮಂ ತಕ್ಕೊಂಡು
ಸರಸದಿಂದಾರತಿಯ ಬೆಳಗಿ ನೀನಿದುವರಿಗೆ ಪೋದ ಸಂಗತಿ ಪೇಳೆಂದಳು
ಸುರಲೋಕಕನುವಿನಂ ಪೋಗಿ ಪರಮೇಶ್ವರನ
ಸ್ಮರಿಸಿಯನ್ನಯ ಸೇವಕ್ಕಾಗಿ ಮಾಳಿಂಗನಂ
ಕರೆದುಕೊಂಡಿತ್ತ ಬಂದೆನು ಪಾಲಿಸೆಂದು ಪೇಳಿದನಕ್ಕರದೊಳಕ್ಕಗೆ ||೧೧೬||

ವರಸಿದ್ಧ ಬೀರಮಾಳಿಂಗರಿವರಕ್ಕನೊಳ್
ಸರಸದಿಂದೊಂದೆರಡು ದಿನಗಳೆದು ಪುರಬಿಟ್ಟು
ತೆರಳಿದರು ಮೂವ್ವರೊಂದಾಗಿ ಪಶ್ಚಿಮದೆಶೆಗೆ ಸುಕ್ಷೇತ್ರಂಗಳಂ ನೋಡುತ
ಧರೆಯೊಳುರೆ ಮೆರೆವ ಬಂಕಾಪುರಕೆ ಬಂ
ಧುರಬಾಗಿ ಬಂಕಣ್ಣನರಮನೆಯ ಪೊಕ್ಕೆಲ್ಲ
ಪರಿವಿಡಿದ ನೋಡುತೈತರಲಾಗಲಾ ಬಂಕಣ್ಣನಕ್ಕನ ಸೆರಗಂ ಪಿಡಿದನು ||೧೧೭||

ಬೀರೇಶಂ ಕಂಡವನ ಖಂಡೆಯಂ ಪೊಡೆದು
ಶಿರಹಾರಿಸಿ ಮಹಾರೌದ್ರದಿಂದೊಳಗೆ ಪೊಕ್ಕು ತಾಂ
ವೀರಪದ್ಮವತಾರದಿ ರಕ್ಕಸಿಯ ಕೊಂದು ಮಾಡ್ದ ಬಿರಿದಂಗಳನ್ನು
ತಾರತಮ್ಯದೊಳು ತೆಗೆದೊಂದೊಂದು ಶಿಷ್ಯಂಗೆ
ತೋರಿಸುತ ಬಾವಾನ್ನ ಬಿರುದುಗಳಣೆಸಿ ಗಂ
ಭೀರದಿಂ ತಕ್ಕೊಂಡು ತಿರುಗಿದರು ಪೂರ್ವಕ್ಕೆ ಮೀರಿದಾ ಮೋದದಿಂದೆ ||೧೧೮||

ಮೆಲ್ಲಮೆಲ್ಲನೆ ಮುಂದಡಿಗಳನಿಡುತ್ತ ರಂಜಿಸುವ
ಕೊಲ್ಲಿಪಾಕಿಗೆ ಬಂದು ಸೇರಲಾಪುರದೊಳಗೆ
ಬಲ್ಲಿದನೆನಿಪ ಭೂತಗಣಗಳಿಂ ಕೂಡಿ ಭೂತಾಳ ಸಿದ್ಧೇಂದ್ರನೆಂದು
ಎಲ್ಲ ಕುರುಬರಿಗೊಡೆಯನಾಗಿ ನಿತ್ಯದೊಳು ಸುಖ
ದಲ್ಲಿರಲವನ ಪುತ್ರನಸುವಳಿಯಲೆದೆಗುಂದಿ
ತಲ್ಲಣಿಸುತಾ ಹೆಣವ ತಂದು ಹಾಕಿದರಾಗ ಸಿದ್ಧಬೀರನ ಪಾದಕ್ಕೆ ||೧೧೯||

ಕರುಣದಿಂದಾ ಸಿದ್ಧಬೀರ ಗುರುಮಂತ್ರಮಂ
ಸ್ಮರಿಸಿ ಭಸಿತವ ತಳೆದು ಪ್ರಾಣಪ್ರತಿಷ್ಠೆಯಂ
ವಿರಚಿಸುತ ತಾಂ ತಂದ ಬಿರುದುಗಳನೊಂದೊಂದುನೆಣಿಸಿ ತೆಗದಿಟ್ಟು ಮುದದಿ
ಕರೆದು ದೇವಣ್ಣನಿಗೆ ಡೊಳ್ಳು ಜಗದೇವಂಗೆ
ಬುರುಗು ಬುಳ್ಳಗೆ ತಾಳ ದಿಲ್ಲಿರಾಯಗೆಕರ್ನಿ
ಮೆರವ ಕಾಳಿಂಗನಿಗೆ ಕೊಳಲು ಕಲ್ಲಯ್ಯಂಗೆ ಕಾಳಿ ಲಿಂಗಗೆ ಜಾಗಟಿ ||೧೨೦||

ಸಂಗನಿಗೆ ಜಗಜಂಪು ಮಲ್ಲನಿಗೆ ಕೊಡೆ ಸೋಮ
ಲಿಂಗನಿಗೆ ಡಂಕಾ ನಿಶಾನಿ ಮಡಿವಾಳನಿಗೆ
ಲಿಂಗಬಸಪ್ಪನಿಗೆ ಚಿನ್ನಕಾಳಿಯಕೊಟ್ಟು ವೈಭವದಿ ಕೂಡಿಕೊಂಡು
ತುಂಗಬಾವಾನ್ನ ಬಿರಿದುಗಳ ಮೆರೆಸುತ್ತ ಮಾ
ಳಿಂಗನಂ ಕರವ ಪಿಡಿದು ಚಂದ್ರಸೂರ‍್ಯನ ತೆರದೊ
ಳಂಗಜಾಂತಕನ ಸ್ಮರಿಸುತ್ತ ಭೂತಾಳಸಿದ್ಧನ ನಿಲಯಕ್ಕೆತಂದರು ||೧೨೧||

ಮೃಷ್ಟಾನ್ನವನು ಸವಿದು ಸಂತಸದಿ ಭಕ್ತಜನ
ಕಿಷ್ಟಾರ್ಥ ಕೊಟ್ಟು ಬಾವಾನ್ನ ಬಿರಿದಂಗಳಿಗೆ
ಅಷ್ಟವಿಧ ಪೂಜೆಯಂಗೈಸಿ ಮತ್ತವುಗಳಂ ತಕ್ಕಂಡು ಸ್ಥಲಬಿಟ್ಟರು
ಸೃಷ್ಟಿಯೊಳು ಶೋಭಿಸು ಸುಕ್ಷೇತ್ರ ನೋಡುತ್ತ
ದುಷ್ಟರಂ ಪರಿಹರಿಸಿ ಶಿಷ್ಟರಂ ಪಾಲಿಸುತ
ಶ್ರೇಷ್ಟಮೆನಿಸುವ ಹೂವ್ವಿನೂರೆಂಬ ಗ್ರಾಮಕ್ಕೆ ಬಂದರತಿ ಭರದಲಿ ||೧೨೨||

ಆ ನಗರದರಸು ಭೋಜೇಂದ್ರನೆಂಬುವನ ನಿಜ
ಸೂನು ಮೃತಿಹೊಂದಿದಕ್ಕೂರ್ಜನರು ಮರುಗುತಿರೆ
ದೀನರಕ್ಷಕದೇವ ಸಿದ್ಧಬೀರಂ ಕೇಳಿ ರಾಜನಾಲಯಕೆ ಬಂದು
ಮೀನಕೇತನ ಹರನ ಸ್ಮರಿಸಿ ಭಸಿತವತಳಿಯ
ಲಾ ನಿಮಿಷದೊಳ್ಬಾಲನೆದ್ದು ಕೂಡ್ರಲ್ಕೆ ಜನರು
ಮಾನವನ ವೇಷಮಂ ಧರಿಸಿ ಬಂದಿರ್ಪಸುರನೆಂದು ಕೊಂಡಾಡ್ದರವರು ||೧೨೩||

ರಾಜಬೋಜೇಂದ್ರ ಶಿವಸಿದ್ಧ ಬೀರನ ಪಾದ ಸ
ರೋಜಕ್ಕೆ ನಮಿಸಿ ಏಕೋಬಾವದಿಂ ಸತತ
ಪೂಜಿಸಿ ಮಠವನು ಕಟ್ಟಿಸಿ ಕೊಡಲ್ಕವರಲ್ಲಿ ನಿಂದು ಶ್ರೀಗುರು ರೇವಣಸಿದ್ದನ
ಮಾಜದೆ ನಿರಂತರದಿ ಬಿಡದೆ ಮನದೊಳು ಭಜಿಸಿ
ರಾಜಶೇಖರನವರ ನಾಮಾವಳಿಗಳಂ ಸ
ದಾ ಜಪಿಸುತತಿ ವಿಲಾಸದಿ ಮಾಳಿಂಗನಿಂದ ಸೇವ್ಯಗೊಂಬುತ್ತ ಮೆರದಿರ್ದನು ||೧೨೪||

ವೀರಮಾಳಿಂಗ ನಿಜಭಕ್ತಿಯಿಂ ಗುರುಸಿದ್ಧ
ಬೀರನಂಸ್ಮರಿಸುತ್ತಲಿರಲಿದಕೊಪ್ಪದೆ ಕೃ
ಪಾರಹಿತನಾಗಿ ಶಿಷ್ಯಗೆ ಪೇಳ್ದ ಕಪ್ಪೆಕಲಕದ ಜಲಮಂ ಪುಳಮುಟ್ಟದ
ಸಾರಪುಷ್ಪಂಗಳಂ ತಂದೆನ್ನ ಪೂಜಿಪುದೆನಲ್
ಮೀರದಾ ಮಾಳಿಗನೆದ್ದು ರೇವಣನಾ
ಧಾರಮಂ ತಕ್ಕೊಂಡು ಹೂಜಿಯಂ ಪಿಡಿದು ಕಂಬಳಿಯಂ ಕಾಸಿಯಂ ಕಟ್ಟಿ ನಡೆದ ||೧೨೫||