ಅನಿತರೊಳಾ ಸಿದ್ಧಬೀರ ಮಾಸಿದ ರೂಪ
ವನು ಧರಿಸಿ ಮಾಳಿಂಗರಾಯನೈತರುವ ಪಥ
ಕೊನೆಯೊಳಗೆ ನಿಂತು ಕೇಳಿದ ನೆಲವೋ ನೀನಾರು ಪೆಸರೇನು ಪೋಗ್ವದೆತ್ತ
ಯನಲವಂ ಪೇಳ್ದ ವರಸಿದ್ಧ ಬೀರನ ಶಿಷ್ಯ
ಎನಗೆ ಮಾಳಿಂಗನೆಂಬಿ ಅಭಿದಾನ ನಾನೀಗ
ಮಿನುಗುತಿಹ ಪುಷ್ಪೋದಕಗಳ ತರುವದಕೆ ಪೋಗುವೆ ಪಾಂಡ್ರಕೋಟಿ ಪುರಕೆ ||೧೨೬||

ಎಲವೋ ನೀನೆಂತಹ ಮರುಳ ಮಹಾ ಮಹಿಮಂಗೆ
ನಿಲುಕದ ಕೆಲಸಕೆ ಪೋಗುವರೆ ಬಿಡುಬಿಡು ನಿನ್ನ
ಗೊಳಿತಲ್ಲ ನಿನ್ನಂ ಕೊಲ್ಲಿಪುದಕಾಗಿ ಗುರು ಕಳಿಸಿಕೊಟ್ಟಂತೆ ತೋರುವದೆನ್ನಗೆ
ಹುಲುಮನುಜ ಹಿಂದಕ್ಕೆ ತಿರುಗು ಪಥದೊಳಗಿರ್ಪ
ಖಿಲ ದಾನವರ ಬಳಗ ಕಂಡರತಿ ಪ್ರೀತಿಯಿಂ
ಸುಲಿದು ತಿಂಬದೆ ಬಿಡರು ಪೋಗಿ ಸಾಯಲಿಬೇಡ ನಿಲ್ಲೆಂದು ಕರಮುಗಿದನು ||೧೨೭||

ಆ ಕಪಟ ಬೀರನಂ ಜರಿದು ಗುರ್ವಾರ್ಚನೆಗೆ
ಬೇಕಾದ ಪುಷ್ಪೋದಕಂಗಳಂ ತರುವದಕೆ
ಸಾಕಾರದಿಂದೆ ಮುಂದಕ್ಕೆ ಪೋಗಲ್ಕಲ್ಲಿ ಕಾವಲಿಯೊಳಿರ್ದ ಖಳರು
ಭೀಕರದಿ ಬಾಯ್ದೆರೆದು ಬರಲವರು ಬೆದರದೆ ನಿ
ರಾಕರಸಿ ಸಿದ್ಧೇಂದ್ರನಾಧಾರ ತಳಿಯಲ್ವಿ
ವೇಕದಿಂ ಪತಗೊಟ್ಟು ಕಳಿಸಲ್ಕೆ ಮಾಳಿಂಗ ಪಾಂಡ್ರಕೋಟೆಗೆ ಪೋದನು ||೧೨೮||

ಆದಿಶೇಷನ ಕಾವಲಿಯಂ ದಾಂಟಿ ಪೋಗಿ ಜಲ ಪು
ಷ್ಪೋದಕಂಗಳಂ ಕೊಂಡು ಹಿಂದಕ್ಕೆ ತಿರುಗಿ ಜಗ
ದಾದಿ ಮೂರ್ತಿಯಂ ಧ್ಯಾನಗೈಯ್ಯುತ್ತ ಹುವ್ವಿನೂರಿನ ಸಮೀಪಕ್ಕೆ ಬರಲು
ಮೋದದಿಂ ಜಡೆಸಿದ್ಧರೊಂದಾಗಿ ಮಠದಿ ಸುಖ
ನಾದದನ ಪೂರಿ ಹೆಗ್ಗಾಳಿ ಜಾಗಟಿ ಕೊಳಲ
ನೂದಿ ಡೊಳ್ಳಿನ ಶಬ್ದ ಘನಮಾಡಿ ಬಾವಾನ್ನ ಬಿರುದುಗಳ ಪಿಡಿದಿದ್ದರು ||೧೨೯||

ವೀರಮಾಳಿಂಗನೈ ತರುವದಂ ಕಂಡು ವರ
ಬೀರೇಶ ಮಾಯಾರೂಪವ ತಾಳಿ ಮಠಬಿಟ್ಟು
ದೂರದೋಳ್ಪೋಗಲಾ ಮಾಳಿಂಗನೈ ತಂದು ಗುರುವಿಲ್ಲದಂ ತಿಳಿದನು
ಭಾರಿಭಾರಿಗೆ ಡೊಳ್ಳಿನೋಲಗ ಮಾಳ್ಪ ಜಡೆ
ಗಾರರಂ ಕರೆದೊರೆದು ದೇವರಿಲ್ಲ ಗುಡಿಯ
ಸೇರಿ ಪೂಜಿಸುತಿಹರೆ ಬಿಡಿರೆಂದು ಭರದಿ ಗುರುವಿನಂ ಶೋಧಿಪುದಕೆ ಪೋದಂ ||೧೩೦||

ನಂಬಿಗೆಯ ಭಾವದಿಂದತ್ತಿತ್ತ ಶೋಧಿಸ
ಲ್ಕಿಂಬಾದ ಸ್ಥಲದಿ ಗುರು ಕೂತಿರಲು ಮಾಳಿಂಗ
ಬೆಂಬಿಡದೆ ಬರುವದಂ ತಿಳಿದು ಸರ್ಪಾಗಿ ಹುತ್ತಿನ ಮಧ್ಯದೊಳು ಪೊಕ್ಕನು
ಕಂಬಳಿಯ ಬೀಸುತ್ತ ಕರಕರೆದು ಬೇಸರದೊ
ಳಂಬಿಕಾ ವಲ್ಲಭನನೆನಿಸುತ್ತ ವೃಕ್ಷನಿ ಕು
ರುಂಬಮಂ ದಾಂಟಿ ಹುತ್ತಿಗೆ ಬಂದು ನಿಂತು ವನ ಸೇರಿರ್ದುದಂ ತಿಳಿದನು ||೧೩೧||

ಪರಮಪರಿಪೂರಿತ ಬಾ ಬರ್ಮನಸುಜಾತೆ ಬಾ
ಧರೆಯೊಳುರೆ ಖ್ಯಾತ ಬಾ ಎನ್ನ ಪ್ರೀಯ ತಾತ ಬಾ
ಸ್ಥಿರಕರ ಪುನೀತ ಬಾ ಇಷ್ಟಪ್ರದಾತ ಬಾ ಮಹಿಮ ಸಂಕೇತ ಬಾರೋ ಬಾಬಾ
ದುರಿತೌಘದೂರ ಬಾ ದೇವವತಾರ ಬಾ
ಕರುಣಪರಿಪೂರ ಬಾ ಭುವನಗಂಭೀರ ಬಾ
ಶರಣಸುವಿಚಾರ ಬಾ ಶಿವಸಿದ್ಧ ಬೀರ ಬಾರೆಂದು ಕೂಗಿದಲಿ ಪ್ರೇಮದಿಂದ ||೧೩೨||

ಕರಿಸಿಂಹಗಳಿರಾ ಕುರಣಾತ್ಮನಂ ಕಂಡಿರಾ
ಮರುಗುಲ್ಮಗಳಿರಾ ಮಹಿಮಾಂಕನಂ ಕಂಡಿರಾ
ಹರಿಣವೃಕಗಳಿರಾ ಹರನೊರಸುತನಂ ಕಂಡಿರಾ ಶುಕಪಿಕ ಬಕಾಳಿಗಳಿರಾ
ಬಿರಿದಂಕಸಿದ್ಧ ಬೀರೇಂದ್ರನಂ ಕಂಡಿರಾ
ಪರಿಪರಿಯೊಳುರೆ ನೊಂದು ಪರಮದುಃಖದೋಳೀಗ
ತರಹರಿಸುತಿರ್ಪ ತರುಳಗೆ ತಿಳಿಸಿ ರಕ್ಷಿಸೆಂದೆಡಬಲಕೆ ಬಾಯ್ಬಿಟ್ಟನು ||೧೩೩||

ಎನ್ನ ಕರದಿಂ ಸೇವ್ಯಗೊಂಬುವದು ಬಿಟ್ಟು ಮ
ತ್ತಿನ್ನೆಲ್ಲಿ ಸೇರಿರುವಿ ಪರಿಪರಿಯಿಂದ ಕರೆದರೂ
ನಿನ್ನದಭಿಲಾಷೆವೇನದು ಎನಗೆ ಪೇಳಿ ರಕ್ಷಿಸದಿರ್ದರೀ ಕಾಯವ
ನಿನ್ನ ಪಾದಕ್ಕರನಿಮಿಷದೊಳೊಪ್ಪಿಸದಿರ್ದ
ಡೆನ್ನಯಿಳೆಯೊಳು ವೀರಮಾಳಿಂಗನೆಂಬ ಪೆಸ
ರಿನ್ನೇಕೆ ಸಲ್ಲದೆಂದಾಯುಧವ ತೆಗೆದಿರಿದುಕೊಳ್ಳುವದಕನುವಾದನು ||೧೩೪||

ತನುಮನಸು ಭಕ್ತಿಯಿಂ ನೋಡಬೇಕೆಂದು ಹು
ತ್ತಿನೊಳಿರ್ಪ ಬೀರನಹಿರೂಪದಿಂ ಪುಟನೆಗೆದು
ಘನಭಯಂಕರದಿ ಮೇಲಕೆ ಬರಲ್ಕಾ ವೀರಮಾಳಿಂಗ ನೋಡಿ ತನ್ನ
ಜನಕನಿವನೆಂದು ಜವದಿಂ ತಿಳಿದು ನುಡಿದ ಮುಂ
ದೆನಗೀ ಕಪಟರೂಪ ತೋರಿದರೆ ಬೆದರುವನೆ
ಮನಸಿಜಾಂತಕನು ಚರಬೈರವ ರ ವೇಷಮಂ ಧರಿಸಿ ಭುವನಕ್ಕೆ ಬರಲು ||೧೩೫||

ಹರನಿಗಂಬರವಿತ್ತ ದಾಸಯ್ಯ ಯವ್ವನವ
ನೆರ ಪಡೆದ ಕುಂಬಾರಗುಂಡಯ್ಯ ಸತಿಯ ಶಂ
ಕರಗಿತ್ತ ಸಿಂಧುಬಲ್ಲಾಳ ಶಿವವ್ರತಕಾಗಿ ತನ್ನ ಸುಕುಮಾರನನ್ನು
ಭರದು ಮುಸಲದಿ ಪೊಡೆದು ಕೊಲ್ಲಿರ್ದ ನಿಂಬೆಕ್ಕ
ತರುಳನಂ ಕೊರೆದು ಜಗದೀಶಗರ್ಪಿಸಿದ ವರ
ಸಿರಿಯಾಳ ಮೃಡನ ಮಗನಂ ಮಾಡಿಕೊಂಡ ಅಮ್ಮವೈ ಮುಖ್ಯ ಸುಭಕ್ತರು ||೧೩೬||

ಕಪಟರೂಪವ ಕಂಡು ನಿಂದಿಸದೆ ಮನದೊಳಗೆ
ಕುಪಿತರಾಗದೆ ಶಂಕರೀಶನೆಂದರಿದು ಸ
ತ್ಕೃಪೆಗೆ ನೆಲೆಯಾಗಿ ಶಿವಲೋಕಮಂ ಸೇರಲಿಲ್ಲವೇ ಸಿದ್ಧಬೀರೇಂದ್ರನೇ
ಅಪರಾಧಮೇನೆನ್ನದಿಹುದದಂ ಪೇಳು ನೀ
ನಪರಮಿತ ಭೀಕರವ ತೋರಿದೆಡೆ ಬೆದರಿದನಾ
ನಪಹಾಸ್ಯಕೀಡಾಗಿ ಬಾಳ್ದೆಪೆನೆ ಮತ್ತೊರೆವನೇಕಚಿತ್ತದೋಳಾಲಿಸು ||೧೩೭||

ಧರೆಯೊಳೆಣೆಯಿಲ್ಲದಷ್ಟೈಶ್ವರ್ಯ ಸುಖಭೋಗ
ವೆರಸಿ ಭೂಪತ್ವಮಂ ಧರಸಿ ಗುರುಲಿಂಗಾದಿ
ಚರಭಕ್ತಿಯಿಂದೆ ವೈರಾಗ್ಯಮಂ ತಾಳಿ ಶ್ರೀಶೈಲಕ್ಕೆ ಸಿದ್ಧನಾಗಿ
ಚರಿಸುತಿರಲಾತನ ಸುಭಕ್ತಿಯಿಂ ನಿಜವಾಗಿ
ಪರೀಕ್ಷಿಸುವಕ್ಕೆ ಶಿವ ಶ್ರವರೂಪವನು ತಾ
ಧರಿಸಿ ಪಥಕಡ್ಡಾಗಿರಲ್ಗಭವನೆಂದರಿಯಲಿಲ್ಲವೇ ಸಕಳೇಶನು ||೧೩೮||

ಅನಘ ಶಿವಸಿದ್ಧಬೀರೇಶ್ವನೆ ನೀನೀಗ
ಲನುಪಮಸ್ಯರೂಪಮಮ್ಮರೆ ಮಾಜಕಾಪಟ್ಯ
ಮನದಿಂದೆ ಉರಗರೂಪವತಾಳಿ ಎನ್ನಂ ಪರೀಕ್ಷಿಸುವದಕ್ಕೆ ಬಂದೆ
ಘನಭಯಂಕರತೋರ್ದರಂಜುವನೆ ನೋಡೆಂದು
ಅನುವಿನಿಂದಾ ಸರ್ಪನನ್ನು ಪಿಡಿಯಲ್ಕೆ ನಿಜ
ವನು ತೋರಲಾ ಗುರುವರೇಣ್ಯನಂ ಕೊಂಡು ಮನೆಗೈತಂದು ವಿಭವದಿಂದೆ ||೧೩೯||

ಏಕಚಿತ್ತದಿ ಸದ್ಗುರುವಿನ ಪಾದಕಮೃತಾಭಿ
ಷೇಕಮಂಗೈದು ತಾಂಣ ತಂದುದಕ ಮಜ್ಜನವ
ಸಾಕಾರದಿಂಗೊಳಿಸಿ ಪುಳ ಮುಟ್ಟೆದಿರ್ದ ಪುಷ್ಪಂಗಳಂ ಧರಿಸಿ ನುತಿಸಿ
ಬೇಕಾದ ಪತ್ರಿಗಳನಿಟ್ಟು ಘಮಘಮಿಸುವ ಧೂಪ
ಹಾಕಿ ಜಯಜಯವೆಂದು ದೀಪಕರ್ಪೂರ ಬೆಳಗ
ಲಾ ಕನಕಜಡೆಯ ಗುರುಸಿದ್ಧಬೀರಂ ವೀರಮಾಳಿಂಗಗೊಲಿದು ಪೊರೆದ ||೧೪೧||

ಗುರುವಿನಂದಪ್ಪಣೆಯ ಪಡೆದು ಮಾಳಿಂಗ ಸಂ
ಚರಿಸಿದನು ಸುಕ್ಷೇತ್ರಂಗಳಂ ನೋಡುತ್ತ ಕಲ್ಯಾಣ
ಪುರಕೆ ಬರಲಲ್ಲಿ ಮೃತಿಹೊಂದಿದ್ದ ವೃಷಭನನ್ನು ಮೆರಿಸುತಿರಲದನು ಕಂಡು
ಮರುಳರಿಹರೆಂದಿ ವರಮುಖ ಭಂಗಿತವ ಮಾಳ್ಪ
ತೆರನಾವುದೆಂದು ಯೋಚಿಸಿ ಸತ್ತ ಕುರಿಯಂ ಪೊತ್ತು
ಭರದೊಳು ಮಹಾದ್ವಾರಕ್ಕೆತಂದು ವಿಶ್ರಮಿಪುದಕೆ ನಿಂದನಿತ್ತೆ ||೧೪೧||

ಮಡಿವಾಳ ಮಾಚಯ್ಯ ಕಿನ್ನರಿ ಬ್ರಹ್ಮಯ್ಯ
ವಡೆಹಲ್ಲು ಬಂಕಯ್ಯ ಮೋಳಿಗೀ ಮಾರಯ್ಯ
ಕಡುವಿಸುಪ ಕಲಿಕೇತ ಬ್ರಹ್ಮಯ್ಯ ಮೇದಾರ ಕೇತಯ್ಯರೆಲ್ಲರು ಕೂಡಿ
ಸಡಗರದಿ ನಿರ್ಜೀವ ನಂದಿಯಂ ಶೃಂಗರಿಸಿ
ಮೃಡನ ಸ್ಮರಿಸುತ ಗಂಧಪರಿಮಳಂಗಳಂ ಧರಿಸಿ
ನಡುಬೀದಿಯಲ್ಲಿ ಮೆರೆಸುತ್ತ ಉಘೇಚಾಂಗುಯಂದಡಿಗಡಿಗೆ ಘೋಷಿಸುತಿರೆ ||೧೪೨||

ಲಿಂಗವಿಲ್ಲದ ಭವಿಯು ಹಸುವಳಿದ ಕುರಿಯ ತ
ನ್ನಂಗದೋಳ್ಪೊತ್ತಿತ್ತಲೈ ತರುವನೀಗಲಾ
ಮಂಗನಂ ಬಡಿದು ಶಿವಿಡಿದತ್ತ ದಬ್ಬಿಬಿಡಿರೆಂದು ಬಂದರು ಮುಂದಕೆ
ಸಿಂಗಾರದೊಯ್ಫವಂ ಕಣ್ಗೆದೋರದೆ ನಮ್ಮ
ರಂಗುಬೀದಿಯೊಳೈತರುವರೆ ಛೀಯೆಂದು ಮುಖ
ಭಂಗಿತವ ಮಾಡಲಾ ಮಾಳನಚ್ಚರಿಗೊಂಡು ಬಯ್ಯುವದೇಕೆನಗೆಂದನು ||೧೪೩||

ಎಲವೋ ನೀನಾರ್ನಿನ್ನ ಪೆಸರೇನು ಪೇಳು ಪುರ
ನಿಲಯದೋಳ್ಪರಬೇಡ ನಿಲ್ಲು ನಿಲ್ಲೆಲೊ ನಿನ್ನ
ಕುಲಮೂಲಮಂ ತಿಳಿಸು ಲಿಂಗಿಗಳ ಮುಖನೋಡಲಾಗದೆಂದೊರೆದರವಗೆ
ಕುಲಕಲ ನಗುತಮಾಳ ಪೇಳ್ದನವರಿಂಗೆ ಈ
ಇಳೆಯೊಳಗೆ ಸಿದ್ಧರೇವಣನ ನಿಜಪೌತ್ರನಿಂ
ಮ್ಮೊಳು ತಿಳಿರಿ ಲಿಂಗಾಂಗಿ ನಾನಿರುವೆನೆನಲದಂ ತೋರೆಂದು ಕೇಳ್ದರವರು ||೧೪೪||

ಹರಭಕ್ತನಾದರೀ ಸತ್ತ ಕುರಿಯಂ ಪೊತ್ತು
ಬರುತಿರ್ಪರೇ ಮರುಳ ಸಾಕು ಸುಮ್ಮನೇ ನಡಿಯೋ
ಹರಕಾತಿಗೈವದಕ್ಕೆ ಸರಿಸರಿಯನುತ ನೂಕಿಬಿಟ್ಟರು ಚಾರರು
ತ್ವರದಿಂದಲಾಕುರಿಯ ಧರೆಗಿಳಿಸಿ ಮಾಳಿಂಗ
ಕರಮುಗಿದು ಕೇಳ್ದ ನಿಮ್ಮುತ್ಸವದ ಸಂಗತಿಯ
ನೊರೆದರೀಗಳೆ ನಾನು ಲಿಂಗಮಂ ತೋರುವೆನು ಬರಿದೆಯೋಚನೆಯಾತಕೆ ||೧೪೫||

ಮಂದಭಾಗ್ಯನೇ ನಮ್ಮ ಪುರನಿಲಯದೊಳ
ಗೊಂದು ನಂದಿ ಮೃತಿಹೊಂದಿರಲದಂ ಚಂದ
ದಿಂದ ರಥಮಂದಿರೊಳಿಟ್ಟು ಶೃಂಗರಿಸಿ ಮೆರೆಸುತ್ತಿರುವೆವೆಂದು ಪೇಳ್ದರು ಚಾರರು
ಇಂದು ಮೃತಿಹೊಂದಿದ ಕುರಿಯತಂದರೆನಗೀಗ
ನಿಂದಿಸುವಿರೊಳ್ಳಿತವೆ ಅಸುವಳಿದ ನಂದಿಯಂ ನೀವು
ಚಂದದಿಂ ಮೆರೆಸುವದು ನಿಮ್ಮಗಿದು ಧರ್ಮವೇ ಪೇಳೆಂದ ಮಾಳಿಂಗನು ||೧೪೬||

ಅಲ್ಲನಡಿಯೆಂದರಿಷ್ಟೇಕೆ ನಿನ್ನಗೆ ಛಲವು
ಸಲ್ಲದಿದು ಸುಮ್ಮನಿರು ಯಲ್ಲಿ ಕಲಿತೀ ನುಡಿಯು
ಹಲ್ಲು ಮುರಿಸುವೆವು ಪುರದಲ್ಲಿರುವದುಚಿತಮಲ್ಲೆಂದು ನಿಂದಿಸಿ ನುಡಿದರು
ಮೆಲ್ಲಮೆಲ್ಲನೆ ನುಡಿದ ಭಟರ್ಗೆ ಮಾಳಿಂಗ ನಿ
ಮ್ಮಲ್ಲಿರ್ಪ ಲಿಂಗದ ಮಹಿಮೆಯಿಂದ ನಂದಿಯಂ
ಯಲ್ಲರರಿವಂತೆ ಪ್ರಾಣಪ್ರತಿಷ್ಟೆಯಂ ಮಾಡಿ ತೋರ‍್ವದೆಂದನು ತವಕದಿ ||೧೪೭||

ನುಡಿದರಾ ಚಾರರಸುವಳಿದ ನಿನ್ನಯ ಕುರಿಯ
ಕಡು ತವಕದಿಂದೆ ಪ್ರಾಣಪ್ರತಿಷ್ಠೆಯ ಮಾಡಿ
ದಡೆ ನೀನು ಗುರುಸಿದ್ಧ ರೇವಣನ ಪೌತ್ರನಹುದೆನಲಾಗ ಮಾಳಿಂಗನು
ಮೃಡನ ಮನದೊಳು ಧ್ಯಾನಿಸುತ ಮಹಾಭಸಿತವನು
ಪಿಡಿದು ಕರದಿಂದದರ ತನುವಿನೋಳ್ತಳಿಯಲ್ಕೆ
ತಡಿಯದೆದ್ದಾ ಮಾಳನಂ ನೋಡಿ ಕುಣಿದಾಡಲಿಕ್ಕೆ ಪ್ರಾರಂಭವಾಯ್ತು ||೧೪೮||

ಚರರು ಬಂದಾ ಮೇಷನಂ ನಿಲ್ಲಿಸುತ್ತದರ
ಶಿರಚರಣಗಳ ಪಿಡಿದು ನಿಲ್ಲಿಸಲ್ಕಾ ಮಾಳ
ಶಿರವಿಡದವಗೆ ಟಗರಜೋಗಿಯಾಗೆಂದು ಹಿಂಗಾಲಿಡಿದೆಳೆದೆ ಭಟನಿಗೆ
ನಿರುತದಲಿ ಕಟಗನಾಗೆಂದು ಮನದೋಳ್ಕೋಪ
ವೆರಿಸಿ ಪಲ್ಗರಿದು ಶಾಪವ ಕೊಡಲ್ಕಾ ಭಟರು
ಮರುಗುತಾತ್ಮದೊಳು ಮುಂದಿದಕೆಮಗುಚಿತಗತಿಯಂ ಪೇಳಿ ರಕ್ಷಿಪುದೆಂದರು ||೧೪೯||

ವರಮಾಳ್ದ ಪೇಳ್ದ ನನ್ನಯ ಶಾಪಕೆ ವಿಶ್ಯಾಪ
ಪರಿಯಾವುದಿಲ್ಲಿ ನಿಮಗೊಂದೊಂದು ಮೇಷ ಉಡು
ಗೊರೆಯಾಗಿ ಕೊಡುವೆನೆಂದೊರೆದು ಕರದೊಯ್ವನಿತರೊಳಗೋರ್ವ ಪರಿಚಾರಕಂ
ಭರದಿಂದೆ ಬಂದು ಮಾಳಿಂಗನ ಮಹತ್ವವನು
ಸರಿದನಾಲೆ ಬಸವನಲ್ಲಿಗೈತಂದಾತ
ಕರಸಿ ಕೊಂಡತಿ ಮುದದಿ ಕಲ್ಯಾಣಪುರದಿ ಚಂದನಗೇರಿಯಂಬ ಸ್ಥಲದಿ ||೧೫೦||

ಮನಗೊಟ್ಟು ಸತ್ತ ಕುರಿ ಪೊತ್ತು ಮಾರೆಂದಾಜ್ಞೆ
ಯನು ಪೇಳಿ ವರಸಿ ಮೈದಡವಿ ಕಳಿಸಲ್ಕೆ ಬಂ
ದನು ಚರರ ಕರೆದುಕೊಂಡವಸರದಿ ಪಥಗೂಡಿ ಮೇಷವಾಸಸ್ಥಾನಕ್ಕೆ
ಘನಮೋದದಿಂದಲಾ ಶಾಪಗ್ರಸ್ಥರಿಗೆ ಕುರಿ
ಯನು ಕೊಡಿಸಿ ಹಾಲ್ಮತದ ಬಿರಿದುಗಳನುರೆ ಪೊಗಳಿ
ದಿನಗಳೆಯರೆಂದೊರೆದು ಗುರುಸಿದ್ಧ ಬೀರನಿಹಸ್ಥಾನಕ್ಕೆ ಬಂದ ಭರದಿ ||೧೫೧||

ಗುರುಶಿಷ್ಯರೊಂದಾಗಿ ಮಠದೊಳಿರುತಿರಲತ್ತ
ನೆರೆದ ಜಡೆಸಿದ್ಧರೆಲ್ಲರು ಕೂಡಿ ಕಪಟದಿಂ
ವರವೀರ ಮಾಳಿಂಗನಂ ಕೊಲ್ಲಬೇಕೆಂದು ಕೋಣನೂರಿನ ಸ್ಥಲದೊಳು
ಕರಿದೇವರುತ್ಸವವ ಮಾಳ್ಪೆವೆಂದವರೋರ‍್ವ
ಚರನ ಕಳಿಸಲ್ಕವ ವಿಭೂತಿಯಂ ತಂದುಭಯ
ಚರಣಕ್ಕೆ ಧರಿಸಲಿದು ಬಂದನಾ ಕಾಲಯೆಂದಾತ್ಮದೋಳ್ತಿಳಿದುಕೊಂಡೆ ||೧೫೨||

ಬಂದ ಚರನಂ ನಿಲಿಸಿ ಬರುವೆನೆಂದಭಯಮಂ
ಚಂದದಿಂ ಕೊಟ್ಟು ಗುರುವಿನ ವಿಮಲ ಪಾದಾರ
ವಿಂದಮಂ ಪೂಜೆಗೈದತಿಭರದಿ ಕೋಣನೂರಿನ ಮಾರ್ಗಮಂ ಪಿಡಿದನು
ಮುಂದಡಿಯಿಡುತ್ತೈತರಲ್ಕಿತ್ತ ಜಡೆಸಿದ್ದ
ರೊಂದಾಗಿ ಮಾಳಿಂಗನಂ ಕೊಲ್ಲುವದ ಕೇಳು
ಮಂದಿಯಂ ಮಧ್ಯ ಪಥದೋಳ್ಗುಪ್ತದಿಂ ಕೂಡ್ರಿಸಿಲರಲಲ್ಲಿಗೈ ತಂದನು ||೧೫೩||

ಬಪ್ಪುದಂ ಕಂಡು ನೀನಾರೆಲ್ಲವೋ ನಿಲ್ಲು ಕ
ಣ್ದಪ್ಪಿ ಪೋಗುವದುಚಿತವಲ್ಲ ಪೆಸರೇನು ನಿ
ನ್ನಪ್ಪನಾವನು ಎಮಗೆ ಪೇಳಿ ಪಾರಾಗೆಂದು ನುಡಿಯಲವನಿಂತೆಂದನು
ಒಪ್ಪಿತ ನುಡಿಗಳಿಂದೆ ಕೇಳದೆನ್ನಗೆ ಕ್ರೋಧ
ಮಪ್ಪಂತೆ ದುರ್ನುಡಿಗಳು ಸುರಿದರೆ ಬೆದರುವನೆ
ಮುಪ್ಪುರಾಂತಕನರದೊಳುದ್ಭವಿಸಿ ಮೆರೆವ ಗುರು ಬೀರೇಂದ್ರ ಪೊರೆವನೆನ್ನಂ ||೧೫೪||

ಎಂದು ಮಾಳಿಂಗನವರಿಗೆ ಸಿಗದೆ ಯುಕ್ತಿಯಿಂ
ಮುಂದಕ್ಕೆ ನಡೆದು ಬಂದನು ಕೋಣನೂರಿಗತಿ
ಚಂದದಿಂದೆಡೆ ಬಲವನೀಕ್ಷಿಸದೆ ಜಿಗಿದು ಹಾರಿದನಗ್ನಿಕುಂಡದೊಳಗೆ
ನಂದಿತುರಿ ತಕ್ಷಣದಿ ಸರ್ವಜನ ನೋಡುತಿರೆ
ಹಿಂದಕ್ಕೆ ಹಾರಿ ತೆರಳುತ್ತಧಿಕ ತೀವ್ರದಿಂ
ತಂದೆ ಬೀರೇಂದ್ರನಿಹ ಹುವ್ವಿನೂರಿಗೆ ಪೋಗಿ ಪೇಳ್ದನೀ ವೃತ್ತಾಂತವ ||೧೫೫||

ಖೂಳಸಿದ್ಧರು ಮಾಡ್ದ ಕಪಟಕಾರ‍್ಯಂಗಳಂ
ಕೇಳಿ ಬೀರೇಂದ್ರ ಕಡುಗೋಪದಿಂದಾ ವೀರ
ಮಾಳಿಂಗನಿಗೆ ಮರಳಿ ಪೇಳಿದಂ ನೀಂ ಪೋಗಿ ನಂದಿದಗ್ನಿಯಂ ಕುಂಡದಿ
ಭಾಳಾಕ್ಷಣಂ ಸ್ಮರಿಸುತದರೊಳಗೆ ಹಾರಿ ಉರಿ
ಯೇಳುವಂದದಿ ಮಾಡಿಬಂದೆಡೆನ್ನಯ ಶಿಷ್ಯ
ತಾಳುಧೈರ್ಯವ ಮಗುಳಿ ಕೋಣನೂರಿಗೆ ತ್ವರದಿ ಪೋಗೆಂದನುಜ್ಞವಿತ್ತಂ ||೧೫೬||

ಗುರುಪೇಳ್ದಕೊಪ್ಪಿ ಕೋಣನೂರಿಗೆ ಬರಲ್
ನೆರೆದ ಜಡೆಸಿದ್ಧರೊಂದಾಗಿ ಮಾಳಿಂಗನಂ
ಸ್ಮರಿಸಿ ಸ್ಭಕ್ತಿಯಿಂ ನಂದಿದುರಿಯಂ ಯೆಬ್ಬಿಸುತ್ತೆಮ್ಮನನುದಿನದಲಿ
ಪರಿಪೋಷಿಸೆಂದು ಬಿನ್ನೈಸಲಾತಂ ದಯಾ
ಪರನಾಗಿ ನಂದಿದಗ್ನಿಯೊಳು ಪಾದವನಿಡ
ಲ್ಕುರಿಯು ಧಗ್ಗೆಂದು ಆಕಾಶಕ್ಕಡರಲಾಗ ಜಯವೆಂದರಖಿಳ ಜನರೆಲ್ಲರು ||೧೫೭||

ಜಡೆಸಿದ್ಧರಂ ಪೊರೆದು ವೀರಮಾಳಿಂಗ ಬಹು
ದಿಡಿಗಿನಿಂ ಬೀರೇಂದ್ರನೆಡೆಗೆ ಬಂದಾತುರದಿ
ದೃಢಸಂಗತಿಯ ಪೇಳಲಾಗಲಾತಂ ಪರಮಸಂತೋಷಯುಕ್ತನಾಗಿ
ಅಡಿಗೆರಗಿದಾ ಶಿಷ್ಯ ವೀರಮಾಳಿಂಗನಂ
ಪಿಡಿದೆತ್ತಿ ಪುಳಕದಿಂದಾಶೀರ್ವಚನವಿತ್ತು
ಪೊಡವಿಯೊಳಿನ್ನಸಮ ಸೇವಕನು ಪುಟ್ಟುವದು ದ್ರೌರ್ಲಭ್ಯವೆಂದು ನುಡಿದ ||೧೫೮||

ತನಯ ಕೇಳ್ಭೂಲೋಕ ಸುಖಸಾಕು ಸತಿಪುತ್ರ
ರನು ಕೂಡಿ ನಾವೀರ್ವರೊಂದಾಗಿ ಶಿವಪುರಿಗೆ
ಘನಮೋದದಿಂದೆ ಪೋಗುವ ಬನ್ನಿರೆಂದು ಸಿದ್ಧಾಗಲಲ್ಲಿಯ ಭಕ್ತರು
ತನಯರಂಬಿಟ್ಟು ಪೋದರೆ ಮುಂದೆ ಭು
ವನುದೆಮ್ಮನು ಪೊರೆವರಾರೆನಲ್ಕೆನ್ನನುಂ
ಧ್ಯಾನಿಸಿರಿ ಮಿನುಗುತಿಹ ಬಿರ್ದಾವಳಿಗಳನ್ನು ಧರಿಸಿ ಅನುದಿನ ಸೇವಿಪರ್ಗೆ ನಾನು ||೧೫೯||

ಬಯಸಿದ ಫಲಗಳಂ ಕೊಟ್ಟು ಪಾಲಿಸುವೆ ನಿ
ಶ್ಚಯವೆಂದು ತಿಳಿರಿ ನಾಂ ಗುಪ್ತದೊಳಿರುವೆನಿ
ಳೆಯೊಳಗೆ ಭಯಮಂ ಕಳಿರಿ ವೀರಶೈವದ ಸುಶಕ್ತಿಯಂ ಕೊಡುವೆ ಪೂಜಿಸುವ ಜನಕೆ
ಭಯಭರಿತ ಭಕ್ತಿಯಿಂ ಬಾಳ್ವ ಮನುಜರ್ಗೆ ಗುರು
ದಯವಿಟ್ಟು ಪೋಷಿಸುವನೆಂದು ಭಕ್ತರ್ಗೆ ನಿ
ರ್ಭಯ ಪೇಳಿ ಶಿವನಾಜ್ಞೆಯಂತೆ ನಾಲ್ವರು ಕೂಡಿ ಕೈಲಾಸಪಥವಿಡಿದರು ||೧೬೦||

ಆ ಮಹಾ ಪಥನದಿಸಲೆ ವಿರಾಜಿಸುವ ಭವ
ಭೀಮನ ಸುಭಕ್ತರಂ ಕರಕರದವರ ಮನೋ
ಕಾಮಿತ ಫಲವನಿತ್ತು ಕಾರುಣ್ಯದಿಂದೆ ಪರಿಪಾಲಿಸುತ ಗುರುಸಿದ್ಧನು
ನಾಮಗಳ ನೆನೆಯುತ್ತ ಸರ್ವರು ಉಘೇಯೆನುತಿರೆ
ಲ್ಕಾ ಮಹಿಮ ಬೀರೇಶ ಸತಿಪುತ್ರಶಿಷ್ಯರಂ
ನಾಮೋದದಿಂ ಕೂಡಿ ಭೂತಲವ ಬಿಟ್ಟು ಗಡಪೋದರು ಕೈಲಾಸಪುರಕ್ಕೆ ||೧೬೧||

ಮುದವಿಟ್ಟು ಲಾಲಿಸಿರಿ ಶಾಲಿವಾಹನ ಶಕದ
ಪದಿನೆಂಟುನೂರ ಮೂವತ್ತು ನಾಲ್ಕನೆಯ ಸೇ
ರಿದ ಮಹಾಪರಿಧಾವಿ ನಾಮಸಂವತ್ಸರಾಶ್ವೀಜ ಶುಕ್ಲಪಕ್ಷದಶಮಿ
ಸದಮಲಾದಿತ್ಯ ವಾರಕ್ಕೆ ಬಹುಸಾಂಗದಿಂ
ದಿದು ಪೇಳಿ ಮುಗಿಸಿದಂ ಭೂಮಿಯೊಳು ರಸ್ತಾಪು
ರದ ಶರಭಲಿಂಗನ ಪಾದಾಬ್ಜಷಟ್ಚರಣೋಪಮಾನ ಕವಿಭೀಮಾಖ್ಯನು ||೧೬೨||

ಈ ಸುಚಾರಿತ್ರಮಂ ಬರದೋದಿದರ್ಗೆ ಮೇಣ್
ಲೇಸಾಗಿ ಯಿದರರ್ಥವಾಧ್ಯಾಂತ ಪೇಳ್ದರ್ಗೆ
ಬೇಸರಿಯದುರೆ ಭಕ್ತಿಯಿಂದ ಕೇಳಿದವರ್ಗೆ ಪದುಳದಿಂ ಪಠಿಸಿದರ್ಗೆ
ಭಾಸಿತ ಸಕಲ ಭೋಗಭಾಗ್ಯಮೋಕ್ಷಂಗಳ ವಿ
ಲಾಸದಿಂದಿತ್ತುದುರಿತೌಘಮಂ ಸಂಹರಿಸಿ
ವಾಸ ರಸ್ತಾಪುರ ಶ್ರೀ ಶರಭಲಿಂಗೇಂದ್ರ ರಕ್ಷಿಸುವನಿಹಪರದೊಳು ||೧೬೩||

ಇಂತೆಬಲ್ಲಿಗೆ ಶರಭೇಶ್ವರ ಪಾದಾಬ್ಜಭೃಂಗನು
ವಿಶಿಷ್ಠವಿದ್ವಜ್ಜನ ವಿಧೇಯನು ಆದ ಭೀಮನಾಯಕ
ಕವಿಯಿಂ ಪ್ರಣೀತಮಪ್ಪ ಹಾಲ್ಮತೋತ್ತೇಜಕ ಪುರಾಣದಲ್ಲಿ
ಅಂತು ಸಂಧಿ ೯ಕ್ಕಂ ಪದನು ೫೯೮ಕ್ಕೆ ಮಂಗಲಂ ಮಹಾಶ್ರೀಶ್ರೀಶ್ರೀ