ಸೂಚನೆ ||

ಮುನಿಪ ಜಾಬಾಲನ ರುಧಿರದಿಂದೊಗೆದ ಕುರಿಗ
ಳನು ಶಂಕರಿಯು ಹುತ್ತಿನೊಳು ಪೊಗಿಸಿರಲ್ಕೆ ಪ
ದ್ಮನು ನೇಗಲೆಯುನೊಡೆಯುತಿರಲಲ್ಲಿ ಕುರಿ ಹೊರಡಲವುಗಳಂ ಪಾಲಿಸುವನು ||

ಶುಭ್ರಾಂಗ ಸಚ್ಚಿದಾನಂದ ರೋಗಕ್ಷಯಂ
ವಿಭ್ರಾಜಿಸುವ ಪಂಚಮುಖ ಸಾಸಿರಾಹ್ವಯಂ ಕೈಲಾಸಪುರ ಮಂದಿರಂ
ವಿಭ್ರಮಣ ಹರಭಸಿತಮಯಗಾತ್ರತಾರಾಪ
ತಿಭ್ರಾಜಮಾನ ಮಕುಟಂ ಪರಾತ್ಪರ ಮೃಡಮ
ನಭ್ರಾಂತಿಯನು ತೀರಿಸಿಳೆಯೊಳೀಕೃತಿಯನಹುದೆನಿಸುಜನೌಘದಿಂದ ||೧||

ಸಿದ್ಧರೇವಣನ ಪಾದಸ್ಮರಿಸುತ್ತ ಶಿವಪದ್ಮ
ಸದ್ಧರ್ಮದಿಂದ ಕುರಿಗಳ ಕಾಯಲಿಕ್ಕೆ ಸ
ನ್ನದ್ಧನಾಗುತ್ತ ಘನಪ್ರೇಮದಿಂ ಹಿಂಡುಗಳ ಹಿಂಗೊಂಡು ಕಂಬಳಿಯನು
ಬದ್ಧಟೊಪ್ಪಿಗೆಗೈದು ಕರದಿ ದಂಡವ ಪಿಡಿದು
ವೃದ್ಧನಂದದಿ ಸಾವಧಾನದಿಂದಡಿಯಿಡುತ
ಬುದ್ಧಿಯುತನಾಗಿ ಗಿರಿತಟದಿ ಹಟ್ಟಿಯನೆಗಳ್ಚಿ ಹರುಷದಿಂದಿರುತಿರಲ್ಕೆ ||೨||

ನಾಗಭೂಷಣನೊಂದು ದಿನ ಶಾಂಭವಿಯ ಸಹಿತ
ಯೋಗಿ ಸುರಸಿದ್ಧ ಖೇಚರರಿಂದ ಕೂಡಿ ಸುಖ
ಭೋಗದಿಂದಿರುತಿರಲ್ಕೋರ್ವ ಖೇಚರ ಬಂದು ಶಿವನಿಗಭಿವಂದಿಸುತ್ತ
ತಾಗಡನೆ ಹಿಂದಕ್ಕೆ ಸರಿಯಲ್ಮಹಾಯತಿಗೆ
ತಾಗಿ ತಾತನ ಚರಣಕೋಪದಿಂದಾ ಯತಿಯು
ಭೂಗೋಲದೊಳ್ಪೋಗಿ ನರನಾಗಿ ಪುಟ್ಟೆಂದು ಶಾಪಿಸಿದನಾಕ್ಷಣದಲಿ ||೩||

ಖೇಚರನು ಶಾಪದಿಂದಾ ಭವನೆಡೆಗೈತಂದು
ಭೋ ಚಂದ್ರಶೇಖರನೇ ನಿಮ್ಮ ಪಾದಕೊಂದಿಸುತ
ಲೀಚೆಗೆ ಬರುವ ಸಮಯದಲಿ ಎನ್ನ ಪಾದ ಮುನಿವರಗೆ ಸೋಂಕಲ್ಕಾತನು
ಭೂಚಕ್ರದಲಿ ಪೋಗಿ ನರನಾಗಿರೆಂದೆನಗೆ
ವಾಚಿಸಿ ಮಹಾಶಾಪವಿತ್ತನಿದಕೆ ವಿಶ್ಯಾಪ
ಸೂಚಿಸೆನ್ನಂ ಸಲಹು ಭಕ್ತಾಭಿಮಾನಿಯಂದೆರಗಿದನು ಪಾದಯುಗ್ಮಕೆ ||೪||

ಪಾದಕೆರಗಿದಾ ಖೇಚರನ ಶಿರವಪಿಡಿದೆತ್ತಿ
ಪದುಳ ಮಾನಸನಾಗಿ ಪೇಳ್ದೆನೆಲೋ ನಿನ್ನ
ಗೊದಗಿದ ವೆಸನಮಂ ಕಳೆವೆ ನೀಂ ಧರೆಗೆ ಪೋಗಿ ಜಾಬಾಲ ಮುನಿಯಾಗಿ ಪುಟ್ಟು
ಸದುಗುಣದಿ ಕೂಡಿ ಯೋಗಭ್ಯಾಸ ಮಾಡು ಘನ
ಮುದದಿಂದ ನಿನ್ನ ಕಾರ್ಯಕ್ಕಾಗಿ ನೂತನ ಪು
ರದ ಭೂಪ ಗಂಗಾಧರಂಗೆ ಸುತನಾಗೆನ್ನ ಚಿತ್ಕಲಾಂಶವು ಜನಿಪುದು ||೫||

ಮುಕ್ತನಾಗುವಿ ತಚ್ಛಿಸುವಿನಿಂದ ತಿಳಿಯಂದು
ಭಕ್ತಗಭಯವನಿತ್ತು ಕಳಿಸಲಾ ಖೇಚರ ವಿ
ರಕ್ತನಾಗೀ ಧರೆಯೊಳುದ್ಭವಿಸಿ ಗಿರಿತಟದಿ ಯೋಗಕ್ಕೆ ಸಿದ್ಧಾದನು
ಯುಕ್ತಿಯಿಂದುಸುರ್ವೆತತ್ಶಿವನ ಕಲೆ ರೂಪಾಗಿ
ವೆಕ್ತವಾಗಿಳೆಯೊಳೆಸದಿರುವ ನೂತನ ಪುರದಿ
ಶಕ್ತಿಯಂದದಿ ಸದ್ಗುಣಾಗಣಿತಳಾದ ಚಂಗಲಾದೇವಿಯುದರದೊಳಗೆ ||೬||

ಜನಿಸಲಾರ್ಭಕವು ಶಿವರೂಪದಿಂ ಶುಭದಿನದಿ
ಘನಪರಾಕ್ರಮಿಯಾದ ಗಂಗಾಧರಾವನಿಪ
ತನಯನುದಿಸಿದ ಸಂಗತಿಯ ಕೇಳಿ ಮನದೊಳಗೆ ಸಂತೋಷವಾಗಲತ್ತ
ಅನಲಾಕ್ಷ ಮೃತ್ಯುದೇವಿಯ ಕರೆದು ಪೇಳ್ದಮೇ
ದಿನಿಗೆ ನೀಂ ಪೋಗಿ ನೂತನ ಪುರನರೇಂದ್ರನ ಸು
ತನ ಶಿರವಗಡಿದು ಜಾಬಾಲಮುನಿ ಸನ್ನಿಧಿಯೊಳಿಟ್ಟು ಬಾರೆಂದ ಭರದಿ ||೭||

ಮಾಯದಿಂ ಮನೆಮನೆಯ ಶೋಧಿಸುತ ಬೇಗದಿ
ದಾಯುಧವ ಕರದಿ ಪಿಡಿದರಸಿನ ಮನೆಯಂ ಪೊಕ್ಕು
ತಾಯಿ ಮಗ್ಗಲಿನ ಮರೆಯೊಳಗಿರುವ ಶಿಶುವಿನಂ ನೋಡ್ದಳಾ ಮೃತ್ಯುದೇವಿ
ಕಾಯಜಾಂತಕನ ಕಳೆಯೊಂದಾಗಿ ತೋರುವದ
ನಾಯತನಯನದಿಂದ ದಿಟ್ಟೆ ವರಿದಾಕ್ಷಣದೊ
ಳಾಯಳೆಸು ಬಾಲನ ಶಿರಶ್ಛೇದನಂಗೈದದಂ ಕರತಳದಿ ಕೊಂಡಳು ||೮||

ತ್ವರಿತದಿಂದಾ ಶಿರವ ಪಿಡಿದೆತ್ತಿ ಮುದ್ದಿಸುತ
ಕರತಳದಿ ಪಿಡಿದು ರಜತಾದ್ರಿ ಮಾರ್ಗವ ಪಿಡಿದು
ಬರುತಿರಲ್ಕಾ ಗಿರಿಯ ತಟದಿ ಯೋಗದೊಳಿರ್ಪ ಜಾಬಾಲನಂ ಕಂಡಳು
ಶಿರವನಾ ಮುನಿ ಮುಂದೆಡೆಯೊಳಿಟ್ಟು ಸ್ವರ್ಗಕ್ಕೆ
ಚರಿಸಲಿತ್ತಾಲಯದಿ ಚಂಗಲೆಯು ಎಚ್ಚತ್ತು
ವರಗಿರ್ದ ಕೂಸಿನಂಬರ ಮುಸುಕು ತೆರೆಯಲ್ಕೆ ಶಿರವಿಲ್ಲದಂ ನೋಡ್ದಳು ||೯||

ಈಗಲೀ ಸುತನುತ್ತಮಾಂಗಮಂ ಕತ್ತರಿಸಿ
ಪೋಗಿರ್ಪರಯ್ಯಯ್ಯೋ ಮಾಡಲಿನ್ನೇನೆಂದು
ಕೂಗುತಲಿ ಮೂರ್ಛೆಗೊಂಟೊರಗಿದಳು ಭುವನಕ್ಕೆ ಚಿತ್ಕಾರಧ್ವನಿಯ ಕೇಳಿ
ಬೇಗದಿಂದಾಲಯದೊಳಿಹ ದಾಸದಾಸಿಯರು
ಆಗಮಿಸಿ ಚಂಗಲೆಯ ಮೂರ್ಛೆಯನ್ನೋಡುತಲಿ
ಆಗ ಬಂದೊರೆದರಾ ರಾಜಗಂಗಾಧರಗೆ ಏನೆಂಬೆನಚ್ಚರಿಯನು ||೧೦||

ರಾಜಗಂಗಾಧರಂ ಬೇಗದಿಂ ಬಂದು ಮೃಗ
ನಡುವಿನ ಮಡದಿಯನ್ನು ಪಿಡಿತೆತ್ತುತಡು
ರಾಜನಂದದಿ ಮಿಸುವ ಕೂಸಿನ ಕಳೇಬರವನೀಕ್ಷಿಸುತ ಧೈರ‍್ಯದಿಂದ
ಓಜಗೆಟ್ಟಮಿತ ದುಃಖಾಬ್ಧಿಯೊಳ್ಮುಳುಗಿ ಸುಖ
ಮಾಜಿ ಮಂತ್ರಿಯಂ ಕರದು ಪೇಳ್ದನೆನ್ನಯ ವಂಶ
ತೇಜನ ಶಿರವಗಡೆದ ದುಷ್ಠರಂ ಹುಡುಕಿ ತಲೆಗತ್ತರಿಸಿ ಬಿಡುವದೆಂದ ||೧೧||

ನೃಪನಪ್ಪಣೆಯನೊಪ್ಪಿ ಮಂತ್ರೀಶ ಶೀಘ್ರದಿಂ
ದಪರಮಿತ ಶೂರರಂ ಕಳಿಸಿದನು ಶೋಧನೆಗೆ
ಕಪಟವೇಷವನಾಂತು ಪೋದರಾಚಾರಕರು ಬೆಟ್ಟತಿಟ್ಟವನರಸುತ
ವಿಪಿನವೆಲ್ಲವ ತಿರುಗಿ ಬೇಸತ್ತು ಬರುತಿರ
ಲ್ತಪದೊಳಿರುತಿಹ ಮುನಿಯ ಮುಂಭಾಗದೋಳಿಟ್ಟ ಶಿರ
ಚಪಲತನದಿಂ ನೋಡಿ ರಾಜಸುತನೆಂದರಿದು ಭಾಷ್ಪಲೋಚನರಾದರು ||೧೨||

ಶ್ರೀಕನಕಗಿರಿಯೊಳನೇಕ ಸಿದ್ಧಿಗಳ ಪಡಿ
ಬೇಕೆಂಬ ಭ್ರಾಂತಿಲಿ ವಿವೇಕದಿಂದಾಸನಂ
ಹಾಕಿ ಪರ್ಣಾಹಾರ ಸ್ವೀಕರಿಸಿ ಸರ್ವಸುಖ ಶೋಕಂಗಳನ್ನು ಬಿಟ್ಟು
ಲೌಕಿಕದ ವಿಷಯಗಳ ನೂಕಿ ವೈರಾಗ್ಯದಿಂ
ದೇಕ ಮಾನಸರಾಗಿ ಲೋಕೈಕ ಪೂಜ್ಯನಂ
ಸಾಕಾರದಿಂ ನುತಿಪರೀಕಾರ‍್ಯ ಮಾಡರೆಂದಾ ಕುಚಲ ಚರರಾಡ್ಡರು ||೧೩||

ಕೂಸಿನ ಶಿರವ ಕಂಡು ಯೋಗಿಯಂ ಕೊಲ್ಲದತಿ
ಮೋಸದಿಂ ಭೂಪಾಲನಲ್ಲಿಗೈತಂದು ಚರ
ರಾ ಸಂಗತಿಯನೆಲ್ಲ ವಿಸ್ತಾರವಾಗಿ ಪೇಳಲ್ಕೆ ಗಂಗಾಧರನೃಪನು
ಬೇಸರದಿ ನುಡಿದನೆಲೊ ಚಾರಕರೆ ನಡಿರಿ ನಾ
ನೀ ಸಮಯದೊಳ್ಪೋಗಿ ಭೂತಲದಿ ಯೋಗದ
ಭ್ಯಾಸಮಂ ಮಾಳ್ಪಯತಿಯಂ ಕೊಂದು ಬರ್ಪೆನೆಂದತಿ ತ್ವರದಿ ತೆರಳಿಬಂದಾ ||೧೪||

ನೋಡಿದಂ ಯೋಗಿಯ ಮುಖವನೀಕ್ಷಿಸಿ ನಿಂದ ತಾ
ನಾಡಿದಂ ಮನಕೆ ಬಂದಂತೆ ಮೌನದಿ ಕೋಪ
ಗೂಡಿದಂ ಚಾರರಂ ಸರಿಸಕ್ಕೆ ಕರೆದು ಶಿಶುಘಾತಕವಗೈದನೆಂದು
ತೀಡಿದಂತನ್ನ ಕುಡಿಮೀಸೆ ಕರದಿಂ ಸನ್ನೆ
ಮಾಡಿದಂ ಸಕಲರ್ಗೆ ನಿಜವೆಂದು ಪೇಳಿಗಡ
ಬೇಡಿದಂ ಭಟರಕಯ್ಯೋಳಗಿರ್ಪಮನೆವೆತ್ತ ಚಂದ್ರಾಯುಧವನಾಗ ||೧೫||

ಚರನಾಗ ಚಂದ್ರಾಯುಧವ ತಂದು ಕೊಡಲದಂ
ಕರದೊಳಗೆ ಪಿಡಿದು ಪರಪರನೆ ಪಲ್ಗರಿದೆನ್ನ
ತರುಳನಂ ಕೊಂದ ಫಲನೋಡೆಂದು ಕೋಪದಿಂ ಕತ್ತರಿಸಿಬಿಟ್ಟ ಶಿರವ
ಧರಣಿಗೆ ರುಧಿರ ಬೀಳಲದರೊಳಗೆ ತರತರದ
ಕುರಿಗಳುದ್ಭವಿಸಿ ಪೊರಪೊರಡಲಗಣಿತಮಾಗಿ
ಬೆರಗಾಗಿ ಭೂಪಾಲನವುಗಳಂ ಪೊರೆವದೆಂದುಸುರ್ದನಾ ರಾಹುತರ್ಗೆ ||೧೬||
ಅತ್ತ ಜಾಬಾಲಮುನಿ ನಿಶ್ಶಾಪನಾಗಿ ವರ
ಕೃತ್ತಿವಾಸನ ಸಭೆಗೆ ಪೋದ ಖೇಚರರ ರೂಪ
ವೆತ್ತು ಸಂತೋಷದಿಂ ಶಿವನ ಸ್ತುತಿ ಮಾಡುತ್ತ ಪಾಡುತ್ತ ಸದ್ಗಾನದಿ
ಇತ್ತ ರಾಹುತರು ಕುರಿಗಳ ಹಿಂದೆ ತಿರುಗಿ ಬೇ
ಸತ್ತು ರಾಜನ ಮುಂದೆ ಪೇಳ್ದರೀ ಕುರಿಯ ಕಾ
ಯುತ್ತ ಸಂಚರಿಸಿ ಬಂದೆವು ಸಕಲ ಭೂಮಿಯನು ಸಾಕುಸಾಕೆಂದರವರು ||೧೭||

ಆಗ ಮಂತ್ರಿಯ ಕರೆದು ಪೇಳಿದನು ಭೂಪಾಲ
ಬೇಗದಿಂ ನೀಂ ಪೋಗಿ ಕುರಿಗಳಂ ಕಾಯ್ದು ಸುಖಿ
ಯಾಗಿರೆಂದೊರೆಯಲಾ ಸಚಿವನಾಲೋಚಿಸುತ ನೃಪಗೆ ಮುಗುಳಿಂತೆಂದನು
ಯೋಗಿಯರುಧಿರದಿಂ ಜನಿಸಿದವಿವಂ ಕಾಯ್ವ
ದಾಗದೆನ್ನಿಂದಿದಕೆ ನೀ ಬಂದರೀಗ ನಾಂ
ಪೋಗುವೆನು ಸತ್ಯ ತಿಳಿಯಂದು ನುಡಿಯಲ್ಕೆ ರಾಜೇಂದ್ರನೊಪ್ಪುತಲೀರ್ವರು ||೧೮||

ತರಿಸಿದರು ದುಂಡಗಂಬಳಿಯನಂಗಕ್ಕೆತ್ವರ
ಧರಿಸಿದರು ಮಂತ್ರನೃಪರೊಂದಾಗಿ ಪಥವಿಡಿದು
ಚರಿಸಿದರು ಕುರಿಗಳಿಹ ತಾಣಕ್ಕೆ ತವಕದಿಂದೆಡಬಲವ ಬಿಡದರಸುತ
ಸರಿಸಿದರು ಹಿಂದಕ್ಕೆ ಮೊತ್ತಗೊಳಿಸುತ್ತ ಸಲೆ|
ನರಸಿದರು ಸಕಲ ಮರಿಗಳಂನೆತ್ತಿ ತಂದಿರಿಸಿ
ದರು ಮಮಕಾರದಿಂದ ಮಾತೆಯ ಮೊಲೆಗೆ ಹಚ್ಚಿದರು ಹರುಷವೆರಸಿ ||೧೯||

ಈ ತೆರದಿ ಕುರಿಗಳಂ ಪಲವು ದಿನಕಾಯ್ದು ಘನ
ಚೇತರಿಸಿ ಮನದಿ ಬಹು ಬೇಸರವಗೊಂಡು
ವರಶ್ವೇತಾದ್ರಿ ತಟದಿ ಭೂಪಾಲ ಮೇಣಾಮಂತ್ರಿವಂದಾಗಿ ಪದ್ಮಾಸನದೊಳು
ಪ್ರೀತಿಯಿಂ ಶಿವನ ಸನ್ನುತಿಗಯ್ಯಲಾಗ ಗಿರಿ
ಜಾತೆಯರಸನು ಮೆಚ್ಚಿ ಮೋಹದಿಂ ನಿಮ್ಮಯನಿ
ಕೇತನಕೆ ನಡಿರಿ ಮನಸಿನ ವೆಸನ ಬಿಡಿರೆಂದಭಯ ನುಡಿಗಳಂ ಪೇಳ್ದನು ||೨೦||

ತೆರಳಿದರು ತಮ್ಮ ನಿಜಪುರಕೆ ನೃಪಮಂತ್ರಿಯರು
ಪರಶಿವಂ ಯೋಚಿಸಿದ ನೀ ಕುರಿಗಳಂ ಕಾಯ್ದು
ತರುವರಾರಿನ್ನೆಂದು ಬರ್ಮನಂ ಕರೆದು ಪೇಳಿದನೆಲ್ಲ ಸಂಗತಿಯನು
ಹರನ ಮಾತಿಗೆ ಮನಂಗೊಡುತ ಚತುರಾಸ್ಮ ತಾ
ನಿರದೆ ತೆರಳಿದ ಕುರಿಗಳನ್ನು ಕಾಯ್ವದಕೆ ಬಂ
ಧುರದಿ ದಂಡವಕರದಿ ಪಿಡಿದು ತವಕದಿ ಬಂದನವುಗಳಿರುತಿಹ ತಾಣಕ್ಕೆ ||೨೧||

ತಿರುಗಿದನಾ ಹುಲ್ಲು ಜಲಮಿರುವ ಹಳ್ಳದದಡಿಗೆ
ಪರಿಪರಿಯೊಳಾದರಿಸಿ ಪಲು ದಿನ ಪೊರೆದು ಮನ
ಮುರಿದು ಬೆಂಡಾಗಿ ಬಿಸುಸುಯ್ದುವುಗಳಂಬಿಟ್ಟು ಬಂದ ಶಂಕರನ ಬಳಿಗೆ
ಹರನೇಯೆನ್ನಿಂದಾಗದೀ ಕಾರ‍್ಯವೆಂದು ವರ
ಚರಣಕ್ಕೆ ನಮಿಸಿ ಸನ್ನುತಿಗಯ್ಯಲಾಗ ಶ್ರೀ
ಹರಿಯನ್ನು ಕರೆದೊರದ ಕುರಿಗಳಂ ಪೊರೆವುದೆಂದಾ ಜ್ಞಾಪಿಸಿದ ಮುದದೊಳು ||೨೨||

ಪಕ್ಷಿವಾಹನನೊಪ್ಪಿ ಬಂದನೀ ಭುವನಕ್ಕೆ
ಕಕ್ಷದೊಳ್ಕಂಬಳಿಯ ಧರಿಸಿ ಕುರಿಗಳನು ಸಂ
ರಕ್ಷಣೆವ ಮಾಡುತ್ತ ಗುಡ್ಡಗಹ್ವರಂಗಳಂ ತಿರುತಿರುಗಿ ಬೇಸತ್ತನು
ಅಕ್ಷಯಾತ್ಮಕ ಶಿವನ ಸನ್ನಿಧಿಗೆ ಬಂದು ಸಲೆ
ಸುಕ್ಷೇಮದಿಂ ಪೇಳ್ದನಾಗದೆನ್ನಿಂದ ನೀ
ಲಕ್ಷಕ್ಕೆ ತಂದು ಪಾಲಿಪುದೀಗ ಪ್ರೇಮದಿಂದೆಂದು ಸ್ತೋತ್ರವ ಮಾಡ್ದನು ||೨೩||

ಅಜಹರಿಗಳಿಗೆ ಮೀರಿತೀಕಾರ‍್ಯಮೆಂದಾಗ
ತ್ರಿಜಗಪೂಜಿತ ತಾನೆ ವೇಷಾಂತರದಿ ಧರೆಗೆ
ಭುಜದಿ ಬೆತ್ತವನಿಟ್ಟುಕೊಂಡು ಕುರಿಗಳನೆಬ್ಬಿಸಿದನು ಮೇಯಿಸುವುದಕ್ಕೆ
ಕುಜದ ಚಿಗುರೆಲೆಗಳಂ ಕತ್ತರಿಸಿ ಹಾಕುತ ತಿ
ಳಿಜಲಮಂ ಕುಡಿಸುತ್ತ ಮರಿಗಳಂ ಬಗಲೊಳಗೆ
ನಿಜದಿಂದ ಪಿಡಿದುಕೊಂಡತಿ ಪ್ರೀತಿಯಿಂ ರಕ್ಷಿಸುತ ನಡೆದನುತ್ತರಕೆ ||೨೪||

ನಡೆನಡೆದು ಬೇಸತ್ತು ಬಾಯಾರಿ ಬಳಲುತ್ತ
ಮೃಡನು ಕುರಿಗಳಂ ಬಿಟ್ಟು ಶಿವಪುರಿಗೆ ಪೋಗುತ ದು
ಗುಡದಿಂದ ಕೂತಿರಲ್ಕಾಗ ಶಾಂಭವಿಯು ಬಂದು ನಮಿಸಿ ನುಡಿದಳು ಕಾಂತಗೆ
ಜಡಮನುಜರಂತೆ ಚಿಂತಾಬ್ದಿಯೊಳ್ಮುಳುಗಿರ್ಪ
ನುಡಿ ಯಾವದಿರ್ಪುದೆನ್ನಗೆ ಪೇಳು ಪ್ರೇಮದಿಂ
ಬಿಡು ನಿನ್ನಯ ಮನದ ಘನವೆಸನವೆಂದಾ ಶಿವೆಯು ಬೇಡಿಕೊಂಡಳು ಸ್ಮರಿಸುತ ||೨೫||

ಸತಿಯೇ ಕೇಳ್ ಜಾಬಾಲಮುನಿ ರುಧಿರದಿಂದೊಗೆದ
ಅತಿಶಯದ ಕುರಿಗಳಂ ಹರಿಯಜರು ಕಾಯ್ದು ಘನ
ಖತಿಗೊಂಡು ಬೇಸತ್ತು ಬೋಳಾಗಿ ಬಳಲುತ್ತ ತೊಳಲುತ್ತ ಬಂದು ಎನ್ನ
ಸ್ತುತಿಗೈದು ಬೇಡಿಕೊಳಲಾಗನಾಂ ಪೋಗಿ ಕುರಿ
ತತಿಗಳಂ ಪರಿಪರಿಯೊಳಾದರಿಸಿ ಪೊರೆಯುತ್ತ
ಕ್ಷಿತಿಯನೆಲ್ಲವ ತಿರುಗಿ ಧೃತಿಗುಂದಿ ಬಂದೇನಿದಕಿನ್ನೇನು ಗತಿಯೆಂದನು ||೨೬||

ಮನಮುನಿಗಣಾರ್ಚಿತ ಪಾದಾಬ್ಜನೇ ನಿನ್ನ ಮನ
ಸಿನ ಕ್ಲೇಶಮಂ ಬಿಟ್ಟು ಮಾತಾಡು ಮುಖನೋಡು
ಎನಗುನುಜ್ಞೆಯ ಕೊಟ್ಟು ಕಳಿಸಿದರೆ ನಾಂ ಪೋಗಿ ಕಾಯ್ವನೆಂದಳು ಕುರಿಗಳ
ಧನದಾಪ್ತೆ ಗಿರಿಜಾತೆ ನುಡಿಗೆ ತಲೆದೂಗಿ ಕೊ
ಟ್ಟನು ವಿಭವದಿಂದಪ್ಪಣೆಯನಾಗ ಶಂಕರಿಯು
ಘನಹರುಷದಿಂದ ಬಗಲೊಳ್ಗಣಪನಂ ಪೊತ್ತು ಇಳಿದಳೀ ಕುವಲಯಕ್ಕೆ ||೨೭||

ಕುರಿಗಳಂ ನೋಡಿದಳು ಮಾಡಿದಳು ಸನ್ನೆಯಂ
ತ್ವರಿತಪತಗೂಡಿದಳು ತೀಡಿದಳು ಮುಂಗುರುಳ
ಸರಸವನ್ನಾಡಿದಳು ಪಾಡಿದಳು ಗಾನಮಂ ವಡೆ ಹುಲ್ಲಿರುವ ತಾಣಮಂ
ಅರಸುತ್ತ ಸಾರಿದಳು ಬೀರಿದಳು ಪುಳಕಮಂ
ಗಿರಿತಟವನೇರಿದಳು ಸೇರಿದಳು ಮರಿಗಳಂ
ಕರೆದು ಜಲದೋರಿದಳು ಕೋರಿದಳು ಗಣಪಂಗೆ ಸಕಲ ಕುರಿಗಳಗಣಿತಮಂ ||೨೮||

ಎಳೆ ತೃಣವ ನೋಡಿ ಧ್ವನಿಮಾಡಿ ಕುರಿಗೂಡಿಸುತ
ಎಳೆಮರಿಯನೆತ್ತಿ ಗಿರಿಸುತ್ತಿ ಬೇಸತ್ತೀಳೆಗೆ
ಎಳೆದುರುಳನಿಳಿಸಿ ಸುಖಗೊಳಿಸಿ ಮುಂದೆಳೆಸಿದಳು ಹುಲಿಕರಡಿಗಳಿಗಳುಕದೆ
ಕೊಳಲ ನುಡಿಸುತ್ತ ಚರಿಸುತ್ತ ಸರಿಸುತ್ತ ತಾ
ಕೊಳಲ ನೀರ‍್ಗುಡಿಸಿ ಭಯಬಿಡಿಸಿ ತ್ವರನಡಿಸಿ ಭಯ
ಕೊಳಗಾಗಿ ನಿಂದು ಮನನೊಂದು ತನುಬೆಂದು ಯೋಚನೆಗೆ ಸಿಲ್ಕಿದಳು ಶಿವೆಯು ||೨೯||

ಮಾರನೆ ದಿನ ಕುರಿಗಳಂ ಬಿಟ್ಟು ಮರಳಿ ಸುಕು
ಮಾರನಂ ಬಗಲೊಳಿರಿಸುತ್ತ ವ್ಯಾಕುಲದಿಂದ
ಸಾರಿದಳು ಕಾಡಡವಿ ತಿರತಿರುಗಿ ಬೇಸತ್ತು ಜಾಗ್ರತಾಪುರ ಸೀಮೆಗೆ
ಮೀರಿತಗಜೆಗೆ ತಾಪಹರಿಯಜ ಹರರಿಗಾದ
ಭೂರಿಸಂಕಟವು ಸಟೆಯಲ್ಲೆಂದರಿದು ಮನದಿ
ಮೂರುಕಣ್ಣಿನ ಹುತ್ತ ಶೋಧಿಸುತ ನಡೆದಳೆಡಬಲ ಗುಡ್ಡಗಿಡಗಳೊಳಗೆ ||೩೦||

ನೋಡ್ದಳಲ್ಲೊಂದು ಘನ ಮೂರು ಕಣ್ಣಿನ ಹುತ್ತ
ಮಾಡ್ದಳು ಮುಹೂರ್ತ ಬೇಸತ್ತು ಬಳಲಿಕೆಯಿಂದ
ಕೂಡ್ದಳು ಶಿವಸ್ಮರಣೆಯೋಳ್ಮಹಾ ಪಂಚಾಕ್ಷರೀ ಪ್ರಣಮ ಧ್ಯಾನಿಸುತಲಿ
ಬೇಡ್ದಳೊರಗಳನು ತನ್ನಿಷ್ಟಾರ್ಥದಂತೆ ಕೊಂ
ಡಾಡ್ದಳಾತನ ಮಹಿಮನೆನಿಸಿ ಹೃತ್ಕಮಲದೊಳು
ನೀಡ್ದಳಾಧಾರವನು ಮಂತ್ರದಿಂದಾ ಮೂರು ಕಣ್ಣಾಗಿರುವ ಹುತ್ತಿಗೆ ||೩೧||

ಆಧಾರವನು ಮಂತ್ರ ಜಪಿಸಿ ತಳಿಯಲ್ಕಾಗ
ಮೇದಿನಿಯು ಬಿಚ್ಚಿವಿಭ್ಭಾಗವಾಗಲು ಶಿವೆಯು
ಶೋಧಿಸುತ ಹಿರಿಮರಿಗುರಿಗಳಲೊಳ ಪೊಗಸಿದಳ್ ಸಂತೋಷಭರಿತಳಾಗಿ
ಆ ಧರೆಯ ಮೇಲ್ತನ್ನ ಮೊಲೆಹಾಲ್ಗರೆದು ಸುತಗೆ
ಬೋಧಿಸುತನಾದಿ ಹದಗೈದು ಮುಚ್ಚಿದಳಿತರ
ಬಾಧೆಯಾಗದ ತೆರದಿ ಮೌಕ್ತಿಕದ ಮೂಗುತಿಯ ತೆಗೆದದರ ಮೇಲೂರ್ದಳು ||೩೨||

ಮತ್ತದಕೆ ವೀರಭದ್ರನ ಕಾವಲಿಯಿಟ್ಟು
ಮುತ್ತಿನಸು ಮೂಗುತೆಗೆ ಹರಸಿ ಪೇಳ್ದಳು ಮುಂದೆ
ಮುತ್ತುಗದ ಮರನಾಗಿ ಬೆಳೆದು ಬಾಳೆಂದರಿಕೆಗೊಟ್ಟು ಪೋದಳು ಬೇಗನೆ
ಇತ್ತ ಜಾಗ್ರತಿಯ ಪಟ್ಟಣದಿ ಶಿವಪದ್ಮ ತಾ
ಚಿತ್ತಶುದ್ಧದಿ ಕುರಿಗಳಂ ಕಾಯ್ದು ನಿತ್ಯಸುಖಿ
ಸುತ್ತಿರಿಲ್ಕಾತನರ್ಧಾಂಗಿ ಜಿಂಕಾದೇವಿ ಗರ್ಭವತಿಯಾದಳಾಗ ||೩೩||

ತರುಣಿಗೊದಗಿರ್ಪ ಗರ್ಭದ ಕಳೆಯ ಕಂಡು ಮಿಗೆ
ಹರುಷಮಂ ತಾಳ್ದು ಗುರುಸಿದ್ಧ ರೇವಣನ ಪಾದ
ಸ್ಮರಿಸಲಾಕ್ಷಣ ಮೇಘಮರೆಗಿರ್ಪ ರವಿ ಕಡಿಗೆ ಬಂದು ಪ್ರಜ್ವಲಿಸುವಂತೆ
ಭರದಿಂದಲಿಳಿದು ಮುಂದೆಸೆಯೊಳ್ಫರಲ್ಪಾದ
ಕ್ಕೆರಗಿದನು ಶಿವಪದ್ಮ ಸದ್ಭಕ್ತಿಯೆಂದಾಗ
ಶಿರವ ಪಿಡಿದೆತ್ತುತೆನ್ನಂ ಧ್ಯಾನಿಸಿದ ಕಾರ‍್ಯಭಾಗಮದನೇನಂದನು ||೩೪||

ಗುರುವೆ ಕೇಳೆನ್ನ ಪತ್ನಿಯು ಗರ್ಭಧಿರಿಸಿಹಳು
ಸರಸದಿಂ ನಿಮ್ಮಮೃತ ಹಸ್ತಮಂ ನಾರಿಯ ಬ
ಸುರಿನ ಮೇಳೆಲಿದೆನ್ನಗಾಶೀರ್ವಚಿಸಿ ಪೋಗಬೇಕೆಂದು ಪ್ರಾರ್ಥಿಸಿದನು
ತರುಳ ನಿನ್ನಯ ಮನಸಿನರಕೆ ಕೈಗೂಡವದು
ಮರುಗಬೇಡಿ ನಿನ್ನ ಸತಿಯ ಗರ್ಭದೊಳು
ಪರತರ ಪುತ್ರನುದಿಸುವನು ಮಿಥ್ಯವಲ್ಲಾ ಕೂಸಿಗೆನ್ನ ಪೆಸರಿಟ್ಟು ಬಾಳು ||೩೫||

ಎಂದು ಪೇಳ್ದಭವಸುತ ತೆರಳಿದನು ಬಾಂದಳಕೆ
ಸುಂದರಿ ಹರಿಣಾದೇವಿಗೊದಗಿದವು ಚತುರಮಾ
ಸಂದಯಾನಿಧಿಪತಿಯು ಸೀಮಂತ ಸಂಭ್ರಮಕ್ಕಾರಂಭಿಸಿದ ಮುದದೊಳು
ಚಂದದಿಂದಷ್ಟಾಪ್ತರುಗಳೆಲ್ಲ ಕಂಚುಕವ
ತಂದರಾಗಲೆ ತರುಣಿಯರು ತಂಡತಂಡದಲಿ
ಒಂದುಗೂಡುತ್ತ ಬಂದರಾರತಿಯು ಬೆಳಗಿ ಮುಯ್ಯವನಿತ್ತರತಿ ಮುದದೊಳು ||೩೬||

ಹರುಷದಿಂ ಗೃಹಕೃತ್ಯಕಾರ‍್ಯ ತತ್ಪರರಾಗಿ
ಗುರುಸಿದ್ಧ ನುಡಿಗಳಂ ಸ್ಮರಿಸುತ್ತಲಿರೆ ತರುಣಿ
ಹರಿಣಾದೇವಿಗೆ ಗರ್ಭಚಿಹ್ನೆಗಳು ಹೊರಸೂಸಿ ತುಂಬಿದವು ನವಮಾಸವು
ಹರನ ದಯದಿಂ ಶುಭಮುಹೂರ್ತದೊಳ್ಪಡೆದಳಾ
ತರುಳನ ಸುಕಳೆಗಳಂ ನೋಡಿ ಪಿತಮಾತೆಯರು
ಪರಿಪರಿಯೊಳೊರ್ಣಿಸುತ ಹೃದ್ವಜನದೋಳ್ಘನಾನಂದರಾಗಿರುತಿರ್ದರು ||೩೭||

ದ್ವಾದಶ ದಿನದಿ ನಾಮಕರ್ಣದುತ್ಸವಗೊಳಿಸಿ
ಆದಿಗುರು ಸಿದ್ಧರೇವಣನ ಧ್ಯಾನಿಸಿ ಮಹಾ
ಮೋದದಿಂ ಕೂಡಿ ರೇವಣನೆಂದು ಪೆಸರಿಟ್ಟು ಕಾಲಗಳಿಯುತಲಿರ್ದರು
ಆದಿಗೊಂಡನು ಒಂದು ದಿನ ತನ್ನ ತನಯರಂ
ಭೇದವಿಲ್ಲದೆ ಹತ್ತಿರಕ್ಕೆ ಕರೆಯುತ್ತಲತ್ತ್ಯಾದ
ರದಿ ಸರ್ವರ ಮಕ್ಕಳಿಗೆ ಬೋಧಿಸಿದನದಂ ಪೇಳ್ವೆನಾಲಿಪುದೀಗಳೆ ||೩೮||

ಎಲೆ ಸುತರೆ ಎಮ್ಮ ಹಿರಿಯರ‍್ಮಾಡುತಿರ್ದ ಹೊಲ
ನೆಲಗಳಂ ಬಿಟ್ಟು ಕುರಿಗಳ ಕಾಯ್ವದೊಂದೆ ಘನ
ಕೆಲಸಮಂ ಮಾಡುತ್ತ ಸೋಮಾರಿತನದಿಂದ ವರ್ತಿಸುವದುಚಿತಮಲ್ಲ
ಅಲಲ ನಿಮ್ಮಯ ಶಕ್ತಿ ಮನಗಂಡೆನೀಗ ನೇ
ಗಿಲಹೂಡಿ ಹೊಲಹಸನಗೈಯಲದು ಮುಂದೆ ಮಿತ
ಫಲಮಾಗಿ ಖಗಮೃಗಗಳಂ ರಕ್ಷಿಸುವದಲ್ಲದೆಮ್ಮಗತಿ ಸುಖಮೀವುದು ||೩೯||

ಎಂದು ಪೇಳಲ್ಕೆ ಜಾಯ್ಗೊಂಡ ಪಾಯ್ಗೊಂಡೆಂಬ
ನಂದನರು ನುಡಿದರೀ ಕೃಷಿಕೃತ್ಯ ಮಾಳ್ಪುದೆಂ
ಮ್ಮಿಂದಾಗದಿದಕೆ ಶಿವಪದ್ಮನಂ ಕಳಿಸೆಂದು ಹೇಳಿಕೊಳವನಿತರೊಳಗೆ
ಬಂದ ನಿನ್ನೊಬ್ಬ ಮಗ ಗೊಂಡನೆಂಬಾತ್ಮಜನು
ಅಂದನೆಲೆ ತಂದೆ ಕುರಿಗಳ ಕಾಯ್ದು ಬಿಸಿಲೊಳಗೆ
ಬೆಂದು ಬಳಲುತ್ತಿರುವ ಕಷ್ಟಮಂ ನೀನರಿಯದೇ ಪ್ರೀತಿಯಿಂ ಪೇಳ್ವರೆ ||೪೦||

ಈ ರೀತಿ ಬಳಲಿಸುವದಿದು ನ್ಯಾಯವೇನು ಸುಕು
ಮಾರನೆಂದಾ ಪದ್ಮನನ್ನು ಮನೆಯೊಳಗಿರಿಸಿ
ಚಾರಕರ ತರದೊಳೆಮ್ಮಗೆ ಕೆಲಸ ಪೇಳಿದರೆ ಸರಿಯಂಬರೇ ಪ್ರೌಢರು
ಭೂರಿದಯದಿಂ ಸುತರ ಸಮದಿಂದೆ ಪೋರಿಭೇದ
ತೋರಿ ನಡೆದರೆ ಪಿತನ ಧರ್ಮಕ್ಕೆ ಕೊರತೆ ಬರ
ಲಾರದಿರ್ಪುದೇ ತಂದೆ ಪುಟ್ಟಿಸಿ ಮಹಾಕಷ್ಟಕೆ ಕಳಿಸುವರೆ ಕೃತ್ರಿಮದಲಿ ||೪೧||

ಬೇಸರಾದರೆ ನಿನಗೆ ವಿಷಗೊಟ್ಟು ಕೊಲ್ಲು ಮರೆ
ಮೋಸದಿಂದೆಮಗೆ ಕಷ್ಟದ ಕೆಲಸಮಂ ಪೇಳಿ
ಘಾಸಿಸುವನಾಂತರಕೆ ದಬ್ಬಿ ಬಳಲಿಸಬೇಡವೆಂದು ಕರಮುಗಿದೆದ್ದನು
ಆ ಸಕಲ ನುಡಿಗಳಂ ಕೇಳಿ ಶಿವಪದ್ಮನು
ಲ್ಲಾಸದಿಂದೆದ್ದಾಗ್ರಜರ ಪಾದಕ್ಕೆರಗಿ ನಗೆ
ಸೂಸುತಲಿ ಪೇಳಿದಂ ನಾನಿರಲು ನಿಮಗೇಕೀ ಕಷ್ಟಮೆಂದೊರೆದನು || ೪೨||

ಅಗ್ರಜರೆ ಪಿತನ ಮುಖವೆಂಬ ಚಂದ್ರಂಗೆ ರಾ
ಹುಗ್ರಹಣ ಮಾಳ್ಪುದೇತಕೆ ಬರಿದೆಬಿಡಿರಿ ನಿ
ಮ್ಮುಗ್ರ ಕೋಪವ ನಿಲ್ಲಿಸಿರಿ ವೈರಗುಣಮಳಿರಿ ರಾರಾಜಿಸುವ ನಿಲಯದಿ
ವೆಗ್ರದಿಂದಿರರಿ ಬಳಲಿಕೆಯ ಕಳಿರೆನುತಲಿ ಸ
ಮುಗ್ರರಿಗೆ ಪೇಳಿ ಕಾಸಿಯ ಕಟ್ಟಿದ ಮನದೋಳ್ವಿ
ಷಗ್ರೀವನೊರ ಪುತ್ರನಾದ ಸಿದ್ಧೇಂದ್ರನಂ ನೆನಸಿತಾತಗೆ ನಮಿಸಿದಿಂ ||೪೩||

ನೇಗಲೆಯ ತಕ್ಕೊಂಡು ಮಿಣಿಗಳಂ ಪೊತ್ತು ಮುಂ
ಬಾಗಿಲೆಗೆ ಬಂದು ಭಯಯತ್ತುಗಳ ಬಿಚ್ಚಿ ತಾಂ
ಪೋಗಲಿಕೆ ಸಿದ್ಧನಾಗುತಿರಲ್ಮಾತೆ ಚುಂಚಲಾದೇವಿ ಕಂಡಳಾಗ
ಈಗಲೀ ಕಾರ‍್ಯ ನಿನಗೊರೆದರಾರ‍್ಮಗನೆನೀ
ಸಾಗಲಿಳೆಗೆಲಸ ನಿನ್ನಿಂದಹುದೆ ಕಾಕಾಳಿ
ಕೋಗಿಲೆಗೆ ಸಮವೇ ಮೇಣಿದಂತೆ ಈ ಸುತರು ನಿನ್ನ ಸಮನಾಗುತಿಹರೆ ||೪೪||

ಮಗನೆ ಬಿಡುಬಿಡುಯಂದು ಗುಪ್ತದಿ ಪೇಳಿ ಕರ
ಮುಗಿಯಲ್ಕೆ ಮಾತೆಯಂ ಸಂತ್ಯೆಸಿ ನಡೆದ ನಡ
ವಿಗೆ ಪದ್ಮಪಥವಿಡಿದು ತಂದೆ ಪೇಳಿದ ಹೊಲವ ಶೋಧಿಸಿದ ಸುತ್ತವರಿದು
ಮಿಗೆ ಹರುಷವೆತ್ತು ನೇಗಲೆಗೆ ಮುಂಜುಣವನಿಟ್ಟು
ನೊಗಮಿಣಿಗಳಂ ಧರಿಸಿ ಎತ್ತುಗಳ ಹೂಡಿ ಭೂ
ಮಿಗೆ ನಮಿಸಿ ಮತ್ತಾತ್ಮದೋಳ್ಸಿದ್ಧನಂ ನೆನೆದು ಸಾಗಿಸಿದ ಸತ್ವರದಲಿ ||೪೫||

ಇತ್ತಿ ಗೃಹದೊಳಗವನ ಮಾತೆ ಮಗನಂ ನೆನೆಸಿ
ಚಿತ್ತದೊಳ್ಮರುಗಿದಳು ಮಧ್ಯಾನ್ಹ ಸಮಯಮಾ
ಯ್ತುತ್ತ ಮಗನಿಗೆ ಕ್ಷುಧಾತುರಮದಾಗಿರಬಹುದೆನುತ್ತ ಬಹು ಸತ್ವರದಲಿ
ಉತ್ತಮೋತ್ತಮ ಶಾಖಪಾಕಮಂಗೈದು ಸಲೆ
ಬುತ್ತಿಯಂ ಕಟ್ಟಿಕೊಂಡೈತಂದಳಾ ಹೊಲಕೆ
ನೆತ್ತಿ ಮೇಲಿರ್ದ ಕಟ್ಟೋಗರವನಿಳಿಸಿ ಧ್ವನಿದೋರಿ ಕರೆದಳು ಪುತ್ರನ ||೪೬||

ಧ್ವನಿಗೇಳಿ ಶಿವಪದ್ಮ ನೇಗಲೆಯು ನಿಲ್ಲಿಸುತ
ಜನನಿ ಹತ್ತಿರ ಬಂದು ಸಾಷ್ಟಾಂಗವೆರಗಿ ಸ
ದ್ವಿನಯಮಂ ದೋರಿಯನ್ನಿಂದಾದುದೀ ಕಷ್ಟ ನಿನಗೆಂದು ಚಿಂತಿಸಿದನು
ಇನಿದಾದ ಪಕ್ವಾನ್ನ ಸವಿದು ಸಂತೋಷದಿಂ
ಮನೆಯೊಳಿರುತಿಹ ನಿನಗಡವಿಗೆಲಸಾದಗಿಂತೆಂದನು
ಮುನಿಸುತಲಿ ಬಂದೆನೆನಗೆ ಕಷ್ಟಮಿದೇನು ಸ್ವೀಕರಿಸು ಪಾಕವನ್ನು ||೪೭||

ಅಷ್ಟರಲಿ ಜಾಯ್ಗೊಂಡ ಪಾಯ್ಗೊಂಡ ಮೊದಲಾದ
ದುಷ್ಟರೆಲ್ಲರು ಬಂದು ದೂರಿದರು ಮಾತೆಯನು
ಇಷ್ಟೇಕೆ ಪ್ರೀತಿ ಶಿವಪದ್ಮನೋಳ್ಬಿಡು ಸಾಕುಸಾಕು ನಡೆ ಮನೆಗೆಂದರು
ಕಷ್ಟದಿಂ ಕಣ್ಣೀರು ಸುರಿಸುತ್ತ ಚುಂಚಲೆಯು
ಭ್ರಷ್ಟರ ನುಡಿಗೆ ಬೆದರಿ ಪಥವಿಡಿದು ಬರುಬರುತ
ಸೃಷ್ಟಿಗೀಶ್ವರ ಸಿದ್ಧನಂ ನೆನೆದು ಸುತನ ಮುಖನೋಡಿ ದುಮ್ಮನಗೊಂಡಳು ||೪೮||

ಮರುಗಿದಳು ಮನದೊಳಗೆ ನೀಚಸುತರೊಂದಾಗಿ
ಹರಪದ್ಮನಿಗೆ ಬುತ್ತಿಕೊಡುವರೋ ಬಿಡುವರೋ
ಮರಳಿ ಬಾಲನಿಗೆ ಮದ್ದಿಡುವರೋ ಶಿರವ ನೋಡೆಗಡಿವರೋ ತಿಳಿಯದೆಂದು
ತಿರುಗಿದಳು ಮಧ್ಯಪಥದಿಂದೆ ಹಿಂದಕ್ಕೆ ಗಂ
ಹರದಿಚರಿಸುತ್ತ ಮತ್ತಾ ತರುಳರಿಂಗೆ ತಾ
ಮರೆಯಾಗಿ ಗಿಡದಡಿಯ ಭಾಗದೋಳ್ತನಗವರು ಕಾಣುವ ತೆರದಿ ನಿಂದಳು ||೪೯||

ಆಗಲಾ ದುಷ್ಟರೊಂದಾಗಿ ಶಿವಪದ್ಮನಂ
ನೇಗಲೆಗೆ ಕಳಿಸಿ ಮಾತೆಯು ತಂದ ಮಧುರಾನ್ನ
ರಾಗದಿಂ ಭುಂಜಿಸುತ ಮರಗೊಂಡನಂದನಾಗ್ರಜರೇ ನಾವಿಂದಿನಿಂದ
ಹೀಗೆ ಕಾಪಟ್ಯನೆಸಗಿದರೆ ನಿತ್ಯದೊಳು ಸುಖ
ಮಾಗಿ ಜೀವಿಸುವೆ ವೀಭಾಗದಿ ಪುಟ್ಟಿ ಹಿತನೀಗಿತೆ
ಮ್ಮಗೆ ಹೀನಭೋಗ ಬಂದಿತು ಮುಂದಿಕ್ಕೇನು ಗತಿಯೆಂದರು || ೫೦||

ಈ ರೀತಿಯಾಗಿ ನಾಲ್ವರು ಕೂಡಿ ಮಾತಾಡಿ
ಸಾರಪಕ್ವಾನ್ನಮಂ ಸ್ವೀಕರಿಸಿ ನೀರ್ಗುಡಿದು
ಭೂರಿ ಕೋಪದೊಳು ಮಿಕ್ಕಾನ್ನಮಂ ಹೂಳಿಟ್ಟು ಜಲಚೆಲ್ಲಿ ನಡೆದರವರು
ದೂರದಲಿ ನಿಂದು ನೋಡಿದಳೆಲ್ಲ ಚುಂಚಲೆಯು
ಧೀರ ಶಿವಪದ್ಮನಂ ಕರೆದಳತಿ ದುಃಖದಿಂ
ತೋರಿಸಿದಳಾಗ್ರಜರು ಮಾಡಿದನ್ಯಾಯಮಂ ಪೇಳಿದಳುಸುರ್ದ ನುಡಿಯ ||೫೧||

ಕೇಳಿ ಶಿವಪದ್ಮ ಗುರುಮಂತ್ರಮಂ ಸ್ಮರಿಸಿಖತಿ
ತಾಳಿ ವೀರಾವೇಶದಿಂ ಭಸ್ಮ ತಳಿಯಲ್ಕೆ
ಢಾಳಿಸುವ ತಂಬಿಗೆಯ ಜಲಭರಿತಮಾಯ್ತು ಬಟ್ಟಲವನ್ನು ಕರದು
ಕೊಳಲು ಮೇಲೆಸೆವ ಪಂಚಾಮೃತವು ತುಂಬಿತದ
ರೊಳಗೆ ಬಾಲಕನ ಸಚ್ಚರಿತ್ರವ ಕಂಡು ಮಾತೆ ಸುಖಜಾಲ
ದೋಳ್ಕೂಡಿ ಕೊಂಡಾಡಿದವಳಿಂಗೆ ನರನೆಂಬರಾರೀ ಧರೆಯೊಳು ||೫೨||

ಪಂಚಾಮೃತವ ಸವಿದು ಬೇಗದಿಂದಲಿ ಮಾತೆ
ಚುಂಚಲೆಯನು ಕಳಿಸಿ ಬಾರ್ಗೋಲು ಪಿಡಿದಗ್ರಜರ
ವಂಚನೆಯ ನೆನೆನೆನೆದು ನೇಗಲೆಯು ಸಾಗಿಸಿದನತಿ ಶೀಘ್ರದಿಂದೆ ಬಂದು
ಮುಂಚೆ ಧರೆಗಿಳಿದು ಶ್ರೀ ಶಿವೆಯು ಕುರಿಗಳ ಕಾಯ್ದು
ಸಂಚರಿಸಿ ಬೇಸರದಿ ಒಳಗಿರಿಸಿ ಮುಚ್ಚಿ ಶಿವ
ಪಂಚಾಕ್ಷರೀ ಮಂತ್ರದಿಂದ ಭಸ್ಮವ ತಳೆವ ಹುತ್ತಿಂಗೆ ಹತ್ತಿತಾಗ ||೫೩||

ತೆರೆದಿತು ಹರನರಾಣಿ ಮುಚ್ಚಿರ್ದ ಹುತ್ತಾಗ
ಬಿರಿದಿತು ಧರಾವಲಯ ವಿಬ್ಭಾಗಮಾಗಿ ಸಲೆ
ಮುರದಿತಾ ನೇಗಲೆಯ ಮುಂಚಣಾಗ್ರದ ಭಾಗ ಮರಳಿ ನಿಡುವಾದ ಮಿಣಿಯು
ಹರದಿತು ತತ್ಕಕ್ಷಣದೊಳಗ್ನಿಯುದ್ಭವಿಸಿ ಸು
ತ್ತರದಿತು ಸಕಲಕಾಷ್ಟತೃಣಮಹಾಗಿಡಗಳಂ
ಉರದಿತು ಪುಲಿಕರಡಿ ನರಿಗಳೆಲ್ಲ ಶಕೆಗಂಜಿ ಅತ್ತಿತ್ತ ಬಿಟ್ಟೊಡ್ದವು ||೫೪||

ಬೆದರಿದವು ಎತ್ತುಗಳು ನಡಿಯಲಾರದೆ ಶಕೆಗೆ
ಅದರಿದವು ತುಸು ಮುಂದಕಡಿ ಇಡುತ್ತಲಿ ಪೋಗಿ
ಮುದುರಿದವು ಮೈನರಗಳೆಲ್ಲ ಶಟಗೊಂಡು ಎದ್ದೆದ್ದು ಬಿದ್ದವು ನೆಲಕ್ಕೆ
ಹೆದರಿದವು ಮೃತಿಗೆ ಇದನೆಲ್ಲ ನೋಡಲು ಪದ್ಮ
ಗುದರಿದು ಬಾಷ್ಪಜಲಕರ ಚರಣಗಳು ಭರದಿ
ಬೆದರಿದವು ಇನ್ನಿದಕೆ ಗತಿಯಾವುದೆಂದು ಶ್ರೀಸಿದ್ಧನಂ ಧ್ಯಾನಿಸುತಲೀ ||೫೫||

ಭಸಿತಮಂ ತಳಿಯಲುರಿ ನಂದಿತಾಗಳೆ ಮನದ
ವೆಸನಮಂ ಬಿಟ್ಟೆಬ್ಬಿಸಲ್ಕೆ ಎತ್ತುಗಳೆದ್ದು
ಎಸೆದವು ಮೊದಲಿನಂತೆ ನಡೆದವು ಗೃಹಕ್ಕಿತ್ತ ಹಿಂದಿರುಗಿ ನೋಡುತಲಿರೆ
ಪೊಸಬಣ್ಣದಿಂದ ಕೂಡಿರ್ದ ಕಂಗೊಳಿಪ ಕುರಿ
ವಿಸ್ತಾರಮಂ ನೋಡಿ ಬೆರಗಾಗಿವುಗಳೆಲ್ಲಿಂದು
ದಸಿದವೆಂದೆನುತ ನೇಗಲೆಯು ಯೀಸಂಪೊತ್ತು ನಡೆದನವುಗಳ ಪೊರೆಯುತ ||೫೬||

ಈ ಸುಚಾರಿತ್ರಮಂ ಬರದೋದಿದರ್ಗೆ ಮೇಣ್
ಲೇಸಾಗಿ ಯಿದರರ್ಥವಾಧ್ಯಾಂತ ಪೇಳ್ದರ್ಗೆ
ಬೇಸರಿಯದುರೆ ಭಕ್ತಿಯಿಂದ ಕೇಳಿದವರ್ಗೆ ಪದುಳದಿಂ ಪಠಿಸಿದರ್ಗೆ
ಭಾಸಿತ ಸಕಲ ಭೋಗಭಾಗ್ಯಮೋಕ್ಷಂಗಳ ವಿ
ಲಾಸದಿಂದಿತ್ತುದುರಿತೌಘಮಂ ಸಂಹರಿಸಿ
ವಾಸ ರಸ್ತಾಪುರ ಶ್ರೀ ಶರಭಲಿಂಗೇಂದ್ರ ರಕ್ಷಿಸುವನಿಹಪರದೊಳು ||೫೭||

ಇಂತೆಬಲ್ಲಿಗೆ ಶರಭೇಶ್ವರ ಪಾದಾಬ್ಜಭೃಂಗನು
ವಿಶಿಷ್ಠವಿದ್ವಜ್ಜನ ವಿಧೇಯನು ಆದ ಭೀಮನಾಯಕ
ಕವಿಯಿಂ ಪ್ರಣೀತಮಪ್ಪ ಹಾಲ್ಮ ತೋತ್ತೇಜಕ ಪುರಾಣದಲ್ಲಿ
ಅಂತು ಸಂಧಿ ೫ಕ್ಕಂ ಪದನು ೨೧೮ಕ್ಕೆ ಮಂಗಲಂ ಮಹಾಶ್ರೀಶ್ರೀಶ್ರೀ