ಸೂಚನೆ ||
ಕೊಲ್ಲಿಪಾಕಿಯ ಸೋಮಲಿಂಗದಿಂದುದ್ಭವಿಸಿ
ಸಲ್ಲಲಿತ ರೇವಣನಗಸ್ತ್ಯಾದಿ ಭಕ್ತರಂ
ನುಲ್ಲಾಸದಿಂ ಪೊರೆದು ಶಾಂತಮುತ್ತಯ್ಯಂಗೆ ಲಿಂಗದೀಕ್ಷೆಯನಿತ್ತನು ||

ಶ್ರೀಕಂಠಶಂಕರಪಿನಾಕಿ ಮೃತ್ಯುಂಜಯ ಸು
ಧಾಕರ ಸುಮೌಳಿ ಮೃಡಲೋಕೇಶನಮಿತ ಪಾದ
ನಾಕನುತ ಪರಮ ಮಹಿಮಾಕರ ಸುಖಾಳಿ ರತ್ನಾಕರದುರಿತ ಸಂಹಾರ
ಶ್ರೀಕರಂ ಕೋಟಿ ಪ್ರಭಾಕರದ್ಯುತಿಗಿರೀಶ
ಮಾಕುಮಾರಾಂತಕ ಶಿವಕಾಂತಭೀಮಂ ಸ
ದಾ ಕರುಣದಿಂ ಪೊರೆಯಲೀ ಕುವಲಯದೊಳೆನ್ನಕಾಕ ಗುಣಗಳಳಿದು ||೧||

ಸುರಪಾವಕ ಮುಖ್ಯ ದಿಕ್ಪತಿಗಳಿಂದ ತ್ರಿ
ವರ ಭಾರಧ್ವಾಜ ಭೃಗುಕಶ್ಯಪ ವಶಿಷ್ಠಾದಿ
ಪರಮುನಿವೃಂದದಿಂ ಗುಹಗಣಪ ರುದ್ರ ಭೈರವರೆಂಬ ಗಣಮಧ್ಯದಿ
ಪರಮೇಶ್ವರಂ ಭೃಂಗಿನಾಂಟ್ಯಮಂ ನೋಡುತ್ತ
ಸರಸದಿಂದಿರುತಿರಲ್ಕಾ ಸಭೆಗೆ ರೇಣುಕಂ
ಭರದೊಳೈತಂದು ದಾರುಕನ ದಾಂಟವಲ್ಕವಂ ಮನದೊಳತಿ ಮರುಗಿಕೊಂಡ ||೨||

ದಾರುಕನ ಸಂತೈಸಿ ರೇಣುಕಗೆ ಶಶಿಮೌಳಿ
ಸಾರಿದಂ ನಿನಗೊಂದು ಜನ್ಮಬಂದಿತುಯಿಂದು
ಭೂರಿಬೇಗದಿ ಪೋಗಿ ಮರ್ತ್ಯದೊಳಗುದ್ಭವಿಸಿ ಬಾಳೆಂದ ಸಂಮುದದೊಳು
ಮಾರಹರನೊರೆದ ನುಡಿಗೇಳಿ ರೇಣುಕ ಶಿವ ಪಾ
ದಾರವಿಂದಕ್ಕೆರಗಿ ನುಡಿದ ನರರೂಪದಿ
ಸರೋರುಹ ಭವಾಂಡದೊಳಗಿರಲೆಂತು ಕಾರಣ್ಯವಿತ್ತು ಪರಿಪಾಲಿಸೆಂದ ||೩||

ಪರಿಮಳದರಳನಳಿಯು ತನಿವಣ್ಣಗಿಳಿಯು ಬಂ
ಧುರದ ಜವ್ವನದ ತರುಣಿಯಂ ಪುರುಷ ಬಿಡದಂತೆ
ನಿರುತದಲಿ ನಾ ನಿನ್ನೊಳಿರ್ಪೆನಂಜದಿರು ಕಂಗೆಡದಿರು ಬರಿದೆ ಬಾಲನೆ
ಹರುಷದಿಂ ಧರೆಗಿಳಿದು ಅನವರತ ಪವಾಡಗಳ
ವಿರಚಿಸುತ್ತಿರು ನಿನಗೆ ಮಂಗಲಂ ಮಾಳ್ಪೆನೆಂ
ದರವಿಂದ ಶರಹರಂ ಪೇಳ್ದು ಸುಮ್ಮಾನದಿಂ ಕಳಿಸಿದಂ ರೇಣುಕನನು ||೪||

ಕೊಲ್ಲಿಪಾಕಿಯ ಪುರದಿ ಸೋಮೇಶ್ವರಾಲಯ
ದೊಳೆಲ್ಲ ಭಕ್ತರು ಸೋಮವಾರದಿ ಹರನ ಭಜಿ
ಸಲಲ್ಲಿ ಲಿಂಗದೊಳು ಘನರವದಿಂದಲಂಕರಿಸುತತಿವೆಳಗುವೆಚ್ಚುತಾಗ
ಮೆಲ್ಲಮೆಲ್ಲನೆ ಲಿಂಗಬಿರಿಯೆ ನೆಲವದಿರಲಾಗ
ಮೆಲ್ಲಕುಣಿದಾಡೆ ರವಿಶಶಿದಿಕ್ಪತಿಗಳು ಮನ
ತಲ್ಲಣಿಸಿದರು ಜಲಧಿಕದಡಲಹಿಪನ ಪಡೆಯುತಗಿದುದು ತಕ್ಷಣದಲಿ ||೫||

ದೇವಗಣ ಕೊಂಡಾಡುತರಳೆ ಮಳೆಗರಿಸಲ್ಕೆ
ಭಾವಜಾಂತಕನ ಪ್ರತಿವೇಷದಿಂ ರೇಣುಕಂ
ರೇಣಾಚಾರ‍್ಯನೆಂಬಭಿದಾನವೆತ್ತು ಭಸಿತವ ತಳೆದು ಸರ್ವಾಂಗಕೆ
ಪಾವನ ಶ್ರೀದೇವರುದ್ರಾಕ್ಷಿಗಳನಾಂತು
ಭೂವಲಯ ಪ್ರಾಣಿಗಳ ಕಾವುದಕ್ಕೈತಂದ
ನೇವೇಳ್ವೆನಚ್ಚರಿಯ ದಂಡಲಾಕುಳ ಪಿಡಿದು ರಾರಾಜಿಸಿದ ಮುದದೊಳು ||೬||

ಗುರುಸಿದ್ಧನಲ್ಲಿಂದಗಸ್ತ್ಯಾಶ್ರಮಕೆ ಬಂದು
ಮರುಕದಿಂದಷ್ಟಾಂಗ ಯೋಗ ಚತುರಾಶ್ರಮ ಸು
ಚರಿತ ಷಟ್ಚಕ್ರ ಷಟ್ಸ್ಥಲದೀಕ್ಷಮಂತ್ರ ಮುದ್ರಾಭೇವೆಂಬವುಗಳಂ
ಕರುಣದಿಂದಾ ಮುನಿಗೆ ತಿಳಿಸಿ ಸಂಶಯ ಗಳಿಸಿ
ತೆರಳಿದಂ ತವಕದೆ ನಭೋ ಮಾರ್ಗದಿಂದ
ಪರತರ ರಾಮನಾಥನ ಸುದರ್ಶನವಗೊಂಡಿಷ್ಟಲಿಂಗಮಂ ಪೂಜಿಸುತಲಿ ||೭||

ಕೆಲವು ದಿನಮಲ್ಲಿರ್ದು ಮರಳಾಗಮಿಸಿದ ಜವದಿ
ಸಲೆ ರಂಜಿಸುವ ಮಹಾ ಕಾಂಚೀಪುರಕ್ಕೆ ಬಂ
ದೊಲವಿಂದಲೇಕಾಮ್ರನಾಥನಂ ಕಾಣ್ದು ಸಲ್ಲೀಲೆಯಿಂ ಸಂಚರಿಸುತ
ಜಲಧರನೊಳಡಗಿದ ಸರೋವರಜಸಖನಂತೆ
ನೆಲದ ಮರೆಗಿರ್ಪ ಘನನಿಧಿಯಂತೆ ಕಾಷ್ಠದೋ
ಳ್ನೆಲೆಯಾದ ನರನಂತೆ ಶಿಲೆಗಳೊಳ್ನೆಲಸಿದ ಪರುಷದಂತೆ ರಂಜಿಸಿದನು ||೮||

ಆ ಪುರಕ್ಕರಸಾದ ಚೋಳನೃಪವರ ಷೋಡ
ಶೋಪಚಾರದಿ ವಿಷ್ಣುಪ್ರತಿಮೆಯಂ ಪೂಜಿಸುತ
ಸ್ಥಾಪನವಗಯ್ಯಲಲ್ಲಾಡುತ ನಿಂತಿರಲದಂ ನಿಲಿಸಿ ಪುಳಕದಿಂದ
ಭೂಪ ಸಂತೈಸಿ ಪಿಣ್ಣಾಂಕ ಸಿದ್ಧಗಿರಿ
ಚಾಪನೊರ ಸೂನು ತತ್ಪರುದಿ ಮರುಳೇಶನಂ
ದೀಪರಿಮ ನಾಮದಿಂ ಜಸ ಪಡೆದು ಪೊಡಮೊಟ್ಟು ನಡೆದನುತ್ತರ ಭಾಗಕ್ಕೆ ||೯||

ಯಕ್ಷಮಿಥನವು ಯತಿಯ ಶಾಪದಿಂದ ಮಾಸನೂ
ರಕ್ಷಯಾತ್ಮಕನ ಮಂದಿರದ ಮುಂದೆಸೆಯೊಳಿಹ
ವೃಕ್ಷದೊಳ್ಮತ್ಕುಣಿಗಳಾಗಿ ವಾಸಿಸುತಲ್ಲಿ ನಿದ್ರಿಸಿದ ಮಾನವರನು
ಭಕ್ಷಿಸುತಿರಲ್ಕಲ್ಲಿಗೈ ತಂದು ಸಿದ್ಧೇಂದ್ರ
ದಕ್ಷದಿಂದವುಗಳಂ ಕೊಲ್ಲಿಕಮ್ಮಾರನಿಂ
ತಕ್ಷಣದಿ ಸುರಗಿ ಮೇಣ್ ಕರಕಠಾರಿಗಳೆಂಬುಭಯ ಪೆಸರಿನಾಯುಧವನು ||೧೦||

ವಿರಚಿಸುತ್ತಾ ಸುರಗಿಯಂ ಮಾಸನೂರೆಂಬ
ಪುರದನದಿ ಹೆಮ್ಮಡುವಿನೊಳ್ಮಿಸುಕದಂತೆ ಬಂ
ಧುರದಿಂದಲಲ್ಲಿಟ್ಟು ಕರಕಠಾರಿಯನಾಂತು ಬಾಂದಳಾಂತರಕೆ ನೆಗೆದು
ವರವಾಯುವೇಗದಿಂದುಜ್ಜೈನಿಗೈತಂದು
ಧರಣೀಂದ್ರ ವಿಕ್ರಮಾರ್ಕಗೆ ಕಠಾರಿಯನಿ
ತ್ತದರ ಮಹಿಮ ಪೇಳಿ ರಾಜಾಚರಣೆಯಂ ತಿಳಿಸಿ ನೀತಿಯುತನಮ್ಮಾಡ್ದನು ||೧೧||

ಕೆಲವು ದಿನಮಲ್ಲಿರ್ದು ಬಾಂದಳಕೆ ನೆಗೆದು ಶಿವ
ನಿಲಯಗಳ ನೋಡುತ್ತ ಬರುತಿರಲ್ಕತ್ತ
ಪ್ರಜ್ವಲಿಸುವ ಸರೂರೆಂಬ ಪುರದಿ ಹಿಂಡಿನ ಶಾಂತಮುತ್ತಯ್ಯನಿರಲಾತಗೆ
ಚಲುವೆತ್ತ ಸುವ್ವಿಮುತ್ತಯ್ಯ ಜಗಮುತ್ತಯ್ಯ
ಲಲಿತಶಾಂತಯ್ಯಂಗಳೆಂಬ ಸುತರುದ್ಭವಿಸಿ
ಕೆಲದಿನಕ್ಕಪರಮಿತ ತುರುಗಳಂ ಸಲಹಿ ಸುಕ್ಷೇಮದಿಂದಿರುತಿರ್ದರು ||೧೨||

ತುರುಗಳ ಪಾಲಿಸುತ್ತುಲ್ಲಾಸದಿಂದ ಸಂ
ಚರಿಸಿ ಕಲ್ಲಿನ ಕೆರೆಯ ಭಾಗದಲಿ ನಿಲಯಮಂ
ವಿರಚಿಸುತ ಪ್ರೇಮದಿಂ ಚಚರಿಂಗೆ ಪನ್ನೆರಡು ಕಂಬಿ ಪಾಲ್ಗೊಟ್ಟು ಸತತ
ಹರುಷದಿಂದಿರಲಲ್ಲಿಗೆ ಭವಸುತ ಸಿದ್ಧೇಂದ್ರ
ನಿರದೆ ಬಂದಮೃತಮಂ ನೀಡೆಂದು ಸನ್ಮೋಹ
ವೆರಸಿ ನಿಲ್ಲಲು ಶಾಂತಮುತ್ತಯ್ಯ ಕಂಡು ಪಾದಪದ್ಮಕಭಿವಂದಿಸಿದನು ||೧೩||

ಸಿದ್ಧಗುರುವರನವನ ಪಿಡಿದೆತ್ತಿ ಬೋಳೈಸಿ
ಸಿದ್ಧಿಸಲಿ ನೀನಂದ ನುಡಿಗಳವನಿಯೊಳೆಂದು
ಉದ್ಧರಿಸಲವನೆದ್ದು ಧ್ಯಾನಮಂಗೈದು ಮಹಾದಾನಂದದೋಳ್ಕೂಡ್ದನು
ವೃದ್ಧನಾದಾಯೋಗಿ ಶಿವನ ಸದ್ಭಕ್ತಿಯ ಪ್ರ
ಸಿದ್ಧವಾದ ಭವನ ಸುಲೀಲೆಗಳನೆಲ್ಲ ತಾ
ಬದ್ಧದಿಂ ಪೇಳಲವುಗಳ ಕೇಳಿ ಶಾಂತಯ್ಯ ಲಿಂಗೇಚ್ಛಯಾಗಿ ಮಗುಳಿ ||೧೪||

ತಂದೆ ಕೇಳೆನಗಿಷ್ಟ ಲಿಂಗಮಂ ಧರಿಸಿ ಮುದ
ದಿಂದೀ ಧರಾತಳದಿ ಪಾಲಿಸೆನ್ನಂ ಬಿಡದೆ
ವಂದಿಸುವೇನೀಗ ನಿಮ್ಮಡಿದಾವರಿಗೆ ನಾನು ತನು ಮನಧನವನೊಪ್ಪಿಸಿ
ಯಂದು ನುಡಿಯಲು ಮುನಿಯು ಅಭಯಮಂ ನೀಡಿ ಆ
ನಂದದಿಂದಾ ಶಾಂತಮುತ್ತಯ್ಯನಿಗೆ ಕ್ಷಿಪ್ರ
ದಿಂದಾಗಮೋಕ್ತಿಯಂತಾಗ ಸುಮಹೂರ್ತಮಂ ತೆಗೆದು ತತ್ಕಾಲದಲ್ಲಿ ||೧೫||

ಲಿಂಗದೀಕ್ಷೆಯನಿತ್ತು ಕ್ಷೀರಕುಲಕಧ್ಯಕ್ಷ
ನಂಗೊಳಿಸಿ ಗುರುಕಂಕಣವ ಧರಿಸಿ ಕರಕೆ ಘನ
ಕಂಗೊಳಿಪ ತೆರದಿ ಪಟ್ಟವಗಟ್ಟಿ ಗುರುನಾಮಶಾಸನವಗೈದು ಮತ್ತಂ
ತುಂಗ ರೇವಣಸಿದ್ಧ ಶಾಂತಮುತ್ತಯ್ಯಂಗೆ
ಪಿಂಗದೆ ಕುತೂಹಲದೊಳಾಶೀರ್ವದಿಸಿ ದಯಾ
ಪಾಂಗದಿಂ ನೋಡಿ ಪಾಲ್ಸವಿದು ಬಳಿಕಲ್ಲಿಂದ ನಡೆದ ಬಾಂದಳ ಮಾರ್ಗಕೆ ||೧೬||

ಕೆದರಿದ ಜಡೆಯು ಹರಿದ ಕಂತೆಯು ಬರಿತ ಬಸುರು
ಚದುರತ್ಕಲೆಗಳೊಂದಿಲ್ಲದೆ ದರಿದ್ರನಂದದಿ
ಕಲ್ಲಿಶೆಟ್ಟಿ ಮಂದಿರದೊಳಗೆ ಕೆಲಕಾಲ ಗಾಣವನೊಡೆದುಕೊಂಡು
ಮುದದೊಳಿರುತಿರಲು ತತ್ತಿಲ ಘಾತಕನಿಗೆ ಮೇಣಾ
ಸುದತಿಯಳಿಗೆತ್ತಿಗೊಂದಕ್ಷಿಯಿರುವುದ ಕಂಡು
ಮದನಾರಿಪುತ್ರನಿಕ್ಕಣ್ಣಗೈದಖಿಲ ಸಂಪದವಿತ್ತು ಪಾಲಿಸಿದನು ||೧೭||

ಮಂಗಲಾತ್ಮಕ ಸಿದ್ಧನಲ್ಲಿಂದ ಪೊರಮಟ್ಟು
ತುಂಗ ಮಂಗಲವಾಡ ನಗರಿಗೈತಂದಂತೆ
ರಂಗದೋಳ್ವೆಣ್ಣಿಸಿದನಾ ಪುರದ ವೈಭವಂ ಪೇಳಲಚ್ಛರಿಯಾದುದು
ಅಂಗಜಾಂತಕನ ಸದ್ಭಕ್ತಿ ಸಾಗರವೋ ಘನ
ಸಿಂಗಾರದಿಂಪಿನ ಮಹಾನಿಧಿಯೋ ನೇತ್ರ ಯು
ಗ್ಮಂಗಳ್ಗೆ ರಂಜಿಸುವ ಜಯಸಿರಿಯ ಲಾವಣ್ಯದಿರವೊ ನಾನರಿಯನೆಂದ ||೧೮||

ಲಲಿತದುರ್ಗಾಬಲೆಯ ಮುಖದ ನಾಸಿಕವೋ ಭುಜ
ಬಲದಿಂದೆಸೆವ ನೃಪಂಗೆಸಗಿದ ಸುಪೀಠವೋ
ಬಲಜಭವನುತ್ಪತ್ತಿಗಿದೆ ಮಹಾಚೆಲುವೆನುತ್ತಂಕಿಸುತ್ತಿರ್ದ ಕರವೊ
ತೊಳೆತೊಳೆವ ನವರತ್ನಗಳ ನಿಜಸ್ಥಾನವೋ
ಹುಲಿವದನ ಕೊತ್ತಳಸುಡೆಂಕಣಿ ಸರೋಜಾಪ್ತ
ಲಲಿತಶಶಿವೀಧಿಗಳ್ನೆರೆ ನೋಡುತಾ ಸಿದ್ಧ ವಾರಗೇರಿಯ ಪೊಕ್ಕನು ||೧೯||

ಮೃಡನವೈರಿಯ ಪೆರ್ಬಲವೋ ತಪೋವೃತರ ನೆರೆ
ಕೆಡಿಸಲೋಸುಗ ವಿರಂಚಿಯು ಸೃಷ್ಟಿಸಿದಪ್ರತಿಮ
ಪಡೆಗಳೋ ತಿಳಿಯದೆಂದೆಡಬಲದ ವೇಶ್ಯಾಂಗನೆಯರನೀಕ್ಷಿಸುತ ಬಂದು
ಉಡುಪನಂ ಧಿಕ್ಕರಿಪ ಸುಂದರಾನನದಿಂದ
ಕಡುಚೆಲ್ವಿನಿಂದೆಸೆವ ಮಾಯಾವಿದೇವಿ ಮನೆ
ಗಡಿಯಿಟ್ಟವಳ ರೂಪುರೇಖೆಗಳನೀಕ್ಷಿಸಿ ಬೆರಗುವಟ್ಟ ಗುರುಸಿದ್ಧನು ||೨೦||

ಲಿಂಗಧಾರಿಗಳಲ್ಲದನ್ಯಭವಿಜಾತಿಯರ
ಸಂಗಕ್ಕೆ ಮನವನೆಳೆಸದೆ ಸದಾಭಕ್ತಿಯಿಂ
ಗಂಗಾಧರನ ಭಜಿಸಿ ಪೂಜಿಸುತ್ತಿರೆ ರೇವಣಾರಾಧ್ಯ ಮಾಯಕ್ಕನ
ಸಿಂಗರದ ತಾಣಮಂ ತಿಳಿದು ಯೋಚಿಸಿದ ತ್ರಿದ
ಶಾಂಗನೆಯರೋಳ್ಮೆರೆವ ರಂಭೆಯೋ ಭುವನಕಿಳಿದ
ನಂಗನರಗಿಳಿಯೋಯಂದಮಿತನಿಭವದಿ ಕೂಡಿ ಮಂದಿರವನೊಳಪೊಕ್ಕನು ||೨೧||

ಮಾಯಾವಿದೇವಿಯ ಮನಿಯೊಳಿರ್ದು ಸಂತತ ಸ
ಹಾಯದಿಂ ಕಾವಡಿಯ ಕಂಬಿಯಂ ಪೊತ್ತು ಗುರು
ರಾಯ ಜಲತರುವದಿಂನ್ನೇನು ವರ್ಣಿಸಲೀಗ ಪೊತ್ತಕಾವಡಿಯಾತನ
ಕಾಯಮಂ ಸೋಂಕದಂತರದ ದೆಶೆಯೊಳಿರ್ಪುದಿದ
ರಾಯತವ ತಿಳಿಯದಿವ ನರನಲ್ಲ ಸುರನೆಂದು
ಶ್ರೇಯಸ್ಕರದಿ ಸಿದ್ಧರೇವಣನ ಕೊಂಡಾಡಿದರ್ಕೆಲರು ವಿಭವದಿಂದ ||೨೨||

ಇತ್ತ ಲಂಕಾಪುರದೊಳು ವಿಭಿಷಣನು ತನ್ನ
ಚಿತ್ತದೊಳಾಲೋಚಿಸಿದ ರಾವಣಾಸುರಂ
ಗಿತ್ತೆನಭಯವ ಮೂರುಕೋಟಿ ಲಿಂಗಸ್ಥಾಪನೆಯಗೈಸಲೆಂತು ನಾನು
ಮತ್ತಿದಕ್ಕಾಚಾರ‍್ಯನೆಲ್ಲಿಹನೋ ತಿಳಿಯದೆಂ
ದುತ್ತುಂಗ ತಪದೊಳಭವನ ಮೆಚ್ಚಿಸುತ ಕೇಳ್ದೊ
ಡುತ್ತರವನಿತ್ತು ರೇವಣನಿರುವ ತಾಣಕ್ಕೆ ಸತ್ವರದಿ ಪೋಗೆಂದನು ||೨೩||

ಆಗಲಾ ದಾನವಂ ಯತಿವೇಷ ತಾಳುತ ನಾ
ಜಾಗರವ ಬಿಟ್ಟು ನಭೋಮಾರ್ಗದಿ ಚರಿಸಿದಿ
ಗ್ಭಾಗದೋಳ್ಸಿದ್ಧನಂ ಹುಡುಕುತ್ತ ಮೆರೆವ ಮಂಗಳವಾಡ ನಗರಿಗಿಳಿದು
ನಾಗಭೂಷಣನ ನಾಮಸ್ಮರಣೆಯಿಂ ಪುರದ
ಬಾಗಿಲದೆಡೆಯೊಳೈದೆ ಕಾದುಕೊಂಡಿರುತಿರ
ಲ್ಕಾಗ ಕಂಬಿಯು ಭುಜಕೆ ಸೋಂಕದೆ ಬರುತ್ತಿರುವ ಮರುಳಾಳನಂ ಕಂಡನು ||೨೪||

ದನುಜನತಿ ಭರದಿಂದ ಸಿದ್ಧನಿವನೆಂದರಿದು
ಘನಮೋದವೆರಸಿ ಹಿಂಬಾಲಿಸಿ ನಡೆದ ವಾರವನಿತೆ
ಮಣಿಮಾಯಾವಿದೇವಿ ಮನಿಗೈತಂದು ಪೊಕ್ಕನತಿ ಸಂಭ್ರಮದೊಳು
ಮನಸಿಜನ ಮಂತ್ರದೇವತೆಯಂತೆ ತೋರ್ಪ ತ್ರಿಭು
ವನ ಸುಂದರಿಯಳಾದ ವೇಶ್ಯೆಗೆ ಮನಗೊಡುತ
ಮುನಿನಾಥ ರೇವಣಂ ಮರೆತು ರತಿಕೇಳಿಯೊಳ್ಮುದದಿಂದಿರುತಿರ್ದನು ||೨೫||

ಇರುತಿರುತ್ತಸುರ ಕೆಲದಿನಗಳೆದು ಸಿದ್ಧಗುರು
ವರನ ಸ್ತುತಿಸಲ್ಕಾಗ ರೇವಣನು ಮೆಚ್ಚೆಲವೋ
ಸ್ಮರಣಗೈದಿಹ ಕಜ್ಜಮೇನು ನಿನ್ನಭಿದಾನವಾವುದು ನಿವಾಸಮೆತ್ತ
ವರೆಯಬೇಕೆಂದುಸರಲಸುರ ತನ್ನಯ ಸ್ಥಿತಿಯ
ಮರೆಮಾಜದಂತೆ ಪೇಳ್ದನು ವಿಭೀಷಣನು ನಾನು
ಸುರಚಿರ ತ್ರಿಕೋಟಿಲಿಂಗಗಳ ಸ್ಥಾಪನೆಗೆ ನೀನಾಚಾರ‍್ಯನೆಂದು ತಿಳಿದು ||೨೬||

ಯತಿವೇಷ ಧರಿಸುತ ವಿರೂಪಾಕ್ಷ ಸಿದ್ಧನೆಂ
ದತಿಶಯದ ನಾಮಮಂ ಪೇಳುತ್ತ ಮೋಸದಿಂ
ಪತಿಕರಿಸಿ ಬಂದೆ ತಮ್ಮಡಿದಾವರೆಗೆ ದೇವ ಮುದವೆತ್ತು ಅನುದಿನದೊಳು
ಸುತನ ದೋಷಂಗಳೆಣಿಸದೆ ಕೃತಾರ್ಥನಗೈದು
ಕ್ಷಿತಿಯೊಳೆನ್ನಿಚ್ಛೆಯಂದದಲಿ ಲಂಕಾಪುರ
ಕ್ಕತಿತ್ವರದೊಳೈತಂದು ಲಿಂಗಪ್ರತಿಷ್ಠಮಂ ಮಾಳ್ಪುದೆಂದೋಲೈಸಿದಂ ||೨೭||

ಅಸುರನಾಡಿದ ನುಡಿಗೆ ಮನವಪ್ಪಿ ರೇವಣಂ
ಬಿಸಿಗದಿರನುದಯದೊಳು ಬರ್ಪೆನೆಂದಭಯಮಂ
ಮುಸುರಲನಿತರೊಳು ಮಾಯ್ದೇವಿಯದ್ದಾ ಸಿದ್ಧಗುರುವರನ ವಿಮಲಚರಣ
ಬಿಸಜಗಳಿಗೆರಗಿಯನ್ನಪರಾಧ ಕ್ಷಮಿಸೆನ
ಲ್ಕಸಮಾಕ್ಷನವಳ ಮನ್ನಿಸುತಭಯ ಕರಗಳಿಂ
ವಸುಮತಿಯು ಮುಟ್ಟಲ್ಕೆಸ್ಯಾತ ಲಿಂಗಗಳೆರಡು ಜನಿಸಿದವು ತಕ್ಷಣದಲಿ ||೨೮||

ವೇಶ್ಯೆಯಳಿಗುಭಯ ಲಿಂಗಾರ್ಚನೆಯಗೈದತಿ ವಿ
ಲಾಸದಿಂದಿರು ನಿನಗೆ ಗತಿ ದೊರೆವದೆಂದುಸುರಿ
ಶಾಸನವಗೈದಸುರನೊಡನೆ ಲಂಕಾಪುರಿಗೆ ತೆರಳಿದ ಮನೋವೇಗದಿ
ಭಾಸುರ ತ್ರಿಕೋಟಿಲಿಂಗಗಳಂ ಪ್ರತಿಷ್ಟಗೈ
ದಾ ಸಿದ್ಧನಿರದೆ ಕಡಲುದಾಂಟಿ ಕಡುಭರದಿ
ಲೇಸಿನಾ ಕಲ್ಯಾಣ ಪಟ್ಟಣಕ್ಕಿಳಿದನಾಕಾಶದಿಂದತಿ ವೇಗದಿ ||೨೯||

ಬಿಜ್ಜಳನೃಪಾಲನ ಹಜಾರಮಂ ಪೊಕ್ಕು ನಿ
ರ್ಲಜ್ಜೆಯಿಂ ಸ್ವರವೆತ್ತಿ ಕೂಗಿದಂ ದೇಹಿಯಂ
ದುಜ್ಜಗಿಸಲರಸನವನಂ ಕಂಡು ಕಪಟದಿಂ ಸುಡುವಾನ್ನ ನೀಡಿಸಲ್ಕೆ
ಸಜ್ಜನೋದ್ಧಾರ ಗುರುಸಿದ್ಧನದು ಸ್ವೀಕರಿಸಿ
ಹೆಜ್ಜೆ ಮುಂದಿಡದೆಂಜಲದ ಕರಗಳಿಂದ ತಾಂ
ಬಜ್ಜರದಿ ಕೆತ್ತಿದರಮನೆಯ ಕಂಬವ ಪಿಡಿಯಲುದಿಸಿತಾಗಳೆ ದಳ್ಳುರಿ ||೩೦||

ನೃಪವರನು ಬೆರಗಾಗಿ ಸಿದ್ಧನಂ ಸ್ಮರಿಸುತೆ
ನ್ನಪರಾಧ ಕ್ಷಮಿಸೆನಲ್ಕಾಗಲಾ ರೇವಣಂ
ಕೃಪೆಯಿಂದುರಿಯ ನಂದಿಸುತೈದು ಪಡಿಯಕ್ಕಿಯಂ ತರಸಿ ಪಾಕಗೊಳಿಸಿ
ಅಪರಮಿತ ಸೇನಾಸಮೇತಕುಣಬಡಿಸಿ ನಿ
ಷ್ಕಪಟದಿಂ ರಾಜನೀತಿಯ ತಿಳಿಸಿ ದೃಢಪಡಿಸಿ
ವಿಪುಲ ಮಾನಸನಾಗಿ ಗಗನಕ್ಕೆ ಹಾರಿ ಕೋಲಾರಪುರಕ್ಕಿಳಿದನಾಗ ||೩೧||

ಅಲ್ಲಿರ್ಪ ಕುಟಿಲ ನಾಟಕ ಸಿದ್ಧರಂ ಜೈಸು
ತೆಲ್ಲರ್ಗೊಡೆಯನಾಗಿ ಜಸವಡೆದ ಗೋರಕ್ಷ
ನಲ್ಲಿಗೈತಂದು ಭಿಕ್ಷಾಯೆಂದು ಕೂಗಲಾತನು ಕಠಾರಿಯನು ತಂದು
ಕುಲ್ಲತನದಿಂದ ಗುರುವರನ ಕರಕಿರಿಯಲದು
ಮೆಲ್ಲನೆ ಕರಗಿ ಸಿದ್ಧರಸಮಾಗಿ ಸ್ವೀಕರಿಸ
ಲಲ್ಲಿ ಗೋರಕ್ಷನೆದೆಯಲಿ ಕಠಾರಿಯು ಪೊಕ್ಕು ಬೆನ್ನನೋಳ್ಮೂಡಿತಾಗ ||೩೨||

ಗೋರಕ್ಷ ರೋಧಿಸುತ ಸತಿಯ ಕರದೊರೆದನೀ
ಘೋರಕಷ್ಟವ ಬಿಡಿಪ ಬಲ್ಲಿದರು ಭುವನದೋ
ಳಾರನಂ ಕಾಣೆ ನೀಂ ಪೋಗಿ ಕೋಲಾಪುರ ಮಹಾಲಕ್ಷ್ಮಿಯಡಿಗೆರಗುತ
ತಾರತಮ್ಯದಿ ತಿಳಿಸಿ ಬಾರೆನೆಲ್ಕವಳು ಗಂ
ಭೀರದಿಂ ತೆರಳಿಸಿಗರುಹಲ್ಕೆತ್ಪರದಿಂದ
ಧೀರ ರೇವಣನಡಿಗವಳು ಬಂದು ನಮಿಸಲ್ಕೆ ಗೋರಕ್ಷಣಂ ಪೊರೆದನು ||೩೩||

ಇತ್ತ ಬಿಜ್ಜಳ ಮಾಸನೂರಿನ ಮಡುವಿನೊಳ
ತ್ಯುತ್ತಮ ಸುರಗಿಯುಂಟೆನ್ನುತ್ತ ಚರರಿಂದರಿದು
ಮತ್ತದಂ ಕಡೆಗೆ ತಗಿವದಕೆ ಪನ್ನೆರಡು ಸಾಸಿರ ವಧುಗಳನ್ನು ತಂದು
ಚಿತ್ತಶುದ್ಧದಿ ಬಲಿಯನೀಯಲನುವಾಗಿರ
ಲ್ಕುತ್ತುಂಗ ಸಿದ್ಧ ಬಂದಬಲೆಯರ ಶರೆ ಪಾಶ
ಕತ್ತರಿಸಿ ಕರುಣದಿಂ ಕಾಪಾಡಿ ಬಿಜ್ಜಳನ ಸುತೆಯಳಂ ಮದುವೆಯಾದ ||೩೪||

ಅಲ್ಲಿ ಕೆಲದಿನವಿರ್ದು ಬಿಜ್ಜಳನರೇಂದ್ರನಿಂ
ದುಲ್ಲಸಿತ ಸತ್ಕಾರ ಸ್ವೀಕರಿಸಿ ಚರಿಸುತ್ತ
ಮೆಲ್ಲಮೆಲ್ಲನೆ ಚೋಳದೇಶಮಂ ಪೊಕ್ಕು ಶಿವನಿಲಯಗಳ ನೋಡುತಿರಲು
ಪುಲ್ಲಶರವೈರಿಯ ಮಗಂ ಬಂದನೆಂದು ವಿಭ
ವೋಲ್ಲಾಸದಿಂದಿರ್ಗೊಂಡು ಚೋಳನೃಪಾಲ
ನಿಲ್ಲದರಮನೆಗೆ ಕರೆದೊಯ್ದು ತನ್ನಯ ಸುತೆಯನಿತ್ತು ಸನ್ಮಾನಿಸಿದನು ||೩೫||

ಆ ಸುಕನ್ಯಾರತ್ನಮಂ ಪರಿಗ್ರಹಿಸುತ ವಿ
ಲಾಸದಿಂ ಕೇರಳವಿದರ್ಭಾದಿ ದೇಶಗಳ
ಬೇಸರಿಲ್ಲದೆ ನೋಡಿ ಶಿವನಿಲಯ ರಚಿಸುತ್ತ ಪುಣ್ಯಕ್ಷೇತ್ರಂಗಳನ್ನು
ಆಸನಗಳಿಂದ ಜಪತಪನೇಮನಡಿಸುತ್ತ
ಭಾಸಗೊಳ್ಳದೆ ಚರಿಸುತರವಟ್ಟಿಗೆಯನಿಡಿಸಿ
ವಾಸಗೈಯುತ ರಾಜಪುತ್ರಿಯರ ಕೂಡಿ ಕಲ್ಯಾಣಪುರಿಗೈತಂದನು ||೩೬||

ಲೋಕೋಪಕಾರಾರ್ಥಮಾಗಿ ಕೆರೆಯಂ ರಚಿಸ
ಬೇಕೆಂದು ವಿಸ್ತೀರ್ಣವಾದ ಸ್ಥಲಮಂ ಹುಡುಕುತ
ಕಪರ್ದಿಯ ಸುತಂಕುದ್ದಾಲ ಕೈಕೊಂಡು ನೆಲನಗಿದು ಸತಿಯರನ್ನು
ತಾ ಕರೆದವರನೆತ್ತಿಯೊಳು ಮಹಾದುರಿತಮಂ
ಜೋಕೆಯಿಂ ಬುಟ್ಟಿಯನು ತುಂಬಿ ಹೊರೆಸಿದನೆನೆ ನಿ
ರಾಕರಿಸಿ ಮಣ್ಣು ಹೊರಿಸುತ್ತ ಕೆಲದಿನವರೆಗೆ ನಡೆದುದಾ ಕೆರೆಕೆಲಸವು ||೩೭||

ಅನಿತರಲಿ ಸಿದ್ಧನ ಸತಿಯರೊಳಗೆ ಚೋಳಭೂ ಪನ
ಸುತೆಯು ಗರ್ಭವತಿಯಾಗಿ ಮಣ್ಣಿನ ಕೆಲಸ ವನು
ಬಿಟ್ಟು ಬೇಸರವ ಕಳೆದುಕೊಳಲೋಸುಗಂ ಕೂತಿರಲು ಗುರುಸಿದ್ಧನು
ವನಿತೆಯಂ ಕರೆದುಯನ್ನೊಡಿವೆಯನ್ನನಗೆ ಕೊ
ಟ್ಟನುಮಾನಗೊಳದೆ ನೀನಿಲ್ಲಿಂದ ನಿನ್ನ ನಿಜ
ಜನಕರಮನೆಗೆ ಪೋಗೆಂದವಳಗಡುತರೋದರವನೀಕ್ಷಿಸಿದ ಮುದದಿ ||೩೮||

ಕರದಿಂದ ಗರ್ಭವಂ ತರಿದು ಪಿಂಡವ ತೆಗೆದು
ತರುಣಿಗಪ್ಪಣೆಯನಿತ್ತಾ ಮೂರು ತಿಂಗಳದ
ವರಪಿಂಡಮಂ ಕೆರೆಯ ತಟದೊಳಗೆ ಹೂಳಿಟ್ಟು ಕೆಲಸಕನುವಾದನಾಗ
ಸರಸದಿಂದಾರು ತಿಂಗಳಿಗೆ ಕೆರೆಯಂ ಮುಗಿಸಿ
ಧರಣಿಯೊಳ್ಮಡಗಿರ್ಪ ಪಿಂಡಮಂ ತೆಗಿಸಲ್ಕೆ
ಗುರುವರನ ಪ್ರತಿಬಿಂಬದಂತೆಸೆವ ತರುಳನಿರೆ ನೋಡಿ ಜನ ಬೆರಗಾದರು ||೩೯||

ಆ ತರುಳನಿಗೆ ರುದ್ರಮುನಿಯೆಂದು ಪೆಸರಿಟ್ಟು
ಭೂತೇಶ ಪುತ್ರನಾ ಶಿಶುವಿನಂ ತನ್ನ ಸತಿ
ಭೂತಲಾಧಿಪ ಬಿಜ್ಜಳನ ಕುವರಿಗೊಪ್ಪಿಸಲ್ಕವಳು ಸಂಪ್ರೀತಿಯಿಂದ
ಜಾತನಂ ಪರಿಪಾಲಿಸುತ್ತಿರಲ್ಕೆಲದಿನಕೆ
ಸೀತ ಕಿರಣನು ಶುಕ್ಲಪಕ್ಷದೊಳಗಭಿವೃದ್ಧಿ
ಪಾತೆರದಿ ಬೆಳೆದಷ್ಟವರುಷದವನಾಗಲ್ಕೆ ನೋಡಿ ಜನ ಬೆರಗಾದರು ||೪೦||

ರೇವಣನು ತನ್ನ ರೂಪಂ ಮೆರೆವ ರುದ್ರಮುನಿ
ದೇವನಂ ಕರೆದಾಗ ಮೋಕ್ತಿಯಂದದಿ ವೀರ
ಶೈವ ದೀಕ್ಷೆಯನಿತ್ತು ತತ್ವಮಂ ತಿಳಿಸಿ ಮತ್ತಲಿಂದ ಸತಿಸುತರನು
ಸಾವಧಾನದಿ ಕೂಡಿಕೊಂಡು ಸಂಭ್ರಮದೊಡನೆ
ಕಾವಿಲಾಂಛನ ತಳೆದು ನಂಬಿನುತಿಸುವ ಭ
ಕ್ತಾವಳಿಯ ಪಾಲಿಸುತ್ತೆಸೆವ ಹಾವಿನಹಾಳು ಗ್ರಾಮದೆಡೆಗೈತಂದನು ||೪೧||

ಆ ಪುರದೊಳಿರುವ ಕಲ್ಲಯ್ಯ ಸಿದ್ಧೇಂದ್ರನ ಸ
ಮೀಪಕ್ಕೆ ಬಂದು ಪಾದಕೆರಗಿದಿರ್ಗೊಂಡು ಚಿ
ದ್ರೂಪ ನೀ ಬಾರೆಂದು ಮನೆಗೆ ಕರೆದೊಯ್ದು ಸದ್ಭಕ್ತಿಯಿಂ ಧ್ಯಾನಿಸಲ್ಕೆ
ತಾಪಸೇಂದ್ರಂ ರುದ್ರಮುನಿಯಿಂದ ನಿಜಶಿಷ್ಯ
ನಾಪೇಕ್ಷೆಯಂತೆ ಶಿವದೀಕ್ಷೆಯಂ ಕೊಡಿಸಿ ಸಂ
ತಾಪಮಂ ಕಳಿಸಿ ಶ್ರೀಕಲ್ಲಿನಾಥನ ಸುದರ್ಶನಗೊಂಡು ಪೊರಮಟ್ಟನು ||೪೨||

ಭರದಿಂದ ಸೊನ್ನಲಾಪುರಕಿಳಿದು ಪದುಳದಿಂ
ಹರಸಿದ್ಧರಾಮನುದಿಯಿಸುವದಂ ಸುಗ್ಗಲಗೆ
ಪರಿಪರಿಯೊಳೊರೆದು ಮತ್ತಲ್ಲಿಂದ ಶಾಂತಮುತ್ತಯ್ಯನ ಬಳಿಗೆ ಬಂದನು
ಗುರುಮೂರ್ತಿಯಂ ಕಂಡು ಪರಮ ಸಂತೋಷದಿಂ
ದೆರಗಿ ಪಾದಕಾಶೀರ್ವಚನಗೊಂಡು ತನ್ನ ಸ್ಥಿತಿ
ಯೊರದು ದೇಶಕ್ಷೇಮ ಶಿವನಿಲಯ ತಾಣಮಂ ಕೇಳಿ ಕೃತಕೃತ್ಯನಾದ ||೪೩||

ಅವಸರದೊಳು ಶಿಷ್ಯನಂ ಕೂಡಿಕೊಂಡು ಹರ
ಭವನಗಳ ನೋಡ್ದು ಕೋಲಾಪುರದೆಡೆಗೆ ಬಂದು
ಸುವಿಲಾಸದಿಂದ ತಚ್ಛಿಷ್ಯನಂ ಪುರದೊಳಗೆ ಕಳಿಸಲಲ್ಲಿಯ ಸಿದ್ಧರು
ಹವಣ ತಿಳಿಯದೆ ಬಂದು ತಡೆದು ತರ್ಕಿಸುತಿರ
ಲ್ಕವರೆಲ್ಲರಂ ಗೆದ್ದು ಶಪಿಸಿ ನರಗುರಿಗೈದು
ಜವದಿಂದ ಬರುತಿರಲ್ಮುಂಡಾಸುರನು ಬಂದು ಕೋಪದಿಂದಡ್ಡಾದನು ||೪೪||

ಆ ರಕ್ಕಸನಂ ಕೊಂದು ಮೂರು ಭಾಗವ ಸೀಳಿ
ಧೀರತನದಿಂ ಸಿದ್ಧನೆಡೆಗೆ ಬರಲವನ ನಿಜ
ಚಾರಿತ್ರಮಂ ನೋಡಿದನು ಜನಶರೀರ ಮೂರಡಿಯ ಕಂತೆಯನ್ನು ಮಾಡಿ
ತಾರತಮ್ಯದಿ ಧರಿಸೆನಲ್ಕೆಗುರ್ವಾಜ್ಞೆಯಂ
ಮೀರಿದವರಂದಂತೆ
ಮೂರಡಿಯ ಕಂತೆಯಂಗೈದು ಪ್ರಖ್ಯಾತಿಗೊಂಡನು ಧರೆಯೊಳು ||೪೫||

ಸಚ್ಚಿದಾನಂದ ಸಿದ್ಧೇಂದ್ರ ನರಗುರಿಯ ನೋ
ಡ್ಡಚ್ಚರಮಿದೇನೆಂದು ಶಿಷ್ಯನ ಪರಾಕ್ರಮಕೆ
ಮೆಚ್ಚಿ ಮನದೇಳ್ಗಿಯಿಂ ಪೇಳ್ದನೀ ಮೇಷಗಳ ರೋಮಗುರ್ವಾಸನಕ್ಕೆ
ನಿಚ್ಚಳದ ಗದ್ದುಗೆಯ ಚರ್ಮ ಗುರುಪಾದ ಪೂಜೆ
ಗುಚ್ಚಿತಂಗೊಡುವ ಘನವಾದ್ಯಂಗಳಾಗಲೆಂ
ದುಚ್ಚರಿಸಿ ಶಾಂತಮುತ್ತಯ್ಯಗಾಶೀರ್ವಚಿಸಿ ಮೇಘಮಾರ್ಗಕೆ ಜಿಗಿದನು ||೪೬||

ಈ ಸುಚಾರಿತ್ರಮಂ ಬರದೋದಿದರ್ಗೆ ಮೇಣ್
ಲೇಸಾಗಿ ಯಿದರರ್ಥವಾಧ್ಯಾಂತ ಪೇಳ್ದರ್ಗೆ
ಬೇಸರಿಯದುರೆ ಭಕ್ತಿಯಿಂದ ಕೇಳಿದವರ್ಗೆ ಪದುಳದಿಂದ ಪಠಿಸಿದರ್ಗೆ
ಭಾಸಿತ ಸಕಲ ಭೋಗಭಾಗ್ಯಮೋಕ್ಷಂಗಳ ವಿ
ಲಾಸದಿಂದಿತ್ತು ದುರಿತೌಘಮಂ ಸಂಹರಿಸಿ
ವಾಸ ರಸ್ತಾಪುರ ಶ್ರೀ ಶರಭಲಿಂಗೇಂದ್ರ ರಕ್ಷಿಸುವನಿಹಪರದೊಳು ||೪೭||

ಇಂತೆಬಲ್ಲಿಗೆ ಶರಭೇಶ್ವರ ಪಾದಾಬ್ಜಭೃಂಗನು
ವಿಶಿಷ್ಠವಿದ್ವಜ್ಜನ ವಿಧೇಯನು ಆದ ಭೀಮನಾಯಕ
ಕವಿಯಿಂ ಪ್ರಣೀತಮಪ್ಪ ಹಾಲ್ಮತೋತ್ತೇಜಕ ಪುರಾಣದಲ್ಲಿ
ಅಂತು ಸಂದಿ ೨ಕ್ಕಂ ಪದನು ೬೧ಕ್ಕೆ ಮಂಗಲಂ ಮಹಾಶ್ರೀಶ್ರೀಶ್ರೀ