ಸೂಚನೆ ||

ಗಂಧರ್ವರಿಗೆ ಮುನಿಯ ಶಾಪ ಬರಲವರೀವ
ಸುಂದರಿಯೊಳುದ್ಭವಿಸಿದರ್ದಂಪತಿಗಳಾಗಿ
ಇಂದುಧರ ಪೇಳ್ದಂತೆ ನಿಶ್ಸಾಪಕಾಗಿ ಶಿವಪದ್ಮನಭ್ಯುದಯನಾಗ್ವಂ

ಕೈಲಾಸಪುಟಭೇದನಾಲಯ ಸ್ಥಿತಹೈಮ
ಶೈಲಜಾಪತಿ ತ್ರಿದಶ ಪಾಲಾರ್ಚಿತಾಂಘ್ರಿಯುಗ
ತ್ರೈಲೋಕರಕ್ಷಮಣಿಮೂಲ ಮಹಿಮಾಕರನುಶೀಲ ಹಿಮಕರ ಶೇಖರ
ನೀಲಲೋಹಿತದುರಿತ ಜಾತಿನಾಶನರುದ್ರ
ಕಾಲಾಂಕಧರ ಮುಕ್ತಿಮೂಲ ಮುಪ್ಪುರಹರ ಕ
ಪಾಲಧೃತಶರ್ವಕರಶೂಲದೇವಂ ಸದಾ ಪೊರೆಯಲೆನ್ನನು ಮುದದೊಳು ||೧||

ಒಂದುದಿನ ಹರನು ಕೈಲಾಸಪುರ ಮಂದಿರದಿ
ಇಂದಿರಾಪತಿ ಮುಖ್ಯಸುರರ ಸಮ್ಮೇಳದಲಿ
ನಂದಿನಾರದ ಗರುಡಗಂಧರ್ವರಿಂ ಕೂಡಿ ಪರಮ ಸಂತಸದಿರುತಿರೆ
ಬಂದರಲ್ಲಿಗೆ ಸಕಲ ಮುನಿಗಳೊಂದಾಗುತಾ
ನಂದದಿಂ ನಾಟ್ಯವನಾಡುತ್ತ ಸ್ತುತಿಮಾಡುತ್ತ
ಇಂದುಶೇಖರನ ಪಾದಕೊಂದಿಸಿದರಖಿಳ ನೆರದಿರ್ದಸುರರುಘೇಯೆನುತಿರೆ ||೨||

ಹರನಯಡಬಲದಿರ್ದ ಉಭಯ ಗಂಧರ್ವರಾ
ವರಮುನಿಯ ತಂಡದಿ ಕುರೂಪಿಯಾದೋರ್ವ
ಪರ ತರ ತಾಪಸೋತ್ತಮನ ಮಹಿಮವರಿಯದೆ ಮೂಢರಂತೆ ಪರಿಹಾಸದಿಂದ
ನೆರೆನಕ್ಕು ಕರಬಡಿಯೆ ಮುನಿನಾಥ ಕೋಪದಿಂ
ನರಲೋಕಕಿಳಿದು ಕುಡುವಕ್ಕಲಿಗರುದರದೋಳ್
ಸರಸದಿಂದ್ಭುವಿಸಿ ಸತಿಪತಿಗಳಾರೆಂದತಿ ಕೋಪದಿಂ ಶಪಿಸಿದಂ ||೩||

ನೋಡಿದರು ಗಂಧರ್ವರಾಗ ಮುನಿವರನ ಕೊಂ
ಡಾಡಿದರು ಪಾದಸರೋಜಂಗಳ್ಗೆ ವಂದನೆಯ
ಮಾಡಿದರು ಧೃತಿಗುಂದಿ ಧೃಡಭಕ್ತಿಯಿಂ ಭಜಿಸುತಡಿಗಡಿಗೆ ಕರಮುಗಿಯುತ
ಬೇಡಿರು ಬೇಗದಿಂ ನಿಶ್ಶಾಪ ನೀಡೆಂದು
ಪಾಡಿದರು ಸದ್ಗನ ಸ್ವರವೆತ್ತಿ ಪ್ರೌಡಿಯಂ
ಕೂಡಿದರು ವೆಸನದೊಳ್ನರಜನ್ಮಬಂತಿದಕ್ಕೇನು ಗತಿ ಪೇಳೆಂದರು ||೪||

ತಾಪಸೋತ್ತಮರಂ ನಿಂದಿಸಿ ನಕ್ಕದಕೆ ಮಹಾ
ಕೋಪದಿಂದೆಮಗೆ ನರಜನ್ಮಕ್ಕೆ ಪೋಗೆಂದು
ಶಾಪವಿತ್ತಪರೆ ತಪ ಮಹಿಮಗಳನರಿಯದೀ ದೀನರಿಗೆ ನಿಶ್ಶಾಪಂ
ತಾಪಗೊಳ್ಳದೆ ಪೇಳಿ ರಕ್ಷಿಪುದನಾರತಂ
ಕಾಪಟ್ಯಮೆಮ್ಮೊಳಿಲ್ಲದೆ ನಕ್ಕವುದಕ್ಕೆ ಸಂ
ತಾಪಗೊಂಬುವದುಚಿತವೇ ಸುತರ ತಪ್ಪು ಪಿತನೆನಿಸಬಹುದೇ ವಿರಸದಿ ||೫||

ನೊಂದರುಭಯರು ನಿಟ್ಟುಸುರ್ಬಿಡುತ ಮನದೊಳಗೆ
ಬೆಂದರು ತರುವೆಸನವೆಂಬಗ್ನಿ ತಾಪಕ್ಕೆ
ತಂದರಕ್ಷಿಗೆ ಜಲವ ನರಜನ್ಮ ಬಂತೆಂದು ದುಃಖದಿಂ ಮುನಿಪಾದದೊಳು
ಬಂದರತಿ ದುಗುಡದಿಂ ಸರಿಸಕ್ಕೆ ಸಲೆಸಾರ್ದು
ನಿಂದರಾಗುಭಯ ಗಂಧರ್ವರೀಕ್ಷಣದಿ ಪೇ
ಳೆಂದರು ವಿಶ್ಯಾಪಮಂ ಮುನಿಕುಲೇಂದ್ರಮಂ ಕೋಪಬಿಟ್ಟು ಪೇಳುತಲಿರ್ದನು ||೬||

ಆಲಿಸಿರೀ ಗಂಧರ್ವರುಗಳೆ ನಿಮಗೆ ವಿಶ್ಯಾಪ
ಕಾಲಮಂ ಪೇಳುವೆನು ಪ್ರೇಮಮಾನಸರಾಗಿ
ಭೂಲೋಕದಲಿ ಪುಟ್ಟಿ ಸತಿಪತಿಗಳಾಗಿರಲ್ ಬಳಿಕೊಂದು ಶುಭದಿನದೊಳು
ಬಾಲನೋರ್ವನು ಜನಿಸುವುದಂದಿಗೆ ವಿಶ್ಯಾಪ ಪರಿ
ಪಾಲಿಸುವೆನೆಂದಭಯ ಕೊಟ್ಟನವರಿಗೆ ಸತ್ಯ
ಶೀಲಜಿತಮಾಯ ಬಡಕಾಯ ಮುನಿರಾಯ ತನ್ನಾತ್ಮದೊಳು ಪ್ರೇಮತಳೆದು ||೭||

ಮುನಿನಾಥನಾಡಿದ ಭಯದ ನುಡಿಗೆ ಗಂಧರ್ವ
ರನಿತರೋಳ್ವಿನಯೋಕ್ತಿಯಿಂದ ಕೇಳಿದರೆಮಗೆ
ತನಯನುದಿಸುವ ಸುದಿನಮೆಂದು ಮೇಣಾಸುತನ ಲಕ್ಷಣಗಳೆಮ್ಮಗರುಹಿ
ಘನಕರುಣದಿಂ ಪಾಲಿಸೆಂದೆನಲ್ಕಾ ಮುನಿವ
ರನು ಮಗುಳಿ ಪೇಳ್ದನೆಲೋ ಗಂಧರ್ವರುಗಳೆ
ಶಿವನನು ಸ್ತುತಿಸಿ ಕೇಳ್ದೊಡೆ ಭವಿಷ್ಯಸೂಚನೆ ಪೇಳಿ ರಕ್ಷಿಸುವ ಸಮ್ಮುದದೊಳು ||೮||

ನಮಿಸಿದರು ಮುನಿವರನ ಪಾದಕೆ ಸದ್ಭಕ್ತಿಯಿಂ
ನಮಿಸಿದರು ತ್ವರದಿಂದ ತಮ್ಮ ಸತ್ಕಾರ್ಯಕಾ
ಕ್ರಮಿಸಿದರು ಗಂಧರ್ವರಾಗ ಮನದೊಳು ಮರುಗಿ ಸೊರಗಿ ಸುಖರಹಿತರಾಗಿ
ಭ್ರಮಿಸಿದರು ಗತಿಗೆ ಯೋಗ್ಯಾತ್ಮಜನ ನೆನೆದು ವಿ
ಶ್ರಮಿಸಿದರು ಹರಸಭೆಯೊಳಂತರಂಗದವೆಸನ
ಕ್ಷಮಿಸಿದರು ಶಂಕರನ ಸನ್ನುತಿಯಗೈದುತಾವೇಕಾಗ್ರ ಚಿತ್ತರಾಗಿ ||೯||

ನುತಿಗೆ ಜಗದೀಶ್ವರಂ ಮೆಚ್ಚಿ ನಿಮಗೇಕಿಂಥ
ಗತಿ ಬಂದಿತೆಂದು ಗಂಧರ್ವರಿಗೆ ಕೇಳಲವರತಿ
ತ್ವರದಿ ಪೇಳಿದರು ತಮ್ಮಯ ಪುರಾವೃತ್ತಮಂ ಶಂಕರನ ಸನ್ನಿಧಿಯೊಳು
ಯತಿಯೋರ್ವನಂ ಕಂಡು ಹಾಸ್ಯಗೈದದಕೆ ಬಹು
ಖತಿಗೊಂಡು ನರಜನ್ಮ ನರಕಕ್ಕೆ ಪೋಗಿರೆಂ
ದತಿಶೈಸಿದನು ಶಾಪಕುಶ್ಯಾಪ ಕೇಳಿದರೆ ತಮ್ಮಡಿಗೆ ಪೋಗೆಂದನು ||೧೦||

ಇಂತು ಯೋಗಿಶ ತಾಂ ಶಪಿಸಿದನೇ ನಿಮಗೆ
ಚಿಂತೆಯಂ ಕಳೆದೇಕಚಿತ್ತದಿಂದಾಲಿಸಿರಿ
ಸಂತಸದಿ ಪೇಳ್ವೆನು ವಿಶ್ಯಾಪಂ ನೀವು ನರರಲ್ಲಿ ಸತಿಪತಿಗಳಾಗಿ
ಕಂತುವಿನ ರೂಪಮಂ ಧಿಕ್ಕರಿಪ ಬಾಲನ
ತ್ಯಂತ ಮತ್ಕಳೆವೆತ್ತು ಜನಿಸುವನು ಸುಪ್ರೇಮ
ದಿಂ ಸಟಿಯಲ್ಲವಲ್ಲಿಗೀ ಶಾಪ ಪರಿಹರಮಪ್ಪುದೆಂದೊರೆದನು ||೧೧||

ಸಿತಕಂಠನೇ ತಮ್ಮ ಕೃಪೆಯಿಂದ ಜನಿಸುವಾ
ಸುತನ ಸತ್ಕಳೆಗಳಂ ಪೇಳಬೇಕೆಂದು ಸ
ನ್ನುತಿಗೈದು ಬೇಡಿಕೊಂಡರು ಮಹಾಭಕ್ತಿಯಿಂ ಭಾವಜಾಂತಕದೇವಗೆ
ಹಿತದಿಂದ ಶಂಕರನು ಪೇಳತೊಡಗಿದನಾಗ
ಸುತನ ಸುಕಳೆಗಳನ್ನು ವಿಧವಿಧದಿ ವರ್ಣಿಸುತ
ಲತಿತ್ವರದಿ ತಿಳಿಸಿದಂ ಗಂಧರ್ವರುಗಳಿಗಾನಂದಮಪ್ಪಂತೆ ಮನಕೆ ||೧೨||

ವಸುಮತೀ ಜನರಂತೆ ನವಮಾಸಕಾರ್ಬಕವು
ಬಸುರಿಂದ ಬಾರದೈದನೆಯ ಮಾಸಾಂತ್ಯದಿ ಜ
ನಿಸುವದಾ ಶಿಶು ಮುಂದೆ ಸುಪ್ರೇಮದಿಂದೆ ತಾ ಮಾತೆಯ ಮೊಲೆಯ ಪೀರದು
ಹಸಿವು ತೃಷೆ ನಿದ್ರೆ ಅಂಗಚ್ಛಾಯ ವಿಷಯದಕು
ವೆಸನ ಮಲಮೂತ್ರ ಶ್ವಾಸಛ್ವಾಸಗಳ ತೆಜಿಸಿ
ಮಿಸುನಿ ಪುತ್ಥಳಿಯಂತೆಸೆವ ಸುತನು ಬಿದಿಗಿಚಂದ್ರನ ತೆರದಿ ಬೆಳೆವನಂದಂ ||೧೩||

ಕೃತಿವಾಸನು ಪೇಳಲಾಗ ಗಂಧರ್ವರುರೆ
ಚಿತ್ತಜಾರಿಗೆ ನಮಿಸಲಾಕ್ಷಣದಿ ಶಿವಭಸಿತ
ವಿತ್ತವರಿಗಪ್ಪಣೆಯ ಕೊಟ್ಟು ಕಳಿಸಿದ ಮುದದಿ ನರಲೋಕ ವಿಷಯಸುಖಕೆ
ಇತ್ತ ಭೂತಲಮಧ್ಯಪ್ರಾಂತದೊಳ್ಸತ್ಕೀರ್ತಿ
ವೆತ್ತು ಶೋಭಿಸುವ ಜಾಗ್ರತಿಪುರದೊಳಿರುತಿರ್ದ
ಉತ್ತಮೋತ್ತಮ ಮುದ್ದುಗೊಂಡರ್ಧಾಂಗಿ ಮುದ್ದಾಯಿಯ ಸುಗರ್ಭದಿಂದ ||೧೪||

ಅವತರಿಸಿ ಬಂದ ಮುನಿಶಾಪದಿಂ ಗಂಧರ್ವ
ತವೆ ಶೋಭಿಸುವ ಪುತ್ರನಂ ನೋಡಿ ಜನನಿ ಕೆಲ
ಯುವತಿಯರ್ಗಾ ಬಾಲನಂ ತೋರಿಸುತ್ತ ಸಂತೋಷಗೊಂಡಳು ಮನದೊಳು
ಅವನಿಯೊಳಗತಿ ಕುಶಲನಾದ ಪಿತ ತಾಂ ತನ್ನ
ಕುವರಂಗೆ ದ್ವಾದಶ ದಿನದಿ ನಾಮಕರ್ಣವಂ
ಸುವಿಲಾಸದಿಂಗೈಸಲಾದಿಗೊಂಡೆಂಬಾಖ್ಯವಿಟ್ಟು ಪೋದರು ಸ್ತ್ರೀಯರು ||೧೫||

ಬಾಲಲೀಲೆಯೊಳಾದಿಗೊಂಡನಿಗೆ ಶರವರುಷ
ಮೇಲಾಗಿ ಬೆಳೆಯಲಾತನ ಜನಕ ಚಿಂತಿಸಿದ
ನೀ ಲೋಕದಲಿ ಸುತನಿಗೊಪ್ಪುವ ಸುಕನ್ಯಯಲ್ಲಿರ್ಪುದೋ ತಿಳಿಯಲೆಂದು
ಶೀಲೆ ಸಂಪನ್ನೆಯಾದಬಲೆ ಸಿಕ್ಕರೆ ಮಿಸುವ
ಪಾಲಿನೊಳ್ ಸಕ್ಕರೆಯ ಬೆರಸಿದಂತಹುದು ಫಣಿ
ಮಾಲನೇ ಬಲ್ಲನಿದು ಮುಂದೆ ಗತಿಯೇನೆಂದು ಯೋಚಿಸಿದಳಾ ಮಾತೆಯು ||೧೬||

ಘನಮುದ್ದುಗೊಂಡನ ಸಹೋದರಿಯ ಬಸುರಿಂದ
ಮುನಿಶಾಪವ ಪಡೆದು ಗಂಧರ್ವಪೆಣ್ಗೂಸಾಗಿ
ಜನಿಸಲ್ಕೆ ಪಿತಮಾತೆಯರು ಮುದದಿ ಪನ್ನೆರಡು ದಿನ ಶುಭಮಹೂರ್ತದೊಳಗೆ
ವನಿತೆಯರು ಜೋಗುಳವ ಪಾಡಿ ಚುಂಚಲೆಯಂದು
ಮನವಪ್ಪಿ ಪೆಸರಿಟ್ಟು ಕರೆದು ಕೊಂಡಾಡಿದರು
ಇನಿತೆಲ್ಲ ಮುದ್ದುಗೊಂಡನು ಕೇಳಿ ತನ್ನ ಪುತ್ರನಿಗೆ ಸಮವಾಯಿತೆಂದು ||೧೭||

ಕೆಲಕಾಲ ಕಳೆದಾದಿಗೊಂಡನಿಗೆ ಚುಂಚಲೆಯಂ
ನಲುವಿಂದ ತೆಗೆದು ಪರಿಣಯ ಮಾಡಿದರು ಬೇಗ
ಮಲಹರನ ಕರುಣದಿಂ ವಧುವರರು ದಿನದಿನಕೆ ಸಂಪ್ರೀತಿಯಿಂದಿರ್ದರು
ವಿಲಸಿತ ಗಂಭೀರದಿಂ ಮೆರೆಯುತೆವ್ವನದಲ್ಲಿ
ಚಲುವಾದ ಚತುರ ಸುತರಂ ಪಡೆದರಾಗ
ಪ್ರಜ್ವಲಿಪ ಪೆಸರುಗಳನ್ನು ಕ್ರಮದಿಂದ ಪೇಳುವೆನು ಸಕಲರರಿವಂತೆ ಮುದದಿ ||೧೮||

ಪುಂಡ ಆಯುಗೊಂಡ ಪಾಯ್ಗೊಂಡ ಮರಗೊಂಡ ಜಾ
ಯ್ಗೊಂಡರೆಂದೆಂಬ ಸುತರಂ ಪೋಷಿಸುತ್ತಿರಲ್
ಮಂಡೆಬೆಳ್ತುದು ಕುಗ್ಗಿತೆವ್ವನವು ಚುಂಚಲೆಗೆ ಮೇಣಾದಿಗೊಂಡನಾಗ
ತಂಡತಂಡದಿ ಚಿಂತಿಸಿದನಂತರಂಗದೊಳ್
ಖಂಡಶಶಿಧರ ಪೇಳ್ದ ತೆರದೆಮಗೆ ಸತ್ಪುತ್ರ
ಪುಂಡರೀಕ ಭವಾಂಡದೋಳ್ಜನಿಪನೋ ಜನಿಸದಿರುವನೋ ತಿಳಿಯದೆಂದು ||೧೯||

ಬಿಟ್ಟನೂಟವನಾದಿಗೊಂಡ ಸುಖಭೋಗಗಳ್
ಸುಟ್ಟನತಿ ದುಗುಡ ಮಾನಸನಾಗಿ ಗತಿಗೆ ಗುರಿ
ಇಟ್ಟನಾಗಳೆ ಶಿವಾಧವನಸಧ್ಯಾನಮಂಗಯ್ಯಲನುವಾದ ಮುದದಿ
ಕೆಟ್ಟನಾತ್ಮಜನುದ್ಭವಿಸಿದಕ್ಕೆ ಶಪಥವನು
ತೊಟ್ಟನಾ ಸತಿಚುಂಚಲೆಯ ಕರೆದು ದುಃಖದಿಂ
ಕೊಟ್ಟನಭಯವ ಸಾಕು ಸಂಸಾರಸುಖಮೆಂದು ಮೈಮರೆದು ಧರೆಗೊರಗಿದಂ ||೨೦||

ರಮಣ ಧರೆಗುರುಳೆ ಚುಂಚಲೆ ಕರಗಳಂ ಚಾಚಿ
ಅಮಿತ ಪ್ರೇಮದಿ ಪ್ರಿಯನ ಪಿಡಿದೆತ್ತಿ ನಿನಗುಪ
ಕ್ರಮಿಸಿತೇ ವೆಸನಮಂ ಬಿಡುಕಾಂತ ಶ್ರೀಮಂತಗುಣವಂತ ತಾಳು ಶಾಂತ
ಸುಮನಪತಿ ಪೂಜಿತನು ಪೇಳ್ದನುಡಿ ಸಟಿಯಹುದೆ
ವಿಮಲ ಮಾನಸನಾಗು ಮತಿಹೀನರಂತೆ ಹೃ
ತ್ಕಮಲದೋಳ್ಚಿಂತಿಪರೆ ಶಾಪಾಂತ್ಯ ಕಾಲದೊಳ್ ಸತ್ಪುತ್ರ ಪುಟ್ಟದಿಹನೇ ||೨೧||

ಎಂದು ವಲ್ಲಭನ ಸಂತೈಸಿದಳ್ಮನದೊಳಿಹ
ಕುಂದುಗಳ ಕಳೆದು ವಿಧವಿಧ ನೀತಿ ನುಡಿಗಳಂ
ಚಂದದಿಂದೊರೆದಳಾ ಸುಂದರ ಕರಂಗಳಂ ಮುಗಿದೇಕ ಚಿತ್ತದಿಂದ
ಒಂದು ದಿನ ವರದ ರೇವಣಸಿದ್ಧ ಬಹುಶಿಷ್ಯ
ರಿಂದ ಕೂಡುತ್ತ ಜಾಗ್ರತಿ ಪಟ್ಟಣಕ್ಕೆ ತಾ
ಬಂದನತಿ ಸತ್ವರದಿ ಶಿವನ ಸ್ತುತಿಗೈಯುತಲ್ಲಲ್ಲಿಗೆ ಪರಾಕೆಂಬುತೆ ||೨೨||

ನಿಂತು ತಾಂಡವನಾಡಿ ಪುರ ನೋಡಿ ಬೀದಿಯಲಿ
ಸಂತಸದಿ ಚರಿಸ್ಯಾಡಿ ನಲಿದಾಡಿ ದೃಢದಿಂದ
ಕಂತುಹರನನು ಪಾಡಿ ಪಥಗೂಡಿಬರೆ ಶಿಷ್ಯಸಂದೋಹ ಸಿದ್ಧೇಶಗೆ
ಚಿಂತಿಸುತ ಕೇಳಿದರು ತಾಳಿದರು ಶಾಂತಿಯನು
ಇಂತು ಕುಣಿಕುಣಿದು ಮನವಿಡಿದು ಸ್ವರವೆತ್ತಿಮದ
ನಾಂತಕನ ನಾಮಸ್ಮರಣೆಯಿಂದ ಸಂತೋಷಗೊಂಡ ಕಾರ‍್ಯಾರ್ಥವೇನು ||೨೩||

ಭರದಿಂದ ತಿಳಿಸೆಂದು ಶಿಷ್ಯರಾ ಸಿದ್ಧನಂ
ಸ್ಮರಿಸಿದ ಕೇಳ್ದೊಡೆ ಮರಳಿ ರೇವಣಾಚಾರ್ಯ ತಾ
ನೊರೆದನವರಿಗೆ ಮಹಾಪುಣ್ಯಸ್ಥಲಮೆಂದು ನಲಿದಾಡಿದೆನೆನಲ್ಕೆ ಸುತರು
ಗುರುವೆ ಈ ಪುರದಲ್ಲಿ ಶಿವಕ್ಷೇತ್ರ ಶಿವನಿಲಯ
ಪರಿಶೋಧಿಸಲು ಕಾಣೆವಿಂತು ಕುಗ್ರಾಮಕ್ಕೆ
ವರಪುಣ್ಯಸ್ಥಲಮೆಂದು ಪೇಳ್ದ ಬಗೆಯಂ ತಿಳಿಸಿರೆಮಗೆನಲ್ಕಾ ಸಿದ್ಧನು ||೨೪||

ಅತ್ಯಧಿಕ ಪ್ರೀತಿಯಂ ಪೇಳ್ದನೀ ಪುರದೊಳಿಹ
ಸತ್ಯಯುತನಾದಾದಿಗೊಂಡನಾರ್ಧಾಂಗಿ ಗೃಹ
ಕೃತ್ಯಂಗಳಂಗೈದು ಸುಖಿಪಳಾಕೆಯ ಗರ್ಭದಲ್ಲಿ ಶಿವಯೋಗಿ ಜನಿಪ
ಸ್ತುತ್ಯವಾ ಶಿಶುವಿನಿಂದೀ ಜಾಗ್ರತಾಪುರವು
ನಿತ್ಯವೈಭವ ತಳೆದು ಮೆರೆವುದದರಿಂ ನಾನು
ನೃತ್ಯಗೈದಭವನಂ ಧ್ಯಾನಿಸಿದೆನೆಂದು ತಾ ಪೇಳ್ದ ಶಿಷ್ಯರ್ಗೆ ಮುನಿಪ ||೨೫||

ಸಿದ್ಧವರಗುರು ಪೇಳ್ದ ನುಡಿಗಳಂ ಶಿಷ್ಯರತಿ
ಬದ್ಧವೆಂದರಿದೊರೆದರೆಲೆ ಗುರುವೆ ಭುವನ ಪ್ರಸಿದ್ಧ
ಮಾದ ದಂಪತಿಗಳೆಮಗೆ ತೋರಬೇಕೆಂದು ಬಿನ್ನಪಗೈದರು
ಸಿದ್ಧರಾಗಿರಿ ಕರೆದುಕೊಂಡು ಪೋಗುವೆನು ಸ
ನ್ನದ್ದರಾಗಿರಿ ನಿಮಗೆ ತೋರಿಸುವೆ ನಾನೀಗ
ವೃದ್ಧರಾದಾದಿಗೊಂಡನ ಮೇಣವನ ಪತ್ನಿ ಚುಂಚಲಾದೇವಿಯರನು ||೨೬||

ಎಂದು ರೇವಣಸಿದ್ಧಗುರು ತನ್ನ ನಿಜ ಶಿಷ್ಯ
ವೃಂದಮಂ ಕೂಡಿಕೊಂಡತುಳ ವೈಭವವೆರಸಿ
ಬಂದನಾ ಕುಡವಕ್ಕಲಿಗರ ಸಾಲ್ಮನೆಗಳಿತ್ತಂಡದಿರುಬಿನೊಳು ಭರದಿ
ಇಂದುಮುಖಿ ಚುಂಚಲೆಯು ಸಿದ್ಧನಂ ಕಾಣಲಾ
ನಂದಪರಳಾಗಿ ಭಯಭಕ್ತಿಯಿಂದವರ ಪಾದ
ಕೊಂದಿಸಲ್ಕಾ ತಪಸಿ ಚುಂಚಲೆಯ ಗರ್ಭಮಂ ಮುಟ್ಟುತಭಿನಂದಿಸಿದನು ||೨೭||

ಚುಂಚಲೆಯು ಬೆದರಿ ಬೆಂಡಾಗಿ ಬಾಯ್ಬಿಟ್ಟೀ ಪ್ರ
ಪಂಚಪಾಶಕೆ ಸಿಲ್ಕಿ ದುಃಖಕಾಸ್ಪದಳಾಗಿ
ಪಂಚಕರ್ಮಂಗಳ್ಗೆ ನೆಲೆಯಾದಯನ್ನಗಭಿವಂದಿಸುವರೇ ಗುರುವರಾ
ಚಂಚಲಾಯಿತು ಮನಕೆ ಕುವರಿಗೆ ಸಮಾಧಾನ
ಕೊಂಚ ಪೇಳುತ್ತ ರಕ್ಷಿಪುದೆಂದು ಬಿದ್ದಳೈ
ಪಂಚಮುಖ ಸುಕುಮಾರನೆನಿಪ ಸಿದ್ದನ ಪಾದಕೆ ಬಣ್ಣಿಸಲ್ಕದು ತೀರದು ||೨೮||

ಪುಳಕದಿಂ ಮುನಿವರನು ದೇವಿಯಂ ಪಿಡಿದೆತ್ತಿ
ಕಳವಳಗೊಳುವದೇಕೆ ಸಾಕೆಂದು ಸಂತೈಸಿ
ತಿಳಿಸುವದಕನುವಾದನವಳಿಗೊಂದಿಸಿದ ಕಾರ‍್ಯಾರ್ಥದೆಲ್ಲಾ ಪರಿಯನು
ಪಳಿಯದಿರು ಕುವರಿ ನಿನ್ನುದರದೋಳ್ಶಿವನ ಚಿ
ತ್ಕಳೆಯೊಂದು ರೂಪಾಗಿ ಜನಿಸಿ ಬರುವುದು ಧರಾ
ತಳಕ್ಕೆ ಸಾಗರದಿ ಹಿಮಕರನುದಿಸಿ ಬಂದಂತೆ ತಿಳಿ ನಿನ್ನ ಮನ ಕೊನೆಯೊಳು ||೨೯||

ಮಲವಿಲ್ಲ ಮಾಸಿಲ್ಲ ದುರ್ಗಂಧದಿಂ ಕೂಡ್ದ
ಕಲೆಯಿಲ್ಲ ಸೀತೋಷ್ಣವಿಲ್ಲ ಹರುಷ ವಿಷಾದ
ನೆಲೆಯಿಲ್ಲ ಹಸಿವು ತೃಷೆಯೊಂದಿಲ್ಲವಾ ಶಿಶುವಿಗಭಿವಂದಿಸಿದೆನು ನಾನು
ವಿಲಸಿತಾಂಗಿಯೇ ನಿನ್ನ ಪೂರ್ವಾರ್ಜಿತದ ಪುಣ್ಯ
ಫಲಪಕ್ವದಿಂದೈದು ಮಾಸೊಳಗಾಗಿ ಪ್ರ
ಜ್ವಲಿಸುವ ಸುಪುತ್ರನನುದ್ಭವಿಸುವನು ಮೋಡದಿಂ ಪೊರಮಡುವ ಸೂರ‍್ಯನಂತೆ ||೩೦||

ಜಡನೆಂದು ಬಧಿರನೆಂದಳನೆಂದು ನಗನೆಂದು
ನುಸಿಯನೆಂದುಸುರಿಕ್ಕನೆಂದು ನೆರಳಿಲ್ಲೆಂದು
ಬಡನೆಂದು ಮೂರ್ಖನೆಂದುಣನೆಂದು ಮನದೊಳುಮ್ಮಳಿಸಬೇಡನುದಿನದಲಿ
ಕಡುಚಲ್ವನಾಗಿ ಮೃಡರೂಪಾಗಿ ಶಿವಯೋಗಿ
ಪೊಡವಿಗವತರಿಸುವನೆನಲ್ಕೆ ಆ ಸಿದ್ಧಂಗೆ
ನುಡಿದಳಾ ಯುವತಿ ಸಂತೋಷದಿಂದಲೆ ದೇವ ಪೆಸರಾವುದಾ ಶಿಶುವಿಗೆ ||೩೧||

ಯುವತಿಮಣಿ ಕೇಳು ಪರಮೇಶ್ವರನ ರೂಪದಿಂ
ದವತರಿಪನದರಿಂದಲಾ ಚಲ್ವ ಕೂಸಿಂಗೆ
ಶಿವಪದ್ಮನೆಂಬಾಖ್ಯ ಸಲ್ಲುವದಿದೆಂದು ಚುಂಚಲೆಗೆ ಪೇಳಿದ ಮುದದೊಳು
ಭುವನ ಪ್ರಖ್ಯಾತನಾದಾದಿಗೊಂಡನು ಬಂದು
ಅವಿರಳ ಪರಂಜ್ಯೋತಿಯಾದ ರೇವಣಸಿದ್ಧ
ನವರ ಪಾದಕ್ಕೆರಗಿ ಬಿನ್ನೈಸಿದಂ ಭಕ್ತಿಯಿಂ ಭಾವಶುದ್ಧದಿಂದ ||೩೨||

ಮಹಿಮೋತ್ತಮನೆ ನಿನ್ನ ನುಡಿ ಕೇಳಲತಿ ಚೋದ್ಯ
ವಹುದೆನ್ನ ಸತಿಗೆ ಗರ್ಭೋತ್ಪತ್ಯಮೆತ್ತ ಸುತ
ನಹುದೆತ್ತ ಪುಸಿನುಡಿಗಳೇಕೆ ಪೇಳುವಿ ಬರಿದೆ ಸಾಕೆಂದು ಕರವ ಮುಗಿಯೆ
ಇಹದೋಳೀ ಮಾತು ಪುಸಿಯಲ್ಲ ಸುತ ಪುಟ್ಟುವದು
ಸಹಜಮೆಂದಭಯಮಂ ನೀಡಿದಂ ಗುರುಸಿದ್ಧ
ಬಹುನುಡಿಗಳಂ ಪೇಳಿ ತೆರಳುವನಿತರೊಳು ಚುಂಚಲೆಯ ಸನ್ಮಿತ್ರೆಯಾದ ||೩೩||

ನಾರಿ ನಾಗಲೆ ಬಂದು ಸಾಷ್ಟಾಂಗವೆರಗಿ ನುಡಿ
ಬೀರಿದಳು ಮನಿಪಂಗೆ ಪುಸಿ ಪೇಳ್ವದೇಕೆಂದು
ದೂರಿದಳು ಕಠಿಣೋಕ್ತಿಯಿಂದ ನಿಂದಿಸಿದಳೀ ವೃದ್ಧೆಯಾದೆನ್ನ ಸಖಿಗೆ
ಮೀರಿರುವದೀಗ ಮಗನ ಪಡೆವಂದಿನ ಮುಪ್ಪು
ಏರಿರುವದೀಗ ತನುಧರ್ಮದ ಕಲೆಗಳೆಲ್ಲಾ
ಬೇರಾಗಿರುವವೀಗ ನೀನೋಡು ನೆರೆತ ರವಿಕಾರಂಗಳಂಗದೊಳಗೆ ||೩೪||

ತರುಣಿಯರು ನವಮಾಸದಲ್ಲಿ ಪಡೆವದು ಧರ್ಮ
ಶರಮಾಸಕೀ ನಾರಿ ಪ್ರಸವವಾಗುವದುಂಟೆ
ಬರಿದೆ ನಿಮ್ಮುದರ ಪೋಷಣೆಗಾಗಿ ಮರುಳರಿವರೆಂದರಿದು ಪೇಳಬಹುದೇ
ಧರೆಯೊಳೀ ಸಂಗತಿಯ ಕೇಳಲನ್ಯರು ನಗರೇ
ಪರಮಾಶ್ಚರದ ನುಡಿಯನುಸುರುವದಿದೊಳ್ಳಿತವೆ
ಶರಣ ನಿಮ್ಮಯ ಪಾದಕ್ಕೆ ಸಾಕು ಸುಮ್ಮನೆ ನಡಿಯೋ ಲೋಕೈಕ್ಯ ಪೂಜ್ಯನಾಗಿ ||೩೫||

ಎನಲು ಮುನಿನಾಥ ನಾಗಲೆಗೆ ಪೇಳ್ವನು ಮುದದಿ
ವನಿತೆ ಚುಂಚಲೆಯ ಬಸುರಿಂದ ವರಶಿವಯೋಗಿ
ಜನಿಸುವದು ಸತ್ಯಮಿದು ಮಿಥ್ಯವಲ್ಲೆಂದು ತಿಳಿ ನಿನ್ನ ಮನದೊಳಗೆಂದನು
ಅನಿತರೊಳಾದಿಗೊಂಡನು ನಮಸ್ಕರಿಸಿದನು
ವಿನಯದಿಂ ನುತಿಸಿ ರೇವಣಸಿದ್ಧದೇವನಂ
ಘನಪ್ರೇಮದಿಂ ಕಳಿಸಿ ಸತಿಸಹಿತ ಸುಖಿಯಾಗಿರಲ್ಕೆ ಚುಂಚಲಾದೇವಿಗೆ ||೩೬||

ನೆರೆತೆರೆಗಳಡಗಿ ತರುಣತ್ವದ ಸುಕಲೆಗಳಾ
ವರಿಸಿದವು ಜೋಲಾಗಿ ಬಳ್ವಿಡಿದ ಚರ್ಮ ಸುಂ
ದರಮಾಯಿತಕ್ಷಿಗಳ್ಮಿಂಚೇರಿದವು ಕದಪು ನುಣ್ಪಡರಿದವು ಬೇಗದಿ
ಹರಿಕಟಯು ದಿನದಿನಕೆ ಗಡುತರಾಯಿತು ಮಹಾ
ಶರಧಿಯುಕ್ಕೇರಿದಂದುರ ಬೆಳೆದಿತು ತ್ರಿವಳಿ
ನೆರೆಮಾಸಿದವು ಗರ್ಭನೆಲೆಗೊಂಡಿತಾಕ್ಷಣಕೆ ಸಿದ್ದನರುಹಿದ ತೆರದಲಿ ||೩೭||

ಅಂಗನಾಮಣಿ ಗರ್ಭವಂ ತಾಳ್ದುದಂ ನೋಡಿ
ಮಂಗಲಾತ್ಮಕನಾದ ಪತಿಕಂಡು ಮೋಹದಿಂ
ಶೃಂಗರಿಸಿ ಬೆಸಗೊಂಡನೆಲೆ ಕಾಂತೆ ನಿನ್ನ ವೃದ್ಧಾಪ್ಯ ಲಕ್ಷಣಗಳಡಗಿ
ಕಂಗೊಳಿಪುದೀಗ ತರುಣತ್ವದಸು ಕಳೆಯಂತೆ
ತುಂಗ ರೇವಣಸಿದ್ಧ ಚಕ್ರೇಶ ಪೇಳ್ದದಕೆ
ಭಂಗಮಾದಪುದೆ ಗರ್ಭೋತ್ಪತ್ಯ ಸತ್ಯಮೆಂದಬಲೆಗೊರೆದನು ಮೋಹದಿ ||೩೮||

ಪತಿಯೇ ಪರಿಹಾಸಕದ ಮಾತೇಕೆ ಪೇಳ್ವಿಯಂ
ದತಿಶಯೋಕ್ತಿಗಳಿಂದ ತನ್ನ ನಿಜಕಾಂತಗೆ
ಸತಿ ಚುಂಚಲೆಯು ನಾಚುತಾಡಿದಳು ತಲೆಬಾಗಿ ಕೈಮುಗಿದು ಕರುಣದಿಂದ
ಹಿತಗೋಷ್ಟಿ ಸಾಕು ಸಾಕು ಸುರಬೇಡೆನ್ನೊಳೀ
ಕ್ಷಿತಿಜನರು ನಗುವಂತೆ ಮಾತನಾಡುವಿ ವೃಥಾ
ಶೃತಿಸುವದಿದುಚಿತಮಲ್ಲೆಂದು ಪೇಳಲ್ಕೆಮಗುಳಿಂತೆಂದನಾದಿಗೊಂಡ ||೩೯||

ಮಡದಿ ಕೇಳ್ನಿನ್ನ ಸ್ತನಮೊನೆಗೇಕೆ ಕಪ್ಪು ತೆಳು
ಪೊಡೆಯು ಗಡುತರಮಾಯ್ತು ಮುಪ್ಪು ಹರಿ
ನಡುಹಿಗ್ಗಿತತ್ಯಧಿಕ ನಾನೇನು ತಪ್ಪು ನುಡಿಯಾಡಿದನೆ ಸತಿರನ್ನಳೇ
ಬಿಡುವೆಸನ ಮನದೊಳಗೆ ಸುಖವರದ ಸಿದ್ಧ ತಾ
ನುಡಿದ ಮಾತಿಗೆ ಭಂಗಮಿಲ್ಲಮಿದು ಬದ್ಧ ನಿಜ
ವಿಡಿದು ನಿಶ್ತೈಸು ಮೊದಲಿನ ನಿನ್ನ ವೃದ್ಧ ಕಳೆ ಪರಿ ಮಾಸಿತೆಂದೊರೆದನು ||೪೦||

ನುಡಿಯಲಾ ಪತಿಗೆ ತಲೆ ತಗ್ಗಿದಳು ಹಿಗ್ಗಿದಳು
ನಿಡುಗುರುಳ್ಗಳ ಕರದಿ ಬಾಚಿದಳು ನಾಚಿದಳು
ದೃಢವೆಂದು ಪ್ರಿಯನ ನುಡಿಗೊಪ್ಪಿದಳು ಅಪ್ಪಿದಳು ಸನ್ಮೋಹದಿಂ ಕಾಂತನ
ಸಡಗರದೊಳಿಹಳಕ್ಷಿ ಚಂಚಲೆಯು ಚುಂಚಲೆಯು
ಬಿಡದೆ ಸುಖಿಯರ್ಗೆ ಕಳೆದೋರಿದಳು ಸಾರಿದಳು
ಕಡುಚಲ್ವ ಪುತ್ರನಾಪೇಕ್ಷಿಸಿದಳೀಕ್ಷಿಸಿದಳೆಲ್ಲ ತನ್ನಯ ಕಳೆಗಳ ||೪೧||

ಅಂದಿಗಾ ಚುಂಚಲೆಗೆ ಶರಮಾಸ ತುಂಬಲ್ಕೆ
ಒಂದು ದಿನ ತನ್ನ ಸಖಿ ನಾಗಲೆಯು ಕೂಡಿ ನಿಜ
ಮಂದಿರದಿ ಹಂಸತಲ್ಪಕ ಮಂಚದೊಳ್ಪವಡಿಸಿದರಾಗ ರಾತ್ರಿಯೊಳಗೆ
ಕಂದುಗೊರಳನಾಜ್ಞೆಯಿಂದಾರ್ಭಕವು ಪುಟ್ಟಿ ತಾ
ಇಂದುಶೇಖರನ ಚಿತ್ಕಳೆಯೊಂದು ರೂಪಮಂ
ಪೊಂದಿ ಪಿತಮಾತೆಯರ ಸದ್ಗತಿಗೆ ಕಳಿಸಬೇಕೆಂದಿಳಿಯಿತೆಂಬಂತಿರೆ ||೪೨||

ಪಂಚಶರನಂ ಪೊಳೆವ ರೂಪ ಕುಲದೀಪವರ
ಪಂಚವದನನ ವಿಮಲ ತೇಜಸುರ ಭೂಜಕಡು
ಪಂಚಕರ್ಮಂಗಳಿಗೆ ದೂರ ಸುಖಸಾರಗುಣಹಾರ ಸಲೆ ಶೂರವೀರ
ಪಂಚವಾಯುಗಳ ಹಂಗರಿಯ ಸ್ಥಿರಚರಿಯ ಘನ
ಪಂಚ ಮುದ್ರಾನ್ವಿತ ಸುಕಾಯಜಿತಮಾಯತವೆ
ಪಂಚಭೂತಾಧೀನನಲ್ಲ ಪುಸಿಯಲ್ಲ ಹರಬಲ್ಲನಿನಿತೆಲ್ಲವನ್ನು ||೪೩||

ಸುರರು ಪುಷ್ಪದ ಮಳೆಯಗರಿಸಿದರು ಸುರಿಸಿದರು
ವರದುಂದುಭೆಯ ನಾದ ಮಾಡಿದರು ಪಾಡಿದರು
ಭರದಿ ಭೇರಿಗಳೆಲ್ಲ ಮೊಳಗಿದವು ಬೆಳಗಿದವು ಖೇಚರರ ಹೊಡೆತಕೆ
ಸಿರಿ ಸರಸ್ವತಿ ರುದ್ರಕನ್ಯೆಯರು ಚನ್ನೆಯರು
ಸರಸದಿಂ ಕೂಡಿ ಗಿರಿಜಾತೆಯೊಳು ಖ್ಯಾತೆಯೊಳು
ವರಬಾಲನಿಹ ಸ್ಥಲಕಾ ಗಮಿಸಿದಳು ಭ್ರಮಿಸಿದಳು ಸುತಗೆ ಮುದ್ದಿಡುವದಕ್ಕೆ ||೪೪||

ಗಿರಿಜಾತೆ ಕೂಸಿನಂ ಪಿಡಿದೆತ್ತಿ ಮುದ್ದಿಟ್ಟು
ಹರನ ಸಕಲೈಶ್ವರ್ಯ ಸಚ್ಛಕ್ತಿ ಶಮೆದಮೆಯು
ಸ್ಥಿರವಾಗಿ ನಿನ್ನಗೆ ದೊರೆಯಲೆಂದು ಮೋಹದಿಂದರಸಿದಳು ಪಲತೆರೆದಳು
ಕರಕಮಲವನ್ನು ತೊಟ್ಟಿಲಮಾಡಿ ತರುಳನಂ
ಸರಸದಿಂ ತೂಗಿದರ್ಜೋಗುಳವ ಪಾಡಿದರ್
ಸ್ವರವೆತ್ತಿ ಸದ್ಗಾನ ಮಾಡಿದರ್ಮರುಕದಿಂದೇನೆಂಬೆನಚ್ಚರಿಯನು ||೪೫||

ಜೋ ಜೋ ಹರನ ರೂಪ ಭಯಲೋಪ ಭಕ್ತಿಯುತ
ಜೋ ಜೋ ವಿಮಲಗಾತ್ರ ಸುಚರಿತ್ರ ಸುಜನಹಿತ
ಜೋ ಜೋ ಜಗದ್ವೀರ ಸುಕುಮಾರ ಸಲೆ ಶೂರ ಜೋ ಜೋ ಕೃಪಾಗಾರನೆ
ಜೋ ಜೋ ವಿಜಿತಕಾಮನುತ ಪ್ರೇಮಭವಭೀಮ
ಜೋ ಜೋ ದುರಿತ ನಾಶ ಸಲೀಲಾಸ್ಯ ಕಮಲಾಕ್ಷ
ಜೋ ಜೋ ಸುಕೃತಸದ್ಮ ಶಿವಪದ್ಮನೆಂದು ಪೆಸರಿಟ್ಟು ಕರೆದರು ಪ್ರೇಮದಿ ||೪೬||

ಮಾಸು ರಕ್ತಗಳೆಂಬ ಹೇಸಿಕೆಯನುಳಿದು ಸ
ದ್ವಾಸನೆಯೊಳಡಗೂಡಿ ಅಷ್ಟಪಾಶಗಳಳಿದು
ಸೂಸುತಲಿ ಕರ್ಮಗಳ ದೂಷಿಸುತಲೀ ಧರೆಗೆ ಬಂದ ಸಂಪ್ರೀತಿಯಿಂದ
ಭಾಸುರ ದಯಾಪರ ವಿಶೇಷ ಗುಣಧಾಮಮರೆ
ಮಾಸವಿರಹಿತ ದುರಿತನಾಶ ಶಿವಪದ್ಮೇಶ
ಈ ಸುಮಾತೆಯ ಪಿಡಿದು ನೀ ಸುಮ್ಮನಿರದೆ ನಲಿದಾಡೆಂದು ಗಿರಿಜೆ ನುಡಿಯೇ ||೪೭||

ನೆರೆದ ಸುರಗನ್ನೆಯರು ಶಿವಪದ್ಮನಂ ಪರಸಿ
ಕರಚಾಚಿ ಚುಂಚಲೆಯ ಬಗಳೊಳಗೆ ಬಿಟ್ಟರಾ
ತರುಳನಂ ಸರಸದಿಂದಂಬರದಿ ಮುಚ್ಚಿಡಲುತ್ವರದಿಂದ ಲೋರೆಮಾಡಿ
ಅರೆಬಿರಿದ ಸರಸೀರುಹದ ತೆರದಿ ನಸುನಗೆಯೊ
ಳಿರೆ ಬಾಲನಂ ದಿಟ್ಟಿಸುತ ನೋಡ್ದಳಾಗ ಸುತೆಯು
ಭರದಿಂದ ಮೌಕ್ತಿಕದ ಬಾಗಿನವ ಕೊಟ್ಟು ತೆರಳಿದನು ಕೈಲಾಸಪುರಕೆ ||೪೮||

ಈ ಸುಚಾರಿತ್ರಮಂ ಬರದೋದಿದರ್ಗೆ ಮೇಣ್
ಲೇಸಾಗಿಯಿದರರ್ಥವಾಧ್ಯಾಂತ ಪೇಳ್ದರ್ಗೆ
ಬೇಸರಿಯದುರೆ ಭಕ್ತಿಯಿಂದ ಕೇಳಿದವರ್ಗೆ ಪದುಳದಿಂ ಪಠಿಸಿದರ್ಗೆ
ಭಾಸಿತ ಸಕಲ ಭೋಗಭಾಗ್ಯಮೋಕ್ಷಂಗಳ ವಿ
ಲಾಸದಿಂದಿತ್ತು ದುರಿತೌಘಮಂ ಸಂಹರಿಸಿ
ವಾಸ ರಸ್ತಾಪುರ ಶ್ರೀ ಶರಭಲಿಂಗೇಂದ್ರ ರಕ್ಷಿಸುವನಿಹಪರದೊಳು ||೪೯||

ಇಂತೆಬಲ್ಲಿಗೆ ಶರಭೇಶ್ವರ ಪಾದಾಬ್ಜಭೃಂಗನು
ವಿಶಿಷ್ಠವಿದ್ವಜ್ಜನ ವಿಧೇಯನು ಆದ ಭೀಮನಾಯಕ
ಕವಿಯಿಂ ಪ್ರಣೀತಮಪ್ಪ ಹಾಲ್ಮತೋತ್ತೇಜಕ ಪುರಾಣದಲ್ಲಿ
ಅಂತು ಸಂಧಿ ೩ಕ್ಕಂ ಪದನು ೧೧೦ಕ್ಕೆ ಮಂಗಲಂ ಮಹಾಶ್ರೀಶ್ರೀಶ್ರೀ