ಸೂಚನೆ ||

ಆದಿಗೊಂಡನು ಸುತಗೆ ಶಿವಪದ್ಮನೆಂಬ ಪೆಸ
ರಾದರೊಳಿಟ್ಟು ಬಾಳುತ್ತಿರಲು ರೇವಣಂ
ತಾ ದಯಾಪರನಾಗಿ ಬಂದಾ ಸುಪುತ್ರಂಗೆ ಲಿಂಗದೀಕ್ಷೆಯನೀವನು ||

ವರದೇವದೇವ ಶಂಕರ ಸದಾಶಿವ ದಿಶಾಂ
ಬರ ಸೋಮನಾಮ ಸುಖದಾತ ರಜತಾದ್ರಿ ಮಂ
ದಿರ ಕಾಲಕಾಲದುರಿತೌಘತಿಮಿರ ಪ್ರಭಾಕರ ಪಂಚಸುಂದರಾಸ್ಯ
ಸುರಪಾಲ ಫಾಲನಯನಾಬ್ದಿ ಸಂಜಾತ ಶೇ
ಖರ ರಾಜರಾಜ ಶುಕಸನಕಾದಿ ಮುನಿನುತ್ಯ
ಸಿರಿನಾಥನಾಥನೀ ಕೃತಿಗೆ ಜಯವಿತ್ತು ಸಲಹಲಿಯೆನ್ನನತಿ ಮುದದೊಳು ||೧||

ಅನಿತರಲಿ ಚುಂಚಲೆಯು ಮೈಮುರಿದುಯದ್ದಳಿದು
ಕನಸೊ ಕಳವಳವೋ ನಿದ್ರಿಯ ಭರವೋ ಮೇಣನ್ನ
ಮನದೊಳುದ್ಭವಿಸಿ ಭ್ರಮಣಿಯೋ ನಾನರಿಯನೆಂದು ಯೋಚಿಸಿದಳಬಲೆ
ಘನಚೋದ್ಯಗೊಂಡೆಡಬಲಕ್ಕೆ ನೋಡಲ್ಕೆ ಶಿಶು
ಮಿನುಗುವದನರಿದು ಜವದಿಂದೆಬ್ಬಿಸಿದಳು ತಂ
ನಿನಯನಾದಾದಿಗೊಂಡನ ಕರಾಗ್ರವ ಪಿಡಿದು ಸೂಚಿಸಿದಳುತ್ಸವದೊಳು ||೨||

ಎಚ್ಚತ್ತು ಎದ್ದು ಕುಳಿತಾಕ್ಷಣದಿ ಮರಳಿ ಕಂ
ಣ್ಮುಚ್ಚುತ್ತ ತೆರೆಯುತ್ತ ನಿದ್ರೆಯ ಭರದಿ ಮಹಾ
ಹುಚ್ಚನಂದದಿ ಸತಿಯ ಮುಖಮಂ ನಿರೀಕ್ಷಿಸೆನ್ನಂ ಎಬ್ಬಿಸಿದ ಕಾರ‍್ಯಾರ್ಥವ
ನಿಚ್ಚಳದಿ ಪೇಳೆಂದು ಕೇಳಲ್ಕೆ ಚುಂಚಲೆಯು
ಬೆಚ್ಚುತ್ತ ಬೆದರುತ್ತ ಮಗ್ಗಲಿನ ಮರೆಯೊಳಿಹ
ಅಚ್ಚಯಳೆಸುತನ ದೀವಿಗೆ ಪಿಡಿದು ತೋರಿಸಿದಳಚ್ಚರಗೊಳುತ್ತ ಮನದಿ ||೩||

ಆದಿಗೊಂಡನು ನಿದ್ರೆ ತಿಳಿದು ಸುವಿವೇಕದಿಂ
ಮೋದವೆಗ್ಗಳಿಸುತಂಬರದ ಮುಸುಕಿನೊಳು ಮರೆ
ಯಾದ ಬಾಲನಂ ತರೆದು ದಿಟ್ಟವರಿವರಿದು ನೋಡುತ್ತ ಸತಿಗಿಂತೆಂದನು
ಆ ದೀವಿಗೆಯನೆನ್ನ ಕರದಿ ತಾರೆಂದವಳ
ನಾದರಿಸಿ ತಕ್ಕೊಂಡು ಸುತನ ಸರಸದಿ ಕೂತು
ಭೇದವಿಲ್ಲದೆ ತನ್ನ ಸತಿಯ ಸಮ್ಮುಖದಲ್ಲಿ ನೋಡಿದನು ಮನದಣಿಯದೆ ||೪||

ವನಿತೆ ಕೇಳಿಚ್ಛೆಯಿಂ ಪೇಳ್ವೆ ಸುಪ್ರೇಮದಿಂ
ದಿನಕರನು ಭೂಮಿಯಂ ಬಳಬಳಸಿ ಬೇಸತ್ತು
ಘನ ತಾಪ ಕಿರಣಮಂ ಕಡೆಗಿಟ್ಟು ಬಾಲರಸ್ಮೆಗಳಿಂದ ಮೂರ್ತಿಭವಿಸಿ
ಮನೆಯೊಳಿಳಿದನೊ ಮತ್ತ ಗುರುಶಾಪಕೊಳಗಾಗಿ
ದಿನಗಳಿಯಲೇಕೆಂದು ಹಿಮಕರನು ನರಜನ್ಮ
ವನು ತಾಳಿಬಂದನೋ ಮೇಣೆನ್ನ ಸದ್ಗತಿಗೆ ಯೋಗ್ಯವಾಗಿಹ ಪುತ್ರನೋ ||೫||

ಎಂದು ಪತಿ ಪೇಳಲ್ಕೆ ಪರಮ ಸೋಜಿಗದಿಂದ
ಇಂದುಮುಖಿ ಚುಂಚಲೆಯು ಮೃದುತರದ ಹಸ್ತಗ
ಳಿಂದ ತನ್ನುದರ ಪ್ರದೇಶಮಂ ಮುಟ್ಟಿ ನೋಡಲ್ಕೆ ಬಸುರಿಲ್ಲದಿರಲು
ಕಂದುಗೊರಳನ ಕಳೆಯತುಂಬಿ ಪರಿಸೂಸುವ
ಕಂದನನು ಪಿಡಿದೆತ್ತಿ ಕಾಂತಂಗೆ ತೋರಿ ನೀ
ನಂದ ನುಡಿ ಸತ್ಯ ಸತ್ಪುತ್ರನಹುದೆಂದುಭಯರಾಡಿಕೊಳಲನಿತರೊಳಗೆ ||೬||

ವರಗಿರ್ದ ನಾಗಲೆಯು ಕಡು ತವಕದಿಂದೆದ್ದು
ತರುಣಿ ಚುಂಚಲೆಗೆ ಪೇಳ್ದಳು ತನ್ನ ಸ್ವಪ್ನದೊಳ್
ಸಿರಿಸರಸ್ವತಿ ಗೌರಿಯರು ಬಂದು ಜೋಗುಳವ ಪಾಡಿ ಶಿವಪದ್ಮನೆಂದು
ಕರೆಕರೆದು ಪೆಸರಿಟ್ಟು ಪುಷ್ಟವೃಷ್ಟಿಯಗರಿಸಿ
ಪರಶಿವನ ಸಕಲ ಸಾಮರ್ಥ್ಯ ನಿನಗಾಗಲೆಂದುರ
ತರದಿ ಪರಸಿ ಸ್ವರ್ಗಕ್ಕಾಗಮಿಸಿದರಷ್ಟರಲ್ಲಿ ನಾನೆದ್ದೆನೆನಲು ||೭||

ಇದು ಕೇಳುತಾದಿಗೊಂಡನು ದಯಾಪರನಾಗಿ
ಚದುರಪುತ್ರನ ಹಸನ್ಮುಖ ನೋಡಿ ಮರುಕದಿಂ
ಸದಮಲಜ್ಞಾನಿಯಾಗುವನೆಂದು ನಿಶ್ಚೈಯಿಸಿ ವರ್ಣಿಸಿದನೆಂತೆಂದೊಡೆ
ವಿಧು ಬಿಂಬವೋ ವಿಮಲ ಸರಸಿರುಹವೋ ಮುಖವೋ
ವಿಧಿಬಲ್ಲನಲನಿದ ನಾನರಿಯನೆಂದು ವಿಧ
ವಿಧದಿ ಪುತ್ರನ ಮೃದುತರುವಯವಂಗಳ ಬಿಡದೆ ಬಣ್ಣಸಿದ ಬೇಸರಿಸದೆ ||೮||

ಸತಿ ಪೇಳಿದಳು ತನ್ನ ಪ್ರಿಯಗಿದಾರ್ಭಕಮಲ್ಲ
ಸಿತ ಕಿರಣಕಾಂತ ಶಿಲೆಯಿಂದ ರಚಿಸಿದ ದೃಗಕೆ
ಹಿತಮಾದ ಚಿತ್ರದಾಕಾರವೋ ಮತ್ತಲ್ಲಿ ಮೆರೆವ ರಜತದ ಮುದ್ದಿಯೋ
ಸರಿಯೇ ಮೇಣಲ್ಲ ನಿತ್ಯದಲಿ ಪೂಜಿಸಿ ಕರ್ಮ
ತತಿ ತ್ವರದಿ ಕಳಕೊಳ್ಳಲೆಂದು ಶಂಕರ ತನ್ನ
ವಿತತ ಕಳೆಗಳನಿಟ್ಟು ಮಂತ್ರದಿಂ ನಿರ್ಮಿಸಿದ ಮೂರ್ತಿಯೋ ತಿಳಿಯದೆಂದು ||೯||

ಅಳನು ಆಕಳಿಸನುಸರಿಡನು ಮಲಬಿಡನು ಕಂ
ಗಳ ಮುಚ್ಚಲರಿಯನು ಮಲೆಯು ಮುದದಿ ಪೀರನು ವಿ
ಮಳ ಕರತಳಂಗಳ ಬಿಚ್ಚಿದೋರನು ಎನಗಿದೇನೆಂಬುದು ಮನದಿ
ಬಳಲಿ ಬಾಯಾರಿ ದೃತಿಗುಂದಿದ ಲಲನೆಯನ್ನು
ನಳಿದೋಳ್ಗಳಂ ಪಿಡಿದು ಸಂತೈಸುವನಿತರೋಳ್
ಕಳೆವೆತ್ತಿ ಶಿವಪದ್ಮನಂ ನೋಡಬೇಕೆಂದು ಪದ್ಮಸಖನುದಯನಾದ ||೧೦||

ಪನ್ನೆರಡು ದಿನ ಶುಭಮಹೂರ್ತದೋಳಾದಿಗೊಂ
ಡಂ ನಿಜಸತಿಯ ಕರೆದು ವಿಸ್ತರಿಸಿ ಪೇಳಿದನು
ಸನ್ನುತ ಸುಪುತ್ರಂಗೆ ನಾಮಕರಣವ ಮಾಡಿಸುವೆನೀಗಲೀ ಗೃಹವನು
ಚನ್ನಾಗಿ ಶೃಂಗರಿಸು ಮೃಷ್ಟಾನ್ನವನು ರಚಿಸು
ರನ್ನದೊಟ್ಟಿಲ ಕಟ್ಟಿಸುತ್ತ ಗ್ರಾಮದೊಳಿರುವ
ಕನ್ನೆಯರ ಕರಿಸುವೆನು ಮಾಡಲಾರಂಭಿಸಿದ ಕಾರ‍್ಯನೆಡಿಸೆಂದನಾಗ ||೧೧||

ಚುಂಚಲೆಯು ತದ್ಗೃಹವ ಶೃಂಗರಿಸಿ ಮಣಿದೊಟ್ಟಿ
ಲಂ ಚತುರ ಮುತ್ತೈದಿಯರ ಕರದಿ ಕಟ್ಟಿಸಿದ
ಳಂಚಗಮನಿಯರೆಲ್ಲ ಕೇರಿಕೇರಿಗಳಿಂದ ಜತೆಗೂಡುತೈತಂದರು
ಪಂಚಶರನರಸಿಯಂತೆಸೆವ ನರನಾರಿಯರು
ಪಂಚವದನನ ಕಲಾಪದ್ಮನಂ ನೋಡ್ದರೆ
ಪ್ರಪಂಚದಾಶಯ ಕಡಿವದತಿ ಭರದಿ ನಡಿರೆಂದು ನುಡಿಯುತ್ತ ಬರುತಿರ್ದರು ||೧೨||

ಸಸಿರೇಖೆದುಟಿ ತೊಂಡೆವಣ್ಣದುಟಿ ಶೋಭಿಸುವ
ಪೊಸಪವಳದುಟಿ ರಂಗುದುಟಿಯಾಲವಣ್ಣದುಟಿ
ಮಿಸುಪ ಚೆಂದುಟಿ ರನ್ನದುಟಿ ಸಲೆ ವಿರಾಜಿಪ ತಳಿರದುಟಿಯ ಜವ್ವನೆಯರು
ಬಿಸಜಮೊಗ ಮುದ್ದುಮೊಗ ಕುಮುದಸಖಮೊಗ ಮೇಣ್ವಿ
ಲಸಿತಮೊಗ ಥಳಥಳಿಪನುಣ್ಮೊಗ ಸುಚಲ್ವಮೊಗ
ಹಸನಮೊಗ ಬಟ್ಟಮೊಗದಬಲೆಯರು ಪ್ರಬಲೆಯರು ಪಾತಿವೃತಯುತೆಯರು ||೧೩||

ಯಳೆರನ್ನಪಲ್ಲ ಕೆಂಬಲ್ಲ ಸುಲಿಪಲ್ಲ ಕಂ
ಗೊಳಿಪ ಕುಲಿಶದ ಪಜ್ತಪಲ್ಲ ತೆಳುಪಲ್ಲ
ಥಳಥಳಿಪ ದಾಡಿಂಬಬೀಜದಪಲ್ಲ ಮೊಲ್ಲೆಯ ಮುಗುಳ್ಪಲ್ಲದಂಗನೆಯರು
ಕಳಶಕುಚ ತೆಂಗಾಯಿಕುಚ ಬಟ್ಟಡಕಿಕುಚ ವಿ
ಮಳ ಕಮಳಮೊಗ್ಗಿಕುಚ ನುಣ್ಗುಚ ವಿರಾಜಿಸುವ
ಬೆಳಗಾಯಿಕುಚ ಕಠಿಣಕುಚ ಬೊಗರಿಕುಚ ಕಂತುಕಕುಚಯವರೈತಂದರು ||೧೪||

ಕುಡಿನಯನ ಕಾಡಿಗಿನಯನ ಹರಿಣನಯನವರ
ಕುಡತನಯನಾರಾಜಿಸುವ ಮೀನನಯನ ಬೀ
ಳ್ವಿಡಿದು ಚಂಚಲನಯನ ಕಡೆನಯನ ತೊಳಪ ತಾವರೆನಯನದಂಗನೆಯರು
ನಿಡುಗುರುಳು ಸಿತಗುರುಳು ಮೆರೆವಮುಂಗುರುಳುಯಿಂ
ಮಡಕಿಳದಗುರುಳು ಮಧುಕರಗುರುಳು ನಿರಿಗುರುಳು
ಯಡೆಬಿಡದೆ ನಲಿವ ಜೋಲ್ಗುರುಳಿನ ಸುನಾರಿಯರು ಸಾರಿಬಂದರು ಸೌಖ್ಯದಿ ||೧೫||

ವರಲಿಂಬಿ ಬಣ್ಣವರೆ ಮೊಳೆತ ಗರಿಕೆಯಬಣ್ಣ
ಮಿರುಗುತಿಹ ಯಳೆಬಿದಿರಬಣ್ಣವರಶಿನಬಣ್ಣ
ಮೆರೆವಪೊಂಬಣ್ಣ ಸುಳಿವಾಳೆಲೆಯಬಣ್ಣ ತಾವರೆಯಬಣ್ಣದ ಸ್ತ್ರೀಯರು
ಹರಿಯನಡು ಶಳೆನಡು ವಿಲಸಿತಬಡನಡು ಬಳ್ಕು
ತಿರುವ ಪಿಡಿನಡುವಪ್ಪ ಗೊಂಡಶಿಯನಡು ಪರಮ
ಕಿರಿನಡುವಿನಂಗಜನ ಪಟ್ಟದಾನೆಯ ತೆರದೊಳಡಿಯಿಡುತ್ತೈತಂದರು ||೧೬||

ಪಟ್ಟಣದ ವನಿತೆಯರು ಒಟ್ಟಾಗಿ ಬಾಲಕನ
ಬಟ್ಟಸುಂದರವದನ ದಿಟ್ಟವರಿವರಿದು ಕೈ
ಯಿಟ್ಟು ರಂಗದ ಮೇಲೆ ಮುಟ್ಟಿಮೋಹದಿ ಮುದ್ದುಗೊಟ್ಟರಾ ಶಿವಪದ್ಮಂಗೆ
ದಿಟ್ಟಶಂಕರ ಸ್ಮರನಸುಟ್ಟುಬಿಡೆ ಪ್ರತಿರೂಪ
ದೊಟ್ಟಳಿದನೆಂದು ಫಣವಿಟ್ಟಾಡಿದರು ಕೆಲರು
ನೆಟ್ಟನೆತುಹಿನುಕರನು ಪುಟ್ಟಿಬಂದನೆಯೆನುತ್ತೊಟ್ಟಾಗಿ ಕೆಲರಾಡ್ದರು ||೧೭||

ಪರಕಿಸಲ ಸೀತೋಷ್ಣಮಿಲ್ಲ ರೋದನೆಯಿಲ್ಲ
ನಿರುತದಲಿ ನೆಡೆವ ಸ್ವಾಸ್ವೋಚ್ಛ್ವಾಸ ಮೊದಲಿಲ್ಲ
ಮಿರುಗುತಿಹ ಪಕ್ಷಿಗಳು ಚಿತ್ರಪುತ್ಥಳಿಯಂತೆ ತುರುಗೆವೆಯ ಚಲನೆಯಿಲ್ಲ
ಅರಿಯಲಿದು ಮಾನುಷ್ಯ ಶಿಶುವಲ್ಲ ನವಮಾಸ
ಪರಿಪೂರ್ಣದೋಳ್ಪುಟ್ಟಲಿಲ್ಲಿದು ಪಿಶಾಚಿಯೆಂ
ದರು ಸಂಚಗಾಮಿನಿಯರೊಂದಾಗಿ ತಮ್ಮ ನಿಜ ಮನದೊಳಾಲೋಚಿಸಿದರು ||೧೮||

ಮುತ್ತೈದೆರೆಲ್ಲರೊಂದಾಗಿ ತಚ್ಛಿಶುವಿನಂ
ಯತ್ತಿ ಮಣಿದೊಟ್ಟಿಲದೊಳಿಟ್ಟು ಜೋಗುಳವ ಪಾಡಿ
ಚಿತ್ತಶುದ್ಧದಿ ನಿಂದು ಶಿವಪದ್ಮನೆಂದುತ್ಸವದಿ ಪೆಸರ್ಗರೆದರಾಗ
ಇತ್ತರಾಗಲೆ ಬಾಗಿನವನು ಸಂಭ್ರಮದಿಂದ
ಮತ್ತೇಭಯಾನೆಯರು ಉತ್ತಮಧಾನಿಯರು
ಜತ್ತುಗೂಡುತ್ತ ತಮ್ಮಯ ಗೃಹಕೆ ಆಗಮಿಸಿದರು ಘನಹರುಷ ಭಾವತಳೆದು ||೧೯||

ದಿನದಿಕೆ ಘನವಾಗಿ ಬೆಳೆದನಾ ಶಿವಪದ್ಮ
ಮುನಿ ರೇವಣಾಚಾರ್ಯ ಸಿದ್ಧನ ದಯದಿಂದ
ಲನಿತರೋಳ್ಪಂಚ ಮಾಸಗಳು ಮೀರಿದವು ಮೊಳೆವಲ್ಲೊಗುವ ಜೊಲ್ಲು ಶಿರದ
ಮಿನುಗುತಿಹ ಜೋಲ್ಗುರುಳು ನುಣ್ಗದಪು ಬಟ್ಟದೊಡೆ
ಯನಿಮಿಷ ದೃಷ್ಟಿ ಸುಳಿನಾಭಿ ನಗೆಮೊಗದ ಸೊಬ
ಗನು ತೋರಿ ಮಂದತ್ವದಿಂದಂಬೆಗಾಲಿಡುತ ಜನನಿ ಮುಂದೊಪ್ಪಿರ್ದನು ||೨೦||

ಸುತನ ಸಲ್ಲೀಲೆಗಳ ಕಂಡು ಹಿಗ್ಗುವಳೊಮ್ಮೆ
ಹಿತದಿ ಮೊಲೆಯುಣ್ಣದಕ್ಕಾಲೋಚಿಸುವಳೊಮ್ಮೆ
ಗತಿಗೆ ಪತವಾಯ್ತಂದು ಧೈರ್ಯಗೊಂಬುವಳೊಮ್ಮೆ ಪರಮ ಶ್ರೀಗುರುಸಿದ್ಧನ
ಅತಿಭಕ್ತಿಯಿಂದ ಮನದೊಳು ಧ್ಯಾನಿಸುವಳೊಮ್ಮೆ
ಯತಿನುಡಿಗೆ ಭಂಗಬರದೆಂದು ನಂಬುವಳೊಮ್ಮೆ
ಪತಿಗೆ ತಚ್ಛಿಶುವಿನಂ ತಂದು ತೋರುವಳೊಮ್ಮೆ ಕಂಡುಕಾಣದವಳಂತೆ ||೨೧||

ಬಿಟ್ಟುಮುಂದಕೆ ಪೋಗಿ ತಿರುಗಿ ನೋಡುವಳೊಮ್ಮೆ
ತಟ್ಟನೇ ತವಕದಿಂದ ಬಗಲೊಳೆತ್ತುವಳೊಮ್ಮೆ
ಪಟ್ಟಸಾಲೆಯೊಳಿರಿಸಿ ಮರೆಗೆ ನಿಲ್ಲುವಳೊಮ್ಮೆ ಮೋಹದಿಂ ಮೊಲೆ ಬಾಯೊಳು
ಇಟಟು ಪಾಲ್ಸವಿಯಂದು ಪೊಟ್ಟ ಬಡಿಯುವಳೊಮ್ಮೆ
ಬಟ್ಟವದನಕೆ ಮುದ್ದುಗೊಟ್ಟು ನೋಡುವಳೊಮ್ಮೆ
ದಟ್ಟಡಿಯಿಡುತ್ತ ಬಾರೆಂದು ಕರೆಯುವಳೊಮ್ಮೆ ಮನದಣಿಯದನುದಿನದಲಿ ||೨೨||

ಅಂಬೆಗಾಲಗಳಿಡುತ ಮಾತೆ ಚುಂಚಲೆಯಜ
ರಂಬರದ ನೀವಿಗಳನನುವಿನಂ ಕರದೊಳಗೆ
ಕೊಂಬುತಲ್ಲಿಂ ಮೆಲ್ಲಗೇಳುತ್ತ ಬೀಳುತ್ತ ಬಾಲಲೀಲೆಯಗಳೆದನು
ತುಂಬಿದವು ಪಂಚವರ್ಷಂಗಳಾ ಪದ್ಮಂಗೆ
ನಂಬಿನುತಿಸುವ ಮನದೊಳಾಸನದಿ ಕೂತು ಜಗ
ದಂಬಿಕಾ ವಲ್ಲಭನ ಪಾದಸರೋಜಗಳನ್ನು ಲೋಕದವರರಿಯದಂತೆ ||೨೩||

ಪದ್ಮಾಸನದಿ ಕೂತು ಭಕ್ತಿಯಿಂ ಶಿವನ ಪಾದ
ಪದ್ಮಂಗಳಂ ಸದಾ ನಂಬಿ ಪ್ರಾರ್ಥಿಸುವ ಶಿವ
ಪದ್ಮನಂದೂರ್ನಿಂದು ನೋಡಿ ಮಾತಾಪಿತರು ಅತ್ಯಧಿಕ ವಿಭವದಿಂದ
ಪದ್ಮನಾಭಾಕ್ಷರಂಜಿತಪಾದ ಶಿವನ ಹೃ
ತ್ಪದ್ಮದೊಳಗನುದಿನದಿ ಧ್ಯಾನಮಂ ಮಾಡುತ್ತ
ಸದ್ಮದೊಳಗೊಂದುಗೂಡೀರ್ವರಾಡಿದರು ನುಡಿ ಬಾಲಕನಿಗರಿಯದಂತೆ ||೨೪||

ನಿತ್ಯ ಶಿವಪದ್ಮನುದಯದೊಳೆದ್ದು ತನ್ನ ಗೃಹ
ಕೃತ್ಯಂಗಳಿಗೆ ದೃಷ್ಟಿಗೊಡದೆ ಮೌನದಿ ಕೂಡಿ
ಸತ್ಯಯೋಗಿಗಳಿರುವ ಸ್ಥಲವನರಸುತ್ತ ದೃಢಚಿತ್ತದಿಂದಾತ್ಮದೊಳಗೆ
ಅತ್ಯಧಿಕವಿಭವದಿಂದ ದ್ರಿಜಾವಲ್ಲಭನ
ಭೃತ್ಯ ತಾನಾಗಿ ಸಂಚರಿಸುತ್ತ ದಿನಗಳೆದ
ಮತ್ತೆ ಮಾತಾಪಿತರ ಮೋಹಂಗಳಿಲ್ಲ ಲೌಕಿಕ ವಿಷಯದಾಶಯವಿಲ್ಲ ||೨೫||

ಅಂದಿಗಾ ಶಿವಪದ್ಮಗಷ್ಟವರುಷಗಳಾಗೆ
ತಂದೆತಾಯ್ಗಳು ಯೋಚಿಸಿದರು ಮನದೊಳಗೆ ವರ
ನಂದನಗೆ ಪರಿಣಯವಗಯ್ಯಬೇಕೆಂದು ತಮ್ಮಿಷ್ಟರಾಗಿಹ ಜನರೊಳು
ಚಂದದಿಂ ವಿಸ್ತರಿಸಿ ಪೇಳಿದರು ಯಮ್ಮಸುತ
ಯಿಂದಿಗಷ್ಟಾಬ್ಧಗಳು ತುಂಬಿದವಿವಗೆ ತಕ್ಕ
ಸುಂದರ ಸುಕನ್ಯೆಯಂ ತಂದುಕೊಡಿರೆಂದು ಕೇಳಲ್ಕೆ ಮಗುಳಿಂತೆಂದರು ||೨೬||

ಆದಿಗೊಂಡನೆ ಕೇಳು ತಿಳಿಯ ಜಲಮಂ ಬಿಟ್ಟು
ಶಾದೋದಕಕಾಪೇಕ್ಷ ಮಾಡ್ದಂತೆ ನಿನ್ನಯ ಸ
ಹೋದರಿಯ ಕುವರಿ ಜಿಂಕಾದೇವಿಯೆಂಬ ಸತ್ಕಳೆವೆತ್ತ ಕನ್ಯವಿರಲು
ಮೋದವಿಲ್ಲದೆ ಬರಿದೆ ಮಾತನಾಡುವರೆ ನೀ
ನೀ ದುಗುಡಮಂ ಬಿಟ್ಟು ಭೇದವಿಲ್ಲದೆ ವಿವಾಹ
ಗೈದು ಮೇದಿನಿಯೊಳಗೆ ಕೀರ್ತಿಯುತನಾಗೆಂದು ಬೋಧಿಸಿದರುತ್ಸವದೊಳು ||೨೭||

ಅವರಂದ ನುಡಿಗಾತನೊಪ್ಪುತ ಸಹೋದರಿಯ
ಕುವರಿಯಂ ಶುಭಮುಹೂರ್ತವ ನೋಡುತಲಿ ನಿಶ್ಚ
ಯವಗೈಸಿ ಸಕಲೇಷ್ಟ ಬಾಂಧವಾದಿಗಳಿಂಗೆ ಪ್ರೀತಿಯಿಂ ವೀಳ್ಯಗೊಡಿಸಿ
ಅವನಿಜನರಿಂಗೆ ಸರಿ ಬಪ್ಪಂತೆ ತರತರದಿ
ವಿವಾಹ ಮಂಟಪವನ್ನು ವಿರಚಿಸಿದಾನಂದದಿಂ
ದವನ ಸಾಹಸ ವಿಭವದುತ್ಸವದ ವಿಭವಮಂ ಪೇಳಲಚ್ಚರಿಯಾದುದು ||೨೮||

ಕಸ್ತೂರಿಯ ಸಾರಣೆಯು ಕುಂಕುಮದ ಕಾರುಣೆಯು
ವಿಸ್ತಾರಗೊಳಿಸಿ ಮುತ್ತಿನ ತೋರಣಂಗಳ ಪ್ರ
ಶಸ್ತದಿಂ ಕಟ್ಟಿಸುತ ಮುತ್ತೈದೆಯರ ಕರದಿ ಸತ್ವರ ವಧೂವರರ್ಗೆ
ಪ್ರಸ್ತುತದಿ ತೈಲಸ್ನಾನಂ ಗೈಸುತರ್ಶಿನ ಸ
ಮಸ್ತಾಂಗದೊಳು ಪೂಸಿ ಕಂಕಣವ ಕಟ್ಟಿ ವರ
ಮಸ್ತಕಕೆ ಬಾಸಿಂಗ ಧರಿಸುತ್ತ ನಂದಿಮುಖಗೈಸಿದಂ ಮೋಹದಿಂದ ||೨೯||

ಭಾಸುರ ವಧುವರಂಗಳಂ ಕರೆದು ಶೋಭಿಸುವ
ಶಾಸೆಗಟ್ಟೆಗೆ ತಂದು ಕುಳ್ಳಿರಿಸಿ ಕೈಲಾಸದ
ವಾಸನಂ ಸ್ಮರಿಸಿ ಮಂಗಲಸೂತ್ರ ಧರಿಸಿ ಮಂಗಲವ ಪಾಡಿದರು ಮುದದಿ
ಆ ಸಮಯದೋಳ್ಸಮಸ್ತಾಪ್ತೇಷ್ಟರೆಲ್ಲ ಸುವಿ
ಲಾಸದಿಂದೆದ್ದದ್ದು ಶಿವನಾಮಮಂ ಸ್ಮರಿಸಿ
ಸೇಸೆದಳೆಯುತ ಪದ್ಮಹರಿಣದೇವಿಯರಿಗಾಯರಿ ಮಾಡಿದರ್ವಿಭವದಿ ||೩೦||

ಪರಿಣಯವನೆಸಗಿ ಜನರೊಂದಾಗಿ ಮುಂದಾಗಿ
ಮೆರವಣಿಗೆಯನ್ನು ಸಲೆ ಮರಸಿದರು ಪರಸಿದರು
ತರತರದಿ ಭೇರಿಗಳು ಬೆಳಗಿದವು ಮೊಳಗಿದವು ಸರ್ವಾಪ್ತಜನ ತಂಡಕ್ಕೆ
ಪರಮ ಮೃಷ್ಟಾನ್ನಗೈದುಣಿಸಿದರು ದಣಿಸಿದರು
ಹರುಷದಿಂ ಭುಂಜಿಸುತ ಮರಳಿದರು ತೆರಳಿದರು
ಹರಪದ್ಮನನ್ನು ಕೊಂಡಾಡಿದರು ಪಾಡಿದರು ನರನಲ್ಲಿವಂ ಎನುತಲಿ ||೩೧||

ಇತ್ತ ಶ್ರೀಗುರು ರೇವಣಾಚಾರ್ಯ ತಾಂ
ತತ್ತರುಳ ಶಿವಪದ್ಮನಂ ನೋಡಬೇಕೆಂದು
ಚಿತ್ತಗೈದುತ್ಸವದಿ ಪಥವನಾಕ್ರಮಿಸಿ ಜಾಗ್ರತೀಪುರಿಗೆ ಬಂದಿಳಿದನು
ವುತ್ತಮಾಪುರದೆಡೆಯೊಳರ್ಥಿಯಿಂ ನಿಂದು ಪುರ
ವೃತ್ತಮಂ ನೋಡುತಾತ್ಮದೊಳು ಸಲೆ ಬಣ್ಣಿಸು
ತ್ತುತ್ತುಂಗ ಶಶಿಸೂರ್ಯವೀಧಿಗಳ ಮಧ್ಯದಲಿ ನಡೆದನತಿ ವಿಭವದಿಂದ ||೩೨||

ಈರೇಳು ಲೋಕದೊಳ್ ಶೋಭಿಸುವ ವಸ್ತುವಂ
ವಾರಿಜಭವಂ ಪೋಗಿ ಹುಡಿಕಿತಂದೀ ಪುರಿಗೆ
ಸೇರಿಸಿದನೋ ದಾನವರ ದಾಳಿಗಂಜಗೀರ್ವಾಣ ಗಣವರ ತನ್ನಯ
ಸಾರಸಾಮ್ರಾಜ್ಯವಷ್ಟೈಶ್ಚರ್ಯಮೆಲ್ಲಮಂ
ಆರರಿಯದಂತೆ ತಂದಿರಿಸಿದನೋ ತಿಳಿಯದಿದು
ಮಾರಾರಿ ಬಲ್ಲನೆಂದಾ ರೇವಣಾಚಾರ್ಯ ವರ್ಣಿಸುತಲೊಳಪೊಕ್ಕನು ||೩೩||

ಉನ್ನತೋನ್ನತಮಾದ ಮಾಲ್ಗಳಿಂ ಸಾಲ್ಗಳಿಂ
ಚನ್ನಾಗಿ ತೋರ್ಪ ಅಂಗಡಿಗಳಂ ಗುಡಿಗಳಿಂ
ರನ್ನಗಲಶದ ಗೋಪುರಂಗಳಿಂದಂಗಳಿಂ ಕೋಟೆಕೊತ್ತಲಗಳಿಂದ
ಹೊನ್ನಿನಿಂ ಕೂಡಿರ್ದ ಮನುಜರಿಂ ವಣಿಜರಿಂ
ಪನ್ನಗಾಭರಣನ ಸುಧ್ಯಾನದಿಂ ಮಾನದಿಂ
ಚನ್ನಚೌಬೀದಿ ಬಾಜಾರದಿಂ ಪೊರದಿಂ ಜಾಗ್ರತಾಪುರ ಮೆರೆದುದು ||೩೪||

ಇಂತು ಪುರ ವರ್ಣಿಸುತ ಸಿದ್ಧರೇವಣ ಮಹಾ
ಸಂತಸದಿ ಪೋಗುತಿರಲಾ ನಗರದೊಳಗಿರ್ಪ
ಕಂತುಹರನ ಸುಭಕ್ತಿಯಿಂದೆಸೆವ ಗಂಗಮ್ಮನೆಂಬ ಕಡುಬಡವಿ ಮನೆಯ
ನಿಂತು ನೋಡುತ್ತ ಗೃಹಪೊಕ್ಕನತಿ ತವಕದಿಂ
ಕುಂತಿರ್ದ ಬಡವಿ ತಡಮಾಡದೆದ್ದಾ ಸಿದ್ಧ
ನಂತವೆ ನುತಿಸಿ ಮರಳಿ ಪಾದ ಸರೋಜಂಗಳ್ಗೆ ವಂದಿಸಿದಳೊಂದೆ ಮನದಿ ||೩೫||

ರೇವಣಾಚಾರ್ಯ ಗಂಗಮ್ಮನ ಸುಭಕ್ತಿ ಸ
ದ್ಭಾವಕ್ಕೆ ಮೆಚ್ಚಿ ಮನದೊಳಗೆ ಯೋಚಿಸಿದನೀ
ಕೋವಿದೆಗೆ ಬಡತನವನೇಕೆ ಕೊಟ್ಟನೋ ಬ್ರಹ್ಮನೆಂದು ಮರಮರ ಮರುಗುತ
ಭಾವೆ ನಿನ್ನಯ ಗುಣಕೆ ಬೆಲೆಯಿಲ್ಲ ಬಡತನ ಮಿ
ದಾವ ಕರ್ಮದಿ ನಿನಗೆ ಪ್ರಾಪ್ತಿಸಿತೊ ನಾನರಿಯೆ
ದೇವದೇನೆ ಬಲ್ಲನೆಂಬ ಶಿರವಿಡಿದೆತ್ತಿ ಬೋಳೈಸಿದಂ ಬೇಗದಿ ||೩೬||

ಅಂದ ನುಡಿಗಳು ಗ್ರಹಿಸಿ ಗಂಗಮ್ಮನಾಡಿದಳು
ತಂದೇ ಕೇಳೆನಗೆ ದಾರಿದ್ರವೆಂಬುವದಿರಲಿ
ಇಂದುಶೇಖರನ ದಯವಿರಲಿ ನಿಮ್ಮಂತೆ ಮುನಿಗಳು ಸದಾ ಮನೆಗೆ ಬರಲಿ
ಯಂದು ಸಿದ್ಧೇಂದ್ರನಂ ಕರೆದೊಯ್ದು ತನ್ನ ನಡು
ಮಂದಿರದಿ ಗದ್ದುಗೆಯಗೊಳಿಸಿ ಕೂಡ್ರಿಸಿ ಭಕ್ತಿ
ಯಿಂದ ಪನ್ನೀರಿನಿಂ ಪಾದಗಳ ತೊಳೆದು ವರಪ್ರತಿ ಪುಷ್ಪಂಗಳಂ ಧರಿಸಿದಳು ||೩೭||

ಧೂಪದೀಪವ ಬೆಳಗಿ ಭಜಿಸಿ ಪೂಜಿಸಿ ಷಡ್ವಿ
ದೋಪಚಾರದಿ ಭೋಜನಂಗೈಸಿದಳ್ಮನದಿ
ರೂಪುಗೊಳ್ಳದೆ ದೃಢದಿ ಸಿದ್ಧ ಗುರುವರನು ಸಂತೃಪ್ತಿಗೊಂಡೆದ್ದನಾಗ
ಚಪಲಾಕ್ಷಿಯು ಕಂಬಳೆಯು ಕಡೆಗೆ ತೆಗೆಯೆ ನಿ
ಕ್ಷೇಪಮಂ ಕಂಡು ಪಿಡಿಯದೆ ಬಂದು ಪೇಳಿದಳು
ತಾಪಸೋತ್ತಮನೆ ದ್ರವ್ಯವ ತಂದು ಗದ್ದುಗೆಯ ಕೆಳಗಿರಿಸಿ ವಿಸ್ಮರಣದಿ ||೩೮||

ಇಲ್ಲಿಟ್ಟು ಪೋಗುವದಿದುತ್ತಮವೇ ಗುರುವರನೇ
ಸಲ್ಲದೆನಗೀ ಹೊನ್ನು ತೆಗದುಕೊಳ್ಳಿರೀ ಬೇಗ
ವಲ್ಲೆ ನಿಮ್ಮಯ ಪದಾರ್ಥವನೆಂದು ಮೌನದಿಂ ಬಿದ್ದಳಂಘ್ರಿಗೆ ಭರದೊಳು
ನಿಲ್ಲುನಿಲ್ಲೌ ಮಗಳೆ ತರಹರಿಸಬೇಡ ಜವ
ದಲ್ಲೀ ಹಣವಕೊಂಡು ಗಣತೃಪ್ತಿಗೈಸು ಪುಸಿ
ಯಲ್ಲವಿದು ನಿನ್ನ ಭಕ್ತಿಗೆ ಮೆಚ್ಚಿ ಪರಮಾತ್ಮ ನಿನಗಾಗಿ ಕೊಟ್ಟಿರುವನು ||೩೯||

ಪರರಿತ್ತ ಧನಮೆಲ್ಲ ಮೇಣೆನ್ನದಲ್ಲ ಶ್ರೀ
ಪರಶಿವಂ ನಿನ್ನ ಮನದಂತರವ ಪರೀಕ್ಷಿಸಿ
ಪರಮಾರ್ಥವಂನಿತ್ತು ರಕ್ಷಿಸಿದ ಮೋದದಿಂದೆಂದು ಮುಂದಡಿಯಿಟ್ಟನು
ಪರಮಾತ್ಮ ನೀನಲ್ಲದನ್ಯರಿನ್ಯಾರುಂಟು
ಪರತರ ಮಹಿಮ ತೋರಿ ಪಾರಾಗಿ ಪದುಳದಿಂ
ಪರಲೋಕ ಪಥವ ಪಿಡಿವರೆ ಕಪಟವೇಷದಿಂ ಸಾಕು ಸಲಹಂದಳಬಲೆ ||೪೦||

ಚದುರೆ ಗಂಗಾದೇವಿ ಕೇಳು ಬಿಡುದಾರಿಯನು
ಮದನಾರಿ ನಾನಲ್ಲ ಸಿದ್ಧರೇವಣನೆಂದು
ಮುದದಿಂದ ತಿಳಿ ಗೌರಿಯರಸನೊಲಿದಿತ್ತ ಸರಲಾಸ್ವ ಸ್ವೀಕರಿಸೆನಲ್ಕೆ
ಸುದತಿಮಣಿ ಮುಗುಳುನಗೆ ಮೊಗದಿಂದ ಬಿನೈಸಿ
ಸದಮಲ ಜ್ಞಾನಿ ಶಂಕರಸುತನೇ ಸಲಹೆಂದು
ಪಾದವನಜಗಳ್ವಿಡಿದು ಬಿದ್ದಳಂಗನೆ ಧರೆಗೆ ತರುಮನಧನವನೊಪ್ಪಿಸಿ ||೪೧||

ರಾಗದಿಂದವಳ ಶಿರ ಪಿಡಿದೆತ್ತಿ ಸಕಲಾರ್ಥ
ಈಗ ನಿನ್ನಾಲಯದೊಳಿರಿಸುತಲಿ ಪರಮಸುಖಿ
ಯಾಗಿ ನಿತ್ಯದಿ ನಿನ್ನ ಮಂದಿರಕೆ ಕ್ಷುದ್ಬಾಧೆಯಿಂದ ಬಂದತಿಥಿಗಳ್ಗೆ
ಬೇಗದಿಂದುಣಬಡಿಸಿ ಮರ್ತ್ಯದೋಳ್ಕೀರ್ತಿಯುತ
ಳಾಗಂತ್ಯ ಕಾಲಕ್ಕೆ ಮುಕ್ತಿದೊರೆವುದು ನಿನಗೆ
ಪೋಗುವೆನೆನುತ್ತ ರೇವಣಸಿದ್ಧ ಗೃಹಬಿಟ್ಟು ಪಥ ಪಿಡಿದನವಸರದೊಳು ||೪೨||

ಮನೆ ಬಿಟ್ಟು ಮುಂದಕ್ಕೆ ಕಳಿಸಿ ಗಂಗಾದೇವಿ
ಘನಮೋದದಿಂದ ನಿಜಮಂದಿರಕ್ಕೈತಂದು
ಕನಸೋ ಕಳವಳವೋ ಏನಿದು ಎನ್ನ ಹಾಳ ಮನೆ ಪೋಗಿ ನೂತನ ನಿಲಯವು
ಮನಸಿಗಿಂಪಾಗಿ ತೋರ್ಪುದು ಸಿದ್ಧಶ್ರೀಗುರುವ
ರನ ಮಹಿಮವಿದು ಮೂಢಳಾಗಿ ಮುಂದರಿಯದಾ
ಆನಘನಂಬಿಟ್ಟೆ ಇನ್ನೆಂದಿಗಾತನ ಪಾದವಕಾಂಬೆನೆಂದಾತ್ಮದೊಳಗೆ ||೪೩||

ಸ್ಮರಿಸಿದಳು ಸದ್ಗುರುವಿನಂಘ್ರಿ ಪಂಕಜಗಳಂ
ಧರಿಸಿದಳು ವೈರಾಗ್ಯ ಲಕ್ಷಣಗಳಂ ನಿರಾ
ಕರಿಸಿದಳು ಪ್ರಾಪಂಚ ವಿಷಯಂಗಳೆಲ್ಲಮಂ ದೃಢಚಿತ್ತದಿಂ ಪುರದೊಳು
ಚರಿಸಿದಳು ತ್ವರದಿಂ ರೇವಣಸಿದ್ಧ ಕುಲಚಕ್ರೇಶ
ನರಸಿದಳು ಮನೆಮನೆಯ ಬೇಸತ್ತು ಮರಳಿ ಪಥ
ವರಿಸಿದಳು ಮೌನದಿಂ ಮಂದಿರಕೆ ಬಂದತಿಥಿ ಸತ್ಕಾರಗೈಯುತಿರಲು ||೪೪||

ಮತ್ತಮಾ ಗುರುಸಿದ್ಧತಿಲಕ ಪುರದೊಳಗೆ ಚರಿ
ಸುತ್ತಬರುವದನಾದಿಗೊಂಡ ನೋಡುತ್ತ ದೃಢ
ಚಿತ್ತದಿಂದಿದಿರು ಬಂದಾ ಮುನಿವರಂಗೆನಯ ಭಯಭಕ್ತಿ ಭಾವದಿಂದ
ಉತ್ತಮ ಪಾದಾಬ್ಜಗಳಿಗೊಂದಿಸಲ್ಕಾತ ಪಿಡಿ
ದೆತ್ತಿ ಪುಳಕದಿ ಶಿರದ ಮೇಲೆ ಕರವಿಟ್ಟು ಜಸ
ವೆತ್ತು ಬಾಳೆಂದು ಪರಸುತ ಬಂದ ಶಿವಪದ್ಮನಿಹ ನಿಜಕೇತನಕ್ಕೆ ||೪೫||

ಪೇಳವನ ಬಳಿಗೆ ಗಂಗಯಿಳಿದು ಬಂದಂತೆ ಚಿ
ತ್ಕಳವೆತ್ತು ಸಿದ್ಧಗುರುವರನು ಸದಯದೊಳೆನ್ನ
ನಿಳಯಕ್ಕೆ ಬಂದನೆಂದಾತ್ಮದೋಳ್ನುತಿಸುತ್ತ ಕರಮುಗಿದೆರಗಿದಾ ಪಾದಕ್ಕೆ
ಎಳೆಬಾಲನಂ ತಂದೆ ಕಂಡಪ್ಪಿ ಸುಖಿಪಂತೆ
ಘಳಿಲನೇ ಕರಂಗಳಂ ಪಿಡಿದೆತ್ತಿ ಪದ್ಮನ ವಿ
ಮಳಭಕ್ತಿಗೊಪ್ಪಿ ಗಂಭೀರದಿಂ ಮುದ್ದಿಸಿದ ಮನದಣಿಯದಂತೆ ತಾನು ||೪೬||

ಚುಂಚಲೆಯು ಬಂದು ಗುರುಪಾದಕೆರಗಲಾತ ಶಿವ
ಪಂಚಾಕ್ಷರವ ಜಪಿಸಿ ಜಯಶೀಲಳಾಗೆಂದು
ಮಂಚದೋಳ್ಕೂತು ಮೋಹದ ನುಡಿಗಳಾಡಿದನು ಭಕ್ತವತ್ಸಲಂ ಬಿರಿದನು
ಚಂಚಲಾಕ್ಷಿಯಳಿತ್ತ ಪಾಕಶಾಲೆಗೆ ಬಂದು
ಪಂಚಾಮೃತವ ಬೆರಸಿ ಪಾಕ ವಿರಚಿಸುತ್ತ
ತಾ ಪಂಚಮುದ್ರಾನ್ವಿತನಯಬ್ಬಿಸಿದಳತಿ ಶೀಘ್ರಸ್ನಾನಕ್ಕೆ ಸಂಭ್ರಮದೊಳು ||೪೭||

ಸ್ನಾನವ ಮಾಡಿ ರೇವಣಸಿದ್ಧ ಶವಿನ ಸ
ಧ್ಯಾನದೋಳ್ಕೂತಿರಲ್ಕಾಗ ಪದ್ಮನು ಕಂಡು
ದೀನರಕ್ಷಕ ದೇವಯನಗಿಷ್ಟ ಲಿಂಗಮಂ ಧರಿಸಿ ಶಿವಮಂತ್ರವನ್ನು
ಸಾನುರಾಗದಿ ಬೋಧಿಸೆನಲಾಗ ಗುರುಸಿದ್ಧ
ಸೂನುವಿನ ನುಡಿಗೆ ತಲೆದೂಗಿ ಸಂಭ್ರಮದಿಂದ
ನ್ಯೂನಮಿಲ್ಲದೆ ಲಿಂಗಧರಿಸಿ ಪಂಚಾಕ್ಷರೀಮಂತ್ರಮಂ ಬೋಧಿಸಿದನು ||೪೮||

ಸ್ಯಾತಕ್ಕೆ ಕುಂದನವನಿಟ್ಟಂತೆ ರಂಜಿಸುವ
ಸೀತಕಿರಣನ ದೋಷಕಳೆದಂತೆ ಪದ್ಮನಿಗೆ
ಪ್ರೀತಿಯಿಂದುಪದೇಶವಿತ್ತು ರಕ್ಷಿಸಲಾಗ ಶಿವನೆ ತಾನಗೆಸದನು
ಖ್ಯಾತದಿಂದಮೃತಮಂ ಸ್ವೀಕಾರಗೈದು
ಮತ್ತಾ ತರುಳನಂ ಕರೆದು ಪೇಳಿದನು ಪ್ರೇಮದಿಂ
ನಾ ತೆರಳುವೆನು ಭುವನ ಸಂಚಾರಕೀಗ ನೀಂ ಕುರಿಗಳಂ ಸಲಹು ಸತತ ||೪೯||

ತಂದೆ ಕೇಳಿನ್ನು ನಿನ್ನನು ಬಿಟ್ಟು ಭುವನದೊಳ
ಗೊಂದು ನಿಮಿಷವನಗಲಿರಲ್ಕಾಗದೆನ್ನಿಂದ
ಇಂದು ನಾ ನಿನ್ನೊಡನೆ ಬರುವೆನೆಂದಡಿಗಳ್ಗೆ ನಮಿಸಿ ಸನ್ನುತಿಗೈದನು
ಕಂದ ಕೇಳ್ ನೀನೀ ಕುರಿಗಳನ್ನು ಕಾಯುತ್ತ
ಚಂದಮಾಗಿಹ ಶ್ರೀಗಿರಿಯ ಸಮೀಪಕ್ಕೆ ನಡಿ
ಹಿಂದೆ ನಾ ಬಂದು ನಿನ್ನನು ರಕ್ಷಿಸುವೆನೆಂದು ಪೇಳಿ ತೆರಳಿದ ಸಿದ್ಧನು ||೫೦||

ಈ ಸುಚಾರಿತ್ರಮಂ ಬರದೋದಿದರ್ಗೆ ಮೇಣ್
ಲೇಸಾಗಿ ಯಿದರರ್ಥವಾಧ್ಯಾಂತ ಪೇಳ್ದರ್ಗೆ
ಬೇಸರಿಯದುರೆ ಭಕ್ತಿಯಿಂದ ಕೇಳಿದವರ್ಗೆ ಪದುಳದಿಂ ಪಠಿಸಿದರ್ಗೆ
ಭಾಸಿತ ಸಕಲ ಭೋಗಭಾಗ್ಯಮೋಕ್ಷಂಗಳ ವಿ
ಲಾಸದಿಂದಿತ್ತುದುರಿತೌಘಮಂ ಸಂಹರಿಸಿ
ವಾಸ ರಸ್ತಾಪುರ ಶ್ರೀ ಶರಭಲಿಂಗೇಂದ್ರ ರಕ್ಷಿಸುವನಿಹಪರದೊಳು ||೫೧||

ಇಂತೆಬಲ್ಲಿಗೆ ಶರಭೇಶ್ವರ ಪಾದಾಬ್ಜಭೃಂಗನು
ವಿಶಿಷ್ಠವಿದ್ವಜ್ಜನ ವಿಧೇಯನು ಆದ ಭೀಮನಾಯಕ
ಕವಿಯಿಂ ಪ್ರಣೀತಮಪ್ಪ ಹಾಲ್ಮತೋತ್ತೇಜಕ ಪುರಾಣದಲ್ಲಿ
ಅಂತು ಸಂಧಿ ೪ಕ್ಕಂ ಪದನು ೧೬೧ಕ್ಕೆ ಮಂಗಲಂ ಮಹಾಶ್ರೀಶ್ರೀಶ್ರೀ