ಸೂಚನೆ ||

ತರುಣಿ ಚುಮಲಾದೇವಿಯನ್ನು ಪಿಡಿದೊಟ್ದುಸುರೆ
ಸೆರೆಯೊಳಿಟ್ಟಿರಲು ಶಿವಪದ್ಮನಾದನುಜೆಯಂ
ತರಿದು ಬಾವನ್ನ ಬಿರಿದುಗಳಗೈದಾ ಚುಮಲೆಯನ್ನು ಪರಿಪಾಲಿಸುವನು

ಕರದೃತ ಕಪಾಲ ಫಣಿಮಾಲ ಕರುಣಾಳು ಶಂ
ಕರಮುಕ್ತಿ ಮೂಲ ಮುನಿಜಾಲ ಪರಿಪಾಲ ಶ್ರೀ
ಕರ ಕಾಲಕಾಲ ಸಲ್ಲೀಲ ಸುಖಲೋಲ ವರಶೂಲಧರ ನೀಲಕಂಠ
ಸುರರಾಜನುತ್ಯ ತಸ್ಕೃತ್ಯ ಸೌಚಿತ್ಯ ಭಾ
ಸುರ ಭಸಿತಕಾಯ ನಿರ್ಮಾಯ ವರದಾಯಕಮ
ಸುರವೈರಿ ಪ್ರೇಮಗಿರಿಧಾಮ ನಿಜಧಾಮ ಭವಭೀಮ ಪಾಲಿಸುಯನ್ನನು ||೧||

ಶಿವಪದ್ಮ ತನ್ನ ನುಜಮಾತೆಪಿತರಂ ಮರೆದು
ಭುವನಮಂ ಚರಿಸುತ್ತಪರಿಪರಿ ಕುರಿಗಳಂ ವಿ
ಭವದಿ ಕಾವುತ್ತ ಗಿರಿಗಹ್ವರಗಳಂ ನೋಡಿ ವರ್ಣಿಸುತ ಮರಿಗಳನ್ನು
ಅವಚಿ ಪಿಡಿದೆತ್ತಿ ಸುಪ್ರೇಮದಿಂ ಪಾಲಿಸುತ
ವವಿರದೆ ಎಡಬಲದ ತಿಳಿಜಲವ ಶೋಧಿಸುವ
ಸುವಿಲಾಸದಿಂ ಕೊಳಲನೂದುತ್ತ ಭುವನಮೆಲ್ಲವ ತಿರುಗಿ ಬೇಸತ್ತನೂ ||೨||

ಭಾವಶುದ್ಧದಿ ನಿಂದು ಭಾಸುರಾನನ ಪದ್ಮ
ದೇವಗಂಗಾಧರನ ಧ್ಯಾನಮಂ ಮಾಡ್ದು ನೀ
ಭೂವಲಯದೋಳ್ಪಿಟ್ಟಿ ಭೂರಿಶ್ರಯಪಟ್ಟೆ ಶಂಭೋಯನ್ನಂ ಪಾಲಿಸೆಂದಂ
ಆ ವೇಳೆಯಲಿ ಹರನವನ ಮುಂದಿಳಿದು ನಿನ್ನ
ಗಾವಿಧದ ತೊಂದರೆಗಳಾವರಿಸಿದವು ಪೇಳ್ ವ
ರಾವತಾರನೆಯನ್ನನೇಕೆ ನೆನೆದೆನಲಾಗಳಾ ಪದ್ಮನೊರದ ಮುದದೀ ||೩||

ಕುರಿಗಳು ಕಾಯ್ದು ನಾಂ ಕೊರಗಿದೆ ಸೊರಗಿದೆ ವರ
ಗಿರಿಗಳಂ ಸುತ್ತಿ ತವೆ ತೆರಳಿದೆ ಹೊರಳಿದೆ ಎಳೆ
ಮರಿಗಳಂ ಹೊತ್ತು ಬಲುಬಳಲಿದೆ ತೊಳಲಿದೆ ಹೆಗ್ಗಾಡಿನೋಲ್ವಾಸಮಾದೇ
ಕುರಿಗಳಂ ಕಂಡು ಕಂಡಳಕಿದೆ ಬಳಕಿದೆನತಿ
ಕೆರೆಗಳಂ ಹುಡುಕಿ ನೀರ್ಗುಡಿಸಿದೆ ಪಡಿಸಿದೆ ಸುಖ
ಹರಿಗಳಂ ನೋಡಿ ಭಯಧರಿಸಿದೆ ನಿನ್ನಯ ಪಾದವನಜಗಳೆನಲೂ ||೪||

ಆಗಲಾ ಶಂಕರಂ ಮೆಚ್ಚಿ ಶಿವಪದ್ಮನಂ
ರಾಗದಿಂದುತ್ತುಮಾಂಗದ ಮೇಲೆ ಕರವಿಟ್ಟು
ಭೋಗಿಯಾಗಂದರಿಸಿ ಬೋಳೈಸಿ ಮುಗುಳೆಂದನೀ ಬಳಲಬೇಡ ಬರಿದೆ
ಈಗ ವೀರೇಶನಂ ನಿನ್ನ ಜೊತೆಯೊಳ್ಪಿಡುವೆ
ನೀ ಗಿರಿಯ ತಟದಿ ಕುರಿಗಳನು ಕಾಪಾಡಿ ಸುಖಿ
ಯಾಗಿರುವದೆಂದೀರ್ವರನು ಬಿಟ್ಟು ಗೌರೀಶಗಮಿಸಿದನು ಕೈಲಾಸಕೆ ||೫||

ಒಂದು ದಿನ ತ್ರಿಪುರಾಂತಕಂ ಗರುಡಗಂಧರ್ವ
ನಂದಿನಾರದ ಭೃಂಗಿ ಮುನಿಗಣರ್ವೆರಸಿ ಮುದ
ದಿಂದಿರಲ್ಕೋರ್ವ ಮುನಿಯಂ ಕಂಡು ಹಾಸ್ಯಗೈದರು ತ್ರಿಜನಗಂಧರ್ವರು
ದಂದುಗದಿ ಕೂಡು ತಾ ಮುನಿವರನವರಿಗೆ ಭರ
ದಿಂದ ಮರ್ತ್ಯಕೆ ಪೋಗಿ ಕಷ್ಟದಿಂದಲಿ ಬಾಳಿ
ರೆಂದು ಕಡುಗೋಪದಿಂದುರುತರದ ಶಾಪಮಂ ಕೊಟ್ಟನತ್ಯವಸರದೊಳು ||೬||

ಗದಗದನೆ ನಡುಗಿ ಗಂಧರ್ವರಾ ಮುನಿವರನ
ಪಾದಕೆರಗಿ ಕೇಳಿದರು ನಿಶ್ಯಾಪವೇನಿದಕೆ
ಪದುಳ ಮಾನಸರಾಗಿ ಪೇಳುತೆಮ್ಮನು ಪಾಲಿಸೆಂದು ಸ್ತೋತ್ರವಗೈದರು
ಸದಮಲಜ್ಞಾನಿಗಂತಃಕರಣ ಪುಟ್ಟಿ ಪೇ
ದನೋರ್ವನಿಗೆ ನೀನು ಬಂಕಾಪುರದೊಳಿರ್ಪ
ಕುದಯರಕ್ಕಸರ ವಂಶದೊಳುದ್ಫವಿಸಿ ಪಲವು ದಿನವರಿಗೆ ಬಾಳೆಂದನು ||೭||

ಮರಳಿ ಮತ್ತೋರ್ವಗೆ ಕಾಕನಾಗುತಲಿ ಸಂ
ಚರಿಸಿ ಬದುಕೆಂದ ಮತ್ತೋರ್ವನಿಗೆ ಕಾಂಚಾಲ
ಮರನಾಗಿ ಭುವನದೊಳ್ಪುಟ್ಟು ಕೆಲಕಾಲ ಸುಖಿಸೆಂದು ಸುರಲಾಕ್ಷಣದೊಳು
ಮರಮರನೆ ಮರುಗಿ ನಿಶ್ಸಾಪವಿದಕೇನೆಂದು
ಮರಳಿ ಕೇಳಲ್ಕೆ ಮುನಿ ಪೇಳ್ದನೆಲೋ ಸಿದ್ಧ
ಗುರುವರನ ಸುತ ಶಿವಪದ್ಮ ಬಂದು ನಿಮ್ಮಗೆ ಮುಕ್ತಿಕೊಟ್ಟು ಪಾಲಿಸುವನೆಂದ ||೮||

ವರಮುನಿಗಳರುಹಿದ ತೆರದಿ ಕಾಕ ಕಾಂಚಾಲ
ಮರರಕ್ಕಸಿಗಳಾಗಿ ಕೆಲಗಾಲ ಸುಮ್ಮನಿರು
ತಿರಲೊಂದು ದಿನ ದನುಜೆಯು ಜಾಗ್ರತಾಪುರಿಗೆ ಬಂದಳತಿ ಭೀಕರದೊಳು
ಅರಸನೆದುರಿಗೆ ನಿಂದು ನಿನ್ನ ಸುತೆಯಾದ ಸುಂ
ದರ ರೂಪೆಯನ್ನೆನಗೆ ಹಾರಕ್ಕೆ ಕೊಡುವುದೆಂದುರು
ತರದ ಕೋಪದಿಂ ಗಡಬಡಿಸುತಡಿಗಡಿಗೆ ಕೇಳಲವನಿಂತೆಂದನು ||೯||

ರಕ್ಕಸಿಯೆ ಕೇಳೆನ್ನ ಪುತ್ರಿಯಂ ಬೇಡುವುದು
ತಕ್ಕ ಮಾತಲ್ಲ ಬಿಡು ನಿನಗೊಂದುಪಾಯಮಂ
ಅಕ್ಕರದಿ ಪೇಳ್ವೆ ದೃಢಚಿತ್ತದಿಂ ಲಾಲಿಸೀ ಪುರದೊಳಿಹ ಸಕಲ ಜನರಂ
ಒಕ್ಕಟ್ಟು ಮಾಡುತವರಂ ವಿಚಾರಿಸಿ ದಿನದಿ
ನಕ್ಕೊಬ್ಪರಂ ನಿನಗೆ ಕೊಡುವಂತೆ ಪೇಳ್ವೆನೀ
ಧಿಕ್ಕರಿಸಬೇಡ ನಡಿನಡಿಯಂದಭಯ ಪೇಳ್ದ ಚಕ್ರವರ್ತಿ ಭೂಪಾಲನು ||೧೦||

ಕರಸಿದಂ ಮಂತ್ರಿಮಾನ್ಯರನು ಜವದಿಂದ ಹಿಡ
ತರಿಸಿದಂ ಸರ್ವಪ್ರಜೆಗಳನು ಚಿಂತಾತುರದಿ
ನೆರಸಿದಂ ಕವಿ ವಿಶಾರದರಾದ ವಿಭುಧರಂ ಪೇಳಲಚ್ಚರಿಯಾದುದು
ಧರಿಸಿದಂ ವೆಸನಗಳಂ ನಿಟ್ಟುಸುರ್ಬಿಡುತ
ತ್ವರದಿ ಸುರಿಸಿದಂ ಬಾಷ್ಪಜಲ ಮೆಲ್ಲಜನನರರಿವಂತೆ
ಸ್ಮರಿಸಿದಂ ಶಂಕರನೆ ಗತಿಯೇನಿದಕ್ಕೆ ನೀಂ ಪೊರೆಯಂದು ರೋಧಿಸಿದನೂ ||೧೧||

ಆಗಲಾ ಸಚಿವನೆದ್ದು ಭಯ ಕರ ಮುಗಿದು ತಲೆ
ವಾಗಿ ದುಃಖಿಸುವ ರಾಜೇಂದ್ರನಂ ಸಂತೈಸಿ
ಬೇಗದಿಂ ಕೇಳ್ದ ನಿನಗೊದಗಿರ್ಪ ಬಂಧನವದೇನೆನಗೆ ಪೇಳೆಂದನು
ಈಗೋರ್ವ ರಕ್ಕಸಿಯು ಪುರನಿಳಯಂ ಪೊಕ್ಕು ಸುಖಿ
ಯಾಗಿರ್ಪ ಜನರನಪಹರಿಸುವೆನೆನುತ್ತಲತಿ
ಕೂಗುತ್ತ ನಿಂತಿಹುದಿದಕ್ಕೆ ಗತಿಯೇನೆಂದು ವೆಸನ ಮನದಿಂದುಸುರಿದಂ ||೧೨||

ಪುರಜನರು ಮರುಗಿ ಪೇಳಿದರಾ ನರೇಂದ್ರಂಗೆ
ಬರಿದೆ ಚಿಂತಿಸಬೇಡ ದಿನಕೊಂದು ಮನೆಗೋರ್ವ
ಪುರುಷನಂ ಕೊಡುವಂತೆ ಕಟ್ಟಳೆಯ ಮಾಡೆಂದು ತೆರಳಿದರು ತಮ್ಮ ಗೃಹಕೆ
ಮರಳಿ ಭೂಪಾಲನಿದರಂತೆ ರಕ್ಕಸಿಯಳಿಗೆ
ಬರದಿಂದ ಪೇಳಲದಕ್ಕೊಪ್ಪಿದನುಜೆಯು ನಿತ್ಯ
ಹರುಷದಿಂದೋರ್ವನಂ ತಿಂದು ಕೆಲಕಾಲ ಕಳೆಯುತ್ತ ಸುಖದಿಂದಿರ್ದಳು ||೧೩||

ಕೊನೆಗೆ ಜನಪಗೆ ಬಂದು ಕೇಳುತಿಂದಿಗೆ ಸರ್ವ
ಮನೆ ತೀರಿದವು ನಿನ್ನ ನಿಲಯಕ್ಕೆ ಬಂದೆ ಭೋ
ಜನಕೀವುದೀಗ ಚುಮಲಾದೇವಿಯಳನೆಂದು ಪಲ್ಗರಿದು ಭೀಕರಿಸಿತು
ದನುಜೆಯ ಭಯಕ್ಕೆ ಬೆದರುತ್ತ ತನ್ನರ್ಧಾಂಗಿ
ಯನು ಕರೆದು ಮೋಹದ ಕುವರಿಗಂತ್ಯ ಕಾಲ ಬಂ
ತೆನಲಾಕ್ಷ ಮುನಿದನೆಂದೊರೆದು ವಿಧವಿಧದಿಂದ ಶೋಕಕ್ಕೆ ಗುರಿಯಾದನು ||೧೪||

ಪ್ರಿಯನ ದುಃಖವ ನಿಲ್ಲಿಸುತ್ತ ಸತಿ ತನ್ನಾತ್ಮ
ಜೆಯಳನ್ನು ಕರೆದು ಜರದಂಬರವ ನುಡಿಸಿ ಮಣಿ ಮ
ಣಿಯದಾಭರಣವನಿಟ್ಟು ಮಿತದುಃಖದೊಳು ಶೃಂಗರಿಸಿ ರಥದೋಳ್ಕೂಡ್ರಿಸಿ
ಹಯವ ಬಂಧಿಸಿ ಚಾರರನ್ನು ಕಳಿಸಿದಳು ದನು
ಜೆಯೊಳಿರುವ ಬಂಕಾಪುರದ ಸೀಮೆ ಬಳಿಗೆ ನಿ
ಶ್ಚಯಮಿಲ್ಲ ಈ ಕಾಯ ಈ ಪ್ರಪಂಚಮಿದೆಂದು ಪುರಜನರು ರೋಧಿಸಿದರು ||೧೫||

ಕಳಿಸಲ್ಕೈತಂದವರ್ಗೆ ಚುಮಲಾದೇವಿ
ಕಳವಳದಿ ಕರಜೋಡಿಸುತ್ತ ಪೋಗುವೆನೆಂದು
ನಿಳಯಬಿಟ್ಟೈದಳಪ ಮರಣಕ್ಕೆ ಗುರಿಯಾದೆನೆಂದು ಮನದೊಳಗಳುಕದೆ
ಘಳಿಲನೇ ದನುಜೆ ಕೋಪ ತಾಳಿ ಪಲ್ಗರಿದುತಾ
ಸಳೆ ರಥಕೆ ಹಾರಿ ರೂಪವ ನೋಡಿ ಮರುಕದಿಂ
ನಳಿದೋಳ್ಗಳನ್ನು ಪಿಡಿದೊಯ್ದಳತಿ ತವಕದಿಂದೇನೆಂಬೆನದ್ಭುತವನು ||೧೬||

ನೀಳಾದ ಕಾಂಚಾಲ ಮರದಡಿಯ ಬಳಿಯೊಳಿಹ
ಹಾಳನಿಲಯಕೆ ಪೋಗಿ ಕ್ಷುದ್ಬಾಧೆ ತಡಿಯದೆ ಮ
ರುಳಾಗ ಮನೆಯ ಸುಲಾವಣ್ಯಮಂ ಕಂಡು ರಕ್ಕಸಿಗೆ ಘನಕರುಣ ಪುಟ್ಟೀ
ಪೇಳಿದಳು ಪ್ರೇಮದಿಂ ಕ್ರೂರರೂಪವ ತೆಗದು
ತಾಳಿದಳು ಮಾನುಷ್ಯ ಸ್ತ್ರೀರೂಪ ಹೆದರದಿರು
ಕೇಳೆನ್ನ ನುಡಿಗಳಂ ಈಗೆನಗೆ ಪುತ್ರಿಯಾಗಿರುಯಂದು ಬೋಧಿಸಿದಳು ||೧೭||

ಮಾರನೆ ದಿನದಿ ರಕ್ಕಸಿಯು ತನ್ನ ಮೋಹದ ಕು
ಮಾರಿಯಂ ಕರೆದು ಪೇಳ್ದಳು ನಿನ್ನಿರುಳೆನಗೆ
ಹಾರಂಗಳಿಲ್ಲದಕ್ಕೀಗ ನಾಂ ಪೋಗಿ ಹೆಣಗಳ ತರುವೆ ತವಕದಿಂದ
ಸಾರನಿಲಯದಿ ನೀನು ಮೃಷ್ಟಾನ್ನ ಸವಿದು ಸುಖಮ
ಯಾಗಿರು ನಿನ್ನಗಾರೇನು ಮಾಳ್ಪರೆಂ
ದಾ ರಾಕ್ಷಸಿಯು ತೆರಳಿ ತರತರದಿ ಪ್ರೇತಂಗಳಂ ಪೊತ್ತು ಭೀಕರದೊಳು ||೧೮||

ಮರಳಿ ತಶ್ಛ್ರವಗಳಂ ಮರದಡಿಯೊಳಿರಿಸಿ ದಣಿ
ವಿಂದ ವಿಶ್ರಮಿಸಿ ತೃಷಿಯಾಗಿರುವದೆನಗೆ ನೀ
ರ್ತಂದೀವುದೆಂದು ಚುಮಲಾದೇವಿಯಂ ಕರೆದು ಪೇಳಿದಳು ಪ್ರೀತಿಯಿಂದ
ಅಂದ ನುಡಿ ಕೇಳಿ ಮೈಮುರಿದೆದ್ದಬಲೆ ರಜ್ಜ
ಬಿಂದಿಗೆಯ ತಕ್ಕೊಂಡು ಕೂಪಕ್ಕೆ ತಂದು ತ್ವರ
ದಿಂದ ಜಲಮಂ ಕೊಟ್ಟು ತೃಪ್ತಿಗೊಳಿಸಲ್ಕೆ ದೈತ್ಯಳು ಪೊಕ್ಕಳಾಲಯವನು ||೧೯||

ಇದರಂತೆ ಪನ್ನೆರಡು ವರುಷ ಬಾಳಿರಲಿತ್ತ
ಮದನಾರಿ ಭಕ್ತ ಶಿವಪದ್ಮ ಗಣತೃಪ್ತಿಯಂ
ಮುದದಿಂದ ಮಾಡಲಿಚ್ಛೈಸಿ ತೆರಳಿದ ವನಕ್ಕಗ್ನಿಯಂ ತರುವದಕ್ಕೆ
ಸದನದಿಂದೇಳ್ವ ಹೊಗೆಯಂ ಕಂಡು ಪ್ರೇಮದಿಂ
ಬದಿಯೊಳೈತಂದೀ ಮಹಾ ವನ ಮಧ್ಯದೊಳ್
ಇದು ನಿರ್ಮಿಸಿದರಾರು ನಾನರಿಯನೆಂದು ತ್ವರದಿಂ ಬಂದದ್ವಾರದೆಡೆಗೆ ||೨೦||

ನಿಲಯದೊಳಗಾರಿರುವಿರೆನ್ನಗಗ್ನಿಯಂ ಕೊಟ್ಟು
ಕಳಿಸಬೇಕೆಂದು ಪೇರ್ಧ್ವನಿಯಿಂದ ಕೂಗಲ್ಗೆ
ಒಳಗಿರುವ ಚಲುವೆ ಚುಮಲಾದೇವಿ ಕೇಳಿ ಗಡಬಂದು ತಗೆದಳು ಕದವನು
ತೊಳಗುವ ಕಳೇಬರವ ನಗೆಮೊಗದ ನುಣ್ಪಿಡಿದ
ತೆಳುಗಲ್ಲವಾ ಪದ್ಮನಂ ನೋಡಿ ತನ್ನ ಮನ
ದೊಳು ಚಿಂತಿಸಿದಳಾರಿವಂ ಮನುಜರಾದರಿಲ್ಲಿಗೆ ಬರ್ಪ ಧೈರ್ಯಮೆತ್ತ ||೨೧||

ಸೋಮನೋ ಲಂಕಾಪುರೀಶನಂ ಕೊಂದ ರಘು
ರಾಮನೋ ನೀಚಕೀಚಕನ ಸತ್ವದಿ ಸೀಳ್ದ
ಭೀಮನೋ ಭುವನದೊಳಗಿರುವ ವಿಟರಾಳಿಯಂ ಸೋರೆಗೊಳ್ಳಲ್ಕೆ ಬಂದನೋ
ಕಾಮನೋ ಜಂಬಾಸುರನ ಶತ್ರುವಾದ ಸು
ತ್ರಾಮನೋ ತಿಳಿಯದಿವನಂ ನೋಡಲೆನ್ನಗೆ ಮ
ಹಾಮನುಜನ ತಾಪವೆಚ್ಚಿತಿವನಂ ವರಿಸದಿರ್ದೋಡೇಂ ಫಲಮೆಂದಳು ||೨೨||

ನಾರಿಮಣಿ ಮರೆಗೆ ನಿಂತೀಕ್ಷಿಸುವಳೊಮ್ಮೆ ಗಂ
ಭೀರದಿಂದಡಿಯಿಡುತ್ತೊಳ ಪೋಗುವಳೊಮ್ಮೆ ಮಿತಿ
ಮೀರಿ ವಿರಹದಿ ಮರಳಿ ಬಂದು ನಿಲ್ಲುವಳೊಮ್ಮೆ ಪೀತಾಂಬರದನೀವೆಯ
ತಾರತಮ್ಯದಿ ತೀಡಿ ಸಡಿಲಿಸುವಳೊಮ್ಮೆ ಮುಂ
ಗಾರೆ ಮಿಂಚಿನ ಬಣ್ಣ ತೆರೆದು ಮುಚ್ಚುವಳೊಮ್ಮೆ
ಸಾರಸೊಬಗಿಂದುರದ ಮೇಲಣ ಸೆರಗ ತೆಗೆದು ಹಾರಿಸುವಳೊಮ್ಮೆ ಮುದದಿ ||೨೩||

ನಿಂದು ನೋಡಿದನವಳ ಮಾಟ ಕಡೆನೋಟ ನವ
ಸುಂದರಿಯ ಮದಕರಿಸುಯಾನ ನಿಡು ಮೀನಗ
ಣ್ಣೆಂದು ಮಂಡಲಸದೃಶವದನ ತೆಳುರದನ ಪೂಸರದಂತೆಸೆವ ನಾಶಿಕವ
ಮಂದನಗೆ ಮೃಗರಾಜ ಕಟಪವಳದುಟಿ ಹೇಮ
ದಂದದಿ ಮಿಸುಪ ತನುಶ್ಚಾಯ ಮೃದುಕಾಯ ಭೂ
ಸುಂದರಿಯರಂ ಪಳೆವರೂಪಮಂ ಕಂಡು ಶಿವಪದ್ಮ ಬಣ್ಣಿಸುತಿರ್ದನು ||೨೪||

ನಾರಿಯೋ ಮದನ ಕಠಾರಿಯೋ ಮೋಹದನು
ಸಾರಿಯೋ ಎನ್ನಮನಸೂರಿಯೋ ಸ್ಮರಯುದ್ಧ
ಧೀರಿಯೋ ವಿಟಮನೋಹಾರಿಯೋ ಪರಮಶೃಂಗಾರಿಯೋ ಭೂಸತಿಯರ
ಮೇರೆಯೋ ನವರಸಸುಪೋರಿಯೋ ಎನಗೆ ಹಿತ
ಗಾರಿಯೋ ಸೊಬಗಿನೊಯ್ಯರಿಯೋ ಕಡುಚಲ್ವ
ನೀರೆಯೋ ರತಿಯಾವತಾರಿಯೋ ರಂಜಿಸುವ ಜಾರಿಯೋ ಶಿವನೆ ಬಲ್ಲಾ ||೨೫||

ನಾನರಿಯೆನೆಂದವಳ ನೋಟಮಂ ಬೇಟಮಂ
ಸಾನುರಾಗದೊಳುರೆ ನಿರೀಕ್ಷಿಸಿದಪೇಕ್ಷಿಸಿದ
ಮಾನವಾಧಮರಿಗತಿ ಸುಖವಾಗದಿರದೀಗ ಬಂದಳೆಲ್ಲಿಂದಳೀ ಸಖೀ
ದಾನವರ ಸೆರೆಗೆ ಸಿಲ್ಕಿದ ಸುರಸ್ತ್ರೀಯೋ ಚತು
ರಾನನಂ ಯೋಗಿಗಳ ವ್ರತಭಂಗ ಮಾಳ್ಪುದ
ಕ್ಕೀ ನಾರಿಯಂ ಪುಟ್ಟಿಸಿದನೋ ಶಿವಬಲ್ಲನೆಂದಾಲೋಚಿಸಿದ ಮನದೊಳು ||೨೬||

ತಡಮಾಡದೆನಗೆ ಅಗ್ನಿಯನು ಕೊಟ್ಟುಕಳಿಸೆಂದು
ನುಡಿಯಲ್ಕೆ ಜಡಜಮುಖಿ ಕೇಳಿ ಸಂತೋಷದಿಂ
ಅಡಿಮುಂದಕಿಡುತೆಲವೋ ನೀನಾರು ನಿನ್ನ ಪೆಸರೇನೆನಗೆ ಪೇಳೆಂದಳು
ಪೊಡವಿಯೋಳೆನಗೆ ಶಿವಪದ್ಮನೆಂಬಭಿಧಾನ
ಒಡೆಯ ಶ್ರೀಗುರು ಸಿದ್ಧರೇವಣನ ಸುತನಾನು
ಮಡದಿಮಣಿ ತಳಿ ನಿನ್ನ ಪೆಸರಾವುದೆನಗೀಗ ಪುಸಿಯದುಸುರವದೆಂದನು ||೨೭||

ಆಗಲಾತನ ಮಾತಿಗೊಪ್ಪಿ ಪೇಳ್ದಳು ಪೂರ್ವ
ಭಾಗದೋಳ್ರಂಜಿಸುವ ಜಾಗ್ರತಾಪುರವ ಸುಖ
ಭೋಗದಿಂ ಪಾಲಿಸುವ ಚಕ್ರಪತಿ ಭೂಪಾಲ ಪಡೆದನೆನ್ನಂ ಮುದದೊಳು
ಬೇಗದಿಂದೆನಗೆ ಚುಮಲಾದೇವಿಯೆಂದು ನಿಜ
ವಾಗಿ ಪೆಸರಿಟ್ಟು ಕೆಲಕಾಲ ಪೋಷಿಸುತಿರಲು
ವಾಗೀಶ ಲಿಖಿತಕನುಸಾರದಿಂದೋರ್ವ ರಕ್ಕಸಿ ಬಂದು ತಂದಳಿತ್ತ ||೨೮||

ಇಂದಿಗೆಣಿಸಲ್ಕಾಯ್ತು ಪನ್ನೆರಡು ವರುಷ ತಿಳಿ
ಕಂದರ್ಪರೂಪ ನೀನಿಲ್ಲಿಗೇತಕೆ ಬಂದೆ
ಸಂದೇಹ ತೋರ್ಪುದೆನ್ನಗೆ ಶೀಘ್ರ ಸಾಗು ರಕ್ಕಸಿ ಬರುವ ಹೊತ್ತಾದುದು
ಮಂದಸ್ಮಿತೆಯೇ ಮೋಹದಿಂ ಕೇಳು ದನುಜೆ ತಾಂ
ಬಂದೇನು ಮಾಳ್ಪಳೀ ಭಯಮಿಲ್ಲಮೆನೆಗೆನಲು
ವಿಂದ ಪಾಲಿಪುನೆನ್ನ ಶ್ರೀಗುರು ಸಿದ್ಧರೇವಣನು ತಿಳಿ ನಿನ್ನ ಮನಕೊನೆಯೊಳು ||೨೯||

ಗಣತೃಪ್ತಿಗೈಸುವೆನು ಕೊಟ್ಟು ಕಳಿಸಗ್ನಿಯನು
ಕ್ಷಣದೊಳಗೆ ನಾಂ ಪೋಗ್ವೆನೆನಲಾಗಲಾ ತರುಣಿ
ಮಣಿತವಕದಿಂ ಪಾವಕವ ಕೊಟ್ಟು ಮಿಕ್ಕಪ್ರಸಾದಮಂ ತರುವದೆಂದು
ಮಣಿದು ಪೇಳಲ್ಕೆ ಶಿವಪದ್ಮನದಕೊಪ್ಪಿ ಶ್ರೀರೇ
ವಣ ಗುರುವರೇಣ್ಯನ ಪಾದಾಂಭೋಜ ಸ್ಮರಿಸಿ ಸ
ದ್ಗುಣ ಪೂರ್ಣನಾಗಿ ತ್ವರದಿಂದ ಹಟ್ಟಿಗೆ ಬಂದು ಪಾಕವನು ಮಾಡ್ದ ಮುದದೀ ||೩೦||

ಕರುಣದಿಂ ತುರು ತನ್ನ ಕರುವಿನೆಡೆಗೈದಂತೆ
ಗುರು ರೇವಣಾಚಾರ್ಯ ಗಣಸಮೂಹದಿಂ ಬಂದು
ವಿರಚಿಸಿದ ಪಾಕಮಂ ಸ್ವೀಕರಿಸಿ ಪದ್ಮಂಗೆ ಪರಶಿ ಸಂಚರಿಸುತಲಿತ್ತ
ಸರಸದಿಂ ಮಿಕ್ಕ ಪ್ರಸಾದಮಂ ತೆಗೆದೊಯ್ದು
ತರುಣಿ ಚುಮಲಾದೇವಿಯಳಿಗೆ ಕೊಡಲವಳು ಘನ
ಹರುಷದಿಂದನ್ನಮಂ ಸೇವಿಸುತ ಪದ್ಮನ ಚರಣಪದ್ಮಕೊಂದಿಸಿದಳು ||೩೧||

ಆ ತರುಣಿಯಂ ಪದ್ಮ ಪಿಡಿದೆತ್ತಿ ಪೇಳ್ದನೆಲೆ
ನಾ ತೆರಳುವೆನು ಸುಖದೋಳೀಗೃಹದೊಳಿರು ನೀನು
ಭೀತಿಗೊಳಗಾಗಬೇಡೆಂದು ಮುಂದಡಿಯಿಲ್ ನಾರಿ ಕರಗಳ ಮುಗಿದು
ಮಾತು ಮನ್ನಿಸು ಮೋಹನಾಂಗ ಮರಿಲಾರೆ ಸು
ಪ್ರೀತಿಯಿಂ ಪಿಡಿಕಯ್ಯ ನಿನ್ನ ನೋಡಲ್ಕೆ ತನು
ಜಾತನಸ್ತ್ರಕೆ ತರಹರಿಸುವೆ ತಿಳಿ ಮನದಿಯನ್ನೊರಿಸೆಂದು ಮೊರೆಯಿಟ್ಟಳು ||೩೨||

ವನಿತೆ ಕೇಳ್ಕುಲಹೀನಳಾದ ರಕ್ಕಸಿಯ ಬಳಿಯೊ
ಳನವರತ ಬಾಳ್ವ ನಿನ್ನಂ ವರಿಸಲೆಂತು ಬಿಡು
ಮನದಾಸೆ ಕಳಿ ತೀವ್ರ ಕೊಡುಯನಗನುಜ್ಞೆಯಂದೊರೆದನಾ ಶಿವಪದ್ಮನು
ಮನಸೋತ ಮಾನುನಿಯ ಬಿಟ್ಟು ಬಳಲಿಸುವದಿದು
ಘನತರವೆ ನೀಡೆನ್ನಗಭಯ ಬಹುಬೇಗದಿಂ
ಮುನಿಸ್ಯಾಕೆ ಸಾಕು ಸೈರಿಸು ಶಾಂತನಾಗು ಕುಂದಿಟ್ಟು ಪೋಗುವದುಚಿತವೇ ||೩೩||

ಹರಿಕರಡಿ ತನುಜೆಯಂ ಭೀಮನು ಹಿಡಂಬಿಯಂ
ವರವಶಿಷ್ಟ ಅರುಂಧತಿಯಳೆಂಬ ನಾರಿಯಂ
ನರನು ಶೇಷನ ಸುತೆಯರಂ ಪರಾಶರ ಮತ್ಸ್ಯಗಂಧಿಯಂ ಸಂಮುದದೊಳು
ಪರಿಣಯವ ಮಾಡಿ ಕೊಂಡತಿ ಸುಖವಬ
ಟ್ಟರಿದನರಿಯದೆ ಮರುಳನಂತೆ ಮಾತನಾಡುವಿ
ಬರಿದೆ ತರವಲ್ಲ ಬಿಡುಪಂಥ ಮತ್ತೆ ಪೇಳುವನೇಕ ಚಿತ್ತದಿಂ ಕೇಳೆಂದಳು ||೩೪||

ಕೆಸರಿನೊಳು ಕಮಲ ಜಲದೊಳು ಮೌಕ್ತಿಕಂ ಮೃಗದಿ
ಪೊಸಕಸ್ತೂರಿಯು ಕೀಟದೊಳು ಪಟ್ಟು ಸೂತ್ರ ಶೋ
ಭಿಸದ ಮೃತ್ತಿಕೆಯಲಿ ಸುವರ್ಣಗೋಕ್ಷೀರಗೋರೋಜನಗಳೆಂಬಿವುಗಳು
ಹಸನಾಗಿರದ ಹೀನಸ್ಥಲದೊಳುದ್ಭವಿಸಿ ಘನ
ಮಿಸುವ ವಸ್ತುಗಳೆನಿಸಿಕೊಂಡವದರಂತೆ ನಾ
ನಸುರಕುಲದವಳಾದಡೇನೆನ್ನ ಸುಗುಣಮಂ ಗ್ರಹಣ ಮಾಳ್ಪುದು ಮೋಹದಿ ||೩೫||

ಪ್ರಾಣಪ್ರಿಯನೆ ಪ್ರೇಮದೊರೆದು ನಾಂ ಪುಟ್ಟಿರ್ದ
ತಾಣಮಂ ನೀನರಿದರಿಯದಂತೆ ಪೇಳಿದಡೆ
ಜಾಣರೊಪ್ಪುವರೆ ಜಲಜಾಯುತಾಕ್ಷನೆ ಜಾತಿದೋಷಮಂ ಎಣಿಸದಿರೀಗ
ಮಾಣದೆನ್ನಂ ಕೂಡಿ ಸರಸ ಮಾತಾಡಿ ಪೂ
ಬಾಣನ ಸಮರದೊಳತಿ ಸೌಖ್ಯಮಂ ತೋರ್ಪುದೀ
ಕ್ಷೋಣಿಯೊಳ್ನಿನ್ನಸಮಗಾಣೆ ಚನ್ನಿಗ ಚದುರ ಬಾರೆಂದು ಕರಪಿಡಿದಳು ||೩೬||

ಅಂಚತಲ್ಪಕಯುಕ್ತಮಾಗಿ ರಾರಾಜಿಸುವ
ಮಂಚದೋಳ್ಕೂಡ್ರಿಸುತ್ತ ಕಡುಮೋಹದಿಂದವರ
ಪಂಚಾಮೃತವನುಣಬಡಿಸಲನಿತರೊಳು ದಿವಾಕರನಸ್ತಗಿರಿಗಿಳಿದನು
ಚಂಚಲಾಕ್ಷಿಯು ತನ್ನ ಚತುರತೆಯ ತೋರಿಸುತ
ಪಂಚಶರನಾಹವದಿ ಪದ್ಮನಂ ಗೆಲ್ದು ಪ್ರಾ
ಪಂಚಕನುಸರಿಸಿ ಕಾಂತನಂ ಮಾಡಿಕೊಂಬೆನೆಂದಮಿತ ಸುಖಪರಳಾದಳು ||೩೭||

ಅಗರು ಚಂದನ ಗಂಧ ಪುನುಗು ಕಸ್ತೂರಿ ಜಾಜಿ
ಅಗಣಿತ ಸುಪೂಗಳಂ ತಂದು ಮಂದೊಳಿರಿಸಿ
ಲಗುಬಿಗಿಯೊಳಮಳ ಜೋತಿಗಳ ಸಾಲ್ಗೊಳಿಸಿ ನಿಜಕಾಂತ ಪದ್ಮನನ್ನು
ಬಗೆಬಗೆಯೊಳಾರೈಸಿ ಸದ್ಗಂಧ ದ್ರವ್ಯಮಂ
ಮಿಗೆ ಕೂತೂಹಲದಿಂ ಕಾಯಕನು ಲೇಪಿಸುತ
ಬಗೆದು ರತಿ ಕೇಳಿಯೋಳ್ಕರಿಕರಿಣಿಗಳ ತೆರದಿ ಸ್ಮರಕಲಹಕೀಡಾದರು ||೩೮||

ಇತ್ತ ರಕ್ಕಸಿ ಮಧ್ಯರಾತ್ರಿಗೆ ಶವಂಗಳಂ
ಪೊತ್ತು ಬಲ್ದಿಡಿಗಿಲಿ ಬರುತ್ತ ನರವಾಸನೆಯು
ಹತ್ತಿ ಕಡುಕೋಪದಿಂದಾರ್ಭಟಿಸಿ ಪುಟನೆಗೆದು ಮನದೊಳಾಲೋಚಿಸುತಲೀ
ಚಿತ್ತಜಾಂತಕ ಹರಿವಿರಂಚಾದಿ ಗೀರ್ವಾಣ
ರೊತ್ತಿ ಬಹರೆನ್ನಯಪುರಕ್ಕೆ ಮನುಷ್ಯರಿಂ
ನೆತ್ತಣ ಪರಾಕ್ರಮಿಗಳೆಂದು ಪಲ್ಗರಿದು ಭೀಕರದಿ ಚೀರುತ ಬಂದಳು ||೩೯||

ಪರಮ ಕಾಂಚಾಲ ಮರದಡಿಯೊಳಾ ಶವಗಳಂ
ನಿರಿಸೆಡಬಲದೊಳೀಕ್ಷಿಸಲ್ಕುವರಿಯಂ ಕಾಣ
ದಿರದೇಕ ಕಾಲದಿಂದಾಲಯಕ್ಕಾಗಮಿಸಿ ಬಂಧಿಸಿದ ದ್ವಾರವ ನೋಡಿ
ತರಹರಿಸಿ ಕುಬಭೋಯಂದಾರ್ಭಟಿಸಿ ಬೊಬ್ಬಿಡಲ್
ತರುಣಿ ಚುಮಲಾದೇವಿ ತವಕದಿಂದೆದ್ದು ನಿಜ
ಪುರುಷನಂ ಎಚ್ಚರಿಸಿ ಪೇಳ್ದಳೆನ್ನಯ ಮಾತೆ ಭರದಿಂದ ಬಂದಳೀಗ ||೪೦||

ತಿನ್ನದೆ ಬಿಡಳು ಪ್ರಾಣಕಾಂತ ಪದ್ಮೇಶ ಕೇ
ಳೆನ್ನಿಂದ ನಿನಗೆ ದುರ್ಮರಣವಾಗುವದು ನಿಜ
ನಿನ್ನ ಮಾತಾಪಿತರ ಪುಣ್ಯನಿಗೀತೆ ಹೇಗೆ ಮರೆಯಲೆಂದುರನೊಂದಳು
ಅನ್ನೆಗಂ ಶಿವಪದ್ಮ ಲಲನೆಯಾಡಿದ ನುಡಿಗ
ಳನ್ನು ಕೇಳುತ ಮಹಾಕೋಪಮಂ ತಾಳಿ ಗುರು
ರನ್ನ ರೇವಣಸಿದ್ಧ ಕಾಯ್ವನನುದಿನದೊಳೆನ್ನಂ ವೃಥಾ ವೆಸನವೇಕೆ ||೪೧||

ಭಂಡಧನುಜೆಯಳ ಅರನಿಮಿಷದೊಳ್ತರಿದವಳ
ಖಂಡಮಂ ತೆಗೆತೆಗೆದು ಭೂತಗಣಕಾಹುತಿಯ
ತಂಡತಂಡದಿ ಕೊಟ್ಟು ನಿನ್ನಂನೆನ್ನಯ ಪುರಿಗೆ ಕೊಂಡು ಪೋಗುವೆ ಭರದಲಿ
ಖಂಡಶಶಿಧರನ ಕೃಪೆಯನ್ನೊಳಿರಲೀಗಲೇ
ಭಂಡರಕ್ಕಸಿಗೆ ನಾನಳ್ಕಿ ಧೃತಿಗುಂದುವನೆ
ಪುಂಡನೋಳಪಜಯದ ನುಡಿಗಳುಸುರುವರೆ ಛೀ ಬಿಡುಬಿಡೆಂದನುವಾದನು ||೪೨||

ಸತಿ ಕೇಳಿ ಸಂತೋಷಯುಕ್ತದಿಂದಾ ಪ್ರಾಣ
ಪತಿಗೊರೆದಳಾಗ ದನುಜೆಯ ಕೊಲ್ವದುಚಿತ ಮೆಲ್ಲ
ಲತಿ ಶಾಂತನಾಗು ಯುಕ್ತಿಯಲಿ ಪೋಗ್ವಯತ್ನಮಂ ರಚಿಸೆಂದು ಬೋಧಿಸಿದಳು
ಯತಿ ಕುಲೋತ್ತಮ ಸಿದ್ಧಗುರುವರನ ಸ್ಮರಿಸಿ ಸ
ಮ್ಮತಿ ಪೇಳ್ದತದ್ಯುವತಿಮಣಿಗೆ ಸನ್ಮೋಹದಿಂ
ದತಿಶೈಸಿದನು ಯುಕ್ತಿಯಿಂದೆ ಶಿಕ್ಷಿಸುವೆನೆನುತಲಿ ತರುಣಿ ಸಂತೋಷಿಸಿದಳು ||೪೩||

ಎಲೆ ರಮಣಿ ಕೇಳೀ ಭಸಿತ ನಿನ್ನ ಕರದಿ ಪಿಡಿದು
ಮಲಹರನ ಮಹಿಮೆಯಿನ್ನಾಂಗೌಳಿಯಾಗಿವರ
ನಿಲಯದೋಳ್ಗೌಪ್ಯದಿಂದಿರುವೆ ತಿಳಿ ನಿನಗೆ ಬೇಕಾದರಾಭೂತಿಯನ್ನು
ವಿಲಸಿತ ಮನದಿ ತಳಿಯಲಾಕ್ಷಣದಿ ಮೊದಲಿನ ವಿ
ಮಲರೂಪನಾಗ್ವೆನೀಂ ನಿನ್ನ ಮಾತೆಯ ಮರಣ
ಕಲೆಗಳಂ ತಿಳಿದೆನಗೆ ಪೇಳೆಂದು ಕಲಧೌತ ಗೌಳಿಯಾದಂ ಪದ್ಮನು ||೪೪||

ಹರಿಣಾಕ್ಷಿ ಹರುಷದಿಂ ಬಾಗಿಲ್ಗೆ ಬಂದುಭಯ
ಕರ ಮುಗಿದು ನಿಂತಿರಲ್ಕಾಗಲಾದಾನವಿಯು
ಪರಿತಾಪಗೊಂಡಿದೇಂ ಮನುಜವಾಸನೆ ಮನೆಯ ತುಂಬಿಕೊಂಡಿಹುದೆ ಬಿಡದೆ
ಸುರಪಾದಿ ದಿಕ್ಪತಿಗಳೆನ್ನಯ ಪುರಿಗೆ ಬರಲ್ಕರಿ
ಯರಿದುಯನಗೆ ಪರಮಾಶ್ಚರ್ಯಮಾಗಿಹುದು
ನರನಿಲ್ಲಿಗೈತಂದನೆಂತು ತಿಳಿಸೆಂದು ವಿಧವಿಧದಿಂದ ಬಾಯ್ಬಿಟ್ಟಳು ||೪೫||

ಮಾತೇ ನೀ ಮಧ್ಯಮಾಂಸಂಗಳಂ ತಿಂದು ವಿಪ
ರೀತ ನುಡಿಗಳನುಸುರಿ ಕೊರಗಿಸದಿರೆನ್ನನುರೆ
ಪ್ರೀತಿಯಿಂದಿಂದಿನತನಕ ಪುತ್ರಿಯಂತೆ ಪರಿಪಾಲಿಸೀಗನ್ಯಾಯದ
ಮಾತೇಕೆ ಬಿಡು ಬರಿದೆ ನಿನಗೆ ಬೇಸರವಾದ
ರೀ ತನುವ ನಿನಗೊಪ್ಪಿಸುವೆ ಮನಕೆ ಬಂದಂತೆ
ಘಾತಿಸೆನ್ನಂ ತಿಂದು ಸಂತೃಪ್ತಳಾಗು ಪುರುಡಿಸುವದಿದುಚಿತಮಲ್ಲವು ||೪೬||

ಎಂದು ನಯಭಯ ಭಕ್ತಿಯಿಂದ ವನಜಾಂಬಕೆಯು
ದಂದುಗದಿ ನುಡಿಯಲಾದನುಜೆ ಯೋಚಿಸಿದಳಿವ
ಳಂದ ಮಾತನ್ನ ನಾನರಿಯಲೆಂತೆಂದು ಯುಕ್ತಿಯಿಂ ಕೇಳಿದಳದೆಂತೆಂದೊಡೆ
ಕೆಂದುಟಿಗೆ ದಂತ ಘಾಯಂಗಳೇತಕೆ ಮುಖವು
ಕಂದಿ ನಯನಧ್ವಂದ ಕೆಂಪಾದವೇಕೆ ಬ
ಲ್ಪಿಂದುಟ್ಟ ಪಿತಾಂಬರದ ನೀವೆ ಜಾರಿರುವವೇಕೆ ಪೇಳೆಂದಳಸುರೆ ||೪೭||

ಜನನಿ ಕೇಳ್ನೀನಿಲ್ಲದಿರು ನಾರ್ನೋವಳೆ
ಮನೆಯೊಳೊರಗುವದಕತಿ ಭಯಮಾಗಿ ಎದ್ದು ಕೂ
ತೆನದಕ್ಕೆ ಸುಂದರ ಸುಮುಖ ಕಂದಿಕಣ್ಣಾಲೆ ಅರುಣ ಬಣ್ನದೊಳಿರ್ಪವು
ಸ್ತನಕೆ ತಾಕಿರೇಖೆಯಾಗಿವೆ ಪವಳದುಟಿಯಾಲ
ಕೊನೆ ತಾಕಿರೇಖೆಯಾಗಿವೆ ಪವಳದುಟಿಯಾಲ
ತನಿವಣ್ಣಿದೆಂದರಿದು ಗಿಳಿಕದಂಕಿದೊಡೆ ಘಾಯಗಳಾಗಿ ತೋರುತಿಹವು ||೪೮||

ಸಿರಿಬಾಲೆನೆನ್ನ ಜವ್ವನವ ನೋಡುತ ತನ್ನ
ಸೆರಗಳೆಸೆಯಲು ವಿರಹ ಪುಟ್ಟಿ ನಿದ್ರೆಯ ಭರದೊ
ಳಿರಲು ಹೊರಳಾಡಿಲಂಬರನೀವಿಜಾರಿರುವವಿದಕಾಗಿ ಕೃತಿಮದಲಿ
ಪರೀಕ್ಷಿಸುವದಿದು ವಳಿತವಲ್ಲ ನಿನ್ನಗೆ ಕ್ಷುಧೆಯ
ಪರಿತಾಪ ಆದರೆನ್ನಂ ತಿಂದುಬಿಡು ಬರಿದೆ
ಜರಿದು ವಿಧವಿಧೊಳಪಕೀರ್ತಿ ಗಳಿಸಲಿ ಬೇಡವೆಂದಾ ಮಾತಿಗೆ ಪೇಳ್ದಳು ||೪೯||

ದಾನವಿಯು ದಯಾಹೃದಯಳಾಗಿ ವನಜಾಕ್ಷಿಯ ನಿ
ಧಾನದಿಂಬೋಳೈಸಿ ಸುತೆಯೊಳೊರೆದಳು ನಿನ್ನ
ನೂನ್ಯತೆಗಳಂ ನೋಡಲಿಚ್ಛೈಸಿ ನಿನಗೊಳಿತು ಕೇಳಿದೆನು ಪರಿಪರಿಯೊಳು
ನೀನಧೈರ್ಯವಗೊಳ್ಳದೀಧಾಮದೊಳಗೆ ಸು
ಮ್ಮಾನದಿಂದಿರು ಬಳಲುಬೇಡ ನಿನ್ನಗೆ ವೃಥಾ
ಹಾನಿಗೈಸುವನೇ ಬಿಡುಭಯವೆಂದಭಯ ನೀಡಿ ಬೋಧಿಸಿದಳತಿ ಮೋದದೀ ||೫೦||

ಜನನಿಯಾಡಿದ ನುಡಿಗಳಂ ಗ್ರಹಿಸುತಂಗನೆಯು
ಘನಮೋದದಿಂದ ಮಾರುತ್ತರಂಗೊಟ್ಟಳೆನ್ನನು
ಬಿಟ್ಟು ನಿತ್ಯದಲಿ ದೂರ ಪೋಗುವಿನಿನ್ನನಲ್ಲಿ ವೈರಿಗಳು ಕೂಡಿ
ತನುವ ಕತ್ತರಿಸಿದೊಡೆ ನಾನೀವನದೊಳೆಂತು
ದಿನಗಳಿವೆ ನಿನ್ನ ಮರಣದ ಕಲೆಯ ಶೀಘ್ರದಿಂ
ದೆನಗೆ ತಿಳಿಸೆಂದು ಕರಮುಗಿದು ಶಿರಸಾವಹಿಸಿ ಕೇಳಿದಳು ಗೌಪ್ಯದಿಂದ ||೫೧||

ಪುತ್ರೆಯ ಚಮತ್ಕಾರ ಗೋಷ್ಠಿಯಂ ಕೇಳುತ ವಿ
ಚಿತ್ರ ಮಾನಸಳಾಗಿ ನುಡಿದಳೆಲೆಯನ್ನನು ಧರಿ
ತ್ರಿಯೊಳ್ಮರಣಗೊಳಿಸುವ ವೀರರುಂಟೇ ಬಿಡುವೆಸನ ನಿನಗೇಕೆ ಸಾಕು
ಕೃತ್ರಿಮವ ತೊರೆದೀಗ ನಿನಗೆ ಪೇಳುವೆ ನಿಮಿಷ
ಮಾತ್ರ ದೃಢಚಿತ್ತದಿಂ ಕೇಳೆಂದು ದನುಜೆ ನಿಜ
ಪುತ್ರಿಯಂದದಿ ತನ್ನ ಮರಣವಂ ಪೇಳುವದಕನುವಾದಳತಿ ಭರದೊಳು ||೫೨||

ಮನೆಯ ಮುಂದಿನ ಮರದೊಳಿರುವ ಕಾಕನತರಿಯೆ
ಲೆನಗೊದಗುವದು ಮರಣ ತತ್ತರುಧರಾತಳಕೆ
ಘನತವಕದಿಂದೆ ಕಂಪಿಸಿ ಬೀಳ್ವದೆನಲದಂ ಕೇಳಿ ಚುಮಲಾದೇವಿಯು
ಮನದಾಸೆ ಕೈಗೂಡಿತೆಂದು ಹಿಗ್ಗುತ ಮರಳಿ
ಜನನಿಗೊರೆದಳು ಹೆಣಗಳಂ ತರುವ ಹೊತ್ತಾಯ್ತು
ಮಿನುಗುತಿಹ ಸುತ್ತಲಿನ ಪುರಮಂ ಪ್ರವೇಶಿಸೆಂದನುವಾಗಿ ಬೋಧಿಸಿದಳು ||೫೩||

ಕ್ರೂರರೂಪದಿ ದನುಜೆಗಮಿಸಲ್ಕೆ ಚುಮಲೆ ಗಂ
ಭೀರ ಭಾವದಿ ಕಾಂತನಿತ್ತ ಭಸಿತವಕೊಂಡು
ರಾರಾಜಿಸುವ ಗೌಳಿ ಮೇಲೆ ಧರಿಸಲ್ದಿವ್ಯ ರೂಪದಿಂದೆಸೆದ ಪದ್ಮ
ವಾರಿಜಾಂಬಕಿ ಪ್ರಿಯನ ಚಾರು ವೈಭವ ಕಂಡ
ಪಾರ ಹರುಷಿತಳಾಗಿ ಸಾರಿದಳು ನಿನ್ನ ಸಮ
ರಾರುಂಟು ಭುವನದಲಿ ಧೀರ ಮಹಿಮಾಕಾರ ಬಾರೆನ್ನ ಸುಖಸಾಗರ ||೫೪||

ನಿನ್ನಾಜ್ಞೆಕನುಸಾರಳಾಗಿ ದನುಜೆಯ ಮರಣ
ವನ್ನರಿತುಕೊಂಡೆ ಬಿಡುಬಿಡು ಮನದ ವ್ಯಾಕುಲಂ
ಮುನ್ನೊರೆವೆ ಮರುಕದಿಂ ಕೇಳ್ಮನೋಂಬುಜ ಹಂಸಸತ್ಕೀರ್ತಿ ಸುಗುಣ ಸರಸ
ಸನ್ನುತಾಂಗನೆ ಮನೆಯ ಮುಂದಿರ್ಪ ಗಿಡದಿ ಸ್ಥಲ
ವನ್ನು ವಿರಚಿಸಿಕೊಂಡು ಬದುಕುತ್ತಲಿಹ ಕಾಕ
ನನ್ನು ಕೊಲ್ಲಿದರೆ ಮರ ಮುರಿದು ಬೀಳುವದು ದೈತ್ಯಗೆ ಮರಣವುಂಟಾಗ್ವದು ||೫೫||

ಎಂದು ವನಜಾಕ್ಷಿ ಪೇಳಲ್ಕೆ ಶಿವಪದ್ಮ ಮುದ
ದಿಂದುಸುರಿದನು ಕಾಕನನ್ನು ಪಿಡಿಯುವ ಯುಕ್ತಿ
ಚಂದದಿಂ ಮಾಳ್ಪೆನೆಂದವಸರದಿ ಮಧುರಾನ್ನಮಂಗೈಸಿಕೊಂಡು ಮರದ
ಮುಂದದಂ ಚಲ್ಲಿ ಕೊಟ್ಟಲ್ಲಿ ಪವಡಿಸಿದ ಮೃತಿ
ಹೊಂದಿದವನಂತೆ ಶ್ವಾಸೋಛ್ವಾಸವನ್ನು ತ್ವರ
ಬಂದು ಮಾಡುತ್ತ ಕರಕಾಲ್ಗಳಲ್ಲಾಡಿಸದೆ ಗುಪ್ತದಿಂದಿರುತಿರ್ದನು ||೫೬||

ಕಾಕನಾ ಪದ್ಮನಂ ಕಂಡಿದು ವೇಶವಮೆಂದು
ಏಕಕಾಲಕ್ಕೆ ಬಂದನ್ನಮಂ ಸ್ವೀಕರಿಸ
ಬೇಕೆಂಬ ಭ್ರಾಂತಿಯಿಂ ಹಾರುತಾ ಶವದ ಮೇಲ್ಕೂತುಕೊಂಡಿತು ಪ್ರೇಮದಿ
ಮೂಕತ್ವದಿಂದೆ ತಟ್ಟನೆ ಕರದಿ ಪಿಡಿಯಲದು
ಕಾಕಾಯನುತ್ತೊದರಿ ಕಸಿವಿಸಿಗೊಳುತ್ತಿರ
ಲ್ಕಾ ಕಪಟ ಹೃದಯಳಾದಸುರೆಯಳಿಗತಿ ಕಷ್ಟಮಾಗಿ ಗೃಹಪಥವಿಡಿದಳು ||೫೭||

ತ್ವರ ಮನೋವೇಗದಿಂದ್ಕೆ ತಂದು ಕಾಂಚಾಲ
ಮರ ಸಮೀಪದಿ ನಿಂದು ಪದ್ಮನ ಕರದಿ ಕಾಕ
ನಿರುವುದಂ ನೋಡಿ ಭೀಕರಿಸಿ ಬಾಯ್ದೆರೆದು ಮೇಲ್ವಾಯ್ದು ಬರುತಿರೆ ಸರಿಸಕೆ
ಹರನೊರಸುತಂ ತನ್ನ ಗುರು ಸಿದ್ಧರೇವಣನ
ಸ್ಮರಿಸುತ್ತ ಕಾಗಿಯಂ ಕೊಲ್ಲಲ್ಕೆ ರಕ್ಕಸಿಯು
ಮರಣಹೊಂದಿದಳಾಗಲಾ ಮರಂ ಮುರಿದು ಭೂಮಂಡಲಕ್ಕುರುಳಿ ಬಿತ್ತು ||೫೮||

ಯತಿವರನ ಶಾಪವಿಂದಿಗೆ ಮುಗಿದು ಪದ್ಮನಿಂ
ದತಿಶಯದ ಮುಕ್ತಿಯಂ ಪಡೆದು ಕೈಲಾಸಪುರಿ
ಗತಿ ತ್ವರದಿ ತೆರಳಿದರು ತ್ರಿಜನಗಂಧರ್ವರಿತ್ತಾಗ ಶಿವಪದ್ಮ ತನ್ನ
ಸತಿ ಚುಮಲೆಯಂ ಕರೆದು ಬೆಟ್ಟದಂತೆ ವನಿಯೊ
ಳ್ಮೃತಿ ಹೊಂದಿ ಬಿದ್ದಿರುವ ರಕ್ಕಸಿಯಳನು ತೋರಿ
ಸುತ ಘನಾದರದಿ ಮುಗುಳೆಂದನೆಲೆ ಕಾಂತೆ ನಿನ್ನಯ ಸೆರೆಯು ದೂರಾಯಿತು ||೫೯||

ಭರದಿಂದ ಎನ್ನೊಡನೆ ನಡಿಯಂದು ಪ್ರಿಯನ
ಕರೆ ವಚನ ಕೇಳಿ ಹರುಷಾಧಿಕ್ಯಳಾಗುತ
ಚ್ಚರಿಗೊಂಡು ನೋಡುತಿರಲಾಗ ಶಿವಪದ್ಮ ದೈತ್ಯೆಯ ಶಿರವನುರೆ ಛೇದಿಸಿ
ಮೆರೆವ ಮಾಯ್ಮೂರ್ತಿಯನು ಮಾಡಿದಂ ಮತ್ತೆ ಕೈ
ಬೆರಳ್ಗಳಂ ಕಿತ್ತಿ ಹೆಗ್ಗಾಳಿ ಕರ್ನಿಯ ಕಾಳಿ
ಬುರುಗು ಸಲೆ ರಾಜಿಪನ ಪೂರಿಯಂ ಮಾಡ್ದ ಡೊಕ್ಕೆಯ ಸೀಳಿ ಡೊಳ್ಳು ಮಾಡ್ದ ||೬೦||

ಕರುಳು ಕಿರಿಗೆಜ್ಜೆ ಸ್ತನಜಗಜಂಪು ಮತ್ತುಭಯ
ಚರಣವಂದಿಗೆಯು ನರನಡುವಿನೊಡ್ಯಾಣ ಮೇಣ್
ಕರತಾಳ ಬೆನ್ನು ಹಪ್ತಾಗಿರಿಯು ನಾಲಿಗೆ ಕಡಾವಿಗೆ ನಿತಂಬ ಪಟಹ
ಮಿರುಗುತಿಹ ದಂತ ಜಗಜಂಪಿಗೊಪ್ಪುವಸುಪಿಂ
ಜರ ಮುಖ್ಯ ಬಾವನ್ನ ಬಿರುದುಗಳ ಮಾಡಿ ಸರ
ಸಿರುಹ ಮುಖಿಯಂ ಕೂಡಿ ಕುರಿಗಳ ನಿವಾಸಕ್ಕೆ ತವಕದಿಂದೈತಂದನು ||೬೧||

ಈ ಸುಚಾರಿತ್ರಮಂ ಬರದೋದಿದರ್ಗೆ ಮೇಣ್
ಲೇಸಾಗಿ ಯಿದರರ್ಥವಾಧ್ಯಾಂತ ಪೇಳ್ದರ್ಗೆ
ಬೇಸರಿಯದುರೆ ಭಕ್ತಿಯಿಂದ ಕೇಳಿದವರ್ಗೆ ಪದುಳದಿಂ ಪಠಿಸಿದರ್ಗೆ
ಭಾಸಿತ ಸಕಲ ಭೋಗಭಾಗ್ಯಮೋಕ್ಷಂಗಳ ವಿ
ಲಾಸದಿಂದಿತ್ತುದುರಿತೌಘಮಂ ಸಂಹರಿಸಿ
ವಾಸ ರಸ್ತಾಪುರ ಶ್ರೀ ಶರಭಲಿಂಗೇಂದ್ರ ರಕ್ಷಿಸುವನಿಹಪರದೊಳು ||೬೨||

ಇಂತೆಬಲ್ಲಿಗೆ ಶರಭೇಶ್ವರ ಪಾದಾಬ್ಜಭೃಂಗನು
ವಿಶಿಷ್ಠವಿದ್ವಜ್ಜನ ವಿಧೇಯನು ಆದ ಭೀಮನಾಯಕ
ಕವಿಯಿಂ ಪ್ರಣೀತಮಪ್ಪ ಹಾಲ್ಮತೋತ್ತೇಜಕ ಪುರಾಣದಲ್ಲಿ
ಅಂತು ಸಂದಿ ೬ಕ್ಕಂ ಪದನು ೨೮೦ಕ್ಕೆ ಮಂಗಲಂ ಮಹಾಶ್ರೀಶ್ರೀಶೀ