ಸೂಚನೆ ||

ಧರೆಯೊಳಗೆ ಶಿವಪದ್ಮನಖಿಳ ಮಹಿಮೆಯ ತೋರಿ
ಹರನಾಜ್ಞೆಯಿಂದ ಕೈಲಾಸಕ್ಕೆ ಪೋಗಿ ತಾಂ
ಮರಳಿ ಶಿವಸಿದ್ಧ ಬೀರೇಶನೆಂಬಭಿದಾನವೆತ್ತು ಪುಟ್ಟುವನಿಳೆಯೊಳು

ಕರಿವದನ ತಾತ ಪರಿಪೂತ ಸುಖಧಾತ ಶಿವ
ಕರಿಚರ್ಮಧಾರ ಭವದೂರ ವೃಷಭೇಶ
ಶಾಂಕರಿಯ ಪ್ರಿಯರಕ್ಷ ಪಾಲಾಕ್ಷ ಖಳಶೀಕ್ಷ ಘನಧಕ್ಷ ಪ್ರತ್ಯಕ್ಷಮಹಿಮ
ಶರಣ ಪರಿಪೋಷ ಹರಿಭೋಷ ಸಂತೋಷಕರ
ಶರಧಿಭುವನಪ್ರಭು ಮುನಿಪ್ರಣೀತ ಅಪ್ರಮಿತ
ಶರಪಂಚನಾಶ ಜಗದೀಶ ಪರಮೇಶ ಭೂತೇಶನೆನ್ನಂ ಪೊರೆಯಲಿ ||೧||

ಹರಪದ್ಮ ಬಾವನ್ನ ಬಿರಿದುಗಳಗೈದು ಬಂ
ದುರದಿಂದ ಬಂಕಾಪುರದೊಳಿಟ್ಟು ಬಂದಿತ್ತ
ಕುರಿಗಳನು ಪೊರೆಯುತ್ತ ಹಾಗ್ಗಾಡಿನೊಳ್ಸುಖಿಸುತಿರಲತ್ತ ಕೈಲಾಸದಿ
ಹರಿಯಜ ಸುರೇಂದ್ರ ಪ್ರಮುಖ ಸುರ್ವಾಣಗಣ
ಗರುಡಗಂಧರ್ವ ಭೃಗುಬಕದಾಲ್ಫ ಮುನಿನಿಕರ
ವೆರಸಿ ಪರಶಿವರತ್ನ ಖಚಿತ ಸಿಂಹಾಸನದಿ ವಾಸಿಸಿರಲಾ ಸಮಯದೀ ||೨||

ನಾರದ ಮುನೀಶ್ವರಂ ಬಂದು ಶಂಕರನ ಪಾದ
ವಾರಿಜಕ್ಕೆರಗಿ ಶಿವಪದ್ಮ ಬಂಕಾಪುರದ
ಕ್ರೂರದಾನವಿಯ ಶಿರತರಿದವಯಂಗಳಂ ಬಾವನ್ನ ಬಿರುದು ಮಾಡಿ
ಆರರಿಯದಂತೆ ತತ್ಪುರದೊಳವುಗಳನಿಟ್ಟು
ನಾರಿ ಚುಮಲಾದೇವಿಯಳ ಸೆರೆಯ ಬಿಡಿಸಿ ಗಂ
ಭೀರದಿಂ ಸ್ವಸ್ಥಲಕೆ ಕರತಂದ ಸಂಗತಿಯ ಪೇಳಿದಂ ಪ್ರೇಮದಿಂದ ||೩||

ಕೇಳಿ ಪುತ್ರನ ಮಹಿಮ ಪಂಚಾನನು ಹರುಷ
ತಾಳಿ ಬಂಕಾಪುರದೊಳಿರುವ ಬಾವನ್ನ ಬಿರುದಾವಳಿಗಳ ರಕ್ಷಣೆಗೆ
ಕಳಿಸಲಿನ್ನಾರನೆಂದಾಲೋಚಿಸುತ ಮನದೊಳು
ಪೇಳಿದನು ಬಾಗಿ ಬಂಕಣ್ಣನಂ ಕರಿಸುತ್ತ
ಹಾಳು ಬಂಕಾಪುರಕೆ ಪೋಗಿ ಪದ್ಮನ ಬಿರಿದ
ಮೇಳದಿಂದಿಟ್ಟು ಪಾಲಿಸು ಮುಂದೆ ಶಿವಸಿದ್ಧ ಬೀರನುದ್ಭವಿಸುತಿಹನು ||೪||

ಆ ಮಹಾ ಬಿರಿದುಗಳ ಸಿದ್ಧಬೀರಂ ಪೊರೆವ
ನಾ ಮೇಲೆ ನೀನಿತ್ತ ಬರ್ಪುದೆಂದಪ್ಪಣೆಯ
ನಾ ಮಾರಾರಿಪು ಕೊಟ್ಟು ಬಾಗಿ ಬಂಕಣ್ಣಂ ಬಂಕಾಪುರಕೆ ಕಳಿಸಿದಂ
ಪ್ರೇಮದಿಂ ಶಿವನಾಜ್ಞೆಕೊಪ್ಪಿ ಬಿರುದುಗಳಿರುವ
ಧಾಮಕ್ಕೆ ಬಂದು ಪರಿಪೋಷಿಸುತ್ತಿರಲಿತ್ತ
ಭಾಮಾಮಣಿಯಳಾದ ಚುಮಲೆಯಂ ಕೂಡಿ ಶಿವಪದ್ಮ ವನದೊಳಗಿರ್ದನು ||೫||

ಧರಣಿಯಲ್ಲವ ಸುತ್ತಿ ಸಿದ್ಧಕುಲ ಚಕ್ರೇಶ
ನಿರದೆ ತರುಳನ ನೋಡಲಿಚ್ಛೈಸಿ ಗಣವೃಂದ
ವೆರಸಿ ಶಿವಪದ್ಮನಿಹ ಸ್ಥಾನಮಂ ಶೋಧಿಸುತ ನಭೋಮಾರ್ಗದಿಂದಿಳಿದನು
ಗುರುವಿನಾಗಮನವಂ ನೋಡುತಾ ಬಾಲಕಂ
ತ್ವರಿತದಿಂದೆದ್ದು ಪಾದಸರಸಿಜಕ್ಕಭಿನಮಿಸಿ
ಸ್ಮರಿಸಲ್ಕೆ ಸಿದ್ಧೇಂದ್ರ ಪಡಿದೆತ್ತಿ ಪೇಳ್ದನೆಲೊ ಬೆಲೆಯಲ್ಲ ನಿನ್ನಧಟಕೆ ||೬||

ಬಂಕಾಪುರದೊಳಿರ್ಪ ರಕ್ಕಸಿಯ ಕೊಂದು ಬಿರಿ
ದಂಕನೆನಿಸಿದಿ ಮತ್ತೆ ಸೆರೆಯೊಳಗೆ ಸಿಕ್ಕಿರ್ದ
ಪಂಕಜಾಂಬಕಿ ಚುಮಲೆಯಂ ತಂದಿನಿನ್ನಸಮರಾರುಂಟು ಭೂತಲದಲೀ
ಶಂಕರನ ಕೃಪೆ ನಿನಗೆ ಪರಿಪೂರ್ಣವುಂಟು ಕೇಳ್
ಮಂಕುಮೋಹದ ಮಗನೆ ಮರುಕದಿಂ ಪೇಳ್ವೆನು ಕ
ಳಂಕವೆಳ್ಳಿನಿತಿಲ್ಲ ಪೂರ್ವಾರ್ಜಿತನ ಸುಕೃತ ಬಂದೊದಗಿ ನಿಂತಿರುವದು ||೭||

ಇಂದು ನಿನಗೀ ಚುಮಲೆಯಳಿಗೆ ಪರಿಣಯನೆಸಗಿ
ಮುಂದೆ ಗಮಿಸುವೆನೆಂದು ದೇವಗನ್ನೆಯರನ್ನು
ಚಂದದಿಂ ಕರಿಸಿ ಮಧುರಾನ್ನಮಂಗೈಸಿ ಗಂಧರ್ವ ವಿವಾಹಗೈದನು
ಬಂದ ಕಂಟಕ ನಾಶಗೊಳಿಸಿ ಸುಪ್ರೇಮದಿಂ
ದಿಂದುಶೇಖರ ನಿನ್ನ ಪೊರೆಯಲೆಂದರಸಿ ಗಣ
ವೃಂದಮಂ ಕೊಡ್ದು ರೇವಣಸಿದ್ಧ ಭುವನ ಸಂಚಾರಕ್ಕೆ ತೆರಳಲಿತ್ತ ||೮||

ಸಕಲ ಕುರಿಗಳ ತಂಡಮಂ ತಿರುವಿಕೊಂಡು ಗಿರಿ
ನಿಕರಭಾಗದೊಳು ಮೇಸುತ್ತ ಸತ್ವರದಿ ಮುಂ
ದಕೆ ಪೋಗಿ ಜಾಗ್ರತೀಪುರದ ಸೀಮೆಯ ಪೊಕ್ಕು ಗುರುನಾಮವನು ಸ್ಮರಿಸುತ
ಅಕಳಂಕ ಮತಿವಂತನಾದಾದಿಗೊಂಡನ ಹೊ
ಲಕೆ ಬರಲ್ಕಾ ಕುರಿಗಳಿರದೆ ಸಸಿಗಳ ಕೆಡಿಸ
ಲಿಕೆ ಜಾಯಿಗೊಂಡ ಪಾಯ್ಗೊಂಡಮರಗೊಂಡರೈತಂದರತಿ ಕ್ರೋಧದಿಂದ ||೯||

ಭಂಡ ನೀನಾವವನೆಲೊ ಭರದಿಂದ ಬಂದು ಕುರಿ
ಹಿಂಡುಗಳನೆಮ್ಮೆ ಹೊಲಮಂ ಪೊಗಿಸಿ ಭುವನದೊಳು
ಪುಂಡನಂತ್ಯೆ ತರುವಿ ಛೀ ನಿನಗೆ ನಾಚಿಕಿಲ್ಲವೆ ನೀಚ ದುರ್ನೀತನೆ
ದಂಡಿಸುವೆವೀಗ ನಿನ್ನೊಳ್ಳೆ ಮಾತಿಲಿ ಪೋಗು
ಖಂಡಿಸಾಪೇಕ್ಷಮೆಂದಾ ಪದ್ಮ ನಂ ನೂಕಿ
ಕಂಡಂತೆ ಬೊಗಳಿ ಮುಖನೋಡಿ ಯಮ್ಮನುಜನೆಂದಾಲೋಚಿಸಿದರು ಮನದಿ ||೧೦||

ತಮ್ಮ ನೀನಿಷ್ಟುದಿನಮೆಲ್ಲಿ ವಾಸಿಸಿದಿ ಮೇ
ಣಮ್ಮನಮ್ಮರೆತಾರ ಮನೆಯ ಸೇರಿದಿ ಭರದಿ
ಸಮ್ಮುತದಿ ನಿಂದು ಸನ್ಮೋಹದಿಂ ಪೇಳೆಮಗೆ ಸುವಿವೇಕ ಸುಗುಣಶಾಲಿ
ಉಮ್ಮಳಿಸಬೇಡ ನಿನ್ನನು ನೆನಸಿ ಮನೆಯೊಳಗೆ
ದುಮ್ಮಾನಗೊಳುವರನುದಿನ ಮಾತೆ ಪಿತರು ತಿಳಿ
ಗಮ್ಮನೇ ನಿಜಾಲಯಕೆ ಬಾರೆಂದು ಪದ್ಮನಂ ಪರಿಪರಿಯೊಳುರೆಗೈದರು ||೧೧||

ಆಗ್ರಜರ ನುಡಿಗೆ ಕಿವಿಗೊಡದೆ ತನ್ನಯ ಕುರಿ ಸ
ಮಗ್ರಮಂ ತಿರುವಿಕೊಂಡಿರದೆ ಮುಂದಕೆ ಕೋಪ
ದುಗ್ರದೊಳಗಡಿಯಿಡುತ ಬರಲಾಗ ಪಾಯ್ಗೊಂಡನೆಂಬೋರ್ವನಮಿತ ಸುಖದಿ
ಸ್ವಗೃಹಕೆ ಪೋಗಿ ಸಂದೇಹಮಿಲ್ಲದೆ ಮಹಾ
ವೆಗ್ರದಿಂ ಪಿತಮಾತೆಯರ್ಗೆ ಪೇಳಿದನು ಕಾ
ಲಗ್ರೀವನೊರದಿ ಜನಿಸಿದ ಪದ್ಮನಂ ಕಂಡು ಬಂದಿರುವೆ ಸಂಭ್ರಮದಲಿ ||೧೨||

ಬಂದೆಮ್ಮ ಹೊಲದಡಿಯೊಳಿರುವನಾಲಯಕೆ ಬಾ
ರೆಂದು ಕರೆದರೆ ಕರ್ನಗೊಡದೆ ಮೇಣಮ್ಮ ನಂ
ನಿಂದಿಸುವನಿದಕೆ ನೀವಾಗಮಿಸಿ ಅನುಜನಂ ಕರೆತರುವದೆನಲಾಕ್ಷಣ
ತಂದೆತಾಯ್ಗಳು ತವಕದಿಂದೆ ಸುತನಿಹ ಸ್ಥಲಕೆ
ಚಂದದಿಂದೈತಂದು ವಿಧವಿಧದಿ ಕರೆದರವ
ರಂದ ನುಡಿಗುತ್ತರವ ಕೊಡದೆದಂದುಗದೊಳಿರೆ ಜನನಿಗಾಯಿತು ವೆಸನವು ||೧೩||

ಪುತ್ರನೇ ಬಾ ಭುವನತಲದೊಳಗಣಿತ ಸಚ್ಛ
ರಿತ್ರನೇ ಬಾ ಸಲೆ ವಿರಾಜಿಸುವ ಪಾಲ್ಮತವ ಪ
ವಿತ್ರನೇ ಬಾ ಪಂಚಕರ್ಮಾಂಧಕಾರಕೌಘ ಮಿತ್ರನೇ ಬಾ ಕೋ
ಮಲಗಾತ್ರನೇ ಬಾ ಸರಸಿರುಹತಿರಸ್ಕರಿಪದ್ವಯ
ನೇತ್ರನೇ ಬಾ ನಿನ್ನ ಭಕ್ತಾಳಿ ಸನ್ನುತಿಗೆ
ಪಾತ್ರನೇ ಬಾರೆನ್ನ ವಂಶನೆಂಬುವ ನಿಜಕೆ ಚೈತ್ರನೇ ಬಾ ನಿನ್ನ ನಿಲಯಕೆ ||೧೪||

ಜನನಿಯಂಬುವ ಗುರ್ತುವರಿಯದೆನ್ನಂ ನೀನು
ಮುನಿದು ಮಾತಾಡದೀಪರಿ ಮಾಳ್ಪರೇ ನಿನ್ನ
ಗಿನಿತು ವಿಪರೀತ ಮನಪುಟ್ಟಿಸಿದರಾರು ಪೇಳೆಂದು ತರತರದಿ ಸುತನ
ಘನಪ್ರೇಮದಿಂ ಕಪೋಲವ ಪಿಡಿದು ಕೇಳಿದೊಡೆ
ವನಿತೆ ಚುಮಲಾದೇವಿಯಳ ಸೆರೆಯ ಬಿಡಿಸಿ ವರ
ದನುಜೆಯಳ ಸೀಳಿ ಬಾವನ್ನ ಬಿರುದುಗಳಗೈದನಕ ಪೇಳಿ ಮುದದೊಳು ||೧೫||

ಬಾಲಕನ ವಿಕ್ರಮಕೆ ಮೆಚ್ಚಿ ಸನ್ಮೋಹದಿಂ
ದಾಲಿಸುತ ಮೃದುಮಧುರನುಡಿಗಡಣಮಂ ಕೃಪೆಯೊ
ಳಾಲಿಸಿ ತಲೀಲನಂ ನೋಡಿ ಹಿಗ್ಗುತ ಮನೆಗೆ ಬಾರೆಂದು ಕರೆಯಲವನು
ಈ ಲೌಕಿಕದ ಸುಖದಾಪೇಕ್ಷೆಯನಗಿಲ್ಲಭವ
ಜಾಲಮಂ ಪರಿದು ಮುಕ್ತನ ಮಾಡ್ದ ಗುರುಸಿದ್ಧಂ
ಪಾಲಿಸುವನೆನ್ನ ನೀವನವೆ ನಿಜನಿಲಯ ಬರಲಾರೆನೆಂದನು ಗೃಹಕ್ಕೆ ||೧೬||

ಬಳಿಕಲಾ ಜನನಿತನಯನೇ ನಿನಗೆ ಯೋಗ್ಯ
ಮಲ್ಲಿಳೆಯೊಳೆನ್ನಂ ಬಳಲಿಸಬೇಡಯನ್ನ ನುಡಿ
ಪಳಿದು ಪಿತಮಾತೆ ಸತಿಸುತರ ಬಿಡ್ದಡವಿಯನು ಸೇರುವದಿದಾವ ನೀತಿ
ಮುಳಿಯದಾಲಯಕೆ ಬಂದು ಅನುದಿನದಿ ವಿಷಯಸುಖ
ಕೆಳಿಸು ಸುಪ್ರೇಮದಿಂ ಸುಜನರಹುದೆಂಬುವರು
ತಿಳಿ ನಿನ್ನ ಮನದಿ ಕ್ಷಿಪ್ರದಲಿ ಬಾರೆಂದು ತವೆ ಬುದ್ಧಿಗಲಿಸಿದಳು ಸುತಗೆ ||೧೭||

ಎಷ್ಟು ವಿಧದಿಂ ಕರೆದರವ ಪೋಗದಿರಲಾಗ
ಸೃಷ್ಟಿಯಂ ಪೊರೆವ ಪರಮಾತ್ಮನಾ ಚುಂಚಲೆಯು
ಕಷ್ಟಕ್ಕೆ ಮೆಚ್ಚಿ ಚರರೂಪಮಂ ಧರಿಸಿ ಸಂತುಷ್ಟದಿಂದೈತರುತಲಿ
ಇಷ್ಟು ಛಲವ್ಯಾಕೋ ಪಿತಮಾತೆಯರ ಬಿಟ್ಟು ನಿನ
ಗಿಷ್ಟದೈವತಮುಂಟೆ ಸಾಕು ನಡಿನಡಿ ಜಗದಿ
ದುಷ್ಟನೆಂಬದೆ ಬಿಡರು ಕೇಳಿದ ಸುಜನರೆಲ್ಲ ಜನನಿಯಂ ಮನ್ನಿಸೆಂದ ||೧೮||

ಚರಮೂರ್ತಿ ನುಡಿಗೊಪ್ಪಿ ಪದ್ಮ ಚುಮಲೆಯ ಕೂಡಿ
ವರಜನನಿ ಜನಕ ಮೇಣಾಗ್ರಜರ ಮೇಳೈಸಿ
ತೆರಳಿದನು ಜಾಗ್ರತಾಪುರಿಗೆ ಜವದಿಂದ ಶೋಭೆಯಿನ್ನೆಂತೊರೆಯಲಿ
ಸರಸದಿಂದಾಲಯವ ಪೊಕ್ಕು ಕೆಲಕಾಲ ಬಾ
ಳಿರಲಾಗಲಾ ಚುಮಲೆ ಗರ್ಭವತಿಯಾಗಿ
ಸುರಚಿರ ಬಾಲನಂ ಶುಭಮುಹೂರ್ತದಿಳ್ಪಡೆದು ರೇವಣನೆಂಬ ನಾಮವನ್ನು ||೧೯||

ಪದುಳದಿಂದಿಟ್ಟು ಬಾಳುತ್ತಿರಲೈಲ ದಿನಕೆ
ಸುದತಿಯಾ ಚುಮಲೆ ಮತ್ತೊಂದು ಪೆಣ್ಗೂಸಿನಂ ಪ
ಡೆದು ಪುತ್ರಪುತ್ರಿಯರ ಪಾಲಿಸುತೆ ಪ್ರಾಪಂಚಗೈದು ವರ್ತಿಸುತ ನಿತ್ಯ
ಸದಮಲಜ್ಞಾನಿ ಪದ್ಮನ ಸೇವೆಯೋಳ್ಸಂದು
ಮದನಾರಿ ಭಕ್ತಿಯಂಗೈದನಾರತ ಸುಖದೊ
ಳೊದಗಿರುತ ಸಿದ್ಧಗುರುವರನನಂಘ್ರಿಯುಗ್ಮಮಂ ಬಿಡದೆ ಭಜಿಸುತಲಿರ್ದಳು ||೨೦||

ಆಗಲಾ ಗುರುಸಿದ್ಧ ರೇವಣಾಚಾರ್ಯ ತಾಂ
ಸಾಗಿ ಪದ್ಮನ ಬಳಿಗೆ ಬಂದು ಪೇಳಿದನೆಲವೋ
ಈಗಲೀ ಲೌಕೀಕದ ವಿಷಯದಾಪೇಕ್ಷೆಯಂ ಬಿಟ್ಟು ಕೈಲಾಸಪುರಕೆ
ಬೇಗದಿಂದ ನಡೆ ಶಿವಮಲ್ಲಭನನುಜ್ಞೆ ನಿನ
ಗಾಗಿಹುದು ಪುಸಿಯಲ್ಲವೆನಲು ನುಡಿಗಳು ಕೇಳಿ
ರಾಗದಿಂ ಶಿವಪದ್ಮಸಿದ್ಧನಂ ನೆನಿಸುತ್ತ ನಿಂತು ತಾಂಡವನಾಡಿದ ||೨೧||

ಗುರುವರನ ಪಾದಕ್ಕೆರಗಿ ತ್ವರಿದಿಂದ ಕೈಲಾಸ
ಪುರಕೆ ಪದುಳದಿ ಪೋಗಿ ಕಾತ್ಯಾಯನೀಧವನ
ವರಪಾದ ಸರೋಜಯುಗ್ಮಂಗಳಿಗೆ ನಮಿಸಿ ಪರಿಶುದ್ಧದಿಂ ಭಜಿಸಲಾಗ
ಪುರಹರನು ಶಿರವ ಪಿಡಿದೆತ್ತಿ ಮುಗುಳೆಂದನೆಲೊ
ಧರಣಿಯೊಳ್ಜಾಬಾಲ ಮುನಿಪನ ರುಧಿರದೊಳವ
ತರಿಸಿದ ಕುರಿಗಳನ್ನು ಪೊರೆದು ಬಂಕಾಪುರವ ಪೊಕ್ಕು ನೀಂ ಧೈರ್ಯದಿಂದ ||೨೨||

ಕೊಂದು ದನುಜೆಯಳ ಬಿರಿದಂಗಳಂಗೈದು ಮುದ
ದಿಂದ ಚುಮಲಾದೇವಿಯಳ ಸೆರೆಯಂ ಬಿಡಿಸಿ ನಿಜ
ಮಂದಿರಕೆ ತಂದು ಪಾಣಗ್ರಹಗೈದು ಪ್ರಖ್ಯಾತಿ ಹೊಂದಿದೀ ಜಗದೊಳು
ಕಂದ ಕೇಳೆಲೋ ನಿನ್ನ ಮಹಿಮಕ್ಕೆ ಬೆಲೆಯಿಲ್ಲ
ವೆಂದು ಶಿವಪದ್ಮನಂ ಶಿವನು ಪಿಡಿದೆತ್ತಿ ಆ
ನಂದಗೊಂಡನು ಮನದಿ ಮಹಿಮೆಗಳ ವರ್ಮಿಸುತ ಪೇಳಲಚ್ಚರಿಯಾದುದು ||೨೩||

ಕೃತ್ತಿವಾಸನು ಪೇಳ್ದನೆಲೋ ಪದ್ಮನೀಂ ಮರಳಿ
ಉತ್ತಮವೆನಿಪ ಚಂದ್ರಗಿರಿ ಮಹಾಪುರವ ಝಸ
ವೆತ್ತು ಪರಿಪಾಲಿಪನಿಲಂಕಾರ ನೃಪನಸುತ ಬರ್ಮದೇವನ ಸತಿಯೊಳು
ಚಿತ್ತಜನರೂಪಮಂ ತಳೆದುದ್ಭವಿಸಿ ನಿನ್ನ
ಉತ್ತುಂಗ ಮಹಿಮೆಗಳ ಭೂಮಂಡಲದಿ ತೋರಿ
ಸುತ್ತಿತ್ತಬರುವದೆಂದೊರೆಯಲ್ಕೆ ಪದ್ಮನದಕೊಪ್ಪಿ ಸ್ವಗ್ರಾಮಕಿಳಿದ ||೨೪||

ಈಗುಸುರ್ವೆನೊಂದು ದಿನ ಪುಷ್ಪದತ್ತಂ ಘನ
ಸಾಗರದಿಂ ಶಿವಪೂಜೆಗೈದು ಕೃತಕೃತ್ಯತಾ
ನಾಗಬೇಕೆಂದು ಮನವಿಡಿದು ಪುಷ್ಪವ ತರುವದಕ್ಕೆ ಕಾಸಾರದೊಳಗೆ
ಪೋಗಿ ಸಾಸಿರದಳದ ಕಮಲಮಂ ನೋಡ್ದು ಮ
ತ್ತಾಗದಂ ಯತ್ತಲೊಂದೊಂದುದ್ಭವಿಸಲು ಬಹು
ಬೇಗದಿಂದಾ ಪುಷ್ಪ ತಂದು ಶಂಕರನ ಶಿರದೊಳು ಧರಿಸಿ ಪೂಜಿಸಿದನು ||೨೫||

ಬಳಿಕ ಹರಿ ಶಿವಪೂಜೆಗೈಯಬೇಕೆಂದು ಪ್ರ
ಜ್ವಲಿಪ ಶಂಕರನ ಶಿರದೊಳಗಿರ್ಪ ಪುಷ್ಪಾಳಿಗನೂ
ಕಲವು ಹರನ ಪಾದದೋಳ್ಬೀಳಲಾಕ್ಷಣದಿ ಶ್ರೀ ಗೌರೀಶನು
ನಳಿನಗಳ ಕೊಂಡು ಜಂಗಮ್ಮಾಡಿ ಧರಿಸಿ ನಿ
ರ್ಮಳ ಮನದಿ ಪೇಳ್ದನೆಲೋ ಕೃಷ್ಣ ನಿನ್ನಗೆ ದೋಷ
ನೆಲೆಯಾಯ್ತು ಬಿಡದೆಂದು ಕಣ್ದೆರೆದು ಘರ್ಜಿಸಿದನೇನೆಂಬೆನದ್ಭುತವನು ||೨೬||

ಸರಸಿಜಾಕ್ಷನು ತರತರನೆ ನಡುಗುತ ದೋಷ
ಪರಿಹರಿಪುದೆಂದು ನಯಭಯಭರಿತ ಭಕ್ತಿಯಿಂ
ಸ್ಮರಣೆಗೈಯಲ್ಕೆ ಶಿವಮೆಚ್ಚಿ ಸಂತೋಷ ಕಳೆ ಧರಿಸಿ ಮುಗುಳ್ನಗೆ ಬೀರುತ
ಭರದಿಂದೆ ಪೇಳಿದನು ಕಪ್ಪೆಕಲಕದ ಜಲ ಭ್ರ
ಮರ ಮುಟ್ಟದಿಹ ಪುಷ್ಪ ತಂದೆನ್ನಂ ಪೂಜಿಸಲ್
ದುರಿತ ಪೋಗುವದೆನಲ್ಕವುಗಳಂ ತರುವದಕೆ ಕಾಸೀ ಪಥ ಪಿಡಿದನು ||೨೭||

ಭಾರ್ಗಾ ನಾನು ಬರುವವರಿಗೆ ಪೂಜಿಸುವದ
ಕ್ಕಾರ್ಗೊರೆಯಲಾರನಂ ನೇಮಿಸಲಿನುತ್ತಲಿವು
ಸುರ್ಗರೆಂದು ಹರಿಯು ತಾನಾಲೋಚಿಸುವ ಸಮಯದೊಳು ಬರ್ಮನತಿ ಭರದೊಳು
ಮಾರ್ಗದೋಳೈತಿರುತಿರಲ್ಕವನ ಕಾಣಿತ್ತ
ಲರ್ಗಳಂ ತರುವದಂ ನಿಲಿಸಿ ಪೆಸರೇನು ಪುರ
ದುರ್ಗಮಾವುದು ಎನಗೆ ಪೇಳೆಂದು ಕೇಳಲವ ನಸುನಗೆಯೊಳಿಂತೆಂದನು ||೨೮||

ವರಚಂದ್ರಗಿರಿ ಪುರಕ್ಕರಸು ತೀರಾವತಿಯ
ಪುರಕೆ ದೇಸಾಯಿ ಬ್ರಹ್ಮಾವತಿಗೆ ಗೌಡ ಬಂ
ಧುರನಿಲಂಕಾರನಾತ್ಮಜ ಬರ್ಮದೇವನಾಂ ನೀನಾರು ಪೇಳೆಂದನು
ಧರಣೀಶ ಕೇಳ್ನಾನು ಕೃಷ್ಣ ಕಾಶಿಪುರಕೆ
ಭರದಿ ಪೋಗುವೆನೀಗ ಮರಳಿ ಬರುವನಕ ಶಂ
ಕರನಂ ಪೂಜಿಸು ನಿನಗಿಷ್ಟಾರ್ಥ ಕೊಡುವೆ ಪುಸಿಯೆಣಿಸಬೇಡೆಂದ ಮನದಿ ||೨೯||

ನಿನ್ನಯ ಸಹೋದರಿ ಸುರಾವತಿಯನಿಪಳನ್ನು
ಎನ್ನಗಿತ್ತತತಿಶಯ ಪ್ರೀತಿಯಿಂ ಪರಿಣಯವ
ಚನ್ನಾಗಿಗೈದಾಡಂ ನೀಂ ಬರುವವರೆಗೆ ಶಿವಪೂಜೆ ಮಾಡುವೆನೆಂದನು
ಪನ್ನಗಶಯನು ಅದಕೊಪ್ಪುತ ಸುರಾವತಿಯ
ಳನ್ನೀಯುವೆನೆಂದು ಬರ್ಮೇಶನಂ ಕರೆದು ಕೊಂ
ಡುನ್ನುತ ಪ್ರೇಮದಿಂ ವೈಕುಂಠಪುರಿಗೆ ಹಿಂದಿರುಗಿ ಕರದೊಯ್ದ ಭರದಿ ||೩೦||

ನುಡಿದಂತೆ ಕೃಷ್ಣ ತನ್ನಯ ಸಹೋದರಿಯ ಕರ
ವಿಡಿಸುತ್ತ ಪರಿಣಯವಗೈಸಿ ಕಡುಭರದಿಂದ
ನಡೆದ ಶ್ರೀ ವಾರಣಾಸಿಗೆ ಪುಷ್ಪ ತರುವದಕ್ಕಿತ್ತಲಾ ಬರ್ಮದೇವಂ
ಮಡದಿಯಮ್ಮನ್ನಿಸಿ ಶಿವಾರ್ಚನೆಗೆ ಪೋಪೆನೆಂ
ದಡಿ ಮುಂದಕಿಡುತ ಸಾಗಿದನು ಕಾಸಾರಕ್ಕೆ
ಮೃಡನ ಮನದೊಳು ಸ್ಮರಿಸಿ ತರತರದ ಪುಷ್ಪಗಳನೆತ್ತಿಕೊಂಡನು ಮುದದೊಳು ||೩೧||

ರಜತಾದ್ರಿಯೊಳ್ಮೆರೆವ ಶಿವಸಭೆಗೆ ಪೋಗಿ ತವೆ
ಭಜಿಸಿ ಬಿಲ್ವಾದಿ ಕೆಲವು ಪುಷ್ಪಗಳ ಧರಿಸುತಲಿ
ನಿಜಭಕ್ತಿಯಿಂದ ಪೂಜಿಸಲು ಪರಮೇಶ್ವರಂ ಮೆಚ್ಚಿ ನೀನಾರೆಂದನು
ತ್ರಿಜಗಪಾಲನೇ ಚಂದ್ರಗಿರಿಪುರದ ನೃಪನಾದ
ವಿಜಯಪೂರಿತನಿಲಂಕಾರನ ಕುಮಾರ ಸರ
ಸಿಜಜಾಂಡದೊಳಗೆನಗೆ ಬರ್ಮಭೂಪಾಲನೆಂದೆನ್ನನು ಕರೆವರೆಂದ ||೩೨||

ಬರ್ಮದೇವನೆ ನಿನ್ನ ಪೂಜಕ್ಕೆ ಮೆಚ್ಚಿ ದು
ಷ್ಕರ್ಮಮಂ ಕಳೆದ ನೀನನುದಿನದೊಳಿದರಂತೆ
ದುರ್ಮದವನಳಿದು ಪೂಜಿಪುದೆಂದು ಪೇಳುತಲಿ ದ್ವಾರಪಾಲಕರಂ ಕರೆದನು
ಮರ್ಮದಿಂದೊರೆದ ಹರಿಬಂದರವನಂ ಬಿಡದೆ
ಬರ್ಮನಂ ಬಿಡುವುದೆಂದಾಜ್ಞಾಪಿಸಲ್ಕೆ ಚಾ
ರರ್ಮುನಿಯದೊಪ್ಪಿ ಕಡೆದ್ವಾರಕ್ಕೆ ಬಂದೊಡೆ ಯಡಬಲಕ್ಕೆ ನಿಂತರು ಹರುಷದಿ ||೩೩||

ಅಕಳಂಕ ಭಕ್ತಿಯಿಂ ಬರ್ಮಭೂಪಂ ಬಿಡದೆ
ಮಕರಕೇತನ ಭಂಗನಂ ಪೂಜಿಸುತ್ತ ಸುರ
ನಿಕರದೋಳ್ಮೆರೆದಿದ್ದ ಕಾಶಿನಗರದಿಂದೆ ಹರಿಯು ಪೂಜೆಲವಕೊಂಡು
ಶುಕನಾರದಾದಿ ಮುನಿನುತ ಶಂಕರನ ಕಾಂಬು
ದಕೆ ದ್ವಾರದೆಡೆಗೆ ಪೋಗಲ್ಕೆ ಚಾರರ್ತಡಿಯ
ಲಿಕೆ ಹರಿಯು ಕೋಪದಿಂದೆನ್ನನೇತಕೆ ತಡದಿರೆಂದು ಕೇಳಿದನವರಿಗೆ ||೩೪||

ಮೃಡನು ಬರ್ಮನ ಪೂಜೆಗೊಲಿದು ನಿನ್ನನ್ನೊಳಗೆ
ಬಿಡುಬೇವೆಂದೆಮ್ಮಗಪ್ಪಣೆಯನಿತ್ತಿರುವ
ನಡಿಹಿಂದಕೆಂದು ಚಾರರ್ನುಡಿಯಲಾಗ ಮಧುಸೂದನಂ ಮರುಗಿ ಮನದಿ
ಕಡುದೈನ್ಯದಿಂದವರನಂ ಸಮ್ಮತಿಸಿ ಜಗದೀಶ
ನೆಡೆಗೆ ಭರದಿಂ ಪೋಗಿ ಭಯಭರಿತ ಭಕ್ತಿಯಿಂ
ದಡಿಗಳ್ಗೆರಗಿ ಜಲವನಭಿಷೇಕಗೈದು ತಂದ ಪೂಗಳಂ ಧರಿಸಿ ಪೂಜಿಸಿದನು ||೩೫||

ಪುಲ್ಲಾಕ್ಷ ಮರಳಿ ಶಂಕರಗೆ ಪೇಳಿದ ಪುತ್ರ
ನಿಲ್ಲದವನಂ ಪೂಜೆಗೊಂಬುವುದು ಯೋಗ್ಯಮೆಂ
ದೆಲ್ಲ ನೀನರಿದರಿಯದಂತೆ ಈ ಬರ್ಮನರ್ಚನೆಗೆ ಮನಗೊಟ್ಟೆ ಬರಿದೆ
ಇಲ್ಲಿಗೆನ್ನಂಬಾರದಂತೆ ಮಾಡಿದ ಪರಿಯ
ನುಲ್ಲಾಸದಿಂ ಪೇಳಿ ದೋಷಗುಣಗಳನಲಿದು
ನಿಲ್ಲದೆನ್ನಂ ರಕ್ಷಿಸೆಂದು ಸರಸೋಕ್ತಿಯಿಂ ಸಧ್ಯಾನಗೈದೆನೆಂದು ||೩೬||

ದೇವದೇವನು ಹರಿಯ ದೋಷಗಳ ಕಳೆದು ಸ
ದ್ಭಾವದಿಂ ಕಳಿಸಲಿತ್ತಾ ಬರ್ಮನೈತಂದು
ಭಾವಜಾಂತಕನ ಪೂಜೆಯ ಮಾಡಲನಿತರೊಳ್ ಕಣ್ದೆರೆದು ಜಗದೀಶನು
ಸಾವಧಾನದಿ ಪೇಳ್ದನೆಲೊ ನಿನ್ನಗತಿಗೆ ಸುಖ
ಮೀಮ ಸುತನಿಲ್ಲೆಂದು ಅಜಪಿತಂ ಸೂಚಿಸಿದ
ನೀ ವಿಧದಿ ನೀ ಪೂಜಿಸುವದು ಯೋಗ್ಯವು ಸಾಕುಸಾಗೆಂದ ನಿನ್ನಪುರಕೆ ||೩೭||

ಆ ವಚನ ಕೇಳಲಾ ಬರ್ಮ ಶಂಕರಗೆ ಶಿರ
ಸಾವಹಿಸಿ ಸಾಷ್ಟಾಂಗವೆರಗಿ ತನ್ನಯ ಪುರಿಗೆ
ಸಾವಕಾಶದಿ ಪೋಗಿ ದುಗುಡ ಮಾನಸನಾಗಿರಲ್ಕೆ ಸತಿಕಂಡು ಭರದಿ
ಪ್ರಾಣೇಶ ನಿನ್ನ ಶಶಿಮೊಗವು ಕುಂದಿದಕಾರ‍್ಯ
ವಾವುದೆನ್ನಗೆ ಪದುಳವೆರಸಿ ಪೇಳುವದೀಗ
ಕೋವಿದನೆ ಕಳವಳ ಕಳಿಯಂದು ಕಡುದೈನ್ಯಳಾಗಿ ಕರವಂ ಮುಗಿದಳು ||೩೮||

ಜಾಣೆ ಕೇಳ್ನಿನ್ನಣ್ಣನಾದ ದನುಜಾಂತಕಂ
ಸ್ಥಾಣಿವಿನ ಬಳಿಗೆ ಬಿಜಯಂಗೈದು ತನ್ನ ಮನ
ಕೇಣದಿಂ ಪುತ್ರನಿಲ್ಲದ ಪಾಪಿಯಾದ ಬರ್ಮನು ಬಂದು ನಿನ್ನ ಪಾದವ
ಮಾಣದೆ ಸದಾಪೂಜೆಗೈದು ಪೋಗುವನು ಗೀ
ರ್ವಾಣಪತಿನತಪದನೆ ಮುಂದೆವನನೀಸುರ
ಶ್ರೇಣಿಯೋಳ್ಬಿಡಬಾರದೆಂದು ಕಾಪಟ್ಯದಿಂ ಪೇಳಿರುವ ಪರಿಪರಿಯೊಳು ||೩೯||

ಕಾಂತನಾಡಿದ ನುಡಿಗಳಾಲಿಸಲ್ಕಾಸತಿ ನಿ
ಜಾಂತರಂಗದಿ ಮರುಗಿ ತನ್ನಯ ಸಹೋದರಿಯ
ತಾಂ ತಿಳಿಯದೀಪರಿಯೊಳೆನ್ನನ್ನಂ ಬಂಜೆಯೆಂದಭವನೋಳ್ಪೇಳ್ದನೇಕೆ
ಸ್ವಾಂತಸುಖವಂ ತೊರೆದು ಏಕಾಂಗಿಯಾಗಿ ಗಿರಿ
ಕಾಂತರ ಸೇರಲೇ ಪ್ರಿಯನ ಮೇಲಣ ಮೋಹ
ಭ್ರಾಂತಿಯಂ ತ್ಯಜಿಸಿ ಶಿವನಂ ಭಜಿಸಿ ಪುತ್ರನಂ ಬೇಡಲೇ ಮಾಡಲೇನು ||೪೦||

ಎಂದು ಗದ್ಗದ ಕಂಠೆಯಾಗಿ ಹರಿಯಂ ಜರಿದು
ಕಂದಿದಾನನದಿ ಮುಂದಡಿಯಿಡುತ್ತತಿ ಭರದಿ
ಬಂದಳೀಶನ ಸಭೆಗೆ ನಿಡುಕೇಶ ಜೋಲಾಗಿ ಬಿಟ್ಟು ಕರಕಮಲ ಮುಗಿದು
ಇಂದುಧರನವಳನೀಕ್ಷಿಸಿ ಸುರಾವತಿಯೇ ನೀಂ
ಬಂದ ಕಜ್ಜಮದೇನು ಪುಸಿಯದೆ ಉಸುರವುದೀಗ
ಸಂದೇಹ ಬಿಡು ಸಮಾಧಾನಗೊಳಿಸುವನೆಂದು ಮಂದಸ್ಮಿತದಿ ಕೂಡ್ದನು ||೪೧||

ಚಿತ್ತೈಸು ದೇವ ಮಮಕಾತ ನಿನ್ನಂ ಪೂಜಿ
ಸುತ್ತಿರುವದಿಂ ಕಾಣೆ ತನ್ನಣ್ಣನಾದ ಪುರು
ಷೊತ್ತಮಂ ಕಪಟದಿಂ ಬಂಜೆಯಂದೆನಗೆ ನಿಂದಿಸಿ ನುಡಿದು ನಕ್ಕನಂತೆ
ಕೃತ್ತಿವಾಸನೆ ಪುತ್ರನಂ ಎನಗೆ ಸತ್ವರದೊ
ಳಿತ್ತು ರಕ್ಷಿಪುದೆಂದು ವಿಧವಿಧದಿ ಸ್ತೋತ್ರಗೈ
ಯುತ್ತ ನಿಂತಿರಲಭವನಂತಃಕರುಣದಿಂದೆ ಪೇಳುವದಕನುವಾದನು ||೪೨||

ನೀಲಕುಂತಳಿಯೆ ಮಾರ್ಘಳಿಗೆ ನಿಲ್ಲುವದೆಂದು
ನೀಲಲೋಹಿತ ಪೇಳಿ ನಿರ್ಮಲಮನಸಿನಿಂದ
ಮೂಲಪ್ರಣಮಮಾದ ಪಂಚಾಕ್ಷರಂಗಳಂ ಜಪಿಸಲ್ಕೆ ತಕ್ಷಣದಲಿ
ಫಾಲದೋಲ್ಬೆವರೊಗೆಯಲಾಗದಂತೆಗದು ಸುಖ
ಲೀಲೆಯಿಂದಾ ಸುರಾವತಿಯಳಂ ಕರೆದು ಭಯ
ಜಾಲಮಂ ಕಳೆದವಳಿಗೀಯಲ್ಕೆರದಿಕೊಂಡು ಹರುಷದಿಂ ಸೇವಿಸಿದಳು ||೪೩||

ಹಸ್ತಿಚರ್ಮಾಂಬರಮಂ ಬಳಿಕ ಸುತೆಯಂ ಕರೆದು
ಮಸ್ತಕದ ಮೇಲೆ ಕಡುಮೋಹದಿಂ ತನ್ನಮೃತ
ಹಸ್ತಮಂಯಿಟ್ಟು ಭಸಿತಮಂ ಕೊಟ್ಟು ಪುತ್ರವತಿಯಾಗಿ ಬಾಳೆಂದರಸುತ
ವಿಸ್ತಾರದಿಂದವಳಿಗಾನಂದಮಪ್ಪಂತೆ
ವಿಸ್ತರಿಸಿ ಹೊನ್ನುಹೊಕ್ಕಳ ಸುವರ್ನದ ಜಡೆಗೆ
ಭಸ್ತಿಯಲಿ ಉಡುಪನಂ ಧಿಕ್ಕರಿಪ ಬಾಲನುದ್ಭವಿಸುವನು ನಿನ್ನುದರದಿ ||೪೪||

ಜಾತಂಗೆ ನರರ ಭಯಮಿಲ್ಲ ಸಟೆಯಿಲ್ಲ ತಿಳಿ
ಭೂತಲದಿ ಮಹಿಮೆಗಳ ತೋರಿ ಮೆರೆವನು ಮುಂದೆ
ಆತಂಗೆ ಶಿವಸಿದ್ಧ ಬೀರನೆಂಬಭಿದಾನವಿಟ್ಟು ಪರಿಪಾಲಿಸೆಂದಾ
ಭೂತೇಶ ಪೇಳಿಕಳಿಸಲು ಸುರಾವತಿಯಳತಿ
ಪ್ರೀತಿಯಿಂದೈ ತಂದು ಪುರುಷಂಗೆ ಶಿವನೊರೆದ
ಮಾತುಗಳ ತಿಳಿಸಲಾ ಬರ್ಮಭೂಪಂ ಘನಾನಂದದೋಳ್ಮಗ್ನನಾದಂ ||೪೫||