ಸಿದ್ಧಬೀರಂ ತ್ವರದೊಳೆದ್ದು ತನ್ನಕ್ಕಂಗೆ
ಶುದ್ಧಮನದಿಂ ಮೀಸಿ ತಿದ್ದಿ ಕಟ್ಟಿದಕಾಸಿ
ಬುದ್ಧಿಶೂನ್ಯನ ಸೆರೆಯೊಳಿರ್ದ ಕನ್ನಿಕೆಯನ್ನು ಗೆದ್ದು ತರುವೆನು ತವಕದಿ
ಯುದ್ಧಪರಿಮುಖದೊಳವರಿರ್ದ ನಿಜವಂನರಿತು
ವೃದ್ಧರಾಕ್ಷಸರ ನಾನೊದ್ದು ಬರ್ಪೇಂ ಯಿದು ನಿ
ಬದ್ಧವೆಂದರಿಯಂನನುದ್ಧರಿಪ ಬಿಡದೆ ಗುರುಸಿದ್ಧ ರೇವಣನೆಂದನು ||೩೬||

ತಮ್ಮಂಗೆ ಕೈ ಮುಗಿದು ಬೇಡೆಂದು ಪೇಳಲ
ಕ್ಕಮ್ಮನ ನುಡಿಗೆ ಮನಗೊಡದೆ ತವೆ ತನ್ನಾತ್ಮ
ಸಮ್ಮತೆಯೊಳಾಯುಧವಕೊಂಡು ಬಿಲ್ಲಂ ಪಿಡಿದು ಯುದ್ಧಕ್ಕೆ ಸಿದ್ಧನಾಗಿ
ದುಮ್ಮಾನಗೊಳದೆ ವೈಕುಂಠಕ್ಕೆ ಪೋಗಿ ಸೊಬ
ಗಿಮ್ಮೆರೆವುತತ್ಪುರವನೀಕ್ಷಿಸುತ್ತೊಡಲೊಳಗೆ
ಉಮ್ಮಳಿಸಿದಲೆ ರಾಜಬೀದಿಯಂ ಪಿಡಿದುವಳಪೊಕ್ಕನತಿ ತವಕದಿಂದೆ ||೩೭||

ಬರುಬರುತ್ತಾತ್ಮದೊಳು ಪರಮಾತ್ಮನಂ ಸ್ಮರಿಸಿ
ಗುರುಸಿದ್ಧ ರೇವಣನಂ ನೆನೆದು ಶಸ್ತ್ರಾಸ್ತ್ರಮಂ
ತ್ವರದಿಂದೆ ತೆಗೆದೊಂದು ಸ್ಥಲದಿರಿಸಿ ಬಳಿಕ ಬಳೆಗಾರ ವೇಷವನು ತಾಳಿ
ನೆರೆವೃದ್ಧನಾಗಿ ನಡುವೀಧಿಯೋಳ್ತರತರದಿ
ಮೆರೆವ ಬಳೆಗಳನೊಟ್ಟು ಮಾರುತಿರೆ ದಾದಿಯರು
ಸರಸದಿಂ ನೋಡಿ ಮನೆಗೈತಂದು ಕನ್ನಿಕಾಮಾಲೆಗೊರೆದರು ಮೋಹದಿ ||೩೮||

ಆ ಕನ್ನಿಕಾಮಾಲಿ ದಾಸಿಯೋರ್ವಳನು ಕರೆ
ದಾಕೆಗೊರೆದಳು ಬಳೆಯು ಬಂದ ಸಂಗತಿಯಂ ವಿ
ವೇಕಾನಾದೆನ್ನ ಜನಕಗೆ ಪೇಳಿ ಕರಕೊಂಡು ಬಾರೆಂದು ಕಳುಹಿಸಿದಳು
ಏಕಕಾಲಕೆ ಪೋಗಿ ಹರಿಗೆ ತಿಳಿಸಲ್ಕಾತ
ಸಾಕಾರದಿಂದೆ ಬಳೆಗಾರನಂ ಕರೆಸುತವ
ನಾಕಾರಮಂ ನೋಡಿ ವೃದ್ಧನೆಂದರಿದು ನಿಜಮಂದಿರವನೊಳಪೊಗಿಸಿದಂ ||೩೯||

ಕೋಲು ಕರದಲಿ ಪಿಡಿದು ಬಳೆ ಪೆಗಲ ಮೇಲ್ವೊತ್ತು
ಕಾಲೋರೆಯಿಡುತಕಂಪಾಯದಿಂ ಹರಿರಾಯ
ನಾಲಯವ ಪೊಕ್ಕು ವರಸುಂದರಿ ಸುಕನ್ನಿಕಾಮಾಲಿ ಸನ್ನಿಧಿಗೆ ಬಂದು
ಮೇಲೆಸೆವ ಮಣಿಮಯದ ಮಂಚದೊಳ್ಕೂತಿರ್ದ
ಶೀಲೆ ಸಂಪನ್ನೆಯಂ ಕಂಡು ಬೆರಗಾಗಿ ಸ
ಲ್ಲೀಲೆಯಿಂ ವಾರ್ಧಿಕ್ಯ ಲಕ್ಷಣಗಳಂ ಮಾಜಿ ತನ್ನ ನಿಜಕಳೆದೋರ್ದನು ||೪೦||

ಅಂಚತಲ್ಪಕ ಸಿದ್ಧಗೊಳಿಸಿ ಮಣಿ ಕೆತ್ತಿಸಿದ
ಮಂಚೋಳ್ಕಡು ಸೊಬಗಿನಿಂದ ಕೂತಿರ್ದವರ
ಚಂಚಲಾಕ್ಷಿಯ ಸುಂದರಾಸ್ಯ ಸುಲಿಪಲ್ಲಾಲದುಟಿ ಕನ್ನಡಿಗಳ ತೆರದಿ
ಮಿಂಚಿಡಿದ ಕದಪುನಳಿದೋಳ್ಗಳಂ ನೆರೆನೋಡಿ
ಪಂಚಶರತಾಪವೆಗ್ಗಳಿಸಿ ವ್ಯಥೆಗೊಂಡೀ ಪ್ರ
ಪಂಚ ಸುಡುಸುಡುಲಿವಳನೊಯ್ಯದೀ ಪೃಥ್ವಿಯೊಳಗಿದ್ದೇನು ಫಲವೆಂದನು ||೪೧||

ಬಟ್ಟಮುಖ ನಿಡುಯಸಳ್ಗಣ್ಣು ಬಲಗಾತ್ರ ಬರ
ದಿಟ್ಟ ಸುಂದರರೂಪ ಕಂಡು ಮರುಳಾಗಿವನ
ಬಿಟ್ಟನೊಳಗೆಂತು ಹರಿ ತಿಳಿಯದಿವನಂ ಬ್ರಹ್ಮನೆಷ್ಟು ದಿನತಿದ್ದಿಳೆಯೊಳು
ಪುಟ್ಟಿಸಿದನೋ ಮಹಾಮಹಿಮನಂತೆಸೆವನೆಂ
ದಟ್ಟಹಾಸದಿ ಕರವ ಚಾಚಿ ನಾಚಿಕೆಯಿಂದ
ಕೊಟ್ಟಳಾತನ ಕೈಗೆ ಸೂಕ್ಷ್ಮದಿಂದಾತ ಬಳೆಯಿಡುತ ಯೋಚಿಸಿದ ಮುದದಿ ||೪೨||

ಪುಲ್ಲನೇತ್ರಿಯೆ ನಿನ್ನಗಿದು ತವರ್ಮನೆಯೋ ಮೇ
ಣೊಲ್ಲಭನ ಮನೆಯೋ ಮತ್ತೀಖಳರ ಕಾ
ವಲಿಯೊಳಿಟ್ಟರೇಕೆನಗೆ ವಿಸ್ತರಿಸಬೇಕೆಂದು ವಿನಯದಿಂ ಕೇಳಲವಳು
ನಲ್ಲನಿದುವರಿಗೆನ್ನಗಿಲ್ಲ ಮಾವನಮನೆಯಿ
ದಲ್ಲ ಜನಕನ ಮನೆಯಿಲ್ಲಿರ್ಪೆ ಸಾಕುಸಾ
ಕೆಲ್ಲಿ ಪತಿಯಲ್ಲಿ ರತಿಯಲ್ಲಿ ಗತಿಯಲ್ಲಿ ಜತೆ ದುರ್ದೈವಿಗೆ ||೪೩||

ಇಂದುಗಿರಿಪುರದ ಬರ‍್ಮನ ಸತಿ ಸುರಾವತಿಯ
ನಂದನೆನಿಪ ಸಿದ್ಧಬೀರೇಶಂನಿಲ್ಲಿಗೈ
ತಂದೆನ್ನ ನೊಯ್ವನೆಂದು ಈ ವಿಧದಿ ಪನ್ನೆರಡು ಸಾಸಿರ ಖಳರ ಮಧ್ಯದಿ
ತಂದೆಯು ಈ ಬಂಧನಗೈದು ನಿಲ್ಲಿಸಿದ ಆ
ಸುಂದರನು ಬಂದೆನ್ನ ತನ್ನ ನಿಜ ಮಂದಿರ
ಕ್ಕೆಂದೊಯ್ವನೋ ತಿಳಿಯದೆಂದು ಬಾಷ್ಪೋದಕವ ಸುರಿಸುತ್ತನೊಂದಳಾಗ ||೪೪||

ಕುಂಜರಗಮನೆ ಮೌನದಿಂದೆ ಕೊರಗುವರೆಯಿ
ನ್ನಂಜದಿರು ನಾಂ ಪೋಗಿ ಬೆಳ್ಳಗುತ್ತಿಯೊಳಿರ್ಪ
ಕಂಜಶರರೂಪ ಶಿವಸಿದ್ಧ ಬೀರೇಂದ್ರನಂ ಭರದಿ ಕರೆತರುವೆನೆಂದು
ಮಂಜುಳಾಂಗಿಗೆ ಮಾತುಗೊಟ್ಟು ಮಾಸಿದ ರೂಪ
ದಿಂ ಜವದಿ ಗೃಹಬಿಟ್ಟು ಸ್ವಸ್ಥಲಕೆ ಬಂದು ಮಂತ್ರ
ಮಂ ಜಪಿಸಿ ಭೋಜನವಗೈದು ಮನದೋಳ್ ಮುಂದಿನಾಲೋಚನೆಯ ಮಾಡ್ದನು ||೪೫||

ಮಾರನೆಯ ದಿನದಿ ಚಿಪ್ಪಿಗನಾಗಿ ತರತರದೊ
ಳಾರಾಜಿಸುವ ಕುಪ್ಪಸಗಳನ್ನು ತಕ್ಕೊಂಡು
ಮಾರುತ್ತ ಬೀದಿಯೊಳ್ ವಾಸಿಸಿರಲರಸನಾಲಯದ ದಾಸಿಯರು ನೋಡಿ
ಭೂರಿ ಶೀಘ್ರದಿ ಕನ್ನಿಕಾಮಾಲಿಯಂ ಕಂಡು
ಬೀರಲ್ಕೆ ಮರಳಿತಾತಂಗೆ ತಿಳಿಪುದುಕೋರ್ವ
ನಾರಿಯಂ ಕಳಿಸಿದಳು ಕಂಚುಕದ ಮೇಲಾಶವಿಟ್ಟಂತೆ ಸಂಭ್ರಮದಲಿ ||೪೬||

ದನುಜಾರಿ ವೃದ್ಧ ಚಿಪ್ಪಿಗನಂ ಕರೆಸಿ ಗೃಹಕೆ
ಮಿನುಗುತಿಹ ಕಂಚುಕವ ಕೊಡುವದೆಂದಾಜ್ಞೆಯಂ
ನನುನಯದಿಗಯ್ಯಲವ ಮುಗುಳೆಂದ ಮಾನಿನಿಯ ರಂದಗಳತೆಯನು ನೋಡಿ
ಕನಕಜರದಿಂದೆಸೆವ ಕುಪ್ಪಸವ ಕೊಡುವೆನಂ
ದೆನಲವ ನುಡಿಗೊಪ್ಪಿ ಸುತೆಯ ತಾಣಕೆ ಚಿಪ್ಪಿ
ಗನ ಕಳಿಸಲವ ಮೆಲ್ಲನೊಳ ಪೊಕ್ಕು ನಡೆದ ತನ್ನಾಪೇಕ್ಷೆ ತೀರಿತೆಂದು ||೪೭||

ಬೇಡಿದ ಜರದ ಕುಪ್ಪಸಗಳೀಯ್ಯಲವಳು ಕೊಂ
ಡಾಡಿ ನಿನ್ನಯ ಗ್ರಾಮನಾಮ ತಿಳಿಸೆನಲವಂ
ಗಾಡಿಕೋರರ ಗಂಡ ಬರ್ಮಭೂಪನ ಸತಿ ಸುರಾವತಿಯ ಸತ್ಯಪುತ್ರ
ಮೋಡಿಕಾರರ ಮಿಂಡ ವಿಷ್ಣುವಿನಳಿಯ ಚಂದ್ರ
ಚೂಡನೊರೆಸುತ ಸಿದ್ಧರೇವಣನ ಸಚ್ಛಿಷ್ಠ
ರೂಢಿಯೊಳು ಶಿವಸಿದ್ಧ ಬೀರ ನಿನ್ನಯ ಪ್ರಾಣಪದಕನೇ ನಾನೆಂದನು ||೪೮||

ಹೇ ಕಾಂತ ಮಹಾಬಂಧನದೋಳಿಟ್ಟಿರ್ಪ
ನೇಕಾಂತಸ್ತಲಕೆ ನೀನೈತಂದ ಸಂಗತಿಯ
ಶ್ರೀಕಾಂತ ನೋಡಿದೊಡೆ ಕೊಲ್ಲಿಸದೆ ಬಿಡನೆಂದು ಪೇಳಲವನಿಂತೆಂದನು
ಭೂಕಾಂತರೊಂದಾಗಿ ಬರಲವರನೆಲ್ಲ ಕೊಲ್ಲುವೆನು
ಮಾಕಾಂತನೆನ್ನ ಪರಿಪಾಲಿಸುವನು ನಿನ್ನೊಯ್ಯ
ಬೇಕಂತ ಬಂದಿಹೆನು ನೀ ಸಿದ್ಧಳಾಗು ನಿನ್ನಯವೆಸನ ಕಳಿಯಂದನು ||೪೯||

ಸಿದ್ಧಬೀರನು ಪೇಳ್ದ ನುಡಿಗೇಳಿ ತರುಣೀ ಪ್ರ
ಸಿದ್ಧ ನಿನ್ನಂಬಿಟ್ಟುಯಿರಲೆಂತೆನಲ್ಕವಂ
ಸಿದ್ಧರೇವಣನ ಸದ್ಭಕ್ತಿಯಿಂ ಸ್ಮರಿಸಲಾತಮ್ಮಹಾ ವಿಭವದಿಂದೆ
ಸಿದ್ಧಸುರನಾಗ ಕಿನ್ನರರ ಸಮ್ಮೇಳದಿಂ
ಸಿದ್ಧಾಗಿ ಗುಪ್ತದಿಂ ಬಂದನಂತಃಪುರಕೆ
ಸಿದ್ಧಿಸಿತು ನೆನೆದ ಸತ್ಕಾರ‍್ಯವೆಂದಾ ಬೀರಗುರುವಿನ ಪಾದಕ್ಕೆರಗಿದಂ ||೫೦||

ಪಾದಕೆರಗಿದಾ ಸಿದ್ಧಬೀರನಂ ಪಿಡಿದೆತ್ತಿ
ಪದುಮಾಕ್ಷ ಕನ್ನಿಕಾಮಾಲಿಯಂ ಕರೆದು ಸಂ
ಮುದದೋಳಿರ್ವರಿಗೆ ಸುರಿಗೆಯ ಸುತ್ತಿ ತೈಲಾರ್ಶಿನವ ಪಚ್ಚಿ ಪನ್ನೀರಿನಿಂ
ಸದಮಲ ಸ್ನಾನಮಂಗೈಸಿ ಕಣಕಣಗಟ್ಟಿ
ಮದನಾರಿಯಂ ಸ್ಮರಿಸಿ ಭಸಿತಮಂ ತಳೆದು ಚಂ
ದ್ರದ ಬೊಟ್ಟನಿಟ್ಟು ಮಂಗಲಸೂತ್ರಮಂ ಧರಿಸಿ ಶಾಸಿಯದಳಿಯಿಸಿದ ದಯೆಯೊಳು ||೫೧||

ಎಲೆಮಗನೆ ಪಂಚವರ್ಣದ ಹಯವು ನಿನಗಾಗಿ
ಮಲಹರಂ ನಿನ್ನ ಮಾವನ ಮನೆಗೆ ಕಳಿಸಿರುವೆ
ತಿಳಿ ತೀವ್ರ ನೀಂ ಪೋಗಿ ಯುಕ್ತಿಯಿಂದ ತಕ್ಕೊಂಡು ಕನ್ನಿಕಾಮಾಲಿಯನ್ನು
ಸಲೆಗೂಡಿ ಕರವಿಡಿದು ಸರ್ವರರಿವಂತೆ ಭುಜ
ಬಲದಿಂದ ಕೃಷ್ಣನಂ ಗೆದ್ದು ಪೋಗೆಂದುಸುರಿ
ನಿಲಯಮಂ ಬಿಟ್ಟು ಸಿದ್ಧೇಂದ್ರ ಸುರರನು ಕೂಡಿ ಪೋದ ಭೂಸಂಚಾರಕೆ ||೫೨||

ಮೋಹದಿಂ ಸತಿಗೆ ಮುಂದಿನ ಸೂಚನೆಯಂ ತಿಳಿಸಿ
ರಾಹುತನ ವೇಷಮಂ ಧರಿಸಿ ಪಟುಭರ ಸಂ
ದೋಹದೋಳ್ ಸಿಂಹಾಸನಾರೂಢನಾಗಿ ಕೂತಿರ್ದ ಹರಿಯೆಡೆಗೆ ಬಂದು
ಬಾಹುಯುಗಮಂ ಮುಗಿದು ಕೇಳಿದಂ ಮೀರಿದ ಮ
ಹಾ ಹಯವ ನಾನೇರಬಲ್ಲೆ ಮಲತವರನತಿ
ಸಾಹಸದೊಳಿರಿದು ಕೊಲ್ಲಲ್ಬಲ್ಲೆನದರಿಂದ ತಮ್ಮೊಳಿರ ಬಂದೆನೆನಲು ||೫೩||

ಹರಿಯಿವನ ರೂಪರೇಖಂಗಳ ಕಂಡು ನೀ
ನಿರುಯಮ್ಮೊಳೆಂದಭಯವಿತ್ತು ಚರನಂ ಕರೆದು
ತುರಗಮಂ ತರಿಸಲದು ಸಿದ್ಧಬೀರನಂ ಕಂಡು ಹೇಂಕರಿಸಿ ಪ್ರೇಮದಿಂದೆ
ಖುರಪುಟದಿ ನೆಲಗೆದರುತಡಿಗಡಿಗುಸುರ್ಬಿಡುತ
ಶಿರವನೊನೆಯುತ ಬರಲ್ಕಾತ ಕಡಿವಾಣಮಂ
ಕರದಿ ತಕ್ಕೊಂಡು ಪುಟನೆಗೆದು ಮೇಲೇರಿ ನಡಸಿದ ಸೂರ‍್ಯವೀಧಿಯೊಳಗೆ ||೫೪||

ಅಕ್ಕರದೊಳಿತ್ತತ್ತ ತಿರುಗಿಸತ್ತಂತರಿ
ಕ್ಷಕ್ಕೆ ಹಾರಿಸಿ ಮಹಾಸೌಧಾಗ್ರದೊಳ್ನಿಂದ
ಸೊಕ್ಕು ಜವ್ವನ ಸತಿಯ ಪಿಡಿದೆತ್ತಿ ಮುಂದೆ ಕೂಡ್ರಿಸಿಕೊಂಡು ಹಯವ ನಡಿಸುತ
ಚಕ್ಕನಲ್ಲಿಂದ ಹರಿಯೆಡೆಗೆ ಬಂದೊರೆದ ಸಮ
ರಕ್ಕಿದಿರ್ನಿದವರ ಗಂಡರಿಪುಗಳ ಮಿಂಡ
ದಿಕ್ಕಿನೊಳ್ಬಲ್ಲಿದಂ ಬರ್ಮಭೂಪನ ಸುತಂ ನಾನೊಯ್ವೆ ನಿನ್ನ ಸುತೆಯ ||೫೫||

ಪುಂಡರೀಕಾಕ್ಷ ಕೇಳುತತ್ಯಧಿಕ ಕೋಪದಿಂ
ಪುಂಡಖಳರನು ಕಳಿಸಲವರೋಡಿ ಬಂದೆಲವೋ
ಭಂಡಮನುಜನೆ ಕನ್ನಿಕಾಮಾಲಿಯನು ಕದ್ದುಕೊಂಡು ಪೋಗುವದುಚಿತವೇ
ತೊಂಡೆದುಟಿಯಳ ಬಿಟ್ಟು ಹಯವಿಳಿದು ಬಂದೆಮಗೆ
ಮಂಡೆ ಬಾಗಿದೊಡೆ ನಿನ್ನ ಸೆರೆ ಬಿಟ್ಟು ಪೊರೆವುವೆವು
ಖಂಡಿತದ ನುಡಿಗಳಂ ಮನದೊಳರಿದರಿದು ನೀಂ ಪಾರಾಗೆನಲ್ಬೀರನು ||೫೬||

ರಕ್ಕಸರೆ ನಿಮ್ಮಯ ಮನಕ್ಕೆ ಬಂದಂತೆನಗೆ
ಬಿಕ್ಕಲದ ನುಡಿಗಳಿಂ ಠಕ್ಕಿಸುವದುತ್ತಮವೆ
ಮುಕ್ಕನೊರೆಸುತಂ ಮಿಕ್ಕವರಗಂಜುವನೆ ಸೊಕ್ಕಿದ ಗಜನವನು
ಪೊಕ್ಕಂತೆ ನಾನೀಗ ಲೆಕ್ಕಿಸದೆ ನಿಮ್ಮ ಪ್ರಾ
ಣಕ್ಕತಿ ತವಕದಿಂದೆ ಧಕ್ಕೆ ಮಾಡುವೆನು ಬಿಡೆನು
ಸಿಕ್ಕು ಸಾಯ್ವದಕ್ಕಿಂತ ದಿಕ್ಕಿಲ್ಲ ನಮಗೆಂದುರಕ್ಕರದಿ ಪೊರೆವೆನೆಂದ ||೫೭||

ಕ್ರೂರರಕ್ಕಸರವನ ನುಡಿಗೇಳಿ ತವಕದಿಂ
ಹಾರಿ ಗಗನಕೆ ಬೆನ್ನು ಹತ್ತಿ ಪೋಗಲ್ಕವಂ
ಭೂರಿ ಕೋಪದಿ ಹಯವನೊತ್ತಿ ಅಂತರದಿಂದೆ ಧೈರ್ಯಪರನಾಗಿ ಮುಂದೆ
ಸಾರಿದನವರ ಕರಕೆ ಸಿಗದೆ ಬೆಳ್ಳಿಯಗುತ್ತಿ
ದ್ವಾರಂ ಪೊಕ್ಕು ನಿಜಭವನಕ್ಕೆ ಬರೆ ಖಳರು
ಮೀರಿದ ಮಹಿಮನೆಂದು ತಿರುಗಿದರು ಹಿಂದಕ್ಕೆ ಬಂದರಾ ಕೃಷ್ಣನೆಡೆಗೆ ||೫೮||

ದೇವ ಚಿತ್ತೈಸು ತಮ್ಮಾಜ್ಞೆಯಂತೆ ಕಪಟ
ಬಾವ ಬೀರನಂ ಪಿಡಿಯಬೇಕೆಂದು ಪೋಗಲವ
ತೀವಿದ ಸುಶಕ್ತಿಯಿಂ ಹಯವ ನಡಿಸುತ್ತ ಪಾರಾದನೆಂದೊರೆದರಾಗ
ಕಾವನ ಜನಕ ಮೌನವರಿಸಿ ಮುಂದಿದಕೆ ಮ
ತ್ತಾವಗತಿಯೆಂದು ಮನದಲಿ ಚಿಂತಿಸುತಲಿ ಬಹು
ಸಾವಧಾನದಲಿ ವೈಕುಂಠಪುರಮಂ ಸದಾ ಪರಿಪಾಲಿಸುತಿರ್ದನು ||೫೯||

ಆನಂದದಿಂದಿತ್ತ ಸಿದ್ಧಬೀರಂ ಶಿವನ
ಧ್ಯಾನಮಂಗೈದು ದಿನಗಳಿಯುತ್ತಿರಲ್ಮಹಾ
ದಾನಿ ಹಿರಿಕುರುಬ ಹೇಮಣ್ಣ ಸತಿ ಮೋಹದ ಸುಸೂನು ಮೃತಿಗೊಂಡನಾಗ
ಮೌನದಿಂ ಬೀರೇಶನೆಡೆಗೆ ತರಲಾತ ಗುರು
ಧ್ಯಾನಮಂಗೈದು ಭಸಿತವ ತಳಿಯವನೆದ್ದು
ಸಾನುರಾಗದೊಳಡಿಗೆರಗಲಲ್ಲಿ ನೆರದಿರ್ದ ಜನರು ಕಂಡು ಬೆರಗಾದರು ||೬೦||

ಹಿರಿಕುರುಬ ಹೇಮಣ್ಣ ಭಯಭಕ್ತಿಯಿಂದ ಸ
ಚ್ಛರಿತ್ರನೆಂದೊಂದಿಸುತ್ತಂದನವ ಹಿಂದೋರ್ವ
ತರುಳ ಗೋವಣ್ಣನಂ ಕೊಟ್ಟಿರುವೆನೀಗಲೀ ಮಲ್ಲನಂ ಕೊಡುವೆನೆಂದನು
ಸ್ಥಿರದಿಂದ ಪೇಳಿ ಪಾದಕೆ ಹಾಕಿ ಪೋಗಲ್ಕೆ
ಗುರುಸಿದ್ಧ ಬೀರನವನಂ ತನ್ನ ಸೇವಕ್ಕೆ
ಕರುಣದಿಂದಿರಿಸಿಗೊಂಡಮಿತ ವೈಭವದಿಂದೆ ಪೂಜ್ಯನೆನಿಸಿದ ಮಹಿಮೆಯೊಳು ||೬೧||

ಮತ್ತೋರ್ವ ಕುಡುವಕ್ಕಲಿಗರ ಮುದ್ದಣ್ಣ ತಾ
ಸತ್ತ ಸುಕುಮಾರ ಬುಳ್ಳಯ್ಯನಂ ದುಃಖದಿಂ
ಹೊತ್ತುಕೊಂಡಾ ಸಿದ್ಧಬೀರನೆಲ್ಲಿಗೆ ಬಂದು ಬಾಲನಿಗೆ ಪ್ರಾಣವನ್ನು
ಇತ್ತು ಸಲಹೆಂದು ಮೊರೆಯಿಟ್ಟು ನುತಿಸಲ್ನಿಮಿಷ
ಹೊತ್ತಿನೊಳು ಗುರುವಿನಾಧಾರ ತಳೆದೆಬ್ಬಿಸ
ಲ್ಪೆತ್ತ ಮಾತೆಯರ್ತಮ್ಮ ಸುತನಂ ಮಠಕೆ ಕೊಟ್ಟು ಪೋದರು ಗೃಹಕ್ಕೆ ||೬೨||

ಚಂಡೇಶನೆಂಬೋರ್ವ ಮುಗ್ಧ ಭಕುತನು ಭುವನ
ಮಂಡಲದಿ ಪುಟ್ಟಿ ಪಿತನಾಜ್ಞೆಯಂತನುದಿನದಿ
ಹಿಂಡು ತುರುಗಳ ಕಾಯ್ದು ಪಾಲ್ಗರೆದು ಸೈಕತದ ಲಿಂಗಮಂಗೈದೆರೆಯುತ
ಖಂಡ ಶಶಿಶೇಖರನ ಪೂಜಿಸುವದಂನುಪಿತ
ಕಂಡು ನಿಂದಿಸಲವನ ಕೊಲ್ಲಿ ಬಿಡಲಾಗುಮೆಯ
ಗಂಡ ಪ್ರಾಣವನಿತ್ತುದರಿದಿರ್ದೆವದಕಿಂದಧಿಕವಿದೆಂದರು ಕೆಲವರು ||೬೩||

ಮಲ್ಲಣ್ಣ ಮೇಣಾ ಬುಳ್ಳರಾಯರಿಂ ಸೇವ್ಯಗೊಂ
ಡುಲ್ಲಸಿತ ಶಂಕರನ ಸ್ಮರಿಸುತ್ತ ಸಿದ್ಧೇಶ
ನಲ್ಲಿ ಮನವಿಟ್ಟು ಬೀರೇಶ ಕೆಲಕಾಲವಿರಲೀರ್ವ ಸೇವಕರು ಕೂಡಿ
ಇಲ್ಲಿರ್ದು ಸೇವಿಸುವದಾಗದೆಂ ಮುಂದಿದ
ಕೊಲ್ಲೆಂದು ತಂತಮ್ಮ ನಿಲಯಕ್ಕೆ ಪೊಗಲಿ
ನ್ನೆಲ್ಲಿ ಶಿಷ್ಯರನು ಶೋಧಿಸಲೆಂದು ಭುವನಮಂ ಬಿಟ್ಟು ಶಿವಪುರಿಗೈದಿದಿಂ ||೬೪||

ಈ ಸುಚಾರಿತ್ರಮಂ ಬರದೋದಿದರ್ಗೆ ಮೇಣ್
ಲೇಸಾಗಿ ಯಿದರರ್ಥವಾಧ್ಯಾಂತ ಪೇಳ್ದರ್ಗೆ
ಬೇಸರಿಯದುರೆ ಭಕ್ತಿಯಿಂದ ಕೇಳಿದವರ್ಗೆ ಪದುಳದಿಂ ಪಠಿಸಿದರ್ಗೆ
ಭಾಸಿತ ಸಕಲ ಭೋಗಭಾಗ್ಯಮೋಕ್ಷಂಗಳ ವಿ
ಲಾಸದಿಂದಿತ್ತುದುರಿತೌಘಮಂ ಸಂಹರಿಸಿ
ವಾಸ ರಸ್ತಾಪುರ ಶ್ರೀ ಶರಭಲಿಂಗೇಂದ್ರ ರಕ್ಷಿಸುವನಿಹಪರದೊಳು ||೬೫||

ಇಂತೆಬಲ್ಲಿಗೆ ಶರಭೇಶ್ವರ ಪಾದಾಬ್ಜಭೃಂಗನು
ವಿಶಿಷ್ಠವಿದ್ವಜ್ಜನ ವಿಧೇಯನು ಆದ ಭೀಮನಾಯಕ
ಕವಿಯಿಂ ಪ್ರಣೀತಮಪ್ಪ ಹಾಲ್ಮತೋತ್ತೇಜಕ ಪುರಾಣದಲ್ಲಿ
ಅಂತು ಸಂಧಿ ೮ಕ್ಕಂ ಪದನು ೪೩೫ಕ್ಕೆ ಮಂಗಲಂ ಮಹಾಶ್ರೀಶ್ರೀಶ್ರೀ