ಸೂಚನೆ ||

ಹರನೊರದಿ ಮಾಳಿಂಗನಂ ತಂದು ಸುಖಿಸುತಿರೆ
ಗುರುಸಿದ್ಧನೈತಂದು ಮತ ವಿಚಾರವ ತಿಳಿಸಿ
ವರಸೋಮ ಲಿಂಗೈಕ್ಯನಾಗಲಿತ್ತಾ ಬೀರ ಪೋಗುವನು ಕೈಲಾಸಕೆ

ಸ್ವರ್ಗಪತಿನುತ ಪಾದ ಸರೋಜ ಸುರಭೂಜ ಮುನಿ
ವರ್ಗನುತ ಭಕ್ತ ಸುವಿಲಾಸ ಕೈಲಾಸಪುರ
ದುರ್ಗನಿಲಯ ಪ್ರಮಥಸೇವ್ಯ ಸಂಭಾವ್ಯ ವರಭವ್ಯತನು ಸುಜನ ಪೋಷ
ದುರ್ಗತಿ ವಿನಾಶ ಭಯಲೋಪ ಗಿರಿಚಾಪ ಶಿವ
ಭರ್ಗ ಬಾಳಂಬಕ ನಿರಂಗ ಪುರಭಂಗ ವರ
ದುರ್ಗಿಯರಸನುಪಮೋದಾರ ವೃಷದೇರ ಭವದೂರನೆಮ್ಮಂ ಪೊರೆಯಲಿ ||೧||

ಸ್ವರ್ಗದಲಿ ವಾಸವಾಗಿರ್ಪ ವಿದ್ಯಾಧರರ
ವರ್ಗಮಂ ನೋಡ್ದು ಕೈಲಾಸಪುರಿಯಂ ಪೊಕ್ಕು
ದುರ್ಗಾಸಹಿತನಾಗಿ ಪದಿನಾಲ್ಕು ಲೋಕಂ ಬಿಡದೆ ಪರಿಪಾಲಿಸುತಿಹ
ಭಾರ್ಗನ ಬಳಿಗೆ ಸಿದ್ಧಬೀರೇಂದ್ರ ಪೋಗುತ್ತೆ
ದಿರ್ಗೆನಿಂದಭಿನಮಿಸಲಾ ಪರಮ ಸಾಂಬ ಪ್ರಮ
ಥರ್ಗೊರೆದನೆನ್ನ ಸುಕುಮಾರ ಬಂದಿಹನವಗೆ ಸತ್ಕಾರ ಮಾಳ್ಪುದೆಂದಾ ||೨||

ಹರನಾಜ್ಞೆಯಂತೆ ಪ್ರಮಥರು ಸಿದ್ಧಬೀರನಂ
ಕರೆದು ಕೂಡ್ರಿಸಲಂ ಭವಭೂಲೋಕಮಂ ಬಿಟ್ಟು
ಭರದೊಳಿಲ್ಲಿಗೆ ಬಂದ ಕಾರ‍್ಯಾರ್ಥವೇನೆಂದು ಪ್ರೀತಿಯಿಂ ಬೆಸಗೊಳಲ್ಕೆ
ವರದೆನೆನ್ನನು ಸೇವಿಸುವದಕ್ಕೆ ಶಿಷ್ಯನಂ
ತ್ವರಿತದಿ ಕಳಿಸುವೆನೆಂದು ಪೇಳಿಯನ್ನೋರ್ವನಂ
ಧರೆಗೆ ಕಳಿಸುತ್ತ ಕಷ್ಟಕೆ ಗುರಿಯ ಮಾಡಿ ಕಣ್ಣಿಲಿ ನೋಳ್ಬುದಿದು ನ್ಯಾಯವೇ ||೩||

ಹರನೇ ಭೂತಲ ಮಧ್ಯದಿರಲೆಂತು ನಾನೋರ್ವನೇ
ಪರಮ ಶಿಷ್ಯನಂ ಕಳಿಸಿಕೊಡುವದೆಂದುತ್ಸವದಿ
ಪರಿಪರಿಯೊಳುರೆ ಧ್ಯಾನಿಸಲ್ಕೆ ಶಂಕರ ಪೇಳ್ದನೇಳ್ಸಮುದ್ರಗಳಾಚೆಗೆ
ಮೆರೆವ ಬ್ರಾಹ್ಮೀದೇವಿಯಿರ್ಪಳಲ್ಲಿಗೆ ಪೋಗಿ
ಮೊರೆಯಿಡಲ್ನಿನಗೆ ಶಿಷ್ಯನಂ ತೋರಿಸುವಳು ಬಂ
ಧುರದಿಂದೆ ಪೋಗುಪೋಗಾ ಲೋಚನೆಯನಾಂತು ಬೋಳಾಗಬೇಡೆಂದನು ||೪||

ಕಂದುಗೊರಳನೆ ಯನ್ನ ಜತೆಗೋರ್ವನನ್ನು ಕಳಿ
ಸೆಂದು ಕೇಳಲ್ಕೆ ಕಳಿಸಿದನು ಗಂಧರ್ವನಂ
ಚಂದದಿಂದವ ಬಂದು ಪಥ ತೋರಿಸುತ ತಿರುಗಿ ಪೋದ ಕೈಲಾಸಪುರಿಗೆ
ಮುಂದೆ ಬೀರೇಶನುತ್ತುಂಗ ಬಲದಿಂ ಧೈರ್ಯ
ಗುಂದದೆ ಸಮುದ್ರತಟಕ್ಕೆತಂದು ಸದ್ಭಾವ
ದಿಂದ ಪೂಜಿಸುತಂತರಿಕ್ಷದೋಳೇಳ್ಸಮುದ್ರವ ದಾಂಟಿದಂ ಭರದೊಳು ||೫||

ಪೆಬ್ಬುಲಿಗಳಿರ್ಪ ಕಾಂತರದೋಳ್ ಬೀರೇಶ
ನಬ್ಬರದಿ ಬರುವದ ಕಂಡು ರಕ್ಕಸರೆಮಗೆ
ಹಬ್ಬವಾಯಿತೆಂದಾರ್ಭಟಿಸುತಸರ್ಬಿಡುತಖಿಳ ನಿಬ್ಬಣವ ಕಟ್ಟಿಕೊಂಡು
ಕಬ್ಬನೆ ಕವಿದು ಭೀಕರವ ತೋರಿ ಪಲ್ಗರಿದು
ಬೊಬ್ಬಿಡುತ ಬಾಯ್ದೆರೆದು ಬರುತಿರಲು ಸುತ್ತಮು
ತ್ತಬ್ಬರಿಸಿ ಸಿದ್ಧಬೀರಂ ಸಿದ್ಧರೇವಣನ ಸ್ಮರಿಸುತವನಿಂತೆಂದನು ||೬||

ಭಂಡರಕ್ಕಸರೇ ಮುಂಕೊಂಡು ಹರುಷದಿ ನಿಮ್ಮ
ತಂಡಮಂ ತ್ವರಕೂಡಿಕೊಂಡು ಬಾಯ್ದೆರೆಯುತಲಿ
ಕಂಡೋರ್ವನೆಂದೆನ್ನಖಂಡಮಂ ಕತ್ತರಿಸಿ ತೊಂಡೆಗರುಳನ್ನು ತೆಗೆದು
ಕೆಂಟಕಿಟ್ಟದು ತಿಂದು ಹೆಂಡಗುಡಿವೆವುಯಂದು
ಭಂಡ ಮಾತುಗಳಿಂದ ಭಂಡು ಮಾಡುವರೆ ಶಿರ
ಖಂಡಿಸದೆ ಬಿಡೆನು ಖಂಡಿತ ತಿಳಿರಿ ಖಳರೆ ಗಂಡನೆಂದರಿಯಂದನು ||೭||

ಭೀಕರಕೆ ಬೆದರಿ ಪೋಗುವ ನಾನಲ್ಲ ಪುಸಿಯಲ್ಲ
ಸಾಕು ಸುಮ್ಮನೆ ನಡೆಯಿರಿ ಬ್ರಾಹ್ಮಿಯಳ ಪುತ್ರ ಸುರ
ಲೋಕದಿಂ ಬಂದ ಬೀರೇಶನೆಂಬುವ ಗುರ್ತುವರಿಯದೆ ದುರಾಶೆಯಿಂದ
ಯಾಕೆನ್ನ ಕಾಡುವಿರೆನಲ್ಕೆ ದನುಜರು ಬೆದರಿ
ಭೀಕರವ ಬಿಟ್ಟೊಂದಿಸುತ ಮಾರ್ಗಬಿಡಲಂ
ಸಾಕಾರದಿಂದಲಾ ಬಾವಿ ಮೇಲೆಸೆವ ದೇವಿಯ ನಿಲಯಕೈತಂದನು ||೮||

ಬೇಗದಿಂ ಪೋಗಿ ಗುಡಿಬಾಗಿಲೋಳ್ನಿಲ್ಲಲ್ಕೆ
ಬೀಗ ಕತ್ತರಿಸಿ ಬೀಳಲ್ಕೊಳಗೆ ಪೊಕ್ಕು ವರ
ಯೋಗದೋಳ್ಕೂತಿರ್ದ ಬ್ರಾಹ್ಮೀಸುದೇವಿಯಂ ಕಂಡು ಭಯಭಕುತಿಯಿಂದ
ಬಾಗಿ ನಮಿಸಲ್ಯಾಕೆ ಕಣ್ದೆರೆದು ಪುತ್ರನ
ರಾಗದಿಂ ಪಿಡಿದೆತ್ತಿ ನೀ ಬಂದ ಕಾರ‍್ಯ
ಪ್ರಭಾಗಮಂ ಪೇಳೆಂದು ಮುದ್ದಿಟ್ಟು ಕೇಳಲ್ಕೆ ಪೇಳುವದಕನುವಾದನು ||೯||

ಎನ್ನ ಸೇವಕ್ಕೋರ್ವ ಶಿಷ್ಯನಂ ಬೇಕೆಂದು
ಪನ್ನಂಗಧರನಂ ಕೇಳಿದೊಡಿತ್ತ ಕಳಿಸಿದಂ
ನಿನ್ನ ಬಾಲಕನ ನುತಿಗೋಪ್ಪಿ ಸೇವಕನನ್ನು ಕರುಣಿಸೆಂದನು ತವಕದಿ
ಮನ್ನಿಸುತ ಮಗನ ನುಡಿ ಮೋಹದಿಂ ಕೇಳಿದಳು
ನಿನ್ನ ಸೇವಕ್ಕಾಗಿ ವೀರ ಮಾಳಿಂಗನನಂ
ಮುನ್ನ ಕಳಿಸಿರುವೆನಾತಂ ಬೆಳೆದು ಗುರುವಿಲ್ಲವೆಂದು ಯೋಚಿಪನೆಂದಳು ||೧೦||

ವರದೇವಿ ನುಡಿಗೇಳಿ ಸಿದ್ಧಬೀರನು ಉಭಯ
ಕರಮುಗಿದು ವೀರಮಾಳಿಂಗನಿತಿಹಾಸಮಂ
ಸರಸದಿಂ ಪೇಳೆನಲ್ಕಾಗಲಾ ದೇವಿ ತಿಳಿಸುವುದಕ್ಕೆ ಸಿದ್ಧಾದಳು
ತರುಳ ಕೇಳ್ಬಿಲ್ವಾಡಪುರದರಸು ತುಕ್ಕಪ್ಪ
ಧರೆಯೊಳಿರುತಿರಲವನಗಜ ತುರಗ ಪಶುಗಳಂ
ಚರರು ಕಾಯ್ದರೆ ನಾಶವಾಗಿ ಪೋಗುವವೆಂದು ಮನದೊಳಾಲೋಚಿಸುತಲಿ ||೧೧||

ಸರಸದಿಂ ತನ್ನನುಜ ಸೋಮರಾಯನಂ ಕರೆದು-
ಪರಿಪರಿಯೊಳವಗೆ ಬೋಧಿಸುತ ಪಶುರಕ್ಷಣೆಗೆ
ಗಿರಿಗಂಹರದಿ ಪೋಗಿ ಕಾಲಕಾಲಕೆ ಹುಲ್ಲುತಿನಿಸಿ ನೀರ್ಗುಡಿಸೆಂದನು
ಜರಿಯದಾಗ್ರಜನ ನುಡಿಗೊಪ್ಪುತಾ ಸೋಮೇಶ
ನಿರದೆ ಹಿಂಡಂಗೂಡಿಕೊಂಡು ಕಾಂತರಕ್ಕೆ
ಚರಿಸಿ ಮಂಚ್ಚಿಗೆ ಕಟ್ಟಿ ಮನೆಮಾಡಿ ಕೆಲಗಾಲ ಸಂತೋಷದಿಂದಿರ್ದನು ||೧೨||

ಮತ್ತಾ ವಿಪಿನದೊಳಗೆ ಗೌಳಿಗರು ಮಹಿಷಿ ಮೇ
ಣೆತ್ತು ಕೋಣಗಳ ಕಾಯ್ದುಕೊಂಡಿರಲ್ಕವರು
ಅತ್ತೊಂದು ಶಿಶುವನ್ನು ಕದ್ದುಕೊಂಡೈತಂದು ತಮ್ಮ ನಿಜನಿಲಯದೊಳಗೆ
ವತ್ತರದಿ ಸರ್ವರೊಂದಾಗಿ ಕುಲದೇವತೆಗೆ
ತತ್ತರುಳನಂ ಕೊಂದು ಬಲಿಗೊಟ್ಟು ರಾತ್ರಿ ನಡು
ಹೊತ್ತಿನಲಿ ಪೂಜಿಸುತ್ತಿರೆ ಕೆಲವು ಮಹಿಷಿಗಳು ತುಡುಗಾಗಿ ಹೊರಬಿದ್ದವು ||೧೩||

ಸೋಮರಾಯನ ಮಂಚಿಗೆಯು ತಿಕ್ಕಿ ಕೆಡಿಸಲವ
ನಾ ಮಹಿಷಿಗಳ ಮುಂದೆ ಮಾಡಿಕೊಂಡೈತರಲು
ಧಾಮದೋಳ್ಗೌಳಿಗರು ಪೂಜಿಸುತ ಕೂತಿರಲು ಭರದಿಂದ ಪೋದನು ಒಳಗೆ
ಕೋಮಲ ಸುಬಾಲಕನ ಶಿರ ನೋಡಲಾಕ್ಷಣದಿ
ಭೂಮಿಯೊಳ್ಕೆಂಗುರಿಯ ರೂಪದಾಳಲ್ಕೆ ಸು
ಪ್ರೇಮದಿಂ ಕೂತೆನ್ನ ವೀಳ್ಯತಾರೆಂದು ಪೇಳಿದನಾಗ ಗೌಳಿಗರ್ಗೆ ||೧೪||

ಯನಲವರು ನಾಲ್ಕರೊಲ್ಲಂದು ಭಾಗಮಂ ಪೂಜೆ
ಯನು ಮಾಡುವದಕಿಟ್ಟ ಧನಕನಕಮಂ ಕೊಟ್ಟು
ಸನುಮತೆಯೊಳಾತನಂ ಕಳಿಸಲ್ಕೆ ಆ ದೇವಿ ಬೆನ್ನುಹತ್ತಿದಳು ಬಿಡದೆ
ಜನಪನಾಲಯಕೆ ಬಂದಮಿತ ಕೆಡಕಂ ತೋರಿ
ದಿನದಿನಕೆ ಸಕಲ ಸಂಪದವನತಿಗಳೆದು ಭೂ
ಪನು ದುಃಖಸಾಗರದಿ ಮುಳುಗಿಸುತ ವಿಧವಿಧದಿ ಕಾಡಿ ಕಷ್ಟವನಿತ್ತಳು ||೧೫||

ಅತಿರಥ ಮಹಾರಥರ್ಸಚಿವ ಕಾಲಾಳುಗಳು
ಕ್ಷಿತಿಪನಂ ಬಿಟ್ಟು ತೆರಳ್ಕಾತನನತ್ಯಧಿಕ
ಮತಿಶೂನ್ಯನಂತೆ ದಾರಿದ್ರತಾಪದಿ ನೊಂದು ಅನುಜನಿಹ ಕಾನನಕ್ಕೆ
ಗತಿಸಿ ಬಂದಾ ದಿನದಿ ರಾತ್ರಿಯೊಳ್ನಿದ್ರಿಸಿರೆ
ಶತಜನರು ಕಳ್ಳಿಕೋಟೆಯ ಕಿರಾತರು ಬಂದು
ಖತಿಗೊಂಡು ಖಡ್ಗದಿಂ ತುಕ್ಕಪ್ಪರಾಜನಂ ಕಡಿದು ಪ್ರಾಣವ ತೆಗೆದರು ||೧೬||

ಹಟ್ಟಿಯೊಳಗಿರ್ಪ ಪಶುಗಳಂ ತಿರುವಿಕೊಂಡು ನಿಜ
ಪಟ್ಟಣಕೆ ಪೋಗಿ ಬೇರೊಂದು ಸ್ಥಲದೊಳಗವರು
ಕಟ್ಟಿ ಸುಖದಿಂದಿರಲ್ಕಿತ್ತ ಭೂವರ ಮಡಿದುದಂ ನೋಡಿ ಸೋಮರಾಯ
ಕೆಟ್ಟೆನಯ್ಯಯ್ಯೋಯನ್ನಾಗ್ರಜನಂ ಕೊಲ್ಲಿ ಬಹು
ದಿಟ್ಟತನದಲಿ ಪಶುಗಳಂ ಕೊಂಡು ಪೋಗಿಹರು
ಬೆಟ್ಟದೋಳಾನೋರ್ವ ಮಾಡಲಿನ್ನೇನೆಂದು ಕೊಳಲವನೂದಿದ ದುಃಖದಿ ||೧೭||

ಖೂಳರ ವಶದೊಳಗಿರ್ಪ ಪಶುಗಳು ಕೊಳಲ ನಾದ
ಕೇಳುತತಿಕೋಪದಿಂ ಹಟ್ಟಿಯಂ ಹಾರಿ ಹೊರ
ಬೀಳಾ ಬೇಡರೊಂದಾಗಿತಿರುವಲ್ಕವರನಿರಿದೋಡಿ ಬೆಟ್ಟದೆಡೆಗೆ
ಮೇಳದಿಂದೊಂದೊಂದುಸುರ್ಬಿಡುತ ಭರದಿ ಬಂ
ದೇಳಿಗೆಯ ದುಃಖದೊಳಗಿರ್ಪ ತಮ್ಮೊಡೆಯನ ನಿ
ರಾಳ ಮನದಿಂ ನೋಡಿ ನಿಂದಿರಲು ಸೋಮರಾಯಂ ಹಟ್ಟಿ ಪೊಗಸಿ ಬಿಟ್ಟಂ ||೧೮||

ಧರಣಿಪನ ಮುಂದಿಟ್ಟುಕೊಂಡು ರೋಧಿಸುತಿರ
ಲ್ಕರುಣದಿಂದವರ ಮನೆದೇವ ಗೋರಕನಾಥ
ವರ ಸೊನ್ನಲಿಗೆ ಸಿದ್ಧಭೈರವನಂ ಕೂಡಿಕೊಂಡಲ್ಲಿಗೈತಂದು ಮುದದಿ
ವರೆದನಾ ಸೋಮರಾಯಂಗೆ ಶೋಕವ ಮಾಡ
ದಿರು ಹಿಂದೆ ನೋ ಪೋಗಿ ಗೌಳಿಗರ ಧನಕನಕ
ಹಿರಿದು ತಂದುದಕವರ ಮನೆದೇವಿ ಬಂದು ಪರಿಪರಿ ಕಾಡುತಿಹಳು ||೧೯||

ಭಾವಶುದ್ಧದಿ ನಿಮ್ಮ ಮನೆಯೊಳಗೆ ಸಂಭ್ರಮದಿ
ದೇವಿಯಂ ಪೂಜಿಸಿ ಮಹಾಶಾಂತಿ ಮಾಡಿದೊಡೆ
ಭೂವಲಯದಲಿ ಪೂರ್ವಿಗಿಂದಲಿಮ್ಮಡಿಯಾಗಿ ಧನಕನಕ ವಸ್ತ್ರ ಮತ್ತಂ
ತೀವಿದ ಸುಭಾಗ್ಯದಿಂ ಜನಪದತ್ವವ ನಿಮಗೆ
ದೇವಿ ಸಂಪ್ರೀತಿಯಿಂ ಕೊಟ್ಟು ಮುಂದವನಿಯೊಳಾ
ಗುವ ಕಂಟಕಮಿಲ್ಲದನುದಿನದಿ ಪರಿಪಾಲಿಸುವಳೆಂದು ಬೋಧಿಸಿದನು ||೨೦||

ಸ್ವಾಮಿ ಗೋರಖನಾಥ ನುಡಿಗಳು ಕೇಳಿ
ಸೋಮರಾಯನು ಒಪ್ಪಲಾಗಲಾ ಗುರು ಮಹಾ
ಪ್ರೇಮದಿಂದೆದ್ದು ಪಂಚಾಕ್ಷರೀ ಮಂತ್ರಮಂ ಪಠಿಸಿ ಭಸಿತವನು ಕೊಂಡು
ಭೂಮಿಯೊಳ್ಪಿದ್ದಿರುವ ತುಕ್ಕಪ್ಪನಂಗದೊಳು
ನೇಮದಿಂ ತಳೆಯಲಾತಂ ತವಕದಿಂದೆ ಶಿವ
ನಾಮಮಂ ಸ್ಮರಿಸುತ್ತ ನಿದ್ರೆಯಿಂದೆಚ್ಚರಿಪನಂತೆದ್ದು ಕೂತನಾಗ ||೨೧||

ಭೂಪ ತುಕ್ಕಪ್ಪನ ಮಡದಿ ಕಾನಾಬಾಯಿ ಬಂ
ದಾ ಪರಮ ಗುರುವರನ ಪಾದಕೆರಗಲಾತ ನಿ
ಷ್ಕಾಪಟ್ಯದಿಂದೊಂದು ಮಾಣಿಕವನಿತ್ತಿದು ತೊಳೆದುದಕ ಸೇವಿಸಲ್ಕೆ
ತಾಪತ್ರಯಂಗಳಂ ಕಳೆದು ನಿನಗೋರ್ವ ಕುಲ
ದೀಪ ಸುತನುದಯಿಸುವ ನಿನ್ನ ಮನದೊಳಗಿಹ ನಿ
ಜಾಪೇಕ್ಷ ತೀರಿಸಿದೆನಾ ಬಾಲಕಗೆ ವೀರ ಮಾಳಿಂಗನೆಂಬ ಪೆಸರು ||೨೨||

ಸೋಮರಾಯನ ಸತಿ ರಮಾಬಾಯಿ ಗುರುಪಾದ
ತಾಮರಸಗಳ ಪಿಡಿದು ಬೇಡಿಕೊಳ್ಳಲ್ಕೆ ಸು
ಪ್ರೇಮದಿಂ ಜಪಮಣಿಯನಿತ್ತು ಪೇಳಿದನಿದಂ ನಿನ್ನಕ್ಕನಂತೆ ಸವಿಯೇ
ಭೂಮಿಯೊಳ್ಪೆಸರಾದ ಪುತ್ರ ಪುಟ್ಟುವನವನ
ನಾಮ ಜಕ್ಕಪ್ಪನೆಂದಿಟ್ಟು ಪಾಲಿಪುದೆಂದು
ಸ್ವಾಮಿ ಗೋರಖನಾಥ ಸೊನ್ನಲಿಗೆ ಸಿದ್ಧಭೈರವರು ಪೋದರು ಬೇಗನೆ ||೨೩||

ಇತ್ತು ಭಯ ಸ್ತ್ರೀಯರವರರುಹಿಂದಂದುಕದೊಳ್
ಚಿತ್ತ ಪರಿಪಾಕದಿಂ ಸೇವಿಸಲು ಗರ್ಭಕಳೆ
ವೆತ್ತು ಶೋಭಿಸುತಿರಲ್ಕಾಗೆ ತುಕ್ಕಪ್ಪ ಸರ್ವರು ಕೂಡಿ ಮನೆಗೆ ಬಂದು
ವತ್ತರದ ವೈಭವದಿ ದೇವಿಯಂ ಪೂಜಿಸಲು
ವಿತ್ತ ಕನಕಾದಿ ಸೌಭಾಗ್ಯಮಂ ಪಡೆದು ಮಣಿ
ಕೆತ್ತಿಸಿದ ಸಿಂಹಪೀಠದಿ ಕುಳಿತು ರಾಜಭೋಗದಲಿ ಮೆರೆಯುತ್ತಿದ್ದನು ||೨೪||

ಇರುತಿರುತ್ತಾ ಉಭಯ ಸ್ತ್ರೀಯರಿಗೆ ನವಮಾಸ
ನೆರೆತುಂಬಿಸನ್ಮಹೂರ್ತದಿ ಪಡೆಯಲಾಗರವರು
ವರವೀರಮಾಳಿಂಗ ಜಕ್ಕಪ್ಪನೆಂಬುಭಯ ಪೆಸರಿಟ್ಟು ಪೋಷಿಸಲ್ಕೆ
ತರುಳರೀರ್ವರು ಬೆಳೆದು ಪ್ರಯದವರಾಗಿಹರು
ಭರದಿಂದೆ ಬಿಲ್ವಾಡಪುರಕೆ ನೀಂ ಪೋಗಿ ಬಂ
ಧುರ ವೀರ ಮಾಳಿಂಗನನ್ನು ಕರೆದೊಯ್ವದೆಂದಾ ದೇವಿ ಪೇಳ್ದಳ್ಗಡ ||೨೫||

ಆಗಲಾ ಸಿದ್ಧಬೀರಂ ದೇವಿಗೊಂದಿಸುತ
ಬೇಗದಿಂ ವರಪಡೆದು ಮರಳಿ ಹಿಂದಕೆ ಸಪ್ತ
ಸಾಗರಂಗಳ ದಾಟಿ ಬಿಲ್‌ಆಡ ಪಟ್ಟಣಕೆ ಬಂದು ಜಲಮಾಯಿ ಕೆರೆಯ
ಭಾಗದಲಿ ಕೂತು ಶಿವಧ್ಯಾನಮಂಗೈದು ವರ
ಯೋಗಮಂ ಬಲಿಸಿ ಬಾಲಕನ ರೂಪವದೊಟ್ಟು
ರಾಗದಿಂದಿರುತಿರ್ದನಿತರರಿಗೆ ತೋರದಂತದೃಶ್ಯನಾಗೀ ಭವನದಿ ||೨೬||

ಕುರುಬರರಜ ಕುರಿಗಳಂ ಕಾಯ್ದುಕೊಂಡವಸರದಿ
ಚರಿಸಿ ಬಂದಾ ಕೆರೆಯಾ ನೀರು ಕುಡಿಸುತ್ತಿರಲು
ವರಸಿದ್ಧ ಬೀರಂ ಕುರಿಗಳನು ಕೊಂಡು ಜಲದೊಳಗೆ ಹಾರಿದನು ಬೇಗದಿಂದ
ಇರುತಖಿಳ ದಿನವ ಬಿಡದೀ ಪರಿಯ ಮಾಡಲಾ
ಕುರುಬರೊಂದಾಗಿ ಭೂಪಾಲ ತುಕ್ಕಪ್ಪಂಗೆ
ಕುರಿಪೋದ ಸಂಗತಿಯಂ ವೆಸನ ಮಾನಸರಾಗಿ ಪೇಳಿದರು ವಿನಯದಿಂದ ||೨೭||

ತುಂಗತುಕ್ಕಪ್ಪ ತನ್ನಾತ್ಮಭವನಾದ ಮಾ
ಳಿಂಗನಂ ಕರೆದು ಕುರುಬರರ್ತನಗೆ ಪೇಳಿದ ನಿಜ
ಸಂಗತಿಯಂ ತಿಳಿಸಲವ ಚತುರಂಗ ಬಲಗೂಡಿ ಜಲಮಾಯಿ ಕೆರೆಗೆ ಬಂದು
ಕಂಗೊಳಿಪ ಗಿಡಗಂಟಿ ಮರೆಯೊಳಗೆ ಹುಡುಕುತ್ತು
ತ್ತುಂಗ ಶ್ರಮೆಯಿಂದ ಹಯಮಿಳಿದು ನೀರ್ಗುಡಿತಿರ
ಲ್ಮಂಗಲಾತ್ಮಕ ಬೀರ ಜಲದಿಂದೆ ಪುಟನೆಗೆದು ಮಾಳನಂ ಪಿಡಿದೊಯ್ದನು ||೨೮||

ಚತುರಂಗಬಲ ನಿಂತು ಬೆರಗಾಗುತಿರಲಾಗ
ಚತುರ ಬೀರೇಶ ಮಾಳಿಂಗನು ಕರೆದುಕೊಂಡು
ಹಿತದಿಂದಲಲ್ಲಿಂದ ಕೈಲಾಸನಗರಕ್ಕೆ ಪೋಗಿ ಶಂಕರನ ಪಾದಕ್ಕೆ
ಅತಿಭಕ್ತಿಯಿಂ ನಮಿಸಿ ಪೇಳಿದಂ ನಾಂ ಪೋಗಿ
ವಿತತಮಾಗಿರ್ಪೇಳ್ಸಮುದ್ರಗಳ ದಾಂಟಿ ಸ
ನ್ನುತಿಸಿ ಬ್ರಾಹ್ಮೀದೇವಿಯಂನ್ನೊಲಿಸಿ ಶಿಷ್ಯನಂ ತಂದಿರುವೆ ನೋಡೆಂದನು ||೨೯||

ಪರಶಿವಂ ಸಿದ್ಧಬೀರನ ಸಾಹಸಕ್ಕೊಲಿದು
ಧರೆಯೊಳಗೆ ಮರೆಯೆಂದು ವೀರಮಾಳಿಂಗನಂ
ಕರೆದು ಪೇಳಿದನು ಸುಜ್ಞಾನಿಯುತನಾಗು ಮೇಣಾಳುಗಳಿಗರಸನಾಗು
ವರಸಿದ್ಧಬೀರಂಗೆ ಸಚ್ಛಿಷ್ಯನಾಗು ನೀ
ನೊರೆದದ್ದು ದಿಟವಾಗಲೆಂದವನ ಶಿರದ ಮೇ
ಲ್ಕರ೪ವಿಟ್ಟು ಬೋಳೈಸುತೀರ್ವರ ಜತೆಗೆ ಜಟ್ಟಿಗಳನಿತ್ತು ಕಳಿಸಲವರು ||೩೦||

ಭವನಕ್ಕೆ ಬಂದು ಸಂಚರಿಸುತಿರಲಲ್ಲೊಂದು
ತವೆ ಬೆಳೆದ ಕೋಣ ಕೆಕ್ಕರಿಸಿ ಕಣ್ದಿರಿವಿ ರೌ
ದ್ರವ ತಾಳಿ ಸಿದ್ಧಬೀರನ ಮೇಲೆ ಬರಲಾತನೊದ್ದು ಕೊಲ್ಲಿದ ನಿಮಿಷದಿ
ಶಿವನ ಧ್ಯಾನಿಸಿ ಕೋಣನಸವಳಿದ ಸ್ಥಲದಿ ಮಿರು
ಗುವ ಕೋಣನೂರು ಮೇಣಾ ಮುಂಡ ಬಿದ್ದಿರ್ದ ಸ್ಥಲ
ಮವನಿಯೋಳ್ಮೆರೆವ ಮುಂಡಗನೂರು ಸ್ಥಿರವಾಗಲೆಂದರಿಕೆಗೊಟ್ಟು ನಡೆದ ||೩೧||

ಗುರು ರೇವಣನ ಧ್ಯಾನಗ್ಯೆಯುತ್ತ ಬೀರೇಶ
ನಿರಲಾಗಲಾ ಸಿದ್ಧ ಕುಲನಾಥನೈ ತಂದು
ಸ್ಮರಿಸಿದುದದೇವಂ ಪುಸಿಯನೆಣಿಸದೆನ್ನೋಳ್ಸಾರನೆಲ್ಕಲಾ ಸಿದ್ಧಬೀರಂ
ಪರಮ ಶ್ರೀಗುರುವೆ ನಾಂ ಶಂಕರನ ಮೆಚ್ಚಿಸುವ
ತರುಳ ಮಾಳಿಂಗನಂ ತಂದಿರುವೆ ತವಕದಿಂ
ನೆರೆನೋಡಿ ಯಮ್ಮೀರ್ವರನ್ನು ಪೊರೆಯೆಂದು ಸಾಷ್ಟಾಂಗಗೈದನು ವಿಭವದಿ ||೩೨||

ಕರುಣದಿಂ ಗುರುಸಿದ್ಧ ಪಿಡಿದೆತ್ತಿ ಬೋಳೈಸಿ
ಪರತರ ಮಹಿಮವನ್ನು ತೋರು ಈ ಭುವನದೊಳು
ತರುಳ ಲಾಲಿಸು ಕಡೆಗೆ ಕೈಲಾಸಗಿರಿಗೆ ಬಾರೆಂದು ಪೇಳಲ್ಕೆ ಬೀರಂ
ಕರಯುಗಳ ಮುಗಿದು ನಯಭಯಭಕ್ತಿಯಿಂದೆ ಸ
ದ್ಗುರುವೆಯನ್ನಂನುದ್ಧರಿಸಿದಿರಿ ಪಾಲ್ಮತೋತ್ಪತ್ಯ
ಪರಿಯನೆಲ್ಲವನು ಮತ್ತೀ ಮತೋದ್ಫವರ ಸಚ್ಚರಿತಮಂ ಪೇಳೆಂದನು ||೩೩||

ಸುತನೆ ಕೇಳ್ ಬ್ರಹ್ಮಾಂಡ ಸುಪುರಾಣದೋಳ್ವ್ಯಾಸ
ರತಿಶೈಸಿ ಪೇಳ್ದ ಸಿದ್ಧಾಂತಮಂ ನಿನಗೊರೆವೆ
ಸಿತಿಕಂಠನೊಂದು ದಿನ ಕೈಲಾಸದಲಿ ಸಭಾವೆರಸಿ ಕೂತಿರೆ ನಂದಿಯು
ಕ್ಷಿತಜನರ ಮತಭೇದಗಳ ತಿಳಿಸೆನಲ್ಕಾಗ
ಲತಿ ಮುದದಿ ಸಕಲ ಕುಲ ಮೂಲಮಂ ಪೇಳ್ದು ಸಂ
ಮತಿಸುತ್ತ ನಂತರ ಕುರುಬ ಕುಡವಕ್ಕಲಿಗರ ಜನನವ ಕೇಳ್ದನು ||೩೪||

ಆಗಲಾ ವೃಷಭಂಗೆ ಪ್ರೀತಿಯಿಂದೊರೆದ ಕೆಲ
ಭಾಗಮಂ ವಿಸ್ತರಿಸಿ ನಿನಗುಸುರ್ವೆ ಭಕ್ತಿಪರ
ನಾಗಿ ಕೇಳೀಂದ್ರ ಸುತರಾದ ದೇವೇಂದ್ರ ಶೂದ್ರಂ ಶಕ್ರಶೂದ್ರರುಗಳು
ಬೇಗದಿಂ ಪಂಚಶತಕೋಟಿ ಯೋಜನ ಕ್ಷಿತಿಗೆ
ನೇಗಲೆಯ ಪೂಡಿಸಾಗಿಸಲಗ್ನಿಪುರದ ನಿಜ
ಬಾಗಿಲವು ತೆರೆಯಲ್ಕವಂಗೆ ವಾಹನಮಾದ ಮೇಷವಾರ್ಭಟಿಸಿತು ಕಣಾ ||೩೫||

ಧ್ವನಿಯೊಳುದಿಸಿದವಸಿತಸಿತ ಕೆಂಪು ಮಾಸಾಳ
ಮಿನುಗುತಿಹ ಪಸರು ಪಳದಿಂದ್ರನೀಲೆಂಬಾರು
ಘನಬಣ್ಣದಿಂದೆ ಕುರಿ ಪೊರಡಲ್ಕದಕ್ಕೆ ಪನ್ನೆರಡು ವರ್ಣದ ಕುರಿಗಳು
ಘನಬಣ್ಣದಿಂದೆ ರಕ್ಷಿಸುತ ಶಕ್ರಶೂದ್ರ ಕಾ
ನನದಿ ಸಂಚರಿಸುತ ಹಿಡಂಬಿಯೆಂಬ ಸುರೆಯಂ
ಮನವೊಪ್ಪಿ ಮದುವೆಯಂ ಮಾಡಿಕೊಳಲಾಗ ದನುಗರನೆಂಬ ಪೆಸರಾದುದು ||೩೬||

ದನುಗರಗೆ ವೀರಗೊಲ್ಲಾಳುಣ್ಣಿಕಂಕಣಸು
ದನುಗರ ಬೀರಂಗೆ ಬಿಳಿಯ ಕಂಕಣವೆಂದು
ಜನಿಸಿದವು ಪಂಚಕುಲವದಕತ್ತಿ ಕಕ್ಕರದ ಕಂಕಣ ಕರಿಯ ಕಂಕಣ
ಘನಹಣಬಗಾರನಾರ್ಗಂಕಣಳೆಗಾರ ಮೇಣಾ
ಮಿನುಗುತಿಹ ಕಕ್ಕರದ ಕಂಕಣಂ ಹಟ್ಟಿಗಾ
ರೆನಿಪ ಕುಲವೇಳದಕೆ ತುರುಗಾರ ತೆಲುಗಾರ ಹುಲ್ಲೆ ಮಸಣಿಗಳಾದವು ||೩೭||

ತರುಳ ಕೇಳಸುರೆಯಂ ಪದಿನಾರು ಕುಲಮಾದ
ವರಿ ನಿನ್ನ ಮನದೊಳಾ ಶಕ್ರಶೂದ್ರ ಪ್ರಥಮ
ತರುಣೀಸುಮಾಲಿ ಸಂಗದೊಳು ಕುಡುವಕ್ಕಲಿಗ ಸರವೂರು ಮಂಕಮತ್ತಂ
ಮೆರೆವ ಬರಡಾವಿನ ಕಪಿಲಗೌರಿ ಸೋಮದೇ
ವರ ಜೋತಿ ನವನಾಥ ಸಿದ್ಧಮವ ಕುರುಬ ಮೇಣಾ
ವರ ಕಪಿಲ ಕಂಪಲಗಳೆಂಬೇಳು ಕುಲ ಮೊದಲು ಜನಿಸಿ ರಂಜಿಸುತಿರ್ದವು ||೩೮||

ಧರಣಿಯೊಳಗೆಣಿಸಲಿಪ್ಪತ್ತು ಮೂರ್ಕುಲಗಳೀ
ಕುರುಬರಿಗೆ ಹವ್ಯಗೋತ್ರಂ ಭೂಮಿವೃತ್ತಿ ಮೇಣ
ಕುರಿಹಿಂಡು ಕುಳವಾಡಿಹಟ್ಟಿಮಠ ಕಕುಲದೇವ ಗೋಲಗೇರಿಯ ಲಿಂಗನು
ಅರಿಯದರ ಶಾಖೆ ಮಾರಾಂಕ ಬೀರೇಶ್ವರಂ
ನಿರುತದಲಿ ನಂಬಿ ಕುಲದೇವರಂ ಸ್ಮರಿಪ ಭ
ಕ್ತರಿಗೆ ಸೌಭಾಗ್ಯಮುಂಟಾಗಿಸು ಕ್ಷೇಮದಿಂ ಬಾಳುವರು ಅನುದಿನದಲಿ ||೩೯||

ಮತ್ತೊರೆವೆನಾಲಿಸ್ಯೆ ದ್ವಾಪಾರ ಯುಗಾಂತ್ಯದೋಳ್
ಚಿತ್ತಜಾಮತಕನೊಂದು ದಿನ ಪತ್ನಿ ಪ್ರಮಥಗಣ
ಮೊತ್ತದಿಂ ನಂದಿವಾಹನನಾಗಿ ಜಯಜಯಧ್ವನಿಯಿಂ ಹಿಮಾಚಲಕ್ಕೆ
ವತ್ತರದೊಳೈತರಲ್ಕನಿತರೋಳ್ ಗಿರಿರಾಜ
ನುತ್ತುಂಗ ವಿಭವದೊಳಿದಿರ್ಗೊಂಡು ಕರದೊಯ್ದು
ಚಿತ್ತರದಭವನದೋಳಿರಿಸಿ ಕುಳಲ ಪ್ರಶ್ನೆಗೈದು ಸಂತೋಷಿಸಿದನು ||೪೦||

ಆ ಸಮಯದಲಿ ಭೃಗುಭಾರಧ್ವಜ ಕೌಂಡಿನ್ಯ
ವಸಿಷ್ಟಕಶ್ಯಪಸುಕೌರಬಾದಿಗಳೆಂಬ ಭಾಸುರ ಮು
ನೇಶ್ವರರು ಶಿವನ ಪರಿವೇಷ್ಟಿಸುತ ವೇದಮಂತ್ರಂಗಳನ್ನು
ಘೋಷಿಸುತ್ತ ಹಜಹರಿಗಳೊಡನೆ ಬರುತಿಗೆ ಮುಂದೆ
ವಾಸ ವಾದ್ಯಮರಗಣವಂದಿಸುತ್ತಿರೆ ಹಿಮವು
ಆ ಸಕಲ ಮುನಿಸುರರ್ಗತಿ ಬಾಧೆಗಯ್ಯಲವರುಧಟ ಮೆಲ್ಲನೆ ಸರಿದುದು ||೪೧||