ವಾರ್ಧಕ ಷಟ್ಪದಿ

ಶ್ರೀವಾಗ್ವೀನುತೆಯ ಹೃತ್ಕುಮುದ ಕಳೆ ಪೊಳೆಯೆ ಮುದ
ವಾವರಿಸಿ ಕುಚ ಚಕೋರದ್ವಂದ್ವನಲಿಯೆ
ಸದ್ಭಾವದುಗ್ದಾಭ್ಧಿಯತ್ತಿಂದತ್ತ ಬೆಳಿಯೆನಾಸಾನಿಲನ ಕಂಪು ಸುಳಿಯೆ
ಆವಗುಂ ನಿಡುಗುರುಳ ಘನ ತಿಮಿರಕಳೆಯೆ ಸಲೆ
ತೀವಿಸಿ ತಮಂಸದಾಸತ್ವಾತಿಶಯ ತಳೆದು
ದೇವ ಗಂಗಾಧರನ ಮುಖಶಶಿಯು ಪರತರಾನಂದಮಂಯಮಗೀಯಲೀ ||೧||

ದೇವಾಂಗ ನಾಮದಿಂ ಕೃತಯುಗದಿ ನಾಲ್ಕು ಪಾದ
ಪಾವನ ಶ್ರೀನೀಲಕಂಠನೆಂಬ;ಭಿದಾನ
ವಾವರಿಸಿ ತ್ರೈತಾಯುಗದಿ ತ್ರೀಪಾದ ದ್ವಾಪರದಿ ವೃಷಭನಾಗುತ ದ್ವಿಪಾದ
ಭಾವಶುದ್ಧದಿ ಬಸವನಾಗಿ ಕಲಿಯುಗದೋಳ್ಮ
ಹಾ ವಿಲಾಸದೊಳೇಕಪಾದ ಧರ್ಮವನು ನಡಿಸಿ
ಭೂವಳೆಯ ಪಾಲಿಸಿದ ನಂದಿಕೇಶಂಗೆ ನಾ ನಮಿಸುವೆನು ಭಕ್ತಿಯಿಂದ ||೨||

ಸಾಮಜಾನನ ವಿಘ್ನರಾಜ ಶುಭತೇಜ ಗುಣ
ಧಾಮ ದುರ್ಗುಣ ಕುಜ ಕುಠಾರಭಯದೂರ ಸತ
ತಾಮರಾರ್ಚಿತ ಗಣಾಧೀಶಮಘನಾಶಕರ ಪಾಶಾಂಕುಶವಿಧಾರಣ
ಕೋಮಲ ಶರೀರ ಸುಖದಾಯಕ ವಿನಾಯಕ ವಿ
ರಾಮವೆನಿಸುವ ವಿಬುಧಸೇವ್ಯ ಸುಶ್ರಾವ್ಯಮಂ
ಪ್ರೇಮದಿಂದಿತ್ತು ಕೃತಿಯಂ ಪಾಲಿಸಿಂಪಾಗಿ ಭೂತಲದೊಳನುದಿನದಲಿ ||೩||

ಜಂಭದಲಖಿಳರನಿಕುರುಂಬಮೊಂದಾಗಿವರ
ದಂಭೋಳಿಧರನ ಪುರತುಂಬಿ ಸುರಪತಿ ಮುಖ್ಯ
ರಂಭರದೆ ಪಿಡಿದಮರರಂ ಬಿಡದೆ ಬಡಿದು ಶರೆಯಂ ಬಿಗಿದು ಬಾಧಿಸಲ್ಕೆ
ಅಂಭೋಜ ಭವಕೃಷ್ಣರಿಂಬುಗಾಣದೆ ಬಂದು
ಶಂಭುವಿನ ಸತಿಯೇ ಪೊರೆ ನಂಬಿದೆವೆನಲ್ಕಾಗ
ಶುಂಭಾದಿಗಳ ತರಿದ ಶಾಂಭವೀ ಸುಶಂಕರಿಯೇ ಕುಂಭಿನಿಯೊಳೆನ್ನ ಪೊರೆಯೇ ||೪||

ವಾಣಿಫಣಿವೇಣಿ ಕಮಲೋದ್ಭವನ ಪಟ್ಟದರಸು
ರಾಣಿ ಮೃದುವಾಣಿ ಚೌಷಷ್ಟಿ ವಿದ್ಯಾಧಿ ಪ್ರ
ವೇಣಿ ಕಲ್ಯಾಣಿ ಕುವಲಯಪರಾಜಿತನಯನೆ ಸುಂದರನವಿಲ್ವಾಹಿನಿ
ಜಾಣೆಗುಣ ಶ್ರೇಣಿ ಇಚ್ಛಿತ ಫಲವಿಧಾತೆ ಬಹು
ತ್ರಾಣೆ ಕರವೀಣೆರಾಕಾಸುಧಾಕರಮುಖಿಯೆ
ಮಾಣದೀಕ್ಷೋಣಿಯೋಳೀಕೃತಿಯನಹುದೆನಿಸು ಸಕಲ ಸತ್ಕವಿಗಳಿಂದ ||೫||

ಕಟ್ಟುಗ್ರದಿಂದ ಫಣತೊಟ್ಟು ಸುರರನು ಪಿಡಿದು
ಕಟ್ಟಿ ಬಾಧಿಸುತಿರಲ್ತಟ್ಟನೇ ಸುರೇಂದ್ರ ತಾ
ಬಿಟ್ಟೋಡಿ ಹರಿಗೆ ಮೊರೆಯಿಟ್ಟು ಭಜಿಸಲ್ಕಭಯ ಕೊಟ್ಟು ತನ್ನಾತ್ಮಭವನ
ಅಟ್ಟಲೀಶನ ಬಳಿಗೆ ದಿಟ್ಟಿಸಿ ಸ್ಮರಂಬಾಣ
ತೊಟ್ಟು ಪೊಡಿಯಲ್ಕೆ ಶಿವ ನೆಟ್ಟನೆ ನಯನದಿಂದ
ಸುಟ್ಟು ಬಿಡಲಗ್ನಿಯೋಳ್ಪುಟ್ಟಿ ತಾರಕನ ಕಡಿದಿಟ್ಟ ಷಣ್ಮುಖಗೆ ಶರಣು ||೬||

ಖಂಡ ಶಶಿಧರನ ಬೀಳ್ಕೊಂಡು ಭರದಿಂದಳಾ
ಮಂಡಲಕಿಳಿದು ಮಹೋದ್ಧಂಡ ಲಿಂಗದಿ ಜನಿಸಿ
ದಂಡಲಾಕುಳ ಪಿಡಿದು ಪುಂಡತನದಲಿ ಭುವನತಂಡಮಂ ಚರಿಸುತಿರಲು
ಕಂಡೆ ಕಡೆ ಕೋವಿದರು ಹಿಂಡುಗೂಡುತ್ತ ಪದ
ಪುಂಡರೀಕಕ್ಕೆರಗೆ ಮಂಡೆಯಂ ಪಿಡಿದು ಮುದ
ಗೊಂಡಿತ್ತು ರಕ್ಷಿಸಿ ಪ್ರಚಂಡರಂ ಶಿಕ್ಷಿಸಿದ ರೇವಣನೇ ಪಾಲಿಸೆನ್ನ ||೭||

ಮಾಪತಿ ಚತುರ್ಮುಖ ಪ್ರಮುಖ ಸುರರಂ ಬಿಡದೆ
ರೂಪುಗೆಡಿಸಿದಿ ಮತ್ತೆ ನಳ ಹರಿಶ್ಚಂದ್ರರಂ
ಕೋಪದಿಂದನ್ಯ ಗೃಹ ಸೇರಿಸಿದಿ ಮಿಕ್ಕಸುರ ನರರ ನೀ ಬಿಡುವದೆಂತು
ಭಾಪುರ ಶನೈಶ್ಚರನೆ ನಿನ್ನ ಸಮರಿಲ್ಲೆನ್ನ ತಾ’
ಪತ್ರಯಂಗಳಂ ಕಳೆದು ಸುಪ್ರೇಮದಿಂ
ನೀ ಪೊರೆವದಂದುಭಯ ಕರಮುಗಿದು ನಿರುತದಲಿ ಬೇಡಿಕೊಂಬುವೆನು ನಾನು ||೮||

ಶ್ರೀಗಿರೀಶನ ಫಾಲನಯನದಿಂ ವಿರೇಶ
ಬೇಗದಿ ಅವತರಿಸಿ ಬಂದಂತೆ ಕಂಗೊಳಿಪ
ಸಾಗರದಿ ಹಿಮಕರನು ಪುಟ್ಟಿ ಬಂದಂತೆ ಸುಗ್ಗವ್ವೆಯ ಸುಗರ್ಭದಿಂದ
ನಾಗಪತಿ ಭೂಷಣನ ಚಿತ್ಕಲಾಂಶವೆ ರೂಪ
ಮಾಗಿ ಬಂದಮಿತ ಮಹಿಮೆಗಳನ್ನು ತೋರ್ದ ಶಿವ
ಯೋಗಿ ಸಿದ್ಧರ ಸಿದ್ಧ ಸೊನ್ನಲಿಗೆ ಗುರುಸಿದ್ಧರಾಮೇಶ್ವರನ ಸ್ತುತಿಸುವೆ ||೯||

ವರಕಾಳಿದಾಸ ಭವಭೂತಿ ಮಲುಹಣ ಬಾಣ
ಕೆರೆಯ ಪದ್ಮರಸ ಮೊಗ್ಗೆಯ ಮಾಯಿದೇವ ಪಾ
ಲ್ಕುರಿಕೆ ಸೋಮಾರಾಧ್ಯ ಹಂಪೆಯ ಹರೀಶ ಭೀಮರಸ ಗುರು ಪಂಡಿತೇಶ
ಬಿರಿದಂಕ ಕೇಶವ ಶ್ರೀ ರಾಘವಾಂಕ ಚಾ
ಮರಸನುದ್ಭಟ ನಿಜಗುಣಾರಾಧ್ಯ ಪರಮ ಭಾ
ಸುರ ಶಂಕರಾಚಾರ‍್ಯ ಮಲ್ಲಣಾರ‍್ಯಾದಿ ಶಿವಕವಿಗಳೊಂದಿಸುವೆನು ||೧೦||

ಕೃತಿವೆಸರು ಹಾಲ್ಮತೋತ್ಪತ್ಯ ಚಾರಿತ್ರವೀ
ಕೃತಿಕರ್ತನಾ ಜಗದ್ಗುರು ಸಿದ್ಧರೇವಣಂ
ಕೃತಿಯು ರಸ್ತಾಪುರದ ಪತಿ ಶರಭಲಿಂಗನ ಪಾದದ್ವಯವನನುದಿನದಲಿ
ಸ್ತುತಿಗೈವ ಪಾಲ್ಮಜ ಜಂಬುಲಿಂಗನ ಪ್ರೇಮ
ಸ್ತುತನಾದ ಭೀಮಾಖ್ಯ ರಚಿಸಿದಂ ಮುದದಿಂದ
ಕ್ಷಿತಿಯೊಳಗೆ ಲಕನಾಪುರದ ಗೌಡ ಹನುಮಂತರೆಡ್ಡಿ ಗುರುವರನ ದಯದಿ  ||೧೧||

ಪ್ರಾಚೀನ ಕಬ್ಬಿಗರ್ಪ್ಪೇಳ್ದದ ಶಬ್ಧಾರ್ಥಮಂ
ಯೋಚಿಸಿ ಕವಿತೆಯಂ ಸಕಲರರಿವಂತೆ ನಾಂ
ಸೂಚಿಸಿದೆಲ್ಲದೆನ್ನಾತ್ಮರಸಿಕತೆಯಿಂದ ರಚಿಸಲಾನೆನಿತರವನು
ವಾಚಾಪ್ರದೋಷದಿಂ ತಪ್ಪಿರ್ದ ನುಡಿಗಳಾ
ಲೋಚನೆಗೆ ತಂದು ತಾವೆ ತಾವೆ ಕೃಪೆಯಿಂ ತಿದ್ದಿ
ಭೂಚಕ್ರದೊಳ್ ಶುದ್ಧಮಪ್ಪಂತೆ ಮಾಳ್ಪುದೆಂದುರೆ ನಮಿಪೆ ಪಂಡಿತರ್ಗೆ ||೧೨||

ಲೋಕದೊಳ್ ಕವಿಯೆನಿಸಬೇಕೆಂಬ ಕಕ್ಕುಲತೆ
ಗೇಕೀ ಕವಿತ್ವಮಂ ತಾ ಕಲ್ಪಿಸಿದನೆಂದ
ನೇಕ ವಿಧದಿಂದಲಿ ನಿರಾಕರಿಸಿಯನ್ನಯ ವಿವೇಕತ್ವ ಗುಣವೆನಿಸದೆ
ಯೇಕ ಮಾನಸದೊಳವಲೋಕಿಸಿ ಸುಗುಣಗಳನು
ಸಾಕಾರದಿಂದಲೇ ಸ್ವೀಕರಿಪುದೆಂದು ಸುವಿ
ವೇಕಿಯರ್ಗೆರಗಿ ಕೃತಿಪ್ರಾಕೃತದಿ ರಚಿಸಿದೆ ಸುಖಕರ ಶಿವನ ದಯದೊಳು ||೧೩||

ಧಾರಣಿಯೋಳುರೆ ಮೆರೆವ ರಸ್ತಾಪುರ ನಿವಾಸ
ವೀರಮಹೇಶ ಶಾಂತೇಶನಾರ‍್ಧಾಂಗಿ ಸುವಿ
ಚಾರಿ ಚನ್ನಮ್ಮನೋಡಲಾರ್ಣವದೊಳುದ್ಭವಿಸಿ ಬಾಲಲೀಲೆಯನು ಕಳೆದು
ಸಾರಸದ್ಗುರು ಸಿದ್ಧರಾಮನುಪದೇಶದಿಂ
ಪಾರಮಾರ್ಥವ ತಿಳಿದು ಭಜಕರಂ ಪಾಲಿಸಿದ
ಧೀರ ಶರಭೇಂದ್ರನೀ ಕೃತಿಗೆ ಮನ್ಮತಿಗೆ ಮಂಗಲವಿತ್ತು ಕಾಪಾಡಲಿ ||೧೪||

ಇಂತೆಬಲ್ಲಿಗೆ ಶರಭೇಶ್ವರ ಪಾದಾಬ್ಜಭೃಂಗನು ವಿಶಿಷ್ಠ
ವಿದ್ವಜ್ಜನ ವಿಧೇಯನು ಆದ ಭೀಮನಾಯಕ
ಕವಿಯಿಂ ಪ್ರಣೀತಮಪ್ಪ ಹಾಲ್ಮತೋತ್ತೇಜಕ
ಪುರಾಣದಲ್ಲಿ ಅಂತು ಸಂದಿ ೧ಕ್ಕಂ ಪದನು ೧೪ಕ್ಕೆ ಮಂಗಲಂ
ಮಹಾಶ್ರೀಶ್ರೀಶ್ರೀ