ಹಾಲುಮತ ಮತ್ತು ಗಂಗಾಮತ ಇವು ವಿಶ್ವಮತಗಳು. ಹಾಲಿನ ಮೂಲದ ಹಾಲುಮತ ಮತ್ತು ನೀರಿನ ಮೂಲದ ಗಂಗಾಮತವು ಹಾಲು ಮತ್ತು ನೀರಿನ ಅದ್ಭುತ ದರ್ಶನಗಳು. ಇವುಗಳು ವಿಶ್ವ ಸಂಸ್ಕೃತಿ ಬೆಳವಣಿಗೆಯ ಕುರುಹುಗಳು. ವಿಶ್ವಮಾನ್ಯವಾದ ದ್ವದಶ ರಾಶಿಚಕ್ರದಲ್ಲಿ ಹಾಲುಮತ ಮೂಲದ ಮೇಷರಾಶಿ ಮತ್ತು ಗಂಗಾಮತ ಮೂಲದ ಮೀನರಾಶಿಗಳು ಅವಿನಾಭಾವ ಸಂಬಂಧ ಹೊಂದಿವೆ. ಈ ರಾಶಿಗಳು ವಿಶ್ವಸಂಸ್ಕೃತಿ ವಿಕಸನದ್ದ ಕುರುಹುಗಳು. ಅಜಪವೇದವು ವಿಶ್ವಮತದ ಕುರುಹು. ಇದನ್ನು  ಭೂಗತಗೊಳಿಸಲಾಗಿದೆ. ಅಜಪವೇದದ ದರ್ಶನವು ಹಾಲುಮತ ಪುರಾಣಗಳ ಮುಖೇನ ಶೋಧಿಸುವ ಅಗತ್ಯವಿದೆ. ಹಾಲುಮತದ ದರ್ಶನವನ್ನು ಹಾಲುಮತ ಪುರಾಣಗಳ ಸಾಂಸ್ಕೃತಿಕ ವೀರರ ಮೂಲದ ಮತ್ತು ಆಚರಣೆಗಳ ಮೂಲದ ಗಮನಿಸಬಹುದಾಗಿದೆ. ಹಾಲುಮತ ಸಂಸ್ಕೃತಿಕ ವೀರರಲ್ಲಿ ಮಹಾಲಿಂ(ಳಿ)ಗನು ಬಹು ಮುಖ್ಯನು. ಮಹಾಲಿಂಗನ ಪರಿಕಲ್ಪನೆಯನ್ನು ಹಾಲುಮತ ಕಾವ್ಯ ಮತ್ತು ಮಧ್ಯ ಭಾರತದ ಗೊಂಡರ ಸಾಂಸ್ಕೃತಿಕ ಅಂಶಗಳ ಹಿನ್ನಲೆಯಲ್ಲಿ ಸಾದರಪಡಿಸಲು ಇಲ್ಲಿ ಪ್ರಯತ್ನಿಸಲಾಗಿದೆ.

ಮುದ್ದವ್ವ ಮುದ್ದುಗೊಂಡರು ಪಾರ್ವತಿ ಪರಮೇಶ್ವರರ ಮಾನಸ ಪುತ್ರರು. ಇವರಿಂದ ಹಾಲುಮತ ಬೆಳೆಯುವುದು. ಈ ದಂಪತಿಗಳಿಗೆ ಆದಿಗೊಂಡ, ಸಿದ್ಧಗೊಂಡ, ಪದುಮಗೊಂಡ ಎಂಬ ನಾಲ್ಕು ಮಕ್ಕಳು. ಪದುಮಗೊಂಡನಿಗೆ ಕಡೆ ಹುಟ್ಟಿದ ಉಂಡಾಡೋ ಪದ್ಮಗೊಂಡ ಎಂದೂ ಕರೆಯಲಾಗುವುದು. ಪದುಮಗೊಂಡನ ಮುಂದಿನ ಅವತಾರವೇ ಮಹಾಲಿಂಗರಾಯ ಎಂದೂ ನಂಬಲಾಗುವುದು. ಗೊಂಡ ಬುಡಕಟ್ಟು ಮೂಲದ ಹಾಲುಮತವೇ ವಿಶ್ವಮತ. ಇಲ್ಲಿಯ ಮಹಾಲಿಂಗವೇ ಮಧ್ಯಭಾರತದ ಗೊಂಡ ಬುಡಕಟ್ಟಿನ ಪಶುಪತಿ, ಫೆರ್ಸಾಪೇನ್, ಶಂಭು ಮಹಾದೇವ. ದಕ್ಷಿಣ ಭಾರತದ ಹಾಲುಮತಸ್ಥರಲ್ಲಿ ಮಹಾಲಿಂಗ, ಮಾಳಿಂಗ, ಮಾಳಿಂಗರಾಯನ ಹೆಸರಿನಲ್ಲಿ ಜನಜನಿತ. ಮಾಳಿಂಗರಾಯನು ಹಾಲುಮತದ ಸಾಂಸ್ಕೃತಿಕ ವೀರನೆಂದು ವಿಭಿನ್ನ ಪುರಾಣಗಳು ದರ್ಶಿಸಿವೆ.

ಮಹಾಳಿಂಗರಾಯನ ಜೀವನ ಸಾಧನೆಗಳನ್ನು ಡಾ. ವೀರಣ್ಣ ದಂಡೆಯವರು ಸಂಪಾದಿಸಿದ ಜನಪದ ಹಾಲುಮತ ಮಹಾಕಾವ್ಯದಲ್ಲಿ ಸಿದ್ದಪ್ಪ ಮೇಟಿಯವರು ಕಟ್ಟಿಕೊಟ್ಟಿದ್ದಾರೆ. ಸಿದ್ದಪ್ಪ ಮೇಟಿಯವರು ಇಂದಿನ ಯಾದಗಿರಿ ಜಿಲ್ಲೆಯ ಶಹಪುರ ತಾಲೂಕಿನ ಸೈದಾಪುರ ಗ್ರಾಮದ ಹಾಲುಮತದ ಕುರಿಗಾಹಿ ಕುಟುಂಬದ ೯೦ರ ಹರೆಯದವರು. ಇವರು ಕಟ್ಟಿಕೊಟ್ಟ ಜನಪದ ಹಾಲುಮತ ಮಹಾಕಾವ್ಯ ೭೦೦ ಪುಟಗಳಷ್ಟು ಹರವನ್ನು ಹೊಂದಿದ್ದು ಜಾನಪದ ಲೋಕಕ್ಕೆ ವಿಸ್ಮಯವನ್ನುಂಟುಮಾಡಿದೆ. ಇದನ್ನು ಕನ್ನಡ ಪ್ರಾಧಿಕಾರವು ೨೦೦೦ರಲ್ಲಿ ಪ್ರಕಟಿಸಿ ಉಪಕರಿಸಿದೆ. ಸಿದ್ದಪ್ಪ ಅವರ ಜಾನಪದ ಸಾಧನೆಗಾಗಿ ಕರ್ನಾಟಕ ಸರ್ಕಾರ ಜಾನಪದ ಸಿರಿ ಪ್ರಶಸ್ತಿ ನೀಡಿ ಗೌರವಿಸಿದೆ. ಇವರು ಹಾಡಿದ ಜನಪದ ಹಾಲುಮತ ಮಹಾಕಾವ್ಯದಲ್ಲಿ ಮಹಾಳಿಂಗರಾಯನ ಕುರಿತ ಕಥನ ಹೀಗಿದೆ.

ಮಾಳಿಂಗರಾಯ

ಬೀರಪ್ಪನು ಕುರಿಕಾಯುವ ಜನಾಂಗದವನಾದರೆ, ಮಾಳಿಂಗರಾಯನು ಆಕಳುಗಳನ್ನು ಕಾಯುವ ಜನಾಂಗದವನೆಂದು ಈ ಕಾವ್ಯ ಹೇಳುತ್ತದೆ. ಇವನ ಪೂರ್ವಜರು ದೇವರನಾಡಿಗೆ ಸಂಬಂಧಿಸಿದವರು. ಶೂರರು ಅಡವಿಯಲ್ಲಿಯೇ ಇರುವುದರಿಂದ ಬಿಲ್ಲುಬಾಣಗಳ ಪ್ರಯೋಗದಲ್ಲಿ ಪರಿಣಿತರು. ಈ ಶೂರತನ ಸಹಜವಾಗಿಯೇ ಮಾಳಿಂಗರಾಯನಿಗೂ ಬಂದಿದೆ. ಹೀಗಾಗಿ ಸ್ವತಃ ಹೋರಾಡುವ ಪ್ರವೃತ್ತಿ, ಅತ್ಯಂತ ಸ್ವಾಭಿಮಾನದ, ಗುರುಭಕ್ತಿಯ ವ್ಯಕ್ತಿತ್ವ ಅವನಲ್ಲಿ ಕಾಣುತ್ತೇವೆ. ಗುರು ಬೀರಪ್ಪ ಸ್ವತಃ ಶಿವನಿಂದ ಬೇಡಿ ಪಡೆದ ಶಿಷ್ಯ ಮಾಳಿಂಗರಾಯ.

ಸೋಮರಾಯ, ತುಕ್ಕಪ್ಪರಾಯ ಇಬ್ಬರೂ ಶೂರ ಅಣ್ಣ ತಮ್ಮಂದಿರು. ಇವರ ಮನೆತನದ ಗುರು ಗೋರಖನಾಥ. ಇವನಲ್ಲಿ ೭೦೦ ಆಕಳುಗಳಿದ್ದವು. ಬರಗಾಲ ಬಿದ್ದು ನೀರು ಮೇವಿಗೆ ತೊಂದರೆ ಆದುದರಿಂದ ಆತ ನಾಲ್ಕೂ ದಿಕ್ಕಿಗೆ ಪತ್ರ ಬರೆದು ತನ್ನ ತೊಂದರೆಯನ್ನು ರವಾನಿಸಿದನು. ಯಾರೂ ಪತ್ರ ಹಿಡಿಯಲಿಲ್ಲ. ಸೋಮರಾಯ, ತುಕ್ಕಪ್ಪರಾಯ ಪತ್ರ ಹಿಡಿದರು. ಗುರುವಿನಲ್ಲಿ ಬಂದು, ಅವನ ಆಜ್ಞೆಯಂತೆ ೭೦೦ ಕಿಲ್ಲಾರಿಗಳನ್ನು ಹೊಡೆದುಕೊಂಡು ಬಾಬನ ಗುತ್ತಿಗೆ ಬಂದು ಇರಹತ್ತಿದರು. ಹೀಗೆ ಮಾಳಿಂಗರಾಯನ ಪೂರ್ವಜರು ದನಗಾಹಿಗಳಾಗಿದ್ದರು.

ಜನನ: ಸೋಮರಾಯನ ಹೆಂಡತಿ ಕಾನಾಬಾಯಿ. ತುಕ್ಕಪ್ಪರಾಯನ ಹೆಂಡತಿ ಅಮೃತಬಾಯಿ. ಸೋಮರಾಯ ತಮ್ಮ, ಅಣ್ಣ ತುಕ್ಕಪ್ಪರಾಯ. ಅಣ್ಣತಮ್ಮರು ಆಕಳುಗಳನ್ನು ಮೇಯಿಸಲು ಹೊಡೆದುಕೊಂಡು ಹೋದಾಗ ಶಿವಪಾರ್ವತಿ ಮುದುಕರ ವೇಷದಲ್ಲಿ ಇವರ ಮನೆಗೆ ಬಂದರು. ಆದರಾತಿಥ್ಯ ಪಡೆದು, ಅವರಿಗೆ ಮಕ್ಕಳಿಲ್ಲದ್ದನ್ನು ಗಮನಿಸಿ ಶಿವನು ತನ್ನ ಕೊರಳಲ್ಲಿಯ ಮಾಣಿಕ್ಯದ ಹರಳನ್ನು ಪಾರ್ವತಿ ಜಂಬುನೀಲದ ಹರಳನ್ನೂ ಕೊಟ್ಟು ಜಗುಲಿಯ ಮೇಲಿಡಲು ಹೇಳಿ ಹೋದರು. ಸೋಮರಾಯ ತುಕ್ಕಪ್ಪರಾಯ ಬಂದನಂತರ ಎಲ್ಲರೂ ಕೂಡಿ ಜಗುಲಿ ನೋಡಿದರೆ ಅಲ್ಲಿ ಎರಡು ಗಂಡು ಮಕ್ಕಳು ಆಡುತ್ತಿದ್ದವು. ಇವರೇ ಜಕ್ಕಪ್ಪ ಮತ್ತು ಮಾಳಪ್ಪ. ಜಂಬಿನೀಲದ ಹರಳಿನಿಂದ ಜಕ್ಕಪ್ಪ, ಮಾಣಿಕ್ಯದ ಹರಳಿನಿಂದ ಮಾಳಿಂಗರಾಯರ ಜನನವಾಯಿತು. ಆದರೆ ಇವರ ತಾಯಿ ತಂದೆಯರ ಹೆಸರನ್ನು ಹೇಳುವಾಗ ಸೋಮರಾಯ ಕಾನಾಬಾಯಿ ಎಂದು ಈ ಕಾವ್ಯದಲ್ಲಿ ಹಲವಾರು ಕಡೆ ಉಲ್ಲೇಖಗಳು ಬರುತ್ತವೆ.

ಕಳ್ಳ ಬೇಟೆಗಾರರ ಕೈಯಲ್ಲಿ ತುಕ್ಕಪ್ಪರಾಯ ಮರಣವನ್ನಪ್ಪಿದಾಗ ಸೋಮರಾಯ ಗುರುವನ್ನು ಧ್ಯಾನಿಸಲು ಗೋರಖನಾಥ ಬಂದು ಇವನಲ್ಲಿ ಉಳಿಯುತ್ತಾನೆ. ಜಕ್ಕಪ್ಪ ಮಾಳಪ್ಪರಿಗೆ ಗುರು ಗೋರಖನಾಥನೇ ಸರ್ವವಿದ್ಯೆಯಲ್ಲಿ ಪಳಗಿಸುತ್ತಾನೆ. ಸೋಮರಾಯ ಪಗಡಿ ಆಡಿ, ದಿಲ್ಲಿ ಸುಲ್ತಾನಗಿರಿ ಪಡೆದು, ಮಕ್ಕಳನ್ನು ಮರೆತು ಕುಳಿತಾಗ, ಜಕ್ಕಪ್ಪ ಮಾಳಪ್ಪರು ಕುದುರೆ ಏರಿ ಹೋಗುತ್ತಾರೆ. ದಿಲ್ಲಿ ಸುಲ್ತಾನನ ತೋಟವೆಲ್ಲ ನಾಶಮಾಡುತ್ತಾರೆ. ಅಲ್ಲಿಯ ಒಂದು ಕಲ್ಲಿನಲ್ಲಿ ತಮ್ಮ ಪರಿಚಯ ಬರೆದು ಹಿಂತಿರುಗುತ್ತಾನೆ. ಈಗ ಮಕ್ಕಳ ಮದುವೆ ಮಾಡಲು ವ್ಯವ್ಯಸ್ಥೆ ಮಾಡಿ ಮಾಳಿಂಗರಾಯನಿಗೆ ಒಮ್ಮೆಲೆ ಇಬ್ಬರು ಹೆಂಡಂದಿರನ್ನು ತರುತ್ತಾನೆ. ಈರಮ್ಮ ಹಾಗೂ ಶರಣಮ್ಮ ಎಂದು ಅವರ ಹೆಸರು.

ಬೀರಪ್ಪನ ಶಿಷ್ಯನಾಗಿ: ಒಟ್ಟು ಈ ಕಾವ್ಯ ಕೊಡುವ ಸಂದೇಶಗಳಲ್ಲಿ “ಬೀರಪ್ಪನಂತಹ ಗುರು. ಮಾಳಿಂಗರಾಯನಂಥ ಶಿಷ್ಯ” ಅಪರೂಪದವರೆಂದು ಹೇಳುವುದು ಮುಖ್ಯವಾಗಿದೆ. ಮಾಳಿಂಗರಾಯನ ಪೂರ್ವಜರು ಒಬ್ಬ ಗುರುವಿನ ಉತ್ತಮ ಶಿಷ್ಯರಾಗಿದ್ದರೆ, ಮಾಳಿಂಗರಾಯನೂ ಶಿಷ್ಯತ್ವದ ವ್ಯಕ್ತಿತ್ವವನ್ನು ಪಡೆದವನಾಗಿದ್ದಾನೆ. ಈ ಕಾವ್ಯದ ಸಂದೇಶ. ಗುರು-ದೇವರಾಗಿ, ಶಿಷ್ಯ-ಪೂಜಾರಿಯಾಗಿ ಕಾಣುತ್ತಾರೆ. ಭಕ್ತನ ಸ್ಥಾನ ಮಾತ್ರ ಸಾಮಾನ್ಯ. ನಿಷ್ಥೆ, ವಿಶ್ವಾಸ, ತ್ಯಾಗ, ಸ್ಥೈರ್ಯ ಗುಣಗಳಿಗೆ ಮಾಳಿಂಗರಾಯನದು ಹೇಳಿಮಾಡಿಸಿದ ವ್ಯಕ್ತತ್ವ.

ಬೀರಪ್ಪನು ಗೌಡಗಿರಿಯಲ್ಲಿ ತಪಸ್ಸಿಗೆ ಕುಳಿತಾಗ ಶಿವಬಂದು ಎಚ್ಚರಿಸಿ ಕಾರಣ ಕೇಳಲು, ತನಗೆ ತನ್ನಷ್ಟೇ ಸಾಮರ್ಥ್ಯವುಳ್ಳ ಒಬ್ಬ ಶಿಷ್ಯಬೇಕೆಂದು ಕೇಳಿದನು. ಅದಕ್ಕೆ ಶಿವನು ಜಲ್ಮಾಯಿ ಕೆರೆಯ ಕೆಳಗೆ, ಡೋಣಜ ಕೆರೆಯ ಮೇಲೆ ಮಾಳಿಂಗರಾಯ ಬಿಳಿಯ ಕುದುರೆ ಏರಿ, ಹಸಿರು ನಿಶಾನೆಯೊಂದಿಗೆ ಬರುವ ಸಮಾಚಾರ ತಿಳಿಸಿದನು. ಬೀರಪ್ಪನಿಗೆ ಎಕ್ಕಿಯ ಬನದಲ್ಲಿ ಗಂಡೆರಳಿಯಾಗಿ ನಿಲ್ಲಲು ಹೇಳಿದನು. ಹೀಗೆ ನಿಂತ ಬೀರಪ್ಪನಿಗೆ ಮಾಳಿಂಗರಾಯ ಬಿಲ್ಲು ಹಿಡಿದು ಬೆನ್ನು ಹತ್ತಿದನು. ಕೆರೆಯಲ್ಲಿ ಜಿಗಿದು ಪಾತಾಳಕ್ಕೆ ಓಡಿದರೂ ಮಾಳಿಂಗರಾಯ ಬಿಡದೇ ಬೆನ್ನು ಹತ್ತಿದ್ದ ಎನ್ನುವಲ್ಲಿ ಮಾಳಿಂಗರಾಯನ ಸಾಮರ್ಥ್ಯ ಹೇಳಲು ಕಾವ್ಯ ಹೊರಟಿದೆ ಏನೋ ಎನಿಸುತ್ತದೆ. ಪಾತಾಳದಲ್ಲಿ ಬೀರಪ್ಪ ದರ್ಶನ ಕೊಟ್ಟಾಗ ಅವನ ಹಿಂಬಾಲಕನಾದ ಮಾಳಿಂಗರಾಯ ಕೊನೆಯವರೆಗೂ ಆತನ ಸೇವೆಯಲ್ಲಿಯೇ ಉಳಿಯುತ್ತಾನೆ.

ಬೀರಪ್ಪನನ್ನು ಕೂಡಿದ ಮೇಲೆ ಮಾಳಿಂಗರಾಯನು ತನ್ನ ತಾಯಿಗೆ ತಿಳಿಸಿ, ಜಲ್ಮಾಯಿ ಕೆರೆಯ ಮೇಲೆ ಗುರುವಿಗೆ ೧೨೦೦ ದಂಡಿನ ಜೊತೆಗೆ ಭೋಜನದ ವ್ಯವಸ್ಥೆ ಮಾಡಿಸಿದನು. ಬೀರಪ್ಪನು ತಾನು ಕಾಯ್ದ ಕುರಿಗಳು ಗೌಡಗಿರಿಯ ಅಡವಿಯಲ್ಲಿದ್ದು ಅವನ್ನು ಹೊಡೆದುಕೊಂಡು ಬರುವಂತೆ ಹೇಳುವನು. ಅವನನ್ನು ತರಿಸಿ ಬಿಜ್ಜಳಗುಂತಿಯಲ್ಲಿ ಸಾಲದೊಡ್ಡಿ ಹಾಕಿ, ಕುರಿಗಳ ವ್ಯವಸ್ಥೆ ಮಾಡಿ ತನ್ನ ಮಕ್ಕಳನ್ನು ಕುರಿ ಕಾಯಲು ಹಚ್ಚಿದನು. ಅಲ್ಲಿಂದ ಸಿಡಿಯಾಣಕ್ಕೆ ಗುರುವನ್ನು ಕರೆದುಕೊಂಡು ಬಂದು, ಗುಡಿ ಕಟ್ಟಿಸಿ ಇಡುವನು. ಈ ಕಾವ್ಯದಲ್ಲಿ ಕಾಳಿನಾರಾಯಣ, ಭರಮದೇವರು ಶಿವನಪೂಜೆ ಮಾಡುವುದು ಹಾಗೂ ಭೂಲೋಕದಲ್ಲಿ ಮಾಳಿಂಗರಾಯ ಬೀರಪ್ಪನ ಪೂಜೆ ಮಾಡುವುದು ಒಂದೇ ಎಂಬಂತೆ-ವಿವರಣೆಗಳು ಬರುತ್ತವೆ.

ಗದ್ದಿಗಿ ಏರಿದ ಗುರುವಿಗೆ ಊಟಕ್ಕೆ ಹುಲಿಗಿಣ್ಣ ಹಾಗೂ ಆಟಕ್ಕೆ ಹುಲಿಮರಿ ಕೊಡಲು ಪ್ರಯಾಣ ಹೊರಡುವನು. ನಿಂಬರ್ಗಿ ಭೀಮರಾಯ, ಹಳಗುಣಕಿ ಭೀಮರಾಯ, ಮಾಳಮ್ಮರು ಅವನಿಗೆ ಹುಲಿ ಇರುವುದು ಎಲ್ಲಿ ಎಂಬುದನ್ನು ಹೇಳಿಕೊಟ್ಟರು. ಒಂದು ಹುಲಿ ಈದು ಇನ್ನೂ ಮರಿಗಳು ಕಣ್ಣು ತೆರೆಯುವ ಮುನ್ನವೇ ಮೇಯಲು ಹೊರಟು ಹೋಗಿತ್ತು. ಮಾಳಪ್ಪ ಆ ಮರಿಗಳ ಸಮೀಪ ಹೋಗುತ್ತಲೇ ಒಂದು ಹಾವು ಆ ಮರಿಗಳನ್ನು ತಿನ್ನಲು ಬರುತ್ತಿರುವುದನ್ನು ಕಂಡು ಅದಕ್ಕೆ ಭಂಡಾರ ಒಗೆಯಲು ಅವುಗಳ ಕಣ್ಣು ಬಂದವು. ತಾಯಿ ಹೊರಗಿನಿಂದ ಬಂದಾಗ, ಮರಿಗಳು ಮಾಳನಿಂದ ತಾವು ಉಳಿದಿರುವ ವಿಷಯ ಹೇಳಿದ್ದರಿಂದ, ಹುಲಿ ಮಾಳಿಂಗರಾಯನ ಇಷ್ಟದಂತೆ ತನ್ನ ಹಾಲು ಒದಗಿಸಿದ್ದಲ್ಲದೇ, ಮರಿಗಳನ್ನು ಆತನಿಗೆ ಕೊಟ್ಟಿತು. ಅವನ್ನು ತಂದು ಗುರುವಿಗೆ ಗದ್ದುಗೆ ಮೇಲೆ ಕೂಡ್ರಿಸಿ, ಹುಲಿಯ ಹಾಲು ಮತ್ತು ಮರಿಗಳನ್ನು ಸಲ್ಲಿಸಿ, ಪೂಜೆ ಮಾಡಿ ಆರತಿ ಬೆಳಗುವಾಗ ಈ ಬೆಳಕು ಕೈಲಾಸದಲ್ಲಿ ಬಿದ್ದಿತ್ತು. ಪಾರ್ವತಿ ಇದೆಂತಹ ಬೆಳಕು ಎನ್ನಲು ಶಿವನು ಮಾಳಿಂಗರಾಯನ ಸಮಾಚಾರ ತಿಳಿಸುವನು. ಆಗ ಪಾರ್ವತಿ ಶಿವನ ಮಗಳು ಶೀಲವಂತಿಯನ್ನು ಮಾಳನನ್ನು ಪರೀಕ್ಷಿಸಲೆಂದು ಕಳುಹಿಸಿಕೊಡುವಳು.

ಮಾಳನನ್ನು ಭೇಟಿಯಾಗಲು ಶೀಲವಂತಿ ಸಿಡಿಯಾಣಕ್ಕೆ ಬಂದರೆ, ಆತನು ಮಾರು ವೇಷದಲ್ಲಿ ಬಂದು-ಮಾಳನು ಇದೀಗ ಪುಜೆ ಮುಗಿಸಿಕೊಂಡು ಮುಂದಿನ ಮಠಕ್ಕೆ ಹೋದನೆಂದು ಹೇಳುತ್ತಾನೆ. ಆಕೆ ಅಲ್ಲಿಗೆ ಬರಲು ಮತ್ತೆ ಮುಂದಿನ ಮಠಕ್ಕೆ ಹೋದನೆನ್ನುತ್ತಾನೆ. ಹೀಗೆಯೇ ಒಂಬತ್ತು ಮಠಗಳಿಗೂ ಅಡ್ಡಾಡಿಸುತ್ತಾನೆ. ಆಕೆ ನಿರಂತರವಾಗಿ ತನ್ನ ಹುಡುಕಾಟದಲ್ಲಿರುವುದನ್ನು ಗಮನಿಸಿ ಮಾಳಪ್ಪನು ತನಗೆ ಕಾಪಾಡಬೇಕೆಂದು ಬೀರಪ್ಪನ ಮೊರೆ ಹೋಗುತ್ತಾನೆ. ಆದರೆ ಬೀರಪ್ಪನು-ಅದು ತನ್ನಿಂದ ಆಗದ ಮಾತೆಂದೂ, ಕೊನೆಗೆ ನೀನು ಉಳಿದು ಬಂದರೆ, ನನ್ನ ಪೂಜೆ ಮಾಡಬೇಕೆಂದೂ ಹೇಳುತ್ತಿರುತಾನೆ. ಕೊನೆಗೆ ಮಾಳಪ್ಪನು ಹನುಮಂತನ ಮೊರೆಹೊಕ್ಕನು. ಹನುಮಂತನು ಮಾಳನನ್ನು ಕೊಡುವುದಿಲ್ಲ ಎಂದು ಶೀಲವಂತಿಗೆ ಅರಹುವನು. ಆದರೂ ಆಕೆ ಅಲ್ಲಿಯೇ ಗುಡಿಯ ಮುಂದಿನ ಗಿಡದ ಬುಡದಲ್ಲಿ ಮಲಗಿ ನಿದ್ರಿಸುವಾಗ ಆಕೆಯ ನತ್ತನ್ನು ತೆಗೆದು ಅವಳ ಉಡಿಯಲ್ಲಿಯೇ ಹಾಕುವನು.

ಆಕೆ ಎದ್ದು ಮುಖ ತೊಳೆಯುವಾಗ ನತ್ತು ಕಾಣದೆ ಗಾಬರಿಯಾದಾಗ, ಮಾಳನು ಅದು ನಿನ್ನ ಉಡಿಯಲ್ಲಿಯೇ ಇದೆ ಎಂದು ಎಚ್ಚರಿಸುವನು. ಆಕೆ ನತ್ತು ಇಟ್ಟುಕೊಂಡು ತಿರುಗಿ ನೋಡಿದರೆ ಅಲ್ಲಿ ಸ್ಫುರದ್ರೂಪಿಯಾದ ಮಾಳನೇ ಕಾಣುವನು. “ನೆರಿಯಗಡ್ಡದ ಹಿರಿಯ ಬಾ ನನ್ನ ಕರಿಯ ಗಡ್ಡದ ಎಳಿಯಾನೆ” ಎಂದು ಹಾಡಿ, ನೀನೆ ನನ್ನ ಅಣ್ಣನೆಂದು ಶರಣಾಗುವಳು.

ಕೊನೆಗೆ ಪಾರ್ವತಿಯೇ ಮಾಳನನ್ನು ಪರೀಕ್ಷಿಸಬಯಸಿದಾಗ ಶಿವನೂ ಜೊತೆಗೆ ಬಂದನು. ಇಬ್ಬರೂ ಕೂಡಿ ಮೈಯೆಲ್ಲ ಹಣ್ಣಾದ ಮುದುಕ-ಮುದುಕಿಯರಾಗಿ ಬೀರಪ್ಪನ ಗುಡಿಯ ಹತ್ತಿರ ಕುಳಿತರು. ಇದರಿಂದ ಬೀರಪ್ಪನಿಗೆ ಹೊಲಸುವಾಸನೆ ಬಡಿದು ಆತ ಕ್ರೋಧಗೊಂಡನು. ಆದರೆ ಮಾಳಪ್ಪ ಬಂದು ಅವರಿಬ್ಬರನ್ನು ಎತ್ತಿಕೊಂಡೊಯ್ದು ಬೀರಪ್ಪನ ಮಗ್ಗುಲಲ್ಲಿಯೇ ಇಳಿಸಿದನು. ತನ್ನ ದೇಹದ ಆಸೆಬಿಟ್ಟು-ಹತ್ತಿಯಾರ ಚೆಲ್ಲಾಡಿ ಬೆನ್ನಲ್ಲಿ ಬೆಳಕು ತೋರಿದನು. ಶಿವನೇ ಎದ್ದು ಮಾಳನ ಕೈಹಿಡಿದನು. ಪ್ರತಿವರ್ಷ ದೀಪಾವಳಿಗೆ ನೀನು ಬರಬೇಕೆಂದು ಭಾಷೆ ಪಡೆದನು.

ಬೀರಪ್ಪನು ಮಾಳಿಂಗರಾಯನಿಂದ ಗೀಜಗನಹಳ್ಳಿಯ ಖಾಸಬಾಗದ ಹೂ ಮತ್ತು ನಾಗರಬಾವಿಯ ನೀರಿನಿಂದ ಪೂಜೆ ಬಯಸುತ್ತಾನೆ. ಮಾಳಿಂಗರಾಯ ಅದಕ್ಕೆ ಒಪ್ಪಿ, ಪೂಜೆ ಮಾಡಿ, ಗಾಂಜಾಮಿದ್ದಿ ಸೇದಲು ಕೊಡುತ್ತಾನೆ. “ಇಟ್ಟಲಿ ಇರಬೇಕು, ಕರದಲ್ಲಿ ಬರಬೇಕು” ಎಂದು ವರವ ಪಡೆದು ಗೀಜಗನ ಹಳ್ಳಿಗೆ ಹೊರಡುತ್ತಾನೆ. ಈ ಸಂದರ್ಭ ಮತ್ತು ಈ ಸಂದರ್ಭದಿಂದ ಮುಂದೆ ಮಾಳಿಂಗರಾಯ ಬೀರಪ್ಪ ಮತ್ತು ಆತ ಬೀರಪ್ಪನ ಮೇಲಿಟ್ಟ ಗಾಢವಾದ ಭಕ್ತಿಗಳು ವ್ಯಕ್ತವಾಗುತ್ತವೆ. ಬೀರಪ್ಪನು ಮಾಳಿಂಗರಾಯನ ಬೆನ್ನ ಹಿಂದೇ ಇರುವ ರೀತಿ, ಅವನಿಗೆ ಸಂಕಷ್ಟಗಳು ಬಂದಾಗ ಕಾಪಾಡುವ ರೀತಿಯನ್ನು ಕಾಣುತ್ತೇವೆ. ಮಾಳಿಂಗರಾಯನಿಗೆ ಅನೇಕ ತೊಂದರೆಗಳನ್ನು ಒಡ್ಡುವ ಬೀರಣ್ಣ, ಅದರಲ್ಲೆಲ್ಲ ಗೆದ್ದು ಬರುವ ಮಾಳಿಂಗರಾಯನ ಸೃಷ್ಟಿಯಲ್ಲಿ ಈ ಕೃತಿ ಮಗ್ನವಾಗಿದೆ ಎನಿಸುತ್ತದೆ. ಹೀಗಾಗಿ ಬೀರಪ್ಪನೇ ಕುಳಿತು ಮಾಳಿಂಗರಾಯನ ಸಾಮರ್ಥ್ಯವನ್ನು ಪ್ರಪಂಚಕ್ಕೆ ತೋರಿಸುವ ತಂತ್ರ ಹೂಡಿದಂತೆ ಕಾಣುತ್ತದೆ.

ಖಾಸಬಾಗದ ಹೂ ನಾಗರಬಾವಿಯ ಸೀತಾಳ ತರಲು ಮಾಳಿಂಗರಾಯ ಹೊರಟಾಗ ಚೇಳು, ಹಾವು ಬಿಡುತ್ತಾನೆ. ಮಾಳಿಂಗರಾಯ ಅವನನ್ನು ಗುರುವಿನ ಸಿಕ್ಯಾದ ಉಂಗುರ, ನಾಗಬಂದ ಎಂದು ಎತ್ತಿಕೊಳ್ಳುತ್ತಾನೆ. ಬೋರೆಂಬ ಮಳೆ ಸುರಿದರೂ-ಗುರುವಿನ ಹೆಸರಿನಲ್ಲಿ ಭಂಡಾರ ಹೊಡೆಯಲು ತುಂಬಿದ ಹೊಳೆ ದಾರಿಬಿಡುತ್ತದೆ.

ಗೀಜಗನಳ್ಳಿ ಖಾಸಬಾಗದ ಘಟನೆ ಮಾಳನ ಒಟ್ಟು ಅಂತಃಸಾಮರ್ಥ್ಯವನ್ನು ತೋರಿಸುವ ಘಟನೆಯಾಗಿದೆ. ಅದು ಧರ್ಮರಾಜನ ಆಳ್ವಿಕೆಗೆ ಸೇರಿದೆ. ಅದಕ್ಕೆ ಭೀಮ, ಅರ್ಜುನ, ನಕುಲ, ಸಹದೇವರೆಲ್ಲ ಆಯಾಕಟ್ಟಿನ ಸ್ಥಳದಲ್ಲಿ ಕಾವಲಿದ್ದಾರೆ. ನೌಲಾಕ ಹಿಲಾಲಗಳು ಒಂದೇ ಸಮನೇ ಉರಿಯುತ್ತಿವೆ. ಇಂತಹದನ್ನು ಬೇಧಿಸುವ ಸಾಮರ್ಥ್ಯ ಮಾಳಿಂಗರಾಯನಲ್ಲಿ ತೋರುವ ಸಮಯವಿದು. ಆತ ಗುರುವಿನ ನೆನೆದು, ತಾಯಿ-ತಂದಿನ ನೆನೆದು ಮಳೆಗೆ ಕರೆದನು. ಆಶ್ಚರ್ಯದ ಮಳೆಗರೆದು, ಹಿಲಾಲಗಳೆಲ್ಲ ನಂದಿದವು. ಪಾಂಡವರೆಲ್ಲ ತಮ್ಮ ತಮ್ಮ ಗೂಡು ಸೇರಿದರು. ಈಗ ಮಾಳಿಂಗರಾಯ ಖಾಸಬಾಗದ ಒಳಹೊಕ್ಕು ಹೂ ಕಡಿದುಕೊಂಡು ಕಸಬಿ ತುಂಬಿದ, ಬಾವಿಗೆ ಇಳಿದು ನೀರು ತುಂಬಿಕೊಂಡ.

ಹಿಂತಿರುಗಿ ಬರುವಾಗ ಬೀರಪ್ಪ ಮತ್ತೆ ಮಾಳಿಂಗರಾಯನ ಪರೀಕ್ಷೆಗೆ ತೊಡಗಿದ. ನಂದಿದ ಹಿಲಾಲು(ದೀವಟಿಗೆ)ಗಳನ್ನೆಲ್ಲ ಹೊತ್ತಿಸಿದ. ಪಾಂಡವರನ್ನು ಎಚ್ಚರಿಸಿದ. ಭೀಮ ಓಡಿ ಹೋಗಿ ಮಾಳನನ್ನು ಹಿಡಿದು, ಯಾವೂರ ಕಳ್ಳನೆಂದು ಧರ್ಮದ ಕಟ್ಟಿಗೆ ಕರೆದೊಯ್ದನು. ಧರ್ಮರಾಯನು ಈತ ಬೀರಪ್ಪನ ಶಿಷ್ಯನೆಂದು ತಿಳಿದು ತನ್ನ ಜೊತೆ ಗಾದೆಯ ಮೇಲೆ ಕುಳಿತುಕೊಳ್ಳಲು ಹೇಳುವನು. ಆದರೆ ಮಾಳಿಂಗರಾಯ ಆ ಗಾದೆಯ ಮೇಲೆ, ಧರ್ಮರಾಯನಿಗೆ ಸಮನಾಗಿ ನೀರಿನ ಬಿಂದಿಗೆ ಹಾಗೂ ಹೂವಿನ ಕಸಬ(ಹೂಬುಟ್ಟಿ)ನ್ನು ಇಡುವನು. ಆಗ ಧರ್ಮರಾಯ ಇವನಿಗಾಗಿ ಕಟ್ಟೆಯ ಇನ್ನೊಂದು ತಿದಿಯಲ್ಲಿ ಕಂಬಳಿ ಹಾಸಲು ಅಲ್ಲಿ ಕುಳಿತುಕೊಳ್ಳುವನು.

ಧರ್ಮರಾಯ ಈ ಮೊದಲು ತನ್ನ ಪ್ರಶ್ನೆಗಳಿಗೆ ವಿವರಗಳನ್ನು ಒದಗಿಸದವರನ್ನು ಸೋಲಿಸಿ, ಹಿಡಿದು ಬಂಧನದಲ್ಲಿಟ್ಟಿದ್ದನು. ಮಾಳಿಂಗರಾಯ ಅವರೆಲ್ಲರ ಸೆರೆಬಿಡಿಸಿದನು. ಧರ್ಮರಾಯ ಕೇಳಿದ್ದಕ್ಕೆ ಮಾಳಿಂಗರಾಯ ವಿವರಿಸ ತೊಡಗುವನು. ಕಲಿಯು ಕಟ್ಟೆ ಏರಿ ಧರ್ಮ ಕೆಳಗೆ ಇಳಿದ ಸಂಗತಿಯನ್ನು ಧರ್ಮರಾಯನಿಗೆ ಬಿತ್ತರಿಸುವನು. ಬಾಣಂತಿಯೊಬ್ಬಳ ರೂಪತೊಟ್ಟ ಮಾಯೆ ಆಕೆ (ಹೊನ್ನಮ್ಮ) ನೀರಿಗೆ ಹೋದಾಗ, ಅವಳ ಮನೆಹೊಕ್ಕು, ಹೊನ್ನಮ್ಮನನ್ನೇ ಹೊರಹಾಕಿಸುತ್ತಾಳೆ. ಗಂಡ, ಮಾವ ಕೂಡ ಈಕೆಗೆ ಗುರುತಿಸುವುದಿಲ್ಲ. ಬಿಜ್ಜಳಂಕ ಈ ಮಾಯಿಗೆ ಬಾಟಲಿಯಲ್ಲಿ ಸೇರಿಸಿ ನಿಜವಾದ ಸೊಸೆಗೆ ಗುರುತಿಸಿ ಕೊಡುವನು. ಮಾಯಿಯಿದ್ದ ಬಾಟಲಿ ನಿನಗೇ ಸೇರಿರುತ್ತದೆ. ನೀನು ಬಾಟಲಿ ಬಾಯಿ ಸಡಲಿಸಿದಾಗ ಕಲಮಾಯಿ ಹೊರಗಾಗಿ, ಶೇಖಸೈದರು ಗೀಜಗನಳ್ಳಿ (ಬಿಜಾಪುರ)ಗೆ ಮುತ್ತಿಗೆ ಹಾಕುತ್ತಾರೆ-ಎಂಬ ಭವಿಷ್ಯ ನುಡಿಯುತ್ತಾನೆ. ಕಲಮಾಯಿ ತೋಟದ ಬಳ್ಳಿಯ ಸವತಿಕಾಯಿ ಹರಿದ ನಿಮ್ಮ ಮೇಲೆ ಆಕೆಯು ತನ್ನ ಮಕ್ಕಳ ಕಳ್ಳರೆಂದು ಅಪವಾದ ಹೊರಿಸುತ್ತಾಳೆ. ಶೇಖಸೈದರು ಬಂದು ನಿಮ್ಮ ಜೋಳಿಗೆ ಪರೀಕ್ಷಿಸಲಾಗಿ ಅಲ್ಲಿ ಸವತೆಕಾಯಿಗಳು ಮಕ್ಕಳಾಗಿರುತ್ತವೆ. ಆಗ ನಿಮಗೆ ವನವಾಸವಾಗುತ್ತದೆ-ಎಂದು ಭವಿಷ್ಯ ನುಡಿದು, ಮಾಳಪ್ಪ ಅಲ್ಲಿಂದ ಹೊರಡುತ್ತಾನೆ. ಬರಬರುತ್ತಾ ಹೂಗಾರ ಅಂಬಣ್ಣನಿಗೆ ಮಕ್ಕಳಫಲ ಕರುಣಿಸುತ್ತಾನೆ. ದಾರಿಯಲ್ಲಿ ಜಕಣಿಯರು ಬಿಸಿನೀರಿನ ಸ್ನಾನ ಮಾಡಿಸುತ್ತಾರೆ.

ಅಲ್ಲಿಂದ ಸಿಡಿಯಾಣದ ಸಮೀಪ ಮಾಳಿಂಗರಾಯ ಬರಲು ಬೀರಪ್ಪ ಮತ್ತೆ ಮಳೆಗೆರೆದು ಅಡ್ಡಿಯಾಗುತ್ತಾನೆ. ಈಗಲೂ ಮಾಳಿಂಗರಾಯ ಗುರುವನ್ನು ಸ್ಮರಿಸಿ, ನೀರಿನ ಹಳ್ಳವನ್ನು ದಾಟಿ ಬರುತ್ತಾನೆ. ಬೀರಪ್ಪನು ಗಚ್ಚಿನ ಗುಡಿಬಿಟ್ಟು ಅಡವಿಯಲ್ಲಿ ಹೋಗಿ ಕುಳಿತುಕೊಳ್ಳುತ್ತಾನೆ. ಮಾಳಿಂಗರಾಯ ಬಂದು ಗುಡಿಯನ್ನು ಸ್ವಚ್ಚಗೊಳಿಸಿ, ಅಲ್ಲಿ ಬೀರಪ್ಪ ಇಲ್ಲದ್ದನ್ನು ಕಂಡು, ನಾನು ಹೆಂಡಿರು ಮಕ್ಕಳನ್ನು ಬಿಟ್ಟು ಗುರುವಿಗಾಗಿ ಬಂದರೆ, ತಾನೇ ಇಲ್ಲವೆಂದು ಬೇಸರಗೊಳ್ಳುತ್ತಾನೆ. ಕೂಡಲೇ ಬೀರಣ್ಣ ಗುಡಿಗೆ ಬಂದು ಗದ್ದುಗೆ ಏರುತ್ತಾನೆ. ಮಾಳಿಂಗರಾಯ ಖಾಸಬಾಗದ ಹೂ ಮತ್ತು ನಾಗರಬಾವಿಯ ನೀರು ಹಾಕಿ ಪೂಜೆ ಸಲ್ಲಿಸುತ್ತಾನೆ.

ಇಷ್ಟು ಬೀರಪ್ಪ ಮತ್ತು ಮಾಳಿಂಗರಾಯರಿಗೆ ಸಂಬಂಧಿಸಿದ ನೇರವಾದ ಸಂಗತಿ. ಗುರುಶಿಷ್ಯರಿಬ್ಬರೂ ಲೋಕಕಲ್ಯಾಣ ಬಯಸುವರು, ಅಸಾಮಾನ್ಯ ಸಾಮರ್ಥ್ಯವುಳ್ಳವರು ಎಂಬ ಸಂಗತಿ ಇದರಿಂದ ತಿಳಿದು ಬರುತ್ತದೆ. ಇನ್ನು ಮುಂದಿನ ಸಂದುಗಳಲ್ಲಿ ಮಾಳಿಂಗರಾಯ ನೇರವಾಗಿ, ಅವನ ಗುರು ಬೀರಪ್ಪನು ಶಿಷ್ಯನ ರಕ್ಷಕನಾಗಿ ಕಾಣಿಸಿಕೊಳ್ಳುತ್ತಾರೆ. ಒಮ್ಮೊಮ್ಮೆ ಸಮರ್ಥನಾದ, ತನ್ನಷ್ಟೇ ಶಕ್ತಿಶಾಲಿಯಾದ ಶಿಷ್ಯನ ಇಚ್ಚೆಯೇ ತನ್ನಿಚ್ಚೆಯಾಗಿ ಬೀರಣ್ಣ ಸ್ವೀಕರಿಸುತ್ತಾನೆ. ಡಂಕನಾಡ ದೈಗೊಂಡನು ಶ್ರೀಮಂತಿಕೆ ಬೇಡಿ ಬಂದಾಗ ತನ್ನ ಮನಸ್ಸಿಲ್ಲದಿದ್ದರೂ, ಮಾಳಿಂಗರಾಯನ ಮನಸ್ಸಾನ್ನು ತೆಗೆದುಹಾಕಲು ಆಗದೆ ಸಂಪತ್ತನ್ನು ದಯಪಾಲಿಸುತ್ತಾನೆ. ದೈಗೊಂಡ ಇಬ್ಬರಿಗೂ ಮರೆತಾಗ-ಹಬ್ಬದಾಸೆಗಾಗಿ ದೈಗೊಂಡನಿಗೆ ಹರಿಸಲು ಹೇಳಿದ ಬಗ್ಗೆ ಬೀರಣ್ಣ ಒಂದು ಮಾತನಾಡಿದರೆ, ಮಾಳಿಂಗರಾಯ ನೇರವಾಗಿ ನೀನು ನನ್ಹಿಂದೆ ಬರಬೇಕೆಂದು ಹೇಳಿ, ಡಂಕನಾಡನ್ನೇ ಹೋಗುತ್ತಾನೆ. ಅಲ್ಲಿ ದೈಗೊಂಡನ ಆಳುಗಳು ಮಾಳಿಂಗರಾಯನಿಗೆ ಬೆನ್ನು ಹತ್ತಿದರೆ, ಬೀರಪ್ಪ ಮಲಗಿದ್ದ ದೈಗೊಂಡನ ಎದೆಯ ಮೇಲೆ ಕುಳಿತಂತೆ ಭ್ರಮೆಗೊಳಿಸುತ್ತಾನೆ. ಈಗ ದೈಗೊಂಡ ಬೀರಪ್ಪನಿಗೆ ಹರಕೆ ಒಪ್ಪಿಸಲು ಕ್ವಾಣಗನೂರ ಮಠಕ್ಕೆ ಬಂದವನು ಮಾಳಿಂಗರಾಯ ಕಂಡರೆ ಕತ್ತರಿಸಿ ಹಾಬೇಕೆಂದು ದಂಡಿಗೆ ಸೂಚಿಸುತಾನೆ. ಹತಿಯಾರದ ಹಂದರ ಹಾಕುತ್ತಾನೆ. ಬಾವಿಗೆ ವಿಷಹಾಕಿಸುತ್ತಾನೆ. ಮಾಳಿಂಗರಾಯನು ಹತಿಯಾರದ ಹಂದರವನ್ನು ಈಡಾಡುತ್ತಾನೆ.

ಮಾಳಿಂಗರಾಯ ವಿಷದ ಬಾವಿಗೆ ಹಾರಿ ಸುರಂಗ ಮಾರ್ಗದಿಂದ ಮುಂಡಗನೂರ ಮಠದಲ್ಲಿ ತೇಲಿದನು. ಅಲ್ಲಿಯೇ ಒಂದು ಕಲ್ಲಿನ ಮೇಲೆ ಕುಳಿತಿದ್ದನು. ಬೀರಪ್ಪನಿಗಾಗಿ ಒಬ್ಬ ಬುತ್ತಿ ತೆಗೆದುಕೊಂಡು ಹೊರಟಿದ್ದನು. ಮಾಳಿಂಗರಾಯ ಬೇಡಿದರೂ ಕೊಡಲಿಲ್ಲ. ಬೀರಪ್ಪನ ಹತ್ತಿರ ಬಂದು ಅವನಿಗೆ ಒಪ್ಪಿಸಿದ. ಬಿಚ್ಚಿ ನೋಡಿದರೆ ಬುತ್ತಿಯ ತುಂಬ ಹುಳುಗಳು ಕಾಣುತ್ತವೆ. ದಾರಿಯಲ್ಲಿ ಯಾರಾದರೂ ಈ ಬುತ್ತಿ ಕೇಳಿದ್ದರೆ? ಎಂಬ ಮಾತಿಗೆ ಹೌದೆಂದನು. ಬೀರಪ್ಪ ಹೇಳಿದ-ಆತನೆ ಮಾಳಿಂಗರಾಯ ಅವನಿಗೆ ಸಲ್ಲದ ಬುತ್ತಿ ನನಗೆ ಸಲ್ಲಲಾರದು ಎಂದು.

ಬೀರಪ್ಪ ಮತ್ತು ಮಾಳಿಂಗರಾಯರ ವ್ಯಕ್ತಿತ್ವದಲ್ಲಿಯ ಅನ್ಯೋನ್ಯತೆಯನ್ನು ಈ ಪ್ರಸಂಗ ತೋರಿಸುತ್ತದೆ. ಮಾಳನು ಮುಂಡಗನೂರ ಮಠದ ಮುಂದಿರುವುದನ್ನು ತಿಳಿದು ಕಂಟಿಕರ ಖ್ಯಾಮಣ್ಣ ಬಂದು ಅವನನ್ನು ಪಲ್ಲಕ್ಕಿಯಲ್ಲಿ ಕರೆತಂದನು. ದೈಗೊಂಡನು ತಾನು ಸೋತೆನೆಂದು ಹೇಳಿದನು.

ಅಮೋಗಿಸಿದ್ಧನು ಬೀರಪ್ಪನ ತಂದೆಯಾದ ಬಾಳಭರಮನ ಜೊತೆಗೆ ಜನಿಸಿದವ. ಶಿವನಂಥ ಗುರು, ತನ್ನಂಥ ಶಿಷ್ಯ ಪ್ರಪಂಚದಲ್ಲಿ ಯಾರೂ ಇಲ್ಲ ಎಂಬುದು ಅವನ ವಾದ. ಆದರೆ ಶಿವನು-ಬೀರಪ್ಪನ ಶಿಷ್ಯನಾಗಿ ಮಾಳಿಂಗರಾಯ ಭೊಲೋಕದಲ್ಲಿ ಹೆಸರು ಮಾಡಿದ್ದಾನೆ ಎಂದು ಹೇಳಿದನು. ಅಮೋಗಸಿದ್ಧ ಕೂಡಲೇ ಅವನನ್ನು ಪರೀಕ್ಷಿಸಿ ಬರುವುದಾಗಿ ಹೇಳಿ ಭೊಲೋಕಕ್ಕೆ ಬಂದನು. ಇಬ್ಬರ ಶಕ್ತಿಯ ಪ್ರದರ್ಶನ ನಡೆಯಿತು. ಎದುರಿಗೆ ಬರುತ್ತಿರುವ ಎತ್ತುಗಳಿಗೆ ಅಮೋಗಸಿದ್ಧ ಕರೆದರೆ ಮಾಳನು ಹಿಂದಕ್ಕೆ ಸನ್ನೆ ಮಾಡಿದನು. ಎತ್ತುಗಳೆಲ್ಲ ಹಿಂದಕ್ಕೆ ಹೋದವು. ಈಗ ಅಮೋಗಸಿದ್ಧ ಮಳೆಯನ್ನು ಕರೆದನು. ಮಾಳ ಮತ್ತೆ ಹಿಂದಕ್ಕೆ ಕೈ ಮಾಡಿದನು. ಮಳೆ ಮತ್ತೆ ಕೈಲಾಸಕ್ಕೆ ಸೇರಿತು. ಮಾಳ ಕರೆದಾಗ ಅಮೋಗಸಿದ್ಧನಿಗೆ ನಿಲ್ಲಿಸಲು ಆಗಲಿಲ್ಲ. ಧಾರಾಕಾರ ಮಳೆ ಸುರಿಯಿತು. ಆಗ ಅಮೋಗಸಿದ್ಧನು ತಾನು ಸೋತೆನೆಂದು, ತನಗೆ ಬರುವ ವಿದ್ಯಯನ್ನೆಲ್ಲ ಅವನಿಗೆ ಹೇಳಿಕೊಟ್ಟನು. ಬಿಳಿಯನಂದಿ, ಕರಿಕಂಬಳಿ, ಪರಿಸದ ಬಟ್ಟಲು ಎಲ್ಲವನ್ನೂ ಕೊಟ್ಟನು. ಮಾಳ ಅವನನ್ನು ಹುಲಜಂತಿಗೆ ಕರೆದೊಯ್ದನು. ತಾಯಿ ಊಟಮಾಡಿಸಿದಳು. ಅಮೋಗಸಿದ್ಧನು ಮಾಳಪ್ಪನಿಂದ ಐದು ಕುರಿಗಳನ್ನು ಪಡೆದನು. ಅಣ್ಣ ಜಕ್ಕರಯನಿಂದ ಐದು ಕುರಿಗಳನ್ನು ಪಡೆಯುವಂತೆ ಹೇಳಿ, ಏಣಿಕಿ ಊರಿಗೆ ಕಳಿಸಿದನು. ಅದರಂತೆ ಜಕ್ಕರಾಯ ಐದು ಕುರಿಗಳನ್ನು ಕೊಟ್ಟನು. ರಾತ್ರಿ ಆ ಹತ್ತೂ ಕುರಿಗಳು ಪ್ರಾಣಬಿಟ್ಟವು. ಅವನ್ನು ಎಬ್ಬಿಸಿಕೊಂಡು ಹೋಗಲು ಅಮೋಗಸಿದ್ಧನಿಗೆ ಆಗಲಿಲ್ಲ.

ಪಾಂಡುರಂಗನು ಮಾಳಿಂಗರಾಯನಿಂದ ಲಿಂಗಪಡೆಯಬೇಕೆಂದು ಬಂದನು. ಮಾಳಪ್ಪನ ಇಚ್ಚೆಯಂತೆ ಬೀರಪ್ಪ ಹಾಲಹಳ್ಳದ ದಡಿಯಲ್ಲಿ ಹನ್ನೇರಡುಮೊಳದ ಲಿಂಗವಾಗಿ ನಿಂತನು. ಆದರೆ ಪಾಂಡುರಂಗನಿಗೆ ಆ ಲಿಂಗ ಕಿತ್ತಲು ಆಗಲಿಲ್ಲ. ಕೊನೆಗೆ ಬೀರಪ್ಪ ಮಾಳಿಂಗರಾಯ ಕೂಡಿ ಹಾಲಹಳ್ಳಕ್ಕೆ ಬಂದರು. ಗುರುಶಿಷ್ಯರ ದರ್ಶನದಿಂದ ಜನ ಹರ್ಷಗೊಂಡರು. ಇಬ್ಬರಿಗೂ ಮಾನಮಾಡಿ, ಮೀಸಲು ಎಡೆ ಮಾಡಿದರು.

ಗೊಂಡರ ಬಾರಾದೇವಹಾಲುಮತದ ಬೀರದೇವ, ಬೀರಲಿಂಗ, ಮಹಾಲಿಂಗ

ಗೊಂಡ ಬುಡಕಟ್ಟಿನ ಬಾರಾದೇವನೇ ಹಾಲುಮತದ ಬೀರದೇವ ಮಹಾಲಿಂಗನು. ಈ ತರ್ಕದ ಸಾಕಾರಕ್ಕಾಗಿ ಮಧ್ಯಭಾರತದ ಗೊಂಡರ ಮತ್ತು ಗೊಂಡ ಪದನಿಷ್ಪತ್ತಿ ಹಾಗೂ ವ್ಯಾಪ್ತಿ ಅರಿಯುವುದು ಮುಖ್ಯ.

ಶಿವನಿಗೆ ಶಂಭು, ಮಹಾದೇವ, ಮಹಾಲಿಂಗ ಎಂಬ ಹೆಸರುಗಳೂ ಇವೆ. ಆತನ ಕಾಲ ಭಾರತದ ಆರ್ಯರ ಪೂರ್ವದ್ದು, ಸುಮಾರು ಹತ್ತು ಹನ್ನೆರಡು ಸಾವಿರ ವರ್ಷಗಳ ಹಿಂದಿನದೆಂದು ಹೇಳುವರು. ಶಿವನ ಪ್ರೀತಿಯ ವಾದ್ಯ ಡಮರು ಇಲ್ಲವೆ ಡೊಳ್ಳು. ಆತನ ಆರಾಧಕರೇ ಮೂಲ ಆದಿವಾಸಿ ಗೊಂಡರು.

ಶಿವನ ‘ಗೊಂದಾಡಿ’ (ಡಮರು) ಧ್ವನಿಯಿಂದ ಪಾರಿ ಕುಪಾರ ಲಿಂಗೊ (ಗೊಂಡ ಧರ್ಮದ ಮೂಲ ಮಾನವ ಪುತ್ರ) ಗೊಂಡಾಡಿ ಶಬ್ದ ಅರ್ಥಾತ ‘ಗೊಂಡವಾಣಿ’ ಗ್ರಹಿಸಿ ಅದರ ಮುಖೇನ ಕೋಯಾ ಪುನೇಮ (ಸತ್ಯ ಧರ್ಮ)ದ ಪ್ರಸಾರ, ಪ್ರಚಾರವನ್ನು ತನ್ನ ೩೩ ಕೋಟಿ ಶಿಷ್ಯಂದಿರಿಂದ ಮಾಡಿದನು. ಕಾಲಾಂತರದಲ್ಲಿ ಕೋಯಾ ವಂಶಿಯ ಗೊಂಡರಲ್ಲಿ ೩೧ ಒಳಪಂಗಡಗಳು ಹುಟ್ಟಿದವು. ಪಾರಿ ಕುಪಾರಿ ಲಿಂಗೊ ಎಲ್ಲ ಒಳಪಂಗಡದವರಿಗೂ ದೇವರಾಗಿ ವಿವಿಧ ಅವತಾರ ಮತ್ತು ರೀತಿಯಲ್ಲಿ ಪೂಜಿತನಾದನು. ಗೊಂಡರು ಕೋಯ ಪುನೇಮದ ಪಾರಂಪರಿಕ ಉಪಾಸಕರಾಗಿ ತಮ್ಮ ಪುರ್ವಜರು ಸ್ಥಾಪಿಸಿದ ಸಾಮಾಜಿಕ ವ್ಯವಸ್ಥೆಯನ್ನು ಮೈಗೊಡಿಸಿಕೊಂಡು ಬಂದರು. ಹೀಗಾಗಿ ಕೋಯ ವಂಶಿಯ ಗೊಂಡರೆ ಮೂಲ ಗೊಂಡರೆಂದು ಗುರುತಿಸಲಾಗುತ್ತದೆ.

ಪ್ರಾಚೀನ ಕಾಲದಲ್ಲಿ ಪೃಥ್ವಿಗೆ ‘ಪ್ಯಾಂಜಿಯ’ ಎಂತಲೂ ಕರೆಯಲಾಗುತ್ತಿತ್ತು. ಹಾಗೆಂದರೆ ‘ಪೃಥ್ವಿಸಮೂಹ’ ಎಂದರ್ಥ [‘Panjaea’ – It is a Greek word meaning ‘All Earth’ (Alfred Wegner)]. ಪೃಥ್ವಿ (ಪ್ಯಾಂಜಿಯ) ಉತ್ತರ ಭಾಗವನ್ನು ‘ಟಿರಿಷರಿ’ (ಯುರೇಷಿಯ) ಭೂಮಿಯೆಂದು ಮತ್ತು ದಕ್ಷಿಣ ಭಾಗವನ್ನು ಗೊಂಡವಾನಾ ಭೂಮಿಯೆಂದು ಗುರುತಿಸಲಾಯಿತು. ಪೃಥ್ವಿಯ ದಕ್ಷಿಣ ಭಾಗದಲ್ಲಿರುವ ನಿಕ್ಷೇಪಗಳೆಲ್ಲ ಮಧ್ಯಪ್ರದೇಶದ ‘ಗೊಂಡ’ ರಾಜ್ಯದ ನಿಕ್ಷೇಪಗಳಿಗೆ ಹೋಲಿಕೆಯಾಗಿರುವುದರಿಂದ ಮೆಡ್ಲಿಕಾಟ್ ರವರು ಆ ಪ್ರದೇಶಕ್ಕೆ ‘ಗೊಂಡವಾನಾ’ ಪ್ರದೇಶವೆಂದು ಕರೆದರು. ಕ್ರಿ.ಶ. ೧೮೭೬ರಲ್ಲಿ ಓ ಪೀಸ್ಟ್‌ಮ್ಯಾಂಟಲ್‌ರವರು ಈ ಹೆಸರನ್ನು ಮೊದಲ ಬಾರಿಗೆ ಪ್ರಕಟಿಸಿದರು. (Rec. IX: Pt.2: p.28) (ಪುಟ್ಟಪ್ಪ ಕೆ ವಿ (ಸಂ): 1964:218) ಹಿಂದೆ ಗೊಂಡ್ವಾನ ಖಂಡಕ್ಕೆ ಕೋಯಿಮೂರ ಮಹಾದ್ವೀಪದ ಹೆಸರಿನಿಂದ ಪರಿಚಯಿಸಲಾಗುತ್ತಿತ್ತು. ಅದರಲ್ಲಿ ಪೃಥ್ವಿಯ ದಕ್ಷಿಣ ಗೋಲಾರ್ಧದ ಐದು ಉಪ ಮಹದ್ವೀಪಗಳು ಕೂಡಿವೆ. ಆ ದ್ವೀಪ ಸಮೂಹಕ್ಕೆ ಗೊಂಡಿ ಭಾಷೆಯಲ್ಲಿ ‘ಸಯಿಗಾರ’ ಅಥವಾ ‘ಸಿಂಗಾರ’ ದ್ವೀಪ ಎಂದು ಕರೆಯುತ್ತಾರೆ. ಕಾಲಾಂತರದಲ್ಲಿ ಪ್ರಾಕೃತಿಕ ಬದಲಾವಣೆಯಿಂದಾಗಿ ಮೂಲ ಎರಡು ಖಂಡಗಳು ವಿಭಜನೆಗೊಂಡು ಟೆಥಿಸ್ ಸಮುದ್ರದಲ್ಲಿ ಹಿಮಾಲಯ ಪರ್ವತ ಜನ್ಮ ತಾಳಿತು. ಹಾಗೆಯೇ ಯಾವ ಭೂಮಿ ಗೊಂಡ್ವಾನ ಖಂಡದಲ್ಲಿ ಕೂಡಿತ್ತೊ, ಅದು ಒಡೆದು ಕೆಳಗಿನಂತೆ ಭೂಖಂಡಗಳಾಗಿ ಪರಿವರ್ತನೆಯಾಯಿತು. ೧. ಏಷ್ಯಾ (ಭಾರತ) ಅಥವಾ ಅಂಬೋದ್ವೀಪ (ಭಾರತ), ೨. ಆಪ್ರಿಕಾ, ೩. ದಕ್ಷಿಣ ಅಮೇರಿಕಾ, ೪. ಅಂಟಾರ್ಟಿಕಾ, ೫. ಆಸ್ಟ್ರೇಲಿಯ. ಈ ಐದು ಖಂಡಗಳಿಗೆ ಗೊಂಡ್ವಾನ (ಭೂಮಿ) ಖಂಡವೆಂದು ಕರೆಯುವರು. ಅಲ್ಲಿಯ ಮೂಲನಿವಾಸಿಗಳ ಶಾರೀರಿಕ ಗುಣಧರ್ಮ ಮತ್ತು ಸಾಂಸ್ಕೃತಿಕ ಮೌಲ್ಯಗಳಲ್ಲಿ ಹೋಲಿಕೆಯುಂಟು.

ಭಾರತದ ಮಧ್ಯ ಮತ್ತು ಉತ್ತರ ಭಾಗದಲ್ಲಿ (ಗೊಂಡ್ವಾನ ಖಂಡ) ಕೋಯ ವಂಶಿಯ ಗೊಂಡ ಸಂಬಂಧಿ ಸಮಾಜಗಳ ಹಲವಾರು ಸಣ್ಣ ಪುಟ್ಟಾ ರಾಜ್ಯಗಳಿದ್ದವು. ಗೊಂಡರಿಗೆ ಮತ್ತು ಅವರ ಧಾರ್ಮಿಕ ಆಚರಣೆಗಳಿಗೆ ಆರ್ಯರಿಂದ (ಕ್ರಿ. ಪೂ. ೩೦೦೦ ವರ್ಷಗಳ ಸುಮಾರಿಗೆ ಭಾರತಕ್ಕೆ ಆರ್ಯರ ಆಗಮನದಿಂದ) ಅಗಾಧ ಪೆಟ್ಟು ಬಿತ್ತು. ಅವರು ದ್ವೀಪ (ಭಾರತ)ದ ಮೂಲನಿವಾಸಿಗಳ ಗ್ರಾಮ ನಗರ ಮತ್ತು ರಾಜ್ಯಗಳನ್ನು ಸಮೂಲ ನಾಶ ಮಾಡಲಾರಂಭಿಸಿದರು. ಹೀಗಾಗಿ ಗೊಂಡರಲ್ಲನೇಕರು ಆರ್ಯರ ಗುಲಾಮರಾದರೆ, ಹಲವರು ಸ್ವಧರ್ಮ, ಸ್ವದೇಶದ ರಕ್ಷಣೆಗಾಗಿ ಹೋರಾಡಿ ಪ್ರಾಣಾರ್ಪಣೆ ಮಾಡಿದರು. ಇನ್ನೂ ಕೆಲವರು ತಮ್ಮನ್ನು ಉಳಿಸಿಕೊಳ್ಳಲು ದಕ್ಷಿಣ ಭಾರತದತ್ತ ವಲಸೆ ಹೋದರು. ಆದರೂ ಶೋಷಣೆ ನಿಲ್ಲಲಿಲ್ಲ. ಶಕರು, ಯುನಾನಿ, ಮೊಗಲ್ ಇತ್ಯಾದಿ ಧರ್ಮಿಯರ ಆಕ್ರಮಣ ಮೇಲಿಂದ ಮೇಲೆ ಆಗಿ ಗೊಂಡರ ಭಾಷೆ ಸಂಸ್ಕೃತಿಯೆ ಮೇಲೂ ಪ್ರಭಾವ ಬೀರಿದರು. ಆರ್ಯರು ಗೊಂಡರಲ್ಲಿಯೇ ಜಗಳ ಹಚ್ಚಿ ಅದರ ಲಾಭ ಪಡೆದರೆಂಬುದಕ್ಕೆ ಋಗ್ವೇದ, ರಾಮಾಯಣ, ಮಹಾಭಾರತ ಮತ್ತು ಪುರಾಣಗಳಲ್ಲಿಯ ಸಾಹಿತ್ಯವೇ ಸಾಕ್ಷಿಯಾಗಿರುವುದು. ಆದರೂ ಕೋಯವಂಶಿಯ ಗೊಂಡರು ಆರ್ಯರ ಧರ್ಮಕ್ಕೆ ಒಪ್ಪಲಿಲ್ಲ.

ಹಲವಾರು ಗೊಂಡರು ಅನಿವಾರ್ಯವಾಗಿ ಆರ್ಯರ ಗುಲಾಮರಾಗಿ ಅರ್ಯರ ಧರ್ಮ ಸ್ವೀಕರಿಸಿದರೂ ಗೊಂಡರಿಗೆ ಅವರು ಆರ್ಯುರೆನ್ನಲಿಲ್ಲ. ಬದಲಾಗಿ ಶೂದ್ರ, ದಾಸ, ದಶ್ಯೂ, ರಾಕ್ಷಸ, ದಾನವ, ಅಸೂರ (ಇಂದು: ದ್ರಾವಿಡ, ಹರಿಜನ, ಗಿರಿಜನ, ದಲಿತ) ಎಂಬೀ ಹೆಸರುಗಳಿಂದ ಕರೆದರು. ಬುದ್ಧನ ಕಾಲದಲ್ಲಿ ಭಾರತದಾದ್ಯಂತ ಬೌದ್ಧ ಧರ್ಮ ಪಸರಿಸಿತು. ಹಾಗೆ ನೋಡಿದರೆ ಬುದ್ಧನ ಹಾಗೂ ಗೊಂಡರ ತತ್ವಗಳಲ್ಲಿ ಬಿನ್ನತೆಯಿಲ್ಲ. ಆದರೂ ಬೌದ್ಧ ಧರ್ಮ ಗೊಂಡರಲ್ಲಿ ನಾಟಲಿಲ್ಲ. ಉಳಿದೆಲ್ಲ ಧಾರ್ಮಿಕ ತತ್ವಗಳಲ್ಲಿಯೂ ಅನೇಕ ಅಂಶಗಳು ಗೊಂಡ ಧರ್ಮದ ತತ್ವ, ಸಂಸ್ಕೃತಿಯಿಂದ ವಿಚಲಿತವಾಗದಿರುವುದು ಸೋಜಿಗವೇ ಸರಿ ! (ಮೋತಿರಾಮ ಕಂಗಾಲಿ:೧೯೮೯:೫-೧೪)

ಪಾರಿ ಕುಪಾರ ಲಿಂಗೊ ಮತ್ತು ಅಜಪವೇದದ ಲಿಂಗೋದ್ಭವಿ ರೇವಣಸಿದ್ಧರು ಒಂದೇ ಆಗಿರಬಹುದು. ಅವರೇ ಗೊಂಡರ ಮೂಲ ಮಾರ್ಗದರ್ಶಿಗಳು. ಕೋಯಾ ಪುನೇಮದ ಅರ್ಥ ‘ಸತ್ಯ ಮಾರ್ಗ’ ಎಂದಾಗುವುದು. ಅದರ ಪ್ರಚಾರಕ ಪಾರಿ ಕುಪಾರ ಲಿಂಗೋ. ಹೀಗಾಗಿ ಆತನಿಗೆ ಗೊಂಡರು ದೇವರೆಂದು ನಂಬುವರು. ರೇವಣಸಿದ್ಧರು ಅಜಪವೇದದ ಅರ್ಥ ಕೂಡ ಸತ್ಯಮಾರ್ಗವೆಂದು ಹೇಳಿದ್ದಾರೆ. ಕೋಯ ಎಂದರೂ ಕುರುಬ, ಅಜಪವೆಂದರೂ ಕುರುಬನೇ. ‘ಪುನೇಮ’ ಎಂದರೆ ಸತ್ಯಮಾರ್ಗ ಮತ್ತು ‘ವೇದ’ವೆಂದರೂ ಸತ್ಯಮಾರ್ಗವೇ ಆಗಿರುವುದು.

ಹೀಗಾಗಿ ಅಜಪವೇದ ಮತ್ತು ಕೋಯಾ ಪುನೇಮ ಬೇರೆಯಿಲ್ಲ ಎಂದು ಹೇಳಬಹುದು. ಹತ್ತು ಹನ್ನೆರಡು ಸಾವಿರ ವರ್ಷಗಳ ಹಿಂದಿನಿಂದ ಕೋಯ ಪುನೇಮ ಅಥವಾ ಅಜಪವೇದದ ಸೃಷ್ಟಿ (ತಿಳಿಯುವ) ಕಾರ್ಯ ಪ್ರಾರಂಭಿಸಿ ಸುಮಾರು ಏಳು ಸಾವಿರ ವರ್ಷಗಳ ಹಿಂದೆಯೇ ಪೂರ್ಣವಾಗಿರಬಹುದು. ಭೂಗರ್ಭ ಶಾಸ್ತ್ರಜ್ಞರ ಅಭಿಪ್ರಾಯದಂತೆ ೭೦೦ ಕೋಟಿ ವರ್ಷಗಳ ಹಿಂದೆ ದಕ್ಷಿಣದ ತುದಿಯಲ್ಲಿದ್ದ ಭಾರತ ದ್ವೀಪ ಚಲಿಸುತ್ತ ಉತ್ತರದ ಪ್ರಸ್ತುತ ಸ್ಥಾನಕ್ಕೆ ತಲುಪಿದ್ದು ಏಳು ಕೋಟಿ ವರ್ಷಗಳ ಹಿಂದೆಯೇ ಎಂದು ಹೇಳುವರು.

ಗೊಂಡ, ರಾಜಗೊಂಡ ಆದಿವಾಸಿಗಳಲ್ಲಿಯೂ ಕುಲಗೋತ್ರ ಚಿನ್ಹೆಗಳು ಪ್ರಚಲಿತದಲ್ಲಿವೆ. ‘ಪಾರಿ’ ಕುಪಾರ ಲಿಂಗೋ ಕೋಯಾ ಪುನೆಮ ಗೊಂಡಿ ಧರ್ಮ ದರ್ಶನದಲ್ಲಿ ಗೊಂಡರನ್ನು ಒಟ್ಟು ೧೨ ಸಗಾ(ನೆಂಟರು)ದಲ್ಲಿ ೭೫೦ ಕುಲಗೋತ್ರಗಳಲ್ಲಿ ಮತ್ತು ೨,೨೫೦ ಕುಲಚಿನ್ಹೆಗಳನ್ನು ಹಂಚಲಾಗಿದೆ. ಪ್ರಾರಂಭದಲ್ಲಿ ಏಳು ಸಗಾ (ಸೊಹಿರಾ ಅಥವಾ ನೆಂಟರು)ರಲ್ಲಿ ೭೫೦ ಕುಲಗೋತ್ರಗಳನ್ನು ವಿಭಜಿಸಲಾಯಿತು. ಒಂದರಿಂದ ಏಳು ಸಗಾರಲ್ಲಿ ತಲಾ ನೂರು ಗೋತ್ರಗಳು ಮತ್ತು ಎಂಟರಿಂದ ಹನ್ನೆರಡರವರೆಗಿನ ಸಗಾದಲ್ಲಿ ತಲಾ ಹತ್ತು ಗೋತ್ರಗಳನ್ನು ಹಂಚಲ್ಪಟ್ಟಿದ್ದವು. ಇದು ದೊಡ್ಡ ಗಾತ್ರದ ಕುಲಗೋತ್ರವಾದ ಕಾರಣ ಸಾಮಾಜಿಕ ಸಂಘಟನೆಯಲ್ಲಿ ಸಮಸ್ಯೆಯೊಡ್ಡಿದ್ದರಿಂದ ಪಾರಿ ಕುಪಾರ ಲಿಂಗೋ ಕೋಯಾ(ಗೊಂಡ)ರ ಗುಣ ಕರ್ಮಗಳ ಆಧಾರದ ಮೇಲೆ ಮಾಡಿರುವ ಕುಲಗೋತ್ರಗಳಲ್ಲಿ ಕೋಯಾ(ಗೊಂಡ) ಧರ್ಮದ   ಪ್ರಚಾರಕರು ಕಾಲಾಂತರದಲ್ಲಿ ಕಡಿತಗೊಳಿಸಿದರು. ಆಟ್ (ಎಂಟು), ನವ್ (ಒಂಭತ್ತು), ದಸ್ (ಹತ್ತು), ಗ್ಯಾರಹ (ಹನ್ನೊಂದು). ಮತ್ತು ಬಾರಹ (ಹನ್ನೆರಡು) ದೇವ, ‘ಸಗಾ’ರ ತಲಾ ಹತ್ತು ಗೋತ್ರಗಳು ತೀನ (ಮೂರು) ದೇವ, ಚಾರ್ (ನಾಲ್ಕು) ದೇವ, ಪಾಂಚ (ಐದು) ದೇವ, ಛಹ (ಆರು). ಸಾತ್ (ಏಳು),ದೇವ ‘ಸಗಾ’ರಲ್ಲಿ ಸೇರಿಸಿ, ಸ್ವಸಗಾ ಮತ್ತು ಸ್ಬಗೋತ್ರದಲ್ಲಿ ವಿವಾಹ ನಿರ್ಭಂಧನೆಯ ನಿಯಮ ಮಾಡಿ ಸ್ವಸಗಾ ಮತ್ತು ಸ್ವಗೋತ್ರ ಹೊರತುಪಡಿಸಿ ಇತರ ಸಗಾ ಮತ್ತು ಗೋತ್ರಗಳಲ್ಲಿ ವಿವಾಹಕ್ಕೆ ದಾರಿ ಮಾಡಿಕೊಟ್ಟು, ಸಾಮಾಜಿಕ ಸಂಘಟನೆಗೆ ಶಕ್ತಿ ತುಂಬಿದರು.ಹೀಗಾಗಿ ಇಂದು ಎಂಟರಿಂದ ಹನ್ನೆರಡರವರೆಗಿದ್ದ ‘ಸಗಾ’ಗಳು ಬಳಕೆಯಲಿಲ್ಲ. ಹಾಗೆಯೇ ಪ್ರಾಚೀನ ಕಾಲದಲ್ಲಿಯ ಏಕ(ಒಂದು)ದೇವ, ದೊ(ಎರಡು)ದೇವ ಮತ್ತು ತೀನ(ಮೂರು)ದೇವ ‘ಸಗಾ’ರಲ್ಲಿಯ ಸಂಘಟನೆ ಸಡಿಲಗೊಂಡಾಗ ಕೋಯ (ಗೊಂಡ) ಧರ್ಮದರ್ಶಿಗಳು ಧರ್ಮ ಸಮ್ಮೇಳನದಲ್ಲಿ ಅದನ್ನು ಚರ್ಚಿಸಿ, ಆ ಮೂರು ‘ಸಗಾ’ಗಳನ್ನು ಸಾಹ(ಆರು)ದೇವ ‘ಸಗಾ’ದಲ್ಲಿ ವಿಲಿನಗೊಳಿಸಿದರು. ಹೀಗಾಗಿ ಇಂದು ಆ ಮೂರು ಸಗಾಗಳು ಪ್ರಚಾರದಲ್ಲಿಲ್ಲ. ಆದರೂ ಮಧ್ಯ ಭಾರತದ, ಆದಿಲಾಬಾದ, ಚಂದ್ರಪೂರ, ಭಂಡಾರಗಳಲ್ಲಿಯ ಕೋಯ(ಗೊಂಡ), ರಾಜಗೊಂಡರು ಧರ್ಮದರ್ಶಿಗಳ ನಿರ್ಣಯ ಸಂಪೂರ್ಣ ಸಮರ್ಥಿಸಿಕೊಂಡಂತಿಲ್ಲ. ಅವರಲ್ಲಿ ಇನ್ನೂ ಆ ಸಗಾಗಳ ಕುಲಗೋತ್ರಗಳು ಸ್ವಲ್ಪ ಮಟ್ಟಿನ ಬಳಕೆಯಲ್ಲಿವೆ (ಮೋತಿರಾಮ ಕಂಗಾಲಿ:೧೯೮೯:೧೨೧-೧೨೮). ಒಟ್ಟಿನಲ್ಲಿ ಏಳು ನೆಂಟರ ಕುಲಗೋತ್ರಗಳು, ಕುಲಚಿನ್ಹೆಗಳು, ಮಧ್ಯ ಭಾರತದ ಗೊಂಡರಲ್ಲಿ ಮತ್ತು ಕರ್ನಾಟಕ ಅಲೆಮಾರಿ ಆದಿವಾಸಿ ರಾಜಗೊಂಡರಲ್ಲಿ ಬಳಕೆಯಲ್ಲಿವೆ. ಆದರೆ ಕರ್ನಾಟಕದ ಹಾಲುಮತದವರಲ್ಲಿ ಮಸುಕಾಗಿವೆ.

ಮಹಾಲಿಂಗದ ಕಲ್ಪನೆಯು ಕರ್ನಾಟಕದ ಹಾಲುಮತರಲ್ಲಿ ಮತ್ತು ಮಧ್ಯಭಾರತದ ಗೊಂಡರಲ್ಲಿ ಒಂದೇ ಆಗಿರುವುದು ಚಿಂತನಾರ್ಹವಾಗಿರುವುದು. ಇದನ್ನು ಅರಿಯಲು ಗುಲಬರ್ಗಾ ವಿಶ್ವವಿದ್ಯಾಲಯದ ಆವರಣದಲ್ಲಿರುವ ಕುಶನೂರು ಮಹಾಲಿಂಗ ದೇವಸ್ಥಾನದ ತರ್ಕಬದ್ಧ ಅಧ್ಯಯನ ಮುಖ್ಯ.

ಗುಲಬರ್ಗಾ ವಿಶ್ವವಿದ್ಯಾಲಯ ಸ್ಥಾಪನೆಯ ಪೂರ್ವದಲ್ಲಿ ಈ ಭೂಮಿ ಬಹುತೇಕ ಕುಶನೂರು ಗ್ರಾಮದ ಹಾಲುಮತ ಕುರಿಗಾಹಿಗಳಿಗೆ ಸೇರಿದ್ದಾಗಿತ್ತು. ಈ ಗ್ರಾಮದ ಗುಡ್ಡಕ್ಕೆ ಮಹಲಿಂಗನ ಗುಡ್ಡವೆಂದೇ ಕರೆಯಲಾಗುತ್ತದೆ. ಈಗ ಈ ಗುಡ್ಡದ ಬಹುಭಾಗವು ಗುಲಬರ್ಗಾ ವಿಶ್ವವಿದ್ಯಾಲಯದ ಅತಿಥಿಗೃಹ ಮತ್ತು ವಸತಿಗೃಹಗಳಿಂದ ಆವೃತಗೊಂಡಿದೆ. ಇಲ್ಲಿಯ ಮಹಾಲಿಂಗ ದೈವದ ಮೂಲ ಸ್ವರೂಪದಲ್ಲಿ ಬಹುತೇಕ ಬದಲಾವಣೆಗಳಾಗಿವೆ. ಈ ಸ್ಥಳವನ್ನು ತರ್ಕಬದ್ಧವಾಗಿ ಮತ್ತು ಸೂಕ್ಷ್ಮವಾಗಿ ಗಮನಿಸಿದಾಗ ಇಲ್ಲಿಯ ಮಹಾಲಿಂಗನ ನಿಜವಾದ ದರ್ಶನವಾಗುತ್ತದೆ.

ಕುಶನೂರು ಮಹಾಲಿಂಗನ ಗುಡ್ಡದ ಸಮೀಪ ಪ್ರಾಕೃತಿಕ ನೀರಿನ ಸೆಲೆಯಿದೆ. ಗುಡ್ಡದ ಮೇಲೆ ವಿಶಾಲವಾದ ಬಯಲಿದೆ. ಇಲ್ಲಿ ಕುರುಚಲ ಸಸ್ಯರಾಶಿಯಿದೆ. ಪ್ರಾಚೀನ ಕಾಲದಲ್ಲಿ ಇಲ್ಲಿ ನೈಸರ್ಗಿಕ ಸಣ್ಣಪುಟ್ಟ ಗುಹೆಗಳಿರುವ ಸಾಧ್ಯತೆಗಳಿವೆ. ಈ ಕಾರಣಕ್ಕಾಗಿಯೇ ಇಲ್ಲಿ ಮಧ್ಯಭಾರತದ ಗೊಂಡ ಬುಡಕಟ್ಟು ಮೂಲದ ಅಲೆಮಾರಿ ಕುರಿಗಾರರು ಬಹುಕಾಲದವರೆಗೆ ನೆಲೆನಿಂತಿರುವ ಸಾಧ್ಯತೆಗಳಿವೆ. ತಮ್ಮ ದೈವದ ಕಲ್ಪನೆಗಳನ್ನು ಈ ಕೆಳಗಿನಂತೆ ಪ್ರತಿಸ್ಥಾಪಿಸಿದಂತಿದೆ.

ಗುಲಬರ್ಗಾ ವಿಶ್ವವಿದ್ಯಾಲಯದ ಅತಿಥಿಗೃಹದ ಪ್ರಾಂಗಣದಲ್ಲಿ ಏಳು ಮಕ್ಕಳ ತಾಯಿಯ ಪ್ರಾಕೃತಿಕ ದೇಗುಲವಿದೆ. ಇದನ್ನು ಹೊಂದಿಕೊಂಡು ಹುತ್ತದಲ್ಲಿ ಸ್ಥಳಿಯ ಕಲ್ಲುಕುಪ್ಪೆಯ ಮಹಾಲಿಂಗನ ಮೂಲ ಪ್ರಾಕೃತಿಕ ದೇಗುಲವಿದೆ. ಕಾಲಾಂತರದಲ್ಲಿ ಈಗ ಕಾಣಸಿಗುವ ಮಹಾಲಿಂಗನ ದೇಗುಲ ಕಟ್ಟಲ್ಪಟ್ಟಿದೆ ಮತ್ತು ಕಾಲಕಾಲಕ್ಕೆ ಜೀರ್ಣೋದ್ಧಾರವಾಗಿದೆ ಮತ್ತೂ ಆಗುತ್ತಲಿದೆ. ಮಹಾಲಿಂಗನ ದೇಗುಲದಲ್ಲಿ ಈತನ ಪರಿವಾರ ದೈವಗಳೆಂದು ಭರಮಲಿಂಗ, ಬೀರಲಿಂಗ, ಮೈಲಾರಲಿಂಗ ಇತ್ಯಾದಿಗಳು ಪೂಜೆಗೊಳ್ಳುತ್ತವೆ. ಕರ್ನಾಟಕ, ಆಂಧ್ರ ಪ್ರದೇಶ, ತಮಿಳುನಾಡು, ಮಹಾರಾಷ್ಟ್ರ ರಾಜ್ಯಗಳ ಕಾಡುಮೇಡುಗಳಲ್ಲಿ ಗುಡ್ಡಕಣಿವೆಗಳಲ್ಲಿ ನದಿಜಲಾಯನಗಳಲ್ಲಿ ಬೀರಲಿಂಗರ ನೆಲಗಳು ಚಂದ್ರಧರಿಸಿದ ಕಲ್ಲುಕುಪ್ಪೆಗಳಿಂದ ಕಾಣಸಿಗುತ್ತವೆ. ಬೀರಲಿಂಗರ ಪರಿವಾರ ದೇವರಾಗಿ ಮಹಾಲಿಂಗ ತಪ್ಪದೇ ಕಾಣಸಿಗುವುದು. ಆದರೆ, ಮಹಾಲಿಂಗ ಪ್ರಧಾನವಾದ ಆಲಯಗಳು ತುಂಬ ಕಡಿಮೆ. ಕುಶನೂರು ಬಿಟ್ಟರೆ ಕರ್ನಾಟಕ ಮಹಾರಾಷ್ಟ್ರ ಗಡಿಭಾಗದ ಹುಲಜಂತಿಯು ಮಹಾಲಿಂಗನದ್ದು ಪ್ರಧಾನವಾದ ನೆಲೆ. ಮಹಾಲಿಂಗ ಮತ್ತು ಬೀರಲಿಂಗರ ಪೂಜಾರಿಗಳನ್ನು ಈರಕಾರರೆಂದು ಕರೆಯಲಾಗುವುದು. ಈರಕಾರರು ಮೈದುಂಬಿದ್ದಾಗ ಹೇಳಿಕೆ ಹೇಳುವುದುಂಟು. ಬೀರಲಿಂಗರನ್ನು ಮತ್ತು ಮಹಾಲಿಂಗರನ್ನು ಕರೆಯಲು ಡೊಳ್ಳನ್ನು ಬಾರಿಸುಮದುಂಟು. ಈರಕಾರರನ್ನು ದೈವಸಮಾನರೆಂದು ಹಾಲುಮತದವರು ನಡೆದುಕೊಳ್ಳುವರು. ಪಟ್ಟದ ಈರಕಾರರನ್ನು ಅವರು ಕಾಲವಾದನಂತರ ಮಹಾಲಿಂಗ ದೇವಾಲಯದ ಆವರಣದಲ್ಲಿಯೇ ಸಮಾಧಿ ಮಾಡಿರುವರು. ಇವರೂ ಹಬ್ಬಹರಿದಿನಗಳಂದು ಪೂಜೆಗೊಳ್ಳುವರು. ಇವು ಸಮಾಧಿಗಳೋ ದೇವಾಲಯಗಳೋ ಎಂಬುದನ್ನು ಕಂಡುಹಿಡಿಯಲು ಸಾಧ್ಯವಾಗದಂತೆ ದೇವಾಲಯಗಳಂತೆ ಕಟ್ಟಲ್ಪಟ್ಟಿವೆ. ಇಂತಹ ಹತ್ತಾರು ಸಮಾಧಿಗಳು ಮಹಾಲಿಂಗ ದೇವಾಲಯದ ಆವರಣದಲ್ಲಿರುವವು. ಈರಕಾರರು ಇವರನ್ನೇ ಮುಂದುವರೆದು ಒಡೆಯರೆಂದು ಕರೆಯಲಾಯಿತು. ಹುಲಜಂತಿಯ ಮಹಾಲಿಂಗನ ಪೂಜಾರಿಗಳನ್ನು ಒಡೆಯರೆಂದು ಕರೆಯಲಾಗುವುದು. ಮುಂದುವರೆದ ಒಡೆಯರ ರೇವಣಸಿದ್ಧನ ಆರಧಕರಾದರು, ಹಲವರು ಲಿಂಗಾಯತರ ಪ್ರಭಾವಕ್ಕೊಳಗಾಗಿ ಮಹಾಲಿಂಗನ ವಿಭಿನ್ನ ಆರಾಧನೆಗೊಳಗಾದರು.

ಕುಶನೂರು ಮಹಾಲಿಂಗನ ಹಳೆಯ ದೇಗುಲದ ಜೀರ್ಣೋದ್ಧಾರ ಸಂದರ್ಭದಲ್ಲಿ ಗರ್ಭ ಗುಡಿಯಲ್ಲಿದ್ದ ಮೂಲ ಶಿಲ್ಪವನ್ನು ಗುಡಿಯ ಹಿಂದೆ ಇರಿಸಲಾಗಿದೆ. ಈಗ ಗರ್ಭಗುಡಿಯಲ್ಲಿ ಶಿಲ್ಪರಹಿತ ತಡಿಗೆಯನ್ನು ಪ್ರತಿಸ್ಠಾಪಿಸಲಾಗಿದೆ. ಗರ್ಭ ಗುಡಿಯಲ್ಲಿದ್ದ ಮೂಲ ಶಿಲ್ಪದ ಮೇಲೆ ಕೆತ್ತಲಾದ ಚಿತ್ರಗಳ ಮಹತ್ವವನ್ನರಿಯದ ಇಂದಿನ ಪೀಳಿಗೆ ಆ ಶಿಲ್ಪಕ್ಕೆ ಯಾವುದೇ ರಕ್ಷಣೆ ನೀಡುತ್ತಿಲ್ಲ. ಈ ಶಿಲ್ಪದ ಮಹತ್ವ ಹೀಗಿದೆ.

ಮಹಾಲಿಂಗನ ಗರ್ಭಗುಡಿಯಲ್ಲಿಯ ಮೂಲ ಶಿಲ್ಪವು ಗುಲಬರ್ಗಾ ಜಿಲ್ಲೆಯಲ್ಲಿ ಸಿಗುವ ಶಾಬಾದಿ ಶಿಲ್ಪವಾಗಿದೆ. ಈ ಶಿಲ್ಪದ ಕಾಲಾವಧಿಯು ಸನ್ನತಿಯ ಬೌದ್ಧರ ಶಿಲ್ಪಾವಶೇಷಗಳ ಕಾಲಾವಧಿಗೆ ಹೋಲಿಸಬಹುದಾಗಿದೆ. ಈ ಶಿಲ್ಪವು ಸುಮಾರು ೫ ಅಡಿಯಷ್ಟು ಉದ್ದ ಮತ್ತು ೨ವರೆ ಅಡಿಯಷ್ಟು ಅಗಲ ಹಾಗೂ ಅರ್ಧ ಅಡಿಯಷ್ಟು ದಪ್ಪವಿರುವುದು. ಈ ಶಿಲ್ಪದ ಮೇಲೆ ಎಡಗಡೆಯಿಂದ ಬಲಗಡೆಗೆ ಸಮನಾಂತರದಲ್ಲಿ ಶೂರ್ಯನನ್ನು ಪ್ರತಿಬಿಂಬಿಸುವ ೩ ಆಕೃತಿಗಳು ಮತ್ತು ೨ ಪಾನವಟ ಲಿಂಗಗಳನ್ನು ಪ್ರತಿಬಿಂಬಿಸುವ ಆಕೃತಿಗಳನ್ನು ಕೆತ್ತಲ್ಪಟ್ಟಿವೆ. ಮೊದಲ ಚಿತ್ರದಲ್ಲಿ ವೃತ್ತಾಕೃತಿಗೆ ೮ ಸೂರ್ಯಕಿರಣ, ಎರಡನೆಯ ಚಿತ್ರದಲ್ಲಿ ವೃತ್ತಕೃತಿಗೆ ೯ ಸೂರ್ಯಕಿರಣ, ಮೂರನೆಯ ಚಿತ್ರದಲ್ಲಿ ಸರಳ ಪಾನವಟ ಲಿಂಗವನ್ನು, ನಾಲ್ಕನೆಯ ಚಿತ್ರದಲ್ಲಿ ವೃತ್ತಕೃತಿಗೆ ೧೧ ಸೂರ್ಯಕಿರಣದ ಪ್ರಭಾವಳಿಯನ್ನು ಮತ್ತು ಐದನೆಯ ಚಿತ್ರದಲ್ಲಿ ಸಮಗ್ರ ಪಾನವಟ ಲಿಂಗವನ್ನು ಕೆತ್ತಲಾಗಿದೆ. ಈ ಐದನೆಯ ಚಿತ್ರದಲ್ಲಿಯ ಸಮಗ್ರ ಪಾನವಟ ಲಿಂಗವೇ ಮಹಾಲಿಂಗವಾಗಿರುವುದು. ಇದನ್ನೇ ಭಾರತದಲ್ಲಿ ಲಿಂಗ, ಪಾನವಟಲಿಂಗ, ಶಿವಲಿಂಗ, ಶಂಕರಲಿಂಗ, ಶಂಭುಲಿಂಗ, ಮಹಾಲಿಂಗ, ಮಹಾದೇವ ಇತ್ಯಾದಿ ವಿಭಿನ್ನ ಹೆಸರುಗಳಿಂದ ಕರೆಯಲ್ಪಡುವುದು. ಈ ಲಿಂಗಾಕೃತಿಯು ಮಹಾಲಿಂಗ ದೇಗುಲದ್ವಾರದ ಮೇಲೂ ಕೆತ್ತಲಾಗಿರುವುದನ್ನು ಗಮನಿಸಬಹುದಾಗಿದೆ.

೭ ಮಕ್ಕಳ ತಾಯಿ ಮತ್ತು ಮಹಾಲಿಂಗ ಗರ್ಭಗುಡಿಯ ೩ ವೃತ್ತಾಕೃತಿಗೆ ವಿಭಿನ್ನ ಸೂರ್ಯಕಿರಣ ಮತ್ತು ೨ ಪಾನವಟ ಲಿಂಗಗಳು ಹೀಗೆ ಒಟ್ಟು ೧೨ ದೈವಗಳ ಸಂಕೇತಗಳು ಈ ಪರಿಸರದಲ್ಲಿವೆ. ಮಧ್ಯಭಾರತದ ಗೊಂಡ ಬುಡಕಟ್ಟಿನ ೧೨ ದೇವಗಳನ್ನು ಇವು ಪ್ರತಿನಿಧಿಸುತ್ತವೆ. ಮಧ್ಯಭಾರತದ ಗೊಂಡ ಬುಡಕಟ್ಟಿನ ೧೨ನೇ ದೇವನೇ ಫೇರ್ಸಾಪೇನ್ ಅಂದರೆ ಮಹಾದೇವ ಇಲ್ಲವೇ ಮಹಾಲಿಂಗ. ಈತನನ್ನೇ ದಕ್ಷಿಣ ಭಾರತದಲ್ಲಿ ಉದ್ಭವಲಿಂಗ, ಮಹಾದೇವ ಇಲ್ಲವೇ ಬಾರಾಲಿಂಗ ಮಹಾಲಿಂಗ ಎಂದೂ ಕರೆಯುವರು.

ಮಧ್ಯಭಾರತದ ಗೊಂಡ ಬುಡಕಟ್ಟಿನ ಸಾಮಾಜಿಕ ರಚನೆಯು ದೇವಗಳ ಹಿನ್ನಲೆಯಲ್ಲಿ ಅರ್ಥಮಾಡಿಕೊಳ್ಳಬಹುದೆಂದು ಹೇಳಿಯಾಗಿದೆ. ಏಕ (೧) ದಿಂದ ಬಾರಾ (೧೨) ದೇವಗಳು ಗೊಂಡರ ಸಾಮಾಜಿಕ ಮತ್ತು ಸಾಂಸ್ಕೃತಿಕ ಬೆಳವಣಿಗೆಯ ಹಿನ್ನಲೆಯಲ್ಲಿಯೂ ಗಮನಿಸಬಹುದಾಗಿದೆ. ಇದನ್ನು ದ್ವಾದಶ ರಾಶಿ (ಮೇಷ, ವೃಷಭ, ಮಿಥುನ, ಕಟಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನುಸ್ಸು, ಮಕರ, ಕುಂಭ, ಮೀನ)ಗಳಿಂದಲೂ ಅರಿಯಬಹುದಾಗಿದೆ. ಮೇಷ ಮತ್ತು ಮೀನ ಅಥವಾ ಮೀನ-ಮೇಷ ಇವುಗಳ ಸಂಗಮವೇ ಬಾರಾದೇವ > ಬಾರಾಲಿಂಗ > ಬೀರಲಿಂಗ > ಮಹಾಲಿಂಗ. ಮೇಷಪಾಲಕರು ವೃಷಭಪಾಲನೆಗೆ ವಿಸ್ತರಿಸಿಕೊಂಡಾಗ ಬಾರಾ(ಬೀರ)ಲಿಂಗ > ಮಹಾಲಿಂಗವಾಗಿ ಸಮನ್ವಯಗೊಂಡಾಗ ಮಿಥುನದಲ್ಲಿ ಐಕ್ಯವಾಗುವುದು. ಇದನ್ನೇ ಎಲ್ಲೆಡೆ ಪಾನವಟಲಿಂಗರೂಪದಲ್ಲಿ ಮಹಾಲಿಂಗವೆಂದು ಪೂಜೆಗೊಳ್ಳುವುದು. ಈ ಹಿನ್ನಲೆಯಲ್ಲಿ ಮಧ್ಯಭಾರತದ ಗೊಂಡ ಬುಡಕಟ್ಟಿನ ಬಾರಾದೇವನು ಕರ್ನಾಟಕದ ಹಾಲುಮತದ ಬೀರದೇವರಾಗಿ > ಬೀರಲಿಂಗರಾಗಿ > ಮಹಾಲಿಂಗರಾಗಿರುವರು. ಹಾಲುಮತ ಕಾವ್ಯದಲ್ಲಿಯ ಬಾರಮತಿಯು ಈ ಹಿನ್ನಲೆಯ ಮಹಾಲಿಂಗ ದರ್ಶನವೇ ಆಗಿರುವುದು. ಇದನ್ನು ಹಾಲುಮತ ಕಾವ್ಯವು ಚಾರಿತ್ರಿಕ ಘಟನೆ ಎಂಬಂತೆ ಚಿತ್ರಿಸಿದೆ. ಪಶುಪತಿ ರೂಪದಲ್ಲಿ ಮಹಾಲಿಂಗನನ್ನು ಸಿಂಧು ಕಣಿವೆಯ ಹರಪ್ಪ ಉತ್ಖನನದಲ್ಲಿ ಕಾಣಬಹುದು. ಈ ಪಶುಮುಂಡದ ಕಿರಿಟಧಾರಿ ಪಶುಪತಿಯು ಮಧ್ಯಬಾರತದ ಗೊಂಡರಲ್ಲಿ ಪೂಜನೀಯನು. ಈ ಕಿರಿಟಧಾರಿ ಸಮುದಾಯಕ್ಕೆ ಬೈಸನ್ಹಾರ್ನ (ಕೋಣದ ಕೊಂಬು) ಗೊಂಡರೆಂದು ಕರೆಯಲಾಗುವುದು.

ಕರ್ನಾಟಕದ ಹಾಲುಮತವು ಗೊಂಡರಿಂದ ಆರಂಭಗೊಂಡು ದ್ರಾವಿಡ ಪರಂಪರೆಯಲ್ಲಿ ವಿಸ್ತಾರಗೊಂಡಿರುವುದು. ದ್ರಾವಿಡ ಸಂಸ್ಕೃತಿಯ ಶೋಧದಲ್ಲಿ ಹಾಲುಮತ ಗೊಂಡರ ಎಳೆಗಳನ್ನು ಅಮೂಲಾಗ್ರವಾಗಿ ಎಲ್ಲ ಹಂತಗಳಲ್ಲಿಯೂ ಹೆಕ್ಕಿತೆಗೆದು ಮಧ್ಯಭಾರತದ ಗೊಂಡರೊಂದಿಗೆ ಸಮನ್ವಯಗೊಳಿಸಬೇಕಾಗಿದೆ. ಇದಕ್ಕಾಗಿ ಇನ್ನು ಹೆಚ್ಚಿನ ಶೋಧದ ಅಗತ್ಯವಿದೆ.

ಡಾ. ವೀರಣ್ಣ ದಂಡೆ ಸಂಪಾದಿತ ಹಾಲುಮತ ಕಾವ್ಯವು ಕುರಿಗಾಹಿಗಳು ಕಾಡಿನಲ್ಲಿ ಇರುವುದರಿಂದ ಕಾಡು ಕುರುಬ ಎಂಬ, ಪದುಮಗೊಂಡನ ಮಕ್ಕಳೇ ಗೊಂಡ ಕುರುಬರೆಂದು ಪ್ರಸಿದ್ಧಿಯಾದರು (ವೀರಣ್ಣ ದಂಡೆ: ೨೦೦೦ LXXXVIII) ಎಂಬ ವಿಚಾರವನ್ನೂ ವ್ಯಕ್ತಪಡಿಸಿದೆ. ಇಲ್ಲಿಯ ಬಾರಾಮತಿ [ಬಾ(ಭೀ)ರಾದೇವ] ಅಂದರೆ ಭಂಡಾರದ ಮಹಿಮೆಯನ್ನು ಬೀರಲಿಂಗ > ಮಹಾಲಿಂಗನ ಮೂಲಕ ವಿಸ್ತರಿಸುವುದೇ ಈ ಕಾವ್ಯದ ಆಶಯವಾಗಿದೆ.

ಆಧಾರಗಳು

೧. ದಂಡೆ, ವೀರಣ್ಣ (ಸಂ), ಜನಪದ ಹಾಲುಮತ ಮಹಾಕಾವ್ಯ (ಬೆಂಗಳೂರು: ಕನ್ನಡ ಪುಸ್ತಕ ಪ್ರಾಧಿಕಾರ, ೨೦೦೦).

೨. ಕಂಗಾಲಿ, ಮೋತಿರಾಮ, ಪಾರಿ ಕುಪಾರ ಲಿಂಗೋ ಕೋಯಾ ಪುನೇಮ ಗೊಂಡಿ ಧರ್ಮ ದರ್ಶನ [ಹಿಂದಿ] (ನಾಗಪೂರ: ಪಾರಿ ಕುಪಾರ ಲಿಂಗೋ ಪ್ರಕಾಶನ, (೧೯೮೯).

೩. ಪುಟ್ಟಪ್ಪ ಕೆ ವಿ (ಸಂ)., ಭಾರತದ ಭೂವಿಜ್ಞಾನ (ಮೈಸೂರು: ವಿಶ್ವವಿದ್ಯಾಲನಿಲಯ ಪ್ರಸಾರಾಂಗ, ೧೯೬೪).

೪. ಹುಲಜಂತಿ ಮತ್ತು ಕುಶನೂರು ಮಹಾಲಿಂಗರ ಕ್ಷೇತ್ರ ದರ್ಶನ ೨೦೧೦.