ಸಾಂಸ್ಕೃತಿಕ ಮತ್ತು ಚಾರಿತ್ರಿಕ ಮಹತ್ವ ಪಡೆದ ಹಾಲುಮತ ಸಮುದಾಯವನ್ನು ಕುರಿತಂತೆ ಲಿಖಿತ ಮತ್ತು ಮೌಖಿಕ ರೂಪದಲ್ಲಿ ಸಾಹಿತ್ಯ ರಚನೆಗೊಂಡಿದೆ. ಕಳೆದ ಒಂದು ಶತಮಾನದಿಂದ ಕಾವ್ಯ ಪುರಾಣಗಳು ಪ್ರಕಟಗೊಳ್ಳುತ್ತಿವೆ. ಬಸವಣ್ಣೆಪ್ಪ ನೀಲಪ್ಪ ಹಳವಳ್ಳಿಯವರು ಸಂಪಾದಿಸಿದ ಹಾಲುಮತ ಪುರಾಣ (೧೯೧೦), ರಸ್ತಾಪುರ ಭೀಮಕವಿಯ ಹಾಲುಮತೋತ್ತೇಜಕ ಪುರಾಣ (೧೯೧೨), ಅಣ್ಣಪ್ಪ ವಾಸುದೇವರಾಯ ಮುತ್ತೂರರ ಶ್ರೀ ಸಿದ್ಧಬೀರೇಶ್ವರ ಅರ್ಥಾತ್ ಕರಿಸಿದ್ಧೆಶ್ವರ ಪುರಾಣ (೧೯೨೪), ಚೆನ್ನಬಸವ ಕವಿಯ ಹಾಲುಮತ ಪುರಾಣ (೧೯೫೯), ಜನಪದ ಹಾಲುಮತ ಮಹಾಕಾವ್ಯ (೨೦೦೦), ಸಿದ್ಧಮಂಕ ಚರಿತೆ (೨೦೦೪), ತಗರ ಪವಾಡ (೨೦೦೪), ಮೊದಲಾದವು ಸಾಂಸ್ಕೃತಿದ ದೃಷ್ಟಿಯಿಂದ ಗಮನಾರ್ಹ ಕೃತಿಗಳಾಗಿವೆ. ಈ ಜನಾಂಗದ ಕುಲಕಸಬುಗಳಾದ ಕೃಷಿಕಾಯಕ, ಕಂಬಳಿ ತಯಾರಿಕೆ, ಕುರಿ ಸಾಕಾಣೆಯನ್ನು ತಿಳಿಸುವುದಲ್ಲದೆ, ಸಾಂಸ್ಕೃತಿಕ ನಾಯಕರಾದ ವೀರೇಶ್ವರ, ಶಾಂತಮುತ್ತಯ್ಯ, ಸಿದ್ಧರಾಮ, ರೇವಣಸಿದ್ಧ, ಆದಿಗೊಂಡ, ಶಿವಪದ್ಮ, ಮಾಳಿಂಗರಾಯ, ಮೈಲಾರಲಿಂಗ, ವೀರಗೊಲ್ಲಾಳೇಶ್ವರ ಮೊದಲಾದವರ ಚರಿತ್ರೆಯನ್ನು ಚಿತ್ರಿಸುತ್ತವೆ. ಸಮೂಹ ಸಮ್ಮತವಾದ ಕುರುಬ ಸಮಾಜದ ಸಂಸ್ಕೃತಿಯನ್ನು ತಿಳಿಯಲು ಚೆನ್ನಬಸವಕವಿಯ ಹಾಲುಮತ ಪುರಾಣವು ಒಂದು ಅಧಿಕೃತ ಕೃತಿಯಾಗಿದೆ.

. ಕವಿ ಪರಿಚಯ

ಈ ಕೃತಿಯ ಕರ್ತೃ ಚೆನ್ನಬಸವಶಾಸ್ತ್ರಿ. ಇವರು “ಧರೆಯೊಳ್ ದಾವಣಗೆರೆ ಪ್ರಾಂತದೊಳಿರುವ ಅವರೆಗೆರೆ ಹೀರೆಮಠದಾರ್ಯ ಚರವರರಗ್ರಜ ಗುರುಸಿದ್ಧ ಶರ್ಮರ ವರಸತಿ ಗಂಗಮ್ಮನವರ” ಸುಪುತ್ರನು ಅಂದರೆ ದಾವಣಗೆರೆ ಸಮೀಪದ ಅವರಗೆರೆ ಗ್ರಾಮದ ಹೀರೆಮಠದ ಗುರುಸಿದ್ಧಶರ್ಮರ ಹಾಗೂ ಗಂಗಮ್ಮನವರ ಪುತ್ರನಾದ ಚೆನ್ನಬಸವಶಾಸ್ತ್ರಿಗಳು ಹಾಲುಮತ ಸಮುದಾಯದವರ ಅಪೇಕ್ಷೆಯ ಮೇರೆಗೆ ‘ಹಾಲುಮತ ಪುರಾಣ’ ಕೃತಿಯನ್ನು ರಚಿಸಿದ್ದಾಗಿ ಆರಂಭದ ಸಂಧಿಯಲ್ಲಿ ಹೇಳಿಕೊಂಡಿದ್ದಾರೆ.

ಕತೆಪುರಾಣಗಳೆನ್ನದೆ
ಸಂತಸದಿಂ ಸತತ ಗ್ರಂಥಗಳ ನೋಡುತ್ತಂ
ಅಂತವುಗಳರ್ಥವರಿಯಲು
ಮುಂತೋಡುವುದಾತ್ಮತವು ಆರ್ಯೋದಯದೋಲ್

ಹೀಗೆ ಎಲ್ಲ ಗ್ರಂಥಗಳನ್ನು ಪರಿಶೀಲಿಸಿ ಅವುಗಳ ಸಾರ ತತ್ವಗಳನ್ನು ಸಂಗ್ರಹಿಸಿ, ಎಲ್ಲ ಹೆಸರಾಂತ, ಕವಿಗಳಂತೆ ನೀತಿಪದ್ಯದಲ್ಲಿ ಪರವಸ್ತು, ಪರಧನ, ಪರವಧು ನಿರಾಕರಣೆ ಮಾಡಿ ಜನತೆಯ ಹಿತವನ್ನು ದೃಷ್ಟಿಯಲ್ಲಿಟ್ಟುಕೊಂಡು ಕೃತಿ ರಚಿಸಿದ್ದಾಗಿ ಕವಿ ತಿಳಿಸಿದ್ದಾನೆ.

ವೀರಶೈವಾಚಾರ ದರ್ಪಣ, ಬೃಹತ ಶಿವಪೂಜವಿಧಿ, ಶ್ರೀಮದ್ವೇದ ವೇದಾಂತ, ಶಾಸ್ತ್ರಂತರ್ಗತ, ಶಬ್ದಸಾರ ಸಂಗ್ರಹ (ಸಂಕಲಿತ) ಆಯುರ್ವೇದ ಕೈಗನ್ನಡಿ ಒಂದು ಮತ್ತು ಎರಡನೆಯ ಭಾಗಗಳು (ಕಂದ ಪದ್ಯರೂಪ) ಜ್ಞಾನ ಮಾರ್ಗ ಪ್ರಶಂಸೆ, (ಪ್ರಶ್ನೋತ್ತರ ರೂಪ) ಇಷ್ಟಲಿಂಗದ ಭಜನೆ, ಸ್ತೋತ್ರಗುರುಸ್ತವ ನಾದ್ಯನೇಕ ಹಾಡುಗಳು, ಆಧ್ಯತ್ಮ ಸಂಬಂಧವಾದ ಗದ್ಯಪದ್ಯಗಳು, ಕೋಳೂರು ಕೂಡಗೂಸಿನ ಚರೆತ್ರೆ, ಬಾಲಕರಿಗುಪಯುಕ್ತವಾಗಿರುವಂತೆ ಪ್ರಭುವಿಜಯ ಚರಿತ್ರೆ  ನಾಟಕ, ಜಾತಕ ಫಲ ಭಾಗದ ಜ್ಯೋತಿಷ್ಯ ಸಂಗ್ರಹ ಮೊದಲಾದ ಕೃತಿಗಳನ್ನು ರಚಿಸಿದ್ದಾರೆ.

ಸವಿವರವಾದ ಕವಿ ಪರಿಚಯವನ್ನು ಬಳ್ಳಾರಿಯ ವೀರಶೈವ ಕಾಲೇಜಿನ ಪ್ರಿನ್ಸಿಪಾಲರಾದ ದಂ. ಮರಿಯಪ್ಪನವರು ತಿಳಿಸಿದ್ದಾರೆ. ಎನ್. ಕರಿಬಸವಯ್ಯ ಅವರು ಈ ಪುರಾಣ ಕುರುತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅರಿಯಲು ಶಾಲಿವಾಹನ ಶಕೆಯೊಂದು ಸಾ
ವಿರದೆಂಟು ನೂರೆಪ್ಪತ್ತೆಂಟು
ವರುಷ ದುರ್ಮಖಿಯದರೊಳು ಮಾಘ ಶುದ್ಧದ
ವರ ಚತುರ್ದಶಿ ಬುಧವಾರ     (೧-೨೪)

ಮೇಲಿನ ಪದ್ಯದ ಪ್ರಕಾರ ಕೃತಿ ರಚನಾಕಾಲ ೧೯೫೯ರ ಬುಧವಾರ ಪುಷ್ಯ ನಕ್ಷತ್ರದ ಶುಭ ಮುಹೂರ್ತದಂದು ಬರೆಯಲ್ಪಟ್ಟಿದೆ. ಕಂತೆ ಪುರಾಣವೆಂದು ನಿರ್ಲಕ್ಷಿಸದೆ, ಸಂತೋಷದಿಂದ ಓದಿದರೆ ಕವಿಶ್ರಮ ಸಾರ್ಥಕವೆಂದು ತಿಳಿಸಿದ್ದಾರೆ. ಪಾಂಡಿತ್ಯ, ಶಾಸ್ತ್ರಾನುಭವದ ಆಳ, ವಿನಯಶೀಲ, ಲೋಕಾನುಭವ ಹೊಂದಿದ ಕವಿ ಅತಿಯಾದ  ಶಬ್ದಾಡಂಭರವನ್ನು ಪ್ರದರ್ಶಿಸದೆ ಸರಳವಾದ ಮಾಧುರ್ಯವಾದ ಕಾವ್ಯವನ್ನು ರಚಿಸಿದ್ದಾರೆ. ಅತಿ ಕಡಿಮೆ ಪ್ರಮಾಣದಲ್ಲಿ ಭೂ ಕೈಲಾಸಗಳ ಕಾಲ್ಪನಿಕ ವರ್ಣನೆಗಳನ್ನು ಮಾಡಿ ಆದರ್ಶ ಕವಿಗಳ ಲಕ್ಷಣ ಮತ್ತು ಜವಾಬ್ದಾರಿಗಳನ್ನು ರೈತನ ಉದಾಹರಣೆಯ ಮೂಲಕ ವಿವರಿಸಲಾಗಿದೆ.

. ಕಾವ್ಯದ ಸ್ವರೂಪ

ಈ ಕೃತಿಯು ೧೯೫೬ರಲ್ಲಿ ಬರೆಯಲ್ಪಟ್ಟು, ೧೯೫೯ರಲ್ಲಿ ದಾವಣಗೆರೆ ತಾಲೂಕಿನ ಚಿಕ್ಕಬೂದಿಹಾಳು ಗ್ರಾಮದ ಶ್ರೀಮದಭಿನವ ರೇಣುಕ ಗುರುಕುಲಾಶ್ರಮದಿಂದ ಪ್ರಕಟಗೊಂಡಿದೆ.

ಹಾಲುಮತದ ಪ್ರಾಚೀನತ್ವಗಳನು ಪರಿ
ಶೀಲಿಸಿ ಸಾಧ್ಯವಾದುದನು
ಮೇಲಾಗಿ ಗ್ರಹಿಸಿ ರಚಿಸಿದನಲ್ಲದೆ ಯೆನ್ನ
ಆಲೋಚನೆಗಳೇನಿಲ್ಲ     (೧-೪೩)

ಸಂಗ್ರಹರೂಪದ ಕೃತಿಯ ಸಾಂಗತ್ಯವಾಗಿದ್ದು ಹದಿನೈದು ಸಂಧಿಗಳನ್ನು ಹೊಂದಿದೆ. ೧೯೨೬ ಪದ್ಯಗಳನ್ನು ಹೊಂದಿ ಆರಂಭದಲ್ಲಿ ನಿಂದರಕ ಪ್ರಶಂಸೆ, ನೀತಿಪದ್ಯ, ಆತ್ಮ ತತ್ವಜ್ಞಾನ ಮೊದಲಾದ ವಿಚಾರವನ್ನೊಳಗೊಂಡಿದೆ. ಕಾವ್ಯದುದ್ದಕ್ಕೂ ವೀರಶೈವ ಪ್ರಭಾವ ಹರಿದಿದೆ. ಪ್ರತಿಸಂಧಿಯ ಆರಂಭದಲ್ಲಿ ಕಾಥಾಸಾರವನ್ನು ತಿಳಿಸುವ ಪದ್ಯವಿದೆ.

. ಸಂಕ್ಷಿಪ್ತ ಕಥಾಸಾರ

ಮೊದಲ ಸಂಧಿಯು ೮೪ ಪದ್ಯಗಳನ್ನು ಹೊಂದಿದೆ. ಪ್ರಾರಂಭದಲ್ಲಿ ಕವಿ ಅಲ್ಲಮಪ್ರಭು, ಚೆನ್ನಬಸವಣ್ಣ, ಬಸವಣ್ಣ, ರೇವಣಸಿದ್ಧ ಹೀಗೆ ಗುರುದೇವತೆಗಳನ್ನು ಪ್ರಾರ್ಥಿಸುತ್ತಾನೆ.

ಕರಿಯ ಕಂಬಳಿ ಕಂಥೆಕರದಲ್ಲಿ ತ್ರಿಶೂಲ
ವರನಾಗಬೆತ್ತವಂ ಪಿಡಿದು
ಚರಿಸಿ ಮಹಿಮೆತೋರ್ದ ದೇವರಗುಡ್ಡದ
ಗುರುವರ ಗುಡದಯ್ಯ ಸಲಹೋ     (೧-೧೧)

ಕುರುಬರ ಮುಖ್ಯ ಸಂಕೇತಗಳನ್ನು ಹಾಡುತ್ತಾ ದೇವರ ಗುಡದಯ್ಯನನ್ನು ಸ್ಮರಿಸಿ ಒಬ್ಬ ವ್ಯಕ್ತಿಯ ಕರ್ತವ್ಯಗಳನ್ನು ಎಚ್ಚರಿಸುತ್ತ ಹೀಗೆ ಹೇಳಿದ್ದಾನೆ.

ಹಡೆದ ತಾಯಿಯ ತಂದೆ ಒಡಹುಟ್ಟಿದವರನು
ನಡೆಸಿಕೊಳ್ಳದೆ ವಿನಯದಿ
ಮಡದಿ ಮಕ್ಕಳ ಗೋಳಾದಿಸುತಿಹ ಧೂರ್ತ
ಹೊಡೆಯಿರಿಕೊರಡಿಯಿಂದವನ     (೧-೨೨)

ಭೂಮಿಯ ಮೇಲೆ ನಡೆಯುವ ಎಲ್ಲ ಕಾರ್ಯಗಳನ್ನು ಸ್ಥಿತಗೊಳಿಸಲು ರೇಣುಕನು ಕೊಲ್ಲಿಪಾಕಿಯ ಸೋಮೇಶ್ವರ ಲಿಂಗದಿಂದ ಉದ್ಭವಿಸುವನು. ಕೈಲಾಸದ ಶಿವ ಪಾರ್ವತಿಯರ ಭೃಂಗಿಯ ವಿಷಯ ತಿಳಿಸುತ್ತಾನೆ.

ಎರಡನೆಯ ಸಂಧಿಯಲ್ಲಿ ೧೨೯ ಪದ್ಯಗಳಿದ್ದು ಸರೂರು ಶಾಂತಮುತ್ತಯ್ಯನಿಗೆ ಲಿಂಗಪ್ರಧಾನ ಮತ್ತು ಉಪದೇಶ ಮೊದಲಾದವನ್ನು ತಿಳಿಸುತ್ತಾ  ಶಾಂತಮುತ್ತಯ್ಯನ ಮಕ್ಕಳಾದ

ಸುವಿಮುತ್ತಯ್ಯ ಜಗಮುತ್ತಯ್ಯನು
ವಿವರಿಸೆ ಲಲಿತ ಮುತ್ತಯ್ಯ
ಕುವರರಿವರ ಮನದಿರವನೇನೆಂಬನು
ಭುವನದೊಳಾದರ್ಶವದು (೨-೧೦)

ಸುವ್ವಿಮುತ್ತಯ್ಯ, ಜಗಮುತ್ತಯ್ಯ ಲಲಿತ ಮುತ್ತಯ್ಯರ ಪ್ರಸ್ತಾಪದೊಂದಿಗೆ ರೇವಣಸಿದ್ಧರು ಲೋಕದೊಳಗಣ ಅಂಕುಡೊಂಕುಗಳನ್ನು ಸುಧಾರಿಸುವ ಸಮಾಜ ಕಾರ್ಯಗಳೊಂದಿಗೆ ಶಾಂತಮುತಾಯ್ಯನಿಗೆ ಲಿಂಗದೀಕ್ಷೆಯನ್ನಿತ್ತು ಹಾಲುಮತದವರಿಗೆ ಗುರುವಾಗಿಸಿ ಜೀವನದ ಮುಖ್ಯ ವಿಚಾರಗಳನ್ನು ಬೋಧಿಸಿದರು. ಗುರುವಿನ ಅಪ್ಪಣೆಮೇರೆಗೆ ಶಾಂತಮುತ್ತಯ್ಯ ಕೊಲ್ಲಾಪುರದ ಕುಟಿಲ ಸಿದ್ಧರನ್ನು ನಿಗ್ರಹಿಸಿ ಬರುವಾಗ ಎದುರಾಧ ಮುಂಡಾಸುರ ರಾಕ್ಷಸನನ್ನು ಮೂರು ಹೋಳಾಗಿಸಿ ಜ್ಞಾಪಕಾರ್ಥವಾಗಿ ಮುರುಡಿನ ಕಂಥೆ ಎಂಬ ಬಿರುದನ್ನು ಗುರುವಿನಿಂದ ಪಡೆದನು. ಶಿಷ್ಯರ ಮೇಲೆ ದಂಡಿನ ಖಂಡನಾದಿಗಳನ್ನು ನಡೆಸಬೇಕಾದ ಕಾರಣ ಹಾಲುಮತ ದವರಿಗೆಲ್ಲಾ ‘ಒಡೆಯರು’ ಎನ್ನುವ ಪ್ರತೀತಿ ಇರಲೆಂದು ಗುರುರೇವಣಸಿದ್ಧ ಅನುಗ್ರಹಿಸಿದನು. ಒಡೆಯರು ಶಾಂತಮುತ್ತಯ್ಯನ ವಂಶೀಯರೆಂದೂ ಇವರಿಗೆ ‘ಮುರಡಿನ ಕಂತೆಯ ಒಡೆಯರು’ ಎಂದೂ ಕರೆಯುತ್ತಾರೆ.

ಗುರುವಿನಿಂದ ಪಡೆದ ವಾಕ್ಸಿದ್ಧಿಯಿಂದ ಶಾಂತಮುತ್ತಯ್ಯ ‘ಕುರುಬ ರಟ್ಟಮತಶಾಸ್ತ್ರ’ ಎಂಬ ಭವಿಷ್ಯಗ್ರಂಥ ರಚಿಸಿದ ವಿವರ ಹೀಗಿದೆ.

ಕುರುಬರಟ್ಟು ಮತಶಾಸ್ತ್ರ ಭವಿಷ್ಯವ
ವಿರಚಿಸಿ ಮುತ್ತಯ್ಯ ತಾನು
ಧರೆಗುಪಕಾರಮಂ ಮಾಡಿ ಮೆರೆದನೀಗ
ಲೊರೆವರು ಶಾಸ್ತ್ರವನು (೨-೯೮)

ಮೂರನೆಯ ಸಣ್ಧಿಯು ೧೩೯ ಪದ್ಯಗಳನ್ನೊಳಗೊಂಡಿದೆ. ಹಾಲುಮತ ಪುರಾಣಗಳ ಸಾಮಾನ್ಯ ಕಥೆಗಳಂತೆ ಕೈಲಾಸದ ಒಡ್ಡೋಲಗದಲ್ಲಿ ಮುನಿತಾಪದಿಂದ ಭೂಲೋಕದಲ್ಲಿ ಆದಿಗೊಂಡ ಚಂಚಲೆಯರ ಜನನ, ಅವರಿಗೆ ಗುರು ರೇವಣಸಿದ್ಧರ ಆಶೀರ್ವಾದದಿಂದ ಆರನೆಯ ಮಗನ್ನಾಗಿ ಶಿವಪದ್ಮನ ಜನನ ಹೀಗೆ ಹಾಲುಮತದ ಹುಟ್ಟಿನ ಅಂಶಗಳಿವೆ.

ನಾಲ್ಕನೆಯ ಸಂಧಿಯು ೯೮ ಪದ್ಯಗಳನ್ನು ಹೊಂದಿದೆ. ಶಿವಪದ್ಮನ ಬಾಲ್ಯದ ಚೇಷ್ಟೆಗಳು, ಚಿನ್ನಾಟಗಳು, ತಂದೆ, ತಾಯಿ, ಬಂಧು-ಬಾಂಧವರಿಂದ ಮಗುವಿನ ನಾಮಕರಣ, ಜೋಗುಳ ಹಾಡುತ್ತಾ ತೊಟ್ಟಿಲು ತೂಗುವ ಸಂಭ್ರಮ ಸಡಗರದ ವರ್ಣನೆ ಹೀಗಿದೆ.

ಮನೆಯ ಶೃಂಗರಿಸಿ ಮೃಷ್ಟಾನ್ನವಂ ಮಾಡಿಸಿ
ಕನಕದ ತೊಟ್ಟಿಲಂಕರಿಸಿ
ಅನೆಫನೆ ಬಲ್ಲ ನೀ ಶೃಂಗಾರದಿರವನೆಂ
ದೆನುವಂತೆಲ್ಲವನು ಮಾಡಿಸುತ (೪-೨೫)

ಹೀಗೆ ತಂದೆ ತಾಯಿ ಮಗುವಿನ ಲಾಲನೆ ಪಾಲನೆಯಲ್ಲಿ ಮುಳುಗಿದ್ದರು.

ಐದನೆಯ ಸಂಧಿಯು ೧೧೬ ಪದ್ಯಗಳನ್ನು ಹೊಂದಿದೆ. ಐದು ವರ್ಷದ ಶಿವಪದ್ಮನ ಬಾಲಲೀಲೆಗಳನ್ನು ಹೀಗೆ ವರ್ಣಿಸಲಾಗಿದೆ.

ಧೂಳಿನೊಳಾಡುತ ಎರಚುತ್ತ ಮಣ್ಣನು
ಬಾಲರೊಳ್ಕೂಡಿಯಾಡುತಲಿ
ಬಾಲದೊಡಿಗಳೆಲ್ಲವ ಕೊಳೆ ಮಾಡುತ
ಕೋಲ್ಗುರುಳ್ಗಳ ಕರೆಯುತ್ತ (೫-೫)

ತುಂಟಾಟದ ಬಾಲ್ಯ ಕಳೆದು ಯೌವ್ವನ ಪ್ರಾಪ್ತಿಯಾಗಲು ತಂದೆ ತಾಯಿ ಜಿಂಕಾದೇವಿಯೊಂದಿಗೆ ವಿವಾಹ ವಿವಾಹ ಮಾಡುತ್ತಾರೆ.

ಬಾಸಿಂಗವನು ಭಸಿತವನು ಧರಿಸಿ ವಾದ್ಯ
ಘೋಷದ ಮೆರವಣಿಗೆಯಲಿ
ಈಶನಂ ಸ್ಮರಿಸುತ್ತ ಹಸೆಯ ಮಂಟಪವ ಪ್ರ
ವೇಶವಂ ಮಾಡಿಸುತ್ತಾಗ (೫-೨೭)

ಕಾಲ್ತೊಳೆಯುವ ಶಾಸ್ತ್ರ, ಗೌರಿಪೂಜೆ, ಪಂಚಕಲಶಗಳ ಪೂಜೆ ಸುಮಂಗಲಿಯರೆಲ್ಲರೂ ಸೋಬಾನೆ ಪದಗಳನ್ನು ಹಾಡುತ್ತಾ ಶಾಸ್ತ್ರೋಕ್ತವಾದ ಮದುವೆ ಮಾಡುತ್ತಾರೆ. ಶಿವಪದ್ಮ ಆದರ್ಶ ಬಾಳುವೆ ಮಾಡುತ್ತಿರಲು ರೇವಣಸಿದ್ಧರು ಜಾಗ್ರತಿಪುರಕ್ಕೆ ಬರುತ್ತಾರೆ. ಬಡವಿ ಗಂಗಮ್ಮಳ ಮನೆಗೆ ಬಂದು ಅವಳ ನಿಷ್ಠೆ, ಭಕ್ತಿ ಕಂಡು ಮೆಚ್ಚಿ ಐಶ್ವರ್ಯ ಸಂಪತ್ತುಗಳ ಅನುಗ್ರಹ ಮಾಡಿ, ಆದಿಗೊಂಡನ ಮನೆಗೆ ಬಂದು ಅವರಿಂದ ಎಲ್ಲ ರೀತಿಯ ಸತ್ಕಾರ ಪಡೆದು ಲೋಕನೀತಿ, ಧರ್ಮನೀತಿಗಳನ್ನು ಬೋಧಿಸಿ

ಇಂತು ನೀತಿಯನು ಬೋಧಿಸುತಲಿ ಗುರುವರ
ನಂತು ಮೌನವ ಧರಿಸಲ್ಕೆ
ಚಿಂತಾರಹಿತನಾಗಿ ಸತಿಪತಿಯಿರ್ವರು
ಮುಂತೆರಗುತ ತೆರಳಿದರು. (೫-೧೦೯)

ಶಿವಪದ್ಮನ ಬೇಡಿಕೆಯಂತೆ ಅವನಿಗೆ ಲಿಂಗವನ್ನು ಕೊಟ್ಟು ಆಶೀರ್ವದಿಸಿ ಕುರಿಗಳನ್ನು ಕಾಯುತ್ತ ಜೀವನ ನಡೆಸಲು ಅಪ್ಪಣೆಯಿತ್ತು ಬೀಳ್ಕೊಂಡರು.

ಆರನೆಯ ಸಂಧಿಯು ೧೧೬ ಪದ್ಯಗಳಿಂದ ಕೂಡಿದೆ. ಗುರುವಿನ ಆಜ್ಞೆಯನುಸಾರ ಶಿವಪದ್ಮ ಕುರಿಗಳನ್ನು ಕಾಯುತ್ತಿರುವುದನ್ನು ಕವಿ ಸಹಜ ಭಾಷೆಯಲ್ಲಿ ಹೇಳಿದ್ದಾನೆ.

ಹೊರಡುವ ಸಮಯದಿ ಹೆಗಲಲ್ಲಿ ಕಂಬಳಿ
ಕರದಲ್ಲಿ ಕೊಡಲಿ ದಂಡಗಳ
ಧರಿಸಿ ಕಾಲ್ಮರಿ ಮೆಟ್ಟಿ ಹರುಷದಿಂ ಕುರಿಗಳ
ಕರೆಯುತ ಛೇ ಛೇ ಠರ್ರೆನುತ (೬-೭)

ಶಿವನ ಆಜ್ಞೆಯಂತೆ ಜಾಬಾಲಮುನಿ ಭೂಲೋಕದಲ್ಲಿ ಕಠಿಣ ತಪಸ್ಸಿನಲ್ಲಿ ಮಗ್ನವಾಗಿರಲು ಕಾರಣಾಂತರಗಳಿಂದ ನೂತನಪುರದರಸ ಗಂಗಾಧರನಿಂದ ಹತನಾಗುತ್ತಾನೆ. ಅವನ ರಕ್ತದಿಂದ ಅಸಂಖ್ಯಾತ ಕುರಿಗಳು ಹುಟ್ಟಲು ದಿಗ್ಭ್ರಮೆಗೊಂಡು ಕೆಲ ಸಮಯ ಕಾಯ್ದು ಬೇಸತ್ತು ರಾವುತರನ್ನು ನೇಮಿಸುವನು. ಅವರು ಬೇಸರಗೊಳ್ಳಲು ಮಂತ್ರಿ ಕಾಯುವನು. ಬ್ರಹ್ಮ ಕಾಯುವನು. ಕೊನೆಗೆ ಕುರಿಗಳ ರಕ್ಷಣೆಗಾಗಿ ಪಾರ್ವತಿ ಮಗ ಗಣಪನೊಂದಿಗೆ ಕುರಿಕಾಯಲು ಪ್ರಾರಂಭಿಸುತ್ತಾಳೆ.

ಕುರಿಗಳ ಲೆಖ್ಖವಂ ಗಣಪತಿಗೊಪ್ಪಿಸಿ
ಗಿರಿತಟದಲಿ ರೊಪ್ಪಗೂಡಿ
ಕರುಣದಿಂ ಹಗಲಿರುಳೆನ್ನದೆ ತನ್ನಯ
ಹರಣದಾಸೆಯ ಬಿಟ್ಟು ಸಲಹಿ (೬-೧೦೪)

ಹೀಗಿರಲು ಚಂಚಲವಾದ ಕುರಿಗಳನ್ನು ಕಾಯ್ದು ಸಾಕಾಗಲು ಮೂರು ಕಣ್ಣಿರುವ ಹುತ್ತದಲ್ಲಿ ಹೊಗಿಸಿ ಗುರುತಿಗಾಗಿ ತನ್ನ ಮುತ್ತಿನ ಮೂಗುತಿಯನ್ನು ನೆಟ್ಟು ಕಾವಲಿಗಾಗಿ ವೀರಭದ್ರನನ್ನು ನೇಮಿಸುತ್ತಾಳೆ.

ಏಳನೆಯ ಸಂಧಿಯು ೭೩ ಪದ್ಯಗಳನ್ನು ಒಳಗೊಂಡಿದೆ. ಶಿವಪದ್ಮನಿಗೆ ರೇವಣ್ಣನೆಂಬ ಮಗ ಜನಿಸುತ್ತಾನೆ. ಸಹೋದರರ ಅಸೂಯಾಗುಣಕ್ಕೆ ಬೇಸತ್ತ ಶಿವಪದ್ಮ ಭೂಮಿಯನ್ನು ಯೂಳಲು, ಹುತ್ತಕ್ಕೆ ನೇಗಿಲು ತಾಗಿ ಹುತ್ತ ಒಡೆದು ನಾನಾ ಬಣ್ಣದ ಕುರಿಗಳು ಹೊರ ಬರುತ್ತವೆ. ಮನೆಗೆ ಹೋಗದೆ ಕುರಿಗಳನ್ನು ಮೇಯಿಸುತ್ತಾ ಕಾಡಿನಲ್ಲಿ ಅಲೆಯುತ್ತಾನೆ. ಸಹಾಯಕ್ಕಾಗಿ ಶಿವನನ್ನು ಧ್ಯಾನಿಸಲು ಶಿವ ಪ್ರತ್ಯಕ್ಷಗೊಂಡು ವೀರೇಶ್ವರನನ್ನು ನೇಮಿಸುತ್ತಾನೆ.

ಎಂಟನೆಯ ಸಂಧಿಯಲ್ಲಿ ೧೦೪ ಪದ್ಯಗಳಿವೆ. ಶಾಪಗ್ರಸ್ಥ ಮೂರು ಜನ ಗಂಧರ್ವರು, ಕಾಗೆ, ಕಾಂಚಾಲ ಮರ ಮತ್ತು ಕುದಯ ರಕ್ಕಸಿಯಾಗಿ ಭೂಲೋಕದಲ್ಲಿ ಜನಿಸುವರು. ಶಿವನಿಂದ ಶಾಪವಿಮೋಚನೆಯ ಅಶ್ವಾಸನೆಯನ್ನು ಪಡೆಯುವರು. ರಾಕ್ಷಸಿಯು ಜಾಗ್ರತಿಪುರದರಸನ ಮಗಳಾದ ಚುಮಲಾದೇವಿಯನ್ನು ಒಯ್ದು ಕರುಣೆಯಿಂದ ಸಾಕತೊಡಗಿದಳು. ಇತ್ತ ಗುರುವಾಜ್ಞೆಯಂತೆ ಶಿವಪದ್ಮ ಚುಮಲಾದೇವಿಯೊಡನೆ ಮಾತನಾಡಿ ಬರುತ್ತಾನೆ. ಗುರು ರೇವಣಸಿದ್ಧರನ್ನು ಶಿವಪದ್ಮ ನೆನೆಯಲು ಪ್ರಸನ್ನನಾದ ಗುರು ರೇವಣಸಿದ್ಧರ ಗಣ ಸಮೂಹಕ್ಕೆ ಕ್ಷೀರದಿಂದ ತೃಪ್ತಿ ಪಡಿಸುತ್ತಾನೆ. ಗುರುವಿನ ಅಪ್ಪಣೆಯೊಂದಿಗೆ ಚಮಲಾದೇವಿಗಾಗಿ ತೆಗೆದಿರಿಸಿದ ಪ್ರಸಾದವನ್ನು ಕೊಡಲು ತೆರಳುತ್ತಾನೆ.

ಒಂಬತ್ತನೆಯ ಸಂಧಿಯಲ್ಲಿ ೭೮ ಪದ್ಯಗಳಿವೆ. ಶಿವಪದ್ಮ ಉಪಾಯದಿಂದ ರಾಕ್ಷಸಿಯ ಪ್ರಾಣದ ನೆಲೆಯನ್ನು ತಿಳಿದು ಕಂಚಿವಾಳದ ಮರದ ಮೇಲಿನ ಕಾಗೆಯನ್ನು ಕೊಲ್ಲುತ್ತಾನೆ. ಮರ ಬೀಳಲು ರಾಕ್ಷಸಿಯನ್ನು ಕೊಲ್ಲುತ್ತಾನೆ. ಹೀಗೆ ಮೂರು ಜನ ಗಂಧರ್ವರು ಶಾಪವಿಮುಕ್ತರಾಗಿ ಕೈಲಾಸಕ್ಕೆ ಮರಳುತ್ತಾರೆ. ಶಿವಪದ್ಮ ರಾಕ್ಷಸಿಯ ಅವಯವ ಗಳಿಂದ ಬಾವನ್ನ ಬಿರುದಾವಳಿಗಳನ್ನು ಮಾಡಿ ಬಂಕಾಪುರದಲ್ಲಿಉತ್ತಾನೆ. ಕಾವಲಿಗಾಗಿ ಬಂಕಣ್ಣನೆಂಬುವವನನ್ನು ಶಿವನ ಅಪ್ಪಣೆಯಂತೆ ಕಾವಲಿರಿಸುತ್ತಾನೆ. ಗುರುರೇವಣ್ಣಸಿದ್ದರ ಸಮ್ಮುಖದಲ್ಲಿ ಚುಮಲಾದೇವಿ ಮತ್ತು ಶಿವಪದ್ಮರ ವಿವಾಹ ನಡೆಯುತ್ತದೆ.

ಎಂದ ಮಾತಿಗೆ ಗುರು ಸಂದೇಹ ಬಿಡುತಾ
ನಂದದಿ ಗಣ ಸಮೂಹದೊಳು
ಗಂಧರ್ವ ವಿವಾಹಂ ಮಾಡಿ ಸಂತೈಸುತ
ಲೆಂದನಾರ್ಶೀವಚನವನು

ಹತ್ತನೆಯ ಸಂಧಿಯು ೯೯ ಪದ್ಯಗಳನ್ನು ಹೊಂದಿದೆ. ಚುಮಲಾದೇವಿಯೊಂದಿಗೆ ಶಿವಪದ್ಮ ತನ್ನ ಮೊದಲಿನ ಊರಾದ ಜಾಗ್ರತಿಪುರಕ್ಕೆ ಬರುತ್ತಾನೆ. ಕಾಲಗಳು ಊರುಳಿದ ಕಾರಣ ಗುರುತು ತಿಳಿಯದ ಸಹೋದರರಿಗೆ ಜಂಗಮ ರೂಪದ ಶಿವನು ಶಿವಪದ್ಮನನ್ನು ಪರಿಚಯಿಸುತ್ತಾನೆ. ತಂದೆ ತಾಯಿ ಅಣ್ಣಂದಿರುಗಳಿಗೆ ನಮಸ್ಕರಿಸಿ ಹೆಂಡತಿ ಚುಮಲಾದೇವಿ ಮತ್ತು ಕುರಿಹಿಂಡಿನೊಂದಿಗೆ ಮನೆಗೆ ಬರಲು ಮೊದಲ ಹೆಂಡತಿ ಜಿಂಕಾದೇವಿ, ಮಗ ರೇವಣ್ಣ ಎಲ್ಲ ಸದಸ್ಯರು ಸುಖದಿಂದಿರುತ್ತಾರೆ. ಚುಮಲಾದೇವಿಗೆ ರೇಣುಕ ಮತ್ತು ರೇವಣಾಂಬೆ ಎಂಬ ಮಕ್ಕಳು ಜನಿಸುತ್ತಾರೆ. ನಂತರ ಕಥೆಯ ದಿಕ್ಕು ಬದಲಾಗುತ್ತದೆ.

ಪುಷ್ಪದತ್ತ ಮತ್ತು ಹರಿಹರನ ಶಿವಪೂಜೆ. ಹರಿಹರದೇವ ಕಾಳಿಯಿಂದ ಗಂಗಾಜಲ ತರುವವರೆಗೆ ಶಿವಪೂಜೆಗಾಗಿ ಚಂದ್ರಗಿರಿಯ ಭರಮಭೂಪಾಲನಿಗೆ ನೇಮಿಸುತ್ತಾನೆ. ಭರಮಭೂಪಾಲನೊಂದಿಗೆ ತನ್ನ ತಂಗಿ ಸುರಾವತಿಯನ್ನು ಕೊಟ್ಟು ವಿವಾಹ ಮಾಡುತ್ತಾನೆ. ಶಿವನಿಚ್ಚೆಯಂತೆ ಶಿವಸಿದ್ದಬೀರನೆಂಬ ಸುವರ್ಣ ಒಡೆಯನಾಗಿ ಜನಿಸುತ್ತಾನೆ. ಆದಿಗೊಂಡ ಚಂಚಲೆಯರ ಶಾಪ ವಿಮೋಚನೆ, ಶಿವಪದ್ಮನಿಗೆ ಕೈಲಾಸ ಪ್ರಾಪ್ತಿ, ವೀರೆಶ್ವರನು ಬೀರೇಶ್ವರನಾಗಿ ಬಂಡು ಹಾಲುಮತದವರಿಗೆ ದೇವನಾಗುವದು, ತುಕ್ಕಪ್ಪನ ಮಗ ಮಾಳಿಂಗರಾಯನನ್ನು ಬೀರೇಶ್ವರನಿಗೆ ಶಿಷ್ಯನಾಗಿ ಪಡೆಯುವ ಆಶ್ವಾಸನೆಯನ್ನು ಶಿವನಿಂದ ಪಡೆಯುವ ಪ್ರಸಂಗಗಳನ್ನು ಈ ಸಂಧಿಯಲ್ಲಿ ವಿವರಿಸಲಾಗಿದೆ.

ಹನ್ನೊಂದನೆಯ ಸಂಧಿಯು ೭೯ ಪದ್ಯಗಳಿಂದ ಕೂಡಿದೆ. ಸುರಕನ್ಯೆಯರಿಂದ ಜನಿಸಿ ಅನಾಥರಾದ ಐದು ಜನ ಹೆಣ್ಣು ಮಕ್ಕಳಾದ ಅಕ್ಕಮ್ಮ, ಮಾಯಮ್ಮ, ಲಕ್ಷ್ಮಮ್ಮ, ಮಾಕಾಳಿ, ಮಂಕಮ್ಮ ಎಂಬುವವರನ್ನು ಚಾಮರಾಯ ತನ್ನ ಹೆಂಡತಿ ಶಾಂಭವಿಗೆ ಕೊಡಲು ಅವರನ್ನು ಪ್ರೀತಿಯಿಂದ ಸಲಹತೊಡಗುತ್ತಾಳೆ. ಹಸುಗೂಸು ಶಿವಸಿದ್ಧ ಬೀರೇಶನು ಸೋದರ ಮಾವನ ಕುತಂತ್ರದ ಫಲವಾಗಿ ಹುಟ್ಟಿದ ಏಳನೇ ದಿನಕ್ಕೆ ಕಾಡು ಪಾಲಾಗಿ, ಅಕ್ಕಮ್ಮಳ ಕೈ ಸೇರುತ್ತಾನೆ. ಶಿವನಿಂದ ಮಗುವಿನ ಪೂರ್ವ ವೃತ್ತಾಂತವನ್ನು ಅಕ್ಕಮ್ಮ ತಿಳಿಯುತ್ತಾಳೆ.

ಅಡವಿಯೊಳಾರರಿಯದವೋಲೀ ಶಿಶುವನು
ಪಡೆದುದೆಮ್ಮಯ ಭಾಗ್ಯವದು
ಮೃಡನ ಕರುಣದಿಂದಲಲ್ಲದೆ ಪೆರತೇನು
ಹುಡುಕಾಟವಿಲ್ಲದರೊಳಗೆ      (೧೧-೭೦)

ಹನ್ನೆರಡನೆಯ ಸಂಧಿಯಲ್ಲಿ ೧೩೦ ಪದ್ಯಗಳಿವೆ. ಶಿವನಿಂದ ವರ ಪಡೆದ ಅಕ್ಕಮ್ಮ ಶಿಶು ವೀರೇಶನನ್ನು ಸಾಕುವಳು. ಅವನ ಇಷ್ಟಾದಂತೆ ಕುರಿಯ ಕತ್ತಿನ ಮೊಲೆಯ ಹಾಲನ್ನು ಕುಡಿಸುತ್ತಾಳೆ. ಗುರು ರೇವಣಸಿದ್ಧರಿಂದ ಆಶೀರ್ವಾದ ಪಡೆಯುತ್ತಾನೆ. ಚೆಂಡಿನಾಟದಲ್ಲಿ ಮೃತಪಟ್ಟ ಬಾಲಕನ್ನನ್ನು ಭಸಿತವಿಟ್ಟು ಬದುಕಿಸಿ ಮಂದಲಗೆರೆಯಿಂದ ವೆಳ್ಳಿಗುತ್ತಿಗೆ ಬರುತ್ತಾನೆ. ನೀರು ತರುವ ತರುಣಿಯರ ಕೊಡದಳಿಗೆ ಬಾಣ ಬಿಟ್ಟು ರಂಧ್ರ ಮಾಡಲು ಅವರಿಂದ ಬೈಸಿಕೊಂಡ ಬೀರೇಶನು ತನ್ನ ಪೂರ್ವ ವೃತ್ತಂತವನ್ನು ಅಕ್ಕಮ್ಮಳಿಂದ ತಿಳಿಯುತ್ತಾನೆ.

ನಿಲ್ಲದೆ ಮನೆಗೈಯ್ಯ ತಕ್ಕನ ಕೇಳ್ದನು
ಎಲ್ಲಿಹರೆನ್ನ ಪೆತ್ತವರು
ಸೊಲ್ಲಿಸೆನುತ ಬಹು ಬಲ್ಲಿದತನದಿಂದ
ಚೆಲ್ವ ಬೀರೇಶ ಕೇಳಲ್ಕೆ     (೧೨-೭೯)

ತನ್ನ ಸೋದರ ಮಾವನ ಮಗಳು ಕನ್ನಿಕಾಮಾಲೆಯನ್ನು ಶೌರ್ಯದಿಂದ ಗೆದ್ದು ತರುತ್ತಾನೆ. ತಕ್ಕ ಶಿಷ್ಯನಿಗಾಗಿ ಶಿವನಲ್ಲಿ ಪ್ರಾರ್ಥಿಸುತ್ತಾನೆ.

ಹದಿಮೂರನೆಯ ಸಂಧಿಯು ೮೬ ಪದ್ಯಗಳಿಂದ ಕೂಡಿದೆ. ಶಿಷ್ಯನಿಗಾಗಿ ಬೇರೇಶನು ಪ್ರಾರ್ಥಿಸಲು ಪ್ರತ್ಯಕ್ಷಗೊಂಡ ಶಿವ ಬ್ರಾಹ್ಮೀದೇವೆಯಲ್ಲಿಗೆ ಕಳುಹಿಸುತ್ತಾನೆ. ಬೀರೇಶನು ಬ್ರಾಹ್ಮೀದೇವಿಯನ್ನು ಧ್ಯಾನಿಸಲು ಪ್ರಸನ್ನಳಾದ ಬ್ರಹ್ಮೀದೇವಿಯು ಮಾಳಿಂಗರಾಯನ ಪೂರ್ವ ವೃತ್ತಾಂತವನ್ನು ತಿಳಿಸುತ್ತಾಳೆ. ಬಿಲ್ವಾಡ ನಗರಿಗೆ ಬಂದು ಜಲಮಾಯಿ ಕೆರೆಯ ಹತ್ತಿರ ಗುರುವಿನಪ್ಪಣೆಯಂತೆ ಕಾಯ್ದಿದ್ದು ಶಿಷ್ಯನನ್ನು ಪಡೆಯುತ್ತಾನೆ. ಗುರುಶಿಷ್ಯರಿಬ್ಬರೂ ಶಿವನ ಆಶೀರ್ವಾದ ಪಡೆಯುತ್ತಾರೆ.

ನೀವೀರ್ವರಿನ್ನು ಜಂಟಿಯೊಳಿದ್ದು ಮಹಿಮೆಯ
ಭುವಳಯದಿ ತೋತಿಮೆರೆದು
ಜೀವಿಗನ್ನುದ್ದರಿಸಿರೆಂದು ಶಂಕರ
ನೀವುತಾಶೀರ್ವಾದವನ್ನು     (೧೩-೭೮)

ಹದಿನಾಲ್ಕನೆಯ ಸಂಧಿಯಲ್ಲಿ ೧೮೩ ಪದ್ಯಗಳಿವೆ. ಬೇರೇಶ್ವರನು ಮದವೇರಿದ ಕೋಣವೊಂದನ್ನು ಕೊಂದು ಮುಂಡಗನೂರಾಗಲಿ ಎಂದು ಕೋಣ ಬಿದ್ದಲ್ಲಿ ಕೋಣಗನೂರಾಗಲಿ ಎಂದು ಹೆಸರಿಸಿ ಗುರುವನ್ನು ನೆನೆಯಲು ಗುರು ರೇವಣಸಿದ್ಧರು ಪ್ರತ್ಯಕ್ಷರಾಗಿ ಆಶೀರ್ವದಿಸಿ ಬೀರೇಶ್ವರನ ಇಚ್ಛೆಯಂತೆ ಹಾಲುಮತದ ಪೂರ್ವ ವೃತ್ತಾಂತವನ್ನು ತಿಳಿಸುತ್ತಾರೆ. ವೀರಗೊಲ್ಲಾಳನ ಕಥೆ ಹೇಳಿ ತಾವು ಭೂಮಿಗೆ  ಬಂದು ಹದಿನಾಲ್ಕು ನೂರು ವರ್ಷಗಳಾದವೆಂದು ಶಿವಸನ್ನಿಧಿಗೆ ತೆರಳುವ ಸಮಯ ಸಮೀಪಿಸಿತೆಂದು ಬೀಳ್ಕೊಂಡು ರಂಭಾಪುರಿ ಮಠದಲ್ಲಿ ತಮ್ಮ ವರಗುವರ ರುದ್ರಮುನಿಗೆ ಪಟ್ಟಾಭಿಷೇಕ ಮಾಡಿ ರೇವಣಸಿದ್ಧೇಶ್ವರರು ಲಿಂಗೈಕ್ಯವಾದರು.

ಹದಿನೈದನೆಯ ಸಂಧಿಯು ೧೩೫ ಪದ್ಯಗಳನ್ನು ಹೊಂದಿದೆ. ಶಿವಸಿದ್ಧ ಬೀರೇಶ್ವರನು ಅನೇಕ ಸುಕ್ಷೇತ್ರಗಳನ್ನು ಸಂದರ್ಶಿಸಿ ಬಂಕಾಪುರಕ್ಕೆ ಬಂದು ಪದ್ಮಾವತಾರದಲ್ಲಿ ರಚಿಸಲ್ಪಟ್ಟ ಬಾವನ್ನು ಬಿರುದಾವಳಿಗಳನ್ನು ಹೊಂದುತ್ತಾನೆ. ಅಲ್ಲಿದ್ದ ಬಂಕಣ್ಣನಿಗೆ ಕೈಲಾಸ ಪ್ರಾಪ್ತವಾಗುತ್ತದೆ. ಶಿಷ್ಯ ಮಾಳಿಂಗರಾಯ ಕಪ್ಪೆ ಕಲಕದ ಜಲ್ ತುಂಬಿ ಮುಟ್ಟದ ಪುಷ್ಪಗಳಿಂದ ಗುರುವನ್ನು ಪೂಜಿಸುತ್ತಾನೆ. ವೀರೇಶನ ಅಪ್ಪಣೆಯ ಮೇರೆಗೆ ಕಲ್ಯಾಣಪುರದ ಸುತ್ತ ಗೂಳಿಯನ್ನು ಬದುಕಿಸುತ್ತಾನೆ. ಕೋಣಗನೂರಿನ ಜಡೆಸಿದ್ಧರು ಏರ್ಪಡಿಸಿದ ಅಗ್ನಿಕುಂಡದ ಪವಾಡ ಮೆರೆಯುತ್ತಾನೆ. ಅಕ್ಕಮ್ಮ ಕನ್ನಿಕಾಮಾಲೆ ಮಾಳಿಂಗರಾಯ ಶಿವಸಿದ್ಧ ಬೀರೇಶರೆಲ್ಲರೂ ಕೈಲಾಸಕ್ಕೆ ತೆರಳುವಲ್ಲಿ ಚೆನ್ನಬಸವಕವಿಯ ಹಾಲುಮತ ಪುರಾಣವು ಸಮಾಪ್ತಿಯಾಗುತ್ತದೆ.

ಕೃತಿ ವಿಮರ್ಶೆ

ಕುರುಬರ ಆರಾಧ್ಯ ದೈವಗಳಾದ ಶಿವ ಸಂಭೂತರಾದ ಶಿವಪದ್ಮ, ಶಿವಸಿದ್ಧಬೀರೇಶ್ವರ, ಮಾಳಿಂಗರಾಯ, ಶಾಂತಮುತ್ತಯ್ಯ, ರೇವಣಸಿದ್ಧ ಮೊದಲಾದವರ ಉಪಕಥೆಗಳನ್ನು ಹೊಂದಿದ ಒಂದು ಪುರಾಣವಾಗಿದೆ. ಈ ಕಾವ್ಯವು ರಸ್ತಾಪುರ ಭೀಮಕವಿಯ ‘ಹಾಲುಮತೋತ್ತೇಜಕ್ ಪುರಾಣ’ದ ಕಥೆಯನ್ನು ಹೋಲುತ್ತದೆ. ಅಲ್ಲದೆ ‘ಜನಪದ ಹಾಲುಮತ ಮಹಾಕಾವ್ಯ’ದ ದಟ್ಟ ಪ್ರಭಾವವು ಆಗಿದೆ. ಭೀಮಕವಿಯ ವಾರ್ಧಕ ಷಟ್ಪದಿಯಲ್ಲಿ ರಚಿಸಿದರೆ ಚೆನ್ನಬಸವ ಕವಿ ಸಾಂಗತ್ಯದಲ್ಲಿ ರಚಿಸಿದ್ದಾನೆ. ಈ ಕೃತಿಯಲ್ಲಿ ಬೀರೇಶ್ವರ ಸಮ್ಮುಖದಲ್ಲಿ ಸತ್ತಗೂಳಿಯನ್ನು ಕಲ್ಯಾಣದಲ್ಲಿ ಬದುಕಿಸುವವನು ವೀರಮಾಳಿಂಗರಾಯ.

ಕುರುಬರು ಮತ್ತು ಲಿಂಗಾಯತ ಸಮುದಾಯಗಳೆರಡೂ ರೇವಣಸಿದ್ಧರನ್ನು ಪೂಜಿಸುತ್ತಿವೆ. ಮೂಲತಃ ಕುರುಬನಾದ ರೇವಣಸಿದ್ಧರ ಕುರಿತ ನಂತರದ ದಿನಗಳಲ್ಲಿ ಸುಮಾರು ೧೭-೧೮ನೇ ಶತಮಾನದಲ್ಲಿ ‘ಪಂಚಾಚಾರ್ಯರು’ ಎಂಬ ಪರಿಭಾಷೆಯಲ್ಲಿ ಲಿಂಗೋದ್ಭವದ ಸುಂದರವಾದ ಕಾಲ್ಪನಿಕ ಕಥೆಯನ್ನು ಕಟ್ಟಲಾಗಿದೆ. ಇದಕ್ಕೆ ಪೂರಕವಾಗಿ ಸರೂರಿನ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ರೇವಣಸಿದ್ಧ ದೇವಸ್ಥಾನವೆಂದು ಬದಲಾಯಿಸಲಾಗಿದೆ ಮತ್ತು ರೇವಣಸಿದ್ಧ ಲಿಂಗೋದ್ಭವ ಮೂರ್ತಿ ಇವು ಕೃತಕ ವ್ಯವಸ್ಥೆಗೆ ಒಳಪಟ್ಟಿವೆ. ಈ ನೆಲೆಯಲ್ಲಿ ಚನ್ನಬಸವ ಕೃತಿಯು ದಟ್ಟವಾದ ವೀರಶೈವ ಪ್ರಭವಕ್ಕೆ ಒಳಗಾಗಿದೆ.

ಪ್ರತಿಯೊಬ್ಬ ವ್ಯಕ್ತಿಗೆ ತನ್ನ ಮತದ ಬಗ್ಗೆ ಗೌರವ ಮತ್ತು ಅದರ ಪ್ರಾಚೀನತೆಯನ್ನು ವೈಭವೀಕರಿಸುವುದನ್ನು ಕಾಣುತ್ತೇವೆ. ಇಂಥ ಸವಲತ್ತುಗಳನ್ನು ಧಾರಾಳವಾಗಿ ಬಳಸುವ ಪ್ರಸ್ತುತ ದಿನಗಳಲ್ಲಿ ವ್ಯತಿರಿಕ್ತವಾಗಿ ವಾಸ್ತವವನ್ನು ಯಾವುದೇ ಸಂಕೋಚವಿಲ್ಲದೆ ಎಲ್ಲ ಮತಗಳ ಮೂಲ ಹಾಲುಮತವೆಂದು ಹೇಳಿದವರಲ್ಲಿ ಶಂಭಾ ಜೋಷಿ ಮತ್ತು ಡಾ.ಎಂ. ಎಂ. ಕಲಬುರ್ಗಿಯವರಾಗಿದ್ದಾರೆ. ತಮ್ಮ ಸಂಶೋಧನೆಯ ಮುಖಾಂತರ ಸಮಾಜವನ್ನು ಜಾಗ್ರತಗೊಳಿಸಿದ್ದಾರೆ.

ಕುರುಬರ ಕುಲಗುರು ಶಾಂತಮುತ್ತಯ್ಯ ಇತರ ಕೃತಿಗಳಲ್ಲಿ ತಗರ ಪವಾಡ ಮೆರೆದರೆ ಈ ಕೃತಿಯಲ್ಲಿ ರಟ್ಟಮತಶಾಸ್ತ್ರದ ರಚನಾಕಾರನೆಂಬ ಹೊಸ ವಿಷಯವನ್ನು ಗುರುತಿಸಬಹುದು. ‘ಕುರುಬರ ರಟ್ಟಮತಶಾಸ್ತ್ರ’ ಎಂಬ ಕೃತಿಯನ್ನು ಡಾ. ಸಿದ್ಧಣ್ಣ ಜಕಬಾಳರು ಸಂಪಾದಿಸಿದ್ದಾರೆ. ರೈತರು ತಮ್ಮ ಅನುಭವಗಳ ಮೂಲಕ ನಿಸರ್ಗದ ಹವಾಮಾನ ವೈಪರಿತ್ಯ, ಮಳೆ-ಬೆಳೆ ವಿಚಾರ, ವಾರ, ನಕ್ಷತ್ರ ಸೂರ್ಯೋದಯ ಮೊದಲಾದ ವಿಷಯಗಳನ್ನು ತಿಳಿಸುವ ಶಾಸ್ತ್ರವಾಗಿದೆ. ಇವತ್ತಿಗೂ ಸಹ ರಟ್ಟಮತಶಾಸ್ತ್ರ ಪ್ರಾಚಾರದಲ್ಲಿದೆ.

ಬೀರದೇವರನ್ನು ಮನೆದೇವರಾಗಿ ಪೂಜಿಸುವ ಪರಿಪಾಠ ಇಂದಿಗೂ ನಡೆದು ಬಂದಿದೆ. ಅನೇಕ ಬೀರದೇವರ ದೇವಸ್ಥಾನಗಳ ದಾಖಲೆ ರೂಪದ ದೊಡ್ಡಣ್ಣ ಗದ್ದನಕೇರಿ ಅವರ ಕೃತಿ ‘ಭೀರದೇವರ ಸಂಪ್ರದಾಯ ಮತ್ತು ಆಚರಣೆಗಳು’ ಪ್ರಮುಖವಾಗಿವೆ. ಆಲಮಟ್ಟಿ ಜಲಾಶಯದ ಕೃಷ್ಣಾನದಿ ನೀರಿನಿಂದ ಮುಳುಗಿ ಹೋದ ಬಿಜಾಪುರ, ರಾಯಚೂರು, ಬೆಳಗಾಂವ ಮತ್ತು ಬಾಗಲಕೋಟೆ ಜಿಲ್ಲೆಗಳ ಸುಮಾರು ೩೦ ಹಳ್ಳಿಗಳ ವಿವಿಧ ಆಚರಣೆ, ಸಂಸ್ಕೃತಿ, ಸಂಪ್ರದಾಯಗಳನ್ನು ತಿಳಿಸಿದ್ದಾರೆ.

ಮೌಖಿಕ ಮತ್ತು ಶಿಷ್ಠ ಸಾಹಿತ್ಯದ ಕಾವ್ಯ ಪುರಾಣಗಳಲ್ಲಿ ರೇವಣಸಿದ್ಧರು ಪ್ರಮುಖ ಪಾತ್ರವಹಿಸುತ್ತಾರೆ. ಇವರ ಸಮ್ಮುಖದಲ್ಲಿ ಎಲ್ಲ ಘಟನೆಗಳು ನಡೆಯುತ್ತವೆ.

‘ಒಡೆಯರು’ ಎಂಬ ಪದ ಕುರುಬರ ಕುಲಗುರುಗಳನ್ನು ಸೂಚಿಸುತ್ತದೆ. ಒಡೆಯರ ಗುರು ಶಾಂತಮುತ್ತಯ್ಯ ಹಾಲುಮತದ ಗುರು ಪರಂಪರೆಯಲ್ಲಿ ಅಗ್ರಗಣ್ಯ. ಹಾಲುಮತದ ಮುಖ್ಯವಾದ ಆಚರಣೆಗಳಲ್ಲಿ ಒಡೆಯರು ಪ್ರಮುಖ ಪಾತ್ರ ವಹಿಸುತ್ತಾರೆ. ಜಗತ್ತಿನ ಯಾವುದೇ ಮಹಿಳೆಯು ಪಡೆಯದ ಸ್ಥಾನಮಾನಗಳನ್ನು ಒಡೇರಮ್ಮನವರು ಪಡೆದಿದ್ದಾರೆ. ಅವರು ವಿಧವೆಯಾದರೂ ಸುಮಂಗಲಿಯಂತೆ, ಹೂ, ಕುಂಕುಮ ಬಳೆ ಮತ್ತು ತಾಳಿಯನ್ನು ತೆಗೆಯುವುದಿಲ್ಲ. ಜನನ-ಮರಣ-ನಾಮಕರಣಗಳಂಥ ಸಾಮಾಜಿಕ ಕಾರ್ಯಗಳನ್ನು ಒಡೆಯರ ಅನುಪಸ್ಥಿತಿಯಲ್ಲಿ ಇವರು ನಡೆಸಿಕೊಡಬಹುದಾಗಿದೆ. ಆದ್ದರಿಂದ ಬರೀ ಹೇಳಿಕೆಯಲ್ಲಿಯೇ ಸಾಗಿರುವ ಮಹಿಳೆಯರ ಸ್ಥಾನಮಾನಗಲ ನಿಜದ ನೆಲೆಯನ್ನು ಒಡೆಯರಲ್ಲಿ ಮಾತ್ರ ಕಾಣಬಹುದು.

ಕೋಣಗನೂರು, ಮುಂಡಗನೂರು, ಕೊಲ್ಲಿಪಾಕಿ, ಸರೂರು, ಜಾಗ್ರತಪುರ, ಹುಲಜಂತಿ, ಬಂಕಾಪುರ ಮೊದಲಾದ ಕ್ಷೇತ್ರಗಳು ಹಾಲುಮತ ಪ್ರಾಚೀನ ಸಾಂಸ್ಕೃತಿಕ ಕೇಂದ್ರಗಳಾಗಿವೆ. ಅಲ್ಲಿ ನಿಗದಿತ ಸಂದರ್ಭದಲ್ಲಿ ಜಾತ್ರೆಗಳು, ಉತ್ಸವಗಳು ವಿಜೃಂಭಣೆಯಿಂದ ನಡೆಯುತ್ತವೆ.

ಭಂಡಾರವು ಪವಿತ್ರತೆಯ ಸಂಕೇತವಾಗಿ ಬಳಸಲಾಗುತ್ತಿದೆ. ವೈಜ್ಞಾನಿಕವಾಗಿ ಅರಿಷಿಣವು ರೋಗ ನಿವಾರಕ ಔಷಧ ಗುಣ ಹೊಂದಿದೆ. ಜಾಗತೀಕರಣದ ಸೆಳೆಯಲ್ಲಿ ಸಿಲಿಕಿದ ಜನಾಂಗ ಭಂಡಾರದಿಂದ ವಿಭೂತಿಯತ್ತ ವಾಲುತ್ತಿರುವುದನ್ನು ಗುರುತಿಸಬಹುದು. ಲಿಂಗದೀಕ್ಷೆ ಕೊಡುವುದು, ವಿಭೂತಿ ಪ್ರಧಾನ ಮಾಡುವುದು ಈ ಎಲ್ಲ ಸಂಗತಿಗಳು ಶರಣರ ಸಮ್ಮುಖದಲ್ಲಿ ನಡೆಯುತ್ತವೆ. ಇಂಥ ಚಿತ್ರಗಳನ್ನು ಹಾಲುಮತದ ಎಲ್ಲ ಪುರಾಣಗಳಲ್ಲಿ ಕಾಣುತ್ತೇವೆ. ಇದರ ಕೇಂದ್ರಪ್ರಜ್ಞೆ ಕುಲಬೇಧ ನಿರಾಕರಣೆಯಾಗಿರಬಹುದು. ಶೈವದಿಂದ ವೀರಶೈವಮತದತ್ತ, ಬಂಢಾರದಿಂದ ವಿಭೂತಿಯತ್ತ ವಾಲುವ ಪ್ರಸಂಗಗಳು ಹೇರಳವಾಗಿವೆ. ಈ ಎಲ್ಲ ಘಟನೆಗಳಿಗೆ ಬಸವಣ್ಣ ನಾಯಕ ಪಾತ್ರದಲ್ಲಿ ಕೆಳವರ್ಗದ ಜನಕ್ಕೆ ಬೆಂಬಲ ನೀಡುವ ಮತ್ತು ನ್ಯಾಯ ನಿರ್ಣಯ ಮಾಡುವವನಾಗಿದ್ದಾನೆ. ೧೨ನೆ ಶತಮಾನದ ಶರಣರ ಸಂಪ್ರದಾಯಗಳೊಂದಿಗೆ ಹಾಲುಮತದ ಸಂಪ್ರದಾಯಗಳು ತಳಕುಹಾಕಿಕೊಂಡಿವೆ. ಏಕ ಸಮಾನತೆಯನ್ನು ಪಡೆಯುವ ಹೋರಾಟವಾಗಿರಬಹುದೇ? ಅಲಕ್ಷ್ಯಕ್ಕೆ ಒಳಗಾದ ಸಮುದಾಯ ತನ್ನ ಧ್ವನಿಯನ್ನು, ಸ್ಥಾನಮಾನಗಳನ್ನು ಕಾಯ್ದಕೊಳ್ಳಲು ತಗರ ಪವಾಡ ಸತ್ತ ಗೂಳಿಯನ್ನು ಬದುಕಿಸುವಂಥ ಪವಾಡಗೈಯುತ್ತಾ ಪುನಃ ಕಲ್ಯಾಣ ಪ್ರವೇಶದಂಥ ತೀರ್ಪಿನಲ್ಲಿ ತನ್ನನ್ನು ಗುರುತಿಸಿಕೊಳ್ಳಬಹುದಾದ ದಾರಿಯಾಗಿರಬಹುದು.

ಚರಿತ್ರೆಯ ನೆಲೆಯಲ್ಲಿ ವಿಚಾರಿಸಲಾಗಿ ಬಸವಣ್ಣನೊಂದಿಗೆ ಬರುವ ಹಾಲುಮತದ ಈ ರೇವಣಸಿದ್ಧ, ಸಿದ್ಧರಾಮ, ಅಮೋಘಸಿದ್ಧ, ಬೀರಪ್ಪ, ಶಾಂತಮುತ್ತಯ್ಯ ಮೊದಲಾದವರ ನಿರ್ದಿಷ್ಠ ಕಾಲಮಾನಗಳ ಗೊಂದಲ ಏಳುತ್ತದೆ. ವಿದ್ವಾಂಸರು, ಇತಿಹಾಸಕಾರರು ಬೀರಪ್ಪನ ಕಾಲವನ್ನು ೧೦ನೆ ಶತಮಾನವೆಂದು ಊಹಿಸಿದ್ದಾರೆ. ಹಾಗಾದರೆ ಶಾಂತಮುತ್ತಯ್ಯ, ರೇವಣಸಿದ್ಧರ ಕಾಲ ಯಾವುದು? ಕೆಲವು ಶಾಸನಗಳು ಸಾಕ್ಷಾಧಾರಗಳು ಮತ್ತು ಪುರಾಣಗಳು ಶಾಂತಮುತ್ತಯ್ಯ ರೇವಣಸಿದ್ಧರ ಮಗನೆಂದು, ಶಿಷ್ಯನೆಂದು ತಿಳಿಸಿದರೆ ಕೆಲವು ಸಾಕ್ಷಗಳು ಶಾಂತಮುತ್ತಯ್ಯ ರೇವಣಸಿದ್ಧರ ತಂದೆಯೆಂದು, ಗುರುವೆಂದು ತಿಳಿಸುತ್ತವೆ. ಈ ರೇವಣಸಿದ್ಧರ ಮತ್ತು ಶಾಂತಮುತ್ತಯ್ಯನ ಸಂಬಂಧಗಳ ಗೊಂದಲ ಇನ್ನೂ ಬಗೆಹರಿಯುತ್ತಿಲ್ಲ.

ಕುರುಬರಲ್ಲಿ ಶಾಂತೊಡೆಯರು ಮತ್ತು ಮಂಕೊಡೆಯರಾದರೆ ಪ್ರಬೇಧಗಳನ್ನು ಕಾಣಬಹುದು. ಶಾಂತಮುತ್ತಯ್ಯನ ಪರಂಪರೆಯವರು ಶಾಂತೊಡೆಯರಾದರೆ ಸಿದ್ಧಮಂಕ ಪರಂಪರೆಯವರನ್ನು ಮಂಕೊಡೆಯರಾಗಿ ಗುರುತಿಸಬಹುದು. ಮಂಕೊಡೆಯರು ಸಾದಲಿರಿಬರಿಗೆ ಗುರುಗಳಾಗಿದ್ದಾರೆ. ಈಗ ಅವರು ಸಾದ ಲಿಂಗಾಯತರಾಗಿ ಲಿಂಗಾಯತ ಪ್ರಭಾವಕ್ಕೆ ಒಳಗಾಗಿದ್ದಾರೆ. ಹೀಗಾಗಿ ಅವರ ಸಂಖ್ಯೆ ಶಾಂತೊಡೆಯರಿಗಿತ ಕಡಿಮೆಯಾಗುತ್ತಿದೆ.

ಕರಿಯ ಕಂತೆ, ಕಂಬಳಿ ಗದ್ದುಗೆಗಳನ್ನು ಎಲ್ಲ ಮತಬಾಂಧವರು ಇವತ್ತಿತೂ ಶುಭಕಾರ್ಯಗಳಲ್ಲಿ ಬಳಸುತ್ತಾರೆ. ಇದು ಹಾಲುಮತದ ಪರಂಪರೆಯ ಪ್ರಾಮುಖ್ಯತೆಯನ್ನು ಸಂಕೇರಿಸುತ್ತದೆ. ಕುರುಬರಲ್ಲಿ ಉಣ್ಣೆ ಕಂಕಣ ಮತ್ತು ಹತ್ತಿ ಕಂಕಣವೆಂಬ ಎರಡು ಪಂಗಡಗಳಿವೆ. ಇವುಗಳ ಹುಟ್ಟನ್ನು ಹಾಲುಮತ ಪುರಾಣಗಳಲ್ಲಿ ಗುರುತಿಸಬಹುದಾಗಿದೆ. ಶಿವಪದ್ಮ ವಂಶದವರಿಗೆ ಉಣ್ಣೆ ಕಂಕಣದವರೆಂದೂ, ಅವನ ಅಣ್ಣಂದಿರುಗಳ ವಂಶದವರಿಗೆ ಹತ್ತಿ ಕಂಕಣವೆಂದೂ ಕರೆಯುತ್ತಾರೆ. ಮದುವೆಯಂಥ ಶುಭಕಾರ್ಯಗಳಲ್ಲಿ ಒಂದೇ ಕಂಕಣದವರು ಹೆಣ್ಣು ಗಂಡುಗಳನ್ನು ಕೊಡುವುದು, ತೆಗೆದುಕೊಳ್ಳುವ ಸಂಪ್ರದಾಯವಿದೆ. ಈಗೀಗ ಆಚಾರ ವಿಚಾರಗಳು ಶಿಕ್ಷಣದ ಪ್ರಭಾವದಿಂದ ಸ್ವಲ್ಪ ಸಡಿಲಗೊಂಡಿವೆ.

ನಾಥರು, ಸಿದ್ಧರು ಮಾಳಿಂಗರಾಯನೊಂದಿಗೆ ಗುರುತಿಸಿಕೊಳ್ಳುತ್ತಾರೆ. ಮಾಳಿಂಗರಾಯನ ಮೊಮ್ಮಗ ಬರಗಾಲಸಿದ್ಧ, ರೇವಣಸಿದ್ಧ, ಅಮೋಘಸಿದ್ಧ ಇವರಲ್ಲಿ ಸಿದ್ಧಸಂಪ್ರದಾಯಕ್ಕೆ ಒಳಗಾದವರು. ಗೋರಖನಾಥರು ನಾಥ ಸಂಪ್ರದಾಯಕ್ಕೆ ಒಳಗಾಗುತ್ತಾರೆ. ಸಿದ್ಧರ ಮತ್ತು ನಾಥರ ವಾಸಸ್ಥಳ ಬೆಟ್ಟಗುಡ್ಡಗಳಾಗಿವೆ, ಗುಹೆಗಳಾಗಿವೆ. ಸಿದ್ಧರು ನಾಥ ಪಂಥಕ್ಕೆ ಪರಿವರ್ತನೆ ಆಗಿರುವ ಸಾಧ್ಯತೆಗಳಿವೆ ಎಂದು ಡಾ. ರಹಮತ್ ತರೀಕೆರೆ ಅವರು ಅಭಿಪ್ರಾಯಪಟ್ಟಿದ್ದಾರೆ.

ಮೈಲಾರಲಿಂಗನೊಂದಿಗೆ ದಾಸಯ್ಯಗಳು, ಗೊರವಯ್ಯಗಳು ಗುರಿತಿಸಿಕೊಳ್ಳುತ್ತಾರೆ. ಕಾರಣಿಕ ಹೇಳುವ ಗೊರವಯ್ಯಗಳೂ ವರ್ಷದ ಭವಿಷ್ಯವಾಣಿಯನ್ನು ನುಡಿಯುತ್ತಾರೆ.

ರಸ್ತಾಪುವ ಭಿಮಕವಿಯ ಮೇಲೆ ಜನಪದ ಹಾಲುಮತ ಮಹಾಕಾವ್ಯ ಪ್ರಭಾವ ಬೀರಿದರೆ, ಹಾಲುಮತೋತ್ತೇಜಕ ಪುರಾಣದ ಪ್ರಭಾವವು ಚನ್ನಬಸವ ಕವಿಯ ಹಾಲುಮತ ಪುರಾಣದ ಮೇಲಾಗಿದೆ ಎಂದು ಡಾ. ಎಫ್. ಟಿ. ಹಳ್ಳಿಕೇರಿ ಅವರ ಅಭಿಪ್ರಾಯವಾಗಿದೆ. ಕಥಾನಾಯಕತು ಭೂಲೋಕದಿಂದ ಕೈಲಾಸಕ್ಕೆ, ಕೈಲಾಸದಿಂದ ಭೂಲೋಕಕ್ಕೆ ಓಡಾಡುತ್ತಾ ನಿರಂತರವಾದ ಒಡನಾಟವನ್ನು ಶಿವನೊಂದಿಗೆ ಹೊಂದಿದವರಾಗಿದ್ದಾರೆ. ದೇವಮಾನವ, ಭೂಲೋಕ-ಕೈಲಾಸ ಮೂದಲಾದವುಗಳಲ್ಲಿ ಅಂತರ ಕಡಿಮೆಯಾಗಿ ಸಮಾನತೆಯನ್ನು ಕಾಯ್ದುಕೊಳ್ಳಲಾಗಿದೆ.

ಒಟ್ಟಿನಲ್ಲಿ ಕುರುಬ ಸಮುದಾಯದ ಪ್ರಾಚೀನ ಪರಂಪರೆ, ಆರಾಧ್ಯ ದೈವಗಳು, ಆಚಾರ-ವಿಚಾರಗಳು, ಜಾತ್ರೆ-ಉತ್ಸವಗಳು ಹೀಗೆ ನಾನಾ ವಿದಧ ಸಂಸ್ಕೃತಿಯನ್ನು ತಿಳಿಸುವಲ್ಲಿ ಈ ಕಾವ್ಯ ಯಶಸ್ವಿಯಾಗಿದೆ.

ಗ್ರಂಥಋಣ

೧. ಜನಪದ ಹಾಲುಮತ ಮಹಾಕಾವ್ಯ (ಸಂ) ಡಾ. ವೀರಣ್ಣ ದಂಡೆ.

೨. ಶಿಷ್ಟಕಾವ್ಯ ಹಾಲುಮತ ಪುರಾಣಗಳ ಮೇಲೆ ಜನಪದ ಹಾಲುಮತ ಮಹಾಕಾವ್ಯದ ಪ್ರಭಾವ – ಡಾ. ಎಫ್. ಟಿ. ಹಳ್ಳಿಕೇರಿ.

೩. ಹಾಲುಮತ ಪೌರಾಣಿಕ ನೆಲಗಳು: ಹಾಲಕೆನೆ,೨೦೦೭.

೪. ಹಾಲುಮತೋತ್ತೇಜಕ ಪುರಾಣ: (ಸಂ) ಡಾ. ಎಫ್. ಟಿ ಹಳ್ಳಿಕೇರಿ, ಕನ್ನಡ ವಿಶ್ವವಿದ್ಯಾಲಯ, ಹಂಪಿ,೨೦೦೮.

೫. ತಗರ ಪವಾಡ: ಡಾ. ಎಂ. ಎಂ. ಕಲಬುರ್ಗಿ, ಸಿ.ಕೆ. ಪರಶುರಾಮಯ್ಯ, ಡಾ. ಎಫ್. ಟಿ. ಹಳ್ಳಿಕೇರಿ.

೬. ಮಾರ್ಗ ೪, ಕುರುಬ ಸಮಾಜ ಮತ್ತು ಲಿಂಗಾಯತ ಸಮಾಜ, ಡಾ. ಎಂ.ಎಂ.ಕಲಬುರ್ಗಿ.

೭. ಮಾರ್ಗ ೪, ಕುರುಬರ ಗುರು ಶಾಂತಮುತ್ತಯ್ಯ, ಡಾ.ಎಂ.ಎಂ.ಕಲಬುರ್ಗಿ.

೮. ಗುರುವಂದನ, ಹಾಲುಮತ ಸಂಸ್ಕೃತಿಯ ವಿಶಿಷ್ಟ ಕೃತಿ ಸಿದ್ಧಮಂಕ ಚರೆತೆ, ಡಾ. ಎಫ್.ಟಿ.ಹಳ್ಳಿಕೇರಿ.

೯. ಕುರುಬ ಲಿಂಗಾಯತ: ಡಾ.ಎಫ್.ಟಿ.ಹಳ್ಳಿಕೇರಿ, ಕಂಠಪತ್ರ ೨೦೦೪.

೧೦. ಬೀರದೇವರ ಸಂಪ್ರದಾಯ ಮತ್ತು ಆಚರಣೆಗಳು, ಡೊಡ್ಡ ಗದ್ದನಕೇರಿ

೧೧. ಶಾಂತ ಲಿಂಗಾಯತ-ಶರಣ ಲಿಂಗಾಯತ-ವಿರಶೈವ: ಡಾ.ಎಂ.ಎಂ. ಕಲಬುರ್ಗಿ, ಲಿಂಗಾಯತ, ೩-೯ ಡಿಸೆಂಬರ ೨೦೦೮.

೧೨ ಹಾಲುಮತ ಪುರಾಣವು: ಚೆನ್ನಬಸವಶಾಸ್ತ್ರಿ.

೧೩. ಚಿದಾನಂದ ಸಮಗ್ರ ಸಂಪುಟ ೩: ಡಾ. ಎಂ. ಚಿದಾನಂದಮೂರ್ತಿ, ಸ್ವಪ್ನ ಬುಕ್ಕ್ ಹೌಸ್, ಬೆಂಗಳೂರು.

* ಲೇಖನವನ್ನು ಸಿದ್ಧಪಡಿಸುವಲ್ಲಿ ಮಾರ್ಗದರ್ಶನ ನೀಡಿದ ಡಾ. ಎಫ್.ಟಿ. ಹಳ್ಳಿಕೇರಿ ಅವರಿಗೆ ಕೃತಜ್ಞತೆಗಳು.