ಕರ್ನಾಟಕ ಸಾಹಿತ್ಯ ಸಂಸ್ಕೃತಿಯಲ್ಲಿ ಪುರಾಣಗಳ ಕುರಿತಾದ ಜಿಜ್ಞಾಸೆ ನಿನ್ನೆ ಮೊನ್ನೆಯದಲ್ಲ ಪ್ರಾಚೀನ ಕಾಲದಿಂದಲೂ ಇವುಗಳ ಸೃಷ್ಟಿ ಮತ್ತು ವಿಶ್ಲೇಷಣೆ ಅವ್ಯಾಹತಾವಾಗಿ ನಡೆದಿದೆ. ಬಹುಶಃ ಸಾಹಿತ್ಯ ಸೃಷ್ಟಿಗಿಂತ ಮೊದಲೆ ಸಮುದಾಯ ಈ ಪುರಾಣಗಳನ್ನು ಕಟ್ಟಿಕೊಂಡಿವೆ ಎನಿಸುತ್ತದೆ. ಸೃಷ್ಟಿಯ ವೈಚಿತ್ರಗಳು ಮತ್ತು ಬದುಕಿನ ಸಂಘರ್ಷಗಳ ಮುಖಾಮುಖಿಯಲ್ಲಿ ಇವು ರೂಪುಗೊಂಡಿರಬಹುದು. ಮೇಲ್ನೋಟಕ್ಕೆ ಪುರಾಣಗಳು ನಮ್ಮ ಸಾಮಾಜಿಕ ಬದುಕಿನೊಂದಿಗೆ ಯಾವ ಸಂಬಂಧವೂ ಇಲ್ಲದಂತೆ ರಚನೆಗೊಂಡಿವೆ ಎನಿಸಿದರೂ ಇವುಗಳ ಆಳದಲ್ಲಿ ಸಂಕೀರ್ಣವಾದ ಸಾಂಸ್ಕೃತಿಕ ಬದುಕೇ ಹರಳುಗಟ್ಟಿದೆ. ಹೀಗಾಗಿ ಪುರಾಣಗಳು ಸಂಸ್ಕೃತಿಯ ಬಹುಮುಖ್ಯ ರೂಪಕಗಳು. ಮನುಷ್ಯನ ಅಪಾರವಾದ ಸೃಜನಶೀಲ ಸಾಧ್ಯತೆಗಳನ್ನು ಸಮುದಾಯಗಳು ಹೇಗೆ ನಿರ್ವಹಿಸುತ್ತವೆಂದು ಸ್ಥಳೀಯ ಪುರಾಣಗಳು ಕಟ್ಟಿಕೊಡುತ್ತವೆ. ಇದರಲ್ಲಿ ಹಲವು ಸಮುದಾಯದ ಭಾವನೆಗಳು ವಿಚಿತ್ರವಾಗಿ ಸಂಯೋಜನೆಗೊಂಡು ಪುರಾಣ ಕಾವ್ಯವಾಗಿ ಅಭಿವ್ಯಕ್ತಗೊಳ್ಳುತ್ತದೆ. ಹಾಗಾಗಿ ಸಮುದಾಯದ ಪುರಾಣಗಳನ್ನು ಕುಲಮೂಲ ಸಂಸ್ಕೃತಿಯನ್ನು ಹೇಳುವುದರ ಮೂಲಕ ಭಿನ್ನ ಭಿನ್ನ ನೆಲೆಯಲ್ಲಿ ಆಲೋಚಿಸುವಂತೆ ಮಾಡುತ್ತದೆ. ಅದಕ್ಕಾಗಿ ಪ್ರತಿಯೊಂದು ಕುಲಮೂಲ ಪುರಾಣಗಲು ಆಯಾ ಸಮುದಾಯಗಳ ಸಾಂಸ್ಕೃತಿಯ ಪುರುಷನನ್ನು ದೈವೀಕರಿಸಿವೆ. ಆಚರಣೆ, ಸಂಘರ್ಷ, ಸಾಮಾಜಿಕ ಆಶಯ, ಲಿಂಗದೀಕ್ಷೆ ದಾಸೋಹ ಪರಿಕಲ್ಪನೆಯನ್ನು ಆ ಸಾಂಸ್ಕೃತಿಕ ವೀರನ ಮೂಲಕ ಸಂಸ್ಕೃತಿಯು ಅನಾವರಣಗೊಂಡಿದೆ.

ಪುರಾಣ ಕಾವ್ಯಗಳಲ್ಲಿ ಧಾರ್ಮಿಕ ನೆಲಯಲ್ಲಿ ಅರ್ಥೈಸಿಕೊಂಡರೆ ಅದು ಮೇಲ್ಪದರದ ಅಧ್ಯಯನವಾಗುತ್ತದೆ. ಆದರೆ ಸಾಂಸ್ಕೃತಿಕವಾಗಿ ಇವುಗಳನ್ನು ಪ್ರವೇಶಿಸುವುದು ಹೆಚ್ಚು ಅರ್ಥಪೂರ್ಣ. ಯಾಕೆಂದರೆ ಸಾಂಸ್ಕೃತಿಕ ಬದುಕಿನ ಸಂಘರ್ಷಗಳು, ರಾಜಿಗಳು, ಅನುಮಾನಗಳು, ಭಯಗಳು ಸಮ್ಮಿಶ್ರ ರೂಪದಲ್ಲಿ ಕಲೆತು ಇಲ್ಲಿ ಮೈತಾಳಿವೆ. ಅಲ್ಲದೆ ನಡುವಳಿಕೆಗಳು ಪಂಚಭೂತಗಳೂ ಎಲ್ಲವೂ ಪುರಾಣಗಳೆಂಬ ರೂಪಕಗಳಲ್ಲಿ ಮರುಜನ್ಮ ಪಡೆದಿವೆ. ಇಂತಹ ಕರ್ನಾಟಕ ಸಂಸ್ಕೃತಿಯಲ್ಲಿ ಹಾಲುಮತ ಸಮುದಾಯದ ಚರಿತ್ರೆಯನ್ನು ಅನೇಕ ವಿದ್ವಾಂಸರು ಸಂಶೋಧನೆ ಮಾಡಿದ್ದಾರೆ. ಒಂದ ಕಡೆ ಆ ಸಮುದಾಯದ ಪುರಾಣ ಕಾವ್ಯಗಳನ್ನು ಸಂಗ್ರಹ ಮಾಡಿದ್ದಾರೆ. ಇನ್ನೂ ಕೆಲವರು ಕಾವ್ಯಗಳನ್ನು ರಚನೆ ಮಾಡಿದ್ದಾರೆ. ಇಂತಹವರಲ್ಲಿ ಒಬ್ಬನು ರಸ್ತಾಪುರದ ಭೀಮಕವಿ. ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ನಿರ್ಲಕ್ಷೆಗೆ ಒಳಗಾದ ಕವಿಗಳಲ್ಲಿ ಈತನೂ ಒಬ್ಬ. ಹೀಗೆ ನಿರ್ಲಕ್ಷೆಗೆ ಒಳಗಾದ ಭೀಮಕವಿಯ ಸಾಹಿತ್ಯ ಕೊಡುಗೆಯನ್ನು ಸಾಹಿತ್ಯಾಸಕ್ತರಿಗೆ ತಿಳಿಸುವ ಸದುದ್ದೇಶವೇ ಈ ಲೇಖನದ ಆಶಯ.

ಗುಲಬರ್ಗಾ ಜಿಲ್ಲೆಯ ಶಹಾಪುರ ತಾಲೂಕಿನ ರಸ್ತಾಪುರ ಭೀಮಕವಿಯ ಜನ್ಮಸ್ಥಳ. ತಂದೆ ಜಂಬಣ್ಣ, ತಾಯಿ ಭೀಮವ್ವ. ತನಕೆದಾರ ಎಂಬುದು ಈತನ ಮನೆತನದ ಹೆಸರು. ಸುರಪುರ ದೊರೆಗಳ ಆಡಳಿತದಲ್ಲಿ ಕೆಲಸದಾರರಿಗೆ ಸಂಬಳ ಕೊಡುವ ಕೆಲಸ ಇವರ ಮನೆತನದ್ದು. ಜಂಬಣ್ಣನಿಗೆ ಭೀಮಶ್ಯಾ ಒಬ್ಬನೇ ಮಗ. ಈತ ಕ್ರಿ.ಶ. ೧೮೭೭ರಲ್ಲಿ ಜನಿಸಿರಬಹುದೆಂದು ಜನಪದ ಕವಿ ಚರಿತೆಕಾರರಾದ ಡಾ. ಎಂ.ಎಸ್. ಲಠ್ಠೆ ಅವರು ಊಹಿಸಿದ್ದಾರೆ. ಭೀಮಕವಿಗೆ ಭೀಮಶ್ಯಾ ಮಾಸ್ತಾರ, ಭೀಮನಾಯಕ, ಭೀಮಖ್ಯ, ಭೀಮಕವಿ ಎಂದು ಕರೆಯಲಾಗುತ್ತಿತ್ತು. ಕನ್ನಡ ಸಾಹಿತ್ಯದಲ್ಲಿ ಕವಿಗಳು ಹೆಸರಿನ ಜೊತೆಗೆ ಊರಿನ ಸ್ಮರಣೆಯನ್ನು ಮಾಡುವಂತೆ ಈತನು ರಸ್ತಾಪುರವನ್ನು ಸ್ಮರಣಾರ್ಥವಾಗಿ ಬಳಸಿಕೊಂಡಿದ್ದಾನೆ.

ಭೀಮಕವಿ ವ್ಯಾಸಂಗದ ಮಾಹಿತಿ ಲಭ್ಯವಿಲ್ಲ. ಆದರೂ ಹಾಲುಮತೋತ್ತೇಜಕ ಪುರಾಣದಲ್ಲಿ “ರಸ್ತಾಪುರದ ಪರಿ ಶರಭಲಿಂಗನ ಪಾದದ್ವಯವನನುದಿನದಲ್ಲಿ ಪಾಲ್ನಜ ಜಂಬುಲಿಂಗನ ಪ್ರೇಮಸುತನಾದ ಭೀಮಖ್ಯ ರಚಿಸಿದಂ ಮುದದಿಂದ ಕ್ಷಿತಿಯೊಳಗೆ ಲಕನಾಪುರದ ಗೌಡ ಹನುಮಂತರೆಡ್ಡಿ ಗುರುವಾರನ ದಯದಿಂದ” ಎಂಬ ಮಾಹಿತಿಯಿಂದ ಈತನ ಕುರಿತೋದದೆ ಕವಿಯಾಗಿದ್ದನೆಂದು ಸ್ಪಷ್ಟಪಡಿಸುತ್ತದೆ. ಹಾಗಾಗಿ ಈತ ಕವಿಯೆಂದು ನಿಸ್ಸಂದೇಹವಾಗಿ ಹೇಳಬಹುದು. ಜನಮಾನಸದಲ್ಲಿ ಈತನು “ರಸ್ತಾಪುರ ಭೀಮಕವಿ” ಯೆಂದು ಕರೆಯಿಸಿಕೊಂಡಿದ್ದು ಸಹ ದಿಟವಾಗಿದೆ.

ಭೀಮಕವಿಯು ಹಾಲುಮತೋತ್ತೇಜಕ ಪುರಾಣ ಕೃತಿಯಲ್ಲದೆ ಅನೇಕ ಕೃತಿಗಳನ್ನು ಕಚಿಸಿದ್ದಾನೆ. ನಿಜಕ್ಕೂ ಹೆಚ್ಚು ಬಯಲಾಟಗಳು ಭೀಮಕವಿಯಿಂದ ರಚಿತವಾಗಿವೆ. ಹತ್ತು ನಾಟಕಗಳು ರಚನೆಗೊಂಡಿವೆಯೆಂದು ತಿಳಿದುಬರುತ್ತದೆ. ಅವುಗಳಲ್ಲಿ ಹಾಲುಮತೊತ್ತೇಜಕ ಪುರಾಣ, ಶಂಭುಲಿಂಗೇಶ್ವರ ಪುರಾಣ, ಮಹಾಂತೇಶ್ವರ ಪುರಾಣ, ಚರ ಬಸವೇಶ್ವರ ಪುರಾಣ, ಶಂಕರ ಕೈವಲ್ಯದ್ರುಮ ಪ್ರಮುಖವಾದವುಗಳು. ಅಷ್ಟಲ್ಲದೆ ಗಣಪತಿ ಸೋತ್ರವನ್ನು ರಚಿಸಿದ್ದಾರೆ. ಸುಮಾರು ಹತ್ತು ನಾಟಕಗಳನ್ನು ರಚಿಸಿರುವುದಾಗಿ ಚರಬಸವೇಶ್ವರ ಪುರಾಣದಲ್ಲಿ ಹೇಳಿಕೊಂಡಿದ್ದಾನೆ. ೧. ಕಾಳಿದಾಸಾಭ್ಯಾಸ ೨. ನಳಚರಿತೆ ೩. ಕುಶಲವರ ಕಾಳಗ ೪. ಶ್ರೀ ಸಿದ್ಧರಾಮ ಚಾರಿತ್ರ ೫. ಸತ್ಯಶೀಲ ಕಲ್ಪಿತ ಕಥಾ ೬. ರಾಮರಾಜ್ಯ ವಿಯೋಗ ೭. ಬೊಂಬಾಯಿ ವ್ಯಾಪಾರ ೮. ಚಲತಿ ದುನಿಯಾ ಎಂಬ ೮ ನಾಟಕಗಳ ಹೆಸರು ತಿಳಿದಿವೆ. ಉಳಿದ ಎರಡು ನಾಟಕಗಳ ಹೆಸರು ಲಭ್ಯವಿಲ್ಲ. ಇತ್ತೀಚೆಗೆ ‘ರಾಮರಾಜ್ಯ ವಿಯೋಗ’ ಎಂಬ ನಾಟಕ ಹಸ್ತಪ್ರತಿ ಮಾತ್ರ ಲಭಿಸಿದೆ.

‘ಕರಿಬಂಟ ಕಮಲಾಕ್ಷಿ’ ಎಂಬ ಬಯಲಾಟದ ಹಸ್ತಪ್ರತಿಯೂ ಲಭಿಸಿದೆ. ಇವರ ಆಧ್ಯಾತ್ಮದ ಮೇರು ಕೃತಿ ‘ಶಂಕರ ಕೃವಲ್ಯಕಲ್ಪದ್ರುಮ’, ‘ಶಹಾಪುರ ಚರಬಸವೇಶ್ವರ ಅಷ್ಟೋತ್ತರ ಶತನಾಮಾವಳಿ’ ಇದು ೧೯೪೪ರಲ್ಲಿ ಮುದ್ರಣ ಕಂಡಿದೆ.

ಈತನು ಕವಿಯ ಪದವಿಯ ಜೊತೆಗೆ ಪತ್ರಕರ್ತನಾಗಿದ್ದನೆಂದು ತಿಳಿದು ಬರುತ್ತದೆ. ‘ಕುರುಬರ ಪತ್ರಿಕೆ’ ಎಂಬ ವಾರ ಪತ್ರಿಕೆಯಲ್ಲಿ ಕುಲದ ಆಚರಣೆಯ ವಿಷಯವಾಗಿ ಅನೇಕ ಮಾಹಿತಿಯನ್ನು ತಿಳಿಸಿಕೊಡುತ್ತಿದ್ದರೆಂದು ಹಿರಿಯರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಕವಿಯ ಸಂಸಾರಿಕ ವಿಷಯಕ್ಕೆ ಬಂದರೆ, ಈತನಿಗೆ ಮೂವರು ಹೆಂಡತಿಯರು. ಕೃಷ್ಣಮ್ಮ, ಚಂದಮ್ಮ, ಚಿನ್ನಮ್ಮ. ಆದರೂ ವಂಶೋದ್ಧಾರಕ ಮಕ್ಕಳನ್ನು ಪಡೆಯಲಿಲ್ಲ.

ಕವಿಯು ಸಾಹಿತ್ಯ ರಚನೆ ಮಾಡಿದಂತೆ ಪ್ರಶಸ್ತಿಯ ಗರಿಗಳು ಹುಡುಕಿಕೊಂಡು ಬಂದವು. ರಾಣಿ ಗಂಗಮ್ಮನವರು ಆರು ತೊಲಿ ಚಿನ್ನದ ಚಂದ್ರಹಾರ ಹಾಗೂ ಕಾಶ್ಮೀರ ಶಾಲು ಹೊದಿಸಿ ಸನ್ಮಾನಿಸಿದರು. ಪ್ರಶಸ್ತಿ ಪತ್ರ, ಕುಲಾಚಾರದ ಪತ್ರ, ಭೂಮಿ ಇತ್ಯಾದಿಗಳನ್ನು ಕಾಣಿಕೆಯಾಗಿ ಪಡೆಯುತ್ತಾರೆ. ಕಾಳಿದಾಸ ನಾಟಕ ನೋಡಿದ ಕೃಷ್ಣಪ್ಪನಾಯಕರು ಎರಡು ತೊಲಿ ಚಿನ್ನದ ಪದಕದೊಂದಿಗೆ ಕಾಶ್ನೀರ ಶಾಲು ಹೊದಿಸಿ ಸನ್ಮಾನಿಸಿದರು.

೧೯೪೨ನೇ ಮಾರ್ಚ್ ತಿಂಗಳಲ್ಲಿ ಸುರಪುರದಲ್ಲಿ ನಡೆದ ನಿಜಾಮ ಕರ್ನಾಟಕ ಪರಿಷತ್ತಿನ ಮೂರನೇ ಅಧಿವೇಶನದಲ್ಲಿ ಭೀಮಕವಿಗಳಿಗೆ ‘ಕರ್ನಾಟಕ ಕವಿಭೂಷಣ’ ಬಿರುದು ನೀಡಿ ಗೌರವ ಪ್ರಶಸ್ತಿಗಳಿಗೆ ಭಾಜನರಾಗಿ ೧೯೪೮ರಲ್ಲಿ ಲಿಂಗೈಕ್ಯರಾದರು.

ಹಾಲುಮತ ಸಮುದಾಯವನ್ನು ವಿಶಿಷ್ಟ ರೀತಿಯಲ್ಲಿ ಭಾವನಾತ್ಮಕದಲ್ಲಿ, ನೈತಿಕತೆಯಲ್ಲಿ, ವಾಸ್ತವದ ಅಂಶಗಳನ್ನು ಕವಿಯು ಹಾಲುಮತ ಪುರಾಣದ ಮೂಲಕ ವ್ಯಕ್ತಪಡಿಸಿದ್ದಾರೆ. ಕುರುಬ ಸಮಾಜದ ಒಟ್ಟಾರೆ ೧೦ ಹಾಲುಮತ ಪುರಾಣಗಳಲ್ಲಿ ಭೀಮಕವಿಯ ಹಾಲುಮತ ಪುರಾಣವು ಕಾಲದ ದೃಷ್ಟಿಯಿಂದ ಕುಲಾಚಾರದ ಸಂಪ್ರದಾಯ, ಸಾಂಸ್ಕೃತಿಕ ವೀರರು, ಗುರು ಪರಂಪರೆ, ಒಡೆಯರು, ಕತ್ತಿಕಂಕಣ, ಉಣ್ಣೆ ಕಂಕಣಗಳ ಪ್ರಸ್ತಾಪ, ರೇವಣಸಿದ್ದೇಶ್ವರ ಜನನ, ಶಾಂತಮುತ್ತಯ್ಯನು ಲಿಂಗದೀಕ್ಷೆ ಪಡೆದು ಕ್ಷೀರಕುಲಕ್ಕೆ ಅಧ್ಯಕ್ಷನಾಗಿದ್ದು, ಹಾಲುಮತದ ಗುರುವಾಗಿ ಸಮಾಜವನ್ನು ಬೆಳೆಸಿದ್ದು, ರೇವಣಸಿದ್ದರು ನಿಜಚಾರಿತ್ರ್ಯವುಳ್ಳ ಶಾಂತಮುತ್ತಯ್ಯನಿಗೆ ಮೂರಡಿಯ ಕಂತೆಯನ್ನು ಧರಿಸಲು ಹೇಳಿದ್ದು ಮುಂತಾದ ಮಹತ್ವದ ವಿಷಯಗಳನ್ನು ಕುತೂಹಲಕಾರಿಯಾಗಿ ವಾರ್ಧಕ ಷಟ್ಪದಿಯಲ್ಲಿ ಕಟ್ಟಿಕೊಟ್ಟಿದ್ದಾನೆ.

ಭೀಮಕವಿಯು ಹಾಲುಮತೋತ್ತೇಜಕ ಪುರಾಣ ವಾರ್ಧಕ ಷಟ್ಪದಿಯಲ್ಲಿದೆ. ಒಂಭತ್ತು ಸಂಧಿ ೫೯೮ ಪದ್ಯಗಳಲ್ಲಿ ಕ್ಷೀರಕುಲದ ಚರಿತ್ರೆಯನ್ನು ರಚನೆಮಾಡಿದ್ದಾನೆ. ಕವಿಯು ಕೃತಿಯ ಕಾಲವನ್ನು ಕೊನೆಯ ಪದ್ಯದಲ್ಲಿ “ಶಾಲಿವಾಹನ ಶಕದ ಪದಿನೆಂಟುನೂರ ಮೂವತ್ತು ನಾಲ್ಕನೆಯ ಸೇರಿದ ಮಾಹಾರಿಧಾವಿ ನಾಮಸಂವತ್ಸರಾಶ್ವೀಜ ಶುಕ್ಲಪಕ್ಷ ದಶಮಿ ಸದಮಲಾದಿತ್ಯ ವಾರಕ್ಕೆ ಬಹುಸಾಂಗದಿಂದಿದು ಪೇಳಿ ಮುಗಿಸಿದಂ” ಎಂದು ಹೇಳಿದ್ದಾನೆ. ಹಾಗಾಗಿ ಕೃತಿಯನ್ನು ಕ್ರಿ.ಶ. ೧೯೧೨ರಲ್ಲಿ ಮುಗಿಸಿರಬಹುದಾಗಿದೆ.

ಮೊದಲ ಸಂಧಿಯಲ್ಲಿ ಕವಿಯು ತನ್ನ ಮನದ ಇಂಗಿತದ ಜೊತೆಗೆ ದೇವಾನುದೇವತೆಗಳನ್ನು ಸ್ಮರಿಸಿ ಕಾವ್ಯವನ್ನು ಮುಂದುವರಿಸಿದ್ದಾನೆ. ಕವಿಯು ಲೋಕದಲ್ಲಿ ಕವಿಯೆನಿಸಿಕೊಳ್ಳಬೇಕೆಂದು ಬರೆದಿಲ್ಲ. ಯಾರು ನನ್ನನ್ನು ನಿರಾಕರಿಸದೇ ವಿವೇಕ ಗುಣವನ್ನು ಅವಲೋಕಿಸಿ ಸುಗುಣವನ್ನು ಒಳ್ಳೆಯ ಮನಸ್ಸಿನಿಂದ ಸ್ವೀಕರಿಸಬೇಕೆಂದು ಹೇಳುತ್ತಾ ಶಿವನ ದಯದಿಂದ ಕೃತಿಯನ್ನು ರಚಿಸಿದ್ದೇನೆಂದು ನಿಸ್ವಾರ್ಥ ಮನೋಭವವನ್ನು ವ್ಯಕ್ತಪಡಿಸಿರುವನು.

ವರಕಾಳಿದಾಸ, ಪಾಲ್ಕುರಿಕೆ ಸೋಮಾರಾಧ್ಯ, ಹರಿಹರ, ಭೀಮರಸ, ಗುರುಪಂಡಿತ ರಾಘವಾಂಕ, ಉದ್ಭಟ, ನಿಜಗುಣಾರಾಧ್ಯ ಮುಂತಾದ ಕವಿಗಳನ್ನು ಸ್ಮರಿಸುವನು. ಕೃತಿ ಓದಿದವರಿಗೂ ಮತ್ತು ಕೇಳಿದವರಿಗೂ ಸನ್ಮತಿ ದೊರೆಯುತ್ತದೆಂದು ಪ್ರತಿ ಸಂಧಿಯ ಕೊನೆಯಲ್ಲಿ ಹೇಳುವನು.

ಎರಡನೇ ಸಂಧಿಯಲ್ಲಿ ರೇವಣಸಿದ್ದೇಶ್ವರ ಚರಿತ್ರೆಯ ಕುರಿತು ವಿಸ್ತಾರ ಮಾಹಿತಿಯನ್ನು ಚಾರಿತ್ರಿಕ ಹಿನ್ನಲೆಯಲ್ಲಿ ಕಟ್ಟಿಕೊಡಲಾಗಿದೆ. ಕೊಲ್ಲಿಪಾಕಿಯ ಸೋಮಲಿಂಗದಿಂದ ಉದಯಿಸಿದ ರೇವಣಸಿದ್ಧರು ಭಕ್ತರನ್ನು ಉದ್ಧರಿಸಲು ಸಾಂತಮುತ್ತಯ್ಯನಿಗೆ ಲಿಂಗದೀಕ್ಷೆಯನ್ನು ಕೊಡುತ್ತಾರೆ. ಇಲ್ಲಿ ರೇವಣಸಿದ್ಧರು ಲೀಲೆಗಳನ್ನು ತೋರುತ್ತಾ ಸರೂರು ಗ್ರಾಮಕ್ಕೆ ಬಂದು ಕುರುಬರ ಮನೆತನದಲ್ಲಿ ಜನಿಸಿದ ಶಾಂತಮುತ್ತಯ್ಯನಿಗೆ ‘ಸಿದ್ಧಿಸಲಿ ನೀನಂದ ನುಡಿಗಳು ಭೂಮಿಯಲ್ಲಿ’ ಎಂದು ಆರ್ಶೀವಾದ ಮಾಡಿ ಲಿಂಗದೀಕ್ಷೆಯನ್ನು ನೀಡಿ ಹಾಲುಮತಕ್ಕೆ ಅಧ್ಯಕ್ಷನನ್ನಾಗಿಸುವನು. ಈ ಪ್ರಸಂಗವು ಹಾಲುಮತದವರು ಅನೇಕ ಕಡೆ ನೆಲೆಯೂರಿದ್ದರು. ಅವರ ಉದ್ಧಾರಕಾಗಿ ರೇವಣಸಿದ್ಧರು ತಮ್ಮ ಕಾರ್ಯವನ್ನು ಪೂರೈಸಲು ಶಿಷ್ಯನನ್ನು ನೇಮಿಸುತ್ತಿದರೆಂದು ಸೂಚಿಸುತ್ತದೆ. ಶಾಂತಮುತ್ತಯ್ಯನಿಗೆ ಸುವ್ವಿ, ಮುತ್ತಯ್ಯ, ಜಗಮುತ್ತಯ್ಯ, ಲಲಿತ ಶಾಂತಯ್ಯ ಎಂಬ ಮಕ್ಕಳಿರುವುದನ್ನು ತಿಳಿಸುತ್ತಾ ಅವರು ಗೋವುಗಳನ್ನು ಸಾಕುತ್ತಿದ್ದರೆಂದು ತಿಳಿದು ಬರುತ್ತದೆ.

ರೇವಣಸಿದ್ಧರು ಬಿಜ್ಜಳ ರಾಯನಲ್ಲಿ ಬಂಧಿಯಾಗಿದ್ದ ಹನ್ನೆರಡ ಸಾವಿರ ಬಾಲೆಯರನ್ನು ಕರುಣೆಯಿಂದ ಕಾಪಾಡುತ್ತಾನೆ. ಅದಕ್ಕೆ ಪ್ರತಿಯಾಗಿ ಬಿಜ್ಜಳನ ಮಗಳನ್ನು ಮದುವೆಯಾಗುವನು. ನಂತರ ಲೋಕಕಲ್ಯಾಣಕ್ಕಾಗಿ ಕೆರೆಯನ್ನು ಕಟ್ಟಲು ಮುಂದಾದಾಗ ಚೋಳರಾಜನು ಮಗಳು ಗರ್ಭವತಿಯಾಗಿರುವುದನ್ನು ಗಮನಿಸಿ ಆಕೆಯನ್ನು ಕರೆದು ಗರ್ಭವನ್ನು ಸೀಳಿ ಮೂರು ತಿಂಗಳ ಪಿಂಡವ ತೆಗೆದು ಕೆರೆಯ ದಂಡೆಯಲ್ಲಿ ಹೂಳಿಟ್ಟು, ತನ್ನ ಕಾಯಕವನ್ನು ಮುಂದುವರಿಸುವನು. ಆರು ತಿಂಗಳ ನಂತರ ಹೂಳಿಟ್ಟ ಪಿಂಡವನ್ನು ತೆಗೆಯಲು ರೇವಣಸಿದ್ಧರ ಪ್ರತಿರೂಪದಂತಿರುವ ಶಿಶು ಗೋಚರಿಸುತ್ತದೆ. ಅದಕ್ಕೆ ರುದ್ರಮುನಿ ಎಂದು ನಾಮಕರಣ ಮಾಡಿ ಬಿಜ್ಜಳರಾಯನ ಮಗಳಿಗೆ ಒಪ್ಪಿಸುವನು. ಆ ಶಿಶು ಬೆಳೆದು ದೊಡ್ಡವನಾದ ನಂತರ ರೇವಣರು ವೀರಶೈವ ದೀಕ್ಷೆಯನ್ನು ಕೊಟ್ಟು ತತ್ವ ಬೋದಿಸುವರು. ಈ ಲಿಂಗದೀಕ್ಷೆ ಕೊಡುವ ಪ್ರಸಂಗವು ಕುರುಬ ಸಮಾಜವು ವೀರಶೈವೀಕರಣಗೊಳ್ಳುವುದನ್ನು ಅತಿಸೂಕ್ಷ್ಮವಾಗಿ ತಿಳಿಸುತ್ತದೆ.

ನಂತರ ಸಿದ್ಧರಾಮನ ಜನನದ ಕಥೆಯನ್ನು ಹೇಳುತ್ತಾ ಶಾಂತಮುತ್ತಯ್ಯನಿರುವ ಸರೂರ ವರ್ಣನೆಯು ಮನಮೋಹಕವಾಗಿದೆ. ಇಲ್ಲಿ ಶಾಂತಮುತ್ತಯ್ಯನು ವಾದಕ್ಕಿಳಿದ ರಕ್ಕಸರನ್ನು ಕುರಿಗಳಾಗಿಸಿ ಮೂರು ಭಾಗ ಸೀಳಿ ಧೈರ್ಯದಿಂದ ಮುನ್ನಡೆಯುವ ಚರಿತ್ರೆಯು ಸೊಗಸಾಗಿದೆ. ಕುರಿಗಳ ಉಣ್ಣೆಯಿಂದ ಕಂಬಳಿ, ಗದ್ದುಗೆ, ಗುರುಪಾದ ಪೂಜೆಗೆ ಉಪಯೋಗವಾಗುವ ಡೊಳ್ಳು ವಾದ್ಯವಾಗಲಿ ಎಂದು ಶಾಂತಮುತ್ತಯ್ಯನಿಗೆ ರೇವಣರು ಆರ್ಶೀರ್ವದಿಸುವ ಸನ್ನಿವೇಶ ಇಂದಿಗೂ ಜೀವಂತವಾಗಿ ಕಂಗೊಳಿಸುತ್ತದೆ.

ಮೂರನೇ ಸಂಧಿಯಲ್ಲಿ ಕೈಲಾಸಪುರದ ಶಿವನ ಸನ್ನಿಧಿಯಲ್ಲಿ ಇಬ್ಬರು ಗಂಧರ್ವರು ಕುರೂಪಿ ಮುನಿಯನ್ನು ಕಂಡು ಹಾಸ್ಯದಿಂದ ನಗುತ್ತಾರೆ. ಶಿವನು ಕೋಪಗೊಂಡು ನರಲೋಕದಲ್ಲಿ “ಕುಡುವಕ್ಕಲಿಗರಲ್ಲಿ ಸತಿಪತಿಗಳಗಿ ಜನಿಸಲಿ” ಎಂದು ಶಾಪಕೊಟ್ಟನು. ಇವರೇ ಆದಿಗೊಂಡನ ತಂದೆ ಮುದ್ದುಗೊಂಡ, ತಾಯಿ ಮುದ್ದಯಿ ದಂಪತಿಗಳು. ಮುದ್ದುಗೊಂಡನ ಸಹೋದರಿಗೆ ‘ಚುಂಚಲೆ’ ಎಂಬ ಮಗಳನ್ನು ಆದಿಗೊಂಡನು ಮದುವೆಯಾಗುತ್ತಾನೆ. ಈ ದಂಪತಿಗಳಿಗೆ ಅಯಗೊಂಡ, ಪಲ್ಗೊಂಡ, ಅಮರಗೊಂಡ ಮತ್ತು ಜಾಯ್ಗೊಂಡ ಎಂಬ ನಾಲ್ಕು ಮಕ್ಕಳನ್ನು ಪಡೆಯುವರು. ಇವರು ಕೆಟ್ಟವರಾಗಿರುತ್ತಾರೆ. ಅದೇ ಸಮಯದಲ್ಲಿ ರೇವಣರು ಜಾಗ್ರತಿ ಪಟ್ಟಣಕ್ಕೆ ಬಂದು ನಿಮಗೆ ಐದು ತಿಂಗಳೊಳಗಾಗಿ ಪ್ರಜ್ವಲಿಸುವ ಮಗು ಜನಿಸುತ್ತದೆ. ಆ ಮಗುವಿಗೆ ಶಿವಪದ್ಮ ಎಂದು ಹೆಸರು ಕರೆಯುವರು.

ನಾಲ್ಕನೇ ಸಂಧಿಯಲ್ಲಿ ಶಿವಪದ್ಮನಿಗೆ ನಾಮಕರಣವು ವೈಭವದಿಂದ ನಡೆಯುತ್ತದೆ. ದೇವಲೋಕದ ನಾರಿಯರು ಬಂದು ವಿಜೃಂಭಣೆಯಿಂದ ನಾಮಕರಣ ಮಾಡುವರು. ನಂತರ ಆದಿಗೊಂಡ ಶಿವಪದ್ಮನಿಗೆ ಜಿಂಕಾದೇವಿಯ ಜೊತೆ ಮದುವೆ ಮಾಡುವನು.

ರೇವಣರು ಕಡುಬಡವಿ ಗಂಗಮ್ಮಗಳ ಸತ್ಕಾರ, ಭಕ್ತಿ ನಿಷ್ಠೆಯನ್ನು ಮೆಚ್ಚಿ ನಿಧಿಯನ್ನು ದಯಪಾಲಿಸುವರು. ನಂತರ ಶಿವಪದ್ಮನಿಗೆ ಕುರಿಗಳನ್ನು ಕಾಯಲು ನೇಮಿಸುವನು.

೫ನೇ ಸಂಧಿಯಲ್ಲಿ ಶಿವಪದ್ಮನು ಗುರುವಿನ ಸಲಹೆಯಂತೆ ನೀತಿ ಧರ್ಮದಿಂದ ಕುರಿಗಳನ್ನು ಕಾಯುವನು. ಈ ಪುರಾಣದಲ್ಲಿ ಕುರಿಗಳು ಜಾಬಾಲಮುನಿಯ ರಕ್ತದಿಂದ ಹಲವಾರು ಬಣ್ಣದ ಕುರಿಗಳು ಉದ್ಭವಿಸುತ್ತವೆಂದು ತಿಳಿದುಬರುತ್ತದೆ. ಈ ರೀತಿಯಾಗಿ ಹುಟ್ಟಿದ ಕುರಿಗಳು ರಾಜ, ಮಂತ್ರಿ ಕೊನೆಗೆ ಹರಿ, ಹರ ಬ್ರಹ್ಮಾದಿಗಳು ಕಾದು ಸೋತು ಹೋಗುವರು. ನಂತರ ಕೊನೆಗೆ ಪಾರ್ವತಿಯು ಈ ಕಾರ್ಯವನ್ನು ಕೈಗೊಳ್ಳುವಳು. ಆಕೆ ಅವುಗಳನ್ನು ಮೂರು ಕಣ್ಣುಳ್ಳ ಹುತ್ತದಲ್ಲಿ ಹೊಗಿಸಿ ಶಿವಪಂಚಾಕ್ಷರಿ ಮಂತ್ರವನ್ನು ಜಪಿಸಿ ಮುತ್ತಿನ ಮೂಗುತಿಯನ್ನು ಮುದ್ರೆಯಾಗಿ ಒತ್ತುವಳು. ಅಲ್ಲದೆ ಅದರ ಕಾವಲಿಗೆ ವೀರಭದ್ರನನ್ನು ನೇಮಿಸುವಳು. ಮೂಗುತಿ ಮುತ್ತುಗದ ಮರವಾಗಿ ಬೆಳೆಯುತ್ತದೆ.

ಶಿವಪದ್ಮನಿಗೆ ರೇವಣ್ಣನೆಂಬ ಮಗ ಜನಿಸುವನು.

ಆದಿಗೊಂಡನು ತನ್ನ ಎಲ್ಲ ಮಕ್ಕಳಿಗೆ ಹೊಲ ಊಳಲು ಹೇಳುತ್ತಾನೆ. ಯಾರು ಮುಂದಾಗುವುದಿಲ್ಲ. ಕೊನೆಗೆ ಶಿವಪದ್ಮ ಹೊಲ ಊಳುವಾಗ ಮೂರು ಕಣ್ಣಿನ ಹುತ್ತಕ್ಕೆ ನೇಗಿಲು ತಾಕಿಸುತ್ತಾನೆ. ಅದರೊಳಗಿಂದ ಅಸಂಖ್ಯಾತ ಕುರಿಗಳು ಹೊರ ಬರುತ್ತವೆ. ಅಂದಿನಿಂದ ಶಿವಪದ್ಮ ಕುರಿಯನ್ನು ಕಾಯಲು ಕಾಡಿಗೆ ಹೋಗುತ್ತಾನೆ.

೬ನೇ ಸಂಧಿಯಲ್ಲಿ ಶಿವಪದ್ಮನು ಕುರಿ ಕಾಯುತ್ತಾ ಕಾಡಿಗೆ ಹೊರಟಾಗ ಆತನಿಗೆ ಸಹಾಯಕನಾಗಿ ವೀರೇಶನನ್ನು ಶಿವನು ಕಳುಹಿಸುವನು. ಅಲ್ಲದೆ ಕಾಡಿನಲ್ಲಿ ರಾಕ್ಷಸನ ಸಾಕು ಮಗಳಾದ ಚುಮಳಾದೇವಿಯನ್ನು ರಕ್ಷಿಸಿ ಮದುವೆಯಾಗುತ್ತಾನೆ. ಈಗಾಗಲೇ ಧರ್ಮ ಸಮ್ಮತವಾಗಿ ಮದುವೆಯಾದ ಜಿಂಕಾದೇವಿಯ ಮಕ್ಕಳು ಹತ್ತಿ ಕಂಕಣದವರಾಗಿ, ಚುಮಳಾದೇವಿಯ ಮಕ್ಕಳು ಉಣ್ಣೆ ಕಂಕಣದವರಾಗಿ ಬೆಳೆಯುತ್ತಾರೆ.

೭ನೇ ಸಂಧಿಯಲ್ಲಿ ಶಿವಪದ್ಮ ರಾಕ್ಷಸಿಯ ಅವಯವಗಳಿಂದ ಬಿರುದುಗಳನ್ನು ಮಾಡಿ ಬಂಕಾಪುರದೊಳಿಟ್ಟು ಚುಮಲೆಯೊಂದಿಗೆ ಕುರಿಕಾಯುತ್ತಾರೆ. ಈ ದಂಪತಿಗೆ ಶಿವಸಿದ್ಧ ಬೀರನು ಜನಿಸುತ್ತಾನೆ.

ನಂತರ ಶಿವಪದ್ಮನು ಕುರಿಯನ್ನು ಕಾಯುತ್ತಾ ಜಾಗ್ರತಪುರಕ್ಕೆ ಮರಳಿ ಬರುವನು. ಅಣ್ಣಂದಿರು ಅಲ್ಲಿ ಆತನನ್ನು ತೆಗಳುತ್ತಾರೆ. ಆದ್ರೆ ತಾಯಿಯು ಗುರುತಿಸಿ ಮನೆಗೆ ಕರೆದುಕೊಂಡು ಹೋಗುವರು.

ಇಲ್ಲಿ ಶಿವಪದ್ಮನು ಮತ್ತೆ ಕೈಲಾಸಕ್ಕೆ ತೆರಳಿ ಮುಂದೆ ಶಿವನು ಭರಮ ದೇವನಾಗಿ ಜನಿಸುವನು. ಶಿವಸಿದ್ಧ ಬೀರನಿಗೆ ಶಿಷ್ಯನಾಗಿ ಬಿಲ್ವಾಡಪುರದ ಸೋಮರಾಯನ ಪುತ್ರ ಮಾಳಿಂಗರಾಯನನ್ನು ಕಳುಹಿಸುವನು.

ಇಲ್ಲಿ ಮಾಳಿಂಗರಾಯನ ಚರಿತ್ರೆಯು ತುಂಬ ಸ್ವಾರಸ್ಯಕರವಾಗಿ ಮೂಡಿ ಬಂದಿದೆ. ಬರಮದೇವ ಮತ್ತು ಹರಿದೇವನಿಗೆ ಸಂಬಂಧಗಳ ಪೈಪೋಟಿ ಬೆಳೆಯುತ್ತದೆ. ಬರಮದೇವನು ಹರಿದೇವನ ತಂಗಿಯಾದ ಸುರಾಮತಿಯನ್ನು ಮದುವೆಯಾಗುವನು. ಈ ದಂಪತಿಗಳಿಗೆ ಜನಿಸುವ ಮಗ ನನಗೆ ಪ್ರತಿಸ್ಪರ್ಧಿಯಾಗಿ ನಿಲ್ಲುವನೆಂದು ಹರಿದೇವ ಜೋತಿಷಿ ವೇಷ ಧರಿಸಿ ಶಿಶುವನ್ನು ಕಾಡಿಗೆ ಅಟ್ಟುವನು.

ಹೀಗೆ ಹರಿದೇವನ ಸೇವಕರು ಆ ಎಳೆ ಶಿಶುವನ್ನು ಹಾಲವೇಲಿ ಹಳ್ಳದ ವಟವೃಕ್ಷದ ಕೆಳಗೆ ಬಿಟ್ಟು ಬರುವರು. ಅಲ್ಲಿಂದ ಆ ಮಗು ಶಿವನ ದಯೆಯಲ್ಲಿ ಬೆಳೆಯುತ್ತದೆ. ಅದೇ ಸಮಯಕ್ಕೆ ಸುರಕನ್ಯೆಯರು ಲಕ್ಷ್ಮಮ್ಮ, ಮಾಯಮ್ಮ, ಮಂಕಮ್ಮ, ಮಾಲೇಮ್ಮ ಮತ್ತು ಅಕ್ಕಮ್ಮ ಎನ್ನುವವರು ಕುರಿ ಕಾಯುತ್ತ ಬರುತ್ತಾರೆ. ಮಗು ನನ್ನದು ತನ್ನದು ಎಂದು ಜಗಳವಾಡುತ್ತಿರುವಾಗ ಅಕ್ಕಮ್ಮ ಹೀಗೆ ಹೇಳುವಳು, “ಯಾರ ಉಡಿಯಲ್ಲಿ ಆ ಮಗು ಬೀಳುತ್ತದೆಯೋ ಅವರೇ ಅದರ ತಾಯಿ”. ಆಗ ಮಗು ಅಕ್ಕಮ್ಮನ ಉಡಿಯಲ್ಲಿ ಬೀಳುವುದು.

೮ನೇ ಸಂಧಿಯಲ್ಲಿ ಅಕ್ಕಮ್ಮ ಮತ್ತು ಶಿವಸಿದ್ಧ ಬೀರನು ಮಾತೃಕೆಯ ಸಂಬಂಧ ಕರುಳು ಕಿತ್ತು ಬರುವಂತೆ ಕವಿ ರಚಿಸಿದ್ದಾನೆ. ಶಿವಸಿದ್ಧ ಬೀರನು ತುಂಟಾದ ಶೂರನಾಗಿರುತ್ತಾನೆ. ಒಂದು ದಿನ ಏಳ್ನೂರು ತರುಣಿಯರ ತುಂಬಿದ ಕೊಡಗಳಿಗೆ ಬಿಲ್ಲಿನಿಂದ ಬಾಣ ಎಸೆಯುವನು. ಆಗ ಅವರು “ಜನನಿ ಜನಕರ ಕಾಣದ ಪರಮ ನೀಚನೆ” ಎಂದು ನಿಂದಿಸುವರು. ಆಗ ಶಿವಸಿದ್ಧ ಬೀರನು ತಂದೆ-ತಾಯಿಯರು ಪೂರ್ವ ಚರಿತ್ರೆಯನ್ನು ತಿಳಿದುಕೊಂಡು ಹರಿದೇವನ ಪಟ್ಟಣಕ್ಕೆ ಬರುವನು. ಹರಿದೇವನ ಮಗಳಾದ ಕನ್ನಿಕಾಮಾಲೆಯನ್ನು ವಿವಿಧವಾಗಿ ಪರೀಕ್ಷೆಮಾಡಿ ಆಕೀಯನ್ನು ಪ್ರೇಮಾಂಕುರವನ್ನು ಹುಟ್ಟಿಸುವನು.

ದೇವಿಯು ವೀರಮಾಳಿಂಗನ ಇತಿಹಾಸವನ್ನು ಹೇಳುವಳು. ಬೀಲ್ಪಾಡಪುರದರಸು ತುಕ್ಕಪ್ಪರಾಯನ ಮಗ ವೀರಮಾಳಿಂಗರಾಯ, ಸೋಮರಾಯನ ಮಗ ಜಕ್ಕಪ್ಪರಾಯ, ವೀರಮಾಳಿಂದರಾಯನೇ ನಿನ್ನ ಶಿಷ್ಯನೆಂದು ಹೇಳಿದಳು. ಅಲ್ಲದೆ ಬೀರೇಶನ ಮೇಲೆ ಮದವೇರಿದ ಕೋಣವೊಂದು ಎರಗಿ ಬರಲು ಅದನ್ನು ಕೊಂದು ಬಿಸಾಡುವನು. ಕೋಣ ಬಿದ್ದಲ್ಲಿ ಕೋಣಗನೂರು ಆಗಲೆಂದೂ, ಮುಂಡ ಬಿದ್ದಲ್ಲಿ ಮುಂಡಗನೂರು ಆಗಲೆಂದು ಹರಸಿದನು. ತುಕ್ಕಪ್ಪರಯ, ಸೋಮರಾಯರು ಗೌಳಿಗರ ದೇವತೆಯ ಸಂಪತ್ತಿನಲ್ಲಿ ಮೂರನೇ ಒಂದು ಭಾಗವನ್ನು ಪಡೆದು ತಂದಿದಕ್ಕೆ ಅನೇಕ ಕಷ್ಟ ನಷ್ಟಗಳನ್ನು ಅನುಭವಿಸುವರು. ಅದನ್ನು  ತಿಳಿದ ಇವರ ಗುರು ಗೋರಖನಾಥ ಸೊನ್ನಲಿಗೆ ಸಿದ್ಧರು ಆ ದೇವಿ ಪೂಜೆ ಮಾಡಲು ತಿಳಿಸುವನು. ಅದೇ ರೀತಿ ತುಕ್ಕಪ್ಪ ಸೋಮರಾಯ ಗೌಳಿಗ ದೇವತೆಯನ್ನು ಮಧ್ಯರಾತ್ರಿಯಲ್ಲಿ ಪೂಜಿಸಿ ಶಾಂತಿ ಮಾಡುವರು.

ಈ ದೇವಿಪೂಜೆಯನ್ನು ಇಂದಿಗೂ ಹಾಲುಮತದವರ ಕೆಲ ಮನೆತನದಲ್ಲಿ ಪೂಜಿಸುವ ನಿಯಮವಿದೆ. ಅಂದಿನ ಗೌಳಿಗ ದೇವತೆಯ ಶಾಂತಿಪೂಜೆಯು ಕುರುಬರಲ್ಲಿ ಲಕ್ಷ್ಮೀ ಪೂಜೆಯಾಗಿ ಪರಿವರ್ತನೆಯಾಗಿರಬಹುದು. ಇಂತಹ ಎಷ್ಟೋ ಪ್ರಸಂಗಗಳು ಕುರುಬರ ಮೂಲ ಚರಿತ್ರೆಯನ್ನು ಕಟ್ಟಲು ಅವಕಾಶ ಮಾಡಿಕೊಡುತ್ತವೆ. ಇಲ್ಲಿ ಬೀರೇಶ ಮತ್ತು ವೀರ ಮಾಳಿಂಗರಾಯರು ಸಾಹಸವನ್ನು ತೋರಿ ಭೋಲೋಕದಿಂದ ಮಾಘಮಾಸ ಶುಕ್ಲಪಕ್ಷದ ತ್ರಯೋದಶಿ ಭಾನುವಾರ ದಿವಸ ಕೈಲಾಸಕ್ಕೆ ತೆರಳುವರು. ಇಂದಿಗೂ ಕಾಲುಮತದವರಲ್ಲಿ ವಾರದ ಕುರುಬರೂ, ಸೋಮವಾರದ ಕುರುಬರು, ಆದಿತ್ಯವಾರದ ಕುರುಬರು ಹಾಗೂ ಗುರುವಾರದ ಕುರುಬರೆಂದು ಕರೆದುಕೊಳ್ಳುವರು.

ಕೊನೆಗೆ ಈ ಸಂಧಿಯಲ್ಲಿ ಗೊಲ್ಲಾಳೇಶ್ವರನ ಚರಿತ್ರೆಯನ್ನು ಸಂಕ್ಷಿಪ್ತವಾಗಿ ವಿವರಿಸಲಾಗಿದೆ.

ಒಟ್ಟಾರೆ ಭೀಮಕವಿಯ ಹಾಲುಮತೋತ್ತೇಜಕ ಪುರಾಣವು ರೇವಣಸಿದ್ಧ, ಶಾಂತಮುತ್ತಯ್ಯ, ಶಿವಪದ್ಮ, ಶಿವಸಿದ್ಧ ಬೀರ, ಮಾಳಿಂಗರಾಯ, ಸಪ್ತ ಮಾತೃಕೆಯರ ವಿವರಗಳನ್ನು ಸಾಂಸ್ಕೃತಿಕ ಆವರಣದಲ್ಲಿ ವರ್ಣಿಸುತ್ತಾ ಕುರುಬರ ಕುಲಮೂಲದ ಚರಿತ್ರೆಯನ್ನು ಚಾರಿತ್ರಿಕ ದೃಷ್ಟಿಯಿಂದ ರಚನೆ ಮಾಡಿದೆ. ವಿಶಿಷ್ಟವಾಗಿ ಇದರಲ್ಲಿ ಬರುವ ಕೆಲವೊಂದು ಪದಪುಂಜ, ಸ್ಥಳನಾಮಗಳಿಂದ ಮತ್ತಷ್ಟು ಖಚಿತವಾದ ಚರಿತ್ರೆಯನ್ನು ಕಟ್ಟಲು ಉತ್ತೇಜಿಸುತ್ತವೆ. ಉದಾ: ಮುಂಡಗನೂರು, ನಾಗಠಾಣೆ, ಕೋಣಗನೂರು ಇತ್ಯಾದಿ. ಈ ಕೃತಿಯು ಕುರುಬರು ಪಶುಪಾಲನೆ ಮತ್ತು ಕೃಷಿ ಸಂಸ್ಕೃತಿಯನ್ನು ಅನುಸರಿಸುತ್ತಿದ್ದರೆಂದು ತಿಳಿಸುತ್ತದೆ. ಕೃತಿಯಲ್ಲಿ ಕಥೆ-ಉಪಕಥೆಯಿಂದ ಚರಿತ್ರೆಯು ಅನಾವರಣಗೊಂಡರೂ ಪವಾಡಗಳು, ಮಹಿಮೆಗಳು, ದುಷ್ಟಶಕ್ತಿಗಳ ಸಂಹಾರ ಕರುಣೆ, ಅನುಕಂಪದೊಂದಿಗೆ ಭಕ್ತಿ ಸಿದ್ಧಾಂತವನ್ನು ಸಾರುವುದರ ಮೂಲಕ ಕುಲ ಸಂಕಥನವನ್ನು ಬಿತ್ತರಿಸುವ ಪ್ರಮುಖ ಕೃತಿಯಾಗಿದೆ.

ಆಧಾರಗ್ರಂಥಗಳು.

೧. ಎಫ್.ಟಿ. ಹಳ್ಳಿಕೇರಿ (ಸಂ), ರಸ್ತಾಪುರ ಭೀಮಕವಿಯ ಹಾಲುಮತೋತ್ತೇಜಕ ಪುರಾಣ, ಕನ್ನಡ ವಿಶ್ವವಿದ್ಯಾಲಯ ಹಂಪಿ, ವಿದ್ಯಾರಣ್ಯ, ೨೦೦೮.

೨. ಚಂದ್ರಕಲಾ ಬಿದರಿ, ರಸ್ತಾಪುರ ಭೀಮಕವಿ, ಗುಲಬರ್ಗಾ ವಿಶ್ವವಿದ್ಯಾಲಯ, ಗುಲಬರ್ಗಾ, ೧೯೯೫.

೩. ಶ್ರೀರಾಮ ಇಟ್ಟಣ್ಣವರ (ಸಂ), ಹಾಲಕೆನೆ, ಕಾಳಿದಾಸ ವಿಧ್ಯವರ್ಧಕ ಸಂಘ, ಬಿಜಾಪುರ,೨೦೦೦