ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠ, ಗದಗ ಪ್ರಕಾಶನದಿಂದ ೨೦೦೪ರಲ್ಲಿ ಪ್ರಕಟವಾದ ಈ ಕೃತಿಯ ಸಂಪಾದಕರು ಡಾ. ಎಂ.ಎಂ. ಕಲಬುರ್ಗಿ ಮತ್ತು ಡಾ. ವೈ.ಶಿ. ಭಾನುಮತಿ ಅವರು. ೪ ಸಂಧಿ, ೬೨೬ ಪದಗಳು, ೧ ಶ್ಲೋಕ, ೧ ಮಹಾಸ್ರಗ್ಧರವೃತ್ತ, ೫ ವಚನಗಳಲ್ಲಿ ರಚನೆಗೊಂಡ ಈ ಕೃತಿಯ ಅನುಬಂಧದಲ್ಲಿ ಟಗರ ಪವಾಡ ಮತ್ತು ಪದ್ಯಗಳ ಅಕಾರಾದಿಗಳನ್ನು ಪೋಣಿಸಲಾಗಿದೆ. ೧೭ ಪುಟಗಳ ಪ್ರಸ್ತಾವನೆಯ ಶಾಸ್ತ್ರೀಯ ಗ್ರಂಥ ಸಂಪಾದನ ವೈಧಾನಿಕತೆಗೆ ನಿದರ್ಶನವಾಗಿದೆ.

. ಸಿದ್ಧಮಂಕನ ಚರಿತೆಯ ಕಥಾಸಾರ: ಕಪಿಲಸಿದ್ಧ ಮಲ್ಲಿಕಾರ್ಜುನನ ಮಹಿಮೆಯನ್ನು ಬಣ್ಣಿಸುತ್ತೇನೆ. ಸಿದ್ಧಮಂಕ ಸರೂರು ಗ್ರಾಮದಲ್ಲಿ ತಪವಿದ್ದ ಬಗೆಯನ್ನು ಆದ್ಯರ ವಚನ ಶಾಅಸನಗಳನ್ನಾಧರಿಸಿ ಹೇಳುತ್ತೇನೆ. ರೇವಣಸಿದ್ಧ ಮತ್ತು ಸಿದ್ಧರಾಮರು ದೇವರ ಪ್ರತಿರೂಪ ಎಂದು ಪೀಠಿಕೆ ಹಾಕಿರುವ ಕವಿ ಸಿದ್ಧಮಂಕ ಚರಿತೆಯನ್ನು ಕೂಡ ಸಾದೃಶ್ಯವಾಗಿ ಹೆಣೆಯುತ್ತ ಹೋಗುತ್ತಾನೆ.

ಭೂಮಿಗೆ ಸೊಲ್ಲಾಪುರ ಕೈಲಾಸ, ಸಿದ್ಧರಾಮನೇ ಶಿವ, ಗುಡ್ಡರೇ ಗಣೇಶ್ವರರು, ಅಷ್ಟ ಷಷ್ಠಿ ತೀರ್ಥವೇ ಶಿವಾಲಯವೆಂದು ವರ್ಣಿತವಾಗಿರುವ ಸುರ-ಕಿನ್ನರ ಸಭೆಗೆ ಭೃಂಗಿಯ ಆಗಮನ. ಅವನನ್ನು ನೋಡಿ ಗಂಧರ್ವರು ಅಪಹಾಸ್ಯದಿಂದ ನಗುವುದು, ಇದರಿಂದ ಸಿಟ್ಟಿಗೆದ್ದ ಭೃಂಗಿ ದಂಪತಿಗಳಾಗಿ ಜನಿಸಿರೆಂದು ಶಾಪ ಹಾಕುವುದು, ಶಾಪ ವಿಮೋಚನೆಗಾಗಿ ಶಿವನಲ್ಲಿ ಮೊರೆ, “ಉಣ್ಣದ ಉಸಿರಿಕ್ಕದ ಜಿತೇಂದ್ರಿ ಮಗನಾಗಿ” ಶಿವ ಶಾಪಗ್ರಸ್ಥ ಮುದ್ಧಯ್ಯ-ಸುಗ್ಗಲೆ ಗಂಧರ್ವರಿಗೆ ಜನಿಸುತ್ತಾನೆ.

ಇತ್ತ ರೇವಣಸಿದ್ಧನು ಸಂಚರಿಸುತ್ತಾ ಸೊನ್ನಲಿಗೆಗೆ ಬರುತ್ತಾನೆ. ಊರ ಹತ್ತಿರ ಬಂದಾಕ್ಷಣ ತನ್ನ ಪಾದುಕೆಗಳನ್ನು ಕಳಚಿ, ಭೂಮಿಗೆ ನಮಿಸುತ್ತಾನೆ. ಕಾರಣ ಕೇಳಿದ ಶಿಷ್ಯರಿಗೆ “ಇದು ಲಿಂಗದ ಬೀಡು, ಮುಕ್ತಿಯ ಕ್ಷೇತ್ರ, ಸಿದ್ಧರಾಮ ಜನಿಸುವ ಸ್ಥಳ” ಎಂದು ಹೇಳಿ ಗ್ರಾಮ ಪ್ರವೇಶಿಸುತ್ತಾನೆ. ಸುಗ್ಗಲೆಗೆ ನಮಸ್ಕರಿಸಿ ‘ನಿಮ್ಮ ಉದರದಲ್ಲಿ ಶಿವಯೋಗಿ ಜನಿಸುತ್ತಾನೆ’ ಎಂದು ಹೇಳುತ್ತಾನೆ. ಮುಂದೆ ಸಿದ್ಧರಾಮ ಉದಯಿಸಿದ, ಗೌರಿ ಧರೆಗೆ ಬಂದು ಮಗುವಿಗೆ ಮೊಲೆಯುಣಿಸಿ, ತೂಗಿ ಸಿದ್ಧರಾಮ ಎಂದು ಹೆಸರಿಟ್ಟು ಕೈಲಾಸಕ್ಕೆ ತೆರಳುತ್ತಾಳೆ. ಎಚ್ಚರಾದ ಸುಗ್ಗಲೆ ಕೂಸಿಗೆ ಧೂಳಿಮಾಕಾಳ ಎಂದು ಹೆಸರಿಟ್ಟರು. ಸಿದ್ಧರಾಮ ದನ ಕಾಯುವ ಕೆಲಸಕ್ಕೆ ಹೋಗುತ್ತಾನೆ. ಮರದ ಕೆಳಗೆ ಮಣ್ಣಿನ ಲಿಂಗವನ್ನು ಮಾಡಿ ಪೂಜೆಯನ್ನು ಮಾಡುತ್ತಿರುತ್ತಾನೆ.

ಒಂದು ದಿನ ಶಿವ ಪ್ರತ್ಯಕ್ಷನಾಗಿ ಸಿದ್ಧರಾಮನಿಗೆ ಬೆಳಸಿಯನ್ನು ಕೊಟ್ಟು ತಾನು ಶ್ರೀಶೈಲ ಮಲ್ಲಿಕಾರ್ಜುನ, ಹಸಿವಾಗಿದೆ ಎಂದು ಊಟ ತರಲು ತಿಳಿಸುತ್ತಾನೆ. ಸಿದ್ಧರಾಮ ಮನೆಗೆ ಹೋಗಿ ಊಟ ತರವಷ್ಟರಲ್ಲಿ ಶಿವ ಮಾಯವಾಗಿರುತ್ತಾನೆ. ಶಿವನ ಹುಡುಕಾಟದಲ್ಲಿ ಸಿದ್ಧರಾಮನನ್ನು ಶ್ರೀಶೈಲಕ್ಕೆ ಹೊರಟಿದ್ದ ಪರಿಷೆಯರು ಮಲ್ಲಿಕಾರ್ಜುನನನ್ನು ತೋರಿಸುವುದಾಗಿ ಕರೆದುಕೊಂಡು ಹೋಗುತ್ತಾರೆ. ಅಲ್ಲಿಯ ಮಲ್ಲಯ್ಯನ ಮೂರ್ತಿಯನ್ನು ಒಪ್ಪದ ಸಿದ್ಧರಾಮ ಪರ್ವತದಿಂದ ಜಿಗಿಯಲು ಶಿವ ಪ್ರತ್ಯಕ್ಷನಾಗಿ, ಸಿದ್ಧರಾಮನಿಗೆ ಶ್ರೀಶೈಲವನ್ನೆಲ್ಲಾ ತೋರಿಸಿ ಸೊನ್ನಲಾಪುರಕ್ಕೆ ಬರುವುದಾಗಿ ತಿಳಿಸುತ್ತಾನೆ. ಅಣ್ಣ ಬೊಮ್ಮಣ್ಣನ ಸಹಾಯದಿಂದ ಸಿದ್ಧರಾಮ ದೇವಾಲಯವನ್ನು ನಿರ್ಮಿಸಿ, ಶ್ರೀಶೈಲದ ಲಿಂಗರೂಪದ ಮಲ್ಲಿಕಾರ್ಜುನನನ್ನು ಪ್ರತಿಷ್ಠಾಪಿಸುತ್ತಾನೆ.

ಇಲ್ಲಿಯವರೆಗಿನ ಕಥಾಭಾಗವು ರಾಘವಾಂಕ ಮಹಾಕವಿಯ ಸಿದ್ಧರಾಮ ಚಾರಿತ್ರದಂತೆ ಇದೆ. ಇನ್ನು ಮುಂದೆ ಸಿದ್ಧಮಂಕ ಚರಿತೆ ಕಥಾ ಸನ್ನಿವೇಶ ಬೇರೆಯೇ ಆಗುತ್ತದೆ. ರೋಮಕೋಟಿ ಋಷಿಯು ಮಂಕುಮರುಳ ಹೆಸರಿನಿಂದ ಹುಟ್ಟಿ, ಸಿದ್ಧರಾಮನ ಮಹಿಮೆಯನ್ನು ಕೇಳಿ, ಆತನೇ ನನ್ನ ಗುರುಬಾಗಬೇಕೆಂದೂ, ಅವನಿಗಾಗಿ ಸರೂರು ಗ್ರಾಮದ ಕೋಡುಗಲ್ಲಿನ ಮೇಲೆ ತಪೋಮಗ್ನನಾಗುತ್ತೇನೆಂದು ತಿಳಿಸುತ್ತಾನೆ. ಈತನ ತಪಸ್ಸನ್ನು ನೋಡಲು ಶಿವ ಭೂಲೋಕಕ್ಕೆ ಬರುತ್ತಾನೆ.

ದಾರಿಯಲ್ಲಿ ಶಿವ-ಪಾರ್ವತಿಯರಿಗೆ ಅಸಂಖ್ಯಾತ ಕುರಿ ಮಂದಿಗಳು ಕಾಣಿಸುತ್ತವೆ. ಇವು ಏನೆಂದು ಗಿರಿಜೆ ಕೇಳಲು ಭೃಂಗಿಯ ಶಾಪದಿಂದ ಕಿನ್ನರರು ಕುರಿಗಳಾಗಿದ್ದಾರೆ. ಅವುಗಳನ್ನು ನಿಗ್ರಹಿಸಲಾಗದೆ ಗವಿಯಲ್ಲಿ ಹೊಗಿಸಿದ್ದಾರೆಂದು ಶಿವ ತಿಳಿಸುತ್ತಾನೆ. ಕುಡಿಯೊಕ್ಕಲ ಮಗನಾದ ಹೆಗ್ಗಗೌಡ ತನ್ನ ಹೊಲದಲ್ಲಿ ಮುತ್ತುಗ ಗಿಡದಿಂದ ಆವೃತವಾದ ಹುತ್ತವನ್ನು ನೆಲಸಮ ಮಾಡಲು ಒಳಗಿನಿಂದ ಇರುವೆಯೋಪಾದಿಯಲ್ಲಿ ಕುರಿಗಳು ಬಂದವು. ಶಿವ ಮುದುಕನ ವೇಷದಲ್ಲಿ ಬಂದು ಕುರಿ ಬೇಡಿದ. ಸ್ವಂತ ಸಂಪತ್ತಲ್ಲದ್ದನ್ನೆ ಹೇಗೆ ಕೊಡಲೆಂದು ನಿರಾಕರಿಸಿದನು. ಈ ಸಂಪತ್ತನ್ನೆಲ್ಲ ನೀನೇ ಇಟ್ಟುಕೋ ಎಂದು ಹೇಳಿ, ಕಂಬಳಿ ನೆಯ್ಯುವ   ವಿಧಾನವನ್ನು ತಿಳಿಸಿಕೊಡುತ್ತಾನೆ. ಅದರಂತೆ ಹೆಗ್ಗಗೌಡ ಮಾಡಲು ಶಿವ ಸಂತುಷ್ಟನಾಗಿ ಕುರಿಕಾಯಲು ತಳವಾರನನ್ನು ಕೊಟ್ಟು ಮಾಯವಾಗುತ್ತಾನೆ. ರಕ್ಕಸಿ ಮಗಳೊಂದಿಗೆ ಮೋಹಗೊಂಡ ಹೆಗ್ಗಗೌಡ, ಮೂದಲ ಹಂಡತಿ ಊರಾದ ಕುರಿಬೆಟ್ಟದೂರ ಗ್ರಾಮಕ್ಕೆ ಬಂದು, ತನ್ನಿಂದಾದ ಅಪರಾಧವನ್ನು ಬಂಧುಗಳಿಗೆ ತಿಳಿಸಿದ. ಇಬ್ಬರು ಹೆಂಡಂದಿರೊಂದಿಗೆ ಸಿದ್ಧರಾಮನನ್ನು  ದರ್ಶಿಸಲು ಸೊನ್ನಲಾಪುರಕ್ಕೆ ಪ್ರಯಾಣ ಬೆಳೆಸಿದನು. ಸಿದ್ಧರಾಮನಿಗೆ ದಿನಾಲೂ ಹಾಲು ಬೆಣ್ಣೆ ಕಳಿಸಲು, ಸಿದ್ಧರಾಮ ಹೆಗ್ಗಗೌಡನನ್ನು ತಪಸ್ಸಿಗೆ ಕುಳಿತ ಮರುಳಮಂಕನ ರಕ್ಷಣೆಗಾಗಿ ಕಳಿಸಿಕೊಡುತ್ತಾನೆ.

ಶಿವಶರಣರು ತಮ್ಮ ಕಾಯಕ, ವ್ರತಗಳಿಂದ ಮಹಿಮಾಶಾಲಿಗಳಾದಂತೆ ಸೂಜಿಯೂರಿ ತಲೆಕೆಳಗಾಗಿ ಉಗ್ರ ತಪಸ್ಸು ಮಾಡುತ್ತಿದ್ದ ಮಂಕ ತಂದೆಯನ್ನು ನೋಡಲು, ಉಗ್ರ ತಪಸ್ಸನ್ನು ಪರೀಕ್ಷಿಸಲು ಶಿವ ಬರುತ್ತಾನೆ. ಇತ್ತ ಬಸವಣ್ಣನೊಡನೆ ಬಿಜ್ಜಳನೂ ಕೂಡ ಮಂಕ ಮರುಳನನ್ನು ನೋಡಲು ಬರುತ್ತಾನೆ. ರಕ್ಷಣೆಗಾಗಿ ನಿಂತಿದ್ದ ಹೆಗ್ಗಗೌಡನಿಗೆ ಬಿಜ್ಜಳ ರಾಜ್ಯಕ್ಕೆ ಆಹ್ವಾನಿಸುತ್ತಾನೆ. ಅಲ್ಲಿ ಜಂಗಮದಾಸೋಹ ನಡೆಸುತ್ತಿದ್ದನು. ಈ ಸಮಯದಲ್ಲಿ ಹಾಲಕಂಬಿಗೆ ಸತ್ತ ಕುರಿಯನ್ನು ಕಟ್ಟಿಕೊಂಡು ಕುರುಬರು ರಾಜಧಾನಿಗೆ ಪ್ರವೇಶಿಸಿದರು. ಇದರಿಂದ ಪುರಜನರು ಮುನಿದು ಬಿಜ್ಜಳನಿಗೆ ಕಲ್ಯಾಣಪಟ್ಟಣ ಅಪವಿತ್ರವಾಯಿತೆಂದು ದೂರು ನೀಡಿದರು. ದೂರಿನ ಪ್ರಕಾರ ಹೆಗ್ಗಗೌಡ ಆದಿಯಾಗಿ ಕುರುಬರನ್ನು ಕಲ್ಯಾಣ ಪಟ್ಟಣದಿಂದ ೧೨ ವರ್ಷ ಹೊರಗಿಡಲಾಯಿತು.

ಸೊನ್ನಲಾಪುರಕ್ಕೆ ಅಲ್ಲಮಪ್ರಭುಗಳು ಪ್ರವೇಶ ಮಾಡುತ್ತಾರೆ. ಕೆರೆ ಬಾವಿಯ ಕೆಲಸದಲ್ಲಿ ತೊಡಗಿದ ಸಿದ್ಧರಾಮನನ್ನು ಛೇಡಿಸಿತ್ತಾರೆ. ಅಲ್ಲಮರ ವ್ಯಕ್ತಿತ್ವವನ್ನು ತಿಳಿದ ಸಿದ್ಧರಾಮ ಅವರಿಗೆ ವಂದಿಸಿ ಸರೂರಿಗೆ ಬರುತ್ತಾರೆ. ಘೋರ ತಪಸ್ಸಿನಲ್ಲಿ ತೊಡಗಿದ್ದ ಮಂಕಸಿದ್ಧನನ್ನು ಸಿದ್ಧರಾಮ ಪ್ರಭುದೇವ-ರೇವಣಸಿದ್ದರು ಸ್ಪರ್ಶಿರುವುದೇ ತಡ ಮಂಕಸಿದ್ದ ಸಿದ್ಧರಾಮರಿಗೆ ವಂದಿಸುತ್ತಾನೆ. ಬೇಡಿಕೆ ಏನೆಂದು ಕೇಳಲು ರಾಜಧಾನಿಯ ಹೊರಗಿರುವ ಹೆಗ್ಗಗೌಡನಾದಿಯಾಗಿ ಎಲ್ಲ ಕುರುಬರು ಕಲ್ಯಾಣ ನಗರಕ್ಕೆ ಪ್ರವೇಶಿಸಲು ಕೋರಿಕೊಳ್ಳುತ್ತಾನೆ. ಈ ಕೋರಿಕೆಯನ್ನು ಮನ್ನಿಸಿ ತ್ರಿಪುರಾಂತ ದೇವಾಲಯದಲ್ಲಿ ಸಮಸ್ತ ಪುರಜನ, ಬಿಜ್ಜಳ, ಬಸವಾದಿ ಶರಣರು ನೆರೆಯುತ್ತಾರೆ. ಕುರುಬ ಭಕ್ತರನ್ನು ಹೊರಹಾಕಿದ ಕಾರಣವನ್ನು ಆಲಿಸುತ್ತಾರೆ. ಶಿಷ್ಯರು ಮಾಡುವ ಪಾಪ ಗುರುವಿಗೆ ತಗಲುವಂತೆ, ತಾವು ಮಾಡಿದ ಈ ಅಪಚಾರ ಮಂಕ ತಂದೆಗೆ ನೋಯಿಸಿತೆಂದು ಹೆಗ್ಗಗೌಡನ ೧೨ ಜನ ತಮ್ಮ ಖಡ್ಗಗಳಿಂದ ಶಿರವನ್ನು ಹರಿದುಕೊಂಡರು ಇವರ ಲಿಂಗಭಕ್ತಿಗೆ, ವೃತಕ್ಕೆ ಶಿವ ಮೆಚ್ಚಿ ಮತ್ತೆ ಅವರಿಗೆ ಜೀವದಾನ ಮಾಡಲಾಯಿತು. ನೆರೆದ ಹೆಗ್ಗಗೌಡ ಮತ್ತು ಅವರ ಅನುಯಾಯಿ ಕುರುಬರಿಗೆ ರೇವಣಸಿದ್ಧರ ಆದೇಶದಂತೆ ವಿಭೂತಿಯನ್ನು ಕೊಟ್ಟು “ಇವರು ನಮ್ಮವರು” ಎಂದು ಸಾರಿ ಹೇಳಿದನು. ಸಿದ್ಧರಾಮನ ನೇತೃತ್ವದಲ್ಲಿ ಮಂಕ ತಂದೆಯ ಕೃಪೆಯಿಂದ ಕಲ್ಯಾಣದಿಂದ ಬಹಿಷ್ಕೃತರಾದ ಕುರುಬರು ಕಲ್ಯಾಣ ಪ್ರವೇಶಿಸಿದರು. “ಮಂಕ ತಂದೆ ಗುರು ಸಿದ್ಧರಾಮ ಪರಮಗುರು’ ಎಂಬ ನಿಲುವಿನೊಂದಿಗೆ ಚರಿತ್ರೆ ಮುಗಿಯುತ್ತದೆ.

೨. ಸಿದ್ಧಮಂಕ ಚರಿತೆಯ ಚಾರಿತ್ರಿಕ ಮಹತ್ವ : ಹಾಲುಮತಸ್ಥರ ಚಾರಿತ್ರಿಕತೆಯನ್ನು ೧೨ನೇ ಶತಮಾನದವರೆಗೆ ಒಯ್ಯುವಲ್ಲಿ ಈ ಕೃತಿಯು ಮಹತ್ವದ ಆಕರವಾಗಿದೆ. ಇದರಿಂದ

೧. ಕುರುಬ ಸಮಾಜದಲ್ಲಿ ಸಿದ್ಧಮಂಕ ಸಂಪ್ರದಾಯ ಎಂಬುದು ಅಸ್ತಿತ್ವದಲ್ಲಿರುವುದಕ್ಕೆ ಅಥವಾ ಆ ಸಂಪ್ರದಾಯ ಬರುವುದಕ್ಕೆ ಈ ಚರಿತ್ರೆಯ ಕಥಾನಾಯಕ “ಮಂಕಮರುಳ” ಮೂಲ ವ್ಯಕ್ತಿಯಾಗಿದ್ದಾನೆ.

೨. ಮಂಕ ಮರುಳನಿಂದ ಬಂದ ಸಿದ್ಧಮಂಕ ಸಂಪ್ರದಾಯದ ಕುರುಬರಿಗೆ ಸಿದ್ಧರಾಮ ಪರಮಗುರು.

೩. ಹೆಗ್ಗಗೌಡನ ಮೊದಲ ಪತ್ನಿಯಾದ ಲಿಂಗಮ್ಮನ ೧೩ ಜನ ಮಕ್ಕಳು ಹತ್ತಿಕಂಕಣದವರು ಅಂದರೆ ಕುರುಬರ ಒಳ ಪಂಗಡಗಳಾದ ಉಣ್ಣೆ ಮತ್ತು ಹತ್ತಿ ಕಂಕಣಗಳಲ್ಲಿ ಈ ಚರಿತ್ರೆ ಹತ್ತಿ ಕಂಕಣದವರನ್ನು ಪ್ರತಿನಿಧಿಸುತ್ತದೆ.

೪. ಮೂರೇಣಿಕಂಥೆ ಅಥವಾ ಕಂಥೆ ಮರಿಯಿಂದ ಹಾಲುಮತದವರು ದೇವರಿಗೆ ಅರ್ಪಿಸುವ ಗದ್ದುಗೆ ಕಂಬಳಿಯ ತಯಾರಿಕೆ ಅದರ ಶಾಸ್ತ್ರೀಯ ವಿಧಿವಿಧಾನದಿಂದ ಹಾಲುಮತ ಸಮಾಜದ ಆಚರಣೆಯ ಬಹುಮುಖ್ಯ ಭಾಗವನ್ನು ಈ ಚರಿತೆ ದಾಖಲಿಸಿದೆ.

೫. ಸಿದ್ಧಮಂಕ ಸಂಪ್ರದಾಯದವರನ್ನೆ ಮುಂದೆ ಮಂಕೊಡೆಯರು ಎಂದು ಕರೆದಿರುವುದರ ಬಗ್ಗೆ ಈ ಕೃತಿ ಆಕರ ಸೂಚಿಯಾಗಿದೆ.

೬. ಈ ಚರಿತೆಯಲ್ಲಿ ಬರುವ ತೂಗುಡ್ಡ ಮುದ್ದೇಬಿಹಾಳ ತಾಲೂಕಿನ ಸರೂರಿನಿಂದ ೭ ಕಿ.ಮೀ. ದೂರದಲ್ಲಿದೆ. ಇದೊಂದು ಐತಿಹಾಸಿಕ ಸ್ಥಳ. ಅದೇ ರೀತಿ “ಕಾದೋಡಿ ಒಡೆಯ ಸಿದ್ದ ಬರೆದರ್ಥವ” ಎಂಬ ಕಾವ್ಯೋಕ್ತ ಉಲ್ಲೇಖ ಕಾದೋಡಿ ಈ ಕಾವ್ಯ ನಿರ್ಮಿತಿಯ ಸಿದ್ಧ ಕವಿಯ ಸ್ಥಳವಾಗಿರಬೇಕು. ಹಾಗೆಯೇ ಸಿದ್ಧರಾಮನ ಸೊನ್ನಲಿಗೆ, ಬಸವಣ್ಣನ ಕಲ್ಯಾಣ, ಸಿದ್ಧಮಂಕನ ಸರೂರು. ಇಲ್ಲಿಯ ಮಲ್ಲಿಕಾರ್ಜುನ ದೇವಾಲಯ, ಇಲ್ಲಿಯ ಶಾಸನೋಕ್ತ ಸಿದ್ಧರಾಮ ತಂದೆಯ ಉಲ್ಲೇಖ ಮುಂತಾದವುಗಳು ಹಾಲುಮತ ಸಮಾಜದ ಐತಿಹಾಸಿಕತೆಯನ್ನು ನಿರೂಪಿಸುವುದಕ್ಕೆ ಪೂರಕವಾಗಿವೆ. ಈ ಕಾವ್ಯೋಕ್ತ ಘಟನೆಗಳನ್ನು ಹಿಡಿದು ಗ್ರಾಮ ಚರಿತ್ರೆ ಸ್ಥಳನಾಮ ಅಧ್ಯಯನ, ಆಚರಣೆಗಳ ಮಹತ್ವವನ್ನು ಬಿಡಿಸುತ್ತ ಹೋಗಲು ಈ ಕೃತಿ ನೆರವಾಗುತ್ತದೆ.

೭. ಸಿದ್ಧ ಸಂಪ್ರದಾಯದ ಅಂದರೆ ಭಂಡಾರ ಸಂಸ್ಕೃತಿಯ ಹಾಲುಮತಸ್ಥರು ‘ಶರಣ ಸಂಪ್ರದಾಯ’ಕ್ಕೆ ಅಂದರೆ ವಿಭೂತಿ ಸಂಸ್ಕೃತಿಗೆ ಹೊರಳುವ ಚಿತ್ರಣವನ್ನು ಈ ಕೃತಿ ಪ್ರಕಟಪಡಿಸಿದೆ.

೩. ಸಿದ್ಧಮಂಕ ಚರಿತೆ ಸಾಹಿತ್ಯಸಾಂಸ್ಕೃತಿಕ ಮಹತ್ವ : ಈ ಚರಿತೆ ಬರೆದ ಕವಿಗೆ ಹಿಂದಿನ ಕಾವ್ಯ ಪುರಾಣಗಳ ತಿಳುವಳಿಕೆ ಇರುವುದನ್ನು ಈ ಕೃತಿಯ ಕೆಲವು ಭಾಗಗಳು ತಿಳಿಸುತ್ತವೆ. ಸತ್ತ ಕುರಿಗಳಿಂದ ಕಲ್ಯಾಣ ಅಪವಿತ್ರವಾಯಿತೆಂದು ಹೇಳುವಲ್ಲಿ ಗೌತಮಮುನಿ ಆಕಳನ್ನು ಕೊಂದ ಪ್ರಸಂಗ, ಹಿಟ್ಟಿನ ಕೋಳಿ ಕೊರಳ ಕೊಯ್ದವರಿಗೆ ನರಕ ಪ್ರಾಪ್ತವಾದ ಜನ್ನ ಕವಿಯ ಯಶೋಧರಚರಿತೆಯ ಘಟನೆ, ಹೆಂಡದ ಮಾರಯ್ಯ, ಬೇಡರಕಣ್ಣಪ್ಪನವರ ವಿಪರೀತ ಚರಿತ್ರೆಗಳ ಉಲ್ಲೇಖ ಇಲ್ಲಿಯ ಕವಿಯ ಕಾವ್ಯ ತಿಳುವಲಿಕೆಯ ವಿಸ್ತಾರವನ್ನು ಸೂಚಿಸುತ್ತದೆ. ಹಾಗೆಯೇ ಘಟ್ಟಿವಾಳಯ್ಯ, ಅಜಗಣ್ಣ, ಪಡಿಹಾರಿ ಉತ್ತಣ್ಣ, ಹಡಪದ ಅಪ್ಪಣ್ಣ ಮುಂತಾದ ಶರಣರ ಉಲ್ಲೇಖಗಳು ಸಿದ್ಧರಸ ಡಣಾಯಕ, ಬಲದೇವ ಡಣಾಯಕ, ಸೊಡ್ಡಳ ಬಾಚರಸ, ಬಸವ ಡಣಾಯಕರಂಥ ಆಡಳಿತ ವ್ಯಕ್ತಿಗಳ ಉಲ್ಲೇಖ ವಿಶೇಷವಾಗಿ ಅರವಟ್ಟಿಗೆ, ಛತ್ರ, ಅರವತ್ನಾಲ್ಕು ಶೀಲ ಸಂಪನ್ನರು,ಕುರುಬ ಸಮಾಜದ ಕಂಬಳಿ ಕಂಥೆ, ಕಂಬಳಿ ಗದ್ದುಗೆ, ಕಂಬಳಿ ನೇಯ್ಗೆ ಉಣ್ಣೆ ಕತ್ತರಿಸುವ ಪದ್ಧತಿ, ನೂಲುವ ಕ್ರಮ ಇವೆಲ್ಲ ಸಾಂಸ್ಕೃತಿಕ ಆಯಾಮಗಳಿಗೆ ಬೆಳಕಿಂಡಿಯಂತಿದೆ ಸಿದ್ಧಮಂಕಚರಿತೆ.

ಒಟ್ಟಿನಲ್ಲಿ ಹಾಲುಮತ ಸಾಂಸ್ಕೃತಿಕ ಅಧ್ಯಯನ ಆಕರಗಳಲ್ಲಿ ಸಿದ್ಧಮಂಕ ಚರಿತೆ ಪುರಾಣ ಕಾವ್ಯಗಳಿಗಿಂತ ಚಾರಿತ್ರಿಕ ಕೃತಿಯಾದ ಕಾರಣ ಇದಕ್ಕೆ ಪ್ರಥಮ ಆದ್ಯತೆ ದೊರೆಯುತ್ತದೆ. ಯಾಕೆಂದರೆ ಹಾಲುಮತ ಮಂಕ ಸಂಪ್ರದಾಯ ಹಾಗೂ ಶಾಂತಮುತ್ತಯ್ಯ ಸಂಪ್ರದಾಯದವರಿಗೆ ಆದ ಘರ್ಷಣೆಗಳು, ಗುಡಿ ದೇವಾಲಯಗಳ ಹೆಸರಿನ ಸಂಕೀರ್ಣತೆಗಳು ನಡೆದ ಬಗ್ಗೆ ತಾಮ್ರಶಾಸನ, ದಾಖಲೆ, ಹಾಲುಮತ ಮಹಾಸಭೆಯ ವರದಿಗಳು ಉಲ್ಲೇಖಿಸುತ್ತವೆ. ಈ ಉಲ್ಲೇಖಿತ ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ದೃಷ್ಟಿಯಿಂದ ಈ ಕಾವ್ಯ ಕೈ ದೀವಿಗೆಯಾಗಿದೆ.