ಭಾರತದ ನೂರಾರು ಸಮುದಾಯಗಳ ಸಂಸ್ಕೃತಿಗಳ ವೈವಿಧ್ಯಮಯವಾಗಿರುವುದನ್ನು ಇತಿಹಾಸದಿಂದ ತಿಳಿಯಬಹುದು. ಒಂದೊಂದು ಸಮುದಾಯದವರಿಗೂ ಅವರದೇ ಆದ ಐತಿಹಾಸಿಕ, ಚಾರಿತ್ರಿಕ, ಸಾಂಸ್ಕೃತಿಕ, ಸಾಹಿತ್ಯಿಕ ಹಿನ್ನಲೆಯನ್ನು ಕಾಣಬಹುದು. ಇವುಗಳಲ್ಲಿ ಕುರುಬ ಸಮುದಾಯವು ತನ್ನದೇ ಆದ ಮಹತ್ವವನ್ನು ಪಡೆದಿದೆ. ಧರ್ಮ, ಇತಿಹಾಸ, ಆಚರಣೆ, ಸಂಪ್ರದಾಯಗಳಿಗೆ ಸಂಬಂಧಿಸಿದಂತೆ ತನ್ನದೆ ಆದ ಮೌಖಿಕ ಪರಂಪರೆಯನ್ನು ಕುರುಬ ಸಮುದಾಯವು ಬೆಳೆಸಿಕೊಂಡು ಬಂದಿದೆ. ಅವುಗಳಲ್ಲಿ ಮೈಲಾರಲಿಂಗನ ಕಾವ್ಯ, ಏಳು ಕೊಳ್ಳದ ಎಲ್ಲಮ್ಮನ ಕಾವ್ಯ, ಮಾಳಿಂಗರಾಯನ ಕಾವ್ಯ ಮೊದಲಾದವು ಮೌಖಿಕ ಪರಂಪರೆಯ ಕಾವ್ಯಗಳಾಗಿವೆ. ಈ ಕಾವ್ಯಗಳ ಸಾಲಿಗೆ ಸೇರುವ ಮಹತ್ವದ ಮೌಖಿಕ ಕಾವ್ಯವಾಗಿದೆ ‘ಜನಪದ ಹಾಲುಮತ ಮಹಾಕಾವ್ಯ’.

ಮಹಾಕಾವ್ಯದ ಸಂಪಾದಕ

ಜಾನಪದ ವಿದ್ವಾಂಸರಾದ ವೀರಣ್ಣ ದಂಡೆಯವರು ಜನಪದ ಹಾಲುಮತ ಮಹಾಕಾವ್ಯವನ್ನು ಅಚ್ಚುಕಟ್ಟಾಗಿ ಸಂಗ್ರಹಿಸಿದ್ದಾರೆ. ಮೊದಲು ಇವರು ಬಿ.ಬಿ. ಹೆಂಡಿಯವರ ಜಾನಪದ ಯೋಜನೆಯಲ್ಲಿ ಸಹಾಯಕ ಸಂಶೋಧಕರಾಗಿದ್ದರು. ಆ ಸಮಯದಲ್ಲಿ ಬಿ.ಬಿ. ಹೆಂಡೆಯವರೊಂದಿಗೆ ಈ ಕಾವ್ಯದ ಸಂಗ್ರಹ ಸಂಪಾದನೆಯಲ್ಲಿ ತೊಡಗಿದ್ದರು. ನಂತರ ೧೯೯೬ರಲ್ಲಿ ಹೆಚ್.ಜೆ.ಲಕ್ಕಪ್ಪಗೌಡರ ಸಹಕಾರದಿಂದ ಈ ಮಹಾಕಾವ್ಯದ ಸಂಗ್ರಹ, ಸಂಪಾದನೆಯನ್ನು ಕೈಗೊಂಡರು. ಈ ಕಾವ್ಯವನ್ನು ಹಾಡುವ ಸಿದ್ಧಪ್ಪ ಮೇಟಿಯವರನ್ನು ಪತ್ತೆ ಹಚ್ಚಲು ತಿಂಗಳಾನುಟ್ಟಲೆ ಅಲೆದಾಡಿದರು. ಕೊನೆಗೂ ಅವರನ್ನು ಪತ್ತೆ ಹಚ್ಚಿ ಅವರಿಂದ ಸುದೀರ್ಘವಾದ ಕಾವ್ಯವನ್ನು ಸತತವಾಗಿ ಹಾಡಿಸುತ್ತ ಕ್ಯಾಸೆಟ್‌ಗಳಲ್ಲಿ ಸಂಗ್ರಹಿಸಿದರು. ಮುದ್ರಿಸಲು ವರ್ಷಾನುಗಟ್ಟಲೆ ಶ್ರಮಿಸಿ, ಲೋಪದೋಷಗಳನ್ನು ತಿದ್ದಿ, ಅಚ್ಚುಕಟ್ಟಾಗಿ ಜೋಡಿಸಿದರು. ಅವರು ಪರಿಶ್ರಮ, ಶ್ರದ್ಧೆ, ಹಸ್ತಪ್ರತಿಯೊಂದಿಗಿನ ನಿರಂತರವಾದ ಒಡನಾಟ, ಹಾಡುಗಾರನೊಂದಿಗಿನ ಸತತ ಸಂಪರ್ಕಗಳಿಂದ ಕಾವ್ಯವನ್ನು ಅರಿತುಕೊಂಡರು. ಏಳುನೂರು ಪುಟಗಳ ವ್ಯಪ್ತಿಯ ಈ ಮಹಾಕಾವ್ಯವನ್ನು ೨೦೦೦ದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದಿಂದ ಮುದ್ರಿಸಲಾಗಿದೆ. ಶಿವ ಸ್ವರೂಪನಾದ ಬೀರಪ್ಪನ ಅಸಾದೃಶ್ಯ ವ್ಯಕ್ತಿತ್ವವನ್ನು ಮಾಳಿಂಗರಾಯನ ಗುರುಭಕ್ತಿಯನ್ನು ಮಾಯವ್ವಳ ಸೋದರ ವಾತ್ಸಲ್ಯದ ಅಂತಃಕರಣವನ್ನು ಪ್ರಮುಖವಾಗಿ ಈ ಕಾವ್ಯ ಪ್ರತಿಪಾದಿಸುತ್ತದೆ.

ಮಹಾಕಾವ್ಯದ ಹಾಡುಗಾರ.

ಸಿದ್ದಪ್ಪ ಮೇಟಿಯವರು ಈ ಕಾವ್ಯದ ಹಾಡುಗಾರರು. ಇವರ ಊರು ಸೈದಾಪುರ. ಕಲಬುರ್ಗಿ ಜಿಲ್ಲೆಯ ಶಹಪುರ ತಾಲೂಕಿನ ಸಣ್ಣ ಹಳ್ಳಿ. ಇವರದು ಒಕ್ಕಲು (ಕೃಷಿಕ) ಮನೆತನ. ಮನೆಯ ಆರ್ಥಿಕ ತೊಂದರೆಯಿಂದಾಗಿ ತಮ್ಮ ತಾರುಣ್ಯದಲ್ಲಿ ದುಡಿಯಲು ಸೊಲ್ಲಾಪುರಕ್ಕೆ ಹೋಗಿ ಮಿಲ್ಲಿಗೆ ಸೇರಿದರು. ಅಲ್ಲಿಯೇ ಅವರು ಸಾಯಬಣ್ಣ ಕಲ್ಲಪ್ಪ ವಗಮೋಡಿ ಅವರಿಂದ ಈ ಮಹಕಾವ್ಯವನ್ನು ಹಾಡಲು ಕಲಿತದ್ದು. ದಿನವೂ ಮಿಲ್ಲಿಗೆ ಹೋಗುವಾಗ-ಬರುವಾಗ ಸಾಯಬಣ್ಣ ಹಾಡುತ್ತ ಕಲಿಸಿ ಗುರುವಾದ. ಸಿದ್ದಪ್ಪ ಅದನ್ನು ಕಲಿಯುತ್ತ ಶಿಷ್ಯನಾದ. ಸುಮಾರು ಎರಡ್ಮರು ವರ್ಷಗಳಲ್ಲಿ ಸಿದ್ದಪ್ಪ ಕಾವ್ಯವನ್ನು ಸ್ವತಂತ್ರವಾಗಿ ಹಾಡುವಷ್ಟು ತಯಾರಾದರು. ಆ ಸಮಯದಲ್ಲಿ ಅವರಿಗೆ ವಿವಾಹವಾಗಿ ಹೆಂಡತಿಯನ್ನು ಕಟ್ಟಿಕೊಂಡು ತಮ್ಮೂರಿನಲ್ಲಿಯೇ ಒಕ್ಕಲುತನ ಮಾಡುತ್ತಾ, ತಮ್ಮದೇ ಒಂದು ಗುಂಪನ್ನು ಕಟ್ಟಿಕೊಂಡು ಕಾವ್ಯವನ್ನು ಹಾಡುತ್ತಲೇ ಊರೂರು ಸುತ್ತಿದರು. ಅವರು ಕಾವ್ಯ ಹಾಡುವುದರಿಂದ ಹಣ ಗಳಿಸಲಿಲ್ಲ. ಬದಲಾಗಿ ಜನರಿಂದ ಮರ್ಯಾದೆ ಗಳಿಸಿದರು. ಇಂದಿಗೂ ಅಲ್ಲಿನ ಸುತ್ತಮುತ್ತಲಿನ ಊರುಗಳಲ್ಲೆಲ್ಲ ಅವರ ಶಿಷ್ಯರ ಸಂಖ್ಯೆ ಅಧಿಕವಾಗಿದೆ. ಸಂಪಾದಕರು ಈ ಕಾವ್ಯವನ್ನು ಸಂಗ್ರಹಿಸುವ ಸಮಯದಲ್ಲಿ ಸಿದ್ದಪ್ಪನವರು ಉತ್ತಮ ಸಲಹೆ, ಸಹಕಾರ ನೀಡುವ ಮೂಲಕ ಅದು ಪ್ರಕಟಗೊಳ್ಳಲು ಕಾರಣೀಭೂತರಾದರು. ನಮ್ಮ ನಡುವೆ ಇರುವ ಸಿದ್ದಪ್ಪರಿಗೆ ಈಗ ೯೦ರ ಪ್ರಾಯ. ಅವರಿಗೆ ಜಾನಪದ ಅಕಾಡಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿಗಳು ಬಂದಿವೆ.

ಮಹಾಕಾವ್ಯದ ಸ್ವರೂಪ

ಜನಪದ ಹಾಲುಮತ ಮಹಾಕಾವ್ಯದ ಅಧಿಕೃತವಾಗಿ ಹಾಲುಮತದ ಬಗ್ಗೆ ಮಾಹಿತಿಯನ್ನು ಒದಗಿಸುವ ಮೂಲ ಆಕರ. ಮೌಖಿಕ ಪರಂಪರೆಯಲ್ಲಿ ದೊರೆತ ಈ ಕೃತಿ ಒಂದು ಜನಪದ ಪುರಾಣ ಕೃತಿ. ಸುದೀರ್ಘವಾಗಿರುವ ಇಡೀ ಕೃತಿಯ ಕಥೆಗೆ ಪೌರಾಣಿಕ ನೆಲೆಗಳೇ ಒಂದು ಅಲೌಕಿಕ ಹಾಸನ್ನು ಒದಗಿಸುತ್ತವೆ. ಪ್ರಸ್ತುತ ಈ ಕೃತಿ ಸಂಪೂರ್ಣವಾಗಿ ಡೊಳ್ಳಿನ ಹಾಡಿನ ರೂಪದಲ್ಲಿರುವ ಪದ್ಯಕೃತಿ. ಅಂಶಗಣಾನ್ವಯವಾದ ಇಲ್ಲಿನ ಸಾಲುಗಳು ಹಿಗ್ಗುತ್ತ-ಕುಗ್ಗುತ್ತ, ಪುನರಾವರ್ತನೆಯಾಗುತ್ತ ಮುಂದೆ ಸಾಗುವುದನ್ನು ಕಾಣಬಹುದು. ಈ ಕಾವ್ಯದಲ್ಲಿ ವಸ್ತುವಿನ ಸಂಯೋಜನೆಯನ್ನು ಕುರಿತು ಹೇಳುವುದಾದರೆ ಮೊದಲ ಅಧ್ಯಾಯ ಕೈಲಾಸದ ವಾಡಿಕೆಯಿಂದ ಹಿಡಿದು ಕೊನೆಯದು ಇತರ ಶರಣರ ವೃತ್ತಾಂತಗಳು. ಒಟ್ಟು ೧೪ ಅಧ್ಯಾಯಗಳು ಈ ಕಾವ್ಯದಲ್ಲಿವೆ. ಈ ಅಧ್ಯಾಯಗಳಲ್ಲಿ ಹಾಲುಮತ ಸಮುದಾಯ, ದೈವೀ ಪುರುಷರಾದ ಬೀರಪ್ಪನ ಪವಾಡ ಲೀಲೆಗಳನ್ನು, ಭರಮದೇವನ ಶಿವನೆಡೆಗಿನ ಭಕ್ತಿಯನ್ನು, ಮಾಳಿಂಗರಾಯನ ಬೀರಪ್ಪನೆಡೆಗಿನ ಭಕ್ತಿಯನ್ನು, ರೇವಣಸಿದ್ಧ, ಮಾಯವ್ವ, ಕಮಳಾದೇವಿ, ಕನ್ನಿಕಾಮವ್ವ ಮುಂತಾದವರ ಕುರಿತಾದ ಸಂಗತಿಗಳನ್ನು ಕಾವ್ಯ ಸವಿಸ್ತಾರವಾಗಿ ವಿವರಿಸಿದೆ.

ಈ ಕಾವ್ಯವು ಬೀರಪ್ಪನಂಥ ಗುರು, ಮಾಳಿಂಗರಾಯನಂಥ ಶಿಷ್ಯ, ಖ್ಯಾಮಣ್ಣನಂಥ ಭಕ್ತ. ಇದರಿಂದ ನಮ್ಮಲ್ಲಿ ಭವ್ಯತೆಯ ಭಾವ ಮೂಡುತ್ತದೆ. ಹಾಗೆಯೇ ಪಾರ್ವತಿ, ಕಮಳಾದೇವಿ, ಸೂರಮ್ಮದೇವಿ, ಮಾಯವ್ವ, ಅಕ್ಕವ್ವ, ಕನ್ನಿಕಾಮವ್ವ-ಇವರು ಕ್ರಮವಾಗಿ ದೈವ, ಪುರಾಣ, ತಾಯಿ, ಸೋದರಿ, ಪ್ರೇಯಸಿಯ ರೂಪಗಳಿಗೆ ಮಾದರಿಗಳಾಗಿದ್ದಾರೆ. ಇಲ್ಲಿಯ ಸನ್ನಿವೇಶಗಳು ಪೌರಾಣಿಕ ಮತ್ತು ಜಾನಪದ ಆಶಯಗಳಿಂದ ತುಂಬಿವೆ. ಕಥೆಯು ಸಾಗಿದಂತೆ ಒಮ್ಮೊಮ್ಮೆ ಪೌರಾಣಿಕ ಆವರಣ ಪ್ರವೇಶಿಸಿದರೆ, ಮರುಗಳಿಗೆಯೇ ಸಾಮಾನ್ಯ ಜನಪದ ಕ್ಷೇತ್ರಕ್ಕೆ ಪ್ರವೇಶಿಸುತ್ತದೆ. ಹೀಗೆ ಕಾವ್ಯದುದ್ದಕ್ಕೂ ಸಾಮಾನ್ಯ ಜನರ ಜೀವನದ ಘಟನೆಗಳನ್ನು ಬಿತ್ತರಿಸುತ್ತಲೇ ಪೌರಾಣಿಕ ಅಂಗಳಕ್ಕೆ ಏರಿ, ಕೇಳುಗರಲ್ಲಿ ಭಕ್ತಿ, ನಿಷ್ಠೆಗಳನ್ನು ತುಂಬುತ್ತದೆ.

ಮಹಾಕಾವ್ಯದ ಕಥಾವಸ್ತು

ಕಥೆಗೆ ಪೀಠಿಕೆ ಹಾಕುವ ಮುನ್ನವೇ ಬ್ರಹ್ಮಾಂಡದ ಸ್ವರೂಪವನ್ನು ನಿರೂಪಿಸಲಾಗುತ್ತದೆ. ಮೊದಲಿಗೆ ಭೂಮಂಡಲವೇ ನೀರೆ ನಿರಂಕಾರವಾಗಿತ್ತು. ನೀರಿನ ಮೇಲೊಂದು ಗುರುಳಿ ಎದ್ದು, ರುಂಡವಾಗಿ ಕೈ-ಕಾಲು ರಕ್ತ-ಮಾಂಸ, ವಿದ್ಯಬುದ್ಧಿಗಳು ಬಂದ ಅಖಂಡೇಶ್ವರ ಸೃಷ್ಟಿಯಾದನು. ಅವನು ತನ್ನ ಎಡ ಪಕ್ಕೆಲುಬುಗಳಿಂದ ಆದಿಶಕ್ತಿಯನ್ನು ನಿರ್ಮಿಸಿದನು. ಆದಿಶಕ್ತಿಯ ಗರ್ಭದಿಂದ ರಕ್ಕಸರ ಜನನವಾಯಿತು. ಮುಂದೆ ಬ್ರಹ್ಮ, ವಿಷ್ಣು, ರುದ್ರ, ಮಹೇಶ್ವರ, ಮಹದೇವ, ಶಾಂತಮುತ್ತಯ್ಯನ ಜನನಗಳಾದವು. ಈ ಶಾಂತಮುತ್ತಯ್ಯ ಐದುಮಂದಿ ರಕ್ಕಸರನ್ನು ಕುರಿಗಳನ್ನಾಗಿಸಿದನು. ಮತ್ತೊಬ್ಬ ರಕ್ಕಸನನ್ನು ಠಗರು ಮಾಡಿದನು. ಕುರಿಯ ಉಣ್ಣೆಯನ್ನು ತೆಗೆದು ಕಂಬಳಿ ತಯಾರಿಸಲು ಡೊಳ್ಳಸುರನೆಂಬ ದೈತ್ಯನ ಶಿರ ಒಡೆದು ಅವನ ಅಂಗಾಂಗಗಳಿಂದ ನೇಯಲು ಬೇಕಾದ ಸಾಮಗ್ರಿಗಳನ್ನು ತಯಾರಿಸಿಕೊಂಡನು. ಹಾಲುಮತದ ಹಿರಿಯ ಶಾಂತಮುತ್ತಯ್ಯನ ಜನನವು ತ್ರಿಮೂರ್ತಿಗಳ ಜೊತೆಗೆ ಆಗಿರುವುದನ್ನು ಕಾವ್ಯ ತಿಳಿಸುತ್ತದೆ. ಕುರುಬ ಸಮುದಾಯಕ್ಕೆ ಸಂಬಂಧಿಸಿದ ಕುರಿಗಳ ಸೃಷ್ಟಿಕರ್ತನು, ಕಂಬಳಿ, ಡೊಳ್ಳಿನ ತಯಾರಕನು ಶಾಂತಮುತ್ತಯ್ಯ ಕುರಿಗಳನ್ನು ಕಾಯುತ್ತ ಬೇಸರವಾದ ಸಮಯದಲ್ಲಿ ಸರದಿಯಂತೆ ಬ್ರಹ್ಮ, ವಿಷ್ಣು, ಶಿವ ಕುರಿಗಳನ್ನು ಕಾಯ್ದರು. ಶಿವನಿಗೆ ಬೇಸರವಾಗಿ ತನ್ನ ಹೆಂಡತಿ ಪಾರ್ವತಿಯನ್ನು ಕುರಿಕಾಯಲು ಕಳುಹಿಸಿದನು. ಆಕೆಗೂ ಬೇಸರವಾಗಿ ಕುರುಗಳನ್ನು ಸ್ವರ್ಗದಿಂದ ಭೂಲೋಕಕ್ಕೆ ಹೊಡೆತಂದು ಹುತ್ತದಲ್ಲಿ ಹುದುಗಿಸಿದಳು. ಇಲ್ಲಿ ಭೂಮಿಯ ಮೊದಲು ಪಾದಾರ್ಪಣೆ ಮಾಡಿದಾಕೆ ಹೆಣ್ಣು-ಪಾರ್ವತಿ. ಮತ್ತು ಪ್ರಾಣಿ ಸಂತತಿಯಾಗಿ ಭೂಮಿಯಲ್ಲಿ ಕಾಣಿಸಿಕೊಂಡು ಭೂಗರ್ಭದಲ್ಲಿ ಕುರಿಗಳು ವಾಸವಾದವು ಎಂಬ ಸಂಗತಿಯನ್ನು ಪ್ರತಿಪಾದಿಸಲು ಪ್ರಯತ್ನಿಸಲಾಗಿದೆ.

ಮಾನವ ಸೃಷ್ಟಿಗೆ ಸಂಬಂಧಿಸಿದಂತೆ ಭೂಲೋಕಕ್ಕೆ ಬಂದ ಪಾರ್ವತಿಯು ಮಣ್ಣು ಮತ್ತು ಮೊಲೆಯ ಹಾಲಿನಿಂದ ಬೊಂಬೆ ಮಾಡಿದಳು. ಶಿವನು ಜೀವ ತುಂಬಿದನು. ಅವಕ್ಕೆ ಮುದ್ದವ್ವ-ಮುದ್ದುಗೊಂಡನೆಂದು ಹೆಸರಿಟ್ಟರು. ಇವರೇ ಹಾಲುಮತ ಸಮುದಾಯದ ಮೂಲ ಪುರುಷರು ಎಂದು ಹೇಳಲಾಗುತ್ತದೆ.

ಈ ಕಾವ್ಯದ ನಾಯಕನಾದ ಬೀರಪ್ಪನು ಶಿವನ ವರಪ್ರಸಾದದಿಂದ ಜನಿಸಿದವನಾಗಿದ್ದು ಅಥವಾ ಶಿವನೇ ಬೀರಪ್ಪ ಅವತಾರಿಯಾಗಿದ್ದನ್ನು ಈ ಕಾವ್ಯ ಸುಂದರವಾಗಿ ಚಿತ್ರಿಸಿದೆ. ಬೀರಪ್ಪ ಭರಮದೇವ-ಸೂರಮ್ಮದೇವಿಯವರ ಸುಪುತ್ರ. ಹುಟ್ಟಿನಿಂದಲೇ ಬೀರಪ್ಪ ಪವಾಡಪುರುಷನಾಗಿದ್ದನ್ನು ಕಾಣಬಹುದು. ತಾಯಿ ಗರ್ಭದಲ್ಲಿರುವಾಗಲೇ ಸೋದರಮಾವ ಕಾಳಿನಾರಾಯಣ ವಿಷದ ಬುತ್ತಿ, ಸೀರೆ ಕುಪ್ಪಸಗಳನ್ನು ಕಳುಹಿಸಿದ್ದು ಅವನ್ನು ಧರಿಸದಿರುವಂತೆ ತಾಯಿಗೆ ತಿಳಿಸುತ್ತಾನೆ. ಜನನ ಕಾಲಕ್ಕೆ ಸೂಲಗಿತ್ತಿಯರು ಬೀರಪ್ಪನನ್ನು ಕೊಲ್ಲಲು ಬಂದಾಗ ತಾಯಿಗರ್ಭದಿಂದ ಹೊರಗೆ ಹಾರಿ ನಿಲ್ಲುತ್ತಾನೆ. ಅದನ್ನು ಈ ಕಾವ್ಯ ಹೀಗೆ ಹೇಳುತ್ತದೆ.

ಮೂರುಮಂದಿ ನಾರ್ಯಾರಿಗ ಕಣ್ಣುಕಟ್ಟಿದಂಗಾಯಿತ
ಕೋಲಮಿಂಚು ಹೊಡೆದಾಗ ಕಣ್ಣು ಕಟ್ಟಿದಂಗಾಯಿತ
ಕಣ್ಣು ಕಟ್ಟಿದಂಗಾಯಿತ ತಾಯಿ ಒಡಲಲ್ಲಿ ಅಡಗ್ಯಾನ
ಸೂಲಗಿತ್ತಿ ಸುಬ್ಬವ್ವಗ ಬಾಯಿಮ್ಯಾಲ ಒದ್ದಾನ
ನಡುವ ಹಿಡಿಯ ನಾಗವ್ವನ ಟೊಂಕದ ಮ್ಯಾಲ ಒದ್ದಾನ
ಸುದ್ದಿವೈಯ್ಯ ಸಿದ್ದವ್ವಗ ಬೆನ್ನಿನ ಮ್ಯಾಲ ಒದ್ದಾನ

ಹೀಗೆ ಬೀರಪ್ಪನ ಹುಟ್ಟಿನಿಂದಲೇ ದುಷ್ಟ ಶಿಕ್ಷಕನಾಗಿ ಶಿಷ್ಟರ ರಕ್ಷಕನಾಗಿ ಲೋಕದ ಒಳಿತಿಗಾಗಿಯೇ ಜನಿಸಿರುವುದನ್ನು ಕಾಣಬಹುದು. ಸೋದರಿ ಸೂರಮ್ಮದೇವಿಯ ಮಗನಿಂದ ತನಗೆ ಕೆಡುಕಾಗುತ್ತದೆಂದು ಕಾಳಿನಾರಾಯಣ ತಿಳಿದಿದ್ದ. ಹಾಗಾಗಿ ಸೂರಮ್ಮದೇವಿ ಭಾವ ಭರಮದೇವನಿಗೆ ಈ ಮಗುವಿನಿಂದ ಕೆಡುಕಾಗುತ್ತದೆಂದು ಸುಳ್ಳು ಜ್ಯೋತಿಷ್ಯ ಹೇಳಿ ಬೀರಪ್ಪ ಹುಟ್ಟಿದ ೧೩ನೆ ದಿನಕ್ಕೆ ಕಾಡಿಗೆ ಬಿಡಬೇಕೆಂದು ತಿಳಿಸಿದನು. ನಂತರ ದೂರ್ತರ ಸಹಕಾರದಿಂದ ಮಗುವನ್ನು ಕೊಲ್ಲಿಸಲು ಪ್ರಯತ್ನಿಸಿದನು. ಆದರೆ ಪವಾಡ ಪುರುಷನಾದ ಬೀರಪ್ಪನಿಗೆ ಯಾವ ತೊಂದರೆಯೂ ಆಗಲಿಲ್ಲ. ಕಾಡಿನಲ್ಲಿ ಮಗು ಅಳುವುದನ್ನು ಕೇಳಿದ ಪಾರ್ವತಿ-ಪರಮೇಶ್ವರರು ತೊಟ್ಟಿಲು ಮಾಡಿ ಮರದ ಕೊಂಬೆಗೆ ಕಟ್ಟಿ ಜೇನುಹುಳುಗಳನ್ನು ಸೃಷ್ಟಿಸಿ ಮಗುವಿನ ಬಾಯಲ್ಲಿ ಬೀಳುವಂತೆ ಮಾಡಿದರು. ದಿಬ್ಬರಾಯನ ಸಾಕು ಮಗಳಾದ ಮಾಯವ್ವ ತನ್ನ ಹಿರಿಯ ಸೋದರಿ ಅಕ್ಕವ್ವಳೊಂದಿಗೆ ಕುರಿ ಮೇಯಿಸುವಾಗ ತೊಟ್ಟಿಲಲ್ಲಿ ಅಳುವ ಮಗುವನ್ನು ಕಂಡರು.ಮಗುವನ್ನು ಮರದ ಕೊಂಬೆಯಿಂದ ಇಳಿಸಿಕೊಳ್ಳಲು ಅಕ್ಕವ್ವ ಪ್ರಯತ್ನಿಸಿದಳು. ಆದರೆ ಅವಳಿಂದ ಮರವೇರುವುದು ಆಗಲಿಲ್ಲ. ಆಗ ಮಾಯವ್ವಳು ಮರ ಏರಲು ಅಡ್ಡಿಪಡಿಸಿದ ಇರುವೆ, ಗಿಳಿ, ನಾಗರಹಾವುಗಳಿಗೆ ಚಾಜನೀಡಿ ಮಗುವನ್ನು ಮರದಿಂದ ಇಳಿಸಿಕೊಂಡರು. ಅಕ್ಕ-ತಂಗಿಯರಲ್ಲಿ ಕೂಸು ತನಗೆ ಬೇಕೆಂದು ಜಗಳ ಪ್ರಾರಂಭವಾಯಿತು. ಅಲ್ಲಿಗೆ ಬಂದ ಎಳ್ಳಿಗುಂಪಿ ರಾಯಣ್ಣ ಸ್ನಾನಮಾಡಿ ತೊಟ್ಟಿಲನ್ನು ಸುತ್ತಿ ಯಾರ ಎದಿಬದಿ ಜಿಗಿತು, ಮೊಲೆಯಲ್ಲಿ ಹಾಲು ಚಿಮ್ಮುವವೋ ಅವರಿಗೆ ಕೂಸು ಸೀರಿದ್ದೆಂದನು. ಪರೀಕ್ಷಿಸಲಾಗಿ ಮಾಯವ್ವಳಲ್ಲಿ ಬಾಣಂತಿ ಕಳೆ ಬಂದಿತು. ಆಗ ಎರಳಿಗುಂಪಿ ರಾಯಣ್ಣನು ಜನಕ ತಮ್ಮನ ಮಾಡಿ ಮನಕೆ ಮಗನ ಮಾಡಿ ಕೂಸಿನ ಸಲುವೆಂದು ಮಾಯವ್ವಳ ಉಡಿಯಲ್ಲಿ ಕೂಸನ್ನು ಹಾಕಿದನು.

ಬಾಲ್ಯದಲ್ಲಿ ತುಂಟಾಟಗಳಿಂದಲೇ ಬೀರಣ್ಣನು ತನ್ನ ಅಕ್ಕಳಲ್ಲಿ ಬೆಳೆಯ ತೊಡಗಿದನು. ಅವನ ಬಾಲ್ಯವು ವಿನೋದಗಳಿಂದ ತುಂಬಿದ್ದು ಜೊತೆಗೆ ಪವಾಡಗಳನ್ನು ಕಾಣಬಹುದು. ಮಾಯವ್ವಳು ತನ್ನ ತಮ್ಮನ ಸಂತೋಷಕ್ಕಾಗಿ ತನ್ನ ಜೀವನವನ್ನು ಮುಡಿಪಾಗಿಟ್ಟು ಆರೈಕೆ ಮಾಡುವ ತ್ಯಾಗಮೂರ್ತಿಯಂತೆ ಚಿತ್ರಿತಳಾಗಿದ್ದಾಳೆ. ಬೆಳೆಯುತ್ತ ಪ್ರಾಯಕ್ಕೆ ಬಂದ ಬೀರಪ್ಪನಿಗೆ ವಿವಾಹ ಮಾಡಲು ಅಕ್ಕ ನಿಶ್ಚಯಿಸುತ್ತಾಳೆ. ಬೀರಪ್ಪನು ಸೋದರಮಾವನ ಮಗಳನ್ನು ಬಿಟ್ಟು ಬೇರೆ ಎಲ್ಲರೂ ನನಗೆ ನಿನ್ನಂತೆ ಕಾಣುವರೆಂದು ಮಾಯವ್ವಳಿಗೆ ತಿಳಿಸುವನು. ಕಾಳಿನಾರಾಯಣನೇ ಮಾವನೆಂದು ತಿಳಿದು ಅವನ ಮಗಳಾದ ಕನ್ನಿಕಾಮವ್ವಳನ್ನು ವಿವಾಹವಾಗಲು ವೀರಪ್ಪ ಹೋಗಿ ಅಲ್ಲಿ ಮುದುಕನ ರೂಪ ಧರಿಸಿ ದನಕಾಯುವ ಮಕ್ಕಳಿಂದ ಊರಿನ ಸಮಾಚರವನ್ನೆಲ್ಲ ತಿಳಿದುಕೊಂಡನು. ದಿನವೂ ಹೂ ಕೊಡಲು ಸಂಗಮ್ಮನೆಂಬ ಮುದುಕಿ ಏಳಂತಸ್ತಿನ ಮಹಡಿಗೆ ಹೋಗುವಳೆಂದು ತನ್ನ ಸಹಜ ರೂಪದಿಂದ ಅವಳಲ್ಲಿ ಹೋಗಿ ತಂಗಿದನು. ಮರುದಿನ ಕನ್ನಿಕಾಮವ್ವಳಿಗಾಗಿ ವಜ್ಜರದಂಡಿ ನೆಯ್ದನು. ಅದನ್ನು ಮುದುಕಿ ಕಾಮವ್ವಳಿಗೆ ಕೋದಲು ಇದು ಯಾರು ಕಟ್ಟಿದ್ದು ಅವರನ್ನು ನೋಡಬೇಕು ಕರೆದು ತಾ ಎಂದು ತಿಳಿಸಿದಳು. ಮುದುಕಿ ಇದನ್ನು ನೆಯ್ದಿದ್ದು ತನ್ನ ತಂಗಿಯ ಮಗಳು ಎಂದಳು. ಪರಸ್ಪರ ಭೇಟಿಯಾಗಲಾಗಿ ಅವನು ತನ್ನ ಸೋದರತ್ತೆಯ ಮಗನೆಂದು ಕನ್ನಿಕಾಮವ್ವಳಿಗೆ ತಿಳಿಯಿತು. ಈ ಕಾವ್ಯದಲ್ಲಿ ಬೀರಪ್ಪನ ವಿವಾಹವು ಸಹ ಶಿವನು ಕಮಲಾದೇವಿಯೊಂದಿಗೆ ವಿವಾಹವಾದಂತೆ, ತನ್ನ ಪವಾಡದಿಂದಲೇ ಕಾಳಿನಾರಾಯಣನನ್ನು ಸೋಲಿಸಿ ವಿವಾಹವಾಗುವನು. ಇವರು ವಧುವನ್ನು ನೇರವಾಗಿ ಕೋಲಿನೊಂದಿಗೆ ವಿವಾಹವಾಗಿದ್ದೇ ಮತ್ತೊಂದು ವಿಶೇಷ.

ವಿವಾಹದ ನಂತರ ಬೀರಪ್ಪ ಹೆಂಡತಿಯೊಂದಿಗೆ ಕಾಲಕಳೆಯದೆ, ತನ್ನಕ್ಕ ಮಾಯವ್ವಳೊಂದಿಗೆ ನಾಡನೋಡಲೆಂದು ಹೊರಡುತ್ತಾರೆ. ಈ ಸಂದರ್ಭದಲ್ಲಿ ಬೀರಪ್ಪನು ಮುಂಗಿ ಪಟ್ಟಣದ ಅರಸರ ಮಗಳ ಬೆನ್ನ ಬೇನೆಯನ್ನು ಗುಣಪಡಿಸುತ್ತಾನೆ. ಅಲ್ಲಿಂದ ಮುಂದೆ ಹೇಡಿಂಬ ಎಂಬ ಊರಿಗೆ ಬಂದ ಹೇಡಿಂಬ ರಾಕ್ಷಸನನ್ನು ಸಂಹಾರ ಮಾಡುತ್ತಾನೆ. ಅಂದಿನಿಂದ ಆ ಊರು ಸೇಡಂ ಎಂಬ ಹೆಸರು ಪಡೆಯುತ್ತದೆ. ಅಲ್ಲಿಂದ ಕಾಯಿಕೊಂಕಣ ನಾಡಿಗೆ ಬರುತ್ತಾರೆ. ಅಲ್ಲಿ ಬಗನಾಥನೆಂಬ ದೈತ್ಯನ ಗದ್ದುಗೆಯಿದ್ದು ಅಲ್ಲಿನ ಜನರಿಂದ ಪೂಜಿಸಲ್ಪಟ್ಟಿರುತ್ತಾನೆ. ಅವನು ಮಾಯವ್ವಳನ್ನು ಆಸೆಪಟ್ಟು ಬೀರಣ್ಣನಿಂದ ಹತನಾಗುತ್ತಾನೆ.ಅದನ್ನು

ಪಾತಾಳದೊಳಗ ಇವನ ಪಾದೇನೆ ಕೈಲಾಸದೊಳಗೆ ಇವನ ಕಳಿಸೇನ
ಪಾಯಿಗಂಗಾಳ ಹಚ್ಚಿದನಯ್ಯ ಪಂಚಡಂಕಿ ಹೂಡಿದನಯ್ಯ
ಪಂಚಡಂಕಿ ಹೂಡಿದನಯ್ಯ ಶಿರವ ಹಾರಿ ಬಿದ್ದಾವ
ಬಾಗಿಯ ಭಗನಾಥಯ್ಯ ಶಿರವ ಹಾಗಿ ಬಿದ್ದಾವ

ಎಂದು ಕಾವ್ಯ ಬಣ್ಣಿಸುತ್ತದೆ. ಅಂದಿನಿಂದ ಆ ಊರಿಗೆ ಸಿರಿವಾಳ ಎಂಬ ಹೆಸರು ಬಂದಿತು. ಅಕ್ಕ ತಮ್ಮರಿಬ್ಬರೂ ಕೆಲ ಕಾಲ ಅಲ್ಲಿ ತಂಗಿದ್ದು ನಂತರ ಕ್ವಾಣಗನೂರಿಗೆ ಬಂದರು. ಆ ಊರಿನ ರಾಕ್ಷಸ ಕ್ವಾಣೇಸುರ ಅವನು ಒಂದೊಂದು ಮಗ್ಗಲು ಆರಾರು ತಿಂಗಳು ಮಲಗುವನು. ಆ ರಾಕ್ಷಸನನ್ನು ಕೊಂದು ಬೀರಪ್ಪ ಆ ಊರಿಗೆ ಉಪಕಾರ ಮಾಡಿದನು. ಅಲ್ಲಿಂದ ಚಿಂಚಲಸೂರ ಅರಣ್ಯಕ್ಕೆ ನಡೆದರು. ಅಲ್ಲಿನ ವನದೇವತೆ ಅವರಿಗೆ ತಂಗಲು ಅವಕಾಶ ನೀಡಲಿಲ್ಲ. ಬೀರಪ್ಪನು ಆ ದೇವತೆಯನ್ನು ಹೊಡೆದು ಕೊಂದನು. ಅವಳು ಸಾಯುವಾಗ ತನಗೆ ಸೇರಿದ ಹಕ್ಕುಗಳೆಲ್ಲ ನಿಮಗೆ ಸೇರಿದವೆಂದು ತಿಳಿಸಿ ಪ್ರಾಣಬಿಟ್ಟಳು. ಮಾಯವ್ವ ಖಾಯಂ ಆಗಿ ಅಲ್ಲಿಯೇ ನೆಲೆಸಿದಳು.

ಬೀರಪ್ಪನು ಅಕ್ಕನನ್ನು ಅಲ್ಲಿ ಬಿಟ್ಟು ತಾನು ಬೆಳ್ಳಿಗಿರಿಗೆ ಹಿಂತಿರುಗಿದನು. ಬರುವಾಗ ಅಕ್ಕನ ಕುರಿಗಳನ್ನು ಇಲ್ಲಿಗೆ ಹೊಡೆದುಕೊಂಡು ಬಂದನು. ಇಲ್ಲಿ ಕುರುಗಳನ್ನು ಕಾಯಲು ಗೆಳೆಯ ಬೊಪ್ಪಣ್ಣನನ್ನು ನೇಮಿಸುವನು. ಹನ್ನೆರಡು ವರ್ಷಗಳಾದರೂ ಮುಂದೆ ಹೆಚ್ಚಲಿಲ್ಲ. ಮರಿಗಳನ್ನು ಹಾಕಲಿಲ್ಲ. ಅಕ್ಕನ ಕರೆತಂದು ಹಬ್ಬ ಮಾಡಿದರೆ ಅವಳ ಹರಕೆಯಿಂದ ಮುಂದೆ ಹೆಚ್ಚಬಹುದೆಂದು ಬೀರಪ್ಪ ಆಲೋಚಿಸಿದನು. ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ ಎನ್ನದೆ ಅವಳ ಆಸೆ ಆಕಾಂಕ್ಷೆಗಳನ್ನು ತಮ್ಮನೇ ಪೂರೈಸಬೇಕು ಎಂಬುದನ್ನು ಇಲ್ಲಿ ಬಿಂಬಿಸಲಾಗಿದೆ. ಬೀರಪ್ಪನು ತನ್ನ ಅಕ್ಕನನ್ನು ಕರೆತರಲು ಗೆಳೆಯ ಬೋಪಣ್ಣನನ್ನು ಕಳುಹಿಸಿದ. ಬೀರಪ್ಪನ ಹೆಂಡತಿ ಕನ್ನಿಕಾಮವ್ವ ಜೋಳದ ರೊಟ್ಟಿಗಳನ್ನು ಮಾಡಿ ಹುಣಸೇಕಾಯಿ ಚಟ್ನಿ (ಖಾರಹಚ್ಚಿದ ಬಜ್ಜಿ) ಮಾಡಿ ಬುತ್ತಿ ಕಟ್ಟಿ ಕಳುಹಿಸಿದಳು. ಬುತ್ತಿ ಬಿಚ್ಚಿ ನೋಡಿದ ಮಾಯವ್ವ, ತಮ್ಮನ ಮನೆಯಲ್ಲಿ ಅಕ್ಕಿ ಇರಲಿಲ್ಲವೇ ಎಂದು ಮರುಗಿದಳು. ಕರೆಯಲು ಪರರನ್ನು ಕಳುಹಿಸಿದ್ದಕ್ಕೆ

ಹೆರವರ ತಮ್ಮ ಬೀರಣ್ಣ ಪರವರಿಗೆ ಕೊಟ್ಟು ಕಳುವ್ಯಾನೆ
ಅಕ್ಕ ಒಬ್ಬ ಮಗಳೇನೆ ತಮ್ಮ ಒಬ್ಬರ ಮಗನೇನ
ಕೊಡಬಾರದು ಕೊಡವಿ ಕೂದಲಿಗ ನಂದನ ಬನದಾಗ

ಒಡಹುಟ್ಟಿದ ತಮ್ಮನಾಗಿದ್ದರೆ ಹಬ್ಬಕ್ಕೆ ಕರೆಯಲು ಬೇರೆಯವರನ್ನು ಕಳುಹಿಸುತ್ತಿದ್ದನೆ ಎಂದು ನೊಂದಕೊಂಡಳು. ತಾನು ತಮ್ಮನ ಶ್ರೇಯಸ್ಸಿಗಾಗಿ ಮನೆಯಲ್ಲಿಯೇ ಹಬ್ಬ ಮಾಡುತ್ತೇನೆಂದು ಹೇಳಿದಳು. ಅಕ್ಕ ಬರದಿದ್ದರಿಂದ ಬೀರಪ್ಪನೆ ಅಕ್ಕನನ್ನು ಕರೆಯಲು ಹೋದನು. ಮಾಯವ್ವ ಅವನನ್ನು ಉಪಚರಿಸಲು ನಾನು ಹಬ್ಬಕ್ಕೆ ಕರಿಯಲಾಕ ಬಂದಿಲ್ಲ ಕಾಡಲಾಕ ಬಂದೀನಿ ಎಂದು ಮುನಿಸಿಕೊಂಡನು. ತಮ್ಮನ ಬೇಕು-ಬೇಡಗಳನ್ನು ನಗುತ್ತಲೇ ಪೂರೈಸಿದಾಗ ಸಂತಸಗೊಂಡ ಬೀರಪ್ಪನು ಅಕ್ಕನೊಂದಿಗೆ ಊರಿಗೆ ಬಂದು ಹಬ್ಬ ಆಚರಿಸಿದನು. ಸಹೋದರರ ನಡುವಿನ ಚಿಕ್ಕ ಪುಟ್ಟ ವಿರಸಗಳನ್ನು, ಹುಸಿ ಮುನಿಸುಗಳನ್ನು ಇಲ್ಲಿ ಗುರುತಿಸಬಹುದು. ಜೊತೆಗೆ ಸ್ತ್ರೀಯ ಅಂತಃಕರಣವನ್ನು ಕಾಣಬಹುದು. ತಮ್ಮನ ಮನೆಯಲ್ಲಿ ಹಬ್ಬ ಮಾಡಿ ಮಾಯವ್ವ ಚಿಂಚನಸೂರಿಗೆ ಹಿಂತಿರುಗಿದಳು.

ಬೀರಪ್ಪ ಅಕ್ಕನನ್ನು ಕರೆಸಿ ಹಬ್ಬ ಮಾಡಿದ ನಂತರ ಹೆಂಡತಿಗೆ ಹೇಳಿ ಗೌಡಗಿರಿಗೆ ಬಂದು ತಪಸ್ಸಿಗೆ ಕುಳಿತನು. ಅವನ ಮೇಲೆ ಹುತ್ತವೇ ಬೇಳೆಯಿತು. ಶಿವನು ಪ್ರತ್ಯಕ್ಷನಾಗಿ ಬೀರಪ್ಪನಿಗೆ ಈ ಘೋರ ತಪಸ್ಸಿನ ಕಾರಣ ಕೇಳಿದನು. ಬೀರಪ್ಪ ತನಗೊಬ್ಬ ಶಿಷ್ಯ ಬೇಕೆಂದು ಕೇಳಿಕೊಂಡು ಮಾಳಿಂಗರಾಯನನ್ನು ಶಿಷ್ಯನನ್ನಾಗಿ ಪಡೆದನು. ಬೀರಪ್ಪನು ಎಳೆಎಳೆಯಾಗಿ ಶಿಷ್ಯನ ಸಾಮರ್ಥ್ಯವನ್ನು ಪರೀಕ್ಷಿಸಿ ತನ್ನ ದರ್ಶನ ನೀಡಿದನು. ಅಂದಿನಿಂದ ಬೀರಪ್ಪ ಗುರುವಾದ ಮಾಳಿಂಗರಾಯ ಶಿಷ್ಯನಾದ. ಶಿಷ್ಯನೊಂದಿಗೆ ಅವರ ಊರಿಗೆ ಬಂದಾಗ ಜನರೆಲ್ಲ “ಶಿವನೇ ನಮ್ಮಯ್ಯ ದೇವರು ಬಂದಾನ ಬನ್ನಿರೊ” ಎಂದು ಹಾಡಿ ಸಂತೋಷಪಟ್ಟರು.

ಬೀರಪ್ಪನು ಗುಡಿಯ ಗದ್ದುಗೆಯಲ್ಲಿದ್ದು ಮಾಳಿಂಗರಾಯನಿಂದ ಅನೇಕ ರೀತಿಗಳಿಂದ ಪೂಜಿಸಿಕೊಳ್ಳುವನು. ಊಟಕ್ಕೆ ಹುಲಿಗಿಣ್ಣ ಆಡಲು ಹುಲಿಮರಿ ಬೇಕೆಂದನು. ಮಾಳಿಂಗರಾಯ ಅವುಗಳನ್ನು ತಂದು ಗುರುವನ್ನು ಸಂತೋಷಪಡಿಸಿದನು. ಬೀರಪ್ಪನು ತನ್ನ ಪೂಜೆಗೆ ನಾಗರಬಾವಿಯ ನೀರನ್ನು ಖಾಸಾಬಾಗದ ಹೂಗಳನ್ನು ತಂದು ಪೂಜೆಮಾಡಬೇಕೆನ್ನುವನು. ಅದರಂತೆ ತಂದು ಪೂಜೆ ಮಾಡಿದ ಮಾಳಿಂಗರಾಯ, ಇಲ್ಲಿ ಶಿವನು ಕಾಳಿನಾರಾಯಣ ಮತ್ತು ಭರಮದೇವರಿಂದ ಕಪ್ಪಿಕಲಕದ ಸೀತಾಳ, ಹುಳುಗಳು ಮುಟ್ಟಿದ ಹೂಗಳಿಂದ ಪೂಜೆ ಮಾಡಬೇಕೆಂದು ಬೇಡಿ ಪೂಜೆ ಮಾಡಿಸಿಕೊಂಡಿದ್ದನ್ನು ಸ್ಮರಿಸಬಹುದು. ಬೀರಪ್ಪನು ಶಿವನ ಅವತಾರಿ ಎಂದು ಹೇಳಲು ಜನಪದರು ಅಚ್ಚುಕಟ್ಟಾಗಿ ನಿರೂಪಿಸಿದ್ದಾರೆ. ಶಿಷ್ಯನ ಪೂಜೆಯಿಂದ ಪುಣೀತನಾದ ಬೀರಪ್ಪ ಮಾಳಿಂಗರಾಯನಿಗೆ ಏನು ಬೇಕು ಬೇಡು ಎಂದನು. ಇಟ್ಟಲ್ಲಿ ಇರಬೇಕು, ಕರದಲ್ಲಿ ಬರಬೇಕು. ನಿಂತಲ್ಲಿ ನೆರಳಾಗಬೇಕು, ಕುಂತಲ್ಲಿ ಚೆನ್ನಾಗಬೇಕು, ಎಳಗರನಾಗಿ ಬೆನ್ನಿಂದ ಬರಬೇಕು. ಎಂತಹ ವೇಳೆ ಬಂದರೂ ಅಂತರಲೆ ಹೋಳಾಗಬೇಕೆಂದು ಬೇಡಿಕೊಳ್ಳುತ್ತಾನೆ.

ಮಾಳಿಂಗರಾಯನ ಎಲ್ಲ ಕಾರ್ಯಗಳಲ್ಲಿಯೂ ಬೀರಪ್ಪನು ನೆರಳಾಗಿದ್ದು, ಶಿಷ್ಯನ ಸಾಹಸಗಳನ್ನು ನೋಡುತ್ತಾನೆ, ಸಂತೋಷಿಸುತ್ತಾನೆ. ತಾನು ಸೋತರೂ ಶಿಷ್ಯನಿಗೆ ಸೋಲಾಗಬಾರದೆಂಬಂತೆ ಅಥವಾ ಶಿಷ್ಯನ ಸಾಹಸಗಳು ಉನ್ನತವಾಗುವಂತೆ ಕಾಡುತ್ತಲೆ ಮಾಳಿಂಗರಾಯನ ಶಕ್ತಿ ಸಾಮರ್ಥ್ಯಗಳು ಬೆಳೆಸಿರುವುದನ್ನು ಈ ಕಾವ್ಯ ರಸವತ್ತಾಗಿ ಕಟ್ಟಿಕೊಟ್ಟಿದೆ. ಹಾಗೆಯೇ ಡಂಕನಾಡಿನ ದೈಗೊಂಡನು ಶ್ರೀಮಂತನಾಗಿದ್ದು ಕ್ಷುದ್ರದೇವತಾರಾಧನೆಯಿಂದ ಬಿಕಾರಿಯಾಗುತ್ತಾನೆ. ಅವನಿಗೆ ಶಿಷ್ಯ ಮಾಳಪ್ಪ ಹೇಳಿದ್ದರಿಂದ ಪುನಃ ಶ್ರೀಮಂತಿಕೆ ನೀಡುತ್ತಾನೆ.ಆದರೆ ದೈಗೊಂಡ ಬೀರಪ್ಪ ಮಾಳಿಂಗರಾಯರನ್ನು ಮರೆಯುವನು. ತಿಳಿ ಹೇಳಲು ಹೋದ ಮಾಳಪ್ಪನನ್ನೆ ಬಂಧಿಸಲು ಆದೇಶಿಸುತ್ತಾನೆ. ಇಲ್ಲಿ ಗುರು ಬೀರಪ್ಪನು ಶಿಷ್ಯ ಮಾಳಪ್ಪನ ದುಡುಕಿನಿಂದ ಆದ ಕೆಡಕನ್ನು ತಿದ್ದಿರುವುದನ್ನು ಕಾವ್ಯ ತಿಳಿಸುತ್ತದೆ. ಅಮೋಘಸಿದ್ಧನನ್ನು ಮಾಳಿಂಗರಾಯ ಸೋಲಿಸಿದ್ದು, ಪಾಂಡುರಂಗನ ವೃತ್ತಾಂತ, ರೇವಣಸಿದ್ಧರ ವೃತ್ತಾಂತ, ಮೂಕನಾದ ಸಿದ್ದರಾಮನಿಗೆ ಮಾತು ಬರಿಸುವಲ್ಲಿಗೆ ಕಾವ್ಯ ಮುಕ್ತಾಯವಾಗಿದೆ.

ಮಹಾಕಾವ್ಯದ ವಿಶಿಷ್ಟತೆ

ಜನಪದ ಹಾಲುಮತ ಮಹಾಕಾವ್ಯವು ಪೌರಾಣಿಕ ಕಲ್ಪನೆಯ ತಳಹದಿಯ ಮೇಲೆ ಹುಟ್ಟುಹಾಕಿದ ಸಂಸ್ಕೃತಿಯ ಫಲವಾಗಿದೆ. ಇಲ್ಲಿಯ ಸನ್ನಿವೇಶಗಳೆಲ್ಲ ಪೌರಾಣಿಕ ಮತ್ತು ಜಾನಪದ ಆಶಯಗಳಿಂದ ತುಂಬಿಹೋಗಿವೆ. ಉದ್ದಕ್ಕೂ ಕಥೆಯ ಎಳೆ ಒಮ್ಮೆ ಪೌರಾಣಿಕ ಆವರಣ ಪ್ರವೇಶಿಸಿದರೆ ಮರುಹೆಜ್ಜೆಗೆ ಸಾಮಾನ್ಯವಾದ ಜಾನಪದ ಕ್ಷೇತ್ರ ಪ್ರವೇಶಿಸುತ್ತದೆ. ಹೀಗೆ ಕಾವ್ಯದುದ್ದಕ್ಕೂ ಸಾಮಾನ್ಯ ಜೀವನದ ಘಟನೆಗಳನ್ನು ಬಿತ್ತರಿಸುತ್ತಲೇ ಪೌರಾಣಿಕ ಅಂಗಣಕ್ಕೆ ಏರಿ ಹೋಗಿರುತ್ತದೆ. ಕೇಳುಗರಲ್ಲಿ ಭಕ್ತಿ, ನಿಷ್ಠೆಗಳನ್ನು ತುಂಬಲು ಪುರಾಣದ ಲೇಪನ ಕಾರಣವಾಗಿದೆಯೇನೋ ಎನಿಸುತ್ತದೆ. ಕಾವ್ಯದ ಮುಖ್ಯ ನಾಯಕನಾದ ಬೀರಪ್ಪನು ಶಿವನ ಅವತಾರಿಯೇ ಆಗಿದ್ದು ಅವನ ವಂಶಜನೆಂದೆ ಕಾವ್ಯ ಹೇಳುತ್ತದೆ. ಹಾಗಾಗಿ ಸಂಪೂರ್ಣ ಕಾವ್ಯವು ಶಿವನಲೀಲೆ ಎಂಬಂತೆಯೆ ಚಿತ್ರಿತವಾಗಿದೆ.

ಕಾವ್ಯದಲ್ಲಿ ಬೀರಪ್ಪನು ಶಿವನಂತೆ ಪೂಜಿಸಲ್ಪಡುತ್ತಾನೆ. ಶಿವನಿಗೆ ಕಾಳಿನಾರಾಯಣ, ಭರಮದೇವರಿಂದ ಪೂಜೆಗೊಂಡಂತೆ, ಬೀರಪ್ಪನು ಮಾಳಿಂಗರಾಯನಿಂದ ಪೂಜೆಗೊಳ್ಳುತ್ತಾನೆ. ಇಲ್ಲಿ ಬೀರಪ್ಪನಂಥ ಗುರು, ಮಾಳಿಂಗರಾಯನಂಥ ಶಿಷ್ಯ, ಖ್ಯಾಮಣ್ಣಾನಂಥ ಭಕ್ತನನ್ನು ಕಾಣಬಹುದು. ಸ್ತ್ರೀ ಪಾತ್ರಗಳಲ್ಲಿ ಪಾರ್ವತಿ, ಕಮಲಾದೇವಿ, ಸೂರಮ್ಮ ದೇವಿ, ಮಾಯವ್ವ, ಕನ್ನಿಕಾಮವ್ವ ಕ್ರಮವಾಗಿ ದೈವ, ಪುರಾಣ, ತಾಯಿ, ಸೋದರಿ, ಪ್ರೇಯಸಿಯ ರೂಪಗಳಿಗೆ ಮಾದರಿಯಾಗಿವೆ. ಶಿವಲೀಲೆಯೊಂದಿಗೆ ಪ್ರಾರಂಭವಾಗುವ ಕಾವ್ಯವು ಬೀರಪ್ಪನ ಜನನದ ನಂತರ ಈ ಕಾವ್ಯದ ಲೀಲೆಗಳು ಬೀರಪ್ಪನ ಹೆಸರಿಗೆ ವರ್ಗಾಯಿಸಲ್ಪಟ್ಟಿವೆ. ಈ ಕಥೆ ಕೇವಲ್ ಮನವರಲ್ಲದ, ಮನುಷ್ಯರಲ್ಲದ, ದೆವ್ವವಲ್ಲದ, ಭೂತವಲ್ಲದವರ ಚರಿತ್ರೆ ಎಂದು ಹೇಳಲು ಕಾವ್ಯದ ಹಾಡುಗಾರ ಮೇಲಿಂದ ಮೇಲೆ ಪ್ರಸ್ತಾಪಿಸಿರುವುದನ್ನು ಕಾಣಬಹುದು. ಬೀರಪ್ಪ ಮತ್ತು ಮಾಳಿಂಗರಾಯನ ಪ್ರಸ್ತಾಪ ಬಂದಾಗಲೆಲ್ಲ ಮಾನವರೆಲ್ಲ ಮನುಷ್ಯರಲ್ಲ ಎಂದು ಪುನಃ ಪುನಃ ಪ್ರಸ್ತಾಪಿತವಾಗಿದ್ದನ್ನು ಗಮನಿಸಬಹುದು.

ಕಥೆ ಪ್ರಾರಂಭದಿಂದ ಪೌರಾಣಿಕ ಮತ್ತು ಜನಪದ ಸಂಗತಿಗಳಿಂದ ತುಂಬಿ ಹೋಗಿದೆ ಎಂಬುದಕ್ಕೆ ಉತ್ತಮೆ ನಿದರ್ಶನ ಶಿವ ಕಮಳಾದೇವಿಯ ಸಂಬಂಧವಾಗಿದೆ. ಶಿವನ ಸಂಪರ್ಕವಿಲ್ಲದೆ ಕೇವಲ ಲೀಲಾಸದೃಶ್ಯವಾಗಿ ಗರ್ಭಧಾರಣೆಯಾಗಿದ್ದನ್ನು ಕಾವ್ಯ ಹೇಳುತ್ತದೆ. ಪೌರಾಣಿಕ ಹೆಣಿಗೆಯ ಈ ಕಾವ್ಯದಲ್ಲಿ ಅನೇಕ ಪ್ರಸಂಗಗಳು ಯಾವುದೋ ಕಿನ್ನರ ಕಥೆಗಳ ಸ್ವರೂಪದಲ್ಲಿ ಕಾಣಿಸುತ್ತದೆ. ಬೀರಪ್ಪನು ತನ್ನ ಸೋದರ ಸೊಸೆ ಕನ್ನಿಕಾಮವ್ವನನ್ನು ಬೇಟಿ ಮಾಡಲು ಹೂಗಾರ ಮುದುಕಿಯ ಮನೆಯಲ್ಲಿ ವಾಸ ಮಾಡುವುದು, ಹೆಣ್ಣಿನ ರೂಪದಲ್ಲಿ ಹೂಗಾರ ಮುದುಕಿಯ ಸಹಾಯದೊಂದಿಗೆ ರಾಜಕುಮಾರಿಯ ಮಹಲಿಗೆ ಹೋಗಿ ಮುಟ್ಟುವುದು, ಇಬ್ಬರೂ ಕೂಡಿ ಸೂತ್ರದ ಕುದುರೆಯ ಮೇಲೆ ಕುಳಿತು ಹಾರಿ ಹೋಗುವ ಘಟನೆಗಳು ಕಿನ್ನರ ಕಥೆಗಳಂತಿರುವುದನ್ನು ಕಾಣಬಹುದು.

ಒಟ್ಟಾರೆಯಾಗಿ ಜನಪದ ಹಾಲುಮತ ಮಹಾಕಾವ್ಯವು ತನ್ನ ಕಥಾಸ್ವರೂಪದಿಂದ, ಅಲೌಕಿಕತೆಯಿಂದ ಪೌರಾಣಿಕ ಮತ್ತು ಜನಪದೀಯ ಅಂಶಗಳಿಂದ ಮೌಖಿಕ ಪರಂಪರೆಯಲ್ಲಿ ಮಂಟೇಸ್ವಾಮಿ ಕಾವ್ಯ, ಮೈಲಾರಲಿಂಗನ ಕಾವ್ಯ, ಮಲೆ ಮಾದೇಶ್ವರ ಕಾವ್ಯ, ಜುಂಜಪ್ಪನ ಕಾವ್ಯ ಇವುಗಳ ಜೊತೆಗೆ ತನ್ನದೆ ಸ್ಥಾನ ಪಡೆದುಕೊಂಡು ಕರ್ನಾಟಾಕ ಮೌಖಿಕ ಪರಂಪರೆಯ ಉನ್ನತಿಗೆ ಕಾರಣಗಾಗಿರುವುದನ್ನು ಗಮನಿಸಬಹುದು. ಹಾಗೆಯೇ ಹಾಲುಮತ ಸಂಪ್ರದಾಯದ ಆರಾಧ್ಯ ದೈವಗಳಲ್ಲಿ ಪ್ರಮುಖನಾದ ಬೀರಪ್ಪನ ವೃತ್ತಾಂತವನ್ನು ನಿರೂಪಿಸುವ ಮಹತ್ವದ ಆಕರ ಗ್ರಂಥವೂ ಇದಾಗಿದೆ.

ಆಧಾರಗ್ರಂಥಗಳು

೧. ವೀರಣ್ಣ ದಂಡೆ, ಜನಪದ ಹಾಲುಮತ ಮಹಾಕಾವ್ಯ, ಕನ್ನಡ ಪುಸ್ತಕ ಪ್ರಾಧಿಕಾರ, ೨೦೦೦.

೨. ರಹಮತ್ ತರೀಕೆರೆ (ಸಂ) ಕನ್ನಡ ಅಧ್ಯಯನ ೭-೨,೨೦೦೦.

೩. ಎಫ್.ಟಿ. ಹಳ್ಳಿಕೇರಿ (ಸಂ) ಹಾಲುಮತ ವ್ಯಾಸಂಗ-೧, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ವಿದ್ಯಾರಣ್ಯ ೨೦೦೯