ಏಳನೆಯ ಸಂಧಿ : ನೆರೆದ ಶರಣರ ಮುಂದೆ ಶಾಂತಯ್ಯನು ಪರಮೇಶ್ವರನನ್ನು ಬಹುವಿಧವಾಗಿ ಪ್ರಾರ್ಥಿಸುತ್ತಾನೆ. ಕೂಡಿದ್ದ ಶರಣರೆಲ್ಲರೂ ಒಬ್ಬರ ಮುಖವನ್ನೊಬ್ಬರು ನೋಡುತ್ತಿರಲು ಅಲ್ಲಿದ್ದ ಕೊಂಡೆಯ ಮಂಚಣ್ಣನು ಮೇಷನನ್ನು ಬದುಕಿಸುವ ಕಾರ್ಯ ಸಾರ್ಥಕವಾಗುವುದಿಲ್ಲವೆಂದು ನುಡಿಯುತ್ತಾನೆ. ಅವನ ಮಾತಿಗೆ ಬಿಜ್ಜಳನೂ ಕೂಡ ತಲೆದೂಗುತ್ತಾನೆ. ಆಗ ಶರಣರೆಲ್ಲ ಬಸವನ ಕಡೆ ನೋಡುತ್ತಾರೆ. ಬಸವನು ಶರಣರನ್ನು ಕುರಿತು ನಿಮ್ಮಂತಹ ಶರಣರ ಕರುಣೆ ಇದ್ದಲ್ಲಿ ಶಾಂತನು ತಗರನ್ನು ಮರಳಿ ಪಡೆಯುತ್ತಾನೆ. “ಶಿಶುವಿಗೆ ಹೆತ್ತವರು ಹೆಸರಿಡಬೇಕಲ್ಲದೆ ಮತ್ತಾರಿಂದಲೂ ಆ ಕೆಲಸ ಸಲ್ಲದು” ಅಂತೆಯೇ ಈ ಪವಾಡವನ್ನು ಮೆರೆಯವುದ ಶಾಂತನೊಬ್ಬನಿಂದಲೇ ಸಾಧ್ಯವೆಂದು ನುಡಿದು ಶಾಂತನನ್ನು ಹರಸಿ ಭಸಿತವನ್ನಿಟ್ಟು ಮೈದಡವಿ ತೀರ್ಥಪ್ರಸಾದಗಳನ್ನು ತಳೆಯುತ್ತಾನೆ. ಮಲಗಿದ್ದ ತಗರು ಘುಡುಘುಡಿಸುತ್ತ ಮೇಲೆದ್ದು ಎಡಬಲಗಳನ್ನು ನೋಡುತ್ತಾ ಎದುರಿಗಿದ್ದ ವಜ್ರಕಂಬವನ್ನು ನೋಡಿದ ಬಿಜ್ಜಳನು ನಡುಗಿದನು. ಹೆಚ್ಚಿನ ಮಹಿಮೆಯನ್ನು ಕಾಣದಾಡಿದೆನೆಂದು ಮನದಲ್ಲಿ ಹುಚ್ಚನಾಗುತ್ತಾನೆ. ಊರಿನ ಪ್ರಜೆಯೆಲ್ಲ ಶಾಂತನನ್ನು  ಹೊಗಳುತ್ತದೆ. ಬಸವನು ಶಾಂತನ ಭಕ್ತಿಗೆ ಮೆಚ್ಚಿ ಬೇಕಾದುದನ್ನು ಬೇಡು ಎನ್ನುತ್ತಾನೆ. ಆಗ ಶಾಂತಯ್ಯನು ನಿಮ್ಮ ದಯೆಯಿಂದ ಯಾವುದಕ್ಕೂ ಕಡಿಮೆ ಇಲ್ಲ, ರಟ್ಟು ಮತದವರೆಂದು ಕಲ್ಯಾಣ ಪಟ್ಟಣದಿಮದ ಹೊರದೂಡಲ್ಪಟ್ಟ ಕುರುಬರನ್ನು ಉದ್ಧರಿಸಬೇಕೆಂದು ಬೇಡಿದನು. ಆಗ ಬಸವನು ಸಕಲ ಶುಭವಸ್ತುಗಳನ್ನೂ ತರಿಸಿ ನೆರೆದಿದ್ದ ಕುರುಬಗೌಡರ ಸಮ್ಮುಖದಲ್ಲಿ ಶಾಂತಯ್ಯನನ್ನು ಕುರುಬರಿಗೆ ಗುರುವಾಗಿರೆಂದು ಹರಸಿ ವಿಭೂತಿಯನ್ನಿಟ್ಟುನು. ಅನಂತರ ಶಾಂತಯ್ಯನು ಕ್ಷೀರಗುಲಕ್ಕೆ (ಹಾಲುಮತಕ್ಕೆ) ಕುರುಹು ಒಂದನ್ನು ಕರುಣಿಸಬೇಕೆಂದು ಪ್ರಾರ್ಥಿಸಿದನು.ಬಸವನು ಮೂರು ಲೋಕಕ್ಕೆ ಪ್ರಸಿದ್ಧವೆನಿಸಿದ (ಮೂರೇಣಿನ ಕಂತೆಯ ಕುರುಹನ್ನು ಕುರುಬ ಕುಲದವರಲ್ಲಿ ಕುರುಹಾಗಿ ಪ್ರಚುರದಲ್ಲಿದೆ. ಇದನ್ನು ಕುರಿಯ ಅಚ್ಚಕರಿಯ ತುಪ್ಪಟದಿಂದ ತೆಗೆದ ದಾರದಿಂದ ನೆಯ್ದಿರುತ್ತಾರೆ. ಇದು ಮೂರು ಏಣು (ಮೂಲೆ)ಗಳಿಂದ ಕೂಡಿರುತ್ತದೆ. ಇದನ್ನು ಕುರುಬರ ಕುಲಗುರು ರೇವಣಸಿದ್ದೇಶ್ವರ ಲಿಂಗದ ಅಡಿಗೆ ಹಾಸಲು ಉಪಯೋಗಿಸುತ್ತಾರೆ. ಈ ಕಂತೆ ಪವಿತ್ರವಾದುದು) ಅಲ್ಲಿದ್ದ ಶರಣ ಕಲ್ಲಿಕೇತಯ್ಯನು ಯಾರಾದರೂ ಕಾಣೆವೆಂದೀರಿ ಎಂದು ಬಸವನು ಶಾಂತಯ್ಯನಿಗಿತ್ತ ಬಿರುದನ್ನು ಕಲ್ಯಾಣದಲ್ಲಿ ಸಾರಿ ಹೇಳಿದನು.  ತಾನು ‘ತಗರ ಪವಾಡ’ವನ್ನು ಮೆರೆದುದಕ್ಕೆ ಗುರುತಾಗಿ ಶಾಂತಯ್ಯನು ತಗರಿನ ಎರಡು ಕೋಡುಗಳನ್ನು ತನ್ನ ಎರಡು ಕೈಗಳಿಂದ ಹಿಡಿದುಕೊಂಡು ಮೈಡಾಲಯದ ವಜ್ರದ ಕಂಬಕ್ಕೆ ತಾಗಿಸುತ್ತಾನೆ. ವಜ್ರದ ಕಂಬದಿಂದ ಹೇಮದ ಮಳೆ ಸುರಿಯುತ್ತದೆ. ತಗರಿನ ಕೊಂಬುಗಳು ಸುತ್ತಿಕೊಳ್ಳುತ್ತವೆ ಮತ್ತು ಅದರ ಕೊಂಬುಗಳ ಮೇಲೆ ಶಾಂತಯ್ಯನ ಬೆರಳಿನ ಗುರುತುಗಳು ಬೀಳುತ್ತವೆ. ಹೀಗೆ ಶಾಂತಯ್ಯನು ಕಲ್ಯಾಣದಲ್ಲಿ ಮೆರೆದ ಪವಾಡವು ಎಲ್ಲ ಪವಾಡಗಳಿಗಿಂತಲೂ ಅಧಿಕವಾಗಯಿತೆಂದು ಬಲ್ಲ ಶರಣರು ನುಡಿದರು. ಶಾಂತಯ್ಯನನ್ನು ಕಲ್ಯಾಣದ ಬೀದಿಗಳಲ್ಲಿ ಉತ್ಸವವನ್ನು ಮಾಡಿದರು. ಅಲ್ಲಿಂದ ಶಾಂತಯ್ಯನನ್ನು ಬಿಜ್ಜಳನು ಅರಮನೆಗೆ ಉತ್ಸವದಲ್ಲಿ ಬರಮಾಡಿಕೊಂಡು ಉಡುಗೊರೆಗಳನ್ನಿತ್ತು ಗೌರವಿಸುತ್ತಾನೆ.

ಎಂಟನೆಯ ಸಂಧಿ : ಶಾಂತಯ್ಯನು ಕಲ್ಯಾಣಪಟ್ಟಣದಿಂದ ಸರವೂರಿಗೆ ಶರಣರೊಡನೆ ಉತ್ಸವದಲ್ಲಿ ಹೊರಡುತ್ತಾನೆ. ಕಲ್ಯಾಣ ಪಟ್ಟಣದ ಹೊರಗಿದ್ದ ಕುರುಬರೆಲ್ಲರೂ ತಮ್ಮ ಬಂಧುಬಳಗಗಳೊಡನೆ ಶಾಂತನ ಜೊತೆಯಲ್ಲಿ ಸರವೂರಿಗೆ ಹೊರಡುತ್ತಾರೆ. ಅವರೊಡನೆ ಬಸವನೂ ಹೊರಡುತ್ತಾನೆ. ಬಿರುದುಳ್ಳ ಮೇಷನ ಪವಾಡವನ್ನು ಗೆದ್ದು ಬಂದನೆಂಬ ಸುದ್ದಿಯನ್ನು ತಿಳಿದ ಶಾಂತಯ್ಯನ ಹೆಂಡತಿ ದೇವಮ್ಮನು ಅತಿಶಯವಾದ ಆನಂದದಿಂದ ಕೂಡಿದವಳಾಗಿ ಕಳಶ ಕನ್ನಡಿ ಹಿಡಿದು ಬಂದು ಪತಿಯನ್ನು ಸರವೂರಿನ ಸಖಿಯರೊಡನೆ ಸ್ವಾಗತಿಸುತ್ತಾಳೆ. ಪತಿಯೊಡನೆ ಬಂದ ಅಷ್ಟು ಜನ ಶರಣರಿಗೂ, ತನ್ನ ಶಿಷ್ಯ ಕುರುಬಗೌಡರುಗಳಿಗೂ ಬಸವನ ಸಮ್ಮುಖದಲ್ಲಿ ಉಚಿತವಾದ ಉಡುಗೊರೆಗಳನ್ನು ಅರ್ಪಿಸುತ್ತಾನೆ. ಬಸವನು ಶಾಂತನನ್ನು ಹರಸಿ ವಿಭೂತಿಯನ್ನಿಟ್ಟು ಕ್ಷೀರಗುಲದವರಿಗೆ ನೀನು ಒಡೆಯನಾಗಿರು ಎಂದು ಹೇಳಿ ಕಲ್ಯಾಣಪಟ್ಟಣಕ್ಕೆ ತೆರಳುತ್ತಾನೆ. ಇದು ತಗರ ಪವಾಡದ ಕಥಾಸಾರ. (ಕಥೆಯಲ್ಲಿ ಪರಮೇಶ್ವರನು ಬಂದೆಡೆಯಲ್ಲೆಲ್ಲಾ ಅವನನ್ನು ರೇವಣಸಿದ್ಧನೆಂದು ಸಂಬೋಧಿಸಿದ್ದಾನೆ ಕವಿ).

. ಕೃತಿಯ ವೈಶಿಷ್ಟ್ಯ

ಕುರುಬರು ಮೂಲತಃ ಶಿವಾರಾಧಕರು. ಆಯಾ ಪ್ರದೇಶ ಮತ್ತು ಪದ್ಧತಿಗಳಿಗೆ ಅನುಗುಣವಾಗಿ ಬೇರೆ ಬೇರೆ ದೈವಗಳನ್ನು ಪೂಜಿಸಿದರೂ ಕುರುವರಿಗೆ ಶ್ರೀ ರೇವಣಸಿದ್ಧನೇ ಆರಾಧ್ಯ ದೈವ. ಆದ್ದರಿಂದಲೇ ಕರ್ನಾಟಕದಲ್ಲಿ ಕುರುಬರು ಸಾಂದ್ರವಾಗಿರುವ ಎಲ್ಲ ಊರುಗಳಲ್ಲೂ ರೇವಣಸಿದ್ಧೇಶ್ವರನ ದೇವಸ್ಥಾನ (ಮಠ)ಗಳು ಇವೆ. ಇದು ಈ ಜನಾಂಗಕ್ಕೆ ಈ ವಿಚಾರದಲ್ಲಿ ಇರುವ ಸಾರ್ವತ್ರಿಕವಾದ ನಂಬಿಕೆ ಮತ್ತು ಆಚರಣೆಯನ್ನು ಸ್ಪಷ್ಟಪಡಿಸುತ್ತದೆ.

ಕುರುಬರಿಗೆ ಗುರುಸ್ಥಾನದಲ್ಲಿ ಇರುವವರೆಂದರೆ, ಈ ಜನಾಂಗದವರೇ ಆಗಿರುವ ಒಡೆಯರು. ಕುರುಬ ಜನಾಂಗದ ಸಾವಂತ ಕುರುಬರು ಎಂಬ ಬೆಡಗಿನ ಮನೆತನದಿಂದ ಬಂದಿರುವ ಒಡೆಯರಾಗಲು ಅರ್ಹರಾಗಿರುವುದು ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿರುವ ಪದ್ಧತಿ. ಈ ಬೆಡಗಿನವರೆಲ್ಲ ಪರಸ್ಪರ ದಾಯಾದಿಗಳು, ಒಡೆಯರು ಕೂಳು ಕೊಡುಗೆಗಳೇನಿದ್ದರೂ ಕುರುಬರ ಬೇರೆಬೇರೆ ಬೆಡಗಿನ ಮನೆಗಳಿಂದಲೇ ಆಗಬೇಕು. ಈ ಒಡೆಯರು ಸಂಪೂರ್ಣವಾಗಿ ಸಸ್ಯಾಹಾರಿಗಳು ಮತ್ತು ಲಿಂಗಧಾರಿಗಳು.

ತಮ್ಮ ಸಂಬಂಧಿಗಳೇ ಆಗಿರುವ ಕುರುಬರ ಮನೆಯಲ್ಲಿ ಬಿನ್ನಹ (ವಿಶೇಷ ಸಂದರ್ಭದ ಭೋಜನ)ಕ್ಕೆ ಒಡೆಯರನ್ನು ಆಹ್ವಾನಿಸುವ ಸಂದರ್ಭಗಳಲ್ಲಿ ಅವರಿಗೆ ಆ ಮನೆಯವರು ಸ್ನಾನಮಡಿಯೊಂದಿಗೆ ಅಡಿಗೆಯನ್ನು ಸಿದ್ಧಪಡಿಸಿ ಬಡಿಸುವುದು ಇಂದಿಗೂ ರೂಢಿಯಲ್ಲಿದೆ. ಒಡೆಯರು ರೇವಣಸಿದ್ಧೇಶ್ವರ ಮಠಗಳ ಅರ್ಚಕರೂ ಆಗಿದ್ದು ಅದು ಅವರಿಗೇ ಸೀಮಿತವಾಗಿರುವ ಹಕ್ಕು.

ಕರ್ನಾಟಕದಲ್ಲಿ ಕಡಲತಡಿಯ ಉತ್ತರಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳನ್ನು ಬಿಟ್ಟರೆ ಇಡೀ ರಾಜ್ಯದ ಉದ್ದಗಲಕ್ಕೂ ಕುರುಬ ಜನಾಂಗದಲ್ಲಿ ಹುಟ್ಟಿನಿಂದ ಸಾವಿನವರೆಗೆ ನಡೆಯುವ ಸೂತಕ ಪರಿಹಾರ, ನಾಮಕರಣ, ಗೃಹಪ್ರವೇಶ, ಮದುವೆಯ ಮಂಗಲಕಾರ್ಯ, ಕಡೆಗೆ ಅಂತ್ಯಸಂಸ್ಕಾರ-ಈ ಎಲ್ಲ ಕಾರ್ಯಗಳೂ ಒಡೆಯರ ನೇತೃತ್ವದಲ್ಲೇ ನಡೆಯುತ್ತವೆ. ಈ ಆಚರಣೆಗಳಿಗೆಲ್ಲ ಒಡೆಯರೇ ಅಧ್ವರ್ಯಗಳು. ಕುರುಬರು ಸಾಂದ್ರವಾಗಿರುವ ಜಿಲ್ಲೆಗಳಲ್ಲಿ ಅಧಿಕವಾಗಿಯೂ ಕಡಿಮೆ ಸಂಖ್ಯೆಯಲ್ಲಿರುವ ಜಿಲ್ಲೆಗಳಲ್ಲಿ ಅಲ್ಲಲ್ಲಿಯೂ ಒಡೆಯರ ಕುಟುಂಬಗಳಿವೆ. ಈ ಕುಟುಂಬಗಳಲ್ಲದ ಊರುಗಳಿಗೆ ಪಕ್ಕದ ಊರುಗಳ ಒಡೆಯರು ಮಾಡುವ ಧಾರ್ಮಿಕ ಕಾರ್ಯಗಳಿಗೆ ‘ಆಯ’ ಕೊಡುವ ಪದ್ಧತಿಯು ಮುಂದುವರೆದಿದೆ. ಈ ಒಡೆಯರಿಗೆ ರೇವಣಸಿದ್ಧೇಶ್ವರ ಮಠಗಳಿಗೆ ಹೊಂದಿಕೊಂಡಂತೆ ಭಕ್ತರು ವಾಸಗೃಹಗಳನ್ನು ಕಟ್ಟಿಸಿಕೊಟ್ಟಿರುವ ನಿದರ್ಶನಗಳು ಅನೇಕ ಕಡೆ ಇವೆ. ಕಡಲತೀರದ ಜಿಲ್ಲೆಗಳಲ್ಲಿ ಒಡೆಯರ ಸಂಪ್ರದಾಯವು ಇಲ್ಲವೆಂದು ಹೇಳಿದೆ. ಇದು ನನ್ನ ಗಮನಕ್ಕೆ ಬಂದಿಲ್ಲ ಅಷ್ಟೇ. ಅಂತಹ ಉದಾಹಣೆಗಳಿದ್ದರೆ ಕಂಡವರು ತಿಳಿಸಬಹುದು.

ಪ್ರಾಚೀನ ಕಾಲದಿಂದಲೂ ಆಚರಣೆಯಲ್ಲಿರುವ ಕುರುಬರ ಒಡೆಯರ ಸಂಪ್ರದಾಯವು ಕಳೆದ ಹತ್ತು ಹನ್ನೆರಡು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದಿರುವ ಶ್ರೀ ಕನಕ ಗುರುಪೀಠದ ನಂತರವೂ ತನ್ನ ಅಸ್ತತ್ವವನ್ನು ಕಳೆದುಕೊಂಡಿಲ್ಲ. ಪ್ರಾಮುಖ್ಯತೆ ಕುಗ್ಗಿಲ್ಲ ಎಂದಾಗ ಕುರುಬ ಜನಾಂಗದ ಈ ಗುರುಪರಂಪರೆಯ ವೈಶಿಷ್ಟ್ಯ ಎಂತಹದೆಂಬುದು ಸ್ಫಟಿಕ ಶುಭ್ರ ಸಂಗತಿ.

ಕರ್ನಾಟಕದ ಕುರುಬರ ಒಡೆಯರ ಪರಂಪರೆಗೆ ಶತಶತಮಾನಗಳಷ್ಟು ಹಳೆಯ ಇತಿಹಾಸವಿದೆ. ಈ ಸಂಪ್ರದಾಯವು ಅಸ್ತಿತ್ವಕ್ಕೆ ಬಂದ ಬಗ್ಗೆ ಇಂದು ಎರಡು ಪ್ರಾಚೀನ ಸಾಂಗತ್ಯ ಕೃತಿಗಳು ಪ್ರಕಟವಾಗಿ ನಮಗೆ ಲಭ್ಯವಿವೆ. ಮೊದಲನೆಯದು, ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ, ಖ್ಯಾತ ವಿದ್ವಾಂಸ ಪ್ರೊ. ಎಂ. ಎಂ. ಕಲಬುರ್ಗಿ ಮತ್ತು ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಡಾ. ವೈ.ಸಿ. ಭಾನುಮತಿ ಅವರು ಸಂಶೋಧಿಸಿ ಸಂಪಾದಿಸಿರುವ ಗದಗಿನ ಶ್ರೀ ಜಗದ್ಗುರು ತೋಟದಾರ್ಯ ಮಠದ ಲಿಂಗಾಯತ ಅಧ್ಯಯನ ಸಂಸ್ಥೆಯ ಪ್ರಕಟಣೆ ‘ಸಿದ್ಧಮಂಕ ಚರಿತೆ’ ಎಂಬ ಗ್ರಂಥ.

ಸಿದ್ಧಮಂಕ ಚರಿತೆಯ ಮೂಲ ಹಸ್ತಪ್ರತಿಯು ಹೆಗ್ಗಡದೇವನಕೋಟೆ ತಾಲ್ಲೂಕಿನ ಎತ್ತಿಗದ ಮಠದ್ದಾಗಿದ್ದು, ಈಗ ಈ ಓಲೆಪ್ರತಿಯು ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಹಸ್ತಪ್ರತಿ ಭಂಡಾರದಲ್ಲಿದೆ.

ಎರಡನೆಯದು, ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಎಂ. ಎಂ. ಕಲಬುರ್ಗಿ, ಅದೇ ವಿಶ್ವವಿದ್ಯಾಲಯದ ಹಸ್ತಪ್ರತಿಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ಎಫ್.ಟಿ. ಹಳ್ಳಿಕೇರಿ ಹಾಗೂ ರಾಜ್ಯ ವಾರ್ತಾ ಇಲಾಖೆಯ ನಿವೃತ್ತ  ಜಂಟಿ ನಿರ್ದೇಶಕ ಸಿ. ಕೆ. ಪರಶುರಾಮಯ್ಯ ಅವರು ಸಂಪಾದಿಸಿರುವ ಗದಗಿನ ವಿದ್ಯಾನಿಧಿ ಪ್ರಕಾಶನ ಸಂಸ್ಥೆಯ ಪ್ರಕಟಣೆ ‘ತಗರ ಪವಾಡ’ ಎಂಬ ಗ್ರಂಥ. ಈ ಕೃತಿಯ ಮೂಲ ಆಕರಗಳೆಂದರೆ ತುಮಕೂರು ಜಿಲ್ಲೆಯ ಚಿಕ್ಕನಾಯ್ಕನಹಳ್ಳಿಯ  ರೇವಣಸಿದ್ಧೇಶ್ವರ ಮಠದ ಶ್ರೀ ರೇವಪ್ಪ ಒಡೆಯರ್. ಮಕ್ಕಳು ಶ್ರೀ ಕರಿಸಿದ್ಧಯ್ಯ ಒಡೆಯರ್ ಮತ್ತು ಶ್ರೀ ಗುರುಸಿದ್ಧಯ್ಯ ಒಡೆಯರ ಅವರು ಸಂರಕ್ಷಸಿಕೊಂಡು ಬಂದಿದ್ದ ಕಾಗದದ ಹಸ್ತಪ್ರತಿ ಹಾಗೂ ತುಮಕೂರು ಜಿಲ್ಲೆಯ ತುರುವೇಕೆರೆ ತಾಲ್ಲೂಕಿನ ಶ್ರೀ ರೇವಣಸಿದ್ದೇಶ್ವರ ಮಠದ ಹರಿವಾಣದ ಗೌಡರಾದ ಶ್ರೀ ಪರಶೇಗೌಡ  ಸುಪರ್ದಿಯಲ್ಲಿರುವ ಐದು ತಾಮ್ರಪತ್ರಗಳು (ಅವುಗಳನ್ನು ಈಗ ಸಂಪಾದಿಸಿ ಪ್ರಕಟವಾಗಿರುವ ತಗರ ಪವಾಡ ಗ್ರಂಥದ ಅನುಬಂಧದಲ್ಲಿ ಯಥಾವತ್ತಾಗಿ ಕೊಡಲಾಗಿದೆ) ಹಾಗೂ ಮುದ್ದೇಬಿಹಾಳ ತಾಲೂಕಿನ ಸರೂರು ಗ್ರಾಮದ ಪೂಜಾರಿಗಳ ಮನೆಯಲ್ಲಿ ಲಭಿಸಿದ ‘ಟಗರ ಪವಾಡ’ ಎಂಬ ಹೆಸರಿನ ಗದ್ಯಕೃತಿ (ಇದನ್ನು ಈಗ ಪ್ರಕಟವಾಗಿರುವ ‘ಸಿದ್ಧಮಂಕ ಚರಿತೆ’ಯ ಅನುಬಂಧದಲ್ಲಿ ಕೊಡಲಾಗಿದೆ).

ತಗರ ಪವಾಡ ಕೃತಿಯ ಸಂಗ್ರಹ ಗದ್ಯಾನುವಾದವನ್ನು ನಲವತ್ತು ವರ್ಷಗಳ ಹಿಂದೆ ನನ್ನ ವಿದ್ಯಾಗುರುಗಳಾಗಿದ್ದ, ಖ್ಯಾತ ವಿದ್ವಾಂಸ ಪ್ರೊ. ಡಿ. ಎಲ್. ನರಸಿಂಹಾಚಾರ್ ಅವರ ನಿರ್ದೇಶನದಂತೆ ಮೈಸೂರು ವಿಶ್ವವಿದ್ಯಾನಿಲಯ ಪ್ರತಿಷ್ಠಿತ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟಿಸಿದ್ದೇನೆ. ಶ್ರೀ ಡಿ.ಎಲ್. ಎನ್. ಅವರು ಬದುಕಿದ್ದಾಗ ನಾನು ಭೇಟಿಯಾದಾಗಲೆಲ್ಲ ತಗರ ಪವಾಡ ಗ್ರಂಥವನ್ನು ಪ್ರಕಟಿಸುವಂತೆ ಒತ್ತಾಯಿಸುತ್ತಿದ್ದರು. ಅವರ ಜೀವಿತ ಕಾಲದಲ್ಲಿ ಅದು ಕೂಡಿಬರಲಿಲ್ಲ. ಖ್ಯಾತ ಸಂಶೋಧಕ ಡಾ. ಎಂ.ಎಂ. ಕಲಬುರ್ಗಿ ಹಾಗೂ ಡಾ. ಎಫ್. ಟಿ. ಹಳ್ಳಿಕೇರಿ ಅವರ ಆಸಕ್ತಿ ಕಾರಣವಾಗಿ ತಗರ ಪವಾಡ ಗ್ರಂಥ ೨೦೦೪ರಲ್ಲಿ ಪ್ರಕಟಗೊಂಡಿತು.

ಕುರುಬರ ಗುರು ಪರಂಪರೆಯ ಪ್ರಾಚೀನತೆ ಮತ್ತು ವೈಶಿಷ್ಟ್ಯವನ್ನು ಅರಿಯಲು ಮತ್ತು ಕೂಲಂಕಷವಾಗಿ ಅಧ್ಯಯನ ಮಾಡಲು ಮೇಲು ಹೇಳಿದ ಈ ಎರಡು ಗ್ರಂಥಗಳು ಸಮೃದ್ಧವಾದ ಸಾಮಗ್ರಿಯನ್ನು ಒದಗಿಸುತ್ತವೆ. ಈ ಕೃತಿಗಳನ್ನು ಅವಲೋಕಿಸಿದಾಗ ಅವುಗಳಲ್ಲಿ ಹರಡಿರುವ ವಿಷಯವು ಕಲ್ಯಾಣಪಟ್ಟಣದಲ್ಲಿದ್ದ ಕುರುಬರು ಹಾಲಿನ ಅಡ್ಡೆಯ ಮೇಲೆ ಸತ್ತ ಕುರಿಯನ್ನು ಊರೊಳಕ್ಕೆ ತಂದದ್ದರ ಪರಿಣಾಮವಾಗಿ, ಶರಣರು ಕುರುಬರನ್ನು ರಟ್ಟಿಮತದವರೆಂದು ಪರಿಗಣಿಸಿ ಕಲ್ಯಾಣ ಪಟ್ಟಣದಿಂದ ಹೊರಕ್ಕೆ ಏಳುಬೇಲಿಗಳಿಂದ ಆಚೆ ಹಾಕಿದ್ದ ಪ್ರಸಂಗಕ್ಕೆ ಸಂಬಂಧಿಸಿದುದು ಸಿದ್ಧಮಂಕ ಚರಿತೆಯಲ್ಲಿ ಬರುವ ಮರುಳಮಂಕ ಮತ್ತು ತಗರ ಪವಾಡದಲ್ಲಿ ಬರುವ ಶಾಂತಮುತ್ತಯ್ಯ ಇಬ್ಬರೂ ಕುರುಬರ ಉದ್ಧಾರಕ್ಕಾಗಿ ಗುರುಕೃಪೆಯಿಂದ ಬಂದಿರುವ ಹರಿಕಾರರಾಗಿದ್ದಾರೆ. ಅಂದಿನ ಬಸವಾದಿ ಪ್ರಮಥರು ಮತ್ತು ಶರಣರ ಸಮ್ಮುಖದಲ್ಲಿ ಮೃತ ತಗರನ್ನು ಬದುಕಿಸಿ, ಪವಾಡವನ್ನು ಮೆರೆದ ಶಾಂತಮುತ್ತಯ್ಯನು ಶರಣ ಸಮುದಾಯದ ಮನ್ನಣೆಗೆ ಪಾತ್ರವಾದ ಪ್ರಸಂಗವು ತಗರ ಪವಾಡ ಗ್ರಂಥದಲ್ಲಿ ವಿಸ್ತಾರವಾಗಿ ಬಂದಿದೆ. ಅದೇ ರೀತಿ ಬಂಡೆಯ ಮೇಲಿನ ಸೂಜಿಯ ಮೇಲೆ ಮಂಡೆಯನ್ನು ನಿಲ್ಲಿಸಿ ಉಗ್ರತಪಸ್ಸನ್ನು ಮಾಡಿ ಸಿದ್ಧರಾಮರಾದಿಯಾಗಿ ಸಕಲ ಶರಣರ ಮನ್ನಣೆಯನ್ನು ಸಿದ್ಧಮಂಕ ಚರಿತೆಯ ಮರುಳಮಂಕನು ಗಳಿಸುತ್ತಾನೆ. ಈ ಇಬ್ಬರದೂ ಒಂದೇ ಗುರಿ. ಹೊರಹಾಕಲ್ಪಟ್ಟ ಕುರುಬರನ್ನು ಕಲ್ಯಾಣ ಪಟ್ಟಣದೊಳಗೆ ಕರೆತರಬೇಕೆಂಬ ಅಂತಃಕರಣ ತುಂಬಿದ ಕಳಕಳಿ ಈ ಕಾವ್ಯಗಳಲ್ಲಿ ದಟ್ಟವಾಗಿ ಮೂಡಿದೆ. ಪರಿಣಾಮವಾಗಿ ಈ ಇಬ್ಬರು ಮೂಲಪುರುಷರು ನಾಡಿನ ಕುರುಬ ಸಮಾಜಕ್ಕೆ ಗುರುಸ್ಥಾನದಲ್ಲಿರುವ ಮಾರ್ಗದರ್ಶಕರೆಂದು ಸ್ವತಃ ಗುರುಲಿಂಗ ಜಂಗಮಪ್ರೇಮಿ, ಸಮಾಜ ಸುಧಾರಕ, ಭಕ್ತಿಭಂಡಾರಿ ಬಸವಣ್ಣನ ಸಮ್ಮುಖದಲ್ಲಿ ನಿರ್ಣಯವಾದ ಪ್ರಸಂಗವು ಈ ಎರಡೂ ಗ್ರಂಥಗಳಲ್ಲಿ ವಿಸ್ತಾರವಾಗಿ ಬಂದಿದೆ. ಈ ಕೃತಿಗಳ ವಸ್ತು ಒಂದೇ ಆದರೂ ಇಬ್ಬರೂ ಕವಿಗಳೂ ಈ ಆಶಯವನ್ನು ಬೇರೆ ಬೇರೆ ರೀತಿಯಲ್ಲಿ ನಿರೂಪಿಸಿದ್ದಾರೆ.

ಸಿದ್ಧಮಂಕ ಚರಿತೆಯಲ್ಲಿ ಬರುವ ಮರುಳಮಂಕ ಮತ್ತು ತಗರ ಪವಾಡದಲ್ಲಿ ಬರುವ ಶಾಂತಮುತ್ತಯ್ಯ ಇಬ್ಬರೂ ಕುರುಬ ಕುಲದಲ್ಲಿ ಜನಿಸಿ ಬಂದವರೇ ಆಗಿದ್ದಾರೆ. ಅವರ ಉದ್ದೇಶವನ್ನು ಈಡೇರಿಸಿ, ಕುರುಬ ಸಮಾಜದ ಗುರುಸ್ಥಾನವನ್ನು ನೀಡಿ, ಧರೆಗೆ ಪರಿಚಯಸಿ ಆಶೀರ್ವದಿಸಿದ ಪ್ರಸಂಗವು ಅತ್ಯಂತ ಕುತೂಹಲಭರಿತವಾಗಿದೆ.

ಮೇಲೆ ಉಲ್ಲೇಖಿಸಿರುವ ಈ ಗ್ರಂಥಗಳ ಆಕರಳು ಮೈಸೂರು ಜಿಲ್ಲೆಯ ಚಿಕ್ಕನಾಯ್ಕನಹಳ್ಳಿ, ತುರುವೇಕೆರೆ ತಾಲ್ಲೂಕು ಗುಬ್ಬಿ ತಾಲ್ಲೂಕಿನ ಹಾಗಲ್ವಾಡಿ ಗ್ರಾಮವನ್ನು ಒಳಗೊಂಡು ರಾಜ್ಯದ ಉತ್ತರ ಭಾಗದ ವಿಜಾಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಸರೂರು ಗ್ರಾಮದವರೆಗೆ ಹರಡಿಕೊಂಡಿರುವದನ್ನು ಗಮನಿಸಿದಾಗ ವಿಶಾಲ ಕರ್ನಾಟಕದ ಹೆಚ್ಚು ಕಡಿಮೆ ಎಲ್ಲ ಭಾಗಗಳ ಕುರುಬ ಸಮಾಜದಲ್ಲೂ ಒಡೆಯರ ಗುರುಪರಂಪರೆಯು ಅಸ್ತಿತ್ವದಲ್ಲಿತ್ತು ಎಂಬ ಅಂಶವನ್ನು ಗುರುತಿಸಬಹುದು.

ಈ ರೀತಿಯ ಚಾರಿತ್ರಿಕವಾದ ಹಿನ್ನೆಲೆಯುಳ್ಳ ಕುರುಬರ ಗುರು ಒಡೆಯರ ಸಂಪ್ರದಾಯಗಳು ಇಂದಿಗೂ ಆಚರಣೆಯಲ್ಲಿರುವ ಕೆಲವು ನಿದರ್ಶನಗಳನ್ನು ಇಲ್ಲಿ ಹೇಳಬಹುದು. ಮೊದಲನೆಯದಾಗಿ ನಮ್ಮ ಜನಾಂಗದಲ್ಲಿ ಒಡೆಯರ ಸಂಪ್ರದಾಯದಲ್ಲಿ ಸ್ರೀಗೆ ನೀಡಿರುವ ಮನ್ನಣೆಯ ವಿಚಾರವನ್ನು ಪ್ರಸ್ತಾಪಿಸುತ್ತೇನೆ. ಕುರುಬರಲ್ಲಿ ಪರಂಪರೆಯಿಂದ ಬಂದಿರುವ ಒಡೆಯರ ಸಂಪ್ರದಾಯವು ಕೆಲವು ಕ್ರಾಂತಿಕಾರಿ ಸಂಗತಿಗಳನ್ನು ಒಳಗೊಂಡಿರುವುದು ವಿಶೇಷ. ಕುರುಬರು ತಮ್ಮ ಗುರುಗಳಾದ ಒಡೆಯರ ಧರ್ಮಪತ್ನಿಯನ್ನೂ ಸಹ ಗುರುವೆಂದೇ ಪೂಜ್ಯಭಾವದಿಂದ ಕಾಣುತ್ತಾರೆ. ಒಡೆಯರಯ್ಯಗಳು ನೆರವೇರಿಸುವ ಮದುವೆ, ಗೃಹಪ್ರವೇಶ, ನಾಮಕರಣ, ಶವಸಂಸ್ಕಾರ ಮುಂತಾದ ಕಾರ್ಯಗಳನ್ನು ಗುರುಪತ್ನಿಯರಾದ ಒಡೆಯರಮ್ಮಗಳೂ ಮಾಡಲು ಅರ್ಹರು.

ಒಡೆಯರಯ್ಯಗಳ ಸೊಸೆಯರಾಗಿ ಬರುವ ಕುರುಬರ ಹೆಣ್ಣುಮಕ್ಕಳಿಗೆ ನೀಡುವ ಶಿವದೀಕ್ಷೆ ಮತ್ತು ಲಿಂಗಧಾರಣೆಯ ಸನ್ನಿವೇಶವು ಮೈನವಿರೇಳಿಸುವಂತಹದು. ರೇವಣಸಿದ್ಧೇಶ್ವರನ ಮಠದಲ್ಲಿ ಮಾಹೇಶ್ವರ ಸ್ವರೂಪಿಯಾದ ರೇವಣಸಿದ್ಧಮೂರ್ತಿಯ ಎದುರಿಗೆ ನಾಲ್ಕು ಕಳಶಗಳನ್ನು ಹೂಡಿ, ಸೂತ್ರವನ್ನು ಬಂಧಿಸಿದ ಚೌಕದೊಳಗೆ ಹಸೆಮಣೆಯ ಮೇಲೆ ಲಿಂಗಧಾರಣೆ ಮಾಡಿಸಿಕೊಳ್ಳಲಿರುವ ಗುರುಪತ್ನಿಯು ಕಾಶಾಯವಸ್ತ್ರಧಾರಿಯಾಗಿ ಪದ್ಮಾಸನದಲ್ಲಿ ಕುಳಿತುಕೊಳ್ಳುತ್ತಾಳೆ. ಗರ್ಭಗುಡಿಯ ಶಿವಮೂರ್ತಿಯ ಕೊರಳಿನಿಂದ ಸೂತ್ರದ ಮೇಲೆ ಲಿಂಗವನ್ನು ತಂದು ಆಕೆಯ ಕೊರಳಿಗೆ ಧರಿಸಲಾಗುತ್ತದೆ. ನಂತರ ಆಕೆಯ ಬೊಗಸೆಗೆ ಕೆಂಡವನ್ನು ಸುರಿಯುವುದು, ನಾಲಗೆಯನ್ನು ಬೇವಿನಕಡ್ಡಿಯಿಂದ ಸುಡುವುದು, ಮಠದ ಪ್ರಾಂಗಣದಲ್ಲಿ ಗರ್ಭಗುಡಿಗೆ ಮುಖಮಾಡಿ ಬಿಚ್ಚಿದ ಮಂಡೆಯ ಮೇಲೆ ಹಿರಿಯ ಒಡೆಯರು ಬಲಪಾದವನ್ನು ಊರಿ, ಶಿವನ ಪಾದೋದಕವನ್ನು  ಸುರಿಯುವ ಶುಚಿಕಾರ್ಯವು ನಡೆಯುತ್ತದೆ. ನಂತರ ಕಾಶಾಯವಸ್ತ್ರ ಧರಿಸಿದ ಆಕೆ ಒಡೆಯರಮ್ಮ ನೆನಿಸಿಕೊಳ್ಳುತ್ತಾಳೆ. ವಿಭೂತಿ, ಅರಿಸಿನ ಕುಂಕುಮ, ಬಿಲ್ವಪತ್ರೆ, ತುಂಬೆ ಪುಷ್ಪ ಧರಿಸಿ ಕಂಕುಳಲ್ಲಿ ಜೋಳಿಗೆ ಹಾಕಿ, ಕೈಯಲ್ಲಿ ಬೆತ್ತ ಹಿಡಿದು, ಹಟ್ಟಿಯ ಕುರುಬರ ಹತ್ತಾರು ಮನೆಗಳಲ್ಲಿ ಕೋರಣ್ಯದ ಭಿಕ್ಷೆಯನ್ನು ಸ್ವೀಕರಿಸಬೇಕು. ಆ ಘಳಿಗೆಯಿಂದ ಆಕೆಯ ತಂದೆ ತಾಯಿ, ಅಣ್ಣ, ತಮ್ಮ, ಅಕ್ಕ, ತಂಗಿ ಮತ್ತಿತರು ತೌರಿನ ಬಂಧುಬಳಗವನ್ನು ಹರಸಿ ಆರ್ಶೀವದಿಸಲು ಆಕೆ ಅರ್ಹಳಾಗಿ ಬಿಡುತ್ತಾಳೆ. ಆ ಸಂದರ್ಭದಲ್ಲಿ ಆಕೆಯ ಬಂಧುವರ್ಗವು ಪಾದಮುಟ್ಟಿ, ನಮಸ್ಕರಿಸುವ ದೃಶ್ಯವು ಅಪರೂಪವಾದುದು. ಗಡಗಡ ನಡಗುವ ಸ್ಥಿತಿಯಲ್ಲಿರುವ ಆಕೆಯ ತೌರಿನ ತಾತನು ಸಹ ನಡುಬಾಗಿ ಹಣೆಯೊತ್ತಿ ಪಾದ ಸ್ಪರ್ಶಿಸಿ ನಮಿಸುವ ಸನ್ನಿವೇಶವು ಮೈನವಿರೇಳಿಸುವಂತಹುದು. ಸಮಾಜದಲ್ಲಿ ಹೆಣ್ಣಿಗೆ ಇಂತಹ ಉನ್ನತ ಸ್ಥಾನ-ಗೌರವವನ್ನು ಕೊಟ್ಟಿರುವ ನಿದರ್ಶನವು ಸಮಾಜದ ಯಾವುದೇ ವರ್ಗದಲ್ಲೂ ಕಂಡುಬರುವುದಿಲ್ಲ. ಇದು ಕುರುಬ ಜನಾಂಗದಲ್ಲಿ ಮಾತ್ರ ಆಚರಣೆಯಲ್ಲಿರುವ ಅದ್ಭುತವಾದ ಮತ್ತು ಅನುಕರಣೀಯವಾದ ಆದರ್ಶ.

ಮೊದಲೇ ಹೇಳಿದಂತೆ ಗುರುಪತ್ನಿಯಾಗಿ ಗುರುಪುತ್ರರನ್ನು ಕೈಹಿಡಿಯುವ ಹೆಣ್ಣುಗಳು ಕುರುಬ ಸಮಾಜದ ವಿವಿಧ ಬೆಡಗಿನ ಕುಟುಂಬಗಳಿಂದಲೇ ಬಂದವರು. ಅವರು ಒಡೆಯರ ಮಕ್ಕಳನ್ನು ಮದುವೆಯಾಗಿ ಒಡೆಯರಮ್ಮಗಳಾದ ಮೇಲೆ ಪೂರ್ವಾಶ್ರಮದ ತೌರಿನ ಆಹಾರ ಪದ್ಧತಿಗಳನ್ನು ಬಿಟ್ಟು ಒಡೆಯರ ಮನೆತನದ ಆಹಾರ ಪದ್ಧತಿಗಳನ್ನು ಅನುಸರಿಸಬೇಕು. ಇಲ್ಲಿ ಆಚರಣೆಯಲ್ಲಿರುವ ಮತ್ತೊಂದು ಆದರ್ಶವಾದ ಅಂಶವೆಂದರೆ, ಗುರುಪತ್ನಿಗೆ ಪತಿವಿಯೋಗವಾದರೆ ಆಕೆ ವಿಧವೆಯಾಗುವುದಿಲ್ಲ. ಮುತ್ತೈದೆಯ ಪ್ರತಿಕವಾದ ಹೂವು, ಬಳೆ, ಅರಿಸಿನ, ಕುಂಕುಮ, ಮಾಂಗಲ್ಯ, ಕಾಲುಂಗುರ ಮುಂತಾದ ಮಂಗಳವಸ್ತುಗಳನ್ನು ತೆಗೆಯುವುದಿಲ್ಲ. ಆಕೆ ಚಿರಮುತ್ತೈದೆ. ಹಲವು ಶತಮಾನಗಳಷ್ಟು ಹಿಂದೆಯೇ ಇಂತಹ ಕ್ರಾಂತಿಕಾರಿ ಹೆಜ್ಜೆಯನ್ನಿಟ್ಟು ಸ್ತ್ರೀಗೆ ಗುರುಸ್ಥಾನವನ್ನು ಕೊಟ್ಟಿರುವ ಈ ಸಂಪ್ರದಾಯವನ್ನು ಇಂದಿಗೂ ಮುಂದುವರೆಸಿಕೊಂಡು ಬಂದಿರುವುದು ಕುರುಬ ಜನಾಂಗದ ಹೆಗ್ಗಳಿಕೆಯಾಗಿದೆ.

ಒಡೆಯರ ವಂಶದ ಗಂಡುಮಕ್ಕಳಿಗೆ ಮತ್ತು ಒಡೆಯರ ಮನೆಗಳಿಗೆ ಸೊಸೆಯರಾಗಿ ಬರುವ ಹೆಣ್ಣುಮಕ್ಕಳಿಗೆ ಶಿವದಿಕ್ಷೇಯನ್ನು ಕೊಟ್ಟು ಲಿಂಗಧಾರಣೆಯನ್ನು ಮಾಡುವ ವಿಧಾನವು ಒಂದೇ ತೆರನಾಗಿರುತ್ತದೆ. ಇದೊಂದು ಅಪೂರ್ವವಾದ ಸನ್ನಿವೇಶವಾಗಿದ್ದು, ತಗರ ಪವಾಡ ಗ್ರಂಥದಲ್ಲಿ ಬರುವ ಶಾಂತಮುತ್ತಯ್ಯನಿಗೆ ಪಂಚಾಚಾರ್ಯರ ಸಮ್ಮುಖದಲ್ಲಿ ನಾಲ್ಕು ಕಳಸಗಳ ಮಧ್ಯೆ ವಿಧಿವತ್ತಾಗಿ ಗುರುಪಟ್ಟವನ್ನು ಕಟ್ಟಿದ ಸನ್ನಿವೇಶವನ್ನು ನೆನಪಿಗೆ ತರುತ್ತದೆ.

ಕುರುಬರು ತಮ್ಮ ಕುಲಗುರು ಒಡೆಯರ ಬಗ್ಗೆ ಹೊಂದಿರುವ ಭಕ್ತಿಗೌರವ ಪೂರಿತವಾದ ಮತ್ತೊಂದು ಆಚರಣೆಯನ್ನು ಇಲ್ಲಿ ಪ್ರಸ್ತಾಪಿಸುವುದು ಸೂಕ್ತವೆಂದು ಭಾವಿಸಿದ್ದೇನೆ. ಕಾರಣಾಂತರಗಳಿಂದ ಒಡೆಯರಯ್ಯ ಮತ್ತು ಒಡೆಯರಮ್ಮ ಇಬ್ಬರೂ ಊರಿನಲ್ಲಿ ಇಲ್ಲದ ಸಂದರ್ಭದಲ್ಲಿ ನಡೆಯಲೇಬೇಕಾದ ಧಾರ್ಮಿಕ ಕಾರ್ಯ, ಮಂಗಳಕಾರ್ಯ ಅಥವಾ ಅಂತ್ಯಸಂಸ್ಕಾರ ಕಾರ್ಯಗಳಿಗೆ ಕುರುಬರು ಅವರ ಗುರು ಒಡೆಯರನ್ನು ಬಿಟ್ಟು ಬೇರೆ ಯಾರನ್ನೂ ಆಹ್ವಾನಿಸುವುದಿಲ್ಲ. ಬದಲಾಗಿ ಒಡೆಯರಯ್ಯಗಳ ಮನೆಯ ಪೂಜಾಗೃಹದಿಂದ ವಿಭೂತಿ ಗಟ್ಟಿಯೊಂದನ್ನು ತಂದು ಕರಿಯ ಕಂಬಳಿಯ ಗದ್ದುಗೆಯ ಮೇಲೆ ಇಟ್ಟು ಭಕ್ತಿಭಾವದಿಂದ ಪೂಜಿಸಿ, ನಮಿಸಿ, ಆ ವಿಭೂತಿ ಗಟ್ಟಿಯನ್ನೇ ಒಡೆಯರ ಪ್ರತಿನಿಧಿ ಎಂದು ಭಾವಿಸಿ ಅದರ ಸಮ್ಮುಖದಲ್ಲಿ ಸಂಬಂಧಪಟ್ಟ ಕಾರ್ಯವನ್ನು ಮಾಡುವ ಪದ್ಧತಿಯ ಹಿಂದೆ ಇರುವ ಕುರುಬರ ಗುರುಭಕ್ತಿಯ ಅವರ್ಣನೀಯವಾದುದು ಮತ್ತು ಅವರ ಮುಗ್ಧ ಭಕ್ತಿಯ ಸಂಕೇತವಾದುದು.

ಒಡೆಯರ ಅಥವಾ ಒಡೆಯರಮ್ಮಗಳು ಕೈಲಾಸವಾಸಿಗಳಾದಾಗ ನಡೆಸುವ ಕಳೇಬರದ ಮೆರವಣಿಗೆ ಮತ್ತು ಅಂತ್ಯಸಂಸ್ಕಾರದ ವಿಧಿವಿಧಾನಗಳನ್ನು ನೋಡಿಯೇ ಅನುಭವಿಸಿರಬೇಕು. ಈ ಮೆರವಣಿಗೆ ಮತ್ತು ಸಂಸ್ಕಾರ ಕಾರ್ಯ ಸಂಪೂರ್ಣವಾಗಿ ಶಿವಮಯವಾಗಿ ಬಿಟ್ಟಿರುತ್ತದೆ. ಆಯಾಯ ಮಠಗಳಿಗೆ ಸಂಬಂಧಿಸಿದ ಒಡೆಯರನ್ನು ಅಥವಾ ಒಡೆಯರಮ್ಮಗಳ ಕಳೇಬರಗಳನ್ನು ಅವರ ಮನೆಯಿಂದ ಮಠಕ್ಕೆ ತಂದು ಗರ್ಭಗುಡಿಯಲ್ಲಿ ಶೋಭಿಸುವ ಶಿವಸ್ವರೂಪಿ ಮೂರ್ತಿಗಳ ಎದುರು ಪ್ರಾಂಗಣದಲ್ಲಿ ಇಡುತ್ತಾರೆ. ಪೂರ್ಣವಾಗಿ ಬಿಲ್ವಪತ್ರೆ, ಲಕ್ಕೆಪತ್ರೆ, ತುಂಬೆ ಪುಷ್ಪಗಳನು ಹೇರಳವಾಗಿಯೂ ಜೊತೆಗೆ ಮಲ್ಲಿಗೆ, ಮರುಗ, ಸೇವಂತಿಗೆ ಹೂವುಗಳಿಂದ ಕಳೇಬರವನ್ನು ಸಿಂಗರಿಸಿ ಹಣೆ, ಕೊರಳು, ಎದೆ, ಭುಜ, ರಟ್ಟೆ, ಮುಂಗೈ ಮುಂಗಾಲುಗಳಿಗೆ ಮೂರು ಬೆರಳುಗಳಲ್ಲಿ ಧವಳ ಬಣ್ಣದ ವಿಭೂತಿಯನ್ನು ಧರಿಸಿ, ಮಧ್ಯದಲ್ಲಿ ಗಂಧದ ಬೊಟ್ಟನಿಟ್ಟು ಅಲಂಕರಿಸಿದ ಮೇಲೆ ಮಠದ ಒಡೆಯರು ಲಿಂಗ್ಯಕೈ ಗುರುವಿಗೆ ಧೂಪ ದೀಪದಾರತಿಯ ಪೂಜೆ ಮಾಡುತ್ತಾರೆ. ನಗಾರಿ, ಕರಡೆ, ಭೇರಿ, ಚಮ್ಮೇಳದ ಮಂಗಳಧ್ವನಿ ಮೂಳಗುತ್ತಿರುವಾಗ ಗುರುವಿನ ಲಿಂಗದೀಕ್ಷೆಯನ್ನು ಸಡಿಲಿಸುವ ಕಾರ್ಯವು ವಿಧಿವತ್ತಾಗಿ ನಡೆಯುತ್ತದೆ. ಆ ವೇಳೆಗೆ ಭಕ್ತರು ಸಿದ್ಧಪಡಿಸಿದ್ದ ಅಲಂಕೃತ ಹಸಿರು ಮಂಟಪದಲ್ಲಿ ಲಿಂಗ್ಯಕೈ ಒಡೆಯರು ಅಥವಾ ಒಡೆಯರಮ್ಮಗಳ ಕಳೇಬರವನ್ನು ಪದ್ಮಾಸನದಲ್ಲಿ ಮಂಟಪದೊಳಕ್ಕೆ ಕೂರಿಸಿ, ಮತ್ತೊಮ್ಮೆ ಮಂಗಳವಾದ್ಯಗೊಂದಿಗೆ ಮಠದ ಒಡೆಯರಿಂದಿ ಪೂಜೆ ನಡೆಯುತ್ತದೆ. ನೆರೆದಿದ್ದ ಭಕ್ತಸಮೂಹ ಭಕ್ತಿ ಪುರಸ್ಸರ ನಮನದೊಂದಿಗೆ ತುಂಬೆ, ಬಿಲ್ವ, ಲಕ್ಕೆ, ಏಕದಳ ಕಣಗಿಲೆ ಪಂಚಪತ್ರೆ ಪುಷ್ಪಗಳ ಸುರಿಮಳೆಗೈದು ಧನ್ಯವಾಗುತ್ತದೆ. ವಿಭೂತಿಧಾರಿಗಳಾದ ನಾಲ್ಕು ಜನ ವೀರ ಮಕ್ಕಳು ಉಘೇ ಎಂಬ ಭಕ್ತವೃಂದದ ಘೊಷದೊಂದಿಗೆ ಮಂಟಪವನ್ನು ಹೆಗಲಲ್ಲಿ ಹೊತ್ತು ಮಂಗಳವಾದ್ಯಗಳ ಮುಂಗಟ್ಟಿನಲ್ಲಿ ಮಠದ ಹೊಸ್ತಿಲನ್ನು ದಾಟಿ ಹೊರಡುವ ಉತ್ಸವವು ಅಂತಿಮಯಾತ್ರೆಯಂತಿರದೆ ದೇವರ ಮೆರವಣಿಗೆಯೇನೋ ಎಂಬ ಭಕ್ತಿಭಾವದಿಂದ ತುಂಬಿರುತ್ತದೆ. ಮಧ್ಯೆ ಮಧ್ಯೆ ಬೀರೇಶ್ವರನ ವೀರಮಕ್ಕಳು ಮಂಟಪಕ್ಕೆ ಹೆಗಲು ಕೊಟ್ಟುಕೊಂಡು ಮೊದಲೇ ನಿರ್ಧರಿಸಿದ್ದ ಊರಿನ ಬೀದಿಗಳಲ್ಲಿ ಸಾಗುವ ಶ್ರೀಗುರುವಿನ ಉತ್ಸವವನ್ನು ಭಕ್ತಜನ ಸಮೂಹ ಕಣ್ತುಂಬ ನೋಡಿ ಅಂತಿನ ಗೌರವ ಸಲ್ಲಿಸುತ್ತಾರೆ. ನಿಧಾನವಾಗಿ ಸಾಗಿದ ಈ ಮೆರವಣಿಗೆಯ ಸಂಸ್ಕಾರ ವಿಧಿಯು ನಡೆಯಬೇಕಾಗಿರುವ ಅಯ್ನೋರ ಗದ್ದುಗೆಗಳ ಆವರಣದಲ್ಲಿ ಮೊದಲೇ ಸಿದ್ಧಪಡಿಸಿದ್ದ ನೆಲಮನೆಯನ್ನು ತಲುಪುತ್ತದೆ. ಮಂಟಪವನ್ನು ಇಳಿಸಿದ ಮೇಲೆ ಸಿದ್ಧಪಡಿಸಿದ ಮೂರನೆಯ ಮತ್ತು ಕಡೆಯ ಪೂಜೆ ನೈವೇದ್ಯದ ನಂತರ ನಿಧಾನವಾಗಿ ಒಡೆಯರುಗಳು ವೀರಮಕ್ಕಳ ನೆರವಿನೊಂದಿಗೆ ಲಿಂಗ್ಯಕೈ ಗುರುವನ್ನು ಸಾವಧಾನವಾಗಿ ನೆಲಮನೆಗೆ ಇಳಿಸಿ ಪದ್ಮಾಸನದಲ್ಲಿ ಕುಳ್ಳಿರಿಸಿ ಮೇಲೆ ಬರುತ್ತಾರೆ. ನೆಲಮನೆಯಲ್ಲಿ ಹಣತೆಯ ಕುಡಿ ಪ್ರಕಾಶಿಸುತ್ತಿರುತ್ತದೆ. ಭಕ್ತರು ನೂಕುನುಗ್ಗಲಿನಲ್ಲಿ ಶ್ರೀ ಗುರುವಿನ ಮೇಲೆ ವಿಭೂತಿ, ಬಿಲ್ವಪತ್ರೆಯ ಸುರಿಮಳೆಗೈದು ನಮಿಸುತ್ತಾರೆ. ಗುರುವಿನ ಕಾಯ ಬಿಲ್ವ ವಿಭೂತಿಯಿಂದ ಮುಚ್ಚಿಬಿಡುತ್ತದೆ. ನಂತರ ಅಗಲವಾದ ಬಾಳೆ ಎಲೆಗಳಿಂದ ದಟ್ಟವಾಗಿ ಮುಚ್ಚಿ ಹಿರಿಯ ಒಡೆಯರು ಮೂರು ಬೊಗಸೆ ಮೃತ್ತಿಕೆಯನ್ನು ಅರ್ಪಿಸಿದ ಮೇಲೆ ಮಠದ ಒಡೆಯರು, ಗೌಡರು, ಬಳಗ-ಭಂಡಾರಿಗಳು ಮೃತ್ತಿಕೆಯ ಸೇವೆಗೈದು ಧನ್ಯರಾಗುತ್ತಾರೆ. ಮಂಗಳ ವಾದ್ಯಗಳ ಧ್ವನಿ ಪ್ರತಿದ್ವನಿಯಲ್ಲಿ ಸಂಸ್ಕಾರ ವಿಧಿ ಪೂರ್ಣಗೊಳ್ಳುತ್ತದೆ. ವೀರಮಕ್ಕಳು ಶ್ರೀಗುರುವಿನ ಗದ್ದುಗೆಯನ್ನು ಚೌಕಾಕಾರವಾಗಿ ನಿರ್ವಿಸಿ ಒಡೆಯರಿಂದ ಹಣೆಗೆ ವಿಭೂತಿಯಲ್ಲಿ ನೊಸಲಿಕ್ಕಿಸಿಕೊಳ್ಳುತ್ತಾರೆ. ಇದು ನಮ್ಮ ಸುತ್ತಿನಲ್ಲಿ ಕೈಲಾಸವಾಸಿಗಳಾದ ಒಡೆಯರನ್ನು ಮತ್ತು ಒಡೆಯರಮ್ಮಗಳನ್ನು ಸಂಸ್ಕಾರ ಮಾಡುವ ವೈಭವದ ವಿಧಿವಿಧಾನ.

ಸಾಮಾನ್ಯವಾಗಿ ಶವಸಂಸ್ಕಾಕ್ಕೆ ಹೋದವರು ಮನೆಗೆ ಬಂದು ಬಟ್ಟೆ ಬಿಟ್ಟು ಸ್ನಾನ ಮಾಡಿ ಬಟ್ಟೆಯನ್ನು ತೊಡುವುದು ಪದ್ಧತಿ. ಆದರೆ ಶ್ರೀ ಗುರುವಿನ ಸಂಸ್ಕಾರ ಕಾರ್ಯದಲ್ಲಿ ಭಾಗವಹಿಸಿ ಬಂದವರಿಗೆ ಮೈಲಿಗೆ ಇಲ್ಲ ಎಂಬುದು ನಂಬಿಕೆಯಾಗಿದೆ. ಒಡೆಯರ ಅಂತ್ಯ ಸಂಸ್ಕಾರದ ಈ ವೈಭವದ ವಿಧಿ ವಿಧಾನಗಳನ್ನು ನೋಡಿಯೇ ಇರಬೇಕು, ನಮ್ಮ ಸುತ್ತಿನಲ್ಲಿ ‘ಸತ್ತರೆ ಅಯ್ನೋರಾಗಿ ಸಾಯಬೇಕು’ ಎಂಬ ನಾಣ್ಣುಡಿ ಹುಟ್ಟಿಕೊಂಡಿದೆ.

ನಮ್ಮ ಊರಿನಲ್ಲಿ ಶಿವರಾತ್ರಿಯ ಬೆಳಗಿನ ಪಾರಣೆ ದಿನದಂದು ಅಲಂಕೃತವಾದ ಮೂರು ಬೆಳ್ಳಿ ಪಲ್ಲಕ್ಕಿಗಳಲ್ಲಿ ಮಾಹೇಶ್ವರ ಸ್ವರೂಪಿ ಮೂರ್ತಿಗಳು ಮತ್ತು ಮೂರು ಮಠಗಳ ಬಣ್ಣದ ಪಲ್ಲಕ್ಕಿಗಳಲ್ಲಿ ಅಶ್ವಾರೂಢವಾದ ಅಲಂಕೃತ ಬೀರೇಶ್ವರ ಮೂರ್ತಿಗಳು, ಗಜಗಾತ್ರದ ಮಠದ ಆರು ಬಸವಗಳ ಮೇಲೆ ಹನ್ನೆರಡು ನಗಾರಿ, ಕರಡೆ, ಚಮ್ಮೇಳ, ಕಹಳೆ ವಾದ್ಯದ ಮೊಳಗಿನೊಂದಿಗೆ ಹೊರಡುವ ಉತ್ಸವದ ಕಣ್ಮನ ಸೆಳೆಯುವ ದೃಶ್ಯ, ಪ್ರತಿ ಪಲ್ಲಕ್ಕಿಗಳ ಮುಂದೆ ಝರಿಪೇಟ, ಶಲ್ಯ, ಕಚ್ಚೆ ಪಂಚೆ ಧರಿಸಿದ ಆಯಾ ಮಠದ ಗೌಡರು, ಬಳಗ ಭಂಡಾರಿಗಳು ಮುಂಗಟ್ಟಿನಲ್ಲಿ ಮುಖತೋರಣ, ಗುಗ್ಗುಳದ ದಟ್ಟಹೊಗೆ, ಪತ್ತುಗಳ ಬೆಳಕಿನಲ್ಲಿ ಭಕ್ತಸಮೂಹದೊಂದಿಗೆ ಮಂದಗತಿಯಲ್ಲಿ ಊರಿನ ಪ್ರಮುಖ ಬೀದಿಗಳಲ್ಲಿ ಸಾಗುವಾಗ ಕೈಲಾಸವೇ ಧರೆಗಿಳಿದು ಬಂದ ವೈಭವದೊಂದಿಗೆ ಶೋಭಿಸುತ್ತದೆ.

ನಾಡಿನ ಕುರುಬ ಜನಾಂಗಕ್ಕೆ ಇರುವ ಒಡೆಯರ ಪರಂಪರೆಯು ಇತಿಹಾಸದ ನೆಲಗಟ್ಟಿನಲ್ಲಿ ಧಾರ್ಮಿಕ ಚೌಕಟ್ಟಿನಲ್ಲಿ ಭಕ್ತವೃಂದದ ಮನಸ್ಸಿನಲ್ಲಿ ತಲೆತಲಾಂತರಗಳಿಂದ ರೂಢಮೂಲವಾಗಿ ನಿಂತಿರುವ ಒಂದು ಅಪೂರ್ವವಾದ ಸಂಪ್ರದಾಯವಾಗಿದೆ. ಈ ಕುರಿತು ನಾನು ಗದಗಿನ ಶ್ರೀ ತೋಂಟದ ಸಿದ್ಧಲಿಂಗೇಶ್ವರ ಮಠದ ಗುರುಸನ್ನಿಧಿಯಲ್ಲಿ ಮಾಡಿದ ಉಪನ್ಯಾಸದ ನಿವೇದನೆಯನ್ನು ಆಲಿಸಿದ ಶ್ರೀಗುರುಗಳು ಅವಾಕ್ಕಾದರು. ಕುರುಬ ಜನಾಂಗದಲ್ಲಿ ಆಚರಣೆಯಲ್ಲಿರುವ ಕೆಲವು ಸಂಪ್ರದಾಯಗಳು ಲಿಂಗಾಯತರಲ್ಲೂ ಇಲ್ಲವೆಂದು ಹೇಳಿ ಕುರುಬರಲ್ಲಿರುವ ಒಡೆಯರಮ್ಮನ ಸಂಪ್ರದಾಯವನ್ನು ಕೊಂಡಾಡಿದರು.

ಇಂತಹ ಅಪೂರ್ವವಾದ ಮತ್ತು ಅಪರೂಪವಾದ ಒಡೆಯರ ಗುರು ಸಂಪ್ರದಾಯವನ್ನು ಕಡೆಗಣಿಸಿದರೆ ಅದಕ್ಕಿಂತ ಘೋರವಾದ ಅಕಾರ್ಯ ಮತ್ತೊಂದಿಲ್ಲ. ಅಂತಹ ಕೆಲಸವನ್ನು ಮಾಡಿದರೆ ಕುರುಬ ಧಾರ್ಮಿಕ ಸ್ಥಿತಿಯು “ಹಾಲತೊರೆಗೆ ಬೆಲ್ಲದ ಕೆಸರು, ಸಕ್ಕರೆಯ ಮಳಲು, ತವರಾಜದ ನೊರೆತೆರೆಯಂತೆ, ಆದ್ಯರ ವಚನವಿರಲು ಬೇರೆ ಬಾವಿಯ ತೋಡಿ ಉಪ್ಪನೀರ ನುಂಬುವನ ವಿಧಿಯಂತೆ ಆಯಿತ್ತೆನ್ನ ಮತಿ ಕೂಡಲಸಂಗಮದೇವಾ” ಎಂಬ ಬಸವಣ್ಣನವರ ವಚನದಲ್ಲಿ ಹೇಳಿರುವಂತಾಗುತ್ತದೆ ಎನ್ನುವುದು ನನ್ನ ವೈಯಕ್ತಿಕವಾದ ಅನಿಸಿಕೆಯಾಗಿದೆ.