. ಕೃತಿ ಸ್ವರೂಪ

ತಗರ ಪವಾಡ ಕೃತಿಯು ಎಂಟು ಸಂಧಿಗಳಿಂದ ಕೂಡಿದ ಒಂದು ಸಾಂಗತ್ಯ ಗ್ರಂಥ. ಇದರಲ್ಲಿ ಒಟ್ಟು ೬೩೮ ಪದ್ಯಗಳಿವೆ. ಈ ಗ್ರಂಥದ ಕರ್ತೃವಿನ ಬಗ್ಗೆ ಮತ್ತು ಕಾಲದ ಬಗ್ಗೆ ನಮಗೆ ಎಲ್ಲಿಯೂ ಅಂಶಗಳು ದೊರೆಯುವುದಿಲ್ಲ. ಪ್ರತಿಕಾರನು ಗ್ರಂಥದಲ್ಲಿ ಎಲ್ಲಿಯೂ ತನ್ನ ಹೆಸರನ್ನಾಗಲೀ, ಕಾಲವನ್ನಾಗಲೀ ತಿಳಿಸಿಲ್ಲ. ಕವಿಚರಿತೆಯಲ್ಲಿಯೂ ಕೂಡ ಈ ಗ್ರಂಥದ ಹೆಸರು ಬಂದಿಲ್ಲ. ಸಾಮಾನ್ಯವಾಗಿ ಕನ್ನಡ ಕವಿಗಳು ತಮಗಿಂತ ಹಿಂದೆ ಇದ್ದ ಕವಿಗಳನ್ನು ತಮ್ಮ ಕಾವ್ಯಗಳ ಆರಂಭದಲ್ಲಿ ನೆನೆಯುತ್ತಾರೆ. ಆದರೆ ಇಲ್ಲಿ ಯಾವ ಪೂರ್ವಕವಿ ಸ್ತುತಿಯೂ ಕಂಡು ಬರುವುದಿಲ್ಲ. ಗ್ರಂಥದ ಆರಂಭದಲ್ಲಿ ದೇವತಾ ಪ್ರಾರ್ಥನೆಯಾದ ನಂತರ ನೇರವಾಗಿ ಕಥೆ ಪ್ರಾರಂಭವಾಗುತ್ತದೆ. ಗ್ರಂಥದ ಅಂತ್ಯದಲ್ಲಿ ಹೇಳಿರುವ “ಅಂತು ಸಂಧಿ ೮ಕ್ಕಂ ಪದನುಂ ೬೩೮ಕ್ಕಂ ತಗರ ಪವಾಡ ಸಂಪೂರ್ಣಂ ಮಂಗಳ ಮಹಾಃ “ಎಂಬ ವಾಕ್ಯದಿಂದ ಮತ್ತು ಈ ಗ್ರಂಥದಲ್ಲಿ ಬರುವ ಪವಾಡದ ನಿರೂಪಣೆಯಿಂದ ಈ ಗ್ರಂಥದ ಹೆಸರು ‘ತಗತ ಪವಾಡ’ ಎಂಬ ಅಂಶ ಮಾತ್ರ ಸ್ಪಷ್ಟವಾಗುತ್ತದೆ. ಗ್ರಂಥದ ಕಡೆಯಲ್ಲಿ ಎಂಟು ಸಂಧಿಗಳು ಮುಗಿದ ಮೇಲೆ ಪರಮೇಶ್ವರನನ್ನು ಕುರಿತು ಮಂಗಳಾರತಿಗಳೂ ಇವೆ.

ನಾಲ್ಕು ದಶಕಗಳ ಹಿಂದೆ ನನಗೆ ಈ ಗ್ರಂಥದ ಒಂದು ಹಳೆಯ ಕಾಗದದ ಪ್ರತಿ ದೊರೆತಿತ್ತು. ಇದು ನಮ್ಮ ಕುಲಗುರುಗಳಿಂದ ನನಗೆ ಅನುಗ್ರಹಿಸಲ್ಪಟ್ಟಿತು. ಈ ಗ್ರಂಥದ ಒಂದು ಓಲೆಯ ಪ್ರತಿಯು ಅವರ ಹಿರಿಯರಲ್ಲಿ ಇತ್ತೆಂದೂ ಅದು ಕ್ಷೀಣವಾಗುತ್ತಾ ಬರಲು ಅವರು ಅದನ್ನು ಅವರ ತಂದೆಯವರಿಂದ ಕಾಗದದ ಮೇಲೆ ಪ್ರತಿ ಮಾಡಿಸಿಕೊಂಡರೆಂದೂ ತಿಳಿದು ಬಂತು. ಆದರೆ ಆ ತ್ರುಟಿತ ಓಲೆಪ್ರತಿ ಅವರಲ್ಲಿರಲಿಲ್ಲ.

. ಕಥಾ ಸಾರಾಂಶ

ಮೊದಲನೆಯ ಸಂಧಿ : ಒಂದು ದಿನ ಪರಮೇಶ್ವರನು ಕೈಲಾಸದಲ್ಲಿ ಭೃಂಗಿ ಮುಂತಾದ ಗಣಗಳೊಡನೆ ಒಡ್ಡೋಲಗದಲ್ಲಿರುತ್ತಾನೆ. ಅಲ್ಲಿಗೆ ನಾರದನು ಪ್ರವೇಶಿಸುತ್ತಾನೆ. ಪರಮೇಶ್ವರನು ನಸುನಗುತ್ತಾ ನಾರದನನ್ನು ಸ್ವಾಗತಿಸಿ ಅವನ ಯೋಗಕ್ಷೇಮವನ್ನು ವಿಚಾರಿಸಿ ಇಂದಿನ ಸುದ್ದಿ ಏನೆಂದು ಪ್ರಶ್ನಿಸುತ್ತಾನೆ. ಅದಕ್ಕೆ  ನಾರದನು, “ಏನು ಹೇಳಲಿ ಪರಮೇಶ್ವರ, ಭೂಲೋಕದಲ್ಲಿ ಕೊಲ್ಲಾಪುರವೆಂಬ ಪಟ್ಟಣದಲ್ಲಿ ಮಾಯೆ ಎಂಬ ಒಬ್ಬಳು ವೇಶ್ಯೆ ಇದ್ದಾಳೆ. ಆಕೆಗೆ ದಾನವಮಾನವರಾರೂ ಇದಿರಿಲ್ಲ. ಆಕೆಯ ರೂಪು ಲಾವಣ್ಯ ವಿಭ್ರಮಗಳನೇಕವನ್ನು ಕಂಡು ಆಕೆಯನ್ನು ಕೂಡಬೇಕೆಂದು ಅನೇಕ ಸಿದ್ಧರು ಹೋಗುತ್ತಾರೆ. ಹಾಗೆ ಮೋಹಿಸಿ ಹೋದ ಸಿದ್ಧರುಗಳಿಗೆ ಮಾಯೆಯು ವಿಷವನ್ನು ಉಣಲಿಕ್ಕುತ್ತಾಳೆ. ಆ ವಿಷವನ್ನು ಉಂಡು ಆಕೆಯನ್ನು ಜಯಿಸಿದ ಕಡುಗಲಿ ಸಿದ್ಧನು ಇದುವರೆಗೆ ಯಾವನೂ ಇಲ್ಲ. ಹೀಗೆ ಮಾಯೆಗೆ ಸೋತು ಶರಣಾದ ನವಕೋಟಿ ಸಿದ್ಧರುಗಳು ಆಕೆಯ ಮನೆಯಲ್ಲಿ ಜೀತದಾಳುಗಳಾಗಿ ಮೂಗಿಗೆ ಕವಡೆ ಕಟ್ಟಿಕೊಂಡು ದುಡಿಯುತ್ತಿದ್ದಾರೆ. ಈ ಪರಿಯನ್ನು ವಿಚಾರಿಸದೆ ಕಾಲಾಂತಕನಾದ ನೀನು ಸುಮ್ಮನಿರುವುದೇ ?” ಎಂದು ಕೇಳುತ್ತಾನೆ.

ಆಗ ಪರಮೇಶ್ವರನು ಒಬ್ಬ ಸಿದ್ಧನ ವೇಷವನ್ನು ತಾಳಿ ಕೊಲ್ಲಾಪುರಿಯಲ್ಲಿದ್ದ ಮಾಯೆಯಲ್ಲಿಗೆ ಬರುತ್ತಾನೆ. ಆತನ ಬರುವಿಕೆಯಿಂದಲೇ ಒಂದು ರೀತಿಯ ಪ್ರಭೆ ಉಂಟಾಗುತ್ತದೆ. ಎಂದಿನಂತೆ ಮಾಯೆಯು ಸಿದ್ಧನಿಗೆ ವಿಷವನ್ನು ಕೊಟ್ಟಳು. ಅದನ್ನು ಸಂತೋಷದಿಂದ ಸೇವಿಸಿದ ಸಿದ್ಧನನ್ನು ಕಂಡು ಮಾಯೆಯು ತನ್ನಲ್ಲಿದ್ದ ವಿಷ ಕೊಡಗಳನ್ನೆಲ್ಲ ತಂದು ಅವನ ಮುಂದಿಳುಹುತ್ತಾಳೆ. ಅದೆಲ್ಲವನ್ನೂ ಸಿದ್ಧನು ಕುಡಿದು ಬಿಡುತ್ತಾನೆ. ಆಗ ಈತನು ಮಾಯಾತೀತನೆಂದರಿತ ಮಾಯಯು ಅನವ ಪಾದಕ್ಕೆ ದಿಂಡುರುಳುತ್ತಾಳೆ. ಪರಮೇಶ್ವರನು ಹೀಗೆ ಮಾಯೆಯ ಮೂಗು ಮುಂದಲೆಗಳನ್ನು ಕೊಯ್ದು “ರಂಡೆ ನೀ ಹೋಗೆಂದು” ಝಂಕಿಸುತ್ತಾನೆ.

ನಂತರ ಮಾಯೆಯ ಮೋಹಕ್ಕೆ ಮನಸೋತು ಆಕೆಯನ್ನು ಗೆಲ್ಲಲಾರದೆ ಶರಣಾಗಿ ಸೆರೆಯಲ್ಲಿದ್ದ ನವಕೋಟಿ ಸಿದ್ಧರುಗಳ ಕಡೆ ತಿರುಗುತ್ತಾನೆ. ಅವರ ಅವಿವೇಕಕ್ಕೆ ಕೋಪಿಸಿ ಅವರೆಲ್ಲರನ್ನೂ ಕುರಿಗಳಾಗಿರೆಂದು ಶಾಪ ಕೊಡುತ್ತಾನೆ. ಆಗ ಅಲ್ಲಿದ್ದ ನವಕೋಟಿ ಸಿದ್ಧರುಗಳೂ ನಾನಾ ವರ್ಣದ ಕುರಿಗಳಾಗಿ ಭೋರ್ಗರೆಯುತ್ತ ಪರಮೇಶ್ವರನ ಸುತ್ತ ಮುತ್ತುತ್ತವೆ. ಅವುಗಳನ್ನು  ಕಾಯುವ ಭಾರವನ್ನು ಪರಮೇಶ್ವರನು ದಿಗ್ದೇವತೆಗಳಿಗೆ ವಹಿಸುತ್ತಾನೆ. ಕೆಲವು ಕಾಲ ದೇವತೆಗಳು ಈ ಕುರಿಗಳನ್ನು ಕಾಯ್ದು ಅವನ್ನು ನಿರ್ವಹಿಸಲಾರದೆ ಮತ್ತೆ ಪರಮೇಶ್ವರನಿಗೇ ಒಪ್ಪಿಸುತ್ತಾರೆ. ಆಗ ಪರಮೇಶ್ವರನು ನವಕೋಟಿ ಕುರಿಗಳನ್ನೂ ಮೇಯಿಸುತ್ತಾ ತೊಗರಿಸಿ ಎಂಬ ಊರಿಗೆ ಬರುತ್ತಾನೆ. ಆ ತೊಗರಿಸಿ ಎಂಬ ಊರಿನಲ್ಲಿ ಆದಿಗೊಂಡನೆಂಬ ಒಕ್ಕಲಿಗನು ಒಕ್ಕಲುತನ ಮಾಡಿಕೊಂಡಿದ್ದನು. ಆತನಿಗೆ ಏಳು ಮಂದಿ ಮಕ್ಕಳು. ಆದಿಗೊಂಡನಿಗೆ ಕೊಡಗಿ ಹೊಲವೆಂಬ ಹೊಲವಿರುತ್ತದೆ. ಪರಮೇಶ್ವರನು ಕುರಿಗಳೆಲ್ಲವನ್ನೂ ಆ ಹೊಲದ ಮೂಲೆಯಲ್ಲಿದ್ದ ಒಂದು ದೊಡ್ಡ ಹುತ್ತದಲ್ಲಿ ಅಡಗಿಸಿ ಆ ಹುತ್ತದ ಮೇಲೆ ಒಂದು ಚೋದ್ಯವಾದ ಮುತ್ತುಗವನ್ನು ನಿರ್ಮಿಸಿದನು. ಅಲ್ಲದೆ ಪದ್ಮಣ್ಣನು ಹೊರತು ಮತ್ತೆ ಯಾರಾದರೂ ಆ ಹುತ್ತದ ಬಳಿ ಬಂದರೆ ಭೂತಗಳು ಹೆದರಿಸಲೆಂದು ಕಟ್ಟು ಮಾಡಿ, ಅಲ್ಲಿಗೆ ವೀರೇಶನನ್ನು ಯಾರಿಗೂ ಅರಿವಿಲ್ಲದಂತೆ ಕಾವಲಿಟ್ಟು ಕೈಲಾಸಕ್ಕೆ ತೆರಳುತ್ತಾನೆ.

ಎರಡನೆಯ ಸಂಧಿ : ತೊಗರಿಸಿಯ ಒಕ್ಕಲಿಗ ಆದಿಗೊಂಡನ ಏಳು ಜನ ಮಕ್ಕಳಲ್ಲಿ ಪದ್ಮಣ್ಣನೇ ಚಿಕ್ಕವನು. ಆತನು ಅಣ್ಣಂದಿರಿಗೆ ಆರಂಭದಲ್ಲಿ ನೆರವಾಗದೆ ಸುಮ್ಮನೆ ತಿರುಗಾಡಿಕೊಂಡಿದ್ದನು. ಆತನನ್ನು ನೆರೆಹೊರೆಯ ಜನರೆಲ್ಲ ಉಂಡಾಡಿ, ಪುಂಡುಗಾರ ಎಂದೆಲ್ಲ ಕರೆಯುತ್ತಿದ್ದರು. ಪದ್ಮಣ್ಣನ ತಾಯಿ ಮಲ್ಲಮ್ಮನು ಮಗನನ್ನು ಕರೆದು ಬುದ್ಧಿವಾದವನ್ನು ಹೇಳುತ್ತಾಳೆ. ತಾಯಿಯು ಹೇಳಿದ ಬುದ್ಧಿವಾದದ ಮಾತುಗಳನ್ನು ಗ್ರಹಿಸಿದ ಪದ್ಮಣ್ಣನು ಆ ದಿನ ಊಟ ಮುಗಿಸಿಕೊಂಡು ಗಿಡಗಳನ್ನು ಕಡಿಯಲು ಹೊಲಕ್ಕೆ ಹೊರಡುತ್ತಾನೆ. ತಂದೆ ಆದಿಗೊಂಡನು ಮಗನನ್ನು ಕುರಿತು, “ಹುತ್ತವನ್ನು ಹೊಡೆಯಬೇಡಿ, ಮುತ್ತುಗವ ತರಿಯಬೇಡ, ಮತ್ತಿಪ್ಪ ಮರಗಳ ನೀ ತರಿ”  ಎಂದು ಹೇಳುತ್ತಾನೆ.  ಆದರೂ ಪದ್ಮಣ್ಣನು ಹೊಲದ  ಮೂಲೆಯಲ್ಲಿದ್ದ ಹುತ್ತವನ್ನು ಒಡೆದು, ಅದರ ಮೇಲಿದ್ದ ಮುತ್ತುಗವನ್ನು ಕಡಿದನು. ಕೂಡಲೇ ಆ ಹುತ್ತದಲ್ಲಿ ಅಡಗಿದ್ದ ಕುರಿ ಹಿಂಡು ಭೋರ್ಗರೆವುತ್ತಾ ಈಚೆಗೆ ಬಂದು ಪದ್ಮಣ್ಣನನ್ನು ಮುತ್ತುತ್ತವೆ. ಪೊಡವಿ ಆಕಾಶ ನಡಗುವಂತೆ ಇದನ್ನು ನೋಡಿದ ಪದ್ಮಣ್ಣನು ಭಯಚಕಿತನಾಗಿ ನಿಲ್ಲುತ್ತಾನೆ. ಈ ಸಂಗತಿಯನ್ನು ಕೈಲಾಸದಲ್ಲಿದ್ದ ಪರಮೇಶ್ವರನು ನೋಡಿ ನಸುನಕ್ಕು ಪದ್ಮಣ್ಣನಲ್ಲಿಗೆ ಬರುತ್ತಾನೆ. ಒಂದು ಪದ್ಮಣ್ಣನನ್ನು ಮುದ್ದಿಸಿ ಮುಂದೆ ಇವಕ್ಕೆ ನೀನು ಒಡೆಯನಾಗಬೇಕೆಂದು ಹೇಳುತ್ತಾನೆ. ಆಗ ಪದ್ಮಣ್ಣನು ಇಷ್ಟೊಂದು ಕುರಿಗಳನ್ನು ನಿರ್ವಹಿಸುವುದು ತನ್ನ ಕೈಯಿಂದ ಅಸಾಧ್ಯವೆಂದೂ, ತನ್ನ ಜೊತೆಗೆ ಇನ್ನೊಬ್ಬರನ್ನು ಕರುಣಿಸಬೇಕೆಂದೂ ಬೇಡುತ್ತಾನೆ. ಪದ್ಮಣ್ಣನ ಬೇಡಿಕೆಯನ್ನು ಪರಮೇಶ್ವರನು ಮನ್ನಿಸಿ ವೀರಬೀರಯ್ಯನನ್ನು ಸೃಷ್ಟಿಮಾಡಿ ಪದ್ಮಣ್ಣನನ್ನೂ ಅವನನ್ನೂ ಜೊತೆ ಮಾಡಿ ಕುರಿಗಳ ಭಾರವನ್ನು ಅವರಿಗೆ ವಹಿಸಿ ಕೈಲಾಸಕ್ಕೆ ತೆರಳುತ್ತಾನೆ.

ಇತ್ತ ಕುರಿಗಳನ್ನು ಮುಂದೆ ಬಿಟ್ಟುಕೊಂಡು ಪದ್ಮಣ್ಣನೂ, ಬೀರಯ್ಯನೂ ಹೊರಡುತ್ತಾರೆ. ಹೀಗೆ ಹೋಗುತ್ತಿರಲು ಒಂದು ಅಡವಿಯ ಮಧ್ಯದಲ್ಲಿ ಬಕನೆಂಬ ರಕ್ಕಸನು ಎದುರು ಬಂದು ಕುರಿಗಳನ್ನು ತಿನ್ನುವುದಾಗಿ ಧಾವಿಸುತ್ತಾನೆ. ಆಗ ಕಡುಗಲಿ ವೀರಬೀರಯ್ಯನು ತನ್ನ ತೋಳ್ಬಲದಿಂದ ರಕ್ಕಸನನ್ನು ಸಂಹರಿಸುತ್ತಾನೆ. ರಕ್ಕಸನನ್ನು ಸಂಹರಿಸಿದ ತಕ್ಷಣ ಆತನ ಮಗಳು ತನಗೆ ದಿಕ್ಕಿಲ್ಲದಂತಾಯಿತೆಂದು ರೋಧಿಸುತ್ತಾ ಬಂದು ಬೀರಯ್ಯನ ಪಾದಕ್ಕೆರೆಗುತ್ತಾಳೆ.  ಆಗ ಪದ್ಮಣ್ಣನಿಗೆ ಆಕೆಯನ್ನು ವಿವಾಹ ಮಾಡುತ್ತಾನೆ ಬೀರಯ್ಯ. (ಇಲ್ಲಿಗೆ ಬೀರಯ್ಯನ ವಿಚಾರ ಮುಗಿಯುತ್ತದೆ. ಕಥೆಯಲ್ಲಿ ಇನ್ನು ಮುಂದೆ ಆತನ ಪ್ರಸ್ತಾಪ ಬರುವುದಿಲ್ಲ).

ಪದ್ಮಣ್ಣನು ರಾಕ್ಷಸಿಯ ಮಗಳು ಸಿರಿವಂತೆಯೊಡನೆ ಕುರಿಗಳನ್ನು ಕಾಯುತ್ತಾ ಮುಂದುವರಿಯುತ್ತಾನೆ. ಅಲ್ಲಿಗೆ ಪರಮೇಶ್ವರನು ಬರುತ್ತಾನೆ. ಪದ್ಮಣ್ಣನು ನಡೆದ ಸಂಗತಿಯನ್ನು ವಿವರಿಸುತ್ತಾನೆ. ಆಗ ಪರಮೇಶ್ವರನು ಪದ್ಮಣ್ಣನಿಗೆ “ಕಂದ ಈಕೆಯನ್ನು ನಿನ್ನ ಚಿಕ್ಕ ಹೆಂಡತಿಯನ್ನಾಗಿ ಸ್ವೀಕರಿಸು” ಎಂದು ಹೇಳುತ್ತಾನೆ. (ಪದ್ಮಣ್ಣನು ತೊಗರಿಸಿಯನ್ನು ಬಿಡುವ ವೇಳೆಗೆ ಮದುವೆಯಾಗಿರುತ್ತದೆ. ಹೆಂಡತಿಯ ಹೆಸರು ಲಿಂಗಮ್ಮ) ಮತ್ತೆ ಪರಮೇಶ್ವರನು ಕಂದ “ನಿನ್ನ ಹಿರಿಯ ಹೆಂಡತಿ ಲಿಂಗಮ್ಮನ ಮಕ್ಕಳು ಹತ್ತಿ ಕಂಕಣದ ಕುರುಬರೆಂದೂ, ನಿನ್ನ ಚಿಕ್ಕ ಹೆಂಡತಿ ಸಿರಿವಂತೆಯ ಮಕ್ಕಳು ಉಣ್ಣೆ ಕಂಕಣದ ಕುರುಬರೆಂದೂ ಲೋಕದಲ್ಲಿ ಪ್ರಸಿದ್ಧರಾಗುತ್ತಾರೆ. (ಹತ್ತಿ ಕಂಕಣದ ಕುರುಬರು ಮತ್ತು ಉಣ್ಣೆ ಕಂಕಣದ ಕುರುಬರು ಎಂಬ ಪ್ರಭೇದ ಈಗಲೂ ಇದೆ.) ನೀನು ಹುಟ್ಟಿನಿಂದ ಒಕ್ಕಲಿಗ, ಕುರಿಗಳನ್ನು ಕೂಡಿದ್ದರಿಂದ ಕುರುಬಗೌಡನಾದೆ. ನಿನ್ನ ಕುಲದೇವರು ವೀರಬೀರಯ್ಯ, ನಿನ್ನ ಕುಲಗುರುವು ಶಾಂತಮುತ್ತಯ್ಯ” (ಈ ಶಾಂತಮುತ್ತಯ್ಯನ ವಿಚಾರ ಮುಂದೆ ಬರುತ್ತದೆ. ಈತ ಪದ್ಮಣ್ಣನ ಹಿರಿಯ ಹೆಂಡತಿ ಲಿಂಗಮ್ಮನ ಮಗ. ಈತನೇ ಕಲ್ಯಾಣಪಟ್ಟಣದಲ್ಲಿ ತಗರ ಪವಾಡವನ್ನು ಮರೆಯುವವನು.) ಆತನಿಗೆ ಒಕ್ಕಲಾಗಿ ಶಶಿಧರ ರೇವಣಸಿದ್ಧೇಶ್ವರನ ಮಕ್ಕಳಾಗಿ ಸೌಭಾಗ್ಯ ಸಂಪನ್ನರಾಗಿ ಬದುಕುವರೆಂದು ಹರಸಿ ಭಸಿತವನ್ನಿಟ್ಟು ಕೈಲಾಸಕ್ಕೆ ತೆರೆಳುತ್ತಾನೆ.

ಇತ್ತ ತೊಗರಿಸಿಯಲ್ಲಿ ಪದ್ಮಣ್ಣನ ತಾಯಿ ಮಲ್ಲಮ್ಮನು ತನ್ನ ಮಗನು ಹೋದ ದುಃಖದಿಂದ ತೀವ್ರವಾಗಿ ಬಳಲುತ್ತಿರುತ್ತಾಳೆ. ಅಲ್ಲದೆ ಆ ಹಿಂದಿನ ರಾತ್ರಿ ತನ್ನ ಮಗನು ಸಿರಿವಂತೆ ಸಹವಾಗಿ ಕುರಿಗೂಡಿಕೊಂಡು ಮನೆಗೆ ಬಂದಂತೆ ಕನಸಾಗಿರುತ್ತದೆ ಮತ್ತು ಅದೇ ದಿನ ಒಬ್ಬ ಶರಣನು ಅವರಲ್ಲಿಗೆ ಬಂದು ಪದ್ಮಣ್ಣನು ಯಾವ ಅಪಾಯಕ್ಕೂ ಗುರಿಯಾಗಿಲ್ಲವೆಂದೂ ಆತನು ಹಿಂತಿರುಗಿ ಬರುತ್ತಾನೆಂದೂ ನಂಬಿಕೆ ಕೊಡುತ್ತಾನೆ. ಮಗ ಬರುವನೆಂಬ ನೆಮ್ಮದಿಯಿಂದ ಆದಿಗೊಂಡ ಮಲ್ಲಮ್ಮ ಇವರು ತಮ್ಮ ಮೊಮ್ಮಗ ಶಾಂತಯ್ಯನಿಗೆ ಪರಿವಿಗೊಂಡನೆಂಬುವನ ಮೊಮ್ಮಗಳು ದೇವಮ್ಮ ಎಂಬಾಕೆಯನ್ನು ತಂದು ಸಂತೋಷದಿಂದ ವಿವಾಹ ಮಾಡುತ್ತಾರೆ. ಅಷ್ಟರಲ್ಲಿ ಪದ್ಮಣ್ಣನು ಕುರಿ ಹಿಂಡು ಸಮೇತ ತೊಗರಿಸಿಯನ್ನು ಪ್ರವೇಶಿಸಿ ಬಿತ್ತಿದ ಹೊಲಕ್ಕೆ ಅಷ್ಟು ಕುರಿಗಳನ್ನು ಕೊಡುತ್ತಾನೆ. ಈ ಅನಾಹುತವನ್ನು ನೋಡಿ ಊರಿನ ಜನವೆಲ್ಲಾ ಅಲ್ಲಿಗೆ ಬೊಬ್ಬಿಡುತ್ತ ಧಾವಿಸಿ ಬರುತ್ತದೆ. ತನ್ನ ಕಡೆಗೆ ಧಾವಿಸಿ ಬರುತ್ತಿರುವ ಜನವನ್ನು ಕಂಡ ಪದ್ಮಣ್ಣನು ದೊಡ್ಡ ದೊಡ್ಡ ದೊಣ್ಣೆಯೊಂದನ್ನು ಬೀಸಿ ಜನರನ್ನು ಹೆದರಿಸುತ್ತಾನೆ. ಆದಿಗೊಂಡನ ಹಿರಿಯ ಮಗ ಮಲ್ಲಣ್ಣನು ಈ ದೃಶ್ಯವನ್ನು ನೋಡಿ ಭಯಬೀತನಾಗಿ ತಂದೆಯ ಬಳಿ ಬಂದು ‘ಇಂದು ನಿನ್ನ ಬಸುರಲ್ಲಿ ಮತ್ತೆ ಬಂದಂತಾಯಿತು’ ಎಂದು ನಡೆದ ಸಂಗತಿಯನ್ನು ವರದಿ ಮಾಡುತ್ತಾನೆ. ಈ ಮಾತುಗಳನ್ನು ಕೇಳಿದ ಮಲ್ಲಮ್ಮನು ಆತನು ತನ್ನ ಮಗನೇ ಇರಬೇಕೆಂದು ಊಹಿಸಿ ಪತಿಯೊಡನೆ ಹೊಲಕ್ಕೆ ತೆರಳುತ್ತಾಳೆ. ಹರೆಯವಳಿದ ಪದ್ಮಣ್ಣನನ್ನು ನೋಡಿ ಮಲ್ಲಮ್ಮ ಮರುಗುತ್ತಾಳೆ. ಪದ್ಮಣ್ಣನು ತಂದೆ ತಾಯಿಗಳ ಪಾದಕ್ಕೆರಗುತ್ತಾನೆ. ಆ ವೇಳೆಗೆ ಸಂಜೆಯಾಗುತ್ತದೆ. ಪದ್ಮಣ್ಣನ ಕುರಿಗಳನ್ನೂ ಸಿರಿವಂತೆಯನ್ನೂ ಊರ ಹೊರಗೆ ಇವರು ಕರುವುಗಲ್ಲಿನ ಬಳಿ ಬಿಟ್ಟು ತಂದೆ ತಾಯಿಗಳ ಜೊತೆ ಮನೆಗೆ ಹೋಗುತ್ತಾನೆ.

ಮೂರನೆಯ ಸಂಧಿ : ಬಹಳ ದಿನಗಳ ನಂತರ ಬಂದ ಪತಿಯನ್ನು ಲಿಂಗಮ್ಮನು ಬಹು ವಿಧವಾಗಿ ಸ್ಮರಿಸುತ್ತಾಳೆ. ಆ ರಾತ್ರಿ ಪದ್ಮಣ್ಣನು ಅಲ್ಲಿಯೇ ಇರುತ್ತಾನೆ. ಬೆಳಗ್ಗೆ ಎದ್ದು ಪದ್ಮಣ್ಣನು ತಾನಿನ್ನ ಹೊರಡುವುದಾಗಿ ತಾಯಿಗೆ ತಿಳಿಸುತ್ತಾನೆ. ಇದನ್ನು ಕೇಳಿದ ಮಲ್ಲಮ್ಮನು ಮರುಗುತ್ತಾಳೆ. ಕಡೆಗೆ, ಹೋಗುವುದಾದರೆ ತಮ್ಮಲ್ಲಿರುವ ಹನ್ನೆರಡು ಸಾವಿರ ಹೊನ್ನು ಹಣವನ್ನು ಭಾಗ ಮಾಡಿಕೊಂಡು, ಹೆಂಡತಿ ಮಕ್ಕಳನ್ನು ಕರೆದುಕೊಂಡು ಹೋಗುವುದೆಂದು ಹೇಳುತ್ತಾಳೆ. ಪದ್ಮಣ್ಣ ಲಿಂಗಮ್ಮ ಇವರು ಹಣವನ್ನು ತೆಗೆದುಕೊಳ್ಳದೆ ಅದು ಉಳಿದ ಆರು ಜನ ಮಕ್ಕಳಿಗೇ ಇರಲೆಂದೂ ಅವರು ಅನುಭವಿಸಿದರೆ ಅದು ನಾವು ಅನುಭವಿಸಿದಂತೆ ಎಂದೂ ಹೇಳಿ ಆದಿಗೊಂಡ ಮಲ್ಲಮ್ಮರಿಗೆ ನಮಸ್ಕರಿಸಿ ಹೊರಡಲನುವಾಗುತ್ತಾರೆ. ಅವರು ಗಂಡಹೆಂಡಿರನ್ನು  ಹರಸುತ್ತಾರೆ. ಊರಿನ ಜನರೆಲ್ಲ ಗಂಡಹೆಂಡಿರನ್ನು ಹರಸಿ ಬೀಳ್ಕೊಡುತ್ತಾರೆ. ಪದ್ಮಣ್ಣನು ರಾಕ್ಷಸಿ ಹೆಂಡತಿ ಸಿರಿವಂತೆಯೊಡನೆ ಸಹಭೋಜನ ಮಾಡುವುದು, ಒಟ್ಟಿಗೆ ಇರುವುದು ಶಾಂತಯ್ಯನಿಗೆ ಸರಿ ಬೀಳಲಿಲ್ಲ. ಆತನು ಈ ಕಾರಣದಿಂದ ತನ್ನ ಹೆಂಡತಿ ದೇವಮ್ಮನೊಡನೆ ಬೇರೆಯಾಗುತ್ತಾನೆ. ಅವರಲ್ಲಿದ್ದ ಕುರಿಗಳನ್ನು ಎರಡು ಭಾಗ ಮಾಡಿಕೊಳ್ಳುತ್ತಾರೆ (ಇಲ್ಲಿಂದ ಮುಂದೆ ಪದ್ಮಣ್ಣ, ಲಿಂಗಮ್ಮ, ಸಿರಿವಂತೆ ಇವರ ವಿಚಾರ ಬರುವುದಿಲ್ಲ. ಶಾಂತಯ್ಯನು ಕಥೆಯ  ಮುಖ್ಯವ್ಯಕ್ತಿಯಾಗಿ ನಿಲ್ಲುತ್ತಾನೆ).

ಶಾಂತಯ್ಯನು ತನ್ನ ಹೆಂಡತಿ ದೇವಮ್ಮನೊಡನೆ ಅತಿಶಯವಾದ ಲಿಂಗಪೂಜೆಯಲ್ಲಿ ನಿರತನಾಗಿ ಭಕ್ತಿಸುಖದಲ್ಲಿದ್ದನು. ಹೀಗಿರಲು ಶಾಂತನ ಭಕ್ತಿಯನ್ನು ಪರೀಕ್ಷಿಸಿ ನೋಡುವೆನೆಂದು ಪರಮೇಶ್ವರನು ಅವನಲ್ಲಿಗೆ ಬರುತ್ತಾನೆ. ಶರಣನಾಗಿ ಬಂದ ಪರಮೇಶ್ವರನಿಗೆ ದಂಪತಿಗಳು ಕೂಡಿ ಸತ್ಕರಿಸುತ್ತಾರೆ. ಆರೋಗಣೆಗೆ ಎಡೆ ಮಾಡುವ ವೇಳೆಗೆ ಪರಮೇಶ್ವರನು ಕಂದನ ಭಕ್ತಿಯನ್ನು ಇಂದು ಪರೀಕ್ಷಿಸುವನೋ ಎಂಬಂತೆ ಜಂಗಮ ಕೋಟಿಯನ್ನು ಕರೆಯುತ್ತಾನೆ. ಹಾಗೆ ಬಂದ ಶರಣಕೋಟಿಗೆ ಶಾಂತನು ಪರಮೇಶ್ವರನು ಶಾಂತನನ್ನು ಕುರಿತು ಏನು ಬೇಕು ಕೇಳೆನ್ನುತ್ತಾನೆ. ಅದಕ್ಕೆ ಶಾಂತನು ‘ನಿನ್ನ ದಯೆಯಿಂದ ಎಲ್ಲವೂ ಇದೆ, ನನಗೆ ದೀಕ್ಷೆ ಮೋಕ್ಷಗಳನ್ನಿತ್ತು ಸಲಹಬೇಕು’ ಎಂದು ಪ್ರಾರ್ಥಿಸುತ್ತಾನೆ. ಆಗ ಪರಮೇಶ್ವರನು ಲೋಕದಲ್ಲಿರುವ ಶುಭವಸ್ತುಗಳನ್ನು ತರಿಸಿ ನಾಲ್ಕು ಕಲಶಗಳ ಮಧ್ಯೆ ಶಾಂತನನ್ನು ಕುಳ್ಳಿರಿಸಿ ದೀಕ್ಷೆಗೆ ಅಣಿ ಮಾಡಿಸುತ್ತಾನೆ. ಈ ಸಮಾರಂಭಕ್ಕೆ ಪಂಡಿತಾರಾಧ್ಯ, ರೇವಣಾರಾಧ್ಯ, ಏಕೋರಾಮಯ್ಯ, ಮರುಳಸಿದ್ಧಯ್ಯ ಇನ್ನೂ ಮುಂತಾದ ಶರಣರೆಲ್ಲ ಸೇರುತ್ತಾರೆ. ಆಗ ಶಾಂತನು ಪರಮೇಶ್ವರನನ್ನು ಬಹುವಿಧವಾಗಿ ಪ್ರಾರ್ಥಿಸಿ, ಕಡೆಗೆ ಕರಿಮಲ್ಲಿಗೆ ಪುಷ್ಪವು ಬರದಿದ್ದಲ್ಲಿ ಶಿರವನರಿದುಕೊಳ್ಳುವನೆಂದು ಕೈಗೆ ಚಂದ್ರಾಯುಧವನ್ನು ತೆಗೆದುಕೊಳ್ಳುತ್ತಾನೆ. ಆಗ ಕೈಲಾಸದಿಂದ ಕರಿಮಲ್ಲಿಗೆಯ ಪುಷ್ಪವು ಸರಸರವಾಗಿ ಇಳಿದುಬರುತ್ತದೆ. ಸರಸರವಾಗಿ ಕರಿಮಲ್ಲಿಗೆಯ ಪುಷ್ಪವು ಪರಮೇಶ್ವರನ ಪುರದಿಂದ ಇಳಿದು ಬಂದದ್ದರಿಂದ ಆ ಸ್ಥಳಕ್ಕೆ ಸರವೂರೆಂದು ಹೆಸರಾಯಿತು. ನೆರೆದ ಶರಣರೆಲ್ಲರೂ ಜಯ ಜಯವೆಂದು ಹೊಗಳಿ ಶಾಂತನಿಗೆ ದೀಕ್ಷೆ ಕೊಟ್ಟರು. ಆಗ ಪರಮೇಶ್ವರನು ಶಾಂತಯ್ಯ ದೇವಮ್ಮ ಇವರನ್ನು ಹರಸಿ ವಿಭೂತಿಯನ್ನಿಟ್ಟು, ಇಂದಿನಿಂದ ನೀನು ಚೊಕ್ಕ ಶರಣನಾದೆ, ನಿನ್ನ ತಂದೆ ರಕ್ಕಸಿಯನ್ನು ಕೂಡಿದ್ದನಷ್ಟೆ, ಅವನ ಮಕ್ಕಳು ಮನೆತನಗಳು ಮುಂದೆ ನಿನ್ನಲ್ಲಿಗೆ ಬರುತ್ತಾರೆ. ಅವರಿಗೆ ಕುಲವನ್ನಿತ್ತು ರಕ್ಷಿಸಿ ಗುರುವಾಗೆಂದು ಹೇಳುತ್ತಾನೆ.

ನಾಲ್ಕನೆಯ ಸಂಧಿ : (ನಾಲ್ಕನೆಯ ಸಂಧಿಯಲ್ಲಿನ ಕಿನ್ನರ ಬ್ರಹ್ಮಯ್ಯನೆಂಬ ಶರಣನ ವಿಚಾರ ಬರುತ್ತದೆ) ಕಿನ್ನರ ಬ್ರಹ್ಮಯ್ಯನು ಕಲ್ಯಾಣ ಪಟ್ಟಣದಲ್ಲಿದ್ದ ಒಬ್ಬ ಶರಣ, ತ್ರಿಪುರಾಂತಕ ದೇವಾಲಯಕ್ಕೆ ಪ್ರತಿದಿನವೂ ನೇಮದಿಂದ ಪೂಜೆಯನ್ನು ಮಾಡುತ್ತಿದ್ದ ಭಕ್ತ. ಇವನ ಭಕ್ತಿಗೆ ಮೆಚ್ಚಿದ ಲಿಂಗವು ಪ್ರತಿದಿನವೂ ಹನ್ನೊಂದು ಹಣ ಹಾವನ್ನು ಕರುಣಿಸುತ್ತಿತ್ತು. ಆ ಹಣವನ್ನು ಬ್ರಹ್ಮಯ್ಯನು ಜಂಗಮಾರಾಧನೆಗೆ ವಿನಿಯೋಗಿಸುತ್ತಿದ್ದನು. ಹೀಗಿರಲು ಅದೇ ಕಲ್ಯಾಣ ಪಟ್ಟಣದಲ್ಲಿ ವಿಟಗಾರ ಬೊಪ್ಪಯ್ಯನೆಂಬುವವನಿದ್ದನು. ಆತನಿಗೆ ಚೆನ್ನಿ ಎಂಬ ವೇಶ್ಯೆ ಇದ್ದಳು. ಆಕೆಯ ಒಂದು ದಿನ ತನ್ನ ಪ್ರಿಯನೊಡನೆ, ತಾನು ಹಬ್ಬವೊಂದನ್ನು ಆಚರಿಸಬೇಕು ಅದಕ್ಕೆ ಒಂದು ಒಳ್ಳೆಯ ತಗರು ಬೇಕು ತೆಗೆದುಕೊಂಡು ಬಾ ಎಂದು ಹೇಳುತ್ತಾಳೆ. ಅದರಂತೆ  ಬೊಪ್ಪಯ್ಯನು ಒಂದು ತಗರನ್ನು ಕೊಂಡು ಹೊತ್ತು ತರುತ್ತಿರುತ್ತಾನೆ. ಊರ ಮುಂದಕ್ಕೆ ಬರುವ ವೇಳೆಗೆ ಅಯಾಸವಾಗಿ ಅಲ್ಲದ್ದ ತ್ರಿಪುರಾಂತಕ ದೇವಾಲಯದಲ್ಲಿ ತಗರನ್ನು ಇಳುಹಿ ತಾನೂ ಅಲ್ಲೇ ಕುಳಿತಿರುತ್ತಾನೆ. ಸ್ವಲ್ಪ ಹೊತ್ತಿನಲ್ಲಿ ಆ ತಗರು ತ್ರಿಪುರಾಂತಕ ದೇವಾಲಯವನ್ನು ಹೊಕ್ಕು ಅಲ್ಲಿದ್ದ ಲಿಂಗವನ್ನು ಮರೆ ಹೊಕ್ಕಿರುತ್ತದೆ. ಇದನ್ನು ನೋಡುತ್ತಿದ್ದ ಕಿನ್ನರ ಬ್ರಹ್ಮಯ್ಯನು ಬೊಪ್ಪಯ್ಯನನ್ನು ವಿಚಾರಿಸಲು ಆತನು ತನ್ನ ಪ್ರೇಯಸಿ ಚೆನ್ನಿಯ ಮನದಿಚ್ಛೆಯನ್ನು ಸಲ್ಲಿಸುವ ಸಲುವಾಗಿ ತಂದ ಸುದ್ದಿ ತಿಳಿಯುತ್ತದೆ. ಮರೆಹೊಕ್ಕದ್ದನ್ನು ಕಾಯಬೇಕಲ್ಲದೆ ಕೊಲ್ಲಲೊಯ್ಯುವುದು ಸರಿಯಲ್ಲವೆಂದು ಬ್ರಹ್ಮಯ್ಯನು ಬೊಪ್ಪಯ್ಯನು ತಗರನ್ನು ಕೊಂಡ ಬೆಲೆಯ ಎರಡರಷ್ಟು ಹಣವನ್ನು ಕೊಟ್ಟು, ಬೊಪ್ಪಯ್ಯನಿಂದ ಕೊಂಡುಕೊಳ್ಳುತ್ತಾನೆ. ಅಲ್ಲದೆ ಆ ತಗರನ್ನು ಮತ್ತೆ ಬಂದು ಕೇಳಿದರೆ ಕೊಡುವುದಿಲ್ಲವೆಂದು ಹೇಳಿ ಅದಕ್ಕೆ ಲಿಂಗವೇ ಸಾಕ್ಷಿ ಎಂದು ಹೇಳು, ತ್ರಿಪುರಾಂತಕ ಲಿಂಗದೆದುರು ತಗರಿಗೆ ಲಿಂಗಮುದ್ರೆಯನ್ನು ಒತ್ತುತ್ತಾನೆ.

ಇತ್ತ ಬೊಪ್ಪಯ್ಯನು ತಗರನ್ನು ಬಿಟ್ಟು ಹಣವನ್ನು ತೆಗೆದುಕೊಂಡು ಚೆನ್ನಿಯ ಮನೆಗೆ ಬರುತ್ತಾನೆ. ಸಂಗತಿಯನ್ನರಿತ ಚೆನ್ನಿಯು ಹಣವನ್ನು ನಿರಾಕರಿಸಿ ಅದೇ ತಗರು ತನಗೆ ಬೇಕೆಂದು ಹೇಳಿ, ತಗರನ್ನು ತರುವವರೆಗೆ ಮನೆಗೆ ಕಾಲಿಡಕೂಡದೆಂದು ಹಿಂದಕ್ಕೆ ಕಳುಹಿಸುತ್ತಾಳೆ. ಈ ಸುದ್ದಿಯನ್ನು ಹೊತ್ತು ಬೊಪ್ಪಯ್ಯನು ಬ್ರಹ್ಮಯ್ಯನಲ್ಲಿಗೆ ಬರುತ್ತಾನೆ. ಆದರೆ ಮೊದಲೇ ಮಾಡಿಕೊಂಡಿದ್ದ ಕರಾರಿನಂತೆ ಬ್ರಹ್ಮಯ್ಯನು ತಗರನ್ನು ಕೊಡಲು ನಿರಾಕರಿಸುತ್ತಾನೆ. ಬರಿಗಯ್ಯಲ್ಲಿ ಬಂದ ಬೊಪ್ಪಯ್ಯನನ್ನು ಕುರಿತು ಚೆನ್ನಿಯು ಬ್ರಹ್ಮಯ್ಯನನ್ನು ಕೊಂದು ಸದೆ ಬಡಿದಾದರೂ ತಗರನ್ನು ತರುವಂತೆ ಹೇಳಿ, ಬೊಪ್ಪಯ್ಯನೊಡನೆ ತನ್ನ ಅಣ್ಣಂದಿರನ್ನೂ ಇತರ ಪರಿವಾರವನ್ನೂ ಸಹಾಯಕ್ಕೆ ಕಳುಹಿಸುತ್ತಾಳೆ. ತ್ರಿಪುರಾಂತಕ ದೇವಾಲಯದ ಬಳಿ ಬ್ರಹ್ಮಯ್ಯನಿಗೂ ಚೆನ್ನಿಯ ಕಡೆಯವರಿಗೂ ತಗರಿಗಾಗಿ ಬಲವಾದ ಕಾಳಗ ನಡೆಯುತ್ತದೆ. ಬ್ರಹ್ಮಯ್ಯನು ತನ್ನ ಕೈದುವಿನಿಂದ ಚೆನ್ನಿಯ ಅಣ್ಣಂದಿರನ್ನು  ಕೆಡಹುತ್ತಾನೆ. ಈ ಸುದ್ದಿಯನ್ನು ಬೊಪ್ಪಯ್ಯನು ಚೆನ್ನಿಗೆ ತಿಳಿಸುತ್ತಾನೆ. ತಗರು ತನಗೆ ಸೇರದುದನ್ನೂ, ಅಣ್ಮಂದಿರಳಿದುದನ್ನೂ ಕೇಳಿದ ಚೆನ್ನಿಯು ಕಲ್ಯಾಣಪಟ್ಟಣದ ಬೀದಿಗಳಲ್ಲಿ “ಈ ಪಟ್ಟಣಕ್ಕೆ ಯಕಾರೂ ದಿಕ್ಕಿಲ್ಲ”ವೆಂದು ಗೋಳಿಡುತ್ತಾ ದೂರನ್ನು ಹೊತ್ತು ಕಲ್ಯಾಣದರಸು ಬಿಜ್ಜಳನಲ್ಲಿಗೆ ಬರುತ್ತಾಳೆ. ದೂರನ್ನು ಕೇಳಿದ ಬಿಜ್ಜಳನು ಚೆನ್ನಿಯ ಸಹಾಯಕ್ಕೆ ಸೈನ್ಯವನ್ನು ಕಳುಹುತ್ತಾನೆ. ದೇವಾಲಯದ ಕಡೆಗೆ ಬರುತ್ತಿದ್ದ ಸೈನ್ಯವನ್ನು ನೋಡಿದ ಬ್ರಹ್ಮಯ್ಯನು ಲಿಂಗವನ್ನು ಪ್ರಾರ್ಥಿಸಿ ಚಂದ್ರಾಯುಧವನ್ನು  ತೆಗೆದುಕೊಂಡು ಸೈನ್ಯಕ್ಕಿದಿರಾಗಿ ನುಗ್ಗುತ್ತಾನೆ. “ಕಟ್ಟಿದ ಕದಳಿಯ ವನವ ಕರಿಹೊಕ್ಕಂತೆ ದಿಟ್ಟ ಕಿನ್ನರಿ ಬ್ರಹ್ಮಯ್ಯನು” ಸೈನ್ಯವನ್ನು ಪ್ರವೇಶಿಸುತ್ತಾನೆ. ಬ್ರಹ್ಮಯ್ಯನ ಪ್ರವೇಶದಿಂದ ಸೈನ್ಯವೆಲ್ಲ ಭ್ರಮೆ ಹಿಡಿದಂತಾಗಿ ತಮ್ಮ ತಮ್ಮಲ್ಲೇ ಕಡಿದಾಡಿ ಮಡಿಯುತ್ತಾರೆ. ಉಳಿದವರು ಕೆಲವರು ಈ ವಾರ್ತೆಯನ್ನು ಬಿಜ್ಜಳನಿಗೆ  ಕೊಂಡೊಯ್ಯುತ್ತಾರೆ. ಇದನ್ನು ಕೇಳಿದ ಬಿಜ್ಜಳನು ಚಿಂತೆಯಿಂದ ಕೂಡದವನಾಗಿ ಬಸವದಂಡೇಶನಿಗೆ ಹೇಳಿ ಕಳುಹಿಸುತ್ತಾನೆ.

ಐದನೆಯ ಸಂಧಿ : ದೊರೆ ಬಿಜ್ಜಳನ ಕರೆಯನ್ನು ಕೇಳದಿ ಬಸವನು ಆಸ್ಥಾನಕ್ಕೆ ಬರುತ್ತಾನೆ. ಬಿಜ್ಜಳನು ಬಸವನನ್ನು ಕುರಿತು “ನಿಮ್ಮ ಶರಣರು ಎಂತಹವರು, ನಮ್ಮನ್ನು ಕೂಡ ಲೆಕ್ಕಿಸಿದೆ ಸೈನ್ಯವನ್ನು ಸಂಹರಿಸಿದ್ದಾರೆ, ಅವರನ್ನು ಜೀವಸಹಿತ ಹಿಡಿಸಿ ತಂದು ಕೊಲ್ಲಿಸುತ್ತೇನೆ” ಎಂದು ಹೇಳುತ್ತಾನೆ. ಆಗ ಬಸವನು ಕಿನ್ನರಯ್ಯನೊಬ್ಬನ ಮೇಲೆ ಅಷ್ಟೊಂದು ಸೈನ್ಯವನ್ನು  ಕಳುಹಿಸಿದುದು ಸರಿಯಲ್ಲವೆಂದು ಶರಣನ ಕಡೆ ಮಾತನಾಡುತ್ತಾನೆ. ಇದರ ಮರ್ಮವನ್ನರಿಯಬೇಕೆಂದು ಅಲ್ಲಿದ್ದ ಕೊಂಡೆಯ ಮಂಚಣ್ಣನನ್ನು ತ್ರಿಪುರಾಂತಕ ದೇವಾಲಯಕ್ಕೆ ಹೋಗಿ ನಡೆದ ಸಂಗತಿಯನ್ನೆಲ್ಲ ತಿಳಿದುಬರಲು ಅಟ್ಟುತ್ತಾನೆ. ಅದರಂತೆ ಮಂಚಣ್ಣನು ಬ್ರಹ್ಮಯ್ಯನಲ್ಲಿಗೆ ಬರಲು, ಬ್ರಹ್ಮಯ್ಯನು ತಾನು ಲಿಂಗಸಾಕ್ಷಿಯಾಗಿ ತಗರನ್ನು ಕೊಂಡಲ್ಲಿಂದ ಹಿಡಿದು, ನಡೆದ ಸಂಗತಿಯನ್ನೆಲ್ಲ ಹೇಳಿ ತಗರನ್ನು ಕೊಂಡದ್ದಕ್ಕೆ ಸಾಕ್ಷಿಯಾಗಿ ಲಿಂಗವೇ ನುಡಿಯುವುದೆಂದು ಕೂಡ ಹೇಳುತ್ತಾನೆ. ಈ ವಿಚಾರವನ್ನು ಮಂಚಣ್ಣನು ದೊರೆ ಬಿಜ್ಜಳನಿಗೆ ತಿಳಿಸುತ್ತಾನೆ. ಆಗ ಬಿಜ್ಜಳನು ತನ್ನ ದಂಡೇಶ ಬಸವನೊಡನೆ ಪರಿವಾರ ಸಹಿತವಾಗಿ ತ್ರಿಪುರಾಂತಕ ದೇವಾಲಯದೆಡೆಗೆ ಬರುತ್ತಾನೆ. ಅಲ್ಲಿ ಕಿನ್ನರ ಬ್ರಹ್ಮಯ್ಯನು ಸಕಲ ಶರಣರೆದುರು ಲಿಂಗವನ್ನು ಅನನ್ಯ ಭಕ್ರಿಯಿಂದ ಪ್ರಾರ್ಥಿಸುತ್ತಾನೆ. ಆಗ ಲಿಂವವು “ನಿರುತವಹುದು ಮೇಷನ ಕೊಂಡದ್ದೆನುತಲಿ, ಎಂಟೆಂಟು ಬಾರಿಗೆ ಉಂಟು ಎನ್ನುತ್ತ “ಒಡನೆ ನುಡಿಯುತ್ತದೆ. ಶರಣರ ಮಹಿಮೆಯು ಅರಿಯಲಳವಲ್ಲವೆಂದು ಬಿಜ್ಜಳನು ಕೈಮುಗಿದು ಕ್ಷಮೆ ಬೇಡುತ್ತಾನೆ. ಬ್ರಹ್ಮಯ್ಯನ ಅನುಗ್ರಹದಿಂದ ಮಡಿದ ಮಾರ್ಬಲವೆಲ್ಲ ಮತ್ತೆ ಏಳುತ್ತದೆ. ಶರಣರ ಮಹಿಮೆಯನ್ನ ಬಸವನೊಡನೆ ಕೊಂಡಾಡುತ್ತ ಬಿಜ್ಜಳನು ಪರಿವಾರದೊಡನೆ ಅರಮನೆಗೆ ತೆರಳುತ್ತಾನೆ.

ಇತ್ತ ಕಿನ್ನರ ಬ್ರಹ್ಮಯ್ಯನು ಈ ತಗರಿಗೆ ಮುತ್ತು ಮಾಣಿಕಗಳಿಂದ ಅಲಂಕೃತವಾದ ಗೆಜ್ಜೆಗಳನ್ನು ಹಾಕಿ, ಒಂಬತ್ತುವುರಿಯ ಚಿನ್ನದ ಮುಖವಾಡವನ್ನು ಧರಿಸಿ ಪ್ರೀತಿಯಿಂದ ದೇವಸ್ಥಾನದಲ್ಲಿಟ್ಟುಕೊಳ್ಳುತ್ತಾನೆ. ತಗರು ಎಲ್ಲರ ಪ್ರೀತಿಗೂ ಪಾತ್ರವಾಗುತ್ತದೆ. ಎಲ್ಲರೂ ಅದಕ್ಕೆ ತಿನಿಸುಗಳನ್ನು ಕೊಡುತ್ತಿರುತ್ತಾರೆ. ಜನರ ಬಾಯಲ್ಲಿ ಶಂಭು ಎಂಬ ಹೆಸರಿನಿಂದ ಕಲ್ಯಾಣ ಪಟ್ಟಣದಲ್ಲಿ ಕಿನ್ನರಯ್ಯನ ಆರೈಕೆಯಲ್ಲಿ ತಗರು ಮೈಕೊಬ್ಬತ್ತದೆ. ಹೀಗೆ ಕೊಬ್ಬಿದ ತಗರು ಕೆಲವು ದಿವಸಗಳ ನಂತರ ಚೇಷ್ಠಗೆ ಪ್ರಾರಂಭಿಸುತ್ತದೆ. ಅಲ್ಲದೆ ಕಿನ್ನರಯ್ಯನು ಲಿಂಗಕ್ಕೆ ಮಾಡಿದ್ದ ಅಲಂಕಾರವನ್ನೂ ಕೆಡಿಸಲು ಪ್ರಾರಂಭಿಸುತ್ತದೆ. ಇದನ್ನು ನೋಡಿದ ಕಿನ್ನರಯ್ಯನು ಕೊಬ್ಬಿದ ತಗರನ್ನು ಮಂದೆಯಲ್ಲಿ ಬಿಡುವ ಯೋಚನೆಯನ್ನು ಮಾಡುತ್ತಾನೆ. ಈ ತಗರಿಗೆ ಲಿಂಗಮುದ್ರೆಯಾಗಿರುವುದರಿಂದ ಶರಣರಲ್ಲದ ಸಾಮಾನ್ಯರ ಮಂದೆಯಲ್ಲಿ ಬಿಡುವ ಹಾಗಿಲ್ಲ. ಆಗ ಸರವೂರಿನಲ್ಲಿ ಶರಣ ಶಾಂತಯ್ಯನ ಮುಂದೆ ಇರುವುದೆಂದು ತಿಳಿದು ಅಲ್ಲಿಗೆ ತೆಗೆದುಕೊಂಡು ಹೋಗಿಬಿಡಬೇಕೆಂದು ತೀರ್ಮಾನಿಸುತ್ತಾನೆ. ಅದರಂತೆ ತಗರನ್ನು ಶೃಂಗರಿಸಿ ವಾದ್ಯಗಳೊಡನೆ ಮೆರವಣಿಗೆಯಲ್ಲಿ ಸರವೂರಿಗೆ ತಂದು ಅಲ್ಲಿ ಶಾಂತಯ್ಯನಿಗೆ ಆ ತಗರಿನ ಜವಾಬ್ದಾರಿಯನ್ನು ವಹಿಸಿ ತಾನು ಕಲ್ಯಾಣಕ್ಕೆ ಹಿಂದಿರುಗುತ್ತಾನೆ.

ಆರನೆಯ ಸಂಧಿ : ಕಲ್ಯಾಣ ಪಟ್ಟಣದಲ್ಲಿ ಕುರುಬರಿರುತ್ತಾರೆ. ಪಟ್ಟಣದವರಿಗೆ ಬೇಕಾದ ಹಾಲು ಮೊಸರು ತುಪ್ಪಗಳನ್ನು ಮಾರುವುದು ಅವರ ಕಸಬು. ಅವರೂ ಸಹ ಹರಶರಣರು. ಹೀಗೆ ಅವರು ಹಾಲು ಮೊಸರುಗಳನ್ನು ಪೇಟೆಯಲ್ಲಿ ಪಸರವಿಕ್ಕಿ ಮಾರುತ್ತಿರಲು ಪರಮೇಶ್ವರನು ಸಿದ್ಧಶೆಟ್ಟಿ, ಮಲ್ಲಿಶೆಟ್ಟಿ ಎಂಬ ಎರಡು ರೂಪುಧರಿಸಿ ಕಲ್ಯಾಣಕ್ಕೆ ಬಂದು ಅವರ ಜೊತೆಯಲ್ಲಿಯೇ ಪಸರವಿಕ್ಕಿ ವ್ಯಾಪಾರವನ್ನು ಪ್ರಾರಂಭಿಸುತ್ತಾರೆ. ಈ ಹೊಸ ವ್ಯಾಪಾರಿಗಳನ್ನು ಕಂಡ ಕಲ್ಯಾಣದ ಜನರು ನಿಮ್ಮ ನೆಲೆ ಯಾವುದೆಂದು ಕೇಳಲು ತಾವು ಕಡವಾಡಿ ಎಂಬ ಪಟ್ಟಣದಿಂದ  ಬಂದೆವೆಂದೂ, ಕಲ್ಯಾಣದ ಅಧಿಕತೆಯನ್ನು ಕೇಳಿ ಬಂದೆವೆಂದೂ ಹೇಳುತ್ತಾರೆ. ಹೀಗಿರಲು ಒಂದು ದಿವಸ ಹಾಲುಮಾರುವ ಕುರುಬರು ಹಾಲಿನ ಜೊತೆಯಲ್ಲಿ ಸತ್ತ ಕುರಿಯೊಂದನ್ನು ಪೇಟೆಗೆ ತಂದರು. ಇದನ್ನು ಕಂಡ ಸಿದ್ಧಶೆಟ್ಟಿ, ಮಲ್ಲಿಶೆಟ್ಟಿಯರು ಇದನ್ನು ಪ್ರತಿಭಟಿಸಿ ಶರಣರುಕೊಳ್ಳುವ ಹಾಲು ಮೊಸರಿನ ಜೊತೆ ಸತ್ತ ಕುರಿಯನ್ನು ತಂದದ್ದು ಮಹಾಪರಾಧವೆಂದು ಅದನ್ನು ಪಟ್ಟಣದ ಶರಣರಿಗೆ ತಿಳಿಸಿದರು. ಇವರ ಮಾತನ್ನು ಅಂಗೀಕರಿಸಿದ ಶರಣರು ಅವರ ಈ ಅಕಾರ್ಯಕ್ಕಾಗಿ ಕುರುಬರನ್ನು ರಟ್ಟು ಮತದವರೆಂದು ಕರೆದು ಅವರು ಕಲ್ಯಾಣ ಪಟ್ಟಣದಿಂದ ಹೊರಗು ಎಂದು ಡಂಗೂರ ಸಾರಿಸುತ್ತಾರೆ. ಕಲ್ಯಾಣದಲ್ಲಿದ್ದ ಕುರುಬರೆಲ್ಲ ಪಟ್ಟಣವನ್ನು ಬಿಟ್ಟು ಒಂದು ಯೋಜನ ದೂರದಲ್ಲಿರುವ ಒಂದು ಅಡವಿಯಲ್ಲಿ ಊರು ಕಟ್ಟಿಕೊಂಡು ವಾಸವಾಗಿರುತ್ತಾರೆ. ಹೀಗೆ ಕುರುಬರು ಕಲ್ಯಾಣಪಟ್ಟಣವನ್ನು ಬಿಟ್ಟು ಹನ್ನೆರಡು ವರ್ಷವಾಗಿರುತ್ತದೆ.

ಹೀಗಿರಲು, ಕುರುಬರಿಗೆ ಅರಿವುದೋರಿ ಅವರನ್ನು ಕುಲವಂತರನ್ನಾಗಿ ಮಾಡಬೇಕೆಂಬ ಇಚ್ಛೆಯಿಂದ ಸಿದ್ಧಶೆಟ್ಟಿಯು (ಪರಮೇಶ್ವರನು) ಅರುವಣಿಗನವೇಷಧರಿಸಿ ಕುರುಬರಿದ್ದ ಕೇರಿಗೆ ಬರುತ್ತಾನೆ. ಬಂದು ಅಲ್ಲಿ ಪಸರವಿಕ್ಕುತ್ತಾನೆ. ಅದನ್ನು ನೋಡಿದ ಕುರುಬಗೌಡರು ಸಿದ್ಧಶೆಟ್ಟಿಯಲ್ಲಿಗೆ ಬಂದು ಪರವಾದಿಗಳಿರುವ ಇಲ್ಲಿಗೆ ನೀವು ಬಂದು ಪಸರವಿಕ್ಕುವರೆ? ಎಂದು  ಕೇಳುತ್ತಾರೆ. ಅದಕ್ಕೆ ಸಿದ್ಧಶೆಟ್ಟಿಯು ನಿಮಗೆ ಈ ಸ್ಥಿತಿಯು ಬರಲು ಕಾರಣವಾದ ಹಿಂದಿನ ಕಥೆ ಏನೆಂದು ಪ್ರಶ್ನಿಸಲು, “ಒಡೆಯ ನಿಲ್ಲವು ಸ್ವಾಮಿ, ಪಿಡಿವರೆ ಕೊನೆಯಿಲ್ಲ, ಪೊಡವಿ ಕೈಸೇರದಯ್ಯ” ಎಂದು ದುಃಖಿಸುತ್ತಾರೆ. ಆಗ ಸಿದ್ಧಶೆಟ್ಟಿಯು “ನಿಮಗೆ ಒಡೆಯನು ಉಂಟು, ನಿಮ್ಮ ಕುಲವನ್ನೆಲ್ಲ ಮಮತೆಯಿಂದ ಕೈಕೊಂಡು ನಿಮಗೆ ಎಣೆಯಿಲ್ಲವೆಂದೆನಿಸುವ ಒಬ್ಬ ಶರಣನುಂಟು” ಎಂದು ಹೇಳುತ್ತಾನೆ. ಈ ಮಾತನ್ನು ಕೇಳಿದ ಕುರುಬ ಗೌಡರೆಲ್ಲರೂ ಸಿದ್ಧಶೆಟ್ಟಿಯ ಪಾದಕ್ಕೆರಗುತ್ತಾರೆ. ಆಗ ಸಿದ್ಧಶೆಟ್ಟಿಯು “ಕಲ್ಯಾಣ ಪಟ್ಟಣಕ್ಕೆ ಹನ್ನೆರಡು ಯೋಜನ ದೂರದಲ್ಲಿ ಸರವೂರೆಂಬ ಒಂದು ಊರಿದೆ. ಅಲ್ಲಿ ಶಾಂತಯ್ಯನೆಂಬ ಶರಣನಿದ್ದಾನೆ. ಅವನನ್ನು ಮರೆಹೊಕ್ಕರೆ ನೀವು ಪವಿತ್ರರಾಗುತ್ತೀರಿ. ಅವನನ್ನು ಗುರುವಾಗಿ ಸ್ವೀಕರಿಸಿದರೆ ನಿಮಗೆ ಕುಲವುಂಟಾಗುತ್ತದೆ” ಎಂದು ಹೇಳುತ್ತಾನೆ. ಅದರಂತೆ ಅಲ್ಲಿದ್ದ ಕುರುಬರೆಲ್ಲರೂ ಒಟ್ಟುಗೂಡಿ ಹೋಗಿ ಸರವೂರಿನಲ್ಲಿದ್ದ ಶಾಂತಯ್ಯನನ್ನು ಕಂಡು ಅಡಿಗೆರಗುತ್ತಾರೆ. ದೂರದಿಂದ ಬಂದವರ ಯೋಗಕ್ಷೇಮವನ್ನು ವಿಚಾರಿಸಿದ ಮೇಲೆ ಶಾಂತಯ್ಯನು ದುಃಖವನ್ನು ತಿಳಿಯುತ್ತಾನೆ. ಆಗ ಅವರು ತಾವು ಮಾಡಿದ ಅಕಾರ್ಯವನ್ನೂ ಅದರಿಂದ ಕಲ್ಯಾಣಪಟ್ಟಣದಿಂದ ಹೊರಗಾಗಿ ಹನ್ನೆರಡು ವರ್ಷಪರ್ಯಂತ ರಟ್ಟು ಮತದವರೆಂದು ಬಾಳಿದ್ದನ್ನೂ ಹೇಳಿ, ಒಬ್ಬ ಶರಣನಿಂದ ಈ ಊರಿನ ನೆಲೆಯನ್ನರಿತು ಅಲ್ಲಿಗೆ ಬಂದ ವಿಚಾರವನ್ನು ವಿಸ್ತರಿಸಿದರು ಮತ್ತು ತಮ್ಮನ್ನು ಉದ್ಧರಿಸಬೇಕೆಂದು ಪ್ರಾರ್ಥಿಸಿ ತಮ್ಮಲ್ಲಿದ್ದುದೆಲ್ಲವನ್ನೂ ಶಾಂತಯ್ಯನಲ್ಲಿ ಅರ್ಪಿಸಿದರು.

ಹೀಗೆ ಶಾಂತಯ್ಯನು ಕುರುಬ ಗೌಡರೊಡನೆ ಮಾತನಾಡುತ್ತಿರುವಾಗ ಕುರಿ ಹಿಂಡಿನಿಂದ ಒಬ್ಬ ಕುರಿಗಾಹಿಯು ಬಂದು ಕುರಿ ಹಿಂಡಿನಲ್ಲಿದ್ದ ಕಿನ್ನರಬ್ರಹ್ಮನ ತಗರು ಸತ್ತು ಹೋಯಿತೆಂದು ವರದಿ ಮಾಡುತ್ತಾನೆ. ಇದನ್ನು ಕೇಳಿದ ಶಾಂತಯ್ಯನು ಆ ಮೇಷನನ್ನು ಕಲ್ಯಾಣ ಪಟ್ಟಣಕ್ಕೆ ತೆಗೆದುಕೊಂಡು ಹೋಗಬೇಕೆಂದು ಯೋಚಿಸುತ್ತಾನೆ. ಪುಷ್ಪಕವೊಂದನ್ನು ರಚಿಸಿ ತಗರನ್ನು ಅದರಲ್ಲಿಟ್ಟು ವೈಭವದಿಂದ ಸಕಲ ವಾದ್ಯಗಳೊಡನೆ ಕಲ್ಯಾಣಪಟ್ಟಣಕ್ಕೆ ತರುತ್ತಾರೆ. ಕಲ್ಯಾಣ ಪಟ್ಟಣದಲ್ಲಿದ್ದ ಸಿದ್ಧಶೆಟ್ಟಿ, ಮಲ್ಲಿಶೆಟ್ಟಿ ಮುಂತಾದ ಶರಣರು ಈ ಉತ್ಸವವನ್ನು ತಡೆಯುತ್ತಾರೆ. ಸತ್ತ ಮೇಷನನ್ನು ಪಟ್ಟಣದೊಳಕ್ಕೆ ತಂದದ್ದು ಮಹಾಪರಾಧವೆಂದು ಪ್ರತಿಭಡಿಸುತ್ತಾರೆ. ಅಲ್ಲದೆ ಅದನ್ನು ಬದುಕಿಸದಿದ್ದರೆ ಊರಿಗೆ ಹಾನಿಯುಂಟಾಗುವುದೆಂದು ನುಡಿದರು. ಈ ಮಾತನ್ನು  ಕೇಳಿದ ಶಾಂತಯ್ಯನು “ಎನ್ನಯ್ಯ ಸಿದ್ಧರೇವಣ್ಣನರಿಕೆಯ ಚನ್ನ ಮೇಷನ ಪವಾಡವ ನಿರ್ಣಯಿಸದಿರೆ ನಿಮ್ಮ ಚರಣಸೇವಕನಲ್ಲ” ಎಂದು ಹೇಳುತ್ತಾನೆ. ಅಲ್ಲಿಂದ ಶಾಂತಯ್ಯನು ಉತ್ಸವವನ್ನು ತ್ರಿಪುರಾಂತಕ ದೇವಾಲಯಕ್ಕೆ ನಡೆಸಿಕೊಂಡು ಹೋಗಿ ಚಂದ್ರಶಾಲೆಯಲ್ಲಿ ಮೇಷನನ್ನು ಪ್ರತಿಷ್ಠಿಸಿ ಸಕಲ ಪುಷ್ಪಗಳಿಂದ ಅಲಂಕರಿಸಿ ವಿಭೂತಿಯನ್ನಿಡುತ್ತಾನೆ. ಅಲ್ಲಿಗೆ ಕಲ್ಯಾಣದರಸು ಬಿಜ್ಜಳನು ಮಂತ್ರಿ ಬಸವನೊಡನೆ ಬರುತ್ತಾನೆ. ಅಲ್ಲದೆ ಕಲ್ಯಾಣದಲ್ಲಿದ್ದ ಕಿನ್ನರಯ್ಯ, ಸೊನ್ನಲಿಗೆ ಸಿದ್ಧರಾಮಯ್ಯ, ಕಲಕೇತಬ್ರಹ್ಮಯ್ಯ, ಚನ್ನಯ್ಯ, ಹೊನ್ನಯ್ಯ, ಒಕ್ಕಲಿಗ ಮುದ್ದಯ್ಯ, ನುಲಿಯ ಚಂದಯ್ಯ, ಗುಂಡುಬ್ರಹ್ಮಯ್ಯ, ಮೋಳಿಗೆ ಮಾರಯ್ಯ, ಹಡಪದ ಹಂಪ್ಪಣ್ಣ ಮುಂತಾದ ಶರಣರು ಈ ವವಾಡವನ್ನು ನೋಡಲು ತ್ರಿಪುರಾಂತಕ ದೇವಾಲಯವನ್ನು ಸೇರುತ್ತಾರೆ.