ಪ್ರತಿಯೊಂದು ಜನಾಂಗವು ತನ್ನದೆ ಆದ ಪೌರಾಣಿಕ ಪ್ರಪಂಚವನ್ನು ಸೃಷ್ಟಿಸಿಕೊಂಡು, ಆ ಮೂಲಕ ತನ್ನ ಪ್ರಾಚೀನತೆಯನ್ನು ಮತ್ತು ಶ್ರೇಷ್ಠತೆಯನ್ನು ಸ್ಥಾಪಿಸಿಕೊಳ್ಳಲು ಪ್ರಯತ್ನಿಸಿರುವುದು ಕಂಡು ಬರುತ್ತದೆ. ಇದಕ್ಕೆ ಕಾರ್ನಾಟಕ ಕುರುಬ ಜನಾಂಗವು ಹೊರತಾಗಿಲ್ಲವೆಂದು ಹೇಳಬಹುದು. ಕುರುಬ ಜನಾಂಗವೂ ಕೂಡ ತನ್ನದೇ ಆದ ಪುರಾಣ ಪ್ರಂಪಚವನ್ನು ಹೊಂದಿರುವುದು ವಿಶೇಷ. ಈ ಜನಾಂಗವು ತಾನು ಪರಂಪರಾಗತವಾಗಿ ಆರಾಧಿಸಿಕೊಂಡು ಬಂದಿರುವ ದೇವಾನುದೇವತೆಗಳಾದ ಭೀರೇಶ್ವರ, ಮಾಳಿಂಗರಾಯ, ರೇವಣಸಿದ್ಧೇಶ್ವರ, ಅಮೋಘಸಿದ್ಧೇಶ್ವರ, ಶಾಂತಮುತ್ತಯ್ಯ, ಸಿದ್ಧಮಂಕ ಮುಂತಾದವರನ್ನು ಕುರಿತ ಕತೆಗಳು ಈ ಹಿನ್ನಲೆಯಲ್ಲಿಯೇ ರಚನೆಗೊಂಡಿವೆ. ಈ ಮಹಾಪುರುಷರನ್ನು ಕುರಿತು ಹುಟ್ಟಿಕೊಂಡಿರುವ ಕತೆಗಳಲ್ಲಿ ಪವಾಡಗಳು, ಅತಿಮಾನುಷ ಶಕ್ತಿಗಳು ತುಂಬಿರುವುದರಿಂದ ಅವುಗಳಿಗೆ ಒಂದು ದೈವಿಕ ಆವರಣ ಉಂಟಾಗುತ್ತದೆ. ಹಾಲುಮತ ಮಹಾಪುರುಷರನ್ನು ಕುರಿತ ಈ ಕತೆಗಳನ್ನು ಕುರುಬರು ಮೌಖಿಕ ಪರಂಪರೆ ಡೊಳ್ಳಿನ ಹಾಡುಗಳ ಮೂಲಕ ಪ್ರಸಾರಗೊಳಿಸುತ್ತ ಬಂದಿರುವುದು ಒಂದು ವಿಶೇಷ. ಹೀಗೆ ಪ್ರಾಚೀನ ಕಾಲದಿಂದಲೂ ಮೌಖಿಕ ಪ್ರರಂಪರೆಯಲ್ಲಿ ಪ್ರವಹಿಸುತ್ತಾ ಬಂದಿರುವ ಈ ಕತೆಗಣನ್ನು ತೆಗೆದುಕೊಂಡು ಇತ್ತೇಚೆಗೆ (೧೭, ೧೮ನೆಯ ಶತಮಾನದಲ್ಲಿ) ಹಾಲುಮತ ಕಾವ್ಯ ಪುರಾಣಗಳನ್ನು ರಚಿಸಿರುವುದು ಕಂಡುಬರುತ್ತದೆ. ಹೀಗೆ ಬಂದಿರುವ ಹಾಲುಮತ ಪುರಾಣಗಳಲ್ಲಿ ಬಸವಣ್ಣೆಪ್ಪ ನೀಲಪ್ಪ ಹಳವಳ್ಳಿ ಅವರು ಸಂಪಾದಿಸಿದ “ಹಾಲುಮತ ಪುರಾಣವು” ಒಂದು.

ಬಸವಣ್ಣೆಪ್ಪ ನೀಲಪ್ಪ ಹಳವಳ್ಳಿ ಅವರು ಈ ಪುರಾಣ ಕೃತಿಯನ್ನು ಪ್ರಕಟಿಸಿ ಕ್ರಿ.ಶ. ೧೯೧೦ರಲ್ಲಿ ಲಕ್ಷ್ಮೇಶ್ವರದಲ್ಲಿ ಜರುಗಿದ “ಹಾಲುಮತ ಧಾರ್ಮಿಕ ಮಹಾಸಭೆ”ಯಲ್ಲಿ ಉಚಿತವಾಗಿ ಹಂಚಿರುವುದಾಗಿ ಅವರೇ ತಮ್ಮ ಭಾಷಣವೊಂದರಲ್ಲಿ ಹೇಳಿದ್ದಾರೆ. ಈ ಕೃತಿಯನ್ನು ತಾಳೆವೋಲೆಗಳಿಂದ ನೋಡಿ ಬರೆದಿರುವುದಾಗಿಯೂ ಹೇಳಿಕೊಂಡಿದ್ದಾರೆ. ಆದರೆ ಅವರು ಬಳಸಿಕೊಂಡಿರುವ ತಾಳೆವೋಲೆಯ ಪ್ರತಿಯು ಈಗ ದೊರೆಯುವುದಿಲ್ಲ. ಹಾಗೆಯೇ ಈ ಕೃತಿ ರಚನಾಕಾರನ ವಿಚಾರವಾಗಿಯೂ, ಯಾವುದೇ ಮಾಹಿತಿ ತಿಳಿಯುವುದಿಲ್ಲ. ಈ ಕೃತಿಗೆ ‘ಹಾಲುಮತ ಪುರಾಣವು’ ಎಂದು ಹಳವಳ್ಳಿಯವರ ಶಿರೋನಾಮವನ್ನು ಕೊಟ್ಟಿದ್ದಾರೆ. ಆದರೆ ಈ ಕೃತಿಯ ಕೊನೆಯಲ್ಲಿ.

ಮರುಳ ಸಿದ್ಧನಯನ ವರಚರಿತವ ಕೇಳೆ
ಹರನೊಲಿವನು ಕರುಣದಿ
ಕುರುವರ ಕಥೆಯೆಂದು ಜರಿಯಲು ಬೇಡ
ಮರುಳಸಿದ್ಧಯ್ಯ ತಾ ಕುರುಬ     (೫-೧೦೭)

ಕೃತಿಯ ಹೆಸರು “ಮರುಳಸಿದ್ದಯ್ಯನ ಚರಿತೆ” ಎಂದೂ, ಇವನು ಜಾತಿಯಿಂದ ಕುರುಬನೆಂದು ಈ ಪದ್ಯದಿಂದ ಸ್ವಷ್ಟವಾಗುತ್ತದೆ.

ಹೀಗಾಗಿ ಈ ಮರುಳಸಿದ್ದನೇ ಕೃತಿಯ ನಾಯಕ. ಇವನು ಸರವೂರಿನ ತೂಗುಡ್ಡದಲ್ಲಿ ಶಿರವಡಿಯಾಗಿ ಕಾಲು ಮೇಲಾಬಿ ಭಯಂಕರವಾದ ತಪಸ್ಸನ್ನು ಮಾಡಿ, ಕಲ್ಯಾಣ ಪಟ್ಟಣದಿಂದ ಹೊರಹಾಕಲ್ಪಟ್ಟ ಕುರುಬರನ್ನು ಮತ್ತೆ ಒಳ ಪ್ರವೇಶಿಸುವಂತೆ ಮಾಡಿ, ಬಸವಾದಿ ಪ್ರಥಮರ ಸಮ್ಮುಖದಲ್ಲಿ ಕುರುಬ ಕುಲಕ್ಕೆ ಗುರುವಾಗಿ ನೇಮಕಗೊಂಡಿರುವುದೇ ಇಲ್ಲಿಯ ಕಥಾವಸ್ತು. ಈ ಕೃತಿಯ ನಾಯಕ ಮರುಳಸಿದ್ದನನ್ನು ಮಂಕಸಿದ್ದನೆಂದೂ (ಮಾತರಿಯದ ಮಂಕು ಸಿದ್ದರಾಮಯ್ಯನ ಕಥೆ ಜಾತಿವಂತರು ಕೇಳುವುದು ೩-೪) ಕರೆದಿರುವುದರಿಂದ ಮರುಳಸಿದ್ದ ಮಂಕುಸಿದ್ದ ಎಂದು ಕರೆದಿರುವ ವ್ಯಕ್ತಿ ಒಬ್ಬನೇ ಎಂಬುದು ಸ್ಪಷ್ಟವಾಗುತ್ತದೆ. ಶಾಸನಗಳು ಮತ್ತು “ಸಿದ್ದಮಂಕ ಚರಿತೆ” ಕೃತಿಯಲ್ಲಿ ಇವನನ್ನು ಮಂಕಸಿದ್ದ, ಮಂಕುಮರುಳ, ಮಂಕಯ್ಯ ಸಿದ್ದಮಂಕ ಇತ್ಯಾದಿಯಾಗಿ ಕರೆದಿರುವುದನ್ನು ಗಮನಿಸಬಹುದು.

ಈ ಕೃತಿಯಲ್ಲಿ ಮರುಳಸಿದ್ದನ (ಮಂಕುಸಿದ್ದ) ಜನನ, ಬಾಲ್ಯದ ಕಥೆಯು ರಾಘವಾಂಕ ಕವಿಯ ‘ಸಿದ್ದರಾಮ ಪುರಾಣ’ದ ಸಿದ್ದರಾಮನ ಜನನ ಬಾಲ್ಯದ ಘಟನೆಯ ಕಥೆಯಂತೆಯೆ ನಿರೂಪಿತವಾಗಿರುವುದು ಕಂಡು ಬರುತ್ತದೆ. ಹೀಗಾಗಿ ರಾಘವಾಂಕ ಕವಿಯ ಸಿದ್ದರಾಮ ಪುರಾಣದ ಪ್ರಭಾವನು ಈ ಕೃತಿಯ ಮೇಲೆ ದಟ್ಟವಾಗಿ ಬೀರಿರುವುದನ್ನು ಸ್ಪಷ್ಟವಾಗಿ ಗುರುತಿಸಬಹುದಾಗಿದೆ. “ಸಾಕ್ಷಾತ್ ರೇವಣಸಿದ್ಧರು ಭಿಕ್ಷೆಉಅನ್ನು ಬೇಡುತ್ತ ದೇಶ ಸಂಚಾರ ಮಾಡುತ್ತ ದಕ್ಷಿಣ ದಿಕ್ಕಿನಲ್ಲಿರುವ ‘ಸರವೂರ’ ಪುರಕ್ಕೆ ಬರುತ್ತಾರೆ. ಅಲ್ಲಿರುವ ಮುದ್ದುಗೌಡ ಮತ್ತು ಸುಗ್ಗಲದೇವಿ ಎಂಬ ದಂಪತಿಗಳ ಮನೆಗೆ ಬಂದು ಭಿಕ್ಷೆಯನ್ನು ಕೇಳುತ್ತಾರೆ. ಆಗ ದಂಪತಿಗಳು ಭಕ್ತಿಯಿಂದ ಚಿನ್ನದ ಗಿಂಡಿಯಲ್ಲಿ ಪನ್ನೀರನ್ನು ತಂದು ಪಾದವನ್ನು ತೊಳೆದು ರನ್ನ ರತ್ನದ ಗದ್ದುಗೆಯಲ್ಲಿ ಕುಳ್ಳಿರಿಸುತ್ತಾರೆ. ನಂತರ ಅಷ್ಟಾ ವಿಧಾನದಿಂದ ಪೂಜೆಯನ್ನು ಮಾಡಿ ಭಿಕ್ಷೆಯನ್ನು ಸಲ್ಲಿಸುತ್ತಾರೆ. ಇವರ ಭಕ್ತಿಯಿಂದ ಸಂತೃಪ್ತಗೊಂಡ ರೇವಣಸಿದ್ಧರು ‘ಏನು ಬೇಕು ಕೇಳಿರಿ’ ಎನ್ನುತ್ತಾರೆ. ದಂಪತಿಗಳು ಹೊಟ್ಟೆಯಲ್ಲಿ ಶಿಶುವಿಲ್ಲ, ಕೊಟ್ಟು ಕಾಪಾಡಬೇಕು (೨-೧೧) ಎಂದು ಬೇಡಿಕೊಳ್ಳುತ್ತಾರೆ. ಆಗ ರೇವಣಸಿದ್ಧರು ” ಕಂದನಾಗುವ ನಿಮಗೆ” ಎಂದು ದಂಪತಿಯನ್ನು ಹರಸಿ ಹೋಗುತ್ತಾರೆ. ರೇವಣಸಿದ್ಧರೆ ಹಾರೈಕೆಯೇ ಕೈಗೂಡುವಂತೆ ಆ ದಂಪತಿಗಳಿಗೆ ಗಂಡು ಮಗುವೊಂದು ಜನಿಸುತ್ತದೆ. ಅವನಿಗೆ ಸಿದ್ಧರಾಮನೆಂದು ಹೆಸರಿಡುತ್ತಾರೆ. ಆದರೆ ಮಗನಿಗೆ ನಾಲ್ಕೈದು ವರ್ಷ ಕಳೆದರೂ ಮಾತು ಬರುವುದಿಲ್ಲ. ಹೀಗೆ ಮೂಗನಾಗಿರುವ ಮಗನನ್ನು ಮನೆಯಲ್ಲಿಯೇ ಕುಳ್ಳಿರಿಸುವುದಕ್ಕಿಂತ ಓಣಿಯ ಬಾಲಕರೊಂದಿಗೆ ಕರುಗಳನ್ನು ಕಾಯಲು ಕಳುಹಿಸಿದರೆ ಅವರೊಂದಿಗೆ ಬೆರೆತು ಮಾತನಾಡುವುದನ್ನು ಕಲಿಯಬಹುದು ಎಂಬ ಭಾವನೆಯಿಂದ ಓಣಿಯ ಬಾಲಕರಾದ ಯಕ್ಕಯ್ಯ-ಜೋಗಯ್ಯರೊಂದಿಗೆ ಕಳಿಸುತ್ತಾರೆ. ಬಾಲಕರೊಂದಿಗೆ ಕರುಗಳನ್ನು ಮೇಯಿಸಲು ಹೋದ ಬಾಲಕ ಸಿದ್ಧರಮ ಅಡವಿಯಲ್ಲಿ ಕರುಗಳನ್ನು ಮೇಯಲು ಬಿಟ್ಟು, ಮರದಡಿಯಿರುವ ಲಿಂಗವನ್ನು ಅನನ್ಯಭಕ್ರಿಯಿಂದ ಪೂಜಿಸುತ್ತಾನೆ. ಇದು ಅವನ ದಿನನಿತ್ಯದ ಕಾಯಕವಾಗುತ್ತದೆ. ಅವನ ಭಕ್ತಿಗೆ ಮೆಚ್ಚಿದ ಶ್ರೀಗಿರಿ ಮಲ್ಲಯ್ಯ ಅಡವಿಯಲ್ಲಿ ಕರುಗಳನ್ನು ಮೇಯಿಸುತ್ತಿರುವಾಗ ಭೆಟ್ಟಿ ನೀಡಿ ‘ಹಸಿವಾಗಿದೆ ತಿನ್ನಲು ಏನಾದರೂ ಕೊಡು’ ಎಂದು ಕೇಳುತ್ತಾನೆ. ಬಾಲಕ ಸಿದ್ಧರಾಮ ‘ನಾನು ತಂದಿರುವ ಬುತ್ತಿಯನ್ನು ಈಗಾಗಲೇ ಊಟ ಮಾಡಿದ್ದೇನೆ’ ಎಂದು ಹೇಳುತ್ತಾನೆ. ಅವನ ಒತ್ತಯಕ್ಕೆ ಮಣಿದ ಬಾಲಕ ಮಲ್ಲಯ್ಯನಿಗೆ ಕರುಗಳನ್ನು ನೋಡಿಕೊಳ್ಳಲು ಹೇಳಿ ಮನೆಗೆ ಬರುತ್ತಾನೆ. ತಾಯಿಯನ್ನು ಬೇಡಿ ಬುತ್ತಿಯನ್ನು ಕಟ್ಟಿಸಿಕೊಂಡು ಮರಳಿ ಬರುವುದರಲ್ಲಿ ಶ್ರೀಗಿರಿ ಮಲ್ಲಯ್ಯ ಅಲ್ಲಿಂದ ಮಾಯವಾಗಿ ಹೋಗುತ್ತಾನೆ. ಆಗ ಬಾಲಕ ಅಡವಿಯಲ್ಲಿ ಮಲ್ಲಯ್ಯನನ್ನು ಹುಡುಕಿ ಹುಡುಕಿ ಕಷ್ಟಪಡುತ್ತಿರುವಾಗ ಶ್ರೀಶೈಲಕ್ಕೆ ಪರುಷೆ ಹೊರಟ ಜಂಗಮರು ಮಲ್ಲಯ್ಯನನ್ನು ತೊರಿಸುವುದಾಗಿ ಹೇಳಿ ಶ್ರೀಶೈಲಕ್ಕೆ ಕರೆತರುತ್ತಾರೆ. ಅಲ್ಲಿರುವ ಲಿಂಗರೂಪದ ಮಲ್ಲಯ್ಯನನ್ನು ಕಂಡು ನಿರಾಶೆಗೊಂಡು ತಾನು ಹೊಲದಲ್ಲಿ ಕಂಡಿರುವ ಮಲ್ಲಯ್ಯನನ್ನು ಪರ್ವತದಲ್ಲೆಲ್ಲ ಹುಡುಕುತ್ತಾನೆ. ಕೊನೆಗೆ ಅವನು ಸಿಗದೇ ಇದ್ದಾಗ ರುದ್ರಗಮ್ಮರಿಗೆ ಬೀಳಲು ಸಿದ್ಧನಾಗುತ್ತಾನೆ. ಆಗ ಮಲ್ಲಯ್ಯನು ದರುಶನವನ್ನು ನೀಡಿ, ಬಾಲಕನ ಕರುಗಳನ್ನು ಹಿಡಿದು ಮುದ್ದಾಡಿ- “ಮರುಳಸಿದ್ಧೇಶ”ನೆಂಬ ಹೊಸ ಹೆಸರನ್ನು ಬಾಲಕನಿಗೆ ಕೊಟ್ಟು “ವರತಪೋಧನ ನಿನಾಗು,” “ಇರಹೋಗು ನಿನ್ನ ಚಿತ್ತಕ್ಕೆ ಬಂದಲ್ಲಿ” ಎಂದು ಕರುಣಿಸಿ (೩-೬) ಹನ್ನೆರಡು ಸೂಜಿ ಹನ್ನೆರಡು ದಬ್ಬಣವನ್ನು ಬಾಲಕನಿಗೆ ಕೊಟ್ಟು ಭೂಮಿಯನ್ನು ತೂಗುತ್ತಾ ಹೋಗು, ಎಲ್ಲಿ “ಭೂಮಿಯ ತೂಕ ಒಂದು ಗಂಜಿ ಹೆಚ್ಚಾಗುವುದೋ ಅಲ್ಲಿಯೇ ನೀನು ತಪೋಧನನಾಗು” ಎಂದು ಹೇಳಿ ಹರಸಿ ಕಳಿಸುತ್ತಾನೆ.

ಇತ್ತ ಗುರುವಿನ ಅಪ್ಪಣೆಯಂತೆ ಭೂಮಿಯನ್ನು ತೂಗುತ್ತಾ ಬರುತ್ತಿರುವಾಗ ‘ತೂಗುಡ್ಡ’ವೆಂಬ ಭೂಮಿಯ ತೂಕ ಹೆಚ್ಚಾಗಲು ಅಲ್ಲಿಯೇ ತಪಸ್ಸಿಗೆ ನಿಲ್ಲುತ್ತಾನೆ. ತೂಗುಡ್ಡದ ಕೋಡುಗಲ್ಲಿನ ಮೇಲೆ ಗುಲಗಂಜಿ ಸೂಜಿಯನ್ನು ನಿಲ್ಲಿಸಿ ಅವನ ತಪಸ್ಸನ್ನು ಆರಂಭಿಸಿದ ಪರಿಯನ್ನು ನೋಡಿ-

ಶಿರವಡಿಯಾಗಿ ಶ್ರೀ ಚರಣವೇ ಮೇಲಾಗಿ
ಮರುಳಸಿದ್ಧೇಸನು ಮಾಡಿ ತಪವ
ಗಿರಿಯ ಮಲ್ಲೇಶನ ಚರಣವ ನೆನೆಯುತ
ತರಳ ಮಾಡಿದನು ತಪವ      (೩-೧೫)

ಹೀಗೆ ಗುಲಗಂಜಿಯ ಮೇಲೆ ಸೂಜಿ ಡಬ್ಬಣವನ್ನು ನಿಲ್ಲಿಸಿ ಅದರ ತಲೆಯನ್ನು ಊರಿ ಚರಣವನ್ನು ಮೇಲೆ ಮಾಡಿ ಕಠಿಣವಾದ ತಪಸ್ಸನ್ನು ಮಾಡುತ್ತಾನೆ.

ಇನ್ನು ಮುಂದೆ ಕುರುಬರ ಮೂಲ ಪುರುಷನಾದ ಆದಿಗೊಂಡ ಮತ್ತು ಆತನ ಆರು ಜನ ಮಕ್ಕಳಲ್ಲಿ ಕೊನೆಯವನಾದ ಉಂಡಾಡು ಪದ್ಮಣ್ಣನ ವೃತಾಂತವನ್ನು ಹೇಳಲಾಗಿದೆ. ಉಂಡಾಡು ಪದ್ಮಣ್ಣನ ಹೊಲವನ್ನು ಊಳುವಾಗ ಕುರಿಗಳು ದೊರೆತಿರುವುದು, ಅವನ ಮೊದಲ ಹೆಂಡತಿ ಸಿದ್ದಮ್ಮನ ಇಪ್ಪತ್ತು ಜನ ಮಕ್ಕಳು ಹತ್ತಿ ಕಂಕಣದ ಕುರುಬರಾದುದು, ಅವನ ಎರಡನೆಯ ಹೆಂಡತಿ ಚೆನ್ನಮ್ಮನಿಗೆ ಇಪ್ಪತ್ತು ಜನ ಮಕ್ಕಳು ಜನಿಸುತ್ತಾರೆ. ಇವರು ಉಣ್ಣೆ ಕಂಕಣದ ಕುರುಬರೆಂದು ಹೆಸರು ಪಡೆಯುತ್ತಾರೆ. ಊಂಡಾಡು ಪದ್ಮಣ್ಣನ ನಾಲ್ವತ್ತು ಮಕ್ಕಳಾದ ಕುರುಬರು ತೂಗುಡ್ಡದ ಸುತ್ತ-ಮುತ್ತಲಿನ ಪ್ರದೇಶದಲ್ಲಿ ಕುರಿಯ ಹಟ್ಟಿಯನ್ನು ಹಾಕಿಕೊಂಡು ಜೀವಿಸುತ್ತಿರುತ್ತಾರೆ. ಇದೇ ಸಂದರ್ಭದಲ್ಲಿ ಸಿದ್ದಮಂಕನ ತಪಸ್ಸಿನ ಮಹಿಮಯನ್ನು ಕೇಳಿದ ಬಿಜ್ಜಳ ಪರಿವಾರ ಸಮೇತವಾಗಿ ಬೇಟೆಯ ನೆವದಿಂದ ತೂಗುಡ್ಡ ಪ್ರದೇಶಕ್ಕೆ ಬರುತ್ತಾನೆ. ಬೇಟಿಯಾಡಿ ದಣಿದು ಬಂದ ಬಿಜ್ಜಳ ಮತ್ತು ಆತನ ಪರಿವಾರವನ್ನು ಗೂಗುಡ್ಡದ ಸುತ್ತಲೂ ಹಟ್ಟಿಹಾಕಿಕೊಂಡು ಜೀವಿಸುತ್ತಿರುವ ಕುರುಬರು ಅನ್ನ-ನೀರು ಕೊಟ್ಟು ಉಪಚರಿಸಿದ ರೀತಿ ಹೀಗೆ ಬರುತ್ತದೆ.

ಗಚ್ಚಿನ ಕಣದೊಳು ಹೆಪ್ಪ ಹಾಲಿಗೆ ಕೊಟ್ಟು
ಎತ್ತೀನ ಕಾಲ ತೊಳೆತೊಳೆದು
ಸುತ್ತಲಿ ಹಂತಿಯ ಕಟ್ಟಿ ತುಳಸಿ ಬೆಣ್ಣೆ
ಮತ್ತೆ ಗೋರೆ ಹಲ್ಲೀಲೆ ಎಳೆ ಎಳೆದು !     (೮-೨೮)

ಗಚ್ಚಿನ ಕಣದಲ್ಲಿ ಹಾಲಿಗೆ ಹೆಪ್ಪನ್ನು ಹಾಕಿ,ಎತ್ತಿನ ಕಾಲನ್ನು ತೊಳೆದು ಹಂಡಿಯನ್ನು ಕಟ್ಟಿ, ಬೆಣ್ಣೆಯನ್ನು ಗ್ವಾರಿಯಿಂದ ಎಳೆ ಎಳೆದು ಬೇಟಿಯಾಡಿ ದಣಿದು ಬಂದ ಬಿಜ್ಜಳನ ಮತ್ತು ಅವನ ಪರಿವಾರದವರನ್ನು ಊಣಬಡಿಸುತ್ತಾರೆ. ಅವರ ಉಪಚಾರದಿಂದ ಸಂತೃಪ್ತಗೊಂಡ ಬಿಜ್ಜಳ ಇಂಥವರು ತಮ್ಮ ಕಲ್ಯಾಣ ಪಟ್ಟಣದಲ್ಲಿ ಇರಬೇಕೆಂದು ಭಾವಿಸಿ, ಅವರನ್ನು ತಮ್ಮಲ್ಲಿ ಬಂದು ಇರಲು ಆಹ್ವಾನಿಸುತ್ತಾನೆ. ಬಿಜ್ಜಳನ ಆಹ್ವಾನವನ್ನು ಒಪ್ಪಿದ ಕುರುಬರು ಕುರಿಮರಿ, ಸತಿ-ಸುತರು ಸಹಿತವಾಗಿ ಕಲ್ಯಾಣ ಪಟ್ಟಣಕ್ಕೆ ಬರುತ್ತಾರೆ. ಅಲ್ಲಿ ಬಿಜ್ಜಳ, ಬಸವಣ್ಣ ಮುಂತಾದ ಶರಣರಿಗೆ ಹಾಲುಮೊಸರನ್ನು ಮಾರಿಕೊಂಡು ಜೀವಿಸುತ್ತಿರುತ್ತಾರೆ. ಹೀಗಿರುವಾಗ ಒಮ್ಮೆ ಭಯಂಕರವಾದ ಗಾಳಿ-ಮಳೆ ಸುರಿದು ಕುರುಬರ ಕುರಿಗಳೆಲ್ಲಾ ಸತ್ತು ಹೋಗುತ್ತವೆ. ಕುರುಬರು ಸತ್ತಿರುವ ಕುರಿಗಳಲ್ಲಿ ಕೆಲವನ್ನು ಹೊತ್ತು ತಂದು ಕಲ್ಯಾಣ ಪಟ್ಟಣದಲ್ಲಿ ಮಾರುತ್ತಾರೆ. ಉಳಿದವುಗಳನ್ನು ಒಟ್ಟುಗೂಡಿಸಿ ಬೆಂಕಿಯನ್ನು ಹಚ್ಚಿ ಸುಡುತ್ತಾರೆ. ಅದರ ದುರ್ಗಂಧವೆಲ್ಲ ಕಲ್ಯಾಣಪುರದೊಳಗೆ ಹಬ್ಬಿ ಹರಡುತ್ತದೆ. ಸುಟ್ಟ ಕುರಿಗಳ ಕಮರು ವಾಸನೆಯಿಂದ ಕೆರಳಿದ ಶರಣರು “ಪಟ್ಟಣದೊಳಗೆಲ್ಲ ಸುಟ್ಟು ಹೇಸಿಕೆಯನ್ನು ಮಾಡಿದರು. ಇಂಥವರು  ನಮ್ಮಲ್ಲಿರಬಾರದು” ಎಂದು ಏಳು ಬೇಲಿಗಳ ಹೊರಗೆ ಹಾಕುತ್ತಾರೆ. ಹೀಗೆ ಕಲ್ಯಾಣ ಪಟ್ಟಣದಿಂದ ಹೊರಹಾಕಿಸಿಕೊಂಡ ಕುರುಬರು ಮತ್ತೆ ತೂಗುಡ್ಡಕ್ಕೆ ಬಂದು ಹಟ್ಟಿಗಳನ್ನು ಹಾಕಿಕೊಂಡು ಜೀವಿಸುತ್ತಿರುತ್ತಾರೆ

ತೂಗುಡ್ಡದಲ್ಲಿ ಬಿಸಿಲು-ಗಾಳಿ-ಮಳೆಯೆನ್ನದೆ ಕಠಿಣವಾದ ತಪಸ್ಸನು ಮಾಡುತ್ತಿರುವ ಸಿದ್ಧಮಂಕನ ವಿಷಯವನ್ನು ನಾರದನಿಂದ ತಿಳಿದ ಶಿವ ಪರ್ವತಿ ಸಮೇತವಾಗಿ ಅಲ್ಲಿಗೆ ಬರುತ್ತಾನೆ. ಸಿದ್ಧಮಂಕನ ತಪಸ್ಸಿಗೆ ಮೆಚ್ಚಿದ ಶಿವನು ನಿನ್ನ ಇಚ್ಚೆಯೇನು ಬೇಡು ಎಂದು ಕೇಳುತ್ತಾನೆ. ಆಗ ಸಿದ್ಧಮಂಕನು ಕಲ್ಯಾಣ ಪಟ್ಟಣದಿಂದ ಹೊರಹಾಕಲ್ಪಟ್ಟ ಕುರುವರು ಅಸ್ಪ್ಯಶ್ಯರಂತೆ ಎನ್ನ ಬಳಿ ಜೀವಿಸುತ್ತಿದ್ದಾರೆ. ಇವರ ಕುಲಕ್ಕೆ ಎನ್ನನು ಒಡೆಯನನ್ನಾಗಿ ಮಾಡಿ, ಸತ್ತ ಕುರಿಯನ್ನು ಹೆತ್ತ ಮೊಸರನ್ನು, ಹಾಲು ಬೆಣ್ಣೆಯನ್ನು ಕಲ್ಯಾಣದಲ್ಲಿ ಮಾರಿ ಜೀವಿಸುವ ಪವಾಡವನ್ನು ಕರುಣಿಸಬೇಕು ಎಂದು ಬೇಡುತ್ತಾನೆ. ಹಾಗೆಯೇ ಆಗಲಿ ಎಂದು ಹೇಳಿದ ಶಿವನು ಆ ಕೆಲಸಕ್ಕೆ ರೇವಣಸಿದ್ಧನನ್ನು ನೇಮಿಸಿ ಕೈಲಾಸಕ್ಕೆ ಹೋಗುತ್ತಾನೆ. ಇತ್ತ ರೇವಣಸಿದ್ಧನು ಸಿದ್ಧಮಂಕ ಹಾಗೂ ಸಕಲ ಕುರುಬರನ್ನು ಕರೆದುಕೊಂಡು ಕಲ್ಯಾಣ ಪಟ್ಟಣದ ಕಡೆಯ ಬಾಗಿಲಿಗೆ ಬರುತ್ತಾನೆ. ಆಗ ಅಲ್ಲಿದ್ದ ದ್ವಾರಪಾಲಕರು “ಆಗ ಹೊರಹಾಕಿಸಿಕೊಂಡ ನಿಮ್ಮನ್ನು ಒಳಬಿಟ್ಟರೆ ನಮ್ಮನ್ನೂ ಕಟ್ಟಿ ಕೊಲ್ಲುತ್ತಾರೆ ಹೋಗಬೇಡಿರೆಂದು (೫-೩೨) ತಡೆಯುತ್ತಾರೆ. ಅಷ್ಟರಲ್ಲಿಯೇ ಕಲ್ಯಾಣ ಪಟ್ಟಣದಲ್ಲಿ ಸತ್ತಿರುವ ಗೂಳಿಯನ್ನು ಹೂಳುವುದಕ್ಕೆ ಮೆರವಣಿಗೆಯಲ್ಲಿ ತೆಗೆದುಕೊಂಡು ಅಲ್ಲಿಗೆ ಬರುತ್ತಾರೆ. ಅದನ್ನು ಕುರುಬರು ತಡೆಯುತ್ತಾರೆ. ಆಗ ಕುರುಬರಿಗೂ ಮತ್ತು ಶರಣರಿಗೂ ವಾದ ಬೀಳುತ್ತದೆ.

“ನಿಮ್ಮ ಸತ್ತಿರುವ ಗೂಳಿಯನ್ನು ನೀವು ಎಬ್ಬಿಸಿರಿ, ಇಲ್ಲವಾದರೆ ನಮ್ಮ ತಗರವನ್ನು ನಾವು ಎಬ್ಬಿಸುತ್ತೇವೆ” ಎಂದು ವಾದ ಹೂಡುತ್ತಾರೆ. ಈ ವಿವಾದದ ಸುದ್ದಿ ಅರಸ ಬಿಜ್ಜಳನಿಗೂ ಬಸವದಂಡೇಶನಿಗೂ ಮುಟ್ಟುತ್ತದೆ. ಅಲ್ಲಿಗೆ ಬಿಜ್ಜಳ, ಬಸವಣ್ಣ, ಅಲ್ಲಮ, ಮೊಲ್ಲಬೊಮ್ಮಯ್ಯ, ಮಾರಯ್ಯ ಮುಂತಾದ ಶರಣರೆಲ್ಲ ಬರುತ್ತಾರೆ. ಇತ್ತ ಭಕ್ತರು ಸತ್ತ ಬಸವನನ್ನು ಎಬ್ಬಿಸಲು ಪವಾಡವನ್ನು ಮಾಡಲು ಪ್ರಯತ್ನಿಸಿದರೂ ಅದು ಮಿಸುಕಾಡದೇ ಉಳಿಯಿತು. ಆಗ  ಭಕ್ತರು ನಾವು ಸೋತೆವು. ನೀವು ನಿಮ್ಮ ಪವಾಡವನ್ನು ಮಾಡಬೇಕೆಂದು ರೇವಣಸಿದ್ಧನಿಗೆ ಹೇಳುತ್ತಾರೆ. ಅಷ್ಟರಲ್ಲಿ ಅಲ್ಲಿದ್ದ ಕೆಲವರು ನಿಮ್ಮ ತಗರು ಬೇಡ ಎಂದು ಮತ್ತೊಂದು ತಗರವನ್ನು ತಂದು ಬಗೆಬಗೆಯಾಗಿ ಕಡಿದು ಛಿದ್ರಗೊಳಿಸಿ ಇದನ್ನು ಎಬ್ಬಿಸಿ ಪವಾಡ ಮಾಡಬೇಕೆಂದು ರೇವಣಸಿದ್ಧನ ಮುಂದೆ ಇಡುತ್ತಾರೆ. ಆಗ ರೇವಣಸಿದ್ಧನು ಜಗಮುತ್ತಯ್ಯನಿಗೆ ಅದರ ಅಂಗಾಂಗಗಳನ್ನು ಜೋಡಿಸಲು ಹೇಳಿ, ಅದರ ಮೇಲೆ ಗೊಂಗಡಿಯ ಜಾಡಿಯನ್ನು ಹೊದಿಸಿ ಜಗಮುತ್ತ್ಯಾ ಎಂದು ಕರೆಯಲು ತಗರು ಜೀವ ತಳೆದು ಎದ್ದಿತು” (ಆಗ ಕುರುಬರೆಲ್ಲ ತಗರ ಪವಾಡವನ್ನು ಗೆದ್ದ ವಿಜಯೋತ್ಸವವನ್ನು ಆಚರಿಸುತ್ತಾ ಕಲ್ಯಾಣಪಟ್ಟಣದ ಬೀದಿಯಲ್ಲಿ ಬರುತ್ತಾರೆ.) ಕುರುಬರ ಉತ್ಸಾಹ ಉಕ್ಕೇರುತ್ತದೆ. ಪವಾಡವನ್ನು ಗೆದ್ದ ರೇವಣಸಿದ್ಧನನ್ನು ಮತ್ತು ಇದಕ್ಕೆ ಕಾರಣವಾದ ಸಿದ್ಧಮಂಕರನ್ನು ಪಲ್ಲಕ್ಕಿಯಲ್ಲಿಟ್ಟು ಮೆರವಣಿಗೆಯನ್ನು ಮಾಡುತ್ತ ಕಲ್ಯಾಣದ ಬೀದಿ ಬೀದಿಗಳಲ್ಲಿ ವಿಜಯೋತ್ಸವವನ್ನು ಆಚರಿಸುತ್ತಾರೆ. ಕುರುಬರ ಡೊಳ್ಳು ವಾಧ್ಯದ ರಭಸದಲ್ಲಿ ಕಲ್ಯಾಣ ಪಟ್ಟಣವು ಮುಚ್ಚಿಹೋಗುತ್ತದೆ. ಪವಾಡವನ್ನು ಗೆದ್ದ ರೇವಣಸಿದ್ಧನನ್ನು, ಇದಕ್ಕೆ ಕಾರಣವಾದ ಸಿದ್ಧಮಂಕರನ್ನು ಬಿಜ್ಜಳ ‘ಬಸವಣ್ಣನವರು ಅಲ್ಲಿಯೇ ನೆರೆದ ಜನರ ಸಮ್ಮುಖದಲ್ಲಿ ಗೌರವಿಸುತ್ತಾರೆ. ಮತ್ತು ಕಲ್ಯಾಣ ಪಟ್ಟಣದಿಂದ ಬಹಿಷ್ಕಾರಕ್ಕೆ ಒಳಗಾದ ಕುರುಬರನ್ನು ಮತ್ತೇ ಕಲ್ಯಾಣ ಪ್ರವೇಶ ಮಾಡುವಂತೆ ಮಾಡಿದ ‘ಸಿದ್ಧಮಂಕನೇ ಇನ್ನು ಮುಂದೆ ಕುರುಬ ಕುಲಕ್ಕೆ ಗುರು’ (೫-೭೭) ಎಂದು ಸಾರಲಾಯಿತು. ಅಂದು ಮೊದಲಾಗಿ ಇಂದಿನವರೆಗೂ ಮಂಕಸಿದ್ಧನ ಅನುಯಾಯಿಗಳು ‘ಮಂಕೊಡೆಯರು’ ಎಂದು ಹೆಸರು ಪಡೆದು ಕುರುಬರ ಕುಲಗುರುಗಳಾಗಿ, ಗುರುವರ್ಗದವರಲ್ಲಿ ಒಂದು ಪಂಗಡವಾಗಿ ಕಾರ್ಯವನ್ನು ನಿರ್ವಹಿಸುತ್ತ ಬಂದಿರುವುದನ್ನು ಈಗಲೂ ಕಾಣಬಹುದು.

ಕುರುಬರ ಕುಲಗುರುವಾದ ಸಿದ್ಧಮಂಕನ ಕಾರ್ಯಕ್ಷೇತ್ರವು ಸರವೂರು. ಇದು ಇಂದಿನ ವಿಜಾಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ‘ಸರೂರು’ ಎಂಬುದು ಸ್ಪಷ್ಟ. ಸರವೂರಿನ ಹತ್ತಿರದಲ್ಲಿಯೇ ಸಿದ್ಧಮಂಕನು ತಪಸ್ಸು ಮಾಡಿದ ತೂಗುಡ್ಡವು ಇರುವುದು. ಈ ತೂಗುಡ್ಡದಲ್ಲಿ ಮಂಕಸಿದ್ಧನು ತಪಸ್ಸು ಮಾಡಿರುವುದನ್ನು ಇಲ್ಲಿಯ ಒಡೆಯರು ಈಗಲೂ ಹೇಳುತ್ತಾರೆ. ಸರವೂರಿನ ಊರ ಹೊರಗಡೆ ಬಯಲಿನಲ್ಲಿ ಸಿದ್ಧಮಂಕನ ಆರಾಧ್ಯ ದೈವವಾಗಿರುವ ಮಲ್ಲಿಕಾರ್ಜುನ ದೇವಾಲಯವೊಂದು ಇರುವುದನ್ನು ಈಗಲೂ ಕಾಣಬಹುದಾಗಿದೆ. ಆದರೆ ಈ ದೇವಾಲಯವನ್ನು ಇಂದು ರೇವಣಸಿದ್ಧ ದೇವಾಲಯವೆಂದು ಕರೆಯುತ್ತಾರೆ. ಈ ದೇವಾಲಯದ ಆವರಣದಲ್ಲಿ ಸಿದ್ಧಮಂಕನನ್ನು ಉಲ್ಲೇಖಿಸುವ ಎರಡು ಶಾಸನಗಳು ಕೂಡ ದೊರಕಿರುವುದು ವಿಶೇಷ. ಸಿದ್ಧಮಂಕನನ್ನು ಕುರಿತು ಮತ್ತೊಂದು ‘ಸಿದ್ಧಮಂಕ ಚರಿತೆ’ ಎಂಬ ಸಾಂಗತ್ಯ ಕೃತಿಯು ಪ್ರಕಟವಾಗಿರುವುದನ್ನು ಗಮನಿಸಬಹುದಾಗಿದೆ. ಈ ಎಲ್ಲ ವಿಚಾರಗಳ ಹಿನ್ನಲೆಯಲ್ಲಿ ‘ಸಿದ್ಧಮಂಕ’ನು ಒಬ್ಬ ಚಾರಿತ್ರಿಕ ವ್ಯಕ್ತಿ ಎಂಬುದು ಸ್ಪಷ್ಟವಾಗುತ್ತದೆ.