ಕುರುಬರಿಗೆ ಹಾಲುಮತದವರೆಂದೂ ಹೆಸರಿದೆ. ಹಾಲುಮತದವರೇ ಈ ನಾಡಿನ ಮೂಲನಿವಾಸಿಗಳೆಂದು ಹೇಳಲಾಗುತ್ತದೆ. ಅತ್ಯಂತ ಪರಂಪರಾ ಪ್ರಿಯರಾದ್ದರಿಂದ ಅವರು ಪುರಾತನ ಪದ್ಧತಿಗಳನ್ನು ಕಾಪಾಡಿಕೊಂಡು ಬಂದಿದ್ದಾರೆ. ಅನುಸರಿಸಿಕೊಂಡೂ ಬಂದಿದ್ದಾರೆ. ಶಂ.ಬಾ. ಜೋಶಿಯವರು ಹೇಳುವಂತೆ ಪ್ರಾಚೀನ ಜನಾಂಗವಾದ ಕುರುಬರಿಗೆ ರುದ್ರ ಶಿವನೇ ಕುಲದೈವತ. ರುದ್ರನೇ ವೀರ-ಬೀರದೇವ ಎಂದೂ, ಬೀರದೇವನ ವೀರಭಕ್ತರಿವರೆಂದೂ ಹೇಳಬಹುದಾಗಿದೆ. ಎರಡು ತಾಸು ಹೊತ್ತೇರಿದರೂ ಅವರ ನಿದ್ದೆಯ ಮಬ್ಬು ಹರಿಯುವುದಿಲ್ಲವೆಂದು ಹೀಗಳೆಯುವವರೂ ಇದ್ದಾರೆ. ಮದಡುತನವನ್ನು ಆರೋಪಿಸಿ ಕುರುಬರನ್ನು ಕುರಿತು ಅವೆಷ್ಟೋ ಕತೆಗಳು ಹುಟ್ಟಿಕೊಂಡಿರುವುದನ್ನು ನಾವೆಲ್ಲರೂ ಕೇಳಿದ್ದೇವೆ. ಅವರು ಅಷ್ಟೊಂದು ಮದಡವಾಗಿರುವುದಕ್ಕೆ ಕುರಿಯ ಹಾಲುಣ್ಣುವುದೇ ಕಾರಣೆವೆಂದು ಹೇಳಲಾಗುತ್ತದೆ. ತಂಗಳ ರೊಟ್ಟಿಯನ್ನು ಕುರಿಯ ಹಾಲಿನಲ್ಲಿ ಕುದಿಸಿ, ‘ಹಾಲಹುಗ್ಗಿ’ಯನ್ನು ಮಾಡಿಕೊಂಡು ಉಣ್ಣುವುದು ಅವರಿಗೆ ಅಡವಿಯ ಸಂಚಾರದಲ್ಲಿ ಅನಿವಾರ್ಯವಾಗಿದೆ. ಕುರಿಯ ಹಿಂಡು ಅವರ ಬದುಕು ಅದನ್ನು ಕಾಪಾಡಿಕೊಂಡು ಹೋಗಲು ಒಂದೆರಡು ನಾಯಿಗಳ ಜೊತೆ, ಹೆಗಲ ಮೇಲೆ ಕಂಬಳಿ, ಕೈಯಲ್ಲಿ ಬೀಸುಬಡಿಗೆ ಅವರ ಹತ್ತಿರ ಇರುತ್ತದೆ. ಒಂದು ಕುರಿ ಹಳ್ಳಕ್ಕೆ ಬಿದ್ದರೆ ತೀರಿತು ಅದರ ಹಿಂಡೆ ಇಡಿ ಹಿಂಡೇ ಹಳ್ಳಕ್ಕೆ ಬೀಳುವುದು ನಿಶ್ಚಯ. ಇದೇ ಸ್ವಭಾವದ ಕುರುಬರಿಗೂ ಆನುಷಂಗಿಕವಾಗಿ ದೊರೆತ ಉಂಬಳಿಯಾಗಿದೆ. ಅವರ ಬುದ್ದಿವಂತಿಕೆ ಹೇಗೆಯೇ ಇರಲಿ, ಆದರೆ ಅವರ ಹೃದಯ ಮಾತ್ರ ಅದಾವ ಚಪಲ-ಛಾಯೆಗೂ ಈಡಾಗಿಲ್ಲ. ಅವರ ಪ್ರಪಂಚವನ್ನು  ನಾವು ಅರ್ಥಯಿಸಲಾರೆವು. ಅವರು ಹಾಡಿ ಹೇಳುವ ಪ್ರಪಂಚದ ಅರ್ಥವನ್ನು ಗ್ರಹಿಸಲಾರೆವು.

ಹಟ್ಟಿಕಾರ ಸಮುದಾಯದ ಅನನ್ಯತೆ ಬಗ್ಗೆ ತಜ್ಞರ ಗಮನಕ್ಕೆ ತಂದವರು ಶಂಬಾ ಅವರೇ. ಪಶುಪಾಲಕರಾದ ಹಟ್ಟಿಕಾರರು ಭಾರತದ ಮೂಲನಿವಾಸಿಗಳು ಎಂದು ಅವರು ಹೂಡಿದ ವಾದಗಳು ಗಟ್ಟಿ ಆಧಾರದ ಮೇಲೆ ನಿಂತಿವೆ. ಹಾಲುಮತ ಸಂಸ್ಕೃತಿಯ ಬಗ್ಗೆ ಶಂ. ಬಾ. ಅವರ ಚಿಂತನೆಗಳನ್ನು ಉಂಡೆ ಉಂಡೆಯಾಗಿ ಕೊಡುತ್ತೇನೆ. ಪ್ರಾಕ್ತನಶಾಸ್ತ್ರದ ಅಧಾರಗಳಿಂದ ಗತಕಾಲದ ವಿದ್ಯಮಾನಗಳನ್ನು ಅವಲೋಕಿಸಿದರೆ ಮನುಕುಲ ವಿಕಾಸದ ಸ್ಪಷ್ಟ ಚಿತ್ರಣ ಕಂಡುಬರುತ್ತದೆ. ಆದಿಮಾನವ ಬದುಕಿಗಾಗಿ ಬೇಟೆ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದು ನಂತರ ನಿಸರ್ಗದೊಡನೆ ಸಮತೋಲನ ಕಾಪಾಡಿಕೊಂಡು ಪಶುಪಾಲನ ವೃತ್ತಿಯನ್ನು ಆಯ್ಕೆಮಾಡಿ ಕೊಂಡನು. ಅದೇ ಸಂದರ್ಭದಲ್ಲಿಯೇ ಬೆಂಕಿಯ ಉತ್ಪಾದನೆ ಮತ್ತು ಉಪಯೋಗವನ್ನು ಕಂಡುಕೊಂಡನು. ಅದು ಮನುಕುಲದ ಚರಿತ್ರೆಯಲ್ಲಿ ರೋಮಾಂಚನ ಕ್ರಿಯೆಯಾಗಿದೆ. ಅಹಾರಕ್ಕಾಗಿ ಅಲೆದಾಟ ಮತ್ತು ಸಂರಕ್ಷಣೆಗಾಗಿ ಜಲಾಯನ ಪ್ರದೇಶದಲ್ಲಿ ಬೀಡುಬಿಟ್ಟನು. ಹಸಿವು, ಬಾಯಾರಿಕೆ ಇಂತಹ ಮೂಲಭೂತವಾದ ದಾಹಗಳನ್ನು ನೀಗಿಸಲು ಏಕಾಂಗಿಯಾಗಿ ಬದುಕುವುದು ಕಷ್ಟವಾಯಿತು. ಸಮ ಮನಸ್ಕರರ ಜೊತೆ ಬೆರೆತು ಗುಂಪು ಜೀವನ ರೂಪಿಸಿಕೊಂದನು. ಆಗ ಕೃಷಿಗೆ ಒತ್ತು ಕೊಟ್ಟನು. ಆದರೂ ಅರಣ್ಯದ ಜಲಾಯನ ಪ್ರದೇಶವೇ ಅವನ ವಾಸ. ಈ ಎಲ್ಲ ಸಂಗತಿಗಳು ಪೂರ್ವ ಚರಿತ್ರೆಯಿಂದ ತಿಳಿದುಬರುತ್ತವೆ. ಅಲ್ಲದೆ ಮನುಕುಲದ ವಿಕಾಸ ಕ್ರಮವನ್ನು ತಿಳಿಯಲು ಬಂಡೆಗಲ್ಲುಗಳ ಮೇಲೆ ಅವರು ಕೆತ್ತಿದ ರೇಖಾಚಿತ್ರಗಳು ಹೆಚ್ಚಿನ ಪುರಾವೆಗಳನ್ನು ಒದಗಿಸುತ್ತವೆ.

ಮಾನವನ ವಿಕಾಸ ಕ್ರಮದಲ್ಲಿ ಸಾಮಾನ್ಯವಾಗಿ ನಾಲ್ಕು ಅವಸ್ಥೆಗಳನ್ನು ಗುರುತಿಸಲಾಗುತ್ತದೆ. ೧. ಆಹಾರದ ಸಲುವಾಗಿ ಅಲೆದಾಡುವ ಬೇಡರದು ೨. ಪಶುಗಳನ್ನು ಸಾಕುವ ಸಲುವಾಗಿ ಅಲೆದಾಡುವ ಧನಗರದು ೩. ವೃಕ್ಷ-ವನಸ್ಪತಿಗಳ ತಿಳಿವಳಿಕೆಗಳಿಂದ ಅವುಗಳನ್ನು ಬೆಳೆಸುವ ಒಕ್ಕಲಿಗ ಕುಟುಂಬಗಳದು. ೪. ಒಕ್ಕಲುತನದ ಮೇಲಿನ ವ್ಯಾಪಾರ, ಉದ್ಯೋಗ ಮತ್ತು ರಾಜಕಾರಣದ ಕೆಲಸಗಾರರದು. ಈ ನಾಲ್ಕು ಅವಸ್ಥೆಗಳಲ್ಲಿ ಎರಡನೇ ಅವಸ್ಥೆಯ ಸೂಚನೆ ಪಟ್ಟಿ-ಹಟ್ಟಿ ಶಬ್ದಗಳಲ್ಲಿದೆ

[1] ಒಂದು ವಸತಿ ಸ್ಥಾನ ಹೇಗೆ ಆರಂಭವಾಯಿತೆಂಬುದನ್ನು ಪಟ್ಟಿ-ಹಟ್ಟಿ ಇಂತಹ ಶಬ್ದಗಳಿಂದ ತಿಳಿದುಬರುತ್ತದೆ. ಅವುಗಳಲ್ಲಿ ಅರ್ಥ ಸಾದೃಧ್ಯದಂತೆ ರೂಪ ಪ್ರಾಚೀನ ಕಾಲದಲ್ಲಿ ಪ್ರದೇಶಗಳಲ್ಲಿ ಹೆಸರು ಬಂದದ್ದು ಅಲ್ಲಿ ಮೊಟ್ಟಮೊದಲು ನೆಲೆಸಿದ್ದ ಜನರಿಂದ ಎಂಬ ಬಗ್ಗೆ ಸಂದೇಹವಿಲ್ಲ. ಈ ಕ್ರಮ ಜಗತ್ತಿನ ಎಲ್ಲೆಡೆಗೂ ಇದೆ. ಅಲ್ಲಿಯ ಸ್ಥಳವಾಚಕಗಳಿಂದ ಒಂದು ಭಾಷಾ ಸಮುದಾಯದ ಪೂರ್ವಚರಿತ್ರೆಯನ್ನು ಅರಿಯ ಬಹುದಾಗಿದೆ.

ಮಾನವನು ಪ್ರಾಥಮಿಕ ಸ್ಥಿತಿಯನ್ನು ಆಹಾರ ಸಂಚಯನಕ್ಕಾಗಿ ಅಲೆಮಾರಿಯಾಗಿದ್ದು ಅವನ ವಸತಿ ಸೂಚಕವಾಗಿದ್ದ ಹೆಸರೇ ಹಟ್ಟಿ. ಈ ಶಬ್ದವು ಬೇಟೆ ಮತ್ತು ಪಶುಪಾಲಕ ವೃತ್ತಿಯನ್ನು ಪ್ರತಿಬಿಂಬಿಸುತ್ತದೆ ಎಂಬುದರ ಬಗ್ಗೆ ಸಂದೇಹವಿಲ್ಲ. ಹಟ್ಟಿಗಳೇ ಜೀವ ಸಂಕುಲನದ ಆರಂಭಕಾಲದ ವಸತಿಗಳಾಗಿವೆ. ಆದಿಮಾನವರು ತಮ್ಮ ಬಿಡುವಿನ ಸಮಯದಲ್ಲಿ ಬಂಡೆಕಲ್ಲುಗಳ ಮೇಲೆ ಸಾಂಕೇತಿಕವಾಗಿ ಪ್ರಾಣಿಗಳ ಚಿತ್ರಗಳನ್ನು ಕೆತ್ತುತ್ತಿದ್ದರು. ಅವು ಅವರ ತಂಗುದಾಣಗಳಾಗಿದ್ದವು. ಇಂತಹ ರೇಖಾಚಿತ್ರಗಳನ್ನು ಹಂಪಿ ಪರಿಸರದಲ್ಲಿ ಈಗಲೂ ನೋಡಬಹುದಾಗಿದೆ.

ಆದಿಮಾನವರು ಆಹಾರ ಹುಡುಕಾಟಕ್ಕಾಗಿ ಅಲೆಮಾರಿಗಳಾಗಿ ಬೇಟೆ ಕಾಯಕದಲ್ಲಿ ತೊಡಗಿದ್ದರು. ಕಾಲಾನಂತರದಲ್ಲಿ ಪಶುಪಾಲನೆಗೆ ಒಲಿದು ಅಲ್ಲಿಂದ ಕೃಷಿಗೆ ಧಾಮಿಸಿದರು ಎಂಬುದರಲ್ಲಿ ಎರಡು ಮಾತಿಲ್ಲ. ಮಾನವ ವಿಕಸನದ ಮೊದಲನೆಯ ಘಟ್ಟವಾದ ಬೇಟೆಗಾರಿಕೆಯಲ್ಲಿಯ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವ ಸಾದು ಪ್ರಾಣಿಗಳನ್ನು ಸಲುಹುತ್ತ ಭಕ್ಷಿಸುತ್ತ ಬೇಟೆಗಾರರಲ್ಲಿಯ ಹಲವರು ಪಶುಪಾಲಕರಾದರು. ಪಶುಪಾಲನೆಯಲ್ಲಿಯ ಸಮಸ್ಯೆಗಳಿಗೆ ಪರಿಹಾರ ಕಾಣಲು ಅವರು ಕೃಷಿಯತ್ತ ವಾಲಿದರು. ಇವು ಮನುಕುಲದ ಸಮಾಜೀಕರಣ ಹಾಗೂ ಸಂಸ್ಕೃತೀಕರಣದ ಮಜಲುಗಳು. ಬೇಟೆಗಾರರಲ್ಲಿಯ ಹಲವರು ಪಶುಪಾಲನೆಯಲ್ಲಿ ನೆಮ್ಮದಿಯನ್ನು ಕಂಡುಕೊಂಡು ಪಶುಪಾಲನೆಗಾಗಿ ಅಲೆಯಲಾರಂಭಿಸಿದರು. ಇದು ಅವರಲ್ಲಿ ಸಹಸ್ರಾರು ವರ್ಷಗಳಿಂದ ಸಾಗಿ ಬಂದ ಪಾರಂಪರಿಕ ಸಂಪ್ರದಾಯ. ಇಂದಿಗೂ ಈ ತರಹದ ಅಲೆಮಾರಿ ಪಶುಪಾಲಕರು ನದಿ ಜಲಾನಯನ ಪ್ರದೇಶಗಳಲ್ಲಿ ಕಾಣಿಸಿಗುವರು. ಬೇಟೆಗಾರಿಕೆಯಿಂದ ಕವಲೊಡೆದ ಪಶುಪಾಲಕರಲ್ಲಿ ಹಟ್ಟೀಗಾರರು ಮುಖ್ಯರು.

ಇತಿಹಾಸದ ಆರಂಭಕಾಲದಿಂದಲೂ ಮಾನವ ಮತ್ತು ಪ್ರಾಣಿಗಳ ಸಂಬಂಧ ಒಂದಕ್ಕೊಂದು ಪೂರಕವಾಗಿಯೇ ರೂಪುಗೊಂಡು ಬಂದಿದೆ. ಅಲೆಮಾರಿ ಜೀವನ ನಡೆಸುವಾಗಲೂ ಪ್ರಾಣಿಗಳನ್ನು ಬೇಟೆಯಾಡಿ ಬದುಕು ಸಾಗಿಸುತ್ತಿದ್ದ ಕಾಲದಿಂದಲೂ ಮಾನವ ಪ್ರಾಣಿಗಳ ಜೊತೆ ಒಂದಿಲ್ಲೊಂದು ಬಗೆಯ ಸಂಬಂಧವಿರಿಸಿಕೊಂಡೇ ಬಂದಿದ್ದಾನೆ. ಮನುಷ್ಯನಿಗೆ ಬದುಕಿನ ಕಲ್ಪನೆ ಮೂಡಿದ್ದೇ ಪ್ರಾಣಿಗಳಿಂದ. ಬೆಂಕಿ, ಕತ್ತಲೆ, ಬೆಳಕು, ಬೇಸಾಯಗಳ ಕಲ್ಪನೆಯನ್ನು ಪ್ರಾಣಿಗಳಿಂದಲೇ ಆತ ಪಡೆದುಕೊಂಡ. ಅವನ ಸಾಹಸ, ಓಟ, ಜಿಗಿತ, ಅಬ್ಬರ, ಅಳುಕುಗಳಿಗೆ, ಚಪಲತೆ, ಠಕ್ಕುತನಗಳಿಗೆ, ಸ್ನೇಹಕ್ಕೆ, ದ್ರೋಹಕ್ಕೆ ಪ್ರಾಣಿಗಳ ಸ್ವಭಾವ, ಶಕ್ತಿ, ಸಾಮರ್ಥ್ಯಗಳೇ ಪ್ರೇರಣೆ. ಈ ಹಿನ್ನೆಲೆಯಲ್ಲಿ ಮಾನವ ಬದುಕಿನ ಜೊತೆ ಪ್ರಾಣಿಗಳು ಸಂಯೋಗಾತ್ಮಕ ಸಂಬಂಧ ಹೊಂದಿವೆ.

ಅಲೆಮಾರಿ ಬದುಕಿಗೆ ಶರಣು ಹೊಡೆದು ವ್ಯವಸಾಯವನ್ನು ಕಂಡುಕೊಂಡ ಮೇಲೆ ಒಂದು ಕಡೆ ನೆಲೆನಿಂತು ವಾಸಿಸತೊಡಗಿದುದು ಮಾನವ ವಿಕಾಸದ ಹಂತದಲ್ಲಿ ಮಹತ್ವದ ಘಟ್ಟ. ಪ್ರಾಣಿ ಸಾಕಾಣಿಕೆಗೆ ಹೆಚ್ಚಿನ ಮಹತ್ವ ಬಂದುದು ಈ ಕಾಲದಲ್ಲಿಯೇ. ಎಮ್ಮೆ, ಆಕಳಿನ ಹಾಲು ಉತ್ತಮ ಆಹಾರವೆಂಬುದನ್ನು ಕಂಡುಕೊಂಡು ಮೇಲೆ ಇಡೀಯಾಗಿ ಕುಟುಂಬಕ್ಕೆ, ಗುಂಪು ಜೀವನಕ್ಕೆ ಅದರ ಅಗತ್ಯ ಉಂಟಾಯಿತು. ಮತ್ತೊಂದು ನೆಲೆಯಲ್ಲಿ ಕೋಣ ಮತ್ತು ಎತ್ತುಗಳನ್ನು ವ್ಯವಸಾಯಕ್ಕೆ ಬಳಸಿಕೊಳ್ಳಲು ಸಾಧ್ಯವಾದಾಗ ದನಕರುಗಳ ಸಾಕಾಣಿಕೆಗೆ ಮಹತ್ವ ಬಂತು.

ದನಕರುಗಳ ಸಾಕಾಣಿಕೆ ರೈತಾಪಿ ಜೀವನಕ್ಕೆ ತುಂಬ ಸಹಕಾರಿ  ಎನಿಸಿಕೊಂಡ ಮೇಲೆ ಆ ಸಂತತಿಯನ್ನು ಸಂಪಾದಿಸುವುದರಿಂದ ಕುಟುಂಬದ ಅರ್ಥಿಕತೆ ಗಣಿನೀಯವಾಗಿ ಸುಧಾರಿಸತೊಡಗಿತು. ಇದರಿಂದ ಪಶು ಸಾಕಾಣಿಕೆ ತುಂಬ ಲಾಭದಾಯಕವಾಗಿ ಪರಿಣಮಿಸಿ ಸಮಾಜದಲ್ಲಿ ಪ್ರತಿಷ್ಠೆಯನ್ನು ತಂದು ಕೊಡಲು ದನಕರುಗಳು ಮಹತ್ವದ ಅಂಶಗಳಾದವು. ಇಡೀಯಾಗಿ ಮನೆತನದ ಸ್ಥಿತಿ ಎಂಬುದು ಆಯಾ ಕುಟುಂಬ ಹೊಂದಿರುವ ದನಕರುಗಳ ಸಂಖ್ಯೆಯನ್ನು ಅವಲಂಬಿಸಿತು. ಹೆಣ್ಣು ತರುವಾಗ, ಕೊಡುವಾಗ ಮನೆತನದ ಸ್ಥಿತಿಯನ್ನು ತಿಳಿದುಕೊಳ್ಳಲು ‘ಮನೆಯಲ್ಲಿ ದನಕರುಗಳು ಎಷ್ಟು?’ ಎಷ್ಟೆತ್ತಿನ ಒಕ್ಕಲುತನ? ಇತ್ಯಾದಿ ಮಾತುಗಳನ್ನು ಬಳಸುವುದು ಒಂದು ಪದ್ಧತಿಯಾಗಿ ಪರಿಣಮಿಸಿತು.

ದನಕರುಗಳನ್ನು ಕಾಪಾಡಿಕೊಳ್ಳುವುದರಿಂದ ತನಗೂ ತನ್ನ ಕುಟುಂಬಕ್ಕೂ ಹೆಚ್ಚು ಲಾಭದಾಯಕವೆಂದು ಅರಿತ ಮೇಲೆ ತನಗಾಗಿ ನಿರ್ಮಿಸಿಕೊಂಡಂತೆ ದನಕರುಗಳಿಗಾಗಿ ಕೊಟ್ಟಿಗೆ, ದನದ ಮನೆ, ಮೇವು ಸಂಗ್ರಹಿಸಿಡಲು ಅಟ್ಟ, ಮೇವು ಹಾಕಲು ಗೋದಲಿ, ನೀರು ಕುಡಿಸಲು ಕಲಗಚ್ಚುಗಳನ್ನು ನಿರ್ಮಿಸಿದ. ವರ್ಷದುದ್ದಕ್ಕೂ ದನಗಳಿಗೆ ಬೇಕಾಗುವ ಮೇವು, ಸೊಪ್ಪು ಹುಲ್ಲುಗಳನ್ನು ಸಂಗ್ರಹಿಸಿಡಲು ಹಿತ್ತಲು, ಹಗೇವು ಅಲ್ಲಿ ಬಣವೆಗಳನ್ನು ನಿರ್ಮಿಸಿಕೊಂಡ. ದನಗಳ ಸಗಣಿಯಂತೂ ಫಲವತ್ತಾದ ಗೊಬ್ಬರವೆಂಬುದನ್ನೂ ಅರಿತ ಮೇಲೆ ದನಗಳಿಗೆ ಮಾಡುವ ಆರೈಕೆ ಯಾವ ದೃಷ್ಟಿಯಿಂದಲೂ ನಿಷ್ಪ್ರಯೋಜನವಲ್ಲ ಎಂದು ಮಾನವ ಭಾವಿಸಿದ. ದನಕರುಗಳನ್ನು ಕಾಯುವ ಜನರನ್ನು ದನಗಾರರು, ಹಟ್ಟಿಗರೆಂದು ಕರೆಯುತ್ತಾರೆ.

ಸಮುದಾಯದ ಬಾಷೆಯನ್ನು ಮಾನವಶಾಸ್ತ್ರೀಯ ನೆಲೆಯಲ್ಲಿ ನೋಡಿದಾಗ ಅದು ಕುತೂಹಲಕರವಾದ ಮಾನಸಿಕ ಕ್ರಿಯೆಗಳ ಅಭ್ಯಾಸ. ಆ ಕ್ರಿಯೆಗಳು ಸಾಮಾಜಿಕವಾಗಿರಬಹುದು ಅಥವಾ ಸಾಂಸ್ಕೃತಿಕವಾಗಿರಬಹುದು. ಅಂದರೆ ಸಮಾಜ, ಜನಾಂಗ, ಸಂಸ್ಕೃತಿ ಇವುಗಳ ಹುಟ್ಟು, ಬೆಳವಣಿಗೆ ಮುಂತಾದವುಗಳ ಅಧ್ಯಯನಕ್ಕೆ ಅದು ತುಂಬ ನೆರೆವಾಗುತ್ತದೆ.

ಒಂದು ವಸತಿ ಸ್ಥಾನ ಹೇಗೆ ಆರಂಭವಾಯಿತೆನ್ನುವುದನ್ನು ಗ್ರಾಮವಾಚಕ ಶಬ್ದಗಳಿಂದ ತಿಳಿದುಬರುತ್ತದೆ. ಪಟ್ಟಿ, ಹಟ್ಟಿ, ವಾಡಿ, ಹಾಡಿ ಮುಂತಾದ ಶಬ್ದಗಳು ಸ್ಥಳವಾಚಕಗಳಾಗಿವೆ (ಕಡಪಟ್ಟಿ, ಶಿರಹಟ್ಟಿ, ಗಣೀಶವಾಡಿ ಇತ್ಯಾದಿ). ಅವುಗಳಲ್ಲಿ ಅರ್ಥ ಸಾದೃಶ್ಯದಂತೆ ರೂಪ ಸಾದೃಶ್ಯವೂ ಇದೆ. ಪ್ರಾಗೈತಿಹಾಸಿಕ ಅನೇಕ ರಹಸ್ಯಗಳ ಮೇಲೆ ಅವು ಬೆಳಕು ಬೀರುವ ಸಾಧ್ಯತೆಯಿದೆ. ಪ್ರಾಚೀನ ಕಾಲದಲ್ಲಿ ಪ್ರದೇಶಗಳಿಗೆ ಹೆಸರು ಬಂದದ್ದು ಅಲ್ಲಿ ಮೊಟ್ಟ ಮೊದಲು ನೆಲೆಸಿದ್ದ ಜನರಿಂದ ಎಂಬ ಬಗೆಗೆ ಸಂದೇಹವಿಲ್ಲ. ಈ ಕ್ರಮ ಜಗತ್ತಿನ ಎಲ್ಲಡೆಗೂ ಇದೆ. ಅಲ್ಲಿಯ ಸ್ಥಳವಾಚಕಗಳಿಂದ ಒಂದು ಭಾಷಾ ಸಮುದಾಯದ ಪೂರ್ವಚರಿತ್ರೆಯನ್ನು ಅರಿಯಬಹುದಾಗಿದೆ. ಒಂದು ಶಬ್ದದ ಮೂಲವನ್ನು ಅದರ ಬಳಕೆಯ ಚಾರಿತ್ರಿಕ ಕಾಲಘಟ್ಟ ಮತ್ತು ಸಂದರ್ಭದ ಮೇಲಿಂದ ಅರಿಯಬಹುದೆಂದು ಮಾನವಶಾಸ್ತ್ರಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಪದದ ಚರಿತ್ರೆಯಿಂದ ಸಂಸ್ಕೃತಿಯ ಚರಿತ್ರೆಯೂ ಅನಾವರಣಗೊಳ್ಳುತ್ತದೆ.

ಈ ನೆಲೆಯಲ್ಲಿ ಹಲವು ಪ್ರದೇಶಗಳ ಸ್ವರೂಪವನ್ನು ಶಂಬಾ ಹುಡುಕುತ್ತಾರೆ. ಉದಾಹರಣೆಗೆ – ಮಹಾರಾಷ್ಟ್ರ ಶಬ್ದದ ಮೂಲರೂಪ ‘ಮರಹಟ್ಟಿ’ ಇಲ್ಲವೆ ‘ಮರ್ಹಾಟ’ ದಲ್ಲಿ ‘ಹಟ್ಟಿ’ ಎಂಬುದು ಪ್ರದೇಶವಾಚಕ. ‘ಮರ್ಹಾಟ’ ಪ್ರದೇಶಕ್ಕೆ ‘ಝಾಡಮಂಡಳ’  ಎಂಬ ಹೆಸರು ಪ್ರಚಾರದಲ್ಲಿದೆ. ‘ಝಾಂಡಮಂಡಳ’ದಲ್ಲಿಯ ‘ಮಂಡಳ’ ಎಂದರೆ ಹಟ್ಟಿ, ಪ್ರದೇಶ. ಝಾಡ ಎಂದರೆ ಮರ. ಮರಹಟ್ಟ ಶಬ್ದದ ಭಾಷಾಂತರ ‘ಝಾಡಮಂಡಳ’ ಎಂದೇ ಆಗುತ್ತದೆ. ಅದೊಂದು ಸಾಂಸ್ಕೃತಿಕ ಭಾಷಾಂತರವಾಗಿದೆ. ‘ಮರಹಟ್ಟ’ ಶಬ್ದದ ಅರ್ಥ ಮಸುಕಾದಾಗ ಭಾಷಾಂತರದ ಅಗತ್ಯವಿದೆ. ಈ ಹಟ್ಟಿ ಜನರೇ ಮರ್ಹಾಟದ ಮೂಲನಿವಾಸಿ ಗಳಾಗಿದ್ದಾರೆ. ಉತ್ತರ ಮಹಾರಾಷ್ಟ್ರದಲ್ಲಿ ‘ಕನ್ನಡ’ ಎಂಬ ಹೆಸರಿನ ತಾಲ್ಲೂಕು ಪ್ರದೇಶವಿದೆ. ಆ ಭಾಗದಲ್ಲಿ ಹಟ್ಟಿಕಾರರೇ ಪ್ರಮುಖ ಜನಾಂಗವಾಗಿದೆ.[2] ಒಟ್ಟಾರೆ ಮಹಾರಾಷ್ಟ್ರ ಶಬ್ದದ ಮೂಲ ಮರಹಟ್ತವಾಗಿದೆ. ಅದು ಒಂದ ಕಾಲಕ್ಕೆ ಕನ್ನಡ ಪ್ರದೇಶವಾಗಿದೆ. ಅದಕ್ಕೆ ಹಲವಾರು ಭಾಷಿಕ ಪ್ರಮಾಣಗಳು (ಶಾಸನಗಳು, ಸ್ಥಳನಾಮಗಳು ಇತ್ಯಾದಿ) ಪುರಾವೆಗಳಾಗಿವೆ ಎಂಬುದು ಅಧ್ಯಯನದಿಂದ ದೃಢಪಟ್ಟಿದೆ.

ಪ್ರಾಚೀನ ಕಾಲದಿಂದಲೂ ಕರ್ನಾಟಕ ಮತ್ತು ಮಹಾರಾಷ್ಟ್ರ ಸಂಸ್ಕೃತಿಗಳ ಮಧ್ಯ ಅವಳಿ ಸಂಬಂಧವಿತ್ತೆಂದು ಶಂಬಾಜೋಶಿಯವರು ಹಲವಾರು ಪುರಾವೆಗಳ ಮೂಲಕ ತಮ್ಮ ವಾದವನ್ನು ಸಮರ್ಥಿಸಿಕೊಳ್ಳುತ್ತಾರೆ.[3] ಆ ಕುರಿತು ಹಲವಾರು ಪ್ರಮೇಯಗಳ ಕಡೆಗೆ, ಸಮಸ್ಯೆಗಳ ಕದೆಗೆ ಮಾನವ ಶಾಸ್ತ್ರಜ್ಞರ ಗಮನ ಸೆಳೆದಿದ್ದಾರೆ. ಗೋದಾವರಿ ನದಿ ತೀರ, ನಾಸಿಕ ಪರಿಸರದಲ್ಲಿ ಪಶುಪಾಲಕರು ವಾಸಿಸುವ ಪ್ರದೇಶದಲ್ಲಿ ‘ಹಾಟಕೇಶ್ವರ’ ಎಂಬ ಹೆಸರಿನ ದೇವತೆಗಳಿವೆ. ಅವು ಹಟ್ಟಿಕಾರರ ಆರಾಧ್ಯ ದೇವತೆಗಳು. ಮರಾಠೀ ಪೇಶ್ವೆಯವರ ದಪ್ತರಗಳಲ್ಲಿ ಆ ಹೆಸರು ದಾಖಲಾಗಿದೆ. ಬೇಟೆ, ಪಶುಪಾಲನೆಯ ಸಂದರ್ಭದಲ್ಲಿ ಹಟ್ಟಿಕಾರರು ವೇರ ಮರಣ ಹೊಂದಿದಾಗ ಅಲ್ಲಿ ಅವರು ಸ್ಮಾರಕ ಶಿಲೆಗಳನ್ನು ನೆಡುತ್ತಿದ್ದರು. ಆ ಶಿಲೆಗಳು ನಾಸಿಕ ಪರಿಸರದಲ್ಲಿ ಉಳಿದಿವೆ. ಇಂದಿಗೂ ಆ ಪರಿಸರದಲ್ಲಿ ಹಟ್ಟಿಕಾರರೇ ಪ್ರಬಲ ಜನಾಂಗವಾಗಿದೆ. ಆ ಪರಿಸರದಲ್ಲಿ ಹಾಟಕೇಶ್ವರವಿದ್ದಂತೆ. ‘ಕಾಲೇಶ್ವರ/ಕಲ್ಲೇಶ್ವರ’ ಎಂಬ ದೇವತೆಗಳಿವೆ. ‘ಕಲ್’/ಕಳ್’ ಇದು ಪ್ರಾಚೀನ ಕಂದಮಿಳ ಪದ. ಅದರರ್ಥ ‘ರಸ’. ‘ಪಾಲ’ ಶಬ್ದದಂತೆ ಕ್ಷೀರವಾಚಕವಾಗಿದೆ. ‘ಕಲ್ಲೇಶ್ವರ’ ಎಂದರೆ ಹಾಲಿನ ದೇವತೆ. ಅದು ಸಹಿತ ಹಟ್ಟಿಕಾರರ ದೇವತೆಯಾಗಿದೆ.

ಹಟ್ಟಿಕಾರರ ದೇವತೆಗಳಾದ ‘ಮಲ್ಲಯ್ಯ’, ‘ಮಲ್ಹಾರಿ’, ‘ಮೈಲಾರ’ ಇವು ಸಹಿತ ಕನ್ನಡ, ಮರಾಠಿ ಭಾಷೆ ಸಂಸ್ಕೃತಿಗಳ ವೈಶಿಷ್ಟ್ಯವನ್ನು ಸೂಚಿಸುತ್ತವೆ. ಮಲೆ+ಅಯ್ಯ. ‘ಮಲೆ’ ಎಂದರೆ ಬೆಟ್ಟ/ಗುಡ್ಡ, ‘ಅಯ್ಯ’ ಎಂಬುದು ಅದೇ ಸಮಾನಾರ್ಥದಲ್ಲಿದೆ. ಅಂದರೆ ಪಶುಪಾಲನೆಗಾಗಿ ಗುಡ್ದಗಳಲ್ಲಿ ವಾಸಿಸುವ ಹಟ್ಟಿಗರ ದೇವತೆಯೇ ಮಲ್ಲಯ್ಯ. ಈ ಹೆಸರಿಗೆ ಸಮಾನಾರ್ಥಕವಾಗಿ ಗುಡ್ದಪ್ಪ, ಗಿರಿಯಪ್ಪ ಎಂಬ ಹೆಸರುಗಳು ಹಟ್ಟಿಕಾರರ ಸಮುದಾಯದಲ್ಲಿವೆ. ದನಗಳ ರಕ್ಷಣೆಗಾಗಿ ಅವರು ಆ ದೇವತೆಗಳನ್ನು ಪೂಜ್ಯ ಭಾವದಿಂದ ಗೌರವಿಸುತ್ತಾರೆ. ‘ಮಲ್ಹಾರಿ’, ‘ಮೈಲಾರ’ ರ ಹೆಂಡತಿ ‘ಮಾಳವ್ವ’. ಈ ದೇವತೆಯು ಮೂಲದಲ್ಲಿ ಹಟ್ಟಿ ಜನರ ದೇವತೆಯಾಗಿದೆ. ಅವರ ಕುಟುಂಬನಾಮಗಳಲ್ಲಿ ಅವರು ಸಾಕುವ ಪ್ರಾಣಿಗಳ ಹೆಸರುಗಳಿವೆ. ಕುರಿ, ಎಮ್ಮೆ, ಎಮ್ಮೆನ್ನವರ್ ಇತ್ಯಾದಿ. ಇವು ಮನುಕುಲದ ವಿಕಾಸದ ಮೇಲೆ ಹೊಸಬೆಳಕು ಚೆಲ್ಲುತ್ತವೆ.

ಪಟ್ಟಿ/ಹಟ್ಟಿ, ಪಾಡಿ/ಹಾಡಿ ಇವು ಅಚ್ಚಕನ್ನಡ ಪದಗಳೇ ಆಗಿವೆ. ಹಳಗನ್ನಡದ ‘ಪ’ ಕಾರ ನಡುಗನ್ನಡದಲ್ಲಿ ‘ಹ’ ಕಾರವಾಗಿ ಪರಿವರ್ತನೆಯಾಗಿತ್ತು. ಆ ದ್ವನಿ ಬದಲಾವಣೆಗೆ ಬಹುದೊಡ್ಡ ಚರಿತ್ರೆ ಇದೆ. ಅದರ ಚರ್ಚೆ ಇಲ್ಲಿ ಅನಗತ್ಯ. ಪಟ್ಟಿ/ಹಟ್ಟಿ ಎಂದರೆ ದನಕರುಗಳನ್ನು ಕಟ್ಟುವ ಸ್ಥಳ, ಗುಡಿಸಲು ಸಣ್ಣಹಳ್ಳಿ. ಅದು ಪಶುಪಾಲನ ವೃತ್ತಿಯಿಂದ ಒಕ್ಕಲು ತನದ ಜೀವನ ಕ್ರಮದವರೆಗಿನ ವಿಕಾಸ ಸ್ಥಿತಿಯನ್ನು ಸೂಚಿಸುತ್ತದೆ. ಪ್ರಾಚೀನ ಕನ್ನಡ ಸಾಹಿತ್ಯದ ಕೃತ್ತಿಗಳಲ್ಲಿಯೂ ನಿಘಂಟುಗಳಲ್ಲಿಯೂ ಆ ಪದ ಹಲವು ಸಂದರ್ಭಗಳಲ್ಲಿ ಬಳಕೆಯಾಗಿದೆ. ಅಲ್ಲಿಯೂ ಸಹಿತ ವಸತಿ ವಾಚಕವಾಗಿಯೇ ಬಳಕೆಯಾಗಿದೆ. ಅದು ಪಶುಪಾಲನೆಯ ಸಂಸ್ಕೃತಿ ವಿಶಿಷ್ಟಪದ. ಅದು ಆ ಸಮಯದ ಸಾಮಾಜಿಕ ಚಹರೆಯಾಗಿಯೂ ಕಾಣಿಸುತ್ತದೆ. ಮುಂದೆ ಲಕ್ಷಣಾವೃತ್ತಿವರೆಗೆ ಈ ಶಬ್ದ ಅನೇಕ ಅರ್ಥಗಳನ್ನು ಪಡೆಯಿತು. ಈಗಲಾದರೂ ಆದಿವಾಸಿಗಳು ವಾಸಿಸುವ ಪ್ರದೇಶಗಳಿಗೆ ‘ಹಾಡಿ’ ಗಳೆಂದೇ ಕರೆಯುತ್ತಾರೆ. (ಇರುಳುರ ಹಾಡಿ, ಕಾಡು ಕುರುಬರ ಹಾಡಿ, ಹಾಲಕ್ಕಿಗಳ ಹಾಡಿ, ಮಲೆಕುಡಿಯರ ಹಾಡಿ ಇತ್ಯಾದಿ). ಈ ಶಬ್ದದ ಅರ್ಥ ಬದಲಾವಣೆಯ ಹಿಂದೆ ಅಡಗಿರುವ ಮನುಕುಲದ ಇತಿಹಾಸದ ಮೇಲೆ ಸಾಕಷ್ಟು ಬೆಳಕು ಬೀರಬಹುದಾಗಿದೆ. ಸಾಮಾಜಿಕ ಹಿನ್ನಲೆಯಲ್ಲಿ ನಡೆದಿರಬಹುದಾದ ಅನೇಕ ಸಂಗತಿಗಳೂ ಸಹಿತ ಪ್ರಭಾವ ಬೀರುತ್ತವೆ.

ಹಟ್ಟಿಯಲ್ಲಿ ವಾಸಿಸುವವರು ‘ಹಟ್ಟಿಕಾರ’. ಈ ಪದದ ಕೊನೆಯಲ್ಲಿರುವ ‘ಕಾರ’ ಎಂಬುದು ತದ್ಧಿತ ಪ್ರತ್ಯಯ. ಒಂದು ವೃತ್ತಿಯಲ್ಲಿ ವ್ಯವಹರಿಸುವವನು ಎಂದರ್ಥ. ಅವರಿಗೆ ‘ದನಗಾರ’ ಎಂದೂ ಕರೆಯುತ್ತಾರೆ. ಅದರರ್ಥವೂ ಕೂಡ ಪಶುಪಾಲಕರೇ ಎಂಬುದಾಗಿದೆ (ದನಕರುಗಳನ್ನು ಸಾಕುವವರು). ಪಶುಪಾಲನ ವೃತ್ತಿಯ ಮುಂದಿನ ಹೆಜ್ಜೆ ಎಂದರೆ ಒಕ್ಕಲುತನ. ಅದಕ್ಕೆ ಮರಾಠಿಯಲ್ಲಿ ‘ಶೇತಿವಾಡಿ’ ಎಂಬ ಜೋಡುನುಡಿ ಪ್ರಸಿದ್ಧವಾಗಿದೆ. ‘ಶೇತಗಿ’ ಎಂದರೆ ಕೃಷಿ. ಅದರರ್ಥ ಮಳೆನೀರಿನಿಂದ ಬೆಳೆ ತೆಗೆಯುವುದು. ‘ವಾಡಿ’ ಎಂದರೆ ಪ್ರದೇಶ. ಕನ್ನಡದಲ್ಲಿ ‘ತೋಟಪಟ್ಟಿ’ ಎಂಬ ಜೋಡು ಪದವಿದೆ. ಇಲ್ಲಿಯೂ ಸಹಿತ ‘ಪಟ್ಟಿ’ ಶಬ್ದಕ್ಕೆ ‘ತೋಟ’ ಎಂದೇ ಅರ್ಥವಿದೆ. ಈ ಎಲ್ಲ ಪದಗಳು ಪಶುಪಾಲನೆ, ಕೃಷಿ ಪರಿಸರವನ್ನೇ ಹೇಳುತ್ತದೆ. ಕನ್ನಡದ ಸಂದರ್ಭದಲ್ಲಿ ಇವರಿಗೆ ‘ತುರುಕರು’ ಎಂದೂ ಕರೆಯುತ್ತಾರೆ. ‘ತುರು’ ಎಂದರೆ ದನಕರುಗಳ ಸಮುದಾಯ. ‘ತುರು ಕರು’ ಎಂಬ ಶಬ್ದವು ‘ಹಟ್ಟಿಕಾರ’ ಶಬ್ದಕ್ಕೆ ಪರ್ಯಾಯವಾಗಿ ಬಳಕೆಯಾಗುತ್ತದೆ. ಕಾವೇರಿಯಿಂದ ಗಂಗೆಯವರೆಗೆ, ನೀಲಗಿರಿಯಿಂದ ರಾಜಮಹಾಲದವರೆಗೆ ವ್ಯಾಪಿಸಿಕೊಂಡಿರುವ ಈ ‘ಹಟ್ಟಿಕಾರ’, ‘ದನಗಾರ’ರು ದ್ರಾವಿಡ ಜನಾಂಗದವರು. ಇವರು ಕನ್ನಡ ಶಾಖೆಗೆ ಸೇರಿದವರು.

ನರ್ಮದಾ ನದಿಯ ದಕ್ಷಿಣ ಭಾಗದಲ್ಲಿ ‘ಪತ್ತಿ’ ಎಂಬ ಹೆಸರಿನ ಜನರಿದ್ದಾರೆ. ‘ಪಟ್ಟಿ’>ಪತ್ತಿ ಎಂದಾಗಿರಬಹುದು. ಭಾಷಾಶಾಸ್ತ್ರ ನಿಯಮದ ಪ್ರಕಾರ ಟ>ತ ಧ್ವನಿ ಪರಿವರ್ತನೆ ಸಹಜ. ಆದರೂ ಈ ಬಗ್ಗೆ ಸ್ವಲ್ಪ ಯೋಚಿಸಬೇಕಾಗಿದೆ. ‘ಪಟ್ಟಿ’, ‘ಇಲ್ಲ’ ಎರಡು ಸೇರಿ ಪಟ್ಟಿಲ ಎಂಬ ಪ್ರಯೋಗ ಪ್ರಾಕೃತದಲ್ಲಿದೆ. ‘ಇಲ್ಲ’ ಇದು ತದ್ಧಿತ ಪ್ರತ್ಯಯ ‘ಅದರಲ್ಲಿ ವಾಸಿಸುವವನು’ ಎಂಬುದು ಅದರ ಅರ್ಥ. ‘ಪಟ್ಟಿಲ’ ಎಂದರೆ ಪಟ್ಟಿ/ಹಟ್ಟಿಯಲ್ಲಿ ವಾಸಿಸುವವನು ಎಂದರ್ಥ. ‘ಪಟ್ಟಿಲ’ ಶಬ್ದ ಮುಂದುವರೆದ ರೂಪ ‘ಪಾಟೀಲ’. ಬೆಳಗಾವಿ ಪರಿಸರದಲ್ಲಿ ಪಶುಪಾಲಕ ವೃತ್ತಿ ಸಮುದಾಯದವರಲ್ಲಿ ‘ಪಾಟೀಲ’ ಎಂಬುದು ಕುಟುಂಬನಾಮವಾಗಿದೆ ಎಂಬುದು ಗಮನಿಸಬೇಕಾದ ಸಂಗತಿಯಾಗಿದೆ. ಕರ್ನಾಟಕದ ಸಂದರ್ಭದಲ್ಲಿ ಪಾಟೀಲ ಮತ್ತು ಗೌಡ ಶಬ್ದಗಳು ಸಮಾನಾರ್ಥಕವಾಗಿ ಬಳಕೆಯಾಗುತ್ತವೆ. ಗೋಪಾಲ>ಗೋವಳ>ಗೌಂಡ> ಗೌಡ ಆಗಿರಬೇಕು. ಶಂಬಾ ಅವರ ಈ ನಿಷ್ಪತ್ತಿಯನ್ನೂ ಸಹಿತ ಸ್ವಲ್ಪ ಯೋಚಿಸಬೇಕಾಗಿದೆ. ಆದರೆ ಒಂದು ಅಂಶ ಮಾತ್ರ ನಿಜ. ಬಳ್ಳಾರಿ ಪ್ರದೇಶದ ಹಾಲುಮತ ಸಮುದಾಯದ ವ್ಯಕ್ತಿನಾಮಗಳಿಗೆ ‘ಗೌಡ ’ ಎಂಬುದು ವಾರ್ಗೀಕವಾಗಿ ಬಳಕೆಯಾಗಿದೆ ಎಂಬುದು ಅಷ್ಟೇ ಗಮನಾರ್ಹ ಸಂಗತಿಯಾಗಿದೆ.

ಪಶುಪಾಲಕರು, ಅಲೆಮಾರಿಗಳಾದ್ದರಿಂದ ಪ್ರಕೃತಿಯ ಆರಾಧಕರು. ಪ್ರಕೃತಿಯಲ್ಲಿ ಕಂಡು ಬರುವ ನೆಲ, ಮುಗಿಲು, ಮಳೆ, ಬೆಳೆ, ಮರ, ಹುತ್ತ ಎಲ್ಲವೂ ಅವರ ಪಾಲಿಗೆ ದೇವರೇ. ಹಬ್ಬ ಹರಿದಿನಗಳಲ್ಲಿ ಪ್ರಕೃತಿಯನ್ನು ಪೂಜಿಸುತ್ತಾರೆ. ಹಟ್ಟಿಗರು ಪ್ರತಿವರ್ಷ ‘ಹಟ್ಟಿ ಹಬ್ಬ’ ಎಂಬ ಹಬ್ಬವನ್ನು ಆಚರಿಸುತ್ತಾರೆ. ಕುರಿ, ಮೇಕೆ ದನಕರುಗಳನ್ನು ಪೂಜಿಸುವುದು, ಎತ್ತುಗಳ ಮೆರವಣಿಗೆ, ಹಿರಿಯರ ಪೂಜೆ ಕೆರಕಲ ನೀಡುವುದು ಇತ್ಯಾದಿ ಹತ್ತಾರು ಬಗೆಯ ಸಂಪ್ರದಾಯಗಳು, ಆಚರಣೆಗಳನ್ನು ಒಳಗೊಂಡಂತಹ ಇತ್ಯಾದಿ ಹತ್ತಾರು ಬಗೆಯ ಸಂಪ್ರದಾಯಗಳು, ಆಚರಣೆಗಳನ್ನು ಒಳಗೊಂಡಂತಹ ವಿಶಿಷ್ಟವಾದ ಹಬ್ಬ ಇದಾಗಿದೆ.

ಹಟ್ಟಿ ಹಬ್ಬವು ಅಶ್ವಿನಿ ಮತ್ತು ಕಾರ್ತೀಕ ಮಾಸಗಳೆರಡರ ಕಕ್ಷೆಯಲ್ಲಿ ಬರುತ್ತದೆ. ಹೊಲಗದ್ದೆಗಳಲ್ಲಿ ಪೈರು-ಪಚ್ಚೆ ಹುಲುಸಾಗಿ ಬೆಳೆದು ನಿಂತು ರೈತನ ಮನಸ್ಸಿಗೆ ಹರ್ಷವನ್ನುಂಟು ಮಾಡುವ ಕಾಲವದು. ಸಾಮಾನ್ಯವಾಗಿ ಹಬ್ಬಗಳು ಒಂದು ದಿವಸ ಹೆಚ್ಚೆಂದರೆ ಎರಡು ದಿವಸದಲ್ಲಿ ಮುಗಿಯುತ್ತದೆ. ಆದರೆ ಇದು ಹಾಗಲ್ಲ. ನೀರು ತುಂಬುವ ಹಬ್ಬ, ನರಕ ಚತುರ್ದಶಿ, ಲಕ್ಷ್ಮೀಪೂಜೆ ಹೀಗೆ ವಿಧಿವತ್ತಾಗಿ ಒಂದೊಂದನ್ನೇ ಒಂದೊಂದು ದಿವಸ ನಡೆಸುವಂತಹ ಹಬ್ಬ. ‘ಭರಮದೇವ’ನು ಹಟ್ಟಿಯ ಪಾಲಕನೆಂದು ಅವನ ಪೂಜೆಯನ್ನು ಮಾಡುವುದರಿಂದ ಹಟ್ಟಿ ಹಬ್ಬವೆಂತಲೂ ಕರೆಯುತ್ತಾರೆ. ಇದರಲ್ಲಿ ಮುಖ್ಯವಾಗಿ ದನಕರುಗಳ ಪಾತ್ರವೇ ಹೆಚ್ಚು. ಅವುಗಳನ್ನು ಶೃಂಗರಿಸುತ್ತಾರೆ, ಪೂಜೆ ಮಾಡುತ್ತಾರೆ. ಅದರ ಹಿಂದಿರುವ ತಕ್ರ ಫಲವಂತಿಕೆ ಹಾಗೂ ಪಶುಸಂಪತ್ತು ಹೆಚ್ಚುವುದೆಂದೂ ಹಟ್ಟಿಗರ ದೃಢವಾದ ನಂಬಿಕೆ. ಕನ್ನಡಿಗರು ಹಾಗೂ ಕನ್ನಡೇತರರೂ ಸಹಿತ ಸಾಂಪ್ರದಾಯಿಕವಾಗಿ ಈ ಹಬ್ಬವನ್ನು ನಡೆಸಿಕೊಂಡು ಬರುತ್ತಾರೆ. ಆಚರಣೆಯ ದೃಷ್ಟಿಯಿಂದ ಅಲ್ಪವೆನಿಸಿ ತೋರಿದರೂ ಮಾನವ ಸಂಸ್ಕೃತಿಯ ವಿಕಾಸದ ದೃಷ್ಟಿಯಿಂದ ಬಹು ಅರ್ಥಪೂರ್ಣವಾದ ಹಬ್ಬವಾಗಿದೆ. ದನಕರುಗಳ ರಕ್ಷಣೆ ಮತ್ತು ಸಂವರ್ಧನೆಗೆ ಹುಟ್ಟಿಕೊಂಡ ಆರಾಧನೆ ಇದಾಗಿದೆ.

ಮೇಲಿನ ಎಲ್ಲ ವಿವೇಚನೆಯಿಂದ ಪಟ್ಟಿ-ಹಟ್ಟಿ ಇವು ಪಶುಪಾಲಕ ವೃತ್ತಿಯಿಂದ ಒಕ್ಕಲುತನದವರೆಗಿನ ಮಾನವ ವಿಕಾಸದ ಅವಸ್ಥೆಯನ್ನು ತೋರಿಸುತ್ತದೆ. ಸಾವಿರಾರು ವರ್ಷಗಳ ಕಾಲಾವಧಿಯಲ್ಲಿ ಈ ಶಬ್ದಗಳ ಅರ್ಥವಲಯದಲ್ಲಿ ಪರಿವರ್ತನೆಗಳಾಗಿವೆ. ಅವುಗಳ ಪಟ್ಟಿಯನ್ನು ಶಂಬಾ ಅವರು ಕೊಡುತ್ತಾರೆ.[4]

ಪಟ್ಟಿಹಟ್ಟಿಗಳ ವಿವಿಧ ಪರ್ಯಾಯಗಳು              

ಪಾಡು-ಪಾಡಿ, ಪಟ್ಟಿ; ಪಟ್ಟಣ-ಪಾಟಣ-ಪಾಟಣಾ
ಪಟ್ಟ-ಪಾಟ-ಪಾಟಕ; ಪಟ್ಟಾರ… ಪೇಠ; ಪೇಠಾ;
ಪಾಡು-ಪಾಡಾ-ಪಾರಾ…
ಪಾರಾ-ಹಾರಾ, ಹಾರ-ಹರ…ಅರ…
ಪಾಡು..ಆಡು; ಪಾಡಿ… ಆಡಿ;
ಬಾಡು-ಬಾಳು-ಬಾಳ…
ಬಾಳು-ವಾಳು-ವಾಳ-ವಳ-ವಲ
ಪಾಡು-ವಾಡು-ವಾಡ; ವಡ, ವಾಡೆ; ವಡಿಗೆ
ಪಟ್ಟಿ-ಪಾಟಿ…
ಪಾಟಿ-ವಾಟಿ; ವಾಟಿಕಾ
ಪಟ್ಟಿ-ಪಾಟ
ಪಾಟ-ಪಾಟ; ವಾಟಕ… ವಾಢಾರ (ಪಾಠಾರ); ವಠಾರ; ವಠಾಣ
ಪಟ್ಟಿ-ಪಾಡಿ-ಪ್ಯಾಟಿ…ಪೇಟೆ, ಪೇಠ, ಪೇಠಾ,ಪೇಠಾ… ಪಾಠಾರ; ಪಾಟಕ
ಪಟ್ಟಿ-ಹಟ್ಟಿ; ಪಟ್ಟ-ಹಟ್ಟ; ಪಾಟ-ಹಾಟ
ಪಾಟಕ-ಹಾಟಕ; ಪಾಡಿ-ಹಾಡಿ;
ಪಾಡು-ಪಾಳು-ಹಾಳು-ಹಾಳ… ಆಳ; ಆಲ… ಆಣ
ಪಾಳಿ-ಪಳ್ಳಿ-ಹಳ್ಳಿ
ಪಳ್ಳಿ-ವಳ್ಳಿ-ವಳಿ-ವಲಿ… ಓಲಿ… ಳಿ;
ಪಾಡಿ-ಪಾಳಿ-ಹಾಳಿ-ಹಾಳ
ಪಾಳಿ-ಪಾಳ್ಯ, ಪಲ್ಯ

‘ಪಟ್ಟಿ-ಹಟ್ಟಿ’ ವರ್ಗದ ಈ ಹಬ್ಬುಗೆಯನ್ನು ನೋಡಿದಾಗ ಬಹಳಷ್ಟು ಸಮಸ್ಯೆಗಳ ಮೇಲೆ ಬೆಳಕು ಬೀಳಬಹುದಾಗಿದೆ. ಅದರೂ ಒಂದು ಮಾತು. ‘ಹಟ್ಟಿ-ಹಾಡಿ’ಗಳು ಕನ್ನಡ ಪೂರ್ವಿಕರ ಮೊದಲ ವಸತಿ ಸ್ಥಾನದಿಂದ ಹುಟ್ಟಿರುವ ರೂಪಗಳಾಗಿರುವ ಸಾಧ್ಯತೆಯಿದ್ದರೂ ಇವು ಇಂದು ಕಾಣಿಸಿಕೊಳ್ಳುವ ಹೆಸರಿನ ಊರುಗಳಲ್ಲೆಲ್ಲ ಕನ್ನಡ ಪೂರ್ವಿಕರು ಇದ್ದರೆಂದು ಇತರ ಊರ ಹೆಸರುಗಳಲ್ಲಿಯೂ ಈ ರೂಪಗಳು ಅಂಟಿಕೊಳ್ಳುತ್ತವೆ. ಇದರಿಂದಾಗಿ ಯಾವ ಹೆಸರು ಪೂರ್ವಕಾಲದ್ದು, ಯಾವುದು ಅರ್ವಾಚೀನದ್ದು ಎಂಬುದನ್ನು ನಿರ್ಣಯಿಸುವುದು ಸುಲಭವಾದ ಕೆಲಸವಲ್ಲ. ಅದರೂ ಶಂಬಾ ಅವರು ಆ ನಿಟ್ಟಿನಲ್ಲಿ ಅಧ್ಯಯನಕಾರರ ಗಮನ ಸೆಳೆದಿದ್ದಾರೆ ಎಂಬುದು ತುಂಬ ಮುಖ್ಯವಾದ ಸಂಗತಿಯಾಗಿದೆ.

ಆಧುನೀಕರಣದ ಈ ಸಂದರ್ಭದಲ್ಲಿಯೂ ಹಟ್ಟಿಕಾರರು ತಮ್ಮದೇ ಆದ ಹಟ್ಟಿಗಳನ್ನು ಕಟ್ಟಿಕೊಂಡು ಊರಿನಿಂದ ದೂರದಲ್ಲಿರುವ ಗುಡ್ಡಗಾಡು ಪ್ರದೇಶದಲ್ಲಿ ಹುಲ್ಲು ಗುಡಿಸಲುಗಳಲ್ಲಿ  ವಾಸ ಮಾಡುತ್ತಾರೆ. ಕುರುಬರು ವಾಸ ಮಾಡುವ ಪ್ರದೇಶಗಳನ್ನು ‘ಕುರುಬರ ಹಟ್ಟಿ’ ಗಳೆಂದು ಹೇಗೆ ಕರೆಯುತ್ತಾರೆಯೋ ಅದೇ ರೀತಿ ಗೊಲ್ಲರು ವಾಸ ಮಾಡುವ ಪ್ರದೇಶವನ್ನು ಗೊಲ್ಲರ ಹಟ್ಟಿಗಳೆಂದು ಕರೆಯುತ್ತಾರೆ. ಈ ಹಟ್ಟಿಗಳಲ್ಲಿ ೧೦೦ಕ್ಕೆ ೭೫ ರಷ್ಟು ಗುಡಿಸಲು ಉಳಿದ ೨೫ ರಷ್ಟು ಮಣ್ಣು ಮತ್ತು ಇಟ್ಟಿಗೆಗಳಿಂದ ಕಟ್ಟಿದ ಕಟ್ಟಡ, ಮಾಳಿಗೆಯಿಂದ ಕೂಡಿದ ಮಣ್ಣಿನ ಮನೆಗಳು. ಗೊಲ್ಲರು ತಾವು ಮಲಗುವ ಪಕ್ಕದಲ್ಲಿಯೇ ಕೊಟ್ಟಿಗೆಗಳನ್ನು ಕಟ್ಟಿ ದನ-ಕರು, ಮೇಕೆಗಳನ್ನು ಕಟ್ಟುತ್ತಾರೆ. ಕುರುಬರಂತೆಯೇ ಗೊಲ್ಲರು ಕುರಿಗಳಿಗೆ ಪ್ರತ್ಯೇಕವಾದ ದೊಡ್ಡಿಗಳನ್ನು ಕಟ್ಟಿ ಅದರೊಳಗೆ ಕುರಿಗಳನ್ನು ಕೂಡಿ ಹಾಕಿ ತಾವು ಅಲ್ಲಿಯೇ ಮಲಗುತ್ತಾರೆ. ಸಾಮಾನ್ಯವಾಗಿ ಗೊಲ್ಲರು ಸೂರಿಗೆ, ತೆಂಗಿನ ಗರಿ, ಹುಲ್ಲು, ಎಲೆಗಳನ್ನು ಬಳಸುತ್ತಾರೆ. ಆಯಾ ಹಟ್ಟಿಗಳಲ್ಲಿ ಅವರದೇ ಆದ ಬಂಧು-ಬಳಗದ ಜನ ವಾಸ ಮಾಡುವುದನ್ನು ಕಾಣಬಹುದು. ಈ ರೀತಿಯಾಗಿ ವಾಸ ಸ್ಥಳಕ್ಕೆ ಸಂಬಂಧಿಸಿದಂತೆ ಕುರುಬರಲ್ಲಿ ಮತ್ತು ಗೊಲ್ಲರಲ್ಲಿ ಒಂದು ರೀತಿಯ ಸಾಮ್ಯತೆಯನ್ನು ಕಾಣಬಹುದು.

ಮೇಲಿನ ಎಲ್ಲ ಅಂಶಗಳಿಗೆ ಪೂರಕವಾಗಿ ಕಂಡು ಬರುವ ಇನ್ನೊಂದು ಸಂಗತಿ ಎಂದರೆ ‘ಹಟ್ಟಿ’ ಮೂಲ ಮತ್ತು ಸ್ವರೂಪದ ಬಗ್ಗೆ ಹೇರಳವಾಗಿ ಪುರಾಣಗಳು, ಐತಿಹ್ಯಗಳು ಲಭ್ಯವಿವೆ. ಉದಾಹರಣೆಗೆ ಜನಪದ ಹಾಲುಮತ ಪುರಾಣ, ಹಾಲುಮತ ಪುರಾಣ ಕತೆಗಳು, ಜುಂಜಪ್ಪನ ಕಾವ್ಯ ಮುಂತಾದ ಕಾವ್ಯ, ಪುರಾಣಗಳಲ್ಲಿ ಹಟ್ಟಿ ಮೂಲ ಮತ್ತು ಉಗಮದ ಬಗ್ಗೆ ವಿವರಗಳು ಸಿಗುತ್ತವೆ. ಅಲ್ಲಿಯೂ ಸಹಿತ ‘ಹಟ್ಟಿ’ ಎಂಬುದು ಹೆಚ್ಚಾಗಿ ಪಶುಪಾಲಕರಿಗೆ ಸಂಬಂಧಿದ ವಾಸ್ತವ್ಯವೆಂದು ಗುರುತಿಸಲಾಗಿದೆ. ಒಟ್ಟಾರೆ ಪಶುಪಾಲಕರು ಭಾರತದ ಮೂಲನಿವಾಸಿಗಳು, ಅವರು ಭಾರತದಾದ್ಯಂತ ವ್ಯಾಪಿಸಿದ್ದಾರೆ. ಅವರು ಕರ್ನಾಟಕದ ಮೂಲದವರೆಂದು ವಿದ್ವಾಂಸರು ಪುರಾವೆಗಳ ಮೂಲಕ ಹೇಳಿದ್ದಾರೆ. ಆ ನಿಟ್ಟಿನಲ್ಲಿ ಇನ್ನೂ ವ್ಯಾಪಕವಾದ ಅಧ್ಯಯನ ನಡೆಯಬೇಕಾಗಿದೆ. ಈಗಾಗಲೇ ಹಲವಾರು ವಿದ್ವಾಂಸರು ಈಗ ಪ್ರಯತ್ನಿಸಿರುವುದು ಸ್ವಾಗತಾರ್ಹ. ಚರಿತ್ರೆ, ಮಾನವಶಾಸ್ತ್ರ, ಭಾಷಾಶಾಸ್ತ್ರ, ಸಮಾಜಶಾಸ್ತ್ರ ಮುಂತಾದ ವಿಷಯಗಳನ್ನು ಹಿನ್ನಲೆಯಾಗಿಟ್ಟುಕೊಂಡು ಅಂತರ್ಶಿಸ್ತ್ರೀಯ ಅಧ್ಯಯನ ನಡೆಸುವ ಮೂಲಕ ಮನುಕುಲದ ನೈಜ ಚರಿತ್ರೆ ತಿಳಿಯುವ ಅವಶ್ಯಕತೆ ಇದೆ. ಹೀಗೆ ಹಾಲುಮತ ಸಂಸ್ಕೃತಿಯ ಬಗ್ಗೆ ಶಂ.ಬಾ ಅವರ ಚಿಂತನೆಗಳು ತುಂಬ ಮೌಲಿಕವಾಗಿವೆ.[5] ಆ ಕ್ಷೇತ್ರದಲ್ಲಿ ಕೆಲ ಮಾಡುವವರಿಗೆ ಶಂ. ಬಾ. ಅವರ ಅಧ್ಯಯನ ವಿಧಾನ ಮಾದರಿಯಾಗಿದೆ.


[1] ಶಂ.ಬಾ. ಜೋಶಿ-ಮರ್ಹಾಟೀ: ಸಂಸ್ಕೃತಿ ಕೆಲವು ಸಮಸ್ಯೆಗಳು (ಮರಾಠಿಯಿಂದ ಕನ್ನಡಕ್ಕೆ ಅನುವಾದ: ಕೀರ್ತಿನಾಥ ಕುರ್ತಕೋಟಿ) ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು, ಪುಟ ೪೧ (೧೯೯೦)

[2] ಉತ್ತರ ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯಲ್ಲಿ ‘ಕನ್ನಡ್’ ಎಂಬ ಹೆಸರಿನ ತಾಲೂಕಿದ್ದರೂ ಅದು ‘ಕನ್ನಡವಾಡ’ ಎಂಬುದರ ರೂಪಾಂತರ. ಅದು ಆ ಜಿಲ್ಲೆಯಲ್ಲಿದ್ದ ಕನ್ನಡ ಭಾಷೆಯ ಅಸ್ತಿತ್ವದ ಕುರುಹೆಂದು ಬಹುಜನ ಭಾವಿಸಿರುವುದು ಸರಿ ಅಲ್ಲ.

[3] ಹೆಚ್ಚಿನ ವಿವರಣೆಗಾಗಿ ನೋಡಿ: ಮರ್ಹಾಟೀ ಸಂಸ್ಕೃತಿ: ಕೆಲವು ಸಮಸ್ಯೆಗಳು, (ಅನುವಾದ) ಕೀರ್ತಿನಾಥ ಕುರ್ತಕೋಟಿ. ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಲೂರು (೧೯೯೦), ಪುಟ ೧೪೨-೪೬.

[4] ಶಂಬಾ ಜೋಶಿ ಅವರ ‘ಮರ್ಹಾಟೀ ಸಂಸ್ಕೃತಿ: ಕೆಲವು ಸಮಸ್ಯೆಗಳು’ (ಅನುವಾದ) ಕೀರ್ತಿನಾಥ ಕುರ್ತಕೋಟಿ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು ೧೯೯೦, ಪುಟ ೪೬.

[5] ಡಾ. ಶಂಬಾ ಜೋಶಿ ಅವರು ‘ಕರ್ನಾಟಕದ ವೀರಕ್ಷತ್ರಿಯರು’ (೧೯೩೬), ‘ಕರ್ನಾಟ ಸಂಸ್ಕೃತಿಯ ಪೂರ್ವಪೀಠಿಕೆ’ (೧೯೬೭), ‘ಮರ್ಹಾಟೀ ಸಂಸ್ಕೃತಿ: ಕೆಲವು ಸಮಸ್ಯೆಗಳು’ (೧೯೯೦) ಮರಾಠಿಯಿಂದ ಕನ್ನಡಕ್ಕೆ ಅನುವಾದ ಕೀರ್ತಿನಾಥ ಕುರ್ತುಕೋಟಿ. ಈ ಎಲ್ಲ ಕೃತಿಗಳಲ್ಲಿ ಕರ್ನಾಟಕ ಮತ್ತು ಮಹಾರಾಷ್ಟ್ರ ಈ ಎರಡು ಭಾಷಾ ಪ್ರದೇಶಗಳ ಸಾಂಸ್ಕೃತಿಕ ಸಂಬಂಧದ ಪದರುಗಳನ್ನು ಸಮರ್ಥವಾಗಿ ಬಿಚ್ಚಿ ತೋರಿಸಿದ್ದಾರೆ. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಆ ಕೃತಿಗಳನ್ನು ಗಮನಿಸಬೇಕು.