ದೇಶದಲ್ಲಿ ಏನಾದರೂ ಸಹಕಾರಿ ಇಲಾಖೆ, ಸಹಕಾರಿ ಇಲಾಖೆಯ ಹಿರಿಯ ಅಧಿಕಾರಿಗಳು, ಸಹಕಾರಿ ಮಂತ್ರಿಗಳು ಇವರೆಲ್ಲರೊಂದಿಗೆ ಕೋಟ್ಯಾಂತರ ಕುಟುಂಬಗಳು ಸಹಕಾರ ಕ್ಷೇತ್ರದಲ್ಲಿ ಜೀವನ ಸಾಗಿಸುತ್ತಿದ್ದಾರೆ ಎಂದರೆ ಇದಕ್ಕೆ ಹಾಲುಮತದ ಮಹನ್ ಪುರುಷ ಶಿದ್ಧನಗೌಡ ಸಣ್ಣರಾಮನಗೌಡ ಪಾಟೀಲರು ಹಾಗೂ ಅವರ ತವರಾದ ಕರ್ನಾಟಕದ ಗದಗ ಜಿಲ್ಲೆಯ ಕಣಗಿನಹಾಳ ಅನ್ನೋದು ಅತ್ಯಂತ ಮಹತ್ವದ ಸಂಗತಿ.

ನಾವು ಜಾಗತೀಕರಣದ ರಣರಂಗದಲ್ಲಿದ್ದೇವೆ. ಈ ಜಾಗತೀಕರಣದ ಆರ್ಥಿಕ ಏರುಪೇರುಗಳು ನಮ್ಮನ್ನು ದಿನದಿಂದ ದಿನಕ್ಕೆ ತಲ್ಲಣಗೊಳಿಸುತ್ತಿವೆ. ಈ ಆರ್ಥಿಕ ತಲ್ಲಣಗಳು ಈ ಹಿಂದೆಯೂ ಇದ್ದವು. ಆದರೆ ಅವು ಅಷ್ಟು ಪರಿಣಾಮಕಾರಿಯಾಗಿ ಕಾಡದೇ ನಮ್ಮಲ್ಲಿನ ಸಮಸ್ಯೆಗಳೂ ಮಾತ್ರ ನಮ್ಮ ಆರ್ಥಿಕ ಸ್ಥಿತಿಗಳನ್ನು ಸ್ಥಿತ್ಯಂತರಗೊಳಿಸಿದ್ದವು. ಇಂತಹುದೇ ಒಂದು ಸ್ಥಿತ್ಯಂತರ ಸಂದರ್ಭದಲ್ಲಿ ಮೊಳಕೆ ಒಡೆದದ್ದು ಸಹಕಾರಿ ತತ್ವ.

ಈ ತತ್ವ ಕಾಲದಿಂದ ಕಾಲಕ್ಕೆ ಉನ್ನತಿ ಪಡೆದು ನಂತರ ದಿವಾಳಿಯಾಗಿದ್ದಕ್ಕೆ ಸಾಕಷ್ಟು ಪುರಾವೆಗಳು ನಮ್ಮಲ್ಲಿವೆ. ಆದರೆ ಈಗಿನ ಆರ್ಥಿಕ ತಲ್ಲಣಗಳು ನಾವು ಗಂಭೀರವಾಗಿ ಗಮನಿಸಿದರೆ ಅದರಿಂದ ನಾವು ಪಾರಾಗಲು ಮತ್ತೆ ನಮಗೆ ಅದೇ ಸಹಕಾರಿ ತತ್ವ ಅಗತ್ಯವಾಗಿದೆ. ಈ ಸಹಕಾರಿ ತತ್ವ ಮತ್ತೆ ಈಗ ನಮ್ಮನ್ನು ಉದ್ಧರಿಸುವ ಮಾರ್ಗ ಎಂಬುದನ್ನು ಈಗ ನಾವು ಪರಾಮರ್ಶಿಸಿಕೊಳ್ಳುವ ಅಗತ್ಯವಿದೆ.

ಈಗ ಆರ್ಥಿಕವಾಗಿ ಪ್ರಪಂಚವನ್ನು ಆಳುತ್ತಿರುವ ಅಮೇರಿಕಾ ಕೂಡಾ ಆರ್ಥಿಕ ದಿವಾಳಿಗೆ ಕೈಗನ್ನಡಿಯಾಗಿದೆ. ಪ್ರಪಂಚದ ಹಿರಿಯಣ್ಣ ಎನಿಸಿಕೊಂಡ ಅಮೇರಿಕಾದ ಆರ್ಥಿಕ ಸ್ಥಿತ್ಯಂತರವೇ ಇಡೀ ಪ್ರಪಂಚವನ್ನು ತಲ್ಲಣಗೊಳಿಸಿರುವುದು ದುರ್ದೈವದ ಸಂಗತಿ.

ಇಂತಹ ಸಂದರ್ಭದ ನಡುವೆ ಇಡೀ ಭಾರತದ ಆರ್ಥಿಕ ವ್ಯವಸ್ಥೆಯನ್ನು ಸುಧಾರಿಸಲು ದಾರಿ ಮಾಡಿಕೊಡುವ ಸಹಕಾರಿ ತತ್ವ ನೀಡಿದ ಸಹಕಾರಿ ಪಿತಾಮಹ ಶಿದ್ಧನಗೌಡ ಪಾಟೀಲರು ನಮಗೆ ಈಗಲಾದರೂ ನೆನಪಾಗಬೇಕು. ಇಂತಹ ಆರ್ಥಿಕ ಸಬಲತೆಗೆ ನಾಂದಿ ಹಾಡಿದ ಶಿದ್ಧನಗೌಡರನ್ನು ಸಕಾಲಕ್ಕಾದರೂ ನೆನಪು ಮಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ಹಾಲುಮತ ಅಧ್ಯಯನ ಪೀಠವೂ ಕೂಡ ಸ್ಮರಣೆಗೆ ದಾರಿ ಮಾಡಿಕೊಟ್ಟಿದೆ.

ನಾವು ಬ್ರಿಟಿಷರ ಒತ್ತೆಯಾಳುಗಳಾಗಿದ್ದಾಗ ಅವರ ಅಧಿಕಾರಿಗಳಿಗೆ ಷರತ್ತು ಹಾಕಿ ಅವರಿಂದ ತಮ್ಮ ಗ್ರಾಮಕ್ಕೆ ಕುಡಿಯುವ ನೀರು ಹಾಗೂ ರೈಲ್ವೆ ಮಾರ್ಗಗಳನ್ನು ಹಾಕಿಸಿಕೊಳ್ಳುವ ಮೂಲಕ ಸಹಕಾರಿ ಸಂಘ ಸ್ಥಾಪನೆ ಮಾಡಿದ ವ್ಯಕ್ತಿಯೇ ಶಿದ್ಧನಗೌಡ ಸಣ್ಣರಾಮಗೌಡ ಪಾಟೀಲರು. ೧೯೦೫ರ ಮೇ ೮ ರಂದು ಈಗಿನ ಗದಗ ಜಿಲ್ಲೆಯ ಪುಟ್ಟ ಗ್ರಾಮ ಕಣಗಿನಹಾಳದಲ್ಲಿ ಸ್ಥಾಪಿಸಿದ ಸಹಕಾರಿ ಸಂಘವೇ ಇಂದು ದೇಶದ ಸಹಕಾರ ಉತ್ಥಾನಕ್ಕೆ ನಾಂದಿಹಾಗಿದ್ದು. ಅಷ್ಟೇ ಅಲ್ಲಾ ಏಷಿಯಾ ಖಂಡದ ಮೊದಲ ಸಹಕಾರಿ ಸಂಘ ಎಂಬ ಹೆಗ್ಗಳಿಕೆಯನ್ನು ತಂದುಕೊಟ್ಟಿದ್ದು ಎಂಬುದು ಅತ್ಯಂತ ಮಹತ್ವದ ಸಂಗತಿ.

ಶಿದ್ಧನಗೌಡರು ತಂದು ಕೊಟ್ಟ ಸಹಕಾರ ಎಂತಹ ಮಹತ್ವದ್ದು ಎನ್ನುವುದನ್ನು ನಮ್ಮ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಹೇಳಿರುವ ‘ಆರ್ಥಿಕ ಸ್ವಾತಂತ್ರ್ಯಕ್ಕೆ ಸಹಕಾರವೇ ಹೆಬ್ಬಾಗಿಲು’ ಎನ್ನುವ ಮಾತು, ಮತ್ತು ದೇಶದ ಮೊದಲ ಪ್ರಧಾನಿ ಪಂಡಿತ ಜವಹರಲಾಲ್ ನೆಹರು ಅವರು ಹೇಳಿದ “ನಾನು ಸಹಕಾರ ಚಳುವಳಿಯಿಂದ ಭಾರತವನ್ನು ಬಲಯುತಗೊಳಿಸಲಿಚ್ಚೀಸುತ್ತೇನೆ’ ಎಂಬ ಮಾತುಗಳು ಪುಷ್ಠಿಕರಿಸುತ್ತವೆ.

ಇಂತಹ ಮಹತ್ವದ ತತ್ವ ನೀಡಿದ ವ್ಯಕ್ತಿ ಶಿದ್ಧನಗೌಡರದು ದೇಶದ ಇತಿಹಾಸದಲ್ಲಿ ಅಚ್ಚಳಿಯದ ಹೆಸರು. ಈ ಜಗದ ಮೇಲೆ ಸಹಕಾರಿ ತತ್ವ ಎಲ್ಲಿಯವರೆಗೆ ಇರುತ್ತದೆಯೋ ಅಲ್ಲಿಯವರೆಗೆ ಶಿದ್ಧನಗೌಡರ ಹೆಸರು ಇರುತ್ತದೆ. ಆದರೆ ಇಂತಹ ಮಹತ್ವದ ಸಹಕಾರಿ ತತ್ವ ನೀಡಿದ ಶಿದ್ಧನಗೌಡ ಪಾಟೀಲರನ್ನು ಪರಿಚಯಿಸುವ ಮತ್ತು ಅವರಿಗೆ ಗೌರವಗಳು ಮಾತ್ರ ಈವರೆಗೂ ಲಭ್ಯ ಆಗಿಲ್ಲ.

ಇನ್ನೂ ಆಶ್ಚರ್ಯಕರ ಸಂಗತಿ ಎಂದರೆ ಶಿದ್ಧನಗೌಡರು ತೋರಿದ ಸಹಕಾರಿ ತತ್ವದ ತಳಹದಿಯ ಮೇಲೆ ಸಾಕಷ್ಟು ಸಹಕಾರಿ ಸಂಘಗಳನ್ನು ಸ್ಥಾಪಿಸಿದ ಅನೇಕರು ಈ ನಾಡಿನಲ್ಲಿ ಮಿಂಚಿದ್ದಾರೆ. ಅಷ್ಟೇ ಅಲ್ಲದೆ ಅವರು ಸಹಕಾರಿ ರಂಗದ ಪ್ರಮುಖರು ಕೂಡಾ ಎನ್ನಿಸಿಕೊಂಡಿದ್ದಾರೆ. ಆದರೆ, ಸಹಕಾರಿ ಪಿತಾಮಹ ಎನ್ನಿಸಿಕೊಂಡ ಶಿದ್ಧನಗೌಡರು ಮಾತ್ರ ಸಹಕಾರಿ ಕ್ಷೇತ್ರದವರನ್ನು ಬಿಟ್ಟರೆ ಇನ್ನುಳಿದ ಯಾರಿಗೂ ಅವರ ಪರಿಚಯ ಕೂಡಾ ಅಷ್ಟಾಗಿ ಇಲ್ಲವೆಂದೇ ಹೇಳುವ ಪರಿಸ್ಥಿತಿ ನಮ್ಮಲ್ಲಿದೆ.

ಇದಕ್ಕೆ ಕಾರಣ ಹಲವಾರು. ನಮ್ಮಲ್ಲಿ ಅತ್ಯಂತ ಪ್ರಮುಖವಾಗಿ ಇಂದು ಬೆಳೆಯುತ್ತಿದ್ದು ಜಾತಿ. ಇದು ಕಾರಣವಾಗಿ ಹಲವಾರು ಕೆಲಸಗಳು ಹೀನಾಯ ಸ್ಥಿತಿ ತಲುಪುವ ಮತ್ತು ಉನ್ನತ ಮಟ್ಟ ಮುಟ್ಟುವಂತೆ ಆಗುತ್ತಿವೆ. ಈ ಪ್ರಮುಖ ಕಾರಣದಿಂದ ಕುರುಬ ಜನಾಂಗಕ್ಕೆ ಸೇರಿದವರಾದ ಶಿದ್ಧನಗೌಡರು ಇಡೀ ಏಷಿಯಾ ಖಂಡದಲ್ಲಿಯೇ ಪ್ರಥಮ ಸಹಕಾರಿ ಸಂಘ ಸ್ಥಾಪಿಸಿದರೂ ಅವರ ಹೆಸರು ಯಾವ ಮಟ್ಟಿಗೆ ಬೆಳೆಯಬೇಕಾಗಿತ್ತೋ ಬೆಳೆಯಲಿಲ್ಲ, ಇದಕ್ಕೆ ಜಾತಿ ಕಾರಣ ಮತ್ತು ಜಾತಿ ಕಂಟಕವು ಇಲ್ಲದಿಲ್ಲ.

ಹೀಗೆ ಹೇಳಲು ಕಾರಣವಿದೆ. ಸಹಕಾರಿ ಪಿತಾಮಹ ಶಿದ್ಧನಗೌಡ ಕೊಟ್ಟ ಸಹಕಾರಿ ತತ್ವದ ಲಾಭ ಮತ್ತು ಕೀರ್ತಿ ಪಡೆದ ನೂರಾರು ಜನ ಅದೇ ಕೀರ್ತಿಯಿಂದ ಏನೆಲ್ಲ ಸೌಲಭ್ಯ ಪಡೆದು ಮಿಂಚಿದ್ದಾರೆ, ಮಿಂಚುತ್ತಿದ್ದಾರೆ, ಆದರೆ ಸಹಕಾರಿ ಚಳುವಳಿಗೆ ನಾಂದಿ ಹಾಡಿದ ಶಿದ್ಧನಗೌಡರನ್ನು ಪ್ರಪಂಚಕ್ಕೆ ಪರಿಚಯಿಸುವಲ್ಲಿ ಜನಾಂಗದ ಸ್ವಾಭಿಮಾನದ ಕೊರತೆ, ರಾಜಕೀಯದಲ್ಲಿರುವ ಕುರುಬ ಸಮಾಜದ ನಾಯಕರ ಇಚ್ಛಾಶಕ್ತಿ ಜೊತೆಗೆ ಆಸಕ್ತಿಯ ಕೊರತೆ ಕೂಡಾ ಕಾರಣವಾಗಿದೆ. ಈ ವಿಶ್ವವಿದ್ಯಾಲಯದಿಂದಲಾದರೂ ಇನ್ನಷ್ಟು ಶಿದ್ಧನಗೌಡರ ಹೆಸರು ಜನಜನಿತವಾಗಲಿ.

ಸಹಕಾರಿ ತತ್ವದ ಹಿನ್ನಲೆ

ಕಣಗಿನಹಾಳ ಸಹಕಾರಿ ತತ್ವದ ಸ್ಥಳವಾದರೆ, ಶಿದ್ಧನಗೌಡ ಪಾಟೀಲರು ಸಹಕಾರಿ ತತ್ವ ಉದಯಿಸಿದ ಹರಿಕಾರ. ಹಿಂದಿನ ಅಖಂಡ ಧಾರವಾಡ ಜಿಲ್ಲೆಯಿಂದ ವಿಭಜನೆಗೊಂಡ ಜಿಲ್ಲೆಗಳಲ್ಲಿ ಗದಗ ಒಂದು. ಗದಗ ನಗರದಿಂದ ಪೂರ್ವ ದಿಕ್ಕಿನಲ್ಲಿ ಹಾಯ್ದು ಹೋಗಿರುವ ರೇಲ್ವೆ ಹಳಿಗೆ ಹತ್ತಿಕೊಂಡಿರುವ ಕಣಗಿನಹಾಳ ಪುಟ್ಟ ಗ್ರಾಮ.

ಗದಗದಿಂದ ಕೇವಲ ೭ ಕಿ.ಮೀ. ಅಂತರದಲ್ಲಿ ಇರುವ ಈ ಗ್ರಾಮವೇ ಸಹಕಾರ ಕ್ಷೇತ್ರದ ಜನ್ಮಸ್ಥಾನವಾಗಿ ದೇಶದ ಭೂಪಟದಲ್ಲಿ ತನ್ನದೆಯಾದ ಸ್ಥಾನ ಪಡೆದಿದೆ. ೨೦೦೧ ರ ಜನಗಣತಿ ಪ್ರಕಾರ ಇಲ್ಲಿ ೪೫೦೦ ಜನಸಂಖ್ಯೆ ಇದೆ. ಅಂದರೆ ಕಳೆದ ನೂರು ವರ್ಷಗಳ ಹಿಂದೆ ಈ ಗ್ರಾಮದಲ್ಲಿ ಎಷ್ಟು ಜನಸಂಖ್ಯೆ ಇರಬಹುದು ಎಂದು ಊಹಿಸಿ. ಅಂದಿನ ಈ ಪುಟ್ಟ ಗ್ರಾಮದಲ್ಲಿ ಜನಿಸಿದ ಶಿದ್ಧನಗೌಡ ಪಾಟೀಲರೇ ಸಹಕಾರಿ ಕ್ಷೇತ್ರ ಉದಯಿಸಲು ಹರಿಕಾರನಾದ ಮಹಾಪುರುಷ.

ಕಣಗಿನಹಾಳ ಕೃಷಿ ಪ್ರಧಾನವಾದ ಗ್ರಾಮ. ಇಲ್ಲಿ ಜೋಳ, ಹತ್ತಿ, ಕಡಲೆ, ಸೂರ್ಯಕಾಂತಿ, ಮೆಣಸಿನಕಾಯಿ, ಉಳ್ಳಾಗಡ್ಡಿ, ಹೆಸರು ಮುಂತಾದ ಬೆಳೆಗಳನ್ನು ಬೆಳೆಯುವ ರೈತರೊಂದಿಗೆ ಕೃಷಿಯನ್ನು ನಂಬಿದ ಕೃಷಿ ಕೂಲಿ ಕಾರ್ಮಿಕರು ಗ್ರಾಮದ ೮೭೧೬ ಎಕರೆ ಜಮೀನಿನಲ್ಲಿ ತಮ್ಮ ಜೀವನ ನಡೆಸುತ್ತಿದ್ದಾರೆ.

ಕಣಗಿನಹಾಳ ಗ್ರಾಮದ ಅಂದಿನ ಪ್ರಗತಿಪರ ರೈತರಾಗಿದ್ದ ಕುರುಬ ಜನಾಂಗದ ಸಣ್ಣರಾಮನಗೌಡ ಹಾಗೂ ಶ್ರೀಮತಿ ನೀಲಮ್ಮ ದಂಪತಿಗಳ ಉದರದಲ್ಲಿ ೧೯೪೩ರ ಮೇ ೨೫ರ ಗುರುವಾರ ದಿವಸ ಶಿದ್ಧನಗೌಡರು ಹುಟ್ಟಿದರು. ಅಂದು ಶಿದ್ಧನಗೌಡರ ಜನನವಾದಾಗ ಅವರೇ ದೇಶದ ಮೊಟ್ಟ ಮೊದಲ ಸಹಕಾರಿಯಾಗುತ್ತಾರೆ ಎಂದು ಯಾರು ಎಣಿಸಿರಲಿಲ್ಲ. ಆ ವ್ಯಕ್ತಿ ಆರಂಭಿಸುವ ಸಹಕಾರಿ ತತ್ವವೇ ದೇಶದ ಲಕ್ಷ ಲಕ್ಷ ಜನರ ಬದುಕು ಮತ್ತು ಅವರ ಕುಟುಂಬಗಳನ್ನು ಸಾಕುವ ದಾರಿಯಾಗಬಲ್ಲದು ಎಂದು ಯಾರೂ ಕನಸು ಕಂಡಿರಲಿಲ್ಲ. ಆದರೆ ಶಿದ್ಧನಗೌಡರ ತಂದೆ-ತಾಯಿಗಳ ಪುಣ್ಯದ ಫಲವಾಗಿ ದೇಶವೇ ಮರೆಯಲಾರದ ಸಹಕಾರಿ ತತ್ವವನ್ನು ಪಡೆಯುವ ಶಕ್ತಿಯಾಗಿ ಮೊಳಕೆಯಾಗಿ ಹೊರಬಂದಿತ್ತು  ಎನ್ನುವುದು ಈಗ ಬರೀ ಇತಿಹಾಸ.

ಶಿದ್ಧನಗೌಡರು ತಕ್ಕಮಟ್ಟಿಗೆ ಅಂದರೆ ಆವಗಿನ ಗಾವಟಿ ಶಾಲೆಯಲ್ಲಿ ಕೇವಲ ೭ ತಿಂಗಳ ಕಲಿತವರು. ಏಕೆಂದರೆ “ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆ ಮೇಲು” ಎನ್ನುವಂತೆ ಮನೆಯ ಮುಖ್ಯ ಉದ್ಯೋಗ ಮತ್ತು ಮೊದಲಿನಿಂದಲೂ ದೊಡ್ಡ ಕೃಷಿ ಕುಟುಂಬವಾಗಿದ್ದರಿಂದ ಇವರಿಗೆ ಓದಿಗಿಂತ ತಮ್ಮ ಮನೆಯ ಕೃಷಿ ಕುಟುಂಬದ ನಗ ಹೊರವು ಅಗತ್ಯವಿತ್ತು.

ಕುಟುಂಬದ ನಗ ಹೊರವು ಅಗತ್ಯವಿತ್ತು

ಏಕೆಂದರೆ ಶಿದ್ಧನಗೌಡರಿಗೆ ಆ ಕಾಲದಲ್ಲಿ ೧೦೦ ಕೂರಿಗೆ ಅಂದರೆ ೪೦೦ ಎಕರೆ ಜಮೀನುಗಳಿದ್ದ ಕೃಷಿ ಕುಟುಂಬವಾಗಿತ್ತು. ಸಣ್ಣರಾಮನಗೌಡರಿಗೆ ಶಿದ್ಧನಗೌಡಾರು ಏಕೈಕ ಮಗನಾಗಿದ್ದರಿಂದ ಕೃಷಿಯ ಭಾರ ಹೊರವು ಅಗತ್ಯವಿದ್ದದ್ದರಿಂದ ಓದು ಮುಂದುವರೆಯಲಾಗಲಿಲ್ಲ ಮತ್ತು ಕಲಿಕೆಗೆ ಪರ ಊರಿಗೆ ಹೋಗಬೇಕಾದ ಅನಿವಾರ್ಯವಿದ್ದದ್ದರಿಂದ ಕೃಷಿಯ ಭಾರ ಶಿದ್ಧನಗೌಡರಿಗೆ ಸಿಕ್ಕಿತು.

ಶಿದ್ಧನಗೌಡರು ದೊಡ್ಡ ಜಮೀನುದಾರಗಾಗಿದ್ದರಿಂದ ಮತ್ತು ಊರಿನ ಗೌಡಕಿ ಅವರದಾಗಿದ್ದರಿಂದ ಸಹಜವಾಗಿ ಗ್ರಾಮದ ಎಲ್ಲರಿಗೂ ಶಿದ್ಧನಗೌಡರ ಪರಿಚಯವಾಯಿತು. ನಂತರ ಶಿದ್ಧನಗೌಡರು ಪ್ರಾಯಕ್ಕೆ ಬರುತ್ತಿದ್ದಂತೆ ಗ್ರಾಮದ ಎಲ್ಲ ಚಟುವಟಿಕೆಗಳಲ್ಲಿ ಭಾಗವಹಿಸಲು ಆರಂಭಿಸಿದರು ಅಷ್ಟೇ ಅಲ್ಲದೆ ಗ್ರಾಮದಲ್ಲಿ ಎಲ್ಲ ಚಟುವಟಿಕೆಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದರು.

ಶಿದ್ಧನಗೌಡರು ಸಕ್ರಮ್ಮರನ್ನು ಬಾಳ ಸಂಗಾತಿಯಾಗಿ ಸ್ವೀಕರಿಸುವ ಮೂಲಕ ಸಂತೋಷದ ಬದುಕ ಬಂಡಿಯಲ್ಲಿ ಮಾರೆಪ್ಪ-ಮುದ್ದಪ್ಪ ಎಂಬ ಅವಳಿ-ಜವಳಿ ಮಕ್ಕಳೊಂದಿಗೆ ಹದಿಮೂರು ಮಕ್ಕಳಿಗೆ ಜನ್ಮ ನೀಡಿದ ದಂಪತಿಗಳಿಗೆ ವಿಧಿಯಾಟ ಎಂಬಂತೆ ಉಳಿದದ್ದು ಮೂರು ಜನ ಗಂಡು ಮಕ್ಕಳು ಹಾಗೂ ಓರ್ವ ಹೆಣ್ಣುಮಗಳು ಮಾತ್ರ. ಈ ಮಕ್ಕಳೊಂದಿಗೆ ಕೇವಲ ತಮ್ಮ ಕುಟುಂಬ ಎನ್ನುವ ಮಟ್ಟಿಗೆ ಯಾವಾಗಲೂ ಚಿಂತಿಸಿದವರಲ್ಲ. ಇಡೀ ಗ್ರಾಮವನ್ನೇ ತಮ್ಮ ಕುಟುಂಬ ಎಂದು ತಿಳಿದುಕೊಳ್ಳುವ ಮೂಲಕ ಗ್ರಾಮದ ಎಲ್ಲದರಲ್ಲಿಯೂ ದಂಪತಿಗಳ ಸೇವೆ ನಿರಂತರವಾಗಿತ್ತು.

ಶಿದ್ಧನಗೌಡರು ಬ್ರಿಟೀಷ ಅಧಿಕಾರಿಗಳನ್ನು ಕಾಡಿಬೇಡಿ ತಮ್ಮ ಊರಿಗೆ ಶಾಲೆಯನ್ನು ಮಾಡಿಸಿಕೊಳ್ಳುತ್ತಾರೆ. ಈ ಶಾಲೆಯು ಶಿದ್ಧನಗೌಡರ ಪ್ರಯತ್ನದ ಫಲವಾಗಿ ೧೧.೮.೧೮೮೦ರಲ್ಲಿ ಶಾಲೆ ಆರಂಭವಾಗುತ್ತದೆ. ತದನಂತರ ೧೯೦೩ರಲ್ಲಿ ಶಿದ್ಧನಗೌಡರ ಸತತ ಪ್ರಯತ್ನದ ಫಲವಾಗಿ ಗ್ರಾಮದಲ್ಲಿ ೭ನೆ ತರಗತಿವರೆಗೆ ಶಾಲೆ ಆರಂಭವಾಗುತ್ತದೆ.

ಈ ಸಂದರ್ಭದಲ್ಲಿ ತಮ್ಮ ಮಗ ಅನಂತಗೌಡರನ್ನು ೭ನೇ ತರಗತಿ ಮೊದಲ ವಿದ್ಯಾರ್ಥಿಯಾಗಿ ಶಾಲೆಗೆ ನೋಂದಣಿ ಮಾಡಿಸುತ್ತಾರೆ. ಈ ಸಂದರ್ಭದಲ್ಲಿ ಸ್ವತಃ ಶಿದ್ಧನಗೌಡ ಸಹಿ ಮಾಡಿರುವ ದಾಖಲೆಗಳು ಇವೆ. ಹೀಗೆ ಸದಾ ಗ್ರಾಮದ ಅಭಿವೃದ್ಧಿಯ ಬಗ್ಗೆ ಕರಗಿದವರು ಶಿದ್ಧನಗೌಡರು.

ಏಕೆಂದರೆ ಊರ ಗೌಡಕಿತನ ತಮ್ಮಲ್ಲಿದ್ದದ್ದರಿಂದ ಗ್ರಾಮಕ್ಕೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳುವುದು ತಮ್ಮ ಕರ್ತವ್ಯ ಎಂದುಕೊಂಡ ಶಿವನಗೌಡರಿಗೆ ಗ್ರಾಮದ ಮೇಲೆ ಅಪಾರ ಅಭಿಮಾನ ಹಾಗೂ ಪ್ರೀತಿ ಇರಿಸಿಕೊಂಡಿದ್ದರಿಂದ ಗ್ರಾಮದ ಅಭಿವೃದ್ಧಿಯಾಗಬೇಕು ಎನ್ನುವುದು ಅವರ ಮನದೊಡಲಿನ ಕುಂಡದಲ್ಲಿ ನೆಟ್ಟ ಸಸಿಯಾಗಿತ್ತು. ಈ ಮಹತ್ತರವಾದ ಸಸಿಗಾಗಿ ಶಿದ್ಧನಗೌಡರು ಕನಸು-ಕನವರಿಗೆ ನಿರಂತರವಾಗಿಸಿಕೊಂಡರು. ಈ ಹಿನ್ನಲೆಯಲ್ಲಿ ಶಿದ್ಧನಗೌಡರು ಅಗಿಂದಾಗ್ಗೆ ತಾಲೂಕಾ ಕಛೇರಿ ಮತ್ತು ಜಿಲ್ಲಾ ಕಛೇರಿಗಳ ಸಂಪರ್ಕದಲ್ಲಿರುತ್ತಿದ್ದರು. ಜೀವನದಲ್ಲಿ ಏನಾದರೂ ಮಹತ್ತರವಾದ ಕೆಲಸ ಮಾಡಬೇಕು ಎನ್ನುವ ಮಹದಾಶೆಯನ್ನು ಹೊಂದಿದ್ದ ಶಿದ್ಧನಗೌಡರು ತಮ್ಮ ಊರಿನಲ್ಲಿದ್ದ ನೀರಿನ ಸಮಸ್ಯೆ ಅವರನ್ನು ಬಹುವಾಗಿ ಕಾಡಿತ್ತು.

ಅಲ್ಲದೇ ಗ್ರಾಮದ ಅಭಿವೃದ್ಧಿಯಾಗಲು ಗ್ರಾಮೀಣ ಅನುಭಾವಿಗಳು ಹೇಳುವಂತೆ ‘ಊರಾಗ ಹೊಳಿ ಹಾದಿರಬೇಕು ಇಲ್ಲಾ ಹಳಿ ಹಾದಿರಬೇಕು’ ಎನ್ನುವ ಮಾತು ಶಿದ್ಧನಗೌಡರ ಮನದಲ್ಲಿ ಗುನಗುನಸಿತ್ತು. ಏಕೆಂದರೆ ಆ ಕಾಲದಲ್ಲಿ (ಈ ಕಾಲದಲ್ಲಿ ಕೂಡಾ) ಕಣಗಿನಹಾಳ ಗ್ರಾಮಕ್ಕೆ ಹೊಳಿ ತರಲು ಸಾಧ್ಯವಿರಲಿಲ್ಲ. ಆದ್ದರಿಂದ ಗ್ರಾಮದ ಪಕ್ಕದಲ್ಲಿಯೇ ಹಾದು ಹೋಗಿದ್ದ ಗದಗ-ತುಂತಕಲ್  ರೈಲ್ವೆ ಮಾರ್ಗವನ್ನು ದಿನವು ಕಾಣುತ್ತಿದ್ದ ಶಿದ್ಧನಗೌಡರಿಗೆ ಹಳಿ ತರುವ ತವಕದ ಕನಸು ಬೇರೂರಿತ್ತು. ಬೇರೂರಿದ ಕನಸಿಗಾಗಿ ಶಿದ್ಧನಗೌಡರು ಕರಗುತ್ತಾ ತಮ್ಮ ಕನಸು ನನಸು ಮಾಡುವ ಸಮಯಕ್ಕಾಗಿ ಎದುರು ನೋಡುತ್ತಿರುವಾಗಲೆ ದೇಶದಲ್ಲಿ ಜಾರಿಗೆ ಬಂದ ಸಹಕಾರಿ ಕಾಯ್ದೆಯೇ ಅವರ ಕನಸು ನನಸು ಮಾಡುವ ಸಾಧನವಾಗಿ ದೇಶದಲ್ಲಿ ಜಾರಿಗೆ ಬಂತು.

ದೇಶದಲ್ಲಿ ಸಹಕಾರಿ ಕಾನೂನು ಜಾರಿಗೆ ಬಂದ ಹಿನ್ನಲೆ

ದೇಶದಲ್ಲಿ ಸಹಕಾರಿ ಕಾಯ್ದೆ ಜಾರಿಗೆ ಬರಲು ಅತ್ಯಂತ ಮಹತ್ವದ ಮತ್ತು ಅಪಾಯದಿಂದ ಪಾರಾಗುವ ತಂತ್ರದ ಉದ್ದೇಶವಿತ್ತು. ಕಾರಣ ಸಹಕಾರಿ ತತ್ವದಂಥ ಕಾನೂನನ್ನು ತರದೇ ಹೋದರೆ ದೇಶದಲ್ಲಿ ಒಕ್ಕಲುತನ (ಕೃಷಿ) ಉಳಿಯಲು ಸಾಧ್ಯವಿಲ್ಲ ಎಂಬ ಚಿಂತನೆ ಹುಟ್ಟಿದಾಗ ಮತ್ತು ಇದನ್ನೆ ನಂಬಿದ ಜನ ನಮ್ಮ ಸರ್ಕಾರದ ಮೇಲೆ ದಂಗೆ ಏಳುವುದನ್ನು ತಪ್ಪಿಸುವ ಹಿನ್ನಲೆಯಲ್ಲಿ ಈ ಹೊಸ ಕಾಯ್ದೆಯನ್ನು ಬ್ರಿಟಿಷ ಸರ್ಕಾರ ಜಾರಿಗೆ ತಂದಿದೆ.

ಬ್ರಿಟಿಷ ಸರ್ಕಾರ ಈ ಕಾಯ್ದೆಯನ್ನು ಜಾರಿಗೆ ತಂದಾಗಲೇ ಸಹಕಾರ ಎನ್ನುವುದು ಉದಯವಾಯಿತು ಎಂದಲ್ಲೆ. ಏಕೆಂದರೆ ಭಾರತೀಯರು ಮೊದಲಿಂದಲು ಸಂಘ ಜೀವಿಗಳು. ಅದು ಅಲ್ಲದೆ ಒಬ್ಬರಿಗೊಬ್ಬರು ಆಗುತ್ತಾ ಸಾಮರಸ್ಯದ ಬದುಕ ಬಂಡಿ ಸಾಗಿಸಿದವರು. ಹೀಗಾಗಿ ಭಾರತೀಯರಲ್ಲಿ ಸಹಕಾರ ಎನ್ನುವುದು ಸಹಜವಾಗಿಯೇ ಬೆಳೆದು ಬಂದಿರುವ ದೊಡ್ಡ ಗುಣವಿತ್ತು. ಆದರೆ ಇದಕ್ಕೊಂದು ಚೌಕಟ್ಟು ಶಿಸ್ತುಬದ್ಧ ಕಾನೂನು ಇರಲಿಲ್ಲ.

ಕಳೆದ ಶತಮಾನದ ಕೊನೆಯಲ್ಲಿ ದೇಶ ಭೀಕರ ಬರಗಾಲಕ್ಕೆ ತುತ್ತಾಗಿತ್ತು. ಇಡೀ ದೇಶದ ಜನತೆ ಈ ಬರಗಾಲಕ್ಕೆ ಸಿಕ್ಕು ತತ್ತರಿಸಿದ್ದರು. ಬರೀ ಜನ ತತ್ತರಿಸಿದ್ದಲ್ಲದೇ ಅನ್ನ-ನೀರು ಇಲ್ಲದೆ ಸಾಕಷ್ಟು ಜನ ಜೀವ ಕಳೆದುಕೊಂಡಿದ್ದರೆ, ಲಕ್ಷಾಂತರ ಜಾನುವಾರುಗಳು ಹೊಟ್ಟೆಗೆ ಇಲ್ಲದೆ ಸಾವನ್ನಪ್ಪಿದ್ದವು. ಕೃಷಿಯನ್ನೇ ನಂಬಿದ ಜನರ ಸ್ಥಿತಿ ಇನ್ನೂ ಘೋರವಾಯಿತು.

ಜನರ ಆಗು-ಹೋಗುಗಳನ್ನು ನೋಡಿಕೊಳ್ಳಬೇಕಾದ ಅಂದಿನ ಬ್ರಿಟಿಷ ಸರ್ಕಾರ ಯಾವುದೇ ನೆರವು ನೀಡಲಾರದ್ದನ್ನ ಮತ್ತು ಕೃಷಿಗೆ ಪ್ರೋತ್ಸಾಹ ನೀಡದ್ದರ ವಿರುದ್ಧ ರೈತ ಸಮುದಾಯಗಳು ಸಂಘಟನೆಗೊಂಡು ತಮ್ಮ ಸಾಕಷ್ಟು ಕಷ್ಟಗಳಿಗೆ ಪರಿಹಾರ ಒದಗಿಸಲು ದಂಗೆ ಏಳಲು ಸಿದ್ಧವಾಗತೊಡಗಿದರು. ಈ ಸಂದರ್ಭದಲ್ಲಿ ಎಚ್ಚೆತ್ತ ಬ್ರಿಟಿಷ ಸರ್ಕಾರ ರೈತರು ದಂಗೆ ಎಳದಂತೆ ಅವರನ್ನು ಸಮಾಧಾನಗೊಳಿಸುವ ತಂತ್ರದಿಂದ ಸಾಕಷ್ಟು ಚಿಂತನೆ ಮಾಡಿ ಈ ಬರಗಾಲದಿಂದ ಉಂಟಾದ ಜನರ ಕಷ್ಟನಷ್ಟಗಳನ್ನು ಬಗೆಹರಿಸಲು ೧೮೮೦ರಲ್ಲಿ ಬರಗಾಲ ಅಧ್ಯಯನ ಆಯೋಗವನ್ನು ರಚಿಸಿತು. ಆ ಆಯೋಗ ದೇಶಾದ್ಯಂತ ಸುತ್ತಾಡಿ ಬರಗಾಲದಿಂದ ಜನರಿಗಾಗಿರುವ ಸಂಕಷ್ಟಗಳ ಕುರಿತು ಸಾಕಷ್ಟು ಮಾಹಿತಿ ಸಂಗ್ರಹಿಸಿತು.

ಈ ಮಾಹಿತಿಗಳಿಂದ ರೈತರ ಸ್ಥಿತಿ ಕಂಡು ಆಯೋಗ ಆಶ್ಚರ್ಯಗೊಂಡಿತ್ತು. ಏಕೆಂದರೆ ದೇಶದ ಮೂಲ ಕಸಬು ಹಾಗೂ ಬಹುಪಾಲ ಜನರ ಉದ್ಯೋಗ ಕೃಷಿಯಾಗಿದ್ದರಿಂದ ಈ ಸಮುದಾಯದಲ್ಲಿನ ಶೇ. ೩೫ರಷ್ಟು ರೈತರು ಸಾಲದಿಂದ ಬಿಡಿಸಿಕೊಳ್ಳಲಾರದ ಸ್ಥಿತಿಯಲ್ಲಿದ್ದದ್ದು ಬಹಿರಂಗವಾಗಿತ್ತು. ಈ ಹಿನ್ನಲೆಯಲ್ಲಿ ಬರಗಾಲ ಅಧ್ಯಯನ ತಂಡಕ್ಕೆ ಹೊಳದದ್ದು ಇಂಗ್ಲಂಡಿನ ರಾಬರ್ಟ ಓಪನ್ ಎಂಬಾದ ಕಂಡು ಹಿಡಿರು ಪ್ರಯೋಗ ಮಾಡಿ ಯಶಸ್ವಿಯಾದ ‘ಒಬ್ಬ ವ್ಯಕ್ತಿ ತನ್ನ ಎಲ್ಲ ಅಗತ್ಯಗಳನ್ನು ಮತ್ತು ಕೆಲಸಗಳನ್ನು ಪೂರೈಸಿಕೊಳ್ಳಲು ಅಸಮರ್ಥನಾಗಿದ್ದು, ಹಲವರು ಒಂದುಗೂಡಿದರೆ ಎಲ್ಲರ ಪೂರೈಕೆಗಳು ಆ ಒಂದು ಗೂಡುವಿಕೆಯಿಂದ ಈಡೇರಬಲ್ಲವು’ ಎಂಬುದು. ಇಂತಹ ಸಂದರ್ಭದಲ್ಲಿ ರೈತರ ಆರ್ಥಿಕ ಸುಧಾರಣೆ ತರುವುದರ ಜೊತೆಗೆ ಪರಸ್ಪರ ಸಹಾಯ ಸಹಕಾರದಿಂದ ಉತ್ತಮ ಜೀವನ ನಡೆಸಲು ಸಾಧ್ಯವಿದೆ. ಅದಕ್ಕಾಗಿ ‘ಸಹಕಾರ’ ಬೇಕು ಎಂದು ಬರಗಾಲ ಅಧ್ಯಯನ ಆಯೋಗ ತನ್ನ ವರದಿಯಲ್ಲಿ ತಿಳಿಸಿತು.

ಬರಗಾಲ ಅಧ್ಯಯನ ಆಯೋಗದ ಈ ವರದಿ ಅಧಾರದ ಮೇಲೆ ಬ್ರಿಟಿಷ ಸರ್ಕಾರವು ರೈತರಿಗೆ ಅನುಕೂಲವಾಗುವಂತಹ ಆರ್ಥಿಕ ಸ್ವಾವಲಂಬನೆಗೆ ಪ್ರೇರೇಪಿಸಲು ೧೯೦೪ರಲ್ಲಿ ‘ಇಂಡಿಯನ್ ಕೋ ಆಪರೇಟಿವ್ ಸೊಸೈಟಿಜ್ ಆಕ್ಟ’ ನ್ನು ಜಾರಿಗೆ ತಂದಿತು. ಈ ಕಾಯ್ದೆಗೆ ಅಂದಿನ ಮುಂಬೈ ರೆಸಿಡೆನ್ಸಿ ಶಾಸನ ಸಭೆಯಲ್ಲಿ ೨೫.೩.೧೯೦೪ರಂದು ಗೊತ್ತುವಳಿ ಸ್ವೀಕರಿಸಿ ಅವರನ್ನು ರೆಜಿಸ್ಟ್ರಾರ್ ಆಗಿ ನೇಮಿಸಿತು.

ಸರ್ ಜೇಮ್ಸ್ ಮೆಕ್ಯನಿಯಲ್ ಅವರು ಈ ಸಹಕಾರಿ ಕಾಯ್ದೆಯ ಪ್ರಥಮ ರೆಜಿಸ್ಟ್ರಾರ್ ಆಗಿ ಈ ಕಾಯ್ದೆಯ ಕೃಷಿ ಪತ್ತಿನ ಸಹಕಾರಿ ಸಂಘಗಳನ್ನು ಸ್ಥಾಪಿಸಲು ದೇಶದ ತುಂಬ ಪ್ರವಾಸ ಮಾಡಿ ಜನರಿಗೆ ಇಂತಹ ಸಂಘ ಸ್ಥಾಪನೆ ಮಾಡಲು ಮನವಿ ಮಾಡಿದರು. ಅಷ್ಟೆ ಅಲ್ಲದೆ ಜನರಿಗೆ ಈ ಸಂಘ ಸ್ಥಾಪಿಸಲು ಪ್ರೇರೇಪಿಸಿದರು. ಇದಕ್ಕೆ ಎಲ್ಲಿಯೂ ಸ್ಪಂದನೆ ಸಿಗದೇ ಈ ಕಾಯ್ದೆ ಜಾರಿಯಾಗುವ ಲಕ್ಷಣಗಳು ಕಾಣದ್ದರಿಂದ ಸರ್.ಜೆ. ಮೆಕ್ಯಾನಿಯಲ್‌ರು ನಿರಾಶೆಗೊಂಡರು.

ಆದರೆ, ಸರ್ ಜೇಮ್ಸ ಮೆಕ್ಯಾನಿಯಲ್ ಅವರು ನಿರಾಶೆಯಿಂದ ತಮ್ಮ ಛಲ ಕೈ ಬಿಡದೇ ಆಗಿನ ಮೈಸೂರು ರಾಜ್ಯದ ಅದರಲ್ಲಿಯೂ ಉತ್ತರ ಮುಂಬಯಿ ಪ್ರಾಂತದ ಇಂಗ್ರೇಜಿ ಸ್ಥಳಕ್ಕೆ ಬಂದರು. ಆ ಸಂದರ್ಭದಲ್ಲಿ ಧಾರವಾಡದಲ್ಲಿದ್ದ ಕಲೆಕ್ಟರ್ ಎಂ.ಸಿ. ಗಿಬ್ಸ್ ಅವರು ಕೆಲವು ತಿಂಗಳುಗಳ ಕಾಲ ಬೇರೆ ಕೆಲಸಕ್ಕೆ ತೆರಳಿದ್ದರಿಂದ ಬ್ರಿಟಿಷ ಸರ್ಕಾರವು ಸರ್ ಜೇಮ್ಸ್ ಮೆಕ್ಯಾನಿಯಲ್ ಅವರಿಗೆ ಧಾರವಾಡ ಜಿಲ್ಲೆಯ ಆಕ್ಟಿಂಗ್ ಕಲೆಕ್ಟರ ಹುದ್ದೆಯ ಪ್ರಭಾರವನ್ನು ವಹಿಸಲಾಗಿತ್ತು.

ಈ ಸಂದರ್ಭದಲ್ಲಿ ಸರ್ ಜೇಮ್ಸ್ ಮೆಕ್ಯಾನಿಯಲ್ ಅವರಿಗೆ ಕಣಗಿನಹಾಳದ ಶಿದ್ಧನಗೌಡ ಪಾಟೀಲರ ಪರಿಚಯವಾಗಿ ೧೯೦೫ರಲ್ಲಿ ಮೇ ೮ರಂದು ದೇಶದ ಮೊದಲ ಸಹಕಾರಿ ಸಂಘದ ನೋಂದಣಿ ಆಯಿತು. ಇದು ಏಷಿಯಾ ಖಂಡದ ಮೊದಲ ಸಹಕಾರಿ ಸಂಘ ಕೂಡಾ ಹೌದು.

ಏಷಿಯಾ ಖಂಡದ ಮೊದಲ ಸಹಕಾರಿ ಸಂಘದ ಸ್ಥಾಪನೆಯ ಹಿನ್ನಲೆ ಹಾಗೂ ಕರ್ತೃ ಶಿದ್ಧನಗೌಡರು

ದೇಶದ ಮೊದಲ ಸಹಕಾರಿ ಸಂಘ ಸ್ಥಾಪನೆಯಾಗಿದ್ದು ನಾವು ಬ್ರಿಟಷರಿಂದ ಸ್ವಾತಂತ್ರ್ಯಗೊಳ್ಳುವುದಕ್ಕಿಂತ ೪೨ ವಸಂತಗಳಿಗಿಂತ ಮೊದಲು ಎನ್ನುವುದು ಇಲ್ಲಿ ಅತ್ಯಂತ ಮಹತ್ವದ ಸಂಗತಿ. ಅದು ಅಲ್ಲದೇ ಈ ಸಂಘದ ಸ್ಥಾಪನೆ ಮಾಡುವಾಗ ಬ್ರಿಟಿಷ್ ಅಧಿಕಾರಿಗಳಿಗೆ ಷರತ್ತು ಹಾಕಿ ತಮ್ಮ ಗ್ರಾಮಕ್ಕೆ ಕುಡಿಯುವ ನೀರಿನ ವ್ಯವಸ್ಥೆಯೊಂದಿಗೆ ಗ್ರಾಮಕ್ಕೆ ರೈಲ್ವೆ ನಿಲ್ದಾಣ ಮಾಡಿಸಿಕೊಂಡ ಶಿದ್ದನಗೌಡರು, ನಮ್ಮ ಎದುರಲ್ಲಿ ಯಾವ ಸ್ವಾತಂತ್ಯ್ರ ಹೋರಾಟಗಾರನಿಗೂ ಕಡಿಮೆ ಅಲ್ಲ ಎನ್ನುವಂತೆ ಶಕ್ತಿಯುತ ವ್ಯಕ್ತಿಯಾಗಿ ನಿಲ್ಲುತ್ತಾರೆಂದರೆ ತಪ್ಪಲ್ಲ.

ಅಂದು ಅವರು ಕೊಟ್ಟ ಸಹಕಾರಿ ಚಳುವಳಿ ಇಂದು ದೇಶದಾದ್ಯಂತ ಹಲವು ರೀತಿಯಲ್ಲಿ ಹರಡುವ ಮೂಲಕ ರಾಜ್ಯ ಸರ್ಕಾರದ ಸಚಿವ ಸಂಪುಟದಲ್ಲಿ ಇದಕ್ಕೊಬ್ಬ ಸಂಪುಟ ದರ್ಜೆ ಸಚಿವರನ್ನು ನೇಮಕ ಮಾಡುವಷ್ಟರ ಮಟ್ಟಿಗೆ ಈ ಕ್ಷೇತ್ರ ಬೆಳೆಯಲು ಸಾಧ್ಯವಾಗಿದೆ. ಅಲ್ಲದೇ ಈ ಕ್ಷೇತ್ರ ಇಂದು ಲಕ್ಷ ಲಕ್ಷ ಕೈಗಳಿಗೆ ಕೆಲಸ ನೀಡುವ ಮೂಲಕ ಕೋಟಿಗಟ್ಟಲೆ ಕುಟುಂಬಗಳಿಗೆ ಅನ್ನವನ್ನು ನೀಡುತ್ತಿದೆ.

ಕಣಗಿನಹಾಳದ ದೊಡ್ಡ ಜಮೀನುದಾರ ಆಗಿದ್ದ ಶಿದ್ದನಗೌಡರು ತಮ್ಮ ಗ್ರಾಮದ ಅನೇಕ ಕೆಲಸಗಳಿಗಾಗಿ ತಾಲೂಕಾ ಮತ್ತು ಜಿಲ್ಲಾ ಕಛೇರಿಗಳಿಗೆ ಸಂಚರಿಸುತ್ತಿದ್ದರು. ಇಂತಹ ಸಂಚಾರದಲ್ಲಿ ಶಿದ್ದನಗೌಡರು ದೇಶದ ಮೊದಲ ಸಹಕಾರ ಕಾಯ್ದೆಯ ಪ್ರಥಮ ರೆಜಿಸ್ಟ್ರಾರ್ ಆಗಿದ್ದ ಸರ್ ಜೇಮ್ಸ್ ಮೆಕ್ಯಾನಿಯಲ್ ಅವರು ಧಾರವಾಡ ಜಿಲ್ಲೆಯ acting ಕಲೆಕ್ಟರ್ ಆಗಿ ಬಂದಿದ್ದರು. ಹೊಸ ಕಲೆಕ್ಟರ ಬಂದಿದ್ದಾರೆ ಅವರನ್ನು ಕಂಡು ಮಾತನಾಡಿಸುವ ಮೂಲಕ ಗ್ರಾಮದ ಕುಡಿಯುವ ನೀರು ಮತ್ತು ಇನ್ನಿತರ ಕೆಲಸಕ್ಕಾಗಿ ವಿಚಾರಿಸಿದರಾಯಿತು ಎಂದು ಶಿದ್ದನಗೌಡರು ಹೊಸ ಕಲೆಕ್ಟರ ಮೆಕ್ಯಾನಿಯಲ್ ರನ್ನು ಬೇಟಿ ಮಾಡಿದರು.

ಈ ಭೇಟಿಯಿಂದ ಸರ್ ಜೇಮ್ಸ ಮೆಕ್ಯಾನಿಯಲ್ ಅವರು ಶಿದ್ಧನಗೌಡರಿಗೆ ಗ್ರಾಮದ ಬಗ್ಗೆ ಇರುವ ಕಳಕಳಿ, ಅವರ ವ್ಯಕ್ತಿತ್ವ ಕಂಡು ಒಳಗೊಳಗೆ ಸಂತಸಪಟ್ಟುಕೊಂಡು ಒಂದು ವರ್ಷದಿಂದ ತಾಮು ರೆಜಿಸ್ಟ್ರಾರ್ ಆಗಿ ನೇಮಕವಾಗಿದ್ದ ಸಹಕಾರಿ ಕಾಯ್ದೆಗೆ ನ್ಯಾಯ ಒದಗಿಸುವಲ್ಲಿ ವಿಫಲರಾಗಿದ್ದರ ನೋವು-ನಿರಾಶೆಗಳಿಂದ ಹೊರಬರಲು ಈ  ವ್ಯಕ್ತಿ ಸಹಾಯ ಮಾಡಬಲ್ಲ ಎಂಬ ಅದಮ್ಯ ನಂಬಿಕೆ ಬಂದಿತು.

ನಂತರ ಶಿದ್ಧನಗೌಡರನ್ನು ತಮ್ಮ ಆಪ್ತ ಕೊಠಡಿಗೆ ಕರೆದುಕೊಂಡು ಹೋಗಿ ತಮ್ಮ ಪಕ್ಕದಲ್ಲಿ ಕೂಡಿಸಿಕೊಂಡ ಜೇಮ್ಸ ಮೆಕ್ಯಾನಿಯಲ್ ಅವರು ಕುಶಲೋಪರಿ ವಿಚಾರ ಮಾಡುತ್ತಾ ಮಾತಿಗೆ ಇಳಿದಿದ್ದನ್ನು ಕಂಡು ಕಛೇರಿ ಸಿಬ್ಬಂದಿಗೆ ಆಶ್ಚರ್ಯವಾಗಿತ್ತು. ಚಹಾ-ಪಳಾರದ ನಂತರ ಕಲೆಕ್ಟರ್ ಅವರು ಶಿದ್ಧನಗೌಡರೊಂದಿಗೆ ಮಾತು ಮುಂದುವರೆಸಿ,

‘ಗೌಡ್ರೆ ನಾವು-ನೀವು ಎಷ್ಟು ದಿವಸ ಬದುಕಿ ಇರೋವ್ರು, ಅದ್ಕ ಇದ್ದ ಕಾಲದಾಗ ಜನಕ್ಕ ಉಪಯೋಗವಾಗುವಂತಹ ಕೆಲಸ್ ಮಾಡೋಣ’.

ಇದಕ್ಕೆ ಗೌಡ್ರು ‘ಸಾಹೇಬ್ರ ನೀವು ಹೇಳೊ ಮಾತು ಬರೊಬ್ಬರಿ ಐತೀ, ಅದ್ಕ ಏನು ಕೆಲಸ ಮಾಡೋಣಂತೀರಿ ಹೇಳ್ರಿ’.

‘ನೀವು ನಿಮ್ಮ ಹಳ್ಳಿಯಲ್ಲಿ ಯಾಕ ಒಂದು ಸಹಕಾರಿ ಸಂಘ ಮಾಡಬಾರದು’, ಎಂದರು ಕಲೆಕ್ಟರ್.

ಇದಕ್ಕೆ ಉತ್ತರವಾಗಿ ಶಿದ್ಧನಗೌಡರು ‘ನನಗೂ ಸಹಕಾರಿ ತತ್ವದ ಮೇಲೆ ಅಪಾರ ನಂಬಿಕೆ ಇದೆ. ನಿಮ್ಮ ಕೆಲಸ ಅಂದರೆ ನಮ್ಮ ಕೆಲಸಮೇ ಅದನ್ನು ಮಾಡುವುದು ನನ್ನ ಕೆಲಸ ಆದರೆ ನೀವು ನನ್ನ ಕೆಲಸ ಮಾಡಿಕೊಡಬೇಕು’ ಎಂದರು.

ಇದಕ್ಕೆ ಜೇಮ್ಸ ಮೆಕ್ಯಾನಿಯಲ್ ಅವರು ನಿಮ್ಮ ಕೆಲಸಗಳನ್ನು ಮಾಡುತ್ತೇನೆ. ನೀವು ಸಂಘ ಸ್ಥಾಪನೆ ಮಾಡಲು ಮುಂದಾಗಿ ಎಂದು ಹೇಳಿದರು.

ಸರ್. ಜೆ. ಮೆಕ್ಯಾನಿಯಲ್‌ರ ಮಾತಿನಂತೆ ಸಹಕಾರ ಸಂಘ ಸ್ಥಾಪಿಸುವ ಮೂಲಕ ಸಾಕಷ್ಟು ಕೆಲಸಗಳನ್ನು ಗ್ರಾಮಕ್ಕೆ ತೆಗೆದುಕೊಳ್ಳಲು ಇದೇ ಸಕಾಲವೆಂದುಕೊಂದ ಶಿದ್ಧನಗೌಡರಿಗೆ ಗ್ರಾಮದ ಅಭಿವೃದ್ಧಿಯಾಗಲು ಗ್ರಾಮೀಣ ಅನುಭಾವಿಗಳು ಹೇಳುವಂತೆ ‘ಊರಾಗ ಹೊಳಿ ಹಾದಿರಬೇಕು, ಇಲ್ಲಾ ಹಳಿ ಹಾದಿರಬೇಕು’, ಎನ್ನುವ ಮಾತು ಮನದಲ್ಲಿ ಮತ್ತೆ ಮತ್ತೆ ಗುನಗುನಸಿತ್ತು.

ಏಕೆಂದರೆ ಆ ಕಾಲದಲ್ಲಿ (ಈ ಕಾಲದಲ್ಲಿ ಕೂಡಾ) ಕಣಗಿನಹಾಳ ಗ್ರಾಮಕ್ಕೆ ಹೊಳಿ ತರಲು ಸಾಧ್ಯವಿರಲಿಲ್ಲ. ಆದ್ದರಿಂದ ಗ್ರಾಮದ ಪಕ್ಕದಲ್ಲಿಯೇ ಹಾದು ಹೋಗಿದ್ದ ಗದಗ-ಗುಂತಕಲ್ ರೈಲ್ವೆ ಮಾರ್ಗವನ್ನು ದಿನವು ಕಾಣುತ್ತಿದ್ದ ಶಿದ್ದನಗೌಡರಿಗೆ ಹಳಿ ತರುವ ತವಕದ ಕನಸು ಬೇರೂರಿತ್ತು. ಬೇರೂರಿದ ಕನಸಿಗಾಗಿ ಶಿದ್ಧನಗೌಡರು ಕರಗುತ್ತ ಕರುಗುತ್ತ ತಮ್ಮ ಕನಸು ನನಸು ಮಾಡುವ ಸಮಯಕ್ಕಾಗಿ ಎದುರು ನೋಡುತ್ತಿರುವಾಗಲೆ ಸರ್. ಜೆ. ಮೆಕ್ಯಾನಿಯಲ್‌ ಅವರು ಸಹಕಾರಿ ಸಂಘ  ಸ್ಥಾಪನೆಯ ಪ್ರಸ್ತಾವನೆ ಇಟ್ಟಿದ್ದರು. ಒಟ್ಟಿನಲ್ಲಿ ಸಹಕಾರಿ ಸಂಘದ ಸ್ಥಾಪನೆಯ ಮೊಳಕೆಯೊಡೆದಿದ್ದು ಧಾರವಾಡದ ಕಲೆಕ್ಟರ ಕಛೇರಿಯಲ್ಲಿ ಎಂದರೆ ತಪ್ಪಾಗಲಾರದು.

ಈ ಸಂದರ್ಭದಲ್ಲಿ ಶಿದ್ಧನಗೌಡರು ಸರ್. ಜೆ. ಮೆಕ್ಯಾನಿಯಲ್ ಅವರೊಂದಿಗೆ ಚರ್ಚೆ ಮಾಡುತ್ತಾ ಸಂಘ ಸ್ಥಾಪನೆ ಮಾಡುವ ಭರವಸೆಯನ್ನು ನೀಡುವ ಮೂಲಕ ಗ್ರಾಮಕ್ಕೆ ಕುಡಿಯುವ ನೀರಿಗಾಗಿ ವ್ಯವಸ್ಥೆಯಾಗಬೇಕು ಮತ್ತು ಗ್ರಾಮದ ಪಕ್ಕದಲ್ಲಿಯೇ ಗದಗ-ಗುಂತಕಲ್ ರೈಲ್ವೆ ಮಾರ್ಗ ಹಾದು ಹೋಗಿದ್ದು ಕಣಗಿನಹಾಳ ಗ್ರಾಮಕ್ಕೆ ರೈಲ್ವೆ ಸ್ಟೇಷನ್ ಮಾಡಿಕೊಡಬೇಕು ಎಂಬ ಷರತ್ತಿನ ಕೆಲಸಗಳನ್ನು ಸರ್. ಜೆ. ಮೆಕ್ಯಾನಿಯಲ್ ಮುಂದಿಟ್ಟರು.

ಶಿದ್ಧನಗೌಡರ ಕರಾರುಗಳ ಹಿನ್ನಲೆಯಲ್ಲಿ ಸರ್. ಜೆ. ಮೆಕ್ಯಾನಿಯಲ್ ಅವರು ಧಾರವಾಡದಿಂದ ಗದಗಗೆ ಬಂದರು. ಆದರೆ ಅಂದಿನ ದಿನಗಳಲ್ಲಿ ಗದಗಿನಿಂದ ಕಣಗಿನಹಾಳಕ್ಕೆ ವಾಹನದ ಸೌಕರ್ಯ ಇರದ್ದರಿಂದ ಆಗಿನ ಕಾಲಕ್ಕೆ ಗದಗನ ಆಗರ್ಭ ಶ್ರೀಮಂತರಾದ ರಾವ್ ಸಾಹೇಬ ಮಲ್ಲೇಶಪ್ಪ ಮಾನ್ವಿ ಇವರ ಕುದುರೆ ಗಾಡಿಯಲ್ಲಿ (ಸಾರೋಟ) ಕಣಗಿನಹಾಳ ಗ್ರಾಮಕ್ಕೆ ಬಂದು ಬೇಟಿ ನೀಡಿ ಅಲ್ಲಿನ ನೀರಿನ ವ್ಯವಸ್ಥೆಗಾಗಿ ಮಾಡಬೇಕಾದ ಕೆಲಸ ಮತ್ತು ರೈಲ್ವೆ ನಿಲ್ದಾಣದ ಕೆಲಸದ ಬಗ್ಗೆ ಚರ್ಚಿಸಿದರು. ಇದರೊಂದಿಗೆ ಗ್ರಾಮದಲ್ಲಿ ಸಿದ್ಧನಗೌಡರು ಸೇರಿಸಿದ್ದ ಪ್ರಮುಖರ ಜೊತೆಗೆ ಸಂಘದ ಸ್ಥಾಪನೆಯ ಬಗ್ಗೆ ಮಾತನಾಡಿ ಮರಳಿದರು.

ಸರ್. ಜೆ. ಮೆಕ್ಯಾನಿಯಲ್ ಅವರು ಕಣಗಿನಹಾಳ ಗ್ರಾಮಕ್ಕೆ ಬಂದು ಹೋದ ನಂತರ ಶಿದ್ಧನಗೌಡರನ್ನು ಧಾರವಾಡಕ್ಕೆ ಕರೆಯಿಸಿಕೊಂಡು ನಿಮ್ಮ ಕರಾರುಗಳನ್ನು ಮಾಡಿಕೊಡುತ್ತೇನೆ. ನೀವು ಸಂಘದ ಸ್ಥಾಪನೆಗೆ ಸಿದ್ಧತೆ ಮಾಡಿಕೊಳ್ಳುವಂತೆ ತಿಳಿಸಿದರು. ಹರ್ಷಗೊಂಡ ಶಿದ್ಧನಗೌಡರು ಊರಿಗೆ ಮರಳಿ ಬಂದು ಸರ್. ಜೆ. ಮೆಕ್ಯಾನಿಯಲ್ ಅವರು ತಿಳಿಸಿದ ವಿಚಾರವನ್ನು ಗ್ರಾಮಸ್ಥರೊಂದಿಗೆ ಮಾತನಾಡಿ ಕೃಷಿ ಪತ್ತಿನ ಸಹಕಾರಿ ಸಂಘದ ಸಿದ್ಧತೆ ಮಾಡಿಕೊಂಡರು.

ಆದರೆ ನೀರಿನ ಬಾವಿ ಕಡಿಸುವುದು ಎಲ್ಲಿ ಮತ್ತು ರೈಲ್ವೆ ನಿಲ್ದಾಣಕ್ಕೆ ಜಮೀನು ನೀಡುವವರ್ಯಾರು ಎಂಬ ಪ್ರಶ್ನೆ ಬಂದಾಗ ಜಮೀನು ಕೊಡಲು ಯಾರೂ ಮುಂದಾಗದಾದಾಗ ಶಿದ್ಧನಗೌಡರು ಇದಕ್ಕೆ ಯಾರು ಚಿಂತಿಸುವ ಅಗತ್ಯವಿಲ್ಲ. ಊರಿನಲ್ಲಿ ಬಾವಿ ತೆಗೆಸುವುದರೊಂದಿಗೆ ನಮ್ಮ ಜಮೀನಿನಲ್ಲಿಯೇ ರೈಲ್ವೆ ನಿಲ್ದಾಣಕ್ಕೆ ಜಮೀನನ್ನು ನೀಡುವುದಾಗಿ ಹೇಳಿ ಗ್ರಾಮದ ಅಭಿವೃದ್ಧಿಗಾಗಿ ತಮ್ಮ ದೊಡ್ಡತನ ಮೆರೆದ ಊರವರಿಂದ ಮೆಚ್ಚುಗೆ ಪಡೆದುಕೊಂಡರು.

ಸರ್. ಜೆ. ಮೆಕ್ಯಾನಿಯಲ್ ಅವರಿಗೆ ಮಾತು ಕೊಟ್ಟಂತೆ ಕಣಗಿನಹಾಳದಲ್ಲಿ ಕೃಷಿ ಸಹಕಾರಿ ಪತ್ತಿನ ಸಂಘವನ್ನು ಸ್ಥಾಪಿಸುವುದಕ್ಕಾಗಿ

೧.  ಶ್ರೀ ಬಾಳಪ್ಪ ಬಿನ್ ಅಡಿವೆಪ್ಪ ಒಂಕಲಕುಂಟೆ

೨.  ಶ್ರೀ ಅಂದಾನಯ್ಯ ಗಂಗಯ್ಯ ವಸ್ತ್ರದ

೩.  ಶ್ರೀ ಫಕೀರಪ್ಪ ಬಿನ್ ಫರಪ್ಪಾ ಗೊಡಚಿ

೪.  ಶ್ರೀ ಬಸಪ್ಪ ಬಿನ್ ಲಿಂಗಪ್ಪ ಹನಸಿ

೫.  ಶ್ರೀ ಫಕೀರಪ್ಪ ಗುಂಡಪ್ಪ ಅಸುಂಡಿ

೬.  ಶ್ರೀ ಬಸಯ್ಯ ವೀರಯ್ಯ ಓದಿಸುಮಠ

೭.  ಶ್ರೀ ಪ್ರಬಂಣ ಬಿನ್ ಬಸಪ್ಪ ಚಿಂದಿಪಾಟಿ

೮.  ಶ್ರೀ ಶಿವನಗೌಡ ಪರಮೇಶ್ವರಗೌಡ ಪಾಟೀಲ

೯.  ಶ್ರೀ ಮರಿರಾಚಯ್ಯ ಪುರಾಂತಯ್ಯ ಹಿರೇಮಠ

೧೦.ಶ್ರೀ ಗೂಳಪ್ಪ ರಾಮಪ್ಪ ಮಲಕಶೆಟ್ಟಿ

೧೧. ಶ್ರೀ ಗುರುನಾಥ ರಾಘವೇಂದ್ರ ಕುಲಕರ್ಣಿ

೧೨. ಶ್ರೀ ಅಲ್ಲಮಪ್ಪ ಬಸಪ್ಪ ಅಣೀಗೇರಿ

ಈ ೧೨ ಜನರೊಂದಿಗೆ ಶ್ರೀ ಸರ್. ಜೆ. ಮೆಕ್ಯಾನಿಯಲ್‌ರವರು ಸೂಚಿಸಿದ ಪ್ರಕಾರ ಹಾಗೂ ಅವರಿಗೆ ಕೊಟ್ಟ ಆಶ್ವಾಸನೆಯಂತೆ ಆಗಿನ ಕಾಲಕ್ಕೆ ಅಂದರೆ ೧೦೩ (೨೦೦೮ ಕ್ಕೆ) ವರ್ಷಗಳ ಹಿಂದೆ ಈ ಮೇಲ್ಕಾಣಿಸಿದ ೧೨ ಜನರಿಂದ ಎರಡು ಸಾವಿರ ರೂಪಾಯಿಗಳನ್ನು ಸಂಗ್ರಹಿಸಿ ಪ್ರಾಥಮಿಕ ಶೇರು ಅಥವಾ ಠೇವು ಅಂತಾ ಸಂಗ್ರಹಿಸಿ ಸಂಘದ ಸ್ಥಾಪನೆಯನ್ನು ಮಾಡಿಕೊಡಬೇಕು ಎಂದು ಶಿದ್ಧನಗೌಡರು ವಿನಂತಿಸಿಕೊಂಡರು.

ಶಿದ್ಧನಗೌಡರ ಕೆಲಸವನ್ನು ಮೆಚ್ಚಿದ ಸರ್. ಜೆ. ಮೆಕ್ಯಾನಿಯಲ್ ಅವರು ಧಾರವಾಡದಿಂದ ಮತ್ತೆ ಗದಗಿಗೆ ಬಂದು ಗದುಗಿನಿಂದ ಕಣಗಿನಹಾಳ ಗ್ರಾಮಕ್ಕೆ ಶ್ರೀ ರಾವ್ ಸಾಹೇಬ್ ಮಲ್ಲೇಶಪ್ಪ ಮಾನ್ವಿ ಅವರ ಕುದುರೆ ಬಂಡಿಯಲ್ಲಿ (ನಾಲ್ಕು ಕುದುರೆಗಳುಳ್ಳ ವಾಹನ) ಕಣಗಿನಹಾಳ ಗ್ರಾಮಕ್ಕೆ ಬಂದರು. ಕಲೆಕ್ಟರ ಅವರ ಮೊದಲ ಆಗಮನದ ಬಗೆ ಜನರಿಗೆ ಗೊತ್ತಿರಲಿಲ್ಲ. ಆದರೆ ಎರಡನೇ ಬರುವಿಕೆ ಗೊತ್ತಿದ್ದರಿಂದ ಆಂಗ್ಲ ಅಧಿಕಾರಿ ಜೇಮ್ಸ ಮೆಕ್ಯಾನಿಯಲ್ ಅವರನ್ನು ನೋಡಲು ಕಣಗಿನಹಾಳ ಗ್ರಾಮವಲ್ಲದೇ ಸುತ್ತಲೂ ಹಳ್ಳಿಯ ಜನ ಜಮಾಯಿಸಿತ್ತು.

ಕಲೆಕ್ಟರ್ ಸಾಹೇಬರು ಗಾಡಿ ಇಳಿದು ಸಾರ್ವಜನಿಕರಿಗೆ ತಮ್ಮ ದರ್ಶನ ನೀಡಿದವರೇ ನೇರವಾಗಿ ಗೌಡರೆ ಮನೆಯ ವಿಶಾಲವಾದ ಪಡಸಾಲೆಯಲ್ಲಿ ಆಸೀನರಾಗಿ ಗೌಡರ ಆತಿಥ್ಯವನ್ನು ಸ್ವೀಕರಿಸಿ ಶಿದ್ಧನಗೌಡರ ಕರಾರು ಮತ್ತು ಪ್ರಯತ್ನದ ಫಲ ಎಂಬಂತೆ ದಿನಾಂಕ ೬-೫-೧೯೦೫ ರ ಶನಿವಾರ ದಿವಸ ಬಾವಿ ತೊಡುವ ಗುದ್ದಲಿ ಪೂಜೆಯನ್ನು ನೇರವೇರಿಸಿ ಗ್ರಾಮದಲ್ಲಿಯೇ ವಾಸ್ತವ್ಯ ಮಾಡಿದರು.

ಮಾರನೇ ದಿವಸ ಅಂದರೆ ಮೇ ೭. ರಂದು ರೈಲ್ವೆ ನಿಲ್ದಾಣದ ಸ್ಥಾಪನೆಯನ್ನು ಶಿದ್ಧನಗೌಡ ಸ್ವಂತ ಜಮೀನಿನಲ್ಲಿ ನೇರವೇರಿಸಿದರು. ಈ ಎರಡು ಕಾರ್ಯಕ್ರಮಗಳನ್ನು ಮುಗಿಸಿ ಕಣಗಿನಹಾಳ ಗ್ರಾಮದಲ್ಲಿಯೇ ವಾಸ್ತವ್ಯ ಹೂಡಿದ ಸರ್.ಜೆ. ಮೆಕ್ಯಾನಿಯಲ್ ಅವರು ಗ್ರಾಮದ ಪ್ರತಿಯೊಂದು ಸಂಘಟನೆಗಳ ಅಂಗ ರಚನೆಯನ್ನು ತಿಳಿದುಕೊಂಡರು. ಜೇಮ್ಸ ಮೆಕ್ಯಾನಿಯಲ್ ಅವರು ಗ್ರಾಮಸ್ಥರೊಂದಿಗೆ ತಮ್ಮ ಉನ್ನತ ಅಧಿಕಾರದ ಹಮ್ಮು-ಬಿಮ್ಮುಗಳನ್ನು ಬಿಟ್ಟು ಮುಕ್ತಮನಸ್ಸಿನಿಂದ ಬೆರೆತುಕೊಂಡಿದ್ದರು.

ನಂತರ ಶಿದ್ಧನಗೌಡರ ಪರಿಶ್ರಮ ಹಾಗೂ ಪ್ರಯತ್ನದೊಂದಿಗೆ ಗ್ರಾಮದ ಹಿರಿಯರ ಉತ್ಸಾಹ ಭರಿತ ಪ್ರೋತ್ಸಾಹವನ್ನು ಮೆಚ್ಚಿದ ಸರ್. ಜೆ. ಮೆಕ್ಯಾನಿಯಲ್‌ರವರು ದಿನಾಂಕ ೮-೫-೧೯೦೫ನೇ ಸೋಮವಾರ ದಿವಸ ಮುಂಜಾನೆ ೯-೦೫ ಘಂಟೆಗೆ ಕಣಗಿನಹಾಳ ಕೃಷಿ ಪತ್ತಿನ ಸಹಕಾರ ಸಂಘವನ್ನು ಭಾರತದಲ್ಲಿಯೇ ಪ್ರಪ್ರಥಮವಾಗಿ ನೋಂದಾಯಿಸಿಕೊಟ್ಟರು. ಈ ಸಂಘದ ನೋಂದಣಿ ಸಂಖ್ಯೆ ನಂಬರ ೧. ದಿ.೮-೫-೧೯೦೫ ಎಂದು ನಮೂದಾಯಿತು. ಈ ಸಂಘದ ಮೊದಲ ಅಧ್ಯಕ್ಷರಾಗಿ ಶಿವನಗೌಡರ ನೇಮಕವಾಯಿತು.

ಏಷಿಯಾ ಖಂಡದ (ದೇಶದ) ಪ್ರಥಮ ಸಹಕಾರಿ ಸಂಘ ಎಂದು ಕರೆಯಿಸಿಕೊಂಡ ಕಣಗಿನಹಾಳ ಕೃಷಿ ಸಹಕಾರಿ ಪತ್ತಿನ ಸಂಘಕ್ಕೆ ಸಹಕಾರಿ ಕಾಯ್ದೆಯ ಪ್ರಥಮ ರೆಜಿಸ್ಟ್ರಾರ ಹಾಗೂ ಆಗಿನ ಧಾರವಾಡದ ಆಕ್ಟಿಂಗ್ ಕಲೆಕ್ಟರ್ ಆಗಿದ್ದ ಸರ್. ಜೆ. ಮೆಕ್ಯಾನಿಯಲ್‌ರವರು ಶುಭ ಹಾರೈಸಿ, ಒಂದು ಕಡೆ ಭಾವಿ ಹಾಗೂ ಇನ್ನೊಂದು ಕಡೆ ರೈಲ್ವೆ ನಿಲ್ದಾಣದ ಕೆಲಸ ಪ್ರಾರಂಭ ಮಾಡಿಸಿ ಸಂತೋಷದಿಂದ ಧಾರವಾಡಕ್ಕೆ ಮರಳಿದರು.

ಅಂದು ಕಣಗಿನಹಾಳದ ಸಹಕಾರ ಸಂಘ ನೊಂದಣಿಯಾಗುವ ಮೂಲಕ ದೇಶದಲ್ಲಿ ಸಹಕಾರಿ ಕಾಯ್ದೆ ಜಾರಿಗೆ ನಾಂದಿ ಹಾಡಿತು. ಇದರಿಂದ ಶಿದ್ಧನಗೌಡರು ಅಂದಿನ ಬ್ರಿಟಿಷ್‌ ಆಡಳಿತದಲ್ಲಿ ಊರಿಗೆ ಪ್ರಮುಖವಾದ ಕೆಲಸಗಳನ್ನು ಮಾಡಿಕೊಳ್ಳುವ ಮೂಲದ ದೇಶದ ಮೊದಲ ಸಹಕಾರಿಯಾಗುವ ಮೂಲದ ಸಹಕಾರಿ ಕಾಯ್ದೆ ದೇಶದ ತುಂಬ ಹರಡುವಲ್ಲಿ ಮತ್ತು ದೇಶದಲ್ಲಿ ಸಹಕಾರಿ ಚಳುವಳಿ ಆರಂಭವಾಗುವಲ್ಲಿ ಕಾರಣವಾಯಿತು.

ಸಾಹುಕಾರರ ಬಡ್ಡಿ ಹಾವಳಿ ಜಾಸ್ತಿ ಇತ್ತು

ಶಿದ್ಧನಗೌಡರು ಸಹಕಾರ ಸಂಘ ಸ್ಥಾಪಿಸಿದ ಸಂದರ್ಭದಲ್ಲಿ ಸಾಹುಕಾರರ ಬಡ್ಡಿ ಹಾವಳಿ ಜಾಸ್ತಿಯಾಗಿತ್ತು. ಏಕೆಂದರೆ ಸಾಕಷ್ಟು ಹಣವಂತರು ತಮ್ಮಲ್ಲಿದ್ದ ಹಣವನ್ನು ಬಡವರಿಗೆ ಮತ್ತು ರೈತರಿಗೆ ಬಡ್ಡಿ ರೂಪದಲ್ಲಿ ನೀಡಿ ಬಡವರು ಹಾಗೂ ರೈತ ಸಮುದಾಯವನ್ನು ಶೋಷಣೆ ಮಾಡುತ್ತಿದ್ದ ಕಾಲವದು. ಹೀಗಾಗಿ ಇಂತಹ ಸಹಕಾರಿ ಸಂಘಗಳು ಜಾರಿಗೆ ಬಂದರೆ ಬಡವರು ಹಾಗೂ ರೈತರು ಆರ್ಥಿಕವಾಗಿ ಸದೃಢವಾಗುವ ಮೂಲಕ ತಮ್ಮ ಬಡ್ಡಿ ವ್ಯವಹಾರಗಳಿಗೆ ಕಡಿವಾಣ ಬೀಳುತ್ತದೆ ಎಂದುಕೊಂಡು ವ್ಯವಸ್ಥಿತವಾಗಿ ಸಹಕಾರ ಸಂಘ ಮಾಡುವಲ್ಲಿ ಹಿಂದೇಟು ಹಾಕಿದ್ದರು.

ಆದರೆ, ತಾವು ಕೂಡ ಶ್ರೀಮಂತರಾಗಿ, ದಲಾಲಿ ಅಂಗಡಿಯ ಮಾಲೀಕರಾಗಿದ್ದ ಶಿದ್ದನಗೌಡರಿಗೆ ಗ್ರಾಮವನ್ನು ಅಭಿವೃದ್ಧಿ ಮಾಡುವ ಗ್ರಾಮದ ಎಲ್ಲರನ್ನು ಉದ್ಧರಿಸುವ ಮಹತ್ವಕಾಂಕ್ಷೆಯೊಂದಿಗೆ ಕಣಗಿನಹಾಳ ಗ್ರಾಮವು ಮಾದರಿಯಾಗುವ ಮೂಲಕ ನಾಡಿನ ಜನತೆಗೆ ಏನನ್ನಾದರೂ ಕೊಡಬೇಕು ಎಂಬ ಮಹತ್ತರವಾದ ಉದ್ದೇಶದೊಂದಿಗೆ ಶ್ರೀಮಂತರು ಬಡ್ಡಿ ರೂಪದಲ್ಲಿ ಜನರನ್ನ ಹೀರುತ್ತಿದ್ದುದನ್ನು ತಪ್ಪಿಸುವ ಲೆಕ್ಕಾಚಾರದಲ್ಲಿ ಮೊದಲ ಸಹಕಾರಿ ಸಂಘದ ಸ್ಥಾಪನೆಗೆ ಮುಂದಾದರು ಎಂಬುದು ಅತ್ಯಂತ ಮಹತ್ವದ ಸಂಗತಿ.

ಇಂತಹ ಬಡ್ಡಿ ವ್ಯವಹಾರದ ಕಾಲದಲ್ಲಿ ಸಂಘ ಸ್ಥಾಪಿಸಿದ ಶಿದ್ಧನಗೌಡರನ್ನು ಸಾಕಷ್ಟು ಶ್ರೀಮಂತರು ಗದಗ ನಗರಕ್ಕೆ ಬಂದಾಗ ಪರೋಕ್ಷವಾಗಿ ನಿಂದಿಸುತ್ತಿದ್ದರು. ಅಲ್ಲದೇ ಬೇರೆಯವರನ್ನು ಹಚ್ಚಿ ಬಯಿಸುವ ಕೆಲಸವನ್ನು ಮಾಡಿದರಂತೆ. ಒಂದು ದಿನ ಈ ಬೇಗಳಗಳನ್ನು ಕೇಳಿದ ಶಿದ್ಧನಗೌಡರ ಪತ್ನಿ ಸಕ್ರಮ್ಮನವರು ‘ಯಾಕ ಬೇಕಾಗಿತ್ತು ನಿಮ್ಗ ಸಹಕಾರಿ ಸಂಘ ಮಾಡೋದು, ಹಿಂಗ ಮಂದಿ ಕಡೀಂದ ಬೈಯಿಸಿಕೊಳ್ಳಾಕನು’ ಅಂತ ಮನನೊಂದು ಹೇಳಿದಾಗ ‘ನೋಡು ನಾನು ಮಾಡಿದ ಸಹಕಾರಿ ಸಂಘದ ಸಲುವಾಗಿ ಎಷ್ಟು ಜನಾ, ಎಷ್ಟು ಬೇಗಳಾ ಬೈತಾರಲ್ಲ ಅಷ್ಟ ಲಕ್ಷ ಜನ್ರ ಉದ್ಧಾರ ಆಕ್ಕೈತಿ’ ಎಂದು ಹೇಳುವ ಮೂಲಕ ಶಿದ್ಧನಗೌಡರು ತಮ್ಮ ಪತ್ನಿ ಸಕ್ರಮ್ಮರನ್ನು ಸಮಾಧಾನ ಮಾಡಿದ್ದರು.

ಅಂದು ಪತ್ನಿ ಸಮಾಧಾನ ಮಾಡಲು ಹೇಳಿದ ಶಿದ್ಧನಗೌಡರ ಮಾತು ಇಂದು ಸತ್ಯವಾಗಿ ನಮ್ಮ ಕಣ್ಣ ಮುಂದಿದೆ. ಏಕೆಂದರೆ ಇಂದು ದೇಶದಲ್ಲಿ ೫ ಲಕ್ಷ ೫೦ ಸಾವಿರ ಸಹಕಾರಿ ಸಂಘಗಳು ಇದ್ದು, ೨೦ ಕೋಟಿ ೪೦ ಲಕ್ಷ ಸದಸ್ಯರಿದ್ದಾರೆ. ಇನ್ನು ರಾಜ್ಯದಲ್ಲಿ ೩೩.೩೯೪ ಸಹಕಾರಿ ಸಂಘಗಳಿದ್ದು, ೨ ಲಕ್ಷ ೯ ಸಾವಿರ ಸದಸ್ಯರಿದ್ದಾರೆ. ಅಂದರೆ ಅಂದು ಶಿವನಗೌಡರನ್ನು ಎಷ್ಟು ಜನ ಬೈದಿದ್ದಾರೆಯೋ ಅವರೆಲ್ಲ ಹರಕೆಯ ಫಲವಾಗಿ ಇಂದು ಲಕ್ಷಾಂತರ ಸಂಘಗಳ ಮೂಲಕ ಕೋಟ್ಯಾಂತರ ಜನರಿಗೆ ಸಹಕಾರಿಯಾದ ಸಹಕಾರವು ದೇಶದ ಅವಿಭಾಜ್ಯ ಅಂಗವಾಗಿ ಕೆಲಸ ಮಾಡುತ್ತಿದೆ ಎಂದು ಹೇಳಿದರೆ ತಪ್ಪಾಗಲಿಕ್ಕಿಲ್ಲ. ಏಕೆಂದರೆ ಹಿಂದೆ ಹಣ ನೀಡಿ ಬೈಸಿಕೊಳ್ಳುತ್ತಿದ್ದರಂತೆ ಅಂದರೆ ಬೈಗುಳಕ್ಕೆ ಅಷ್ಟು ಮಹತ್ವವಿದೆ ಎಂಬುದು ಶಿದ್ಧನಗೌಡರು ಹೇಳಿದ ಮಾತಿನ ಮೂಲಕ ಮತ್ತೊಮ್ಮೆ ಸಾಬೀತಾಗಿದೆ.

ಹೀಗಾಗಿ ಹಾಲುಮತದ ಮಹಾನ್ ನಾಯಕ ಮತ್ತು ದೇಶದ ಸಹಕಾರಿ ಪಿತಾಮಹ, ಮೂಲಪುರುಷ, ಯುಗಪುರುಷ, ಸಹಕಾರಿ ಪ್ರವರ್ತಕ ಎಂದೆಲ್ಲ ಕರೆಯುವ ಶಿದ್ಧನಗೌಡ ಪಾಟೀಲರನ್ನು ಸ್ಮರಿಸಿಕೊಳ್ಳುವ ಅಗತ್ಯವಿದೆ. ಅಲ್ಲದೆ ಅವರಿಗೆ ಸಲ್ಲಬೇಕಾದ ಗೌರವ ಕೂಡಾ ಅಗತ್ಯವಿದೆ.