ಕುರಿಗಾರರು ಭೂಮಿಯನ್ನೆ ಹಾಸಿಗೆಯನ್ನಾಗಿ, ಆಕಾಶವನ್ನೆ ಹೊದಿಕೆಯನ್ನಾಗಿಸಿಕೊಂಡು ಪೂರ್ವಕಾಲದಿಂದಲೂ ನಿಸರ್ಗದ ಕ್ರಿಯೆಗಳೊಂದಿಗೆ ಕ್ರಿಯಾಶೀಲರಾಗಿ ತಮ್ಮ ಬದುಕನ್ನು ಸಾಗಿಸಿಕೊಂಡು ಅದನ್ನೇ ತಮ್ಮ ಜ್ಞಾನದ ತೆರೆದ ಗ್ರಂಥವೆಂದು ಭಾವಿಸಿ: ಅದನ್ನೆ ನಂಬಿಕೊಂಡು ತಮ್ಮ ಬದುಕನ್ನು ಸಾಗಿಸಿಕೊಂಡು ಬಂದಿರುವಂತವರು. ನೀರು, ಬೆಂಕಿ, ವಾಯು, ಭೂಮಿ ಮತ್ತು ಆಕಾಶಗಳ ರಹಸ್ಯವನ್ನು ತಮ್ಮ ಅನುಭವದ ಆಳದಿಂದ ಕಂಡುಕೊಳ್ಳಲು ಪ್ರಯತ್ನಿಸಿದವರು. ಈ ಪ್ರಯತ್ನ ಇಂದು ನಾಳೆಯದಲ್ಲ. ಅಜ್ಜಾ ಆರು ತಲೆ; ಮುತ್ಯಾಮೂರು ತಲೆಮಾರುಗಳ ಪ್ರಯತ್ನದ ಫಲವಾಗಿ ‘ಕುರುಬರ ರಟ್ಟಮತಶಾಸ್ತ್ರ’ ಎಂಬ ಗ್ರಂಥ ಹೊರಹೊಮ್ಮಿತ್ತು. ಈ ಗ್ರಂಥದಲ್ಲಿ ಬರುವ ಪ್ರತಿಯೊಂದು ವಿಷಯಗಳು ಜನಮಾನಸದಲ್ಲಿ ಹಾಸುಹೊಕ್ಕಾಗಿ ಗ್ರಂಥ ಬಹುಜನಪ್ರಿಯತೆಯನ್ನು ಪಡೆಯಿತು. ಇಲ್ಲಿ ಬರುವ ಪ್ರತಿಯೊಂದು ಹೇಳಿಕೆಗಳು ಭವಿಷ್ಯವಾಣಿಗಳಾಗಿ ಮೂಡಿಬಂದಿರುವುದನ್ನು ಗಮನಿಸಿದರೆ ಇದೊಂದು ಕಾಲಜ್ಞಾನವನ್ನು ಹೇಳುವ ಮೂಲ ಗ್ರಂಥ ಎಂಬುದು ಸ್ಪಷ್ಟವಾಗುತ್ತದೆ. ಈ ಮೂಲಗ್ರಂಥದಲ್ಲಿರಲಾರದ ಕೆಲವೊಂದು ವಿಷಯಗಳೂ ಕುರಿಗಾರರಲ್ಲಿರುವುದು ಕಂಡುಬಂದುದರಿಂದ ಅಂಥ ವಿಷಯಗಳನ್ನು ಅನುಭವಿ ಕುರುಗಾರರಿಂದ ಸಂಗ್ರಹಿಸಿ ಲೇಖನವನ್ನು ಸಿದ್ಧಪಡಿಸಲು ಪ್ರಯತ್ನಿಸಿದ್ದೇನೆ.

ಕುರಿಗಾರರು ಸಾಮಾನ್ಯರಲ್ಲ. ಭವಿಷ್ಯವಾಣಿಗಳನ್ನು ನುಡಿದ ಮೊದಲನೆಯ ಕಾಲಜ್ಞಾನಿಗಳೆನಿಸಿಕೊಳ್ಳುತ್ತಾರೆ. ಬೆಟ್ಟದ ಮೇಲೆ ನಿಂತು ಕಂಬಳಿಯನ್ನು ಬೀಸಿ ಮಳೆಗೆರೆದವರು, ರಾತ್ರಿಯ ವೇಳೆಯಲ್ಲಿ ಆಕಾಶದಲ್ಲಿ ಕಾಣುವ ನಕ್ಷ್ರತ್ರ ರಾಶಿ ಮುಂತಾದ ಆಕಾಶಕಾಯಗಳನ್ನು ಗುರುತಿಸಿ ಅವುಗಳಿಗೆ ಒಂದೊಂದು ಹೆಸರುಗಳನ್ನಿಟ್ಟು ಅವುಗಳಿಂದಾಗುವ ಪರಿಣಾಮಗಳನ್ನು: ಆಯಾ ದಿಕ್ಕಿನಿಂದ ಬೀಸುವ ಗಾಳಿಗಳ ವಸ್ತುಸ್ಥಿತಿಯುನ್ನು ಅರಿತು ಅವುಗಳಿಗೆ ವಿವಿಧ ಹೆಸರುಗಳನ್ನು ಕೊಟ್ಟು ಅವುಗಳ ಫಲಾಫಲಗಳನ್ನು ಆಯಾ ಮಳೆಗಳಿಗೆ ಅವುಗಳ ಸ್ವಭಾವಕ್ಕೆ ತಕ್ಕಂತೆ ಆಯಾ ನಕ್ಷತ್ರಗಳ ಹೆಸರನ್ನಿಟ್ಟು ಅವುಗಳ ಬರುವಿಕೆಯನ್ನು, ಬಾರದಿರುವಿಕೆಯನ್ನು ಹೀಗೆ ಹತ್ತು ಹಲವಾರು ವಿಷಯಗಳ ಕುರಿತಾಗಿ ನಿಖರವಾಗಿ ಹೇಳುವ ಕುರಿಗಾರರ ಹೇಳಿಕೆಯನ್ನು ತರ್ಕದಿಂದ ನೋಡಿದಾಗ ಒಬ್ಬ ಸಾಮಾನ್ಯ ಅನುಭವಿ ಕುರಿಗಾರ ಕಾಲಜ್ಞಾನಿಯಂತೆ ಕಂಡುಬರುತ್ತಾನೆ.

ನಿಸರ್ಗದ ಸಹಜ ಕ್ರಿಯೆಗಳಿಗೆ ಹೊಂದಿಕೊಂಡು ತನ್ನ ಕುರಿಗಳೊಂದಿಗೆ ಭೂ ಪ್ರದೇಶವನ್ನು ತಿರುಗುವ ಕುರಿಗಾರನಿಗೆ ಯಾವ ಯಾವ ಪ್ರದೇಶಗಳಲ್ಲಿ, ಪರ್ವತ, ಗುಡ್ಡ-ಗಂವರಗಳು, ಕಾಡು ಮರಡಿಗಳಿವೆ, ಅವುಗಳಿಗೆ ಹೊಂದಿಕೊಂಡಿರುವ ನದಿಗಳ, ಹಳ್ಳ-ಕೊಳ್ಳಗಳ, ಝರಿಗಳ, ಕೆರೆಗಳ, ಸರೋವರಗಳ ತಿಳುವಳಿಕೆ, ಯಾವ ಯಾವ ಪ್ರದೇಶಗಳಲ್ಲಿ ಯಾವ ಯಾವ ಮಳೆ ಎಷ್ಟು ಪ್ರಮಾಣದಲ್ಲಿ ಬೀಳುತ್ತದೆ. ಎಲ್ಲೆಲ್ಲಿ ಯಾವ ಯಾವ ಬೆಳೆಗಳನ್ನು ಬೆಳೆಯುತ್ತಾರೆ, ಯಾವ ಋತುಮಾನಗಳಲ್ಲಿ ಯಾವ ಗಾಳಿಗಳು ಯಾವ ದಿಕ್ಕಿನಿಂದ ಬೀಸುತ್ತವೆ. ಅಮವಾಸ್ಯೆ-ಹುಣ್ಣಿಮೆಗಳ ಪರಿಣಾಮವೇನು? ಹೇಗೆ ಹತ್ತು ಹಲವಾರು ವಿಷಯಗಳನ್ನು ಬಲ್ಲವನಾದ ಅನುಭವಿ ಕುರಿಗಾರ ಭೂಗೋಳಶಾಸ್ತ್ರಜ್ಞನಂತೆ ನಮಗೆ ಕಾಣುತ್ತಾನೆ.

ಅಡವಿ, ಮರಡಿ, ವಿಶಾಲವಾದ ಗಿರಿಪರ್ವತಗಳಲ್ಲಿ ಬೆಳೆದು ನಿಂತ ಪ್ರತಿಯೊಂದು ಗಿಡ-ಮರ-ಬಳ್ಳಿಗಳ ಹೆಸರುಗಳೊಂದಿಗೆ ಅವುಗಳ ತೊಗಟೆ, ಎಲೆ ಹೂವು-ಕಾಯಿ-ಬೇರು ಮುಂತಾದವುಗಳ ಸಹಾಯದಿಂದ ಅವುಗಳಲ್ಲಿರುವ ಔಷಧಿಯ ಗುಣವೆಂತಹುದು, ಆಯಾ ಗಿಡಮರಬಳ್ಳಿಗಳ ಔಷಧವನ್ನು ಸಿದ್ಧಪಡಿಸಿ ತನಗೆ ತನ್ನ ಪರಿಪಾರದವರಿಗೆ ಹಾಗೂ ಕುರುಗಳಿಗೆ ಯಾವ ಔಷಧವನ್ನು ಯಾವ ತೋಗಕ್ಕೆ ಯಾವ ಪ್ರಮಾಣದಲ್ಲಿ ಕೊಡಬೇಕು, ಯಾವ ಗಿಡ ಮರಬಳ್ಳಿಗಳು ಯಾವ ಯಾವ ಋತುಮಾನಗಳಲ್ಲಿ ಬಿಗಿತು ಹೂವು ಕಾಯಿಗಳನ್ನು ಬಿಡುತ್ತವೆ. ಅವು ಯಾವ ಯಾವ ಪ್ರದೇಶಗಳಲ್ಲಿ ಹುಲುಸಾಗಿ ಬೆಳೆಯುತ್ತವೆ ಯಾವ ಪ್ರದೇಶದಲ್ಲಿ ಏಕೆ ಬೆಳೆಯುವುದಿಲ್ಲ. ಯಾವ ಮರದ ಬಳ್ಳಿಯ ಹಣ್ಣುಗಳನ್ನು ಮನುಷ್ಯ ತಿನ್ನಬೇಕು. ಯಾವುದನ್ನು ತಿನ್ನಬಾರದು ಏಕೆ? ಆಯಾ ಹಣ್ಣಿನ ಬೀಜಗಳನ್ನು ಏಕೆ ತಿನ್ನಬೇಕು? ಏಕೆ ತಿನ್ನಬಾರದು? ಒಂದು ವೇಳೆ ತಿನ್ನುವುದಾದರೆ ಎಷ್ಟು ಪ್ರಮಾಣ ತಿನ್ನಬೇಕು, ಹೆಚ್ಚು ತಿಂದರೆ ಅದರಿಂದಾಗುವ ಪರಿಣಾಮವೇನು? ಯಾವ ಯಾವ ಗಿಡಮರ ಬಳ್ಳಿಗಳು ಬೀಜ ಇಲ್ಲದೆ ದೇಟಿನಿಂದ ಹುಟ್ಟಿ ಬೆಳೆಯುತ್ತವೆ. ಬೆಳೆದ ಗಿಡಗಳನ್ನು ತನ್ನ ಕುರಿಗಳಿಗಾಗಿ ಎಷ್ಟು ಪ್ರಮಾಣದಲ್ಲಿ ಕಡಿದರೆ ಅದು ಎಷ್ಟು ಬೇಗ ಚಿಗಿಯುತ್ತದೆ. ಹೀಗೆ ಗಿಡ-ಮರ-ಬಳ್ಳಿಗಳ ಬಗೆಗಿರುವ ಅವನ ಜ್ಞಾನವನ್ನು ನೋಡಿದರೆ ಅವನೊಬ್ಬ ಸಸ್ಯಶಾಸ್ತ್ರಜ್ಞನೆನಿಸುತ್ತಾನೆ.

ಆಯಾ ಪಕ್ಷಿ-ಪ್ರಾಣಿ-ಕ್ರಿಮಿ-ಕೀಟಗಳ ಸ್ವಭಾವಕ್ಕನುಗುಣವಾಗಿ ಅವುಗಳಿಗೆ ಹೆಸರುಗಳನ್ನಿತ್ತು ಯಾವ ಕ್ರಿಮಿ-ಕೀಟಗಳು ಯಾವ ಗಿಡ-ಮರ-ಬಳ್ಳಿಗಳನ್ನು ಆಶ್ರಯಿಸಿ ಬದುಕುತ್ತವೆ. ಯಾವ ಪಕ್ಷಿಗಳು ಯಾವ ಗಿಡ-ಮರ-ಪೂದೆಗಳನ್ನು ನಂಬಿ ಆಶ್ರಯಿಸುತ್ತವೆ. ಯಾವ ಋತುಮಾನಗಳಲ್ಲಿ ಅವು ತಮ್ಮ ಸಂತಾನಾಭಿವೃದ್ಧಿಯನ್ನು ಮಾಡಿಕೊಳ್ಳುತ್ತವೆ. ಯಾವ ಯಾವ ಪಕ್ಷಿಗಳು ಯಾವ ಸ್ಥಳದಲ್ಲಿ ಯಾವ ಮರಗಳನ್ನು ಎಲ್ಲಿ ಗೂಡುಗಳನ್ನು ಕಟ್ಟುತ್ತವೆ. ಯಾವ ಪಕ್ಷಿಗಳು ಯಾವ ತೆರನಾದ ಗೂಡುಗಳನ್ನು ಕಟ್ಟುತ್ತವೆ. ಯಾವ ಪ್ರದೇಶದಲ್ಲಿ ಎಂಥ ಪಕ್ಷಿಗಳು ಸಿಕ್ಕುತ್ತವೆ. ಅವು ಯಾವ ಕಾಲದಲ್ಲಿ ಎಂಥ ಪ್ರದೇಶಕ್ಕೆ ವಲಸೆ ಹೋಗುತ್ತವೆ. ಅವುಗಳ ಧ್ವನಿ ಎಂಥದು. ಕಾಡು ಪ್ರಾಣಿಗಳು ವಾಸಿಸುವ ಸ್ಥಳ ಯಾವುದು? ಅವು ಬೇಟೆಯಾಡುವ ರೀತಿ, ಧ್ವನಿ ಎಂಥದು. ಅವುಗಳ ಸಂತಾನ ಪಡೆಯುವ ಋತುಮಾನ, ಅವುಗಳನ್ನು ಯಾವ ಆಯುಧವಿಲ್ಲದೆ ಹೇಗೆ ಹೆದರಿಸುವುದು. ಅವು ಎಂಥ ಧ್ವನಿ ತೆಗೆದು ಒದರಿದರೆ ಹೆದರಿ ಓಡುತ್ತವೆ ಎಂಬ ಜ್ಞಾನವುಳ್ಳ ಕುರಿಗಾರ ಪ್ರಾಣಿಶಾಸ್ತ್ರಜ್ಞನಂತೆ ಕಂಡು ಬರುತ್ತಾನೆ. ಹೀಗೆ ಹಲವಾರು ಶಾಸ್ತ್ರಗಳ ಪರಿಕಲ್ಪನೆಗಳುಳ್ಳ ಕುರಿಗಾರರು ನಮಗೆ ಸಾಮಾನ್ಯನಂತೆ ಕಂಡು ಬಂದರೂ ಅವನಲ್ಲಿರುವ ಅನುಭವದ ಕಲಿಕೆಯ ಜ್ಞಾನ ಅತೀತವಾದುದು.

ನಾವು ದಿನನಿತ್ಯ, ಬಳಸುವ ವಸ್ತುಸಾಮಗ್ರಿಗಳು, ಆಚರಣೆಯ ವಿಧಾನಗಳು; ಚರಾಚರ ಜೀವರಾಶಿಗಳ ಹಾಗೂ ಮುಂತಾದವುಗಳ ಹೆಸರುಗಳು ದೇಶದ ವಿವಿಧ ಪ್ರದೇಶಗಳಲ್ಲಿ ಬೇರೆ ಬೇರೆಯಾಗಿದ್ದರೂ ಅವುಗಳ ಅರ್ಥ, ವಿಧಾನ ತುಸು ಬೇರೆಯಾಗಿದ್ದರೂ ಅದರ ವಿಸ್ತೃತ ಅರ್ಥದಲ್ಲಿ ಒಂದೇ ಎನಿಸುತ್ತದೆ. ಹಾಗಾದರೆ ಈ ಹೆಸರುಗಳನ್ನು ಹಾಗೂ ಆಚರಣೆಯ ವಿಧಾನಗಳನ್ನು ಮೂಲತಃ ಕೊಟ್ಟವರು ಯಾರು? ಎಂದು ಪ್ರಶ್ನಿಸಿದಾಗ ನಮಗೆ ಸಿಗುವ ಉತ್ತರ ‘ಅದು ರೂಡಿಯಿಂದ ಬಂದಿದೆ’ ಎಂದು ಸಮಾಧಾನಪಟ್ಟುಕೊಳ್ಳುತ್ತೇವೆ. ಆದರೆ ಇದು ನಿಖರವಾದ ಉತ್ತರವೆನಿಸುವುದಿಲ್ಲ. ಪ್ರಾಚೀನ ಕಾಲದಿಂದಲೂ ಯಾವುದೋ ಒಂದು ಜನಸಮುದಾಯ ಇವುಗಳಿಗೆ ಹೆಸರುಗಳನ್ನು ಇತ್ತು ತನ್ನ ಆಚರಣೆಯ ವಿಧಾನಗಳನ್ನು ಕಂಡುಕೊಂಡು ಅದನ್ನೆ ತಲೆತಲಾಂತರದವರೆಗೂ ಮುಂದುವರೆಸಿಕೊಂಡು ಬಂದಿರಲೇಬೇಕು ಎಂಬುದನ್ನು ತರ್ಕಿಸುತ್ತಾ ಹೋದಂತೆ ನಮಗೆ ಸಿಗುವ ಉತ್ತರ ಇಷ್ಟೆ. ದೇಶದ ನಾಗರಿಕತೆ ಪ್ರಾರಂಭವಾದುದು ಪಶುಪಾಲನೆಯಿಂದ. ಈ ಪಶುಪಾಲಕರೆ ಈ ರೂಢಿ ಎಂಬುದಕ್ಕೆ ಮೂಲವಾಗಿರಲೂಬಹುದು. ಅವರ ಪ್ರತಿಫಲದಿಂದ ಮೂಡಿ ಬಂದ ಈ ರೂಢಿಗಳೆ ಇಂದಿನ ಭವ್ಯ ಸಂಸ್ಕೃತಿಯಾಗಿ ಆಧಾರ ಸ್ತಂಭಗಳಾಗಿ ನಿಂತಿವೆ. ಕೆಲವು ಸಲ ಈ ರೂಢಿಗಳೇ ಹೇಳಿಕೆಗಳಾಗಿ; ಹೇಳಿಕೆಗಳೇ ಕಾರಣಿಕಗಳಾಗಿ; ಈ ಕಾರಣೀಕಗಳೆ ಕಾಲಜ್ಞಾನದ ಮಾತುಗಳಾಗಿ ಹೊರಹೊಮ್ಮಿರಲೂಬಹುದು.

ನಿಸರ್ಗದ ಪ್ರತಿಯೊಂದು ಕ್ರಿಯೆಗಳಲ್ಲಿ ಕ್ರಿಯಾಶೀಲರಾದ ಪಶುಪಲಕರು ಕುರಿಗಾರರು ನಾಗರಿಕತೆಯ ವಿಕಾಸಕ್ಕೆ ಕಾರಣಕರ್ತರಾದವರು. ಹೀಗಾಗಿ ಪಂಚಮಹಭೂತಗಳ ರಹಸ್ಯವನ್ನು ಕಂಡುಕೊಳ್ಳುವಲ್ಲಿ ಯಶಸ್ವಿಯಾದವರು. ಇದಕ್ಕೆ ನಿದರ್ಶನವಾಗಿ ಈ ಜನಪದ ಕತೆಯನ್ನು ನೋಡಬಹುದು. ಒಮ್ಮೆ ಕುರಿಗಾರನೊಬ್ಬ ಹಳ್ಳದಲ್ಲಿ ದಡ್ಡಿಯನ್ನು ಹಾಕಿಕೊಂಡು ತನ್ನೆಲ್ಲ ಕುರಿಗಳನ್ನು ಅಲ್ಲಿ ತರಬುತ್ತಿದ್ದ. ಅದನ್ನು ಕಂಡು ಪಾರ್ವತಿ-ಪರಮೇಶ್ವರರು ಅಲ್ಲಿಗೆ ಬಂದು “ಮಳೆ ಬಂದು ಹಳ್ಳ ತುಂಬಿ ನೀರು ಹರಿದರೆ ನಿನ್ನ ಕುರಿಗಳು ಕೊಚ್ಚಿಕೊಂಡು ಹೋಗುವುದಿಲ್ಲವೆ?” ಎಂದು ಕೇಳಿದರು. ಆಗ ಅವನು “ಇನ್ನು ಮೂರು ತಿಂಗಳು ಮಳೆ ಬರುವುದಿಲ್ಲ” ಎಂದು ದೃಢವಾಗಿ ಹೇಳುತ್ತಾನೆ. ಆಗ ಅವರು ಇವನ ಮಾತನ್ನು ಸುಳ್ಳು ಮಾಡಬೇಕೆಂದು ವರುಣನಲ್ಲಿಗೆ ಬಂದು ಮಳೆ ಸುರಿಯುವಂತೆ ಮಾಡಲು ಹೇಳುತ್ತಾರೆ. ಅದಕ್ಕೆ ವರುಣ “ಮಳೆರಾಯ ಬೇರೆ ಲೋಕಕ್ಕೆ ಹೋಗಿದ್ದಾನೆ. ಮಳೆ ಸುರಿಸುವುದು ಸಾಧ್ಯವಿಲ್ಲ” ಎನ್ನುತ್ತಾನೆ. ಇತ್ತ ಕುರಿಗಾರ ಮೂರು ತಿಂಗಳ ನಂತರ ಹಳ್ಳದಲ್ಲಿರುವ ದಡ್ಡಿಯನ್ನು ಕಿತ್ತು ಹಳ್ಳದ ದಂಡಿಯ ಮೇಲೆ ಹಾಕಿರುತ್ತಾನೆ. ಅದನ್ನು ಕಂಡು ಶಿವ-ಪಾರ್ವತಿಯರು ಬಂದು “ಹಳ್ಳದಲ್ಲಿರುವ ದಡ್ಡಿಯನ್ನು ಕಿತ್ತು ಹಳ್ಳದ ದಂಡಿಯ ಮೇಲೆ ಹಾಕಿರುವೆಯಲ್ಲ ಏಕೆ?” ಎಂದು ಕೇಳುತ್ತಾರೆ. ಅದಕ್ಕೆ ಕುರಿಗಾರ “ಈವತ್ತು ತಪ್ಪದೆ ಮಳೆ ಸುರಿಯುತ್ತದೆ ಅದಕ್ಕೆ” ಎನ್ನುತ್ತಾನೆ. ಇವನ ಮಾತನ್ನು ಸುಳ್ಳು ಮಾಡಬೇಕೆಂದು ಶಿವ-ಪಾರ್ವತಿಯರು ವರುಣನಲ್ಲಿಗೆ ಬಂದು “ಈವತ್ತು ಮಳೆಯಾಗದಂತೆ ಮಾಡು” ಎಂದು ಹೇಳಿದಾಗ ವರುಣ “ಈಗಾಗಲೇ ಮಳೆರಾಯ ತನ್ನ ಪರಿವಾರ ಸಮೇತ ಅಲ್ಲಿಗೆ ಹೋಗಿರುವುದರಿಂದ ಅದನ್ನು ತಡೆಯಲು ಸಾಧ್ಯವಿಲ್ಲ” ಎನ್ನುತ್ತಾನೆ. ಹೀಗೆ ಮಳೆ ಬರುವ ಹಾಗೂ ಬಾರದಿರುವ ಬಗ್ಗೆ ಜ್ಞಾನವನ್ನು ನಮ್ಮ ಕುರಿಗಾರರು ದೃಢವಾಗಿ ತಿಳಿದುಕೊಂಡಿದ್ದಾರೆ ಎಂಬುದು ಈ ಕತೆಯಿಂದ ತಿಳಿದು ಬರುತ್ತದೆ. ಇದಷ್ಟೆ ಅಲ್ಲ ಪ್ರಕೃತಿಯ ಮಕ್ಕಳಾದ ಕುರಿಗಾರರು ಭೂಮಿ, ಗಾಳಿ, ಆಕಾಶ, ಗ್ರಹ ನಕ್ಷತ್ರಗಳ ಬಗೆಗೆ ನಿಖರವಾದ ಅನುಭವವುಳ್ಳವರಾಗಿದ್ದಾರೆ. ಅಂದರೆ ಶತಶತಮಾನಗಳಿಂದ ಪ್ರಕೃತಿ ಕ್ರಿಯೆಗಳಿಗೆ ಮೈಯೊಡ್ಡಿ ಅವುಗಳನ್ನು ಅನುಭವಿಸಿ ಅವುಗಳನ್ನು ಒರೆಗೆ ಹಚ್ಚಿ ನಿಖರತೆಯನ್ನು ಕಂಡುಕೊಂಡು ತಲೆಮಾರಿನಿಂದ ತಲಮಾರಿಗೆ ಹೇಳಿಕೆಗಳ ರೂಪದಲ್ಲಿ ಹೇಳುತ್ತ ಬಂದವರು ಕುರಿಗಾರರು ಮಾತ್ರ. ಆದ್ದರಿಂದಲೆ ಹೊಲ-ಮರಡಿಗಳಲ್ಲಿ ಕುರಿಕಾಯುವ ಕುರುಬರನ್ನು ಕಂಡು ಇತರರು “ಏನ್ ಪಾ… ಕುರುಬಗೌಡಾ ಮಳಿ ಯಾವಾಗ ಬರತತಿ? ಮಳಿ ಬರು ಸೂಚನೆಗಳೇನಾರಾ ಕಂಡಾವೇನು?” ಎಂದು ಕೇಳುತ್ತಾರೆ. ಏಕೆಂದರೆ ಕುರಿಗಾರರ ಹೇಳಿಕೆಗಳು ನಿಜವಾಗುತ್ತವೆ ಎಂಬ ಬಲವಾದ ನಂಬಿಕೆ ಜನರಲ್ಲಿ ಮನೆಮಾಡಿಕೊಂಡಿದೆ.

ನಮ್ಮ ಒಟ್ಟು ಮಳೆಗಳಲ್ಲಿ ಮೊದಲಿನ ಹನ್ನೊಂದು ಮಳೆಗಳನ್ನು ಮುಂಗಾರಿ ಮಳೆಗಳೆಂದು, ಹಿಕ್ಕಟ್ಟಿನ ಆರು ಮಳೆಗಳನ್ನು ಹಿಂಗಾರಿ ಮಳೆಗಳೆಂದು ಕರೆಯುವುದುಂಟು. ಯುಗಾದಿಯ ನಂತರ ಮಳೆಗಳು ಪ್ರಾರಂಭಗೊಳ್ಳುತ್ತವೆ. ಆದರೆ ಹೋಳಿ ಹುಣ್ಣಿಮೆಯು ಆದ ದಿನವೆ ‘ಕಾಮಣ್ಣನ ಕಣ್ಣೀರು’ ಎನ್ನುವಂತೆ ಒಂದೊಂದು ಸೆಳಕು ಮಳೆ ಸುರಿದು ಮಳೆಗಾಲಕ್ಕೆ ನಾಂದಿ ಹಾಡುತ್ತವೆ. ಹೀಗೆ ಆರಂಭಗೊಳ್ಳುವ ಮೊದಲನೆಯ ಮಳೆಯೇ ಅಶ್ವಿನಿ. ಈ ಮಳೆಯು ಕೂಡುವಾಗ ಆದರೆ ಮುಂದಿನ ಆರು ಮಳೆಯನ್ನು; ಅರಗಳೆದು ಹೋಗುವಾಗ ಆದರೆ ಮುಂದಿನ ಮೂರು ಮಳೆಗಳನ್ನು ಕಳೆಯುತ್ತವೆ. ಈ ಮಳೆಯು ಯಾವ ವರ್ಷ ಆಗುತ್ತದೆಯೋ ಆ ವರ್ಷ ಬರಗಾಲ ಬಿತ್ತೆಂದು ತಿಳಿಯಬೇಕು. ಆದ್ದರಿಂದ “ಅಶ್ವಿನಿ ಮಳೆಯಾದರೆ ಶಿಶುವಿಗೆ ನೀರಿಲ್ಲ” ಎಂಬ ಹೇಳಿಕೆಯೂ ಇದೆ. ಆದರೆ ಈ ಮಳೆಯು ನಡುಚರಣದಲ್ಲಿ ಆದರೆ ಕೆಡಕಿಲ್ಲ. ಈ ಮಳೆಯ ತದನಂತರದಲ್ಲಿ ಬರುವ ಭರಣಿಮಳೆಯು ಶುಭಕರವಾದುದು. ಇದು ಸುರಿಯುವುದರಿಂದ ಬೇಸಿಗೆಯ ಬಿಸಿಲಿನಿಂದ ಕಾದ ಭೂಮಿಯು ತಂಪಾಗಿ ತಳಹಸಿ ಉಳಿಯುತ್ತದೆ. ಹೀಗಾಗಿ ರೈತರು ಯಾವುದೇ ಪೈರನ್ನು ಬಿತ್ತಿ ಬೆಳೆಯಬಹುದು. ಆದ್ದರಿಂದ ಈ ಮಳೆಯ ಕುರಿತಾಗಿ “ಭರಣಿ ಬಾಯಿ ತುಂತ ಬಂಗಾರ” ಎಂಬ ಹೇಳಿಕೆ ಇದೆ. ಕೃತ್ತಿಕಾ ಸಾಮಾನ್ಯ ಮಳೆಯಾದರೂ ಈ ಮಳೆ ಸುರಿಯುವುದರಿಂದ ಕೀಳು (ಗೆಜ್ಜಿ) ಶೇಂಗಾ ಸಮೃದ್ಧವಾಗಿ ಬೆಳೆಯುತ್ತವೆ. ಅಲ್ಲದೆ ಇತರ ಪೈರುಗಳಿಗೆ ಯಾವ ರೋಗರುಜಿನಗಳು ಬರುವುದಿಲ್ಲ. ಆದರೆ ಇದು ಆಗುವುದು ತೀರ ಕಡಿವೆ. ಮುಂಗಾರು ಮಳೆಗಳಲ್ಲಿಯೇ ಅತಿ ಪ್ರಮುಖವಾದುದು ಎಂದರೆ ರೋಹಿಣಿ ಮಳೆ. ಈ ಮಳೆಯ ಕುರಿತಾಗಿ “ರೋಹಿಣಿ ಮಳೆಯಾದರೆ ಓಣೆಲ್ಲ ಜ್ವಾಳ (ಜೋಳ)’ ಎಂಬ ಹೇಳಿಕೆ ಇದೆ. ಈ ಮಳೆಯು ಸುರಿಯುವುದರಿಂದ ರೈತರು ಸುಖಸಂತೋಷದಿಂದ ಇರುತ್ತಾರೆ. ಏಕೆಂದರೆ ಈ ಮಳೆಯ ಆಗಮನದ ವೇಳೆಯಲ್ಲಿ ಮುಂಗಾರಿನ ಪೈರುಗಳು ಮಳಮಳುದ್ದ ಬೆಳೆದು ನಿಂತಿರುತ್ತವೆ. ಅದೇ ವೇಳೆಯಲ್ಲಿ ನಮ್ಮ ರೈತರು ಎಡಿ ಹೊಡೆದು ಕಸವನ್ನು ತೆಗೆದು ಹಾಕಿರುತ್ತಾರೆ. ಅಲ್ಲದೆ ಈ ಮಳೆಯ ತಲೆಯನ್ನು ನೋಡಿಕೊಂಡು ನವಣಿ, ಬರಗ, ಸಜ್ಜಿ ಮುಂತಾದವುಗಳನ್ನು ಬಿತ್ತಲು ಪ್ರಾರಂಭಿಸುತ್ತಾರೆ. ಅಲ್ಲದೆ ಹೊಲದ ಬದುಗಳಲ್ಲಿ, ಮರಡಿಗಳಲ್ಲಿ ತರತರದ ಮುಂಗಾರಿ ಪೀಕುಗಳು ಸರಿಯಾಗಿ ಬೆಳೆಯುವುದಿಲ್ಲ. ಜೋಡು ಮಳೆಗಳಾದ ಮೃಗಶಿರಾ ಮತ್ತು ಆರಿದ್ರಾ ಮಳೆಗಳು ಒಂದು ಆದರೆ ಮತ್ತೊಂದು ಆಗುವುದಿಲ್ಲ. ಕೆಲವೊಮ್ಮೆ ಎರಡೂ ಮಳೆಗಳು ಎಡೆಬಿಡದೆ ಸುರಿಯುತ್ತವೆ. ಆದರೆ “ಮಿರಗ ಮಿಂಚಬಾರದು; ಆರಿದ್ರಾ ಗದ್ದರಿಸಬಾರದು” ಎಂಬ ಹೇಳಿಕೆಯಂತೆ ಮಿರಗ ಮಿಂಚಿ ಮಳೆಯಾದರೆ ಮುಂದಿನ ಮೂರು ಮಳೆಗಳು ಆರಿದ್ರ ಗದ್ದರಿಸಿ ಮಳೆಯಾದರೆ ಮುಂದಿನ ಆರು ಮಳೆಗಳು ಹುಸಿಯಾಗುತ್ತವೆ. ಆರಿದ್ರಾ ಮಳೆಯನ್ನು ಮನೆಯ ಹಿರಿಸೊಸೆಗೆ ಹೋಲಿಸುತ್ತಾರೆ. ಅಂದರೆ ಈ ಮಳೆಯ ಗುಣಸ್ವಭಾವವನ್ನು ಗುರುತಿಸಿ “ಆರಿದ್ರ ಮಳೆ ಆದ್ಹಾಂಗ, ಹಿರೆ ಸೊಸೆ ನಡದ್ಹಾಂಗ” ಅಂದರೆ ಮಳೆಗಳಲ್ಲಿಯೇ ಇದು ಹಿರಿದಾದ ಮಳೆ ಎಂಬ ನಂಬಿಕೆ ನಮ್ಮ ಜನರಲ್ಲಿದೆ. ತೀರಾ ಹಮ್ಮುಬಿಮ್ಮಿನ ಮಳೆಯಾದುದರಿಂದ ಇದನ್ನು ಮಳೆಯ ಹಿರಿಸೊಸೆಗೆ ಹೋಲಿಸಿರುವುದು ಸಮಂಜಸವೆನಿಸುತ್ತದೆ. ಈ ಮಳೆಯನ್ನು ಅರೆಗಳೆದು ಭೂಮಿಯಲ್ಲಿ ಬೀಜ ಬಿತ್ತಿದ ನಂತರ ಆರೆ ತಿಂಗಳಿಗೊಮ್ಮೆ ಮಳೆಯಾದರೆ ಸಾಕು ಬೆಳವಲನಾಡಿನ ‘ಮನೆ, ಮನಗಳಲ್ಲಿ ಗಿರಿಯಂತಹ ರಾಶಿ’ ಎಂಬ ನಂಬಿಕೆ ನಮ್ಮ ಕುರಿಗಾರರಲ್ಲಿದೆ. ಮೃಗಶಿರಾ ಮಳೆಯನ್ನು ಜನರು ಮಿರಗನ ಮಳೆಯೆಂದು ಕರೆಯುತ್ತಾರೆ. ಈ ಮಳೆಯು ಅಡಮಳಿಗಟ್ಟದೆ ಜಡಿಮಳೆಗಟ್ಟಿ ಸುರಿಯ ಹತ್ತಿದರೆ ಹಗಲು-ರಾತ್ರಿ ಎನ್ನದೆ ಸುರಿಯುತ್ತದೆ. ಹೀಗೆ ಧಾರಕಾರವಾಗಿ ಸುರಿಯುವುದರಿಂದ ಭೂಮಿಯೆಲ್ಲ ತಂಪಾಗಿ ವಾರಾವರಣವು ಸಹ ತಂಪಾಗುತ್ತದೆ. ಇಂಥ ವೇಳೆಯಲ್ಲಿ ದನಕರುಗಳೆಲ್ಲ ಎಲ್ಲಿ ಚಾಟು (ರಕ್ಷಣೆ) ಸಿಗುತ್ತದೆಯೊ ಅಲ್ಲಿಯೆ ಮೆಲಕು ಹಾಕುತ್ತ ನಿಂತುಕೊಳ್ಳುತ್ತವೆ. ಹಾಗೆಯೇ ದನಕರಗಳನ್ನು ಮೇಯಿಸಲಿಕ್ಕೆ ಹೋದ ಜನರು ಸಹ ಬೆಚ್ಚನೆಯ ಸ್ಥಳಗಳನ್ನು ಬಯಸುತ್ತಾರೆ. ಹೀಗಾಗಿ ‘ಮಿರಗ ಕಳ್ಳಿ ಸಾಲಾಗ ಒರಗ’, ‘ಮಿರಗ, ಮುರಗಾ (ಕೋಳಿ) ಕೊಯ್ಯ’ ಎಂಬ ಹೇಳಿಕೆಗಳು ಈ ಮಳೆಯ ಕುರಿತಾಗಿ ಹುಟ್ಟಿಕೊಂಡವು.

ಪುನರ್ವಸು ಮತ್ತು ಪುಷ್ಯ ಮಳೆಗಳನ್ನು ಆಡುಮಾತಿನಲ್ಲಿ ಹಿರೆಪುಷ್ಯ, ಚಿಕಪುಷ್ಯ ಎಂದು ಕರೆಯುತ್ತಾರೆ. ಈ ಮಳೆಗಳು ಆಷಾಢ ಮತ್ತು ಶಾವಣ ಮಾಸಗಳಲ್ಲಿ ಬರುತ್ತವೆ. ಈ ವೇಳೆಯಲ್ಲಿ ಮೋಡಗಳು ತಂಡೋಪತಂಡವಾಗಿ ಆಷಾಢದ ಗಾಳಿಯ ರಭಸಕ್ಕೆ ಸಿಲುಕಿ ಪಶ್ಚಿಮದಿಂದ ಪೂರ್ವದಿಕ್ಕಿನ ಕಡೆಗೆ ಹೊರಟಿರುತ್ತವೆ. ಈ ಮೋಡಗಳ  ಓಡುವಿಕೆಯನ್ನು ಕಂಡು ‘ಮೋಡಗಳು ತವರು ಮನಿಗೆ ಹೊಂಟಿವೆ’ ಎಂದು ಭಾವಿಸುತ್ತಾರೆ. ಆದರೆ ಈ ಮೋಡಗಳು ತಮ್ಮೆಲ್ಲ ನೀರನ್ನು ಮಲೆನಾಡಿನ ಹೊಲ-ಗುಡ್ಡ-ಬೆಟ್ಟಗಳಲ್ಲಿ ಸುರಿಸಿ ಬಯಲು ಸೀಮೆಯ ನಾಡಿಗೆ ಬಂದಾಗ ಒಂದೊಂದು ಸೆಳಕು ಮಳೆಯನ್ನು ಮಾತ್ರ ಸುರಿಸಿ ಮುಂದೆ ಸಾಗುತ್ತವೆ. ಆಷಾಢ ಮಾಸದ ತಂಪಾದ ಗಾಳಿಗೆ ಸಿಲುಕಿದ ಜನರು ‘ಆಷಾಢದ ಗಾಳಿ ಸುಶ್ಯಾಡಿ ಬಡಿಯುವಾಗ ಹೇಸಿ ನನಜಲ್ಮ ಹೆಣ್ಣಾದರಾಗಿ ಹುಟ್ಟಬಾರದಿತ್ತ’ ಎಂದು ಉದ್ಗರಿಸುತ್ತಾರೆ. ಈ ಎರಡು ಮಳೆಗಳು ಮಲೆನಾಡ ರೈತರಿಗೆ ಭಾಷೆ ಕೊಟ್ಟ ಮಳೆಗಳಾದುದರಿಂದ ಇವು ಅಲ್ಲಿ ಹಗಲು ರಾತ್ರಿ ಧಾರಾಕಾರವಾಗಿ ಸುರಿಯುತ್ತವೆ. ಹೀಗಾಗಿ ಅಲ್ಲಿಯ ರೈತರು ತಮ್ಮ ಭತ್ತದ ಗದ್ದೆಗಳು ತುಂಬಿದ ನಂತರ ಗದ್ದೆಯ ಒಡ್ಡನ್ನು ಒಡೆದು ನೀರನ್ನು ಬಿಟ್ಟು ಬಿಡುತ್ತಾರೆ. ಇದೇ ನೀರು ಆಯಾ ನದಿಗಳನ್ನು ಪ್ರವೇಶಿಸುವುದರಿಂದ ನದಿಗಳು ತುಂಬಿ ಹರಿಯಲು ಪ್ರಾರಂಭಿಸುತ್ತವೆ.

ಆಶ್ಲೇಷ ಮತ್ತು ಮಘ ಮಳೆಗಳಲ್ಲಿ ಆಶ್ಲೇಷ ಮಳೆಯು ತೀರ ಸಾಮಾನ್ಯ ಮಳೆ. ರೋಹಿಣಿ, ಹಿರಪುಷ್ಯ, ಮತ್ತು ಚಿಕಪುಷ್ಯ ಮಳೆಗಳು ಕೈಕೊಟ್ಟ ವೇಳೆಯಲ್ಲಿ ಬೆಳೆಗಳು ಬೇರು ತೋಯ್ಯುವಷ್ಟು ಮಳೆ ಆಗುತ್ತದೆ. ರೋಹಿಣಿ ಮಳೆಯು ಆಗಿತ್ತು ಅಂದರೆ ಇದು ತನ್ನ ಸೋಮಾರಿ ಮೋಡಗಳಿಂದ ಅಲ್ಲಲ್ಲಿ ಅಂಗಳಕ್ಕೆ ನೀರು ಹೊಡೆದಂತೆ ಮಳೆಯ ಹನಿಗಳನ್ನು ಸುರಿಸಿ ಮಾಯವಾಗುತ್ತದೆ. ಈ ಮಳೆಯ ನಂತರ ಬರುವ ಮಳೆಯೇ ಮಘಮಳೆ. ಇದನ್ನು ಜನ ರೂಢಿಯಲ್ಲಿ ‘ಮಗಿ ಮಳೆ’ ಎಂದು ಕರೆಯುತ್ತಾರೆ. ಇದು ಅಡಮಳೆಗಟ್ಟಿ ಸುರಿಯ ಹತ್ತಿದರೆ ಮಗಿಯಿಂದ ನೀರು ಸುರಿದಂತೆ ಸುರಿಯುತ್ತದೆ. ಒಂದು ವೇಳೆ ಜಡಿಮಳೆಗಟ್ಟಿ ಸುರಿಯಲು ಪ್ರಾರಂಭಿಸಿದರೆ ಇದರೆ ಮಳೆಯ ಹನಿಗಳು ಹೊಗೆಯಂತೆ ಕಾಣುತ್ತವೆ. ಆದ್ದರಿಂದ ಇದರ ಕುರಿತಾಗಿ ‘ಆದರ ಮಗಿ; ಆಗದಿದ್ದರ ಹೊಗಿ’ ಎಂದು, ಒಂದು ವೇಳೆ ಈ ಮಳೆ ಸರಿಯಾಗಿ ಆದರೆ ‘ಮಗಿ ತುಂಬ ಹೊನ್ನು’ ಎನ್ನುತ್ತಾರೆ. ಈ ಮಳೆಯು ಸುರಿಯುವುದರಿಂದ ಭೂಮಿಯ ನಂಜು ಹೋಗುತ್ತದೆ. ಆದರೆ ಜನರಿಗೆ ಇಲ್ಲವೆ ಪ್ರಾಣಿಗಳಿಗೆ ಬೆಕ್ಕು, ನಾಯಿ ಇಲಿಗಳು ಕಡಿದರೆ ನಂಜು ಏರಿ ಗಾಯ ಬೇಗನೆ ಮಾಯುವುದಿಲ್ಲ. ಅಲ್ಲದೆ ಹೊಲದಲ್ಲಿ ಬೆಳೆದು ನಿಂತ ಪೈರನ್ನು ದನಕರುಗಳು ಹಾಗೂ ಕುರಿ ಮೇಕೆಗಳು ತಿಂದರೆ ಅವು ಸಾಯುತ್ತವೆ. ಆದರೆ ಈ ಮಳೆಯು ಸುರಿಯುವುದರಿಂದ ಮುಂಗಾರಿ ಪೀಕು (ಬೆಳೆ)ಗಳು ಹುಲುಸಾಗಿ ಬೆಳೆಯುತ್ತವೆ. ಮುಂಗಾರಿ ಮಳೆಗಳಲ್ಲಿ ಕೊನೆಯ ಮಳೆಯೇ ಹುಬ್ಬಿ ಮಳೆ. ಈ ಮಳೆಯು ಸುರಿಯಲಿಕ್ಕೆ ಹತ್ತಿದರೆ ಆನೆಯ ದುಬ್ಬ ತೆರೆಯುವಂತೆ ಹೊಡೆಯುತ್ತದೆ. ಒಂದು ವೇಳೆ ಆಗದಿದ್ದರೆ ಗುಬ್ಬಿಯ ಬೊಚ್ಚ (ಪುಚ್ಚ, ಪುಕ್ಕ) ತೊಯ್ಯುವುದಿಲ್ಲ. ಇದು ಆಗುವುದು ತೀರ ಅಪರೂಪ. ಮಳೆಯು ಆದರೆ ಎಲ್ಲಿ ನೋಡಿದರೂ ನೀರೆ ನೀರು. ಅಂದರೆ ‘ಹುಬ್ಬಿ ಮಳೆ ಆದರೆ ಹುಬ್ಬಿಗೆ ಕೈಹಚ್ಚಿ ನೋಡು’ ಎಂಬ ಹೇಳಿಕೆ ಇದೆ. ಇದು ಹೆಚ್ಚಾಗಿ ರಾತ್ರಿ ವೇಳೆಯಲ್ಲಿ ಸುರಿಯುತ್ತದೆ. ಈ ಮಳೆಯ ಹೊಡೆತಕ್ಕೆ ಮರದಲ್ಲಿರುವ ಗುಬ್ಬಚ್ಚಿಗಳು ಸತ್ತು ಬೀಳುತ್ತವೆ. ಈ ಮಳೆಯ ಮೋಡಗಳು ಆಕಾಶದಲ್ಲಿ ಉಬ್ಬಿ-ಉಬ್ಬಿಕೊಂಡು ಬಂದು ಮಳೆ ಸುರಿಸುವುದರಿಂದ ಇದಕ್ಕೆ ಈ ಹೆಸರು ಬಂದಿರಬಹುದೆಂದೆನಿಸುತ್ತದೆ.

ಹಿಂಗಾರಿ ಮಳೆಗಳಲ್ಲಿ ಮೊದಲಿಗೆ ಬರುವ ಜೋಡು ಮಳೆಗಳೆಂದರೆ ಉತ್ತರಿ ಮತ್ತು ಹಸ್ತಮಳೆಗಳು. ಇವುಗಳಲ್ಲಿ ಒಂದು ಆಗದಿದ್ದರೆ ಮತ್ತೊಂದು ನಿಶ್ಚಯವಾಗಿ ಆಗಿಯೇ ಆಗುತ್ತದೆ. ಒಮ್ಮೊಮ್ಮೆ ಎರಡು ಮಳೆಗಳೂ ಆಗುತ್ತವೆ. ಈ ಎರಡು ಮಳೆಗಳು ಆದ ವರ್ಷದಂದು ಬೆಳವಲ್ ನಾಡಿನ ರೈತರು ಎರಡು ವರ್ಷದ ಬೆಳೆಯನ್ನು ಒಂದೇ ವರ್ಷದಲ್ಲಿ ಒಕ್ಕುತ್ತಾರೆ. ಉತ್ತರಿ ಮಳೆಯ ಹಸಿಗೆ ಬಿತ್ತಿದ್ದೆಲ್ಲವು ಫಲ ಕೊಡುತ್ತದೆ. ಈ ಮಳೆಗೆ ಹುಟ್ಟಿದ ಪ್ರತಿಯೊಂದು ಪೈರು ಹೊಡೆ (ತೆನೆ) ಹಾಕುತ್ತವೆ. ‘ಆದ್ರೆ ಉತ್ತರಿ, ಆಗದಿದ್ರೆ ಸತ್ರಿ’ ಎಂಬ ಹೇಳಿಕೆಯನ್ನು ನೋಡಿದರೆ ಈ ಮಳೆಯ ಪ್ರಾಮುಖ್ಯತೆಯು ಎಂಥದು ಎಂಬುದು ಸ್ಪಷ್ಟವಾಗುತ್ತದೆ. ಈ ಮಳೆಯ ಬೆನ್ನ ಹಿಂದೆ ಬರುವ ಮಳೆಯೇ ಹಸ್ತ. ‘ಆದರೆ ಹಸ್ತ, ಆಗದಿದ್ರ ಹಲ್ಲ ಕಿಸ್ತ’ ಒಂದು ವೇಳೆ ಈ ಎರಡು ಮಳೆಗಳು ಆಗದಿದ್ದರೆ ಆ ವರ್ಷ ಬರಗಾಲ ಬಿದ್ದಂತೆಯೇ ಸರಿ. ‘ಹಸ್ತ ಹದ ಮಳಿಯಾದರೆ; ಚಿತ್ತ ಬೆದಿ ಮಳಿ’ ಚಿತ್ತಿ ಮಳೆಯನ್ನು ಆಡುಮಾತಿನಲ್ಲಿ ಕುಡ್ಡಿ ಚಿತ್ತಿಮಳಿ ಎಂದು ಕರೆಯುತ್ತಾರೆ. ಈ ಮಳೆಯು ಒಂದು ಕಡೆ ಸುರಿಯಲು ಹತ್ತಿದರೆ ಎಡೆಬಿಡದೆ ಸುರಿಯುತ್ತದೆ. ಸುರಿಯದಿದ್ದರೆ ಇಲ್ಲವೆ ಇಲ್ಲ. ಹೀಗೆ ಚಿತ್ತ ಬಂದ ಕಡೆ ಸುರಿಯುತ್ತ ಹೋಗುತ್ತದೆ. ಇದರ ಗುಣಸ್ವಭಾವವನ್ನು ಬಲ್ಲವರಾದ ಕುರುಬರು ‘ಚಿತ್ತಿಮಳೆ ಚಿತ್ತ ಬಂದ ಕಡೆ’ ಎನ್ನುವರು. ಈ ಒಂದು ಹೇಳಿಕೆಯನ್ನು ನೋಡಿದರೆ ಇದು ನಂಬಿಕೆಗೆ ಅರ್ಹವಲ್ಲದ ಮಳೆ ಎಂಬುದು ಸ್ಪಷ್ಟವಾಗುತ್ತದೆ. ಇದರ ನಂತರ ಬರುವ ಮಳೆಯೇ ಸ್ವಾತಿ ಮಳೆ. ಇದನ್ನು ರೂಢಿಯಲ್ಲಿ ‘ಸಾತಿಮಳಿ’ ಎಂದು ಕರೆಯುತ್ತಾರೆ. ಬರಗಾಲ ಬಿದ್ದ ವರ್ಷ ಈ ಮಳೆಯು ತಪ್ಪದೆ ಆಗುತ್ತದೆ. ಇದು ಜಡಿಮಳೆಗಟ್ಟಿ ಸುರಿಯಲು ಪ್ರಾರಂಭಿಸಿದರೆ ಎಡೆಬಿಡದೆ ಸುರಿಯುತ್ತದೆ. ಆದ್ದರಿಂದ ‘ಸಾತಿ ಮಳೆ ಹೇತನಂದ್ರು ಬಿಡುದಿಲ್ಲ’ ಎಂಬ ಹೇಳಿಕೆ ಇದೆ. ಈ ಮಳೆಯು ಸುರಿಯುವುದರಿಂದ ಚಾಪೆಯ ಕೆಳಗಿರುವ ಬೀಜವು ಸಹ ಮೊಳೆತು ತೆನೆ ಬಿಡುತ್ತದಂತೆ. ಅಲ್ಲದೆ ಹಿಂಗಾರಿ ಬೆಳೆಗಳು ಬಹಳ ಹುಲುಸಾಗಿ ಬೆಳೆಯುತ್ತವೆ. ‘ಸಾರಿ ಮಳೆ ಹೋದ ಮ್ಯಾಗ ಯಾರತ ಮಳಿ’ ಅಂದರೆ ಕುರಿಗಾರರ ಪ್ರಕಾರ ಇದುವೇ ಕಡೆಯ ಮಳೆ. ಆದರೆ ವಿಶಾಖ ಮತ್ತು ಅನುರಾಜನ ಮಳೆಗಳೂ ಉಳಿದುಕೊಳ್ಳುತ್ತವೆ. ಏಕೆಂದರೆ ಈ ಎರಡು ಮಳೆಗಳು ಸುಗ್ಗಿಯ ಸಮಯದಲ್ಲಿ ಬರುವುದರಿಂದ ಇವುಗಳನ್ನು ಕೆಡಕಿನ ಮಳೆ ಎಂದು ಭಾವಿಸುತ್ತಾರೆ. ಆದರೆ ವಿಶಾಖ ಮಳೆಯು ಸುರಿಯುವುದರಿಂದ ಭೂಮಿಯ ನಂಜು ಕಳೆಯುತ್ತದೆ. ಆದರೆ ಸಾಕಷ್ಟು ವಿಷಜಂತುಗಳುಜೀವ ತಳೆಯುತ್ತವೆ. ರೂಢಿಯಲ್ಲಿ ಈ ಮಳೆಯನ್ನು ‘ಇಷಕ್ಯಾನ ಮಳಿ’ ಎಂದು ಕರೆಯುತ್ತಾರೆ. ಮಳೆಗಳಲ್ಲಿಯೇ ಕೊನೆಯ ಮಳೆಯಾದ ಅನುರಾಜನ ಮಳೆಯು ಸುರಿಯುವುದರಿಂದ ವಿಶಾಖ ಮಳೆಗೆ ಹುಟ್ಟಿಕೊಂಡ ವಿಷಜಂತುಗಳು ಕಡಿಮೆಯಾಗುತ್ತವೆ. ಅಲ್ಲದೆ ಭೂಮಿಯ ನಂಜು ಸಹ ಕಡಿಮೆಯಾಗುತ್ತದೆ. ಪ್ರತಿಯೊಂದು ಮಳೆಗಳ ಗುಣಸ್ವಭಾವಗಳನ್ನು ತಮ್ಮ ಅನುಭವದಿಂದ ಅರಿತುಕೊಂಡ ಕುರಿಗಾರರು ಅವುಗಳ ಕುರಿತಾಗಿ ಒಂದೊಂದು ನಿರ್ದಿಷ್ಟವಾದ ಹೇಳಿಕೆಗಳನ್ನು ಹೇಳುತ್ತ ಬಂದರು. ಈ ಹೇಳಿಕೆಗಳನ್ನು ನೋಡಿದಾಗ ಆಯಾ ಮಳೆಗಳ ಗುಣ-ಸ್ವಭಾವವೇನು? ಅದು ಮಳೆ ಸುರಿಯುವ ಪರಿ ಎಂಥದು? ಅದರಿಂದಾರುವ ಪರಿಣಾಮವೇನು? ಎಂಬುದು ಸ್ಪಷ್ಟವಾಗುತ್ತದೆ.

ಪಂಚಾಂಗವನ್ನು ಜನಪದ ಶಾಸ್ತ್ರವೆಂದು ಹೇಳುತ್ತಾರೆ. ವಾರ, ತಿಥಿ, ನಕ್ಷತ್ರ, ಯೋಗ, ಕರಣ ಇವು ಪಂಚಾಂಗದ ಅಂಗಗಳು. ನಕ್ಷತ್ರಗಳು ಪಂಚಾಂಗದ ಒಂದು ಅವಿಭಾಜ್ಯ ಅಂಗ. ಈ ನಕ್ಷತ್ರಗಳ ಸ್ವಭಾವ ಗುಣಾವಗುಣಗಳನ್ನು ಹಾಗೂ ಮಳೆಗಳ ಗುಣಸ್ವಭಾವಗಳನ್ನು ತಮ್ಮ ಅನುಭವದಿಂದ ಬಲ್ಲ ಕುರಿಗಾರರು ಅವುಗಳಿಗೆ ಒಂದೊಂದು ನಕ್ಷತ್ರಗಳ ಹೆಸರನ್ನು ಕೊಟ್ಟು, ಪ್ರತಿ ಮಳೆಗಳು ಮಳೆಯ ಪ್ರಮಾಣವನ್ನು ಗುರುತಿಸಿ ಅವುಗಳಿಗೆ ಒಂದೊಂದು ವಾಹನಗಳನ್ನು ಗುರುತಿಸಿ ಅವುಗಳ ಆರಂಭ ಮತ್ತು ಮುಕ್ತಾಯದ ಚರಣಗಳನ್ನು ವ್ಯವಸ್ಥಿತ ರೂಪದಲ್ಲಿ ಕೊಡಲು ಮೊದಲು ಪ್ರಯತ್ನಿಸಿದವರು ಕುರಿಗಾರರೆಂದು ಹೇಳಬೇಕಾಗುತ್ತದೆ. ಬಹಳಷ್ಟು ನಕ್ಷತ್ರಗಳು ನಮ್ಮ ಬರಿಗಣ್ಣಿಗೆ ಕಾಣುವುದಿಲ್ಲ. ಆದರೂ ಅವುಗಳ ಅಸ್ತಿತ್ವವನ್ನು ಕಂಡುಕೊಳ್ಳುವುದು ಕೇವಲ ಸೂರ್ಯಚಂದ್ರರ ಸುಳಿದಾಟದ ಲೆಕ್ಕಾಚಾರದಿಂದ. ಅಂದರೆ ಅಮವಾಸೆ ಮತ್ತು ಹುಣ್ಣಿಮೆಗಳ ಲೆಕ್ಕಾಚಾರದಿಂದ ಮಾತ್ರ. ಅಲ್ಲದೆ ಆಯಾ ಮಳೆಗಳ ಉಷ್ಣತಾಮಾನ ಹಾಗೂ ಹವಾಮಾನದ ಒತ್ತಡದಿಂದ ಗುರುತಿಸಬಹುದು. ಉತ್ತರಿ ಮತ್ತು ಹಸ್ತ ಮಳೆಗಳ ಆರಂಭದ ಕಾಲದಲ್ಲಿ ಬಿಸಿಲು ಬಹಳ ಪ್ರಖರವಾಗಿರುತ್ತದೆ. ಅದರಂತೆ ಹವೆಯು ಸಹ ಬಿಸಿಯಾಗಿರುತ್ತದೆ. ಅದುವೆ ಮೃಗಶಿರಾ ಮಳೆಯ ಮಧ್ಯದಲ್ಲಿ ಮತ್ತು ಮುಕ್ತಾಯದ ಅವಧಿಯಲ್ಲಿ ಬಿಸಿಲು ಕಾಣಲಾರದೆ ಹವೆಯು ತೀರಾ ತಂಪಾಗಿರುತ್ತದೆ. ಉತ್ತರಿ ಹಾಗೂ ಹಸ್ತಾ ಮಳೆ ಹನಿಗಳು ತೀರಾ ದಪ್ಪಾಗಿದ್ದರೆ ಮೃಗಶಿರಾ ಮತ್ತು ಸ್ವಾತಿ ಮಳೆಗಳ ಹನಿಗಳು ತೀರಾ ಸಣ್ಣದಾಗಿರುತ್ತವೆ. ಇವೆಲ್ಲವೂ ಆಯಾ ನಕ್ಷತ್ರಗಳ ಪರಿಣಾಮವೆಂದೇ ಹೇಳಬೇಕಾಗುತ್ತದೆ. ಹೀಗೆ ಪ್ರತಿಯೊಂದು ಮಳೆಗಳ ಬರುವಿಕೆಯನ್ನು ಅವುಗಳ ಸುರಿಸುವ ಹನಿಗಳ ಪ್ರಮಾಣ ಹಾಗೂ ಹವಾಮಾನಗಳನ್ನು ಮೊಟ್ಟ ಮೊದಲು ಕಂಡುಕೊಂಡವರೆಂದರೆ ಕುರಿಗಾರರು. ಹೀಗಾಗಿ ಅವರು ಆಯಾ ಮಳೆಗಳು ಬರುವುದನ್ನು ಹಾಗೂ ಬಾರದಿರುವುದನ್ನು ನಿಖರವಾಗಿ ಹೇಳಲು ಪ್ರಾರಂಭಿಸಿದರು.

ಮೂಡಗಾಳಿ ಬೀಸುವುದರಿಂದ ಮಳೆಯು ಬರುವುದಿಲ್ಲ. ಈ ಗಾಳಿಯು ಬೀಸಲು ಪ್ರಾರಂಭಿಸಿದರೆ ಸಾಕು ಮಳೆಯು ತಮ್ಮ ನಾಡನ್ನು ಸೇರಿತು ಎಂದು ತಿಳಿಯಬೇಕು. ಇನ್ನೇನು ಮಳೆಯು ಬಂದೇ ಬರುತ್ತದೆ ಎನ್ನುವಂತಹ ಪ್ರಸಂಗದಲ್ಲಿ ಈ ಗಾಳಿ ಜೋರಾಗಿ ಬೀಸಿದರೆ ಸಾಕು ಬರುವಂತಹ ಮಳೆಯು ಬಾರದೆ ಅದು ದೂರ ಸರಿಯುತ್ತದೆ. ಇದು ಬೀಸುವುದರಿಂದ ಪೈರುಗಳು ಬಾಡಲಾರಂಭಿಸುತ್ತವೆ. ಅದೆ ಪಡುಗಾಳಿ ಬೀಸುವುದರಿಂದ ಬಯಲು ಸೀಮೆಯ ಗಾಳಿ ಮೇಲಿನ ಫಲಗಳಾದ ಗೋಧಿ, ಬಿಳಿಜೋಳ, ಕಡ್ಲಿ, ಹತ್ತಿ, ಕುಸುಬಿ ಮುಂತಾದ ಪೈರುಗಳು ಹುಲುಸಾಗಿ ಬೆಳೆಯುತ್ತವೆ. ಆಷಾಢದ ಗಾಳಿ ಬೀಸುವುದರಿಂದ ಹಿರಪುಷ್ಯ, ಚಿಕಪುಷ್ಯ ಮಳೆ ತಪ್ಪದೆ ಮಳೆಯನ್ನು ಸುರಿಸುತ್ತವೆ. ಈ ಗಾಳಿಯು ಬಯಲು ಸೀಮೆಯಲ್ಲಿ ತಂಪಾಗಿ ಬೀಸುವುದರಿಂದ ಇದನ್ನು ಅಳಲಗಾಳಿ ಎಂದು ಕರೆಯುತ್ತಾರೆ. ಇದು ಬೀಸುವುದರಿಂದ ಮಳೆಯು ಘಟ್ಟವನ್ನು ಸೇರಿತು; ಈ ಗಾಳಿ ಮುಗಿಯುವವರೆಗೆ ಮಳೆಯು ಆಗುವುದಿಲ್ಲ ಎಂದು ಬಾವಿಸುತ್ತಾರೆ. ಅದರಂತೆ ಕುಂಬಾರಗಾಳಿ ಬೀಸುವುದರಿಂದ ಮಳೆಯು ಬರುವುದಿಲ್ಲ ಅಲ್ಲದೆ ಕುರಿ-ದನಕರುಗಳಿಗೆ ರೋಗರುಜಿನಗಳು ಅಂಟಿಕೊಳ್ಳುತ್ತವೆ. ಒಮ್ಮೊಮ್ಮೆ ಕ್ಷಣ ಹೊತ್ತು ಪಡುಗಾಳಿ ಮತ್ತೊಂದು ಕ್ಷಣ ಹೊತ್ತು ಮೋಡಗಾಳಿಗಳು ಬೀಸುವ ಸಂದರ್ಭದಲ್ಲಿ ಅಕಸ್ಮಾತಾಗಿ ಹನುಮಗಾಳಿ ಬೀಸಲು ಪ್ರಾರಂಬಿಸಿದರೆ ಮೂಡಗಾಳಿಯಿಂದ ದೂರ ಸರಿದ ಮಳೆಯು ಮತ್ತೆ ಮರಳಿ ಬರುತ್ತದೆ. ಹೀಗೆ ಗಾಳಿಗಳ ಬಗೆಗಿರುವ ಹತ್ತು ಹಲವಾರು ವಿಷಯಗಳನ್ನು ಬಲ್ಲವರಾದ ಕುರಿಗಾರರು ಮಳೆಯ ಬರುವಿಕೆಯನ್ನು ಹಾಗೂ ಬಾರದಿರುವಿಕೆಯನ್ನು ತಮ್ಮ ಅನುಭವದ ಒರೆಗಲ್ಲಿಗೆ ಹಚ್ಚಿ ದೃಢವಾಗಿ ಹೇಳುತ್ತಾರೆ.

ಆಕಾಶದಲ್ಲಿ ದೊಡ್ಡ ದೊಡ್ಡ ಮೋಡಗಳು ಕೋಟೆಯ ಬುರುಜಿನಂತೆ ಒಂದರ ಹಿಂದೆ ಒಂದರಂತೆ ಮೇಲಿಂದ ಮೇಲಕ್ಕೆ ಏರುತ್ತಿದ್ದರೆ ಅವುಗಳನ್ನು ಕೋಟೆಯ ಮೋಡಗಳೆಂದು, ಜಲರೇಖೆಗಳೆಂದು ಕರೆಯುತ್ತಾರೆ. ಈ ಮೋಡಗಳು ಮೂಡಿದ ದಿನದಂದು ಬಿರುಸಾದ ಗಾಳಿಯೊಂದಿಗೆ ಮಳೆಯು ಸುರಿಯುತ್ತದೆ. ಹೆಚ್ಚಾಗಿ ಇಂಥ ಮೋಡಗಳು ಮುಂಗಾರು ಮಳೆಗಳಾದ ಭರಣಿ, ಹುಬ್ಬಿ, ಉತ್ತರಿ ಮತ್ತು ಹಸ್ತಾ ಮಳೆಗಳಲ್ಲಿ ಕಂಡು ಬರುತ್ತವೆ. ಆಕಾಶದಲ್ಲಿ ಎಲ್ಲಿಂದಲೋ ತೇಲಿ ಬಂದು ಸುಮ್ಮನೆ ಒಂದು ಸಳಕು ಮಳೆಯನ್ನು ಸುರಿಸಿ ವೇಗದಿಂದ ಮುಂದೆ ಮುಂದೆ ಸಾಗುವ ಮೇಲ್ಮೋಡಗಳು ಎಂದೂ ಮಳೆಯನ್ನು ತರುವುದಿಲ್ಲ. ಇಂಥ ಮೋಡಗಳು ಆಕಾಶದಲ್ಲಿ ಕಾಣುವುದರಿಂದ ಮಳೆಯು ದೂರ ಸರಿಯುತ್ತದೆ. ಹೆಚ್ಚಾಗಿ ಇಂಥ ಮೋಡಗಳು ಆಷಾಢ ಮತ್ತು ಶ್ರಾವಣ ಮಾಸದಲ್ಲಿ ಬರುವ ಹಿರಪುಷ್ಯ ಮತ್ತು ಚಿಕಪುಷ್ಯ ಮಳೆಗಳ ವೇಳೆಯಲ್ಲಿ ಕಂಡುಬರುತ್ತವೆ. ಈ ವೇಳೆಯಲ್ಲಿ ಈ ಮೋಡಗಳು ಪಶ್ಚಿಮ ದಿಕ್ಕಿನೆಂದ ಪೂರ್ವದಿಕ್ಕಿನ ಕಡೆಗೆ ವೇಗವಾಗಿ ಚಲಿಸುತ್ತವೆ. ಇವು ಪೂರ್ವ ದಿಕ್ಕಿನಿಂದ ದಶ್ಚಿಮ ದಿಕ್ಕಿನ ಕಡೆಗೆ ಮರಳಿ ಬರಬೇಕಾದರೆ ಸುಮಾರು ದಿನಗಳು ಬೇಕಾಗುತ್ತವೆ. ಇವು ಮರಳಿ ಬರುವವರೆಗೂ ಬಯಲು ಸೀಮೆಗೆ ಮಳೆಯೇ ಇಲ್ಲ. ಆಕಾಶದಲ್ಲಿ ಬಿಳಿಯ ಮೋಡಗಳು ಜಾಸ್ತಿ ಇದ್ದು ಕಪ್ಪು ಮೋಡಗಳು ಅಲ್ಲಲ್ಲಿ ಕಂಡು ಬರುತ್ತಿದ್ದರೆ ಒಮ್ಮೊಮ್ಮೆ ಮಳೆಯು ಸುರಿಯಬಹುದು. ಅದೇ ವೇಳೆಯಲ್ಲಿ ಗಾಳಿಯು ಆರ್ಭಟದಿಂದ ಬೀಸಿದರೆ ಮಳೆ ದೂರ ಸರಿಯುತ್ತದೆ. ಜಡಿಮಳೆಯನ್ನು ಸುರಿಸುವ ಮೋಡಗಳಿಗೆ ಗೂಬೆಯ ಮೋಡಗಳೆಂದು ಕರೆಯುವುದು ರೂಢಿಯಲ್ಲಿದೆ. ಈ ಮೋಡಗಳು ಒಮ್ಮೊಮ್ಮೆ ಮಳೆಯನ್ನು ಸುರಿಸಲು ಪ್ರಾರಂಭಿಸಿದರೆ ಸಾಕು ತೆಲೆ ಚಿಟ್ಟು ಹಿಡಿಯುವಂತೆ ಮನಸ್ಸಿಗೆ ಬೇಸರವಾಗುವಂತೆ ಸತತವಾಗಿ ಸುರಿಯುತ್ತದೆ. ಇಂಥ ಮೋಡಗಳು ಹೆಚ್ಚಾಗಿ ಮಿರಗ ಮತ್ತು ಸ್ವಾತಿ ಮಳೆಗಳ ವೇಳೆಯಲ್ಲಿ ಕಂಡುಬರುತ್ತವೆ. ಯಾವ ಯಾವ ಮಳೆಗಳಿಗೆ ಎಂತೆಂಥ ಮೋಡಗಳು ಕಾಣಿಸಿಕೊಳ್ಳುತ್ತವೆ. ಮಳೆಯು ಆಗದೆ ಇರುವ ವೇಳೆಯಲ್ಲಿ ಎಂಥ ಮೋಡಗಳು ಕಾಣಿಸಿಕೊಂಡರೆ ಮಳೆ ಆಗುತ್ತದೆ. ಅವುಗಳ ಆಕಾರ, ಬಣ್ಣ, ಅವುಗಳ ಚಲನವಲನಗಳ ಬಗೆಗೆ ಸ್ಪಷ್ಟವಾದ ತಿಳುವಳಿಕೆ ಕುರಿಗಾರರಿಗಿರುತ್ತದೆ. ಆದ್ದರಿಂದ ಅವರು ತಮ್ಮ ಕುರಿಗಳನ್ನು ಮಳೆಯು ಬರದಿರುವ ಕಡೆಗೆ ಹೊಡೆದುಕೊಂಡು ಹೋಗುತ್ತಾರೆ. ಒಮ್ಮೊಮ್ಮೆ ಮಳೆಯು ಬರುವುದು ಕಾತರಿಯಾದ ವೇಳೆಯಲ್ಲಿ ಅದರ ಪ್ರಮಾಣವನ್ನು ಅರಿತು ತಮ್ಮ ಕುರಿಗಳನ್ನು ದಿಬ್ಬದ ಕಡೆಗೆ ಹೊಡಿದುಕೊಂಡು ಹೋಗಿ ಮಳೆಯ ಬರುವಿಕೆಯನ್ನು ಕಾಯುತ್ತ ಕುಳಿತುಕೊಳ್ಳುತ್ತಾರೆ. ಇಂಥ ವೇಳೆಯಲ್ಲಿ ಅವರು ಮೋಡಗಳ ಪ್ರಮಾಣ ಮತ್ತು ಅವುಗಳ ಬಣ್ಣವನ್ನು ಗುರುತಿಸಿ ಮಳೆಯ ಬರುವಿಕೆಯನ್ನು ಮತ್ತು ಬಾರದಿರುವಿಕೆಯನ್ನು ಸ್ಪಷ್ಟವಾಗಿ ಹೇಳುತ್ತಾರೆ. ಆಕಾಶದಲ್ಲಿ ದಟ್ಟವಾಗಿ ಹರಡಿದ ಮೋಡಗಳು ಹಳದಿಯ ವರ್ಣಕ್ಕೆ ತಿರುಗಿದರೆ ಮಳೆಯು ತುಸು ತಡವಾಗಿ ಬರುತ್ತದೆ. ಒಂದು ವೇಳೆ ಅವೆ ಮೋಡಗಳು ಕೆಂಪು ವರ್ಣಕ್ಕೆ ತಿರುಗಿದರೆ ಮಳೆಯು ಬರುವುದಿಲ್ಲ.

ಜಿಟಿ-ಜಿಟಿ ಮಳೆಯು ಸುರಿಯುವ ವೇಳೆಯಲ್ಲಿ ಅದರ ವಿರುದ್ಧ ದಿಕ್ಕಿನಲ್ಲಿ ಸೂರ್ಯ ಕಿರಣಗಳು ತೂರಿ ಬಂದರೆ ಆಕಾಶದಲ್ಲಿ ಕಾಮನಬಿಲ್ಲು ಮೂಡುತ್ತದೆ. ಆದರೆ ಈ ಕಾಮನಬಿಲ್ಲಿಗೂ ಹಾಗೂ ಮೋಡಗಳಿಗೂ ಇರುವ ಸಂಬಂಧ ಮತ್ತು ಅದರ ಪರಿಣಾಮವೇನು? ಎಂಬುದನ್ನು ಕುರಿಗಾರರು ಹೀಗೆ ಹೇಳುತ್ತಾರೆ. ‘ಮಳೆ ಬೀಳುವ ವೇಳೆಯಲ್ಲಿ ಆಕಾಶದಲ್ಲಿ ಮೋಡಗಳು ಬಹಳಷ್ಟಿದ್ದರೂ ಮಳೆಯೇ ಕಾಮನಬಿಲ್ಲನ್ನು ನುಂಗಿ ಬಿಡುತ್ತದೆ. ಒಂದು ವೇಳೆ ಕಡಿಮೆ ಮೋಡಗಳಿದ್ದರೆ ಅವುಗಳನ್ನು ಕಾಮನಬಿಲ್ಲು ನುಂಗಿ ಬಿಡುತ್ತದೆ’ ಎನ್ನುತ್ತಾರೆ. ಇದು ಪ್ರಾಯೋಗಿಕವಾಗಿ ದಿಟವೆನಿಸುತ್ತದೆ. ಮಳೆಯು ಹೋದ ಪ್ರಸಂಗದಲ್ಲಿ ಮುಂಜಾನೆ ಮತ್ತು ಮುಸ್ಸಂಜೆಯ ವೇಳೆಗಳಲ್ಲಿ ಪೂರ್ವ ಮತ್ತು ಉತ್ತರ ದಿಕ್ಕುಗಳಲ್ಲಿ ಮೋಡಗಳು ತತ್ತುಗಟ್ಟಿ ನೀರೊಡ್ಡಿನ ಹಾಗೆ; ದಪ್ಪನೆಯ ರೇಖೆಯಂತೆ ಮೇಲೆ ಮೇಲೇಳುತ್ತಿದ್ದರೆ, ತುಂಡುತುಂಡಾದ ಮೋಡಗಳು ಆಕಾಶದಲ್ಲಿ ಸೂರ್ಯ ಕಿರಣಗಳಿಗೆ ಅಡ್ಡವಾಗಿ ಬಂದು; ಆ ಮೋಡಗಳ ಮರೆಯಿಂದ ಮೂಡುವ ರೆಕ್ಕೆಯಾಕಾರದ ನೆರಳು ಮೇಯ್ಯುತ್ತಿರುವ ಕುರಿಗಳ ಮೇಲೆ ಬಂದರೆ ಮೇಲೊಂದು ಹಾದು ಹೋದರೆ ಎರಡು ಮೂರು ದಿನಗಳಲ್ಲಿ ಮಳೆಯು ಸುರಿಯುತ್ತದೆ.

ಕುರಿ, ಎತ್ತು, ಪಕ್ಷಿ ಹಾಗೂ ಕ್ರಿಮಿಕೀಟಗಳ ಚಲನವಲನಗಳನ್ನು ಗಮನಿಸಿ ಮಳೆಬರುವ ಹಾಗೂ ಬಾರದಿರುವುದನ್ನು ನಿಖರವಾಗಿ ಹೇಳುತ್ತಾರೆ, ಮಳೆಯು ಬರುವ ಸೂಚನೆಗಳು ಮೊದಲು ಮೇಯ್ಯುವ ಕುರಿಗಳಿಗೆ ಗೊತ್ತಾಗುತ್ತದೆ. ಆ ವೇಳೆಯಲ್ಲಿ ಅವು ಮೇಯ್ಯುವುದನ್ನು ಬಿಟ್ಟು ಅಲ್ಲಲ್ಲಿ ಗುಂಪು ಗುಂಪಾಗಿ ನಿಲ್ಲಲು ಪ್ರಾರಂಭಿಸುತ್ತವೆ. ಆಗ ಕುರಿಗಾರನು ಆಕಾಶದ ಮೋಡಗಳ ಹಾಗೂ ಬೀಸುವ ಗಾಳಿಯ ಚಲನವಲನವನ್ನು ಗಮನಿಸಿ, ಕುರಿಗಳನ್ನು ಹೊಡೆದುಕೊಂಡು ದಿಬ್ಬದ ಪ್ರದೇಶಕ್ಕೆ ಬಂದು ಕುರಿಗಳನ್ನು ತರಬುತ್ತಾನೆ. ಅಲ್ಲಿಯೂ ಕುರಿಗಳು ಮೇಯ್ಯುವುದನ್ನು ಬಿಟ್ಟು ಗುಂಪು ಗುಂಪಾಗಿ ನಿಂತಾದ ಅವುಗಳನ್ನು ಚದುರಿಸಲು ತನ್ನ ಹೆಗಲ ಮೇಲಿರುವ ಕರಿ ಕಂಬಳಿಯನ್ನು ತೆಗೆದುಕೊಂಡು ಅದರ ಕರಿಯನ್ನು ಮುಂದು ಮಾಡಿ ಐದಾರು ಸಲ ಬೀಸುತ್ತಾನೆ. ಕಂಬಳಿಯನ್ನು ಬೀಸಿದರೆ ಕುರಿಗಳು ಚದುರದೇ ಇದ್ದಾಗ ಮಳೆಯು ಬರುವುದು ಖಚಿತ ಎಂಬುದನ್ನು ಮನದಟ್ಟು ಮಾಡಿಕೊಂಡು ಕುರಿಗಾರ ಅಲ್ಲಲ್ಲಿ ಹೊಲಗಳಲ್ಲಿ ಕೆಲಸ ಮಾಡುತ್ತಿರುವ ರೈತಾಪಿ ಜನರಿಗೆ ಸಂದೇಶವನ್ನು ನೀಡುವ ರೂಪದಲ್ಲಿ; ದಿಬ್ಬದ ತುತ್ತತುದಿಯಲ್ಲಿ ನಿಂತು ಕೇಕೆ ಹಾಕುತ್ತ ಕಂಬಳಿಯನ್ನು ಬೀಸಿ ಮುಗಿಸುವಷ್ಟರಲ್ಲಿಯೇ ಮಳೆ ಬಂದು ಸುರಿಯಲಾರಂಭಿಸುತ್ತದೆ. ಮುಂಜಾನೆಯ ವೇಳೆಯಲ್ಲಿ ದಡ್ಡಿಯಿಂದ ಕುರಿಗಳನ್ನು  ಮೇಯಿಸಲಿಕ್ಕೆ ಎಬ್ಬಿಸುವ ವೇಳೆಯಲ್ಲಿ ಕುರಿಗಳು ತಮ್ಮಿಚ್ಛೆಯಂತೆ ಪೂರ್ವದಿಕ್ಕಿನತ್ತ ಹೊರಟು ಮುಂದೆ ಮುಂದೆ ಸಾಗಿ ತೇರಿನ ಆಕಾರದಲ್ಲಿ ಹಮ್ಮಿಕೊಂಡು ತಮ್ಮಿಚ್ಛೆಯಂತೆ ಮೇಯ್ಯಲು ಪ್ರಾರಂಭಿಸಿದರೆ ಆವತ್ತು ಸಂಜೆ ಎನ್ನುವಷ್ಟರಲ್ಲಿಯೇ ಮಳೆಯಾಗುತ್ತದೆ. ಬೆಳಗಿನ ಜಾವದಲ್ಲಿ ಒಂದು ವಯಸ್ಸಿನ ಕಳಗಿಗಳು ದಡ್ಡಿಯ ಪಕ್ಕದ ಹೊಲಗಳ ಬದುವಿನಲ್ಲಿ ಹರ್ಯಾಡುತ್ತ ಚಿನ್ನಾಟ ಆಡಹತ್ತಿದರೆ ಎರಡು ಮೂರು ದಿನಗಳಲ್ಲಿ ಆಗುವ ಮಳೆಯ ಸೂಚನೆ ಮೊದಲೆ ಗೊತ್ತಾಗುತ್ತದೆ. ಕುರಿಯ ಹಿಂಡಿನಲ್ಲಿರುವ ನಾಯಿಗಳು ಇದ್ದಕ್ಕಿದ್ದಂತೆ ಆಕಾಶದತ್ತ ಮುಖಮಾಡಿ ಅಳುವ ಧ್ವನಿಯಲ್ಲಿ ಕೂಗ ತೊಡಗಿದರೆ ಆವತ್ತು ಮಳೆಯಾಗುತ್ತದೆ. ಮುಸ್ಸಂಜೆಯ ಹೊತ್ತಿಯಲ್ಲಿ ಎರಡು ಸಲ ಕೂಗಿದರೆ ಗುಬ್ಬಿಗಳು ಮಣ್ಣಿನಲ್ಲಿ ಜಳಕ ಮಾಡಿದರೆ, ಇರುವೆಗಳು ಗುಂಪುಗಟ್ಟಿ ಸಾಲು ಸಾಲಾಗಿ ತಮ್ಮ ತತ್ತಿ ಸಮೇತ ಹುತ್ತದಿಂದ ಮೇಲಕ್ಕೆ ಬಂದರೆ ಆವತ್ತು ಇಲ್ಲವೆ ಮರುದಿನ ತಪ್ಪದೆ ಮಳೆಯಾಗುತ್ತದೆ.

ಕಾಗೆಗಳು ಗೂಡು ಕಟ್ಟಲಿ ಅಲ್ಲಲ್ಲಿ ಬಿದ್ದ ಒಣಗಿದ ಕಡ್ಡಿಗಳನ್ನು ಕಚ್ಚಲು ಪ್ರಾರಂಭಿಸಿದರೆ; ಆಕಾಶದಲ್ಲಿ ಚಂದನಿಗೆ ಕಣ ಕಟ್ಟಿದರೆ ಇಲ್ಲವೆ ಕೆರೆ ಕಟ್ಟಿದರೆ ಮಳೆಯು ಆಗುವುದಿಲ್ಲ. ಒಂದು ವೇಳೆ ಆ ಕಣವಾಗಲಿ, ಕೆರೆಯಾಗಲಿ ಒಡೆದರೆ ಒಡೆದ ದಿಕ್ಕಿನತ್ತ ಮಳೆ ಸುರಿಯಬಹುದು. ಮಾವಿನ ಗಿಡಗಳು ಸಿಕ್ಕಾಪಟ್ಟೆ ಹೂವು ಬಿಟ್ಟರೆ; ಹೊಲಗಳ ಬದುವಿನಲ್ಲಿರುವ ಕಳ್ಳಿಯ ಗಿಡಗಳು ಹಚ್ಚ ಹಸುರಾದರೆ; ಬಿದುರಿನ ಹಾಗೂ ಬಂಬುವಿನ ಗಿಡಗಳು ಹೂವು ಬಿಟ್ಟರೆ ಆ ವರ್ಷ ಬರಗಾಲವೆಂದು ತಿಳಿಯಬೇಕು. ಮುತ್ತಲ ಕಾಯಿಯಲ್ಲಿ ಮೂರು ಬೀಜಗಳಿದ್ದರೆ ಆ ವರ್ಷ ಸಂಪೂರ್ಣ ಮಳೆ; ಎರಡು ಬೀಜಗಳಿದ್ದರೆ ಮಳೆಯ ಪ್ರಮಾಣ ತುಸು ಕಡಿಮೆ; ಒಂದು ಬೀಜವಿದ್ದರೆ ಮಳೆಯ ಪ್ರಮಾಣ ತೀರ ಕಡಿಮೆ.

ಕುರಿಗಾರರು ಇಂಥ ನೂರಾರು ಅನುಭಾವದ ಅನುಭವಗಳನ್ನು ತಲೆಮಾರಿನಿಂದ ತಲೆಮಾರಿಗೆ ಹೇಳುತ್ತ ಅವುಗಳನ್ನು ಉಳಿಸಿ ಬೆಳೆಸಿಕೊಂಡು ಬಂದಿದ್ದಾರೆ. ಇವರ ಈ ಅನುಭಾವದ ಅನುಭವಗಳೇ ಗಾದೆಗಳಾಗಿ, ಈ ಗಾದೆಗಳೆ ಹೇಳಿಕೆಗಳಾಗಿ, ಹೇಳಿಕೆಗಳೇ ಕಾಲಜ್ಞಾನದ ಮಾತುಗಳಾಗಿ ಕಾಲಾನುಕ್ರಮದಿಂದ ಉಳಿದುಕೊಂಡು ಬಂದಿರುವುದು ಕಂಡು ಬರುತ್ತದೆ. ಹೀಗೆ ಅನುಭಾವಿ ಕುರಿಗಾರರ ಈ ಹೇಳಿಕೆಗಳು ಶಾಸ್ತ್ರಾಧ್ಯಯನ ಮಾಡಿದ ಪಂಡಿತರಿಗಿಂತಲೂ ಸತ್ಯವಾಗಿರುತ್ತದೆ ಎಂಬುದು ಮಾತ್ರ ಸತ್ಯ.*


* ಈ ಲೇಖನವನ್ನು ಸಿದ್ಧಪಡಿಸುವಲ್ಲಿ ತಮ್ಮೆಲ್ಲ ಅನುಭವಗಳನ್ನು ಹೇಳಿ ಸಹಕರಿಸಿದ ನಿಪ್ಪಾಣಿಯ ಅನುಭಾವಿ ಕುರಿಗಾರರಾದ ಶ್ರೀ ಬೀರಪ್ಪ ಚಿಂಗಳೆ, ಶ್ರೀ ಮಾಳಪ್ಪ ಗಡ್ಡಿ, ಶ್ರೀ ವಿಠ್ಠಲ ಬನ್ನಿ ಹಾಗೂ ಶ್ರೀ ಮಾಳಪ್ಪ ಚಿಂಗಳೆಯವರಿಗೆ ನಾನು ತುಂಬಾ ಋಣಿಯಾಗಿದ್ದೇನೆ.