ಪ್ರತಿಯೊಂದು ಜನಾಂಗವು ತನ್ನ ಧಾರ್ಮಿಕ ವಿಧಿ-ವಿಧಾನಗಳನ್ನು ಮದುವೆ-ಮುಂಜಿವೆಯಂಥ ಸಾಮಾಜಿಕ ಕಾರ್ಯಗಳನ್ನು ನಿರ್ವಹಿಸಿಕೊಂಡು ಹೋಗಲು ಪುರೋಹಿತ ವರ್ಗವನ್ನು ಸೃಷ್ಟಿಸಿಕೊಂಡಿರುವುದು ಕಂಡುಬರುತ್ತದೆ. ಇದಕ್ಕೆ ಕರ್ನಾಟಕದ ಕುರುಬ ಜನಾಂಗವು ಹೊರತಾಗಿಲ್ಲ. ಪ್ರಾಚೀನ ಕಾಲದಿಂದಲೇ ‘ಒಡೆಯರು’ ಎಂಬ ವಿಶಿಷ್ಟವಾದ ಗುರುವರ್ಗವನ್ನು ಸ್ಥಾಪಿಸಿಕೊಂಡು, ಅವರ ಮೂಲಕ ತಮ್ಮ ಧಾರ್ಮಿಕ ಆಚರಣೆಗಳನ್ನು ಮತ್ತು ಮದುವೆ ಮುಂಜಿ, ಜನನ-ಮರಣದ ಸಂದರ್ಭದ ವಿಧಿ-ವಿಧಾನಗಳನ್ನು ನೆರವೇರಿಸಿಕೊಂಡು ಬರುತ್ತಲಿದ್ದಾರೆ. ಕುರುಬರಲ್ಲಿಯ ಒಡೆಯರು ಎಂಬ ಗುರುವರ್ಗವು ತುಂಬ ವಿಶಿಷ್ಟವಾದುದು. ಏಕೆಂದರೆ ಅನ್ಯ ಜನಾಂಗಗಳಲ್ಲಿ ಕುಲಕ್ಕೆ ಕುಲದವರೇ ಆದ ಗುರುವರ್ಗದವರು ಕಂಡುಬರುವುದಿಲ್ಲ. ಆದರೆ ಕುರುಬರ ಜಾತಿಯೊಳಗಿನ ಒಡೆಯರದು ಒಂದು ಪ್ರತ್ಯೇಕ ಜಾತಿಯಾಗದಿರುವುದು ವಿಶೇಷ. ಈ ಕಾರಣಕ್ಕಾಗಿಯೇ ‘ಕುರುಬರ ಜಾತಿಯೊಳಗಿನ ಒಡೆಯರ ಈ ಉಪಜಾತಿ ಭಾರತದಲ್ಲಿಯೇ ಅತ್ಯಂತ ವಿಶಿಷ್ಟವೆನ್ನಬಹುದಾದ ಒಂದು ವ್ಯವಸ್ಥೆಯನ್ನು ಹೊಂದಿದೆ’ ಎಂದು ಹಿರಿಯ ಸಂಶೋಧಕರಾದ ಡಾ. ಎಂ. ಚಿದಾನಂದಮೂರ್ತಿ ಅವರು ಹೇಳುತ್ತಾರೆ.

ರೇವಣಸಿದ್ಧ, ಸಿದ್ಧರಾಮೇಶ್ವರ, ಅಮೋಘಸಿದ್ಧರ ಆರಾಧಕರು ಮತ್ತು ಅನುಯಾಯಿಗಳು ಆಗಿರುವ ಒಡೆಯರುಗಳಿಗೂ ಮತ್ತು ಲಿಂಗಾಯತ ಜಂಗಮರಿಗೂ ಜಾತಿಯ ಹೆಸರಿನ ಬೇದವೊಂದನ್ನು ಬಿಟ್ಟರೆ ಬೇರೆ ಯಾವುದೇ ವ್ಯತ್ಯಾಸಗಳು ಅಷ್ಟೊಂದು ಕಂಡುಬರುವುದಿಲ್ಲ. ಒಡೆಯರು ಲಿಂಗಾಯತ ಜಂಗಮರಂತೆ ಲಿಂಗಧಾರಿಗಳೂ, ಕಟ್ಟಾ ಶಾಖಾಹಾರಿಗಳು ಆಗಿದ್ದಾರೆ. ಆದರೆ ಒಡೆಯರು, ಕುರುಬರು, ಜಂಗಮರು, ಲಿಂಗಾಯತರು ವ್ಯತ್ಯಾಸವಿರುವುದು ಹೆಸರಿನಲ್ಲಿ ಮಾತ್ರ. ಲಿಂಗಾಯತರಲ್ಲಿ ಜಂಗಮರು ಪುರೋಹಿತ ವರ್ಗದವರಾದ್ದರಿಂದ ಅಲ್ಲಿ ಅವರದೇ ಪ್ರತ್ಯೇಕ ಜಾತಿಯಾಗಿ ಪರಿಣಮಿಸಿದೆ. ಏಕೆಂದರೆ ಇವರು ಉಳಿದ ಲಿಂಗಾಯತ ಜಾತಿಯವರೊಂದಿಗೆ ವೈವಾಹಿಕ ಸಂಬಂಧಗಳನ್ನು ಮಾಡುವುದೇ ಇಲ್ಲ. ಹೀಗಾಗಿ ಲಿಂಗಾಯತರಿಗೂ ಜಂಗಮರಿಗೂ ಸಹಜವಾಗಿಯೇ ಸಾಮಾಜಿಕ ಅಂತರವುಂಟು. ಕುರುಬರಲ್ಲಿಯ ಒಡೆಯರದೂ ಒಂದು ಪ್ರತ್ಯೇಕವಾದ ಗುಂಪು. ಪುರೋಹಿತ ವರ್ಗದವರಾದ ಇವರು ಕುರುಬರಿಗೆ ಗುರುಸ್ಥಾನದಲ್ಲಿರುವುದರಿಂದ ಇವರ ಸಾಮಾಜಿಕ ಸ್ಥಾನಮಾನ ಕುರುಬರಿಗಿಂತ ಮೇಲಿನದಾಗಿದೆ. ಆದರೆ ಕುರುಬರಲ್ಲಿ ಒಡೆಯರದು ಒಂದು ಪ್ರತ್ಯೇಕ ಗುಂಪು. ಆದರೂ ಇದು ಒಂದು ಪ್ರತ್ಯೇಕ ಜಾತಿಯಾಗದಿರುವುದು ವಿಶೇಷ. ಏಕೆಂದರೆ ಒಡೆಯರೌ ಕುರುಬರ  ಮನೆಯ ಹೆಣ್ಣನ್ನು ತಮ್ಮ ಮನೆಗೆ ತೆಗೆದುಕೊಳ್ಳುತ್ತಾರೆ. ತಮ್ಮ ಮನೆಯ ಹೆಣ್ಣನ್ನು ಕುರುಬರ ಮನೆಗೆ ಕೊಡುತ್ತಾರೆ. ಹೀಗಾಗಿ ಅದನ್ನು ಒಂದು ಪ್ರತ್ಯೇಕ ಜಾತಿಯೆಂದು ಪರಿಗಣಿಸಲು ಸಾಧ್ಯವಾಗುವುದಿಲ್ಲ. ಡಾ. ಚಿದಾನಂದಮೂರ್ತಿ ಅವರು ಹೇಳುವಂತೆ – ‘ಒಡೆಯರದು ಒಂದು ಉಪಜಾತಿಯೆಂದು ಕರೆಯ ಬಯಸುವುದಾದರೆ ಅದು ಒಂದು ಜಾತಿಯಲ್ಲದ ಜಾತಿ’ (A caste which is no caste) ಎನ್ನಬೇಕಾಗುತ್ತದೆ. ಆಚಾರ ವಿಚಾರಗಳ ದೃಷ್ಟಿಯಿಂದ ನೋಡಿದರೆ ಒಡೆಯರು ಗುರುಗಳು, ಕುರುಬರು ಭಕ್ತವರ್ಗದವರು. ಒಬ್ಬರು ಕಟ್ಟಾ ಸಸ್ಯಾಹಾರಿಗಳು ಇನ್ನೊಬ್ಬರು ಮಾಂಸಾಹಾರವನ್ನು ಸ್ವೀಕರಿಸುವವರು. ಆದರೆ ಹೆಣ್ಣನ್ನು ಕೊಟ್ಟು-ತರುವ ದೃಷ್ಟಿಯಿಂದ ನೋಡಿದರೆ ನೆಂಟರಾಗಿರುವರು. ಇಂಥ ವ್ಯವಸ್ಥೆಯನ್ನು ಹೊಂದಿರುವ ಕುರುಬರ ಗುರು ಒಡೆಯರ ಪರಂಪರೆ ಭಾರತದಲ್ಲಿಯೇ ವಿಶಿಷ್ಟವಾದದ್ದು ಮತ್ತು ಅನನ್ಯವಾದದ್ದು ಎನ್ನುವುದು ಈ ಕಾರಣಕ್ಕಾಗಿಯೇ.

ಗುರುವರ್ಗದವರಾದ ಇವರನ್ನು ಒಡೆಯರು, ಒಡೇರು, ಒಡೇರಯ್ನೋರು, ಅಯ್ನೋರು, ಗುರುವಿನವರು, ಗುರುಗಳು, ಮಾರಾಯಗೋಳು ಎಂದು ಮುಂತಾಗಿ ಕರೆಯುತ್ತಿರುವುದು ವಾಡಿಕೆ. ಈ ಎಲ್ಲಾ ಹೆಸರುಗಳು ಇವರು ಗುರುವರ್ಗದವರು ಎಂಬುದನ್ನು ಸೂಚಿಸುತ್ತದೆ. ಅಲ್ಲದೇ ಇವರು ಕೂಡ ತಮ್ಮ ಹೆಸರಿನ ಕೊನೆಯಲ್ಲಿ ‘ಅಯ್ಯ’ ಎಂಬುದನ್ನು ಕಡ್ಡಾಯವಾಗಿ ಸೇರಿಸುತ್ತಾರೆ. ಉದಾ: ಚನ್ನಯ್ಯ ಒಡೆಯರ್, ಸಿದ್ಧಯ್ಯ ಒಡೆಯರ್, ರೇವಯ್ಯ ಒಡೆಯರ್ ಇತ್ಯಾದಿ. ಇವರ ಹೆಸರುಗಳ ಅಂತ್ಯದಲ್ಲಿರುವ ‘ಅಯ್ಯ’ ಎಂಬುದು ಇವರು ಗುರುವರ್ಗಕ್ಕೆ ಸೇರಿದವರು ಎಂಬುದನ್ನೇ ಸೂಚಿಸುತ್ತದೆ. ವೀರಶೈವ ಜಂಗಮರು ಕೂಡ ಸಾಮಾನ್ಯವಾಗಿ ‘ಅಯ್ಯ’ ಎಂದು ಕೊನೆಯಾಗುವ ಹೆಸರುಗಳನ್ನೇ ಇಟ್ಟುಕೊಳ್ಳುತ್ತಾರೆ. ‘ಅಯ್ಯಾಚಾರ’ (ಅಯ್ಯ+ಆಚಾರ್) ಎಂದರೆ ಪುರೋಹಿತರು ನಡೆಯಿಸುವ ಪೌರೋಹಿತ್ಯ ಎಂದು ಅರ್ಥವನ್ನು ಹೇಳಲಾಗಿದೆ.

ಒಡೆಯರ ಪರಂಪರೆಯ ಹಿನ್ನಲೆ

ಬ್ರಾಹ್ಮಣ ಪೂರೋಹಿತ ಮತ್ತು ವೀರಶೈವ ಜಂಗಮ ಪುರೋಹಿತಕ್ಕೆ ಪರ್ಯಾಯವಾಗಿ ಕುರುಬರು ತಮ್ಮದೆ ಆದ ‘ಒಡೆಯರು’ ಎಂಬ ಗುರುವರ್ಗವನ್ನು ಹುಟ್ಟುಹಾಕಿಕೊಂಡು ಅವರ ಮೂಲಕ ತಮ್ಮ ಧಾರ್ಮಿಕ ಸಾಮಾಜಿಕ ವಿಧಿ-ವಿಧಾನಗಳನ್ನು ನೇರವೇರಿಸಿಕೊಂಡು ಬರುತ್ತಲಿದ್ದಾರೆ. ಕುರುಬರ ಈ ಗುರು ಪರಂಪರೆಯು ಯಾವ ಕಾಲಘಟ್ಟದಲ್ಲಿ ಹುಟ್ಟು ಪಡೆಯಿತು? ಅದಕ್ಕೆ ಕಾರಣವಾದ ಸಂಗತಿಗಳೇನಿರಬೇಕು? ಎಂಬ ವಿಷಯವು ತುಂಬ ಕುತೂಹಲಕಾರಿಯಾಗಿವೆ. ಮೇಲಿನ ಪ್ರಶ್ನೆಗಳಿಗೆ ಉತ್ತರವನ್ನು ಕಂಡುಕೊಳ್ಳುವಲ್ಲಿ ಒಡೆಯರುಗಳು ಪರಂಪರಾಗತವಾಗಿ ಕಾಪಾಡಿಕೊಂಡು ಬಂದಿರುವ ತಾಮ್ರಪಟಗಳು, ಸುರುಳಿ ಪತ್ರಗಳು ಮತ್ತು ಕುರುಬ ಸಂಸ್ಕೃತಿಯನ್ನು ಕುರಿತು ಅಪೂರ್ವವಾದ ಮಾಹಿತಿಯನ್ನು ‘ತಗರ ಪವಾಡ’, ‘ಸಿದ್ಧಮಂಕ ಚರಿತೆ,’ ರಸ್ತಾಪುರ ಭೀಮಕವಿಯ ‘ಹಾಲ್ಮತೋತ್ತೇಜಕ ಪುರಾಣ’ ಮುಂತಾದ ಕೃತಿಗಳು ನೀಡುತ್ತವೆ.

ಗುರುವರ್ಗದವರಾದ ಒಡೆಯರನ್ನು ಅವರ ಪರಂಪರೆಯ ಹಿನ್ನಲೆಯನ್ನು ಕುರಿತು ಪ್ರಶ್ನೆಯನ್ನು ಕೇಳಿದರೆ ಸಾಮಾನ್ಯವಾಗಿ ಹೀಗೆ ಉತ್ತರಿಸುತ್ತಾರೆ. “ನಮ್ಮ ವಂಶದ ಮೂಲ ಪುರುಷ ಸರೂರು ಶಾಂತಮುತ್ತಯ್ಯನವರು. ಅವರು ಅಡವಿಯಲ್ಲಿ ಕುರಿಗಳನ್ನು ಮೇಯಿಸುತ್ತಲಿರುವಾಗ ಶ್ರೀ ಗುರು ರೇವಣಸಿದ್ಧರು ದರ್ಶಣವನ್ನು ನೀಡಿ, ಲಿಂಗದೀಕ್ಷೆಯನ್ನು ಕೊಟ್ಟು, ಕುರುಬ ಕುಲಕ್ಕೆ ಗುರುವನ್ನಾಗಿ ಮಾಡಿದರು. ಅವರ ಸಂತತಿಯವರೇ ನಾವು” ಎಂದು ಹೇಳುತ್ತಾರೆ. ಈ ಹೇಳಿಕೆಯನ್ನು ಅವರಲ್ಲಿ ಪರಂಪರಾಗತವಾಗಿ ಉಳಿದುಕೊಂಡು ಬಂದಿರುವ ಬಿರುದಾವಳಿಗಳು ಕೂಡ ಸಮರ್ಥಿಸುತ್ತವೆ. ಅಂಥ ಒಂದು ಬಿರುದಾವಳಿಯನ್ನು ಇಲ್ಲಿ ಉದಾಹರಣೆಯಾಗಿ ನೋಡಬಹುದು. “ಶ್ರೀಮತ್ಪರಮಹಂಸ ಪರಿವ್ರಾಜಕಾಚಾರ್ಯ ಪದವಾಕ್ಯ ಪ್ರಮಾಣ ಅಷ್ಟಾಂಗಯೋಗ ನಿಷ್ಟಾಗರಿಷ್ಟ ಆಶ್ರಮ ಚತುಷ್ಟಯಕ್ಕೊಡೆಯ ಕುರುಕುಲ ಮತಸ್ಥಾಪನಾಚಾರ್ಯ, ಶ್ರೀಮನ್ ಮಹಾ ರೇಣುಕಾಚಾರ್ಯ ವಂಶೋದ್ಭವ ಅಡ್ಡ ಅಂದಲ, ಅಸುರರ ತಲೆ, ಹಗಲು ದೀವಟಿಗೆ, ಹನುಮಧ್ವಜ, ಹಳದಿ ಕದಳಿಗಳಿಂ, ಛತ್ರ ಚಾಮರ ಸಾಲು ಸತ್ತಿಗೆಗಳು ಮಕರತೋರಣ ರುಂಡಮಾಲಾ ಝಲ್ಲಿ ನಗಾರಿ ನೌಪತ್ತುಗಳಿಂ ಸುರುಟೆ ಪಂಚಕಲಶಗಳೇ ಮುಂತಾದ ಅನೇಕ ಬಿರುದಾವಳಿಗಳಿಂ ವಿಭೂಷಿತರಾದ ಶ್ರೀಮಾನ್ ಆರ್ಯನೃಪ ವಂಶೀಯರಾದ ಕುರುಬರ ಜಗದ್ಗುರು ಸಾಕ್ಷಾತ್ ಸರೂರು ಸಿಂಹಾಸನಾಧಿಪತಿ ಶಾಂತ ಭಿಕ್ಷಾವರ್ತಿಗಳಾದ ಶ್ರೀ ಶ್ರೀ ಶಾಂತಮುತ್ತಯ್ಯ ವಡೆಯಾನ್ವಯರಾದ ಶ್ರೀ ಚಿನ್ಮೂಲಾದ್ರಿ ಸಿಂಹಾಸನಾಧಿಪತಿ ಶಾಂತಭಿಕ್ಷಾವರ್ತಿ ಶ್ರೀ ಶ್ರೀ ಕರಿಸಿದ್ಧಪ್ಪಯ್ಯ ಒಡೆಯರವರು” ಎಂದು ವರ್ಣಿಸಿರುವುದನ್ನು ನೋಡಿದರೆ ಶ್ರೀ ರೇವಣಸಿದ್ಧನ ವಂಶೋದ್ಬವನಾದ ಶಾಂತಮುತ್ತಯ್ಯನು ಸರೂರು ಸಿಂಹಾಸನಾಧಿಪತಿಯೆಂದೂ ಕುರುಬರ ಜಗದ್ಗುರು ಎಂದೂ ಮತ್ತು ಒಡೆಯರುಗಳು ಅವನ ವಂಶೋದ್ಭವರೆಂದು ಸ್ಪಷ್ಟವಾಗುತ್ತದೆ. ಅಲ್ಲದೆ ಕುರುಬರ ಮದುವೆಯ ಸಂದರ್ಭದಲ್ಲಿ ವಧು-ವರರಿಗೆ ಹಾರೈಸುವ ಮಂತ್ರವೂ ಈ ವಿಷಯವನ್ನು ಸಮರ್ಥಿಸುತ್ತದೆ.ಅದು ಹೀಗಿದೆ-

“ಕಲಿಕಲಿಯಾಗಿ
ಕರ್ಯಜ್ಜನಾಗಿ
ಭೀಮಣ್ಣನಾಗಿ
ಬಿಲ್ಲರಾಜ್ಯವನಾಳಿ
ಗುರುರೇವಣಸಿದ್ಧ ಕಟ್ಟಿದ
ಸೇಸೆ ಸ್ಥಿರವಾಗಿರಲಿ
ಸರೂರ ಶಾಂತಮುತ್ತಯ್ಯ
ಕಟ್ಟಿದ ಕಲ್ಯಾಣ ಸ್ಥಿರವಾಗಿರಲಿ
ಸೋಬತಿ ಸೋಬಾನ
ಸೋಬತಿ ಸೋಬಾನ”

ಪ್ರಸ್ತುತ ಹಾರೈಕೆಯ ಈ ಮಂತ್ರದಲ್ಲಿ ‘ಗುರುರೇವಣಸಿದ್ಧ’ ಮತ್ತು ‘ಸರೂರ ಶಾಂತಮುತ್ತಯ್ಯ’ ನವರ ಹೆಸರುಗಳು ದಾಖಲಾಗಿರುವುದು ಗಮನಾರ್ಹವಾದ ಸಂಗತಿಯಾಗಿದೆ. ಶ್ರೀ ಗುರು ರೇವಣಸಿದ್ಧ ಮತ್ತು ಸರೂರು ಶಾಂತಮುತ್ತಯ್ಯನವರು ಕುರುಬರ ಗುರುಪರಂಪರೆಯ ಪ್ರಸಿದ್ಧ ವ್ಯಕ್ತಿಗಳಾಗಿದ್ದಾರೆ ಎಂಬುದರಲ್ಲಿ ಯಾವುದೇ ಸಂದೇಹ ಉಳಿಯದು. ಹಾಗಾದರೆ ಮೇಲಿನ ಬಿರುದಾವಳಿಯಲ್ಲಿ ಮತ್ತು ಮಂತ್ರದಲ್ಲಿ ತಪ್ಪದೇ ಉಲ್ಲೇಖಗೊಂಡಿರುವ ಸರೂರು ಯಾವುದು? ರೇವಣಸಿದ್ದ, ಶಾಂತಮುತ್ತಯ್ಯನವರು ಯಾರು? ಅವರ ಜೀವನ ಕಾಲ ಯಾವುದು? ಎಂಬ ಸಂಗತಿಗಳನ್ನು ಕುರಿತು ಚರ್ಚಿಸಿದರೆ ಕುರುಬರ ಗುರುಪರಂಪರೆಯ ಇತಿಹಾಸದ ಮೇಲೆ ಬೆಳಕನ್ನು ಚಿಲ್ಲಿದಂತಾಗುತ್ತದೆ.

ವಿಜಾಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನಲ್ಲಿ ಸರೂರು ಎಂಬ ಗ್ರಾಮ ಇದೆ. ಈ ಗ್ರಾಮದಲ್ಲಿ ಪ್ರತಿಶತ ಎಂಬತ್ತರಷ್ಟು ಕುರುಬ ಜನಾಂಗದವರೇ ಇದ್ದಾರೆ. ಈ ಊರಿನ ಹೊರವಲಯದ ಗುಡ್ಡದ ಬದಿಯ ಬಯಲಿನಲ್ಲಿ ಪಂಚಕೂಟ ದೇವಾಲಯವಿದೆ. ಇದನ್ನು ರೇವಣಸಿದ್ಧೇಶ್ವರ ದೇವಾಲಯವೆಂದೂ, ಏಳು ಗುಡಿಯೆಂದು ಕರೆಯುತ್ತಾರೆ. ಈ ಗುಡಿಯ ಪಕ್ಕದಲ್ಲಿರುವ ಗುಡ್ಡದ ಮೇಲೆ ಗದ್ದುಗೆಯೊಂದು ಇದೆ. ಇದನ್ನು  ಶಾಂತಮುತ್ತಯ್ಯನ ಗದ್ದುಗೆಯೆಂದು ಕರೆಯುತ್ತಾರೆ. ದೇವಾಲಯ ಮತ್ತು ಈ ಗದ್ದುಗೆಯ ಅರ್ಚಕರು ಕುರುಬರ ಗುರುವರ್ಗದವರೇ ಆಗಿದ್ದಾರೆ. ಅವರುಗಳೂ ಸಹ ಶಾಂತಮುತ್ತಯ್ಯನವರು ಇಲ್ಲಿಯವರೇ. ಅವರು ಅನೇಕ ಪವಾಡಗಳನ್ನು ಮಾಡಿ ಸಮಾಧಿ ಹೊಂದಿದ ಸ್ಥಳವು ಇದೇ ಎಂದು ಹೇಳುತ್ತಾರೆ. ಅಲ್ಲದೆ ಈ ಊರಿನಲ್ಲಿರುವ ದೇವಾಲಯಗಳು, ಅವರು ಹೇಳುವ ಸ್ಥಳಪುರಾಣ, ಐತಿಹ್ಯಗಳು ಸಮರ್ಥಿಸುವುದರಿಂದ ಶಾಂತಮುತ್ತಯ್ಯ ಸರೂರು, ಕುರುಬರ ಮೂಲ ಗುರುಪೀಠ ವಿಜಾಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಸರೂರೇ ಎಂಬುದು ಸ್ಪಷ್ಟವಾಗುತ್ತದೆ.

ಶಾಂತಮುತ್ತಯ್ಯನ ಜೀವನಕ್ಕೆ ಸಂಬಂಧಿಸಿದ ವಿವರಗಳು ರಸ್ತಾಪುರ ಭೀಮಕವಿಯ ‘ಹಾಲ್ಮತೋತ್ತೇಜಕ ಪುರಾಣ’ ಮತ್ತು ‘ತಗರ ಪವಾಡ’ ಕೃತಿಗಳಲ್ಲಿ ತುಂಬ ವಿಸ್ತಾರವಾಗಿಯೇ ನಿರೂಪಿಸಲಾಗಿದೆ ಅದರಲ್ಲಿಯೂ ‘ತಗರ ಪವಾಡ’ ಕೃತಿಯಂತೂ ಒಂದರ್ಥದಲ್ಲಿ ಶಾಂತಮುತ್ತಯ್ಯ ಜೀವನ ಚರಿತ್ರೆಯೇ ಆಗಿದೆ. ಈ ಕೃತಿಯಲ್ಲಿ ಶಾಂತಮುತ್ತಯ್ಯನನ್ನು ಕುರಿತು ನಿರೂಪಿತಗೊಂಡಿರುವ ಸಂಗತಿಗಳನ್ನು ಹೀಗೆ ಸಂಗ್ರಹಿಸಬಹುದು-

“ಆದಿಗೊಂಡನ ಏಳು ಜನ ಮಕ್ಕಳಲ್ಲಿ ಕಿರಿಯವನು ಪದ್ಮಗೊಂಡ ಅಥವಾ ಉಂಡಾಡು ಪದ್ಮಣ್ಣ. ಈತನು ಒಮ್ಮೆ ತನ್ನ ಹೊಲದಲ್ಲಿ ಮುತ್ತುಗದ ಮರದ ಹತ್ತಿರವಿರುವ ಹುತ್ತವನ್ನು  ಸಮ ಮಾಡುತ್ತಿರುವಾಗ ಅದರೊಳಗಿಂದ ಅಸಂಖ್ಯಾತ ಕುರಿಗಳು ಹೊರಬಂದವು. ಅವುಗಳನ್ನು  ಕಂಡು ಆಶ್ಚರ್ಯಗೊಂಡ ಪದ್ಮಣ್ಣನು, ಬೀರಯ್ಯನೆಂಬ ಸಹಾಯಕನೊಂದಿಗೆ ಕುರಿಗಳನ್ನು ಮೇಯಿಸುತ್ತ ದೂರದ ಪ್ರದೇಶಗಳಿಗೆ ಹೋಗುತ್ತಾನೆ. ಹೀಗಿರುವಾಗ ಒಮ್ಮೆ ಅರಣ್ಯದಲ್ಲಿ ತಮ್ಮ ಕುರಿಗಳನ್ನು ತಿನ್ನಲು ಬಂದ ರಾಕ್ಷಸನನ್ನು ಬೀರಯ್ಯ ಕೊಲ್ಲುತ್ತಾನೆ. ರಾಕ್ಷಸನ ಆಶ್ರಯದಲ್ಲಿದ್ದ ಅವನ ಸಾಕುಮಗಳು ‘ಸಿರಿವಂತೆ’ಯನ್ನು ಉಂಡಾಡು ಪದ್ಮಣ್ಣ ಮದುವೆಯಾಗುತ್ತಾನೆ. ಈ ವೇಳೆಗಾಗಲೇ ಪದ್ಮಣ್ಣನಿಗೆ ಲಿಂಗಮ್ಮ ಎಂಬುವವಳೊಂದಿಗೆ ವಿವಾಹವಾಗಿತ್ತು. ಶಾಂತಯ್ಯನೆಂಬ ಮಗನು ಹುಟ್ಟಿದನು. ಹೆಂಡತಿ ಲಿಂಗಮ್ಮ ಮತ್ತು ಮಗ ಶಾಂತಯ್ಯರು ಆತನ ತಂದೆ ಆದಿಗೊಂಡ ಮತ್ತು ತಾಯಿ ಮಲ್ಲಮ್ಮರೊಂದಿಗೆ ತೊಗರ್ಸಿಯಲ್ಲಿಯೇ ಇದ್ದರು. ಅಡವಿಯಲ್ಲಿ ದೊರೆತೆ ಸಿರಿವಂತೆಯೊಂದಿಗೆ ಕುರಿಗಳನ್ನು ಮೇಯಿಸುತ್ತ ದೂರ ದೂರದ ಪ್ರದೇಶಗಳಿಗೆ ಹೋಗಿಬಿಡುತ್ತಾನೆ.

ಇತ್ತ ಪದ್ಮಗೊಂಡನ ತಾಯಿ ಮಲ್ಲಮ್ಮ ಮೊಮ್ಮಗ ಶಾಂತಯ್ಯನಿಗೆ ಪರವಿಗೊಂಡನ ಮಗಳು ದೇವಮ್ಮನೊಂದಿಗೆ ಮದುವೆಯನ್ನು ಮಾಡುತ್ತಾಳೆ. ಅನೇಕ ವರ್ಷಗಳ ತರುವಾಯ ಪದ್ಮಗೊಂಡನು ತೊಗರ್ಸಿ ಗ್ರಾಮಕ್ಕೆ ತನ್ನ ಕುರಿಹಿಂಡಿನೊಂದಿಗೆ ಬರುತ್ತಾನೆ. ಪದ್ಮಣ್ಣನು ತಾಯಿ ಮಲ್ಲಮ್ಮನನ್ನು ಕಂಡು, ತನ್ನ ಆಸ್ತಿಯಲ್ಲಿಯ ಪಾಲನ್ನು ಅಣ್ಣಂದಿರಿಗೆ ಬಿಟ್ಟು ತನ್ನ ಮಗ ಶಾಂತಯ್ಯನನ್ನು ಮತ್ತು ಹೆಂಡತಿಯನ್ನು ಕರೆದುಕೊಂಡು, ಕುರಿಗಳ ಹಿಂಡಿನೊಂದಿಗೆ ಮತ್ತೆ ದೂರು ಹೋಗುತ್ತಾನೆ. ಅಲ್ಲಿ ತಂದೆ ಪದ್ಮಗೊಂಡನು ಕಿರಿಯ ಹೆಂಡತಿ ಸಿರಿವಂತೆಯೊಂದಿಗೆ ಊಟ ಮಾಡುವುದು ಇರುವುದು ಮಗ ಶಾಂತಯ್ಯನಿಗೆ ಸರಿಬರುವುದಿಲ್ಲ. ಆದ್ದರಿಂದ ತಂದೆಯ ಹಿಂಡಿನಲ್ಲಿ ಅರ್ಧಭಾಗವನ್ನು ಪಡೆದುಕೊಂಡು ಹೆಂಡತಿ ದೇವಮ್ಮನೊಂದಿಗೆ ಬೇರೆಯಾಗಿ ಹೋಗಿಬಿಡುತ್ತಾನೆ. ತಂದೆಯಿಂದ ಬೇರೆಯಾಗಿ ಹೋದ ಶಾಂತಯ್ಯನು ತನ್ನ ಕುರಿಗಳನ್ನು ಮೇಯಿಸುತ್ತ ಅಚಲ ನಿಷ್ಠೆಯಿಂದ ಶಿವನನ್ನು ಪೂಜಿಸುತ್ತಾನೆ. ಅವನ ಭಕ್ತಿಗೆ ಮೆಚ್ಚಿದ ಶಿವನು ರೇವಣಸಿದ್ಧನ ರೂಪದಲ್ಲಿ ಶಾಂತಯ್ಯನಲ್ಲಿಗೆ ಬರುತ್ತಾನೆ. ಮನೆಗೆ ಬಂದ ಕೆಂಡಗಣ್ಣನನ್ನು ದಂಪತಿಗಳು ಶ್ರದ್ದೆ-ಭಕ್ತಿಯಿಂದ ಸತ್ಕರಿಸುತ್ತಾರೆ. ಶಾಂತಯ್ಯನ ಭಕ್ತಿಯಿಂದ ಸಂತೃಪ್ತಗೊಂಡ ಶಿವನು ಶಾಂತಯ್ಯನಿಗೆ ‘ಏನು ಬೇಕು ಬೇಡು’? ಎಂದು ಕೇಳುತ್ತಾನೆ. ಅದಕ್ಕೆ ಶಾಂತಯ್ಯನು “ಏನು ಬೇಡಲಿ ದೇವ, ನೀನಿತ್ತ ಭಾಗ್ಯವು ಕಡಿಮೆಯಲ್ಲ ಎನಗೆ, ಆದರೆ ಮೋಕ್ಷ ದೀಕ್ಷೆಗಳಿಲ್ಲದೆ ತಾನಿರುವುದು ಸಮ್ಮತವೇ?” ಎಂದು ದೀಕ್ಷೆಗಾಗಿ ಅಂಗಲಾಚಿ ಬೇಡಿಕೊಳ್ಳುತ್ತಾನೆ. ಅವನಾ ಕೋರಿಕೆಯನ್ನು ಮನ್ನಿಸಿ ರೇವಣಸಿದ್ದನು ಪಂಚ ಕಳಶಗಳನ್ನು ಹೂಡಿ ಶಾಂತಯ್ಯನಿಗೆ ದೀಕ್ಷೆಯನ್ನು ದಯಪಾಲಿಸುತ್ತಾನೆ. ಅದೇ ಸಮಯದಲ್ಲಿ ಅಲ್ಲಿ ಕೈಲಾಸದಿಂದ ಕರಿಯ ಮಲ್ಲಿಗೆಯ ಸರವು ಸುರಿದುದರಿಂದ ಅದು ‘ಸರವೂರು’ಎಂಬ ನಾಮದಿಂದ ಪ್ರಸಿದ್ಧವಾದ ಕ್ಷೇತ್ರವಾಯಿತು.

ಇತ್ತ ಕಲ್ಯಾಣ ಪಟ್ಟಣಗಳಲ್ಲಿ ಶರಣ ಕಿನ್ನರಿ ಬ್ರಹ್ಮಯ್ಯನು ಸಾಕಿದ ತಗರು ‘ಶಂಭು’ ಎಂಬ ಹೆಸರಿನಿಂದ ಮೆರೆಯುತ್ತ ಚೇಷ್ಟೆಯಿಂದ ಆಗಾಗ ದೇವರ ಪೂಜೆಯ ಅಲಂಕಾರವನ್ನು ಕೆಡಿಸುತ್ತಿರುತ್ತದೆ. ಇದರಿಂದ ಬೇಸತ್ತ ಕಿನ್ನರಿ ಬ್ರಹ್ಮಯ್ಯನು ಅದಕ್ಕೆ ಲಿಂಗಮುದ್ರೆಯನ್ನು ಹಾಕಿ, ಸರವೂರಿಗೆ ತೆಗೆದುಕೊಂಡು ಬಂದು ಶಿವಭಕ್ತ ಶಾಂತಯ್ಯನ ಕುರಿಯ ಹಿಂಡಿನಲ್ಲಿ ಬಿಟ್ಟು, ಅದನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಶಾಂತಯ್ಯನಿಗೆ ಒಪ್ಪಿಸಿ ಹೋಗುತ್ತಾನೆ.

ಕಲ್ಯಾಣ ಪಟ್ಟಣದಲ್ಲಿ ವಾಸವಾಗಿದ್ದ ಕುರುಬರು ಶರಣರಿಗೆ ಹಾಲುಮೊಸರು ಮಾರುವ ವೃತ್ತಿಯನ್ನು ಕೈಗೊಂಡಿರುತ್ತಾರೆ. ಒಮ್ಮೆ ಕುರುಬರು ಹಾಲಕಂಬಿಯ ಮೇಲೆ ಸತ್ತ ಕುರಿಯನ್ನು ಹೊತ್ತು ತಂದು ಮಾರುತ್ತಾರೆ. ಇದರಿಂದ ಕುಪಿತಗೊಂಡ ಶರಣರು ಕಲ್ಯಾಣ ಪಟ್ಟಣ ಅಪವಿತ್ರವಾಯಿತೆಂದು ಪ್ರತಿಭಟಿಸುತ್ತಾರೆ. ಈ ಕಾರಣಕ್ಕಾಗಿ ಕುರುಬರನ್ನು ‘ರಟ್ಟ ಮತ’ದವರೆಂದು ಕಲ್ಯಾಣ ಪಟ್ಟಣದಿಂದ ಹೊರಹಾಕುತ್ತಾರೆ. ಹೀಗೆ ಬಹಿಷ್ಕಾರಕ್ಕೆ ಒಳಗಾದ ಕುರುಬರು ಅಸ್ಪಶ್ಯರಂತೆ ಬದುಕುತ್ತಿರುತ್ತಾರೆ. ಶಿವನು ಸಿದ್ಧಶೆಟ್ಟಿಯ ರೂಪದಲ್ಲಿ ಏಳು ಬೇಲಿಗಳಾಚೆ ಬದುಕುತ್ತಿರುವ ಕುರುಬರಲ್ಲಿಗೆ ಬರುತ್ತಾನೆ. ಕುರುಬರೆಲ್ಲ ‘ಒಡೆಯನೆಂಬುವರಿಲ್ಲ ಹಿಡಿವರೆ ಕೊಂಬಿಲ್ಲ ಪೂಡವಿಯೊಳಗೆಮಗಾರುವಿಲ್ಲ ಕಡುಪಾಪಿಗಳಾಗಿ ತಿರುಗುತಿಹೆವು’ ಎಂದು ತಮ್ಮ ಸಂಕಟವನ್ನು ಅವನ ಮುಂದೆ ಹೇಳಿಕೊಳ್ಳುತ್ತಾರೆ. ಆಗ ಸಿದ್ಧಶೆಟ್ಟಿಯು ಇಲ್ಲಿಗೆ ಹನ್ನೆರಡು ಯೋಜನದಲ್ಲಿ ಇರುವ ‘ಸರವೂರು’ ಎಂಬ ಗ್ರಾಮದಲ್ಲಿ ಶರಣ ಶಾಂತಯ್ಯನೆಂಬುವವನು ಇರುವನು. ಅವನಿಗೆ ಮೊರೆಹೊಕ್ಕು ಅವನಿಂದ ಕುಲವಂತರಾಗಿ ಎಂದು ಹೇಳುತ್ತಾನೆ. ಆಗ ಕುರುಬ ಪ್ರಮುಖರಾದ ದಡ್ಡೋಡಿನ ಹೆಗ್ಗೊಂಡಗೌಡ, ಉದಗಿರಿಯ ಕೇತಗೌಡ, ಚನ್ನವಾರದ ನಾಡ ಹೆಗ್ಗೊಂಡಗೌಡ, ಮಳೆಯ ಬೇಡದ ಸಿದ್ದೇಗೌಡ, ಹೇಮಾವತಿಯ ಚಿಗದೇವಗೌಡ, ಸೊನ್ನಲಪುರದ ಸಿರಿಗೌಡ, ಕಾಮಳಿಯ ಕರಿತಿಮ್ಮೆಗೌಡ, ರಾಮೇಗೌಡ, ಲಕ್ಕೇಗೌಡ, ಅಂಕನಹಳ್ಳಿಯ ಆದಿಗೊಂಡ, ರೇವಣ್ಣ, ಬಂಕಾಪುರದ ಭದ್ರಗೌಡ, ಶಂಕರಪುರದ ರಾಮಣ್ಣಗೌಡ ಮುಂತಾದ ಕುರುಬಗೌಡ ಪ್ರಮುಖರು ಸರವೂರು ಶಾಂತಮುತ್ತಯ್ಯನಲ್ಲಿಗೆ ಬರುತ್ತಾರೆ. ಅವನಲ್ಲಿ ಕಲ್ಯಾಣಪಟ್ಟಣದಲ್ಲಿ ಶರಣ ಕುಲದವರಿಂದ ತಮಗಾಗಿರುವ ಅನ್ಯಾಯವನ್ನು ತೋಡಿಕೊಳ್ಳುತ್ತಾರೆ. ಇದೇ ಸಮಯದಲ್ಲಿ ಕಿನ್ನರಿ ಬ್ರಹ್ಮಯ್ಯನು ಶಾಂತಯ್ಯನ ಹಿಂಡಿನಲ್ಲಿ ಬಿಟ್ಟಿರುವ ತಗರು ಮಡಿದಿರುವ ಸುದ್ದಿಯನ್ನು ತುರುಕಾರನೊಬ್ಬ ಬಂದು ಹೇಳುತ್ತಾನೆ. ಆಗ ಶಾಂತಯ್ಯನು ಸತ್ತಿರುವ ತಗರವನ್ನು ಅಲಂಕರಿಸಿ ಪುಷ್ಪಕದಲ್ಲಿರಿಸಿಕೊಂಡು ಸಕಲ ಕುರುಬಗೌಡರೊಂದಿಗೆ ಕಲ್ಯಾಣಕ್ಕೆ ಬರುತ್ತಾನೆ. ಕಲ್ಯಾಣದ ರಾಜ ಬೀದಿಯಲ್ಲಿ ಸತ್ತ ತಗರನ್ನು ಪುಷ್ಪಕದಲ್ಲಿರಿಸಿಕೊಂಡು ಮೆರವಣಿಗೆಯನ್ನು ಮಾಡುತ್ತ ಬರುತ್ತಿರುತ್ತಾರೆ. ಮಲ್ಲಿಶೆಟ್ಟಿಗಳು ಅದನ್ನು ತಡೆಯುತ್ತಾರೆ. ಆಗ ಶರಣರಿಗೂ ಮತ್ತು ಕುರುಬರಿಗೂ ವಾದ ಬೀಳುತ್ತದೆ. ಸತ್ತಿರುವ ತಗರನ್ನು ಯಾರು ಬದುಕಿಸುತ್ತಾರೆಯೋ ಅವರು ವಾದದಲ್ಲಿ ಗೆದ್ದಂತೆ. ಶಾಂತಯ್ಯನು ಅರಸ ಬಿಜ್ಜಳ, ಬಸವಣ್ಣ ಮತ್ತು ನೆರೆದಿರುವ ಸಕಲ ಶರಣರ ಸಮ್ಮುಖದಲ್ಲಿ ಸತ್ತಿರುವ ತಗರನ್ನು ಬದುಕಿಸಿ ಪವಾಡವನ್ನು ಗೆಲ್ಲುತ್ತಾನೆ. ಅಲ್ಲಿಂದ ಅರಸ ಬಿಜ್ಜಳ, ಬಸವಣ್ಣ ಮುಂತಾದ ಶರಣರು ಶಾಂತಯ್ಯನ ಮಹಿಮೆಯನ್ನು ಕೊಂಡಾಡುತ್ತಾರೆ. ಅಷ್ಟೇ ಅಲ್ಲ, ಸ್ವತಃ ಬಸವಣ್ಣನು-

ಹಾಲುಮತದ ಕುಲದವರ್ಗೆಲ್ಲ ಶಾಂತಯ್ಯ
ಲೋಲ ನೀನೇ ಗುರುವಾಗಿ
ಭೂಲೋಕದೊಳು ಕೀರ್ತಿವಂತನೆನಿಸಿಕೊಂಡೆ
ಮೇಲಾಗಿ ಕುಲವನುದ್ಧರಿಸಿ (ತಗರ ಪವಾಡ ೭-೩೮)

ಎಂದು ಕೊಂಡಾಡಿ ಶಾಂತಯ್ಯನ ಹಣೆಗೆ ವಿಭೂತಿಯನ್ನು ಹಚ್ಚಿ ‘ಹಾಲ ಕುಲದವರ್ಗೆಲ್ಲ ನೀನು ಗುರುವಾಗು’ಎಂದು ಹರಸುತ್ತಾನೆ. ಅಷ್ಟೇ ಅಲ್ಲ ಗುರುತನದ ಕುರುಹಾಗಿ ‘ಮೂರೇಣಿನ ಕಂಥೆ’ (ಕಂಬಳಿ)ಯನ್ನು ನೀಡುತ್ತಾನೆ. ಇದು ತಗರ ಪವಾಡ ಕೃತಿಯಲ್ಲಿ ನಿರೂಪಿತಗೊಂಡಿರುವ ಶಾಂತಮುತ್ತಯ್ಯನ ಜೀವನ ಚಿತ್ರಣ.

ಈ ಕೃತಿಯಲ್ಲಿ ನಿರೂಪಿತಗೊಂಡಿರುವ ಸಂಗತಿಗಳ ಹಿನ್ನೆಲೆಯಲ್ಲಿ ಶಾಂತಮುತ್ತಯ್ಯನನ್ನು ಕುರಿತು ಹೀಗೆ ಹೇಳಬಹುದು. ಶಾಂತಮುತ್ತಯ್ಯನು ಉಂಡಾಡು ಪದ್ಮಣ್ಣ ಮತ್ತು ಮಲ್ಲಮ್ಮ ಎಂಬ ದಂಪತಿಗಳ ಮಗನು. ಇವನು ಒಬ್ಬ ದೊಡ್ಡ ಶಿವಭಕ್ತ. ಕುರಿಗಳನ್ನು ಕಾಯುತ್ತಲೇ ಭಕ್ತಿ ಸಾಧನೆಯನ್ನು ಮಾಡಿ ಶಿವನನ್ನು ಒಲಿಸಿಕೊಂಡ ಸಿದ್ದಿ ಪುರುಷ. ಇಂಥ ಸಿದ್ಧ ಪುರುಷನಿಗೆ ದೀಕ್ಷೆಯನ್ನು ನೀಡಿ ಆಶೀರ್ವದಿಸಿದ ಮತ್ತೊಬ್ಬ ಸಿದ್ದ ಪುರುಷ ರೇವಣಸಿದ್ದ. ರೇವಣಸಿದ್ಧನು ಶಾಂತಮುತ್ತಯ್ಯನಿಗೆ ದೀಕ್ಷೆಯನ್ನು ನೀಡಿ ಆಶೀರ್ವದಿಸಿದ ಸ್ಥಳವೇ ಸರವೂರು. ಅವನು ದೀಕ್ಷೆಯನ್ನು ನೀಡುವಾಗ ಆಕಾಶದಿಂದ ಕರಿಯ ಮಲ್ಲಿಗೆಯ ಸರವು ಸುರಿದುದರಿಂದ ಈ ಊರಿಗೆ ‘ಸರವೂರು’ ಎಂಬ ಹೆಸರು ಬಂದಿತು ಎಂಬುದು ಪ್ರತೀತಿ. ಈ ಊರಿನಲ್ಲಿಯ ದೇವಸ್ಥಾನಗಳು, ಶಾಂತಮುತ್ತಯ್ಯನವರ ಗದ್ದುಗೆ, ಆ ಊರಿನಲ್ಲಿ ಪರಂಪರಾಗತವಾಗಿ ಮುಂದುವರಿದುಕೊಂಡು ಬಂದ ಗುರುವರ್ಗದವರ ಸಂತತಿಯವರನ್ನು ಗಮನಿಸಿದರೆ ಈ ಸಂಗತಿಗಳ್ ಚಾರಿತ್ರಿಕವಾಗಿ ಸತ್ಯ ಸಂಗತಿಗಳೆಂದು ಹೇಳಬೇಕಾಗುತ್ತದೆ.

ಹೀಗೆ ರೇವಣಸಿದ್ಧನಿಂದ ದೀಕ್ಷೆಗೊಂಡು ಕಲ್ಯಾಣ ಪಟ್ಟಣದಲ್ಲಿ ಶರಣರ ಸಮ್ಮುಖದಲ್ಲಿ ‘ತಗರ ಪವಾಡ’ವನ್ನು ಮೆರೆದ ಶಾಂತಮುತ್ತಯ್ಯನು ಒಬ್ಬ ಚಾರಿತ್ರಿಕ ಮಹತ್ವವುಳ್ಳ ವ್ಯಕ್ತಿಯಾಗಿದ್ದಾನೆ. ಈತನ ಮಹಿಮಾಸ್ಪದ ವ್ಯಕ್ತಿತ್ವವನ್ನು ಶಿರವಾಳ (೧೧೭೦), ಕೆಲ್ಲೂರು (೧೧೭೫), ಹೋತಗಲ್ಲ (೧೧೭೫), ಶಿರವಾಳ (೧೧೭೮) ಶಾಸನಗಳು “ಶಿವಯೋಗಿ ಶಾಂತಿಮಯ್ಯಂಗಳು”, “ಶ್ರೀ ಮದಣಿಮಾದ್ಯಷ್ಟಗುಣ ಸಂಪನ್ನರುಂ ತತ್ವಜ್ಞಾನ ಸಂಪನ್ನ ಪ್ರಸನ್ನಯಂ” ಎಂದು ವರ್ಣಿಸಿರುವುದನ್ನು ಗಮನಿಸಬೇಕು. ಅಲ್ಲದೆ ಇವನಿಗೆ ಕುರುಬ ಕುಲದ ಗುರುತನವು ದೊರಕಿರುವ ಸಂಗತಿಯನ್ನು ಕಲ್ಯಾಣ ಪಟ್ಟಣದೊಳಗೆ ಶಾಸನವಾಗಿ ಕೆತ್ತಿಸಿದ ಸಂಗತಿಯೊಂದನ್ನು ಕುರುಬರಲ್ಲಿ ದೊರೆಯುವ ಜಾನಪದ ಗೀತೆಯೊಂದು ಹೀಗೆ ದಾಖಲಿಸುತ್ತದೆ.

ಕಲ್ಯಾಣ ಪಟ್ಟಣದೊಳಗೆ ಅಲ್ಲೇನು ಚೋಜಿಗ
ಅಲ್ಲಿ ನಮ ಗುರುವೀಗೆ ಗುರುತನ ಆದವೆಂದು
ಕಲ್ಲೀಗಿ ಸಾಸಣವೊಡುದಾವು

ಒಟ್ಟಿನಲ್ಲಿ ಮೇಲಿನ ಆಕರಗಳಿಂದ ವ್ಯಕ್ತವಾಗುವ ಸಂಗತಿಗಳನ್ನು ಮನದಂದರೆ ಕುರುಬರ ಗುರುಪರಂಪರೆಯನ್ನು ಕುರಿತು ಹೀಗೆ ಹೇಳಬಹುದು. ಉಂಡಾಡು ಪದ್ಮಣ್ಣ ಮಗನೂ ಶಿವಭಕ್ತನೂ ಸಿದ್ಧ ಪುರುಷನೂ ಆದ ಹಿಂಡಿನ ಶಾಂತಮುತ್ತಯ್ಯನಿಗೆ ‘ಸಿದ್ಧಸಂಪ್ರದಾಯದ ರೇವಣಸಿದ್ದನು ದೀಕ್ಷೆಯನ್ನು ನೀಡಿ ಗುರುಕಂಕಣವನ್ನು ಕಟ್ಟಿದವನು. ಈ ಶಾಂತಮುತ್ತಯ್ಯನು ಕಲ್ಯಾಣ ಪಟ್ಟಣದಲ್ಲಿ ಶರಣ ಸಮ್ಮುಖದಲ್ಲಿ ‘ತಗರ ಪವಾಡ’ ಗೆದ್ದು ಕುರುಬ ಕುಲದ ಮೊದಲ ಗುರುವಾಗಿ ನೇಮಕಗೊಂಡನು. ಈ ಕುರುಬರ ಗುರುಪರಂಪರೆಯು ಅಸ್ತಿತ್ವಕ್ಕೆ ಬಂದಿರುವುದು ೧೨ನೆಯ ಶತಮಾನದ ಸಂಕ್ರಮಣ ಸಂದರ್ಭದಲ್ಲಿಯೇ ಎಂಬುದು ಗಮನಾರ್ಹವಾದ ಸಂಗತಿಯಾಗಿದೆ. ಇದರಿಂದ ಕುರುಬರ ಗುರುಪರಂಪರೆಯ ಮೊದಲ ವ್ಯಕ್ತಿ ರೇವಣಸಿದ್ಧರಿಂದ ದೀಕ್ಷಿತವಾದ ಸರವೂರು ಶಾಂತಮುತ್ತಯ್ಯನಾದರೆ, ಸರವೂರು ಕುರುಬರ ಗುರುಪರಂಪರೆಯ ಮೂಲ ಪೀಠವೆಂದು ಹೇಳಬೇಕಾಗುತ್ತದೆ.

ಈ ಗುರುಪರಂಪರೆಯ ಮುಂದುವರಿಕೆಯಾಗಿ ಶಾಂತಮುತ್ತಯ್ಯನ ಸಂತತಿಯವರೇ ಆದ ಒಡೆಯರು (ಶಾಂತೊಡೆಯರು) ಕುರುಬರ ಗುರುಗಳಾಗಿ ಕಾರ್ಯವನ್ನು ನಿರ್ವಹಿಸುತ್ತ ಬಂದಿರುವುದನ್ನು ಕಾಣುತ್ತೇವೆ. ಕುರುಬ ಜನರು ಸಾಂದ್ರವಾಗಿರುವ ಕಡೆಗಳಲ್ಲಿ ಇವರು ಕಂಡುಬರುತ್ತಾರೆ.

ಆಕರಗ್ರಂಥಗಳು

೧. ತಗರು ಪವಾಡ: (ಸಂ) ಡಾ. ಎಂ.ಎಂ. ಕಲಬುರ್ಗಿ, ಸಿ.ಕೆ. ಪರಶುರಾಮಯ್ಯ, ಎಫ್.ಟಿ. ಹಳ್ಳಿಕೇರಿ, ವಿದ್ಯಾನಿಧಿ ಪ್ರಕಾಶನ, ಗದಗ,೨೦೦೩.

೨. ಪಾವನ: ಕಾಗಿನೆಲೆ ಶ್ರೀ ಕನಕ ಗುರುಪೀಠದ ಸಂಸ್ಮರಣ ಗ್ರಂಥ.

೩. ಕುರುಬರ ಗುರು ಒಡೆಯರು: ಸಾಂಸ್ಕೃತಿಕ ಅಧ್ಯಯನ: ಡಾ. ಬಿ.ಜಿ.ಬಿರಾದಾರ, ವಿಕಾಸ ಪ್ರಕಾಶನ ಹೊಸಪೇಟೆ, ೨೦೦೯.

೪. ಕಂಠಪತ್ರ-೨: ಡಾ. ಎಫ್.ಟಿ. ಹಳ್ಳಿಕೇರಿ, ವಿಕಾಸ ಪ್ರಕಾಶನ, ಹೊಸಪೇಟೆ, ೨೦೦೪.

೫. ಕಾಯಕಯೋಗಿ: ಮೈಲಾರಪ್ಪ ಮೆಣಸಗಿ ಸಂಸ್ಕರಣ ಗ್ರಂಥ, ವಿದ್ಯಾನಿಧಿ ಪ್ರಕಾಶನ ಗದಗ.