ಕರ್ನಾಟಕದ ಚರಿತ್ರೆ ಮತ್ತು ಕುರುಬರು

ಪಶುಪಾಲನೆ ಮತ್ತು ಕೃಷಿಯನ್ನು ಪ್ರಮುಖ ವೃತ್ತಿಯನ್ನಾಗಿ ಅವಲಂಬಿಸಿದ್ದ ಕುರುಬರು ಕಾಲಕ್ರಮೇಣ ರಾಜಕೀಯದಲ್ಲಿ ಆಸಕ್ತಿವಹಿಸಿದರು. ಪ್ರಾಚೀನ ಮರವ ಜನಾಂಗಕ್ಕೆ ಸೇರಿದವರಾಗಿದ್ದರೆಂದು ಹೇಳಿಕೊಳ್ಳುತ್ತಿದ್ದ ಸೂತಪತಿಗಳು ದಕ್ಷಿಣ ಭಾರತದಲ್ಲಿ ರಾಜ್ಯಭಾರ ಮಾಡುತ್ತಿದ್ದರು. ಅವರನ್ನು ಸೋಲಿಸಿ ಕುರುಬರು ರಾಜ್ಯವನ್ನು ವಶಪಡಿಸಿಕೊಂಡರು. ‘ಪುಲಾಲದ ರಾಜ’ ಎಂದು ಕರೆಯಿಸಿಕೊಂಡ ದ್ರಾವಿಡ ದೇಶದ ಅಧಿಪತಿಯಾದ ಕುರುಬ ಮುಖಂಡನನ್ನು ‘ಕಾಮಂಡ ಕುರುಬ ಪ್ರಭು’ ಎಂದು ಕರೆಯುತ್ತಿದ್ದರು.

[1] ನಂತರ ಅನೇಕ ಪ್ರದೇಶಗಳನ್ನು ವಶಪಡಿಸಿಕೊಳ್ಳುತ್ತ ರಾಜವಂಶಗಳನ್ನು ಸ್ಥಾಪಿಸಿದರು. ಹೀಗೆ ದಕ್ಷಿಣ ಭಾರತದ ರಾಜಕೀಯ ಚರಿತ್ರೆಯಲ್ಲಿ ಸ್ಥಾನ ಪಡೆದುಕೊಳ್ಳುವತ್ತ ಹೆಜ್ಜೆ ಹಾಕಲಾರಂಭಿಸಿತು. ಇದನ್ನು ಸರ್ ಡಬ್ಲೂ ಎಲಿಯಟ್ಟ ಅವರು.

“The Kurubas one of the most important elements in the early population of South India. They appear as Kurumban’s in Tamil and Malayali, as kurubas in Kanarase…. In early times in the east karnataka they are said to have formed a Federal community of twenty four states, to have been converted to Buddism to have gained Much skill in the arts and to have been overthrow by a cholo kings of Tanjore in the fifth or sixth century”.[2]

ಏಳನೆಯ ಶತಮಾನದಲ್ಲಿ ದಕ್ಷಿಣ ಭಾರತದ ಪ್ರಬಲ ಅರಸು ಮನೆತನವಾದ ಪಲ್ಲವರ ಆಧುನಿಕ ಪ್ರತಿನಿಧಿಗಳು ಕುರುವರು.[3] ಗೋವಾ ಪ್ರಾಂತ್ಯದಲ್ಲಿ ಇವರನ್ನು ಕುರುಚಿ[4] ಎಂದು ಕರೆಯುವರು. ತಮಿಳು ನಿಘಂಟು ಬರೆದ ಸಿಂಗಳಮುನಿ ಕುರುಂಬನ್ ಎನ್ನುವುದಕ್ಕೆ “ಕುರುನಿಲುಮನ್ನಾರ” ಎಂಬ ಅರ್ಥ ನೀಡಿದ್ದಾನೆ. ಕುರುಂಬರ್ ನಾಡು ಮಲಬಾರ್ ತೀರದಲ್ಲಿ ಪ್ರಸಿದ್ಧವಾಗಿದೆ. ಆ ನಾಡಿನ ಚೆರುಮಾನ್ ಪೆರುಮಾಳ್ ಎಂಬುವನು ಮಲೆಯಾಳ ದೇಶವನ್ನೆಲ್ಲಾ ಆಧೀನಕ್ಕೆ ತೆಗೆದುಕೊಂಡು ಅಸಂಖ್ಯಾತ ಸಾಮಂತ ರಾಜರುಗಳನ್ನು ನಾಲ್ಕು ಭಾಗಗಳನ್ನಾಗಿ ಮಾಡಿದನು. ಅವುಗಳೆಂದರೆ, ಕೊಲಟನಾಡು, ವೆನೇತ್ರ (ತಿರುವಾಂಕೂರು) ಪೆರಂಬೂರು (ಕೊಚ್ಚಿ) ಎರ್ನಾಡು (ಕುಮರಿ) ಇವರ ಸಾಮ್ರಾಜ್ಯ ವಿಸ್ತಾರವಾಗಿತ್ತು. ನೀರಂಪೂರು ಮತ್ತು ಸಾಲಪಾಕ್ಕಂ ಎಂಬ ಪಟ್ಟಣಗಳಲ್ಲಿ ಆಳುತ್ತಿದ್ದ ಕುರುಬರಾಜರು ೨೪ ಕೋಟೆಗಳನ್ನು ಕಟ್ಟಿಕೊಂಡು ಆಳ್ವಿಕೆ ನಡೆಸಿದರೆಂದು ಹೇಳಲಾಗಿದೆ.

ದಕ್ಷಿಣ ಭಾರತದಲ್ಲಿ ಅತ್ಯಂತ ವೈಭವದಿಂದ ರಾಜ್ಯಭಾರ ಮಾಡಿದ ಪ್ರಾಚೀನ ಅರಸರೆಂದರೆ ಪಲ್ಲವರು. ಇವರ ಮೂಲ ಪುರುಷರು ಪ್ರಾಚೀನ ತೊಂಡೆ ಮಂಡಲ ಪ್ರದೇಶದಲ್ಲಿದ್ದ ಕುರುಬರು ಎಂದು ಹೇಳಲಾಗಿದೆ. ಇವರು ಕ್ರಿ.ಶ. ಸು. ೪ನೆ ಶತಮಾನದಿಂದ ೮ನೆ ಶತಮಾನದವರೆಗೆ ದಕ್ಷಿಣ ಭಾರತದ ರಾಜಕೀಯ ಜೀವನದಲ್ಲಿ ಅತ್ಯಂತ ಪ್ರಮುಖ ಪಾತ್ರವಹಿಸಿದ್ದರು. ತೊಂಡೆ ಮಂಡಲವು ಉತ್ತರ ಪೆನ್ಹಾರ್ ಮತ್ತು ಉತ್ತರ ವೇಲಾರ್ ನದಿಗಳ ಪ್ರದೇಶದ ನಡುವೆ ಬರುತ್ತದೆ. ಇದನ್ನು ಕುರುಂಬ ಭೂಮಿ, ಕುರುಂಬನಾಡು ಎಂದು ಕರೆಯಲಾಗಿದ್ದಿತು.[5] ಇದರ ರಾಜ್ಯವನ್ನು ಚೋಳರಾಜರು ವಶಪಡಿಸಿಕೊಂಡರು. ಹೀಗೆ ಚೋಳರಿಂದ ಸೋಲಿಸಲ್ಪಟ್ಟ ಕುರುಂಬರೇ ಇಂದಿನ ನೀಲಗಿರಿ, ವೈನಾಡು, ಹೆಗ್ಗಡದೇವನಕೋಟೆ, ಗುಂಡ್ಲುಪೇಟೆ, ಹುಣಸೂರು ಪ್ರದೇಶಗಳಲ್ಲಿ ಕಾಣಿಸುತ್ತಿರುವ ಗಿರಿಜನರು ಎಂದು ಮಾನವಶಾಸ್ತ್ರಜ್ಞರು ಗುರುತಿಸಿದ್ದಾರೆ.

ವಿಜಯನಗರ ಪಟ್ಟಣ ಕಟ್ಟಿದವರಾರು?

ಕರ್ನಾಟಕ ರಾಜಕೀಯ ಇತಿಹಾಸದಲ್ಲಿ ವಿಜಯನಗರ ಸಾಮ್ರಜ್ಯಕ್ಕೆ ಅಗ್ರಗಣ್ಯ ಸ್ಥಾನವಿದೆ. ಈ ರಾಜ್ಯವು ಕ್ರಿ.ಶ. ೧೩೩೬ರಲ್ಲಿ ತುಂಗಭದ್ರಾ ನದಿಯ ದಂಡೆಯ ಮೇಲೆ ಸ್ಥಾಪನೆಯಾಯಿತು. ಇದನ್ನು ಸಂಗಮನ ಮಕ್ಕಳಾದ ಹರಿಹರ ಬುಕ್ಕರು ಸ್ಥಾಪಿಸಿರುವುದು ಐತಿಹಾಸಿಕ ಸತ್ಯವಾಗಿದೆ. ಇವರು ಮೂಲತಃ ಕುರುಬ ಜಾತಿಗೆ ಸೇರಿದ್ದರೂ ನಂತರದಲ್ಲಿ ಕ್ಷತ್ರಿಯರಾಗಿ ರಾಜ್ಯವಾಳಿದರು. ಏಕೆಂದರೆ ಅಂದಿನ ಸಂದರ್ಭದಲ್ಲಿ ಇಂತಹ ಅನಿವಾರ್ಯತೆ ಅವರಿಗಿತ್ತು. ಅಂದು ಅವರ ಬಳಿ ಎಷ್ಟೇ ಅಂತಸ್ತು ಇದ್ದರೂ ಅವರನ್ನು ಜಾತಿಯ ಅಂತಸ್ತಿನಿಂದ ಗುರುತಿಸಲಾಗುತ್ತಿತ್ತು. ಈ ಹಿನ್ನಲೆಯಲ್ಲಿ ಅವರು ಕ್ಷತ್ರಿಯರಾಗಿ ಬಾಳಿರಬಹುದು. ನಂತರ ಅವರು ತಮ್ಮ ಮೂಲದ ಬಗ್ಗೆ ವಿವಿಧ ಬಗೆಯ ಶ್ರೇಷ್ಠ ಕುಲದ ಕಟ್ಟು ಕಥೆಗಳನ್ನು ಸೃಷ್ಟಿಸಲ್ಪಟ್ಟಿರಬಹುದೆನ್ನಬಹುದು.

ವಿಜಯನಗರ ಸಾಮ್ರಾಜ್ಯದ ಸ್ಥಾಪಕರು ಹರಿಹರ ಮತ್ತು ಬುಕ್ಕರು ಎಂಬ ವಿಚಾರ ಎಲ್ಲರಿಗೂ ಗೊತ್ತಿರುವ ಸಂಗತಿಯೇ ಆಗಿದೆ. ಇವರು ವಿಜಯನಗರ ಸಾಮ್ರಾಜ್ಯವನ್ನಾಳಿದ ಮೊದಲ ವಂಶವೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಸಂಗಮ ವಂಶದವರು. ಈ ಸಂಗಮ ಹರಿಹರ ಮತ್ತು ಬುಕ್ಕನ ತಂದೆ ಹರಿಹರ ಮತ್ತು ಬುಕ್ಕ ತಾವು ತಮ್ಮ ತಂದೆ ಸಂಗಮ ವಂಶದವರು ಎಂದು ಹೆಮ್ಮೆಯಿಂದ ಹೇಳಿಕೊಳ್ಳುವರು. ಈ ಸಂಗಮ ಕುರುಬ ಜನಾಂಗದ ವೀರ. ಇವನು ಕಂಪಿಲ ದೊರೆಯ ಸೇನಾ ದಂಡನಾಯಕನಾಗಿದ್ದನು. ಚಕ್ರವರ್ತಿಯ ಪುತ್ರಿ ಕಾಮಾಂಬಿಕೆಯನ್ನು ಮದುವೆಯಾಗಿ ಇವಳಿಂದ ಬುಕ್ಕಣ್ಣ, ಕಂಪಣ್ಣ, ಮುದ್ದಪ್ಪ, ಮಾರಪ್ಪ ಎಂಬ ನಾಲ್ಕು ಗಂಡು ಮಕ್ಕಳನ್ನು ತನ್ನ ಮತ್ತೊಬ್ಬ ಪತ್ನಿಯಿಂದ ಹುಕ್ಕ (ಹರಿಹರ)ನನ್ನ ಪಡೆದಿದ್ದ. ಹೀಗಾಗಿ ಅವನಿಗೆ ಐದು ಜನ ಗಂಡು ಮಕ್ಕಳು. ಇವರು ಕುರುಬರೆಂದು ಹೇಳಲು ಸಾಕಷ್ಟು ಆಧಾರಗಳು ಇದುವರೆಗೆ ಲಭ್ಯವಾಗಿದೆ. ರಾಬರ್ಟ ಸೀವೆಲ್ಲರೂ ತಮ್ಮ ಕೃತಿಯಲ್ಲಿ ದಾಖಲಿಸಿರುವಂತೆ.

“ಸನ್ಯಾಸಿ ಮಾಧವನ ಗುಪ್ತ ನಿಧಿಯ ಶೋಧದ ನಂತರ ವಿಜಯನಗರವನ್ನು ಸಂಸ್ಥಾಪಿಸಿದನೆಂದೂ ಅದನ್ನು ತಾನೇ ಆಳಿದನೆಂದೂ ಮತ್ತು ತನ್ನ ಮರಣಾನಂತರ ಅದನ್ನು ತಾನೇ ಆಳಿದನೆಂದೂ ಮತ್ತು ತನ್ನ ಮರಣಾನಂತರ ಅದನ್ನು ಒಂದು ಕುರುಬ ಮನೆತನಕ್ಕೆ ಬಿಟ್ಟು ಹೋದನೆಂದು ಅವರೇ ಕ್ರಮಬದ್ಧ ರಾಜವಂಶವನ್ನು ಸ್ಥಾಪಿಸಿದರೆಂದೂ ಹೇಳಲಾಗಿದೆ.[6][7] ವಿಜಯನಗರ ಸಾಮ್ರಾಜ್ಯದ ಸಂಸ್ಥಾಪಕ ಹುಕ್ಕ ಮತ್ತು ಬುಕ್ಕರ ಜಾತಿಯನ್ನು ಕುರಿತಂತೆ ಕೌಟೋ ಹೇಳಿರುವ ಕತೆಯೊಂದು ಹೀಗಿದೆ.[8]

“ಪರ್ವತಗಳಲ್ಲಿ ಮಾಧವ ಸನ್ಯಾಸಿ ಜೀವನ ನಡೆಸುತ್ತಿದ್ದಾಗ ಬುಕ್ಕನೆಂಬ ಬಡಕುರುಬ ತಂದು ಕೊಡುತ್ತಿದ್ದ ಊಟಗಳೇ ಅವನ ಆಧಾರವಾಗಿದ್ದವು ಮತ್ತು ಒಂದು ದಿನ ಬ್ರಾಹ್ಮಣನು ನೀನು ಇಡೀ ಹಿಂದೂಸ್ಥಾನದ ರಾಜ ಮತ್ತು ಸಾಮ್ರಾಟನಾಗುವಿ ಎಂದು ಆತನಿಗೆ ಹೇಳಿದನು. ಉಳಿದ ಕುರುಬರಿಗೆ ಇದು ತಿಳಿದು ಆ ಕುರುಬನನ್ನು ಭಕ್ತಿಯಿಂದ ಕಾಣತೊಡಗಿದರು ಮತ್ತು ಅವನನ್ನು ತಮ್ಮ ಮುಖ್ಯಸ್ಥನನ್ನಾಗಿ ಮಾಡಿಕೊಂಡರು. ಅವನು ರಾಜ ಎಂಬ ಹೆಸರು ಸಂಪಾದಿಸಿದ ಮತ್ತು ಕ್ಯಾನರಾ, ತಳಿಗರು, ಕಾಂಗ್ವಿವರಾವ್, ನೆಗಪತಾ ಓ, ತನ್ನದೇ ಬಡಗರು ಹೀಗೆ ಐದು ನೆರೆಯವರನ್ನು ಗೆಲ್ಲತೊಡಗಿದನು ಮತ್ತು ಕೊನೆಗೆ ಎಲ್ಲರ ಪ್ರಭುವಾದನು. ತನ್ನನ್ನು ಬೊಕ್ಕರಾವ್ ಎಂದು ಕರೆದುಕೊಂಡನು. ದಿಲ್ಲಿಯ ರಾಜ ಅವನ ಮೇಲೆ ದಾಳಿಯಿಟ್ಟ ಆದರೆ ಸೋತು ಹಿಂತಿರುಗಿದ. ಆ ಕಾರಣದಿಂದ ಬುಕ್ಕ ಒಂದು ನಗರವನ್ನು ಸ್ಥಾಪಿಸಿದ ಮತ್ತು ಅದನ್ನು ವಿಜಯನಗರ ಎಂದು ಕರೆದ. ನಾವು ಆ ರಾಜ್ಯವನ್ನೆಲ್ಲಾ ಆ ಹೆಸರಿನಿಂದ ಕರೆಯುತ್ತೇವೆ. ಆದರೆ ನಾಡಿಗರು ಯಾವಾಗಲೂ ಅದನ್ನ ಕ್ಯಾನರಾದ ರಾಜ್ಯ ಎಂದು ಕರೆಯುತ್ತಾರೆ”.

“ಮಹಾನ್ ರಾಜ್ಯದ ಹುಟ್ಟಿನ ಬಗೆಗೆ ಪರಿಗಣಿಸಲು ಮತ್ತು ನಮಗೆ ಬೇಕಾದುದನ್ನು ಆಯ್ಕೆ ಮಾಡಿಕೊಳ್ಳಲು ಕತೆಗಳ ಮತ್ತು ವಾಡಿಕೆಗಳ ಕಂತೆಯೇ ಲಭ್ಯವಿದೆ. ಇನ್ನು ಅನೇಕ ಕತೆಗಳು ಉಂಟು. ಬಹುಶಃ ಅತ್ಯಂತ ಯುಕ್ತಾಯುಕ್ತ ವೃತ್ತಾಂತವೆಂದರೆ, ಹಿಂದೂಗಳ ಸಾಮಾನ್ಯ ಒಲವಿನ ದಂತಕತೆಗಳಿಂದ ಆಯ್ದುಕೊಂಡು ಅದನ್ನು ಐತಿಹಾಸಿಕ ಸಂಗತಿಗಳ ಸಿಶ್ಚಿತತೆಯೊಂದಿಗೆ ಸಂಯೋಜಿಸಿದ್ದುದು ಈ ದೃಷ್ಟಿಯಿಂದ ನಾವು ಸಧ್ಯಕ್ಕೆ ಭಾವಿಸಬಹುದಾದುದೇನೆಂದರೆ ಅವರಿಬ್ಬರು ಸಹೋದರರು ಕುರುಬ ಜಾತಿಯ ಹಿಂದೂಗಳಾಗಿದ್ದರು”[9] ಎಂದು ಸೀವೆಲ್ ಅಭಿಪ್ರಾಯ ಪಟ್ಟಿದ್ದಾನೆ. ಈ ಕೃತಿಗಿಂತಲೂ ಪೂರ್ವದಲ್ಲೇ ರಚನೆಯಾಗಿದ್ದ ಕೆಲವು ಸಾಹಿತ್ಯ ಕೃತಿಗಳು ವಿಜಯನಗರ ಕಟ್ಟಿದ ಮೂಲ ಪುರುಷರ ಸಮುದಾಯದ ಬಗ್ಗೆ ನಿಖರವಾದ ಮಾಹಿತಿ ನೀಡಿವೆ. ಅವುಗಳನ್ನು ಈ ಕೆಳಗಿನಂತೆ ಸಂಗ್ರಹಿಸಬಹುದು.

1. ತಿರುಮಲಾರ್ಯನ ಚಿಕ್ಕದೇವರಾಜ ವಂಶಾವಳಿ ಕೃತಿಯಲ್ಲಿ[10]

ಅತ್ತಲುತ್ತರ ದೇಶದೊಳ್ ತುಂಗಭದ್ರಾ ತೀರದೊಳ್ ವಿದ್ಯಾನಗರಿಯನಾಳ್ದ ಹರಿಹರಬುಕ್ಕ ಮೊದಲಾದ ಕುರುಂಬರಾಯರ ಅನಂತರದೊಳ್ ಅರಸುಗೆಯ್ದ ತುಳುವ ಕುಳಾಧೀಶ್ವರ ನರಸವೀರ ನರಸಿಂಹ ಕೃಷ್ಣಾಚ್ಯುತರೆಂಬ ರಾಯದೈವರು.”

2. ದೇವಚಂದ್ರ ಕವಿಯ ರಾಜವಳಿ ಕಥಾಸಾರದಲ್ಲಿ[11]

ಉತ್ತರ ದೇಶದ ತುಂಗಭದ್ರಾ ತಡದೊಳ್ ರಾಜಿಸುತ್ತಿಪ್ಪ ವಿದ್ಯಾನಗರಿಯನಾಳ್ವ ಹರಿಹರ ವೀರಭುಕ್ಕರ್ ಮೊದಲಾದ ಕುರುಂಬಾಯರಿಂದಿತ್ತ

3. ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ತಾಳೀಕಟ್ಟಿ ಗ್ರಾಮದ ಬೀರಲಿಂಗೇಶ್ವರ ದೇಗುಲದ ಆವರಣದಲ್ಲಿನ ಶಿಲಾಶಾಸನವು ಈ ರೀತಿ ಉಲ್ಲೇಖಿಸಿದೆ.[12]

ಶ್ರೀ ಗಡದ ದೇವರಾಯ| ಬೋಜರಾಯ| ಮಲ್ಲರಾಯ| ದೊಡಾರಾಯ| ಬುಕರೆಯ| ಜೋಗರೆಯ| ವಿತಾ ಕುರುಬರಾಯರು ಆಳಿದರು| ರಾಮರಾಜ| ಯಕಟರಾಯರು| ತಾಳವಾರತಿರುವಲಾರಾಜಾ| ದಳವಾಯಿ ಜಗಾಮೈಯ| ಯಿಜಯನಗರವ ಆಳಿದರು|”

4. ಕುರುಬರಲ್ಲಿ ಒಟ್ಟು ೮೭೭ ಬೆಡಗುಗಳನ್ನು ಪತ್ತೆ ಹಚ್ಚಿ ಸಂಗ್ರಹಿಸಲಾಗಿದೆ.[13] ಇವುಗಳಲ್ಲಿ ಸಂಗಮ ಎಂಬುದೂ ಕೂಡಾ ಸೇರಿದೆ. ಆದುದರಿಂದ ವಿಜಯನಗರ ಸಾಮ್ರಜ್ಯವನ್ನಾಳಿದ ಮೊದಲ ಕುಲ ಸಂಗಮವಾಗಿರುವುದರಿಂದ ಮತ್ತು ಆ ಕುಲದ ಹರಿಹರ ಮತ್ತು ಬುಕ್ಕರು ಮೊದಲ ದೊರೆ ಹಾಗೂ ಸಂಸ್ಥಾಪಕರು. ಇದರಿಂದ ವಿಜಯನಗರದ ಸ್ಥಾಪಕರ ಮೂಲ ಸಮುದಾಯ ‘ಕುರುಬ’ ಎಂದೇ ಹೇಳಲು ಸಾಧ್ಯವಿದೆ.

5. ಲಿಂಗಣ್ಣ ಕವಿಯ ಕೆಳದಿನೃಪ ವಿಜಯದಲ್ಲಿ[14]

“… ಸ್ವಪ್ನಾರ್ಥವಂ ಮನದೊಳಿಟ್ಟು ಕತಿಪಯ ದಿವಸಂ ವರ್ತಿಸುತ್ತು ಮಿರಲಾಗಿ ಯುತ್ತರ ದೇಶಾದಿಂದ ಸಹೋದರರಾದ ಹರಿಹರ ಬುಕ್ಕರೆಂಬ ಬಡ ಕ್ಷತ್ರಿಯರು ದಕ್ಷಿಣ ರಾಜ್ಯಕ್ಕೆ ತಂದು ಕುರುಬರಲ್ಲಿ ನಂಟತನವಂ ಮಾಡಿ ಹೆಣ್ಣು ತಂದು ಮದುವೆಯಾಗಿ ಸುಖವಾಸಿಗಳಾಗಿರುತ್ತು ಮಿರಲಾಗಿ…”

ಈ ಎಲ್ಲಾ ದಾಖಲೆಗಳು ಹರಿಹರ ಬುಕ್ಕರನ್ನು ಕುರುಬ ಜಾತಿಗೆ ಸೇರಿದವರೆಂದು ತಿಳಿಸುವುದರಿಂದ ನಿಸ್ಸಂದೇಹವಾಗಿ ವಿಜಯನಗರ ಸಾಮ್ರಾಜ್ಯವನ್ನಾಳಿದ ಮೊದಲ ಮನೆತನವಾಗಿದ್ದ ಸಂಗಮ ಮೊದಲ ದೊರೆಗಳು ಕುರುಬರು. ಕ್ರಮೇಣ ಅವರು ತಮ್ಮ ವೃತ್ತಿಯಿಂದ ಅಂತಸ್ತನ್ನು ಹೆಚ್ಚಿಸಿಕೊಂಡು ಕ್ಷತ್ರಿಯರಾದರು. ಬಹುದೊಡ್ಡ ರಾಜ್ಯ ನಿರ್ಮಾಣ ಮಾಡಿದ ಮೇಲೆ ೧೫೦ ವರ್ಷಗಳ ಕಾಲ ರಾಜ್ಯವಾಳಿದರು.  ಆ ಅವಧಿಯಲ್ಲಿ ಇಮ್ಮಡಿ ಹರಿಹರ, ಒಂದನೇ ದೇವರಾಯ, ಇಮ್ಮಡಿ ದೇವರಾಯ, ಮಲ್ಲಿಕಾರ್ಜುನ ವಿರುಪಾಕ್ಷ ಮೊದಲಾದ ರಾಜರು ಆಳಿದರು. ಈ ರೀತಿ ವಿಜಯನಗರ ಸಾಮ್ರಾಜ್ಯದ ಸಂಸ್ಥಾಪಕರ ಮೂಲ ಜಾತಿ ಕುರುಬ ಸಮುದಾಯವಾಗಿದ್ದು ಮಧ್ಯೆ ಅವರು ತಮ್ಮ ವೃತ್ತಿಯಿಂದ ಕ್ಷತ್ರಿಯರಾಗಿ ಇಡೀ ದಕ್ಷಿಣ ಭಾರತವನ್ನೇ ವ್ಯಾಪಿಸುವ ಬೃಹತ್ ಪ್ರಮಾಣದ ಸಾಮ್ರಾಜ್ಯವನ್ನು ನಂತರದ ಚಕ್ರವರ್ತಿಗಳು ನಿರ್ಮಿಸಿದರು ಎಂದು ಹೇಳಬಹುದು.

ಬಳ್ಳಾರಿಯ ಪಾಳೆಯಗಾರರು

ಇನ್ನೂ ಪರಿಪೂರ್ಣವಾಗಿರದ ಬಳ್ಳಾರಿ ಪಾಳೆಯಗಾರರ ಚರಿತ್ರೆಯನ್ನು ಸ್ವಲ್ಪಮಟ್ಟಿಗೆ ಕಟ್ಟುವಲ್ಲಿ ಶಾಸನಗಳು, ಕೈಫಿಯತ್ತುಗಳು, ಸಾಹಿತ್ಯ ಕೃತಿಗಳು ದೊರೆತಿದ್ದರೂ ಈ ದಾಖಲೆಗಳಲ್ಲಿ ಅಸ್ಪಷ್ಟತೆಯಿರುವುದು ಕಂಡು ಬರುತ್ತದೆ. ಇವುಗಳನ್ನೇ ಪರಿಶೀಲಿಸಿ, ವಿಶ್ಲೇಷಿಸಿ ಬಳ್ಳಾರಿ ಪಾಳೆಯಗಾರರು ಯಾರು? ಎಲ್ಲಿಂದ ಬಂದವರು? ಸಾಧನೆಗಳ ಪರಿಚಯ ಮಾಡಿಸಬೇಕಾಗುತ್ತದೆ.

ಹಂಡೆ ಅನಂತಪುರದ ಕೈಫಿಯತ್ತಿನ ಪ್ರಕಾರ ಬಾಗೇವಾಡಿ ವಿಭಾಗದ ಮುತ್ತಿಗೆ ಹಾಗೂ ವಡವಡಿಗಳಲ್ಲಿದ್ದ ಲಕ್ಕಿ ನಾಯಕನು ಬಳ್ಳಾರಿ ಪಾಳೆಯಗಾರರ ಮೂಲ ಪುರುಷನಾಗಿದ್ದಾನೆ. ಇವನ ಮಕ್ಕಳು ಬಾಲದ ಹನುಮಪ್ಪನಾಯಕ ಹಾಗೂ ಬಳಗ ನಾಯಕ, ಬಾಲದ ಹನುಮಪ್ಪ ನಾಯಕನ ಮತ್ತು ಅವನ ಮುಂದಿನ ವಂಶಜರು ಬಳ್ಳಾರಿಯನ್ನು ಕೇಂದ್ರವಾಗಿ ಮಾಡಿಕೊಂಡು ಆಳ್ವಿಕೆ ನಡೆಸಿದರು. ಇವರನ್ನೇ ಮುಂದೆ ಬಳ್ಳಾರಿ ಪಾಳೆಯಗಾರರು ಎಂದು ಗುರ್ತಿಸಲಾಗಿದೆ.

ಕುರುಗೋಡು ಕೈಫಿಯತ್ತು ಬಳ್ಳಾರಿ ಪಾಳೆಯಗಾರರ ಮೂಲ ಪುರುಷನಾದ ಬಾಲದ ಹನುಮಪ್ಪ ನಾಯಕನು ಬಿಜಾಪುರದ ಬಾದಷಹಾನಲ್ಲಿ ಸರದಾರನಾಗಿದ್ದು, ಹಂಡೆ ಕುರುಬರ ಜಾತಿಗೆ ಸೇರಿದ್ದು, ಮುತ್ತಿಗೆ ಗ್ರಾಮದವನೆಂದು ಹೇಳುತ್ತದೆ.

“ವಿಜಾಪುರದ ಬಾದಶಹನಲ್ಲಿ ಬಿಜಾಪುರದ ಸೀಮೆಯಲ್ಲಿ ಮುತ್ತಿಗೆಯಂಬೋ ಗ್ರಾಮದ ಗೌಡ ಹಂಡೆ ಕುರುಬರ ವಂಶಸ್ಥ ಹಂಡೆ ಬಾಲದ ಹನುಮಪ್ಪ ನಾಯಕಯೆಂಬುವನು ವಿಜಾಪುರದ ಬಾದಶಹಾನಲ್ಲಿ ಸರದಾರನಾಗಿ ಇದ್ದ”.[15]

ಅಲ್ಲಿಂದ ಬಾದಷಹಾನು ಈತನನ್ನು ದಕ್ಷಿಣ ಭಾಗದಲ್ಲಿ ರಾಜ್ಯವನ್ನು ವಿಸ್ತರಿಸುವ ಸಲುವಾಗಿ ಬಂಕಾಪುರವನ್ನು ಜಹಗೀರಾಗಿ ಕೊಟ್ಟು ಕ್ರಿ.ಶ. ೧೫೮೮ರಲ್ಲಿ ಕಳುಹಿಸಿದನೆಂದು ಅದೇ ಕುರುಗೋಡು ಕೈಫಿಯಿತ್ತು[16] ಹೇಳುತ್ತದೆ. ಒಟ್ಟಾರೆ ಹೇಳುವುದಾದರೆ ಬಳ್ಳಾರಿ ಪಾಳೆಯಗಾರರು ಹಂಡೆ ಕುರುಬ ಜಾತಿಗೆ ಸೇರಿದವರಾಗಿದ್ದರೆಂದು ಈ ಕೈಫಿಯಿತ್ತಿನ ಪ್ರಕಾರ ಹೇಳಬಹುದು. ಈ ಅಭಿಪ್ರಾಯವನ್ನೇ ಬಳ್ಳಾರಿ ಕೈಫಿಯಿತ್ತು ಎತ್ತಿ ಹಿಡಿಯುತ್ತದೆ. ಅದರ ಪ್ರಕಾರ[17]

ಬಿಜಾಪುರ ದೇಶದಲ್ಲಿ ಕೃಷ್ಣಾನದಿಗೆ ಉತ್ತರ ಭಾಗದಲ್ಲಿರುವ ಮೂರ್ತಿಗಿರಿಯೆಂಬ ಗ್ರಾಮದಲ್ಲಿ ಹಂಡೆ ಕುರುಬ ಜಾತಿಯವರು ಗೌಡಿಕೆ ಮಾಡಿಕೊಂದು ಇದ್ದರು. ಅವರ ಸಂತತಿಯ ಬಾಲದ ಹನುಮಪ್ಪ ನಾಯಕನು ಪ್ರತಿ ದಿನದಲ್ಲಿಯೂ ದೇವರ ಅನುಗ್ರಹದಿಂದ ಬುದ್ಧಿವಂತನೆನಿಸಿಕೊಂಡು ಬಿಜಾಪುರದ ಪಾದುಶಾರವರ ಅನುಗ್ರಹವನ್ನು ಸಂಪಾದಿಸಿದುದರಿಂದ ಆತನಿಗೆ ಪೌಜುದಾರಿ ಮೊಕರೂರ್ ಮಾಡಿಕೊಟ್ಟಾರು. ಕೆಲವು ದಿವಸ ಕೆಲಸದಲ್ಲಿದ್ದು ಒಂದೆರಡು ಸ್ವಾಮಿಕಾರ್ಯದಲ್ಲಿ ಮೆಹನತ್ತು ಮಾಡಿದ್ದು ಕಂಡುಬಂದು ಪಾದುಷಾಹರವರು ವಜೀರಪ್ಪಸಹಿ ಎಂಬ ಕಿತಾಬು ಕೊಟ್ಟರು. ತರುವಾಯ ಕರ್ನಾಟಕ ದೇಶವು ಅರಾಜಕದಿಂದ ಹಾಳಾಗಿರಲಾಗಿ ಬಾಲದ ಹನುಮಪ್ಪನಾಯಕನನ್ನು ಕಳುಹಿಸದೆ ರಾಜ್ಯ ಬಸ್ತಿ ಆದೀತೆಂದು ಪಾದುಷಹಾರವರು ತಿಳಿದು ಕೆಲವು ಪೌಜು ಕೊಟ್ಟು ದಕ್ಷಿಣ ಪ್ರಾಂತ್ಯಕ್ಕೆ ಕಳುಹಿಸಿದರು. …ಬಾಲದ ಹನುಮಪ್ಪ ನಾಯಕನು ಬಂಕಾಪುರಕ್ಕೆ ಬಂದು ಕಿಲ್ಲೆ ಕಟ್ಟಿಸಿ  ರಾಜ್ಯ ಬಸ್ತಿಮಾಡಿ ಅಲ್ಲಿಂದ ತುಂಗಭದ್ರಾ ಮಹಾನದಿಯನ್ನು ದಾಟಿ ಸೀಮೆಗೆ ಬಂದು ಬಳ್ಳಾರಿಯ ಗುಡ್ಡಕ್ಕೆ ಪೂರ್ವ ಭಾಗದಲ್ಲಿ ಗುಡ್ಡದ ಮೇಲೆ ಕಿಲ್ಲೆ ಕಟ್ಟಿಸಿ ಅಲ್ಲೇ ಮುಕ್ಕಾಂ ಮಾಡಿಕೊಂಡು ಸುತ್ತ ಮುತ್ತಲ ಗ್ರಾಮಗಳನ್ನು ತನ್ನ ಕಕ್ಷೆಗೆ ಒಳಪಡಿಸಿಕೊಂಡು ಆಳ್ವಿಕೆ ನಡೆಯಿಸಿದನೆಂದು ತಿಳಿಸುತ್ತದೆ“.

ಕೈಫಿಯತ್ತುಗಳಲ್ಲಿಯ ಈ ಪಾಳೆಯಗಾರರ ಮೂಲ ವ್ಯಕ್ತಿಗಳ ಚರಿತ್ರೆಯನ್ನು ಸ್ಥಿರೀಕರಿಸುವ ಅಂಶಗಳು ಶಾಸನಗಳಲ್ಲಿ ಕಂಡುಬರದಿದ್ದರೂ ಆರಂಭಿಕ ಪಾಳೆಯಗಾರರ ಹೆಸರುಗಳು ಮಾತ್ರ ಲಭ್ಯವಾಗುತ್ತವೆ. ಬಳ್ಳಾರಿ ಕೈಫಿಯತ್ತು ಬಾಲದ ಹನುಮಪ್ಪ ನಾಯಕನ ಕಾಲವನ್ನು ೧೫೬೭ ಎಂದು ತಿಳಿಸುತ್ತದೆ. ಆದರೆ ಶಿರಗುಪ್ಪ (ತಾ) ಶಿರಿಗೇರಿ ಶಾಸನವು ಬಾಲದ ಹನುಮಪ್ಪನಿಗೆ ಸೇರಿದ್ದು, ಅದರ ಕಾಲ ಕ್ರಿ.ಶ. ೧೫೩೭ ಆಗಿದೆ. ಆದ್ದರಿಂದ ಬಾಲದ ಹನುಮಪ್ಪನು ಕ್ರಿ.ಶ.೧೫೩೭ ರಿಂದಲೂ ಆಳ್ವಿಕೆ ಮಾಡುತ್ತಿದ್ದ ಎಂದು ಹೇಳಬಹುದು.

ಬಳ್ಳಾರಿ ಪಾಳೆಯಗಾರರು ವೀರಶೈವ ಧರ್ಮೀಯರು. ಆ ಧರ್ಮಕ್ಕೆ ಪ್ರೋತ್ಸಾಹ ನೀಡಿದ್ದರು ಎಂದು ಹೇಳಲಾಗಿದೆ. ಆದರೆ ಬಳ್ಳಾರಿ ಕೈಫಿಯತ್ತು, ಕುರುಗೋಡು ಕೈಫಿಯತ್ತುಗಳು ಈ ಪಾಳೇಗಾರರು ಮೂಲತಃ ಹಂಡೆ ಕುರುಬ ಜಾತಿಯವರೆಂದು ಸ್ಪಷ್ಟವಾಗಿ ಹೇಳಿವೆ. ಮೂಲತಃ ಹಂಡೆ ಕುರುಬ ವಂಶದವರಾಗಿದ್ದ ಇವರು ವಿಜಾಪುರದ ಬಾದಷಾಹನ ಕೃಪೆಯಿಂದ ರಾಜ್ಯ ಸ್ಥಾಪಿಸಿದರು ನಂತರ ಇವರ ವಂಶ ರಾಜವಂಶವಾಯಿತು. ಇವರು ರಾಜರಾದ ಮೇಲೆ ತಮ್ಮ ಜಾತಿಯನ್ನು ಉದಾತ್ತೀಕರಿಸಿಕೊಳ್ಳಲು ಒಂದು ಹಂತದಲ್ಲಿ ವೀರಶೈವ ಧರ್ಮವನ್ನು ಸ್ವೀಕರಿಸಿ, ನಂತರ ವೀರಶೈವರಾದರು ಎನ್ನಬಹುದು. ಹೀಗೆ ಬಳ್ಳರಿ ಪಾಳೇಗಾರರು ಮೂಲತಃ ಹಂಡೆ ಕುರುಬರೇ ಆಗಿದ್ದಾರೆ ಎಂಬುದು ಸ್ಪಷ್ಟವಾಗಿದೆ.

ಈ ಪಾಳೆಯಗಾರರು ಕ್ರಿ.ಶ. ೧೫೦೦ ರಿಂದ ೧೭೭೫ ರವರೆಗೆ ಸುಮಾರು ೨೭೫ ವರ್ಷಗಳ ಕಾಲ ಆಳ್ವಿಕೆ ನಡಿಸಿದರು. ಸೊನ್ನಲಿಗೆಯ ಸಿದ್ಧರಾಮೇಶ್ವರರನ್ನು ತಮ್ಮ ಆರಾಧ್ಯದೈವ ಎಂದು ಸ್ವೀಕರಿಸಿ ಕುರುಬ ಸಂಪ್ರದಾಯಗಳನ್ನು ಬಿಡದೆ ಉದಾರ ನೀತಿ, ಜನೋಪಕಾರಿ ಕಾರ್ಯಗಳಿಂದ ಪ್ರಸಿದ್ಧರಾಗಿ ವೀರಶೈವ ಧರ್ಮಕ್ಕೆ ನಿಷ್ಠರಾಗಿ ಎಲ್ಲಾ ಧರ್ಮಗಳನ್ನು ಗೌರವಿಸಿ ಕರ್ನಾಟಕದ ಪಾಳೆಯಗಾರರ ಇತಿಹಾಸದಲ್ಲಿ ತಮ್ಮದೇ ಆದ ಕೊಡುಗೆಗಳನ್ನು ಬಿಟ್ಟು ಹೋಗಿದ್ದಾರೆ.

ಶಾಂಭಾ ಜೋಷಿ ಹೇಳುವಂತೆ “ವೀರಶೈವ ಲಿಂಗಾಯಿತ ಪಂಥ ಒಂದು ಪ್ರಸಾರದ ಧರ್ಮವಾಗಿರುವುದರಿಂದ ಕುರುಬ, ರೆಡ್ಡಿ ಒಕ್ಕಲಿಗರಂತಹ ಅನೇಕ ಉಪಜಾತಿಗಳು ಆ ಧರ್ಮದಲ್ಲಿ ಸೇರಿಹೋದವು. ಲಿಂಗಾಯತ ಪಂಥದಲ್ಲಿ ಸೇರಿಹೋದ ಪ್ರಾಚಿನ ಜಾತಿಗಳ ಜನರ ಹೆಸರು ಇಂದಿಗೂ ಅಸ್ಪಷ್ಟ ಕೇಳೀಬರುತ್ತದೆ” ಬಳ್ಳಾರಿ ಪಾಳೆಯಗಾರರ ವಿಷಯದಲ್ಲಿಯೂ ಶಂಭಾ ಜೋಷಿಯವರ ಹೇಳಿಕೆಯನ್ನು ಗಮನಿಸಬೇಕಾಗುತ್ತದೆ.

ಇಂದೋರಿನ ಹೋಳ್ಕರ ಅರಸು ಮನೆತನ

ಮಹಾರಾಷ್ಟ್ರದ ಇಂದೋರಿನ ಹೋಳ್ಕರ ಅರಸು ಮನೆತನ ಕುರುಬ (ಧನಗರ) ಸಮುದಾಯಕ್ಕೆ ಸೇರಿದುದು. ಮಲ್ಹಾರಿರಾವ್ ಈ ಅರಸು ಮನೆತನದ ಸಂಸ್ಥಾಪಕ. ತದನಂತರದಲ್ಲಿ ಅಹಲ್ಯಾದೇವಿಯು ಈ ಮನೆತನದ ಜನಪ್ರಿಯ ರಾಣಿಯಾಗಿ ಮೂವತ್ತು ವರ್ಷಗಳ ಕಾಲ ರಾಜ್ಯಭಾರ ಮಾಡಿದಳು. ವಿ.ಆರ್. ಹನುಮಂತಯ್ಯನವರು ಹೇಳುವಂತೆ “ಈಕೆಯ ನ್ಯಾಯೈಕಪರಾಯಣತೆ, ವಿಷ್ಪಕ್ಷಪಾತ ಧೋರಣೆ, ಪರೋಪಕಾರ, ರಾಜಕಾರ್ಯ ನಿರ್ವಾಹಕ ಶಕ್ತಿ, ದಕ್ಷತೆ, ಶಾಂತಿ ಸಹನೆಗಳನ್ನು ಕಂಡ ಜನ ಹಿಂದೆ ಇಂಥವರು ಇರಲಿಲ್ಲವೆಂದು ಮುಂದೆ ಬರಲಾರದೆಂದೂ ಭಾವಿಸಿಕೊಂಡು, ಈಕೆ ದೈವಾಂಶಸ್ವರೂಪಿಣಿ ಎಂಬಂತೆ “ದೇವಿ ಅಹಲ್ಯಾಬಾಯಿ’ ಎಂದು ಸಂಭೋದಿಸತೊಡಗಿದರು. ಈಗಲೂ ಈಕೆಯನ್ನು ದೇವತೆಯೆಂದು ಪೂಜಿಸುವರು” (ಕುರುಬರ ಚರಿತ್ರೆ ಪುಟ ೯೩).

ಹೆಗ್ಗಡ ದೇವನಕೋಟೆ ಅರಸರು

ಕರ್ನಾಟಕದಲ್ಲಿ ಹೆಗ್ಡೆ ಎಂಬುದು ಕುರುಬರಿಗೆ ಇರುವ ಪರ್ಯಾಯ ನಾಮವಾಗಿದೆ. ಪ್ರಾಚೀನ ಹಾಗೂ ಮಧ್ಯಕಾಲದಲ್ಲಿ ಹೆಗ್ಗಡೆ ಎಂಬುದು ಆಡಳಿತದ ಪದನಾಮವಾಗಿತ್ತು. ಆ ಕಾಲದಲ್ಲಿ ಹೆಗ್ಗಡೆಯು ಪೆರ್ಗಡೆ, ಹಿರಿಯ ಹೆಗ್ಗಡೆ, ಹೆರ್ಗ್ಗಡೆ, ಪೆರ್ಗಡೆಕಾರಿ, ಗೆರ್ಗಡೆತನ, ಪುರವೆರ್ಗಡೆ ಎಂಬ ಉಲ್ಲೇಖಗಳನ್ನು ಶಾಸನದಲ್ಲಿ ಕಾಣುತ್ತೇವೆ. ಉದಾ. ಮಾರಮಯ್ಯಂ ಪೆರ್ಗಡೆ ತನಂಗೆಯ್ಯ ಎಂಬ ಉಲ್ಲೇಖವನ್ನು ಕ್ರಿ.ಶ. ೧೨೫೨ ರ ಶಾಸನವೊಂದು ತಿಳಿಸುತ್ತದೆ. ಆದರಿಂದ ಹೆಗ್ಗಡೆ, ನಗಾದ ಅಥವಾ ಒಂದು ಪ್ರದೇಶದ ಮುಖ್ಯ ಅಧಿಕಾರಿ ಎಂದು ಹೇಳಬಹುದು. ಇಂತಹ ಅಧಿಕಾರಿಗಳನ್ನು ನೇಮಕ ಮಾಡಲು ಯಾವುದೇ ಜಾತಿ ಅಥವಾ ಸಮುದಾಯ ಅಡ್ಡಿಯಾಗುತ್ತಿರಲಿಲ್ಲ. ಇದಕ್ಕೆ ಕುರುಬ ಸಮುದಾಯದವರೂ ಹೊರತಾಗಿರಲಿಲ್ಲ.

ಕುರುಬ ಸಮುದಾಯಕ್ಕೆ ಸೇರಿದ ದೇವ ಎಂಬಾತನು ಆನೆಗೊಂದಿ ಅರಸರ ಬಳಿ ಪೆರ್ಗಡೆಯಾಗಿದ್ದನು[18][19] ಎಂದು ಬುಕಾನನು ತಿಳಿಸಿದ್ದಾನೆ. ಅವನು ದಾಖಲಿಸಿರುವಂತೆ-

“ಆನೆಗೊಂದಿ ರಾಜರ ಸಹೋದರನಾಗಿದ್ದ ದೇವ ಹೆಗ್ಗಡೆಯು ತನ್ನ ಅಣ್ಣನೊಂದಿಗೆ ಮನಸ್ತಾಪ ಮಾಡಿಕೊಂಡು ತನ್ನ ಅಲ್ಪ ಪರಿವಾರದೊಡನೆ ಮೈಸೂರು ಸೀಮೆಗೆ ಬರುತ್ತಾನೆ. ಇಲ್ಲಿ ಕಾಡಿನ ಮಧ್ಯೆ ಒಂದು ನಿರ್ದಿಷ್ಟ ಪ್ರದೇಶವನ್ನು ಆಯ್ಕೆ ಮಾಡಿಕೊಂಡು ತನ್ನ ಸಂರಕ್ಷಣೆಗಾಗಿ ಒಂದು ಸಾಧಾರಣ ಕೋಟೆಯನ್ನು ಕಟ್ಟಿಸಿಕೊಂಡನು. ಅದನ್ನು ಅವನು ಹೆಗೋಡುಪುರ ಎಂದು ಕರೆದನು. ಒಂದು ದಿನ ಆತನು ಈ ಪ್ರದೇಶವನ್ನು ಅಭಿವೃದ್ಧಿ ಪಡಿಸಬೇಕು ಮತ್ತು ತನಗೊಂದು ರಾಜ್ಯ ಸ್ಥಾಪಿಸಬೇಕೆಂಬ ಬಯಕೆಯಿಂದ ಅರಣ್ಯ ಪ್ರದೇಶವನ್ನು ಶುದ್ಧಗೊಳಿಸಿ ಪಟ್ಟಣ ನಿರ್ಮಾಣ ಮಾಡಿ ಬೇರೆ ಕಡೆಯಿಂದ ಜನರನ್ನು ಕರೆತಂದು ಅವರಿಗೆ ಸಹಾಯ ಮಾಡಿದನು. ತನ್ನ ಬಳಿ ಇದ್ದ ಸಂಪತ್ತಿನಿಂದ ಆ ಸ್ಥಳದಲ್ಲಿಯೇ ಏಳುಸುತ್ತಿನ ಕಂದಕಗಳಿಂದ ಕೂಡಿದ ಬಲಾಡ್ಯ ಕೋಟೆಯನ್ನು ನಿರ್ಮಿಸಿ ಅದರೊಳಗಡೆ ಸುಂದರವಾದ ಅರಮನೆ ಕಟ್ಟಿ ವಾಸಿಸತೊಡಗಿದನು. ನಿಧಾನವಾಗಿ ಸೈನ್ಯ ಸಂಗ್ರಹಮಾಡಿ ಸಣ್ಣ ಪುಟ್ಟ ತುಂಡರಸರನ್ನು ಸೋಲಿಸಿ ಬಲಾಢ್ಯನಾಗಿ ಬೆಳೆದನು. ಹೀಗೆ ಹೆಗೋಡುಪುರವನ್ನು ಹೆಗ್ಗಡೆ ದೇವನ ಕೋಟೆಯನ್ನಾಗಿ ಪರಿವರ್ತಿಸಿದನು.” ಹೀಗೆ ಕುರುಬ ಸಮುದಾಯದಲ್ಲಿ ಬಲಾಢ್ಯ ಪಾಳೆಯಗಾರನಾಗಿ ಬೆಳೆದನು. ಒಟ್ಟಾರೆ ಹೇಳುವುದಾದರೆ, ಕುರುಬ ಜಾತಿಗೆ ಸೇರಿದ ದೇವ ಮೊದಲು ಆನೆಗೊಂದಿಯಲ್ಲಿ ಅಧಿಕಾರಿ (ಹೆಗ್ಗಡೆ)ಯಾಗಿದ್ದು ತನ್ನ ಶಕ್ತಿ ಸಾಮರ್ಥ್ಯದಿಂದ ಹೆಗ್ಗಡದೇವನ ಕೋಟೆ ಕಟ್ಟಿ ತನ್ನದೇ ಆದ ಮನೆತನವನ್ನು ಸ್ಥಾಪಿಸಿ ಆಳ್ವಿಕೆ ಮಾಡಿದನು. ನಂತರ ಇವನ ವಂಶದವರಿಗೆಲ್ಲ ಹೆಗ್ಗಡೆ ವಂಶವೆಂದೇ ಹೆಸರಾಯಿತು. ಕ್ರಮೇಣ ಇದು ಇವರು ಕುರುಬ ಜನಾಂಗಕ್ಕೆ ಸೇರಿದವರಾಗಿದ್ದುದ್ದರಿಂದ ಆ ಸಮುದಾಯದ ಬೆಡಗುಗಳಲ್ಲಿ ಒಂದಾಗಿ ಬದಲಾಯಿತು ಎಂದು ಹೇಳಲು ಸಾಧ್ಯವಿದೆ.

ದೇವನ ನಂತರ ಇವನ ಮಗ ನಿಂಗಪ್ಪ ಒಡೆಯ ರಾಜ್ಯವಾಳಿದನು.ಇವನು ಮೈಸೂರು ಅರಸನಾಗಿದ್ದ ಬೆಟ್ಟದ ಚಾಮರಾಜ ಒಡೆಯರಿಂದ ಪರಾಭವಗೊಂಡನು. ನಂತರ ಇವರು ಮೈಸೂರು ಅಧೀನರಾದರು. ಕ್ರಮೇಣ ಇವರ ರಾಜ್ಯವನ್ನು ಹೈದರಾಲಿ ಗೆದ್ದುಕೊಂಡು ಮೈಸೂರು ರಾಜ್ಯದಲ್ಲಿ ವಿಲೀನಗೊಳಿಸಿದನು.

ಶೂದ್ರ ವರ್ಗಕ್ಕೆ ಕುರುಬ ಜನಾಂಗದವರಿಗೆ ವಿಜಯನಗರದಂತಹ ಬಹುದೊಡ್ದ ಸಾಮ್ರಾಜ್ಯವನ್ನು ಸ್ಥಾಪಿಸಿದ ಕೀರ್ತಿ ಇದ್ದರೂ ಆ ಜನಾಂಗಕ್ಕೆ ಚರಿತ್ರೆಯಲ್ಲಿ ಸರಿಯಾದ ಸ್ಥಾನ ದೊರಕಬೇಕಾಗಿದೆ. ವಿಜಯನಗರ ಕಾಲದಲ್ಲಿ ಉದಯವಾದ ಸಣ್ಣ ಪುಟ್ಟ ಮನೆತನಗಳೂ ಶೂದ್ರ ವರ್ಗಕ್ಕೆ ಸೇರಿದ್ದರೂ ಅವುಗಳ ವ್ಯವಸ್ಥಿತ ಅಧ್ಯಯನವಾಗಬೇಕಾಗಿದೆ. ಆ ಮನೆತನಗಳು ತಮ್ಮ ಮೂಲ ಜಾತಿಯನ್ನು ಮರೆಮಾಚಿ ತಮ್ಮ ವೃತ್ತಿಯಿಂದ ಕ್ಷತ್ರಿಯರಾಗಿ ಸಮಾಜದಲ್ಲಿ ತಮ್ಮ ಸ್ಥಾನವನ್ನು ಉದಾತ್ತೀಕರಿಸಿಕೊಳ್ಳುವುದಕ್ಕೊಸ್ಕತ ಬೇರೆ ಧರ್ಮವನ್ನು ಅಪ್ಪಿಕೊಂಡದ್ದು ಅಂದಿನ ಸಾಮಾಜಿಕ ಅಗತ್ಯತೆಗೆ ತಕ್ಕುದಾಗಿದೆ ಎನ್ನಬಹುದು. ಆದ್ದರಿಂದ ಕುರುಬ ಸಮುದಾಯಕ್ಕೆ ಸೇರಿದ ರಾಜಮನೆತನಗಳು ಮತ್ತು ಶ್ರೇಷ್ಠ ವ್ಯಕ್ತಿಗಳ ವ್ಯವಸ್ಥಿತ ಅಧ್ಯಯನವಾದರೆ ಇಡೀ ಭಾರತಾದ್ಯಂತ ವ್ಯಾಪಿಸಿರುವ ಈ ಜನಾಂಗಕ್ಕೆ ನ್ಯಾಯ ಸಂದಂತಾಗುತ್ತದೆ.

—-
(ಸಂಖ್ಯಾಗೊಂದಲ / ಚುಕ್ಕಿ ಚಿಹ್ನೆಯ ಗೊಂದಲ ಇರುವುದರಿಂದ ಈ ಅಧ್ಯಾಯದ ಕೆಲವು ಅಡಿಟಿಪ್ಪಣಿಗಳನ್ನು ನಮೂದಿಸಿಲ್ಲ)

 

 


[1] ಹನುಮಂತಯ್ಯ ವಿ. ಆರ್., ಕುರುಬರ ಚರಿತ್ರೆ, ಪ್ರತಿಭಾ ಪ್ರಕಾಶನ, ಪುಟ ೧೨, ಮೈಸೂರು ೧೯೯೯.

[2] W. Elliot-Tribes and Castes of Bombay Vol II p-317.

[3] Rai Bahadur Hirelal- Tribes and Castes of Central province vol. Iv. p- 52, AD 1916.

[4] Bombay Gazetter-part, vol. xv. p-278.

[5] Gustove appert- The Original inhabitants of India p-216.

[6] ????

[7] ರಬರ್ಟ ಸೀವೆಲ್ಲರ ಮರೆತು ಹೋಗಿರುವ ಸಾಮ್ರಾಜ್ಯ, ಸದಾನಂದ ಕನವಳ್ಳಿ, ಪುಟ ೨೨, ಪ್ರಸಾರಂಗ, ಕನ್ನಡ ವಿಶ್ವವಿದ್ಯಾಲಯ ಹಂಪಿ, ವಿದ್ಯಾರಣ್ಯ, ೧೯೯೨.

[8] ಅದೇ

[9] ಅದೇ ಪುಟ ೨೩.

[10] ನಾಗರಾಜಯ್ಯ ಹಂ.ಪ (ಸಂ) ತಿರುವಲಾರ್ಯ ವಿರಚಿತ ಚಿಕ್ಕದೇವರಾಜ ವಂಶಾವಳಿ ಸಂ.೧, ಪುಟ ೧, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ ಬೆಂಗಳೂರು ೧೯೮೧.

[11] ಸಣ್ಣಯ್ಯ ಬಿ.ಎಸ್. (ಸಂ) ದೇವಚಂದ್ರ ವಿರಚಿತ ರಾಜಾವಳಿ ಕಥಾಸಾರ, ಕನ್ನಡ ಅಧ್ಯಯನ ಸಂಸ್ಥೆ ಮೈಸೂರು ವಿಶ್ವವಿದ್ಯಾಲಯ, ಮೈಸೂರು, ೧೯೮೮.

[12] ಎಫಿಗ್ರಾಫಿಯಾ ಕರ್ನಾಟಕ (ಸಂ) ಚಿತ್ರದುರ್ಗ ಜಿಲ್ಲೆ ಪುಟ ೧೯೮೮.

[13] ಚಂದ್ರಕಾಂತ ಬಿಜ್ಜರಗಿ, ಕುರುಬರ ಹೆಜ್ಜೆಗಳು: ಒಂದ ಅಧ್ಯಯನ, ಪುಟ ೧೪೬, ಶೈಲಚಂದ್ರ ಪ್ರಕಾಶನ ವಿಜಾಪುರ, ೨೦೦೬.

[14] ಶಾಮಾಶಾಸ್ತ್ರಿ ಆರ್. (ಸಂ) ಕೆಳದಿ ನೃಪ ವಿಜಯಂ, ಪುಟ ೧೬, ಕನ್ನಡ ಅದ್ಯಯನ ಸಂಸ್ಥೆ ಮೈಸೂರು ವಿಶ್ವವಿದ್ಯಾಲಯ, ಮೈಸೂರು ೧೯೭೩.

[15] ಕಲಬುರ್ಗಿ ಎಂ.ಎಂ. (ಸಂ) ಕರ್ನಾಟಕ ಕೈಫಿಯತ್ತುಗಳು, ಪುಟ ೪೫೦, ಪ್ರಸಾರಾಂಗ ಕನ್ನಡ ವಿಶ್ವವಿದ್ಯಾಲಯ ಹಂಪಿ, ವಿದ್ಯಾರಣ್ಯ, ೧೯೯೪.

[16] ಅದೇ.

[17] ಅದೇ ಪುಟ ೫೨೫.

[18] ????

[19] ಫ್ರಾನ್ಸಿಸ್ ಬುಕಾನನ್, ಎ. ಜರ್ನಿ ಫ್ರಂ ಮದ್ರಾಸ್ ಸಂ. ೨, ಪುಟ ೧೩೦.