ಭಾರತದ ಚರಿತ್ರೆಯನ್ನು ಕುರಿತು ಇಂದು ಚಿಂತಿಸುವ ಮತ್ತು ಮರು ರಚಿಸುವ ಅವಶ್ಯಕತೆ ಇರುವುದನ್ನು ಅಲ್ಲಗೆಳೆಯುವಂತಿಲ್ಲ. ಈವರೆಗೆ ಮೇಲ್ವರ್ಗದ ಮತ್ತು ಉಳ್ಳವರ ಪರವಾಗಿದೆ ಈ ದೇಶದ ಚರಿತ್ರೆ. ಇಲ್ಲಿನ ಚರಿತ್ರೆಯನ್ನು ಏಕಮುಖ ಚರಿತ್ರೆಯನ್ನಾಗಿ ಇತಿಹಾಸಕಾರರು ಮಾಡಿ ಹದಗೆಡಿಸಿರುವುದಂತೂ ಸ್ಪಷ್ಟ. ಅದಕ್ಕೆಂದೇ ಇಂದು ನೈಜವಾದ ಚರಿತ್ರೆಯನ್ನು ಕಟ್ಟಿಕೊಡುವ ಪ್ರಯತ್ನಗಳೂ ನಡೆಯುತ್ತಿವೆ. ಇದು ಗಮನಿಸಬೇಕಾದ ಸಂಗತಿಯಾಗಿದೆ. ಈ ಹಿನ್ನಲೆಯಲ್ಲಿ ಇತಿಹಾಸದಿಂದ ವಂಚಿತವಾಗಿದ್ದ ಸಮುದಾಯಗಳ ಚರಿತ್ರೆಯನ್ನು ಕಟ್ಟಿಕೊಡುವ ಕೆಲಸ ಸಾಗುತ್ತಿದ್ದ ಅಂತಹ ಸಮುದಾಯಗಳಲ್ಲಿ ಕುರುಬ ಸಮುದಾಯವೂ ಒಂದು. ಇವರಿಗೆ ಭಾರತೀಯ ಚರಿತ್ರೆಯಲ್ಲಿ ಸಾವಿರಾರು ವರ್ಷಗಳ ಇತಿಹಾಸವಿದೆ. ಇವರೆಲ್ಲಿ ಅನೇಕ ಕುಲ ಜಾತಿಗಳಿರುವಂತೆ ಉಪಪಂಗಡಗಳೂ ಇವೆ. ಮತ್ತು ಅವರದೇ ಆದ ಸಂಸ್ಕೃತಿ ಇದೆ. ಆದರೆ ಈ ದೀರ್ಘ ಪರಂಪರೆಯಲ್ಲಿ ಬ್ರಿಟಿಷರ ಆಡಳಿತದವರೆಗೂ ಕುರುಬ ಸಮುದಾಯವನ್ನು ಕುರಿತ ಪ್ರಸ್ತಾಪಗಳು ಅವರ ಸಾಮಾಜಿಕ, ಧಾರ್ಮಿಕ, ರಾಜಕೀಯ ಮತ್ತು ಸಾಂಸ್ಕೃತಿಕ ವಿವರಗಳು ಸಿಗುವುದಿಲ್ಲ. ಅಂದರೆ ಭಾರತೀಯ ಇತಿಹಾಸವೆನ್ನುವುದು ಏಕಮುಖಿಯಾದ ದೃಷ್ಟಿಕೋನದ ಕಡೆಗೆ ವಿವರಿಸಿದ್ದಾಗಿದೆ. ಇಂಥ ಚರಿತ್ರೆಯನ್ನು ಪುನರ್ ರಚಿಸಬೇಕಾಗಿದೆ. ಏಕೆಂದರೆ ಇತಿಹಾಸವನ್ನು ಒಂದೇ ಲಕ್ಷಣದಿಂದ ವಿವರಿಸಿದರೆ ಅಸಂಖ್ಯಾತ ಸಂಸ್ಕೃತಿಯ ಜನಾಂಗಗಳ ಇತಿಹಾಸವನ್ನು ವಂಚಿಸಿದಂತಾಗುತ್ತದೆ. ಹಾಗೆಯೇ ಅಭಿವ್ಯಕ್ತಿಯ ಹಲವಾರು ವಲಯಗಳನ್ನು ಹಾಗೂ ಹೊಸ ಸ್ವರೂಪಕ್ಕೆ ಕಾರಣವಾಗುವುದು ಆ ಜನಾಂಗದ ಸಾಂಸ್ಕೃತಿಕ ಹತ್ತು ಹಲವು ದಿಕ್ಕುಗಳ ಸಂಗಮದಿಂದ ಇತಿಹಾಸವನ್ನು ಶೋಧಿಸಿದಾಗ ಮಾತ್ರ ಕುರುಬ ಸಮುದಾಯದ ಚರಿತ್ರೆಯನ್ನು ತಿಳಿಯಬಹುದು.

ಪ್ರಾಚೀನ ಕಾಲದಿಂದಲೂ ಪಶುಪಾಲನೆ, ಕುರಿಸಾಕಾಣಿಕೆ, ಕಂಬಳಿ ತಯಾರಿಕೆ ಹಾಗೂ ಕೃಷಿಯನ್ನು ಪ್ರಧಾನ ಉದೋಗವನ್ನಾಗಿ ಮಾಡಿಕೊಂಡು ಬಂದ ಈ ಕುರುಬ ಸಮುದಾಯದವರು ತಮ್ಮ ಸಂಸ್ಕೃತಿಯ ಮೂಲ ಸೊಗಡನ್ನು ಪರಂಪರಾಗತ ಜೀವನ ಪದ್ದತಿಯನ್ನು ಯಥಾವತ್ತಾಗಿ ಉಳಿಸಿಕೊಂಡು ಬಂದ ಜನ ಸಮುದಾಯಗಳಲ್ಲಿ ಪ್ರಮುಖರೆನಿಸುತ್ತಾರೆ. ಇಡೀ ಭಾರತದಾದ್ಯಂತ ಹರಡಿರುವ ಈ ಸಮುದಾಯ ದೇಶದ ಚರಿತ್ರೆಯನ್ನು ಕಟ್ಟುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ. ಆದರೂ ಇವರ ಪಾತ್ರವನ್ನು ನಿರ್ಲಕ್ಷಿಸಲಾಗಿದ್ದು ಇತ್ತೀಚಿನ ದಿನಗಳಲ್ಲಿ ಆ ಸಮುದಾಯದ ಚರಿತ್ರೆಯನ್ನು ಪುನರ್ ದಾಖಲಿಸುವ ಕಾರ್ಯ ನಡೆಯುತ್ತಿದೆ.

ಆಕರ ಸಂಪತ್ತು

ಕುರುಬರು ಈ ದೇಶದ ಮೂಲನಿವಾಸಿಗಳು. ವಿಭಿನ್ನ ನೆಲೆಯ ನಾಗರಿಕತೆಯನ್ನು ಸಾಧಿಸುತ್ತಾ ಬಂದು ಉತ್ಪಾದನೆ ಮತ್ತು ವಿತರಣೆಯ ಪ್ರಕ್ರಿಯೆಯಲ್ಲಿ ಸಾಮಾಜಿಕ ಮತ್ತು ಆರ್ಥಿಕ ಸಂಬಂಧಗಳನ್ನು ಹೊಂದಿದವರಾಗಿದ್ದರು. ಇಂತಹವರ ಸ್ಥಿತಿಗತಿಯ ಬಗ್ಗೆ ಅಧ್ಯಯನ ಮಾಡಲು ಲಭ್ಯವಿರುವ ಆಧಾರಗಳು ತುಂಬಾ ಕಡಿಮೆ. ಅದರಲ್ಲಿಯೂ ಸಿಕ್ಕಂತಹ ಆಧಾರಗಳು ಸಹಾ ಅಸ್ಪಷ್ಟ. ಇವು ಐತಿಹ್ಯದ ಮಾದರಿಯಾದವುಗಳು. ಈ ಸಮುದಾಯಕ್ಕೆ ಸಂಬಂಧಪಟ್ಟಂತೆ ಕಾವ್ಯ ಪುರಾಣಗಳನ್ನೂ ಶೋಧಿಸಲಾಗಿದೆ. ಅವುಗಳಲ್ಲಿ ಪ್ರಮುಖವಾಗಿ ಹತ್ತು ಕೃತಿಗಳಿದ್ದು

[1]ಅವು ಅಮೂಲ್ಯ ಮಾಹಿತಿಯನ್ನೊದಗಿಸಿಕೊಡುತ್ತವೆ.

ಸಾಹಿತ್ಯ

ಸಿದ್ದಮಂಕ ಚರಿತೆ[2] ಹಾಗೂ ತಗರ ಪವಾಡ[3] ಇವು ಚರಿತ್ರೆಯ ಪುರಾಣೀಕರಣ ವರ್ಗಕ್ಕೆ ಸೇರಿದವುಗಳಾಗಿದ್ದು, ಕುರುಬ ಸಮುದಾಯದ ಎರಡು ಸಂಪ್ರದಾಯಗಳನ್ನು ಚಾರಿತ್ರಿಕವಾಗಿ ಕಟ್ಟಿಕೊಡುತ್ತವೆ. ಸತ್ತ ಕುರಿಯನ್ನು ಕಲ್ಯಾಣದೊಳಗೆ ತಂದ ತಪ್ಪಿಗಾಗಿ ಕಲ್ಯಾಣದಿಂದ ಹೊರ ಹಾಕಿಸಿಕೊಂಡ ಕುರುಬರು ೧೨ ವರ್ಷಗಳ ಬಳಿಕ ಸಿದ್ಧಮಂಕನ ಕೃಪೆಯಿಂದ ಕಲ್ಯಾಣವನ್ನು ಪ್ರವೇಶಿಸಿದ ಕಥವಾಸ್ತುವಾಗಿದೆ. ತಗರ ಪವಾಡವು ಸತ್ತಕುರಿಯನ್ನು ಕಲ್ಯಾಣದೊಳಗೆ ತಂದ ತಪ್ಪಿಗಾಗಿ ಕಲ್ಯಾಣದಿಂದ ಹೊರ ಹಾಕಿಸಿಕೊಂಡ ಕುರುಬರು ಶಾಂತಮುತ್ತಯ್ಯನ ಕೃಪೆಯಿಂದ ಕಲ್ಯಾಣ ಪ್ರವೇಶಿಸಿದ ಕಥವಸ್ತುವನ್ನು ಹೊಂದಿದೆ. ಇದರಿಂದ ಕುರುಬ ಸಮುದಾಯದಲ್ಲಿ ಎರಡು ಪರಂಪರೆಗಳಿದ್ದುದು ಸ್ಪಷ್ಟವಾಗುತ್ತದೆ.

ಮಾಳಿಂಗರಾಯನ ಕಾವ್ಯ, ಮೈಲಾರಲಿಂಗನ ಕಾವ್ಯ, ಗೊಲ್ಲಾಳಯ್ಯನ ಪುರಾಣ ಹಾಗೂ ಹುಲಜಂತಿ ಮಹಿಮಾಂತಕ ಮಹಾಲಿಂಗರಾಯರ ಹಾಲುಮತ ಪುರಾಣಗಳು ಕುರುಬ ಸಮುದಾಯದ ಸಾಂಸ್ಕೃತಿಕ ವೀರರಾದ ಮಾಳಿಂಗರಾಯ, ಮೈಲಾರಲಿಂಗ, ಗೊಲ್ಲಾಳಯ್ಯನವರನ್ನು ಕುರಿತಾದವುಗಳು. ಈ ಕೃತಿಗಳು ಕುರುಬ ಸಮುದಾಯದ ಬಗೆಗೆ ಪೌರಾಣಿಕ ಹಿನ್ನಲೆಯ ವಿವರಗಳನ್ನು ನೀಡಿದ್ದರೂ ಸ್ಥಳ ಕೇಂದ್ರಗಳ ಅಧ್ಯಯನಕ್ಕೆ ವಿಪುಲವಾದ ಮಾಹಿತಿಯನ್ನು ನೀಡುತ್ತವೆ.

ಕುರುಬ ಸಮುದಾಯದ ದೈವಗಳೆನಿಕೊಂಡಿರುವ ಬೀರಪ್ಪ, ಅಮೋಘಸಿದ್ಧ, ಸಿದ್ಧರಾಮೇಶ್ವರ, ಪದ್ಮಣ್ಣ ಮತ್ತು ರೇವಣಸಿದ್ಧರ ಸುತ್ತ ಹೆಣೆದುಕೊಂಡಿರುವ ಪುರಾಣಗಳಾದ ಪಂಡಿತ ಚನ್ನಬಸವ ಕವಿಯ ಹಾಲುಮತ ಪುರಾಣ, ರಸ್ತಾಪುರ ಭೀಮಕವಿಯ ಹಾಲುಮತೋತ್ತೇಜಕ ಪುರಾಣ ಮತ್ತು ಸಿದ್ದಪ್ಪ ಮೇಟಿಯವರ ಜನಪದ ಹಾಲುಮತ ಮಹಾಕಾವ್ಯಗಳು ಈ ಸಮುದಾಯದ ಚರಿತ್ರೆಗೆ ಸಹಾಯಕವಾಗಿದೆ. ರಸ್ತಾಪುರ ಭೀಮಕವಿಯ ಹಾಲುಮತೋತ್ತೇಜಕ ಪುರಾಣವು[4] ಸಾಂಸ್ಕೃತಿಕ ದೃಷ್ಟಿಯಿಂದ ಗಮನಾರ್ಹವಾದುದು. ರೇವಣಸಿದ್ಧ, ಭೀರೇಶ್ವರ, ಆದಿಗೊಂಡ, ಶಿವಪದ್ಮ, ಮಾಳಿಂಗರಾಯ ಮೊದಲಾದ ಸಾಂಸ್ಕೃತಿಕ ನಾಯಕರ ಚರಿತ್ರೆಯನ್ನು ವಿವರವಾಗಿ ಚಿತ್ರಿಸಿತ್ತದೆ. ಅಲ್ಲದೆ ಈ ಸಮುದಾಯದ ಕುಲಕಸುಬುಗಳಾದ ಕುರಿಸಾಕಾಣಿಕೆ, ಕಂಬಳಿ ತಯಾರಿಕೆ, ಕೃಷಿ ಕಾರ್ಯವನ್ನು ಸ್ಥೂಲವಾಗಿ ತಿಳಿಸುತ್ತದೆ.

ಇವುಗಳೇ ಅಲ್ಲದೆ ಬೇರೆ ಕಾವ್ಯಗಳಲ್ಲಿಯೂ ಈ ಸಮುದಾಯವನ್ನು ಪ್ರಾಸಂಗಿಕವಾಗಿ ಅಲ್ಲಲ್ಲಿ ಉಲ್ಲೇಖಿಸಿದ್ದರೂ ಹೆಚ್ಚಿನ ವಿವರಗಳು ಸಿಗುವುದಿಲ್ಲ. ಇತ್ತೀಚೆಗೆ ಪ್ರಕಟಗೊಂಡಿರುವ ಬುಕ್ಕರಾಯನ ಚರಿತೆ ಎಂಬ ಹೆಸರಿನ ಕೃತಿಯು ಹಂಡೆ ಪಾಳೆಯಗಾರರ ವಂಶಾವಳಿಯನ್ನು ನಿರೂಪಿಸುತ್ತದೆ.

ಶಾಸನಗಳು

ಕುರುಬರ ಧಾರ್ಮಿಕ, ಸಾಮಾಜಿಕ ಮತ್ತು ಆರ್ಥಿಕ ವಿಚಾರಗಳ ಕುರಿತು ಅನೇಕ ವಿಷಯಗಳನ್ನು ಶಾಸನಗಳು ತಿಳಿಸುತ್ತವೆ. ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಸೊಗಲದ ಕ್ರಿ.ಶ. ೯೮೦ರ ಶಾಸನವು ಬೆಳವಾಡಿಯ ಧನಗರ (ಕುರುಬ) ಸಮುದಾಯದ ಕರಿಯ ಕೇತಿಮಯ್ಯನ ಹೆಂಡತಿ ಕಂಚಿಕಬ್ಬೆಯ ವ್ಯಕ್ತಿತ್ವ, ಅವಳು ಸುವರ್ಣಾಕ್ಷದೇವರಿಗೆ  ದಾನ ನೀಡಿದ ವಿಷಯವನ್ನು ತಿಳಿಸುತ್ತದೆ.[5][6] ಇದನ್ನು ಕುರುಬರಿಗೆ ಸಂಬಂಧಿಸಿದ ಮೊದಲ ಶಾಸನವೆಂದು ಹೇಳಲಾಗಿದೆ.[7] ಕ್ರಿ.ಶ. ೧೦೫೭ರ ದೇಕಬ್ಬೆ ಶಾಸನ, ಸರೂರು ಗ್ರಾಮದಲ್ಲಿ ದೊರೆತಿರುವ ಕ್ರಿ.ಶ. ೧೨೦೮ ಮತ್ತು ೧೨೧೦ರ ಶಾಸನ[8]ಗಳು ಆರಂಭಿಕವಾದವು. ಚಿತ್ರದುರ್ಗ ಜಿಲ್ಲೆಯ ತಾಳಿಕಟ್ಟಿ ಗ್ರಾಮದ ಬೀರಲಿಂಗೇಶ್ವರ ಗ್ರಾಮದ ಆವರಣದಲ್ಲಿ ನೆಟ್ಟಿರುವ ಶಾಸನವು ವಿಜಯನಗರವನ್ನಾಳಿದ ಹಕ್ಕ ಬುಕ್ಕರು ಕುರುಬರೆಂದು ಹೇಳುತ್ತದೆ.[9] ತುರುವೆಕೆರೆಯಲ್ಲಿ ದೊರೆತಿರುವ ತಾಮ್ರ ಶಾಸನವು ವಿಜಯನಗರ ದೊರೆಗಳಾದ ವೀರ ಪ್ರತಾಪ ರಾಮರಾಜೈಯ ಸದಾಶಿವರಾಯ ವೆಂಕಟಾದ್ರಿರಾಜ ಇವರ ಸಮ್ಮುಖದಲ್ಲಿ ವಿವಿಧ ಮಠಗಳ ಸ್ವಾಮೀಜಿಗಳು ಮತ್ತು ಹಿರಿಯರ ನೇತೃತ್ವದಲ್ಲಿ ನಡೆದ ಹಾಲುಮತದ ಕುರುಬರಿಗೆ ಗುರುಗಳಾರು ಎಂಬ ವಾದ ವಿವಾದವನ್ನು ನಿರೂಪಿಸುತ್ತದೆ.[10] ಇದೊಂದು ಜಯರೇಖೆ ಶಾಸನ. ಕಾಲ ಕ್ರಿ.ಶ. ೧೪೮೦ ಎಂದು ಉಲ್ಲೇಖಗೊಂಡಿದ್ದರೂ ೧೮ನೆಯ ಶತಮಾನದಲ್ಲಿ ನಕಲಾಗಿದ್ದು ವಿಜಯನಗರ ಕಾಲದ ಐತಿಹಾಸಿಕ ಸಂಬಂಧಗಳನ್ನು ತಿಳಿಸುತ್ತದೆ.[11] ದೇವಲಾಪುರದಲ್ಲಿ ದೊರೆತಿರುವ ನಾಲ್ಕು ತಾಮ್ರ ಶಾಸನಗಳು[12] ಗೌರಿಬಿದನೂರು ತಾಲೂಕಿನ ನಗರಗೆರೆ ಗ್ರಾಮದಲ್ಲಿ ದೊರೆತಿರುವ ತಾಮ್ರ ಶಾಸನ, ದಾವಣಗೆರೆಯ ಗೌಡಿಕೆಯ ಹಕ್ಕನ್ನು ಕುರುಬರು ದಿವ್ಯದ ಮೂಲದ ಮರಳಿ ಪಡೆದುಕೊಂಡಿದ್ದನ್ನು ವಿವರವಾಗಿ ನಿರೂಪಿಸುವ ತಾಮ್ರ ಶಾಸನ[13] ಕುರುಬರ ಉದ್ಯೋಗಕ್ಕೆ ಸಂಬಂಧಿಸಿದಂತೆ ಕುರಿಸಾಕಣೆ, ಕುರುಬ ಸೇಣಿ, ಕುರಿದೆರಿಗೆ, ಕಂಬಳಿ ಉದ್ಯಮ ಕುರಿತಂತಹ ಉಲ್ಲೇಖವಿರುವ ಶಾಸನಗಳು, ಕುರುಬ ವೃತ್ತಿ ವಾಚಿಯ ಜೊತೆಗೆ ವ್ಯಕ್ತಿಯ ಹೆಸರು ಉಲ್ಲೇಖವಿರುವ ಶಾಸನಗಳು ಮುಖ್ಯವಾಗಿವೆ.

ಕೈಫಿಯತ್ತುಗಳು ಮತ್ತು ನಿರೂಪಗಳು

ವಿಜಯನಗರೋತ್ತರ ಕಾಲದ ಕನ್ನಡ  ನಾಡು ನುಡಿಯ ಸಂಸ್ಕೃತಿಯ ಅಧ್ಯಯನಕ್ಕೆ ಕೈಫಿಯತ್ತು ಬಹುಮುಖ್ಯ ಆಕರಗಳಾಗಿವೆ. ಈ ಸಮುದಾಯಕ್ಕೆ ಸಂಬಂಧಿಸಿದ ಪ್ರತ್ಯೇಕವಾದ ಕೈಫಿಯತ್ತು ರಚನೆಯಾಗಿಲ್ಲ. ಆದರೂ ಸಾಂಧರ್ಬಿಕವಾಗಿ ಬೇರೆ ಬೇರೆ ಕೈಫಿಯತ್ತುಗಳಲ್ಲಿ ಕೆಲವು ಮಾಹಿತಿಗಳು ಲಭ್ಯವಾಗಿವೆ. ಉದಾ. ವಸುಧಾರೆ ಕೈಫಿಯತ್ತು[14] ಹರಿಹರಾದಿಯಾಗಿ ಹದಿಮೂರು ಜನ ಕುರುಬರು ವಿಜಯನಗರವನ್ನಾಳಿದ ಸಂಗತಿಯನ್ನು ತಿಳಿಸುತ್ತದೆ. ಅಂತಾಪುರ ಕೈಫಿಯತ್ತು[15] ಕುರುಬರು ತೊಂತ ನೆರೆ ಕಂಬಳಿಯನ್ನು ಕೆರೆ ಕಂಬಳಿಯನ್ನು ತಯಾರಿಸುತ್ತಿದ್ದುದನ್ನು ದಾಖಲಿಸಿದೆ.  ಕುರುಗೋಡು ಕೈಫಿಯತ್ತು[16] ಹಂಡೆ ಪಾಳೆಯಗಾರರನ್ನು ಕುರುಬರೆಂದು ಹೇಳುತ್ತದೆ. ನಿರೂಪಗಳಲ್ಲಿ ಬಿ. ರಾಜಶೇಖರಪ್ಪನವರು ಪ್ರಕಟಿಸಿರುವ ವಿಜಯನಗರದ ಅರಸರು ಕುರುಬ ರಾವುತ ವೀರನೊಬ್ಬನಿಗೆ ನೀಡಿದ ಮೂರು ನಿರೂಪಗಳು ಬಹುಮುಖ್ಯವಾದವು.[17] ಸಮಾಜದ ದೃಷ್ಟಿಯಿಂದ ಅಪರಾಧಿಗಳಿಂದ ಗುರುಮಠಕ್ಕೆ ದಂಡವನ್ನು ಪಡೆದುಕೊಂಡು ಬಳಗದವರಿಗೆಲ್ಲ ಕುಲದ ಊಟವನ್ನು ಹಾಕಿಸಿಕೊಂಡ ನಂತರ ಶುದ್ದಮಾಡಿದ ವಿವರಗಳನ್ನು ತಿಳಿಸುವ ನಿರೂಪಗಳು ಸಾಮಾಜಿಕ ಇತಿಹಾಸ ತಿಳಿಸಲು ನೆರವಾಗುತ್ತವೆ. ಇವು ಈ ಸಮುದಾಯದಲ್ಲಿ ಅಧಿಕ ಪ್ರಮಾಣದಲ್ಲಿವೆ.

ಸನ್ನದುಗಳು

ರಾಜರು, ಗುರುಗಳು ಮಂತ್ರಿ ಮತ್ತು ಇತರೆ ಆಡಳಿತ ವರ್ಗದವರು ತಮಗೆ ದತ್ತವಾದ ಅಧಿಕಾರವನ್ನು ಬಳಸಿಕೊಂಡು ಸಂಬಂಧಿಸಿದ ವ್ಯಕ್ತಿಗಳಿಗೆ ಹಕ್ಕು ಪತ್ರಗಳನ್ನು ಹೊರಡಿಸುವರು. ಅಂಥವುಗಳನ್ನು ಸನ್ನದುಗಳು ಎಂದು ಕರೆಯಲಾಗುತ್ತದೆ. ಇವುಗಳಲ್ಲಿ ಇವರ ಇತಿಹಾಸಕ್ಕೆ ಸಂಬಂಧಿಸಿದ ಎರಡು ಸನ್ನದುಗಳು ದೊರೆತಿದ್ದು ಒಂದನ್ನು ಕುರುಬರ ಮೂಲ ಧಾರ್ಮಿಕ ನೆಲೆಯಾದ ಸರೂರ ಮಠದ ಸ್ವಾಮಿಗಳು ಹೊರಡಿಸಿದ್ದರೆ17 ಮತ್ತೊಂದನ್ನು ಗೋಲ್ಗೊಂಡ ಕುತುಬ್ ಶಾಹೀವಂಶದವರು ನೀಡಿರುವ ಸನ್ನದಾಗಿದೆ. [18] ಕುರುಬ ಸಮುದಾಯದವರು ತಮ್ಮ ಸಮಾಜದ ಸಂಘಟನೆಗಾಗಿ, ವಿದ್ಯಾಭಿವೃದ್ಧಿಗಾಗಿ ನಾಡಿನ ವಿವಿಧ ಕಡೆ ಸ್ವಾತಂತ್ರ್ಯ ಪೂರ್ವದಲ್ಲಿ ಹಲವಾರು ಸಭೆ, ಸಮಾರಂಭಗಳನ್ನು ನಡೆಸಿದ್ದರು. ಅಲ್ಲಿ ನಡೆದ ವಿಚಾರಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಲಾಗಿದೆ.[19] ಆ ವಿವರಗಳಿಂದ ನಾಡು ನುಡಿಯ ಸಂಸ್ಕೃತಿಗೆ ಕುರುಬ ಸಮುದಾಯದ ಕೊಡುಗೆಗಳನ್ನು ಗ್ರಹಿಸಬಹುದಾಗಿದೆ.

ಮೌಖಿಕ ಸಂಪ್ರದಾಯದ ಆಕರಗಳು ಈ ಸಂಪ್ರದಾಯದ ಇತಿಹಾಸದ ರಚನೆಗೆ ನೆರವಾಗುತ್ತವೆ. ಇವರ ಸಂಪ್ರದಾಯದಲ್ಲಿ ಹುಟ್ಟಿಕೊಂಡಿರುವ ಡೊಳ್ಳಿನ ಹಾಡುಗಳು, ರಟ್ಟಮತಶಾಸ್ತ್ರ, ಮೈಲಾಗರಲಿಂಗೇಶ್ವರನ ಕಾರಣಿಕ ವಾಣಿ, ಒಡೆಯರ ಹೇಳಿಕೆಗಳು, ರ್ವಾಣಗಳು ಮುಖ್ಯವಾದವುಗಳು. ಈ ಆಕರಗಳು ಅವರ ಸಂಪ್ರದಾಯ ಆಚರಣೆಗಳನ್ನು ತಿಳಿಸುವುದರಿಂದ ಅವರ ಸಾಮಾಜಿಕ ಇತಿಹಾಸ ರಚನೆಗೆ ಸಹಾಯ ಮಾಡುತ್ತವೆ.

ಪುರಾತತ್ವ ಆಕರಗಳು

ಪುರಾತತ್ವ ಇತಿಹಾಸ ಕಾಲದ ದೇವಾಲಯ, ನಾಣ್ಯ, ಶಾಸನ ಚಿತ್ರಕಲೆ, ಉತ್ಖನನಗಳಿಂದ ಶೋಧಿಸಲ್ಪಟ್ಟ ಅಂಶಗಳನ್ನು ಒಳಗೊಂಡಿದೆ. ಈ ಸಾಧನಗಳು ಧಾರ್ಮಿಕ ಸಾಮಾಜಿಕ ಆರ್ಥಿಕ ಕಲೆ ಮತ್ತು ತಾಂತ್ರಿಕ ವಿಷಯಗಳ ಮೇಲೆ ಬೆಳಕು ಚೆಲ್ಲುತ್ತವೆ. ಕುರುಬ ಸಮುದಾಯದ ದೇವಾಲಯಗಳಾದ ಸಿರಾದ ರೇವಣಸಿದ್ದೇಶ್ವರ, ಹಿರೇಬೇವಿನೂರಿನ ಸಿದ್ದೇಶ್ವರ, ಸಿಂದಗಿಯ ಮಹದೇವ, ಫಡಗನೂರಿನ ಮೈಲಾರ ದೇವಾಲಯ, ಹೆಬ್ಬಾಳದ ಮಲ್ಲಯ್ಯ, ಚಂದ್ರಗಿರಿಯ ಗಂಗೆ ಮಾಳಮ್ಮ, ಅಳವಂಡಿಯ ಸಿದ್ಧಲಿಂಗೇಶ್ವರ, ಮುಧೋಳದ ಸಿದ್ದೇಶ್ವರ ದೇವಾಲಯಗಳು, ಬಳ್ಳಾರಿಯ ಕೋಟೆ ಇತ್ಯಾದಿಗಳ ಬಗೆಗೆ ಅಮೂಲ್ಯವಾದ ಮಾಹಿತಿಯನ್ನು ಒದಗಿಸಿಕೊಡುತ್ತವೆ.

ಅಧ್ಯಯನಗಳು

ಹಿಂದೆ ವಿವರಿಸಿದ ಎಲ್ಲಾ ದಾಖಲೆಗಳನ್ನು ಉಪಯೋಗಿಸಿಕೊಂಡು ಕುರುಬ ಸಮುದಾಯದ ಇತಿಹಾಸ ಇದುವರೆಗೂ ರಚಿತವಾಗಿಲ್ಲ, ಆದರೂ ತಮಗೆ ದೊರೆತಷ್ಟೇ ಆಕರಗಳನ್ನು ಬಳಸಿಕೊಂಡು ಮೊಟ್ಟಮೊದಲಬಾರಿಗೆ ಕುರುಬರ ಚರಿತ್ರೆ ಎಂಬ ಕೃತಿಯು ೧೯೨೬ರಲ್ಲಿ ವಿ.ಆರ್.ಹನುಮಂತಯ್ಯನವರಿಂದ ಪ್ರಕಟಿತಗೊಂಡಿತು. ಅದನ್ನೇ ಆಧಾರವಾಗಿಟ್ಟುಕೊಂಡು ಅನೇಕ ಬರಹಗಳು ಪ್ರಕಟಗೊಂಡರೂ ಕುರುಬ ಇತಿಹಾಸದ ಸಮಗ್ರ ಅಧ್ಯಯನ ಇದುವರೆಗೂ ಸಾಧ್ಯವಾಗಿಲ್ಲ. ಆದರೂ ಈ ನಿಟ್ಟಿನಲ್ಲಿ ಹಂಪೆಯ ಕನ್ನಡ ವಿಶ್ವವಿದ್ಯಾಲಯದ ಹಾಲುಮತ ಅಧ್ಯಯನ ಪೀಠ ಪ್ರಯತ್ನಿಸುತ್ತಿರುವುದು ಸ್ವಾಗತಾರ್ಹ. ಈ ವಿಶ್ವವಿದ್ಯಾನಿಲಯದ ಪೀಠ ಹೊರತಂದಿರುವ ಇದುವರೆಗಿನ ಕೃತಿಗಳೂ ಇವರ ಇತಿಹಾಸಕ್ಕೆ ಸಂಬಂಧಿಸಿದ ಬಿಡಿ ಲೇಖನಗಳ ಸಂಗ್ರಹವಾಗಿದೆ. ರೈಸರ್ ಗೆಜೆಟಿಯರ್, ಬುಕಾನನ ಪ್ರವಾಸ ಕಥನ, ಅಬ್ಬೆದುಲೆಯವರ Hindu Manners and Customs, ಥರ್ಸ್ಟನ್ ರವರ Mysore Tribes and Caste ಎಂಬ ಕೃತಿಗಳೂ ಕುರುಬ ಸಮುದಾಯದ ಬಗ್ಗೆ ವಿವರಣೆಗಳನ್ನೊಳಗೊಂಡಿವೆ.

ಪ್ರಾಚೀನತೆ

ಕರ್ನಾಟಕದ ಪ್ರಮುಖ ಜನ ಸಮುದಾಯಗಳಲ್ಲಿ ಒಂದಾದ ಕುರುಬ ಸಮುದಾಯವನ್ನು ಹಾಲುಮತದವರೆಂದೂ, ಹೆಗ್ಗಡೆಗಳೆಂದೂ ಕುರುಬರೆಂದೂ, ಪೂಜಾರಿಗಳೆಂದೂ ಕರೆಯುವುದುಂಟು. ಮೂಲತಃ ಶಿವಾರಾಧಕರಾಗಿರುವ ಇವರು ದ್ರಾವಿಡ ಪಂಗಡಕ್ಕೆ ಸೇರಿದವರಾಗಿದ್ದಾರೆ. ಪ್ರಾಚೀನ ಕಾಲದಿಂದಲೂ ಕುರಿ ಸಾಕಣೆ, ಕಂಬಳಿ ನೇಯ್ಗೆ, ಕೃಷಿಯನ್ನು ಮುಖ್ಯ ಕಸುಬನ್ನಾಗಿ ಮಾಡಿಕೊಂಡಿದ್ದಾರೆ. ಹೀಗೆ ಪರಂಪರಾನುಗತವಾಗಿ ಕುರಿಸಾಕಾಣಿಕೆಯನ್ನೇ ಮುಖ್ಯ ಉದ್ಯೋಗವನ್ನಾಗಿ ಮಾಡಿಕೊಂಡು ಬಂದಿರುವುದರಿಂದಲೇ ಇವರಿಗೆ ಕುರುಬ ಎಂಬ ಹೆಸರು ಬರಲು ಕಾರಣವಾಗಿದೆಯೆಂದು ಸಾಮಾನ್ಯವಾದ ತಿಳುವಳಿಕೆಯಾಗಿದೆ. ಇಂತಹ ಸಮುದಾಯವನ್ನು ಕುರಿತಂತೆ ಕಾವ್ಯ ಪುರಾಣಗಳು ರಚನೆಗೊಂಡು ತಮ್ಮ ಸಮುದಾಯದ ಚಾರಿತ್ರಿಕ ಹಿನ್ನಲೆಯಲ್ಲಿ  ಬಹಳಷ್ಟು ಹಿಂದಕ್ಕೆ ಕೊಂಡುಯ್ಯುತ್ತವೆ. ಶಿಷ್ಟ ಜನಾಂಗವು ಹೇಗೆ ಪೌರಾಣಿಕ ಹಿನ್ನಲೆಯಲ್ಲಿ ತನ್ನ ಮೂಲವನ್ನು ಕಲ್ಪಿಸಿಕೊಂಡು ತನ್ನ ಪ್ರಾಚೀನತೆಯನ್ನು ಸ್ಥಾಪಿಸಿಕೊಳ್ಳಲು ಪ್ರಯತ್ನಿಸಿದೆಯೋ ಅದೇ ರೀತಿ ಬುಡಕಟ್ಟು ಸಮುದಾಯಕ್ಕೆ ಸೇರಿರುವ ಈ ಕುರುಬ ಸಮುದಾಯವೂ ಕೂಡ ತನ್ನ ಜನಾಂಗದ ಮೂಲವನ್ನು ಪೌರಾಣಿಕ ಹಿನ್ನಲೆಯಲ್ಲಿಯೇ ಕಲ್ಪಿಸಿಕೊಂಡಿದೆ. ಅದರ ಪ್ರಕಾರ ಉಂಡಾಡು ಪದ್ಮಣ್ಣ ಅಥವಾ ಶಿವಪದ್ಮನೇ ಕುರುಬ ಜನಾಂಗದ ಮೂಲ ಪುರುಷನೆಂದು ಸ್ಥಾಪಿಸಿಕೊಳ್ಳಲಾಗಿದೆ. ಇಥರ್ಸ್ಟನ್ ಪ್ರಕಾರ “ಮೂಲತಃ ಕುರುಬರು ಕಾಪುಗಳು. ಅವರ ಪೂರ್ವಜರು ಮಾಸಿರೆಡ್ಡಿ ಮತ್ತು ನೀಲಮ್ಮ. ಇವರು ಪೂರ್ವ ಘಟ್ಟದಲ್ಲಿ ಸೌಧೆ ಮಾರಿ ಜೀವಿಸುತ್ತಿದ್ದರು. ಅವರಿಗೆ ಆರು ಜನ ಗಂಡುಮಕ್ಕಳು. ಅವರ ಬಡತನ ಕಂಡು ಮರುಗಿದ ಈಶ್ವರ ಜಂಗಮ ವೇಷಧಾರಿಯಾಗಿ ಅವರ ಮನೆಗೆ ಬಂದು ವಿಭೂತಿ ಪ್ರಧಾನ ಮಾಡಿ ನಿಮಗೆ ಮತ್ತೊಬ್ಬ ಗಂಡು ಮಗು ಹುಟ್ಟಿ ಅವನಿಂದ ಸಕಲೈಶ್ವರ್ಯ ದೊರೆಯುತ್ತದೆ ಎಂದು ಹೇಳುತ್ತಾನೆ. ಈ ರೀತಿ ಜನಿಸಿದವನೇ ಉಂಡಾಡಿ ಪದ್ಮಣ್ಣ. ಈ ಕುಟುಂಬವು ವ್ಯವಸಾಯ ಮಾಡುತ್ತ ಏಳಿಗೆ ಹೊಂದುತ್ತದೆ. ಆದರೆ ಪದ್ಮಣ್ಣ ಯಾವುದೇ ಕೆಲಸ ಮಾಡುತ್ತಿರಲಿಲ್ಲ. ಇವನನ್ನು ತೊಲಗಿಸಲು ಅವನ ಅಣ್ಣಂದಿರು ಯೋಚಿಸಿ ರೂಪಿಸಿ ಅವನಿಗೆ ಹುತ್ತವೊಂದರ ಮೇಲೆ ಬೆಳೆದಿದ್ದ ಪೊದೆಗೆ ಬೆಂಕಿ ಹಚ್ಚಲು ಹೇಳುತ್ತಾರೆ. ಹುತ್ತದಲ್ಲಿದ್ದ ಹಾವು ಅವನನ್ನು ಕಚ್ಚಲಿ ಎಂಬುದು ಅವರ ಇಚ್ಛೆಯಾಗಿತ್ತು. ಆ ಪೊದೆಗೆ ಬೆಂಕಿ ಹಚ್ಚಿದಾಗ ಹಾವಿನ ಬದಲಿಗೆ ಅಸಂಖ್ಯಾತ ಕುರಿಗಳು ಹುತ್ತದಿಂದ ಹೊರಬಂದವು. ಇದನ್ನು ಕಂಡು ಹೆದರಿದ ಪದ್ಮಣ್ಣ ಓಡಿ ಹೋಗುತ್ತಾನೆ. ಆಗ ಈಶ್ವರ ಪ್ರತ್ಯಕ್ಷನಾಗಿ ಅವನಿಗೆ ನಿನ್ನ ಜೀವನಕ್ಕೋಸ್ಕರ ಇವುಗಳನ್ನು ಸೃಷ್ಟಿಸಿದ್ದೇನೆ. ನೀನು ಇವುಗಳನ್ನು ಸಾಕಿ ಅಭಿವೃದ್ಧಿಯಾಗು ಎಂದು ಹೇಳಿ ಅವನಿಗೆ ಹಾಲು ಕರೆಯುವುದನ್ನು ಕಾಯಿಸುವುದು ಮೊದಲಾದವನ್ನು ಹೇಳಿಕೊಡುತ್ತಾನೆ. ಈ ರೀತಿ ಈ ಪ್ರಾಣಿಗಳನ್ನು ಕಾಡಿನಲ್ಲಿ ನೋಡಿಕೊಳ್ಳುತ್ತಿದ್ದಾಗ ರಾಕ್ಷಸರ ಬಳಿ ಇದ್ದ ಒಬ್ಬ ಬ್ರಾಹ್ಮಣ ಕನ್ಯ ಪದ್ಮಣ್ಣನನ್ನು ಪ್ರೀತಿಸಿದಳು. ಇಬ್ಬರೂ ಸೇರಿ ರಾಕ್ಷಸನನ್ನು ಹತ್ಯೆಗೈದು ವಿವಾಹವಾದರು. ನಂತರ ಪದ್ಮಣ್ಣ ಈ ಹುಡುಗಿಯ ಜೊತೆಗೆ ತನ್ನ ಜಾತಿಯಲ್ಲಿಯೇ ಒಬ್ಬಳನ್ನು ಮದುವೆಯಾದನು. ಇವರಿಗೆ ಮಕ್ಕಳಾದವು. ತನ್ನ ಮಕ್ಕಳ ಮದುವೆಯ ಕಾಲದಲ್ಲಿ ಬ್ರಾಹ್ಮಣ ಹೆಂಡತಿಯ ಮಕ್ಕಳ ಕೈಗೆ ಉಣ್ಣೆಯ ಕಂಕಣವನ್ನು, ತನ್ನ ಜಾತಿಯವಳ ಮಕ್ಕಳ ಕೈಗೆ ಹತ್ತಿಯ ಕಂಕಣವನ್ನು ಕಟ್ಟಿದನು. ಹೀಗಾಗಿ ಕುರುಬರಲ್ಲಿ ಕ್ರಮೇಣ ಹತ್ತಿಕಂಕಣ ಮತ್ತು ಉಣ್ಣೆ ಕಂಕಣ ಎಂಬ ಎರಡು ಪಂಗಡಗಳಾದವು”.[20]

ಇನ್ನೊಂದು ಕಥೆಯ ಪ್ರಕಾರ

“ಕೊಲ್ಲಾಪುರದಲ್ಲಿದ್ದ ಮಾಯಿ ಎಂಬ ಕ್ಷುದ್ರದೇವತೆಯ ಹಿಡಿತದಿಂದ ನವಕೋಟಿ ಸಿದ್ಧರನ್ನು ರೇವಣಸಿದ್ಧೇಶ್ವರನು ಬಿಡುಗಡೆ ಮಾಡಿ ಅರ್ಧ ಜನರನ್ನು ರೇವಣ ಸಿದ್ಧನೆ ಹೆಸರು ಹೇಳಿಕೊಂಡು ಭಿಕ್ಷೆಮಾಡಿ ಜೀವಿಸಿರೆಂದೂ ಇನ್ನರ್ಧ ಜನರನ್ನು ಕುರಿಗಳನ್ನಾಗಿ ಮಾಡಿ ಒಂದು ಹುತ್ತದಲ್ಲಿ ಅಡಗಿಸಿಟ್ಟನು. ಈ ಹುತ್ತವು ಆದಿಗೊಂಡ ಎಂಬಾತನಿಗೆ ಸೇರಿತ್ತು. ಅವನಿಗೆ ಶಿವಾಂಶ ಸಂಭೂತನಾದ ಉಂಡಾಡು ಪದ್ಮಣ್ಣ ಎಂಬ ಮಗನಿದ್ದನು. ಇವನು ಯಾವುದೇ ಕೆಲಸ ಮಾಡುತ್ತಿರಲಿಲ್ಲ. ಇವನ ಅಣ್ಣಂದಿರು ಇದರಿಂದ ಕೋಪಗೊಂಡು ತಂದೆಗೆ ದೂರು ನೀಡಿದರು. ತಂದೆ ಪದ್ಮಣ್ಣನನ್ನು ಮುದ್ದಿಸಿ ಅಣ್ಣಂದಿರೊಡನೆ ಹೊಲಕ್ಕೆ ಕಳುಹಿಸಿದನು. ಅಲ್ಲಿ ಅವನಿಗೆ ಹುತ್ತವನ್ನು ಅಗೆಯಲು ಕಳುಹಿಸಲಾಯಿತು. ಆ ಕೆಲಸ ಮಾಡುತ್ತಿದ್ದಾಗ ಅದರ ಒಳಗಡೆಯಿಂದ ಆರು ಬಣ್ಣದ ಕುರುಗಳು ಹೊರಬಂದವು. ಪದ್ಮಣ್ಣ ಹೆದರಿ ಪಲಾಯನ ಮಾಡಿದನು. ಆ ಕುರಿಗಳು ಅವನನ್ನೇ ಹಿಂಬಾಲಿಸಿದವು. ಪದ್ಮಣ್ಣ ಸಾಕಾಗಿ ನಿಂತುಕೊಂಡು ಶಿವನನ್ನು ಪ್ರಾರ್ಥಿಸಿದನು. ಆಗ ಶಿವ ಪ್ರತ್ಯಕ್ಷನಾಗಿ ಭೃಂಗಿಯ ಶಾಪದಿಂದ ದೇವತೆಗಳೇ ಕುರಿಗಳಾಗಿದ್ದಾರೆ. ಅವುಗಳನ್ನು ಕಾಪಾಡುವುದುದಕ್ಕಾಗಿ ನನ್ನ ಅಂಶದಿಂದ ನೀನು ಹುಟ್ಟಿರುವೆ. ಸುಖವಾಗಿ ಬಾಳು ಎಂದು ಹರಸಿ ಮರೆಯಾದನು. ಹೀಗೆ ಕುರಿಗಳನ್ನು ಮೇಯಿಸುತ್ತಿದ್ದಾಗ ರಾಕ್ಷಸನಿಂದ ಕನ್ಯೆಯೊಬ್ಬಳನ್ನು ಬಿಡಿಸಿದನು. ಆ ಕನ್ಯೆಯು ಪದ್ಮಣ್ಣನನ್ನು ವಿವಾಹವಾಗುವಂತೆ ಒತ್ತಾಯಿಸಿದಾಗ, ಅವನು ಶಿವನನ್ನು ಪ್ರಾರ್ಥಿಸಿದನು. ಶಿವಪಾರ್ವತಿ ಪ್ರತ್ಯಕ್ಷವಾಗಿ ಇಬ್ಬರಿಗೂ ಮದುವೆ ಮಾಡಿಸಿದರು. ಆ ಸಂದರ್ಭದಲ್ಲಿ ಕುರಿಯ ಉಣ್ಣೆಯಿಂದ ದಾರ ಮಾಡಿ ಪಾರ್ವತಿ ಕೊರಳಲ್ಲಿದ್ದ ಅರಿಶಿನವನ್ನು ಅದಕ್ಕೆ ಹಚ್ಚಿ ಕಂಕಣ ಕಟ್ಟಿದರು. ಅಂದಿನಿಂದ ಪದ್ಮಣ್ಣನ ವಂಶದವರಿಗೆ ಉಣ್ಣೆ ಕಂಕಣದವರೆಂದೂ, ಅವನ ಅಣ್ಣಂದಿರ ವಂಶದವರಿಗೆ ಹತ್ತಿ ಕಂಕಣದವರೆಂದೂ ಹೆಸರಾಗಿ ಅವರಲ್ಲಿ ಎರಡು ಪಂಗಡಗಳಾದವು”.[21]

ಇವುಗಳೇ ಅಲ್ಲದೆ ಇನ್ನೂ ಹಲವಾರು ಕಥೆಗಳು ಇವರ ಮೂಲವನ್ನು ಕುರಿತು ಹೇಳುತ್ತವೆ. ಇವುಗಳನ್ನು ಕಟ್ಟು ಕಥೆಗಳೆಂದು ತಳ್ಳಿಹಾಕಿದರೂ ಅವು ಎರಡು ಪ್ರಮುಖವಾದ ವಿವರಗಳನ್ನು ಹೇಳುತ್ತವೆ. ಒಂದು- ಈ ಜನಾಂಗದ ಮುಖ್ಯ ದೇವತೆ ಶಿವನೆಂದೂ ಇನ್ನೊಂದು ಈ ಜನಾಂಗ ಅತಿ ಪ್ರಾಚೀನವಾದುದೆಂದೂ ಸ್ಪಷ್ಟವಾಗುತ್ತದೆ. ಇದಕ್ಕೆ ಸಮರ್ಥನೆಯನ್ನು ನೀಡುವ ರೀತಿಯಲ್ಲಿ ಅನೇಕ ಇತಿಹಾಸಜ್ಞರು, ಮಾನವಶಾಸ್ತ್ರಜ್ಞರು, ಸಮಾಜ ವಿಜ್ಞಾನಿಗಳು ಸಂಶೋಧನೆಯನ್ನು ಮಾಡಿ ಭಾರತದ ಜನಸಮುದಾಯಗಳಲ್ಲಿ ಕುರುಬ ಜನಾಂಗವೇ ಅತಿ ಪ್ರಾಚೀನವಾದುದೆಂದು ತೋರಿಸಿಕೊಟ್ಟಿದ್ದಾರೆ.

ಶಂಭಾ ಜೋಷಿಯವರ ಪ್ರಕಾರ “ಮಾನವನ ಮೊದಲಿನ ಅವಸ್ಥೆಯಾದ ಆಹಾರಕ್ಕಾಗಿ ಅಲೆಯುವ ಬೇಟೆ ಸಂಸ್ಕೃತಿಯ ಕಾಲಘಟ್ಟ. ಅವನು ಒಂದು ಕಡೆ ನೆಲಸಿ ಕುರಿ, ಆಡು, ಹಸು, ಮೊದಲಾದ ಪ್ರಾಣಿಗಳನ್ನು ಸಾಕಿದನು. ಈ ಅವಸ್ಥೆಯಿಂದಲೇ ಕುರುಬ ಜನಾಂಗದ ಇತಿಹಾಸ ಆರಂಭವಾಯಿತು”.[22] ಈ ದೃಷ್ಟಿಯಿಂದ ಮಾನವ ನಾಗರಿಕತೆಯ ಮೂಲ ಪುರುಷರೆಂದರೆ ಪಶುಪಾಲಕರೇ ಎನ್ನಬಹುದು. ಈ ಪಶುಪಾಲಕರೇ ಕುರುಬರು. ಈ ಅಭಿಪ್ರಾಯವನ್ನು ಬೆಂಬಲಿಸುವಂತೆ ಗಸ್ತೋವ್ ಓಪರ್ಟ ತಮ್ಮ ಕೃತಿಯಲ್ಲಿ[23] ಕುರುಬರ ಪ್ರಾಚೀನತೆ ಬಗ್ಗೆ “Indeed the kurubas must be regarded as very old inhabitants of this land. Who can contested with their Dravidian Kingman the priority of occupation of the Indian Soil”.

ದಕ್ಷಿಣ ಭಾರತದಲ್ಲಿ ಸಿಗುವ ಅತಿ ಪ್ರಾಚೀನ ನಾಣ್ಯಗಳೆಂದರೆ ಕುರುಬರವೇ ಎಂದು ಅವು ಕ್ರಿ.ಶ. ೩ನೆಯ ಶತಮಾನದವೆಂದು ಸರ್ ಇಲಿಯಟ್ ಹೇಳಿದ್ದಾರೆ. ಅದೇ ರೀತಿ ತಮಿಳಿನಲ್ಲಿ ಹಟ್ಟಿಕಾರರನ್ನು ಕುರುನೀಲ ಮನ್ನೆಯರ ಎಂದು ವರ್ಣಿಸಲಾಗಿದೆ. ಪ್ರಾಚೀನ ತಮಿಳು ಕಾವ್ಯವಾದ ಶಿಲಪ್ಪದಿಕಾರಂನಲ್ಲೂ ಇಡೈಯರ್, ಅಂಡರ ವಡುಗರ್ ಎಂಬ ಉಲ್ಲೇಖಗಳು ಬರುವುದರಿಂದ ಮತ್ತು ಕ್ರಿ. ಶ. ೨ನೆಯ ಶತಮಾನಕ್ಕಿಂತ ಮೊದಲೇ ತನ್ನ ಅಸ್ತಿತ್ವವನ್ನು ಸಾಧಿಸಿಕೊಂಡಿತ್ತು ಎಂಬುದನ್ನು ಗಮನಿಸಬೇಕು. ಇದರ ಜೊತೆಗೆ ಪಾಲಿ ಗ್ರಂಥಗಳಲ್ಲಿರುವ ಅಂಧ, ಅಂಧಕರು, ನಮ್ಮ ಅಂಡರರೂ ಒಂದೇ ಎಂದು ಇವರೇ ಆಂಧ್ರರೆಂದು ಡಾ.ಎಸ್. ಕೃಷ್ಣಸ್ವಾಮಿ ಅಯ್ಯಂಗಾರ್ ಅವರು ಪ್ರತಿಪಾದಿಸಿದ್ದಾರೆ. ಈ ಆಂಧ್ರ ಹೆಸರು ಐತರೇಯ ಬ್ರಾಹ್ಮಣದಲ್ಲಿ ಬರುತ್ತದೆ. ಇದರ ರುದ್ರಾಧ್ಯಾಯದಲ್ಲಿ ಪತ್ತಿ (ಪಟ್ಟಿ>ಹಟ್ಟಿ)ಗಳ ಉಲ್ಲೇಖವಿದೆ. ಆದ್ದರಿಂದ ವೇದಕಾಲದಲ್ಲೇ ಈ ಜನಾಂಗ (ಹಟ್ಟಿಕಾರ) ಸುವಿಖ್ಯಾತವಾಗಿತ್ತೆಂದೂ ಕ್ರಿ.ಪೂ. ೨೦೦೦ಗಳಷ್ಟು ಇದು ಪ್ರಾಚೀನವಾದುದೆಂದೂ ಅಭಿಪ್ರಾಯಪಡಲಾಗಿದೆ. ಒಟ್ಟಾರೆ ಹೇಳುವುದಾದರೆ ತಮಿಳು ಕೃತಿ ಶಿಲಪ್ಪದಿಕಾರಂನಲ್ಲಿನ ಉಲ್ಲೇಖ, ಐತರೇಯ ಬ್ರಾಹ್ಮಣದಲ್ಲಿನ ಉಲ್ಲೇಖ್, ಶಂಬಾಜೋಷಿಯವರ ವಿವರಣೆ, ಪಾಶ್ಚಾತ್ಯ ವಿದ್ವಾಂಸರ ಅಭಿಪ್ರಾಯ ಇವೆಲ್ಲವನ್ನು ಕ್ರೋಢಿಕರಿಸಿ ಅವಲೋಕಿಸಿದಾಗ ಕುರುಬ ಜನಾಂಗ ದಕ್ಷಿಣ ಭಾರತದ ಪ್ರಮುಖ ಜನಾಂಗವೆಂದೂ ಇದು ವೇದ ಪೂರ್ವ ಕಾಲದಲ್ಲೇ ಅಸ್ತಿತ್ವದಲ್ಲಿತ್ತೆಂದೂ ಸ್ಪಷ್ಟವಾಗುತ್ತದೆ.

ಭಿನ್ನ ಹೆಸರುಗಳು

ಪ್ರಾಚೀನ ಭಾರತದ ನಿವಾಸಿಗಳಾದ ಕುರುಬರು ಅಖಿಲಭಾರತ ವ್ಯಾಪ್ತಿ ಹೊಂದಿದ್ದಾರೆ. ಮೂಲತಃ ದ್ರಾವಿಡ ಜನಾಂಗದ ಗುಣಲಕ್ಷಣಗಳನ್ನು ಹೊಂದಿದ್ದ ಈ ಸಮುದಾಯ ಪಶುಪಾಲನೆಯನ್ನೇ ಪ್ರಮುಖ ವೃತ್ತಿಯನ್ನಾಗಿ ಮಾಡಿಕೊಂಡು ಅದರ ನಿರ್ವಹಣೆಗೆ ಒಂದು ಕಡೆ ನೆಲೆ ನಿಲ್ಲದೆ ಬೇರೆ ಬೇರೆ ಪ್ರದೇಶಗಳಿಗೆ ವಲಸೆ ಹೋಗುತ್ತಿತ್ತು. ಕ್ರಮೇಣ ಅವರು ಭಾರತದ ವಿವಿಧ ಕಡೆ ನೆಲೆಯೂರಿದ ಪ್ರದೇಶಗಳಲ್ಲಿಯೇ ಹಟ್ಟಿಗಳನ್ನು ನಿರ್ಮಿಸತೊಡಗಿದರು. ಹೀಗೆ ವಿವಿಧ ಕಡೆ ನೆಲೆಯೂರಿ ತಮ್ಮದೇ ಆದ ಸಂಸ್ಕೃತಿ ನಾಗರೀಕತೆಯನ್ನು ಬೆಳೆಸಿಕೊಂಡ ಅವರನ್ನು ವಿವಿಧ ಹೆಸರುಗಳಿಂದ ಗುರುತಿಸಲಾಗುತ್ತದೆ.

ಕುರುಬರನ್ನು ಮಹಾರಾಷ್ಟ್ರದಲ್ಲಿ ಧನಗಾರರೆಂದೂ, ತಮಿಳುನಾಡಿನಲ್ಲಿ ಕುರುಂಬಿ ಇಡೈಯರ್, ಅಂಡರ್ ಪೊಡುವರ, ಕುಂಬರ್, ಕಳವರ್, ಮಲಬಾರು ತೀರದಲ್ಲಿ ಗೌಡಿಯನ್ ಕುರುಪು ಎಂತಲೂ ಆರ್ಕಾಟ್, ಚಂಗೆಲ್ಪಟ್ಟ, ತಂಜಾವೂರು ಮೊದಲಾದ ಕಡೆ ಇವರನ್ನು ಯಾದವರೆಂದೂ ಗೋವಾದಲ್ಲಿ ಕುರುಂಬಿ ಅಥವಾ ಕೊರುಂಬಿ ಎಂದೂ, ಆಂಧ್ರ ಪ್ರದೇಶದಲ್ಲಿ ಗೊಲ್ಲವಾಡ, ಕುರುಪು, ಹಾದಮು, ಕುರುಮು ಎಂದೂ ಕರೆಯುವರು. ತೆಲಗಿನಲ್ಲಿ ಗೊಕ್ರಿ ಎಂದರೆ ಕುರಿ, ಬಹುವಚನದಲ್ಲಿ ಅದು ಗೊರ್ರಲು (ಗೊರ್ಲು) ಆಗುತ್ತದೆ. ಈ ಹಿನ್ನಲೆಯಲ್ಲಿ ಕುರುಬರಿಗೆ ಗೊಲ್ಲವಾಡು ಎಂಬ ಹೆಸರು ಬಂದಿದೆ.[24][25] ರಾಜಮಹಲ್ ಗುಡ್ಡೆಗಳು, ಪೋಟಾನಾಗಪುರ, ಶೋಣ ನದಿತೀರಗಳಲ್ಲಿ ಕುರ್ಪ ಎಂದೂ, ಪಂಜಾಬ್ ಆಗ್ರ ಮತ್ತು ಹೆಹಲಿ ಮೊದಲಾದ ಪ್ರಾಂತ್ಯಗಳಲ್ಲಿ ಗಡಿ ಅಥವಾ ಗಡರಿಯಾ ಎಂದೂ, ಟೆಬೆಟ್, ನೇಪಾಳ, ಹಿಮಾಲಯ ತೀರ ಪ್ರದೇಶಗಳಲ್ಲಿ ‘ಗಡ್ಡಿ’ ಎಂದೂ ಕರೆಯುವರು. ಅಲ್ಲದೆ ಉತ್ತರ ಹಿಂದೂಸ್ಥಾನ ಮತ್ತು ಗುಜರಾತಿನ ಕಡೆ ಕುರುಬ ಸಮುದಾಯವನ್ನು ಅಹೀರರು, ಭರವಾಡರು ಎಂದೂ, ಬಂಗಾಲದಲ್ಲಿ ಪಾಲರು, ರಾಜಸ್ಥಾನದಲ್ಲಿ ರಾಜಪಾಲಿ ಪಾಲ ಕ್ಷತ್ರಿಯರೆಂಬ ಹೆಸರಿನಿಂದ ಗುರ್ತಿಸಿಕೊಂಡಿದ್ದಾರೆ. ಅಲ್ಲದೆ ಕರ್ನಾಟಕದ ಉದ್ದಗಲಕ್ಕೂ ಹರಡಿರುವ ಈ ಸಮುದಾಯದವರನ್ನು ಹಾಲಮತಸ್ಥರು, ಕುರುಬರು ಎಂದು ಕರೆಯಲಾಗುತ್ತದೆ. ಕರ್ನಾಟಕದಲ್ಲಿ ಲಿಂಗಾಯತ ಒಕ್ಕಲಿಗರನ್ನು ಬಿಟ್ಟರೆ ಕುರುಬರೇ ಅತ್ಯಂತ ಹಚ್ಚಿನ ಸಂಖ್ಯೆಯಲ್ಲಿರುವುದು ಗಮನಾರ್ಹ.


[1] ರವೀಂದ್ರನಾಥ ಕೆ, ಕಾವ್ಯ ಪುರಾಣಗಳು-ಹಾಲುಮತ ವ್ಯಾಸಂಗ (ಸಂ) ಎಫ್.ಟಿ. ಹಳ್ಳಿಕೇರಿ, ಪುಟ ೧೯, ಕನ್ನಡ ವಿಶ್ವವಿದ್ಯಾಲಯ ಹಂಪಿ, ವಿದ್ಯಾರಣ್ಯ, ೨೦೦೯.

[2] ಕಲಬುರ್ಗಿ ಎಂ.ಎಂ. ಮತ್ತು ವೈ.ಸಿ.ಭಾನುಮತಿ (ಸಂ) ಸಿದ್ಧಮಂಕ ಚರಿತೆ, ಲಿಂಗಾಯತ ಅಧ್ಯಯನ ಸಂಸ್ಥೆ ಗದಗ, ೨೦೦೪.

[3] ಕಲಬುರ್ಗಿ ಎಂ.ಎಂ., ಸಿ.ಕೆ. ಪರಶುರಾಮಯ್ಯ, ಎಫ್.ಟಿ.ಹಳ್ಳಿಕೇರಿ (ಸಂ) ತಗರಪವಾಡ, ವಿದ್ಯಾನಿಧಿ ಪ್ರಕಾಶನ ಗದಗ ೨೦೦೪.

[4] ರಸ್ತಾಪುರ ಭೀಮಕವಿಯ ಹಾಲುಮತೋತ್ತೇಜಕ ಪುರಾಣ (ಸಂ) ಡಾ.ಎಫ್.ಟಿ. ಹಳ್ಳಿಕೇರಿ, ಪ್ರಸಾರಾಂಗ ಕನ್ನಡ ವಿಶ್ವವಿದ್ಯಾಲಯ ಹಂಪಿ, ವಿದ್ಯಾರಣ್ಯ, ೨೦೦೮.

[5] ????

[6] ಎಫಿಗ್ರಾಫಿಯಾ ಇಂಡಿಯಾ ಸಂ xvi ಪುಟ ೪, (ಸಂ) ಎಫ್.ಡಬ್ಲು,ಥಾಮಸ್ ಹೆಚ್., ಕೃಷ್ಣಶಾಸ್ತ್ರಿ ಎ.ಎಸ್.೧೯೮೩.

[7] ಎಫ್.ಟಿ. ಹಳ್ಳಿಕೇರಿ, ದಾಖಲೆಗಳು, ಹಾಲುಮತ ವ್ಯಾಸಂಗ (ಸಂ) ಎಫ್.ಟಿ. ಹಳ್ಳಿಕೇರಿ, ಪುಟ ೨೫.

[8] ಸೌತ್ ಇಂಡಿಯನ್ ಇನ್ ಸ್ಕ್ರಿಪ್ಷನ್ ಸಂ. ೧೫ ಪುಟ ೨೦೨.

[9] ಎಫಿಗ್ರಾಫಿಯಾ ಕರ್ನಾಟಿಕಾ ಸಂ. ೧೧, ಪುಟ ೩೫೯.

[10] ತಗರ ಪವಾಡ ಅನುಬಂಧ, ಪುಟ ೯೯.

[11] ಶಾಸನ ಅಧ್ಯಯನ ೨ (ಸಂ) ದೇವರಕೊಂಡಾರೆಡ್ಡಿ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ ಹಂಪಿ, ವಿದ್ಯಾರಣ್ಯ, ೨೦೦೪.

[12] ವಿಜಯನಗರ ಅಧ್ಯಯನ ಸಂ. ೧೨ ಪುಟ ೭೬.

[13] ರಾಜಶೇಖರಪ್ಪ ಬಿ., ಹಾಲತೊರೆ (ಸಂ) ಎಂ. ಕರಿಯಪ್ಪ, ಪುಟ ೨೮೨, ದಾವಣಗೆರೆ ೨೦೦೩.

[14] ಕಲಬುರ್ಗಿ ಎಂ.ಎಂ., ಕರ್ಣಾಟಕ ಕೈಫಿಯತ್ತುಗಳು ಪುಟ ೧೧೮, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಯಲ ಹಂಪಿ, ವಿದ್ಯಾರಣ್ಯ, ೧೯೯೪.

[15] ಅದೇ ಪುಟ ೫೦೮.

[16] ವಿಜಯನಗರ ಅಧ್ಯಯನ ಸಂ. ೧೨, ಪುಟ ೧೮೨.

[17] ಎಫ್.ಟಿ.ಹಳ್ಳಿಕೇರಿ, ದಾಖಲೆಗಳು, ಹಾಲುಮತ ವ್ಯಾಸಂಗ ಪುಟ ೩೫.

[18] ಜಯಕರ್ನಾಟಕ ಸಂ ೨, ಸಂಚಿಕೆ ೪, ಪುಟ ೧೮೧. ೧೯೪೨.

[19] ಎಫ್.ಟಿ.ಹಳ್ಳಿಕೇರಿ (ಸಂ) ಹಾಲುಮತ ಮಹಾಸಭೆ: ಭಾಷಣ ಮತ್ತು ವರದಿಗಳು, ವಿಕಾಸ ಪ್ರಕಾಶನ, ಹೊಸಪೇಟೆ, ೨೦೦೯.

[20] ಇ ಥರ್ಸ್ಟನ್ Tribes and castes of South India.

[21] ಹನುಮಂತಯ್ಯ ವಿ.ಆರ್., ಕುರುಬರ ಚರಿತ್ರೆ (ಸಂ) ಸುಧಾಕರ ಪುಟ ೧೩-೧೪.

[22] ಶಂಭಾ ಜೋಷಿ, ಕರ್ನಾಟಕದ ವೀರಕ್ಷತ್ರಿಯರು, ಪುಟ ೩೦.

[23] Gustove appert- The original inhabitants of India-p-123,A.D. 1893.

[24] ????

[25] Gustove appert- The original inhabitants of India p-218, A.D. 1893.