ಬ್ರಿಟಿಷರ ಆಗಮನದಿಂದಾಗಿ ಭಾರತದ ವಿವಿಧ ಸಮುದಾಯಗಳ ಸಂಘಟನೆ ಮತ್ತು ಅಭಿವೃದ್ದಿಗಾಗಿ ಅನೇಕ ವಿಧಾಯಕ ಯೋಜನೆಗಳನ್ನು ಕಳೆದ ಶತಮಾನದ ಆರಂಭದಿಂದ ರೂಪಿಸಲಾಯಿತು. ಆ ಯೋಜನೆಗಳ ಅನುಷ್ಠಾನದಿಂದಾಗಿ ಸಮುದಾಯಗಳಲ್ಲಿ ಮಹತ್ತರವಾದ ಬೆಳವಣಿಗೆಗಳು ಕಂಡುಬಂದವು. ವಿಶೇಷವಾಗಿ ಸಮುದಾಯಗಳ ಐತಿಹಾಸಿಕ ಹಿನ್ನೆಲೆ, ಸಾಂಸ್ಕೃತಿಕ ಅನನ್ಯತೆಯನ್ನು ಅರಿತುಕೊಳ್ಳುವ ಪ್ರಯತ್ನ ಮೊದಲಿಗೆ ಆರಂಭಗೊಂಡಿತು. ಇಂಥ ಪ್ರಯತ್ನಕ್ಕೆ ನಾಂದಿ ಹಾಡಿದವರಲ್ಲಿ ವಿದೇಶಿ ವಿದ್ವಾಂಸರು ಮೊದಲಿಗರು. ಎಡ್ಗರ್ ಥರ್ಸ್ಟನ್, ಎಂಥೋವನ್, ಗುಸ್ತವ ಓಪರ್ಟ ಮೊದಲಾದವರು ಭಾರತದ ವಿವಿಧ ಸಮುದಾಯಗಳ ಕುರಿತು ಮಾಹಿತಿಯನ್ನು ಕಲೆ ಹಾಕಿ ಅವುಗಳನ್ನು ದಾಖಲಿಸಿ ವಿಶ್ಲೇಷಣೆಗೊಳಪಡಿಸಿದರು. ಆ ಗ್ರಂಥಗಳು ಈಗಲೂ ಪ್ರಧಾನ ಆಕರಗಳಾಗಿ ಬಳಕೆಗೊಳ್ಳುತ್ತಿವೆ.

ಈ ಹಿನ್ನೆಲೆಯಲ್ಲಿ ಕರ್ನಾಟಕದ ಬಹುದೊಡ್ದ ಸಮುದಾಯಗಳಲ್ಲಿ ಒಂದಾದ ಕುರುಬ ಸಮುದಾಯದ ಇತಿಹಾಸ, ಉಪಪಂಗಡಗಳು, ಆಚರಣೆ ಸಂಪ್ರದಾಯ, ಬೌಗೋಳಿಕ ವ್ಯಾಪ್ತಿ, ಜೀವನ ವಿಧಾನಗಳನ್ನು ಥರ್ಸ್ಟನ್ ತನ್ನ ಕಾಸ್ಟ & ಟ್ರೈಬ್ಸ್ ಅಫ್ ಸದರ್ನ ಇಂಡಿಯಾ ಸಂಪುಟಗಳಲ್ಲಿ ಮೊದಲ ಬಾರಿಗೆ ದಾಖಲಿಸಿದ್ದಾನೆ. ಅಲ್ಲಿಂದ ಕುರುಬ ಸಮುದಾಯ ವ್ಯಷ್ಟಿ ಮತ್ತು ಸಮಷ್ಟಿ ನೆಲೆಯಲ್ಲಿ ಸಂಘಟನೆಗೊಂಡು ತನ್ನ ಸರ್ವತೋಮುಖ ಅಭಿವೃದ್ದಿಗಾಗಿ ಅನೇಕ ರಚನಾತ್ಮಕ ಕಾರ್ಯಗಳನ್ನು ಕಾಲಕಾಲಕ್ಕೆ ಅನುಷ್ಠಾನಗೊಳಿಸುತ್ತ ಬಂದಿದೆ. ಇದಕ್ಕೆ ಈ ಸಮುದಾಯ ಕಳೆದ ಶತಮಾನದ ಪೂರ್ವಾರ್ಧದಲ್ಲಿ ಅಯೋಜಿಸಿದ ಹಾಲುಮತ ಸಭೆ, ಮಹಾಸಭೆ, ಸಮ್ಮೇಳನಗಳು ನಿದರ್ಶನವಾಗಿವೆ. ಈ ಸಭೆ ಮಹಾಸಭೆ ಸಮ್ಮೇಳನಗಳ ವರದಿ ಮತ್ತು ಭಾಷಣಗಳನ್ನು ಒಂದೆಡೆ ಸಂಗ್ರಹಿಸಿ “ಹಾಲುಮತ ಮಹಾಸಭೆ: ವರದಿಗಳು ಭಾಷಣಗಳು” ಹೆಸರಿನ ಸಂಪುಟವನ್ನು ನಾನು ಇತ್ತೀಚೆಗೆ ಪ್ರಕಟಿಸಿದ್ದೇನೆ. ಸಮುದಾಯದ ಗುರುಗಳು, ಹಿರಿಯರು, ಪ್ರಜ್ಞಾವಂತರು ತಮ್ಮ ಚಿಂತನೆಗಳಿಂದ ಸಮುದಾಯದ ಸಂಘಟನೆಗಾಗಿ ಅನೇಕ ಮಾರ್ಗದರ್ಶಿ ಸೂತ್ರಗಳನ್ನು ವರದಿ ಮತ್ತು ಭಾಷಣಗಳಲ್ಲಿ ಸೂಚಿಸಿದ್ದಾರೆ. ಆ ಸೂತ್ರಗಳನ್ನು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಳಿಸಿದ್ದರೆ ಕುರುಬ ಸಮುದಾಯ ಸಂಘಟನೆ ಮತ್ತು ಅಭಿವೃದ್ಧಿಯಲ್ಲಿ ಬಹುಮಟ್ಟಿಗೆ ಯಶಸ್ಸು ಹೊಂದಲಿಕ್ಕೆ ಸಾಧ್ಯವಾಗುತ್ತಿತ್ತು. ಅಂಥ ಸಂಘಟನೆ ಮತ್ತು ಅಭಿವೃದ್ಧಿಗಾಗಿ ಕೈಕೊಂಡ ಕೆಲವು ಸಂಗತಿಗಳನ್ನು ಚರ್ಚಿಸುವುದು ಮತ್ತು ಅದಕ್ಕೆ ಪರಿಹಾರೋಪಾಯಗಳನ್ನು ಸೂಚಿಸುವುದು ಈ ಸಂಪ್ರಬಂಧದ ಮುಖ್ಯ ಆಶಯವಾಗಿದೆ.

ಅಧುನಿಕ ಕಾಲಕ್ಕೆ ಬಂದರೆ ಕುರುಬ ಸಮುದಾಯದ ಸಂಘಟನೆಗೆ ನೂರು ವರ್ಷಗಳ ಇತಿಹಾಸವಿದೆ. ೧೯೧೦ರಲ್ಲಿ ಲಕ್ಷ್ಮೇಶ್ವರದಲ್ಲಿ ನಡೆದ ಮೊದಲ ಹಾಲುಮತ ವಿದ್ಯಾವರ್ಧಕ ಮಹಾಸಭೆ ಚರಿತ್ರಿಕ ದೃಷ್ಟಿಯಿಂದ ಮಹತ್ವದ ಘಟನೆಯಾಗಿದೆ. ಈ ಮಹಾಸಭೆಯ ಮೂಲಕ ಕುರುಬ ಸಮುದಾಯವು ತನ್ನ ಸಂಘಟನೆಯನ್ನು ಬಲಪಡಿಸಲು ಕಾರ್ಯ ಪ್ರವೃತ್ತವಾಗಿರುವುದನ್ನು ಕಾಣಬಹುದು. ಸಾಂಸ್ಕೃತಿಕ ಸಂಗತಿಗಳನ್ನು ಮಹಾಸಭೆಯಲ್ಲಿ ನೆರೆದ ಜನತೆಗೆ ತಿಳಿಸುವ ಪ್ರಯತ್ನವನ್ನು ಕೂಲಂಕಷವಾಗಿ ಮಾಡಲಾಗಿದೆ. ಹೀಗಾಗಿ ಕುರುಬ ಸಮುದಾಯದ ಇತಿಹಾಸದಲ್ಲಿಯೇ ಈ ಮಹಾಸಭೆಗೆ ಚಾರಿತ್ರಿಕ ಮಹತ್ವ, ಪ್ರಾಪ್ತವಾಗಿದೆ. ತದನಂತರದಲ್ಲಿ ನಲವಡಿ, ಹಲ್ಲೂರು, ಬಂಕಾಪುರ, ದೇವಿಹೊಸೂರು, ಅಣ್ಣಿಗೇರಿ, ಅಬ್ಬಿಗೇರಿ ಮೊದಲಾದ ಸ್ಥಳಗಳಲ್ಲಿ ಸಮಾವೇಶಗಳು ನಡೆದಿವೆ. ಸಮುದಾಯದ ಜಾಗೃತಿಯೇ ಈ ಸಮಾವೇಶಗಳ ಮುಖ್ಯ ಆಶಯ. ಧರ್ಮ, ಸಾಹಿತ್ಯ, ಸಮಾಜ, ಸಂಸ್ಕೃತಿ ಕುರಿತು ಜನತೆಗೆ ತಜ್ಞರಿಂದ ಉಪನ್ಯಾಸ ಏರ್ಪಡಿಸಿರುವುದು, ಜನರಿಗೆ ತಮ್ಮ ಸಮುದಾಯದ ಇತಿಹಾಸವನ್ನು ತಿಳಿಸುವುದು, ಸಂಘಟನೆಗೊಳಿಸುವುದು ಇತ್ಯಾದಿಗಳ ಬಗೆಗೆ ಸೂಕ್ತ ಮಾರ್ಗದರ್ಶನ ನೀಡಿರುವುದನ್ನು ಈ ಸಮ್ಮೇಳನಗಳ ವರದಿ ಮತ್ತು ಭಾಷಣಗಳಿಂದ ತಿಳಿಯಬಹುದಾಗಿದೆ. ರಾಣೆಬೆನ್ನೂರಿನಲ್ಲಿ ಏರ್ಪಡಿಸಿದ ಕುರುಬರ ಸಮ್ಮೇಳನದಲ್ಲಿ ಡಾ.ಆರ್.ನಾಗನಗೌಡರು ಮಾಡಿದ ಅಧ್ಯಕ್ಷೀಯ ಭಾಷಣವು ಕುರುಬ ಸಮುದಾಯದ ಅಂದಿನ ಸ್ಥಿತಿಗತಿಯನ್ನು ತಿಳಿಸುತ್ತದೆ. ನಾಗನಗೌಡರು ಅಂಕಿಅಂಶಗಳ ಸಹಿತ ಕುರುಬರ ಕಂಬಳಿ ಉಧ್ಯಮ, ಕುರಿ ಸಾಕಾಣಿಕೆ ವೃತ್ತಿ, ರಾಜಕೀಯ ಪ್ರಾತಿನಿಧ್ಯ, ಶೈಕ್ಷಣಿಕ ವಿಚಾರಗಳು, ಸಮುದಾಯ ಮುನ್ನಡೆಯಬೇಕಾದ ಮಾರ್ಗ ಕುರಿತು ನೀಡಿದ ಸಲಹೆಗಳು ಮನನೀಯವಾಗಿದೆ.

ಧಾರ್ಮಿಕವಾಗಿ ಕುರುಬರು ತಮ್ಮ ಗುರುಪರಂಪರೆಯನ್ನು ಮುಂದುವರೆಸಿಕೊಂಡು ಬರಬೇಕು. ರೇವಣಸಿದ್ಧ – ಶಾಂತಮುತ್ತಯ್ಯ, ಸಿದ್ಧರಾಮ – ಸಿದ್ಧಮಂಕ ಮತ್ತು ಅಮೋಘಸಿದ್ಧ ಪರಂಪರೆಯ ಮುಂದುವರಿಕೆಯಾಗಿರುವ ಗುರು ಒಡೆಯರು ಕುರುಬರ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಗಳಲ್ಲಿ ಪೌರೋಹಿತ್ಯವನ್ನು ವಹಿಸಿಕೊಳ್ಳುವುದು. ಹಾಲುಮತ ಧರ್ಮದ ಬಗೆಗೆ ಪ್ರವಚನ ಮಾಡುವುದು. ಆ ಮೂಲಕ ಕುರುಬರಲ್ಲಿ ಧಾರ್ಮಿಕ ಜಾಗೃತಿಯನ್ನು ಮೂಡಿಸುವುದು ಅವರ ಕರ್ತವ್ಯವಾಗಿದೆ. ಆ ಕರ್ತವ್ಯಕ್ಕೆ ಪ್ರತಿಯಾಗಿ ಕುರುಬರು ಒಡೆಯರಿಗೆ ಕಾಣಿಕೆ ರೂಪದಲ್ಲಿ ದವಸಧಾನ್ಯ ಹಣವನ್ನು ನೀಡುವುದು. ಮಕ್ಕಳ ವಿಧ್ಯಾಭ್ಯಾಸಕ್ಕಾಗಿ ಶೈಕ್ಷಣಿಕ ಸಂಸ್ಥೆಗಳನ್ನು ಆರಂಭಿಸುವುದು. ಕುರುಬರು ಮಧ್ಯಪಾನ ಸೇವನೆ, ಮಾಂಸಾಹಾರ ಭಕ್ಷಣೆಯಿಂದ ದೂರವಾಗುವುದು. ಸಮುದಾಯದ ಎಲ್ಲ ಉಪಪಂಗಡದವರು ಸಾಮಾಜಿಕವಾಗಿ ಸಂಘಟನೆಗೊಳ್ಳುವುದು. ಕುರಿಸಾಕಾಣಿಕೆ, ಕಂಬಳಿ ತಯಾರಿಕೆ ಹಾಗೂ ಕೃಷಿ ಕಾಯಕವನ್ನು ಕೈಕೊಂಡು ಅರ್ಥಿಕವಾಗಿ ಸಬಲಗೊಳ್ಳುವುದು. ಗ್ರಾಮ, ಹೋಬಳಿ, ತಾಲೂಕು, ಜಿಲ್ಲೆ ಹಾಗೂ ರಾಜ್ಯ ಮಟ್ಟದಲ್ಲಿ ಕುರುಬರ ಸಂಘಗಳನ್ನು ಸ್ಥಾಪಿಸುವುದು. ಹೀಗೆ ಅನೇಕ ರಚನಾತ್ಮಕವಾದ ಸಲಹೆಗಳನ್ನು ಮಹಾಸಭೆ ಸಮ್ಮೇಳನಗಳಲ್ಲಿ ಕೊಟ್ಟಿದ್ದಾರೆ. ಈ ಸಲಹೆಗಳನ್ವಯ ಮುಂಬಯಿ ಕರ್ನಾಟಕದ ಹಾಲುಮತ ವಿದ್ಯಾವರ್ಧಕ ಸಂಘ, ಮೈಸೂರು ರಾಜ್ಯ ಕುರುಬರ ಸಂಘ, ಸಹಕಾರಿ ಪತ್ತಿನ ಸಂಘಗಳು ಆಕಾಲಕ್ಕೆ ಸ್ಥಾಪನೆಗೊಂಡಿರುವುದನ್ನು ಗುರುತಿಸಬಹುದು. ಹೀಗೆ ಸ್ವಾತಂತ್ರಪೂರ್ವದಲ್ಲಿ ಕುರುಬ ಸಮುದಾಯ ಜಾಗೃತಗೊಂಡು ಸಂಘಟನೆಗೊಂಡು ನಾಡನುಡಿಗಾಗಿ ತನ್ನದೇ ಆದ ಕೊಡುಗೆಯನ್ನು ನೀಡಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ಭಾರತದ ಸ್ವಾತಂತ್ರ ಹಾಗೂ ಕರ್ನಾಟಕದ ಏಕೀಕರಣ ಚಳುವಳಿಯಲ್ಲಿಯೂ ಈ ಸಮುದಾಯದ ಗಣ್ಯರು ಪಾಲ್ಗೊಂಡು ತಮ್ಮದೇ ಆದ ಸೇವೆಯನ್ನು ಸಲ್ಲಿಸಿದ್ದಾರೆ. ಇಂಥ ಸಮುದಾಯವೊಂದು ಸ್ವಾತಂತ್ರೋತ್ತರ ಕಾಲದಲ್ಲಿ ನೀರಿಕ್ಷಿತ ಮಟ್ಟದಲ್ಲಿ ಸಂಘಟನೆಗೊಳ್ಳಲು ಸಾಕಷ್ಟು ಅವಕಾಶಗಳಿದ್ದವು. ಸಂಘಟನೆ ಮತ್ತು ಅಭಿವೃದ್ದಿಗಾಗಿ ಕುರುಬ ಸಮುದಾಯ ಇಪ್ಪತ್ತು ವರ್ಷಗಳ ಹಿಂದೆಯೇ ಕಾಗಿನೆಲೆಯಲ್ಲಿ ಕನಕ ಪೀಠವನ್ನು ಸ್ಥಾಪಿಸಿತು. ಧಾರ್ಮಿಕವಾಗಿ ಸಾಮಾಜಿಕವಾಗಿ ಕುರುಬ ಸಮುದಾಯ ಸಂಘಟನೆಗೊಳ್ಳಬೇಕೆಂಬ ಸದುದ್ದೇಶ ಈ ಪೀಠದ ಸ್ಥಾಪನೆಗೆ ಕಾರಣವಾಗಿದೆ. ಹೀಗಿದ್ದೂ ಸಮಾಜವನ್ನು ಜಾಗೃತಗೊಳಿಸುವಲ್ಲಿ ಈ ಪೀಠವು ನಿರೀಕ್ಷಿತ ಮಟ್ಟದಲ್ಲಿ ಯಶಸ್ಸ್ನು ಕಂಡಿಲ್ಲ. ಏಕೆಂದರೆ ಕುರುಬ ಸಮುದಾಯಕ್ಕೆ ಪರಂಪರಾನುಗತವಾಗಿ ತನ್ನದೇ ಆದ ಧಾರ್ಮಿಕ ಹಿನ್ನಲೆಯನ್ನು ಹೊಂದಿದೆ. ಕುರುಬರು ಮೂಲತಃ ಶೈವಸಂಪ್ರದಾಯಸ್ಥರು. ರೇವಣಸಿದ್ದೇಶ್ವರ ಈ ಸಮುದಾಯದ ಮೊದಲ ಗುರು. ಈ ಗುರುವಿನ ಮುಂದುವರಿಕೆಯಾಗಿ ಶಾಂತಮುತ್ತಯ್ಯ, ಆತನ ನಂತರ ಒಡೆಯರು ಕುರುಬರ ಗುರುಗಳಾಗಿ, ರೇವಣಸಿದ್ದೇಶ್ವರ ಮಠದ ಪೀಠಾಧಿಕಾರಿಗಳಾಗಿ, ಸಮಾಜದ ಪ್ರಗತಿಗಾಗಿ ಸಾವಿರಾರು ವರ್ಷಗಳಿಂದ ಕಾರ್ಯನಿರ್ವಹಿಸುತ್ತ ಬಂದಿದ್ದಾರೆ. ಇದಕ್ಕೆ ಕರ್ನಾಟಕದಾದ್ಯಂತ ಈಗಲೂ ಅಸ್ತಿತ್ವದಲ್ಲಿರುವ ರೇವಣಸಿದ್ದೇಶ್ವರ ಮಠಗಳು ಸಾಕ್ಷಿಯಾಗಿವೆ. ಹೀಗಾಗಿ ಶೈವ ಸಂಪ್ರದಾಯದ ರೇವಣ ಸಿದ್ದೇಶ್ವರ ಗುರು ಪರಂಪರೆಯನ್ನು ಈ ಸಮುದಾಯ ಸಬಲಗೊಳಿಸಬೇಕೆ ಹೊರತು ವೈದಿಕ ಸಂಪ್ರದಾಯದ ಕನಕದಾಸ ಪರಂಪರೆಯನ್ನಲ್ಲ ಎಂಬುದನ್ನು ಮನಗಾಣಬೇಕಿತ್ತು. ಅದೇನೆ ಇರಲಿ, ಈ ಸಮುದಾಯ ತನ್ನ ಪರಂಪರಾನುಗತ ಧಾರ್ಮಿಕ ಪದ್ದತಿಯನ್ನು ಸ್ಪಷ್ಟವಾಗಿ ರೂಪಿಸಿಕೊಳ್ಳಲಿಲ್ಲವೆಂಬುದು ಮಾತ್ರ ಖೇದದ ಸಂಗತಿಯಾಗಿದೆ. ಈಗಲಾದರೂ ಈ ಸಮುದಾಯದ ನಾಯಕರು, ಗುರುಗಳು, ಮಹಾಜನರು ಎಚ್ಚತ್ತುಗೊಂಡು ಸಂಘಟನಾತ್ಮಕವಾಗಿ ರೂಪುಗೊಳ್ಳಲು ಪ್ರಯತ್ನಿಸಬೇಕು.

ರಾಜಕೀಯವಾಗಿಯೂ ಈ ಸಮುದಾಯ ಇನ್ನು ಪ್ರಬಲಗೊಳ್ಳಬೇಕಾಗಿದೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ವ್ಯಕ್ತಿ ಯಾವುದೇ ಪಕ್ಷದಲ್ಲಿದ್ದರೂ ಸಮುದಾಯದ ಅಭಿವೃದ್ಧಿಯ ವಿಷಯದಲ್ಲಿ ನಾವೆಲ್ಲರೂ ಒಂದೇ ಎಂಬ ಅಭಿಪ್ರಾಯವನ್ನು ಹೊಂದಿರುವುದು ಸೂಕ್ತ. ಹೊಸಪೇಟೆಯ ಡಾ. ಆರ್. ನಾಗನಗೌಡ, ಟಿ.ಮರಿಯಪ್ಪ, ಕೊಲ್ಲುರು ಮಲ್ಲಪ್ಪನವರಂಥ ನಿಷ್ಠಾವಂತ ಶ್ರೇಷ್ಟ ರಾಜಕಾರಣಿಗಳನ್ನು ಹೊಂದಿದ ಈ ಸಮುದಾಯವು ಅಂಥವರ ರಾಜನೀತಿಯನ್ನು ಅನುಸರಿಸಬೇಕಾಗಿದೆ.

ಶೈಕ್ಷಣಿಕವಾಗಿ ತಾಂತ್ರಿಕ, ವೈದ್ಯಕೀಯ ಹಾಗೂ ವೃತ್ತಿಪರ ತರಬೇತಿ ಕಾಲೇಜುಗಳನ್ನು ಆರಂಭಿಸಿ ಸಮುದಾಯದ ಅಭಿವೃದ್ಧಿಗೆ ನೆರವಾಗಬೇಕು. ಅದಕ್ಕೆ ಪೂರಕವಾಗಿ ವಸತಿ ನಿಲಯಗಳನ್ನು ಸ್ಥಾಪಿಸಿ ಬಡವಿದ್ಯಾರ್ಥಿಗಳ ನೆರವಿಗೆ ಬರಬೇಕು. ಈಗ ಕೆಲವು ಜಿಲ್ಲೆ ಹಾಗೂ ತಾಲೂಕು ಕೇಂದ್ರಗಳಲ್ಲಿ ವಸತಿ ನಿಲಯಗಳಿದ್ದರೂ ಅವುಗಳ ಪ್ರಗತಿ ಸಾಲದು. ೧೯೨೫ರಲ್ಲಿಯೇ ಸಮುದಾಯದ ಬಡವಿದ್ಯಾರ್ಥಿಗಳಿಗೆ ಶಿರಹಟ್ಟಿ ತಾಲೂಕಿನ ಬಟ್ಟೂರಿನಲ್ಲಿ “ಅಮೋಗಿ ಸಿದ್ದಾರ್ಯ ಕುರುಬರ ಬೋರ್ಡಿಂಗ”ನ್ನು ಸ್ಥಾಪಿಸಿ ಅನುಕೂಲ ಮಾಡಿರುವುದು ಇಲ್ಲಿ ಸ್ಮರಣಾರ್ಹ. ಇಂಥ ಮಾದರಿಯಲ್ಲಿ ಇನ್ನೂ ಅನೇಕ ಬೋರ್ಡಿಂಗನ್ನು ಆರಂಭಿಸಬಹುದು.

ಕುರುಬ ಸಮುದಾಯದ ಸಾಹಿತ್ಯ ಸಂಸ್ಕೃತಿಯ ಶೋಧ ಮತ್ತು ಪ್ರಸಾರಕ್ಕಾಗಿ ಅಧ್ಯಯನ ಕೇಂದ್ರಗಳನ್ನು ಸ್ಥಾಪಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಕನ್ನಡ ವಿಶ್ವವಿದ್ಯಾಲಯವು ಹಾಲುಮತ ಅದ್ಯಯನ ಪೀಠವನ್ನು ಸ್ಥಾಪಿಸಿ ಕುರುಬ ಸಮುದಾಯದ ಸಂಸ್ಕೃತಿ ಅಧ್ಯಯನವನ್ನು ಕೈಕೊಂಡಿದೆ. ಇದಕ್ಕೆ ಪೂರಕವಾಗಿ ಇನ್ನೂ ಬೇರೆ ಬೇರೆ ಭಾಗಗಳಲ್ಲಿ ಅಧ್ಯಯನ ಕೇಂದ್ರಗಳನ್ನು ಆರಂಭಿಸಬೇಕು. ಅಂದಾಗ ಮಾತ್ರ ಕುರುಬರ ಸಮಗ್ರ ಅಧ್ಯಯನದ ದಾಖಲೀಕರಣ ಮತ್ತು ವಿಶ್ಲೇಷಣ ಕಾರ್ಯವನ್ನು ಕೈಕೊಳ್ಳಲು ಅನುಕೂಲವಾಗುತ್ತದೆ. ಮೌಖಿಕ ಸಂಪ್ರದಾಯದಲ್ಲಿರುವ ಡೊಳ್ಳಿನ ಹಾಡುಗಳನ್ನು ಸಂಗ್ರಹಿಸಿ ಸಂಪುಟಗಳ ರೂಪದಲ್ಲಿ ಪ್ರಕಟಿಸುವುದು. ಹಾಲುಮತ ವಿಷಯ ವಿಶ್ವಕೋಶವನ್ನು ಸಿದ್ಧಪಡಿಸುವುದು. ಕುರುಬರ ಆಚರಣೆ ನಂಬಿಕೆ ಮತ್ತು ಸಂಪ್ರದಾಯಗಳನ್ನು ಆಡಿಯೋ ವಿಡಿಯೋ ಮೂಲಕ ದಾಖಲಿಸುವುದು. ನಾಡುನುಡಿಗಾಗಿ ಸೇವೆ ಸಲ್ಲಿಸಿದ ಮಹನೀಯರ ಜೀವನ ಸಾಧನೆಗಳನ್ನು ಹಾಲುಮತ ಪುಣ್ಯ ಪುರುಷರು ಮಾಲಿಕೆಯಲ್ಲಿ ಪುಸ್ತಕಗಳನ್ನು ಪ್ರಕಟಿಸುವುದು.

ಒಟ್ಟಾರೆ ಕುರುಬ ಸಮುದಾಯದ ಅಭಿವೃದ್ಧಿಗಾಗಿ ಕೈಕೊಳ್ಳಬೇಕಾದ ಕೆಲವು ಸಲಹೆಗಳನ್ನು ಕ್ರೋಢಿಕರಿಸಿ ಇಲ್ಲಿ ನೀಡಲು ಬಯಸುತ್ತೇನೆ.

೧. ನಾಡಿನಾದ್ಯಂತ ಇರುವ ರೇವಣಸಿದ್ಧ, ಸಿದ್ಧರಾಮ ಹಾಗೂ ಅಮೋಘಸಿದ್ಧ ಪರಂಪರೆಯ ಮಠ ಮಂದಿರಗಳನ್ನು ಪುನರ್ನವೀಕರಿಸಿ, ಅವುಗಳನ್ನು ಜಾಗೃತ ಸ್ಥಾನಗಳನ್ನಾಗಿ ರೂಪಿಸಬೇಕು. ಆ ಮೂಲಕ ಅಲ್ಲಿನ ಗುರು ಒಡೆಯರು ಮತ್ತು ಕುರುಬ ಸಮುದಾಯದ ಭಕ್ತರ ಮದ್ಯ ಅವಿನಾಭಾವ ಸಂಬಂಧ ಬೆಸೆಯುವಂತೆ ಮಾಡಬೇಕು.

೨. ನಾಡಿನಾದ್ಯಂತ ಅಸ್ತಿತ್ವದಲ್ಲಿರುವ ಕುರುಬರ ಸಂಘಸಂಸ್ಥೆಗಳನ್ನು ಮರುಜೀವಗೊಳಿಸಿ, ಸಂಘಟನಾತ್ಮಕವಾಗಿ ಸಬಲಗೊಳ್ಳಲು ಸಮುದಾಯದವರಿಗೆ ತರಬೇತಿ ನೀಡಬೇಕು.

೩. ಸಮಾಜದ ಬಡಮಕ್ಕಳ ವಿದ್ಯಾಭ್ಯಾಸಕ್ಕಾಗಿ ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ವಸತಿ ನಿಲಯಗಳನ್ನು ಸ್ಥಾಪಿಸಬೇಕು.

೪. ಉನ್ನತ ವಿದ್ಯಾಭ್ಯಾಸಕ್ಕಾಗಿ ಶೈಕ್ಷಣಿಕ ಸಂಸ್ಥೆಗಳನ್ನು ಆರಂಭಿಸುವುದು.

೫. ಸಮುದಾಯದ ಇತಿಹಾಸ ಸಂಸ್ಕೃತಿಯ ಅಧ್ಯಯನಕ್ಕಾಗಿ ಸಂಶೋಧನ ಕೇಂದ್ರಗಳನ್ನು ಸ್ಥಾಪಿಸಲು ಸರಕಾರಕ್ಕೆ ಶಿಫಾರಸ್ಸು ಮಾಡುವುದು. ಆ ಕೇಂದ್ರದ ಮೂಲಕ ಸಂಶೋಧನೆ, ದಾಖಲೀಕರಣ, ತರಬೇತಿ ಶಿಬಿರ, ವಿಚಾರ ಸಂಕಿರಣ, ಗ್ರಂಥಾಲಯ ಸ್ಥಾಪನೆ, ವಸ್ತುಸಂಗ್ರಹಾಲಯ, ಪುಸ್ತಕ ಪ್ರಕಟಣೆಯಂಥ ಶೈಕ್ಷಣಿಕ ಕಾರ್ಯಗಳನ್ನು ಅನುಷ್ಠಾನಕ್ಕೆ ತರುವುದು.

೬. ಜಾಗತೀಕರಣದ ಸಂದರ್ಭದಲ್ಲಿ ಕಂಬಲಿ ಉದ್ಯಮ ನೆಲಕಚ್ಚಿತಿದೆ. ಹೀಗಾಗಿ ಈ ಉದ್ಯಮದ ಬೆಳವಣಿಗೆಗಾಗಿ ಹಲವಾರು ಮಾರ್ಪಾಡುಗಳನ್ನು ಮಾಡುವುದು. ಅಂದರೆ ಕಂಬಳಿ ತಯಾರಿಕೆಯ ಜೊತೆಗೆ ಮನೆಯ ಅಲಂಕರಣದ ಸಾಮಗ್ರಿಗಳನ್ನು ಉಣ್ಣೆಯಲ್ಲಿ ತಯಾರಿಸಲು ಅಗತ್ಯ ಕ್ರಮಕೈಗೊಳ್ಳುವುದು.

೭. ಈ ಹಿಂದೆ ನಡೆದಂತೆ ಹಾಲುಮತ ಮಹಾಸಭೆ ಸಮ್ಮೇಳನಗಳಿಗೆ ಪುನರ್ ಚಾಲನೆ ಕೊಡುವುದು. ಆ ಮೂಲಕ ಸಮುದಾಯದ ಸಮಸ್ಯಗಳಿಗೆ ಪರಿಹಾರಗಳನ್ನು ಕೊಡುಕೊಳ್ಳಲು ತಾಲೂಕು, ಜಿಲ್ಲೆ ಹಾಗೂ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಸಮ್ಮೇಳನಗಳನ್ನು ವ್ಯವಸ್ಥಿತವಾಗಿ ಆಯೋಜಿಸುವುದು.

೮. ನಾಡುನುಡಿಗೆ ಸಮಸ್ಯಗಳು ಎದುರಾದಾಗ ಸಮುದಾಯ ಸಕಾರಾತ್ಮಕವಾಗಿ ಸ್ಪಂದಿಸುವುದು. ಆ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವಲ್ಲಿ ತನ್ನದೇ ಆದ ಸೇವೆಯನ್ನು ತನುಮನಧನದಿಂದ ಸಲ್ಲಿಸಲು ಕಾರ್ಯಕ್ರಮಗಳನ್ನು ರೂಪಿಸುವುದು.

೯. ಡೊಳ್ಳು ಕುಣಿತ, ಹಾಡುಗಾರಿಕೆ, ದಟ್ಟಿಮೇಳ, ಡೋಣಿ ಸೇವೆ, ಗೊರವರ ಕುಣಿತ ಮೊದಲಾದ ಕುರುಬ ಸಮುದಾಯದ ಪರಂಪರಾನುಗತ ಕಲೆಗಳ ಪ್ರದರ್ಶನಕ್ಕೆ ವ್ಯವಸ್ಥೆ ಮಾಡುವುದು. ಕಲಾವಿದರಿಗೆ ಸೂಕ್ತ ಮಾರ್ಗದರ್ಶನ ತರಬೇತಿಗಳನ್ನು ನೀಡುವುದು.

೧೦. ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಯುವಕರಿಗೆ ಸೂಕ್ತ ಮಾರ್ಗದರ್ಶನ ನೀಡುವುದು. ಆ ಮೂಲಕ ಸರಕಾರದಿಂದ ದೊರೆಯುವ ಸೌಲಭ್ಯಗಳನ್ನು ಸಮುದಾಯಕ್ಕೆ ಸಿಗುವಂತೆ ಪ್ರಯತ್ನಿಸುವುದು.

೧೧. ಹಂಡೆಕುರುಬರು, ಕಾಡು ಕುರುಬರು, ಜೇನುಕುರುಬರು, ಧನಗರ ಗವಳಿಗರು, ಒಡೆಯರು, ಉಣ್ಣಿಕಂಕಣ ಕುರುಬರು, ಹತ್ತಿಕಂಕಣ ಕುರುಬರು ಮೊದಲಾದ ಉಪಪಂಗಡಗಳ ಮೂಲಕ ಬೇರೆಬೇರೆ ಕಡೆ ಚದುರಿಹೋದ ಕುರುಬ ಸಮುದಾಯವನ್ನು ಒಗ್ಗೂಡಿಸಬೇಕಾದ ಅಗತ್ಯ ಹಿಂದೆಂದಿಗಿಂತಲೂ ಇಂದು ಅಗತ್ಯವಾಗಿದೆ.

ಇಂಥ ಕೆಲವು ಸಲಹೆಗಳನ್ನು ಅನುಷ್ಠಾನಗೊಳಿಸಿದಲ್ಲಿ ಸಮುದಾಯ ಸರ್ವತೋಮುಖವಾಗಿ ಅಭಿವೃದ್ಧಿಗೊಳ್ಳಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಸಮುದಾಯದ ಗುರುಹಿರಿಯರು ನಾಯಕರು ಚಿಂತನೆ ಮಾಡಬೇಕಾಗಿದೆ.