ಭಾರತದ ಪ್ರಮುಖ ಜನಸಮುದಾಯಗಳಲ್ಲಿ ಹಾಲುಮತ ಸಮುದಾಯವೂ ಒಂದು. ಚಾರಿತ್ರಿಕ ಮತ್ತು ಸಾಂಸ್ಕೃತಿಕವಾಗಿ ಬಹುದೊಡ್ಡ ಪರಂಪರೆಯನ್ನು ಹೊಂದಿದ ಇವರನ್ನು ಸಾಮಾನ್ಯವಾಗಿ ಕುರುಬರು ಎಂದು ಕರೆಯಲಾಗುತ್ತದೆ. ದೇಶದ ವಿವಿಧ ರಾಜ್ಯಗಳಲ್ಲಿ ಇವರನ್ನು ದನಗಾರರು, ಪಾಲರು, ಗಡಾರಿಯಾ, ಚಂದೇಲರು, ಗೊಲ್ಲರು, ಕುರುಮನ್, ಕುರುಂಬರು, ಯಾದವರು, ಗಡೇರಿ, ರೇವಡಿ, ಬಘೇಲರು ಎಂಬ ಹೆಸರಿನಿಂದ ಗುರುತಿಸಲಾಗುತ್ತಿದೆ. ಮೂಲ ಬುಡಕಟ್ಟು, ಸಂಸ್ಕೃತಿಯವರಾದ ಕುರುಬರು ಪ್ರಾಚೀನ ಕಾಲದಿಂದಲೂ ಪಶುಪಾಲನೆ, ಕುರಿ ಸಾಕಣೆ, ಕಂಬಳಿ ತಯಾರಿಕೆ ಹಾಗೂ ಕೃಷಿಯನ್ನು ಪ್ರಧಾನ ಉದ್ಯೋಗವನ್ನಾಗಿ ಮಾಡಿಕೊಂಡು ಬಂದಿದ್ದಾರೆ. ಜಾಗತೀಕರಣ ಉದಾರೀಕರಣಗಳಂಥ ಇಂದಿನ ಸಂದರ್ಭಗಳಲ್ಲಿಯೂ ತಮ್ಮ ಸಂಸ್ಕೃತಿಯ ಮೂಲ ಸೊಗಡನ್ನು, ಪರಂಪರಾಗತ ಜೀವನ ಪದ್ಧತಿಯನ್ನು ಯಥಾವತ್ತಾಗಿ ಉಳಿಸಿಕೊಂಡು ಬಂದವರಲ್ಲಿ ಕುರುಬರು ಪ್ರಮುಖರೆನಿಸುತ್ತಾರೆ.  ಇಂದಿಗೂ ನಡೆಯುವ ಹಬ್ಬಹರಿದಿನ ಆಚರಣೆ ಉತ್ಸವ ನಂಬಿಕೆ ಸಂಪ್ರದಾಯಗಳು ಇದಕ್ಕೆ ಸಾಕ್ಷಿಯಾಗಿವೆ. ಕುರುಬರೇ ಈ ನೆಲದ ಮೂಲನಿವಾಸಿಗಳೆಂದು ಓಪರ್ಟ, ಥರ್ಸ್ಟನ್, ಎಂಥೋವನ್, ಸೊಂಥೈಮರ್, ಶಂಬಾ ಜೋಶಿ, ಚಿಂತಾಮಣಿ ಢೇರೆ, ವಿ. ಆರ್. ಹನುಮಂತಯ್ಯ, ಶಾಮಸಿಂಗ್ ಶಶಿ, ಎಂ. ಎಂ. ಕಲಬುರ್ಗಿ ಅವರಂಥ ಅನೇಕ ವಿದ್ವಾಂಸರ ಅಭಿಪ್ರಾಯವಾಗಿದೆ.

ಕೊಲ್ಲಿಪಾಕಿಯ ರೇವಣಸಿದ್ದೇಶ್ವರ, ಸೊನ್ನಲಾಪುರದ ಸಿದ್ದರಾಮೇಶ್ವರ, ಅರಕೇರಿಯ ಅಮೋಘಸಿದ್ದೇಶ್ವರ, ಸರೂರಿನ ಶಾಂತಮುತ್ತಯ್ಯ, ತೂಗುಡ್ಡದ ಸಿದ್ದಮಂಕರು ಹಾಲುಮತ ಸಮುದಾಯದ ಪರಮ ಗುರುಗಳಾದರೆ, ಬೀರಪ್ಪ, ಮಾಳಪ್ಪ, ಮೈಲಾರಪ್ಪ, ಇಟ್ಟಪ್ಪ, ಬುಳ್ಳಪ್ಪಮ, ಹುಲ್ಲಪ್ಪ, ಚಂದಪ್ಪ ಗುರುಗಳಾದರೆ, ಬೀರಪ್ಪ, ಮಾಳಪ್ಪ, ಮೈಲಾರಪ್ಪ, ಇಟ್ಟಪ್ಪ, ಬುಳ್ಳಪ್ಪ, ಹುಲ್ಲಪ್ಪ, ಚಂದಪ್ಪ ಮುಂತಾದವರು ಸಾಂಸ್ಕೃತಿಕ ವೀರರಾಗಿ ಜನಮಾನಸದಲ್ಲಿ ನೆಲೆ ನಿಂತಿದ್ದಾರೆ. ವಿಜಯನಗರ ಸ್ಥಾಪಕರಾದ ಹಕ್ಕಬುಕ್ಕರು, ಇಂದೋರ ಅರಸುಮನೆತನದ ಅಹಲ್ಯಾಬಾಯಿ ಹೋಳ್ಕರ್, ಹಂಡೆ ಅರಸುಮನೆತನದ ಬಾಲದ ಹನುಮಪ್ಪನಾಯಕ, ಸ್ವಾತಂತ್ರ ಹೋರಾಟದಲ್ಲಿ ಪ್ರಾಣವನ್ನೇ ಪಣಕ್ಕಿಟ್ಟ ವೀರ ಸಂಗೊಳ್ಳಿ ರಾಯಣ್ಣನವರಂಥ ಮಹಾನ್ ಧೀರರು ಶೂರರು ಈ ಸಮುದಾಯಕ್ಕೆ ಸೇರಿದವರು. ಭಾರತದಾದ್ಯಂಥ ಇಂಥ ಅನೇಕ ಮಹಾನುಭಾವರ ಹೆಸರಿನಲ್ಲಿ  ಮಠಮಂದಿರಗಳಿವೆ. ನಿರ್ದಿಷ್ಟ ಅವಧಿಯಲ್ಲಿ ಜಾತ್ರೆ ಉತ್ಸವ ಆಚರಣೆಗಳೂ ಇಲ್ಲಿ ನೆರವೇರುತ್ತವೆ. ಸರೂರು, ಅರಕೇರಿ, ಅಲಕನೂರು, ಕೋಣಗನೂರು, ಮೈಲಾರ, ಬಂಕಾಪುರ, ಹುಲಜಂತಿ, ಪಟ್ಟಣ ಕಡೋಲಿ, ಶಿರಡೋಣ, ಗುಡೂರು, ದೇವರಗುಡ್ಡ ಮುಂತಾದ ಸ್ಥಳಗಳು ಕುರುಬರ ಧಾರ್ಮಿಕ ಮತ್ತು ಸಾಂಸ್ಕೃತಿಕ ಬಹುಮುಖ್ಯ ನೆಲೆಗಳಾಗಿವೆ. ಇಂಥ ವಿಶಿಷ್ಠ ಪರಂಪರೆಯನ್ನು ಹೊಂದಿದೆ. ಈ ಸಮುದಾಯದ ಸಾಹಿತ್ಯ ಸಮಾಜ ಸಂಸ್ಕೃತಿ ಇತಿಹಾಸ ಕಲೆ ಜನಪದ ಪುರಾತತ್ವ ಮೊದಲಾದವುಗಳ ಸಮಗ್ರ ಸರ್ವೇಕ್ಷಣೆ, ಸಂಗ್ರಹ, ಸಂಶೋಧನೆ, ಅಧ್ಯಯನ ಮತ್ತು  ಪ್ರಕಟಣೆಯ ಉದ್ದೇಶದಿಂದ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಹಾಲುಮತ ಅಧ್ಯಯನ ಪೀಠವು ೨೦೦೬ರಲ್ಲಿ ಸ್ಥಾಪನೆಗೊಂಡಿದೆ.

ಪೀಠದ ಉದ್ದೇಶಗಳು

ಹಾಲುಮತ ಅಧ್ಯಯನ ಪೀಠವು ಪ್ರಧಾನವಾಗಿ ಸಂಶೋಧನೆ ದಾಖಲೀಕರಣ ವಿಶ್ಲೇಷಣೆ ಹಾಗೂ ಪ್ರಕಟಣೆ ಈ ನಾಲ್ಕು ಹಂತಗಳಲ್ಲಿ ಕಾಲಬದ್ಧ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸುತ್ತದೆ.

. ಸಂಶೋಧನೆ

೧. ಹಾಲುಮತ ಸಾಹಿತ್ಯ ಸಂಸ್ಕೃತಿಗೆ ಸಂಬಂಧಿಸಿದಂತೆ ಶಾಸನ, ಕೈಫಿಯತ್ತು, ನಿರೂಪ, ಸನ್ನದುಗಳಂಥ ದಾಖಲು ಸಾಹಿತ್ಯ, ಕಾವ್ಯ ಪುರಾಣಗಳಂಥ ಶಿಷ್ಠ ಸಾಹಿತ್ಯ ಹಾಗೂ ಕಥೆ ಹಾಡು ನಂಬಿಕೆಗಳಂಥ ಮೌಖಿಕ ಸಾಹಿತ್ಯಗಳಲ್ಲಿ ಅಧಿಕ ಪ್ರಮಾಣದ ಆಕರ ಸಾಮಗ್ರಿಗಳಿವೆ. ಉದಾಹರಣೆಗೆ ತಗರ ಪವಾಡ, ಸಿದ್ಧಮಂಕ ಚರಿಗೆ, ರೇವಣಸಿದ್ದೇಶ್ವರ ಕಾವ್ಯ, ಹಾಲುಮತ ಪುರಾಣ ಹೀಗೆ ಲಿಖಿತ ಪರಂಪರೆಯಲ್ಲಿ ಹತ್ತು ಹಲವು ಕಾವ್ಯ ಪುರಾಣ, ಅಮೋಘಸಿದ್ದೇಶ್ವರ ಪುರಾಣ ಹೀಗೆ ಲಿಖಿತ ಪರಂಪರೆಯಲ್ಲಿ ಹತ್ತು ಹಲವು ಕಾವ್ಯ ಪುರಾಣಗಳು ಲಭ್ಯವಿವೆ. ಅವೆಲ್ಲವುಗಳನ್ನು ತುಲನಾತ್ಮಕವಾಗಿ ಅಧ್ಯಯನಕ್ಕೊಳಪಡಿಸುವುದು ಕುರುಬರ ಉದ್ಯೋಗ, ಗುರುಪರಂಪರೆ ಇತ್ಯಾದಿ ವಿವರಗಳನ್ನು ಶಾಸನ ಸನ್ನದು ಬಖೈರುಗಳು ದಾಖಲಿಸಿವೆ. ಅಂಥ ಎಲ್ಲ ಶಾಸನಗಳಾದಿಯಾಗಿ ಹಾಲುಮತ ದಾಖಲು ಸಾಹಿತ್ಯವನ್ನು ಒಂದೆಡೆ ಸಂಗ್ರಹಿಸಿ ವಿಶ್ಲೇಷಣೆಗೊಳಪಡಿಸುವುದು.

೨. ಮೌಖಿಕ ಪರಂಪರೆಯಲ್ಲಿ ಈ ಸಮುದಾಯದ ಸಂಸ್ಕೃತಿ ಕಲೆ ಕುರಿತು ಹಾಡು ಕಥೆಗಳಿವೆ. ಅವುಗಳನ್ನು ಆಡಿಯೋ ವಿಡಿಯೋ ಮೂಲಕ ದಾಖಲಿಸಿ ಪ್ರಕಟಿಸುವದು, ಕುರುಬರ ವಿಶಿಷ್ಠ ಕಲೆ ಡೊಳ್ಳು, ಈ ಕಲೆಯ ಪ್ರದರ್ಶನ ಸಂದರ್ಭದಲ್ಲಿ ಹಾಡುವ ಹಾಡುಗಳಿಗೆ ಡೊಳ್ಳಿನ ಹಾಡುಗಳೆಂದು ಕರೆಯುವುರ. ಹೀಗೆಯೇ ರ‍್ವಾಣಗಳು, ಚೌಡಿಕೆ ಪದಗಳು, ಹರಕೆಯ ಪದಗಳು, ಕರಡಿ ಮಜಲಿನ ಹಾಡುಗಳು ಮೌಖಿಕ ರೂಪದಲ್ಲಿವೆ. ಡೊಳ್ಳಿನ ಹಾಡುಗಳನ್ನೇ ಗಮನಿಸಿ ಹೇಳುವುದಾದರೆ ಕರ್ನಾಟಕದಾದ್ಯಂತ ಸರ್ವೇಕ್ಷಣೆ ನಡೆಸಿದರೆ ಅಂದಾಜು ಹತ್ತು ಸಾವಿರ ಪುಟಗಳಷ್ಟು ಹಾಡುಗಳು ಲಭ್ಯವಾಗಬಹುದು. ಅವೆಲ್ಲವುಗಳನ್ನು ಸಂಗ್ರಹಿಸಿ ಸಂಪುಟರೂಪದಲ್ಲಿ ಪ್ರಕಟಿಸಿ ಪ್ರಸಾರಗೊಳಿಸುವುದು.

೩. ಕುರುಬರ ಆರಾಧ್ಯ ದೈವಗಳಾದ ರೇವಣಸಿದ್ದ, ಶಾಂತಮುತ್ತಯ್ಯ, ಸಿದ್ಧರಾಮ, ಮರುಳಸಿದ್ಧ, ಅಮೋಘಸಿದ್ದ, ಬೀರಲಿಂಗ, ಮೈಲಾರಲಿಂಗ, ಮಾಳಿಂಗರಾಯ, ಇಟ್ಟಪ್ಪ ಮುಂತಾದವರ ಹೆಸರಿನಲ್ಲಿ ನಾಡಿನ ಅನೇಕ ಗ್ರಾಮಗಳಲ್ಲಿ ದೇವಾಲಯ, ಮಠ ಮಂದಿರ, ಗದ್ದುಗೆ ಹಾಗೂ ಶಿಲ್ಪಗಳಿವೆ. ಕರ್ನಾಟಕದಲ್ಲಿಯೇ ಅಂದಾಜು ಒಂದು ಸಾವಿರದಷ್ಟು ಮಠ ಮಂದಿರಗಳಿವೆ. ವ್ಯಾಪಕ ಕ್ಷೇತ್ರಕಾರ್ಯದ ಮೂಲಕ ಸರ್ವೇಕ್ಷಣೆ ಕೈಕೊಂಡು ಅವುಗಳ ಸ್ವರೂಪದ ಬಗ್ಗೆ ಸಂಶೋಧನೆ ನಡೆಸುವುದು.

೪.  ಹಬ್ಬ-ಹರಿದಿನ-ಉತ್ಸವ-ಜಾತ್ರೆಗಳಲ್ಲಿ ಕೆಲವು ವಿಶಿಷ್ಠ ಆಚರಣೆ ಮತ್ತು ಸಂಪ್ರದಾಯಗಳು ಜರುಗುತ್ತವೆ. ಅರಕೇರಿ ಅಮೋಘಸಿದ್ಧನ ಜಾತ್ರಗೆ ನೂರಾರು ಪಲ್ಲಕ್ಕಿಗಳು ಆಗಮಿಸುತ್ತವೆ. ಈ ಪಲ್ಲಕ್ಕಿಗಳನ್ನು ನೋಡಿಯೇ ಆನಂದಿಸಬೇಕು. ರೇವಣಸಿದ್ದೇಶ್ವರ ಮಠಗಳಲ್ಲಿ ಕಂಥಾಧಾರಣ ಉತ್ಸವ, ಬೀರದೇವರ ತೋಪು ಜಾತ್ರೆಗಳು ೧೨ ವರ್ಷಕ್ಕೊಮ್ಮೆ ನಡೆಸಲಾಗುತ್ತದೆ. ಈ ಎಲ್ಲ ಉತ್ಸವ ಜಾತ್ರೆಯ ಆಚರಣೆಗಳನ್ನು ದಾಖಲಿಸುವುದು.

೫. ನಾಡು-ನುಡಿ ಸಮಾಜಕ್ಕಾಗಿ ಕುರುಬ ಸಮುದಾಯದ ಅನೇಕ ಗಣ್ಯಮಾನ್ಯರು ಮಹನೀಯರು ಧಾರ್ಮಿಕ ಪುಣ್ಯಪುರುಷರು ದುಡಿದಿದ್ದಾರೆ. ಕಣಗಿನಹಾಳದ ಸಿದ್ದನಗೌಡ ಸಣ್ಣರಾಮನಗೌಡ ಪಾಟೀಲ ಅವರು ಇಡೀ ಏಶಿಯಾ ಖಂಡದಲ್ಲಿಯೇ ಪ್ರಪ್ರಥಮ ಸಹಕಾರ ಸಂಘವನ್ನು ಸ್ಥಾಪನೆ ಮಾಡುವುದರ ಮೂಲಕ ಸಹಕಾರ ಚಳುವಳಿಯ ಹರಿಕಾರರಾಗಿದ್ದಾರೆ. ಕೃಷಿ ತಜ್ಞ ಹೊಸಪೇಟೆಯ ಡಾ. ಆರ್. ನಾಗನಗೌಡ ಕನ್ನಡ ನಾಡುನುಡಿಗಾಗಿ ಅವಿರತ ಶ್ರಮಿಸಿದವರು. ಈ ಸಮುದಾಯದ ಸಂಗೊಳ್ಳಿ ರಾಯಣ್ಣ, ಕರಿಯಪ್ಪ ಸಂಗೂರ, ಕರಿಯಪ್ಪ ಹುಚ್ಚಣ್ಣನವರ, ನಿಂಗಪ್ಪ ಕೊರಗುಂದ, ಗೋಣೆಪ್ಪ ಕಮತ ಇನ್ನೂ ಅನೇಕ ಮಹನೀಯರು ಭಾರತ ಸ್ವಾತಂತ್ರ‍್ಯಕ್ಕಾಗಿ ನಡೆದ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ತಮ್ಮದೇ ಆದ ಸೇವೆಯನ್ನು ಸಲ್ಲಿಸಿದ್ದಾರೆ. ಹೀಗೆ ಸಮಾಜ ಸಂಸ್ಕೃತಿ ಸಾಹಿತ್ಯ ರಾಜಕೀಯ ಮುಂತಾದ ಕ್ಷೇತ್ರದಲ್ಲಿ ಸಾಧನೆಗೈದವರ ಜೀವನ ಚರಿತ್ರೆಯನ್ನು ಬರೆಸುವುದು.

೬. ಹಾಲುಮತ ಸಂಸ್ಕೃತಿಗೆ ಸಂಬಂಧಿಸಿದಂತೆ ವಿಶ್ವಕೋಶ, ಸಾಂಸ್ಕೃತಿಕ ಪದಕೋಶಗಳನ್ನು ಸಿದ್ದಪಡಿಸಿ ಪ್ರಕಟಿಸುವುದು. ಪ್ರಾಚೀನ ಕಾಲದಿಂದಲೂ ಕುರುಬರಿಗೆ ಸಂಬಂಧಿಸಿದ ಕೆಲವು ಪಾರಿಭಾಷಿಕ ಪದಗಳು ಜನರ ಬಾಯಿಂದ ಬಾಯಿಗೆ ಇಂದಿಗೂ ಬಳಕೆಗೊಳ್ಳತ್ತ ಬಂದಿವೆ. ಉದಾಹರಣೆಗೆ ಕರಿಯ ಕಂತೆ, ಕಟ್ಟೆಮನೆ, ಕೋಲ್ಕಾರ, ಭಂಡಾರಿ, ಹರಿವಾಣದವರು, ಕಾಲಿಲ್ಲದ ಐನೋರು, ಒಡೆಯರು ಇಂಥ ನೂರಾರು ಪದಗಳನ್ನು ಸಂಗ್ರಹಿಸಿ ಪದಕೋಶಗಳನ್ನು ಪ್ರಕಟಿಸುವುದು.

೭. ಸಾಹಿತ್ಯ ಇತಿಹಾಸ ಕಲೆ ಧರ್ಮ ಸಮಾಜ ಶಿಲ್ಪ ಇತ್ಯಾದಿ ವಿಷಯಾನುಸಾರ ವರ್ಗೀಕರಿಸಿ ಹಾಲುಮತ ವಿಶ್ವಕೋಶಗಳನ್ನು ಸಂಪುಟಗಳ ರೂಪದಲ್ಲಿ ಪ್ರಕಟಿಸುವುದು.

೮. ಹಾಲುಮತ ಸಂಸ್ಕೃತಿ ಸಾಹಿತ್ಯ ಕಲೆ ಸಮುದಾಯ ಕುರಿತು ನಾಡಿನ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಸಮ್ಮೇಳನ, ವಿಚಾರ ಸಂಕಿರಣ, ತರಬೇತಿ ಶಿಬಿರ ಹಾಗೂ ವಿಶೇಷ ಉಪನ್ಯಾಸಗಳನ್ನು ಏರ್ಪಡಿಸುವುದು.

೯. ಹಾಲುಮತ ಸಮುದಾಯದ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಯ ಕುರಿತು ಅಧ್ಯಯನ ಕೈಕೊಳ್ಳುವುದು. ಆ ಮೂಲಕ ಸಮಾಜದ ಸಮಗ್ರ ಅಭಿವೃದ್ಧಿಗೆ ಸಹಾಯಕಾರಿಯಾಗುವುದು.

. ದಾಖಲೀಕರಣ

೧. ಹಾಲುಮತ ಸಾಹಿತ್ಯ ಸಂಸ್ಕೃತಿ ಕಲೆ ಜನಪದ ಆಚರಣೆ ಸಂಪ್ರದಾಯ ಜಾತ್ರೆ ಉತ್ಸವಗಳನ್ನು ಆಡಿಯೋ ವಿಡಿಯೋ ಮೂಲಕ ದಾಖಲೀಕರಣ ಮಾಡಿಕೊಂಡು ಅಧ್ಯಯನಕ್ಕೆ ಅನುಕೂಲ ಮಾಡಿಕೊಡುವುದು.

. ವಿಶ್ಲೇಷಣೆ

೧. ಸಂಗ್ರಹಿಸಿದ ಲಿಖಿತ ಮತ್ತು ಮೌಖಿಕ ಆಕರಗಳನ್ನು ವಿಶ್ಲೇಷಣೆಗೊಳಪಡಿಸಿ ಅವುಗಳಲ್ಲಿರುವ ಸಾಮ್ಯತೆ ಭಿನ್ನತೆಗಳನ್ನು ಗುರುತಿಸುವುದು. ಈಗಾಗಲೇ ಪ್ರಕಟಗೊಂಡಿರುವ ಹಾಲುಮತ ಕಾವ್ಯ ಪುರಾಣಗಳ ವಸ್ತು ವಿಶಿಷ್ಟತೆಗಳನ್ನು ಗುರುತಿಸುವುದು.

. ಪ್ರಕಟಣೆ

ಹಾಲುಮತ ಸಾಹಿತ್ಯ ಸಂಸ್ಕೃತಿ ಚರಿತ್ರೆ ಆಚರಣೆ ಸಂಪ್ರದಾಯಗಳನ್ನು ಅಧ್ಯಯನ ಮಾಡಿ ಅವುಗಳ ಫಲಿತಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸುವುದು. ಹಾಗೆಯೇ ವಿಚಾರ ಸಂಕಿರಣ ಸಮ್ಮೇಳನ ವಿಶೇಷ ಉಪನ್ಯಾಸ ತರಬೇತಿ ಶಿಬಿರಗಳಲ್ಲಿ ಮಂಡಿತವಾದ ಸಂಪ್ರಬಂಧಗಳನ್ನು ಸಂಪುಟಗಳಲ್ಲಿ ಪ್ರಕಟಿಸಿ ಪ್ರಸಾರಗೊಳಿಸುವುದು. ಇದಿಷ್ಟು ಹಾಲುಮತ ಅಧ್ಯಯನ ಪೀಠದ ಪ್ರಮುಖ ಉದ್ದೇಶಗಳು.

ಈ ಹಿನ್ನೆಲೆಯಲ್ಲಿ ಹಾಲುಮತ ಸಂಸ್ಕೃತಿಯ ಸಂಶೋಧನೆ ದಾಖಲೀಕರಣ ವಿಶ್ಲೇಷಣೆ ಹಾಗೂ ಪ್ರಕಟಣೆಯನ್ನು ಉದ್ದೇಶವಾಗಿಟ್ಟುಕೊಂಡು ಹಾಲುಮತ ಅಧ್ಯಯನ ಪೀಠ ತನ್ನ ಕಾರ್ಯಚಟುವಟಿಕೆಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಲಿದೆ.

ಈಗಾಗಲೇ ಹಾಲುಮತಕ್ಕೆ ಸಂಬಂಧಿಸಿದ ಹಸ್ತಪ್ರತಿ ಶಾಸನ ಶಿಲ್ಪ ಕಲೆ ಜಾನಪದಗಳಿಗೆ ಸಂಬಂಧಿಸಿದಂತೆ ಹಾಲುಮತ ಭಂಡಾರ ಹೆಸರಿನ ವಸ್ತುಸಂಗ್ರಹಾಲಯವನ್ನು ಸ್ಥಾಪಿಸಲಾಗಿದೆ. ಆ ಮೂಲಕ ಅವುಗಳನ್ನು ಸಂರಕ್ಷಿಸುವುದು. ಜೊತೆಗೆ  ಈ ಸಮುದಾಯಕ್ಕೆ ಸಂಬಂಧಿಸಿದ ಪುಸ್ತಕಗಳು ನಿಯತಕಾಲಿಕಗಳು ಒಂದೇ ಕಡೆ ಲಭ್ಯವಾಗುವ ಹಾಗೆ ಹಾಲುಮತ ಮೇಲುದೀಪ ಹೆಸರಿನ ಗ್ರಂಥಾಲಯವನ್ನು ಸ್ಥಾಪಿಸಿ ಅಧ್ಯಯನಕ್ಕೆ ಅನುಕೂಲತೆಯನ್ನು ಮಾಡಿಕೊಡಲಾಗಿದೆ.

ಬಳ್ಳಾರಿ ಜಿಲ್ಲೆಯ ವಿವಿಧ ಸಂಸ್ಥೆಗಳ ಸಹಯೋಗದೊಂದಿಗೆ ೨೧.೨.೨೦೧೦ರಿಂದ ೨.೩.೨೦೧೦ರವರೆಗೆ ಹೊಸಪೇಟೆ, ಕೊಟ್ಟೂರು, ಕೊಳಗಲ್ಲು, ಸಂಡೂರು, ಸಿರಗುಪ್ಪ, ಹೂವಿನಹಡಗಲಿ ಹಾಗೂ ಹಗರಿಬೊಮ್ಮನಹಳ್ಳಿಗಳಲ್ಲಿ ಶ್ರೀಸಾಮಾನ್ಯರಿಗಾಗಿ ಹಾಲುಮತ ಸಾಹಿತ್ಯ ಸಂಸ್ಕೃತಿಗೆ ಸಂಬಂಧಿಸಿದಂತೆ ವಿಶೇಷ ಉಪನ್ಯಾಸಗಳನ್ನು ವಿದ್ವಾಂಸರಿಂದ ಏರ್ಪಡಿಸಲಾಗಿತ್ತು. ಆ ಉಪನ್ಯಾಸಗಳನ್ನು ಹಾಲುಮತ ಅಧ್ಯಯನ ಸಂಪುಟ ಹೆಸರಿನಡಿ ಈಗ ಪ್ರಕಟಿಸಲಾಗುತ್ತಿದೆ. ಇದು ಹಾಲುಮತ ಅಧ್ಯಯನ ಮಾಲೆಯ ನಾಲ್ಕನೆಯ ಪ್ರಕಟಣೆ.

* * *

ಪ್ರಸ್ತುತ ಸಂಪುಟವು ಎರಡು ಭಾಗಗಳನ್ನು ಒಳಗೊಂಡಿದೆ ಮೊದಲ ಭಾಗದಲ್ಲಿ ಹಾಲುಮತ ಕಾವ್ಯ ಪುರಾಣಗಳ ಅವಲೋಕನವನ್ನು ಒಳಗೊಂಡಂತೆ ಏಳು ಲೇಖನಗಳಿವೆ. ತಗರ ಪವಾಡ ಮತ್ತು ಸಿದ್ಧಮಂಕ ಚರಿತೆಗಳು ಕುರುಬರ ಗುರುಪರಂಪರೆಯನ್ನು ವಿಸ್ತೃತವಾಗಿ ನಿರೂಪಿಸುವ ಚಾರಿತ್ರಿಕ ಕಾವ್ಯಗಳಾಗಿವೆ. ರೇವಣಸಿದ್ಧ ಪರಂಪರೆಯ ಶಾಂತಮುತ್ತಯ್ಯ ತಗರ ಪವಾಡ ಕಾವ್ಯದ ಕಥಾನಾಯಕ. ಸಿದ್ಧರಾಮ ಪರಂಪರೆಯ ಸಿದ್ಧಮಂಕ (ಮರುಳಸಿದ್ಧ) ಸಿದ್ಧಮಂಕ ಚರಿತೆಯ ಕಥಾನಾಯಕ. ಸತ್ತ ಕುರಿಮಾಂಸವನ್ನು ಹಾಳು ತುಪ್ಪ ಮೊಸರಿನೊಂದಿಗೆ ಮಾರಿದ ಪ್ರಮಾದದಿಂದಾಗಿ ಕುರುಬರನ್ನು ಕಲ್ಯಾಣಪಟ್ಟಣದಿಂದ ಹೊರಹಾಕಿರುತ್ತಾರೆ. ಶಾಂತಮುತ್ತಯ್ಯನ ಪವಾಡ ಮತ್ತು ಸಿದ್ಧಮಂಕನ ತಪಸ್ಸಿನಿಂದ ಕುರುಬರು ಮತ್ತೆ ಕಲ್ಯಾಣಕ್ಕೆ ಪ್ರವೇಶ ಪಡೆಯುತ್ತಾರೆ. ಈ ಎರಡೂ ಕೃತಿಗಳ ಕಥಾವಸ್ತು ಒಂದೇಯಾದರೂ ಕುರುಬರ ಗುರುಪರಂಪರೆಯ ಎರಡು ಸಂಪ್ರದಾಯಗಳನ್ನು ತಿಳಿಸುತ್ತವೆ. ತಗರ ಪವಾಡ ಶಾಂತಮುತ್ತಯ್ಯನ ಗುರುಪರಂಪರೆಯನ್ನು ತಿಳಿಸಿದರೆ, ಸಿದ್ಧಮಂಕ ಚರಿತೆಯು ಸಿದ್ಧಮಂಕನ ಗುರುಪರಂಪರೆಯನ್ನು ನಿರೂಪಿಸುತ್ತದೆ. ಪೂರಕವಾಗಿ ಎರಡೂ ಕಾವ್ಯಗಳಲ್ಲಿ ಕುರುಬರ ಕಂಬಳಿ ತಯಾರಿಕೆಯ ವಿಧಾನ, ಕುರಿ ಸಾಕಾಣಿಕೆ ಮತ್ತು ಕಂಥೆಸೇವೆ ಮೊದಲಾದ ಆಚರಣೆಗಳನ್ನು ಸಂದರ್ಭಾನುಸಾರವಾಗಿ ಚಿತ್ರಿಸಲಾಗಿದೆ. ಹೀಗಾಗಿ ತಗರ ಪವಾಡ ಮತ್ತು ಸಿದ್ಧಮಂಕ ಚರಿತೆಗಳು ಕರುಬರಪ್ರಾಚೀನ ಸಂಸ್ಕೃತಿಯನ್ನು ಅನಾವರಣಗೊಳಿಸುವ ಎರಡು ಮಹತ್ವದ ಚಾರಿತ್ರಿಕ ಕಾವ್ಯಗಳಾಗಿವೆ.

ಇನ್ನುಳಿದಂತೆ ಮರುಳಸಿದ್ದೇಶ್ವರ ಚರಿತೆ, ರಸ್ತಾಪುರ ಭೀಮಕವಿಯ ಹಾಲುಮತೋತ್ತೇಜಕ ಪುರಾಣ, ಚನ್ನಬಸವ ಕವಿಯ ಹಾಲುಮತ ಪುರಾಣಗಳು ದೇಶಿ ಪರಂಪರೆಗೆ ಸೇರುವ ಕಾವ್ಯಗಳಾಗಿವೆ. ನೂರು ವರ್ಷಗಳ ಹಿಂದೆ ಅಂದರೆ ೧೯೧೦ರಲ್ಲಿ ಬಂಕಾಪುರದ ಬಸವಣ್ಣೆಪ್ಪ ನೀಲಪ್ಪ ಹಳವಳ್ಳಿ ಅವರು ಶೋಧಿಸಿ ಹಾಲುಮತ ಪುರಾಣ ಶೀರ್ಷಿಕೆಯಡಿ ಪ್ರಕಟಿಸಿದ ಮರುಳಸಿದ್ಧೇಶ್ವರ ಚರಿತೆಯು ಮರುಳಸಿದ್ಧನು ಸರೂರಿನಲ್ಲಿ ತಪಸ್ಸು ಮಾಡಿ ಕುರುಬರನ್ನು ಕಲ್ಯಾಣಕ್ಕೆ ಮರುಪ್ರವೇಶ ನೀಡಿದ ಸಂಗತಿಗಳನ್ನು ವಿವರಿಸುತ್ತದೆ. ಪೂರಕವಾಗಿ ಕುರುಬರ ಪಾರಂಪರಿಕ ವ್ಯಕ್ತಿಗಳನ್ನು ದಾಖಲಿಸಿರುವುದು ಈ ಕಾವ್ಯದ ವಿಶೇಷತೆ. ಸಗರ ನಾಡಿನ ರಸ್ತಾಪುರ ಭೀಮಕವಿಯು ಕುರುಬರ ಕುಲಗುರು ರೇವಣಸಿದ್ಧ ಮತ್ತು ಕುಲದೈವ ಬೀರಪ್ಪ, ಶಿಷ್ಯ ಮಾಳಿಂಗರಾಯನ ಚರಿತ್ರೆಯನ್ನು ಹಾಲುಮತೋತ್ತೇಜಕ ಪುರಾಣದ ಮೂಲಕ ನಿರೂಪಿಸಿದ್ದಾನೆ. ಇದೇ ಮಾದರಿಯಲ್ಲಿ ಚನ್ನಬಸವಕವಿಯು ಹಾಲುಮತ ಪುರಾಣವನ್ನು ರಚಿಸಿದ್ದಾನೆ. ಜನಪದ ಹಾಲುಮತ ಮಹಾಕಾವ್ಯ ಮತ್ತು ಮಾಳಿಂಗರಾಯನ ಕಾವ್ಯಗಳೂ ಮೌಖಿಕ ಪರಂಪರೆಯಲ್ಲಿ ಬಂದ ಎರಡು ಕಾವ್ಯಗಳು. ಹಾಲುಮತ ಮಹಾಕಾವ್ಯ ಬೀರಪ್ಪನ ವೃತ್ತಾತವನ್ನು ಹೇಳಿದರೆ, ಆತನ ಶಿಷ್ಯ ಮಾಳಿಂಗರಾಯನ ಚರಿತ್ರೆಯನ್ನು ಮಾಳಿಂಗರಾಯನ ಕಾವ್ಯ ಹೇಳುತ್ತದೆ. ಹೀಗೆ ಹಾಲುಮತ ಪರಂಪರೆಯ ಸಾಂಸ್ಕೃತಿಕ ಕಥನಗಳನ್ನು ಹೇಳುವ ಈ ಕಾವ್ಯ ಪುರಾಣಗಳನ್ನು ಮೊದಲಬಾರಿಗೆ ಒಂದೆಡೆ ಅವಲೋಕಿಸಿರುವುದು ಈ ಸಂಪುಟದ ವಿಶೇಷತೆಯಾಗಿದೆ.

ಚರಿತ್ರೆಯ ಪುಟಗಳಲ್ಲಿ ಕುರುಬರು, ಗುರುಪರಂಪರೆ, ಕುರಿಗಾರರ ಕಾಲಜ್ಞಾನ, ಸಹಕಾರಿ ಸಂಘದ ಹರಿಕಾರ ಕಣಗಿನಹಾಳದ ಸಿದ್ಧನಗೌಡ ಪಾಟೀಲ ಅವರ ಜೀವನ ಸಾಧನೆ, ಹಾಲುಮತ ಸಂಸ್ಕೃತಿ ಕುರಿತ ಶಂಬಾ ಚಿಂತನೆಗಳು ಹಾಗೂ ಕುರುಬ ಸಮುದಾಯದ ಅಭಿವೃದ್ಧಿ ಕುರಿತು ಕೆಲವು ಸಂಗತಿಗಳನ್ನು ತಿಳಿಸುವ ಆರು ಲೇಖನಗಳು ಎರಡನೆಯ ಭಾಗದಲ್ಲಿವೆ. ಹೀಗೆ ಹಾಲುಮತ ಕಾವ್ಯ ಪುರಾಣ ಮತ್ತು ಸಮಾಜ ಸಂಸ್ಕೃತಿಗೆ ಸಂಬಂಧಿಸಿದಂತೆ ಇಲ್ಲಿನ ಹದಿಮೂರು ಲೇಖನಗಳು ಶ್ರೀಸಾಮಾನ್ಯರಿಗೆ ಅನೇಕ ಮಾಹಿತಿಗಳನ್ನು ಒದಗಿಸುವಲ್ಲಿ, ಸಂಶೋಧನಾಸ್ತಕರಿಗೆ ವಿಸ್ತೃತವಾದ ಅಧ್ಯಯನ ಕೈಕೊಳ್ಳುವಲ್ಲಿ ಈ ಸಂಪುಟವು ಸಹಾಯವಾಗುತ್ತದೆಂದು ನಂಬಿದ್ದೇನೆ.

ವಿಶೇಷ ಉಪನ್ಯಾಸ ಕಾರ್ಯಕ್ರಮಗಳನ್ನು ಆಯೋಜಿಸಲು ಸೂಕ್ತ ಮಾರ್ಗದರ್ಶನ ನೀಡಿದ್ದಲ್ಲದೆ, ಈ ಸಂಪುಟದ ಪ್ರಕಟಣೆಗೆ ಆಡಳಿತಾತ್ಮಕ ಅನುಮತಿ ನೀಡಿದ ಮಾನ್ಯ ಕುಲಪತಿಗಳಾದ ಡಾ. ಎ. ಮುರಿಗೆಪ್ಪ, ಮಾನ್ಯಕುಲಸಚಿವರಾದ ಡಾ. ಮಂಜುನಾಥ ಬೇವಿನಕಟ್ಟಿ ಅವರಿಗೆ ಗೌರವಪೂರ್ವಕ ನಮನಗಳೂ. ಲೇಖನಗಳನ್ನು ಪರಿಶೀಲಿಸಿ ಪ್ರಕಟಿಸಲು ಶಿಫಾರಸ್ಸು ಮಾಡಿದ ಹಾಲುಮತ ಅಧ್ಯಯನ ಪೀಠದ ಸಲಹಾ ಸಮಿತಿ ಸದಸ್ಯರಾದ ಡಾ. ಶ್ರೀರಾಮ ಇಟ್ಟಣ್ಣವರ, ಶ್ರೀ ಈರಪ್ಪ ಕಂಬಳಿ ಅವರಿಗೆ ನಮಸ್ಕಾರಗಳೂ. ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಿಶೇಷ ಉಪನ್ಯಾಸ ನೀಡಿ, ಸಕಾಲಕ್ಕೆ ಲೇಖನಗಳನ್ನು ಸಿದ್ಧಪಡಿಸಿಕೊಟ್ಟ ವಿದ್ವಾಂಸರಿಗೆ ನಾನು ಆಭಾರಿಯಾಗಿದ್ದೇನೆ.

ಬಳ್ಳಾರಿ ಜಿಲ್ಲೆಯಾದ್ಯಂತ ಏಳು ದಿನಗಳ ಕಾಲ ವಿಶೇಷ ಉಪನ್ಯಾಸಗಳನ್ನು ಆಯೋಜಿಸಲು ಸಹಕಾರ ನೀಡಿದ ವಿವಿಧ ಸಂಘಟನೆಗಳ ಪದಾಧಿಕಾರಿಗಳಿಗೆ ಕೃತಜ್ಞನಾಗಿದ್ದೇನೆ. ಜೊತೆಗೆ ನನ್ನೊಂದಿಗೆ ಏಳು ದಿನಗಳ ಕಾಲ ನಿರಂತರವಾಗಿ ಕಾರ್ಯಕ್ರಮಕ್ಕೆ ದುಡಿದ ಹಾಲುಮತ ಅಧ್ಯಯನ ಪೀಠದ ಕಛೇರಿ ಸಹಾಯಕ ಕೆ. ತಾಯಪ್ಪ ಅವರ ಸೇವೆಯನ್ನೂ ಇಲ್ಲಿ ಸ್ಮರಿಸುತ್ತೇನೆ.

ಪುಸ್ತಕ ಪ್ರಕಟಣೆಯಲ್ಲಿ ವಿಶೇಷ ಮುತುವರ್ಜಿ ವಹಿಸಿದ ಸಹಾಯಕ ನಿರ್ದೇಶಕ ಶ್ರೀ ಬಿ. ಸುಜ್ಞಾನಮೂರ್ತಿ, ಮುಖಪುಟ ಚಿತ್ರಿಸಿದ ಕಲಾವಿದ ಕೆ.ಕೆ.ಮಕಾಳಿ ಅವರಿಗೆ ವಂದನೆಗಳು. ಅಚ್ಚುಕಟ್ಟಾಗಿ ಅಕ್ಷರಗಳನ್ನು ಸಂಯೋಜನೆಗೊಳಿಸಿದ ಯಾಜಿ ಗ್ರಾಫಿಕ್ಸ್ ನ ಶ್ರೀಮತಿ ಸವಿತಾ ಗಣೇಶ ಅವರ ಸಹಕಾರವನ್ನು ಪ್ರೀತಿಯಿಂದ ನೆನೆಯುತ್ತೇನೆ.