ಹಾಲುಮತ ಅಧ್ಯಯನ ಪೀಠದ ೨೦೦೯-೧೦ನೆಯ ಸಾಲಿನ ಕಾರ್ಯಚಟುವಟಿಕೆಗಳ ವರದಿ

೧.  ಹಾಲುಮತ ಸಂಸ್ಕೃತಿ ಸಮ್ಮೇಳನ-೨

ಕನ್ನಡ ವಿಶ್ವವಿದ್ಯಾಲಯದ ಹಾಲುಮತ ಅಧ್ಯಯನ ಪೀಠವು ಚಳ್ಳಕೆರೆ ತಾಲೂಕು ಶ್ರೀ ಕನಕ ನೌಕರರ ಸಂಘದ ಸಹಯೋಗದಲ್ಲಿ ೨೫, ೨೬ ಜುಲೈ ೨೦೦೯ ರಂದು ಎರಡು ದಿನಗಳ ಕಾಲ ಎರಡನೆಯ ಹಾಲುಮತ ಸಂಸ್ಕೃತಿ ಸಮ್ಮೇಳನವನ್ನು ಚಳ್ಳಕೆರೆಯ ದಲ್ಲಾಲರ ಸಮುದಾಯ ಭವನದಲ್ಲಿ ಆಯೋಜಿಸಿತ್ತು. ದಿನಾಂಕ ೨೫.೭.೨೦೦೯ ರಂದು ಬೆಳಿಗ್ಗೆ ೧೦.೩೦ಕ್ಕೆ ಸಮ್ಮೇಳನದ ಉದ್ಘಾಟನ ಸಮಾರಂಭ ಆರಂಭವಾಯಿತು. ಕನ್ನಡ ವಿಶ್ವವಿದ್ಯಾಲಯದ ಕುಲಸಚಿವರಾದ ಎಸ್‌. ಎಸ್‌. ಪೂಜಾರ ಅವರು ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡುತ್ತ ಕುರುಬ ಸಮುದಾಯದವರು ಹಾಲುಮತ ಸಂಸ್ಕೃತಿ ಬಗ್ಗೆ ಅಮಿತ ಪ್ರೇಮ, ಅನನ್ಯ ಅಭಿಮಾನ ಬೆಳೆಸಿಕೊಳ್ಳಬೇಕು. ಇದರಿಂದ ಸಂಸ್ಕೃತಿಯನ್ನು ಉಳಿಸಬಹುದು. ತಾಯಿ ತನ್ನ ಮಗುವನ್ನು ರಕ್ಷಿಸುವಂತೆ ಪಣ ತೊಡಬೇಕು. ಇಂಥದೊಂದು ಅಚಲ ವಿಶ್ವಾಸವನ್ನು ಎಲ್ಲರೂ ಬೆಳೆಸಿಕೊಳ್ಳಬೇಕು. ಕುರಿ ಮತ್ತು ಕಂಬಳಿ ಎರಡೂ ಕಪ್ಪು ಬಣ್ಣದ್ದಾಗಿದ್ದು, ಅವುಗಳು ಜ್ಞಾನದ ಸಂಕೇತಗಳಾಗಿವೆ. ಡೊಳ್ಳು ಮತ್ತು ಚರಕವನ್ನು ಸಹ ನಾವು ನಮ್ಮ ಜನಾಂಗದ ಸಂಕೇತವಾಗಿ ಇಟ್ಟುಕೊಂಡಿದ್ದೇವೆ. ಕುರಿಗಳನ್ನು ರೊಪ್ಪಗಳಲ್ಲಿ ಸಾಕಿ ಹಾಲು ಮೊಸರು ತುಪ್ಪವನ್ನು ಮಾರಾಟ ಮಾಡುತ್ತೇವೆ. ಈ ಸಮುದಾಯದಲ್ಲಿ ಸೇವಾ ಮನೋಭಾವನೆ ಹೆಚ್ಚಿದೆ. ಇವರು ಯಾರಿಗೂ ತೊಮದರೆ ಕೊಡುವವರಲ್ಲ. ಎಲ್ಲರನ್ನೂ ಪ್ರೀತಿ ವಿಶ್ವಾಸದಿಂದ ಕಾಣುವ ಕುರುಬ ಸಮುದಾಯವು ತನ್ನ ಒಳಪಂಗಡಗಳನ್ನು ಒಗ್ಗೂಡಿಸಿ ಸಂಘಟಿಸಬೇಕಾದ ಅಗತ್ಯವಿದೆ ಎಂದು ಕರೆ ನೀಡಿದರು.

ಸಮ್ಮೇಳನದ ಸರ್ವಾಧ್ಯಕ್ಷರಾದ ಹಿರಿಯ ಸಾಹಿತಿ ಬ. ಪ. ನಾಯ್ಕರ್‌ ಅವರು ‘‘ಹಾಲುಮತ ಸಂಸ್ಕೃತಿ ಪರಂಪರೆ ಅತ್ಯಂತ ಪ್ರಾಚೀನವಾದುದು. ಈ ನಿಟ್ಟಿನಲ್ಲಿ ಹಾಲುಮತ ಸಾಹಿತ್ಯ ಸಂಸ್ಕೃತಿ ಚರಿತ್ರೆ ಕುರಿತು ಸಮಗ್ರವಾದ ಅಧ್ಯಯನ ನಡೆಯಬೇಕು. ವಿ. ಆರ್‌. ಹನುಮಂತಯ್ಯವರ ಭಾರತದ ಕುರುಬರ ಚರಿತ್ರೆ, ಶಂಬಾ ಜೋಶಿ ಅವರ ಹಾಲುಮತ ದರ್ಶನ, ಕರ್ನಾಟಕ ಸಂಸ್ಕೃತಿಯ ಪೂರ್ವಪೀಠಿಕೆ, ಶಿವಾನಂದ ದುಗ್ಗಣ್ಣನವರ ಕರ್ನಾಟಕದ ಕುರುಬರು ಮೊದಲಾದ ಗ್ರಂಥಗಳು ಕುರುಬರ ಚರಿತ್ರೆಯನ್ನು ಪರಿಚಯಿಸಿಕೊಟ್ಟಿವೆ. ಆದರೂ ಈ ಕ್ಷೇತ್ರದಲ್ಲಿ ಮಾಡಬೇಕಾದ ಸಂಶೋಧನೆ ಸಾಕಷ್ಟಿದೆ. ಇಂಗ್ಲಿಷ್‌ನಲ್ಲಿ ಈ ಬಗ್ಗೆ ಸಾಕಷ್ಟು ಅಧ್ಯಯನಗಳು ನಡೆದಿದ್ದು, ಆ ಎಲ್ಲ ಗ್ರಂಥಗಳನ್ನು ಲೇಖನಗಳನ್ನು ಕನ್ನಡಕ್ಕೆ ತರ್ಜುಮೆ ಮಾಡಬೇಕು. ಹಾಲುಮತ ಸಂಸ್ಕೃತಿ ಸಮ್ಮೇಳನದ ಸರ್ವಾಧ್ಯಕ್ಷತೆಯ ಗೌರವವನ್ನು ನೀಡಿರುವುದಕ್ಕಾಗಿ ಕನ್ನಡ ವಿಶ್ವವಿದ್ಯಾಲಯಕ್ಕೆ ನಾನು ಋಣಿಯಾಗಿದ್ದೇನೆ. ಇಲ್ಲಿ ನಡೆಯುವ ಚರ್ಚೆ ಸಂವಾದಗಳು ಸಮಾಜದ ಸರ್ವ ಜನರಿಗೆ ತಲುಪುವ ಹಾಗೆ ಮಾಡಬೇಕಾದುದು ನಮ್ಮೆಲ್ಲರ ಕರ್ತವ್ಯವಾಗಿದೆ. ಆ ಮೂಲಕ ಸಮುದಾಯದ ಶೈಕ್ಷಣಿಕ ಸಾಮಾಜಿಕ ಸಾಂಸ್ಕೃತಿಕ ಜಾಗ್ರತೆಗೆ ಸಹಾಯಕಾರಿಯಾಗುತ್ತದೆ” ಎಂದು ಹೇಳಿದರು.

ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಎ. ಮುರಿಗೆಪ್ಪನವರು ಮಾತನಾಡುತ್ತ “ಕನ್ನಡ ವಿಶ್ವವಿದ್ಯಾಲಯ ತನ್ನ ಆವರಣಕ್ಕೆ ಸೀಮಿತವಾಗದೇ ಸಮುದಾಯದೊಂದಿಗೆ ಸಮ್ಮಿಳಿತವಾಗಿ ಜ್ಞಾನ ಪ್ರಸಾರದ ಕೈಂಕರ್ಯದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದೆ. ಸರಕಾರ ಮತ್ತು ಸಂಘ ಸಂಸ್ಥೆಗಳ ಸಹಕಾರವನ್ನು ಪಡೆದುಕೊಂಡು ಮುಂದಿನ ದಿನಗಳಲ್ಲಿ ಇನ್ನೂ ವ್ಯಾಪಕವಾದ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಪ್ರಯತ್ನಿಸಲಾಗುತ್ತದೆ. ಹಾಲುಮತ ಅಧ್ಯಯನ ಪೀಠವು ಇನ್ನೂ ಹೆಚ್ಚು ಹೆಚ್ಚು ರಚನಾತ್ಮಕ ಯೋಜನೆಗಳನ್ನು  ರೂಪಿಸಿಕೊಂಡು ಮುನ್ನಡೆಯಲಿ” ಎಂಬ ಆಶಯವನ್ನು ವ್ಯಕ್ತಪಡಿಸಿದರು. ಹಾಲುಮತ ಅಧ್ಯಯನ ಪೀಠದ ಸಂಚಾಲಕರಾದ ಡಾ. ಎಫ್‌. ಟಿ. ಹಳ್ಳಿಕರಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಹಾಲುಮತ ಅಧ್ಯಯನ ಪೀಠವು ಕೈಕೊಳ್ಳಬಹುದಾದ ಯೋಜನೆಗಳ ರೂಪುರೇಷೆಗಳನ್ನು ಸಭೆಗೆ ತಿಳಿಸಿದರು. ಇದೇ ಸಂದರ್ಭದಲ್ಲಿ ಡಾ. ಎಫ್‌. ಟಿ. ಹಳ್ಳಿಕೇರಿ ಅವರು ಸಂಪಾದಿಸಿದ ಹಾಲುಮತ ವ್ಯಾಸಂಗ ಸಂಪುಟ-೧ ಕೃತಿಯನ್ನು ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯರಾದ ಡಾ. ಎಂ. ನಾಗರಾಜ ಅವರು ಬಿಡುಗಡೆ ಮಾಡಿದರು. ಮುಖ್ಯ ಅತಿಥಿಗಳಾಗಿ ನಿಶಾನಿ ಜಯಣ್ಣ, ಸಿ. ಚನ್ನಪ್ಪ, ಕೆ. ಎ. ಕೆಂಚಲಿಂಗಪ್ಪ, ಎಸ್‌. ಸಿದ್ಧಲಿಂಗಮೂರ್ತಿ, ಆರ್‌. ಮಲ್ಲೇಶಪ್ಪ, ಸಿ. ಇ. ಓದೀರಪ್ಪ, ವೀರಣ್ಣ, ಚೌಳೂರು, ಬಿ. ಎಸ್‌. ಬಸವರಾಜಪ್ಪ ಮುಂತಾದವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಜಾನಪದ ಕಥೆಗಾರ ಈರಬಡಪ್ಪ, ಖ್ಯಾತ ವೈದ್ಯರಾದ ಡಾ. ಆರ್‌. ಕಾಂತರಾಜ್‌, ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಪ್ರೊ. ಎಂ. ಶಿವಲಿಂಗಪ್ಪ, ಪಿ. ಕುಮಾರ್‌ ಅವರನ್ನು ಸನ್ಮಾನಿಸಲಾಯಿತು. ಅಲ್ಲದೇ ಕುರುಬ ಸಂಸ್ಕೃತಿಗೆ ಸಂಬಂಧಿಸಿದ ಸಾಮಗ್ರಿಗಳನ್ನು ಹಾಲುಮತ ಅಧ್ಯಯನ ಪೀಠದ ವಸ್ತು ಸಂಗ್ರಹಾಲಯಕ್ಕೆ ದಾನವಾಗಿ ನೀಡಿದ ಚಳ್ಳಕೆರೆ ತಾಲೂಕು ಟಿ. ಎನ್‌. ನಾಯಕನಕೋಟೆ ಗ್ರಾಮದ ಗೊರವಯ್ಯಗಳಾದ ಶಿವಲಿಂಗಪ್ಪ ತಂದೆ ಮೈಲಾರಪ್ಪ ಮತ್ತು ಗದಗ ಜಿಲ್ಲೆ ಮುಂಡರಗಿ ತಾಲ್ಲೂಕಿನ ಡೋಣಿ ಗ್ರಾಮದ ಶ್ರೀ ಬೀರಲಿಂಗೇಶ್ವರ ಸಂಘದ ಶ್ರೀ ನಿಂಗಪ್ಪ ಹಾಲಪ್ಪ ಗುಡ್ಡದ ಅವರನ್ನು ಇದೇ ವೇದಿಕೆಯಲ್ಲಿ ಗೌರವಿಸಲಾಯಿತು. ಸ್ಥಳೀಯ ಸಂಚಾಲಕರಾದ ಪ್ರೊ. ಎಂ. ಶಿವಲಿಂಗಪ್ಪ ಅವರು ಸ್ವಾಗತಿಸಿದರು. ಪಿ. ಕೃಷ್ಣನವರು ಕಾರ್ಯಕ್ರಮ ನಿರೂಪಿಸಿದರು. ಕನಕ ನೌಕರರ ಸಂಘದ ಅಧ್ಯಕ್ಷರಾದ ಪಿ. ಕೃಷ್ಣಮೂರ್ತಿ ಅವರು ವಂದನಾರ್ಪಣೆ ಸಲ್ಲಿಸಿದರು.

ಸಮ್ಮೇಳನದಲ್ಲಿ ಕುರುಬರ ಒಳಪಂಗಡಗಳ ಬಗೆಗೆ ನಾಲ್ಕು ಗೋಷ್ಠಿಗಳನ್ನು ಏರ್ಪಡಿಸಲಾಗಿತ್ತು. ಡಾ. ಎಸ್‌. ಸಿದ್ಧರಾಮಣ್ಣ ಗೊರ‍್ಲಕಟ್ಟೆ ಅವರ ಅಧ್ಯಕ್ಷತೆಯಲ್ಲಿ ನಡೆದ ಮೊದಲ ಗೋಷ್ಠಿಯಲ್ಲಿ ಕಾಡುಕುರುಬರು (ಕೆ. ಕೇಶವನ್‌ಪ್ರಸಾದ), ಗೊಂಡ ಕುರುಬರು (ಕೆ. ಎಂ. ಮೇತ್ರಿ), ಅಲೆಮಾರಿ ಕುರುಬರು (ಡಿ. ಯರಿಯಪ್ಪ), ದನಗರ ಗವಳಿಗಳು (ಎಫ್‌. ಟಿ. ಹಳ್ಳಿಕೇರಿ) ಎಂಬ ನಾಲ್ಕು ಸಂಪ್ರಬಂಧಗಳು ಮಂಡಿಸಲ್ಪಟ್ಟವು. ಪ್ರೊ. ಲೋಕೇಶ್‌ ಒಡೆಯರ ಅವರ ಅಧ್ಯಕ್ಷತೆಯಲ್ಲಿ ನಡೆದ ಎರಡನೆಯ ಗೋಷ್ಠಿಯಲ್ಲಿ ಹತ್ತಿಕಂಕಣ ಕುರುಬರು (ಎ. ಬಿ. ಬಾಳಪ್ಪ), ಉಣ್ಣೆಕಂಕಣ ಕುರುಬರು (ಚಂದ್ರಪ್ಪ ಸೊಬಟಿ), ಹಂಡೆ ಕುರುಬರು (ಬಿ. ರಾಜಶೇಖರಪ್ಪ) ಒಡೆಯರು (ಕೆ. ರವೀಂದ್ರನಾಥ) ಕುರಿತು ಸಂಪ್ರಬಂಧ ಮಂಡಿಸಲಾಯಿತು. ಮೂರನೆಯ ಗೋಷ್ಠಿ ಜಿ. ನಾಗೇಂದ್ರಪ್ಪನವರ ಅಧ್ಯಕ್ಷತೆಯಲ್ಲಿ ನಡೆಯಿತು. ಜಂಡೆ ಕುರುಬರು, ದಾಸ ಕುರುಬರು, ಸಾದ ಕುರುಬರು, ಕ್ರೈಸ್ತ ಕುರುಬರು ಕುರಿತು ಕ್ರಮವಾಗಿ ಸಿದ್ಧಣ್ಣ ಜಕಬಾಳ, ಚನ್ನಪ್ಪ ಕಟ್ಟಿ, ಬಿ. ಬಿ. ಪಾಟೀಲ ಹಾಗೂ ಎನ್‌. ಎಂ. ಅಂಬಲಿಯವರು ಸಂಪ್ರಬಂಧಗಳನ್ನು ಸಾದರಪಡಿಸಿದರು. ಎಸ್‌. ಶ್ರೀನಿವಾಸ ಅವರ ಅಧ್ಯಕ್ಷತೆಯಲ್ಲಿ ನೊಣಬರು, ಕುಡಒಕ್ಕಲಿಗರು, ಹೆಗ್ಗಡೆಯವರು, ಗೊಲ್ಲರು, ಕುಂಚಟಿಗರು ಕುರಿತು ಕುಂಬಾ ಸದಾಶಿವಪ್ಪ, ಶ್ರೀರಾಮ ಇಟ್ಟಣ್ಣನವರ, ಒಡೆಯರ ಡಿ. ಹೆಗ್ಗಡೆ, ಸಿ. ಶಿವಲಿಂಗಪ್ಪ, ಮೀರಾಸಾಬಿಹಳ್ಳಿ ಶಿವಣ್ಣ ಅವರು ಸಂಪ್ರಬಂಧಗಳನ್ನು ಮಂಡಿಸಿದರು. ಎಂ. ಕರಿಯಪ್ಪನವರ ಅಧ್ಯಕ್ಷತೆಯಲ್ಲಿ ಜರುಗಿದ ಐದನೆಯ ಗೋಷ್ಠಿಯಲ್ಲಿ ಚಿತ್ರದುರ್ಗ ಪರಿಸರದ ಕುರುಬರ ಸಂಸ್ಕೃತಿ ಕುರಿತು ಸಂಪ್ರಬಂಧಗಳು ಮಂಡಿಸಲ್ಪಟ್ಟವು. ಚಿತ್ರದುರ್ಗ ಪರಿಸರದ ಕುರುಬರ ಧಾರ್ಮಿಕ ವಿಚಾರಗಳು, ಸಾಮಾಜಿಕ ಸಂಗತಿಗಳು, ಜನಪದ ಸಂಸ್ಕೃತಿ ಹಾಗೂ ಆರ್ಥಿಕ ವಿವರಗಳನ್ನು ಎಂ. ಶಿವಲಿಂಗಪ್ಪ, ಕರಿಯಪ್ಪ  ಮಾಳಗಿ, ಎಲ್‌. ರುದ್ರಮುಣಿ, ಸಿ. ಚನ್ನಕೇಶವ ಅವರು ತಿಳಿಸಿದರು. ಈರಪ್ಪ ಎಂ. ಕಂಬಳಿ ಅವರ ಅಧ್ಯಕ್ಷತೆಯಲ್ಲಿ ಡಾ. ಬಿ. ಜಿ. ಬಿರಾದಾರ ಅವರು ತಿಳಿಸಿದರು. ಬ. ಪ. ನಾಯ್ಕರ ಅವರ ಸಾಹಿತ್ಯ ಸಾಧನೆ ಕುರಿತು ವಿಶೇಷ ಉಪನ್ಯಾಸವನ್ನು ನೀಡಿದರು. ಬಿ. ಕೃಷ್ಣಪ್ಪ, ಸಿರಿವಾಳ ಶಿವಣ್ಣ, ಎಸ್‌. ಲಕ್ಷ್ಮಣ, ಸಿ. ಹೇಮರಾಜು, ಟಿ. ಗೀತಾಕುಮಾರಿ, ಬಿ. ಜಯಶೀಲ ಅವರು ಗೋಷ್ಠಿಗಳ ನಿರ್ವಹಣೆಯನ್ನು ಮಾಡಿದರು.

೨೫.೭.೨೦೦೯ರಂದು ಸಂಜೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಜಾನಪದ ಪ್ರಶಸ್ತಿ ಪುರಸ್ಕೃತರಾದ ಶ್ರೀಗಂಜಿಗಟ್ಟಿ ಆರ್‌. ಕೃಷ್ಣಮೂರ್ತಿ ಅವರಿಂದ ಬೀರಪ್ಪ ಮೈಲಾರಲಿಂಗೇಶ್ವರ ತತ್ವಪದಗಳ ಗಾಯನ, ಚೌಳೂರು ಶ್ರೀಮತಿ ಕನಕತಾರಾ, ಪದ್ಮ, ಮಮತ, ಗೀತಾಕುಮಾರಿ ಅವರಿಗೆ ಕನಕದಾಸರ ಕೀರ್ತನೆಗಳ ಗಾಯನ, ನಂತರ ಬೆಂಗಳೂರಿನ ನಂದನ ಕಲಾ ತಂಡದಿಂದ ಪ್ರೊ. ಕಿ. ರಂ. ನಾಗರಾಜ ರಚಿತ ಶ್ರೀ ದೇವ ನಾಗೇಶ ನಿರ್ದೇಶನದಲ್ಲಿ ಕಾಲಜ್ಞಾನಿ ಕನಕ ನಾಟಕದ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಕೆ. ಜಗದೀಶ ಮತ್ತು ಶ್ರೀಮತಿ ರಾಜೇಶ್ವರಿ ಅವರು ನಾಟಕದ ಪ್ರಾಯೋಜಕತ್ವವನ್ನು ವಹಿಸಿಕೊಂಡಿದ್ದರು.

೨೬.೭.೨೦೦೯ ರಂದು ಸಾಯಂಕಾಲ ನಡೆದ ಸಮಾರೋಪ ಸಮಾರಂಭದಲ್ಲಿ ಶಿವಮೊಗ್ಗ ವಿಶ್ವವಿದ್ಯಾಲಯದ ನಿವೃತ್ತ ಕನ್ನಡ ಪ್ರಾಧ್ಯಾಪಕರಾದ ಡಾ. ತೀ. ನಂ. ಶಂಕರನಾರಾಯಣ ಅವರು ಸಮಾರೋಪ ಭಾಷಣ ಮಾಡುತ್ತ “ನೆಲಮೂಲ ಸಂಸ್ಕೃತಿಯಿಂದ ಬಂದ ಸಮುದಾಯದ ಜನರ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಶಿಕ್ಷಣದಿಂದ ಆ ಸಮುದಾಯದಲ್ಲಿ ವಿದ್ಯಾವಂತರ ಸಂಖ್ಯೆ ಹೆಚ್ಚುವುದಲ್ಲದೇ ಸಾಮಾಜಿಕ ರಾಜಕೀಯ ಹಾಗೂ ಆರ್ಥಿಕವಾಗಿ ಸಬಲರಾಗಲು ಸಾಧ್ಯವಾಗುತ್ತದೆ” ಎಂದು ನುಡಿದರು. ಸಮಾಜ ಕಲ್ಯಾಣ ಸಚಿವರಾದ ಶ್ರೀ ಡಿ. ಸುಧಾಕರ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕುರುಬ ಸಮುದಾಯದ ಅಭಿವೃದ್ಧಿಗಾಗಿ ಸರಕಾರ ಬದ್ಧವಾಗಿದೆ. ಚಳ್ಳಕೆರೆ ಹಾಗೂ ಹಿರಿಯೂರಿನಲ್ಲಿ ಕನಕ ಭವನದ ನಿರ್ಮಾಣಕ್ಕಾಗಿ ತಲಾ ಐವತ್ತು ಲಕ್ಷ ರೂಪಾಯಿಗಳನ್ನು ಮಂಜೂರು ಮಾಡಿಸಲಾಗುವುದು ಎಂದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಮಾಜಿ ಶಾಸಕ ಬಿ. ಜಿ. ಗೋವಿಂದಪ್ಪನವರು ಮಾತನಾಡುತ್ತ ಐತಿಹಾಸಿಕ ಪರಂಪರೆ ಹೊಂದಿದ ಕುರುಬರ ರೇವಣಸಿದ್ದೇಶ್ವರ ಧಾರ್ಮಿಕ ಮಠಗಳಿಗೆ ತನ್ನದೇ ಆದ ಸಂವಿಧಾನವಿದೆ. ಕುರುಬ ಸಮುದಾಯದಲ್ಲಿ ಯಾವುದೇ ಸಮಸ್ಯೆಗಳು ಉದ್ಭವಿಸಿದರೂ ಅವುಗಳು ಮಠಗಳಲ್ಲೇ ಇತ್ಯರ್ಥವಾಗುತ್ತವೆ. ಈ ಪವಿತ್ರ ಮಠಗಳ ಜೀರ್ಣೋದ್ಧಾರಕ್ಕೆ ಸರಕಾರ ಎರಡುಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಬೇಕೆಂದು ಕೋರಿದರು. ಹೊಸದುರ್ಗದ ಕನಕ ಪೀಠದ ಶ್ರೀ ಈಶ್ವರಾನಂದ ಮಹಾಸ್ವಾಮಿಗಳು ಸಮಾರೋಪ ಸಮಾರಂಭದ ಸಾನಿಧ್ಯ ವಹಿಸಿದ್ದರು. ಚಳ್ಳಕೆರೆ ನಗರದ ಪುರಸಭೆ, ತಾಲೂಕು ಪಂಚಾಯತಿ ಜಿಲ್ಲಾ ಪಂಚಾಯತಿ ಸದಸ್ಯರು, ಸಮಾಜದ ಹಿರಿಯ ಮುಖಂಡರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

೨.  ಹಾಲುಮತ ಭವನದ ಉದ್ಘಾಟನ ಕಾರ್ಯಕ್ರಮ

ದಿನಾಂಕ ೨೪.೦೮.೨೦೦೯ರಂದು ಕರ್ನಾಟಕ ಸರ್ಕಾರದ ಪ್ರವಾಸೋದ್ಯಮ ಹಾಗೂ ಮೂಲಭೂತ ಸೌಲಭ್ಯ ಸಚಿವರಾದ ಶ್ರೀ ಜಿ. ಜನಾರ್ಧನರೆಡ್ಡಿ ಅವರು ಹಾಲುಮತ ಭವನವನ್ನು ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಹಾಲುಮತ ಭಂಡಾರ ಹೆಸರಿನ ವಸ್ತುಸಂಗ್ರಹಾಲಯವನ್ನು ಕೊಪ್ಪಳ ಕ್ಷೇತ್ರದ ಮಾಜಿ ಲೋಕಸಭಾ ಸದಸ್ಯರಾದ ಶ್ರೀ ಕೆ. ವಿರೂಪಾಕ್ಷಪ್ಪನವರು, ಹಾಲುಮತ ಮೇಲುದೀಪ ಹೆಸರಿನ ಗ್ರಂಥಾಲಯವನ್ನು ಬಳ್ಳಾರಿ ಲೋಕಸಭಾ ಸದಸ್ಯರಾದ ಶ್ರೀಮತಿ ಜೆ. ಶಾಂತಾ ಅವರು ಉದ್ಘಾಟಿಸಿದರು. ಮಾಲಗಂಬ ಹೆಸರಿನ ಹಾಲುಮತ ಅಧ್ಯಯನ ಪೀಠದ ಪರಿಚಯ ಪುಸ್ತಕವನ್ನು ವಿಜಯನಗರ ಕ್ಷೇತ್ರದ ಶಾಸನಕರಾದ ಶ್ರೀ ಆನಂದಸಿಂಗ್‌ ಅವರು ಬಿಡುಗಡೆ ಮಾಡಿದರು. ಕುಲಪತಿಗಳಾದ ಡಾ. ಎ. ಮುರಿಗೆಪ್ಪನವರು ಅಧ್ಯಕ್ಷತೆಯನ್ನು ವಹಿಸಿದ್ದರು.

೨೦೦೯-೧೦ನೆಯ ಸಾಲಿನಿಂದ ಪೀಠದ ಕಾರ್ಯಚಟುವಟಿಕೆಗಳು ಹಾಲುಮತ ಭವನದಲ್ಲಿ ನಡೆಯುತ್ತಿವೆ. ಹಾಲುಮತ ಸಂಸ್ಕೃತಿಗೆ ಸಂಬಂಧಿಸಿದ ವಸ್ತುಸಂಗ್ರಹಾಲಯ, ಗ್ರಂಥಾಲಯ, ಕಾರ್ಯಾಲಯ, ಗಣಕ ಕೇಂದ್ರ, ತರಬೇತಿ ಶಿಬಿರ, ವಿಶೇಷ ಉಪನ್ಯಾಸ, ಆಡಿಯೋ ವಿಡಿಯೋ ವೈಜ್ಞಾನಿಕ ಉಪಕರಣಗಳ ವ್ಯವಸ್ಥೆಯನ್ನು ಹಾಲುಮತ ಭವನದಲ್ಲಿ ಮಾಡಲಾಗುತ್ತಿದೆ.

೩. ಹಾಲುಮತ ಭಂಡಾರ-ವಸ್ತುಸಂಗ್ರಹಾಲಯ ಸ್ಥಾಪನೆ

ಜಾಗತೀಕರಣದ ಪ್ರಭಾವದಿಂದಾಗಿ ಕುರುಬರ ಕುರಿಸಾಕಣೆ, ಕಂಬಳಿ ನೇಕಾರಿಕೆ, ಡೊಳ್ಳು, ದಟ್ಟಿ ಕುಣಿತ ಮೊದಲಾದ ಮೂಲ ಉದ್ಯೋಗ, ಕಲೆಗಳು ವಿನಾಶದ ಅಂಚಿನಲ್ಲಿವೆ. ಅಂಥ ಎಲ್ಲ ಉದ್ಯೋಗ ಕಲೆಗಳ ಪರಿಕರಗಳನ್ನು ಒಂದೆಡೆ ಸಂಗ್ರಹಿಸಿ ಪ್ರದರ್ಶಿಸುವ ಮತ್ತು ಪರಿಚಯಿಸುವ ಯೋಜನೆಯನ್ನು ಪೀಠವು ಹಾಕಿಕೊಂಡಿದೆ. ಅದಕ್ಕಾಗಿ ‘ಹಾಲುಮತ ಭಂಡಾರ’ ಹೆಸರಿನ ವಸ್ತುಸಂಗ್ರಹಾಲಯವನ್ನು ವಿಶಾಲ ಭವನದಲ್ಲಿ ಸ್ಥಾಪಿಸಲಾಗಿದೆ. ಬೆನಕಟ್ಟಿಯ ಶ್ರೀ ಅಂಕಲಿಮಾನ್ಯ ದೇವರ ಪೂಜಾರಿಗಳಾದ ಸವದತ್ತಿ ತಾಲೂಕಿನ ಬೆನಕಟ್ಟಿ ಗ್ರಾಮದ ಶ್ರೀ ಸಿದ್ಧಪ್ಪ ತಂದೆ ಶಿಗೂರಪ್ಪ ಪೂಜಾರ ಅವರು ತಮ್ಮ ತಂದೆ-ಅಣ್ಣನ ಸ್ಮರಣಾರ್ಥ ಕಂಬಳಿ ತಯಾರಿಕೆಯ ಕೆಲ ಸಾಮಗ್ರಿಗಳನ್ನು, ಅರಕೇರಿ ಅಮೋಘಸಿದ್ಧ ಸಂಸ್ಥಾನ ಮಠದ ಒಡೆಯರಾದ ಶ್ರೀಸಂಜಯ್‌ ಶಿವಗೊಂಡ ಪಾಟೀಲ್‌ ಅವರು ಮೂರೇಣಿನ ಪವಿತ್ರ ಜಾಡಿಯನ್ನು, ಚಳ್ಳಕೆರೆ ತಾಲ್ಲೂಕು ಟಿ. ಎನ್‌. ನಾಯಕನಕೋಟೆ ಗ್ರಾಮದ ಗೊರವಯ್ಯಗಳಾದ ಶಿವಲಿಂಗಪ್ಪ ತಂದೆ ಮೈಲಾರಪ್ಪ ಅವರು ಕಂಬಳಿ ತಯಾರಿಕೆ, ನೂಲುವ ಸಾಮಗ್ರಿಗಳಾದ ಕುಂಟೆ, ದಾನಿ, ರಾಟಿ, ಕದರು ಇತ್ಯಾದಿ ಪರಿಕರಗಳನ್ನು, ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಡೋಣಿ ಗ್ರಾಮದ ಶ್ರೀ ಬೀರಲಿಂಗೇಶ್ವರ ಸಂಘದ ನಿಂಗಪ್ಪ ಹಾಲಪ್ಪ ಗುಡ್ಡದ ಇವರು ದಿಮ್ಮಿನ ಡೊಳ್ಳು ಮತ್ತು ಕಂಚಿನ ತಾಳಗಳನ್ನು, ಡಂಬಳದ ಶ್ರೀ ಬೀರಲಿಂಗೇಶ್ವರ ಮತ್ತು ಮಾಯಮ್ಮ ದೇವರ ಡೊಳ್ಳಿನ ಸಂಘದವರು ಪಲ್ಲಕ್ಕಿಯನ್ನು, ಶಿರಹಟ್ಟಿಯ ಬೀರೇಶ್ವರ ಸೇವಾ ಸಮಿತಿಯವರು ಎಲೆಗತ್ತರಿಯನ್ನು, ಚಿಕ್ಕೋಡಿ ತಾಲೂಕಿನ ಖಡಕಲಾಟದ ಅಲೆಮಾರಿ ಕುರಿಗಾರರಾದ ಶ್ರೀ ವಾಸಪ್ಪ, ಶ್ರೀಮಾರುತಿ ಇವರು, ವಟಾಚೀಲ, ಕುರಿಕಾಯುವ ಬಡಿಗೆ, ಕುರಿಯ ಮೈಯಿಂದ ಉಣ್ಣೀ ಕತ್ತರಿಸುವ ಕತ್ತರಿ, ಬರೆಗಡ್ಡಿ ಮತ್ತು ಕೊಡಲಿಯನ್ನು, ಮೈಲಾರ ದೇವಸ್ಥಾನದ ಶ್ರೀ ಶ್ರೀ ಗುರು ವೆಂಕಪ್ಪಯ್ಯ ಒಡೆಯರ ಅವರು ಗೊರವಯ್ಯಗಳು ಉಪಯೋಗಿಸುವ ಗಂಟೆ ಡಮರು ಡೋಣಿ ತ್ರಿಶೂಲ ಮೊದಲಾದ ಸಾಮಗ್ರಿಗಳನ್ನು ಉದಾರ ಕೊಡುಗೆಯಾಗಿ ನೀಡುವುದರ ಮೂಲಕ ಹಾಲುಮತ ಭಂಡಾರ ಸ್ಥಾಪನೆಗೆ ಚಾಲನೆ ನೀಡಿದ್ದಾರೆ.

೪.  ಹಾಲುಮತ ಮೇಲುದೀಪ-ಗ್ರಂಥಾಲಯ ಉದ್ಘಾಟನೆ

ಹಾಲುಮತ ಸಾಹಿತ್ಯ ಸಂಸ್ಕೃತಿಗೆ ಸಂಬಂಧಿಸಿದಂತೆ ವಿವಿಧ ಭಾಷೆಗಳಲ್ಲಿ ಈಗಾಗಲೇ ಪ್ರಕಟಗೊಂಡಿರುವ ಗ್ರಂಥಗಳು, ಸಂಪುಟಗಳು, ನಿಯತಕಾಲಿಕಗಳು, ವಿಡಿಯೋ ಆಡಿಯೋ ಸಿ.ಡಿ. ಗಳನ್ನು ಸಂಗ್ರಹಿಸಿಡಲು ಒಂದು ಸುಸಜ್ಜಿತವಾದ ಗ್ರಂಥಾಲಯವನ್ನು ಹಾಲುಮತ ಭವನದಲ್ಲಿ ತೆರೆಯಲಾಗಿದೆ. ತಾಳೆಗರಿ, ಕೋರಿಕಾಗದ ಕಡತಗಳಂಥ ಪ್ರಾಚೀನ ಹಸ್ತಪ್ರತಿಗಳು, ಶಿಲಾಶಾಸನ, ತಾಮ್ರಪತ್ರ, ಕೈಫಿಯತ್ತು, ನಿರೂಪ, ಸನದುಗಳಂಥ ದಾಖಲು ಆಕರ ಸಾಮಗ್ರಿಗಳು, ಅತ್ಯಂತ ಹಳೆಯ ಪುಸ್ತಕ ಹಾಗೂ ನಿಯತಕಾಲಿಕಗಳ ಝರಾಕ್ಷ ಪ್ರತಿಗಳನ್ನು ಸಂಗ್ರಹಿಸಲಾಗುತ್ತಿದೆ. ಶಂಬಾ ಜೋಶಿ ಸಂಪುಟಗಳು, ಹಾಲುಮತ ಕಾವ್ಯ ಪುರಾಣಗಳು, ವಿ. ಆರ್‌. ಹನುಮಂತಯ್ಯನವರ ಸಮಗ್ರ ಕೃತಿಗಳು, ಹಾಲುಮತ ಸಂಶೋಧನ ಮತ್ತು ವಿಮರ್ಶಾತ್ಮಕ ಗ್ರಂಥಗಳು, ಜಗತ್ಪಾವನ ಪತ್ರಿಕೆಯ ಸಂಚಿಕೆಗಳು, ಗುಂಥರ್‌ ಸೊಂಥೈಮರ್‌, ಥರ್ಸ್ಟನ್‌, ಶ್ಯಾಮಸಿಂಗ್‌, ಮುನ್ನಾಲಾಲ್‌ ಚಂದೇಲ್‌ ಮೊದಲಾದ ಸ್ವದೇಶಿ ಮತ್ತು ವಿದೇಶಿ ವಿದ್ವಾಂಸರ ಕೃತಿಗಳನ್ನು ಈ ಗ್ರಂಥಾಲಯ ಒಳಗೊಳ್ಳಬೇಕಾಗಿದೆ. ಇದರನ್ವಯ ನಾಡಿನ ಲೇಖಕರಿಂದ ಪ್ರಕಾಶಕರಿಂದ ದಾನರೂಪದಲ್ಲಿ ಗ್ರಂಥಗಳನ್ನು ಸಂಗ್ರಹಿಸುವ ಕಾರ್ಯ ಮುನ್ನಡೆದಿದೆ. ಇದಕ್ಕೆ ಒಳ್ಳೆಯ ಪ್ರತಿಕ್ರಿಯೆ ಬಂದಿದ್ದು, ಗದುಗಿನ ಮೆಣಸಗಿ ಸಹೋದರರು ತಮ್ಮ ವಿದ್ಯಾನಿಧಿ ಪ್ರಕಾಶನದಿಂದ ಪ್ರಕಟಿಸಿದ ಹಾಲುಮತ ಸಂಸ್ಕೃತಿ ಸಾಹಿತ್ಯಕ್ಕೆ ಸಂಬಂಧಿಸಿದ ಎಲ್ಲ ಪುಸ್ತಕಗಳನ್ನು ಗ್ರಂಥಾಲಯಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಬಿಜಾಪುರದ ಲೇಖಕ ಚಂದ್ರಕಾಂತ ಬಿಜ್ಜಳಗಿ, ಬಾಗಲಕೋಟೆಯ ಶ್ರೀ ದೊಡ್ಡಣ್ಣ ಗದ್ದನಕೇರಿ, ಲೋಣಿ (ಬಿ. ಕೆ.)ಗ್ರಾಮದ ಶ್ರೀ ಸದಾಶಿವ ಜುಮ್ಮಣ್ಣವರ ಮಹಾರಾಯ, ಡಾ. ಸಿದ್ದಣ್ಣ ಜಕಬಾಳ, ಎಂ. ಕರಿಯಪ್ಪ, ಉಲುವತ್ತಿ ಗ್ರಾಮದ ಅಯ್ಯನಹಳ್ಳಿ ಭೀಮಪ್ಪ ಮೊದಲಾದ ಮಹನೀಯರು ತಾವು ರಚಿಸಿದ ಪ್ರಕಟಿಸಿದ ಹಾಗೂ ಸಂಗ್ರಹಿಸಿದ ಪುಸ್ತಕಗಳನ್ನು ಉದಾರವಾಗಿ ನೀಡುವುದರ ಮೂಲಕ ಆಕರಗ್ರಂಥಗಳ ಸಂಗ್ರಹಕ್ಕೆ ನೆರವಾಗಿದ್ದಾರೆ.

೫.  ಮಾಲಗಂಬ-ಪರಿಚಯ ಪುಸ್ತಕದ ಬಿಡುಗಡೆ ಕಾರ್ಯಕ್ರಮ

ಹಾಲುಮತ ಅಧ್ಯಯನ ಪೀಠದ ಕಾರ್ಯಚಟುವಟಿಕೆಗಳನ್ನು ಪರಿಚಯಿಸುವ ಮಾಲಗಂಬ ಪುಸ್ತಕವನ್ನು ವಿಜಯನಗರ ಕ್ಷೇತ್ರದ ಶಾಸಕರಾದ ಬಿ. ಎಸ್‌. ಆನಂದಸಿಂಗ್‌ ಅವರು ಬಿಡುಗಡೆ ಮಾಡಿದರು. ಪೀಠದ ಸ್ಥಾಪನೆ, ಅನುದಾನ ಕ್ರೋಢೀಕರಣ, ಹಮ್ಮಿಕೊಂಡ ಸಮ್ಮೇಲನ, ವಿಚಾರ ಸಂಕಿರಣ, ತರಬೇತಿ ಶಿಬಿರ, ಪ್ರಕಟಿಸಿದ ಪುಸ್ತಕಗಳ ವಿವರಗಳನ್ನು ಈ ಪುಸ್ತಕದಲ್ಲಿ ದಾಖಲಿಸಲಾಗಿದೆ.

೬.  ಪುಸ್ತಕ ಪ್ರಕಟಣೆಗಳು

೧.  ಹಾಲುಮತ ವ್ಯಾಸಂಗ-೧

೨೦೦೮ರಲ್ಲಿ ಗದುಗಿನಲ್ಲಿ ನಡೆದ ಹಾಲುಮತ ಸಂಸ್ಕೃತಿ ಸಮ್ಮೇಳನದಲ್ಲಿ ಮಂಡಿಸಿದ ಸಂಪ್ರಬಂಧಗಳ ಸಂಪುಟ ಹಾಲುಮತ ವ್ಯಾಸಂಗ ಸಂಪುಟ-೧. ಹಾಲುಮತ ಅಧ್ಯಯನದ ಆಕರಗಳು, ಹಾಲುಮತದ ಸಾಂಸ್ಕೃತಿಕ ವೀರರು, ಹಾಲುಮತ ದೈವಗಳು, ಹಾಲುಮತ ಸಾಧಕರು ಹಾಗೂ ಸಮ್ಮೇಳನಾಧ್ಯಕ್ಷರ ಸಾಹಿತ್ಯ ಸಾಧನೆ ಎಂಬ ಐದು ಭಾಗಗಳಲ್ಲಿ ವಿವಿಧ ವಿದ್ವಾಂಸರ ಇಪ್ಪತ್ತು ಸಂಪ್ರಬಂಧಗಳಿವೆ. ತಗರ ಪವಾಡ, ಸಿದಧಮಂಕ ಚರಿತೆ, ಜನಪದ ಹಾಲುಮತ ಮಹಾಕಾವಯ, ಹಾಲುಮತೋತ್ತೇಜಕ ಪುರಾಣ ಮುಂತಾದ ಕಾವ್ಯ ಪುರಾಣಗಳಂಥ ಲಿಖಿತ ಆಕರಗಳು, ಶಾಸನ, ಸನದು, ಕೈಫಿಯತ್ತು, ನಿರೂಪ, ವರದಿಗಳಂಥ ದಾಖಲೆಗಳು, ಡೊಳ್ಳಿನ ಹಾಡುಗಳು, ನಂಬಿಕೆಗಳು, ಸಂಪ್ರದಾಯ, ಜಾನಪದ ಆಚರಣೆಗಳಂಥ ಮೌಖಿಕ ಆಕರಗಳು ಮತ್ತು ಸ್ಥಳನಾಮ, ಅಡ್ಡ ಹೆಸರುಗಳಂಥ ಭಾಷಿಕ ಆಕರಗಳ ಹಿನ್ನೆಲೆಯಲ್ಲಿ ಹಾಲುಮತ ಸಂಸ್ಕೃತಿಯ ಬಗೆಗೆ ಮೊದಲ ಭಾಗದಲ್ಲಿ ವಿವೇಚಿಸಲಾಗಿದೆ. ಹಾಲುಮತ ಸಾಂಸ್ಕೃತಿಕ  ನಾಯಕರಲ್ಲಿ ಪ್ರಮುಖರಾದ ಬೀರಪ್ಪ ಮಾಳಿಂಗರಾಯ, ಮೈಲಾರಲಿಂಗ ಹಾಗೂ ಗೊಲ್ಲಾಳೇಶ್ವರರ ಇತಿವೃತ್ತ ವಿಚಾರ, ಸಾಧನೆಗಳನ್ನು ಲಭ್ಯ ಆಕರಗಳ ಸಹಾಯದಿಂದ ಎರಡನೆಯ ಭಾಗದಲ್ಲಿ ಅವಲೋಕಿಸಲಾಗಿದೆ. ಹಾಲುಮತ ಆರಾಧ್ಯ ದೈವಗಳಾದ ರೇವಣಸಿದ್ದೇಶ್ವರ  ಸಿದ್ಧರಾಮೇಶ್ವರ ಅಮೋಘಸಿದ್ದೇಶ್ವರ ಮತ್ತು ಇಟಗಿ ಭೀಮಾಂಬಿಕೆಯರ ಕುರಿತು ಮೂರನೆಯ ಭಾಗದಲ್ಲಿ ಪರಿಚಯಿಸಲಾಗಿದೆ. ಹಾಲುಮತ ಸಾಧಕರಾದ ಸಿದ್ಧನಗೌಡ ಪಾಟೀಲ, ಗವಿಸಿದ್ಧಪ್ಪ ಬೆಳವಡಿ, ಸಿದ್ಧಪ್ಪಯ್ಯ ಒಡೆಯರ ಹಾಗೂ ಕೂಗನೂರು ನಿಂಗಪ್ಪರ  ಜೀವನ ಸಾಧನೆಗಳನ್ನು  ನಾಲ್ಕನೆಯ ಭಾಗದಲ್ಲಿ ಅಳವಡಿಸಲಾಗಿದೆ. ಐದನೆಯ ಭಾಗದಲ್ಲಿ ಹಾಲುಮತ ಸಮ್ಮೇಳನದ ಸರ್ವಾಧ್ಯಕ್ಷರಾದ ಜ್ಯೋತಿ ಹೊಸೂರ ಅವರ ಸಾಹಿತ್ಯ ಸಾಧನೆಯ ಅವಲೋಕನವಿದೆ.

೨.  ಮಾಲಗಂಬ-ಹಾಲುಮತ ಅಧ್ಯಯನ ಪೀಠದ ಪರಿಚಯ (Profile)ಪುಸ್ತಕ

೨೦೦೯ರಲ್ಲಿ ಹಾಲುಮತ ಅಧ್ಯಯನ ಪೀಠದ ಕಾರ್ಯಚಟುವಟಿಕೆಗಳನ್ನು ಪರಿಚಯಿಸುವ ಕಿರುಪುಸ್ತವಿದು. ಪೀಠದ ಉದ್ದೇಶಗಳು, ಈವರೆಗೆ ಆಯೋಜಿಸಿದ ಕಾರ್ಯಕ್ರಮಗಳ ವರದಿಗಳು, ಪೀಠದ ಬಗೆಗಿನ ಗಣ್ಯಮಾನ್ಯರು ಹಾಗೂ ವಿದ್ವಾಂಸರ ಅನಿಸಿಕೆಗಳು, ಛಾಯಾಚಿತ್ರಗಳ್ನನೊಳಗೊಂಡು ಈ ಪುಸ್ತಕ ಸುಂದರವಾಗಿ ಮುದ್ರಿತವಾಗಿದೆ.

೭.  ಕನಕ ಜಯಂತಿ ಆಚರಣೆ

ದಿನಾಂಕ ೫ ನವೆಂಬರ್‌ ೨೦೦೯ ರಂದು ಹಾಲುಮತ ಭವನದಲ್ಲಿ ಭಕ್ತ ಕನಕದಾಸರ ಜಯಂತಿಯನ್ನು ಹಮ್ಮಿಕೊಳ್ಳಲಾಗಿತ್ತು. ಮಾನ್ಯ ಕುಲಪತಿಗಳಾದ ಡಾ. ಎ. ಮುರಿಗೆಪ್ಪನವರು ಕನಕದಾಸರ ಭಾವಚಿತ್ರಕ್ಕೆ ಹೂಮಾಲೆಯನ್ನು  ಅರ್ಪಿಸುವುದರ ಮೂಲಕ ಸಾಂಕೇತಿಕವಾಗಿ ಆಚರಿಸಲಾಯಿತು. ಕನಕದಾಸರ ತತ್ವ ಸಂದೇಶಗಳು ಮನೆಮನೆಗೂ ತಲುಪಬೇಕೆಂದು ಇದೇ ಸಂದರ್ಭದಲ್ಲಿ ಕುಲಪತಿಗಳು ನುಡಿದರು. ಕುಲಸಚಿವರಾದ ಎಸ್‌. ಎಸ್‌. ಪೂಜಾರ ಅವರು ಕನಕದಾಸ ಕೀರ್ತನೆಗಳ ವೈಶಿಷ್ಟ್ಯತೆಗಳನ್ನು ಮೆಲುಕು ಹಾಕಿದರು. ದೂರಶಿಕ್ಷಣ ಕೇಂದ್ರದ ನಿರ್ದೇಶಕರಾದ ಡಾ. ಕೆ. ಎಂ. ಮೇತ್ರಿ, ಉಪಕುಲಸಚಿವರಾದ ಡಾ. ಪ್ರೇಮಕುಮಾರ, ಡಾ. ಚಿನ್ನಸ್ವಾಮಿ ಸೋಸಲೆ, ಹಾಲುಮತ ಅಧ್ಯಯನ ಪೀಠದ ಸಂಚಾಲಕರಾದ ಡಾ. ಎಫ್‌. ಟಿ. ಹಳ್ಳಿಕೇರಿ ಉಪಸ್ಥಿತರಿದ್ದರು. ರಾಜ್ಯದಲ್ಲಿ ನೆರೆಹಾವಳಿಯಿಂದಾಗಿ ಕನಕ ಜಯಂತಿ ಕಾರ್ಯಕ್ರಮವನ್ನು ಸಾಂಕೇತಿಕವಾಗಿ ಸರಳವಾಗಿ ಆಚರಿಸಲಾಯಿತು.

೮.  ಹಾಲುಮತ ಸಾಹಿತ್ಯ ಸಂಸ್ಕೃತಿ-ವಿಶೇಷ ಉಪನ್ಯಾಸ ಕಾರ್ಯಕ್ರಮಗಳು

ದಿನಾಂಕ ೨೧.೨.೨೦೧೦ರಿಂದ ೨.೩.೨೦೧೦ ರವರೆಎ ಬಳ್ಳಾರಿ ಜಿಲ್ಲೆಯ ಹೊಸಪೇಟೆ ಕೊಟ್ಟೂರು ಕೊಳಗಲ್ಲು ಸಂಡೂರು ಸಿರಗುಪ್ಪ ಹೂವಿನಹಡಗಲಿ ಮತ್ತು ಹಗರಿಬೊಮ್ಮನಹಳ್ಳಿಗಳಲ್ಲಿ ಕುರುಬರ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಹಾಲುಮತ ಸಾಹಿತ್ಯ ಸಂಸ್ಕೃತಿ ಕುರಿತು ಹದಿನಾಲ್ಕು ವಿಶೇಷ ಉಪನ್ಯಾಸ ಕಾರ್ಯಕ್ರಮಗಳನ್ನು ಪೀಠವು  ಆಯೋಜಿಸಿತ್ತು.

೨೧.೨.೨೦೧೦ ರವಿವಾರ ೧೧ ಗಂಟೆಗೆ ಹಾಲುಮತ ಸಾಂಸ್ಕೃತಿಕ ವೇದಿಕೆಯ ಸಹಯೋಗದಲ್ಲಿ ಹೊಸಪೇಟೆ ರೋಟರಿ ಹಾಲ್‌ನಲ್ಲಿ ಉದ್ಘಾಟನ ಕಾರ್ಯಕ್ರಮ ನಡೆಯಿತು. ಕನ್ನಡ ವಿಶ್ವವಿದ್ಯಾಲಯದ ಕುಲಸಚಿವರಾದ ಡಾ. ಮಂಜುನಾಥ ಬೇವಿನಕಟ್ಟಿ ಅವರ ಅಧ್ಯಕ್ಷತೆಯಲ್ಲಿ ಮಾಜಿ ಸಂಸದರಾದ ಕೆ. ವಿರೂಪಾಕ್ಷಪ್ಪನವರು ಸಮಾರಂಭವನ್ನು ಉದ್ಘಾಟಿಸಿದರು. ವಾರ್ತಾ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕರಾದ ಸಿ. ಕೆ. ಪರಶುರಾಮಯ್ಯನವರು ತಗರ ಪವಾಡ ಮತ್ತು ತುಮಕೂರಿನ ಸಿದ್ಧಗಂಗಾ ಮಹಿಳಾ ಪದವಿ ಕಾಲೇಜಿನ ಪ್ರಾಧ್ಯಾಪಕರಾದ ಡಾ. ಡಿ. ಎನ್. ಯೋಗೀಶ್ವರ ಅವರು ಚರಿತ್ರೆಯ ಪುಟಗಳಲ್ಲಿ ಕುರುಬರು ಎಂಬ ವಿಶೇಷ ಉಪನ್ಯಾಸವನ್ನು ನೀಡಿದರು. ಹಾಲುಮತ ಅಧ್ಯಯನ ಪೀಠದ ಸಂಚಾಲಕರಾದ ಡಾ. ಎಫ್‌. ಟಿ. ಹಳ್ಳಿಕೇರಿ ಅವರು ಕಾರ್ಯಕ್ರಮದ ರೂಪುರೇಷೆಗಳನ್ನು ಪ್ರಾಸ್ತಾವಿಕವಾಗಿ ಹೇಳಿದರು. ಮುಖ್ಯ ಅತಿಥಿಗಳಾಗಿ ಮಲ್ಲಯ್ಯ ಒಡೆಯರ, ಎಚ್‌. ನಂಜುಂಡಪ್ಪ, ಎಲ್. ಸಿದ್ಧನಗೌಡ, ಅಯ್ಯಾಳಿ ತಿಮ್ಮಪ್ಪ, ಕೆ. ಎಂ. ಹಾಲಪ್ಪ, ಜಿ. ಭರಮನಗೌಡ, ಆರ್‌. ಕೊಟ್ರೇಶ್‌ ಹಾಗೂ ಚಿದಾನಂದಪ್ಪ ಮುಂತಾದ ಗಣ್ಯಮಾನ್ಯರು ಭಾಗವಹಿಸಿದ್ದರು.

೨೨.೨.೨೦೧೦ ಸೋಮವಾರ ಬೆಳಿಗ್ಗೆ ೧೦.೩೦ಕ್ಕೆ ಕೂಡ್ಲಗಿ ತಾಲೂಕು ಕುರುಬರ ಸಂಘದ ಸಹಯೋಗದಲ್ಲಿ ಕೊಟ್ಟೂರಿನ ಶ್ರೀಬನಶಂಕರಿ ಕಲ್ಯಾಣ ಮಂಟಪದಲ್ಲಿ ಕನ್ನಡ ವಿಶ್ವವಿದ್ಯಾಲಯದ ಬುಡಕಟ್ಟು ಅಧ್ಯಯನ ವಿಭಾಗದ ಸಹಪ್ರಾಧ್ಯಾಪಕರಾದ ಡಾ. ಚಲುವರಾಜು ಅವರು ಜನಪದ ಹಾಲುಮತ ಮಹಾಕಾವ್ಯ ಹಾಗೂ ಹಸ್ತಪ್ರತಿಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಡಾ. ಎಫ್‌. ಟಿ. ಹಳ್ಳಿಕೇರಿ ಅವರು ಕುರುಬ ಸಮುದಾಯದ ಅಭಿವೃದ್ಧಿ ಸಮಸ್ಯೆಗಳು ಮತ್ತು ಸಲಹೆಗಳು ಕುರಿತು ಉಪನ್ಯಾಸ ನೀಡಿದರು. ಸಣ್ಣಲೋಪಕ್ಕ, ಎ. ನಂಜಪ್ಪ, ವೈ. ಎಚ್‌. ಹಳ್ಳಿಕೇರಿ, ಬಿ. ಭರಮಪ್ಪ, ಬಿ. ನೀಲಗಿರಿಯಪ್ಪ, ಕೆ. ಜಿ. ನಾಗರಾಜ, ನಿಂಗಪ್ಪ ಕೆ. ಎಂ. ಚಿದಾನಂದಪ್ಪ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.

೨೬.೨.೨೦೧೦ ಶುಕ್ರವಾರ ಸಾಯಂಕಾಲ ೪ ಗಂಟೆಗೆ ಬಳ್ಳಾರಿ ಜಿಲ್ಲಾ ಕುರುಬರ ಸಂಘದ ಸಹಯೋಗದಲ್ಲಿ ಬಳ್ಳಾರಿ ತಾಲೂಕು  ಕೊಳಗಲ್ಲು ಗ್ರಾಮದ ಶ್ರೀ ಯರ್ರಿತಾತಾ ದೇವಸ್ಥಾನದ ಆವರಣದಲ್ಲಿ ಕಲಘಟಗಿಯ ಗುಡ್‌ನ್ಯೂಜ್‌ ಪದವಿ ಕಾಲೇಜಿನ ಸಹ ಪ್ರಾಧ್ಯಾಪಕರಾದ ಡಾ. ಬಿ. ಜಿ. ಬಿರಾದಾರ ಅವರು ಕುರುಬರ ಗುರುಪರಂಪರೆ ಹಾಗೂ ಗದುಗಿನ ಪತ್ರಿಕಾ ವರದಿಗಾರರಾದ ಮಂಜುನಾಥ ಬೊಮ್ಮನಕಟ್ಟೆ ಅವರು ಸಹಕಾರಿ ಪಿತಾಮಹ ಸಿದ್ಧನಗೌಡ ಪಾಟೀಲ ಜೀವನ ಸಾಧನೆ ಕುರಿತು ಉಪನ್ಯಾಸ ಮಾಡಿದರು. ಬಳ್ಳಾರಿ ಮಹಾನಗರಸಭೆಯ ಮೇಯರ್‌ ಕೆ. ಬಸವರಾಜ, ಮುಖಂಡರಾದ ಗಡಗಿ ಗೋವಿಂದಪ್ಪ, ಮಲ್ಲೇಶಪ್ಪ, ಡಿ. ಹನುಮಂತಪ್ಪ, ಆಂಜನೇಯ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

೨೭.೨.೨೦೧೦ ಶನಿವಾರ ಬೆಳಿಗ್ಗೆ ೧೦.೩೦ಕ್ಕೆ ಸಂಡೂರು ತಾಲೂಕು ಕುರುಬರ ಸಂಘದ ಸಹಯೋಗದಲ್ಲಿ ತಾಲೂಕು ಕುರುಬರ ಸಂಘದ ಸಭಾಭವನದಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರದ ನಿರ್ದೇಶಕರಾದ ಡಾ. ಮಲ್ಲಿಕಾ ಘಂಟಿ ಅವರ ಅಧ್ಯಕ್ಷತೆಯಲ್ಲಿ ಸಿದ್ಧಮಂಕ ಚರಿತೆ ಕುರಿತು ಹಸ್ತಪ್ರತಿಶಾಸ್ತ್ರ ವಿಭಾಗದ ಸಹಪ್ರಾಧ್ಯಾಪಕರಾದ  ಡಾ. ಕೆ. ರವೀಂದ್ರನಾಥ ಮತ್ತು ಕೊಡಗಿನ ಕುರುಬರು ಕುರಿತು ಜನಪದ ಅಧ್ಯಯನ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ. ಹೆಬ್ಬಾಲೆ ನಾಗೇಶ ಅವರು ಪ್ರಬಂಧ ಮಂಡಿಸಿದರು. ತಾಲೂಕು ಕುರುಬರ ಸಂಘದ ಅಧ್ಯಕ್ಷರಾದ ಶ್ರೀ. ಕೆ. ತಿಪ್ಪಣ್ಣ, ನಿವೃತ್ತ ಪ್ರಾಧ್ಯಾಪಕರಾದ ಬಸವರಾಜ ಮಸೂತಿ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.

೨೮.೨.೨೦೧೦ ರವಿವಾರ ಬೆಳಿಗ್ಗೆ ೧೦.೩೦ಕ್ಕೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವಕ ಸಂಘದ ಸಹಯೋಗದಲ್ಲಿ ಸಿರಗುಪ್ಪದ ಅಭಯಾಂಜನೇಯ ಸ್ವಾಮಿ ಸಭಾಮಂಟಪದಲ್ಲಿ ಸಿರಗುಪ್ಪ ವಿಧಾನಸಭಾ ಸದಸ್ಯರಾದ ಶ್ರೀ ಎಂ. ಎಸ್‌. ಸೋಮಲಿಂಗಪ್ಪ ಅವರ ಅಧ್ಯಕ್ಷತೆಯಲ್ಲಿ ಹಸ್ತಪ್ರತಿಶಾಸ್ತ್ರ ವಿಭಾಗದ ಸಹಪ್ರಾಧ್ಯಾಪಕರಾದ ಡಾ. ಎಸ್‌. ಎಸ್‌. ಅಂಗಡಿ ಅವರು ಹಾಲುಮತ ಸಂಸ್ಕೃತಿ : ಶಂಬಾ ಜೋಶಿ ಚಿಂತನೆಗಳು ಮತ್ತು ಇರಕಲಗಡದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಡಾ. ಬಿ. ಹುಲಿಗೆಮ್ಮ ಅವರು ರಸ್ತಾಪುರ ಭೀಮಕವಿಯ ಹಾಲುಮತೋತ್ತೇಜಕ ಪುರಾಣ ಕುರಿತು ಉಪನ್ಯಾಸ ನೀಡಿದರು. ದಮ್ಮೂರು ಶಂಕರಪ್ಪ, ಬಂಗ್ಲೆ ನಾಗಪ್ಪ, ಡಿ. ಯರಿಯಪ್ಪ, ಕೆ. ಸುಂಕಪ್ಪ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

೧.೩.೨೦೧೦ ಸೋಮವಾರ ಬೆಳಿಗ್ಗೆ ೧೦.೩೦ಕ್ಕೆ ತಾಲೂಕು ಕುರುಬರ ಸಂಘದ ಸಹಯೋಗದಲ್ಲಿ ಹೂವಿನಹಡಗಲಿಯ ಶ್ರೀ ಮೈಲಾರಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಶ್ರೀ ಗುರುವಿನ ಕೊಟ್ರಯ್ಯನವರ ಅಧ್ಯಕ್ಷತೆಯಲ್ಲಿ ಗದುಗಿನ ಕೆ. ಎಸ್‌. ಎಸ್. ಪದವಿ ಕಾಲೇಜಿನ ಪ್ರಾಧ್ಯಾಪಕರಾದ ಡಾ. ಎಸ್‌. ಎಫ್. ಜಕಬಾಳ ಅವರು ಕುರಿಗಾರರ ಕಾಲಜ್ಞಾನ ಮತ್ತು ಕನ್ನಡ ವಿಶ್ವವಿದ್ಯಾಲಯದ ಪಿಹೆಚ್‌ಡಿ ವಿದ್ಯಾರ್ಥಿನಿ ಶ್ರೀಮತಿ ಅನ್ನಪೂರ್ಣ ಗೋಸ್ಬಾಳ ಅವರು ಚನ್ನಬಸವ ವಿರಚಿತ ಹಾಲುಮತ ಪುರಾಣ ಕುರಿತು ಉಪನ್ಯಾಸ ನೀಡಿದರು. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವರಾದ ಶ್ರೀ ಈಟಿ ಶಂಭುನಾಥ, ಪರಮೇಶ್ವರಪ್ಪ, ಶ್ರೀಮತಿ ಪ್ರೇಮಕ್ಕ, ಷಣ್ಮುಖಪ್ಪ ಭಾಗವಹಿಸಿದ್ದರು.

೨.೩.೨೦೧೦ ರಂದು ಮಂಗಳವಾರ ಬೆಳಿಗ್ಗೆ ೧೦.೩೦ಕ್ಕೆ ಹಗರಿಬೊಮ್ಮನಹಳ್ಳಿಯಲ್ಲಿ ತಾಲೂಕು ಕುರುಬ ಸಂಘದ ಸಹಯೋಗದಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ದೂರಶಿಕ್ಷಣ ಕೇಂದ್ರದ ನಿರ್ದೇಶಕರಾದ ಡಾ. ಕೆ. ಎಂ. ಮೇತ್ರಿ ಅವರು ಮಾಳಿಂಗರಾಯನ ಕಾವ್ಯ ಹಾಗೂ ಶ್ರೀಮತಿ ಅನ್ನಪೂರ್ಣ ಗೋಸ್ಬಾಳ ಅವರು ತಗರ ಪವಾಡ ಮತ್ತು ಸಿದ್ಧಮಂಕ ಚರಿತೆ : ತೌಲನಿಕ ಅಧ್ಯಯನ ಕುರಿತು ಉಪನ್ಯಾಸ ನೀಡಿದರು. ಬಳ್ಳಾರಿ ಜಿಲ್ಲಾ ಕುರುಬರ ಸಂಘದ ಉಪಾಧ್ಯಕ್ಷರಾದ ಶ್ರೀ ಪ್ರಭಾಕರ ಅವರು ಅಧ್ಯಕ್ಷತೆ ವಹಿಸಿದ್ದ ಈ ಸಮಾರಂಭದಲ್ಲಿ ಟಿ. ರಾಮಲಿಂಗಪ್ಪ, ಶಿವಲಿಂಗಯ್ಯ ಹಾಗೂ ಹೆಚ್‌. ಸೋಮಲಿಂಗಪ್ಪನವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಹೀಗೆ ಏಳು ದಿನಗಳ ಕಾಲ ಆಯೋಜಿಸಿದ ಹದಿನಾಲ್ಕು ಉಪನ್ಯಾಸಗಳು ಬಳ್ಳಾರಿ ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ಯಶಸ್ವಿಯಾಗಿ ಜರುಗಿದವು.