ಹೆಗ್ಗಡೆಗಳು ಕುರುಬರು, ಅವರು ಕುರುಬ ಜನಾಂಗದ ಒಂದು ಪ್ರಮುಖ ಉಪಪಂಗಡ. ಹೆಗ್ಗಡೆಗಳನ್ನು ಹೆಗ್ಗಡಿಗಳು, ಹೆಗ್ಗಡೆಯವರು ಎಂದೆಲ್ಲಾ ಕರೆಯಲಾಗುವುದು. ಹೆಗ್ಗಡೆಗಳು ಈ ಹಿಂದೆ ಹಾಲುಮತದವರು ಎಂದಷ್ಟೇ ಜನಗಣತಿಗಳಲ್ಲಿ ಮತ್ತು ಇತರೆ ಸರ್ಕಾರಿ ದಾಖಲೆಗಳಲ್ಲಿ ನಮೂದಿಸುತ್ತಿದ್ದರು. ಪರಂಪರಾನುಗತವಾಗಿ ಕುರುಬರನ್ನು ಹಾಲುಮತದವರೆಂದು ಕರೆಯುವುದು ಎಲ್ಲರಿಗೂ ತಿಳಿದಿದೆ. ಹಾವನೂರು ಆಯೋಗದ ವರದಿಯಲ್ಲಿ ಹೆಗ್ಗಡೆಗಳು ಎಂಬ ಪದವನ್ನ ಹಾಲುಮತ, ಹಾಲುಮತ ಕುರುಬರು ಎಂಬ ಪದಗಳಿಗೆ ಸಮಾನಾರ್ಥ ಸೂಚಕವಾಗಿ ಬಳಸಲಾಗಿದೆ.

ಹೆಗ್ಗಡೆಗಳ ಮೂಲ ಮತ್ತು ಹಂಚಿಕೆ

ಹೆಗ್ಗಡೆಗಳು ಬಹಳ ಹಿಂದಿನಿಂದಲೂ ಅಲ್ಪಸಂಖ್ಯಾರತೆಂದೇ ತೋರುತ್ತದೆ. ಭೌಗೋಳಿಕವಾಗಿ ಹೆಗ್ಗಡೆಗಳು ಪ್ರಸ್ತುತ ರಾಮನಗರ ಜಿಲ್ಲೆ ಮಾಗಡಿ, ರಾಮನಗರ, ಕನಕಪುರ ಮತ್ತು ಚನ್ನಪಟ್ಟಣ, ಮಂಡ್ಯ ಜಿಲ್ಲೆ ವಿಶೇಷವಾಗಿ ಮದ್ದೂರು, ಮಂಡ್ಯ, ಮಳವಳ್ಳಿ ತಾಲ್ಲೂಕುಗಳಲ್ಲಿ, ಮೈಸೂರು ಜಿಲ್ಲೆಯ ಹುಣಸೂರು, ಪಿರಿಯಾಪಟ್ಟಣ ಮತ್ತು ಮೈಸೂರು ತಾಲ್ಲೂಕುಗಳಲ್ಲಿ ಚದುರಿದಂತೆ ಹಂಚಿಹೋಗಿದ್ದಾರೆ. ಈ ಯಾವುದೇ ತಾಲ್ಲೂಕುಗಳಲ್ಲಿ ಹೆಗ್ಗಡೆಯವರು ಬಹು ಸಂಖ್ಯಾತರಲ್ಲ. ಹೀಗಾಗಿ ಇವರು ಪ್ರಸ್ತುತ ಸಂದರ್ಭದಲ್ಲಿ ಉನ್ನತ ಪಟ್ಟದ ರಾಜಕಾರಣದಲ್ಲಿ ನಿರ್ಣಾಯಕ ಶಕ್ತಿಯೇನಲ್ಲ. ಆದರೆ ಕೆಲವು ತಾಲ್ಲೂಕುಗಳ (ಮಂಡ್ಯ ಮತ್ತು ಚೆನ್ನಪಟ್ಟಣ) ಹಲವು ಹಳ್ಳಿಗಳಲ್ಲಿ ರಾಜಕೀಯ ಮೀಸಲಾತಿಯಿಂದ ಗ್ರಾಮ ಪಂಚಾಯತ್, ತಾಲ್ಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್‌ಗಳಲ್ಲಿ ಕೆಲವು ಹೆಗ್ಗಡೆಗಳು ಸದಸ್ಯರಾಗಿ ಇತ್ತೀಚೆಗೆ ಆಯ್ಕೆಯಾಗುತ್ತಿರುವುದುಂಟು. ಹೀಗೆ ಹೆಗ್ಗಡೆಗಳು ದಕ್ಷಿಣ ಕರ್ನಾಟಕದಲ್ಲಷ್ಟೇ ಇದ್ದಾರೆ.

‘ಹೆಗ್ಗಡೆ’ ಎಂಬ ಪದವು ಭಾಷಿಕವಾಗಿ ಪೆರ್ಗಡೆ ಎಂಬ ಹಳೆಗನ್ನಡ ಪದದಿಂದ ಮೂಡಿಬಂದಿದೆ. ಪೆರ್ಗಡೆ ಎಂದರೆ ಮುಖ್ಯಸ್ಥನೆಂದರ್ಥ. ಹಾಲುಮತಕ್ಕೆ ಸೇರಿದ ಕುರುಬ ಹೆಗ್ಗಡೆಗಳು ತೀರಾ ಇತ್ತೀಚಿನವರೆಗೂ ಹೆಗ್ಗಡೆಗಳೆಂದು ತಮ್ಮ ಗಂಡುಮಕ್ಕಳಿಗೆ ಹೆಸರಿಡುವುದು ವಾಡಿಕೆಯಾಗಿದೆ. ತೀರಾ ಇತ್ತೀಚಿನವರೆಗೆ ಹೆಗ್ಗಡೆಗಳು ಗ್ರಾಮ ಪ್ರಧಾನವಾದ ಪಶು, ಕುರಿಪಾಲನೆ ಮತ್ತು ಕೃಷಿಕ ಜನಾಂಗದವರಾಗಿದ್ದರು.

‘ಹೆಗ್ಗಡೆ’ ಎನ್ನುವ ಹೆಸರನ್ನು ದಕ್ಷಿಣ ಕನ್ನಡ ಜಿಲ್ಲೆಯ ಆಳುವ ವರ್ಗವಾಗಿದ್ದ ಜೈನರು ಗೌಡ ಸಾರಸ್ವತ ಜನಾಂಗದ ಕೆಲವು ಕುಟುಂಬಗಳು, ಸವರ್ಣೀಯ ಹಿಂದೂಗಳಾದ ಭೂ ಮಾಲೀಕ ವರ್ಗದ ಬಂಟರಲ್ಲೂ, ಹೆಗ್ಗಡೆಗಳು ಮತ್ತು ಉತ್ತರ ಕನ್ನಡ ಜಿಲ್ಲೆಯ ಹವ್ಯಕ ಬ್ರಾಹಣರ ಕೆಲವು ಕುಟುಂಬಗಳು ಹೆಗ್ಗಡೆಗಳು ಎಂದು ಹೆಸರಿಟ್ಟುಕೊಳ್ಳುವುದು ವಾಡಿಕೆಯಲ್ಲಿದೆ. ಇಂದಿನ ಉಡುಪಿ ಜಿಲ್ಲೆಯ ಕಾರ್ಕಳ ತಾಲ್ಲೂಕಿನ ಬೆಟ್ಟ-ಗುಡ್ಡಗಳ ತಪ್ಪಲಿನಲ್ಲಿ ಹೆಗ್ಗಡೆ ಎಂಬ ಜಾತಿಯ ಅಲ್ಪಸಂಖ್ಯಾತ ಪಂಗಡವಿದೆ. ಈ ಪಂಗಡದ ಜನರು ತಾವು ಹಂಪಿಯಿಂದ ವಿಜಯನಗರ ಸಾಮ್ರಾಜ್ಯದ ಪತನನಂತರ ಜೀವರಕ್ಷಣೆಗಾಗಿ ಪಲಾಯನಗೈದವರೆಂದು ಹೇಳುತ್ತಾರೆ. ಇದು ಮೌಖಿಕ ಇತಿಹಾಸ. ಈ ಎಲ್ಲಾ ಅನ್ಯ ಜಾತಿಗಳ ಬ್ರಾಹ್ಮಣ ಮತ್ತು ಬ್ರಾಹ್ಮಣೇತರ ಮೂಲಗಳು ಜನವರ್ಗಗಳಲ್ಲಿ ಹೆಗ್ಗಡೆ ಎಂಬ ಪದವು ಸೀಮಿತವಾಗಿ ಕೆಲವು ಕುಟುಂಬಗಳಿಗಷ್ಟೇ ಬಳಸಲ್ಪಡುವುದರಿಂದ ಅದು ಸ್ಥಾನ ಸೂಚಕವಷ್ಟೇ ಆಗಿರಬಹುದು. ಅದು ಹಾಲುಮತ ಹೆಗ್ಗಡೆಗಳಂತೆ ಜಾತಿ ‘ಸೂಚಕವಾಗಿಲ್ಲ. ಕಾರ್ಕಳ ತಾಲ್ಲೂಕಿನ ಹಂಪಿ ಮೂಲದ ಹೆಗ್ಗಡೆಗಳು ಅರಮನೆಯ ಉಪಚಾರ, ಅಡುಗೆಮನೆ ಮತ್ತು ವಿಲಾಸಿ ಜೀವನದ ಮೇಲುಸ್ತುವಾರಿ ನಡೆಸುತ್ತಿದ್ದ ಮನೆ ಹೆಗ್ಗಡೆಗಳೇ ಅಥವಾ ಹಂಪಿ ಹೆಗ್ಗಡೆಗಳು ಹಾಲು ಮತದವರೇ ಆಗಿದ್ದ ಹಂಪಿ ಅರಸರ ಹಕ್ಕ-ಬುಕ್ಕರ ಜಾತಿಗೆ ಸೇರಿದವರೇ ಎನ್ನುವುದು ಸ್ಪಷ್ಟ ಪಡಬೇಕಿದೆ. ಉತ್ತರ ಹೌದು ಎಂದಾದರೆ ಕಾರ್ಕಳ ತಾಲ್ಲೂಕಿನ ಹಂಪಿ ಹೆಗ್ಗಡೆಗಳಿಗೂ, ಹಳೇ ಮೈಸೂರು ಪ್ರಾಂತ್ಯದ ಹಾಲುಮತ ಹೆಗ್ಗಡೆಗಳಿಗೂ ರಕ್ತ ಸಂಬಂಧ ಬೆಸೆಯಬಹುದು. ಈ ಹಾಲುಮತ ಹೆಗ್ಗಡೆಗಳು ಟಿಪ್ಪು ಸೇನೆ ಮತ್ತು ಆಡಳಿತದಲ್ಲಿ, ವಿಜಯನಗರ ಸೇವೆಯಲ್ಲಿದ್ದರೆಂದೂ ಹಿರಿಯರು ಹೇಳುತ್ತಾರೆ. ಈ ವಿಚಾರವೊಂದು ಜನಪದ ನಂಬಿಕೆಯಾಗಿ, ತಲೆತಲಾಂತರದಿಂದ ಹರಿದುಬಂದಿದೆ. ಕೆಲವು ಹಾಲುಮತ ಹೆಗ್ಗಡೆಗಳು ತಾವು ಆರ್ಯ ಜನಾಂಗದವರೆಂದೂ ಹೆಮ್ಮೆ ಪಡುತ್ತಾರೆ.

ಹೆಗ್ಗಡೆ ಜನಾಂಗಿಕ ಮೂಲ ಜನಪದ ವಿಶ್ಲೇಷಣೆ

ಹೆಗ್ಗಡೆಗಳು ಹಾಲುಮತ ಕುರುಬ ಜನಾಂಗದ ಉಪಪಂಗಡವಾಗಿ ದಕ್ಷಿಣ ಕರ್ನಾಟಕ ಹಳೆ ಮೈಸೂರು ಭಾಗದಲ್ಲಷ್ಟೇ ಇದ್ದಾರೆ. ಹೆಗ್ಗಡೆಗಳು ಭಾರತದ ಅಥವಾ ಕರ್ನಾಟಕದ ಇತರೆ ಭಾಗಗಳಲ್ಲಿ ಕಂಡುಬರುವುದಿಲ್ಲ.

ಹೆಗ್ಗಡೆಗಳ ಜನಾಂಗಿಕ ಮೂಲದ ಕುರಿತು ಒಂದು ಜನಪದ ಕಥೆಯಿದೆ. ಒಂದಾನೊಂದು ಕಾಲದಲ್ಲಿ ಋತುಮತಿಯಾದ ಬ್ರಾಹ್ಮಣ ಕನ್ಯೆಯೋರ್ವಳನ್ನು ವಿಪ್ರರಾರೂ, ಅವಳು ಋತುಮತಿಯಾಗಿ ಬಿಟ್ಟಿದ್ದಾಳೆ ಎಂಬ ಕಾರಣದಿಂದ ವಿವಾಹವಾಗದ್ದರಿಂದ ಅವಳ ಕಣ್ಣಿಗೆ ಬಟ್ಟೆ ಕಟ್ಟಿ ಕಾಡಿಗೆ ಬಿಟ್ಟರು. ಆಕೆಯನ್ನು ಕಾಡಿನಲ್ಲಿ ಕುರಿಪಾಲನೆ ಮಾಡುತ್ತಿದ್ದ ಕುರುಬನೋರ್ವನು ರಕ್ಷಿಸಿದನು. ಆಕೆಗೆ ಆತ ವಸತಿ ಕಲ್ಪಿಸಿದನು. ಆಗ ಆತನಲ್ಲಿ ಆ ಬ್ರಾಹ್ಮಣ ಕನ್ಯೆ ಅನುರಕ್ತಳಾದಳು. ಹೀಗೆ ಬ್ರಾಹ್ಮಣ ಕನ್ಯೆ ಮತ್ತು ಕುರುಬನೋರ್ವನ ದಾಂಪತ್ಯದಲ್ಲಿ ಜನಸಿದವರೇ ಈ ಹೆಗ್ಗಡೆಗಳು. ಕುರುಬ ತಂದೆಗೆ ಬ್ರಾಹ್ಮಣ ಕನ್ಯೆಯು ಎರಡನೆಯ ಪತ್ನಿಯಾದಳು. ಶಿವನಿಗೆ ಗಂಗೆಯಿದ್ದಂತೆ.

ಈ ಜನಪದ ಕತೆಯ ಪ್ರಕಾರ ಮೂಲಪುರುಷನ ಮೊದಲ ದಾಂಪತ್ಯದಲ್ಲಿ ಜನಿಸಿದವರು ಸೋಮವಾರದ ಕುರುಬರು. ಈತನ ಎರಡನೆಯ ದಾಂಪತ್ಯದಲ್ಲಿ ಬ್ರಾಹ್ಮಣ ಪತ್ನಿಯಲ್ಲಿ ಜನಿಸಿದ ಮಕ್ಕಳು ಗುರುವಾರದ ಕುರುಬರು ಎಂದು ಕರೆಯಲ್ಪಟ್ಟರು. ಇಲ್ಲಿ ವರ್ಗೀಕರಣವು ಸೋಮವಾರ ಮತ್ತು ಗುರುವಾರವೆಂದು ದಿನದ ಹೆಸರಿನ ಪ್ರಕಾರ ನಡೆದಿದೆ. ಇದರರ್ಥ ಕುರುಬರ ಕುಲದೈವವಾದ ಶ್ರೀ ಬೀರೇಶ್ವರನನ್ನು ಪೂಜಿಸಲು ಮೊದಲ ಪತ್ನಿ ಮಕ್ಕಳಿಗೆ ಸೋಮವಾರವನ್ನು ಮತ್ತು ಎರಡನೆಯ ಪತ್ನಿ ಬ್ರಾಹ್ಮಣ ಕನ್ಯೆಯಲ್ಲಿ ಜನಿಸಿದ ಮಕ್ಕಳಿಗೆ ಗುರುವಾರವನ್ನು ಮೂಲಪುರುಷನು ಗೊತ್ತುಪಡಿಸಿದನು. ಹೀಗೆ ಒಂದೇ ತಂದೆಯಿಂದ ಆದರೆ ಕುರುಬ ಮತ್ತು ಬ್ರಾಹ್ಮಣ ಜಾತಿಗಳ ತಾಯಂದಿರ ಗರ್ಭದಲ್ಲಿ ಜನಿಸಿದ ಮಕ್ಕಳೇ ಮುಂದೆ ಹಾಲುಮತದವರೆಂದು ಬೆಳೆದು ಎಲ್ಲೆಡೆ ವಾಸಿಸಿದರು. ಹೀಗೆ ಈ ಜನಪದ ಕಥೆ ಮುಕ್ತಾಯವಾಗುತ್ತದೆ.

ಈ ಮೇಲ್ಕಂಡ ಜನಪದ ಕಥೆ ಒಂದು ನಂಬಿಕೆಯನ್ನು ಹುಟ್ಟುಹಾಕಿತು. ಅದೇ ಸೋಮವಾರ ಮತ್ತು ಗುರುವಾರದ ಕುರುಬರು ಪರಸ್ಪರ ಅಣ್ಣ ತಮ್ಮಂದಿರು ಎನ್ನುವುದಾಗಿದೆ. ಈ ಕಾರಣದಿಂದಾಗಿ ತೀರಾ ಇತ್ತೀಚಿನವರಿಗೆ ಈ ಸೋಮವಾರದ ಮತ್ತು ಗುರುವಾರದ ಕುರುಬರ ನಡುವೆ ವೈವಾಹಿಕ ಸಂಬಂಧಗಳನ್ನು ನಿಷೇಧಿಸಲಾಗಿತ್ತು. ಏಕೆಂದರೆ ಹೆಗ್ಗಡೆಗಳು ಸೋಮವಾರ ಮತ್ತು ಗುರುವಾರದ ಕುರುಬರು ಅಣ್ಣ ತಮ್ಮಂದಿರೆಂದು ನಂಬಲಾಗಿತ್ತು. ಈ ನಂಬಿಕೆ ಶಿಕ್ಷಣ ಪ್ರಸರಣ ಹೆಚ್ಚಿದಂತೆ ಸಡಿಲವಾಗುತ್ತಿದೆ.

ಜೀವನ

ಹೆಗ್ಗಡೆಗಳ ಸಾಮಾಜಿಕ ಜೀವನವು ಇತರೆ ಕುರುಬರನ್ನು ಬಹುಮಟ್ಟಿಗೆ ಮತ್ತು ಒಕ್ಕಲಿಗ ಜನಾಂಗವನ್ನು ಸಾಕಷ್ಟು ಮಟ್ಟಿಗೆ ಹೋಲುವುದು. ಆಹಾರ ಪದ್ಧತಿಗಳು, ವಿವಾಹ ಸಂಬಂಧಗಳು ಜನನ, ಮರಣ ಆಚಾರಗಳು, ಋತುಮತಿಯಾಗುವಿಕೆ, ಶೋಬಾನ ಆಚರಣೆ ಮುಂತಾದವುಗಳಲ್ಲಿನ ವ್ಯತ್ಯಾಸಗಳು, ದೇವರು ದೇವತೆಗಳ ನಂಬಿಕೆ ವ್ಯತ್ಯಾಸಗಳು ಯಾವುದೇ ಜಾತಿ ಜನಾಂಗಗಳ ನಡುವಣ ವ್ಯತ್ಯಾಸಗಳನ್ನು ಅಥವಾ ಅಂತರಗಳನ್ನು ಅಳೆಯುವ ಮಾನದಂಡಗಳಾಗಿವೆ.

ಹೆಗ್ಗಡೆಗಳಿಗೆ ಕುರುಬರೊಡೆಯರು (ಬೀರೇದೇವರ ಪೂಜಾರಿಗಳು) ಪುರೋಹಿತರು. ಹೆಗ್ಗಡೆಗಳು ತಮ್ಮ ಎಲ್ಲಾ ಶುಭ ಮತ್ತು ದುರಂತ ಕಾರ್ಯಗಳನ್ನು ಒಡೆಯರುಗಳ ನೇತೃತ್ವದಲ್ಲಿ ಮಾಡುತ್ತಾರೆ.

ಜೀವನದ ಇತರೆ ಆಚರಣೆಗಳು ಮುಖ್ಯವಾಹಿನಿ ಕುರುಬರಂತೆಯೇ ಇವೆ. ಈ ಅರ್ಥದಲ್ಲಿ ಹೆಗ್ಗಡೆಗಳಿಗೂ ಮತ್ತು ಇತರೆ ಕುರುಬರಿಗೂ ಹೆಚ್ಚು ವ್ಯತ್ಯಾಸಗಳಿಲ್ಲ. ಹೆಗ್ಗಡೆಗಳು ಕೂಡಾ ಉಣ್ಣೆ ಕಂಕಣದವರು. ರೇವಣಸಿದ್ಧ ಮತ್ತು ಬೀರೇಶ್ವರನನ್ನು ಪೂಜಿಸುವವರು. ಹೀಗಾಗಿ ಹೆಗ್ಗಡೆಗಳು ಕೂಡಾ ಹಳೆಯ ಕುರುಬರೇ.

ಹೆಗ್ಗಡೆಗಳಿಗೂ ಮತ್ತು ಇತರೆ ಕುರುಬರಿಗೂ (ಮುಳ್ಳುಕುರುಬರು), ಊರಕುರುಬರು (ಸೋಮವಾರದವರು ಮತ್ತು ರವಿವಾರದವರು), ಕಾಡು ಕುರುಬರು, ಜೇನು ಕುರುಬರು, ಬೆಟ್ಟ ಕುರುಬರು ಒಂದು ಅತ್ಯಂತ ಮಹತ್ವದ ವ್ಯತ್ಯಾಸವಿದೆ. ಅದೇನೆಂದರೆ ಹೆಗ್ಗಡೆಗಳು- ಗುರುವಾದ ಕುರುಬರು ಕೋಳಿ ತಿನ್ನುವುದಿಲ್ಲ. ಹೆಗ್ಗಡೆಗಳು-ಕುರಿ, ಮೇಕೆ ಮಾಂಸ ಮತ್ತು ಮೀನು ತಿನ್ನುವರು. ಮೀನನ್ನು ಅಪರೂಪಕ್ಕಷ್ಟೇ ತಿನ್ನುವರು. ಹೆಗ್ಗಡೆಗಳು ಕೋಳಿ ಮುಟ್ಟಿಸಿಕೊಂಡರೆ ಸ್ನಾನ ಮಾಡಬೇಕು. ಕೋಳಿಯೆಂದು ಹೆಗ್ಗಡೆಗಳ ಮೇಲೆ ಹಾರಲಿ ಅಥವಾ ಹೆಗ್ಗಡೆಯೇ ಕೋಳಿಯನ್ನು ಮುಟ್ಟಲಿ ಆಗ ಹೆಗ್ಗಡೆಗೆ ಮೈಲಿಗೆ ಆಗುತ್ತದೆ. ಪ್ರಾಯಶ್ಚಿತ್ತವೆಂಬಂತೆ ಮೈಲಿಗೆಯಾದ ಹೆಗ್ಗಡೆ ಸ್ನಾನ ಮಾಡಿ ಸ್ವಚ್ಛವಾದ ಹೊಸ ವಸ್ತ್ರವನ್ನು ಧರಿಸಿ ಶಿವಪೂಜೆ ಮಾಡಿ ವಿಭೂತಿ ಧರಿಸಿದರೆ ಮೈಲಿಗೆ ಕಳೆದುಕೊಂಡಂತೆ!

ಭಾರತದಲ್ಲಿ ಎಲ್ಲಾ ಜಾತಿಗಳಿಗೂ ಪಾವಿತ್ರ್ಯತೆ ಮತ್ತು ಮೈಲಿಗೆ ಹುಚ್ಚು ಹಿಡಿದಿದೆ. ಹೆಚ್ಚು ಧಾರ್ಮಿಕ ಆಚಾರಗಳನ್ನು (Rituals) ಅನುಸರಿಸಿದರೆ, ಕಡಿಮೆ ಮಾಂಸಾಹಾರಿಗಳಾದರೆ, ಅಥವಾ ಸಂಪೂರ್ಣವಾಗಿ ಶಾಖಾಹಾರಿಗಳಾದರೆ ಅವರು ಹೆಚ್ಚು ಪವಿತ್ರರಾದಂತೆ, ಎಂದು ನಂಬಲಾಗುವುದು, ಹೀಗೆ ಹೆಚ್ಚು ಬ್ರಾಹ್ಮಣೀಕರಣಕ್ಕೊಳಗಾದವರು ಸಾಮಾಜಿಕವಾಗಿ ಉಚ್ಛ ವರ್ಣಗಳವರೆಗೆ ಸ್ವಲ್ಪಮಟ್ಟಿಗೆ ಸ್ವೀಕಾರಾರ್ಹವಾಗುವರು. ಹೀಗೆ ಕೋಳಿ ತಿನ್ನದ, ಕೋಳಿಗಳ ಬಳಿಗೂ ಸುಳಿಯದ ಹೆಗ್ಗಡೆಗಳು ತಾವು ಇತರೆಲ್ಲಾ ಕುರುಬರಿಂತ ಶ್ರೇಷ್ಠರೆಂದೆ ನಂಬಿದ್ದಾರೆ.

ಧಾರ್ಮಿಕ ಮತ್ತು ಸಾಂಸ್ಕೃತಿಕ ಜೀವನ

ಹೆಗ್ಗಡೆಗಳು ಶೈವರು. ಇವರ ಗಂಡು ದೇವತೆಗಳು ರೇವಣಸಿದ್ಧ ಮತ್ತು ಬೀರೇಶ್ವರ, ಹೆಣ್ಣು ದೇವತೆಮಸಣಮ್ಮ. ಇತ್ತೀಚೆಗೆ ಹೆಗ್ಗಡೆಗಳು ನಗರೀಕರಣ ಮತ್ತು ಆಧುನಿಕ ಶಿಕ್ಷಣಕ್ಕೆ ತೆರೆದುಕೊಂಡಂತೆ ಬಹುದೇವತಾರಾಧನೆಯನ್ನು ಸ್ವೀಕರಿಸುತ್ತಿದ್ದಾರೆ. ಆದರೆ ಹೆಗ್ಗಡೆಗಳ ಕುಲದೇವರು ಶ್ರೀ ಬೀರೇಶ್ವರ.

ಹೆಗ್ಗಡೆಗಳ ಹೆಣ್ಣು ದೇವತೆ ಮಸಣಮ್ಮ-ಅಂದರೆ ಮಹಾರಾಷ್ಟ್ರದ ಮಹಾಲಸ್ಸಮ್ಮ- ಅಂದರೆ ಪಾರ್ವತಿ, ಶಕ್ತಿ ಅಥವಾ ಚಾಮುಂಡೇಶ್ವರಿ ಎಂದರ್ಥ. ಮಸಣಮ್ಮನಿಗೆ ಚೆನ್ನಪಟ್ಟಣ ತಾಲ್ಲೂಕಿನ ರಾಮನಗರ ಜಿಲ್ಲೆ ಹೊಸೂರುದೊಡ್ಡಿ ಮತ್ತು ಮುದುಗೆರೆ ಗ್ರಾಮಗಳಲ್ಲಿ ಪ್ರತ್ಯೇಕ ದೇವಾಲಯಗಳಿವೆ. ಈ ದೇವಾಲಯಗಳಲ್ಲಿ ಕರಿಕಂಬಳಿ ಗದ್ದಿಗೆ ಹಾಕಿ ಕಳಸವನ್ನು ಪೂಜಿಸುವರು. ಕಳಸವು ತಾಮ್ರದ ಚೊಂಬಿಗೆ ಪವಿತ್ರ ಜಲ ತುಂಬಿ ಒಂದು ತೆಂಗಿನಕಾಯಿಗೆ ಅರಿಶಿನ ಕುಂಕುಮವಿರಿಸಿ, ವೀಳ್ಯದೆಲೆಯನ್ನು ಕಮಲದಾಕಾರದಲ್ಲಿ ಚೊಂಬಿಗೆ ಜೋಡಿಸಿ, ಹೂ ಇಟ್ಟು ಸಿಂಗರಿಸಲ್ಪಟ್ಟಿರುವುದು. ಮಸಣಮ್ಮನ ಪೂಜಾರಿ ಸರ್ವೇಸಾಮಾನ್ಯವಾಗಿ ಶಾಖಾಹಾರಿ, ಈ ಮಸಣಮ್ಮನಿಗೆ ದೇವಾಲಯಗಳು ಕಡಿಮೆ.

ಹೆಗ್ಗಡೆಗಳು ಶ್ರೀ ಬೀರೇಶ್ವರ ಭಕ್ತರು. ಅವರು ತಮ್ಮ ಗಂಡು ದೇವತೆಯನ್ನು ಶ್ರೀ ಬೀರಪ್ಪ, ಶ್ರೀ ಬೀರಲಿಂಗ, ಶ್ರೀ ಬೀರಲಿಂಗೇಶ್ವರ, ಶ್ರೀ ಕೊಂಡಣ್ಣ, ಶ್ರೀ ಕೆಂಗಣ್ಣಸ್ವಾಮಿ ಎಂದೆಲ್ಲಾ ಕರೆಯುವರು. ಬೀರೇದೇವರನ್ನು ಕೆಲವು ಶಾಸನಗಳಲ್ಲಿ (೧೨ ರಿಂದ ೧೬ನೆಯ ಶತಮಾನಕ್ಕೆ ಸೇರಿದವು) ಬೀರಭದ್ರನೆಂದು ಕರೆಯಲಾಗಿದೆ. ಈ ಬೀರಭದ್ರನು ಮುಂದೆ ವೀರಭದ್ರನಾದನು. ಈತ ಶಿವನ ಪರಿವಾರದೇವತೆ. ಹೀಗೆ ಅನೇಕ ಊರುಗಳಲ್ಲಿ ಬೀರಭದ್ರನ ದೇವಸ್ಥಾನಗಳು ವೀರಶೈವರ ಪ್ರಾಬಲ್ಯ-ಮತಾಂತರ ನಡೆದಂತೆ-ಬೆಳೆದಂತೆ, ವೀರಭದ್ರೇಶ್ವರ ಅಥವಾ ಮಲ್ಲಿಕಾರ್ಜುನಸ್ವಾಮಿ ದೇವಸ್ಥಾನಗಳಾಗಿ ಪರಿವರ್ತನೆಗೊಂಡವೆಂದು ಹೆಗ್ಗಡೆಗಳು ನಂಬುತ್ತಾರೆ.

ಹೆಗ್ಗಡೆಗಳಿಗೆ ಸೇರಿದ ಏಳು ಬೀರೇದೇವರ ದೇವಸ್ಥಾನಗಳಿವೆ. ಅವುಗಳಾವುವೆಂದರೆ ಚೆನ್ನಪಟ್ಟಣ ತಾಲ್ಲೂಕಿನ ಶೆಟ್ಟಿಹಳ್ಳಿ-ಹೊಸೂರು ದೊಡ್ಡಿಯಲ್ಲಿರುವ ಶ್ರೀ ದೊಡ್ಡ ಬೀರೇಶ್ವರ, ಚೆನ್ನಪಟ್ಟಣ ತಾಲ್ಲೂಕಿನ, ಅಬ್ಬೂರಿನಲ್ಲಿರುವ ಹೆಬ್ಬುಲಿ ಗವಿಬೀರೇಶ್ವರ (ಇಂದು ಈ ಊರಿನಲ್ಲಿ ಸಂಪೂರ್ಣವಾಗಿ ಒಕ್ಕಲಿಗರಿದ್ದಾರೆ. ಈ ಒಕ್ಕಲಿಗರೇ ದೇವಸ್ಥಾನದ ಆಡಳಿತ ಮಂಡಳಿಯಲ್ಲಿದ್ದಾರೆ. ಇಲ್ಲಿ ಅರ್ಚಕರು ಮಾತ್ರವೇ ಕುರುಬರೊಡೆಯರು. ಇವರು ಸಮೀಪದ ಮುಂಕುಂದ ಗ್ರಾಮದವರು. ಈ ಹಳ್ಳಿಯೇ ಪ್ರಾಚೀನ ಕಾಲದಲ್ಲಿ ಗಂಗರಸರ ಪ್ರಾದೇಶಿಕ ರಾಜಧಾನಿ ಆಗಿತ್ತು. ಹೊಸಗೆರೆ ಶ್ರೀ ಬೀರೇಶ್ವರ (ಕೆಂಡಗಣ್ಣ ಸ್ವಾಮಿ) ಕೆರೆಗೋಡು ಶ್ರೀ ಬೀರೇಶ್ವರ (ಕೋಡಿ ದೊಡ್ಡಿ) ಸಾತನೂರು ಶ್ರೀ ಬೀರೇಶ್ವರ ಇಲ್ಲಿ ಹಳೆಗುಡಿ ಮತ್ತು ಹೊಸಗುಡಿ ಎಂಬ ಎರಡು ಬೀರೇಶ್ವರ ದೇವಸ್ಥಾನಗಳಿವೆ. ಈ ಪೈಕಿ ಹೊಸಗುಡಿ ಕಟ್ಟಲು ಸ್ಥಳೀಯ ಈಡಿಗ ಗೌಡರು ಹಣಕಾಸು ನೆರವು ನೀಡಿದ್ದಾರೆ. ಮತ್ತೊಂದು ಬೀರೇಶ್ವರ ದೇವಸ್ಥಾನವು ಮದ್ದೂರು ತಾಲ್ಲೂಕಿನ ಆಲೂರು ಗ್ರಾಮದಲ್ಲಿದೆ. ಈ ಆಲೂರು ಶಿಂಷಾ ನದಿ ದಂಡೆಯಲ್ಲಿದೆ. ಸಾತನೂರು, ಕೆರಗೋಡು ಮತ್ತು ಆಲೂರಿನ ಬೀರೇದೇವರ ದೇವಸ್ಥಾನಗಳು ಮಂಡ್ಯ ಮತ್ತು ಮದ್ದೂರು ತಾಲ್ಲೂಕುಗಳಲ್ಲಿವೆ. ಬೆಸಗರಹಳ್ಳಿ ಸಮೀಪವಿರುವ ಮಹಿರ್ನವಿದೊಡ್ಡಿಯ ಶ್ರೀ ಬೀರೇದೇವರು ಇನ್ನೊಂದು ಗಡಿ ಆಗಿದೆ.

ಹೆಗ್ಗಡೆಗಳ ಜನಾಂಗದ ಎಲ್ಲಾ ಏಳು ಗಡಿಗಳ ಬೀರೇದೇವರ ದೇವಸ್ಥಾನಗಳಿಗೂ ೧೦ ರಿಂದ ೪೦ ಎಕರೆವರೆಗೆ ಭೂಮಿಯನ್ನು ನಾಲ್ಕನೆಯ ಕೃಷ್ಣರಾಜ ಒಡೆಯರ್ ಅವರು ದಾನವಾಗಿ ನೀಡಿದ್ದಾರೆ. ಈ ಭೂಮಿಯನ್ನು ಇಂದಿನವರೆಗೂ ಬೀರೇದೇವರ ದೇವಸ್ಥಾನಗಳ ಯಜಮಾನರುಗಳ ಸಮಿತಿಯು ಸಂರಕ್ಷಿಸುತ್ತ ಬಂದಿದೆ. ಈ ಭೂಮಿಯಲ್ಲಿ ಕೃಷಿ ಕೈಗೊಳ್ಳದ ಮೂಲಕ ದೇವಸ್ಥಾನಗಳಿಗೆ ಆದಾಯ ಹುಟ್ಟುವಳಿ ತರಬಹುದು. ತೀರಾ ಇತ್ತೀಚಿನವರೆಗೂ ಬೀರೇದೇವರ ದೇವಸ್ಥಾನಗಳಲ್ಲಿ ಹುಂಡಿ ಇಡುತ್ತಿರಲಿಲ್ಲ. ಈಗ ಒಂದೆಡರು ಬೀರೇದೇವರ ದೇವಸ್ಥಾನಗಳಲ್ಲಿ ಭಕ್ತರಿಂದ ಕಾಣಿಕೆ ಸಂಗ್ರಹಿಸಲು ಹುಂಡಿಗಳನ್ನು ಇಡಲಾಗಿದೆ. ಆದರೆ ಕಾಣಿಕೆ ಸಂಗ್ರಹವು ದೊಡ್ಡ ಮೊತ್ತವೇನೂ ಆಗುತ್ತಿಲ್ಲ. ಏಕೆಂದರೆ ಮುಗ್ಧ ಶಿವನ ಭಕ್ತರು ಹೆಗ್ಗಡೆಗಳು ಬಹುತೇಕ ಆರ್ಥಿಕವಾಗಿ ಬಡವರು ಅತ್ಯಂತ ಹಿಂದುಳಿದವರು. ಆಗಾಗ್ಗೆ ಬೀರೇದೇವರ ದೇವಸ್ಥಾನಗಳ ನಿರ್ವಹಣೆಗೆಂದು ಪ್ರತಿವರ್ಷ ಕಾಣಿಕೆ ಸಂಗ್ರಹಿಸುವ ಪರಿಪಾಠ ಹೆಗ್ಗಡೆಗಳಲ್ಲಿಲ್ಲ. ಬದಲಾಗಿ ಹತ್ತು-ಇಪ್ಪತ್ತು ವರ್ಷಕ್ಕೆ ನಡೆಯುವ ಬೀರೇದೇವರ ಜಾತ್ರಗಳಿಗೆ, ದೇವಸ್ಥಾನದ ರಿಪೇರಿ ಮತ್ತು ಪುನರ್‌ನಿರ್ಮಾಣದ ಕಾರ್ಯಗಳಿಗಾಗಿ, ಆಯಾಯ ಸಂದರ್ಭಗಳಲ್ಲಷ್ಟೇ ಕಾಣಿಕೆಯನ್ನು ಹಾಲುಮತ ಹೆಗ್ಗಡೆಗಳಿಂದ ಮತ್ತು ಇತರೆ ಜನಾಂಗಗಳಿಂದಲೂ ಸಂಗ್ರಹಿಸಲಾಗುತ್ತದೆ.

ಮಂಡ್ಯ ಮತ್ತು ರಾಮನಗರ ಜಿಲ್ಲೆಗಳ ಶ್ರೀ ಬೀರೇದೇವರ ದೇವಾಲಯಗಳಿಗೆ ಹಳ್ಳಿಗಳ ಒಕ್ಕಲಿಗರು, ಈಡಿಗರು, ಅಗಸರು, ಕುಂಬಾರರು ಮತ್ತು ದಲಿತರು ಭಕ್ತರಾಗಿರುವರು. ಈ ಪ್ರದೇಶದಲ್ಲಿರುವ ಬೀರೇದೇವರ ದೇವಸ್ಥಾನಗಳ ನಿರ್ಮಾಣಕ್ಕೆ ಬೇರೆ ಜನಾಂಗಗಳು ನೆರವಾಗಿರುವುದರಿಂದ ಒಕ್ಕಲಿಗರಿಗೆ ಕೆಲವರಿಗೆ ದೇವಸ್ಥಾನಗಳ ಆಡಳಿತ ಮಂಡಳಿಗಳಲ್ಲಿ ಪ್ರಾತಿನಿಧ್ಯ ನೀಡಲಾಗಿದೆ. ಉಳಿದವರಿಗೆ ಮಹಾಮಂಗಳಾರತಿ ಸಮಯದಲ್ಲಿ ಮೊತ್ತಮೊದಲಿಗೆ ಮಂಗಳಾರತಿ, ಗಂಧ, ತೀರ್ಥ ಪ್ರಸಾರ ಸ್ವೀಕರಿಸುವ ವಿಶೇಷ ಹಕ್ಕು ನೀಡಲಾಗಿದೆ. ಈ ಹೊಂದಾಣಿಕೆಯು ೩೦೦-೪೦೦ ವರ್ಷಗಳಿಂದಲೂ ನಡೆದು ಬಂದಿದೆಯೆಂದು ಹಿರಿಯರು ಹೇಳುವರು. ಆದರೆ ಕೆಲವು ಬೀರೇದೇವರ ದೇವಸ್ಥಾನಗಳಲ್ಲಿ ಹೆಗ್ಗಡೆಗಳ ಯಜಮಾನರು ಮತ್ತು ಒಕ್ಕಲಿಗ ಯಜಮಾನರ ನಡುವೆ ಮೇಲಾಟವೇರ್ಪಟ್ಟು ವ್ಯಾಜ್ಯಗಳು ನಡೆದಿವೆ. ಕೊನೆಗೆ ಬೀರೇದೇವರ ದೇವಸ್ಥಾನಗಳು ಹಾಲುಮತ ಕುರುಬ ಹೆಗ್ಗಡೆಗಳಿಗೆ ಸೇರಿದ್ದೆಂದು ನ್ಯಾಯಾಲಯಗಳು ತೀರ್ಪು ನೀಡಿವೆ. ಇದಕ್ಕೆ ಶೆಟ್ಟಿಹಳ್ಳಿ-ಹೊಸೂರು ದೊಡ್ಡಿಯ ಶ್ರೀ ದೊಡ್ಡ ಬೀರೇಶ್ವರ ದೇವಸ್ಥಾನ ಮತ್ತು ಮದ್ದೂರು ತಾಲ್ಲೂಕಿನ ಹೊಸ್ಕರೆ ಗ್ರಾಮದ ಶ್ರೀ ಬೀರೇಶ್ವರ ದೇವಸ್ಥಾನದ ದೃಷ್ಟಾಂತಗಳಿವೆ.

ಇತ್ತೀಚೆಗೆ ತಮ್ಮ ಬೀರೇದೇವರ ದೇವಸ್ಥಾನಗಳನ್ನು ಹೆಚ್ಚು Mass Appeal ಇರುವಂತೆ ರೂಪಿಸುವ ಪ್ರಯತ್ನ ನಡೆದಿದೆ. ಇದಕ್ಕೂ ಶೆಟ್ಟಿಹಳ್ಳಿ-ಹೊಸೂರು ದೊಡ್ಡಿಯ ಶ್ರೀ ದೊಡ್ಡ ಬೀರೇಶ್ವರ ದೇವಸ್ಥಾನದಲ್ಲಿ ನಾಲ್ಕು ಅಡಿಗಳ ಎತ್ತರದ ಗಣಪತಿ ಮತ್ತು ಪಾರ್ವತಿ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗಿದೆ. ಈ ವಿಗ್ರಹಗಳು ಒಕ್ಕಲಿಗ ಜನಾಂಗದ ಭಕ್ತರು ಪ್ರಾಯೋಜಿಸಿದ್ದಾರೆ.

ಹೆಗ್ಗಡೆಗಳ ಬೀರೇದೇವರ ದೇವಸ್ಥಾನಗಳಲ್ಲಿ ಯಾವುದೇ ಧಾರ್ಮಿಕ ಆಚರಣೆಯು ಇದುವರೆಗೂ, ವ್ಯಾಪಾರೀಕರಣಕ್ಕೊಳಗಾಗಿಲ್ಲ. ನೇರವಾದ ಸರಳ ಪೂಜಾ ವಿಧಾನಗಳಿವೆ. ಬೀರೇದೇವರಾಗಲಿ, ಅದರ ಪೂಜಾರಿಗಳಾದ ಕುರುಬರೊಡೆಯರಾಗಲಿ ಬ್ರಾಹ್ಮಣೀಕರಣಕ್ಕೊಳಪಟ್ಟಿಲ್ಲ. ಹೀಗಾಗಿ ವಿವಿಧ ತೆರನಾದ ಅರ್ಚನೆಗಳಿಲ್ಲ. ಭಕ್ತರಿಗೆ ಶುಲ್ಕಗಳ ಕಾಟವಿಲ್ಲ. ಬೀರೇದೇವರ ದೇವಸ್ಥಾನಗಳಿಗೆ ಆದಾಯವಿಲ್ಲ. ಭಕ್ತರು ಸರ್ವೇ ಸಾಮಾನ್ಯವಾಗಿ ಬೆಲ್ಲ, ಅಕ್ಕಿ, ತೆಂಗಿನ ಕಾಯಿಯನ್ನು ಕಾಣಿಕೆಯಾಗಿ ದೇವರಿಗೆ ಅರ್ಪಿಸುತ್ತಾರೆ. ಈ ಕಾಣಿಕೆ ೧/೩ನೆಯ ಭಾಗವನ್ನು ಬಳಸಿ ಪ್ರಸಾದವನ್ನು ಒಡೆಯರುಗಳು ಸಿದ್ಧಪಡಿಸುತ್ತಾರೆ. ಈ ಪ್ರಸಾದವನ್ನು ಭಕ್ತರಿಗೂ ವಿತರಿಸಲಾಗುವುದು. ಪ್ರತಿ ಬೀರೇದೇವರ ದೇವಸ್ಥಾನದಲ್ಲೂ ಒಂದು ಅಡುಗೆ ಮನೆ ಮತ್ತು ಕುಡಿಯುವ ನೀರಿಗೆಂದು ಭಾವಿಯನ್ನು ನಿರ್ಮಿಸಲಾಗಿದೆ. ಬೀರೇದೇವರ ದೇವಸ್ಥಾನಗಳನ್ನು ದ್ರಾವಿಡ ಶೈಲಿಯಲ್ಲಿ ರಚಿಸಲಾಗಿದೆ. ಗರ್ಭಗುಡಿಯ ನಂತರ ಸುಖನಾಸಿಯಿದೆ. ಇಲ್ಲಿ ದೊಡ್ಡದಾದ ಡೊಳ್ಳು ಇದೆ. ಅದನ್ನು ಮಹಾಮಂಗಳಾರತಿ ಸಮಯದಲ್ಲಿ ಬಾರಿಸಲಾಗುವುದು. ಭಕ್ತರು ಸುಖನಾಸಿಯಲ್ಲಿ ನಿಂತು ದೇವರು ದರ್ಶನ ಪಡೆಯಬಹುದು. ದೇವಸ್ಥಾನದ ಸುತ್ತ ದೇಗುಲದ ಗೋಡೆಗಳ ಮೇಲೆ ಯಾವುದೇ ಶಿಲ್ಪಗಳಿಲ್ಲ. ಹೊರ ಆವರಣದೊಳಗೆ ಕಲ್ಲಿನ ಮಂಟಪಗಳಿವೆ. ಅದರಲ್ಲಿ ಕೆಲವೊಮ್ಮೆ ಭಕ್ತರು ತಂಗುವರು. ಈ ದೇವಸ್ಥಾನಗಳು ೧೦೦ ವರ್ಷಗಳ ಹಿಂದೆ ತೆಲುಗು ಮತ್ತು ತಮಿಳುನಾಡಿನ ಶಿಲ್ಪಿಗಳು ಮತ್ತು ಕಾರ್ಮಿಕರನ್ನು ಬಳಸಿ ನಿರ್ಮಿಸಲಾಗಿದೆ. ಈ ಕುರಿತು ಗುತ್ತಿಗೆ ಕರಾರಿನ ಪತ್ರಗಳು ದೇವಸ್ಥಾನಗಳ ಹೆಗ್ಗಡೆಗಳಲ್ಲಿ ದೊರಕುತ್ತವೆ.

ರಾಮನಗರ ಪಟ್ಟಣಕ್ಕೆ ೧೦ ಕಿ.ಮೀ. ದೂರದಲ್ಲಿ ಕನಕಪುರದ ಕಡೆಗೆ ರೇವಣಸಿದ್ದೇಶ್ವರ ಬೆಟ್ಟವಿದೆ. ಅಲ್ಲಿ ದೊಡ್ಡಯ್ಯನ-ಅಂದರೆ ರೇವಣಸಿದ್ಧೇಶ್ವರ ದೇವಸ್ಥಾನವಿದೆ. ಇಲ್ಲಿಗೆ ರಾಮನಗರ ಮತ್ತು ಮಂಡ್ಯ ಜಿಲ್ಲೆಗಳ ಹಾಲುಮತ ಹೆಗ್ಗಡೆಗಳು ನಡೆದುಕೊಳ್ಳುವರು. ಈ ರೇವಣಸಿದ್ಧೇಶ್ವರ ದೇವಸ್ಥಾನದಲ್ಲಿ ವೀರಶೈವ ಅರ್ಚಕರಿದ್ದಾರೆ. ಅಲ್ಲೊಂದು ವೀರಶೈವ ಮಠವೂ ಇದೆ. ಈ ಮಠವು ಕುರುಬ ಒಡೆಯರುಗಳಿಂದ –ಪ್ರಾಯಶಃ ರೇವಣಸಿದ್ಧೇಶ್ವರರಿಂದಲೇ ಪ್ರಾರಂಭಿಸಲ್ಪಟ್ಟು-ನೂರಾರು ವರ್ಷಗಳ ಅಂತರದಲ್ಲಿ-ಅವರು ವೀರಶೈವರೊಂದಿಗೆ ಲಿಂಗಧಾರಣೆ ಕಾರಣದಿಂದ ಗುರುತಿಸಿಕೊಂಡರು. ಹೀಗಾಗಿ ಕುರುಬರ ಅನೇಕ ರೇವಣಸಿದ್ದೇಶ್ವರ ಮಠಗಳು ಬಾಳೆಹೊನ್ನೂರಿನ ಪೀಠದಂತೆ ವೀರಶೈವರಿಗೆ ಸೇರಿ ಹೋಗಿವೆ. ಹೆಗ್ಗಡೆಗಳ ಬೀರೇದೇವರ ದೇವಸ್ಥಾನಗಳಿಗೆ ಬಾಳೆಹೊನ್ನೂರಿನ ರೇಣುಕಾಚಾರ್ಯ ಪೀಠದ ಗುರುಗಳು ಭೇಟಿ ಕೊಟ್ಟು ಹಾಲುಮತ ಹೆಗ್ಗಡೆಗಳಿಂದ ಕಾಣಿಕೆ ಸಂಗ್ರಹಿಸುತ್ತಿದ್ದುದುಂಟು. ಈ ಕುರಿತ ದಾಖಲೆಗಳು ಹೊಸೂರು ಶ್ರೀ ದೊಡ್ಡ ಬೀರೇಶ್ವರ ದೇವಸ್ಥಾನದ ಶ್ರೀ ರೇವಣ ಒಡೆಯರ್ ಅವರಲ್ಲಿರುವುದಾಗಿ ತಿಳಿದುಬಂದಿದೆ.

ಶಿಕ್ಷಣ ಮತ್ತು ಆಧುನೀಕರಣ

ತೀರಾ ಇತ್ತೀಚಿನವರೆಗೆ ಹೆಗ್ಗಡೆಗಳು ಬಹುತೇಕವಾಗಿ ಅನಕ್ಷರಸ್ಥರು. ಕಳೆದೆರಡು ದಶಕಗಳಲ್ಲಷ್ಟೇ ಹೆಗ್ಗಡೆಗಳ ಮಕ್ಕಳು ಶಾಲೆಗೆ ಹೋಗುತ್ತಿದ್ದಾರೆ. ಈ ಹೆಗ್ಗಡೆಗಳು-ಅಂದರೆ ಗುರುವಾರದ ಕುರುಬರು-ಶೈಕ್ಷಣಿಕವಾಗಿ ಹಿಂದುಳಿದವರು. ಈ ಕುರಿತ ಕೆಲವು ಮುಖ್ಯಾಂಶಗಳು ಹೀಗಿವೆ:

೧. ಶಾಲೆ ತೊರೆಯುವವರ ಸಂಖ್ಯೆ ಹೆಚ್ಚು. ಈ ಪೈಕಿ ಹೆಣ್ಣು ಮಕ್ಕಳೇ ಅಧಿಕ.

೨. ಉನ್ನತ ಶಿಕ್ಷಣ-ಸಾಮಾನ್ಯ, ವೈದ್ಯಕೀಯ, ಎಂಜಿನಿಯರಿಂಗ್ ಮತ್ತು ಇತರೆ ವೃತ್ತಿಪರ ಶಿಕ್ಷಣ ಪಡೆಯುತ್ತಿರುವವರ ಸಂಖ್ಯೆ ಇರುವರೆಗೂ ಬೆರಳೆಣಿಕೆಯಷ್ಟಿದೆ.

ಗುರುವಾರದ ಕುರುಬರು ಶಿಕ್ಷಣ ಮತ್ತು ಆಧುನಿಕತೆ ಮತ್ತು ನರಗೀಕರಣದ ಕುರಿತು ವಿಶೇಷ ಒಲವನ್ನೇನೂ ಹೊಂದಿಲ್ಲ. ಇವರಲ್ಲಿ ಬಹುಸಂಖ್ಯಾತರು ಸಣ್ಣ ಮತ್ತು ಅತಿ ಸಣ್ಣ ರೈತರು; ಭೂರಹಿತ ಕೃಷಿ ಕಾರ್ಮಿಕರು ಶೈಕ್ಷಣಿಕ ಹಿಂದುಳಿಯುವಿಕೆಯಿಂದಾಗಿ ಸರ್ಕಾರಿ ನೌಕರಿಗಳಲ್ಲಿ ಈ ಹೆಗ್ಗಡೆಗಳ ಪ್ರಾತಿನಿಧ್ಯ ನಗಣ್ಯವೆನ್ನುವಂತಿದೆ. ಹೆಗ್ಗಡೆಗಳು ಆರ್ಥಿಕವಾಗಿ ಕೂಡಾ ಹಿಂದುಳಿದವರೇ. ಹೀಗಾಗಿ ಬಂಡವಾಳದ ಕೊರತೆ ಇದೆ. ಆದ್ದರಿಂದ ಹೆಗ್ಗಡೆಗಳಲ್ಲಿ ವಾಣಿದ್ಯೋದ್ದಿಮೆಗಳ ಮಾಲೀಕರಿಲ್ಲ. ಇತರೆಲ್ಲಾ ಶೂದ್ರಾತಿಶೂದ್ರರಂತೆ ವೃದ್ಧಾಪ್ಯದಲ್ಲಿರುವವರಿಗೆ, ಕಡುಬಡವರಿಗೆ ಸರ್ಕಾರದ ಸಾಮಾಜಿಕ ನೆರವಿನ ಅಗತ್ಯವಿದೆ. ಹೆಗ್ಗಡೆಗಳು ಇಂದು ಕಂಬಳಿ ನೇಯುವುದನ್ನು ತೆರೆದಿದ್ದಾರೆ. ಕುರಿಪಾಲನೆ ಮತ್ತು ಕೃಷಿ ಹೆಗ್ಗಡೆಗಳ ಮುಖ್ಯ ಜೀವ.

ಮಹಿಳಾ ಸ್ಥಾನಮಾನ

ಹೆಗ್ಗಡೆಗಳು ಪಿತೃಪ್ರಧಾನ ಸಾಮಾಜಿಕ ವ್ಯವಸ್ಥೆ ಹೊಂದಿದ್ದಾರೆ. ಆದ್ದರಿಂದ ಹೆಣ್ಣು ಮಕ್ಕಳಿಗೆ ಹೆಗ್ಗಡೆಗಳು ಸಮಾನ ಹಕ್ಕುಗಳನ್ನೇನೂ ನೀಡುವುದಿಲ್ಲ. ಈ ವರ್ಗದ ಹೆಂಗಸರು ಶಿಕ್ಷಣ ವಂಚಿತರು. ಬೆರಳೆಣಿಕೆಯಷ್ಟು ಪದವೀಧರೆಯರು ಕಳೆದ ದಶಕದಿಂದ ಕಾಣಸಿಗುವರು. ಮೀಸಲಾತಿಯು ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಸ್ವಲ್ಪಮಟ್ಟಿಗೆ ನೆರವಾಗಿದೆ.

ಇತರೆ ಗ್ರಾಮೀಣ ಜಾತಿಗಳ ಹೆಂಗಸರಂತೆ ಹೆಗ್ಗಡೆಗಳ ಹೆಂಗಸರೂ ತಮ್ಮದೇ ಮಹಿಳಾ ಸ್ವ-ಸಹಾಯ ಸಂಘಗಳನ್ನು ರಚಿಸಿಕೊಳ್ಳುತ್ತಿದ್ದಾರೆ. ಬಡ ಮಹಿಳೆಯರು ಬಡ ಕೃಷಿ ಕಾರ್ಮಿಕರಾಗಿ, ಬೀಡಿ, ಅಗರಬತ್ತಿ ಕೈಗಾರಿಕೆಗಳಲ್ಲಿ, ತರಕಾರಿ, ಹೂ ಮಾರಾಟಗಾರರಾಗಿ ಕೂಡಾ ದುಡಿಯುತ್ತಿದ್ದಾರೆ. ರಾಮನಗರ ಜಿಲ್ಲೆಯಲ್ಲಿ ಕೆಲವು ಹೆಂಗಸರು ಸಿಲ್ಕ್ ಫಿಲೇಚರ್‌ಗಳಲ್ಲೂ ದುಡಿಯುತ್ತಿದ್ದಾರೆ. ಹೆಗ್ಗಡೆಗಳ ಸಮಾಜದಲ್ಲಿ ಮಹಿಳಾ ಸಬಲೀಕರಣಕ್ಕೆ ಪೂರಕವಾದ ವಾತಾವರಣವಿಲ್ಲ. ಹೆಗ್ಗಡೆಗಳದ್ದೊಂದು ಅತ್ಯಂತ ಹಿಂದುಳಿದ ಸಮಾಜವಾಗಿದೆ. ಇವರು ಕುರುಬರೊಳಗೆ ಬಡವರೇ ಸರಿ.