ಹಾಲಿನ ಮೂಲದ ಸಮುದಾಯಗಳು ಹಾಲುಮತವಾಗಿದ್ದರೆ, ನೀರಿನ ಮೂಲಕ ಸಮುದಾಯಗಳು ನೀರುಮತ ಅಥವಾ ಗಂಗಾಮತವಾಗಿರುವವು. ವಿಶ್ವದ ಜೀವಜಗತ್ತು ಬದುಕಿಗಾಗಿ ಹಾಲು ಮತ್ತು ನೀರನ್ನೇ ಅವಲಂಬಿಸಿವೆ. ಹೀಗಾಗಿ ಹಾಲು ಮತ್ತು ನೀರಿನ ಮತಗಳು ವಿಶ್ವಮತಗಳಾಗುವವು. ಇವು ಪ್ರಕೃತಿಜನ್ಯ ಮತಗಳು. ಹಾಲು ಮತ್ತು ನೀರಿಗೆ ಅವಿನಾಭಾವ ಸಂಬಂಧವಿರುವುದು. ಹಾಲನ್ನು ಕಾಯಿಸಿ ನೀರನ್ನು ಹಾಲಿನಿಂದ ಬೇರ್ಪಡಿಸಿದ್ದಾಗ ಹಾಲು ಉಕ್ಕುವುದು. ಅದಕ್ಕೆ ನೀರು ಬೆರೆಸಿದಾಗ ಅದು ಶಾಂತವಾಗುವುದು. ಹಾಲು ನೀರಿನ ಹಿನ್ನೆಲೆಯ ಮತಗಳು ಕರ್ನಾಟಕದಲ್ಲಿ ಕಾಣಸಿಗುವವು. ಅವೇ ಹಾಲುಮತ ಮತ್ತು ಗಂಗಾಮತಗಳು. ಹಾಲುಮತವನ್ನು ಕುರುಬ, ಕುರುಮನ್ಸ, ಕಾಡುಕುರುಬ, ಜೇನುಕುರುಬ, ಕಾಟ್ಟುನಾಯಕನ್, ಗೊಂಡ ಮತ್ತು ರಾಜಗೊಂಡ ಇತ್ಯಾದಿ ಬುಡಕಟ್ಟುಗಳು ಹಾಗೂ ಕುರುಬ ಸಮುದಾಯದ ಕಳ್ಳುಬಳ್ಳಿಯ ಸಮುದಾಯಗಳು ತಮ್ಮ ಮತವೆಂದು ನಂಬಿ ನಡೆದುಕೊಳ್ಳುವವು. ಇದು ಕುರಿ, ಆಡು, ದನ, ಎಮ್ಮೆ ಸಾಕಾಣಿಕೆ ದಾರರ ಮತ. ಕುರುಬ ಜನಾಂಗದ ಮೂಲವೆಂದರೆ ಮಾನಪ ಜನಾಂಗದ ಮೂಲವೆಂದೇ ಹೇಳಬೇಕಾಗುತ್ತದೆ. ಬೇಟೆಗಾರಿಕೆಯಿಂದ ಕವಲೊಡೆದ ಪಶುಪಾಲಕರೇ ಕುರುಬರ ಮೂಲಿಗರು. ಇವರೇ ಹಾಲುಮತದ ಸ್ಥಾಪಕರು.

ಕುರಿ, ಕುರುಬ, ಧನಗರ ಹಟ್ಟಿಕಾರ, ಕುಡಿಒಕ್ಕಲಿಗ, ಸುಮಾಲಿ, ಹಿಡಿಂಬಿ ರಾಕ್ಷಸ, ವೀರಗೊಲ್ಲಾಳ, ಬೀರೇಶ್ವರ, ಉಣ್ಣೆಕಂಕಣ, ಹತ್ತಿಕಂಕಣ, ಕಕ್ಕರ ಕಂಕಣ ಇತ್ಯಾದಿಗಳನ್ನು ಬ್ರಹ್ಮಾಂಡ ಪುರಾಣದಲ್ಲಿ ಪ್ರಸ್ತಾಪಿಸಲಾಗಿದೆ. ಇದರಲ್ಲಿ ಹಳೆಯ ಹಾಗೂ ಹೊಸ ಶಗಳೆಲ್ಲವೂ ಮೇಳೈಸಿಕೊಂಡಿವೆ. ಇಲ್ಲಿಯ ರಾಕ್ಷಸರೆಂದರೆ ಬುಡಕಟ್ಟಿನವರೆಂದರ್ಥ. ಕರ್ನಾಟಕ ರಾಜ್ಯದ ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿರುವ ಹಾಲುಮತ ಹಿನ್ನೆಲೆಯ ಗೊಂಡ, ರಾಜಗೊಂಡ ಮತ್ತು ಕುರುಬ ಬುಡಕಟ್ಟುಗಳ ಪರಿಚಯ ಇಲ್ಲಿದೆ.

. ಗೊಂಡ (GOND)

ಭಾರತದ ಬುಡಕಟ್ಟುಗಳಲ್ಲಿ ಅತ್ಯಧಿಕ ಸಂಖ್ಯೆಯಲ್ಲಿರುವವರೇ ಗೊಂಡರು. ವಿಂಧ್ಯ ಸಾತಪುರ ಪರ್ವತ ಶ್ರೇಣಿಯಿಂದ ಗೋದಾವರಿ ಜಲಾನಯನ ಭೂ ಪ್ರದೇಶದವರೆಗೆ, ಉತ್ತರ ಪ್ರದೇಶ ಮತ್ತು ಬಿಹಾರದಿಂದ ಆಂಧ್ರಪ್ರದೇಶ, ಕರ್ನಾಟಕದವರೆಗೆ ಮತ್ತು ಮಹಾರಾಷ್ಟ್ರದಿಂದ ಓರಿಸ್ಸಾದವರೆಗೆ ಇವರು ಪಸರಿಸಿಕೊಂಡಿದ್ದಾರೆ. ಇವರು ಆಳಿದ ೫೨ ಕೋಟೆಗಳು ಇತಿಹಾಸ ಸಾಕ್ಷಿಯಾಗಿರುವವು. ದ್ರಾವಿಡ ಮೂಲದ ಗೊಂಡಿ ಇವರ ಮಾತೃಭಾಷೆಯಾಗಿರುವುದು. ಅಲ್ಲದೆ ಹಿಂದಿ, ಮರಾಠಿ, ಕನ್ನಡ, ತೆಲುಗು ಇತ್ಯಾದಿ ಪ್ರಾದೇಶಿಕ ಭಾಷೆಗಳನ್ನು ಬಳಸುವರು. ಗೊಂಡವಾನಾ ಇವರ ಹೃದಯ ಸ್ಥಾನವಾಗಿರುವುದು. ಇವರಲ್ಲಿ ೫೦ ಕ್ಕೂ ಹೆಚ್ಚಿನ ಉಪ ಪಂಗಡಗಳಿವೆ. ೨೦೦೧ ರ ಜನಗಣತಿಯ ಪ್ರಕಾರ ಭಾರತದಲ್ಲಿ ಇವರು ಜನಸಂಖ್ಯೆ ೧,೧೩,೪೪,೬೨೯ ಮತ್ತು ಕರ್ನಾಟಕದಲ್ಲಿ ೧,೩೬,೭೦೦ ಇರುವುದಾಗಿ ದಾಖಲಾಗಿದೆ. ಇದರಲ್ಲಿಯೂ ಒಂದು ಪಂಗಡ ಕರ್ನಾಟಕದಲ್ಲಿ  ಹಾಲುಮತದ ಹುಟ್ಟಿಗೆ ಕಾರಣವಾಗಿರುವುದಾಗಿ ಹಾಲುಮತ ಪುರಾಣ ಧ್ವನಿಸುತ್ತದೆ. ಬೀದರಿನ ಮೂಲ ನಿವಾಸಿಗಳು ಗೊಂಡರು. ಇವರು ದ್ರಾವಿಡ ಮೂಲದವರು. ಇವರಿಗೆ ಧನಗರ ಮತ್ತು ಕುರುಬ ಎಂಬ ಹೆಸರುಗಳಿಂದಲೂ ಪರಿಚಯಿಸಲಾಗುವುದು. ಉತ್ತರ ಕನ್ನಡ ಜಿಲ್ಲೆಯ ಗೊಂಡರು ಒಕ್ಕಲಿಗೆ ಸಮುದಾಯಕ್ಕೆ ಹತ್ತಿರದವರಂತೆ ಕಂಡು ಬರುವ ಇನ್ನೊಂದು ಪಂಗಡ.

‘ಗೊಂಡ’ ಶಬ್ದವು ತೆಲುಗು ಭಾಷೆಯ ‘ಕೊಂಡ’ ಎಂಬ ಪದದಿಂದ ಬಂದುದೆಂದು ಭಾಷಾ ವಿಜ್ಞಾನಿಗಳ ಅಭಿಪ್ರಾಯ. ‘ಕೊಂಡ’ ಎಂದರೆ ತೆಲುಗು ಭಾಷೆಯಲ್ಲಿ ಗುಡ್ಡ ಅಥವಾ ಬೆಟ್ಟ (ಪರ್ವತ) ಎಂದು ಅರ್ಥ. ಕಾಲಕ್ರಮೇಣ ‘ಕ’ ಕಾರ ಘೋಷ ಧ್ವನಿಯಾಗಿ ‘ಗ’ ಕಾರವಾಗಿ ‘ಗೊಂಡ’ ಎಂದು ರೂಪಾಂತರ ಹೊಂದಿರಬೇಕೆಂಬುದು ಹಿಸ್ಲೋಪರ ವಾದವಾಗಿದೆ (ರಸೇಲ್ ಆರ್.ವಿ., ೧೯೭೫: ೪೨-೪೩)

ಜನರಲ್ ಕನ್ನಿಂಗ್ ಹ್ಯಾಮರು ‘ಗೊಂಡ’ ಪದವು ‘ಗೌಡ’ ಎಂಬ ಶಬ್ದದಿಂದ ಉತ್ಪನ್ನವಾಗಿ ಅದು ಗೌರ> ಗೋದ> ಕೋದಗಳಾಗಿ ಪರಿವರ್ತನೆ ಹೊಂದಿ ಅನಂತರ ‘ಗೊಂಡ’ ಆಯಿತೆಂದು ಹೇಳುತ್ತಾರೆ. (ನಾಯಕ, ಹಾ.ಮಾ. : ೧೯೭೩: ೫೨೮-೯).

‘ಗೊಂಡ’ ಎಂಬ ಪದವು ‘ಗೋ’ ಮತ್ತು ‘ಅಂಡ’ ಎಂಬ ಎರಡು ಶಬ್ದಗಳಿಂದ ಕೂಡಿದೆ ‘ಗೋ’ ಎಂದರೆ ‘ಭೂಮಿ’ ಮತ್ತು ‘ಅಂಡ’ ಎಂದರೆ ‘ಪುತ್ರ’ ಎಂದರ್ಥ, ‘ಗೊಂಡ ಪದದ ಅರ್ಥ ಭೂಮಿಯ ಪುತ್ರ ಎಂದಾಗುತ್ತದೆ (ವಿಠಲಸಿಂಹ ಧುರ್ವೆ: ೧೯೯೦:೭)

ತಜ್ಞರ ವಾದಗಳಾಗಲಿ ಅಥವಾ ಅಭಿಪ್ರಾಯಗಳಾಗಲಿ ಸತ್ಯವೆಂದು ಅಲ್ಲಗೆಳೆಯುವಂತಿಲ್ಲ. ‘ಗೊಂಡ’ ಪದವು ಮೂಲತಃ ಬೆಟ್ಟ, ಗುಡ್ಡ ಪ್ರದೇಶವಾಚಕವಾಗಿ ನಂತರ ಜನಾಂಗವಾಚಕರಾಗಿರುವುದು ಕಂಡು ಬರುವುದು.

ಮೂಲವಾಗಿ ಗೊಂಡ ಪದದ ಉದಯವು ಕನ್ನಡ ಭಾಷೆಯ ಜನಾಂಗದಿಂದಾಗಿರುವ ಸಾಧ್ಯತೆಗಳಿವೆ ಅದು ‘ಗೋ’ ಮತ್ತು ‘ಅಂಡ’ ಎಂಬ ನುಡಿಗಟ್ಟಿನಿಂದಾಗಿ ಸೃಷ್ಠಿ, ಸ್ಥಿತಿಲಯಗಳ ಪ್ರತೀಕ ಹಾಗೂ ಪ್ರತ್ಯಯವಾಗಿ ಬಳಕೆಯಾಗುವುದು.

ಗೊಂಡ ಪದದ ಒಳಾರ್ಥವನ್ನು ಒಡೆದು ನೋಡಿದಾಗ ಅದರ ಅರ್ಥ ಸ್ಪಷ್ಟವಾಗುವುದು. ಅದರ ಮೂಲ ‘ಗೋ+ಅ’ ಎಂಬೆರಡಕ್ಷರಗಳಿಂದ ಉಂಟಾಗಿರಬಹುದು. ಕನ್ನಡ ನಿಘಂಟುಗಳಲ್ಲಿ ‘ಗೋ’ ಎಂದರೆ ಗೋವು, ಭೂಮಿ, ಬೆಟ್ಟ ಮತ್ತು ‘ಅ’ ಅಂದರೆ ಅಜ (ಆಡು ಅಥವಾ ಮೇಕೆ, ಮೇಷ ಅಥವಾ ಕುರಿ) ಎಂಬರ್ಥಗಳೂ ಇವೆ. ಗೋವು (ದನ)ಗಳ ಪಾಲಕರು ಗೋಪಾಲಕರು ಅಥವಾ ದ(ಧ)ನಗಾರರಾದರೆ; ಅಜ(ಕುರಿ)ಗಳ ಪಾಲಕರು ಅಜಪಾಲಕರು ಅಥವಾ ಕುರಿಗಾರರು ಆಗಿರುವರು. ಕುರಿಗಾರರು, ದ(ಧ)ನಗಾರರು ಬೇರೆಯಲ್ಲ. ಅವರು ಮೂಲತಃ ಪಶುಪಾಲಕರೆಂದರ್ಥ. ‘ಗೋ’ ಎಂದರೆ ‘ಭೂಮಿ’ ಅದರಂತೆ ‘ಕುರು’ ಎಂದರೂ ಭೂವಿಶೇಷ. ಆದುದರಿಂದ ಗೋಪನೆಂದರೆ ಭೂಪತಿ ಕುರು(೦) ಬನೆಂದರೂ ಭೂಪ” (ಜೋಶಿ, ಶಂ. ಬಾ: ೧೯೬೬:೩೧).

‘ಗೋ’ ಎಂದರೆ ‘ಭೂಮಿ’ ಅದು ಗೋಲಾಕಾರವಾಗಿದೆ. ‘ಅ’ ಎಂದರೆ ‘ಆಡು’ ಅಥವಾ ‘ಕುರಿ’ ಅವುಗಳ ಹಿಕ್ಕೆಯು ಗೋಲ(ಅಂಡ) ಆಕಾರವಾಗಿದ್ದು ಭೂಮಿಯ ಪ್ರತಿ ರೂಪವಾಗಿದೆ. ಹೀಗೆ ಗೋ+ ಅಂಡ> ಗೊಂಡ ಎಂದು, ವಿಕಸಿಸಿರಲು ಸಾಧ್ಯತೆಗಳಿವೆ.

‘ಗೊಂಡಾರಣ್ಯ’ ಈ ಪದದಲ್ಲಿ ಭಿನ್ನ ಭಾಷೆಯ ಎರಡು ಶಬ್ದಗಳಿವೆ. ಅವು ಗೊಂಡ ಮತ್ತು ಅರಣ್ಯ. ಒಂದು ದೇಶಿಯ ನುಡಿ. ಇನ್ನೊಂದು ಸಂಸ್ಕೃತ ಪದ, “ಗೊಂಡಾರಣ್ಯ” ಎಂಬೀ ಬಗೆಯ ಪದ. ಪ್ರಯೋಗವು ಇವೆರಡೂ ಜನ ಒಗ್ಗಿಕೊಂಡು ಒಡಗೂಡಿ ಬಾಳತೊಡಗಿದುದರ ಸಂಕೇತವಾಗಿದೆ.

ಗೊಂಡರು ಗೊಂಡಾರಣ್ಯದ ಮೂಲನಿವಾಸಿಗಳು. ಪೃಥ್ವಿಯ ೫ ಖಂಡಗಳಿವೆ ಗೊಂಡ್ವಾನಾ ಖಂಡಗಳೆಂದು ಪರಿಚಯಿಸುವರು. ಅವು:೧. ಏಷ್ಯಾ(ಭಾರತ), ೨. ಆಫ್ರಿಕಾ, ೩. ದಕ್ಷಿಣ ಅಮೇರಿಕ, ೪. ಅಂಟಾಟಿಕಾ ಮತ್ತು ೫. ಆಸ್ಟ್ರೇಲಿಯ. ಗೊಂಡ್ವಾನದ ಆದಿಜನಾಂಗವೂ ಗೊಂಡರು. ಇವರು ಬೇಟೆಗಾರಿಕೆ, ಪಶುಪಾಲನೆಯಿಂದ ನಿಧಾನವಾಗಿ ಕೃಷಿಯತ್ತ ಕೂಡಿಕೊಳ್ಳುತ್ತಿದ್ದಾರೆ.

ಗೊಂಡರ ಹುಟ್ಟಿನ ಬಗ್ಗೆ ಹಲವಾರು ಐತಿಹ್ಯಗಳು, ಪೌರಾಣಿಕ ಮತ್ತು ದಂತಕಥೆಗಳಿವೆ. ಅವುಗಳಲ್ಲೊಂದು ಹೀಗಿದೆ: “ಮುದ್ದುಗೊಂಡ ಮುದ್ದಮ್ಮಳಿಂದ ಗೊಂಡ ಜನಾಂಗ ಹುಟ್ಟುವುದು. ಆದಿಗೊಂಡನು ಮುದ್ದುಗೊಂಡನ ಮಗ. ಆದಿಗೊಂಡನ ಹೆಂಡತಿ ಆದಮ್ಮ. ಅವರ ಪುತ್ರರಾದ ಅಮರಗೊಂಡ, ಶಿವಗೊಂಡ, ಬೆಟ್ಟದ ಬೀರುಗೊಂಡ” (ಚನ್ನಮಲ್ಲಿಕಾರ್ಜುನ:೧೯೫೮: ೩೫೭). ಇವರ ವಂಶಜರೆಗೊಂಡರೆಂದು ಹಾಲ್ಮತ ಪುರಾಣದಲ್ಲಿ ಉಲ್ಲೇಖಗೊಂಡಿದೆ. ಹೀಗೆ ‘ಗೊಂಡ’ ಪದ ಪ್ರತ್ಯಯಗೊಂಡ ಹೆಸರುಗಳುಳ್ಳ ಸಾಂಪ್ರದಾಯಿಕ ಪಶುಪಾಲಕರೇ ‘ಗೊಂಡ’ ಜನಾಂಗವೆಂದು ಸ್ಪಷ್ಟವಾಗುವುದು.

“ಗೊಂಡರು ಬುಡಕಟ್ಟಿನವರು. ಅವರು ಸಾಮಾನ್ಯವಾಗಿ ಬೀದರ್, ಗುಲಬರ್ಗಾ, ರಾಯಚೂರು ಜಿಲ್ಲೆಗಳಲ್ಲಿ ವಾಸಿಸುವರು. ವಾಸ್ತವದಲ್ಲಿ ಅವರು ಆಂಧ್ರಪ್ರದೇಶ, ಮಧ್ಯಪ್ರದೇಶ, ಮಹಾರಾಷ್ಟ್ರ ಹಾಗೂ ಕರ್ನಾಟಕದಲ್ಲಿ ಕಂಡುಬರುವರು. ಇಂದಿಗೂ ಇವರಲ್ಲಿ ಖಡಗೊಂಡ, ಬೀರಗೊಂಡ, ತುಳಜಗೊಂಡ, ಶಿವಗೊಂಡ, ಶಣಗೊಂಡ ಎಂಬೀ ಗೊಂಡ ಪದ ಪ್ರತ್ಯಯಗೊಳ್ಳುವ ಹೆಸರುಗಳು ಕಂಡುಬರುತ್ತವೆ. ಇವರ ಹಲವಾರು ಸಂಪ್ರದಾಯಗಳು ಹಾಗೂ ಹವ್ಯಾಸಗಳು ಕುರುಬ ಸಮುದಾಯಕ್ಕೆ ಹೋಲಿಕೆಯಾಗುತ್ತವೆ” (ಡಾ.ಶಶಿ.ಎಸ್.ಎಸ್. ೧೯೭೮:೬೧). ಗೊಂಡರ ಪೌರಾಣಿಕ ಅಂಶಗಳಿಗೆ ಪ್ರಸಿದ್ಧ ಸಮಾಜಶಾಸ್ತ್ರಜ್ಞ ಡಾ. ಎಸ್.ಎಸ್. ಶಶಿಯವರ ಸಂಶೋಧಿತ ಅಂಶಗಳು ಪುಷ್ಠಿ ನೀಡುತ್ತವೆ.

ಗೊಂಡ ಹೆಸರಿನ ಸ್ಥಳನಾಮಗಳು: ಗೊಂಡ ಹೆಸರಿನ ಸ್ಥಳನಾಮಗಳು ದಕ್ಷಿಣ ಭಾರತದಲ್ಲಿ ಹೇರಳವಾಗಿರುವುದು. ಅದರಲ್ಲೂ ಕರ್ನಾಟಕದಲ್ಲಿ ಸುಮಾರು ೩೦೦ಕ್ಕೂ ಹೆಚ್ಚಿನ ಸ್ಥಳನಾಮಗಳು ಗೊಂಡ, ರಾಜಗೊಂಡ, ಲಾಲಗೊಂಡ, ಎಡೆಗಳನ್ನು ಹೊಂದಿವೆ. ಉದಾ: ಆಡಗೊಂಡನಹಳ್ಳಿ, ಆದಿಗೊಂಡನಹಳ್ಳಿ, ಅಜಗೊಂಡನಹಳ್ಳಿ, ಆಲಗೊಂಡನಹಳ್ಳಿ, ಅಮ್ಮಗೊಂಡನಹಳ್ಳಿ, ಅಣ್ಣಗೊಂಡನಹಳ್ಳಿ, ಅಪ್ಪಗೊಂಡನಹಳ್ಳಿ, ಬಾಚಿಗೊಂಡನಹಳ್ಳಿ, ಬಂಜಗೊಂಡನಹಳ್ಳಿ, ಬೆಟ್ಟಗೊಂಡನಹಳ್ಳಿ, ಬೀಚಗೊಂಡನಹಳ್ಳಿ, ಬೀಡುಗೊಂಡನಹಳ್ಳಿ, ಬೈರಗೊಂಡನಹಳ್ಳಿ, ಬೀರಗೊಂಡನಹಳ್ಳಿ, ಬೊಮ್ಮಗೊಂಡನಹಳ್ಳಿ, ಚೀಲಗೊಂಡನಹಳ್ಳಿ, ಚೌಡಗೊಂಡನಹಳ್ಳಿ, ಚೋರಗೊಂಡನಹಳ್ಳಿ, ದಾಸಗೊಂಡನಹಳ್ಳಿ, ದೇವಗೊಂಡನಹಳ್ಳಿ, ಗಡಿಗೊಂಡಗಾಂವ, ಗಂಗೊಂಡನಹಳ್ಳಿ, ಗೌಡಗೊಂಡನಹಳ್ಳಿ, ಗಿರಿಗೊಂಡನಹಳ್ಳಿ, ಗೊಂಡವಾನ, ಗೋಪಗೊಂಡನಹಳ್ಳಿ, ಗುಡಿಗೊಂಡನಹಳ್ಳಿ, ಹಾಲುಗೊಂಡನಹಳ್ಳಿ, ಹನುಮಗೊಂಡನಹಳ್ಳಿ, ಹರಗೊಂಡನಹಳ್ಳಿ, ಹಾರೊಗೊಂಡನಹಳ್ಳಿ, ಹಾಸಗೊಂಡನಹಳ್ಳಿ, ಗೆಹ್ಹಗೊಂಡನಹಳ್ಳಿ, ಹುಚ್ಚಗೊಂಡನಹಳ್ಳಿ, ಜಡೆಗೊಂಡನಹಳ್ಳಿ, ಕಾಡಗೊಂಡನಹಳ್ಳಿ, ಕಾಮಗೊಂಡನಹಳ್ಳಿ, ಕಾಟಗೊಂಡನಹಳ್ಳಿ, ಕೆಂಗೊಂಡನಹಳ್ಳಿ, ಕೋಲಗೊಂಡನಹಳ್ಳಿ, ಕೊಂತಗೊಂಡನಹಳ್ಳಿ, ಕೋಟಗೊಂಡನಹಳ್ಳಿ, ಕುರುಗೊಂಡ್ಳ, ಲಕ್ಷ್ಮೀಗೊಂಡನಹಳ್ಳಿ, ಲಾಲಗೊಂಡನಹಳ್ಳಿ, ಲಾಲಬಾಗ, ಲಾಳಸಂಗ, ಮಾಚಗೊಂಡನಹಳ್ಳಿ, ಮಾಯಗೊಂಡನಹಳ್ಳಿ, ಮೋಟಗೊಂಡನಹಳ್ಳಿ, ನಾಗಗೊಂಡನಹಳ್ಳಿ, ನಾರಾಯಣಗೊಂಡನಹಳ್ಳಿ, ನೆಲಗೊಂಡನಹಳ್ಳಿ, ನೀಲಗೊಂಡನಹಳ್ಳಿ, ಪರುಬಗೊಂಡನಹಳ್ಳಿ, ಪಾಯಗೊಂಡನಹಳ್ಳಿ, ರಾಚಪ್ರಗೊಂಡಗಾಂವ, ರಾಜಗೊಂಡನಹಳ್ಳಿ, ರಾಮಗೊಂಡನಹಳ್ಳಿ, ಸಂಗೊಂಡಹಳ್ಳಿ, ಶೆಟ್ಟಿಗೊಂಡನಹಳ್ಳಿ, ಸಿದ್ಧಗೊಂಡನಹಳ್ಳಿ, ಸೂರಗೊಂಡನಹಳ್ಳಿ, ತಿಪ್ಪಗೊಂಡನಹಳ್ಳಿ, ಯಾಚಗೊಂಡನಹಳ್ಳಿ, ಯಲಗೊಂಡನಹಳ್ಳಿ ಇತ್ಯಾದಿ ಈ ಸ್ಥಳನಾಮಗಳು ಕೊಂಡ, ರಾಜಗೊಂಡ, ಲಾಲಗೊಂಡರ ಸಾಂಸ್ಕೃತಿಕ ವೀರರ, ತಮ್ಮ ಪೂರ್ವಿಕರ, ಕುಲಕಸುಬುಗಳ, ದೈವಗಳ, ಮತ್ತು ಪ್ರಾಕೃತಿಕ ಅಂಶಗಳ ಹೆಸರುಗಳನ್ನು ಪ್ರತಿನಿಧಿಸುತ್ತವೆ. ದೇವನಹಳ್ಳಿ ತಾಲೂಕಿನ ಲಾಲಗೊಂಡನಹಳ್ಳಿಯು ಒಂದು ಕಾಲದಲ್ಲಿ ಲಾಳಗೊಂಡೆ ನೆಲೆ. ಇಂದು ಆ ಗ್ರಾಮದಲ್ಲಿ ಲಾಳಗೊಂಡರೊಬ್ಬರೂ ಇಲ್ಲ. ಲಾಳಗೊಂಡರೂ ಗೊಂಡರ ಕಳ್ಳುಬಳ್ಳಿಯವರೇ ಆಗಿದ್ದವರು ಬಹುಸಂಖ್ಯಾತರು ಲಿಂಗಾಯತರಾಗಿದ್ದಾರೆ.

ಕರ್ನಾಟಕ ಗೊಂಡ, ರಾಜಗೊಂಡರ ಜಿಲ್ಲಾವಾರು ಜನಸಂಖ್ಯೆ

ಕ್ರ.ಸಂ ಜಿಲ್ಲೆ ಒಟ್ಟು ಗಂಡು ಹೆಣ್ಣು
೦೧ ಬಾಗಲಕೋಟ ೨೨ ೧೩
೦೨ ಬೆಂಗಳೂರು ಗ್ರಾಮೀಣ
೦೩ ಬೆಂಗಳೂರು ನಗರ ೧,೫೫೫ ೮೨೪ ೭೩೧
೦೪ ಬಳ್ಳಾರಿ ೬೩ ೩೫ ೨೮
೦೫ ಬೆಳಗಾವಿ ೩೦ ೧೬ ೧೪
೦೬ ಬೀದರ ೧,೧೧,೮೫೮ ೫೭,೪೪೩ ೫೪,೪೧೫
೦೭ ಬಿಜಾಪುರ ೨೦ ೧೪
೦೮ ಚಾಮರಾಜನಗರ
೦೯ ಚಿಕ್ಕಮಗಳೂರು ೧೧೫ ೫೫ ೬೦
೧೦ ಚಿತ್ರದುರ್ಗ
೧೧ ದಕ್ಷಿಣ ಕನ್ನಡ ೧೧೫ ೬೬ ೪೯
೧೨ ದಾವಣಗೆರೆ ೩೭೫ ೧೮೨ ೧೯೩
೧೩ ಧಾರವಾಡ ೧೭೪ ೮೫ ೮೯
೧೪ ಗದಗ
೧೫ ಗುಲಬರ್ಗಾ ೧೨,೨೫೦ ೬,೨೯೫ ೫,೯೫೫
೧೬ ಹಾಸನ ೨೨೪ ೧೧೮ ೧೦೬
೧೭ ಹಾವೇರಿ ೧೧
೧೮ ಕೊಡಗು ೪೫ ೨೬ ೧೯
೧೯ ಕೋಲಾರ ೫೫ ೨೫ ೩೦
೨೦ ಕೊಪ್ಪಳ ೪೩ ೨೬ ೧೭
೨೧ ಮಂಡ್ಯ
೨೨ ಮೈಸೂರು ೧೯೮ ೧೦೧ ೯೭
೨೩ ರಾಯಚೂರು ೨೨೫ ೧೦೮ ೧೧೭
೨೪ ಶಿವಮೊಗ್ಗ ೮೭೧ ೨೩೦ ೨೪೧
೨೫ ತುಮಕೂರು ೧೫
೨೬ ಉಡುಪಿ ೩೭೧ ೧೯೬ ೧೭೫
೨೭ ಉತ್ತರ ಕನ್ನಡ ೮,೪೩೭ ೪,೨೩೮ ೪,೧೯೯
  ಕರ್ನಾಟಕ ಒಟ್ಟು ,೩೬,೭೦೦ ೭೦,೧೨೩ ೬೬,೫೭೭

೨೦೦೧ರ ಜನಗಣತಿಯ ಪ್ರಕಾರ ಕರ್ನಾಟಕದಲ್ಲಿ ೨೭ ಜಿಲ್ಲೆಗಳಲ್ಲಿ ಗೊಂಡ, ರಾಜಗೊಂಡರು ಹೀಗೆ ದಾಖಲಾಗಿದ್ದಾರೆ. ಇವರು ಬೀದರ, ಗುಲಬರ್ಗಾ, ಉತ್ತರ ಕನ್ನಡ ಮತ್ತು ಬೆಂಗಳೂರು ನಗರ ಜಿಲ್ಲೆಗಳಲ್ಲಿ ದಟ್ಟವಾಗಿಯೂ ಮತ್ತು ಇತರೆ ಜಿಲ್ಲೆಗಳಲ್ಲಿ ಚದುರಿದಂತೆಯೂ ಹರಡಿಕೊಂಡಿದ್ದಾರೆ.

ಬೀದರ್ ಜಿಲ್ಲೆಯ ಗೊಂಡರು ಪಶುಪಾಲಕರು. ಕುರಿ ಹಾಗೂ ದನಗಳ ಪಾಲನೆಯಿಂದಾಗಿ ಇವರಿಗೆ ಕುರುಬ ಮತ್ತು ದ(ಧ)ನಗರ ಎಂದಲೂ ಕರೆಯುವುದುಂಟು. ಆಂಧ್ರಪ್ರದೇಶ ಹಾಗೂ ಮಧ್ಯಪ್ರದೇಶದ ಗೊಂಡರಿಗೂ ಕಸುಬಾಧಾರಿತ ಪದಗಳು ಬಳಕೆಯಾಗುವವು. ಉದಾ: ಕೋಯ್ತರ ಗೊಂಡ (ಕುರುಬ), ಗೋವಾರಿಗೊಂಡ (ದನಗಾರ), ರಾಜಗೊಂಡ, ಇತ್ಯಾದಿ. ಬೀದರಿನ ಗೊಂಡರಲ್ಲಿ ಈರಕಾರ, ವಾರು, ವಗ್ಯ, ಕರಗಾರ, ಫುಲೇಕರ, ಬಿರಾದಾರ, ಮೆತ್ರಿ, ಶರಗಾರ ಎಂಬ ಇತ್ಯಾದಿ ಪ್ರಬೇಧಗಳಿರುವವು. ಇವು ಕಸಬು ಹಾಗೂ ಧಾಮಿಧಕಾಚರಣೆಗಳನ್ನು ಪ್ರತಿನಿಧಿಸುವವು. ಇವರಲ್ಲಿ ಶೇ. ೯೯ ರಷ್ಟು ಉಣ್ಣೆ ಕಂಕಣ ಹಾಗೂ ಕೇವಲ ಶೇ.೧ ರಷ್ಟು ಮಾತ್ರ ಹತ್ತಿ ಕಂಕಣದವರಾಗಿದ್ದಾರೆ. ಇವರಲ್ಲಿಯ ಬೆಡಗುಗಳು ಮಾಯವಾಗಿವೆ. ತೆರಪದ್ಧತಿ ವಿಮುಖಗೊಂಡು ವರದಕ್ಷಿಣೆ ಜಾರಿಗೆ ಬರುತ್ತಲಿದೆ. ಇವರು ಖಂಡೋಬ, ಬೀರಗೊಂಡ, ಮಾಳಗೊಂಡ, ಹಿರೋಡ್ಯ, ಎಲ್ಲಮ್ಮ, ಲಕ್ಷ್ಮಿ ಇತ್ಯಾದಿ ದೈವಗಳನ್ನು ಪೂಜಿಸುವರು. ಇವರಲ್ಲಿ ಸತ್ತವರನ್ನು ಹೂಳುವ ಮತ್ತು ಸೂತಕಾಚರಿಸುವ ಸಂಪ್ರದಾಯವಿದೆ.

೧೯೯೨ರ ಬೀದರ ಜಿಲ್ಲೆಯ ಗೊಂಡರು ಸಮೀಕ್ಷೆಯ ಪ್ರಕಾರ ೫೪೦ ಗ್ರಾಮಗಳಲ್ಲಿ ಗೊಂಡರು ನೆಲೆಸಿದ್ದಾರೆ. ಇವರು ೧೪,೮೩೫ ಕುಟುಂಬಗಳಲ್ಲಿ ೯೭,೫೩೧ ಜನರಿದ್ದು, ಅದರಲ್ಲಿ ೫೧,೪೦೧ ಪುರುಷರು ಹಾಗೂ ೪೬,೧೩೦ ಸ್ತ್ರೀಯರಿದ್ದಾರೆ.  ಜಿಲ್ಲೆಯಲ್ಲಿ ಗೊಂಡರ ಜನಸಾಂದ್ರತೆ ಪ್ರತಿ ಕಿ.ಮೀಟರಿಗೆ ೧೮. ಇವರಲ್ಲಿ ಶೇಕಡ ೯೭ ರಷ್ಟು ಗ್ರಾಮೀಣ ಗುಡ್ಡಗಾಡುಗಳಲ್ಲಿ ನೆಲೆಸಿದರೆ, ಕೇವಲ ಶೇಕಡ ೩ ರಷ್ಟು ಮಾತ್ರ ನಗರವಾಸಿಗಳಾಗಿದ್ದಾರೆ.

ಗೊಂಡರು ಸಾಂಪ್ರದಾಯಿಕ ಅಲೆಮಾರಿ ಪಶುಪಾಲನೆಯಿಂದ ವಿಮುಖರಾಗುತ್ತ ಕೃಷಿ ಕೂಲಿಗಳಾಗಿ ಪರಿವರ್ತನೆಗೊಳ್ಳುತ್ತಿದ್ದಾರೆ. ಬೃಹತ್ ಕೈಗಾರಿಕೆಗಳಿಂದಾಗಿ ಕೊಂಡರ ಗೃಹ ಕೈಗಾರಿಕೆಯಾದ ಕಂಬಳಿ ನೆಯ್ಗೆ ನೆಲಕಚ್ಚಿದೆ. ಗ್ರಾಮೀಣ ಗುಡ್ಡಗಾಡುಗಳಲ್ಲಿ ಇಂದಿಗೂ ಗೊಂಡರಲ್ಲಿ ಅಧಿಕ ಪಶುಪಾಲನೆ ಕಂಡುಬರುತ್ತದೆ.

ಆದಿವಾಸಿಗಳ ಗುಣಲಕ್ಷಣಗಳ ಆಧಾರದ ಮೇಲೆ ಭಾರತ ಸರ್ಕಾರ ಪ್ರಪ್ರಥಮವಾಗಿ ೧೯೫೦ರ ಸೆಪ್ಟೆಂಬರ್ ೬ ರಂದು ಹೈದರಾಬಾದ್ ರಾಜ್ಯದ ಪರಿಶಿಷ್ಟ ವರ್ಗಗಳ ಪಟ್ಟಿಯಲ್ಲಿ ೯ ಬುಡಕಟ್ಟುಗಳನ್ನು ಸೇರಿಸಿತ್ತು. ಅವುಗಳಲ್ಲಿ ಗೊಂಡ್ (ನಾಯ್ಕಪೋಡ ಮತ್ತು ರಾಜಗೊಂಡ ಸೇರಿ) ಬುಕಟ್ಟು ಕ್ರ.ಸಂಖ್ಯೆ ೪ ರಲ್ಲಿ ಕಂಡು ಬರುತ್ತದೆ. ಬೀದರ್, ಗುಲಬರ್ಗಾ ಹಾಗೂ ರಾಯಚೂರು, ಜಿಲ್ಲೆಗಳು ೧೯೫೬ರ ನವೆಂಬರ್ ೧ ರವರೆಗೆ ಹೈದರಾಬಾದ ರಾಜ್ಯಕ್ಕೆ ಸೇರಿದ್ದವು. ಭಾರತದಲ್ಲಿ ಜನಗಣತಿ ಪ್ರಾರಂಭವಾದಾಗಿನಿಂದಲೂ ಬೀದರ, ಗುಲಬರ್ಗಾ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಗೊಂಡ ಬುಡಕಟ್ಟಿನವರೆಗೆ ಉಲ್ಲೇಖವಿದೆ. ಆದರೆ ಅಂದಿನ ಮೈಸೂರು ರಾಜ್ಯದಲ್ಲಿಯ ಬೇರೆ ಯಾವುದೇ ಜಿಲ್ಲೆಗಳಲ್ಲಿ ೧೯೫೧ ರ ಜನಗಣತಿಯಲ್ಲಿ ಗೊಂಡರ ಉಲ್ಲೇಖವಿಲ್ಲ.

ಕರ್ನಾಟಕ ರಾಜ್ಯದಲ್ಲಿ ಬೀದರ ಗುಲಬರ್ಗಾ ಹಾಗೂ ರಾಯಚೂರು ಜಿಲ್ಲೆಗಳಿಗೆ ಸೀಮಿತಗೊಂಡ ಗೊಂಡ ಜನಾಂಗದ ಭೌಗೋಳಿಕ ವ್ಯಾಪ್ತಿ ಕರ್ನಾಟಕದಾದ್ಯಂತ ವಿಸ್ತರಿಸಿ ದಿನಾಂಕ:೨೭-೭-೧೯೭೭ರಂದು ಭಾರತ ಸರ್ಕಾರ ಅಧಿಚೂಸನೆ ಹೊರಡಿಸಿತು. ಆ ಪಟ್ಟಿಯಲ್ಲಿ ಕರ್ನಾಟಕದಲ್ಲಿ ಒಟ್ಟು ೮೯ ಬುಡಕಟ್ಟುಗಳನ್ನು ಗುರುತಿಸಿದೆ. ಆ ಪಟ್ಟಿಯನ್ನೇ ೧೯೮೧, ೧೯೯೧ ಹಾಗೂ ೨೦೦೧ರ ಜನಗಣತಿಯಲ್ಲಿ ಬಳಸಲಾಗಿದೆ.

ಗೊಂಡ, ರಾಜಗೊಂಡ, ಧನಗರ ಹಾಗೂ ಕುರುಬ ಎಂಬ ಪದಗಳು ಬೇರೆ ಬೇರೆ ಕಮಡರೂ ಕೂಡ ಬೀದರ್ ಮತ್ತು ಗುಲಬರ್ಗಾ ಜಿಲ್ಲೆಯಲ್ಲಿ ಅವುಗಳೆಲ್ಲ ಒಂದೇ ಜನಾಂಗವನ್ನು ಗುರುತಿಸುವ ಪದಗಳಾಗಿವೆ. ಕರ್ನಾಟಕದ ಕೊಡಗಿನಲ್ಲಿ ಕುರುಬ; ಮಹಾರಾಷ್ಟ್ರದಲ್ಲಿ ಧನಗರ; ದೇಶದ ಹಲವಾರು ರಾಜ್ಯಗಳಲ್ಲಿ ಗೊಂಡ, ರಾಜಗೊಂಡ ಪದಗಳೆಲ್ಲ ಪರಿಶಿಷ್ಟ ವರ್ಗದ ಪಟ್ಟಿಯಲ್ಲಿವೆ. ಸಂವಿಧಾನಬದ್ಧವಾಗಿ ಬೀದರ್ ಹಾಗೂ ಗುಲಬರ್ಗಾ ಜಿಲ್ಲೆಗಳಲ್ಲಿ ಕುರುಬ ಮತ್ತು ಧನಗರ ಎಂಬ ಪದಗಳು ಪರಿಶಿಷ್ಟ ವರ್ಗದ ಪಟ್ಟಿಯಲ್ಲಿಲ್ಲ. ಅವು ಗೊಂಡರ ಕಸುಬಾಧಾರಿತ ಪದಗಳಾಗಿವೆ. ಸಂವಿಧಾನಬದ್ಧ ಸೌಲಭ್ಯಗಳ ತೊಡಕಿನಿಂದಾಗಿ ಆದಿವಾಸಿಗಳ ಹಿತದೃಷ್ಟಿಯಿಂದ ಇವರು ಮೂಲತಃ ಗೊಂಡರೆಂದು ಮನಗಂಡು ಕರ್ನಾಟಕ ಸರ್ಕಾರ ಕುರುಬ ಪದವನ್ನು ಗೊಂಡ, ರಾಜಗೊಂಡರ ಪರ್ಯಾಯ ಪದವೆಂದು ಪರಿಗಣಿಸಿ ಸಂವಿಧಾನಬದ್ಧ ಸೌಲಭ್ಯಗಳಲ್ಲಿ ಕಲ್ಪಿಸಲೆಂದು ದಿನಾಂಕ: ೨೩-೧೨-೧೯೯೬ ರಂದು ಹಾಗೂ ೧೦-೨-೧೯೯೭ರಂದು ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಿದೆ.

ಬೀದರ, ಗುಲಬರ್ಗಾ ಜಿಲ್ಲೆಯ ಗೊಂಡರ ಮುಖ್ಯ ಕುಲಕಸುಬು ಮೇಕೆ, ಮೇಷ ಮತ್ತು ದನಗಳ ಪಾಲನೆಯಾಗಿತ್ತು, ಇಂದು ಪಶುಪಾಲನೆಯಿಂದ ವಿಮುಖರಾಗುತ್ತ ಕ್ರಮೇಣ ಕೃಷಿಯತ್ತವಾಲಿದ್ದಾರೆ. ಕಂಬಳಿ ನೇಯ್ಗೆಯೂ ಇವರ ಪ್ರಮುಖ ಕಸುಬಾಗಿತ್ತು. ಇದು ಇಂದು ವಿಜ್ಞಾನ ಮತ್ತು ತಂತ್ರಜ್ಞಾನದ ಪ್ರಭಾವದಿಂದ ಗೌಣವಾಗುತ್ತಿದೆ. ಇಂದು ಬಹು ಸಂಖ್ಯಾತರು ಕೃಷಿ ಕೂಲಿಗಳು ಮತ್ತು ಇತರೆ ಕೂಲಿಗಳಾಗಿದ್ದಾರೆ. ಹಲವರು ಸರ್ಕಾರಿ ಮತ್ತು ಖಾಸಗಿ ಉದ್ಯಮಗಳಲ್ಲೂ ಸೇವೆ ಸಲ್ಲಿಸುತ್ತಲಿದ್ದಾರೆ.

. ರಾಜ್‌ಗೊಂಡ್ (Rajgond)

ಭಾರತ, ಮೂಲತಃ ಬುಡಕಟ್ಟುಗಳ ದೇಶ. ಗೊಂಡ, ಕೋಲ ಮತ್ತು ಮುಂಡಗಳು ಭಾರತದ ಮೂಲ ಬುಡಕಟ್ಟುಗಳು. ಗೊಂಡರು ಭಾರತದ ಬುಡಕಟ್ಟುಗಳಲ್ಲಿಯೇ ಅತ್ಯಧಿಕ ಸಂಖ್ಯೆಯಲ್ಲಿರುವವರು ಎಂದು ಹೇಳಿಯಾಗಿದೆ. ಅವರಿಂದ ಕವಲೊಡೆದವರೇ ರಾಜಗೊಂಡರು. ಗೊಂಡ, ರಾಜಗೊಂಡರು ಗೊಂಡಾರಣ್ಯದ ಮೂಲಿಗರು. ದ್ರಾವಿಡ ಮೂಲದ ಗೊಂಡಿ ಇವರ ಮಾತೃಭಾಷೆ. ರಾಜಕೀಯ ಹಿನ್ನೆಲೆಯುಳ್ಳ ಗೊಂಡರಿಗೆ ‘ರಾಜಗೊಂಡ’ ಎಂಬ ಹೆಸರು ಲಭ್ಯವಾಗಿದೆ.

ಹಿನ್ನೆಲೆ: ಮಧ್ಯಭಾಗದ ಗೊಂಡರು ಸಂಘಟಿತಗೊಂಡು ಬಹಳ ಹಿಂದೆಯೇ ಸಣ್ಣಪುಟ್ಟ ರಾಜ್ಯಗಳನ್ನು ಸ್ಥಾಪಿಸಿದರು. ರಾಜರ ಪರಂಪರೆ ಮುಂದುವರಿದಂತೆ ರಾಜರು ಮತ್ತು ಅವರ ಸಂಬಂಧಿಗಳೆಲ್ಲ ರಾಜಗೊಂಡರೆಂದೇ ಗುರುತಿಸಲ್ಪಟ್ಟರು. ಗೊಂಡರು ರಾಜ್ಯಗಳನ್ನು ಸ್ಥಾಪಿಸಿದೊಡನೆ ತಮ್ಮ ಹಿನ್ನೆಲೆಯನ್ನು ಮರೆಯಲಿಲ್ಲ. ಇನ್ನು ಬಹುಸಂಖ್ಯಾತರು ತಮ್ಮ ಹಿಂದಿನ ಕಾಯಕವನ್ನೇ ಮುಂದುವರೆಸುವವರಾಗಿದ್ದರು. ಪ್ರಕೃತಿಯ ರಹಸ್ಯಮಯ ಜ್ಞಾನ ಅವರಿಗಿತ್ತು. ಅವರು ಪ್ರಕೃತಿಯ ಆರಾಧಕರಾಗಿದ್ದರು. ನಿಸರ್ಗದ ವನಸ್ಪತಿಗಳಲ್ಲಿಯ ನಿಗೂಧ ಶಕ್ತಿಯ ಅರಿವು ಅವರಲ್ಲಿ ಹಲವರಿಗಿತ್ತು. ಅತಹವರು ನಾಟಿ ವೈದ್ಯರಾಗಿ ಹೊರಹೊಮ್ಮಿದರು. ರಾಜರಿಗೆ ಆಯುರ್ವೇದದ ವೈದ್ಯರಾದವರು, ಕಾಲಾಂತರದಲ್ಲಿ ರಾಜವೈದ್ಯರಾದರು. ರಾಜರು ತಮ್ಮ ರಾಜ್ಯಗಳನ್ನು ಮುಸ್ಲಿಮರ ಆಕ್ರಮಣದಿಂದ ಕಳೆದುಕೊಂಡ ಮೇಲೆ ರಾಜರ ಆಸ್ಥಾನದಲ್ಲಿಯ ರಾಜವೈದ್ಯರು ನಿರ್ಗತಿಕರಾದಾಗ ಸಾಮಾನ್ಯ ಜನರಿಗೆ ಆಯುರ್ವೇದದ ವೈದ್ಯರಾಗಿ ತಮ್ಮ ವೈದ್ಯಕೀಯ ಸೇವೆಯನ್ನು ವಿಸ್ತರಿಸಿದರು. ಕಾಲಾಂತರದಲ್ಲಿ ರಾಜವೈದ್ಯರು ರಾಜಗೊಂಡರೆಂದು ಹೇಳಿಕೊಳ್ಳುತ್ತಿರುವುದರಿಂದ ಸಾರ್ವಜನಿಕರಿಂದ ರಾಜಗೊಂಡರೆಂದು ಕರೆಯಲ್ಪಟ್ಟರು.

ರಾಜಗೊಂಡರ ವಲಸೆಯ ನೆಲೆಗಳು: ರಜಾಶ್ರಯ ಕಳೆದುಕೊಂಡ ರಾಜವೈದ್ಯ ರಾಜಗೊಂಡರು ಉದರ ಪೋಷಣೆಗಾಗಿ ವಲಸಿಗರಾಗಿ ಕಾಲಾಂತರದಲ್ಲಿ ಈ ಕೆಳಕಂಡ ನೆಲೆಗಳಲ್ಲಿ ನೆಲೆಗೊಂಡರು. ಮಹಾರಾಷ್ಟ್ರ ರಾಜ್ಯದ ನಾಸಿಕ್‌ದ ಟಕ್ಕರ ಮೈದಾನದ ಫುಲೆನಗರ, ನಾಗಪುರದ ರಘೋಜಿನಗರ, ಅಮರಾವತಿ ಜಿಲ್ಲೆಯ ಅಕೋಲ ತಾಲೂಕಿನ ಮೃತಜಾಪುರ, ಕಾಜಲೇಶ್ವರ, ಹಿವರಖೇಡ, ಧೂಲಿಯ ಜಿಲ್ಲೆಯ ಮಾಳೆಗಾಂವ ಮತ್ತು ಉಪನಗರ, ಅಹಮದ್‌ನಗರ ಜಿಲ್ಲೆಯ ಶ್ರೀರಾಂಪುರ, ಮುಂಬಯಿಯ ವಡಾಲಾ (ದಾದರ್), ಜಲಗಾಂವ ಜಿಲ್ಲೆಯ ಪಾಚೋರ ರೈಲ್ವೆನಿಲ್ದಾಣ, ಲಾತೂರಿನ ವಿಕಾಸನಗರ, ಪುಣೆಯ ಶಿವಾಜಿನಗರ; ಆಂಧ್ರಪ್ರದೇಶದ ವಿಜಯವಾಡ ಜಿಲ್ಲೆಯ ಕಾಕಂಡಿ, ಹೈದ್ರಾಬಾದಿನ ಕುಕಟಪಲ್ಲಿ, ಅನಂತಪುರ; ಮಧ್ಯಪ್ರದೇಶ ರಾಜ್ಯದ ಖಾಡ್ವಾ, ಜಿಲ್ಲೆಯ ಸುಧಾಮಪುರಿ, ಭೂಪಾಲ್, ಉಜೈನ; ಕೇರಳದ ಕೋಯಿಮತ್ತೂರ್: ರಾಜಸ್ಥಾನದ ಆಜ್ಮೀರ: ಗುಜರಾತ್ ರಾಜ್ಯದ ಭಾವನಗರ್ ಜಿಲ್ಲೆಯ ಕಿಶೋದ, ಅಹಮದಾಬಾದ್: ಉತ್ತರ ಪ್ರದೇಶದ ಬೇವಾಸ್; ದೆಹಲಿ ಮತ್ತು ಕರ್ನಾಟಕ ರಾಜ್ಯದ ಬೀದರ್ ಹೊರವಲಯದ ಹಳ್ಳದಕೇರಿ, ಹರಿಹರ ತಾಲೂಕಿನ ಬೆಳ್ಳೋಡಿ ಮತ್ತು ಬೆಂಗಳೂರಿನ ಮಾರುತಿ ಸೇವಾನಗರ. ಭಾರತದಲ್ಲಿ ಸುಮಾರು ೨೦೦೦ ಕುಟುಂಬಗಳು ಮತ್ತು ಸುಮಾರು ೧೦,೦೦೦ ಜನಸಂಖ್ಯೆ ರಾಜಗೊಂಡರದಿರಬಹುದಾಗಿದೆ.

ಬೀದರಿನ ಹೊರವಲಯದ ರಾಜಗೊಂಡ ಕಾಲೊನಿಯಲ್ಲಿ ನೆಲೆಗೊಂಡ ರಾಜಗೊಂಡರು ತಮ್ಮ ಉದರ ಪೋಷಣೆಗಾಗಿ ಆಯುರ್ವೇದದ ವ್ಯಾಪಾರಕ್ಕಾಗಿ ಹೈದರಾಬಾದ್, ನಿಜಾಮಬಾದ್, ಬೊಂಗೀರ, ಆದಿಲಾಬಾದ್, ಉದಗೀರ, ನಾಂಡೇಡ, ಚಂದ್ರಪುರ, ನಾಗಪುರ, ಲಾತೂರ, ಪೂಝೆ, ಪರಳಿ, ಪರಭಣಿ, ಗುಲಬರ್ಗಾ ಇತ್ಯಾದಿಗಳತ್ತ ಹಾಗೂ ಹರಿಹರ ತಾಲೂಕಿನ ಬೆಳ್ಳೊಡಿ ಗ್ರಾಮದಲ್ಲಿ ನೆಲೆಗೊಂಡ ರಾಜಗೊಂಡರು ಚಿತ್ರದುರ್ಗ, ಹೊಸಪೇಡೆ, ಗಂಗಾವತಿ, ಹರಪನಹಳ್ಳಿ, ಬಳ್ಳಾರಿ, ದಾವಣಗೆರೆ, ಚಿಕ್ಕಮಗಳೂರು, ಬಿಜಾಪುರ, ಬಾಗಲಕೋಟೆ, ಧಾರವಾಡ, ಮಂಗಳೂರು, ಹಾಸನ, ಗೋವಾ ಇತ್ಯಾದಿಗಳತ್ತ ಮತ್ತು ಬೆಂಗಳೂರಿನ ಮಾರುತಿ ಸೇವಾನಗರದಲ್ಲಿ ನೆಲೆಗೊಂಡ ರಾಜಗೊಂಡರು ಬೆಂಗಳೂರು, ಕೇರಳ ತಮಿಳುನಾಡು ಪ್ರದೇಶಗಳಿಗೆ ವಲಸೆ ಹೋಗುವರು.

ಸಾಮಾನ್ಯವಾಗಿ ರಾಜಗೊಂಡರು ತಮ್ಮ ವಲಸೆಯನ್ನು ರೈಲ್ವೆ ರಹದಾರಿ ಇದ್ದೆಡೆಗೆ ಮುಂದುವರಿಸುವರು. ಕಾರಣ ಅವರೊಂದಿಗೆ ಸಾಗಲಿರುವ ಅವರ ಗುಡಾರ ರೈಲ್ವೆಯಲ್ಲಿ ಸಾಗಿಸಲು ಅನುಕೂಲವಾಗುವುದು. ಅಲ್ಲದೆ ರೈಲ್ವೆ ನಿಲ್ದಾಣದಲ್ಲಿಯ ನೀರು ಬಳಸಲು ಅನುಕೂಲವಾಗುವುದು. ಇದು ಇವರ ಆರ್ಥಿಕ ಜೀವನಕ್ಕೆ ತಕ್ಕುದಾಗಿರುವುದು. ಹಳ್ಳಿಗಳಿಗೂ ತಿಂಗಳುಗಟ್ಟಲೆ ಆಯುರ್ವೇದದ ವ್ಯಾಪಾರಕ್ಕಾಗಿ ಕುಟುಂಬ ಸಮೇತ ಇವರು ವಲಸೆ ಹೋಗುವುದುಂಟು.

ಸಾಮಾಜಿಕ ರಚನೆ: ಖೋಮಗಳಿಂದ ಕೂಡಿದ ರಾಜಗೊಂಡರ ಸಾಮಾಜಿಕ ರಚನೆ ಬಿಗಿಯಾಗಿದೆ. ಕುಲ, ಬಳಿ ಅಥವಾ ಬೆಡಗುಗಳಿಗೆ ಇವರು ಖೋಮಗಳೆಂದು ಕರೆಯುವರು. ಇನ್ನೊಂದು ಅರ್ಥದಲ್ಲಿ ಖೋಮವೆಂದರೆ ಮೂಲವಂಶ ಎಂದರ್ಥ. ರಾಜಗೊಂಡರ ಇಡಿ ಜನ ಸಮುದಾಯವನ್ನು ನಾಲ್ಕು ಸಮೂಹಗಳಲ್ಲಿ ಗುರುತಿಸಬಹುದು. ಇವರು ತಮ್ಮ ಸಮೂಹಗಳಿಗೆ ‘ದೈವ’ಗಳೆಂದು ಕರೆಯುವರು. ಅವು ಚಾರದೇವ, ಪಾಂಚದೇವ, ಸಾದೇವ ಮತ್ತು ಸಾತದೇವಗಳು. ಈ ದೇವಗಳೇ ರಾಜಗೊಂಡರ ಮೂಲ ಬಂಧುತ್ವದ ಸಂಕೇತವಾಗಿವೆ. ಮೂಲದಲ್ಲಿ ೧೨ ದೇವರುಗಳಿದ್ದು ಅನಂತರದಲ್ಲಿ ಕೇವಲ ನಾಲ್ಕು ದೇವಗಳಿಗೆ ಸೀಮಿತಗೊಳಿಸಿರುವ ಬಗ್ಗೆ ‘ಗೊಂಡಿ ಧರ್ಮದರ್ಶನ’ ಗ್ರಂಥದಲ್ಲಿ ಉಲ್ಲೇಖವಿದೆ. ಚಾರದೇವದಲ್ಲಿ ೪, ಪಾಂಚದೇವದಲ್ಲಿ ೫, ಸಾದೇವದಲ್ಲಿ ೬ ಮತ್ತು ಸಾತದೇವರಲ್ಲಿ ೭ ಮೂಲ ಪುರುಷರಿದ್ದು, ಇವರೇ ರಾಜಗೊಂಡರಿಗೆ ಮೂಲ ದೈವವಾಗಿದ್ದಾರೆ. ಇವರ ವಂಶಜರೇ ಈ ರಾಜಗೊಂಡರೆನ್ನಲು ಇಂದಿಗೂ ಇವರು ತಮ್ಮ ಬಂಧುತ್ವವನ್ನು ತಮ್ಮ ದೇವಗಳಿಂದಲೂ ಹಾಗೂ ಖೋಮಗಳಿಂದಲೂ ಗುರುತಿಸಿಕೊಳ್ಳುವುದು ಸಾಕ್ಷಿಯಾಗಿರುವುದು.

ಕರ್ನಾಟಕ ರಾಜಗೊಂಡರಲ್ಲಿ ಈ ನಾಲ್ಕು ದೇವರುಗಳಿಗೆ ಸಂಬಂಧಪಟ್ಟ ಖೋಮಗಳಿವೆ. ಪ್ರಸ್ತುತ (೨೦೦೦) ಸಮೀಕ್ಷೆಯ ಪ್ರಕಾರ ಸಾದೇವರ ೧೬೯: ಚಾರದೇವ ೩೨: ಸಾತದೇವರ ೨೦: ಹಾಗೂ ಪಾಂಚದೇವರ ೪: ಕುಟುಂಬಗಳು ಕರ್ನಾಟಕದಲ್ಲಿವೆ. ಸಾದೇವರದಲ್ಲಿಯ ಕುಟುಂಬಗಳು ಕರ್ನಾಟಕದಲ್ಲಿ ಹೆಚ್ಚಲು ಕಾರಣ ಆ ದೇವಗಳಲ್ಲಿಯ ಖೋಮಗಳು ಹಾಗೂ ಖೋಮಗಳಲ್ಲಿಯ ಕುಟುಂಬಗಳು ಹೆಚ್ಚಾಗಿರುವುದು. ಸಾದೇವದಲ್ಲಿಯ ಖೋಮಗಳೆಂದರೆ ರಾಯಸೀಡಂ ಅಥವಾ ಚಾಮಕಾರ(೭೩), ಉಇಕಾ (೭೯) ತಡಾಸಂ (೬) ವಡಕಡೆ (೩), ಅತ್ರಾಂ (೭) ಹಾಗೂ ಗೇಡಂ(೧) ಚಾರದೇವದಲ್ಲಿ ಕೇವಲ ಸೇಡ್ಮಾಕಿ (೩೭) ಸಾತದೇವದಲ್ಲಿ ಪುಸ್ನಾಕೆ (೧೪) ಮೇಶ್ರಾಂ (೨) ವಾಡವಿಯ (೩) ಧರ್ಮೇ (೧) ಹಾಗೂ ಪಾಂಚದೇವರಲ್ಲಿ ಆಡಾ (೪) ಈ ಖೋಮಗಳು ಕರ್ನಾಟಕದಲ್ಲಿವೆ. ದೇವ ಹಾಗೂ ಖೋಮಗಳ ಕುಟುಂಬಗಳಿಗೆ ಸಂಬಂಧಿಸಿದಂತೆ ಅವರ ಜನಸಂಖ್ಯೆಯಲ್ಲಿಯೂ ಏರಿಳಿತಗಳಿವೆ.

ಬಂಧುತ್ವ: ರಕ್ತ ಸಂಬಂಧದಿಂದ ಉಗಮಗೊಂಡ ಇವರ ಬಂಧುತ್ವ ಬಲಿಷ್ಟವಾಗಿದೆ. ವಾಸ್ತವದಲ್ಲಿ ಒಂದೇ ದೇವದಲ್ಲಿಯ ವಿವಾಹ ಸಂಬಂಧಕ್ಕೆ ನಿಷೇಧವಿದೆ. ಬೆಸದೇವಗಳಲ್ಲಿಯ ವಿವಾಹ ಸಂಬಂಧಕ್ಕೆ ಊನವಿಲ್ಲ. ಆದರೆ ಎಲ್ಲ ದೇವರುಗಳಲ್ಲಿಯ ಜನಸಮುದಾಯ ಒಂದೇ ನೆಲೆಯಲ್ಲಿ ಲಭ್ಯವಿರುವುದು ಕಷ್ಟ ಸಾಧ್ಯ. ಹಾಗಿದ್ದಲ್ಲಿ ಒಂದೇ ಅಥವಾ ಸಮದೇವದವರಾಗಿದ್ದರೂ ಭಿನ್ನ ಖೋಮಿನವರೊಂದಿಗೆ ಸಂಬಂಧ ಬೆಳೆಸಿರುವುದು ಕಂಡುಬಂದಿದೆ. ಇದು ವಾಸ್ತವದಲ್ಲಿ ಎಲ್ಲ ಕಡೆ ಕಂಡುಬರಲಿಕ್ಕಿಲ್ಲ. ಸಮದೇವದವರೆಲ್ಲ ಸೋದರ ಸಂಬಂಧಿಗಳು ಮತ್ತು ಬೆಸ ದೇವದವರೆಲ್ಲ ನೆಂಟರೆಂಬ ಭಾವನೆಯಿದೆ. ಇವರು ಸಾಮಾನ್ಯವಾಗಿ ತಮ್ಮನ್ನು ಗುರುತಿಸಿಕೊಳ್ಳುವಾಗ ತಮ್ಮ ಹೆಸರಿನೊಂದಿಗೆ ತಮ್ಮ ಖೋಮಿನ (ಕುಲದ ಅಥವಾ ಬಳಿಯ) ಹೆಸರು ಸೇರಿಸಿಕೊಂಡೆ ಗುರುತಿಸಿಕೊಳ್ಳುವ ರೂಢಿಯಿದೆ. ಉದಾ: ಶಾಮಬಾಬು ರಯಾಸೀಡಂ, ವಸಂತ ಜಾಮಕಾರ ಇತ್ಯಾದಿ. ಇಲ್ಲಿ ರಾಯಸೀಡಂ ಮತ್ತು ಜಾಮಕಾರ ಇವು ಇವರ ಖೋಮಿನ ಹೆಸರಾಗಿರುವುದನ್ನು ಗಮನಿಸಬಹುದು.

ದೈವಾರಾಧನೆ: ರಾಜಗೊಂಡರು ತಮ್ಮ ಗೊಂಡಿ ಧರ್ಮದ ವಿಧಿವಿಧಾನಗಳಂತೆ ಸಂಸ್ಕಾರಗಳನ್ನು ದೈವಾರಾಧನೆಗಳನ್ನು ಮಾಡುವರು. ಗೊಂಡಿ ಧರ್ಮದರ್ಶನದ ಪ್ರಕಾರ ಗೊಂಡ, ರಾಜಗೊಂಡರು ೧೨ ದೈವಗಳನ್ನು ೭೫೦ ಕುಲಗೋತ್ರಗಳನ್ನು ಹಾಗೂ ೨೨೫೦ ಕುಲಚಿನ್ಹೆಗಳನ್ನು ತಮ್ಮ ದೈವವೆಂದು ಆರಾಧಿಸುವವರಾಗಿದ್ದರು. ಆದರೆ ಇಂದು ಆ ಪ್ರಮಾಣದಲ್ಲಿ ಆರಾಧನೆ ಕಂಡುಬಂದಿರುವುದಿಲ್ಲ. ಗೊಂಡರು, ರಾಜಗೊಂಡರು ಮೂಲತಃ ಸರ್ವಚೇತನಾವಾದಿಗಳು ಎಂಬುದನ್ನು ಇವರ ಕುಲಚಿಹ್ನೆಗಳು ಸಾಬೀತುಪಡಿಸುತ್ತವೆ. ಇಂದು ರಾಜಗೊಂಡರು ಫೆರಸಾಪೇನ್ (ಮಹಾದೇವ), ಬಾರಾದೇವ (ಬೀರದೇವ), ಭೀಮಲಪೇನ, ಮಹಾಕಾಳಿ, ಮರಿಯಮ್ಮ ಇತ್ಯಾದಿ ದೈವಗಳನ್ನು ಆರಾಧಿಸುವರು.

ರಾಜಗೊಂಡರು ಶಿವರಾತ್ರಿ, ದಸರಾ, ಹೋಳಿ ಇತ್ಯಾದಿ ಹಬ್ಬಗಳನ್ನು ಆಚರಿಸುವರು, ಬೀದರಿನ ರಾಜಗೊಂಡರು ಶಿವರಾತ್ರಿಯಿಡಿ ಉಪವಾಸ, ಭಜನೆ, ಕೀರ್ತನೆ, ಗೊಂಡಿ ನೃತ್ಯ ಮಾಡಿ ಮರುದಿನ ಸಾಮೂಹಿಕ ಭೋಜನ ಮಾಡುವರು. ಶಿವನನ್ನು ಪ್ರತಿಷ್ಠಾಪಿಸಿ ಶ್ರದ್ಧಾ ಭಕ್ತಿಯಿಂದ ಮಹಾದೇವನನ್ನು ಫೆರಸಾಪೆನೆಂದು ಆರಾಧಿಸುವರು. ಹರಿಹರ ತಾಲೂಕಿನ ಬೆಳ್ಳೂಡಿಯ ರಾಜಗೊಂಡರು ದಸರಾ ಹಬ್ಬವನ್ನು ಅತಿ ಉಲ್ಲಾಸ, ಸಂತಸ ಸಡಗರದಿಂದ ಆಚರಿಸುವರು. ದಸಾ ಹಬ್ಬದಂದು ರಾತ್ರಿಯಿಡಿ ಸ್ತ್ರೀಪುರುಷರೆಲ್ಲರೂ ಗೊಂಡಿ ನೃತ್ಯ ಮಾಡಿ ಕುಣಿದಾಡುವರು.

ಕರ್ನಾಟಕದಲ್ಲಿಯ ರಾಜಗೊಂಡ ಅಲೆಮಾರಿ ಆದಿವಾಸಿಗಳು ಆರ್ಥಿಕವಾಗಿ ಬಹಳ ಬಡವರು. ಇವರ ವೇಷಭೂಷಣಗಳನ್ನು ನೋಡಿದೊಡನೆಯೇ ಇವರ ಆರ್ಥಿಕ ಪರಿಸ್ಥಿತಿಯ ಅರಿವಾಗುತ್ತದೆ. ಇವರು ಕೃಷಿ, ಕೃಷಿಕೂಲಿ ಹಾಗೂ ಪಶುಪಾಲನೆಯಲ್ಲಿ ತೊಡಗಿಸಿ ಕೊಂಡವರಲ್ಲ. ಇವರಿಗೆ ಇವರದ್ದೆ ಎಂಬ ಒಂದಿಂಚೂ ಭೂಮಿ ಇದ್ದಿಲ್ಲ. ಮೋಸದ ವ್ಯವಹಾರ ಇವರು ತಿಳಿದಿಲ್ಲ. ಜೀವನಕ್ಕಾಗಿ ಅಲೆದಾಟ ತಪ್ಪಿಲ್ಲ. ಇವರಲ್ಲಿಯ ಸಾಂಪ್ರಾದಾಯಿಕ ಆಯುರ್ವೇದ ಕಸುಬಿನಲ್ಲಿ ಜಾತಿ ಪಂಚಾಯತಿಯ ಕಾನೂನುಗಳಲ್ಲಿ ಹಾಗೂ ನಂಬಿಕೆಗಳಲ್ಲಿ ಪರಿವರ್ತನೆ ತರುವವರೆಗೆ ಇವರಲ್ಲಿ ಆರ್ಥಿಕ ಸುಧಾರಣೆ ಕಷ್ಟ ಸಾಧ್ಯ.

ಗಿಡಮೂಲಿಕೆಗಳೇ ರಾಜಗೊಂಡರಿಗೆ ಜೀವನಾಧಾರ. ಅದಕ್ಕೆ ಇವರು ‘ಜಡಿಬೂಟಿ’ ಎಂದು ಕರೆಯುವರು. ಅಂದರೆ ಔಷಧ, ಗಿಡಮೂಲಿಕೆಗಳ ನಾರು ಬೇರುಗಳೆಂದು ಅರ್ಥ. ವಿಂಧ್ಯ, ಸಾತಪುರ, ನರ್ಮದಾ, ಗೋದಾವರಿ, ಇತ್ಯಾದಿ ನದಿ ಜಲಾನಯನ ಪ್ರದೇಶಗಳಿಂದ ಗಿಡಮೂಲಿಕೆಗಳನ್ನು ಇವರು ಸಂಗ್ರಹಿಸುತ್ತಾರೆ. ಅದು ಸಾಧ್ಯವಾಗದಿದ್ದಾಗ ಸ್ಥಳೀಯ ಆಯುರ್ವೇದಿಕ ಅಂಗಡಿಗಳಿಂದ ಖರೀದಿಸಿ ಔಷಧ ತಯಾರಿಸುವರು ಮತ್ತು ಸುತ್ತಮುತ್ತ ಮಾರಾಟ ಮಾಡುವರು. ರಸ್ತೆಯ ಬದಿಯಲ್ಲಿ ಮಾರಾಟ ಮಾಡುವುದರಿಂದ ಈ ವ್ಯಾಪಾರಕ್ಕೆ ತಕ್ಕ ಪ್ರತಿಫಲ ಸಿಗುತ್ತಿಲ್ಲ. ಸರ್ಕಾರಿ ಆಯುರ್ವೇದಿಕ ಚಿಕಿತ್ಸಾಲಯಗಳು ಆರಂಭಗೊಂಡಿವೆ. ಹೀಗಾಗಿ ಆಯುರ್ವೇದ ವ್ಯಾಪಾರದ ಮೇಲೆ ಅವಲಂಭಿಸಿರುವ ಇವರ ಕುಟುಂಬಗಳು ಕ್ಷೀಣಿಸುತ್ತಿವೆ. ಇಂದಿನ ಹೊಸ ಪೀಳೀಗೆ ಆಯುರ್ವೇದದ ಬದಲಾಗಿ ಕಿವಿ ಸ್ವಚ್ಛಗೊಳಿಸುವ ಮತ್ತು ವಾಹನಗಳ ಸ್ಟೈರಿಂಗ್ ವೈರ್ ಕೆಲಸಗಳಲ್ಲಿ ಹಾಗೂ ಚಿಕ್ಕ ಮಕ್ಕಳು ಬಿಸಾಡಿದ ಪ್ಲಾಸ್ಟಿಕ್ ಪೇಪರ್‌ಗಳನ್ನು ಆಯುವುದರಲ್ಲಿ ತೊಡಗಿದ್ದಾರೆ. ಇದು ಹೀಗೆ ಮುಂದುವರಿದರೆ ಈ ಬುಡಕಟ್ಟಿನಲ್ಲಿರುವ ಆಯುರ್ವೇದದ ಜ್ಞಾನ ಕೆಲವೇ ವರ್ಷಗಳಲ್ಲಿ ಮರೆಮಾಚುವುದರಲ್ಲಿ ಸಂಶಯವಿಲ್ಲ. ಹಾಗಾಗದಂತೆ ಯೋಜನೆಗಳನ್ನು ರೂಪಿಸಿ ಕಾರ್ಯಗತಗೊಳಿಸುವುದು ಅಗತ್ಯವಾಗಿದೆ.