. ಕುರುಬ (Kuruba)

ಕರ್ನಾಟಕದಲ್ಲಿ ಕುರುಬರು ಬಹುಸಂಖ್ಯಾತರಾಗಿದ್ದರೂ ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿ ಘೋಷಿತ ಕುರುಬ ಬುಡಕಟ್ಟು ಮಾತ್ರ ಒಂದು ಅಲ್ಪಸಂಖ್ಯಾತ ಬುಡಕಟ್ಟಾಗಿ ಉಳಿದಿದೆ. ೧೯೫೬ರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಪರಿಷ್ಕೃತ ಪಟ್ಟಿಯ ಆದೇಶದ ಪರಿಶಿಷ್ಟ III ಭಾಗ VIII (೨) ರ ಪ್ರಕಾರ ಕೊಡಗು ಜಿಲ್ಲೆಗೆ ಸೀಮಿತಗೊಂಡಂತೆ ಕರುಬ ಸಮುದಾಯ ಬುಡಕಟ್ಟು ಪಟ್ಟಿಗೆ ಸೇರಿದೆ. ಕರ್ನಾಟಕದ ಬೇರೆಲ್ಲ ಬುಡಕಟ್ಟುಗಳ ಪ್ರಾದೇಶಿಕ ಸಮುದಾಯ ಬುಡಕಟ್ಟು ಪಟ್ಟಿಗೆ ಸೇರಿದೆ. ಕರ್ನಾಟಕದ ಬೇರೆಲ್ಲ ಬುಡಕಟ್ಟು ಪ್ರಾದೇಶಿಕ ಮಿತಿಯನ್ನು ಸಡಿಲಿಸಿ ಕರ್ನಾಟಕದಾದ್ಯಂತ ವಿಸ್ತರಿಸಿದ್ದರೂ ಕುರುಬ ಮತ್ತು ಮರಾಠ ಬುಡಕಟ್ಟುಗಳು ಕೊಡಗು ಜಿಲ್ಲೆಗೆ; ಕಮ್ಮಾರ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿಗೆ; ಕಣಿಯನ್, ಕಣ್ಯನ್ ಕೊಳ್ಳೇಗಾಲ ತಾಲೂಕಿಗೆ; ಮರಾಟಿ ಬುಡಕಟ್ಟು ದಕ್ಷಿಣ ಕನ್ನಡ ಜಿಲ್ಲೆಗೆ ಸೀಮಿತಗೊಂಡಿರುವವು. ತಮ್ಮ ಪ್ರಾದೇಶಿಕ ಮಿತಿಯನ್ನು ಕರ್ನಾಟಕದಾದ್ಯಂತ ವಿಸ್ತರಿಸಿಕೊಳ್ಳಲೇ ಇಲ್ಲ. ಇದಕ್ಕೆ ಮುಖ್ಯಕಾರಣ ರಾಜಕೀಯ ಹಾಗೂ ಸಾಮಾಜಿಕ ಇಚ್ಛಾಶಕ್ತಿಯ ಕೊರತೆ ಎಂದೆನಿಸುವುದು. ಈ ರೀತಿಯ ಪ್ರಾದೇಶಿಕ ಮಿತಿಯನ್ನು ಹೇರುವುದರಿಂದ ಈ ಬುಡಕಟ್ಟುಗಳ ಕಾರ್ಯವ್ಯಾಪ್ತಿಗೆ ಹಾಗೂ ಸ್ವಚ್ಛಂದ ಬದುಕಿಗೆ ಕಡಿವಾಣ ಹಾಕಿದಂತಾಗುವುದು. ಇದರಿಂದ ಈ ಬುಡಕಟ್ಟುಗಳ ಅಭಿವೃದ್ಧಿ ಕುಂಠಿತಗೊಳ್ಳುವುದರೊಂದಿಗೆ ಪ್ರಾದೇಶಿಕವಾಗಿ ಇವರಲ್ಲಿ ಸಂಕುಚಿತ ಮನೋಭಾವನೆ ಉಮಟಾಗಬಹುದು. ಹೀಗಾಗಿ ಈ ನಾಲ್ಕು ಬುಡಕಟ್ಟುಗಳ ಪ್ರಾದೇಶಿಕ ಮಿತಿಯನ್ನು ಸಡಿಲಿಸಿ ಹಲವು ಮಾನದಂಡಗಳೊಂದಿಗೆ ಕರ್ನಾಟಕ ರಾಜ್ಯದಾದ್ಯಂತ ವಿಸ್ತರಿಸುವುದು ಸೂಕ್ತ.

ಬೇಟೆಗಾರಿಕೆಯಿಂದ ಕವಲೊಡೆದ ಪಶುಪಾಲಕರಲ್ಲಿ ಮುಖ್ಯವಾಗಿ ಮ್ಯಾಸ (ಮೇಷ) ಬೇಡರು, ಕಾಡುಗೊಲ್ಲರು, ಕುರುಬರು ಮತ್ತು ದ(ಧ)ನಗಾರರು ಮುಖ್ಯವಾಗಿರುವರು. ಒಂದೇ ಕೌಟುಂಬಿಕ ಕಳ್ಳುಬಳ್ಳಿಯಿಂದ ಕವಲೊಡೆದ ಬುಡಕಟ್ಟುಗಳಿವು. ‘ಮ್ಯಾಸ’ ಎಂಬುದು ‘ಮೇಷ’ ಪದದ ಅಪಭೃಂಶ ಪದ. ಮೇಷ ಎಂದರೆ ಮೇಕೆ, ಟಗರು, ಕುರಿ, ಆಡು ಎಂದರ್ಥ. ಇವುಗಳ ಪಾಲಕರಿಗೆ ಮೇಕೆ ಅಥವಾ ಮೇಷಪಾಲಕರೆನ್ನುವರು. ಇವರೇ ಹಾಲುಮತದ ಹುಟ್ಟಿಗೆ ಕಾರಣರಾದವರು.ಇವರು ಬೇಟೆಗಾರಿಕೆಯಿಂದ ಕವಲೊಡೆದವರು ಎಂಬುದಕ್ಕೆ ಮ್ಯಾಸ(ಮೇಷ)ದ ಜೊತೆಗಿದ್ದ ಬೇಡರು ಎಂಬ ಜೋಡು ನುಡಿಯೇ ಸಾಕ್ಷಿ. ಮೇಷ ಮತ್ತು ಮೇಕೆ ನುಡಿ(ಶಬ್ದ)ಗಳು ಈ ಪ್ರಾಣಿಗಳ ಧ್ವನಿಜನ್ಯ ಪದಗಳು. ಈ ಪ್ರಾಣಿಗಳು ಮ್ಯಾ…(ಮ+ಉ+ಅ) ಎಂದು ಕೂಗುವುದರಿಂದ ಇವುಗಳ ಪಾಲಕರೂ ಮೇಷ (ಕುರಿ) ಪಾಲಕರು > ಮ್ಯಾಸಬೇಡರು > ಮ್ಯಾಸ ನಾಯಕರೆಂದೆನಿಸಿಕೊಂಡರು. ಕಾಡುಗೊಲ್ಲರು ಕಾಡಿನ ಮೂಲದವರೆಂಬುದಕ್ಕೆ ಗೊಲ್ಲಪದದ ಜೊತೆಯಿದ್ದ ಕಾಡು ಎಂಬ ಪದವೇ ಸ್ಪಷ್ಟಪಡಿಸುತ್ತದೆ. ಗೊಲ್ಲರೆಂದರೆ ಗೋವುಗಳ ಪಾಲಕರೆಂದರ್ಥ. ಪ್ರಕೃತಿಜನ್ಯ ಗೋವುಗಳ ರಕ್ಷಕರಿವರು. ದ(ಧ)ನಗಾರರೂ ಕೂಡ ದನಗಳ ರಕ್ಷಕರೆ. ದನಗಾರರೇ ಕಾಲಾಂತರದಲ್ಲಿ ಧನಗರರೆಂದು ಕರೆಯಲ್ಪಟ್ಟರು. ಇವರಿಗೆ ಇವರ ದನಗಳೇ ಧನ(ಸಂಪತ್ತು)ವಾಗಿರುವುದರಿಂದ ಧನಗರ ಎಂಬೀ ಹೆಸರು ಬಂದಿರುವುದು.

ಮೇಷದ ಇನ್ನೊಂದು ಹೆಸರು ಕುರಿ. ಆದರೆ ಕುರಿ ಮೇಷದ ಮೂಲ ಹೆಸರಲ್ಲ. ಹಾಗೆಯೇ ಮೇಷ-ಮೇಕೆ ಪಾಲಕರ ಮೂಲ ಹೆಸರೂ ಕುರುಬ ಅಲ್ಲ. ಮೇಕೆ-ಮೇಷದಿಂದ ಉತ್ಪನ್ನಗೊಂಡ ಇನ್ನೊಂದು ಹೆಸರೇ ಕುರಿ. ಇದಕ್ಕೆ ಆಧ್ಯಾತ್ಮಕ ನೆಲೆಯಿರುವುದು. ಮೇಷ-ಮೇಕೆ ಮ್ಯಾ…(ಮ+ಉ+ಅ) ಎಂದು ಜಪಿಸುವುದು. ಇದು ಮಾನವನ ಮೂಲ ಮಂತ್ರ. ಇಲ್ಲಿಂದಲೇ ಭಾಷೆಯು ಉಗಮವಾಗಿರುವುದು. ಮಾನವ ಇದನ್ನು ಅನುಕರಿಸುತ್ತ ಭಾಷೆ ಕಲಿತ. ಮೇಷ- ಮೇಕೆಯ ನುಡಿ ಮ್ಯಾ…ದಲ್ಲಿ “ಮ, ಉ, ಅ” ಎಂಬೀ ಮೂರು ಅಕ್ಷರಗಳಿವೆ. ಮೇಷ-ಮೇಕೆ ಪಾಲಕ ಮೇಷದ ನುಡಿ(ಮ್ಯಾ…)ಯನ್ನು ಅನುಕರಿಸುವಾಗ (ಮ+ಉ+ಅ) ತಿರುಮುರುವಾಗಿ ‘ಅ+ಉ+ಮ ಎಂದು ಉಚ್ಛರಿಸಲಾರಂಭಿಸಿದ. ಇಲ್ಲಿ ಮಹರ್ಷಿ ವಾಲ್ಮೀಕಿಯ ‘ರಾಮ’ನಾಮ ಸ್ಮರಣೆ ‘ಮರಾ..’ ನಾಮ ಸ್ಮರಣೆಯಾಗಿರುವುದನ್ನು ಸ್ಮರಿಸಬಹುದು. ಹಾಗೆಯೇ ಮೇಷ ಮೇಕೆಯ ನುಡಿ ಮ್ಯಾ….(ಮ+ಉ+ಅ) ಮೇಷಪಾಲಕನ ಅನುಕರಣೆಯಲ್ಲಿ ಅ+ಉ+ಮ(ಓಂ) ಆಗಿರುವುದು. ‘ಓಂ’ ಮಾನವನ ಮೂಲ ಬೀಜಮಂತ್ರ. ಅನಂತರ ಮಾನವ ‘ಓಂ’ ಕಾರಕ್ಕೆ ಸಹಸ್ತಾರು ಅರ್ಥಗಳನ್ನು ಕಲ್ಪಿಸಿದ. ಮಾನವ ಆಧ್ಯಾತ್ಮ ಶಿಖರವೇರಲು ಮೇಷ (ಓಂ) ಕ್ಕೆ ಗುರಿಯಾಗಿಟ್ಟುಕೊಂಡನು. ಅವನ ಗುರಿ (ಮೇಷ)ಯೇ ಕುರಿಯಾಯಿತೆಂದು ಗೊಂಡರೆ ಧರ್ಮಗುರು ಸಿದ್ಧಯ್ಯ ಆಧುನಿಕ ಒಡೆಯರ್ ಅವರ ವಾದ.

ಈ ಗುರುಗಳು ತಮ್ಮ ವಾದವನ್ನು ನಿಸರ್ಗ ಹಾಗೂ ಭಾಷಿಕ ಹಿನ್ನೆಲೆಯಲ್ಲಿ ತಾರ್ಕಿಕವಾಗಿ ಪ್ರತಿಪಾದಿಸಿರುವರು. ಓಂಕಾರ ಜಪಿಸುವ ಮೇಷ-ಮೇಕೆ ಮಾನವನಿಗೆ ಪ್ರಕೃತಿಯ ರಹಸ್ಯದ ಅರಿವು ಮಾಡಿಸಿತು. ಇದು ಜ್ಞಾನ (ಮೇಷ)ದ ಪ್ರತೀಕವಾಯಿತು. ಅಹಿಂಸೆಯು ಇದರ ಪರಮೋಧರ್ಮವಾಯಿತು. ಹೀಗೆ ಮೇಷದ ಇನ್ನೊಂದು ಹೆಸರು ಆಧ್ಯಾತ್ಮದಲ್ಲಿ ಗು(ಕು)ರಿಯಾಗಿ ಇದರ ಪಾಲಕನು ಗು(ಕು)ರುಬ>ಕುರುಬ ಎಂಬೀ ಹೆಸರಿನಿಂದ ಕರೆಯಲ್ಪಟ್ಟನು. ಹೀಗಾಗಿ ಕುರುಬ ಎಂದರೆ ‘ಜ್ಞಾನಿ’ ಎಂದರ್ಥ. ಮೂಲತಃ ಇದೊಂದು ಜಾತಿ ಅಥವಾ ಕಸುಬುಸೂಚಕ ಪದವಲ್ಲ. ಇದು ಆಧ್ಯಾತ್ಮವನ್ನು ಪ್ರತಿನಿಧಿಸುವ ಪದ. ಆ ಕಾರಣಕ್ಕಾಗಿಯೇ ಏನೋ ಏಸು ಕ್ರೈಸ್ತರು ‘ನಾನೇ ಒಳ್ಳೇ ಕ್ರೈಸ್ತ ಎಂದುಕೊಳ್ಳದೆ, “ನಾನೊಬ್ಬ ಒಳ್ಳೇ ಕುರುಬ” ಎಂದುಕೊಂಡಿದ್ದಾರೆ. ಎಲ್ಲ ಧರ್ಮಗಳು ಜ್ಞಾನ ಮತ್ತು ಆಧ್ಯಾತ್ಮ ಪ್ರತಿನಿಧಿಸುವುದರಿಂದ ಇವೆಲ್ಲವೂ ಕುರುಬನ (ಜ್ಞಾನಿಯ) ಕೊಡುಗೆಯಾಗಿವೆ.

ಎಲ್ಲ ವೇದ(ಸತ್ಯ)ಗಳಿಗೂ ಮೂಲ ವೇದ ಅಜಪವೇದ. ಇಂದು ಭೂಗತವಾಗಿದೆ. ‘ಅಜ’ ಎಂದರೂ ಆಡು (ಮೇಕೆ), ಕುರಿ (ಜ್ಞಾನ). ಇದು ‘ಅ’ ಮತ್ತು ‘ಜ’ ಎಂಬೀ ಎರಡು ಅಕ್ಷರಗಳ ಜೋಡುನುಡಿ. ‘ಅ’ ಎಂದರೆ ‘ಇಲ್ಲ’ ‘ಜ’ ಎಂದರೆ ‘ಹುಟ್ಟು’ ಎಂಬರ್ಥ. ಅಜ (ಜ್ಞಾನ)ಕ್ಕೆ ಸಮಾನವಾದ ಜ್ಞಾನ (ಸತ್ಯ) ಇನ್ನೊಂದು ಹುಟ್ಟಿಲ್ಲ ಎಂದರ್ಥ. ಇದರ ಅರ್ಥ ಪ್ರಕೃತಿಯ ಸತ್ಯಜ್ಞಾನ. ಹಾಗೆಂತಲೇ ಜ್ಞಾನಕ್ಕೆ ಮೂಲವಾದ ಮೇಷವು ರಾಶಿ ಚಕ್ರದಲ್ಲಿ ಪ್ರಥಮ ಸ್ಥಾನ ಹೊಂದಿರುವುದು. ಈ ಸತ್ಯ ಸಾರ್ವತ್ರಿಕವಾಗಿರುವುದು.

ಕುರುಬ ಹುಟ್ಟುವ ಮುನ್ನ
ಕುಲವಿಲ್ಲ ಗೋತ್ರವಿಲ್ಲ
ಕುರುಬನ ಫಲ ಕಾಣಾ ಬಸವಣ್ಣ

ಎಂಬೀ ಅಲ್ಲಮ ಪ್ರಭುಗಳ ವಚನದಲ್ಲಿಯೂ ಕುರುಬ ಎಂಬ ಪದವು ಜ್ಞಾನಿ ಎಂಬ ಅರ್ಥವನ್ನೇ ಧ್ವನಿಸುತ್ತದೆ. ಕುರುಬ (ಜ್ಞಾನ) ಹುಟ್ಟುವ ಮುನ್ನ ಕುಲಗೋತ್ರಗಳು ಹುಟ್ಟಿಲ್ಲ. ಕುರುಬನ (ಜ್ಞಾನಿಯ) ಪ್ರತಿಫಲಗಳೇ ಕುಲಗೋತ್ರಗಳು ಎಂಬುದರಲ್ಲಿ ಅರ್ಥವಿದೆ. ‘ಬೆಳಗಾಗುತ್ತಲೇ ಕುರುಬನ ಮುಖ ನೋಡಬೇಕು. ಕುರುಬನಿಂದಲೇ ಬೋಣಿಗೆ ಮಾಡಬೇಕು. ಇದರಿಂದ ಒಳ್ಳೆಯದಾಗುತ್ತದೆಂಬ ನಂಬಿಕೆ ಇಂದಿನದೇನಲ್ಲ. ಇಲ್ಲಿಯೂ ‘ಕುರುಬ’ ಜ್ಞಾನದ ಸಂಕೇತವೆ. ಜ್ಞಾನಿಯಿಂದಲೇ ಒಳಿತಾಗುವುದು ಅಜ್ಞಾನಿಯಿಂದಲ್ಲ ಎಂಬುದು ಪೂರ್ವಜರು ಅರಿತವರಾಗಿದ್ದರು. ಈ ಪರಂಪರೆಯೇ ಇನ್ನೂ ಮುಂದುವರಿಯುತ್ತಿದೆ. ಆದರೆ ಕಾಲಾಂತರದಲ್ಲಿ ಕುರುಬ ಎಂಬ ಪದ ತನ್ನ ಮೂಲ ಕಳೆದುಕೊಂಡು ಒಂದು ಪಶುಪಾಲನೆಯ ಬುಡಕಟ್ಟಾಗಿ ಪರಿಚಯಗೊಂಡಿತು (ಬ್ರಾಹ್ಮಣರೆಂದರೂ ಜ್ಞಾನಿಗಳೆಂಬ ಅರ್ಥವಿತ್ತು, ಇಂದು ಅದೊಂದು ಜಾತಿಯಷ್ಟೆ). ಜ್ಞಾನ ಮೂಲದ ಕುರುಬರೇ ಅಜಪವೇದಾದಿಯಾಗಿ ಎಲ್ಲ ದೇವಗಳಿಗೂ ಹಾಗೂ ಹಾಲುಮತದಾದಿಯಾಗಿ ಎಲ್ಲ ಮತಧರ್ಮಗಳ ಹುಟ್ಟಿಗೂ ಕಾರಣ.

ಇಂತಹ ಭವ್ಯ ಸಾಂಸ್ಕೃತಿಕ ಹಿನ್ನೆಲೆಯನ್ನು ಹೊಂದಿರುವ ಕುರುಬರು ವಿಶ್ವದ ಮೂಲನಿವಾಸಿಗಳು. ಕರ್ನಾಟಕದ ಮೂಲನಿವಾಸಿಗಳಲ್ಲಿ ಕುರುಬರು ಮೊದಲಿಗರು ಎಂದು ಹೇಳಿಯಾಗಿದೆ. ಕುರುಬ ಎಂಬ ಪದಕ್ಕೆ ಬೆಟ್ಟ ಎಂಬ ಅರ್ಥವೂ ಇದೆ. ಇವರಲ್ಲಿ ಹಾಲು, ಒಕ್ಯೆ, ಅಂಡೆ, ಜಾಡಿ ಅಥವಾ ಕಂಬಳಿ ಕುರುಬರೆಂಬ ಗುಂಪುಗಳಿವೆ.

ಕರ್ನಾಟಕದಲ್ಲಿ ಕುರುಬ, ಗೊಂಡ, ರಾಜಗೊಂಡ, ಕಾಡುಕುರುಬ, ಜೇನುಕುರುಬ, ಧನಗರ ಎಂಬೀ ಎಲ್ಲ ಪದಗಳೂ ಒಂದೇ ಬುಡಕಟ್ಟಿಗೆ ಬಳಸುವ ಸಮನಾಂತರ ಪದಗಳು. ಈ ಎಲ್ಲ ಪದಗಳನ್ನು ಹೊಂದಿರುವ ಸಾಮಾಜಿಕ ಸಂಘಟನೆಗಳು ಕರ್ನಾಟಕದಲ್ಲಿ ಅಲ್ಲಲ್ಲಿ ಕಂಡುಬರುತ್ತವೆ. ಹೀಗಿದ್ದಾಗ್ಯೂ ಈ ಭಿನ್ನ ಪದಗಳನ್ನು ಹೊಂದಿರುವ ಹಲವರಲ್ಲಿ ವೈವಾಹಿಕ ಸಂಬಂಧ ನಿಂತುಹೋಗಿ ಪ್ರಯ್‌ಉಏಕ ಬುಡಕಟ್ಟಾಗಿ ಗೋಚರಿಸುತ್ತವೆ. ಹೀಗಾಗಲು ಪ್ರಾದೇಶಿಕತೆ ಹಾಗೂ ಕಸಬುಗಳೇ ಕಾರಣಗಳಾಗಿರಬಹುದು.

ಕುರುಬರು ಮೂಲತಃ ಶೈವರು. ಇವರು ಮೈಲಾರ, ಬೀರಪ್ಪ, ಜುಂಜಪ್ಪ, ಮಾಳಿಂಗರಾಯ, ರೇವಣ್ಣಸಿದ್ಧ, ಎಲ್ಲಮ್ಮ, ಕಾಳಿ, ದುರ್ಗಿ ಇತ್ಯಾದಿ ದೈವಗಳನ್ನು ಆರಾದಿಸುವರು. ದೀಪಾವಳಿ, ದಸರಾ, ಹೋಳಿ, ಶಿವರಾತ್ರಿ ಇತ್ಯಾದಿ ಹಬ್ಬಗಳನ್ನು ಆಚರಿಸುವರು. ಇವರಲ್ಲಿ ಉಣ್ಣೆ ಹಾಗೂ ಹತ್ತಿ ಕಂಕಣಗಳೆಂಬ ಪ್ರಭೇದಗಳಿವೆ. ಇವರಿಬ್ಬರಲ್ಲಿ ಅಣ್ಣ ತಮ್ಮಂದಿರೆಂಬ ಭಾವನೆಯಿದೆ. ಹೀಗಾಗಿ ಪರಸ್ಪರ ವಿವಾಹ ನಿಷೇಧವಿದೆ. ಈ ಎರಡು ಕಂಕಣಗಳಲ್ಲಿ ನೂರಾರು ಬೆಡಗುಗಳಿವೆ. ಬೆಸಬೆಡಗುಗಳೊಂದಿಗೆ ವಿವಾಹ ಜರುಗುವುದು. ಅತ್ತಿ, ಆಲ, ಹಾಲ, ಕುರಿ, ಅರಿಶಿಣ, ಆನೆ, ಇತ್ಯಾದಿ ನೂರರು ಬೆಡಗುಗಳು ಇವರಲ್ಲಿವೆ. ಮೃತರನ್ನು ಹೂಳುವ ಮತ್ತು ಸೂತಕ ಆಚರಿಸುವ ಸಂಪ್ರದಾಯವಿದೆ.

೧೯೨೧, ೧೯೩೧, ೧೯೪೧ರ ಜನಗಣತಿಯ ಪ್ರಕಾರ ಅಂದಿನ ಮೈಸೂರು ರಾಜ್ಯದಲ್ಲಿಯ ಕುರುಬರ ಜನಸಂಖ್ಯೆ ಕ್ರಮವಾಗಿ ೪,೦೧,೨೨೨ (ಗಂಡು ೨,೦೨,೬೦೩ ಹೆಣ್ಣು ೧,೯೮,೬೧೯); ೪,೩೫,೯೩೦(ಗಂಡು ೨,೨೦,೪೫೬ ಹೆಣ್ಣು ೨,೧೫,೮೭೪), ಹಾಗೂ ೪,೬೬,೦೫೧ (ಗಂಡು ೨,೩೫,೭೭೭ ಹೆಣ್ಣು ೨,೩೦,೨೭೪) ಎಂದು ದಾಖಲಾದರೆ, ೧೯೭೧ರ ಜನಗಣತಿಯ ಪ್ರಕಾರ ಕೊಡಗಿನ ಕುರುಬ ಬುಡಕಟ್ಟಿನ ಜನಸಂಖ್ಯೆ ೮,೮೫೭ ಎಂದು ದಾಖಲಾಗಿದೆ. ಇವರ ಮಾತೃಭಾಷೆ ಕನ್ನಡ. ಸಾಕ್ಷರರು ಕಡಿಮೆಯಾಗಿದ್ದರೂ ಶಿಕ್ಷಣದ ಬಗ್ಗೆ ಧನಾತ್ಮಕ ಅಭಿಪ್ರಾಯವನ್ನು ಹೊಂದಿದ್ದಾರೆ.

ಬೇಟೆ ಮೂಲದ ಕೊಡಗಿನ ಕುರುಬರು ಮೂಲತಃ ಬೇಟೆ ಮತ್ತು ಆಹಾರ ಸಂಗ್ರಹಣೆಯ ಪ್ರವೃತ್ತಿಯವರು. ಕಾಲಾಂತರದಲ್ಲಿ ಸಾಧು ಪ್ರಾಣಿಗಳಾದ ಮೇಷ, ಮೇಕೆಗಳ ಪಾಲಕರಾಗಿ ಪಶುಪಾಲಕರಾದವರು. ಇಂದಿಗೂ ಸಹಸ್ರಾರು ಕುರಿಗಳೊಂದಿಗೆ ಸಹಸ್ರಾರು ಕುಟುಂಬಗಳ ಅಲೆಮಾರಿ ಪಶುಪಾಲನೆಯ ಬದುಕು ನದಿ ಜಲಾನಯನ ಪ್ರದೇಶಗಳಲ್ಲಿ ಕಾಣಸಿಗುವುದು. ಪ್ರಕೃತಿಯೊಂದಿಗೆ ಮತ್ತು ಪಶುಗಳೊಂದಿಗೆ ಪ್ರೀತಿಯಿಂದ ತಮ್ಮ ಜೀವನವನ್ನು ಸವಿಯುವವರು ದಿನೇ ದಿನೇ ಕಡಿಮೆಯಾಗುತ್ತಿದ್ದಾರೆ. ಇಂದು ವಿಜ್ಞಾನ ಮತ್ತು ತಂತ್ರಜ್ಞಾನ ಯುಗ, ಕೋಳಿ ಫಾರಂಗಳಂತೆ ಕುರಿಗಳ ಫಾರಂಗಳು ತಲೆ ಎತ್ತುತ್ತಿವೆ. ಬರುವ ದಿನಗಳಲ್ಲಿ ಅಲೆಮಾರಿ ಕುರುಬರ ಜೀವನ ಚಿಂತಾಜನಕವಾಗುವುದರಲ್ಲಿ ಸಂದೇಹವಿಲ್ಲ. ಇವರಿಗಾಗಿಯೇ ಒಂದು ವಿಶೇಷ ಯೋಜನೆಯ ಅನುಷ್ಠಾನ ಅನಿವಾರ್ಯವಾಗುವುದು. ಕುರಿ ಉದ್ದಿಮೆಗೆ ಸಂಬಂಧಿಸಿದಂತೆ ಕಂಬಳಿ ನೇಯ್ಗೆಯೂ ಒಂದು ಉದ್ಯಮ. ಇದು ಕೂಡ ಕುರುಬರಿಂದ ಕಳಚಿಕೊಳ್ಳುತ್ತಿದೆ. ಇಂದು ಹೆಚ್ಚಿನ ಕುರುಬರು ಕೃಷಿ ಹಾಗೂ ಕೃಷಿ ಕೂಲಿಯನ್ನು ಅವಲಂಬಿಸಿದವರಾಗಿದ್ದಾರೆ. ಹಲವರು ಸರಕಾರಿ ಹುದ್ದೆಗಳಲ್ಲಿ ಇನ್ನು ಕೆಲವರು ವ್ಯಾಪರ ಜೇನು ಸಂಗ್ರಹಣೆ, ಅರಣ್ಯೋತ್ಪಾದನೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇವರ ಕುರಿ ಸಾಕಾಣಿಕೆ ಹಾಗೂ ಕಂಬಳಿ ನೇಯ್ಗೆಯ ಕಾಯಕಗಳಿಗೆ ವಿಶೇಷ ಕಾಯಕಲ್ಪದ ಅವಶ್ಯಕತೆ ಇರುವುದು.

ಕರ್ನಾಟಕದ ಕುರುಬರು ೧೯೯೨ ರಲ್ಲಿ ಕನಕದಾಸರ ಹೆಸರಿನಲ್ಲಿ ಕನಕ ಗುರು ಪೀಠವೊಂದನ್ನು ಅವರ ನೆಲೆಯಾದ ಕಾಗಿಲೆಯಲ್ಲಿ ಸ್ಥಾಪಿಸಿ, ಸಮುದಾಯವನ್ನು ಸಂಘಟಿಸುತ್ತಲಿದ್ದಾರೆ. ಪೀಠದ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಲು ಕರ್ನಾಟಕದ ನಾಲ್ಕು ವಿಭಾಗಗಳಲ್ಲಿ ೪ ಶಾಖಾ ಮಠಗಳನ್ನು ಸ್ಥಾಪಿಸಿದ್ದಾರೆ. ಆದರೂ ಕೊಡಗಿನ ಕುರುಬ, ಕರ್ನಾಟಕದ ಜೇನುಕುರುಬ, ಕಾಡುಕುರುಬ, ಕಾಟ್ಟುನಾಯಕನ್, ಗೊಂಡ, ರಾಜಗೊಂಡ ಮತ್ತು ಕುರುಮನ್ಸ ಬುಡಕಟ್ಟಿನವರಿಗೆ ಹಾಗೂ ಹಾಲುಮತ ಹಿನ್ನೆಲೆಯ ಅಲೆಮಾರಿ ಎತ್ತಿನ ಹೆಳವ, ಧನಗರ ಗೌಳಿ ಇತ್ಯಾದಿವರಿಗೆ ಈ ಗುರುಪೀಠ ಅಥವಾ ಇದರ ಶಾಖಾ ಮಠಗಳು ಸಕಾರಾತ್ಮಕವಾಗಿ ಸ್ಪಂದಿಸುತ್ತಿಲ್ಲ. ಹಾಲುಮತದ ಎಲ್ಲ ಬುಡಕಟ್ಟುಗಳಿಗೂ ಗುರುಪೀಠ ಸ್ಪಂದಿಸಿ ಇವರಿಗಾಗಿ ಧನಾತ್ಮಕ ಯೋಜನೆಗಳನ್ನು ಕಾರ್ಯಗತಗೊಳಿಸುವುದು ಅಗತ್ಯವಾಗಿದೆ. ಹಾಲುಮತದ ಸೋದರ ಸಂಬಂಧಿ ಕರ್ನಾಟಕ ವಾಲ್ಮೀಕಿ ಗುರುಪೀಠ ಹಾಗೂ ಗಂಗಾಮತ ಗುರುಪೀಠಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಅವು ತನ್ನ ಒಳ ಪಂಗಡಗಳನ್ನು ಅಭಿವೃದ್ಧಿಯ ತೆಕ್ಕೆಗೆ ತೆಗೆದುಕೊಳ್ಳುತ್ತ ಆಶಾದಾಯಕವಾಗಿ ಬೆಳೆಯುತ್ತಿವೆ. ಈ ಮತದ ಪೀಠಗಳು ತನ್ನ ಮತದ ಅಭಿವೃದ್ಧಿಗಾಗಿ ತನ್ನ ಸಮಾನ ಹಾಗೂ ತನಗಿಂತ ಆರ್ಥಿಕವಾಗಿ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳ ಪೀಠಗಳೊಂದಿಗೆ ಸಕಾರಾತ್ಮಕವಾಗಿ ಬೆರೆತು ಕಾರ್ಯನಿರ್ವಹಿಸುವುದು ಅಗತ್ಯವಾಗಿದೆ.

ಆಧಾರ ಗ್ರಂಥಗಳು

ಉಮಾಪತಿ ಬಿ.ಇ. (ಲೇ), ‘ಪರಿಶಿಷ್ಟ ಬುಡಕಟ್ಟುಗಳು, ಜಾತಿಗಳು’, ನಾಯಕ, ಹಾ.ಮಾ. (ಪ್ರಸಂ),

ಕರ್ನಾಟಕ, ಕನ್ನಡ ವಿಷಯ ವಿಶ್ವಕೋಶ, (ಮೈಸೂರು: ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾಲಯ, ೧೯೭೯), ಪು.೮೮೮.

ಕಲ್ಯಾಣ ಶ್ರೀ ಬಸವೇಶ್ವರ ಪಂಚಾಂಗ, ೧೯೯೪, ಪು. ೨೪.

ಚನ್ನಮಲ್ಲಿಕಾರ್ಜುನ, ವೀರಶೈವ ಪಂಚಾಚಾರ್ಯ ಚರಿತ್ರೆ: ರೇವಣಸಿದ್ಧರು(ಬ್ಯಾಡಗಿ: ಶ್ರೀ ನಿರಂಜನ ಚೆನ್ನಬಸವಸ್ವಾಮಿ, ಮುಪ್ಪಿನಸ್ವಾಮಿ ವಿರಕ್ತಮಠ, ೧೯೫೮)

ಜೋಶಿ, ಶಂ.ಬಾ. ಕರ್ನಾಟಕ-ಸಂಸ್ಕೃತಿಯ ಪೂರ್ವ ಪೀಠಿಕೆ “ದ್ವಿತೀಯ ಭಾಗ” (ಕರ್ನಾಟಕ ವೀರಕ್ಷತ್ರಿಯರು – ಹಟ್ಟಿಕಾರರು: ದನಗಾರರು) (ಧಾರವಾಡ: ಸಮಾಜ ಪುಸ್ತಕಾಲಯ ೧೯೬೬)

ತೊಂಟಾಪುರ, ಎನ್.ಬಿ., ಉತ್ತರ ಕರ್ನಾಟಕದ ಗೊಂಡ ಅರ್ಥಾತ ಕುರುಬ (ಬೆಂಗಳೂರು: ಕರ್ನಾಟಕ ರಾಜ್ಯಗೊಂಡ ಸಂಘ, ಗಾಂಧಿನಗರ, ೧೯೯೫).

ನಾಗೇಗೌಡ, ಎಚ್.ಎಲ್., ಹೆಳವರು ಮತ್ತು ಅವರ ಕಾವ್ಯಗಳು, (ಬೆಂಗಳೂರು: ಸಾಹಿತ್ಯ ಸದನ ಪ್ರಕಾಶನ, ೧೯೮೨),

ನಾಯಕ, ಹಾ.ಮಾ. (ಸಂ), ಕನ್ನಡ ವಿಷಯ ವಿಶ್ವಕೋಶ(ಮೈಸೂರು: ಕನ್ನಡ ಅಧ್ಯಯನ ಸಂಸ್ಥೆ ಮಾನಸಗಂಗೋತ್ರಿ, ೧೯೭೩), ಸಂಪುಟ ೬.

ಭಾರತದ ಜನಗಣತಿಯ ವರದಿಗಳು (೧೮೯೧-೨೦೦೧).

ಭಾರತದ ಗ್ಯಾಝಿಟಿಯರ್“ಬೀದರ್ ಜಿಲ್ಲೆ”.

ಭಾರತದ ಗ್ಯಾಝಿಟಿಯರ್“ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರ ರಾಜ್ಯಗಳು.”

ಮೇತ್ರಿ ಕೆ.ಎಂ., ಬೀದರ ಜಿಲ್ಲೆಯ ಗೊಂಡ ಆದಿವಾಸಿ ಸಮುದಾಯ: ಒಂದು ಸಮಾಜ ಶಾಸ್ತ್ರೀಯ ಅಧ್ಯಯನ (ಮೈಸೂರು ವಿಶ್ವವಿದ್ಯಾನಿಲಯಕ್ಕೆ ಸಮರ್ಪಿಸಿದ ಪ್ರೌಢ ಪ್ರಬಂಧ, ೧೯೯೪) (ಅಪ್ರಕಟಿತ).

ರಸೇಲ್, ಆರ್.ವಿ. ದಿ ಟ್ರೈಬ್ಸ್‌ಅಂಡ್ ಕಾಸ್ಟ್ಸ್ ಆಫ್ ಸೆಂಟ್ರಲ್ ಪ್ರಾವಿನ್ಸಸ್‌ಆಫ್ ಇಂಡಿಯಾ (ಹೊಸದೆಹಲಿ: ಕಾಸ್ಮೋ ಪ್ರಕಾಶನ, ೧೯೭೫).

ವಿಠಲಸಿಂಹ ಧೂರ್ವೆ., ಮಹಾರಾಜಾ ಸಂಗ್ರಾಮಶಾಹಕೆ ಬಾವನ್ ಗಢ(ನಾಗಪುರ: ಗೋಟೂಲ್ ಪ್ರಕಾಶನ, ೧೯೯೦)

ಶಶಿ ಎಸ್.ಎಸ್., ದಿ ಶಫರ್ಡ್ಸ್ ಆಫ್ ಇಂಡಿಯಾ ‘ಎ ಸೋಸಿಯೋ-ಕಲ್ಚರಲ್ ಸ್ಟಡಿ ಆಫ್ ಶೀಪ್ ಅಂಡ್ ಕ್ಯಾಟಲ್‌ರಿಯರಿಂಗ್ ಕಮ್ಯೂನಿಟೀಸ್’ (ದೆಹಲಿ: ಸಂದೀಪ ಪ್ರಕಾಸನ, ೧೯೭೮).

ಶಾಂತಿನಾಯಕ (ಲೇ), ‘ಗೊಂಡರು’, ಲಕ್ಕಪ್ಪಗೌಡ , ಎಚ್.ಜೆ. (ಪ್ರಸಂ), ಕರ್ನಾಟಕ ಬುಡಕಟ್ಟುಗಳು(ಬೆಂಗಳೂರು: ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ, ೧೯೯೮), ಸಂಪುಟ ೧, ಪುಟ, ೧೫೧-೨೩೮.

ಸತ್ಯವೇದವು (ಬೆಂಗಳೂರು: ಬೈಬಲ್ ಸೊಸೈಟಿ ಆಫ್ ಇಂಡಿಯ, ೧೯೮೬) ಪು. ೧೨೩.

ಸೈಯದ್, ಜಮೀರುಲ್ಲಾ ಷರೀಫ್, ಗೊಂಡರ ಸಂಸ್ಕೃತಿ(ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿ, ೧೯೯೩).

Aijappan, A., Report on the Socio-Economic Conditions of the Aboriginal Tribes of the Province of Madras (Madras: Govt. Press, 1948)

Chakravarty M.R. and D.P. Mukherjee, ‘Dermatoglyphic Affinities of the Tribes and Castes of Nilgiri Hills (India)’- Zeitschrift fur Morphologie and Anthropologie, 55(3), 1964. PP 335-56

Furer-Haimedorf. C. ‘Von’ Aboriginal Rebellions in the Deccan’ Man in India, 25(4). 1945. PP. 20-17

—– Tribal Hyderabad (Hyderabad: Govt. of HEH. Nizam, 1965).

Hussain, S.K.M., `Tribal Inheritance’, Man in India 31 (2), 1951, PP 8-7.

Karve, I., ‘Anthropometric Measurements in Karnataka and Orissa and a Comparision of These Two Regions with Maharashtra’, Journal of the Anthropological Society of Bombay (NS), 8(1), 1954, PP. 45-75.

Luiz, A.A.D., Tribes of Mysore (Bangalore: G.S. Viswa & Co., 1963) PP. 76-82, 86-90, 125-39, 160-5.

Nanjundayya, H.V. and Ananthakrishna Iyer L.K. The Mysore Tribes and Caste (Mysore: Mysore University, 1931) Vol. IV, PP-27.

Nanjundayya, H.V., The Ethnographic Survey of Mysore (Bangalore: Govt. Press, 1906)

Nanjundayya. H.V. and L.K. Anantha Krishna Iyer, The Mysore Tribes and Castes (MysoreL The Mysore University, 1931), Vol.IV, PP. 68-75

Reddy, T. Parvathi Kumar, ‘Kuruba’- in Singh, K.S. (ed), People of India: Tamilnadu (Madras: Affiliated East-West Press Pvt. Ltd. 1997), Vol. XL, Part II, PP. 807-11.

Shashi, S.S. Encyclopaedia of Indian Tribes (New Delhi: Anmal Publication Pvt. Ltd., 1964. Vol.8, PP. 137-40.

Siddayya Adhumik Odiyar, AConcept of Ajapaveda, 1992.

Simha, R.N., Scheduled Castes and Scheduled Tribes (Prohibition of Transfer of Certain Lands) Act and Rules in Karnataka (Bangalore: Sree Ambika Book House, 1999) PP. 36.39, 41, 42, 44, 45.

Singh, K.S., The Scheduled Tribes (Delhi: Oxford University Press, 1994), Vol. III, PP. 291-93, 481-4, 662-80, 924-6.

Sontheimer, G.D., Pastroal Deities in Western India (Delhi: Oxford University Press. 1993).

Syed Siraj UI Hassan. The Castes and Tribes of H.E.H. The Nizam’s Dominions (New Delhi: Asian Educational Services, 1989), PP 216-32.

Thurston, E., Castes and Tribes of Southern India (Madras: Govt. Press. 1909:rpt. 1975, Delhi: Cosmo Publications). Vol. I. PP. 155-77, 155-76, Vol III P.23., Vol.IV PP.99-106.