ಭಾರತ ತನ್ನ ಸಂಸ್ಕೃತಿ ಶ್ರೀಮಂತಿಕೆಯಿಂದ ವಿಶ್ವವಿಖ್ಯಾತ ದೇಶವಾಗಿದೆ. ಭಾರತೀಯ ಸಂಸ್ಕೃತಿಯು ವೈಶಿಷ್ಟತೆ ಹಾಗೂ ವೈವಿಧ್ಯತೆಯ ಅಂತಃಸತ್ವದಿಂದ ಸಾರ್ವಕಾಲಿಕ ನಿಷ್ಪನ್ನವಾಗಿದೆ. ಜೀವದಯೆ ಮತ್ತು ನಿರ್ದಯ ಅಂಶಗಳನ್ನು ಪ್ರಸ್ತುತವಾಗಿ ಸಂಸ್ಕೃತಿ ಒಳಗೊಂಡಿರುವುದು ವಾಸ್ತವ. ಆದರೆ ಆದಿಮ ಸಂಸ್ಕೃತಿಯಲ್ಲಿ ಮಾನವ ಹಿತ ಸಂಪನ್ನತೆಯಿದೆ. ಎಲ್ಲ ಧರ್ಮಗಳ ಉದಯದಲ್ಲೂ ತಿರುಚಿ, ಶ್ರೇಷ್ಠತೆ, ಸ್ವಾರ್ಥ, ಲಂಪಟತನ ಮುಂತಾದ ಕಾರಣಗಳಿಂದ ಮೂಲಭೂತವಾದಿತನದ ಆವಾಹನ ಕ್ರಿಯೆ ನಡೆಯುತ್ತಾ ಮುಂದುವರಿದಿದೆ.

ಪ್ರಾಚೀನ ಕಾಲದಿಂದ ಭಾರತದೊಳಗೆ ಪ್ರಧಾನವಾಗಿ ಆರ್ಯ ಮತ್ತು ದ್ರಾವಿಡ ಸಂಸ್ಕೃತಿಯ ನಿರಂತರ ಸಂಘರ್ಷವಿದೆ. ಹೊರಗಿನವರ ಆಕ್ರಮಣ, ಆಳ್ವಿಕೆ ಮತ್ತು ಧರ್ಮಗಳ ಪ್ರಭಾವಗಳಿಂದ ಹಾಗೂ ಸ್ಥಳೀಯರ ಆಳ್ವಿಕೆಯಿಂದಾಗಿ ಉಪಸಂಸ್ಕೃತಿಗಳಲ್ಲಾದ ಪರಿವರ್ತನೆಗಳು, ಸ್ಥಿತ್ಯಂತರಗಳು ಮುಂತಾದ ಒಲವು-ನಿಲುವುಗಳ ಬಗ್ಗೆ ವಿಸ್ತೃತ ಅಧ್ಯಯನಗಳು ನಡೆಯುತ್ತವೆ.

ಬುಡಕಟ್ಟು ಮೂಲಕ ಪಶುಪಾಲನಾ ಸಂಸ್ಕೃತಿಯಿಂದ ಕುರಿಸಾಕಾಣಿಕೆ, ಕೃಷ್ಣನೇಯ್ಗೆ ಮುಂತಾದ ವೃತ್ತಿ ಅವಲಂಬಿತವಾದ ಸಮುದಾಯಗಳ ಸಂಸ್ಕೃತಿ ಅಧ್ಯಯನ ವಿಭಿನ್ನವಾದುದು ಹಾಗೂ ವಿಶಿಷ್ಟವಾದುದಾಗಿರುತ್ತದೆ. ಆಯಾ ಜನ ಸಮುದಾಯದ ವಿಶಿಷ್ಟ ಗುಣವಾದ ಸಂಸ್ಕೃತಿಯು ಭೌತಿಕ ಮತ್ತು ಅಭೌತಿಕ ವಿಷಯಗಳನ್ನು ಒಳಗೊಂಡಿದೆ. ಹಾಗಾಗಿ ಸಂಸ್ಕೃತಿಯಲ್ಲಿ ಆಯಾ ಜನಸಮೂಹದ ತನ್ನತನವಿರುತ್ತದೆ. ಕುರುಬರು, ಗೊಲ್ಲರು, ಕುಂಚಿಟಿಗರು, ಬೇಡರು, ಬುಡಕಟ್ಟು ಮೂಲದವರು ಎನ್ನುವುದಕ್ಕೆ ದ್ಯೋತಕವಾಗಿ ಅವರ ಕುಲನಾಮಗಳನ್ನು, ಕುಲಾಚರಣೆಗಳನ್ನು ಗಮನಿಸಬಹುದು. ಪಶು, ಪಕ್ಷಿ, ಧಾನ್ಯ, ಪ್ರಕೃತಿ, ಚೇತನ, ಅಚೇತನ, ಮುಂತಾದ ವಸ್ತುಗಳನ್ನು ಆಧರಿಸಿದ ಕುಲನಾಮಗಳಿವೆ. ಕುಲದ ಆದರ್ಶ ನಾಯಕನನ್ನು ಕುಲದೇವರುಗಳಾಗಿ ಆರಾಧನೆ ಮಾಡುವ ಪದ್ಧತಿ, ಧಾರ್ಮಿಕ ಕಟ್ಟುಪಾಡುಗಳ ಪರಿಪಾಲನೆಗಳಿವೆ.

ಹಲವು ಬುಡಕಟ್ಟು ಮೂಲ ಸಮುದಾಯಗಳು ಜಾತಿಗಳಾಗಿ ಪರಿವರ್ತನೆಗೊಂಡಿವೆ. ಕುರುಬರು-ಕಂಬಳಿ ನೇಯ್ಗೆ, ಕೃಷಿ, ಕುರಿ ಸಾಕಾಣಿಕೆ, ಗೊಲ್ಲರು-ಕುರಿಸಾಕಾಣಿಕೆ, ಕೃಷಿ ಕುಂಚಿಟಿಗರು- ಕೃಷಿ ಕುರಿ ಸಾಕಾಣಿಕೆ (ವಿರಳವಾಗಿ) ಹೀಗೆ ಕಸಬು-ಉಪಕಸುಬುಗಳಾಗಿ ಜೀವನ ನಿರ್ವಹಣೆಯ ಪ್ರಧಾನ ಆಧಾರಗಳಾಗಿವೆ. ಇವರ ಜೀವನ ವಿಧಾನ ಮತ್ತು ಮನೋಧರ್ಮವನ್ನು ರೂಪಿಸುವಲ್ಲಿ ಕಸುಬು ವೃತ್ತಿಗಳ ಪಾತ್ರಮಹತ್ವದ್ದು.

ಯಾವ ಬುಡಕಟ್ಟು ಸಮುದಾಯವಾಗಲಿ, ತಮ್ಮ ಮೂಲಕ ಕಸುಬುಗಳು ಜೀವನ ನಿರ್ವಹಣೆಗೆ ಶಕ್ತವಾಗದೆ ಹೋದಾಗ ಸಾಧ್ಯವಾಗುವ ಕಸುಬಿನ ಕಡೆ ಹೊರಳುತ್ತವೆ. ಆದರೆ ಇಡೀ ಸಮುದಾಯ ಹೊಸ ಕಸುಬಿಗೆ ಹೊರಳಲಾಗದೆ, ಮೂಲ ಕಸುಬಿನಲ್ಲಿಯೇ ಉಳಿದು ಬಿಕ್ಕಟ್ಟಿನಲ್ಲಿ ಸಿಲುಕಿ, ಹಿನ್ನಡೆಯು ಉಸುಕಿನಲ್ಲಿ ಉಳಿಯುತ್ತವೆ. ಉದಾಹರಣೆಗೆ ಬೇಡ ಸಮುದಾಯದವರ ಮೂಲ ಕಸುಬು ಬೇಟೆ, ಪಶುಪಾಲನೆ, ಸಾಹಸ ಪ್ರವೃತ್ತಿಯಿಂದ ಜೀವನ ನಿರ್ವಹಣೆ ಸಾಧ್ಯವಾಗದೆ ಕೃಷಿ, ಕುರಿ ಸಾಕಾಣಿಕೆ ಹಾಗೂ ಹಲವು ಕಸುಬುಗಳಿಗೆ ಹೊರಳಿ ಆರ್ಥಿಕ ಬಿಕ್ಕಟ್ಟುಗಳಿಗೆ ಸಿಲುಕಿ ಪ್ರಸ್ತುತವಾಗಿ ಶಿಕ್ಷಣ ಏಕ ಗವಾಕ್ಷಿ ಮೂಲಕ ಹೊರಬರುವ ಪ್ರಯತ್ನ ನಡೆದರೂ ಇಡೀ ಸಮುದಾಯಕ್ಕೆ ಸಾಧ್ಯವಾಗದಿರುವುದು ವಾಸ್ತವ ಅಂದರೆ ಮೂಲ ಕಸಬುಗಳು ಪ್ರಸ್ತುತ ಜಾಗತೀಕರಣದ ದಾಳಿಯಿಂದ ದಿವಾಳಿತನಕ್ಕೆ ತಲುಪುತ್ತಿರುವುದು ಕಟುವಾಸ್ತವ. ಕುರುಬರು ಕಂಬಳಿ ನೇಯ್ಗೆಯಲ್ಲಿ ನವೀಕರಣ ಆಧುನೀಕತೆಯನ್ನು ಅನುಸರಿಸಿದ್ದರೆ ಮುಂದಿನ ಬದುಕಿನ ನೆಲೆಬೆಲೆ ಏನು ಇಂತಹ ಬೆಳವಣಿಗೆಯಿಂದ ಜೀವನ ವಿಧಾನದಲ್ಲಿ ಬದಲಾವಣೆಗಳಾಗಿ ನೂತನ ಬಿ‌ಕ್ಕಟ್ಟುಗಳಿಗೆ ಒಳಗಾಗುತ್ತವೆ.

ಸಮಾಜದ ಮೇಲುಸ್ತರದ ಸಮುದಾಯಗಳು ಸಾಂಸ್ಕೃತಿಕ ಅನಾಥಪ್ರಜ್ಞೆಗೆ ಸಿಲುಕುತ್ತಾ, ತಮ್ಮ ಮೂಲ ಚೈತನ್ಯಕ್ಕೆ ತಾವೇ ಧಕ್ಕೆ ತಂದುಕೊಳ್ಳುತ್ತಾ ಒಗ್ಗಟ್ಟು ಹಾಗೂ ಸಂಖ್ಯಾಬಾಹುಳ್ಯದಿಂದ ದುರ್ಬಲರಾಗುತ್ತಾ, ಮತ್ತೊಂದು ಸಮಸ್ಯೆಯನ್ನು ತಂದುಕೊಳ್ಳುತ್ತಿದ್ದಾರೆ. ಕುರುಬ ಸಮುದಾಯದಲ್ಲಿ ಒಡೆಯ ಹಿರಿತನದ ಹಿನ್ನೆಲೆಯಲ್ಲಿ ಈ ರೀತಿಯ ಆಕರ್ಷಣೆಗೆ ಅಧಿಕವಾಗಿ ಒಳಗಾಗದಿರುವುದನ್ನು ಕಾಣುತ್ತೇವೆ. ಕುಂಚಿಟಿಗ ಸಮುದಾಯದಂಲ್ಲಂತೂ ಮತಾಂತರದ ಹಾವಳಿ ಜಾಸ್ತಿಯಾಗಿರುವುದನ್ನು ಗಮನಿಸಬಹುದು.

ಬುಡಕಟ್ಟು ಜನಾಂಗಗಳಿಗೆ ಪ್ರಕೃತಿ ಸರ್ವಶಕ್ತಿ ರೂಪಿಯಾಗಿತ್ತು. ಪಂಚಭೂತಗಳು ದೈವ ಸ್ವರೂಪಿಗಳಾಗಿದ್ದವು. ಹುಟ್ಟು, ಸಾವು-ಎಲ್ಲ ಬಗೆಯ ಪ್ರತಿಕ್ರಿಯೆ-ಕ್ರಿಯಾದಿಗಳೆಲ್ಲವೂ ಅತೀತವಾದ ಶಕ್ತಿಯ ಕೃಪೆಯೆನ್ನುವ ಅಚಲ ನಂಬಿಕೆ. ಕಾಡು ಮಡಿಲಿನೊಂದಿಗೆ ಒಂದಾಗಿ ಬದುಕುವ ಇವರು ಪಶುಪಾಲನೆಗಾಗಿ ಅಲೆಮಾರಿಗಳಾಗಿ ಕೆಲವೊಮ್ಮೆ ನಿರ್ದಿಷ್ಟ ಭಾಗದಲ್ಲಿ ಜೀವನ ನಡೆಸುತ್ತಿದ್ದರು. ಹತ್ತು-ಹಲವಾರು ನೇಮ-ನೀತಿ ಕಟ್ಟುಪಾಡುಗಳನ್ನು ಹಿರಿಯರ ಮುಂದಾಳತ್ವದಲ್ಲಿ ರಚಿಸಿಕೊಂಡು ಅಭೇದವಾದ ರೀತಿಯಲ್ಲಿ ಬದುಕುತ್ತಿದ್ದರು. ತದನಂತರದಲ್ಲಿ ಎಲ್ಲವು ಪ್ರಕೃತಿ ಕೃಪೆಯೆಂದು ನಂಬಿದ್ದ ಬುಡಕಟ್ಟು ಸಮುದಾಯಗಳು ಪ್ರಾಕೃತಿಕ ಸಂಪತ್ತು ಇರುವ ಕಡೆ ನೆಲೆಯೂರಬೇಕೆನ್ನುವ ತಿಳುವಳಿಕೆಯಿಂದ ವಿಶೇಷವಾಗಿ ಜಲಮೂಲವಿರುವ ಆಯಕಟ್ಟಿನ ಪ್ರದೇಶಗಳಲ್ಲಿ ನಿಂತರು. ಬದಲಾವಣೆಯ ಪ್ರಕ್ರಿಯೆಗಳ ನಡುವೆ ಸಂಕ್ರಮಣ ಅವಸ್ಥೆಗೆ ಬುಡಕಟ್ಟು ಸಮೂಹಗಳು ಒಳಗಾಗಿ ಜಾತಿಗಳಾಗಿ ರೂಪಾಂತರಗೊಳ್ಳಲು ತೊಡಗಿದವು. ಭೌಗೋಳಿಕ, ಸ್ಥಳೀಯ ಹಾಗೂ ಹೊರಗಿನವರಿಂದಾದ ತೊಂದರೆಗಳಿಂದ ಬುಡಕಟ್ಟು ಜನಾಂಗಗಳು ಛಿದ್ರೀಕರಣಗೊಂಡು ಗುಂಪು, ಗುಂಪಾಗಿ ಚದುರಿ ನಿರ್ಧಿಷ್ಟ ಪ್ರದೇಶದಲ್ಲಿ ನೆಲೆಯೂರಿದ ಪರಿಣಾಮವಾಗಿ ಹಳ್ಳಿಗಳು ರಚನೆಯಾಗಲು ತೊಡಗಿರಬಹುದು. ಹಳ್ಳಿಗಳು ರೂಪುಗೊಂಡು ಹಲವು ಜನಾಂಗಗಳು ಒಟ್ಟಿಗೆ ವಾಸಿಸುವ ಹಿನ್ನೆಲೆಯಲ್ಲಿ ವೃತ್ತಿಯಾಧಾರಿತ ಅಥವಾ ಕುಲಾಧಾರಿತ ಅಥವಾ ವಿಶಿಷ್ಟಗುಣಾಧಾರಿತವಾಗಿ ಜಾತಿಗಳು ಬೇರೂರಲು ತೊಡಗಿರಬೇಕು.

ಸಮಾಜಶಾಸ್ತ್ರಜ್ಞರಾದ ಎಸ್.ವಿ. ಕೇತಕರ್ ಅವರು ಹೇಳುವಂತೆ ಜಾತಿಯು ಒಂದು ಸಮೂಹವಾಗಿದ್ದು ಎರಡು ಗುಣಲಕ್ಷಣಗಳನ್ನು ಹೊಂದಿವೆ.

೧. ಸದಸ್ಯನಾಗಿ ಹುಟ್ಟಿದವನಿಗೆ ಮಾತ್ರ ಸದಸ್ಯತನವಿರುವುದು ಮತ್ತು ಹಾಗೆ ಹುಟ್ಟಿದವರೆಲ್ಲರೂ ಅದರಲ್ಲಿ ಸೇರ್ಪಡೆಯಾಗುವವರು.

೨. ಸಮಾಜದ ಹೊರಗಡೆಯಿಂದ ವಿವಾಹವಾಗದಂತೆ ಸದಸ್ಯರು ಕಠೋರವಾದ ಸಾಮಾಜಿಕ ನಿಯಮಗಳಿಂದ ನಿರ್ಬಂಧಿತರಾಗಿರುವರು.

ಈ ವ್ಯಾಖ್ಯಾನ ಜಾತಿ ಮತ್ತು ಅನ್ಯ ಜಾತಿಗಳ ನಡುವೆ ವಿವಾಹ ಸಂಬಂಧ ಅಥವಾ ರಕ್ತ ಸಂಬಂಧವನ್ನು ಏರ್ಪಡಿಸಲು ಸಾಧ್ಯವಾಗುವುದಿಲ್ಲ ಮತ್ತು ಸಂಬಂಧಗಳು ಏರ್ಪಟ್ಟಲ್ಲಿ ಯಾವುದೇ ಪುರಸ್ಕಾರವಿರುವುದಿಲ್ಲ ಎಂಬ ಸ್ಪಷ್ಟಪಡಿಸುತ್ತದೆ.

ಬುಡಕಟ್ಟು ಸಮುದಾಯಗಳು ಸಾಮಾನ್ಯವಾಗಿ ಜಗತ್ತಿನ ಸೃಷ್ಟಿ ಮತ್ತು ತಮ್ಮ ಸಮುದಾಯದ ಸೃಷ್ಟಿಗೆ ಗಾಢವಾದ ಸಂಬಂಧಗಳನ್ನು ಹೊಂದಿರುವ ಪುರಾಣಗಳನ್ನು ಸೃಷ್ಟಿ ಮಾಡಿರುತ್ತಾರೆ. ಕನ್ನಡ ಜನಪದ ಸಾಹಿತ್ಯದಲ್ಲಿ ಈ ಬಗೆಯ ಹೇರಳ ಸೃಷ್ಟಿ ಪುರಾಣಗಳಿವೆ. ಒಕ್ಕಲಿಗರು, ಕುಂಚಿಟಿಗರು, ಕುರುಬರು, ಗೊಲ್ಲರು, ಬೇಡರು ಮುಂತಾದ ಹಲವು ಸಮಾಜಗಳಲ್ಲಿ ಈ ಬಗೆಯ ಸೃಷ್ಟಿ ಪುರಾಣಗಳಿವೆ. ಹಿ.ಚಿ. ಬೋರಲಿಂಗಯ್ಯನವರ ವಿಶ್ಲೇಷಣೆಯಂತೆ ಭಾರತದಂತಹ ಒಂದು ದೇಶದಲ್ಲಿ ಒಂದೊಂದು ವರ್ಗ, ಜಾತಿ ಮತ್ತು ಸಮುದಾಯಗಳು ಅವರವರದೇ ಆದ ಲೋಕ ಸೃಷ್ಟಿಯನ್ನು ತಮ್ಮ ಪುರಾಣಗಳ ಮೂಲಕ ಅಭಿವ್ಯಕ್ತಿಸಿವೆ.[1] ಇಲ್ಲಿ ಲೋಕಸೃಷ್ಟಿ ಎಂದರೆ ಜನಪದರ ಸಾಮಾಜಿಕ ಮತ್ತು ಸಾಂಸ್ಕೃತಿಕ ಮನೋಭಾವವಾಗಿದೆ.

ಕುರುಬರು, ಗೊಲ್ಲರು ಕುಂಚಿಟಿಗರು ಮುಂತಾದ ಬುಡಕಟ್ಟು ಸಮುದಾಯಗಳು ಪಶುಪಾಲನೆ, ಹೈನುಗಾರಿಕೆ, ಕುರಿ ಸಾಕಾಣಿಕೆ, ಬೇಟೆ ಹಿನ್ನೆಲೆಯಲ್ಲಿ ಬದುಕುತ್ತಿದ್ದವರು. ಕುರಿಸಾಕಾಣಿಕೆ, ಕಂಬಳಿ ನೇಯ್ಗೆ, ಕೃಷಿ ಪ್ರಧಾನ ವೃತ್ತಿಯಾದ ಹಿನ್ನೆಲೆಯಲ್ಲಿ ಆಯಾ ಸಮುದಾಯಗಳು ಗುಂಪುಗಳಾಗಿ ಬೇರ್ಪಡುವ ಬೆಳವಣಿಗೆಯನ್ನು ಕಂಡಿರಬಹುದು. ಜೊತೆಗೆ ಜಾತಿಗಳಾಗಿ ಪರಿವರ್ತನೆಯಾಗುವ ಪೂರ್ವದಲ್ಲಿನ ಜೀವನಶೈಲಿ, ಸಮಾನ ಆಚರಣೆಗಳು ಹಾಗೂ ನಂಬಿಕೆಗಳಲ್ಲಿ ಸಾಮ್ಯತೆ ಇರುವುದರಿಂದ ಏಕತೆ ಮತ್ತು ಐಕ್ಯತೆ ಸಾಧ್ಯವಾಗಿರಬಹುದು. ಏಕೆಂದರೆ ಆಯಾಯ ಬುಡಕಟ್ಟು ಸಮುದಾಯಗಳು ತಮ್ಮದೇ ಆದ ಕಟ್ಟು, ಕಟ್ಟಳೆಗಳನ್ನು ರೂಪಿಸಿಕೊಂಡು, ಅದರಂತೆ, ಕಟ್ಟುನಿಟ್ಟಾಗಿ ಪರಿಪಾಲಿಸಿಕೊಂಡು, ಪ್ರಕೃತಿಯೊಂದಿಗಿನ ಜೀವಸಂಬಂಧದಿಂದ ರೂಪುಗೊಂಡ ಮಾನವೀಯ ಭೂಮಿಕೆಯ ಗುಣಧರ್ಮಗಳಿಂದ ಈ ಸಮುದಾಯಗಳಲ್ಲಿ ಅನನ್ಯವಾದ ಮಾನವ ಸಂಬಂಧ ಏರ್ಪಟ್ಟಿರಬಹುದೇ ಹೊರತು, ಕಟ್ಟುಕಟ್ಟಳೆಗಳನ್ನು ಸಡಿಲಿಸಿಕೊಂಡು, ಅನಿರೀಕ್ಷಿತ ಸಾಂದರ್ಭಿಕ ಬಿಕ್ಕಟ್ಟುಗಳಿಗೆ ಸಿಲುಕಿ ಅಸಹಾಯಕರಾಗಿ ಸುಲಭ ಪರಿವರ್ತನೆಗೆ ಆಸ್ಪದ ಮಾಡಿಕೊಟ್ಟಿರಲು ಸಾಧ್ಯವಾಗಿಲ್ಲದಿರಬಹುದೆಂದು ಆಯಾ ಬುಡಕಟ್ಟು ಸಮುದಾಯಗಳು ಸಾಂಸ್ಕೃತಿಕ ಅಧ್ಯಯನ ಮೂಲಕ ಕಾಣಬಹುದಾಗಿದೆ.

ಜಾತಿ ಪೂರ್ವ ಬುಡಕಟ್ಟು ಸಮುದಾಯಗಳ ಮನೋಧರ್ಮ ಹಾಗೂ ಆರ್ಯ ಸಂಸ್ಕೃತಿ ಪ್ರಭಾವಗಳ ನೆಲೆಯಲ್ಲಿ ಜಾತಿಗಳಾಗಿ ರಚನೆಗೊಂಡ ತದನಂತರದಲ್ಲಿ, ಜಾತಿ ಮತ್ತು ಹೊರತಾತಿಗಳ ನಡುವೆ ಕಠೋರ ನಿರ್ಬಂಧಗಳು ಬೆಳೆದಿರಬೇಕು. ಲೋಕಸೃಷ್ಟಿಯ ಜೊತೆಗೆ ತಮ್ಮ ಸಮುದಾಯಗಳ ಉದಯ ಸಂಬಂಧ ಪುರಾಣ ಸೃಷ್ಟಿಗಳು ಪ್ರಚಲಿತವಾಗಿರುವುದು. ವೃತ್ತಿ ಸಂಬಂಧ ಹಿನ್ನೆಲೆಯಲ್ಲಿ ಸಮುದಾಯಗಳ ನಡುವೆ ಸಂಬಂಧಗಳನ್ನು ಏರ್ಪಟ್ಟಿರಬಹುದೆನ್ನುವ ನಿಲುವುಗಳು ಈ ಬಗೆಗಿನ ವಿಚಾರಗಳಿಂದ ಒಂದು ಬುಡಕಟ್ಟು ಸಮುದಾಯದಿಂದ ಮತ್ತೊಂದು ಬುಡಕಟ್ಟು ರೂಪಗೊಂಡಿದೆನ್ನುವ ಕೆಲವು ಐತಿಹ್ಯಗಳು ನೆಲೆಯಲ್ಲಿ ತೀರ್ಮಾನಕ್ಕೆ ಬರುವುದು ಸರಿಯಲ್ಲ. ಸಮರ್ಪಕವಲ್ಲ ಎಂದೆನಿಸುತ್ತದೆ. ಏಕೆಂದರೆ ಕುರುಬರು, ಗೊಲ್ಲರು, ಕುಂಚಿಟಿಗರು ಈ ಸಮುದಾಯಗಳು ಕುರುಬರ ಒಳಪಂಗಡಗಳು ಎಂದು ಹೇಳುತ್ತಿರುವುದು ಮತ್ತು ಕೆಲವೊಮ್ಮೆ ಒಳಪಂಗಡಗಳೆಂದು ಹೇಳಲು ಸಾಧ್ಯವಾಗುವುದಿಲ್ಲ ಎಂದು ಹೇಳುತ್ತಿರುವುದು ಕೇಳಿಬರುತ್ತಿದೆ. ಇದಕ್ಕೆ ಸಂಬಂಧಿಸಿದ ಕೆಲವು ಪ್ರಸಂಗಗಳನ್ನು ನೋಡಬಹುದು.

ತೀ.ನಂ. ಶಂಕರನಾರಾಯಣ ಅವರು ಗೊಲ್ಲರಿಗೆ ಕುರಿಗಳು ದೊರಕಿದ ಐತಿಹ್ಯವನ್ನು ವಿಶ್ಲೇಷಿಸಿದ್ದಾರೆ.[2] ಹುತ್ತದ ಕೊವೆಯಿಂದ ದಷ್ಟಪುಷ್ಟವಾದ ಕುರಿಗಳು ಹಿಂಡು ಹುಂಡು ಹೊರನುಗ್ಗಿ ಬರುವುದನ್ನು ಕಂಡು ಹೆದರಿದ ಕುರುಬರ ಹುಡುಗ ಸಾಕಿ ಸಲಹಲು ದಾರಿ ಕಾಣದಿದ್ದಾಗ ಕಾಡು ಗೊಲ್ಲರವನು ಕುರಿಗಳ ಉಸ್ತುವಾರಿ ನೋಡಿಕೊಳ್ಳುವುದಾಗಿ ತಿಳಿಸುತ್ತಾನೆ. ಈ ಪ್ರಸಂಗದಿಂದ ವ್ಯಕ್ತವಾಗುವ ಸಂಗತಿಗಳೆಂದರೆ ಕುರುಬರು, ಕಾಡುಗೊಲ್ಲರು ಈಗಾಗಲೇ ತಮ್ಮ ಸಮುದಾಯಕ್ಕೊಂದು ಅಸ್ಲಿತೆಯ ರೂಪಕವಾಗಿ ಹೆಸರನ್ನಿಟ್ಟುಕೊಂಡಿದ್ದರು ಮತ್ತು ಕುರುಬರಿಂದ ಕುರಿಗಳ ಹಿಂಡು ಸೃಷ್ಟಿಯಾಯಿತಾದರೂ ಕುರಿ ಸಾಕಾಣಿಕೆ ಕಾಡುಗೊಲ್ಲರ ಹೊಣೆಯಾಯಿತು ಎಂದು ತಿಳಿದುಬರುತ್ತದೆ. ಕುರಿ ಹಿಂಡುಗಳ ಉದಯ ಮತ್ತು ಕುರಿ ಸಾಕಾಣಿಕೆಯ ಹೊಣೆ ಕುರುಬರು ಮತ್ತು ಕಾಡುಗೊಲ್ಲರ ಸಮುದಾಯದ್ದಾದ ಮೇಲೆ ಕುರುಬರ ಒಳಪಂಗಡ ಗೊಲ್ಲರು ಎಂದು ಹೇಳಲು ಸಾಧ್ಯವಾಗುವುದಿಲ್ಲ.

ಕಾಳೇಗೌಡ ನಾಗವಾರರು ಬೇವಿನಹಳ್ಳಿ ಗೊಲ್ಲರಹಟ್ಟಿಯಲ್ಲಿ ನಡೆಯುವ ಯಜಮಾನ ಹಬ್ಬ ಕುರಿತಾದ ವಿವರಣೆ ನೀಡಿದ್ದಾರೆ. ಯಜಮಾನರ ಹಬ್ಬದ ದಿನ ಗೊತ್ತಾದ ಮನೆಗಳ ಕುರುಬರು ಕಾಡುಗೊಲ್ಲರ ಮನೆಗಳಿಗೆ ಬಂದು ಪೂಜೆಯನ್ನು ನಡೆಸಿಕೊಂಟ್ಟು ಕುರಿಗಳ ಏಳಿಗೆಗಾಗಿ ಶುಭ ಹಾರೈಸುತ್ತಾರೆ. ಗಾಢವಾಡ ಆತ್ಮೀಯತೆಯನ್ನು ಸಂಕೇತಿಸುವ ಕೆಲವು ಆಚರಣೆ ಮತ್ತು ನಡವಳಿಕೆಗಳನ್ನು ಈ ಸಂದರ್ಭದಲ್ಲಿ ನಾವು ಕಾಣಬಹುದು. ಈ ಕೃತಜ್ಞತಾ ಶ್ರೇಯಸ್ಸು ಕುರುಬರು ಗೊಲ್ಲರಿಗೆ ಕೋರುವುದರ ಹಿನ್ನೆಲೆಯಲ್ಲಿ ವರ್ಷಕ್ಕೆ ಎರಡು ಸಲ ಕುರಿಗಳ ತುಪ್ಪಟ ಕತ್ತರಿಸಿಕೊಂಡು, ಕುರಿಸಾಕಾಣಿಕೆ ಮಾಡಿದವರಿಗೆ ಏಳ್ಗೆಯನ್ನು ಹಾರೈಸುವುದೇ ಆಗಿದೆ. ಅಂದರೆ ಗಢವಾದ ಆತ್ಮೀಯತೆಯ ಬಾಂಧವ್ಯ ಮತ್ತು ಪೂರಕ ವೃತ್ತಿ ಬಾಂಧವ್ಯ ಹಾಗೂ ಜೀವನ ನಿರ್ವಹಣೆಯ ವೃತ್ತಿ ಸಂಬಂಧಗಳ ಹಿನ್ನೆಲೆಯಲ್ಲಿ ಅಥವಾ ನೆಲೆಯಿಂದ ಸುಲಭವಾಗಿ, ಸರಳವಾಗಿ, ಕುರುಬರ ಒಳಪಂಗಡ ಗೊಲ್ಲರು ಎಂದು ಹೇಳಲು ಸಾಧ್ಯವಾಗುವುದಿಲ್ಲ. ಏಕೆಂದರೆ ಕಾಳೇಗೌಡ ನಾಗವಾರರು ಹೇಳುವಂತೆ ಕುರಿಗಳು ಕಾಡುಗೊಲ್ಲರ ಪಾಲಾಗಿ, ಅವುಗಳ ತುಪ್ಪಟ ತೆಗೆದು ಕಂಬಳಿ ನೇಯುವ ಕೆಲಸ ಕುರುಬನಿಗೆ ಉಳಿಯುತ್ತದೆ.[3] ಈ ವಿಚಾರದಿಂದ ಕುರುಬರು ಮತ್ತು ಗೊಲ್ಲರು ಸ್ವತಂತ್ರ ಸಮುದಾಯದವರೆಂದು ಹೇಳಬಹುದು.

ಕುಂಚಿಟಿಗರು ಕುರುಬರ ಒಳಪಂಗಡದವರೆಂದು ಹೇಳುವುದರ ಮೂಲಕ ಹಲವು ವಿದ್ವಾಂಸರು ಅದರಲ್ಲೂ ಕುಂಚಿಟಿಗ ಸಮುದಾಯದವರೇ ಈ ಮಂಡನೆ ಮಾಡುವ ಹಿನ್ನೆಲೆಯಲ್ಲಿ ನನಗೆ ಕಾಣುವುದು ಜಾತ್ಯಾತೀತ ಎನ್ನುವ ಸುಲಭ ಆದರ್ಶವಾದ ಮತ್ತು ಸರಳವಾದ ಮಾಹಿತಿಗಳು-

೧. ಉಂಡೆ ಎತ್ತರಾಯ ಮತ್ತು ಸಮೂಹದವರಿಗೆ ನದಿ ಅಡ್ಡಲಾಗಿ (ನದಿ ಯಾವುದೆಂಬುದರ ಬಗ್ಗೆಯೇ ಗೊಂದಲಗಳಿವೆ) ದಾರಿಬಿಡಲು ಮನುಷ್ಯನ ತಲೆಯೊಂದಿಗೆ ಪಾವುರಕ್ತ ಕೋರಿದಾಗ ಕುರಿಗಾಹಿ ವ್ಯಕ್ತಿ ಬಂದು, ಹೊಳೆದಾರಿ ಬಿಡಿಸಿದರೆ ನಿಮ್ಮ ಮಗಳನ್ನು ಕೊಟ್ಟು ನನಗೆ ಮದುವೆ ಮಾಡುವುದಾದರೆ ತಾನು ಬಲಿಯಾಗುತ್ತೇನೆಂದು, ಇವರು ಅದಕ್ಕೊಪ್ಪಿದವರೆಂದೂ ಕುಂಚಿಟಿಗರ ಸಂಬಂಧಿಸಿದ ಎಲ್ಲ ಕಥೆಗಳು ಹೇಳುತ್ತವೆ. ಇಲ್ಲಿ ಕುರಿಗಾಹ ವ್ಯಕ್ತಿ ಕುರುಬರವನು ಎನ್ನುವ ಸರಳವಾದವನ್ನು ಮಂಡಿಸುತ್ತಾರೆ.

ತೀ.ನಂ.ಶಂಕರನಾರಾಯಣ ಅವರು ಮತ್ತು ಕಾಳೇಗೌಡ ನಾಗವಾರರ ನಿಲುವಿನ ಹಿನ್ನೆಲೆಯಲ್ಲಿ ಕುರಿಸಾಕಾಣಿಕೆ ಕಾಡುಗೊಲ್ಲರ ನಿರ್ವಹಣೆಯಾಗಿದೆ. ಅಂದರೆ ಕುರಿಗಾಹಿ ವ್ಯಕ್ತಿ ಯಾರು ಪಶುಪಾಲಕ ಸಂಸ್ಕೃತಿಯ ಕುಂಚಿಟಿಗರು, ಕುರುಬರು, ಗೊಲ್ಲರು ಕುರಿಸಾಕಾಣಿಕೆ ಮಾಡುವವರಾಗಿರಬಹುದೇ! ಈ ಹಿನ್ನೆಲೆಯಲ್ಲಿ ಕುರಿ ಕಾಯುವವರು ಕುರುಬರೆಂದು ಗುರುತಿಸುವುದು ಅವಸರದ ಅಭಿಪ್ರಾಯವಾಗುತ್ತದೆ.

೨. ಕುಂಚಿಟಿಗ ಪದ ಮೂಲದ ಹಿನ್ನೆಲೆಯಲ್ಲಿ ಕಂಬಳಿ ನೇಯ್ಗೆಯಲ್ಲಿ ಬಳಸುವ ಕುಂಷಚ – ಕುಂಚ + ವಡಿಗ = ಕುಂಚವಡಿಗ (ಕುಂಚಿಟಿಗ) ಎಂದು ವಿವರಣೆಗಳಿವೆ. ಆದರೆ ಗುಂಪು ಅರ್ಥದ ನೆಲೆಯಲ್ಲಿ ಕುಂಚಿಟಿಗ ಪದ ಮೂಲ ವಿವರಣೆಗಳಿವೆ.

೩. ವಿವಾಹದ ಶಾಸ್ತ್ರಗಳಲ್ಲಿ ಬಳಸುವ ಕರಿಕಂಬಳಿ, ವಧೂವರರ ಕೈಗೆ ಕುರಿಉಣ್ಣೆ ದಾರದ ಕಂಕಣ, ಕುರಿಹಿಕ್ಕಿಯ ರಾಶಿಪೂಜೆ.

೪. ಕುರುಬ ಕೆಟ್ಟು ಕುಂಚಿಟಿಗನಾದ (ಗಾದೆ)

ಈ ಮೇಲಿನ ವಿಚಾರಗಳಿಂದ ಸ್ಪಷ್ಟವಾಗುವುದೆಂದರೆ ಕುರುಬರು, ಕುಂಚಿಟಿಗರು, ಗೊಲ್ಲರು ಮೂಲತಃ ಬಡಕಟ್ಟು ಮೂಲಕ ಪಶುಪಾಲನ ಸಂಸ್ಕೃತಿಯವರು. ಆದ್ದರಿಂದ ಹಲವು ವಿಷಯಗಳಲ್ಲಿ ಸಾಮ್ಯತೆಯಿದೆ. ಈ ಸಾಮ್ಯತೆಗಳಿರುವ ಹಿನ್ನೆಲೆಯಲ್ಲಿ ಒಂದು ಸಮುದಾಯದ ಮೂಲ ಮತ್ತೊಂದು ಸಮುದಾಯ ಎನ್ನುವುದೇ ವಾಸ್ತವಕ್ಕೆ ದೂರವಾದ ಸಂಗತಿ.

 

[1]ಹಿ.ಚಿ. ಬೋರಲಿಂಗಯ್ಯ, ವಿಸ್ಮತಿ ಮತ್ತು ಸಂಸ್ಕೃತಿ, ಸಿ.ವಿ.ಜಿ. ಪಬ್ಲಿಕೇಷನ್ಸ್, ಬೆಂಗಳೂರು, ೨೦೦೧, ಪುಟ ೪೩.

[2]ತೀ,ನಂ.ಶಂಕರನಾರಾಯಣ, ಕಾಡುಗೊಲ್ಲರು ಸಂಪ್ರದಾಯಗಳು ಮತ್ತು ನಂಬಿಕೆಗಳು, ಪುಟ ೧೨೬.

[3]ಅದೇ.

—-
(ಸಂಖ್ಯಾಗೊಂದಲ / ಚುಕ್ಕಿಚಿಹ್ನೆಯ ಗೊಂದಲ ಇರುವುದರಿಂದ ಈ ಅಧ್ಯಾಯದ ಕೆಲವು ಅಡಿಟಿಪ್ಪಣಿಗಳನ್ನು ನಮೂದಿಸಿಲ್ಲ)