ಒಂದು ಜನಾಂಗದ ಇತಿಹಾಸವು ಪುರಾತನವಾದುದು ಮತ್ತು ಸಾರ್ವತ್ರಿಕವಾದುದು. ಜಾಗತಿಕ ಇತಿಹಾಸದಲ್ಲಿ ಪ್ರತಿಯೊಂದು ಜನಾಂಗವೂ ಒಂದೊಂದು ಧರ್ಮವನ್ನು ಆಚರಿಸಿಕೊಂಡು ಬರುವ ವಿಚಾರ ಸರ್ವೆ ಸಾಮಾನ್ಯವಾದುದು. ಧರ್ಮದ ಮೂಲಕವಾಗಿ ಪ್ರತಿಯೊಂದು ಜನಾಂಗ ತನ್ನನ್ನು ಗುರುತಿಸಿಕೊಳ್ಳುವ ಕಾರ್ಯವನ್ನು ಮಾಡಿದೆ. ಪ್ರಪಂಚದಲ್ಲಿ ಪ್ರಬಲವಾದ ಧರ್ಮಗಳು ತಮ್ಮ ಸಾಮ್ರಾಜ್ಯವನ್ನು ಕಟ್ಟಿಕೊಂಡು ತಮ್ಮ ಅಸ್ತಿತ್ವವನ್ನು ಕಂಡುಕೊಳ್ಳುವ ಕೆಲಸ ಮಾಡಿವೆ. ಹಿಂದೂ, ಮುಸ್ಲಿಂ, ಕ್ರೈಸ್ತ ಮತ್ತು ಬೌದ್ಧ ಧರ್ಮಗಳು ವಿಶ್ವದಾದ್ಯಂತ ವ್ಯಾಪಿಸಿಕೊಂಡು ವಿಶಾಲತೆಯನ್ನು ಮೆರೆದಿವೆ. ಅದರಲ್ಲಿ ಕ್ರಿಶ್ಚಿಯನ್‌ ಧರ್ಮವೂ ಅತಿ ವ್ಯಾಪಕತೆಯನ್ನು ಪಡೆದುಕೊಂಡ ಧರ್ಮವಾಗಿದೆ.

ಪ್ರತಿಯೊಂದು ಧರ್ಮಕ್ಕೂ ಒಂದೊಂದು ಸಂಸ್ಕೃತಿ, ಆಚಾರ-ವಿಚಾರ, ರೀತಿ-ನೀತಿಗಳಿವೆ. ಅವುಗಳನ್ನು ಆಚರಿಸಿಕೊಂಡು ಸಂರಕ್ಷಿಸಿಕೊಂಡು ಅದು ಮುಂದುವರೆಯುತ್ತಿರುತ್ತದೆ. ಕಾಲಚಕ್ರದಲ್ಲಿ ಸಿಲುಕಿಕೊಂಡ ಹಲವಾರು ಧರ್ಮಗಳು ಸಂಘರ್ಷ ಮತ್ತು ಸಂಗ್ರಾಮವನ್ನು ಮಾಡಿಕೊಂಡೇ ಬಂದಿವೆ. ಎಲ್ಲ ಧರ್ಮಗಳ ತಿರುಳು ಒಂದೇ ಆದರೂ ಅವುಗಳನ್ನು ಆಚರಿಸಿಕೊಂಡು ಬರುವ ಜನಾಂಗ ಮಾತ್ರ ವಿಭಿನ್ನ. ಕೆಲವು ಧರ್ಮಗಳು ಜಾಗತಿಕ ಮಟ್ಟದಲ್ಲಿ ತಮ್ಮ ಪ್ರಭಾವ ಬೀರಲೋ, ಧರ್ಮ ಪ್ರಚಾರ ಮಾಡುವ ಉದ್ದೇಶದಿಂದಲೋ, ಜನಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವ ಕಾರಣದಿಂದಲೋ, ಮಾನವೀಯತೆಯನ್ನು ಸಾರುವ ಕಾರಣದಿಂದಲೋ, ತಮ್ಮ ಧರ್ಮವೇ ಶ್ರೇಷ್ಠ ಎಂದು ಹೇಳುವ ಉದ್ದೇಶದಿಂದಲೋ ಹೀಗೆ ನೂರಾರು ಕಾರಣಗಳಿಂದ ಜನರನ್ನು ತಮ್ಮ ಧರ್ಮಕ್ಕೆ ಸೆಳೆಯಲು ನಿರಂತರ ಪ್ರಯತ್ನ ಮಾಡುತ್ತಲೇ ಬಂದಿದ್ದಾರೆ. ಇಂದು ಸಹ ಅದು ಮುಂದುವರೆದಿದೆ. ಒಂದು ಜನಾಂಗ ಮತ್ತೊಂದು ಜನಾಂಗವನ್ನು ತಮ್ಮ ಧರ್ಮಕ್ಕೆ ಮತಾಂತರ ಮಾಡಿಕೊಳ್ಳುವ ಪ್ರಕ್ರಿಯೆ ಆದಿಕಾಲದಿಂದಲೂ ನಡೆದು ಬಂದಿದೆ.

ಮತಾಂತರ ಎನ್ನುವುದು ಒಂದು ಸಾಮಾಜಿಕ ಪಿಡುಗು. ಇದಕ್ಕೆ ಬಲಿಯಾಗುವವರು ಹೆಚ್ಚಾಗಿ ದೀನದಲಿತರು, ಬಡವರು, ಅನಾಥರು, ಅಸ್ಪೃಶ್ಯರು, ಶೋಷಣೆಗೊಳಗಾದವರು ಹಾಗೂ ಯಾವುದೇ ಜಾತಿಯ ಅಥವಾ ಧರ್ಮದ ಆರ್ಥಿಕವಾಗಿ ಹಿಂದುಳಿದ ಬಡವರು. ಈ ಪ್ರಕ್ರಿಯೆ ಯಾಕೆ ಜರಗುತ್ತದೆ ಎಂಬುದಕ್ಕೆ ನಿರ್ದಿಷ್ಟ ಕಾರಣಗಳಿಲ್ಲ. ಅದರ ಇನ್ನೊಂದು ಮುಖವನ್ನು ನೋಡುವುದಾದರೆ ಅನಕ್ಷರತೆ, ಅಜ್ಞಾನ, ವ್ಯಾಪಾರ, ಮೂಢನಂಬಿಕೆ ರಾಜಕೀಯ, ಯುದ್ಧ ಔದ್ಯೋಗಿಕ ಕ್ರಾಂತಿ, ಧರ್ಮದಲ್ಲಿರುವ ಅನಿಷ್ಟ ಪದ್ಧತಿಗಳು, ಆಮಿಷಗಳು, ಮೊದಲಾದವುಗಳು. ಈ ದೃಷ್ಟಿಯನ್ನಿಟ್ಟುಕೊಂಡು ಆಲೋಚಿಸುವುದಾದರೆ ಜಗತ್ತಿನಲ್ಲಿ ಕ್ರೈಸ್ತ ಧರ್ಮವು ಅನ್ಯಧರ್ಮೀಯರನ್ನು ಸ್ವಧರ್ಮಕ್ಕೆ ಸೆಳೆಯುವ ಪ್ರಯತ್ನವನ್ನು ನಿರಂತರವಾಗಿ ಮುಂದುವರಿಸಿಕೊಂಡು ಬಂದಿದೆ.

ಮತಾಂತರವೆಂಬ ಮಾಯಾಜಾಲವನ್ನು ಹೆಣೆದು ಅದರಲ್ಲಿ ಹಲವಾರು ಜಾತಿ ಧರ್ಮದವರನ್ನು ತನ್ನ ಬಲೆಯಲ್ಲಿ ಬೀಳಿಸಿಕೊಳ್ಳುವಲ್ಲಿ ಕ್ರೈಸ್ತ ಧರ್ಮವು ಇತರ ಧರ್ಮಗಳಿಗಿಂತ ಮುಂದಿದೆ. ಈ ಜಾಲದಲ್ಲಿ ಅತೀ ಸುಲಭವಾಗಿ ಭಾರತ ಬಿದ್ದಿರುವುದನ್ನು ಕಾಣುತ್ತೇವೆ. ಏಕೆಂದರೆ ಅನೇಕ ಜಾತಿ, ಧರ್ಮ, ಸಂಸ್ಕೃತಿ, ಸಂಪ್ರದಾಯ, ಆಚಾರ-ವಿಚಾರ, ನಂಬಿಕೆಗಳಿಂದ ಕೂಡಿದ ಭಾರತದಲ್ಲಿ ಅನಂತ ವೈವಿಧ್ಯತೆಯಿದೆ. ಈ ಸಂಗತಿಗಳನ್ನರಿತ ಕ್ರಿಶ್ಚಿಯನ್‌ ಧರ್ಮವು ಉದಾರತೆಯನ್ನು ತೋರಿ ತನ್ನ ತೆಕ್ಕೆಗೆ ಬಂದ ಹಲವಾರು ಜಾತಿ –ಧರ್ಮದ ಜನರನ್ನು ತನ್ನೆಡೆಗೆ ಸೆಳೆಯಲು ಅನೇಕ ಆಸೆ-ಆಮಿಷಗಳನ್ನು ತೋರಿ ತನ್ನ ಜಾಲದಲ್ಲಿ ಸಿಲುಕಿಕೊಳ್ಳಲು ಪ್ರಯತ್ನ ಮಾಡುತ್ತಲೇ ಇದೆ. ಇದಕ್ಕೆ ಪೂರಕವೆನ್ನುವಂತೆ ಇಲ್ಲಿಯ ಜನರು ಧಾರ್ಮಿಕ ಕಟ್ಟುಪಾಡುಗಳಿಂದ ಬೇಸತ್ತು ಅನಿವಾರ್ಯವಾಗಿ ತನ್ನನ್ನು ಸಮಾನವಾಗಿ ಕಾಣುವ ಧರ್ಮವನ್ನು ಅರಸುತ್ತಿರುವಾಗ ಕ್ರೈಸ್ತಧರ್ಮ ಅಂಥವರಿಗೆ ಒಂದು ವರದಾನವಾಗಿದೆ. ಇದರ ಪ್ರತಿಫಲವೆನ್ನುವಂತೆ ಒಡಮೂಡಿ ಬಂದುದು ಮತಾಂತರ.

ಕಾಲದ ಸೆಳೆವಿನ ಸುಳಿಯಲ್ಲಿ ಸಿಕ್ಕು ಸಮಾಜ ನಿರ್ಮಿತ ಸಂಕೋಲೆಗಳಿಂದ ಬಿಡುಗಡೆ ಹೊಂದಲು ಅನಿವಾರ್ಯವೋ ಅವಶ್ಯಕತೆಯೋ ಎಂಬ ಭ್ರಮೆಯಲ್ಲಿ ಸಿಲುಕಿಕೊಂಡ ಜನತೆ ಬದಲಾವಣೆಯಾಗುತ್ತಿದ್ದಾರೆ. ಸಮಾಜದಲ್ಲಿನ ಅನೇಕ ಸಣ್ಣ-ಪುಟ್ಟ ಜಾತಿ ಸಮುದಾಯಗಳು ತಮ್ಮ ಅಸ್ತಿತ್ವವನ್ನು ಸ್ವಧರ್ಮದಿಂದ ಕಳಚಿಕೊಂಡು ಇನ್ನೊಂದು ಧರ್ಮದಲ್ಲಿ ಕಂಡುಕೊಳ್ಳುವ ಹವಣಿಕೆಯಲ್ಲಿದ್ದಾಗ ಅವರಿಗೆ ಮುಕ್ತವಾದ ಆಹ್ವಾನವನ್ನು ನೀಡಿದ ಧರ್ಮವೆಂದರೆ ಕ್ರೈಸ್ತ ಧರ್ಮ. ಹೀಗಾಗಿ ಅನೇಕ ಜಾತಿ-ಧರ್ಮದ ಜನರು ಕ್ರೈಸ್ತ ಧರ್ಮವನ್ನು ಸೇರಲು ಅಣಿಯಾದವು. ಅವುಗಳಲ್ಲಿ ಕುರುಬ ಜನಾಂಗವೂ ಒಂದು.

ಕುರುಬ ಜನಾಂಗದ ಮೂಲ ಉದ್ಯೋಗ ಕುರಿ ಸಾಕಾಣಿಕೆ, ನಂತರದಲ್ಲಿ ಕೃಷಿ. “ಯಾರು ತಮ್ಮ ಮೂಲದಿಂದ ಪರಿವರ್ತನೆ ಹೊಂದಿ ಕ್ರಿಶ್ಚಿಯನ್‌ ಧರ್ಮಕ್ಕೆ ಸೇರಿರುತ್ತಾರೋ ಅವರಿಗೆ ಕ್ರೈಸ್ತ ಕುರುಬರೆಂದು ಕರೆಯಲಾಗುತ್ತದೆ.” ಒಂದು ಜಾತಿಯನ್ನು ಬಿಟ್ಟು ಮತ್ತೊಂದು ಜಾತಿಗೆ ಸೇರುವುದು ಸುಮ್ಮನೆ ಅಲ್ಲ. ಕಾರಣಗಳು ಇರಲೇಬೇಕು. ವಿನಾಕಾರಣ ಯಾರೊಬ್ಬರೂ ಮತ್ತೊಂದು ಧರ್ಮಕ್ಕೆ ಸೇರಲು ಸಾಧ್ಯವೆ ಇಲ್ಲ ಎಂಬುದು ನನ್ನ ಬಲವಾದ ನಂಬಿಕೆ.

ಪರಿವರ್ತನೆ ಹೊಂದಲು ಕಾರಣಗಳು-ನಂಬಿಕೆಗಳು

೧. ಏಸುವು ಮೂಲತಃ ಒಬ್ಬ ಪರಿಶುದ್ಧ ಕುರುಬ. ಧರ್ಮಬೋಧಕರಾದ ಪಾದ್ರಿಗಳು ಮುಗ್ಧ ಜನತೆಗೆ ಏಸುವು ಸಹ ನಿಮ್ಮ ಕುರಿ ದೊಡ್ಡಿಯಲ್ಲಿ ಜನಿಸಿದವನು. ನೀವು ಅವನ ಆರಾಧಕರಾಗುವುದರಿಂದ ನಿಮ್ಮ ಕಷ್ಟಗಳು ದೂರವಾಗುತ್ತದೆ ಎಂದು ಬೋಧಿಸಿದಾಗ ಈ ಜನಾಂಗ ಆ ಧರ್ಮವನ್ನು ಸ್ವೀಕರಿಸಲು ಮನಸ್ಸು ಮಾಡಿರಬೇಕು.

೨. ಕುರುಬರಿಗೆ ಏಸುವೇ ಶ್ರೇಷ್ಟ, ಅವನನ್ನು ಬಿಟ್ಟು ಅನ್ಯ ದೇವರಿಲ್ಲ. ಏಕೆಂದರೆ ಪೂಜಾ ಸ್ಥಳವಾದ ಕುರಿದೊಡ್ಡಿ ಕುರುಬರಿಗೆ ಪವಿತ್ರವಾದುದು. ಕುರುಬನಾಗದಿದ್ದರೆ ದೊಡ್ಡಿಯಲ್ಲಿ ಜನಿಸಲು ಸಾಧ್ಯವಿಲ್ಲ. ನೀವು ದೇವರೆಂದು ಪೂಜಿಸುವ ಕುರಿಗಳು ಸಹ ದೊಡ್ಡಿಯಲ್ಲಿ ಹುಟ್ಟಿದವುಗಳಾದುದರಿಂದ ಕುರಿ ದೊಡ್ಡಿಯಲ್ಲಿ ಹುಟ್ಟಿದ ಕ್ರೈಸ್ತನನ್ನೇ ನೀವು ಆರಾಧಿಸಬೇಕು ಎಂದು ಬೋಧಿಸಿದರು.

೩. ಮುಗ್ಧ ಭಾವನೆಯಿಂದ ಕೂಡಿದ ಈ ಜನಾಂಗದ ಮನದಲ್ಲಿ ಭಕ್ತಿ-ಭಾವನೆ ಅಂಕುರವಾಗುವ ಹಾಗೆ ಅವರ ಮನಃ ಪರಿವರ್ತಿಸಲು ಪ್ರಯತ್ನಿಸಿದ ಫಲವಾಗಿ ಕುರುಬರು ಕ್ರೈಸ್ತ ಧರ್ಮ ಸೇರಲು ಮನಸ್ಸು ಮಾಡಿರಬೇಕು.

ಬಡತನ

ಮತಾಂತರ ಪ್ರಕ್ರಿಯೆಗೆ ಬಡತನವು ಒಂದು ಕಾರಣವಾಗಿದೆ. ಬಡತನವು ಎಂತಹ ಸ್ವಾಭಿಮಾನವಿದ್ದರೂ ಕೀಳುಮಟ್ಟಕ್ಕೆ ಇಳಿಸಲು ಕಾರಣವಾಗಿದೆ. ಬಡತನದ ಬೆಂಕಿಯಲ್ಲಿ ಬೆಂದ ಬದುಕಿಗೆ ಆಶ್ರಯ ನೀಡಿದ ವ್ಯಕ್ತಿಯಾಗಲಿ, ಧರ್ಮವಾಗಲಿ ಶ್ರೇಷ್ಠವಾಗುತ್ತದೆ. ಮೊದಲೇ ಬಡತನದಿಂದ ಬಳಲುತ್ತಿರುವ ಭಾರತದ ಬಡಜನತೆ ಸಹಜವಾಗಿ ಅನ್ಯ ಧರ್ಮೀಯರು ಒಡ್ಡಿದ ಆಸೆ ಆಕಾಂಕ್ಷೆಗಳಿಗೆ ಬಲಿಯಾಗಿ ಮತಾಂತರ ಹೊಂದಲು ಕಾರಣವಾಗಿರಬಹುದು. ಹೀಗಾಗಿ ಕ್ರೈಸ್ತಧರ್ಮ ಒಡ್ಡಿದ ಆಮಿಷಗಳಿಗೆ ಕುರುಬ ಜನಾಂಗವೂ ಮತಾಂತರ ಹೊಂದಿರಬಹುದು.

ಶಿಕ್ಷಣ (ಅನಕ್ಷರತೆ)

ಅನಕ್ಷರತೆ, ಅಜ್ಞಾನ, ಮೂಢನಂಬಿಕೆ, ಸಂಪ್ರದಾಯ ಮುಂತಾದ ಅಂಧಶ್ರದ್ಧೆಯಿಂದ ಈ ಜನಾಂಗ ಶಿಕ್ಷಣದಿಂದ ವಂಚಿತರಾಗಿದ್ದರು. ಇವರು ತಮ್ಮ ಕುಲಕಸುಬಾದ ಕುರಿ ಸಾಕಾಣಿಕೆ ಮಾಡುತ್ತ ನಾಡನ್ನು ಮರೆತು ಕಾಡಿನಲ್ಲಿಯೇ ವಾಸ್ತವ್ಯ. ಸರಿಯಾದ ತಿಳುವಳಿಕೆಯಿಲ್ಲದ ಈ ಸಮುದಾಯ ಕ್ರೈಸ್ತ ಧರ್ಮ ಒದಗಿಸಿದ ಸೌಲಭ್ಯಗಳನ್ನು ಪಡೆದುಕೊಳ್ಳುವ ಕಾರಣಕ್ಕಾಗಿ ಬಹುಶಃ ಮತಾಂತರ ಹೊಂದಿರಲು ಸಾಧ್ಯವಿದೆ.

ನಿಸರ್ಗಸಾಮ್ಯತೆ

ಕುರುಬರು ಸಾಮಾನ್ಯವಾಗಿ ಬೆಟ್ಟ, ಗುಡ್ಡ ಕಾಡು-ಮೇಡುಗಳಲ್ಲಿ ವಾಸಿಸುವ ಜನಾಂಗವಾಗಿತ್ತು. ನಾಡಿಗಿಂತ ಕಾಡನ್ನೇ ಹೆಚ್ಚು ಪ್ರೀತಿಸುತ್ತಿದ್ದರು. ಕುರುಬರು ತಮ್ಮ ಕುರಿಗಳನ್ನು ದೊಡ್ಡಿಯಲ್ಲಿ ಹಾಕಲು ಬಿದಿರಿನ ಕಟಕಟೆ ಮಾಡಿ ಕುರಿಗಳನ್ನು ಸಂರಕ್ಷಿಸಿಕೊಳ್ಳುತ್ತಿದ್ದರು. ಇದೇ ಮಾದರಿಯಲ್ಲಿಯೇ ಕ್ರೈಸ್ತರು ಕೂಡ ಮನೆಯನ್ನು ಕಟ್ಟಿ ಸುತ್ತಲು ಆವರಣವನ್ನು ಇದೇ ರೀತಿ ನಿರ್ಮಿಸಿಕೊಳ್ಳುತ್ತಿದ್ದರು. ಈ ಸಾಮ್ಯತೆಯಿಂದಲೂ ಕೂಡ ಮುಗ್ಧರಾದ ಇವರು ಆ ಧರ್ಮಕ್ಕೆ ಸೇರಿರಬಹುದು.

ನಿಸರ್ಗಪ್ರಿಯರಾದ ಕುರುಬರು ಹೆಚ್ಚಾಗಿ ಆಕಾಶ-ನಕ್ಷತ್ರ, ಬೆಟ್ಟ-ಗುಡ್ಡ, ಕೆರೆ-ನದಿಗಳ ಪರಿಸರದಲ್ಲಿ ವಾಸಿಸುತ್ತಿದ್ದ ಇವರು ಕ್ರೈಸ್ತನು ಸಹ ನಿಸರ್ಗದ ಮಡಿಲಲ್ಲಿ ಜನಿಸಿದ್ದರಿಂದ ಅವನು ಸಹ ಕುರುಬನೇ ಎಂಬ ಮುಗ್ಧ ಭಾವನೆಯಿಂದ ಪರಿವರ್ತನೆ ಹೊಂದಿರಲಿಕ್ಕೆ ಸಾಕು.

ಧರ್ಮ ಬೋಧನೆ

ಕ್ರೈಸ್ತ ಧರ್ಮ ಬೋಧಕರು ಭಾರತಕ್ಕೆ ಆಗಮಿಸಿದಾಗ ಅವರಿಗೆ ಇಲ್ಲಿಯ ಮೂಢನಂಬಿಕೆ, ಸಂಪ್ರದಾಯಬದ್ಧ ಆಚರಣೆ, ಕಂದಾಚಾರಗಳು, ಬಡತನ, ನಿರಕ್ಷರತೆ, ನಿರ್ಗತಿಕರು, ಅನಾಥರು, ಕೊಳಚೆ ಪ್ರದೇಶ ವಾಸಿಗಳು ಹೀಗೆ ಹಲವು-ಹತ್ತಾರು ಕಾರಣಗಳಿಗಾಗಿ ಸಮಾಜದಲ್ಲಿ ಶೋಷಣೆಗೊಳಪಟ್ಟ ಜನತೆ ಎಲ್ಲೆಲ್ಲಿ ಗೋಚರಿಸಿತೋ ಅಲ್ಲಲ್ಲಿ ತಮ್ಮ ಶಿಬಿರಗಳನ್ನು ಹೂಡಿ ಜನರಿಗೆ ತಮ್ಮ ಧರ್ಮಕ್ಕೆ ಸೇರುವಂತೆ ಧರ್ಮ ಬೋಧನೆಯನ್ನು ಮಾಡಲು ಪ್ರಾರಂಭಿಸಿದರು. ಅವರವರ ಧರ್ಮ ಆಚರಣೆಗಳಿಗೆ ಹೊಂದಾಣಿಕೆಯಾಗುವಂತಹ ಏಸುವಿನ ಸಂದೇಶಗಳನ್ನು ಪರಿವರ್ತನೆ ಮಾಡಿ ಬಿತ್ತಿ ತಮ್ಮ ಧರ್ಮಕ್ಕೆ ಸೆಳೆಯಲು ಪ್ರಯತ್ನಿಸಿದರು.

ಈ ಹಂತದಲ್ಲಿ ಕುರುಬ ಜನಾಂಗದವರಿಗೆ ಏಸುವಿನ ಜನನ ಕುರುಬರ ದೊಡ್ಡಿಯಲ್ಲಿ ಆಯಿತು. ಏಸುವಿನ ಮೊದಲ ದರ್ಶನವನ್ನು ಪಡೆದವರು ಕುರುಬರು. ಅಷ್ಟೇ ಅಲ್ಲ, ಸ್ವಾಮಿಯು ತನ್ನ ಮೊದಲ ಸಂದೇಶವನ್ನು ನೀಡಿದ್ದ ಸಹ ಮೊದಲು ಕುರುಬರಿಗೆ. ಅವನೇ ಜಗತ್ತನ್ನು ಸಂರಕ್ಷಿಸುವ ದೇವ ಎಂಬ ತ್ಯಾಗಿ ಸಂದೇಶಗಳ ಮೂಲಕ ಕುರುಬರನ್ನು ಕ್ರೈಸ್ತ ಧರ್ಮಕ್ಕೆ ಸೆಳೆಯಲು ಪ್ರಯತ್ನಿಸಿದಗ, ಮುಗ್ಧರಾದ ಜನ ಬಹುಶಃ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿರುವ ಸಾಧ್ಯತೆಯಿದೆ. ಮತಾಂತರ ಹೊಂದಿದ ಬಹುತೇಕ ಕುರುಬರು ಉಣ್ಣಿ ಕಂಕಣದವರು ಎಂಬುದಾಗಿ ಗಮನಿಸಬೇಕಾದ ಸಂಗತಿ.

ಮದುವೆ ವಿಚಾರ

ಕ್ರೈಸ್ತ ಕುರುಬರು ಮೂರು ತಲೆಮಾರುಗಳಿಂದ ಬದಲಾವಣೆಯಾಗುತ್ತಾ ಬಂದಿರುವುದನ್ನು ಕಾಣುತ್ತೇವೆ. ಅಜ್ಜನ ಕಾಲದಲ್ಲಿ ತೀವ್ರತರವಾಗಿದ್ದ ಬದಲಾವಣೆ ಮೊಮ್ಮಗನ ಕಾಲಕ್ಕೆ ಬರುವ ಸಂದರ್ಭದಲ್ಲಿ ಮತಾಂತರ ಪ್ರಕ್ರಿಯೆ ಬಹಳಷ್ಟು ಕಡಿಮೆಯಾಗಿದೆ. ಮೊದಲ ತಲೆಮಾರಿನಲ್ಲಿ ಹಿಂದೂ ಸಂಪ್ರದಾಯದಂತೆ ಮದುವೆಯಾಗುತ್ತ ಬಂದು ಮಗನ ಹಾಗೂ ಮೊಮ್ಮಗನ ಕಾಲದಲ್ಲಿ ಸಂಪೂರ್ಣ ಪರಿವರ್ತನೆಯಾಗುತ್ತಾ ಬಂದುದನ್ನು ಕಾಣುತ್ತೇವೆ. ಈಗ ಕ್ರೈಸ್ತ ಧರ್ಮ ಪದ್ಧತಿಯಂತೆ ಮುಂದುವರೆಸಿಕೊಂಡು ಬರುತ್ತಿದ್ದಾರೆ.

ಮದುವೆ ಪ್ರಕ್ರಿಯೆ ಹಿಂದೂ ಸಂಪ್ರದಾಯದಲ್ಲಿರುವಂತೆ ಸೋದರ ಮಾನವ ಮಗಳನ್ನಾಗಲಿ ಇಲ್ಲವೆ ಬೇರೆ ಕ್ರೈಸ್ತ ಕುಟುಂಬದವರೊಂದಿಗೆ ಅಂದರೆ ಕ್ರೈಸ್ತ ಧರ್ಮಕ್ಕೆ ವಿಭಿನ್ನ ಜಾತಿಯ ಜನರು ಮತಾಂತರಗೊಂಡಿದ್ದಾರೆ. ಹೀಗೆ ಬದಲಾವಣೆಗೊಂಡ ಎಲ್ಲ ಜಾತಿಯ ಕ್ರೈಸ್ತರೊಂದಿಗೆ ಸಂಬಂಧ ಬೆಳೆಸುವುದಿಲ್ಲ. ತಮ್ಮ ಜಾತಿಯ ಮತಾಂತರಗೊಂಡ ವ್ಯಕ್ತಿಗಳೊಂದಿಗೆ ಸಂಬಂಧ ಬೆಳೆಸಲು ಇಚ್ಚಿಸುತ್ತಾರೆ. ಈ ಮದುವೆಗೆ ಗಂಡು-ಹೆಣ್ಣಿನ ಕಡೆಯವರಿಂದ ಒಪ್ಪಿಗೆ ಪಡೆದು ನಿಶ್ಚಿತಾರ್ಥ ಕಾರ್ಯವನ್ನು ಮುಗಿಸುತ್ತಾರೆ. ಕೆಲವರು ವರದಕ್ಷಿಣೆ ಪಡೆದು ಇನ್ನು ಕೆಲವರು ವರದಕ್ಷಿಣೆಯಿಲ್ಲದೆಯೂ ಮದುವೆಯಾಗುವ ಪದ್ಧತಿಯಿದೆ. ಹೆಚ್ಚಾಗಿ ಕೆಥೊಲಿಕ್‌ ಪಂಥದ ಹುಡುಗಿಯನ್ನು ಮದುವೆಯಾಗುತ್ತಾರೆ.  ವಧುವರರು ಗೊತ್ತಾದ ದಿನ ತನ್ನ ಬಂಧುಬಾಂಧವರೊಂದಿಗೆ ಚರ್ಚಿಗೆ ಹೋಗಿ ಪಾತ್ರಿಯ ಸಮ್ಮುಖದಲ್ಲಿ ಕೆಲವು ಸ್ತೋತ್ರಗಳನ್ನು ಪಠಿಸಿ ಮದುಮಕ್ಕಳಿಗೆ ತಿಳಿಹೇಳಿ ಅತ್ಯಂತ ಸರಳವಾಗಿ ಅಂದರೆ ಉಂಗುರ ಬದಲಾಯಿಸುವುದರೊಂದಿಗೆ ಮದು ಪ್ರಕ್ರಿಯೆ ಅಂತ್ಯಗೊಳಿಸುತ್ತಾರೆ. ಹಿಂದೂಗಳ ತಾಳಿಯ ಹಾಗೆ ವಧುವಿನ ಕೈಗೆ ಉಂಗುರ ತೊಡಿಸುವ ಸಾಂಕೇತಿಕ ಕಾರ್ಯಕ್ರಮದೊಂದಿಗೆ ಮದುವೆ ಮುಗಿಯುತ್ತದೆ. ವಿವಾಹ ವಿಚ್ಛೇದನ ಬಹಳ ಕಡಿಮೆ. ಒಂದು ವಿವಾಹ, ವಿಚ್ಛೇದನವಾದರೂ ವಿಧವೆ ವಿಧರರು ಪುನರ್‌ ವಿವಾಹವಾಗುವುದಕ್ಕೆ ಅವಕಾಶವಿದೆ. ಇದಕ್ಕೆ ಕೆಲವು ನಿಯಮಗಳನ್ನು ವಿಧಿಸಿ ಪಾದ್ರಿಯು ಪುನರ್‌ ವಿವಾಹ ಕಾರ್ಯವನ್ನು ನೆರವೇರಿಸಿಕೊಡುತ್ತಾರೆ. ಬಹುಪತ್ನಿತ್ವಕ್ಕೆ ಧರ್ಮದಲ್ಲಿ ಅವಕಾಶ ಇಲ್ಲ. ಕುಟುಂಬದ ಯಜಮಾನಿಕೆಯನ್ನು ಹಿಂದೂ ಧರ್ಮದಂತೆ ಪುರುಷರೇ ಒಡೆಯನ ಪಾತ್ರವನ್ನು ನಿರ್ವಹಿಸುತ್ತಾನೆ. ಹಿಂದೂ ಸಂಪ್ರದಾಯದಂತೆ ತಂದೆಯ ಆಸ್ತಿಯ ಒಡೆತನವು ಕುಟುಂಬದ ಹಿರಿಯ ವ್ಯಕ್ತಿಗೆ ಬರುತ್ತದೆ. ಒಟ್ಟಾರೆಯಾಗಿ ಮದುವೆಗೆ ಸಂಬಂಧಪಟ್ಟಂತೆ ಹೆಚ್ಚಿನ ಖರ್ಚುವೆಚ್ಚಗಳಿಲ್ಲದೆ ಸರಳವಾಗಿ ಚರ್ಚಿನಲ್ಲಿ ಮದುವೆಗಳು ಜರುಗುತ್ತವೆ.

ಮತಾಂತರಗೊಳ್ಳದ ಇವರ ಸಂಬಂಧಿಕರ ಮದುವೆ, ಮುಂಜುವೆ, ಶುಭಕಾರ್ಯ, ಉತ್ಸವ ಇತ್ಯಾದಿಗಳಿಗೆ ಅವರ ಮನೆಗೆ ಹೋದಾಗ ಮೊದಲಿನ ಹಾಗೆ ನಡೆಸುವ ಪೂಜಾ-ಪುನಸ್ಕಾರಗಳ ಕಾರ್ಯದಲ್ಲಿ ನೇರವಾಗಿ ತೊಡಗಿಸಿಕೊಳ್ಳದೆ ಆಪ್ತರು, ಸ್ನೇಹಿತರು ಬಂದು ಅತಿಥ್ಯ ಸ್ವೀಕರಿಸಿ ಹೋಗುವ ರೀತಿಯಲ್ಲಿ ಮಾತ್ರ ಇವರನ್ನು ತೊಡಗಿಸಿಕೊಳ್ಳುತ್ತಾರೆ. ಇವರೊಂದಿಗೆ ವೈವಾಹಿಕ ಸಂಬಂಧವನ್ನಾಗಲಿ, ಇನ್ನಿತರ ಯಾವುದೇ ಸಂಬಂಧವನ್ನು ಹೊಂದಲು ಬಯಸುವುದಿಲ್ಲ. ಇವರನ್ನು ಅನ್ಯಧರ್ಮಿಯರಂತೆ ಪರಿಗಣಿಸುವ ಪರಂಪರೆ ಇದೆ.

ಆಹಾರ ಪದ್ಧತಿ

ಕ್ರೈಸ್ತ ಕುರುಬರು ಸಾಮಾನ್ಯವಾಗಿ ಉತ್ತರ ಕರ್ನಾಟಕದ ಆಹಾರ ಪದ್ಧತಿಯನ್ನು ರೂಢಿಸಿಕೊಂಡು ಬಂದಿದ್ದಾರೆ. ಸಸ್ಯಹಾರ ಮತ್ತು ಮಾಂಸಾಹಾರ ಎರಡನ್ನು ಅಳವಡಿಸಿಕೊಂಡಿದ್ದಾರೆ. ಸಸ್ಯಹಾರದಲ್ಲಿ ರೊಟ್ಟಿ, ಚಪಾತಿ, ಅನ್ನ ಕಾಯಿಪಲ್ಲೆ, ಕಾಳುಗಳು ಸಾಮಾನ್ಯವಾಗಿದ್ದರೆ ಮಾಂಸಾಹಾರದಲ್ಲಿ ಹೆಚ್ಚಾಗಿ ಕುರಿ, ಕೋಳಿ ಮೊಟ್ಟೆ ಮೀನವನ್ನು ಉಪಯೋಗಿಸುತ್ತಾರೆ. ಕಾಫಿ, ಚಹಾ, ಸರ್ವರ ಪೇಯಗಳಾಗಿದ್ದರೆ, ಅಲ್ಕೋಹಾಲ್‌ನ್ನು ವಿಶೇಷವಾಗಿ ಪುರುಷರು ಮಾತ್ರ ಸೇವಿಸುತ್ತಾರೆ. ಸ್ತ್ರೀಯರು ಕ್ವಚಿತ್ತಾಗಿ ಸೇವಿಸಬಹುದು.

ಕೌಟುಂಬಿಕ ವ್ಯವಸ್ಥೆ

ಇವರ ಕೌಟುಂಬಿಕ ವ್ಯವಸ್ಥೆ ಹೆಚ್ಚಾಗಿ ವಿಭಕ್ತವಾಗಿದೆ. ಅವಿಭಕ್ತ ಹಾಗೂ ಸಂಪ್ರದಾಯ ಕುಟುಂಬದಿಂದ ಆಗಮಿಸಿದ ಇವರು ಹೆಚ್ಚಾಗಿ ವಿಭಕ್ತ ಕುಟುಂಬಗಳಲ್ಲಿ ಆಸಕ್ತಿ ಹೊಂದಿದ್ದಾರೆ. ಕುಟುಂಬದ ಜವಾಬ್ದಾರಿಯನ್ನು ಪುರುಷರು ವಹಿಸಿಕೊಂಡರೆ ಸ್ತ್ರೀಯರು ಮನೆಯ ಆಗುಹೋಗುಗಳನ್ನು ನಿಭಾಯಿಸುತ್ತಾರೆ. ಮೊದಲಿದ್ದ ಹೆಸರು ಕೂಡ ಮಾರ್ಪಾಡಾಗುತ್ತ ಬಂದು ಈಗ ಕ್ರೈಸ್ತಧರ್ಮದ ಹೆಸರುಗಳನ್ನು ಇಟ್ಟುಕೊಳ್ಳುವ ಪರಂಪರೆ ರೂಢಿಸಿಕೊಂಡಿದ್ದಾರೆ. ಮೊದಲು ತಮ್ಮ ಹೆಸರು ನಂತರ ತಂದೆ/ಗಂಡನ ಹೆಸರು ಕೊನೆಯಲ್ಲಿ ಅಡ್ಡ ಹೆಸರುಗಳನ್ನು ಇಟ್ಟುಕೊಳ್ಳುತ್ತಾರೆ. ವಿಶೇಷವೆಂದರೆ ಮತಾಂತರ ಕುರುಬರು ತಮ್ಮ ಅಡ್ಡ ಹೆಸರುಗಳನ್ನು ಹಾಗೆಯೇ ಉಳಿಸಿಕೊಂಡು ಬಂದಿದ್ದಾರೆ. ಈಗಲೂ ಸಹ ಅವರ ಅಡ್ಡ ಹೆಸರುಗಳ ಮೇಲಿಂದ ಇವರು ಕ್ರೈಸ್ತ ಕುರುಬರೆಂದು ಗುರುತಿಸಬಹುದು. ಉದಾ ಕುರಿ, ಕಂಬಳಿ, ಕರಿಗಾರ, ಕರಿ, ಮುಷ್ಟಿಗೇರಿ, ಹೊನ್ನನಾಯ್ಕರ, ದಂಡಿನ, ಝಳಕಿ, ಹಳ್ಳಿ, ಹಾಲಣ್ಣವರ ಇತ್ಯಾದಿ.

ವೃತ್ತಿ ಜೀವನ

ಮತಾಂತರ ಕುರುಬರು ತಮ್ಮ ಉಪಜೀವನಕ್ಕಾಗಿ ಬೇರೆ ಬೇರೆ ವೃತ್ತಿಗಳನ್ನು ಅವಲಂಬಿಸಿದ್ದಾರೆ. ಬಹುತೇಕ ಜನ ಕ್ರೈಸ್ತರು ಇವರನ್ನು ತಮ್ಮ ಧರ್ಮಕ್ಕೆ ಸೆಳೆಯುವ ಸಂದರ್ಭದಲ್ಲಿ ಮೊದಲು ಆಶ್ವಾಸನೆ ನೀಡಿದಂತೆ ತಮ್ಮ ಸಂಸ್ಥೆಗಳಾದ ಶಿಕ್ಷಣ, ಆಸ್ಪತ್ರೆ, ಕ್ರೈಸ್ತ ಮಿಶನರಿ ಮುಂತಾದವುಗಳಲ್ಲಿ ನೌಕರಿಯನ್ನು ಕೊಟ್ಟು ಸಲುಹಿದ್ದಾರೆ. ಇನ್ನೊಂದು ವಿಶೇಷವೇನೆಂದರೆ ಬ್ರಿಟಿಷರು ಉತ್ತರ ಕರ್ನಾಟಕದಲ್ಲಿ ರೈಲ್ವೆಯನ್ನು ಪ್ರಾರಂಭಿಸುವ ಸಮಯದಲ್ಲಿ ಇಂತಹ ವ್ಯಕ್ತಿಗಳಿಗೆ ನೌಕರಿಯನ್ನು ಕೊಟ್ಟು ಪ್ರೋತ್ಸಾಹಿಸಿದರು. ಈ ಕಾರಣದಿಂದಲೋ ಏನೋ ರೈಲ್ವೆ ಹಳಿಗುಂಟ ಇರುವ ಬಹಳಷ್ಟು ಕುರುಬರು ಮತಾಂತರಗೊಂಡಿದ್ದಾರೆ. ಉದಾ: ಶ್ಯಾಗೋಟಿ, ಧಾರವಾಡ, ಗದಗ, ಸುಮಡ್ಡಿ, ಗುಳೇದಗುಡ್ಡ, ಮುದಗಲ್‌, ತೋರಣಗಟ್ಟಿ, ಆಸಂಗಿ, ಪಾದನಕಟ್ಟಿ, ಹಲಕುರ್ಕಿ, ಆಡಗಲ್‌ ಕಟ್ನಳ್ಳಿ, ಝಳಕಿ ಮುಂತಾದ ಸ್ಥಳಗಳನ್ನು ಗುರುತಿಸಬಹುದು.

ಕ್ರೈಸ್ತ ಕುರುಬರು ಬಹುತೇಕ ಭೂರಹಿತರಾಗಿದ್ದಾರೆ. ಕೃಷಿಯನ್ನು ಅವಲಂಬಿಸಿಲ್ಲ. ಸಣ್ಣ ಸಣ್ಣ ಗುಡಿ ಕೈಗಾರಿಕೆ, ಖಾಸಗಿ ನೌಕರಿ, ಸರ್ಕಾರಿ ನೌಕರಿ ಸಣ್ಣ ಪುಟ್ಟ ವ್ಯಾಪಾರ ಮಾಡುತ್ತಾ ಜೀವನ ಸಾಗಿಸುತ್ತಿದ್ದಾರೆ. ಒಟ್ಟಾರೆಯಾಗಿ ಇದ್ದುದರಲ್ಲಿಯೇ ಸಂತೋಷ ಹಾಗೂ ಸುಖಕರ ಜೀವನವನ್ನು ಸಾಗಿಸುತ್ತಿದ್ದಾರೆ. ಅರ್ಥಿಕ ಪರಿಸ್ಥಿತಿ ಸಾಮಾನ್ಯವಾಗಿ ಸಾಧಾರಣವಾಗಿರುವುದಾಗಿ ಕಂಡುಬರುತ್ತದೆ.

ಹಬ್ಬ ಹರಿದಿನಗಳು

ಕ್ರೈಸ್ತ ಕುರುಬರು ಸಹ ಕ್ರೈಸ್ತರು ಆಚರಿಸುವ ಪ್ರಮುಖ ಹಬ್ಬಗಳಾದ ಕ್ರಿಸ್‌ಮಸ್‌, ಗುಡ್‌ ಫ್ರೈಡೆ, ಈಸ್ಟರ್‌ ಸಂಡೆ, ಹೊಸವರ್ಷ ಮುಂತಾದ ಮಹತ್ವದ ಹಬ್ಬಗಳನ್ನು ಆಚರಿಸುತ್ತಾರೆ. ಪೂರ್ತಿಯಾಗಿ ಕ್ರೈಸ್ತ ಸಂಪ್ರದಾಯದಂತೆ ಈ ಹಬ್ಬಗಳನ್ನು ಆಚರಿಸುತ್ತಾರೆ. ಹಿಂದೂ ಹಬ್ಬಗಳ ಆಚರಣೆಯನ್ನು ನಿಲ್ಲಿಸಿದ್ದಾರೆ. ಇವಲ್ಲದೆ ಕ್ರೈಸ್ತ ಸಮುದಾಯದಲ್ಲಿ ಬರುವ ಎಲ್ಲ ಹಬ್ಬ-ಹರಿದಿನ, ಉತ್ಸವ, ಸಭೆ-ಸಮಾರಂಭ, ಚಳವಳಿ, ಜಾತ್ರೆ ಮೊದಲಾದವುಗಳಲ್ಲಿ ಸ್ವಪ್ರೇರಣೆಯಿಂದ ಭಾಗವಹಿಸುತ್ತಾರೆ. ಕ್ರೈಸ್ತ ಪಾದ್ರಿಯಾಗಿಯೂ ಕೆಲಸ ನಿರ್ವಹಿಸುತ್ತಾರೆ. ವೇಷಭೂಷಣಗಳನ್ನು ಸಾಮಾನ್ಯವಾಗಿ ಹಿಂದೂ ಸಂಪ್ರದಾಯದಂತೆ, ಧರಿಸುವ ಪದ್ಧತಿ ಇದೆ. ಪಾದ್ರಿಗಳಾದವರು ಕ್ರೈಸ್ತ ಪಾದ್ರಿಯ ನಿಲುವಂತಿಯನ್ನು ಧರಿಸುತ್ತಾರೆ.

ಶವಸಂಸ್ಕಾರ ಪದ್ಧತಿ

ಕ್ರೈಸ್ತ ಕುರುಬರಲ್ಲಿ ಹಿಂದೂಗಳಿಗಿಂತ ಭಿನ್ನವಾಗಿದೆ. ವ್ಯಕ್ತಿಯು ಸತ್ತ ನಂತರ ಶವವನ್ನು ಮನೆಯಲ್ಲಿ ಇರಿಸಿಕೊಂಡು ಎಲ್ಲ ವಿಧಿ-ವಿಧಾನಗಳನ್ನು ಪೂರೈಸಿ ಸ್ಮಶಾನಕ್ಕೆ ತೆಗೆದುಕೊಂಡು ಹೋಗಲಾರದೆ ಆ ಶವವನ್ನು ಚರ್ಚಿಗೆ ತೆಗೆದುಕೊಂಡು ಹೋಗಿ ಅಲ್ಲಿ ವಿಧಿವಿಧಾನಗಳಲ್ಲೆವನ್ನು ಪಾದ್ರಿಯು ಮುಗಿಸುತ್ತಾನೆ. ನಂತರ ಶವವನ್ನು ಕಾಫಿನ್‌ ಬಾಕ್ಸ್‌ (ಮರದ ಶವ ಪೆಟ್ಟಿಗೆ)ನಲ್ಲಿ ಹಾಕಿ ಹೊತ್ತುಕೊಂಡು ಸ್ಮಶಾನಕ್ಕೆ ಹೋಗಿ ಪಾದ್ರಿಯು ಪ್ರಾರ್ಥನೆಯ ವಿಧಿ-ವಿಧಾನಗಳನ್ನು ಮುಗಿಸಿದ ನಂತರ ಮೊದಲು ಮಣ್ಣನ್ನು ಹಾಕಿ ನಂತರ ಉಳಿದವರು ಮಣ್ಣು ಹಾಕಿ ಆ ಪ್ರಕ್ರಿಯೆಯನ್ನು ಮುಗಿಸುತ್ತಾರೆ.

ಹಿಂದೂ ಸಂಪ್ರದಾಯದಂತೆ ಸತ್ತ ಮೂರನೆಯ ದಿನಕ್ಕೆ ಸಮಾಧಿಗೆ ಹೋಗಿ ಹಾಲು ಹಾಕಿ ಬರುವ ಪದ್ಧತಿ ಇದೆ. ನಂತರ ೪೦ ದಿನಗಳು ಗತಿಸಿದ ಮೇಲೆ ಅವರ ಸಂಬಂಧಿಕರನ್ನು ಕರೆದು ತಿಥಿ ಮಾಡುವ ಕಾರ್ಯಕ್ರಮ ಇರುತ್ತದೆ. ರೋಮನ್‌ ಕೆಥೊಲಿಕ್‌ ಪಂಥದಲ್ಲಿ ಸತ್ತವರ ಇಷ್ಟಾರ್ಥ ಪದಾರ್ಥಗಳನ್ನಿಟ್ಟು ಬಟ್ಟೆ ಏರಿಸಿ ತಿಥಿ ಮಾಡುವ ಪದ್ಧತಿ ಇದೆ. ಪ್ರತಿವರ್ಷ ನವ್ಹೆಂಬರ್‌ ೩ನೇ ತಾರೀಖಿನಂದು ಧರ್ಮದವರೆಲ್ಲ ಕೂಡಿಕೊಂಡು ಸಾಮೂಹಿಕವಾಗಿ ಮುಕ್ತಿಧಾಮಕ್ಕೆ ತೆರಳಿ ಸಮಾಧಿಯನ್ನು ಸ್ವಚ್ಚಗೊಳಿಸಿ ಸುಣ್ಣಬಣ್ಣಗಳಿಂದ ಅಲಂಕರಿಸಿ ಪ್ರಾರ್ಥನೆ ಸಲ್ಲಿಸಿ ಮೃತರ ಆತ್ಮಕ್ಕೆ ಶಾಂತಿ ಕೋರುವ ಸಂಪ್ರದಾಯವಿದೆ.

ಮೃತರ ಸಮಾಧಿಯ ಮೇಲೆ ಸಿಲುಬೆ ನಡೆಸಿ, ಅವರ ಸ್ಮರಣಾರ್ಥವಾಗಿ ಶಿಲೆಯಲ್ಲಿ ಹೆಸರು ಬರೆಯಿಸಿ ಸಮಾಧಿಯನ್ನು ಕಟ್ಟಿಸುತ್ತಾರೆ. ಇದು ಅವರವರ ಆರ್ಥಿಕ ಸ್ಥಿತಿಗತಿಯ ಮೇಲೆ ಅವಲಂಬಿಸಿರುತ್ತದೆ.

ಆರ್ಥಿಕ ಸ್ಥಿತಿಗತಿ

ಕ್ರೈಸ್ತ ಕುರುಬರ ಆರ್ಥಿಕ ಪರಿಸ್ಥಿತಿ ಮಾತ್ರ ಅಷ್ಟೊಂದು ಅಭಿವೃದ್ಧಿದಾಯಕವಾಗಿರುವುದಿಲ್ಲ, ಅನೇಕರು ಹೈಸ್ಕೂಲ್ ಮತ್ತು ಕಾಲೇಜು ಮಟ್ಟದವರೆಗೆ ವಿದ್ಯಾಭ್ಯಾಸವನ್ನು ಪಡೆದು, ಪ್ರಾಥಮಿಕ, ಮಾಧ್ಯಮಿಕ ಶಾಲೆಗಳಲ್ಲಿ ಸರಕಾರಿ ಕಚೇರಿ, ರೈಲ್ವೆ ಇಲಾಖೆಯಲ್ಲಿ ಉದ್ಯೋಗವನ್ನು ಪಡೆದುಕೊಂಡು ಜೀವನ ಸಾಗಿಸುತ್ತಿದ್ದರೆ, ಮತ್ತೆ ಕೆಲವರು ಸಣ್ಣಪುಟ್ಟ ವ್ಯಾಪಾರವನ್ನು ಮಾಡುತ್ತಾ ನೆಮ್ಮದಿಯ ಜೀವನವನ್ನು ಸಾಗಿಸುತ್ತಿದ್ದಾರೆ. ಅಲ್ಪಸ್ವಲ್ಪ ಉಳಿತಾಯ ಮಾಡಿ ಮಕ್ಕಳ ವಿದ್ಯಾಭ್ಯಾಸ, ಮನೆ-ಮದುವೆ ಇತ್ಯಾದಿಗಳಿಗೆ ಬಳಸುತ್ತಾರೆ. ಒಟ್ಟಾರೆಯಾಗಿ ಇದ್ದುದರಲ್ಲಿಯೇ ನೆಮ್ಮದಿ ಜೀವನವನ್ನು ಸಾಗಿಸುತ್ತಿದ್ದಾರೆ.

ಇಂದು ಕ್ರೈಸ್ತ ಧರ್ಮಕ್ಕೆ ಈ ಜನಾಂಗ ಸೇರುವುದು ಕಡಿಮೆಯಾಗಿದೆ. ಇದಕ್ಕೆ ಹಲವಾರು ಕಾರಣಗಳಿರಬಹುದು. ಪ್ರಸ್ತುತ ಲೇಖನವು ಗದಗ-ಬೆಟಗೇರಿಗಳನ್ನೊಳಗೊಂಡಂತೆ ಗದಗ ಜಿಲ್ಲೆಯ ಕ್ಷೇತ್ರ ಕಾರ್ಯಗಳ ವ್ಯಾಪ್ತಿಯನ್ನು ಅನುಲಕ್ಷಿಸಿ ಸಿದ್ಧಪಡಿಸಲಾಗಿದೆ. ಇನ್ನು ಕೆಲವು ಮಾಹಿತಿಗಳು ಇದರಿಂದ ಹೊರಗುಳಿದಿರಬಹುದು. ಸಾಧ್ಯವಾದ ಮಟ್ಟಿಗೆ ಸಂದರ್ಶನಗಳ ಆಧಾರದಿಂದ ರಚಿಸಲ್ಪಟ್ಟಿದೆ. ಇದೇ ರೀತಿ ಕುರುಬ ಜನಾಂಗವು ಬೇರೆ ಬೇರೆ ಜಾತಿ, ಉಪಪಂಗಡ ಧರ್ಮಗಳೊಂದಿಗೆ ಹರಿದುಹಂಚಿ ಹೋಗಿರಬಹುದು. ಒಂದು ಗಮನಿಸಬೇಕಾದ ಮುಖ್ಯ ಅಂಶವೆಂದರೆ ಕ್ರೈಸ್ತ ಧರ್ಮಕ್ಕೆ ಮತಾಂತರ ಹೊಂದಿದಷ್ಟು ಬೇರೆ ಧರ್ಮಕ್ಕೆ ಮತಾಂತರ ಹೊಂದಿರುವುದಿಲ್ಲ.

ಸಹಾಯಕ ಗ್ರಂಥಗಳು / ಲೇಖನಗಳು

೧. ಎಂ. ಎಚ್‌. ಆರ್‌. ಖಾಸ್ಮಿ ಇಂಗ್ಲಿಷ್‌ ಲೇಖನ.

೨. Nanjundayya. H. V. & I year L.K.A. 1935. The Mysore Tribes & Castes, IV University of Mysore. Mysore

೩. Thurston E. ()1909 1975. The Castes and Tribes of `Southern India, IV, 133, 155, Government Press, Madrass

೪. ಸಂದರ್ಶನಗಳು.

೫. ಕರಾವಳಿ ಕರ್ನಾಟಕದ ಕ್ರೈಸ್ತ ಇತಿಹಾಸ.