‘ದಾಸ’ ಮತ್ತು ‘ಹರಿದಾಸ’ ‘ದಾಸ’ ಎನ್ನುವ ಪರಿಕಲ್ಪನೆ ಮೂಲತಃ ಉಳಿಗಮಾನ್ಯ ಸಂಸ್ಕೃತಿಯಲ್ಲಿ ನಿಷ್ಪನ್ನವಾದುದು. ಊಳಿಗಮಾನ್ಯ ಸಂಸ್ಕೃತಿಯಲ್ಲಿ  ‘ದಾಸ’ನೆಂದರೆ ತನ್ನ ಯಜಮಾನನಿಗೆ ತನ್ನನ್ನು ಪೂರ್ತಿಯಾಗಿ ಅರ್ಪಿಸಿಕೊಂಡವನು ಎಂದರ್ಥ. ಅಲ್ಲಿ ಅವನು ಮಾಡುವ ಶ್ರಮ ದೊರೆಗೆ ಸಲ್ಲಿಸಿದ ಸೇವೆ. ಆತ ತನ್ನ ಶ್ರಮಕ್ಕೆ ಪ್ರತಿಯಾಗಿ ಏನನ್ನೂ ನಿರೀಕ್ಷಿಸುವುದಿಲ್ಲ. ತನಗೆ ಬಂದೊದಗಿದ ಈ ಸೇವೆಯನ್ನು ತನ್ನ ಪೂರ್ವಜನ್ಮದ ಫಲವೆಂದು ಭಾವಿಸುತ್ತಾನೆ. ಅವನು ತನಗೆ ಒಂದು ಐಡೆಂಟಿಟಿ ಇದೆ ಎಂದೂ ಭಾವಿಸುವುದಿಲ್ಲ. ಯಜಮಾನನನ್ನು ತೃಪ್ತಿಪಡಿಸುವುದೇ ತನ್ನ ಬದುಕಿನ ಪರಮಗುರಿ ಎಂದು ಭಾವಿಸುತ್ತಾನೆ. ಭಕ್ತಿಪಂಥದ ಸಂದರ್ಭದಲ್ಲಿ ‘ದಾಸ’ ಎನ್ನುವ ಪದಕ್ಕೆ ಅಲೌಕಿಕ ಆಯಾಮವನ್ನು ಆರೋಪಿಸಲಾಗಿದೆ. ಭಕ್ತಿಪಂಥದಲ್ಲಿ ಹರಿಗೆ ಸಂಬಂಧಪಟ್ಟಂತೆ ಈ ಪದವನ್ನು ವಿಶೇಷವಾಗಿ ಬಳಸಲಾಗುತ್ತದೆ. ‘ಶಿವದಾಸ’ ಎನ್ನುವ ಪದ ಅಲ್ಲಲ್ಲಿ ಬಳಕೆಯಾಗಿದೆಯಾದರೂ ‘ಹರಿದಾಸ’ ಎನ್ನುವ ಪದದ ಹಾಗೆ ಚಲಾವಣೆಯಲ್ಲಿ ಉಳಿದುಕೊಂಡಿಲ್ಲ. ‘ಹರಿದಾಸರು’ ಎಂದರೆ ಹರಿಸರ್ವೋತ್ತಮನಿಗೆ ತನ್ನನ್ನು ಸಂಪೂರ್ಣವಾಗಿ ಅರ್ಪಿಸಿಕೊಂಡವರು ಎಂದರ್ಥ.

ಹರಿದಾಸ ಮತ್ತು ಧರ್ಮರಾಜಕಾರಣ

ವಾಸ್ತವವಾಗಿ ‘ಹರಿದಾಸ’ ಎಂಬ ಉದಾರವಾದಿ ವೈದಿಕ ನಿಲುವು ಧಾರ್ಮಿಕ ರಾಜಕಾರಣದ ನಿಷ್ಪನ್ನವಾಗಿದೆ. ವೈದಿಕವು ಆ ಪೂರ್ವದಲ್ಲಿ ವರ್ಣವ್ಯವಸ್ಥೆಯನ್ನು ತುಂಬ ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಬಂದುದಾಗಿತ್ತು. ಜನನದೊಂದಿಗೆ ಜಾತಿಗಳು ಚರ್ಮದ  ಹಾಗೆ ಅಂಟಿಕೊಂಡು ಬರುತ್ತವೆ ಎಂದು ಅಚಲವಾಗಿ ನಂಬಿತ್ತು. ತನ್ಮೂಲಕ ಸಾಮಾಜಿಕ ಸಂರಚನೆಯಲ್ಲಿ ಚಲನಶೀಲತೆ ಇಲ್ಲದ ಹಾಗೆ ಕಾಪಾಡಿಕೊಂಡು ಬಂದಿತ್ತು. ಜಡವನ್ನು ಪ್ರತಿಪಾದಿಸುವ ವೈದಿಕದ ನಿಲುವಿನಲ್ಲಿರುವ ದೋಷದ ಲಾಭ ಪಡೆಯಲು ಜೈನ ಧರ್ಮ ಹಾಗೂ ಲಿಂಗಾಯತ ಧರ್ಮಗಳು ಹವಣಿಸಿದವು ಎನ್ನುವುದು ಚರಿತ್ರೆಯಲ್ಲಿ ಗೋಚರಿಸುವ ಸತ್ಯವಾಗಿದೆ. ಜೈನರ್ಧಮವು ‘ವೃತ’ ಎನ್ನುವ ಹೊಸ ಪರಿಕಲ್ಪನೆಯ ಮೂಲಕ ವರ್ಣವ್ಯವಸ್ಥೆಯ ಕೆಳಸ್ಥರದ ಜನಸಮುದಾಯದಲ್ಲಿ ನೂತನ ಸಂಚಲನ ಉಂಟು ಮಾಡಿತು. ‘ವೃತದ’ ಪರಿಪಾಲನೆಯಿಂದ ವರ್ಣವ್ಯವಸ್ಥೆಯ ಯಾವುದೇ ಸ್ಥರದ ಜನರು ‘ಕೇವಲ’ ಜ್ಞಾನ ಸಂಪಾದಿಸಿ ಬ್ರಾಹ್ಮಣತ್ವ ಸಾಧಿಸಬಹುದು ಎಂದು ಜೈನಧರ್ಮ ಸಾರಿದ್ದೇ ಈ ಸಂಚಲನಕ್ಕೆ ಕಾರಣವಾಗಿತ್ತು. ಇದೇ ತರನಾಗಿ ಜಡವರ್ಣ ವ್ಯವಸ್ಥೆಯಲ್ಲಿ ಬಹುದೊಡ್ಡ ಕೋಲಾಹಲವನ್ನೆಬ್ಬಿಸಿದವರು ಲಿಂಗಾಯತ ಧರ್ಮದ ಪ್ರತಿಪಾದಕರು. ‘ಇಷ್ಟಲಿಂಗ’ವೆಂಬ ನೂತನ ಪರಿಕಲ್ಪನೆ ವರ್ಣವ್ಯವಸ್ಥೆಯ ಕೆಳಸ್ಥರದ ಜನರಲ್ಲಿ ಹಿಂದೆಂದೂ ಕಂಡುಬಂದಿರದ ಸಂಚಲನವನ್ನು ಸೃಷ್ಟಿಸಿತು. ಹೀಗೆ ‘ವೃತ’ ಹಾಗೂ ‘ಇಷ್ಟಲಿಂಗ’ ಪರಿಕಲ್ಪನೆಗಳು ವೈದಿಕವು ಪ್ರತಿಪಾದಿಸಿದ ವರ್ಣವ್ಯವಸ್ಥೆಯ ಭದ್ರಕೋಟೆಯಿಂದ ಕೆಳವರ್ಗದ ಜನರಿಗೆ ಬಿಡುಗಡೆಯ ದರಿಯನ್ನು ತೋರಿಸಿದವು. ತತ್ಪರಿಣಾಮವಾಗಿ ಕೆಳವರ್ಗದ ಬಹುಪಾಲು ಜನರು ಜೈನ ಹಾಗೂ ಲಿಂಗಾಯತಕ್ಕೆ ವಲಸೆ ಬಂದರು. ಇಂಥದೊಂದು ವಲಸೆಯನ್ನು ತಡೆದು ನಿಲ್ಲಿಸುವ ಹೊಸ ಕಾರ್ಯಯೋಜನೆಯನ್ನು ರೂಪಿಸುವುದು ವೈದಿಕ ಧರ್ಮಕ್ಕೆ ಅನಿವಾರ್ಯವಾಯಿತು. ಈ ತೆರನಾದ ಬಿಕ್ಕಟ್ಟಿನಲ್ಲಿಯೇ ವೈದಿಕ  ಧರ್ಮವು ‘ಹರಿದಾಸ’ ಎಂಬ ಪರಿಕಲ್ಪನೆಯನ್ನು ಹುಟ್ಟುಹಾಕಿಕೊಂಡಿತು. ಕೆಳವರ್ಗದ ಸಮುದಾಯಗಳನ್ನು ತನ್ನ fold ನಲ್ಲಿಯೇ ಉಳಿಸಿಕೊಳ್ಳುವ ಧಾರ್ಮಿಕ-ರಾಜಕಾರಣದ ಪಗಡೆಯಾಟದಲ್ಲಿ ವೈದಿಕ ಧರ್ಮವು ಇಟ್ಟ ಚಾಣಾಕ್ಷ ನಡೆ ಇದಾಗಿತ್ತು. ಹಿಂದೂ fold ನ ಕೆಳಸಮುದಾಯಗಳು ಅನ್ಯಧರ್ಮಕ್ಕೆ ವಲಸೆ ಹೋಗದ ಹಾಎ ಹಿಂದುಧರ್ಮ ರಚಿಸಿಕೊಂಡ safety volve ಇದಾಗಿತ್ತು. ‘ಹರಿಗೆ’ ತಮ್ಮನ್ನು ಸಂಪೂರ್ಣವಾಗಿ ಅರ್ಪಿಸಿಕೊಂಡು ಹರಿಯ ನಾಮಸ್ಮರಣೆ ಮಾತ್ರದಿಂದಲೇ ಮುಕ್ತಿಯನ್ನು ಸಾಧಿಸಬಹುದು ಎಂದು ಪರಿಕಲ್ಪನೆ ಸಾರಿತು. ಹಾಗೂ ಆ ಮೂಲಕ ‘ವಲಸೆ’ ಪ್ರಮಾಣವನ್ನು ಗಣನೀಯವಾಗಿ ತಗ್ಗಿಸುವಲ್ಲಿ ಸಫಲವಾಯಿತು. ಒಂದರ್ಥದಲ್ಲಿ ವೈದಿಕವು ಕೆಳವರ್ಗದ ಜನರ ಬಗೆಗೆ ಇರುವ ತನ್ನ ನಿಲುವನ್ನು ಮರುವ್ಯಾಖ್ಯಾನಿಸಿಕೊಂಡ ಪ್ರಸಂಗ ಇದಾಗಿತ್ತು. ಹೀಗೆ ಉಗಮವಾದ ಈ ಪಂಥಕ್ಕೆ ಒಲಿದ ಕೆಳವರ್ಗದವರಲ್ಲಿ ಕುರುಬರು, ಗೊಲ್ಲರು ಹಾಗೂ ಹೊಲೆಯರು ಪ್ರಮುಖರು. ಹರಿದಾಸಕ್ಕೆ ಒಲಿದ ಇವರನ್ನು ಕುರುಬದಾಸರು, ಗೊಲ್ಲದಾಸರು ಹಾಗೂ ಹೊಲೆಯರು ಎಂದು ಗುರುತಿಸಲಾಗುತ್ತದೆ.

ವಿಷ್ಣು ಹಾಗೂ ಕುರುಬರು

ಕುರುಬರು ‘ದಾಸ’ ಪಂಥಕ್ಕೆ ಒಲಿದುದಕ್ಕೆ ಮೂಲದಲ್ಲಿಯೇ ವಿಷ್ಣುವಿನ ಬಗೆಗೆ ಅವರಲ್ಲಿದ್ದ ಅಲ್ಪಸ್ವಲ್ಪ ಪ್ರಮಾಣದ ಅನುರಕ್ತಿಯೂ ಕಾರಣ. ಕುರುಬ ಸಂಬಂಧಿ ಪುರಾಣಕಥನಗಳಲ್ಲಿ, ಕುರುಬರ ನಂಬಿಕೆ ಆಚರಣೆಗಳಲ್ಲಿ ಶಿವನಿಗೆ ಪ್ರಮುಖವದ ಸ್ಥಾನವಿದೆ. ಆದಾಗ್ಯೂ ಅವರು ಹರಿಯನ್ನು ಸ್ಮರಿಸದೇ ಬಿಟ್ಟಿಲ್ಲ. ಕುರುಬರ ಆರಾಧ್ಯ ದೈವಗಳಾದ ಪದ್ಮಗೊಂಡ, ಬೀರಪ್ಪ, ಮಾಳಿಂಗರಾಯ, ಮೈಲಾರಲಿಂಗ, ಅಮೋಘಸಿದ್ಧ ಮುಂತಾದವರು ಶೈವದೊಂದಿಗೆ ಸಮೀಕರಣಗೊಂಡವರು. ಪದ್ಮಗೊಂಡನನ್ನು ಶಿವಪದ್ಮಗೊಂಡನೆಂತಲೂ, ಬೀರಪ್ಪನನ್ನು ಶಿವಸಿದ್ದ ಬೀರಪ್ಪನೆಂತಲೂ, ಅಮೋಘಸಿದ್ಧನನ್ನು ಶಿವನ ಮನೆಯ ಸಿದ್ಧನೆಂತಲೂ ಕರೆದುಕೊಂಡಿದ್ದಾರೆ. ಹೀಗಿದ್ದರೂ ಹರಿಯನ್ನು ಅಲ್ಲಲ್ಲಿ ಉಲ್ಲೇಖಿಸುವುದನ್ನು ಬಿಟ್ಟಿಲ್ಲ. ಕಾಳಿನಾರಾಯಣ (ವಿಷ್ಣು)ನು ಬೀರಪ್ಪ ತಾಯಿ ಸುರಾವತಿ (ಸರಸ್ವತಿ)ಯ ಅಣ್ಣ ಎಂದು ‘ಜಾನಪದ ಹಾಲುಮತ ಕಾವ್ಯ’ (ಸಂ. ಡಾ. ವೀರಣ್ಣ ಡೆ) ಹೇಳಿದರೆ, ಶಿವನಿಗೆ ಕೈಲಾಸದಲ್ಲಿ ಪಟ್ಟಗಟ್ಟುವ ಸಂದರ್ಭದಲ್ಲಿ ಸ್ವತಃ ಹರಿಯೇ ಕಂಬಳಿ ನೇಯ್ದು ತಂದು ಆಹೇರಿ ಮಾಡಿದ ಎಂದು ಇನ್ನೊಂದು ಮೌಖಿಕ ಪರಂಪರೆಯ ಪುರಣಕಥನ ಹೇಳುತ್ತದೆ. ತಿರುಪತಿ, ತುಳಜಮ್ಮ ಜಟ್ಟಿಗ ಇವರೆಲ್ಲ ಭಟ್ಕಳದ ಗೊಂಡ ಕುರುಬರ ಆರಾಧ್ಯ ದೈವಗಳು, ‘ಜಟ್ಟಿಗ’ ಎಂದು ಪೂಜೆಗೊಳ್ಳುತ್ತಿರುವ ಗೊಂಡ ದೇವನ ಮೂಲಪುರುಷ ದೇವಮಲ್ಲ. ಈ ದೇವಮಲ್ಲನು ಕೃಷ್ಣನ ಪರಮಭಕ್ತನಾಗಿದ್ದನೆಂದೂ, ಅವನ ಭಕ್ತಿಗೆ ಪ್ರತಿಯಾಗಿ ಕೃಷ್ಣನಿಂದ ದೇವಮಣಿಯನ್ನು ಪಡೆದಿದ್ದನೆಂದೂ ಅವರು ಕಥನಕಟ್ಟಿಕೊಂಡಿದ್ದಾರೆ. ಅಮೋಘಸಿದ್ಧ ಶಿವನ ಪರಮ ಭಕ್ತ ನಿಜ. ಆದರೆ ಅವನ ಮೂವರು ಪುಣ್ಯದ ಮಕ್ಕಳಲ್ಲಿ ಒಬ್ಬನಾದ ತೆರೆವಾಡದ ಮಂಗರಾಯನನ್ನು ವಿಷ್ಣುವಿನ ಅವತಾರವೆಂದು ಅಮೋಘಸಿದ್ಧನ ಕುರಿತ ಪುರಾಣ ಕಥನಗಳು ಹೇಳುತ್ತವೆ. ಮಹಾರಾಷ್ಟ್ರದ ಧನಗರರಲ್ಲಿ ‘ಹಟ್ಕಾರ’ ಎಂಬ ಪಂಗಡವೊಂದಿದೆ. ಇವರ ಕುಲದೇವತೆ ಕೃಷ್ಣನಾಗಿದ್ದಾನೆ. ಪ್ರತಿ ಶನಿವಾರ ಅವರು ಕೃಷ್ಣನ ಪೂಜೆ ಮಾಡುತ್ತಾರೆ. ಗೋಪಾಲಕರಾದ ಅವರು ಶನಿವಾರದಂದು ತಮ್ಮ ಗೋವುಗಳ ಹಾಲನ್ನು ಕರೆಯುವುದಿಲ್ಲ. ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಗೋವರ್ಧನಗಿರಿಯ ಪ್ರತಿಕೃತಿಯನ್ನು ಬಯಲಿನಲ್ಲಿ ನಿರ್ಮಿಸಿ ಅದನ್ನು ಭಕ್ತಿಭಾವದಿಂದ ಪೂಜಿಸುತ್ತಾರೆ. ಕನಕದಾಸರ ಪೂರ್ವಜರ ಮನೆದೇವರು ತಿರುಪತಿ ತಿಮ್ಮಪ್ಪನಾಗಿದ್ದನೆನ್ನುವುದು ಸರ್ವವಿಧಿತ. ಕುರುಬರಿಗೂ ಹರಿಗೂ ಇಂಥ ಸಂಬಂಧಗಳು ಇದ್ದುದರಿಂದ ‘ಹರಿದಾಸ’ ಪಂಥಕ್ಕೆ ಅವರು ಒಲವು ತೋರಿದ್ದು ಅವರ ಕಿರು ನಂಬಿಕೆಯ ವಿಸ್ತರಣೆಯಾಗಿದೆ ಅನ್ನಿಸುತ್ತದೆ.

ತಿರುಪತಿ ಶೃದ್ಧಾಕೇಂದ್ರ

ಕರ್ನಾಟಕದ  ದಾಸಕುರುಬರ ಶ್ರದ್ದಾಕೇಂದ್ರ ತಿಮ್ಮಪ್ಪನ ನೆಲೆಯಾದ ತಿರುಪತಿಯಾಗಿದೆ. ಕರ್ನಾಟಕದಲ್ಲಿ ಅಲ್ಲಲ್ಲಿ ಚದುರಿದಂತೆ ಇರುವ ಇವರು ಚಿತ್ರದುರ್ಗ ಜಿಲ್ಲೆಯಲ್ಲಿ ವಿಪುಲ ಸಂಖ್ಯೆಯಲ್ಲಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಯ ಭಾಗದಲ್ಲಿ ಕ್ಷೇತ್ರಕಾರ್ಯ ನಡೆಯಿಸಿದಾಗ ದಾಸಕುರುಬರ ನಂಬಿಕೆ ಆಚರಣೆಗಳ ಕುರಿತು ತುಂಬಾ ಕುತೂಹಲಕರವಾದ ಅಂಶಗಳು ತಿಳಿದು ಬಂದವು. ಅವರು ದಾಸ ದೀಕ್ಷೆ ಪಡೆಯುವ ರೀತಿ, ಆನಂತರ ಅವರು ಧರಿಸುವ ವೇಷ-ಭೂಷಣ, ಉಡುಗೆ-ತೊಡುಗೆಗಳು, ಅವರ ಆಚರಣೆ, ನಂಬಿಕೆಗಳು, ವಿಧಿ ನಿಷೇಧಗಳು ಸಂಸ್ಕೃತಿ ಅಧ್ಯಯನ ಮಾಡುವವರಿಗೆ ವಿಪುಲವಾದ ಸಾಮಗ್ರಿ ಇಲ್ಲಿರುವುದು ತಿಳಿದುಬರುತ್ತದೆ.

ದಾಸಪ್ಪ ದೀಕ್ಷೆ

ದಾಸಕುರುಬರಾದವರು ಕಡ್ಡಾಯವಾಗಿ ತಮ್ಮ ಮನೆಯ ಗಂಡಸು ಮಕ್ಕಳಿಗೆ ‘ದಾಪ್ಪದೀಕ್ಷೆ’ ಯನ್ನು ಕೊಡಿಸುತ್ತಾರೆ. ಈ ದೀಕ್ಷೆ ಮನೆಯ ಗಂಡಸುಮಕ್ಕಳಿಗೆ ಮಾತ್ರ ಎನ್ನುವುದನ್ನು ‘ದಾಸಪ್ಪ’ದಲ್ಲಿರುವ ಪುರುಷವಾಚಕವೇ ಸಾರುತ್ತದೆ. ದಾಸಕುರುಬ ಮನೆಯ ಹೆಣ್ಣುಮಗುವು ಈ ದೀಕ್ಷೆಯಿಂದ ವಂಚಿತವಾಗಿದೆ. ಹೆಣ್ಣುಮಗುವಿಗೆ ‘ದಾಸಪ್ಪ ದೀಕ್ಷೆ’ ವರ್ಜ್ಯವೆಂದು ದಾಸಕುರುಬ ಅಚಲವಾದ ನಂಬಿಕೆ. ಇಂಥ ಅಚಲ ನಂಬಿಕೆಯ ಹಿಂದೆ ಮಾಧ್ವ ಪ್ರಣೀತ ಹರಿದಾಸ ಸಿದ್ಧಾಂತ ಕೆಲಸ ಮಾಡಿರುವುದನ್ನು ಅಲ್ಲಗಳೆಯಲಾಗುವುದಿಲ್ಲ. ಮಧ್ವಾಚಾರ್ಯರ ಹರಿದಾಸ ಸಿದ್ಧಾಂತವನ್ನು ಶ್ರೀಪಾದರಾಯರು ಹೀಗೆ ಸಂಗ್ರಹಿಸಿದ್ದಾರೆ.

“ಶ್ರೀ ಮನ್ಮಧ್ವಮತೇ ಹರಿಃ ಪರತರಃ ಸತ್ಯಂ ಜಗತ್ವತ್ತ್ವತೋ
ಭೇದೋ ಜೀವಗಣರನುಚರಾಃ ನಿಚೋಚ್ಛವಂಗತಾಃ
ಮುಕ್ತಿರ್ನೈಜ ಸುಖಾನುಭೂತಿರಮಲಾ ಭಕ್ತಿಷ್ಟ ತತ್ಸಾಧನಂ
ಹ್ಯಷಾದಿತ್ರಿಯಂ ಪ್ರಮಾಣ ಮುಖೀಲಾಮ್ನಾಯ್ಯರ ವೇದ್ಯೋಹರಿಃ

ಈ ಶ್ಲೋಕವನ್ನು ಆಧರಿಸಿ ನವರತ್ನ ಮಾಲೆ ಸೂತ್ರವನ್ನು ರೂಪಿಸಲಾಗಿದೆ. ಆ ಒಂಭತ್ತು ಸೂತ್ರಗಳು ಹೀಗಿವೆ. ೧. ಹರಿಯೇ ಸರ್ವೋತ್ತಮ ೨. ಜಗತ್ತು ಪಾರಮಾರ್ಥಿಕ ಸತ್ಯ ೩. ಜೀವಗಳಲ್ಲಿ ಭೇದವೂ ಸಹಪಾರಮಾರ್ಥಿಕ ಸತ್ಯ ೪. ಎಲ್ಲ ಜೀವಿಗಳು ಹರಿಯ ಅನುಚರರು ೫. ಉಚ್ಚನೀಚರೆಂಬ ತಾರತಮ್ಯನಿರಂತರ ೬. ನಿರ್ಮಲ ಭಕ್ತಿಯೇ ಮುಕ್ತಿಗೆ ಸಾಧನ ೭. ಸ್ವಸ್ವರೂಪ ಸುಖಾನುಭವವೇ ಮುಕ್ತಿ ೮. ಪ್ರತ್ಯಕ್ಷ ಅನುಮಾನ ಆಗಮಗಳೇ ಸಾಧಕನ ಪ್ರಮಾಣಗಳು ೯. ಹರಿಯನ್ನು ವೇದಗಳಿಂದ ಮಾತ್ರ ಅರಿಯಲು ಸಾಧ್ಯ. ಈ ನವರತ್ನ ಸೂತ್ರದಲ್ಲಿ ಬರುವ ಮೂರನೆಯ ಹಾಗೂ ಐದನೆಯ ಸೂತ್ರಗಳು ಹರಿದಾಸಪಂಥದ ಅನುಯಾಯಿಗಳನ್ನು ತುಂಬಾ ಪ್ರಭಾವಿಸಿವೆ. ಅಂತೆಯೇ ದಾಸಕುರುಬರನ್ನೂ ಸಹ. ಈ ಹಿನ್ನೆಲೆಯಲ್ಲಿ ಲಿಂಗಬೇಧವನ್ನು ಆ ಮೂಲಕ ಪುರುಷ ಪಾರಮ್ಯವನ್ನು ದಾಸಕುರುಬರು ಸ್ವೀಕರಿಸುವುದನ್ನು ಅವರ ‘ದಾಸಪ್ಪ ದೀಕ್ಷೆ’ ಎಂಬ ಪುರುಷ ಕೇಂದ್ರಿತ ಆಚರಣೆಯಲ್ಲಿ ಕಾಣಬಹುದು.

ದಾಸಪ್ಪ ದೀಕ್ಷೆಯನ್ನು ಅವರು ತಿರುಪತಿಯ ತಿಮ್ಮಪ್ಪನ ಅರ್ಚಕರ ಹೊರತು ಬೇರೆ ಯಾರ ಕಡೆಯಿಂದಲೂ ಕೊಡಿಸುವುದಿಲ್ಲ. ಗಂಡು ಮಗುವು ಹದಿನೈದು ವರ್ಷದವನಾಗುವುದರೊಳಗೇ ದಾಸಪ್ಪ ದೀಕ್ಷೆಯನ್ನು ಪಡೆಯಲೇಬೇಕು. ತಿರುಪತಿಗೆ ಗಂಡುಮಗುವನ್ನು ಕರೆದುಕೊಂಡು ಹೋಗುವ ಪೂರ್ವದಲ್ಲಿ ದಾಸಕುರುಬರು ತಮ್ಮ ಮನೆಯಲ್ಲಿಯೇ ಒಂದು ಸಣ್ಣ ಆಚರಣೆಯನ್ನು ಮಾಡಿಸುತ್ತಾರೆ. ದಾಸಪ್ಪನಾಗಲಿರುವ ಹುಡುಗನಿಗೆ ಒಂದು ಶುಭದಿನದಂದು ಶುಭ್ರಸ್ನಾಮಾಡಿಸಿ ಹೊಸ ಬಟ್ಟೆ ತೊಡಿಸುತ್ತಾರೆ. ಕಂಬಳಿ ಹಾಸಿ ಸಾಸಕ್ಕಿ ಹೊಯ್ದು ಅದರ ಮೇಲೆ ಆ ಹುಡುಗನನ್ನು ಕೂಡ್ರಿಸುತ್ತಾರೆ. ಅವನ ಕೈಗೆ ಕಂಕಣ ಕಟ್ಟುತ್ತಾರೆ. ಮನೆಯ ಮಹಿಳೆಯರು ಅವನಿಗೆ ಆರತಿ ಬಳಸುತ್ತಾರೆ. ಇಡೀ ಆಚರಣೆ ಮದುವೆಯ ಸಂದರ್ಭದಲ್ಲಿ ನೆನಪಿಸುವಂತೆ ಇರುತ್ತದೆ. ತಿರುಪತಿ ತಿಮ್ಮಪ್ಪನೊಂದಿಗೆ ಈ ಹುಡುಗನ ವಿವಾಹವಾಯಿತು ಎನ್ನುವುದನ್ನು ನೆನಪಿಸುವಂತೆ ಇಡೀ ಆಚರಣೆ ಇರುತ್ತದೆ.

ಬಲಕ್ಕೆ ಚಕ್ರ ಎಡಕ್ಕೆ ಶಂಖ ಮನೆಯಲ್ಲಿ ಈ ಆಚರಣೆ ಮುಗಿದ ನಂತರ ಹುಡುಗನನ್ನು ಕರೆದುಕೊಂಡು ತಿರುಪತಿಗೆ ಪ್ರಯಾಣ ಬೆಳೆಯಿಸುತ್ತಾರೆ. ತಿರುಪತಿ ತಲುಪಿದ ನಂತರ ತಿಮ್ಮಪ್ಪನ ಅರ್ಚಕರನ್ನು ಭೆಟ್ಟಿಯಾಗಿ ದೀಕ್ಷೆ ನೀಡುವ ದಿನಾಂಕವನ್ನು ನಿಗದಿ ಮಾಡಿಕೊಳ್ಳುತ್ತಾರೆ. ನಿಗದಿಯಾದ ದಿನದಂದು ನಸುಕಿನಲ್ಲಿಯೇ ಸ್ನಾನ ಮಾಡಿಸಿ ಅವನ ಭುಜಕ್ಕೆ ಬಿಳಿನಾಮ ಲೇಪಿಸಿ ಸ್ವಾಮಿಯ ಸನ್ನಿಧಾನಕ್ಕೆ ಕರೆತರುತ್ತಾರೆ. ಅಲ್ಲಿ ಅರ್ಚಕನಾದವನು ಬಿಳಿನಾಮ ಲೆಪಿತ ಭುಜಗಳಿಗೆ ವಿಶಿಷ್ಟವಾದ ಮುದ್ರೆಗಳನ್ನು ಒತ್ತುತ್ತಾನೆ. ಮುದ್ರೆ ಒತ್ತಲು ಅರ್ಚಕರು ತಾಮ್ರ ಲೋಹದ ಅಚ್ಚುಗಳನ್ನು ಬಳಸುತ್ತಾರೆ. ಮುದ್ರೆ ಸ್ಥಿರವಾಗಿ ಅವನ ಭುಜದ ಮೇಲೆ ಉಳಿಯಲಿ ಎನ್ನುವ ಉದ್ದೇಶದಿಂದ ತಾಮ್ರದ ಅಚ್ಚುಗಳನ್ನು ಕರ್ಪೂರದ ಉರಿಯಲ್ಲಿ ಕಾಯಿಸಿ ಭುಜಗಳಿಗೆ ಹಚ್ಚುತ್ತಾರೆ. ‘ಚಕ್ರ’ದ ಅಚ್ಚು ಇರುವ ಮುದ್ರೆಯನ್ನು ಬಲಭುಜದ ಮೇಲೆ ಹಾಗೂ ‘ಶಂಖ’ದ ಅಚ್ಚು ಇರುವ ಮುದ್ರೆಯನ್ನು ಎಡಭುಜದ ಮೇಲೆ ಒತ್ತಲಾಗುತ್ತದೆ. ಹೀಗೆ ಸುಟ್ಟ ಗಾಯದ ಹಕ್ಕಳೆ ಕಿತ್ತು ಕೆಲವು ದಿವಸಗಳಲ್ಲಿ ಶಂಖ ಹಾಗೂ ಚಕ್ರದ ಮುದ್ರೆಗಳು ಅವನ ಭುಜಗಳ ಮೇಲೆ ಶಾಶ್ವತವಾಗಿ ಉಳಿಯುತ್ತವೆ. ಹೀಗೆ ಕುರುಬನಾದ ಈ ಹುಡುಗ ಕುರುಬದಾಸಪ್ಪನಾಗಿ ಹರಿಯ ಒಕ್ಕಲಾಗಿ ಪರಿವರ್ತನೆಗೊಳ್ಳುತ್ತಾನೆ.

ಹಣೆಗೆ ನಾಮ ಕೊರಳಿಗೆ ತುಳಸಿಮಾಲೆ

ಶಂಖಚಕ್ರ ಲಾಂಛನಗಳು ಅವನ ಭುಜದ ಮೇಲೆ ಬಿದ್ದ ನಂತರ, ದಾಸಪ್ಪನು ವಿಶೇಷವದ ವೇಷಭೂಷಣ ಧರಿಸಲು ಪ್ರಾರಂಭಿಸುತ್ತಾನೆ. ದಾಸಪ್ಪನಾದವನು ನಿತ್ಯಸ್ನಾ ಮಾಡಲೇಬೇಕು. ಸ್ನಾನವಾದ ನಂತರ ಹಣೆಯ ಮೇಲೆ ಲಂಬವಾಗಿ ಎರಡು ಬಿಳಿನಾಮ ಹಾಗೂ ಅವುಗಳ ಮಧ್ಯ ಒಂದು ಕೆಂಪು ನಾಮವನ್ನು ಧಾರಣೆ ಮಾಡಿಕೊಳ್ಳುತ್ತಾನೆ. ಈ ರೀತಿ ಹಳದಿ ಭಂಡಾದ ಜಾಗೆಯಲ್ಲಿ ಗಂಧದ ಬಿಳಿಕೆಂಪು ಬಳಿದುಕೊಂಡು ಹೊಸ ಲಾಂಛನಕ್ಕೆ ಪಲ್ಲಟಗೊಳ್ಳುತ್ತಾನೆ. ಹೀಗೆ ಲಾಂಛನ ಪಲ್ಲಟ ಮಾಡಿಕೊಂಡ ದಾಸಪ್ಪ ತನ್ನದೇ ಕುರುಬ ಜಾತಿಯವರಿಗಿಂತ ತಾನು ತುಸು ಮೇಲಂತಸ್ತಿನವನು ಎಂದು ಭಾವಿಸುತ್ತಾನೆ. ಭಂಡಾರಕ್ಕಿಂತ ಗಂಧ ಶ್ರೇಷ್ಠವೆಂಬ ಮೇಲರಿಮೆ ದಾಸಪ್ಪನಲ್ಲಿರುತ್ತದೆ.

ಪೈಜಾಮ-ಮಡಿ

ದಾಸಪ್ಪನಾದವನು ತನ್ನ ವೇಷದ ಮೂಲಕವೂ ತನ್ನನ್ನು ಅನ್ಯ ಕುರುಬರಿಗಿಂತ ಭಿನ್ನ ಎಂದು ಬಿಂಬಿಸಲು ಪ್ರಯತ್ನಿಸುತ್ತಾನೆ. ದಾಸಪ್ಪನಾದ ಈತ ಈಗ ಸಡಿಲವಾದ ಪೈಜಾಮವನ್ನು ಧರಿಸಿ ಮೇಲೆ ಅಂಗಿಯನ್ನು ತೊಡುತ್ತಾನೆ. ಸೊಂಟಕ್ಕೆ ‘ಮಡಿ’ ಯನ್ನು ಕಟ್ಟಿಕೊಳ್ಳುತ್ತಾನೆ. ಈ ‘ಮಡಿ’ ರೇಷ್ಮೆ ಬಟ್ಟೆಯದಾಗಿದ್ದು ಕೆಂಪು, ಹಳದಿ, ಹಸಿರು ಯಾವುದಾದರೂ ಬಣ್ಣದ್ದಾಗಿರಬಹುದು ‘ಮಡಿ’ ಎನ್ನುವ ಶಬ್ಧವೇ ತಾನು ಅನ್ಯ ಕುರುಬರಿಗಿಂತ ಶ್ರೇಷ್ಠವೆನ್ನುವ ಭಾವವನ್ನು ಮೂಡಿಸುತ್ತದೆ. ಮಾಂಸಾಹಾರಿಗಳಾದ ಕುರುಬರು ಮೈಲಿಗೆಯವರು, ತಾನು ಅದನ್ನು ತ್ಯಜಿಸಿ ಹೊಟ್ಟೆಯ ಸುತ್ತಲೂ ‘ಮಡಿ’ ಸುತ್ತಿಕೊಂಡು ‘ಮಡಿವಂತ’ ನಾಗಿರುವೆ ಎಂದು ಸಾರುತ್ತದೆ. ಈ ‘ಮಡಿ’ಧಾರಣೆ ಇದು ಕೂಡಾ ಹರಿದಾಸಪಂಥ ಬೋಧಿಸುವ ಭೇದ ಸಂಸ್ಕೃತಿಯ ದ್ಯೋತಕವೇ ಆಗಿದೆ.

ಗಂಟೆ-ಜಾಗಟೆ-ಶಂಖ

ದಾಸಪ್ಪನಾದವನು ಗಂಟೆ ಜಾಗಟೆ ಶಂಖಗಳಿಗೆ ಪೂಜ್ಯ ಸ್ಥಾನವನ್ನು ಕೊಟ್ಟಿದ್ದಾನೆ. ಹರಿಯ ಸಂಕೇತವಾದ ಈ ಲಾಂಛನಗಳನ್ನು ಪೂಜಾ ಸಂದರ್ಭದಲ್ಲಿ ದಾಸಪ್ಪನು ಬಳಸಿಕೊಳ್ಳುತ್ತಾನೆ. ಭಕ್ತರ ಮನೆಗೆ ಕಟ್ಟಳೆ ತೀರಿಸಲು ಹೋಗುವಾಗಲೂ ಈ ಲಾಂಛನಗಳ ಸಮೇತವಾಗಿಯೇ ಹೋಗುತ್ತಾನೆ. ಭಕ್ತರ ಮನೆಯಲ್ಲಿ ಗಂಟೆ, ಜಾಗಟೆ ಬಾರಿಸುತ್ತಾ ಶಂಖನಾದ ಮಾಡುತ್ತ ದೈವಿಕ ವಾತಾವರಣ ಸೃಷ್ಟಿಸುತ್ತಾರೆ.

ಗರುಡಗಂಬ-ಭನವಾಸಿ

ಗರುಡಬಂಗವು ವಿಷ್ಣುವಿನ ವಾಹನವಾದ ಗರುಡನ ಸಂಕೇತವಾಗಿ ವಿಷ್ಣು ಭಕ್ತರಾದ ದಾಸಪ್ಪಗಳ ಆಚರಣಾಲೋಕದ ಅವಿಭಾನ್ಯ ಅಂಗವಾಗಿ ಬಳಕೆಯಾಗುತ್ತದೆ. ಲಿಂಗಾಯಿತರಲ್ಲಿ ಶಿವನ ವಾಹನ ನಂದಿಯ ಸಂಕೇತವಾಗಿ ನಂದಿಕೋಲ ಇದ್ದಂತೆ ದಾಸಪ್ಪಗಳಿಗೆ ಗರುಡಗಂಬವಿರುತ್ತದೆ. ಅದೇ ತೆರನಾಗಿ ಲಿಂಗಾಯಿತದ ಅಯ್ಯನೋರಗಳಿಗೆ ‘ಜೋಳಿಗೆ’ ಇದ್ದಂತೆ ದಾಸಪ್ಪಗಳಿಗೆ ‘ಭನವಾಸಿ’ ಇರುತ್ತದೆ. ಇದನ್ನು ಅವರು ‘ಬೊವನಾಸಿ’ ಎಂದು ಕರೆಯುತ್ತಾರೆ. ಇನ್ನೂ ಕೆಲವೊಂದು ಕಡೆ ಇದಕ್ಕೆ ‘ಗೋಪಾಳ ಬುಟ್ಟಿ’ ಎಂದು ಕರೆಯುತ್ತಾರೆ. ಈ ‘ಭನವಾಸಿ’ಯನ್ನು ಬಗಲಲ್ಲಿ ಹಾಕಿಕೊಂಡು ತಿಮ್ಮಪ್ಪನ ಸೇವೆ ಮಾಡುವುದರಿಂದ ‘ಭವ’ ‘ನಾಶ’ ವಾಗಿ ಮುಕ್ತಿಯ ಮಾರ್ಗ ತೆರೆದುಕೊಳ್ಳುತ್ತದೆ ಎಂದು ದಾಸಪ್ಪಗಳು ಅಚಲವಾಗಿ ನಂಬುತ್ತಾರೆ.

ಕಟ್ಟಳೆ ತೀರಿಸುವುದು

ವಿಷ್ಣು ಭಕ್ತರ ಮನೆಯಲ್ಲಿ  ನಡೆಯುವ ಕಾರ್ಯಗಳನ್ನು ತೀರಿಸಲು ದಾಸಕುರುಬರನ್ನು ಕರೆಯಿಸುವ ಪದ್ಧತಿಯಿದೆ. ಕುರುಬರಲ್ಲದ ವಿಷ್ಣು ಭಕ್ತರೂ ದಾಸ ಕುರುಬರನ್ನು ಇಂಥ ಕಟ್ಟಳೆ ತೀರಿಸಲು ಕರೆಯಿಸಿಕೊಳ್ಳುತ್ತಾರೆ ಎಂದು ಹೊಳಲ್ಕೆರೆಯ ದಾಸ ತಿಮ್ಮಪ್ಪ ಎನ್ನುವವರು ಕ್ಷೇತ್ರಕಾರ್ಯಕ್ಕೆ  ಹೋದ ಸಂದರ್ಭದಲ್ಲಿ ನನಗೆ ಹೇಳಿದರು. ಭಕ್ತರ ಮನೆಗೆ ಹರಕೆ ತೀರಿಸಲು ದಾಸಪ್ಪ ಹೊರಟಾದ ಶಂಖ ಜಾಗಟೆ ಭವನಾಸಿ ಗರುಡಗಂಬಗಳೊಂದಿಗೆ ಹೋಗುತ್ತಾನೆ. ಆ ಮನೆಗೆ ಹೋದ ದಾಸಪ್ಪ ವಿಷ್ಣುವಿನ ಗುಣಗಾನ ಮಾಡುವ ಹಾಡುಗಳೊಂದಿಗೆ ಪೂಜೆ ನೆರವೇರಿಸುತ್ತಾನೆ. ಪೂಜೆ ಮುಗಿದ ನಂತರ ದಾಸಪ್ಪನಿಗೆ ಪ್ರಸಾದ ಮಾಡಿಸುತ್ತಾರೆ. ಹಾಗೆ ಪ್ರಸಾದ ಮಾಡಿಸುವಾಗ ಎರಡು ಎಡೆಗಳನ್ನು ಮಾಡಿರುತ್ತಾರೆ. ಅವುಗಳ್ಲಲಿ ಒಂದು ಎಡೆಯನ್ನು ಭಕ್ತರು ಭವನಾಸಿಗೆ ತುಂಬಿಸುತ್ತಾರೆ. ಈ ವಿಧಿಯನ್ನು ‘ಗೋಪಾಳ ತುಂಬಿಸುವುದು’ ಎಂದೂ ಕರೆಯುತ್ತಾರೆ. ಉಳಿದ ಇನ್ನೊಂದು ಎಡೆಯನ್ನು ದಾಸಪ್ಪ ಭಕ್ತರ ಮನೆಯಲ್ಲಿಯೇ ಕುಳಿತು ಸ್ವೀಕರಿಸುತ್ತಾರೆ. ಪ್ರಸಾದ ಸ್ವೀಕರಿಸಿದ ನಂತರ ದಾಸಪ್ಪನಿಗೆ ಕಾಣಿಕೆಯನ್ನು ಅರ್ಪಿಸುತ್ತಾರೆ.

ಹರಿಜನರಲ್ಲಿಯೂ ತಿರುಪತಿ ತಿಮ್ಮಪ್ಪನ ಭಕ್ತರಿದ್ದಾರೆ. ಅವರೂ ದಾಸಪ್ಪಗಳನ್ನು ಕಟ್ಟಳೆ ತೀರಿಸಲು ತಮ್ಮ ಮನೆಗೆ ಕರೆಯಿಸಿಕೊಳ್ಳುತ್ತಾರೆ. ಆದರೆ ಅಲ್ಲಿ ಅವರು ಪ್ರಸಾದ ಸ್ವೀಕರಿಸುವುದಿಲ್ಲ. ಹರಿಜನ ಭಕ್ತರಿಂದ ಕಾಣಿಕೆ ಹಾಗೂ ಅಕ್ಕಿ, ಬೇಳೆ, ಬೆಲ್ಲವನ್ನು ತರುತ್ತಾರೆ. ಜಾತಿವ್ಯವಸ್ಥೆಯಲ್ಲಿ ತಮಗಿಂತ ಮೇಲಿನವನಾದ ಲಿಂಗಾಯಿತರ ಮನೆಗಳಿಗೆ ಹೋಗಿ ಅವರ ಮನೆಯಲ್ಲಿ ಪ್ರಸಾದ ಸ್ವೀಕರಿಸಿದ್ದನ್ನು ಹೇಳಿಕೊಂಡಷ್ಟೇ ಅಭಿಮಾನದಿಂದ ಹರಿಜನರ ಮನೆಗಳಿಗೆ ಹೋಗಿ ಅಲ್ಲಿ ಪ್ರಸಾದ ಸ್ವೀಕರಿಸದೇ ಬಂದುದನ್ನು ಅಷ್ಟೆ ಅಭಿಮಾನದಿಂದ ದಾಸಕುರುಬರು ಹೇಳಿಕೊಳ್ಳುತ್ತಾರೆ.

ತಿರುಪತಿ ಯಾತ್ರೆ

‘ವಾರಕರಿ’ ಪಂಥದ ಸಂತರಿಗೆ ಪಂಢರಾಪುರ ಶ್ರದ್ಧಾಕೇಂದ್ರವಾಗಿರುವಂತೆ ತಿರುಪತಿ ದಾಸಪ್ಪಗಳ ಶೃದ್ಧಾಕೇಂದ್ರ. ವಾರಕರಿ ಪಂಥದ ಸಂತರು ಪಂಢರಪುರಕ್ಕೆ ‘ದಿಂಡಿ’ ಹೋಗುವಂತೆ ದಾಸಪ್ಪಗಳು ತಿರುಪತಿಗೆ ಯಾತ್ರೆ ಹೋಗುತ್ತಾರೆ. ದಾಸಪ್ಪಗಳು ತಿರುಪತಿಗೆ ಹೋಗಿ ‘ಸ್ವಾಮಿ ದರ್ಶನ’ ಮಾಡಿಕೊಂಡು ಬರುವುದನ್ನು ತಮ್ಮ ಬದುಕಿನ ಬಹುದೊಡ್ಡ ಪುಣ್ಯವಿಶೇಷವೆಂದು ಭಾವಿಸುತ್ತಾರೆ. ದಾಸಪ್ಪಗಳು. ತಾವು ಅನ್ಯರಿಗಿಂತ ಹೆಚ್ಚುವರಿ ತಿರುಪತಿಗೆ ಹೋಗಿ ಸ್ವಾಮಿ ದರ್ಶನ ಮಾಡಿಕೊಂಡು ಬಂದಿದ್ದೇನೆ ಎಂದು ಅಭಿಮಾನದಿಂದ ಹೇಳಿಕೊಂಡರು. ವಕ್ತೃವಿನ ಮುತ್ತಜ್ಜನಾದ ವರದಜ್ಜ ಎನ್ನುವವರು ವಾಹನ ಸೌಕರ್ಯಗಳಿಲ್ಲದ ಹಿಂದಿನ ದಿನಮಾನಗಳಲ್ಲಿ ಕಾಲ್ನಡಿಗೆಯಲ್ಲಿಯೇ ಅರವತ್ತು ಸಲ ಸ್ವಾಮಿದರ್ಶನ ಮಾಡಿ ಬಂದಿದ್ದರು ಎಂದು ಭಾವುಕರಾಗಿ ಹೇಳಿದರು. ಕಾಲ್ನಡಿಗೆಯಲ್ಲಿ ಹೊಳಲ್ಕೆರೆಯಿಂದ ತಿರುಪತಿಗೆ ಹೋಗಿ ಬರಲು ಅಂದಿನ ಕಾಲದಲ್ಲಿ ಕನಿಷ್ಟ ಪಕ್ಷ ಐದಾರು ತಿಂಗಳು ಬೇಕಾಗುತ್ತಿತ್ತಂತೆ. ವರದಜ್ಜನಂಥವರು ಬದುಕಿನ ಬಹುಪಾಲನ್ನು ಸ್ವಾಮಿ ದರ್ಶನಕ್ಕಾಗಿಯೇ ಮೀಸಲಿಟ್ಟಿದ್ದನ್ನು ಗಮನಿಸಿದರೆ ತಿರುಪತಿ ತಿಮ್ಮಪ್ಪ ದಾಸಪ್ಪಗಳ ಮನಸ್ಸನ್ನು ಆವರಿಸಿಕೊಂಡ ಪರಿಯ ದರ್ಶನವಾಗುತ್ತದೆ.

ತಿರುಮಂತ್ರ

ದಾಸಪ್ಪಗಳು ತಮ್ಮ ಮನೆಯಲ್ಲಿ ಪೂಜೆ ಮಾಡುವಾಗಲಾಗಲೀ ಭಕ್ತರ ಮನೆಗೆ ಕಟ್ಟಳೆ ತೀರಿಸಲು ಹೋದಾಗಲಾಗಲೀ ವಿಷ್ಣುವಿನ ಅಪಾರ ಮಹಿಮೆಯನ್ನು ಸಾರುವ ಹಾಡುಗಳನ್ನು ಹಾಡುತ್ತಾರೆ. ಅವುಗಳ್ಲಲಿ ಹರಕೆಯ ಹಾಡಿನ ಸ್ವರೂಪದ ಹಾಡೊಂದಿದೆ. ಅದನ್ನು ಅವರು ತಿರುಮಂತ್ರ ಎಂದು ಕರೆಯುತ್ತಾರೆ. ಈ ತಿರುಮಂತ್ರ ಹೀಗಿದೆ.

ಸಿರಿವೆಂಕಟಗಿರಿವಾಸ ನಾಮಂದಾಚಾರಿ
ಹರೇ ಹರಿ ವಾರಿಗಳು
ಪುಂಡರೀಕಾಕ್ಷ ಮೂಡಲಗಿರಿವಾಸ
ಮೂವತ್ತು ಗಾವುದಯ್ಯ
ಶ್ರೀನಿವಾಸಾ ಶ್ರೀಮನ್ನಾರಾಯಣ
ನಿನ್ನಕ್ಕಲು ಹೊನ್ನಕ್ಕಲು ಮಾಡುವುದು
ಮುತ್ತೈದಿತನ ವಾರಿ ವಾರಿ ರಕ್ಷಣ ಮಾಡುವುದು
ಭತ್ತ ವತ್ಸಲಾ ಬಂಗಾರಗಿರಿವಾಸ
ಮನೆದೇವರು ಮನೆಗೆ ಬರುವ ಕಾಲದಲ್ಲಿ
ಕಾಂಚಾಣ ಬಂಗಾರ ಕೊಟ್ಟು
ಗುರುವೇ ಶ್ರೀಮನ್ನಾರಾಯಣ
ಭವರೋಗ ವೈದ್ಯ ಅಖಿಲಾಂಡ ಕೋಟಿ
ಬ್ರಹ್ಮಾಂಡ ನಾಯಕಾ ಭಕ್ತರುದ್ಧಾರ ಮಾಡೋ ಗೋವಿಂದಾ ಗೋವಿಂದಾ

ಎಂದು ರಾಗಬದ್ಧವಾಗಿ ಗಂಟೆ, ಜಾಗಟೆ ಬಾರಿಸುತ್ತಾ ಶಂಖನಾದ ಮೊಳಗಿಸಲ್ಪಟ್ಟ ಮಂತ್ರವನ್ನು ಹೇಳುತ್ತಾರೆ.

ಈ ಮಂತ್ರದಲ್ಲಿ ಬರುವ ‘ಗಂಡು ಮಕ್ಕಳ ರಕ್ಷಣೆ ಮಾಡುವುದು’ ಹಾಗೂ ‘ಮುತ್ತೈದಿತನ ವಾರಿವಾರಿ ರಕ್ಷಣ ಮಾಡುವುದು’ ಎನ್ನುವಂತಹ ಹರಕೆಗಳು ಲಿಂಗ ತಾರತಮ್ಯವನ್ನು ಒಪ್ಪಿಕೊಂಡ ಪುರುಷ ಕೇಂದ್ರಿತ ನೆಲೆಯಲ್ಲಿ ರೂಪಿತವಾದವುಗಳು. ಪುರುಷ ಪಾರಮ್ಯವನ್ನು ಒಪ್ಪಿಕೊಂಡ ತಾತ್ವಿಕತೆಯಲ್ಲಿ ಮಾತ್ರ ‘ಗಂಡುಮಕ್ಕಳ ರಕ್ಷಣೆ ಮಾಡುವುದು’ ಎಂದು ಹಾರೈಸಲು ಸಾಧ್ಯ. ಮನೆಯಲ್ಲಿನ ಹೆಣ್ಣು ಮಕ್ಕಳ ಬಗೆಗಿನ ಅಪಾರವಾದ ಉಪೇಕ್ಷೆ ಈ ತೆರನಾದ ತಾತ್ವಿಕತೆಯಲ್ಲಿರುವುದು ಸುಸ್ಪಷ್ಟ. ಅದೂ ಅಲ್ಲದೆ ಮುತ್ತೈದಿತನ ವಾರಿವಾರಿ ರಕ್ಷಣ ಮಾಡುವುದು ಎನ್ನುವ ಹರಕೆ ಮೇಲ್ನೋಟಕ್ಕೆ ಮಹಿಳಾ ಪರವಾಗಿ ಇದ್ದಂತೆ ತೋರಿದರೂ ಅದರ ದೂರಾನ್ವಯದಲ್ಲಿ ಪುರುಷನ/ಪತಿಯ ಆಯುಷ್ಯ ವರ್ಧನೆಯ ಹಾರೈಕೆಯಾಗಿಯೇ ನಿಲ್ಲುತ್ತದೆ.

ಭಟ್ಕಳದ ಗೊಂಡರು

ಈಗಾಗಲೇ ಚರ್ಚಿಸಿರುವಂತೆ ಭಟ್ಕಳದ ಸುತ್ತಮುತ್ತಲಿನ ಪರಿಸರದಲ್ಲಿ ವಾಸಿಸುವ ಗೊಂಡ ಕುರುಬರಿಗೂ ತಿರುಪತಿ ತಿಮ್ಮಪ್ಪನೇ ಮನೆದೇವರು. ಇವರು ತಿಮ್ಮಪ್ಪನ ಹೆಂಡತಿಯಾದ ತುಳಜಮ್ಮನ ಪರಮ ಭಕ್ತರು. ತುಳಸೀ ಕಟ್ಟೆಗಳಿಲ್ಲದ ಗೊಂಡರ ಮನೆಯಂಗಳವನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ, ಮದುವೆ, ಬಾಣಂತನ, ಶಿಶುನಾಮಕರಣ ಮುಂತಾದ ಸಂದರ್ಭದಲ್ಲಿ ತುಳಜಮ್ಮನಿಗೆ ತಪ್ಪದೇ ಪೂಜೆ ಸಲ್ಲಿಸುತ್ತಾರೆ. ತುಳಜಮ್ಮ ತಿಮ್ಮಪ್ಪನಿಗೆ ಸಂಬಂಧಿಸಿದಂತೆ ಗೊಂಡರು ಎರಡು ಪ್ರಮುಖ ಹಬ್ಬಗಳನ್ನು ಆಚರಿಸುತ್ತಾರೆ. ಹರ್ದಿನ ಮಾಡಿಸುವುದು ಹಾಗೂ ಚಕ್ರಕಟ್ಟಿಸುವುದು ಎಂದು ಅವುಗಳಿಗೆ ಹೆಸರು.

ಹರ್ದಿನ ಮಾಡಿಸುವುದು

ಗೊಂಡರು ಆಚರಿಸುವ ದೊಡ್ಡ ಹಬ್ಬವಿದು. ಹರಿ (ವಿಷ್ಣು> ತಿಮ್ಮಪ್ಪ)ಯನ್ನು ಪೂಜಿಸುವ ದಿನಕ್ಕೆ ಗೊಂಡರು ಹರಿದಿನ ಎಂದು ಕರೆಯುತ್ತಾರೆ. ಈ ಹಬ್ಬವನ್ನು ಸ್ಥಿತಿವಂತ ಗೊಂಡರು ಮಾತ್ರ ಮಾಡಲು ಸಾದ್ಯ. ಯಾಕೆಂದರೆ ಈ ಹಬ್ಬ ಮಾಡಲು ಇಂದಿನ ದಿನಮಾನದಲ್ಲಿ ಏನಿಲ್ಲೆಂದರೂ ಒಂದು ಲಕ್ಷದಷ್ಟಾದರೂ ಖರ್ಚಾಗುತ್ತದೆ. ಇದು ಒಟ್ಟು ಐದು ದಿವಸಗಳ ಹಬ್ಬ. ಸಾಮಾನ್ಯವಾಗಿ ಈ ಹಬ್ಬ ಮಂಗಳವಾರದಂದು ಪ್ರಾರಂಭವಾಗುತ್ತದೆ. ಮೊದಲನೆಯ ದಿವಸ ಅಂತರ ಚಕ್ರ ಕಟ್ಟಿಸುತ್ತಾರೆ. ಅಂತರ ಚಕ್ರವೆಂದರೆ ತುಳುಜಮ್ಮನ ಕಟ್ಟಿಯಲ್ಲಿ ತಿಮ್ಮಪ್ಪ, ಕಾಳಭೈರವ ಹಾಗೂ ಧರ್ಮಸ್ಥಳದ ಮಂಜುನಾಥ ದೇವರ ಹೆಸರಿನಲ್ಲಿ ಪಾತ್ರೆಗಳನ್ನು ಇಡುವ ಮೂಲಕ ಸ್ಥಾಪಿಸುತ್ತಾರೆ. ಅದೇ ದಿವಸ ಕಟ್ಟೆಯ ಮೇಲೆ ಕಳಸಕನ್ನಡಿಯನ್ನೂ ಇಡುತ್ತಾರೆ. ಇಲ್ಲಿ ಇಡುವ ಕಳಸಕನ್ನಡಿ ಶ್ರೀಕೃಷ್ಣನ ಚಕ್ರವನ್ನು ಹೋಲುತ್ತದೆ. ಬುಧವಾರದಂದು ಹಬ್ಬಕ್ಕೆ ಬೇಕಾಗುವ ವಸ್ತುಗಳ ಯಾದಿ ತಯಾರಿಸಿಕೊಳ್ಳುತ್ತಾರೆ. ಗುರುವಾರದಂದು ಪಟ್ಟಣಕ್ಕೆ ಹೋಗಿ ಹೊಸ ಅಡಿಕೆ ಮತ್ತು ಇತರ ಸಾಮಾನುಗಳನ್ನು ಖರೀದಿಸಿ ತರುತ್ತಾರೆ. ಶುಕ್ರವಾರದಂದು ಸುತ್ತಮುತ್ತಲಿನ ಗೊಂಡರಿಗೆ ವೀಳ್ಯ ಕೊಟ್ಟು ಬರುತ್ತಾರೆ. ಶನಿವಾರದಂದು ಪ್ರಮುಖ ಆಚರಣೆ ನಡೆಯುತ್ತದೆ. ಅಂದು ತುಳಸೀಕಟ್ಟೆಯ ಮುಂದೆ ಬಾಳೆಕಂಬಗಳನ್ನು ಬಳಸಿ ಗೋಪುರ ನಿರ್ಮಿಸುತ್ತಾರೆ. ಅಲ್ಲಿ ಇಟ್ಟಿರುವ ಕಳಸಕನ್ನಡಿಯನ್ನು ಶೃಂಗಾರ ಮಾಡುತ್ತಾರೆ. ಅಂದು ರಾತ್ರಿ ನೂರಾರು ಜನ ಗೊಂಡರು ಸೇರಿಕೊಂಡು ತಿರುಪತಿ ತಿಮ್ಮಪ್ಪನ ನಾಮಸ್ಮರಣೆ ಮಾಡುತ್ತ ತಾಳಬದ್ಧವಾಗಿ ನರ್ತನ ಮಾಡುತ್ತಾರೆ. ಎಲ್ಲರೂ ಸೇರಿ ಪ್ರಸಾದ ಸೇವಿಸುವ ಮೂಲಕ ಕಾರ್ಯಕ್ರಮ ಮುಕ್ತಾಯವಾಗುತ್ತದೆ.

ಚಕ್ರ ಕಟ್ಟಿಸುವುದು

ಇದಾದರೂ ತುಳಜಮ್ಮ-ತಿಮ್ಮಪ್ಪರ ಕುರಿತಾದ ಒಂದು ದಿವಸದ ಹಬ್ಬ. ಇಲ್ಲಿಯೂ ಅಂತರ ಚಕ್ರ ಕಟ್ಟಿಸುವುದು, ಕಳಸ-ಕನ್ನಡಿ ಶೃಂಗರಿಸುವುದು ನಡೆಯುತ್ತದೆ. ಅಂದು ಪೂಜೆಗೆಂದು ಬಂದ ಗೊಂಡರು ತಿಮ್ಮಪ್ಪ ಕಾಳಭೈರವ ಹಾಗೂ ಮಂಜುನಾಥ ದೇವರ ಪಾತ್ರೆಗಳಲ್ಲಿ ಹಣದ ರೂಪದ ಕಾಣಿಕೆ ಹಾಕುತ್ತಾರೆ. ಹೀಗೆ ಸಂಗ್ರಹವಾದ ಹಣವನ್ನು ಆಯಾ ದೇವರ ಜಾತ್ರೆಗಳಿಗೆ ಹೋದಾಗ ಮುಡಿಪು ಕಟ್ಟಿಸಿಬರುತ್ತಾರೆ.

ದಾಸಗೊಂಡರು

ತಿರುಪತಿ ಯಾತ್ರೆಗೆ ಹೋಗಿ ಬಂದ ಗೊಂಡರನ್ನು ದಾಸಪ್ಪಗಳು ಎಂದು ಕರೆಯುತ್ತಾರೆ. ಇವರನ್ನು ದಾಸಗೊಂಡರು ಎಂದು ಭಾವಿಸಬಹುದು. ಆದರೆ ದಾಸಕುರುಬರಂತೆ ಇವರು ದಾಸಪ್ಪ ದೀಕ್ಷೆಯನ್ನು ಮುದ್ರೆ ಒತ್ತಿಸಿಕೊಳ್ಳುವ ಮೂಲಕ ತೆಗೆದುಕೊಳ್ಳುವುದಿಲ್ಲ. ವಿಷ್ಣು ಭಕ್ತರಾಗಿರುವುದರಿಂದ ಹಣೆಗೆ ನಾಮವಿರುತ್ತದೆ. ಆದರೆ ಇವರು ದಾಸಕುರುಬರ ಹಾಗೆ ತುಳಸಿ ಮಾಲೆಯನ್ನು ಧರಿಸುವುದಿಲ್ಲ. ತುಳಸಿಮಾಲೆಗೆ ಬದಲಾಗಿ ದೃಷ್ಟಿರಸವನ್ನು ಧರಿಸುತ್ತಾರೆ. ಈ ದೃಷ್ಟಿಸರಕ್ಕೂ ತಿಮ್ಮಪ್ಪನಿಗೂ ಯಾವುದೇ ಸಂಬಂಧವಿಲ್ಲ. ಆದರೆ ಒಂದು ಮಾತಂತೂ ನಿಜ. ಸಾಮಾನ್ಯ ಗೊಂಡರು ದಾಸಗೊಂಡನನ್ನು ಅತ್ಯಂತ ಗೌರವದಿಂದ ಕಾಣುತ್ತಾರೆ. ದಾಸಕುರುಬರಿಗಿರುವಂತೆ ದಾಸಗೊಂಡರಿಗೂ ಶನಿವಾರ ಪವಿತ್ರ ದಿವಸವಾಗಿದೆ.

ಜನಿವಾರ ಪಟ್ಟಿ

ವಿಷ್ಣುವಿನ ಪರಮಭಕ್ತರಾಗಿದ್ದರೂ ದಾಸಕುರುಬರು ಹಾಗೂ ದಾಸಗೊಂಡರಿಗೆ ಜನಿವಾರ ಧರಿಸುವ ಹಕ್ಕಿಲ್ಲ. ಆದರೆ ದಾಸಗೊಂಡರಲ್ಲಿ ‘ಜನಿವಾರ ಪಟ್ಟಿ’ ಧರಿಸುವ ಪದ್ಧತಿಯಿದೆ. ಹೆಸರು ‘ಜನಿವಾರ ಪಟ್ಟಿ’ ಎಂದಿದ್ದರೂ ಅದು ವಿಪ್ರರು ಧರಿಸುವ ಜನಿವಾರವಲ್ಲ. ಹೆಸರು ಜನಿವಾರಪಟ್ಟಿ ಎಂದಿದ್ದರೂ ಇದನ್ನು ಕೊರಳಿಗೆ ಧರಿಸುವುದಿಲ್ಲ. ದಾಸಗೊಂಡರು ಬೆಳ್ಳಿಯಿಂದ ತಯಾರಿಸಿದ ಈ ಆಭರಣವನ್ನು ತಮ್ಮ ಸೊಂಟಕ್ಕೆ ಕಟ್ಟಿಕೊಳ್ಳುತ್ತಾರೆ. ವಿಷ್ಣುಭಕ್ತರೇನೋ ಅನ್ನಿಸಿಕೊಂಡೆವು. ಆದರೆ ಜನಿವಾರ ಧರಿಸುವ ಹಕ್ಕು ಇಲ್ಲದಂತಾಯಿತಲ್ಲ ಎಂಬ ಹಳಹಳಿಕೆಯಲ್ಲಿ ಇಂಥ ಜನಿವಾರ ಪಟ್ಟಿ ಆವಿಷ್ಕಾರವಾಗಿರಬಹುದು.

ದಾಸಕುರುಬರ  ಕಂಕಣಬೆಡಗುಗಳು

ದಾಸಕುರುಬರು ಹತ್ತಿಕಂಕಣದವರು. ಅವರು ತಮ್ಮನ್ನು ದೊಡ್ಡ ಕಂಬಳಿಯವರು ಎಂದು ಕರೆದುಕೊಳ್ಳುತ್ತಾರೆ. ಉಣ್ಣಿ ಕಂಕಣದವರನ್ನು ಅವರು ಸಣ್ಣ ಕಂಬಳಿಯವರು ಎಂದು ಕರೆಯುತ್ತಾರೆ. ಹೀಗಾಗಿ ಅವರು ಉಣ್ಣಿಕಂಕಣದವರೊಂದಿಗೆ ವೈವಾಹಿಕ ಸಂಬಂಧ ಬೆಳೆಯಿಸುವುದಿಲ್ಲ. ದಾಸಕುರುಬರಲ್ಲಿ ಸಾವಂತ್ಲರ, ಬನ್ನೇನವರ ಮತ್ತು ಮನ್ನೇನವರ ಎಂಬ ಬೆಡಗಿನವರಿರುತ್ತಾರೆ. ಉಳಿದ ಕುರುಬರಂತೆ ಇದರಲ್ಲಿಯೂ ಸಮಬೆಡಗಿನವರಲ್ಲಿ ವೈವಾಹಿಕ ಸಂಬಂಧ ನಿಷೇಧವಾಗಿದೆ. ಕುರುಬರ ಕುಲಗುರುಗಳಾದ ರೇವಣಸಿದ್ದ ಸಂಪ್ರದಾಯದ ಒಡೆಯರದೂ ಸಾವಂತ್ಲರ ಎಂಬ ಬೆಡಗು. ಸಾವಂತ್ಲರ ಬೆಡಗಿನ ದಾಸಕುರುಬರು ರೇವಣಸಿದ್ದ ಸಂಪ್ರದಾಯದ ಒಡೆಯರೊಂದಿಗೆ ವಿವಾಹ ಸಂಬಂಧ ಬೆಳೆಯಿಸುವುದಿಲ್ಲ. ಇದಕ್ಕೆ ಸಮ ಬೆಡಗು ಕಾರಣವಿರಬಹುದು ಎಂದು ಊಹಿಸಬಹುದು. ಆದರೆ ಬನ್ನೇನವರ ಹಾಗೂ ಮುನ್ನೇನವರ ಬೆಡಗಿನ ದಾಸಕುರುಬರೂ ರೇವಣಸಿದ್ದ ಸಂಪ್ರದಾಯದ ಒಡೆಯರೊಂದಿಗೆ ವಿವಾಹ ಸಂಬಂಧ ಮಾಡುವುದಿಲ್ಲ. ಯಾಕೆ ಎಂದು ಕೇಳಿದರೆ ಸಾವಂತ್ಲರ ಬೆಡಗಿನ ಒಡೆಯರೂ ತಾವು ಸಹೋದರ ಸಂಬಂಧಿಗಳಾಗುತ್ತೇವೆ ಎಂದು ಉತ್ತರಿಸುತ್ತಾರೆ. ಅವರ ಉತ್ತರ ಸಮರ್ಪಕವೆನ್ನಿಸುವುದಿಲ್ಲ. ಇವರ ವಿವಾಹ ಸಂಬಂಧ ನಿಷೇಧದ ಹಿನ್ನೆಲೆಗೆ ತಾರತಮ್ಯದ ಕಾರಣವಿರುವ ಸಾಧ್ಯತೆಯಿದೆ. ದಾಸಕುರುಬರ ವಿವಾಹವನ್ನು ಒಡೆಯರು, ಲಿಂಗಾಯಿತ ಐನೋರು ಇಲ್ಲವೆ ಸ್ಥಳೀಯ ಬ್ರಾಹ್ಮಣರು ನೆರವೇರಿಸುತ್ತಾರೆ.

ದಾಸಕುರುಬರ ಸುತ್ತ ವಿಧಿನಿಷೇಧಗಳು

ದಾಸಪ್ಪನಾದವನ ಸುತ್ತಲೂ ಅನೇಕ ಬಗೆಯಲ್ಲಿ ವಿಧಿ ನಿಷೇಧಗಳನ್ನು ಹೇರಲಾಗಿದೆ. ದಾಸಪ್ಪನಾದವನಿಗೆ ಶನಿವಾರ ಅತ್ಯಂತ ಪವಿತ್ರವಾದ ದಿವಸವಾದ್ದರಿಂದ ಅಂದಿನ ದಿವಸ ಆತ ಸ್ನಾನ, ಪೂಜೆ ತೀರಿಸದ ಹೊರತು, ಅನ್ನಪ್ರಸಾದ ಸ್ವೀಕರಿಸುವುದಿಲ್ಲ. ದಾಸಪ್ಪನ ಮನೆಯಲ್ಲಿ ಯಾರಾದರೂ ಮೃತನಾದರೆ, ಮನೆಯಲ್ಲಿ ಬಾಣಂತಿಯರಿದ್ದರೆ, ಆ ಮನೆಯನ್ನು, ಸೂತಕದ ಮನೆಯೆಂದು ಭಾವಿಸುತ್ತಾರೆ. ಸೂತಕದ ದಿನಗಳಲ್ಲಿ ದಾಸಪ್ಪಗಳು ಭಕ್ತರ ಮನೆಗೆ ಕಟ್ಟಳೆ ತೀರಿಸಲು ಹೋಗುವುದಿಲ್ಲ. ಮನೆಯನ್ನು ಸೂತಕದಿಂದ ಮುಕ್ತಗೊಳಿಸಲು ಶುದ್ಧೀಕರಣ ಕಾರ್ಯವನ್ನು ಮಾಡುತ್ತಾರೆ. ಹೆರಿಗೆ ಕಾರಣದಿಂದಾಗಲೀ  ಮರಣದ ಕಾರಣದಿಂದಾಗಲೀ ಮನೆಗೆ ಸೂತಕ ಅಂಟಿಕೊಂಡಾಗ ದಾಸಪ್ಪಗಳು ವೈಷ್ಣವರ ಮನೆಯಿಂದ ಬಿಳಿನಾಮ ಹಾಗೂ ತುಳಸಿ ತೀರ್ಥ ತಂದು ಸೂತಕದ ಮನೆತುಂಬ ಸಿಂಪಡಿಸಿ ಮನೆಯನ್ನು ಶುದ್ಧೀಕರಿಸುತ್ತಾರೆ. ದಾಸಪ್ಪ ದೀಕ್ಷೆ ಪಡೆದವನು ಅಪ್ಪಿತಪ್ಪಿಯೂ ಮಾಂಸಾಹಾರವನ್ನು ಸೇವಿಸುವಂತಿಲ್ಲ. ಅದೂ ಅಲ್ಲದೆ ಚಪ್ಪಲಿ ಧರಿಸುವುದಿಲ್ಲ.

ಗರುಡಗಂಭ ಭವನಾಸಿ ಇತ್ಯಾದಿ ಲಾಂಛನಗಳು ದಾಸಪ್ಪಗಳಿಗೆ ಪವಿತ್ರವಾದವುಗಳು ಎಂಬ ಮಾತು ನಿಜವಾಗಿದ್ದರೂ ದಾಸಕುರುಬರ ಮದುವೆಯ ಸಂದರ್ಭದಲ್ಲಿ  ಈ ಲಾಂಛನಗಳನ್ನು ನಿಷೇಧಿಸಲಾಗಿದೆ. ಇದೊಂದು ಕುತೂಹಲಕರ ಸಂಗತಿಯಾಗಿದೆ. ಮೂಲತಃ ಶೈವರಾದ ಈ ದಾಸಪ್ಪಗಳು ವಿಷ್ಣುವನ್ನು ಸಧ್ಯಕ್ಕೆ ಆಯ್ಕೆ ಮಾಡಿಕೊಂಡಿದ್ದರೂ ಅವರ ಬದುಕಿನ ಅತ್ಯಂತ ಮಹತ್ವದ ಘಟ್ಟವಾದ  ವಿವಾಹದಂಥ ಸಂದರ್ಭದಲ್ಲಿ ಮೂಲದ ಶೈವ ಸ್ಮರಣೆಯ ಕಡೆಗೆ ವಾಲುತ್ತಿರಬಹುದು ಎನ್ನಿಸುತ್ತದೆ. ಆ ಕಾರಣವಾಗಿಯೇ ವಿಷ್ಣುವಿನ ಲಾಂಛನಗಳಾದ ಗರುಡಗಂಭ ಭವನಾಸಿಗಳನ್ನು ಈ ಸಂದರ್ಭದಲ್ಲಿ ನಿಷೇಧಿಸಿಕೊಂಡಿರಬಹುದು ಎನ್ನಿಸುತ್ತದೆ.

ದಾಸತ್ವವೆಂಬ ಮಾಯದ ಬಾಗಿಲು

ಒಂದರ್ಥದಲ್ಲಿ ಹರಿದಾಸವೆನ್ನುವುದು ವೈದಿಕ ಧರ್ಮದ ಉದಾರವಾದಿ ನಿಲುವಿನ ಫಲವಾಗಿದೆ. ಲಿಂಗಾಯತರ ಹಾಗೆ ಇದು ಪ್ರತಿ ಸಂಸ್ಕೃತಿಯ ಹಂಬಲದಲ್ಲಿ ಹುಟ್ಟಿ ಬಂದುದಲ್ಲ. ಲಿಂಗಾಯತವು ಗುಡಿ ಸಂಸ್ಕೃತಿಯನ್ನು ನಿರಾಕರಣೆ ಮಾಡಲು ಹವಣಿಸಿದರೆ ಹರಿದಾಸ ಪಂಥ ಗುಡಿಸಂಸ್ಕೃತಿಯನ್ನು ಘೋಷಿಸಿಕೊಂಡು ಬಂದಿತು. ಲಿಂಗಾಯತದಲ್ಲಿ ಸ್ಥಾವರದ ಜಾಗೆಯಲ್ಲಿ ಇಷ್ಟಲಿಂಗ ಬಂದರೆ ಹರಿದಾಸಪಂಥದಲ್ಲಿ ಗುಡಿಯ ಮೂಲ ಆಕೃತಿ ಹಾಗೆಯೇ ಉಳಿದು ಒಳಗಿನ ದೇವರು ಸ್ವಲ್ಪ ಮಿಸುಕಾಡಿದಂತೆ ತೋರುತ್ತಾನೆ. ಕನಕಕಿಂಡಿಯ ದಂತಕತೆಯಲ್ಲಿ ಇದನ್ನು ರೂಪಕಗೊಳಿಸಿರುವುದನ್ನು ನಾವು ನೋಡಬಹುದು. ಈ ಹಿನ್ನೆಲೆಯಲ್ಲಿ ‘ದಾಸ’ವೆನ್ನುವ ಪದ ಏನೆಲ್ಲ ಹೊಸ ಪ್ರಭಾವಳಿಯನ್ನು ಲೇಪಿಸಿಕೊಂಡು ಬಂದರೂ ಅದರ ಮೂಲದಲ್ಲಿನ ಅರ್ಥವಿನ್ಯಾಸ ಹಾಗೆಯೇ ಉಳಿದುಕೊಂಡು ಬಂದಿತು. ಲೌಕಿಕ ಜಗತ್ತಿನ ರಾಜ/ಸಾವಂತ/ಮಾಂಡಲೀಕ/ಜಹಾಗೀರದಾರ/ಗೌಡ ಮುಂತಾದ ಯಜಮಾನರ ಜಾಗೆಯಲ್ಲಿ ಅಲೌಕಿಕ ಜಗತ್ತಿನ ಕೃಷ್ಣ/ವಿಷ್ಣು/ತಿಮ್ಮಪ್ಪ/ವರದಪ್ಪ ಮುಂತಾದ ದೇವತೆಗಳು ಸ್ಥಾಪಿತವಾದವು. ಹೀಗೆ ಲೌಕಿಕದ ದಾಸ್ಯ ಅಲೌಕಿಕದ ದಾಸ್ಯವಾಗಿ ರೂಪಾಂತರಗೊಂಡು ‘ದಾಸ್ಯ’ವೆನ್ನುವುದು ನಿತ್ಯವಾಗಿಯೇ ಉಳಿಯಿತು. ತರತಮ ನಿರಂತರವಾಯಿತು. ಅದರ ದ್ಯೋತಕವೆನ್ನುವಂತೆ ವಿಷ್ಣು ಭಕ್ತರಲ್ಲಿ ಆಚಾರ್ಯರು ಹಾಗೂ ದಾಸಪ್ಪಗಳು ಎಂಬ ಎರಡು ಗುಂಪುಗಳಿವೆ. ಮೇಲ್ವರ್ಗದ ವಿಷ್ಣು ಭಕ್ತರು ಆಚಾರ್ಯರೆನ್ನಿಸಿಕೊಂಡರೆ ಕೆಳವರ್ಗದ ವಿಷ್ಣು ಭಕ್ತರು ‘ದಾಸಯ್ಯ’ಗಳಾದರು. ಆದ್ದರಿಂದ ಕೆಳವರ್ಗದ ಜನರಿಗೆ ವಿಷ್ಣು ಭಕ್ತಿಯ ಬಾಗಿಲು ಮಾಯದ ಬಾಗಿಲಾಗಿ ಉಳಿದು ಬಿಟ್ಟಿತು. ಈ ಮಾಯದ ಬಾಗಿಲಿಗೆ ಸ್ವಾಗತವೆಂಬ ಬೋರ್ಡಿದೆ. ಬಾಗಿಲು ದಾಟಿ ಒಳಗೆ ಪ್ರವೇಶಿಸಿದಂತೆ ತೋರಿದರೂ ಬಾಗಿಲು ದಾಟಿದವರು ಹೊರಗೆ ಬಂದಿರುತ್ತಾರೆ. ಆದರೆ ಒಳಗೆ ಪ್ರವೇಶಿಸಿದ ಭ್ರಮೆ ಸೃಷ್ಟಿಯಾಗಿರುತ್ತದೆ. ಆ ಕಾರಣವಾಗಿಯೇ ಕೆಳವರ್ಗದ ಹರಿಭಕ್ತ ಎಂಥದೇ ಭಕ್ತಿ ಪಾರಮ್ಯ ಮೆರೆದರೂ ಆತ ಹರಿಯ ಒಕ್ಕಲಾಗಬಹುದೇ ಹೊರತು ಆರ್ಚಕನಾಗಲಾರ.

ಗ್ರಂಥಋಣ

೧. ದಾಸಪ್ಪ ಜೋಗಪ್ಪ (ಎರಡು ಸಂಪ್ರದಾಯಗಳ ಅಭ್ಯಾಸ) ಸಂ: ಹಿ. ಚಿ. ಬೋರಲಿಂಗಯ್ಯ.

೨. ಕನ್ನಡ ವಿಶ್ವಕೋಶ ಸಂಪುಟ-೩

೩. ಕರ್ನಾಟಕ ಇತಿಹಾಸ ದರ್ಶನ : ಎಂ. ವ್ಹಿ. ಕೃಷ್ಣರಾವ

೪. ದಾಸಸಾಹಿತ್ಯ ದಿಗ್ಗಜರು : ಡಾ. ಜಿ. ವರದರಾಜರಾವ್‌

೫. ದಾಸ ಸಾಹಿತ್ಯ ದರ್ಶನ : ಸಂ. ಎಚ್‌. ಎಸ್‌ಕೆ.

೬. ಪುರಂದರದಾಸರು : ವೀ. ಸೀತಾರಾಮಯ್ಯ

೭. ಜನಪದ ಹಾಲುಮತ ಕಾವ್ಯ : ಸಂ. ಡಾ. ವೀರಣ್ಣ ದಂಡೆ.

೮. ಕುರುಬರ ಚರಿತ್ರೆ : ವಿ. ಆರ್‌. ಹನಮಂತಯ್ಯ

೯. ಸಿದ್ದಸಿರಿ : ಮುದಗೊಂಡ ಮಾರಾಯರು ಒಡೆಯರು, ವಕ್ತ್ರ : ದಾಸ ತಿಮ್ಮಪ್ಪ ಹೊಳಲ್ಕೆರೆ