ಬಸವಣ್ಣನು ಜಾತಿಯಿಂದ ಬ್ರಾಹ್ಮಣನಾಗಿದ್ದು, ವೀರಶೈವನಾಗಿರುವಂತೆ ಹರಳಯ್ಯನು ಜಾತಿಯಿಂದ ಮಾದಿಗನಾಗಿ ವೀರಶೈವನಾಗಿದ್ದಾನೆ.

[1] ಲಿಂಗಾಯಿತರಲ್ಲಿ ಹದಿನೆಂಟು ಜಾತಿಗಳೆಂದು ರೂಢಿಯಲ್ಲಿ ಹೇಳಲಾಗುತ್ತದೆ. ಶೈವ/ವೀರಶೈವ ಮೂಲದ ಕುರುಬರಲ್ಲಿಯೇ ಬಹುಸಂಖ್ಯಾತರು ಲಿಂಗಾಯಿತರಾದರೂ ಅದೇಕೋ ತಮ್ಮ ಕುರುಬ ಮೂಲವನ್ನು ಅವರು ಹೇಳಿಕೊಳ್ಳದಿರುವುದು ಆಶ್ಚರ್ಯವನ್ನುಂಟು ಮಾಡುತ್ತದೆ.

ಪ್ರಾಚೀನ ಕಾಲದಲ್ಲಿ ಹಾಲು, ಹೈನು, ಜೇನುತುಪ್ಪ ಮುಂತಾದವುಗಳನ್ನು ಹಾಕಲು ಬಿದಿರು ಬಂಬಿನಿಂದ ಮಾಡಿದ ಪಾತ್ರೆಯನ್ನು ಕುರುಬರು ‘ಅಂಡೆ’ ಅಂದರು. ಅಂಡೆಗಳನ್ನು ವ್ಯಾಪಕವಾಗಿ ಬಳಸುತ್ತಿದ್ದ ಕುರುಬರು ‘ಅಂಡೆ ಕುರುಬರು’ ಅನ್ನಿಸಿಕೊಂಡರು. ಅವರು ಲಿಂಗಧರಿಸತೊಡಗಿದಾಗ ‘ಅಂಡೆ (ಹಂಡೆ) ಲಿಂಗಾಯಿತರು’ ಆದರು. ಅದರಂತೆ ಜೇನು ಕುರುಬರು ‘ನೊಣಬ (ನೊಳಂಬ) ಆದರು. ಕಿಟೆಲ್‌ ಅವರು ‘ನೊಣಬ’ ಎಂಬುದಕ್ಕೆ ‘A caste division of Kurubas’(ಕುರುಬರ ಒಂದು ಜಾತಿ ಪ್ರಭೇದ) ಎಂದು ಅರ್ಥ ಕೊಟ್ಟಿದ್ದಾರೆ. ನೊಣಬರಲ್ಲಿ ಲಿಂಗಧಾರಿಗಳಾದವರು ‘ನೊಣಬ ಲಿಂಗಾಯಿತ’ ಆದರು. ನೊಳಂಬ ರಾಜ್ಯ ಸ್ಥಾಪಿಸಿದ ಇವರು ಕುರುಬರಾದ ಪಲ್ಲವರ ಸಂಬಂಧಿಗಳು. ಅದರಂತೆ ‘ಸಾದ’ ಎಂಬುದಕ್ಕೆ ಕಿಟೆಲ್‌ ಅವರು A class of Kurubas (ಕುರುಬರ ಒಂದು ವರ್ಗ) ಎಂದು ಅರ್ಥ ಕೊಟ್ಟಿದ್ದಾರೆ. ಇವರಲ್ಲಿ ಲಿಂಗಧಾರಿಗಳಾದವರು ‘ಸಾಲ ಲಿಂಗಾಯಿತ’ ಆದರು.

ಕುರುಬರು ಸೀದ-ಸಾದ (ಸೀದಾ ಸಾದಾ) ಜನ. ಈ ಗುಣವಾಚಕದ ಹಿನ್ನೆಲೆಯಲ್ಲಿಯೇ ಸಿದ್ಧ (ಸಿದ್ಧ) ಸಾದು (ಸಾಧು) ಎಂಬ ಪದಗಳು ನಿಷ್ಪತ್ತಿ ಆಗಿರುವ ಲಕ್ಷಣಗಳು ಕಂಡುಬರುತ್ತಿವೆ. ಕುರುಬರಲ್ಲಿಯೇ ಕೆಲವರು ಗಾಣಿಗರಾದರು. ಸಾದ ಗಾಣಿಗರು ಇತರ ಸಾದರಿಗಿಂತ ಮುಂಚೆ ಲಿಂಗಧಾರಿಗಳಾಗಿ, ಸಾದರಿಗೆ ಸೇರದ ಮಠಗಳೊಂದಿಗೆ ಸೇರಿ ‘ಸಜ್ಜನ’ (ಸಾದ ಜನ) ಆದರು. ಲಿಂಗಾಯಿತರಲ್ಲದ ಗಾಣಿಗರಿಗೆ ಈಗಲೂ ಮಾಂಸಾಹಾರ ವರ್ಜ್ಯವಲ್ಲ.

ಈಗ ಬೆಳಕಿಗೆ ಬಂದಿರುವಂತೆ, ಕುರುಬರಲ್ಲಿ ಸಾವಿರಕ್ಕೂ ಹೆಚ್ಚು ಬೆಡಗುಗಳಿವೆ (ಬೆಡಗು ಅಂದರೆ ಕುಲ, ಕೊಲ, ಬಳಿ, ಗೋತ್ರ). ಶೋಧ ಮಾಡಿದರೆ ಅವುಗಳ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ. ಕೆಲ ಮುಖ್ಯ ಬೆಡಗುಗಳು ಪ್ರತ್ಯೇಕ ಜಾತಿಗಳಾಗಿದ್ದು ಕಂಡುಬರುತ್ತದೆ. ಮೇಲೆ ಹೇಳಿದ ಅಂಡೆ, ನೊಣಬ, ಸಾದ, ಕುರುಬರಲ್ಲಿನ ಮುಖ್ಯ ಬೆಡಗುಗಳು. ಅವು ಪ್ರತ್ಯೇಕ ಜಾತಿಗಳಾಗಿ ಮಾರ್ಪಟ್ಟು, ನಂತರ ಇತರ ಕೆಲ ಬೆಡಗುಗಳ ಜನ ಸೇರಿಕೊಂಡು ಮತ್ತು ಕೆಲ ಬೆಡಗುಗಳಲ್ಲಿ ಶಾಖೆಗಳಾಗಿ ಬೆಳೆದದ್ದು ಕಂಡುಬರುತ್ತದೆ. ನಾನು ಸಂಗ್ರಹಿಸಿದ ಸದ್ಯದ ಸಾದಲಿಂಗಾಯಿತರಲ್ಲಿನ ಬೆಡಗುಗಳು ಇಂತಿವೆ.

ಬೆಡಗು / ಬಳಿ-ಕುಲ/ಕೊಲ

೧. ಅಂಗಲೋರು ೨. ಅಜ್ಜಲೋರು ೩. ಅಚ್ಚೇರು
೪. ಅಂಜನೋರು ೫. ಅಡಿಕೆಲೇರು ೬. ಅಟ್ಟೆಲ್ಲೋರು
೭. ಅಡ್ಡೆಲ್ಲೋರು ೮. ಅಂಡೆಲ್ಲೋರು ೯. ಅತ್ತೆಲ್ಲೋರು
೧೦. ಅಧಿಕಾರದೋರು ೧೧. ಅನ್ನಲೋರು ೧೨. ಅನ್ನೆಲ್ಲೋರು
೧೩. ಅಂದಲ್ಲೋರು ೧೪. ಅಪ್ಳದೋರು ೧೫. ಅಬ್ಬಿಗೆಲ್ಲೋರು
೧೬. ಅರಗಳಬಾನಿನೋರು ೧೭. ಆನವೆಲ್ಲೋರು ೧೮. ಆನೆಲ್ಲೋರು
೧೯. ಆಲೆಲ್ಲೋರು ೨೦. ಇಟ್ಟಿಗೆ ಮಲ್ಲಿನೋರು ೨೧. ಉಗ್ರದೋರು
೨೨. ಉಗ್ರಾಣದೋರು ೨೩. ಉತ್ತಮದೋರು ೨೪. ಉಪ್ಪಿನೋರು
೨೫. ಉಳ್ಳಲ್ಲೇರು* ೨೬. ಉಕ್ಕಿನೋರು ೨೭. ಎಣ್ಣೇರು
೨೮. ಎತ್ತಿನೋರು ೨೯. ಎರಡುಕೇರೇರು ೩೦. ಎಳ್ಳಿನೋರು
೩೧. ಒನಕೆಲ್ಲೋರು* ೩೨. ಓಲೇರು ೩೩. ಕಗ್ಗಲ್ಲೋರು*
೩೪. ಕಂಗಳೋರು ೩೫. ಕಣ್ಣೆಲ್ಲೋರು ೩೬. ಕಡ್ಲೆಲ್ಲೋರು
೩೭. ಕಣಿದೋರು ೩೮. ಕಣ್ಣೇರು ೩೯. ಕನ್ನೇರು
೪೦. ಕಬ್ಬಾಲೋರು ೪೧. ಕಪಿನೇರು ೪೨. ಕಬ್ಬಿನ ಸತ್ತಿಗೆಯವರು
೪೩. ಕರವೆಲ್ಲೋರು ೪೪. ಕರಕೆಲ್ಲೋರು ೪೫. ಕರಿಕೇರು
೪೬. ಕರಿಯೋರು ೪೭. ಕರೆಯೋರು ೪೮. ಕರೇಲ್ಲೋರು
೪೯. ಕಲ್ಲೆಲ್ಲೋರು ೫೦. ಕಾಡಲ್ಲೋರು ೫೧. ಕಾರೆಲ್ಲೋರು
೫೨. ಕಾರೇರು ೫೩. ಕಿಟ್ಟದೋರು ೫೪. ಕಿತ್ತಲೇರು
೫೫. ಕಿರಿಗಣ್ಣೇರು ೫೬. ಕಿರಿಗಲ್ಲೋರು ೫೭. ಕುಡ್ಲೋರು
೫೮. ಕುಂಬಳದೋರು* ೫೯. ಕೆಂಚನೋರು* ೬೦. ಕೆಂದಾವರೇರು
೬೧. ಕೆನ್ಯಾಳಿನೋರು ೬೨. ಕೊಟ್ಟೂರೋರು ೬೫. ಕೊಟ್ಟೂರು*
೬೬. ಕೊಡಲೋರು ೬೭. ಕೊಡ್ಲೇರು* ೬೮. ಕೊಂಡೆಲ್ಲೋರು
೬೯. ಕೊಪ್ಪಿನೋರು* ೭೦. ಕೋಡಗಲ್ಲೋರು ೭೧. ಕೋನೆಲ್ಲೋರು
೭೨. ಕೋಲೆಲ್ಲೇರು ೭೩. ಗಂಟೆಲ್ಲೋರು* ೭೪. ಗದುಗಿನೋರು
೭೫. ಗರುಗಡ್ಲೇರು ೭೬. ಗಳ್ಳೇರು ೭೭. ಗಾಳೆಲ್ಲೋರು
೭೮. ಗಿಲಿಕೆಲ್ಲೋರು ೭೯. ಗುಂಚಲ್ಲೋರು ೮೦. ಗೆಜ್ಜೆಲ್ಲೋರು
೮೧. ಗುಡ್ಡಲೋರು ೮೨. ಗೋಣಿಲ್ಲೋರು ೮೩. ಗೊಂಡೆಲ್ಲೇರು
೮೪. ಗೊಬ್ಬರದೋರು ೮೫. ಗೊಲ್ಲಾಳೋರು ೮೬. ಗೋದ್ನೂರು
೮೭. ಗೋವಿನೋರು ೮೮. ಗೌಡ್ಲೋರು* ೮೯. ಚಕ್ರಕೋಣದೋರು*
೯೦. ಚನ್ನಗೊಂಡನೋರು ೯೧. ಚನ್ನಲ್ಲೋರು ೯೨. ಚಂದದ್ದೋರು
೯೩. ಚಂದಾಳದೋರು ೯೪. ಚಂದ್ರನೋರು* ೯೫. ಚನ್ನಿಗದೋರು
೯೬. ಚಲ್ಲೆಲ್ಲೋರು* ೯೭. ಚಳ್ಳನೋರು ೯೮. ಚಿತ್ತಾರದೋರು
೯೯. ಚಿನ್ನದಕತ್ತೇರು ೧೦೦. ಚಿನ್ನಮನೇರು ೧೦೧. ಚಿನ್ನಹಬ್ಬಿಗೇರು
೧೦೨. ಚಿಬ್ರೇರು ೧೦೩. ಚಿಮ್ಮಲೋರು ೧೦೪. ಚಿಮ್ಮೇರು
೧೦೫. ಚುಂಚಲ್ಲೋರು ೧೦೬. ಚುಮ್ಮರಿಯೋರು ೧೦೭. ಚೆಳ್ಳೇರು*
೧೦೮. ಚೊಕ್ಕನೋರು ೧೦೯. ಜಕ್ಕೆಲ್ಲೋರು ೧೧೦. ಜಂಜಲೋರು
೧೧೧. ಜಂದೆದ್ದೇರು ೧೧೨. ಜರಮಲ್ಲೇರು ೧೧೩. ಜಲದಿ
೧೧೪. ಜಾನುಕಲ್ಲೋರು ೧೧೫. ಜಾನೆಲ್ಲೋರು ೧೧೬. ಜಾನ್ಕದೋರು
೧೧೭. ಜೈನ್ಲೋರು ೧೧೮. ಡಬ್ಳದೋರು ೧೧೯. ಡಂಬಳದೋರು
೧೨೦. ತಂಡಸ್ಲೋರು ೧೨೧. ತಪ್ಪಲೋರು ೧೨೨. ತರಲ್ಲೋರು
೧೨೩. ತರಳಬಾಳೋರು ೧೨೪. ತಾವರೇರು ೧೨೫. ತುಪ್ಪದೋರು*
೧೨೬. ತೆಪ್ಪಲೋರು ೧೨೭. ತುಗ್ಗಲ್ಲೋರು ೧೨೮. ತುಂಬೆಲ್ಲೋರು
೧೨೯. ತೆನೆಯೋರು ೧೩೦. ತೊಲಗದೋರು ೧೩೧. ಥುತ್ತಾಳೋರು
೧೩೨. ದಂಡೆಲ್ಲೋರು* ೧೩೩. ದಮ್ಮದೋರು ೧೩೪. ದಾಳೇರು
೧೩೫. ದೇವನೂರು ೧೩೬. ದೇವಲ್ಲೋರು ೧೩೭. ದೇವೇಂದ್ರಲೋರು
೧೩೮. ದೊತೇರು ೧೩೯. ದೋಸೇರು ೧೪೦. ದ್ಯಾವಲೋರು
೧೪೧. ನಗನೋರು ೧೪೨. ನದ್ಲೇರು ೧೪೩. ನಂದನೋರು
೧೪೪. ನಂದ್ಯಲ್ಲೋರು ೧೪೫. ನರಿಗಲ್ಲೋರು ೧೪೬. ನಲ್ಲೆಲ್ಲೋರು
೧೪೭. ನಸ್ಲೇರು* ೧೪೮. ನವಣೆಲ್ಲೋರು ೧೪೯. ನಳಿಲ್ಲೋರು
೧೫೦. ನಾಗಮನೋರು ೧೫೧. ನಾಗಲೋರು ೧೫೨. ನಾಗೆಲ್ಲೋರು
೧೫೩. ನಾರೆಲ್ಲೋರು ೧೫೪. ನಾರೇರು ೧೫೫. ನಿಜದಂಲೋರು
೧೫೬. ನಿಡಗಲ್ಲೋರು ೧೫೭. ನುರಿಗಲ್ಲೇರು ೧೫೮. ನೆಟ್ಟಿಲ್ಲೋರು
೧೫೯. ನೆಲ್ಲೇರು* ೧೬೦. ನೈನೋರು ೧೬೧. ನೊರೆಹಾಲೋರು
೧೬೨. ಪಕ್ಕೆಲ್ಲೋರು ೧೬೩. ಪಂಗಾಳಿ ಬೈರಿ ೧೬೪. ಪ್ರಭೆಲೋರು
೧೬೫. ಪಾಂಡದೋರು* ೧೬೬. ಪಾಳಶೆಟ್ರು ೧೬೭. ಪಿಳ್ಳೆಲ್ಲೇರು
೧೬೮. ಬಂಡೆಲ್ಲೋರು ೧೬೯. ಬಡ್ಡಲ್ಲೇರು ೧೭೦. ಬಂಡೇರು
೧೭೧. ಬನ್ನೆಲ್ಲೋರು ೧೭೨. ಬಂದೆಲ್ಲೋರು ೧೭೩. ಬರಿಗೇರೇರು
೧೭೪. ಬಸಿಯಲ್ಲೋರು* ೧೭೫. ಬಳಗದೋರು ೧೭೬. ಬಳಿಆಲದಲೋರು
೧೭೭. ಬಳ್ದೇರು ೧೭೮. ಬಾಳತಲೇರು ೧೭೯. ಬಾಳಪ್ಪನೋರು*
೧೮೦. ಬಾಳೇರು* ೧೮೧. ಬಾಳೆಲ್ಲೋರು ೧೮೨. ಬಿಲ್ಲಾಳೋರು
೧೮೩. ಬಿಲ್ಲೋರು* ೧೮೪. ಬಿಳಿಯಾಲದೋರು ೧೮೫. ಬಿಳಿಎಲಡಶ್ಯಾವಂತಲೋರು
೧೮೬. ಬುಗುಡೇರು ೧೮೭. ಬುಡ್ಡೆಲ್ಲೋರು ೧೮೮. ಬುಳ್ಳುದೋರು
೧೮೯. ಬೂದಲೋರು ೧೯೦. ಬೆಟ್ಟದೋರು ೧೯೧. ಬೆಣ್ಣೆಲ್ಲೋರು*
೧೯೨. ಬೆನಕಲ್ಲೋರು* ೧೯೩. ಬೆನಕದೋರು* ೧೯೪. ಬೆಲ್ಲದೋರು*
೧೯೫. ಬೆಳ್ಳೆಲ್ಲೋರು* ೧೯೬. ಬೇಲಿಮೇಲ್ಲೋರು ೧೯೭. ಬೈಚೆಲ್ಲೋರು
೧೯೮. ಬೈಲುಗದ್ದೇರು ೧೯೯. ಬೋಚೇರು* ೨೦೦. ಭಕ್ತರು
೨೦೧. ಭಗತರೋರು ೨೦೨. ಭಂಡಾರದೋರು ೨೦೩. ಭೋಮೆಲ್ಲೋರು
೨೦೪. ಭೋಚೇರು ೨೦೫. ಮಗಿನೋರು ೨೦೬. ಮಣೆಲೇರು / ಮನ್ನೇಲೇರು
೨೦೭. ಮಣ್ಣಲ್ಲೇರು ಅಂಗಲೋರು ೨೦೮. ಮತ್ತೆಲ್ಲೇರು ೨೦೯. ಮದೆಲ್ಲೋರು
೨೧೦. ಮರಗದೋರು ೨೧೧. ಮರಿಯಾನೇರು ೨೧೨. ಮರಿಲೋರು
೨೧೩. ಮರುಹುಲ್ಲೋರು ೨೧೪. ಮರೆಲ್ಲೋರು ೨೧೫. ಮಲ್ಲಿಗೇರು
೨೧೬. ಮಲ್ಲೆನೋರು* ೨೧೭. ಮಲ್ಲೇಲ್ಲೋರು* ೨೧೮. ಮಹಂತನೋರು
೨೧೯. ಮಾಕಲೋರು ೨೨೦. ಮಾಗಳೋರು ೨೨೧. ಮಾಡದೋರು
೨೨೨. ಮಾಣಿಕದೋರು* ೨೨೩. ಮಾನ್ಯದೋರು* ೨೨೪. ಮಾಮಲೇರು
೨೨೫. ಮಾಲೇರು* ೨೨೬. ಮಾಳಿಗೇರು ೨೨೭. ಮಾಮಲೋರು*
೨೨೮. ಮ್ಯಾಕಲೋರು ೨೨೯. ಮ್ಯಾಳಶೆಟ್ರು ೨೩೦. ಮಿಳ್ಳೆಲ್ಲೋರು
೨೩೧. ಮುಂಡಿಗೇರು ೨೩೨. ಮುತ್ತಿನಪೆಂಡೇರು ೨೩೩. ಮುತ್ತಿನಶ್ಯಾವಂತಲೋರು
೨೩೪. ಮುತ್ತಿನ ಸುತ್ತಿಗೆ ಶಾವಂತಲೋರು ೨೩೫. ಮುತ್ತಿನೋರು* ೨೩೬. ಮುದೇಲೋರು
೨೩೭. ಮುಪ್ಪನೋರು ೨೩೮. ಮುರಿಯುಲ್ಲೋರು ೨೩೯. ಮುಳುನೋರು
೨೪೦. ಮೇನೆಲ್ಲೋರು ೨೪೧. ಮೈಲೆಲ್ಲೋರು ೨೪೨. ಮೊನ್ನೆಲ್ಲೋರು
೨೪೩. ಯಗಟಲೋರು ೨೪೪. ಯನುಮುಲೋರು ೨೪೫. ಯಳ್ಳೇಲ್ಲೋರು*
೨೪೬. ಯಳೇನೋರು ೨೪೭. ರತ್ನದೋರು ೨೪೮. ರಾಜಂದೋರು ರಾಜನಿ ದೋರು
೨೪೯. ರಾಸೇರು ೨೫೦. ರೊಟ್ಲೋರು ೨೫೧. ಲಲ್ಲೆಲ್ಲೋರು
೨೫೨. ಲೆತ್ತದೋರು ೨೫೩. ಲೈಲೋರು ೨೫೪. ವಜ್ರೇರು
೨೫೫. ಶಲ್ಲೆಲ್ಲೋರು ೨೫೬. ಶಾವಂತಿಗೇರು ೨೫೭. ಶ್ಯಾವಂಲ್ಲೋರು
೨೫೮. ಶ್ವಾವಲೋರು ೨೫೯. ಶಿಲಿವೆಲ್ಲೋರು ೨೬೦. ಶೀಲವಂತರು
೨೬೧. ಶೃಂಗಾರದೋರು ೨೬೨. ಶೆಟ್ಟೆಲ್ಲೋರು* ೨೬೩ ಸಕ್ಕರೇರು*
೨೬೪. ಸಣ್ಣಕ್ಕಿ ಅವಳಗೊಂಡರು ೨೬೫. ಸಣ್ಣಕ್ಕೇರು* ೨೬೬. ಸಂತೆಲ್ಲೋರು
೨೬೭. ಸಪ್ಪಲೋರು ೨೬೮. ಸಂಪಿಗೇರು ೨೬೯. ಸಾಲೆಲ್ಲೋರು ಸಾಲೇರು*
೨೭೦. ಸಾಸ್ವೆಲ್ಲೋರು ೨೭೧. ಸಿದ್ದಲ್ಲೇರು ಸಿದ್ದನೋರು ೨೭೨. ಸಿರಿವಂತರು
೨೭೩. ಸಿಲ್ಲೆದೋರು ೨೭೪. ಸುಂಚಲೋರು ೨೭೫. ಸುತ್ತದೋರು
೨೭೬. ಸುರಿಗೇರು* ೨೭೭. ಸುಲವೆಲ್ಲೋರು ೨೭೮. ಸೂಜಿಗಲ್ಲೋರು
೨೭೯. ಸೋಗೆಲ್ಲೋರು ೨೮೦. ಸೋವಿನೋರು ೨೮೧. ಹಗಡಲೋರು
೨೮೨. ಹಂಜಿಲ್ಲೋರು ೨೮೩. ಹಟ್ಟೆಲ್ಲೇರು ಹಟ್ಟೇರು* ೨೮೪. ಹನಲ್ಲೋರು
೨೮೫. ಹನಿನೋರು ೨೮೯. ಹರಿಕಲ್ಲೋರು ೨೯೦. ಹರಿಳೇರು
೨೯೧. ಹಲ್ಲೆಲ್ಲೋರು ೨೯೨. ಹೊಂಡದೋರು ಹೊಂಡಲೋರು ೨೯೩. ಹವಳದೋರು
೨೯೪. ಹವ್ವಿನೋರು ೨೯೫. ಹಸಿಮಲ್ಲೋರು ೨೯೬. ಹಸಿವೆಲ್ಲೋರು
೨೯೭. ಹಳದೋರು ೨೯೮. ಹಳ್ಳೆಲ್ಲೋರು ೨೯೯. ಹಾದೆಲ್ಲೋರು
೩೦೦. ಹಾಲುಕೊಡದೋರು* ೩೦೧. ಹಾವಿನೋರು* ೩೦೨. ಹಾಸ್ತೇರು
೩೦೩. ಹುಕ್ಕಲ್ಲೋರು ೩೦೪. ಹುಂಡೆಲ್ಲೋರು ೩೦೫. ಹುಲಿಕಂತೇರು
೩೦೬. ಹುಲಿಯೋರು ೩೦೭. ಹುಳ್ಳಲ್ಲೇರು ೩೦೮. ಹುಳ್ಳೇರು
೩೦೯. ಹೆಗ್ಗಳದೋರು ೩೧೦. ಹೆಚ್ಚಳದೋರು ೩೧೧. ಹೆಬ್ಬಂಡೇರು
೩೧೨. ಹೈಮನ್ನೇರು ೩೧೩. ಹತ್ತೊಂಟ್ಲೋರು ೩೧೪. ಹೊನ್ನ ಅರಿವಾಣದೋರು
೩೧೫. ಹೊನ್ನಗ್ಗಳದೋರು ೩೧೬. ಹೊನ್ನಕಣ್ಣನೋರು ೩೧೭. ಹೊನ್ನಕೊಂತದೋರು
೩೧೮. ಹೊನ್ನ ಕೊಳಗದೋರು ೩೧೯. ಹೊನ್ನಜಾನಕೇರು ೩೨೦. ಹೊನ್ಗುಂಡೋರು
೩೨೧. ಹೊನ್ನ ಬಟ್ಲೋರು ೩೨೨. ಹೊನ್ನ ತೆನೆಯೋರು ೩೨೩. ಹೊನ್ನಲಗದೋರು
೩೨೪. ಹೊನ್ನಬಂಡೇರು ೩೨೫. ಹೊನ್ನ ಬಾಗಳೇರು ೩೨೬. ಹೊನ್ನಮುಂಡೇರು
೩೨೭. ಹೊನ್ನಮಣಿಯೋರು ೩೨೮. ಹೊನ್ನಮುತ್ತಿನೋರು ೩೨೯. ಹೊನ್ನಲ್ಲೇರು
೩೩೦. ಹೊನ್ನಸಾಲಿನೋರು ೩೩೧. ಹೊನ್ನ ಹಬ್ಬಿಗೆಲ್ಲೋರು* ೩೩೨. ಹೊನ್ನ ಶಿಲೆಕೆಂಚನೋರು
೩೩೩. ಹೊನ್ನು ಉಂಡೆಲ್ಲೋರು ೩೩೪. ಹೊನ್ನು ಬಲ್ಲೋರು* ೩೩೫. ಹೊನ್ನುಂಬಳದೋರು
೩೩೬. ಹೊನ್ನೆಕೇರೇರು ೩೩೭. ಹೊಯ್ಲೋರು ೩೩೮. ಹೊನ್ನೆಮಣಿಯೋರು
೩೩೯. ಹೊಳೆಲ್ಲೋರು ೩೪೦. ಹೋದೆಲ್ಲೋರು.    

ಇವುಗಳಲ್ಲಿ ನಕ್ಷತ್ರ (*) ಗುರುತಿನ ಬೆಡಗುಗಳು ಕುರುಬರಲ್ಲಿಯೂ ಇವೆ. ಅವುಗಳಲ್ಲಿ ‘ಕಗ್ಗಲ್ಲೋರು’ ಬೆಡಗು ವಿಶೇಷವಾದುದು. ಅದರ ಬಗ್ಗೆ ಮುಂದೆ ಪ್ರಸ್ತಾಪಿಸಲಾಗುವುದು. ಇತರ ಬೆಡಗುಗಳು ಮತ್ತು ಅವುಗಳ ಒಳಸಂಬಂಧದ ಬಗ್ಗೆ ಅಧ್ಯಯನ ನಡೆಯಬೇಕು. ಜಾತಿಗಳು ಉದ್ಯೋಗ ಮೂಲವನ್ನು ಸೂಚಿಸಿದರೆ, ಬೆಡಗುಗಳು ರಕ್ತಸಂಬಂಧವನ್ನು ಸೂಚಿಸುತ್ತವೆ. ಉದಾಹರಣೆಗೆ ಒಂದು ಬೆಡಗು ಕುರುಬರು, ಪಂಚಮಶಾಲಿಗಳು, ಸಾದರು, ಮಾದಿಗರು, ಡಕ್ಕಲರು ಮುಂತಾದ ಜಾತಿಗಳಲ್ಲಿದ್ದರೆ ಆ ಎಲ್ಲ ಜಾತಿಗಳಲ್ಲಿನ ಆ ಒಂದು ಬೆಡಗಿನವರು ಪರಸ್ಪರ ರಕ್ತ ಸಂಬಂಧಿಗಳೆಂದೇ ಅರ್ಥ. (ಈ ಕಾರಣಕ್ಕಾಗಿಯೇ ಒಂದೇ ಬೆಡಗಿನವರಲ್ಲಿ ಮದುವೆಗಳು ಏರ್ಪಡುವುದಿಲ್ಲ) ಆದ್ದರಿಂದ ಎಲ್ಲಾ ಜಾತಿಗಳ ಒಳಸಂಬಂಧವನ್ನು ತಿಳಿಯಬೇಕಾದರೆ, ಪ್ರತಿಯೊಂದು ಜಾತಿಯ ಬೆಡಗುಗಳನ್ನು ಹುಡುಕಿ ತೆಗೆಯಬೇಕು. ಸಮಾಜ ಶಾಸ್ತ್ರಜ್ಞರು, ಜಾನಪದ ವಿದ್ವಾಂಸರು, ವಂಶವಾಹಿ ತಜ್ಞರು ಈ ಬಗ್ಗೆ ಸೂಕ್ತ ಮತ್ತು ವಿಸ್ತೃತ ಅಂತರ್‌ ಶಿಸ್ತೀಯ ಅಧ್ಯಯನ ನಡೆಸಬೇಕು.

ಕುರುಬರಲ್ಲಿ ಬಹುಸಂಖ್ಯಾತರು ವೀರಶೈವರಾದರೂ ಕೆಲವರು ವೈಷ್ಣವ ಪಂಥೀಯರು ಆಗಿದ್ದಾರೆ. ಅವರು ದಾಸಕುರುಬರು. ಕನಕದಾಸರು ವೈಷ್ಣವ ಪಂಥೀಯರಾದ ಹರಿದಾಸರು. ಗೌರಿಬಿದನೂರು ಮತ್ತು ಸುತ್ತಲಿನ ಪ್ರದೇಶದ ಸಾದರು ಸಹ ವೈಷ್ಣವ ಪಂಥೀಯರಾಗಿದ್ದಾರೆ.

ಸಾದರಲ್ಲಿ ಬಹುಸಂಖ್ಯಾತರು ಲಿಂಗಧಾರಿಗಳಾಗಿ ಕುರುಬರಿಂದ ಪ್ರತ್ಯೇಕಗೊಂಡ ಹಿನ್ನೆಲೆಯಲ್ಲಿ ಸಾದಲಿಂಗಾಯಿತರ ಬಗೆಗಿನ ಚರ್ಚೆ ಈ ಪ್ರಬಂಧದ ಅನಿವಾರ್ಯ ವಿಷಯವಾಗುತ್ತದೆ. ಅದಕ್ಕೆ ಪೂರ್ವಭಾವಿಯಾಗಿ ಶಿವ-ಶಿವಾಲಯ, ಮಠ-ಪೀಠಗಳ ಬಗ್ಗೆ ಒಂದಿಷ್ಟು ತಿಳಿಯಬೇಕು.

ಶಿವನ ಚರಿತ್ರೆ, ಶಿವಾಲಯಗಳ ಚರಿತ್ರೆ ತಿಳಿಯಬೇಕಾದರೆ ‘ಶಿವಾರ’ಗಳಿಗೆ ಮರಳಬೇಕು. ‘ಅರ’ ಎಂದರೆ ಕಿಟೆಲ್‌ ಅವರು ‘Dwelling place’ (ವಾಸಸ್ಥಾನ) ಎಂದು ಅರ್ಥ ಕೊಟ್ಟಿದ್ದಾರೆ. ‘ಶಿವ’, ‘ಆರ’ ಸೇರಿ ‘ಶಿವಾರ’. ಅದು ಆಡುನುಡಿಯಲ್ಲಿ ‘ಶಿಬಾರ’ ಆಗಿದೆ. ಅಂದರೆ ಶಿಬಾರಗಳು ಶಿವಸ್ಥಾನಗಳು. ಅವು ಬ್ರಹ್ಮನಿಂದ ಶಿವನವರೆಗಿನ ಕತೆ ಹೇಳುತ್ತವೆ. ಕುರುಬರ ಮೂಲ ದೈವ ನಿರಾಕಾರ ‘ಪರಮ’. ಅವನೆ ಬ್ರಹ್ಮ (ಪರಮ > ಬರಮ > ಭರಮ > ಬ್ರಹ್ಮ). ಮೊದಲ ಆಕಾರದಲ್ಲಿ ಅವನೊಂದು ಗುಂಡುಕಲ್ಲು. ಆದ್ದರಿಂದ ಅವನು ‘ಗುಂಡಬ್ರಹ್ಮ’. ಸೃಷ್ಟಿ ಕ್ರಿಯೆಗೆ ಅವನಿಗೊಬ್ಬಳು ಹೆಂಡತಿ ಬೇಕು. ಆದ್ದರಿಂದ ಪಕ್ಕದಲ್ಲಿ ಇನ್ನೊಂದು ಗುಂಡು. ಶಿವಾರಗಳಲ್ಲಿ ಸಾಮಾನ್ಯವಾಗಿ ಜೋಡುಗುಂಡು ಇದ್ದೇ ಇರುತ್ತವೆ. ಆರಾಧನೆಯಲ್ಲಿ ಸಂತೋಷ ಕಂಡ ಕುರುಬರು ಅದನ್ನು ತಮ್ಮ “ಲಿಂಗಾನಂದ’ಕ್ಕೆ ಸಮವೆಂದು ಪರಿಭಾವಿಸಿದರು. ಆದ್ದರಿಂದ ಗುಂಡುಕಲ್ಲು ಲಿಂಗವಾಯಿತು. ಲಿಂಗಕ್ಕೆ ಯೋನಿಯ ಸಂಗ ಅನಿವಾರ್ಯ, ಆದ್ದರಿಂದ ಪಾಣಿಪೀಠಸಹಿತ ಲಿಂತ ಮೂಡಿ ಬಂತು. ಇಂಥ ಲಿಂಗು ಕೂಡ ಶಿಬಾರಗಳಲ್ಲಿ ಉಂಟು. ಇವುಗಳ ಆರಾಧನೆಯ ಸಂತೋಷದಲ್ಲಿ ‘ಶಿವಾ’ ಅಂದರು. ಅದು ‘ಶಿವಲಿಂಗ’ವಾಯಿತು.

ಶಿವ ಬೀರ (ವೀರ). ತನ್ನ ವೀರತನ (ವೀರಭಧ್ರ) ಬಳಸಿ (ದಕ್ಷ) ಬ್ರಹ್ಮನ ಯಜ್ಞ ಧ್ವಂಸಗೊಳಿಸಿದ. ಅವನ ವೀರತೆಯ ಸಂಕೇತವಾಗಿ ಶಿಬಾರಗಳ ಶಿಲ್ಪದಲ್ಲಿ ತ್ರಿಶೂಲ ಕಾಣುತ್ತೇವೆ. ಹಳೆಯ ಬೀರದೇವರ ಗುಡಿಗಳ ಆವರಣದಲ್ಲಿ ಇಲ್ಲವೆ ಮೂಲೆಯಲ್ಲಿ ಅನಾಥವಾದ ಭರಮ (ಬ್ರಹ್ಮ)ನ ಗೂಡುಗಳನ್ನು ಈಗಲು ಕಾಣಬಹುದು. ಬೀರಪ್ಪನ ಪರಿಷ್ಕೃತ ರೂಪ ವೀರಭದ್ರ.

ಹೀಗೆ ‘ನಿರಾಕಾರ’ ಪರಮ ‘ಆಕಾರ’ ಶಿವನಾದ. ಶಿಬಾರದ ‘ಬಯಲ’ ಶಿವ ಶಿವಾಲಯದಲ್ಲಿ ಬಂಧಿಯಾಗಿ ‘ನಿರ್ಬಯಲ’ ಶಿವನಾದ. ಈ ಹಿನ್ನೆಲೆಯಲ್ಲಿ ಭೌತ ಪಾರಮಾತ್ಮಿಕ ಕೊಂಡಿಗಳ ನಡುವೆ ಆಕಾರ-ನಿರಾಕಾರ, ಬಯಲ-ನಿರ್ಬಯಲ ಇತ್ಯಾದಿ ತತ್ವ ಚಿಂತನೆ ಹುಟ್ಟಿಕೊಂಡಿತು. ಶಿಬಾರಗಳು ಕುರುಬರ ಧಾರ್ಮಿಕ ಕ್ಷೇತ್ರಗಳೆಂಬುದು ಎಲ್ಲರಿಗೂ ತಿಳಿದ ವಿಷಯ. ಹಾಗಾದರೆ ಮೊದಲು ‘ಶಿವ’ ಅಂದವರು ಯಾರು? ಮೂಲದಲ್ಲಿ ಶೈವರು ಯಾರು? ಬೀರ (ವೀರ) ಯಾರು? ವೀರಶೈವ ಯಾರಿಗೆ ಸಂಬಂಧಿಸಿದ್ದು? ಇಂತಹ ಮೂಲ ಅಂಶಗಳನ್ನು ಪರಿಗಣಿಸದೆ ಹೋದರೆ, ನಮ್ಮ ಸಂಶೋಧನೆ ಹೋಗಿ ದಿಕ್ಕುತಪ್ಪಿ ಎಲ್ಲಿಯೋ ನಿಂತುಬಿಡುತ್ತದೆ. ಕುರುಬ ಮೂಲದ ಸಾದರು ಶಿವ ಸಂಕೇತವನ್ನು ಸಾರ್ಥಕವಾಗಿಯೇ ಬಳಸಿಕೊಳ್ಳುತ್ತಿದ್ದಾರೆ. ಆದರೆ ಅವರು ಶಿಬಾರಗಳ ಕಡೆಗೆ ಒಂದಿಷ್ಟು ಮುಖ ಮಾಡಬೇಕು. ಅದು ಪೂರ್ವಾಪರ ತಿಳಿಯಲು ಸಹಕಾರಿ ಆಗುತ್ತದೆ.

ಕುರುಬರು ಮೊದಮೊದಲು ಎತ್ತರದ ಮಲೈ (ಬೆಟ್ಟ, ದಿನ್ನೆ) ಪ್ರದೇಶದಲ್ಲಿ ಶಿಬಾರಗಳನ್ನು ಸ್ಥಾಪಿಸುತ್ತಿದ್ದರು. ಅಲ್ಲಿನ ಶಿಬಾರದ ಲಿಂಗ ‘ಮೈಲಾರಲಿಂಗ’.

ವೀರಶೈವ ಪೀಠಗಳಿಗೆ ಮೂಲ ಕಾರಣಕರ್ತ ರೇವಣಸಿದ್ದ. ಇವನು ಹಾಲುಮತದ ಮುದ್ದುಗೊಂಡ ಮತ್ತು ಮುದ್ದವ್ವೆ ಎಂಬ ದಂಪತಿಗಳ ಏಳನೆಯ ಮಗ ‘ಉಂಡಾಡು ಪದ್ಮಗೊಂಡ’ / ಪದ್ಮಗೊಂಡನ ಮೊದಲನೆ ಹೆಂಡತಿ ಜಿಂಕಾದೇವಿಯಲ್ಲಿ ಹುಟ್ಟಿದ ನಾಲ್ಕನೆಯ ಮಗ ಶಾಂತಿಮಯ ಮುತ್ತಯ್ಯನ ಮಗ. ತಾಯಿ ಮಹಾದೇವಿ. ಕ್ರಿ.ಶ. ೧೧೮೭ ರ ಶಿರವಾಳ ಶಾಸನದಲ್ಲಿ ಇವನನ್ನು ಶಾಂತಿಮಯ್ಯಂಗಳ ಪುತ್ರ ಎಂದು ತಿಳಿಸಲಾಗಿದೆ. ಕಕ್ಕೇರಿ ಶಾಸನ (ಕ್ರಿ.ಶ. ೧೧೨೭)ದಲ್ಲಿ ರೇವಣಸಿದ್ದನ ಶಿಷ್ಯ ಬ್ರಹ್ಮರಾಶಿ ಪಂಡಿತನಿಗೆ ದನ ನೀಡಿದ ವಿವರವಿದೆ. ಅಂದರೆ ಈ ಶಾಸನದ ಕಾಲಕ್ಕೆ ಶಿಷ್ಯನನ್ನು ಪಡೆಯುವ ಹಂತ ತಲುಪಿದ್ದನು.[2] ಕ್ರಿ.ಶ. ೧೧೭೮ರ ಶಿರವಾಳ ಶಾಸನದಲ್ಲಿ ಶಾಂತೀಶ್ವರ (ಸಿದ್ದ ಸಾತೇಶ್ವರ) ದೇಗುಲಕ್ಕೆ ರೇವಣಸಿದ್ದನ ಪಾದ ತೊಳೆದು ದಾನ ನೀಡಿರುವುದನ್ನು ಹೇಳಲಾಗಿದೆ. ಕ್ರಿ.ಶ. ೧೨೦೮ರ ಹೋತಗಲ್ಲಿನ ಶಾಸನ ರೇವಣೇಶ್ವರ ದೇವರಿಗಾಗಿ ಆಚಾರ್ಯ ನಾಗರಾಸಿ ಪಂಡಿತನ ಕಾಲನ್ನು ತೊಳೆದು ದಾನ ನೀಡಿರುವುದನ್ನು ಹೇಳುತ್ತದೆ.[3] ಅಂದರೆ ಆ ಹೊತ್ತಿಗಾಗಲೇ ರೇವಣಸಿದ್ಧ ತೀರಿಕೊಂಡು ದೇವರಾಗಿದ್ದ. ರೇವಣಸಿದ್ದ ೧೦೭ ವರ್ಷ ಬದುಕಿದ್ದನೆಂದು ಕುರುಬ ಜನಾಂಗದಲ್ಲಿ ಪ್ರತೀತಿ ಇದೆ. ಇದರಿಂದ ರೇವಣಸಿದ್ದ ೧೧ನೇ ಶತಕದ ಕೊನೆಯ ಭಾಗದಿಂದ ೧೨ನೇ ಶತಮಾನದ ಕೊನೆಯವರೆಗೆ ಜೀವಿಸಿದ್ದ ಎಂಬುದು  ವೇದ್ಯವಾಗುತ್ತದೆ.

ರೇವಣಸಿದ್ದನ ಕಾರ್ಯಕ್ಷೇತ್ರ, ವಿಸ್ತೃತವಾದುದು. ಗುಜರಾತದ ಗಿರಿನಾರ, ಮಧ್ಯಪ್ರದೇಶದ ಉಜ್ಜಯಿನಿ, ಜಬಲ್ಪೂರ, ಅಂದಿನ ಕುಂತಲ (ಕರ್ನಾಟಕ) ಓರಿಸಾ, ಮಹಾರಾಷ್ಟ್ರದ ಬಹುಭಾಗಗಳಲ್ಲಿ ಅವನು ಕ್ರಿಯಾಶೀಲನಾಗಿದ್ದ. ಇಂಥ ವ್ಯಾಪಕ ಸಂಚಾರಕ್ಕೆ ಒಂದು ಕಾರಣ ಇರಬೇಕು.

ನನಗೆ ಹೊಳೆದಂತೆ ಅದು ‘ಆರ್ಯವರ್ತ’ ವಿಸ್ತಾರಗೊಳ್ಳುತ್ತಿದ್ದ ಕಾಲ. ದಾಳಿಕೋರರ ಹಾವಳಿ ಆ ಪ್ರದೇಶದಲ್ಲಿ ಹೆಚ್ಚಾಗಿತ್ತು. ಕುರುಬರು ನಿಂತ ನೆಲೆಯಲ್ಲಿ ಸುರಕ್ಷಿತ, ನೆಮ್ಮದಿಯ ಜೀವನ ನಡೆಸುವುದು ಕಷ್ಟವೆನಿಸಿತು. ದಕ್ಷಿಣದ ಕಡೆಗೆ ವಲಸೆ ಅನಿವಾರ್ಯವಾಯಿತು. ವಲಸೆ ಹೊರಟಾಗಲೂ ಕೆಲವು ಸ್ಥಳೀಯ ಅಡ್ಡಿ-ಆತಂಕಗಳನ್ನು ಎದುರಿಸಬೇಕಾಯಿತು. ವಲಸಿಗರ ನೆಲೆಗಳಿಗೆ ಹೋಗಿ ಅವರಿಗೆ ಮಾನಸಿಕ ಸ್ಥೈರ್ಯ ತುಂಬುವ, ಸಾಧ್ಯವಾದ ಪರಿಹಾರ ಕಂಡುಕೊಳ್ಳುವ ಕಾರ್ಯವನ್ನು ನಾಥ ಸಂಪ್ರದಾಯ ಮೂಲದ ಸಿದ್ದರು ಕೈಗೊಂಡಿರಬೇಕು. ಇಂಥ ಒಂದು ಕಾರ್ಯದ ಸುಳಿವು ಸಿದ್ದಮಂಕ ಚರಿತೆ ಕಾವ್ಯದ ವಸ್ತುವಿನಲ್ಲಿ ಸಿಗುತ್ತದೆ.[4] ಅದರಲ್ಲಿ ಶಿವನು ಹೆಗ್ಗಗೌಡನೆಂಬವನಿಗೆ ತುಪ್ಪಳ ಕತ್ತರಿಸುವ, ನೂಲುವ ನೇಯುವ ವಿಧಾನ ತಿಳಿಸಿಕೊಡುವ ಪ್ರಸ್ತಾಪ ಬರುತ್ತದೆ. ಸಿದ್ಧರಾಮ ಕೆರೆಕಟ್ಟಿಸುವ ಕಾರ್ಯವನ್ನೂ ಗಮನದಲ್ಲಿಟ್ಟು ನೋಡಿದಾಗ ವಲಸಿಗರಿಗಾಗಿ, ಉದ್ಯೋಗ ಸೃಷ್ಟಿಯ ತಂತ್ರ ಕಂಡುಬರುತ್ತದೆ. ಈ ಹಿನ್ನೆಲೆಯಲ್ಲಿಯೆ ಶರಣರ ಕಾಯಕವೇ ಕೈಲಾಸ ತತ್ವದ ಅಂತರಂಗ ವ್ಯಕ್ತವಾಗುತ್ತದೆ. ಮತ್ತು ಅದಕ್ಕೆ ಹೊಸ ಆಯಾಮ ಸಿಗುತ್ತದೆ. ಯಾವ ಕಾಯಕ ಅನ್ನುವುದಕ್ಕಿಂತ ಕಾಯಕ ನಿಷ್ಠೆ ಮುಖ್ಯ. ಈ ಹಿನ್ನೆಲೆಯಲ್ಲಿಯೇ ಚರ್ಮದ ಕಾಯಕದ ಕುರುಬರು, ಸಾದರು ಮಾದಿಗರೆನಿಸಿರಬೇಕು. ಯಾಕೆಂದರೆ ಈ ಮೂರು ಜಾತಿಗಳಲ್ಲಿ ಕೆಲವು ಸಮಾನ ಬೆಡಗುಗಳಿವೆ. ಈ ಹಿನ್ನೆಲೆಯಲ್ಲಿ, ಪ್ರೊ. ಎಸ್‌. ಎಸ್‌. ಹಿರೇಮಠ ಅವರು ಕುರುಬ ರೇವಣಸಿದ್ದನ ಶಿಷ್ಯ ಮಾದಿಗ ಮರುಳಸಿದ್ದ ಎಂದು ಹೇಳಿದ್ದು ಅರ್ಥಪೂರ್ಣವೆನಿಸುತ್ತದೆ.[5] ಜ್ಞಾನಿಗಳಾದ ಸಿದ್ಧರು ಚಾತುವರ್ಣದ ಕಟ್ಟುಗಳನ್ನು ಪಾಲಿಸುತ್ತಿರಲಿಲ್ಲ.[6] ಶರಣ ಚಳವಳಿ ಸಿದ್ದ ಸಂಪ್ರದಾಯದ ಚಟುವಟಿಕೆಗಳ ಮುಂದುವರಿದ ಭಾಗ. ಅವರ ಮಾತು ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಉಜ್ಜನಿಯ ಮರುಳಸಿದ್ಧನಿಗೆ ಅನ್ವಯಿಸುತ್ತದೆ. ಈ ಮರುಳಸಿದ್ಧನಿಗೆ ಮುಂಚೆ ಮಧ್ಯಪ್ರದೇಶದ ಉಜ್ಜಯಿನಿ ಪೀಠದ ಮರುಳಸಿದ್ಧ ಬೇರೆ ಇರಬೇಕು. ಅವನು ರೇವಣಸಿದ್ಧನ ಶಿಷ್ಯ-ಮಗ. ಈ ರೇವಣಸಿದ್ಧರು ಸಹ ಬೇರೆಯವರಿರಬಹುದೆ? ಸಂಶೋಧಿಸಬೇಕು. ರೇವಣಸಿದ್ಧ ಗುರುಮಠಗಳಿಗೆ ಚಾಲನೆ ನೀಡುತ್ತಾನೆ. ಪ್ರತಿ ಊರು ಇಲ್ಲವೆ ಊರುಗಳ ಸಮುಚ್ಚಯಕ್ಕೆ ಒಬ್ಬ ಗುರುವನ್ನು ನೇಮಕ ಮಾಡುತ್ತಾನೆ. ಅವು ರೇವಣಸಿದ್ಧರ ಮಠಗಳಾಗಿ ಶತಮಾನಗಳಿಂದ ಮುಂದುವರಿದುಕೊಂಡು ಬಂದಂಥವು. ಇವುಗಳಿಗೆ ಕುರುಬ ಗುರುಗಳು ‘ಒಡೆಯರು’ ಆಗಿರುತ್ತಾರೆ. ರೇವಣರಿಂದ ಗುರುಪೀಠವೊಂದು ಪ್ರಾರಂಭವಾಗುತ್ತದೆ. ನಮ್ಮ ಈ ಪ್ರಬಂಧದ ಉದ್ದೇಶಕ್ಕೆ ಸೀಮಿತವಾಗಿ ಮರುಳಾರಾಧ್ಯರು ಮುಖ್ಯ. ಯಾಕೆಂದರೆ ಲಿಂಗಾಯಿತರಾದ ಸಾದ ಕುರುಬರ ಸಂಬಂಧ ಮರುಳಸಿದ್ಧರೊಂದಿಗೆ ಹೆಣೆದುಕೊಂಡಿದೆ. ಅವರನ್ನು ಆರಾಧ್ಯ ಎಂದು ಪಂಚಾಚಾರ್ಯರ ಪರಿಭಾಷೆಯಲ್ಲಿ ಕರೆಯುತ್ತಿದ್ದರೂ, ಅವರು ಸಿದ್ಧ ಸಂಪ್ರದಾಯದ ‘ಮರುಳಸಿದ್ಧ’ರು.[7]

‘ಮರುಳ ಸಿದ್ಧ’ ಎಂಬುದಕ್ಕೆ ಒಂದು ಪರಂಪರೆ ಇದೆ. ‘ಮರುಳ’ ಶಬ್ದಕ್ಕು ಕುರುಬರಿಗೂ ಅನೂಚಾನ ಸಂಬಂಧವಿದೆ. ಈಗಲೂ ‘ಮಳ್ಳ’ (ಮರುಳ) ಕುರುಬ  ‘ಮಳ್ಳ ಗೊಗ್ಗಯ್ಯ’ ಎಂದು ಕುರುಬರಿಗೆ ಸಂಬಂಧಿಸಿಯೇ ಜನರು ಪದಪ್ರಯೋಗ ಮಾಡುತ್ತಾರೆ. ಹೌದು, ಲೌಕಿಕ ವ್ಯವಹಾರ ದೃಷ್ಟಿಯಲ್ಲಿ ಅವರು ಮರುಳರು. ಅವರದು ಲೌಕಿಕದಾಚೆಗಿನ ಭಕ್ತಿ. ಅವರು ಭಕ್ತಿಯ ಮರುಳರು. ಮೈಲಾರನ ಸೇವೆ ಮಾಡುವವರು ಗೆಜ್ಜೆಕಟ್ಟಿ ಕುಣಿಯುವುದು. ಚಬುಕದಿಂದ ತಮ್ಮನ್ನು ತಾವೆ ಹೊಡೆದುಕೊಳ್ಳುವುದು, ದೋಣಿಯಲ್ಲಿ ಉಣ್ಣುವ ರೀತಿ, ನಾಯಿಯಂತೆ ಬೊಗಳುವುದು ಇತ್ಯಾದಿ ಮರುಳ ಭಕ್ತಿಯ ಪ್ರತೀಕ. ಈ ಬಗೆಯ ಮರುಳ ಭಕ್ತಿ ವಚನಕಾರರಲ್ಲಿ ಪರ್ಯಾಯವಾಗಿ ಕಾಣಿಸಿಕೊಂಡಿದೆ. ಅಕ್ಕಮಹಾದೇವಿ ಚನ್ನಮಲ್ಲಿಕಾರ್ಜುನನ್ನು ಗಂಡನೆಂದು ಭಾವಿಸಿ ಸೂಸುವ ಭಕ್ತಿಯಲ್ಲಿ ಇಂಥ ಮರುಳತನವಿದೆ. ಬಸವಣ್ಣನವರ ವಚನಗಳಲ್ಲಿ ಕೂಡ ಇಂಥ ಮರುಳ ಆರಾಧನೆಯನ್ನು ಕಾಣಬಹುದು. ಉದಾಹರಣೆಗೆ.

ಭವಭವದಲ್ಲಿ ನಿಮ್ಮ ಜಂಗಮವೆ ಶರಣಯ್ಯ
ಅವರುಂಡು ಮಿಕ್ಕುವ ಉಡುಗಿ,
ಒಕ್ಕ ಪ್ರಸಾದವನಾಯ್ದುಕೊಂಬ ಮರುಳನಾನಯ್ಯ
ನಮ್ಮ ಕೂಡಲ ಸಂಗನ ಶರಣರ ರಿಣವ ನಾ ಹಿಂಗಲಾರೆ

ಇಂಥ ಮರುಳಭಕ್ತಿಯು ಮೇಲ್ವರ್ಗದವರ ಕುಮ್ಮಕ್ಕಿನಿಂದ ಮೂಢಭಕ್ತಿಯ ಮಾರ್ಪಾಡು ಆಗಿದ್ದು  ಕೆಲವೊಮ್ಮೆ ಕಂಡುಬರುತ್ತದೆ

ಆರ್ಯಾವರ್ತವು ವಿಸ್ತಾರವಾಗುತ್ತ ಹೋದಂತೆ ಕುರುಬರ ಸಹಜ ಬದುಕಿಗೆ ಆತಂಕಗಳು ಎದುರಾದವು. ಆಕ್ರಮಣಕಾರರ ಉಪಟಳ  ತಾಳಲಾರದೆ ಉತ್ತರ ಮತ್ತು ಮಧ್ಯಭಾರತದಿಂದ ತಂಡೋಪತಂಡವಾಗಿ ಕುರುಬ ಕುಟುಂಬಗಳು ದಕ್ಷಿಣದ ಕಡೆಗೆ ವಸಲೆ ಬಂದವು (ವಲಸೆಯ ಇತಿಹಾಸ ತಿಳಿಯದೆ ಭಾರತದ ಸಾಮಾಜಿಕ ಇತಿಹಾಸವನ್ನು ಸಮರ್ಪಕವಾಗಿ ಅರ್ಥೈಸಿಕೊಳ್ಳಲು ಸಾಧ್ಯವಿಲ್ಲ). ಯಾವುದೇ ಜನಾಂಗವು ಗುಳೆಕಟ್ಟಿಕೊಂಡು ಎದ್ದಾಗ ಮೊದಲು ನೆಲೆಯಾಗಿದ್ದ ದೇವ ದೇವತೆಗಳ ನೆನಹುಗಳನ್ನೂ ಸ್ಥಳ ಪುರಾಣಗಳನ್ನು ಕಟ್ಟಿಕೊಂಡೆ ಹೊರಡುವುದುಂಟು.[8] ಉಜ್ಜಯಿನಿ, ಮಧ್ಯಪ್ರದೇಶ ಕಡೆಯಿಂದ ಹೊರಟ ಕುರುಬರಲ್ಲಿ ಕೆಲವರು ಅಲ್ಲಲ್ಲಿ ನೆಲೆನಿಂತರು. ಹಲವರು ತಾವು ನೆಲೆನಿಂತ ಸ್ಥಳಗಳಿಗೆ ಉಜ್ಜಯಿನಿ ಹೆಸರನ್ನೇ ಇಟ್ಟುಕೊಂಡರು. ಅವು ವಲಸೆ ಬಂದ ಕುರುಬರ ಹೆಜ್ಜೆ ಗುರುತುಗಳನ್ನು ತೋರಿಸುತ್ತವೆ. ಹೆಸರಿನಲ್ಲಿ ಪ್ರಾದೇಶಿಕವಾಗಿ ಕೆಲ ವ್ಯತ್ಯಾಸಗಳೊಂದಿಗೆ ಕರ್ನಾಟಕದಲ್ಲಿ ಕಂಡುಬರುವ ಊರುಗಳು ಕೆಳಗಿನಂತಿವೆ.

ಜಿಲ್ಲೆ ತಾಲೂಕು ಊರು
ಬೀದರ್‌ ಔರಾದ್‌ ಉಜೈನ / ಉಜನಿ
ಬೆಳಗಾಂವ ಬೈಲಹೊಂಗಲ ಉಜ್ಜನಹಟ್ಟಿ / ಉಜ್ಜನಟ್ಟಿ
ರಾಮದುರ್ಗ ಉಜ್ಜಿನಕೊಪ್ಪ
ಬಳ್ಳಾರಿ ಕೂಡ್ಲಿಗಿ ಉಜ್ಜನಿ
ಹಾವೇರಿ ಹಿರೇಕೆರೂರ ಉಜನಿಪುರ
ದಾವಣಗೆರೆ ಜಗಳೂರು ಉಜ್ಜಪ್ಪ ಒಡೇರಹಳ್ಳಿ
ಹೊನ್ನಾಳಿ ಉಜ್ಜನೀಪುರ
ಶಿವಮೊಗ್ಗ ಭದ್ರಾವತಿ ಉಜ್ಜನಪುರ
ಸೊರಬ ಉಜ್ಜೈನಿಪುರ / ಉಜನೀಪುರ
ಶಿಕಾರಿಪುರ ಉಜ್ಜನೀಪುರ
ತುಮಕೂರು ಕುಣಿಗಲ್‌ ಉಜ್ಜನಿ
ಸಿರಾ ಉಜ್ಜನ ಕುಂಟೆ
ಬೆಂಗಳೂರು ಚನ್ನಪಟ್ಟಣ ಉಜ್ಜನಹಳ್ಳಿ
ದೊಡ್ಡಬಳ್ಳಾಪುರ ಉಜ್ಜಾನಿ

ಮಧ್ಯಪ್ರದೇಶದ ಉಜ್ಜಯಿನಿ, ಜಬಲ್ಪೂರ ಪ್ರದೇಶಗಳು ಕುರುಬರು ದಟ್ಟವಾಗಿ ನೆಲೆಸಿದ ಬೀಡುಗಳಾಗಿದ್ದವು. ರೇವಣರು ನಾಥ ಸಂಪ್ರದಾಯದ ಮತ್ಸೇಂದ್ರನಾಥ, ಗೋರಖನಾಥರ ಸಂಪರ್ಕ ಹೊಂದಿದ್ದು ಜಬಲ್ಪುರದ ಬಂಧುಲ-ಶಿವನಿಯಲ್ಲಿ ಹತ್ತಿರದಲ್ಲಿಯೆ ಬೇಡಾ ಘಾಟ್‌ (ಕುರಿಘಟ್ಟ) ಇದೆ. ಈ ಪ್ರದೇಶದಿಂದ ವಲಸೆ ಬಂದ ಕುರುಬರು ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ನೆಲೆ ನಿಂತರು. ಆ ಊರು ‘ಶಿವನಿ’, ವಿಜಯನಗರ ಸಾಮ್ರಾಜ್ಯ ಪತನದ ನಂತರ ತಾಳಿಕೋಟೆಯಿಂದ ವಲಸೆ ಬಂದ ಕುರುಬರು ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನಲ್ಲಿ ನೆಲೆ ನಿಂತರು. ಆ ಊರು ‘ತಾಳಿಕಟ್ಟೆ’ ಅದರಂತೆ ಉಜ್ಜಯಿನಿ ಕಡೆಯಿಂದ ಬಂದ ಅಥವಾ ಆ ಸಂಪ್ರದಾಯ ಹೊತ್ತು ತಂದ ಕುರುಬರು ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನಲ್ಲಿ ನೆಲೆಸಿದರು. ಅದು ಉಜ್ಜನಿ ಮೊದಲು ಆ ಪ್ರದೇಶವನ್ನು ‘ಕಗ್ಗಲ್ಲು’ ಎಂದು ಕರೆಯುತ್ತಿದ್ದರು. ಕಗ್ಗಲ್ಲುಗೌಡ (ಕುರುಬ) ಮೈಲಾರನ ಭಕ್ತ.[9] ಸಮೀಪದಲ್ಲಿಯೆಮೈಲಾರನ ಬಂಡೆ ಇದೆ. ಕಗ್ಗಲ್ಲು ಗೌಡ ವಲಸಿಗರು ನೆಲೆಸಲು ಸಹಕರಿಸಿದಂತೆ ತೋರುತ್ತದೆ. ಉಜ್ಜನಿಯಲ್ಲಿ ಈಗಲೂ ಕುರುಬರೆ ಹೆಚ್ಚು. ಅವರಲ್ಲಿ ಲಿಂಗಾಯತರಾದವರಲ್ಲಿಯೆ ನಂತರದ ದಿನಗಳಲ್ಲಿ ಎರಡು ಪಂಗಡಗಳಾದಂತೆ ತೋರುತ್ತದೆ. ಮರುಳಸಿದ್ದ ಕಗ್ಗಲ್ಲುಗೌಡನ ಸಾಕುಮಗನೆಂದು ಹೇಳಲಾಗುತ್ತಿದೆ. ಲೌಕಿಕದ ದೃಷ್ಟಿಯಲ್ಲಿ ಮರುಳ (ಬಹುಶಃ ಮೂಗ)ನಂತಿದ್ದ ಸಿದ್ದ ತನ್ನ ಭಕ್ತಿಯ ಪಾರಮ್ಯದಿಂದ ಎಲ್ಲರ ಗಮನ ಸೆಳೆದ. ಕಾವ್ಯಗಳ ಆಧಾರದಿಂದ ಅವನೊಬ್ಬ ಮಚ್ಚೆ ಕಾಯಕದ ಮಾದಿಗನೆಂದು ಹೇಳಲಾಗುತ್ತಿದೆಯಾದರೂ ಐತಿಹಾಸಿಕ ಆಧಾರಗಳು ಲಭ್ಯವಾಗಿಲ್ಲ. ಇವನ ಭಕ್ತಿಯನ್ನು ಮೆಚ್ಚಿದ ಒಬ್ಬ ಕುರುಬ ಒಡೆಯ ರೇವಣರು ತಮ್ಮ ಶಿಷ್ಯನೆಂದು ಸ್ವೀಕರಿಸಿ ಧಾರ್ಮಿಕ ಗುರುವನ್ನಾಗಿ ಮಾಡಿದಂತೆ ತೋರುತ್ತದೆ. ಕಗ್ಗಲ್ಲುಗೌಡನ ಹಿನ್ನೆಲೆಯಲ್ಲಿ ‘ಕಗ್ಗಲ್ಲೋರು’ ಎಂಬ ಬೆಡಗು ರೂಢಿಗೆ ಬಂದಿದೆ. ಈ ಬೆಡಗು ಕುರುಬರಲ್ಲಿಯೂ ಇದೆ; ಸಾದ ಲಿಂಗಾಯತರಲ್ಲೂ ಇದೆ. ಸಾದರ ಕುರುಬ ಮೂಲ ಇದರಿಂದಲೂ ವ್ಯಕ್ತವಾಗುತ್ತದೆ.

ಮಹಾದೇವ ಬಣಕಾರರು ಕಗ್ಗಲ್ಲು ಪ್ರದೇಶದಲ್ಲಿ ಉಜ್ಜಯಿನಿ ಊರು ಇರಲಿಲ್ಲ. ಮರುಳಸಿದ್ದರು ನೆಲೆಸಲು ನಿರ್ಧರಿಸಿದ ಸ್ಥಳವೇ ಈಗಿನ ಉಜ್ಜಯಿನಿ (ಉಜ್ಜನಿ) ಗ್ರಾಮವಾಗಿದೆಯೆಂದು ಹೇಳಿದ್ದಾರೆ.[10] ಆದರೆ ಅವರೆ ಹಾನಗಲ್‌ ತಾಲೂಕಿನ ಮೂಡೂರಿನಲ್ಲಿ ಮರುಳಸಿದ್ಧ ಮಠವಿದೆ. ಇಲ್ಲಿಯೂ ಕಗ್ಗಲ್ಲುಗೌಡರ ವಂಶದ ಮನೆತನಗಳಿವೆ. ಇಲ್ಲಿನವರ ವಾಡಿಕೆಯ ಪ್ರಕಾರ ಮರುಳಸಿದ್ದಯ್ಯನು ಹುಟ್ಟಿ, ಬೆಳೆದದ್ದು ಇಲ್ಲಿಯೆ. ಐಕ್ಯವಾದದ್ದು ಇಲ್ಲಿಯೆ ಎಂದು ಹೇಳಿದ್ದಾರೆ.[11] ಇದರಿಂದ ಮರುಳಸಿದ್ಧರ ಹುಟ್ಟು-ಬೆಳವಣಿಗೆಗಳ  ಬಗ್ಗೆ ಭಿನ್ನಾಭಿಪ್ರಾಯ ಇರುವುದು ಸ್ಪಷ್ಟ. ಅಥವಾ ಮರುಳಸಿದ್ದರು ಒಬ್ಬರಲ್ಲ, ಹಲವರು ಎಂಬುದು ವ್ಯಕ್ತವಾಗುತ್ತದೆ.

ಕಾವ್ಯ ಮತ್ತು ಶಾಸನಗಳಲ್ಲಿ ಮರುಳಸಿದ್ಧ ಮಂಕುಸಿದ್ದ, ಮರುಳ, ಮಂಕಯ್ಯ ಎಂದು ಉಕ್ತವಾದ ಸಿದ್ದನೊಬ್ಬ ವಿಜಾಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಸರೂರಿನ ಪರಿಸರದಲ್ಲಿ ಆಗಿಹೋಗಿದ್ದಾನೆ. ಅಲ್ಲಿ ರೇವಣಸಿದ್ದರ ಮಗ ಶಾಂತಮುತ್ತಯ್ಯನ ಮಠ ಇದೆ. ಮಲ್ಲಿಕಾರ್ಜುನ (ಈಗ ರೇವಣಸಿದ್ದ) ದೇವಸ್ಥಾನವಿದೆ. ಮರುಳಸಿದ್ದ ಇಲ್ಲಿಯ ಬಂಡೆಯ ಮೇಲೆ ಘೋರ ತಪಸ್ಸು ಮಾಡಿದನೆಂದೂ, ಕಲ್ಯಾಣ ಪ್ರದೇಶದ ನಿರಾಕರಣೆಗೆ ಒಳಗಾದ ಕುರುಬರಿಗೆ ತನ್ನ ತಪೋಬಲದ ಪವಾಡದಿಂದ ಪ್ರವೇಶವಕಾಶ ಕಲ್ಪಿಸಿಕೊಟ್ಟನೆಂದು ‘ತಗರ ಪವಾಡ’[12] ಮತ್ತು ‘ಸಿದ್ದಮಂಕ ಚರಿತೆ’ಗಳಲ್ಲಿ ಕಂಡುಬರುತ್ತದೆ. ಹಾಲುಮತ ಪುರಾಣ ಹೀಗೆ ಹೇಳುತ್ತದೆ.

ಮರುಳಸಿದ್ದನವನ ವರಚರಿತವ ಕೇಳೆ
ಹರನೊಲಿವನು ಕರುಣದಿ
ಕುರುಬರ ಕಥೆಯೆಂದು ಜರಿಯಲು ಬೇಡ
ಮರುಳಸಿದ್ದಯ್ಯ ತಾ ಕುರುಬ (ಸಂಧಿ ೫ ೧೦೭)

ಇದರಿಂದ ಕುರುಬ ಮಂಕುಸಿದ್ದ. ರೇವಣಸಿದ್ದಪ್ಪ, ಸಿದ್ದರಾಮರೊಂದಿಗೆ ಇವನು ಕಲ್ಯಾಣಕ್ಕೆ ಹೋದ ಬಗ್ಗೆ, ಬಸವಣ್ಣನವರನ್ನು ಕಂಡ ಬಗ್ಗೆ ಪ್ರಸ್ತಾಪಗಳಿವೆ. ಆದರೆ ಉಜ್ಜಯಿನಿ ಮರುಳಸಿದ್ದ ಬಸವಣ್ಣನವರನ್ನು ಕಂಡ ಬಗ್ಗೆ ಆಧಾರಗಳಿಲ್ಲ. ಆದ್ದರಿಂದ ಇವನು ಬೇರೋಬ್ಬ ಮರುಳಸಿದ್ದನಿರಬೇಕು. ಕಾಲೈಕ್ಯ, ಸ್ಥಳೈಕ್ಯದ ಕೊರತೆಯ ಕಾರಣ ಇವನು ಯಾವ ಕಾಲ, ದೇಶದವನೆಂದು ನಿರ್ಣಯಿಸುವುದು ಕಷ್ಟ ಸಾಧ್ಯ.

ಉಜ್ಜಯಿನಿಯಲ್ಲಿ ಸದ್ಧರ್ಮ ಪೀಠ ಸ್ಥಾಪಿಸಿ ತೆಲುಗು ಬಾಳು ಸಿದ್ದನಿಗೆ ಮರುಳಸಿದ್ದರು ಪಟ್ಟಗಟ್ಟಿ ‘ತರಳಾ ಬಾಳು’ ಎಂದು ಆಶೀರ್ವದಿಸಿದವರು ಎಂಬ ಮಾತು ಪ್ರಚಲಿತದಲ್ಲಿದೆ. ಇವು ಕಾವ್ಯ ಕಲ್ಪನೆಯಲ್ಲಿ ಮೂಡಿಬಂದ ಮಾತುಗಳೆನಿಸುತ್ತದೆ. ‘ತರಳು’ ಎಂದರೆ ಕಿಟೆಲ್‌ ಅವರು ಅರ್ಥ ಕೊಟ್ಟಂತೆ a ripe fruit that has become dry, especially a cocoanut ಮೂಲದಲ್ಲಿ ‘ತರಳು ಬೋಳು ಸಿದ್ದ’ ಇದ್ದಂತೆ ತೋರುತ್ತದೆ. ಇದು ಆಶೀರ್ವಾದದ ಹಿನ್ನೆಲೆಯಲ್ಲಿ ಬಂದುದಲ್ಲ. ಅನ್ವರ್ಥನಾಮವಾಗಿ ಬಂದುದು. ಅಂದರೆ ಒಣಗಿದ ತೆಂಗಿನಕಾಯಿಯಂತೆ ಬೋಳನಾದ ಸಿದ್ದ ಎಂದು ಅರ್ಥ. ಈ ತರ್ಕಕ್ಕೆ ಒಂದು ಮುಖ್ಯ ಕಾರಣವಿದೆ. ಸಿದ್ದರಲ್ಲಿ ‘ಜಡೆಸಿದ್ದ’ ಸಂಪ್ರದಾಯದಂತೆ ‘ಬೋಡುಸಿದ್ದ’ ಸಂಪ್ರದಾಯವೂ ಇದೆ. ಬೋಳು ಎಂಬುದು ಲೌಕಿಕ ವ್ಯವಹಾರಕ್ಕೆ (ಸಂಸಾರಕ್ಕೆ)ವಿಮುಕ್ತ ಅಂದರೆ ಆಧ್ಯಾತ್ಮಿ, ತಪಸ್ವಿ ಎಂಬುದನ್ನಲ್ಲದೆ ಬೋಳೆ ಸ್ವಭಾವದವ ಎಂಬುದನ್ನು ಸೂಚಿಸುತ್ತದೆ. ತರಳಬಾಳು ಪೀಠ ವಿರಕ್ತ ಸಂಪ್ರದಾಯದ ಪೀಠವಾಗಿರುವುದರಿಂದ ಈ ತರ್ಕ ಅರ್ಥಪೂರ್ಣ ಅನಿಸುತ್ತದೆ.

ಈಗಾಗಲೇ ನಿರಾಕಾರ ಪರಮ ಸಾಕಾರ ಶಿವನಾದ ಹಂತಗಳನ್ನು ಪ್ರಸ್ತಾಪಿಸಿದ್ದೇನೆ. ಈ ಎಲ್ಲ ಹಂತಗಳ ಸ್ಮಾರಕಗಳು ಉಜ್ಜನಿಯಲ್ಲಿ ಸಿಗುತ್ತವೆ. ಅಲ್ಲಿರುವ ಜಗುಲಿಗೆ ಸೀಮಿತವಾದ ಬ್ರಹ್ಮದೇವನ ಗುಡಿ, (ಉದ್ದಾನ) ವೀರಭದ್ರ, ದಕ್ಷಬ್ರಹ್ಮನ ತಲೆ ಚಿತ್ರ, ಬೈರದೇವರ ಗುಡಿ, ಮೈಲಾರನ ಬಂಡೆ ಇವೆಲ್ಲ ನನ್ನ ಅಭಿಪ್ರಾಯಕ್ಕೆ ಸಾಕ್ಷಿಯನ್ನು ಒದಗಿಸುತ್ತವೆ. ಶಿವಲಿಂಗವಿರುವ ಮುಖ್ಯ ಗುಡಿಯನ್ನು ಜನ ‘ಸಿದ್ದಪ್ಪನ ಗುಡಿ’ ಎಂದೇ ಕರೆಯುತ್ತಾರೆ. ಕಾಲಕ್ರಮದಲ್ಲಿ ಸ್ಥಳೀಯರು-ವಲಸಿಗರ ನಡುವೆ ಲಿಂಗಾಯತರಾದವರಲ್ಲಿ ಮೊದಲಿಗರು. ನಂತರದವರ ನಡುವೆ ಭಿನ್ನಾಭಿಪ್ರಾಯ ತಲೆದೋರಿದಂತೆ ತೋರುತ್ತದೆ. ಈ ಹಿನ್ನೆಲೆಯಲ್ಲಿ ಲಿಂಗಾಯತರಾದ ಸಾದ ಕುರುಬರು ಪ್ರತ್ಯೇಕ ಮಠ ಕಟ್ಟಿಸಿಕೊಂಡಂತೆ ಕಂಡುಬರುತ್ತದೆ. ಈ ಹಿನ್ನೆಲೆಯಲ್ಲಿ ‘ತರಳ ಬಾಳು’ ಗುರು ಪರಂಪರೆ ಪ್ರಾರಂಭವಾಗುತ್ತದೆ. ಅದು ಕೆಳಗಿನಂತಿದೆ.

೧. ವಿಶ್ವಬಂಧು ಮರುಳಸಿದ್ದ ೨. ಶ್ರೀ ಸಿದ್ದೇಶ್ವರ ಸ್ವಾಮೀಜಿ (ತೆಲುಗುಬಾಳು ಸಿದ್ದ)
೩. ಶ್ರೀ ಗಡ್ಡದ ಲಿಂಗದೇವರು ೪. ಶ್ರೀ ಕೆಂಚಪ್ಪ ದೇವರು
೫. ಶ್ರೀ ಚನ್ನಬಸವ ದೇವರು ೬. ಶ್ರೀ ಗುರುಸಿದ್ದ ದೇವರು
೭. ಶ್ರೀ ಶಿವಲಿಂಗ ದೇವರು ೮. ಶ್ರೀ ಗುರುಬಸವ ದೇವರು
೯. ಶ್ರೀ ಕರಿಸಿದ್ದ ದೇವರು ೧೦. ಶ್ರೀ ಶಾಂತವೀರ ದೇವರು
೧೧. ಶ್ರೀ ಕರಿಸಿದ್ದ ದೇವರು ೧೨. ಶ್ರೀ ಜಂಬಪ್ಪ ದೇವರು

ಶ್ರೀ ಜಂಬಪ್ಪ ದೇವರ ಕಾಲದಲ್ಲಿ ಲಿಂಗಾಯತ ಒಳಪಂಗಡಗಳ ನಡುವೆ ತೀವ್ರ ಭಿನ್ನಾಭಿಪ್ರಾಯ ತಲೆದೋರಿದಂತೆ ಕಾಣುತ್ತದೆ. ಆದ್ದರಿಂದ ಅವರು ಉಜ್ಜನಿ ತೊರೆದು ಚಿತ್ರದುರ್ಗ ಜಿಲ್ಲೆಯ ಸಿರಿಗೆರೆಯನ್ನು ಸೇರಿ ಗುರು ಪರಂಪರೆಯನ್ನು ಮುಂದುವರಿಸಿಕೊಂಡು ಬಂದರು. ಸಿರಿಗೆರೆಯಲ್ಲಿ ಮುಂದುವರಿದ ಗುರುಪರಂಪರೆ ಈ ಕೆಳಗಿನಂತಿದೆ.

೧೩. ಜಂಬಪ್ಪ ದೇವರು ೧೪. ಶ್ರೀಗುರುಸಿದ್ದ ದೇವರು
೧೫. ಶ್ರೀ ಸಿದ್ದಲಿಂಗ ದೇವರು ೧೬. ಶ್ರೀ ಗುರುಸಿದ್ಧ ದೇವರು
೧೭. ಶ್ರೀ ಶಿವಲಿಂಗರಾಜ ದೇಶಿಕೇಂದ್ರ ಸ್ವಾಮಿಜಿ ೧೮. ಶ್ರೀಗುರುಸಿದ್ದ ದೇಶೀಕೇಂದ್ರ ಸ್ವಾಮೀಜಿ
೧೯. ಶ್ರೀ ಶಿವಲಿಂಗ ದೇಶೀಕೇಂದ್ರ ಸ್ವಾಮೀಜಿ ೨೦. ಶ್ರೀ ಗುರುಶಾಂತರಾಜ ದೇಶೀಕೇಂದ್ರ ಸ್ವಾಮೀಜಿ
೨೧. ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ    

ಗುರುಪರಂಪರೆಯ ಪಟ್ಟಿಯಿದ್ದರೂ ಅವರ ಕಾಲಾವಧಿ ಲಭ್ಯವಿಲ್ಲ. ಮೊದಲ ಹದಿನೆಂಟು ಜನ ಗುರುಗಳು ಆಧ್ಯಾತ್ಮ, ತತ್ವ ಬೋಧನೆ, ಭಕ್ತರಿಗೆ ಮಾರ್ಗದರ್ಶನ ಮತ್ತು ಸ್ಥಳೀಯ ನ್ಯಾಯ ತೀರ್ಮಾನ ಮುಂತಾದ ವಿಷಯಗಳಿಗೆ ಸೀಮಿತವಾಗಿದ್ದರೆ, ಹತ್ತೊಂಭತ್ತನೆಯವರಾದ ಶ್ರೀ ಗುರು ‘ಶಾಂತರಾಜ ದೇಶೀಕೇಂದ್ರ ಸ್ವಾಮೀಜಿ ದಾವಣಗೆರೆಯಲ್ಲಿ ಇಪ್ಪತ್ತನೇ ಶತಮಾನದ ಇಪ್ಪತ್ತರ ದಶಕದಲ್ಲಿ ವಿದ್ಯಾರ್ಥಿ ನಿಲಯವನ್ನು ಸ್ಥಾಪಿಸಿದರು. ಇದು ಆಧುನಿಕ ಶಿಕ್ಷಣದ ಮೊದಲ ಬೀಜ. ಅವರ ನಂತರ ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಬಹಳಷ್ಟು ವಿದ್ಯಾ ಕೇಂದ್ರಗಳನ್ನು ಪ್ರಾರಂಭಿಸಿದರು. ಆರ್ಥಿಕವಾಗಿ ಸದೃಢರಾದ ಶಿಷ್ಯವರ್ಗ ಸಾಕಷ್ಟು ಸಹಾಯಧನ ನೀಡಿತು. ಶ್ರೀ ಡಿ. ದೇವರಾಜ ಅರಸು ಮುಖ್ಯಮಂತ್ರಿಗಳಾಗಿದ್ದಾಗ ಸಿರಿಗೆರೆ ಮಠ ವಿಶೇಷ ಮಹತ್ವ ಪಡೆಯಿತು. ಇದರಿಂದ ವಿದ್ಯಾಕೇಂದ್ರಗಳನ್ನು ಪ್ರಾರಂಭಿಸಿ ಬೆಳೆಸಲು ಅನುಕೂಲವಾಯಿತು. ಸದ್ಯದ ಡಾ. ಶಿವಮೂರ್ತಿ ಶಿವಾಚಾರ್ಯಸ್ವಾಮೀಜಿ ಅವಶ್ಯವಿದ್ದಲ್ಲಿ ಹೊಸ ಸಂಸ್ಥೆಗಳನ್ನು ಪ್ರಾರಂಭಿಸುತ್ತ, ಈಗಾಗಲೇ ತೆರೆದಿರುವ ವಿದ್ಯಾಸಂಸ್ಥೆಗಳ ಗುಣಮಟ್ಟ ಹೆಚ್ಚಿಸುತ್ತಾ ನಡೆದಿದ್ದರೆ. ಐವತ್ತು ವರ್ಷಗಳ ಇತಿಹಾಸದಲ್ಲಿ ಸಿರಿಗೆರೆ ಮಠ ವಿದ್ಯಾಕ್ಷೆತ್ರದಲ್ಲಿ ಮಹಾಕ್ರಾಂತಿಯನ್ನೇ ಮಾಡಿದೆ.

ಈ ಮಠಕ್ಕೆ ಸಂಬಂಧಿಸಿ ಇನ್ನೆರಡು ಮುಖ್ಯ ವಿಷಯಗಳನ್ನು ಪ್ರಸ್ತಾಪಿಸಲೇಬೇಕು. ಮೊದಲನೆಯದಾಗಿ ಅದು ಪ್ರತಿವರ್ಷ ಭಾರತ ಹುಣ್ಣಿಮೆಯೆಂದು ಆಚರಿಸಿಕೊಂಡು ಬರುತ್ತಿರುವ ‘ತರಳಬಾಳು ಹುಣ್ಣಿಮೆ’. ಮೊದಮೊದಲು ಸಿರಿಗೆರೆ ಮಠಕ್ಕೆ ಸೀಮಿತವಾಗಿದ್ದ ಈ ಆಚರಣೆಯನ್ನು ೧೯೫೦ ರಿಂದ ಪ್ರತಿವರ್ಷ ಬೇರೆ ಬೇರೆ ಊರುಗಳಲ್ಲಿ ಆಚರಿಸಿಕೊಂಡು ಬರಲಾಗಿದೆ. ಇದುವರೆಗೆ ಸುಮಾರು ನಲವತ್ತೈದು ಆಚರಣೆಗಳು ನಡೆದಿವೆ. ಭಕ್ತರಲ್ಲಿ ಜಾಗೃತಿ ಮೂಡಿಸುವುದು, ವಿವಿಧ ವಿಷಯಗಳ ಮೇಲೆ ವಿಚಾರ ಸಂಕೀರಣ, ಸಾಂಸ್ಕೃತಿಕ ಕಾರ್ಯಕ್ರಮಗಳು ಈ ಹುಣ್ಣಿಮೆಯ ವಿಶೇಷಗಳು. ಈ ಹುಣ್ಣಿಮೆಗೆ ನಾಡಿನ ಎಲ್ಲ ಭಾಗದ ಜನ, ರಾಜಕೀಯ, ಸಾಮಾಜಿಕ ಪ್ರತಿಷ್ಟಿತ ವ್ಯಕ್ತಿಗಳು ಅಷ್ಟೇ ಅಲ್ಲ, ಹೊರದೇಶದಿಂದ ಸಹ ಭಕ್ತರು ಬಂದು ಸೇರುವುದು ವಿಶೇಷ.

ಈ ಮಠದ ಇನ್ನೊಂದು ವಿಶೇಷವೆಂದರೆ, ‘ಸದ್ಧರ್ಮ ನ್ಯಾಯಪೀಠ’. ಬುಡಕಟ್ಟು ಜನಾಂಗದಲ್ಲಿ ತಮ್ಮದ ರೀತಿಯಲ್ಲಿ ವ್ಯಾಜ್ಯಗಳಿಗೆ ನ್ಯಾಯ ತೀರ್ಮಾನ ಕಂಡುಕೊಳ್ಳುವ ಪದ್ಧತಿ ಹಿಂದಿನ ಕಾಲದಲ್ಲಿ ಇತ್ತು. ಈಗಲೂ ಕೆಲ ಬುಡಕಟ್ಟುಗಳಲ್ಲಿ ಅದು ಕಂಡುಬರುತ್ತಿದೆ. ಉದಾಹರಣೆಗೆ ಚಳ್ಳಕೆರೆ ತಾಲೂಕಿನ ಎನ್‌ ದೇವರಹಳ್ಳಿ ಗ್ರಾಮದಲ್ಲಿ ಬೇವಿನ ಮರದ ಕೆಳಗಿರುವ ‘ಜೋಗಿ ಜಂಗಮರ ಕಟ್ಟೆ’ ಮೇಲೆ ವಾದ ಪ್ರತಿವಾದಗಳು ನಡೆದು ಜೋಗಿ ಜಂಗಮರ ವ್ಯಾಜ್ಯಗಳು ಇತ್ಯರ್ಥವಾಗುತ್ತವೆ. ಶ್ರೀ ಸಚ್ಚಿದಾನಂದ ಕುರುಗುಂದ ಅವರು ವರದಿ ಮಾಡಿರುವಂತೆ[13] ಶ್ರಾವಣ ಮಾಸದ ನಂತರ ಪ್ರಾರಂಭವಾದ ನ್ಯಾಯ ಪಂಚಾಯ್ತಿ ಎಂಟರಿಂದ ಹದಿನೈದು ದಿನಗಳವರೆಗೆ ನಡೆಯುತ್ತದೆ. ಈ ಸಂದರ್ಭದಲ್ಲಿ ನ್ಯಾಯ ಅರಸಿ, ರಾಜ್ಯ ಹೊರ ರಾಜ್ಯಗಳಲ್ಲಿ ವಾಸವಾಗಿರುವ ಜೋಗಿ ಜನಾಂಗದವರು ಇಲ್ಲಿಗೆ ಬರುತ್ತಾರೆ. ಜೋಗಿ ಜನಾಂಗದ ಯಜಮಾನನೆ ನ್ಯಾಯಾಧೀಶ. ಅವನಿಗೆ ಪರಮಾಧಿಕಾರ ಇರುತ್ತದೆ. ಸಹಾಯಕರಾಗಿ ಧನಗರು ಭಂಡಾರಿ, ದಳವಾಯಿ ಭಂಡಾರಿ, ಪಾವಲಿ ಭಂಡಾರಿಗಳು ಇರುತಾರೆ  ಅವರಿಗೆ ತಪ್ಪಿತರಾದವರನ್ನು ಜಾತಿಯಿಂದ ಹೊರ ಹಾಕುವ ಹಕ್ಕು ಸಹ ಇರುತ್ತದ. ಸಪ್ರದಾಯದ ‘ಅರಿಪಿರಿ’ (ಬುದವಂತ!) ಕುಟುಂಬದ ಹಿರಿಯನಿಂದ  ನ್ಯಾಯದಾನ ನಡೆಯತ್ತದೆ. ಈಗ ಕುಟುಂಬದ  ದೊಡ್ಡಯಲ್ಲಪ್ಪ ನ್ಯಾಯ ಪಂಚಾಯ್ತಿಯ ಮುಖ್ಯಸ್ಥರಾಗಿದ್ದಾರೆ.

ಈ ಬಗೆಯ ಬುಡಕಟ್ಟು ನ್ಯಾಯ ವ್ಯವಸ್ಥೆಯನ್ನು ಮುಂದುವರೆಸಿ ಆಧುನಿಕರಣಗೊಳಿಸಿ ನ್ಯಾಯ ನೀಡುವ ಪದ್ದತಿ ಸಿರಿಗೆರೆ ಮಠದಲ್ಲಿ ನಡೆದುಕೊಂಡು ಬಂದಿದೆ.  ಸದ್ಯದ ಜಗದ್ಗುರು  ಡಾ. ಶಿವಮೂರ್ತಿ ಶಿವಾಚಾರ್ಯ ಶ್ರೀಗಳು ೨೦೦೦ನೇ  ಇಶ್ವಿಯಲ್ಲಿ ಮಠದ ಪಂಚಾಯ್ತಿಗೆ ನ್ಯಾಯಪೀಠದ ಸ್ವರೂಪ ನೀಡಿದರು. ಅಲ್ಲಿಂದ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಪ್ರಕರಣಗಳು ಇತ್ಯರ್ಥವಾಗಿವೆಯೆಂದು ಹೇಳಲಾಗುತ್ತದೆ. ಕಾನೂನಿನ ಶುಷ್ಕ ಸಿಕ್ಕುಗಳಿಗೆ ಸಿಕ್ಕದಂತೆ, ವಿಳಂಬ ತಪ್ಪಿಸಿ, ಸಮಯ ಮತ್ತು ದುಡ್ಡಿನ ಉಳಿತಾಯ ಮಾಡಿಕೊಂಡು ಮಾನವೀಯ ನೆಲೆಯಲ್ಲಿ ನ್ಯಾಯವನ್ನು ದೊರಕಿಸಿಕೊಳ್ಳಲು ಸಾದ್ಯವಾಗುವಂತೆ, ಮಾಡಿದ ಈ ವ್ಯವಸ್ಥೆ ಅತ್ಯಂತ ಪ್ರಶಂಸನೀಯ.

ಸಿರಿಗೆರೆ, ಸಾಣೆಹಳ್ಳಿ ಮುಂತಾದ ಸಾದಲಿಂಗಾಯತ ಮಠಗಳು ಪ್ರಸಿದ್ಧಿ ಪಡೆದಿವೆ. (ಸಾಣಿಹಳ್ಳಿ ಮಠ ನಾಟಕೋತ್ಸವ ನಡೆಸುವಲ್ಲಿ ಹೆಸರುವಾಸಿ.) ಇವು ಸ್ವರೂಪದಲ್ಲಿ ವಿರಕ್ತ ಮಠಗಳು. ಇವುಗಳಿಗೆ ಹೊರತಾಗಿ ಅಲ್ಲಲ್ಲಿ ‘ಮನೆ-ಮಠ’ಗಳಿರುವುದನ್ನು ಕಾಣುತ್ತೇವೆ. ಇಂಥ ಮಠಗಳು ಪ್ರತ್ಯೇಕವಾಗಿರುವುದಕ್ಕಿಂತ ಮನೆಯ ಭಾಗವಾಗಿ ಇಲ್ಲವೆ ಮನೆಗೆ ಹೊಂದಿಕೊಂಡು ಇರುತ್ತವೆ. ಇಂಥ ಮಠಗಳ ಗುರು/ಸ್ವಾಮಿಗಳು ಸಂಸಾರಿಕರು. ಮಠ, ಮಠದ, ಮಠಪತಿ ಎಂದು ಮನೆತನದ ಹೆಸರುಗಳಿರುತ್ತವೆ. ಇವು ಸ್ವರೂಪದಲ್ಲಿ ಕುರುಬರ ಒಡೆಯರ ಮಠಗಳನ್ನು ಹೋಲುತ್ತವೆ. ಇಲ್ಲಿನ ಸ್ವಾಮಿಗಳು ಸ್ಥಳೀಯ ಸಾದ ಜನಾಂಗದ ಧಾರ್ಮಿಕ ಕ್ರಿಯೆಗಳನ್ನು ನಡೆಸಿಕೊಡುತ್ತಾರೆ.

—-
(ಸಂಖ್ಯಾಗೊಂದಲ / ಚುಕ್ಕಿಚಿಹ್ನೆಯ ಗೊಂದಲಇರುವುದರಿಂದಅಧ್ಯಾಯದಕೆಲವುಅಡಿಟಿಪ್ಪಣಿಗಳನ್ನುನಮೂದಿಸಿಲ್ಲ)


[1]ಮಹದೇವ ಬಣಕಾರ ವಿಶ್ವಬಂಧು ಮರುಳಶಿದ ಕಾವ್ಯ, ಪ್ರಸ್ತಾವನೆ ಪು. ೧೪, ತರಳಬಾಳು ಪ್ರಕಾಶನ, ಸಿರಿಗೆರೆ ೫೭೭೫೪೧ (೧೯೮೯).

[2]ಡಾ. ಬಿ. ಜಿ. ಬಿರಾದಾರ ‘ರೇವಣಸಿದ್ದೇಶ್ವರ’ ಪ್ರಬಂಧ, ‘ಹಾಲುಮತ ವ್ಯಾಸಂಗ-೧’ ಪು ೧೮೯, ಕನ್ನಡ ವಿಶ್ವವಿದ್ಯಾಲಯ, ಹಂಪಿ (೨೦೦೯)

[3]ಅದೇ ಪುಟ ೧೮೩.

[4]ನೋಡಿ ‘ಸಿದ್ದಮಂಕ ಚರಿತೆ’ ಸಂ. ಡಾ. ಎಂ. ಎಂ. ಕಲಬುರ್ಗಿ, ಡಾ. ವೈ. ಸಿ. ಭಾನುಮತಿ, ಲಿಂಗಾಯತ ಅಧ್ಯಯನ ಸಂಸ್ಥೆ ಶ್ರೀ ಜಗದ್ಗುರು  ತೋಂಟದಾರ್ಯ ಸಂಸ್ಥಾನಮಠ, ಗದಗ (೨೦೦೪).

[5]ಪ್ರೊ. ಎಸ್‌. ಎಸ್‌. ಹಿರೇಮಠ, ‘ಜನಪದ ಸಮಾಜ ಸಂಸ್ಕೃತಿ’ ಪು. ೪೫, ಸೂರ್ಯಪ್ರಕಾಶನ ಮಲ್ಲಾಡಿಹಳ್ಳಿ ೫೭೭೫೩೨ (೨೦೦೫).

[6]ಶಂಬಾ (ಜೋಶಿ) ಕೃತಿ ಸಂಪುಟ ೧ ಪು. ೨೦೧, ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು ೧೮ (೧೯೯೯).

[7]ವಿವರಗಳಿಗೆ ನೋಡಿ : ಡಾ. ಎಂ. ಎಂ. ಕಲಬುರ್ಗಿ ‘ಸಂಸ್ಕೃತಿ ವಿಕೃತಿ’ ಪು. ೧೪೦-೪೨ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು-೨ (೨೦೦೬).

[8]ಅದೇ ಪುಟ ೫೩.

[9]ಟಿಪ್ಪಣಿ ೧ರಲ್ಲಿ ಉಲ್ಲೇಖಿತ ಗ್ರಂಥ, ಪು ೨೭೯.

[10]ಅದೇ ಪುಟ ೩೦.

[11]ಅದೇ ಪುಟ ೨೫೪

[12]ಡಾ. ಎಂ. ಎಂ. ಕಲಬುರ್ಗಿ (ಸಂ) ‘ತಗರ ಪವಾಡ’ ವಿದ್ಯಾನಿಧಿ ಪ್ರಕಾಶನ ಗದಗ (೨೦೦೪)

[13]ದಿನಾಂಕ ೧೦-೯-೨೦೦೯ರ ಪ್ರಜಾವಾಣಿ.