ಕುಡವೊಕ್ಕಲಿಗರು ಕರ್ನಾಟಕದ ಬಹುಪಾಲು ಜಿಲ್ಲೆಗಳಲ್ಲಿದ್ದರೂ ಅವರ ಸಂಖ್ಯಾಬಾಹುಳ್ಯವಿರುವುದು ವಿಜಾಪುರ ಮತ್ತು ಗದಗ ಜಿಲ್ಲೆಗಳಲ್ಲಿ. ಇಂದು ಕುಡವೊಕ್ಕಲಿಗರು ಎಲ್ಲಾ ದೃಷ್ಟಿಯಿಂದ ಕುರುಬರಿಗಿಂತಲೂ ಭಿನ್ನವಾದ ಒಂದು ಪ್ರತ್ಯೇಕ ಸಮುದಾಯ, ಇವರು ಪೂಜಿಸುವ ದೇವರು, ಮತಾಚರಣೆಗಳಲ್ಲಿ ಇದು ಸ್ಪಷ್ಟವಾಗಿಯೇ ಇದೆ. ಸದ್ಯಕ್ಕೆ ವೀರಶೈವ ಮತಾವಲಂಬಿಗಳಾಗಿರುವ ಇವರು ಜಾತಿ ಶ್ರೇಣಿಯಲ್ಲಿ ಕುರುಬರಿಗಿಂತಲೂ ಮೇಲಿದ್ದಾರೆ. ಆದರೆ ಮೊದಲಿನಿಂದಲೂ ಕುರುಬರು ಮತ್ತು ಕುಡವೊಕ್ಕಲಿಗರು ಭಿನ್ನರಲ್ಲ. ಅವರಿಬ್ಬರೂ ಅಣ್ಣ-ತಮ್ಮಂದಿರಾಗಬೇಕು ಎಂಬ ಅಲಿಖಿತ ಹೇಳಿಕೆಯೊಂದು ಎರಡೂ ಸಮಾಜದ ಜನಸಾಮಾನ್ಯರಲ್ಲಿದೆ. ಈ ಹೇಳಿಕೆ ಅಥವಾ ನಂಬಿಕೆಗೆ ಆಧಾರಗಳಿಲ್ಲದಿಲ್ಲ. ಅದನ್ನೀಗ ಪುರಾಣ ನೆಲೆಯಿಂದ ಆರಂಭಿಸಬಹುದು.

ಹಾಲ್ಮತೋತ್ತೇಜಕ ಪುರಾಣದಲ್ಲಿ ಬರುವ ಒಂದು ಕಥಾ ಭಾಗದೊಂದಿಗೆ ಮೇಲಿನ ವಿಚಾರವನ್ನು ಕೈಗೆತ್ತಿಕೊಳ್ಳಬಹುದು. ಒಮ್ಮೆ ಕೈಲಾಸದಲ್ಲಿ ಶಿವಸಭೆ ನಡೆದಾಗ ಶಿವನ ಎಡಬಲದಲ್ಲಿದ್ದ ಇಬ್ಬರು ಗಂಧರ್ವರು ಕುರೂಪಿ ಮುನಿಯೊಬ್ಬನನ್ನು ಕಂಡು ಕರಬಡಿದು ಅಪಹಾಸ್ಯ ಮಾಡಿ ನಕ್ಕರು. ಇದರಿಂದ ಅವಮಾನಿತ ಮುನಿನಾಥನು ಕಡುಕೋಪದಿಂದ ಅವರಿಗೆ ನರಲೋಕಕ್ಕಿಳಿದು ಕುಡವೊಕ್ಕಲಿಗರು ಉದರದಲ್ಲಿ ಸತಿಪತಿಗಳಾಗಿ ಉದ್ಭವಿಸಿರಿ ಎಂದು ಶಾಪವಿತ್ತನು.

ಹರನಯಡಬಲದಿರ್ದ ಉಭಯ ಗಂಧರ್ವರಾ
ವರಮುನಿಯ ತಂಡದಿ ಕುರೂಪಿಯಾದೊರ್ವ ಪರ
ತರ ತಾಪಸೋತ್ತಮನ ಮಹಿಮೆವರಿಯದೆ ಮೂಢರಂತೆ ಪರಿಹಾಸದಿಂದ
ನೆರೆನಕ್ಕು ಕರಬಡಿಯೆ ಮುನಿನಾಥ ಕೋಪದಿಂ
ನರಲೋಕಕ್ಕಿಳಿದು ಕುಡವೊಕ್ಕಲಿಗರುದರದೊಳ್
ಸರಸದಿಂದುದ್ಭವಾಗಿ ಸತಿಪತಿಗಳಾಗಿರಂದತಿಕೊಪದಿಂದಂ ಶಪಿಸಿದಂ[1]

ಅದರಂತೆ ಜಾಗೃತಪುರದಲ್ಲಿ ಕುಡವೊಕ್ಕಲಿಗೆ ಕುಲದ ಮುದ್ದುಗೊಂಡ ಮುದ್ದಾಯಿ ಗರ್ಭದಲ್ಲಿ ಆದಿಗೊಂಡ ಹುಟ್ಟಿದರೆ ಮುದ್ದುಗೊಂಡನ ಸೋದರಿಯಲ್ಲಿ ಚುಂಚಲೆಯ ಜನನವಾಯಿತು. ಇಬ್ಬರಿಗೆ ಮದುವೆಯಾಗಿ ಆಯ್ಗಂಡ, ಪಾಯ್ಗೊಂಡ, ಅಮರಗೊಂಡ, ಜಾಯ್ಗೊಂಡ, ಶಿವಪದ್ಮರೆಂಬ ಮಕ್ಕಳು ಹುಟ್ಟಿದರು.[2] ಕೃಷಿಕ ಮನೆತನವಾದ್ದರಿಂದ ಮೊದಲಿನ ನಾಲ್ವರು ಒಕ್ಕಲುತನ ಮಾಡುತ್ತಿದ್ದರೆ ಕೊನೆಯವ ಉಂಡಾಡಿಯಾಗಿದ್ದ. ಅಂತೆಯೇ ಅವನು ಉಂಡಾಡಿ ಪದುಮಣ್ಣನೆಂದು ಬಹುತೇಕ ಕಡೆಗೆ ವರ್ಣಿತನಾಗಿದ್ದಾನೆ.

ಜಾಬಾಲಿ ಮುನಿಯ ರಕ್ತದಿಂದುದ್ಭವಿಸಿದ ಕುರಿಗಳನ್ನು ಶಿವಪಾರ್ವತಿಯರು ಕಾಯಬೇಕಾಯಿತು. ಇದರಿಂದಾಗಿ ದಣಿದ ಪಾರ್ವತಿದೇವಿ ಆ ಕುರಿಗಳನ್ನು ಒಂದು ಹುತ್ತದಲ್ಲಿ ಹೊಗಿಸಿ ಅದಕ್ಕೆ ತನ್ನ ಮೂಗುತಿಯ ಮುದ್ರೆಯೊತ್ತಿದಳು.

ಆದಿಗೊಂಡನು ತನ್ನ ಮಕ್ಕಳನ್ನು ಕರೆದು ಬೇಸಾಯ ಮಾಡಲು ಹೇಳಿದನು. ಶಿವಪದ್ಮನು ಒಮ್ಮೆ ಹೊಲದಲ್ಲಿ ನೇಗಿಲು ಹೂಳಿಸಿದಾಗ ನೇಗಿಲು ಕುರಿ ಇರುವ ಹುತ್ತಿಗೆ ತಾಗಿ ಕುರಿಗಳು ಹೊರಬಂದವು. ಶಿವಪದ್ಮನು ಕುರಿಕಾಯತೊಡಗಿದನು. ಉಳಿದ ಅಣ್ಣಂದಿರು ಒಕ್ಕಲುತನ ಮಾಡತೊಡಗಿದರು. ಇವರ ಈ ಎರಡು ವೃತ್ತಿಗಳೇ ಕ್ರಮೇಣ ಎರಡು ಕುಲಗಳಾದವು. ಆದಿಗೊಂಡನ ಮೊದಲಿನ ನಾಲ್ಕು ಮಕ್ಕಳಂತೂ ಹಿಂದಿನಂತೆ ಕುಡವೊಕ್ಕಲಿಗರಾಗಿಯೇ ಉಳಿದರು. ಕುರಿ ಕಾಯಲು ತೊಡಗಿದ ಶಿವಪದ್ಮನು ಹಾಲುಮತದವನಾಗಿ ಕುರುಬ ಕುಲಕ್ಕೆ ಮೂಲ ಎನಿಸಿದನು.

ಇದೇ ವಿಷಯ ‘ತಗರ ಪವಾಡ’ದಲ್ಲಿಯೂ ಬಂದಿದೆ. ಆದರೆ ಇಲ್ಲಿ ಆದಿಗೊಂಡನ ಹೆಂಡತಿಯ ಹೆಸರು ಮಲ್ಲಮ್ಮನೆಂದಿದೆ.

ಒಕ್ಕಲಿಗನ ಆದಿಗೊಂಡನ ಉದರದಿ
ಚಿಕ್ಕವ ಸಹ ಏಳುಮಂದಿ
ಒಕ್ಕಲಿಗನ ಇದಕ್ಕೆ ಒಕ್ಕಲಿಕ್ಕಬೇಕೆಂದು
ಮುಕ್ಕಣ್ಣ ತಾನು ಧ್ಯಾನಿಸಿದ[3]

ಒಕ್ಕಲಿಗರಲ್ಲಿ ಹಲವಾರು ಪ್ರಭೇದಗಳಿದ್ದು, ಆದಿಗೊಂಡನು ಯಾವ ಒಕ್ಕಲಿಗ ಎಂಬ ಸಂಶಯ ಬಂದರೂ ಮುಂದೆ ಆದಿಗೊಂಡನ ಮಗ ಪದ್ಮಗೊಂಡನ ವಿಷಯ ಬಂದಾಗ ಅವರು ಕುಡವೊಕ್ಕಲಿಗರೆಂಬ ವಿಷಯ ಸ್ಪಷ್ಟಗೊಳ್ಳುತ್ತವೆ.

ಕಂದ ನೀ ಕುಡವೊಕ್ಕಲಿಗ ಕುರಿಗಳಾಡಿದ ಕಾರಣ
ದಿಂದೆ ಕುರುಬ ಗೌಡನಾಗಿ
ನಿನ್ನೆಯ ಕುಲದೈವ ವೀರಬೀರಯ್ಯಗೆ
ಮುಂದೆ ಒಕ್ಕಲು ಆಗಿ ಬದುಕು[4]

ಎಂದು ಶಿವಪದ್ಮನಿಗೆ ಶಿವನು ಹೇಳುವ ಈ ಮಾತಿನಲ್ಲಿ ಆದಿಗೊಂಡ ಹಾಗೂ ಅವನ ಮಕ್ಕಳೆಲ್ಲ ಕುಡವೊಕ್ಕಲಿಗರೆಂಬುದು ಸ್ಪಷ್ಟವಾಗಿದೆ. ಸಂಗಡವೇ ಶವಪದ್ಮನ ವೃತ್ತಿ, ದೇವರು ಎರಡೂ ಭಿನ್ನವಾಗಿ ಅವನು ಕುಡವೊಕ್ಕಲಿಗರಿಂದ ಬೇರೆಯಾಗಿ ನಿಲ್ಲುವುದು ಇದೇ ಪದ್ಯದಲ್ಲಿ ವ್ಯಕ್ತವಾಗಿದೆ. ಮುಂದೆ ಶಿವನು ಪದ್ಮಣ್ಣನ ಮಗ ಶಾಂತಯ್ಯನಿಗೆ ಮಂತ್ರಪೂರ್ವಕ ದೀಕ್ಷೆ ಕೊಡುತ್ತಾ ಹೇಳುತ್ತಾನೆ.

ಒಕ್ಕಲಿಗನು ಆದಿಗೊಂಡನ ಕುಲಕೆಲ್ಲ
ಹೆಚ್ಚಳವನು ತಂದೆ ಕುರಿಯ
ಹೊಕ್ಕು ಗುರುವ ಕಂಡು ಲಿಂಗಂಗಿಯು ಆಚೆ
ಚೊಕ್ಕಟ ಶರಣನೆಂದೆನಿಪೆ[5]

ಎಂಬಲ್ಲಿ ಕುರುಬರು ಲಿಂಗಧಾರಿಗಳಾಗುವ, ಸಂಸ್ಕೃತಿಕರಣಗೊಳ್ಳುವ ಹೆಜ್ಜೆಯನ್ನು ಕಾಣುತ್ತೇವೆ.

ಭಾರತ ದೇಶದ ಕುರುಬರ ಚರಿತ್ರೆ ಬರೆದಿರುವ ವಿ.ಆರ್. ಹನುಮಂತಯ್ಯನವರು ಕುಡವೊಕ್ಕಲಿಗರನ್ನು ಕುರುಬರ ಒಳಪಂಗಡದಲ್ಲಿಯೇ ಸೇರಿಸುತ್ತಾರೆ. ಇದಕ್ಕೆ ಅವರು ಕೊಡುವ ಆಧಾರವೆಂದರೆ ಕುರುಬರು, ಕುಡುವೊಕ್ಕಲಿಗರು ಒಂದೇ ಕುಲದ ದಾಯಾದಿಗಳೆಂದು ರುದ್ರಬ್ರಹ್ಮಾಂಡ ಪುರಾಣವೆಂಬ ಒಂದು ಪುರಾತನ ಗ್ರಂಥದಲ್ಲಿ ಹೇಳಿದೆ ಎಂಬುದು.[6]

ಹೆಳವರೂ ಕುಡವೊಕ್ಕಲಿಗರ ಮತ್ತು ಕುರುಬರ ಸೋದರ ಸಂಬಂಧವನ್ನು ಸಾರುತ್ತಲೇ ಬಂದಿದ್ದಾರೆ. ಗುಲಬರ್ಗಾ ಜಿಲ್ಲೆಯ ಅಫಜಲಪುರ ತಾಲೂಕಿನ ಮದ್ರಾ ಬಿ ಗ್ರಾಮದ ಹೆಳವ ಸಮಾಜದ ಸಿದ್ರಾಮಪ್ಪ ಹೇಳುವಂತೆ ಮುದಗೊಂಡ ಮತ್ತು ಮುದಲಾಯಿಗೆ ಏಳು ಜನ ಮಕ್ಕಳು. ಆದಿಗೊಂಡ, ಅಮುಲಗೊಂಡ, ಕಂಚಿನ ಖ್ಯಾಮಗೊಂಡ, ಮುತ್ತಿನ ಜ್ಯೋಗಿಗೊಂಡ, ಕುಲದಲ್ಲಿ ಕುಡವಕ್ಕಲಿಗ, ಉಂಡಾಡ ಪದುಮಣ್ಣ, ಕಾಲಿಲ್ಲದ ಸಿದಗೊಂಡ,[7] ಇಲ್ಲಿ ಉಂಡಾಡು ಪದುಮಣ್ಣನಿಂದ ಕುರುಬ ಕುಲ ಬೆಳೆದರೆ, ಕುಲದಲ್ಲಿ ಕುಡವಕ್ಕಲಿಗನಿಂದ ಕುಡವೊಕ್ಕಲಿಗ ಕುಲವು ಬೆಳೆದುದು ಸ್ಪಷ್ಟವಾಗಿದೆ. ಹೀಗೆಯೇ ಅಕ್ಕಲಕೋಟ ತಾಲೂಕಿನ ಸಲಗರ ಎಂಬ ಊರಿನ ಮಲ್ಲಪ್ಪ ಗಂಗಪ್ಪ ಹೆಳವರ ಎಂಬುವರು ಕೊಡುವ ಮಾಹಿತಿಯಲ್ಲಿ ಮುದ್ದಾಯಿ ಮುದಗೊಂಡರಿಗೆ ಏಳು ಜನ ಮಕ್ಕಳಿದ್ದಾರೆ. ಆದಿಗೊಂಡ, ಅಮರಗೊಂಡ, ಕಂಚಿನ ಕ್ಯಾಮಗೊಂಡ, ಮುತ್ತಿನ ಜ್ಯೋತಿಗೊಂಡ, ವೀರದ್ಯಾಮಣ್ಣ,[8] ಉಂಡಾಡು ಪದುಮಣ್ಣ ಮತ್ತು ಕಾಲಿಲ್ಲದ ಸಾನಗೊಂಡ ಇವರು ಕುಲದಿಂದ ಕುಡವೊಕ್ಕಲಿಗರು. ಹೀಗೆ ಪುರಾಣ ಮತ್ತು ಹೆಳವರ ಹೇಳಿಕೆಗಳಿಂದ ಕುರುಬರು ಮತ್ತು ಕುಡವೊಕ್ಕಲಿಗರು ಅಣ್ಣ-ತಮ್ಮರೆಂಬುದು ಜನಜನಿತವಾಗಿ ಉಳಿದುಕೊಂಡು ಬಂದಿದೆ. ಇಂತಹ ಹೇಳಿಕೆಗಳೇ ಕಾರಣವಾಗಿ ಪುರಾಣಮೂಲ ಹಿನ್ನೆಲೆ ಗೆಝೆಟಿಯರುಗಳಲ್ಲಿ ಪ್ರವೇಶ ಪಡೆಯುವಂತಾಯಿತು. ಮುಂಬೈ ಕರ್ನಾಟಕ ಗೆಝೆಟಿಯರ್‌ನಲ್ಲಿ (೧೯೮೪) ರಡ್ಡೇರ ಬಗೆಗೆ ಹೇಳುವಾಗ “ಕುರುಬರ ಮೂಲ ಪುರುಷನಾದ ಕುರುಪಿ ಎಂಬುವನಿಗೆ ಕುಡವೊಕ್ಕಲಿಗ ಎಂಬ ಸಹೋದರನಿದ್ದನು”[9] ಎಂಬ ಮಾತು ಬರುತ್ತದೆ.

ಮೇಲಿನ ಈ ಎಲ್ಲಾ ವಿವರಣೆಯನ್ನು ನೋಡಿದರೆ ಇಂದು ಕುಡವೊಕ್ಕಲಿಗರು ಕುರುಬ ಸಮಾಜದ ಒಂದು ಪಂಗಡವೆನ್ನುವುದಕ್ಕಿಂತ ಅವರನ್ನು ಕುರುಬರ ಸೋದರ ಸಂಬಂಧದ ಸಮುದಾಯವೆನ್ನುವುದು ಹೆಚ್ಚು ಸೂಕ್ತವೆನಿಸುತ್ತದೆ.

ಕುಡವೊಕ್ಕಲಿಗ ಪದದ ವ್ಯುತ್ವತ್ತಿಯನ್ನು ಬೇರೆ ಬೇರೆ ರೀತಿಯಾಗಿ ಹೇಳಲಾಗುತ್ತದೆ. ಕುಡ ಒಕ್ಕಲಿಗ ಎಂದು ವಿಗ್ರಹ ಮಾಡಿದರೆ ಕುಡ ಎನ್ನುವುದು ಒಕ್ಕಲುತನದ ಒಂದು ಉಪಕರಣವಾಗಿರುವುದರಿಂದ ಒಕ್ಕಲಿಗನಿಗೆ ಹೊಂದುತ್ತದೆ. ವ್ಯವಸಾಯದಲ್ಲಿ ಕುಡವನ್ನು ಉಪಯೋಗಿಸುವ ಒಕ್ಕಲಿಗನು ಕುಡವೊಕ್ಕಲಿಗನಾಗುವನೆಂದು ಸರಳವಾಗಿ ಅರ್ಥೈಸಬಹುದು. ಶಂ.ಬಾ. ಜೋಷಿಯವರು ಕುಡು ಎಂದರೆ ಒಕ್ಕಲಿಗ ಎಂಬ ಅರ್ಥಕೊಟ್ಟು ಕುಡುಒಕ್ಕಲಿಗ ಎರಡೂ ಸಮಾನಾರ್ಥಕಗಳೆನ್ನುತ್ತಾರೆ.[10] ಕುಡು ಎನ್ನುವುದೇ ಮಹಾರಾಷ್ಟ್ರದಲ್ಲಿ ಕುಣಬಿ ಒಕ್ಕಲುಮಗ ಎಂಬುದಕ್ಕೆ ಮೂಲವಾಗಿದೆ ಎಂಬ ಅಭಿಪ್ರಾಯವನ್ನು ಶಂ.ಬಾ. ತಾಳುತ್ತಾರೆ.[11] ಕುರವೊಕ್ಕಲಿಗರಲ್ಲಿಯ ಪೂರ್ವಪದವನ್ನು ಕುಡಿಯ ಎಂದು ಪ್ರತ್ಯೇಕಿಸಿಕೊಳ್ಳುವ ಡಾ. ಎಂ. ಚಿದಾನಂದಮೂರ್ತಿಯವರು ಕುಡಿಯ ಎಂಬುದು ರೈತನನ್ನು  ಹೇಳುತ್ತದೆ ಎನ್ನುತ್ತಾರೆ.[12] ಅಲ್ಲಿಗೆ ಶಂ.ಬಾ. ಜೋಷಿ ಮತ್ತು ಚಿದಾನಂದಮೂರ್ತಿ ಇಬ್ಬರದೂ ಏಕಾಭಿಪ್ರಾಯವಾಗುತ್ತದೆ.

ಸದ್ಯಕ್ಕೆ ಕುಡವೊಕ್ಕಲಿಗ ಪ್ರಾಚೀನತೆಗೆ ಕವಿರಾಜಮಾರ್ಗವೇ ಮೊದಲನೆಯವಾಗುತ್ತದೆ. ಕವಿರಾಜಮಾರ್ಗದಲ್ಲಿ ನಾಲ್ಕುವರ್ಣದವರ ಕ್ರಿಯೆ ವೃತ್ತಿಗಳನ್ನು ಈ ರೀತಿ ಹೇಳಿದೆ.

ಪರದರ್ಗಾ ವಾರ್ವರ್ಗಾ
ಯ್ತರಸರ್ವಾ ಕುಡಿಯರಪ್ಪ ನಾಲ್ವರ್ಗಾಗಳ್
ಸ್ಥಿರ ಗೋಪಾಧ್ಯಾಯಕ್ಷ್ಮಾ
ಪರಿಪಾಲ್ಯಕ್ಷೇತ್ರ ಕರ್ಷಣಂಗಳ್ ಕ್ರಿಯೆಗಳ್[13]

ಇಲ್ಲಿ ಉಕ್ತಗೊಂಡಿರುವ ವೈಶ್ಯ, ಬ್ರಾಹ್ಮಣ, ಕ್ಷತ್ರಿಯ, ಶೂದ್ರರಿಗೆ ಅನುಕ್ರಮವಾಗಿ ಪಶುಪಾಲನೆ, ಲಾಭ್ಯಯನ, ರಾಜ್ಯಾಡಳಿತ, ಒಕ್ಕಲುತನಗಳು ವೃತ್ತಿಯಾಗಿದ್ದವು. ಇಲ್ಲಿಯ ಕುಡಿಯರು ಉತ್ತರ ಕರ್ನಾಟಕದ ಕುಡವೊಕ್ಕಲಿಗರೆಂದೂ ಅವರೆಲ್ಲ ಈಗ ವೀರಶೈವರೆಂದೂ ಚಿದಾನಂದಮೂರ್ತಿಯವರು ಹೇಳುತ್ತಾರೆ.[14]

ಕುಡವೊಕ್ಕಲಿಗರು ಶಾಸನಗಳಲ್ಲಿಯೂ ಉಲ್ಲೇಖಗೊಂಡಿದ್ದಾರೆ. ವಿಶೇಷವಾಗಿ ತರ್ದವಾಡಿಯ ಶಾಸನಗಳಲ್ಲಿ ಇವರು ಅರವತ್ತೊಕ್ಕಲು ಎಂಬುದರ ಮುಖಾಂತರ ಮತ್ತೆ ಮತ್ತೆ ಪ್ರಸ್ತಾಪಗೊಳ್ಳುತ್ತಾರೆ. ಭೂಸಾಗುವಳಿ ಮಾಡುವ ಕೃಷಿಕರ ಒಕ್ಕಲಿಗರಾಗಿದ್ದು ಕನ್ನೂರ ಶಾಸನ ಅವರನ್ನು ಕುಡಿಒಕ್ಕಲಿಗ ಎಂದು ಕರೆದಿದೆ. ಈ ಒಕ್ಕಲಿಗರು ತಮ್ಮ ಸೌಕರ್ಯ, ಸಾಮಾಜಿಕ ಸ್ಥಾನಮಾನ, ಸ್ವಹಿತ ರಕ್ಷಣೆಗಾಗಿ ಊರೂರಿಗೆ ಪ್ರತ್ಯೇಕ ಸಂಘವನ್ನು ಕಟ್ಟಿಕೊಂಡಿದ್ದರು. ಅವು ಶಾಸನಗಳಲ್ಲಿ ಅರುವತ್ತೊಕ್ಕಲು ಎಂದು ಹೆರುಗೊಂಡಿವೆ. ಇವು ಆಯಾ ಊರಿನಲ್ಲಿ ಒಕ್ಕಲುತನ ಮಾಡುವವರ ಸಂಖ್ಯೆಯನ್ನು ಸೂಚಿಸಿದೆ. ಪಾರಂಪರಿಕವಾಗಿ ಬಂದ ಹೆರಾಗಿರುವಂತೆ ತೋರುತ್ತದೆ. ತರ್ದವಾಡಿನಾಡಿನ ಕನ್ನೊಳ್ಳಿ, ಹಿರೇಬೇವನೂರ, ಇಂಡಿ, ರೇವಣಗಾಂವ, ಕಡಣಿ ಗ್ರಾಮಗಳಲ್ಲಿ ಅರವತ್ತೊಕ್ಕಲು ಸಂಘವಿದ್ದಿತು.[15] ಈ ಅರವತ್ತೊಕ್ಕಲು ಸಂಘಕ್ಕೆ ಸಾಮಾಜಿಕ ಸ್ಥಾನಮಾನವಿತ್ತು. ಗ್ರಾಮೀಣರ ವಿವಿಧ ಚಟುವಟಿಕೆಗಳಲ್ಲಿ ಅರವತ್ತೊಕ್ಕಲಿನವರು ಭಾಗವಹಿಸುತ್ತಿದ್ದರು. ವಿಶೇಷವಾಗಿ ದಾನದತ್ತಿ ಬಿಡುವ ಸಂದರ್ಭಗಳಲ್ಲಿ ಪ್ರಭುಗಳು, ಸೇನಬೋವ, ತಳವಾರ, ಬಡಿಗ, ಕಮ್ಮಾರ, ಅಕ್ಕಸಾಲಿ, ಅಗ, ಅಂಬಿಗ ಎಂದಿರುವ ಎಂಟು ಹಿಟ್ಟು[16]ಗಳೊಂದಿಗೆ (ಅಷ್ಟಪಷ್ಟ) ಇವರು ಇರಬೇಕಾದದ್ದು ಇವರ ಸಾಮಾಜಿಕ, ಧಾರ್ಮಿಕ ಪ್ರತಿಷ್ಠೆಯಾಗಿದ್ದಿತು.

ವಚನ ಚಳುವಳಿಯ ಸುಮಾರಿಗೆ ಅಷ್ಟಾದಶ ಜಾತಿಗಳು ಬೆಳೆದು ಬಂದಿರುವುದು ಸ್ಪಷ್ಟವಾಗಿದೆ. ಬೇರೆ ಬೇರೆ ವೃತ್ತಿಗಳಿಂದ ಬೇರೆ ಬೇರೆ ಕುಲಾಚಾರಗಳು ಕಾಲಾನುಕ್ರಮದಲ್ಲಿ ನಿರ್ಮಾಣಗೊಂಡವುಗಳು. ಉರಿಲಿಂಗಪೆದ್ದಿ, ಹಾವಿನಹಾಳ ಕಲ್ಲಯ್ಯ, ಸೊಡ್ಡಳಬಾಚರಸ, ಅಂಬಿಗರ ಚೌಡಯ್ಯ ಮುಂತಾದವರ ವಚನಗಳಲ್ಲಿ ಅಷ್ಟಾದಶ ಜಾತಿಗಳ ಉಲ್ಲೆಖವಿದೆ. ಅಷ್ಟಾದಶ ಜಾತಿಗಳಲ್ಲಿ ಕುಡವೊಕ್ಕಲಿಗ ಎಂಬುದೂ ಒಂದು ಜಾತಿಯೆಂದು ಅಂಬಿಗರ ಚೌಡಯ್ಯ ಸ್ಪಷ್ಟವಾಗಿಯೇ ಹೇಳಿದ್ದಾನೆ.[17] ಸೊಡ್ಡಳ ಬಾಚರಸ ಹೇಳುವ ೧೮ ಜಾತಿಗಳಲ್ಲಿ ಕುಡವೊಕ್ಕಲಿಗವಿರದೆ ಒಕ್ಕಲಿಗ ಉಲ್ಲೇಖಗೊಂಡಿದ್ದಾನೆ. ಇಲ್ಲಿ ಒಕ್ಕಲಿಗ ಎಂಬುದು ಕುಡವೊಕ್ಕಲಿಗ ಎಂಬುದಕ್ಕೆ ಪರ್ಯಾಯ ಪದವಾಗಿದೆ.[18]

ಕುಡವೊಕ್ಕಲಿಗ ಜನಾಂಗದ ಮಾಹಿತಿ ಸಂಗ್ರಹ ಸಂದರ್ಭದಲ್ಲಿ ವಿಜಾಪುರದ ಎಂ.ಬಿ. ಬಿರಾದಾರ ಹಾಗೂ ಪಾಟೀಲ ಅವರನ್ನು ಸಂದರ್ಶಿಸಲಾಯಿತು. ಈ ಜನಾಂಗದ ಭೌಗೋಳಿಕ ವಿಸ್ತಾರ, ಪ್ರಸ್ತುತ ಜೀವನ ವಿಧಾನ, ನಂಬಿಕೆ, ಸಂಪ್ರದಾಯಗಳನ್ನು ಕುರಿತಾಗಿ ಇವರಿಬ್ಬರು ಮಹನೀಯರು ಅನೇಕ ಮಾಹಿತಿ ನೀಡಿದ್ದಾರೆ. ಸಂದರ್ಶನದ ಫಲಿತಗಳನ್ನು ಹೀಗೆ ಕ್ರೋಢಿಕರಿಸಬಹುದು.

ಕುಡವೊಕ್ಕಲಿಗರು. ಕುರುಬರು ರೆಡ್ಡಿಗಳು ಮೂಲತಃ ಒಂದೇ ಊಲಿಗದವರಾಗಿದ್ದು ಆಂಧ್ರದಿಂದ ಬಂದವರು. ಮೊದಲು ಎಲ್ಲರೂ ಮಾಂಸಾಹಾರಿಗಳಾಗಿದ್ದರು ಎಂಬುದಿದೆ. ಮುಂದೆ ಇವರು ಬಸವನಾಡಿಯಲ್ಲಿ ಬಂದ ಮೇಲೆ ವೀರಶೈವ ಲಿಂಗಾಯಿತ ಧರ್ಮ ಸ್ವೀಕರಿಸಿ ಪೂರ್ಣ ಶಾಖಾಹಾರಿಗಳಾದವರು. ಫಲವತ್ತಾದ ಭೂಮಿ ಇರುವಲ್ಲಿ ಒಕ್ಕಲುತನವನ್ನು ಮುಖ್ಯ ಉದ್ಯೋಗವನ್ನಾಗಿ ಮಾಡುಕೊಂಡು ಕುಡುವೊಕ್ಕಲಿಗರು ಅಲ್ಲಲ್ಲಿ ವಾಸವಾದರು. ವಿಜಾಪುರ, ಗದಗ, ಧಾರವಾಡ, ಬೆಳಗಾಂವ, ಕೊಪ್ಪಳ, ಹಾವೇರಿ, ಬಳ್ಳಾರಿ, ರಾಯಚೂರು, ಗುಲಬರ್ಗಾ, ಬೀದರ್ ಜಿಲ್ಲೆಗಳಲ್ಲಿ ಕುಡವೊಕ್ಕಲಿಗರ ಜನಾಂಗವಿದ್ದರೂ ಮುಂಚೆ ಹೇಳಿದಂತೆ ವಿಜಾಪುರ ಮತ್ತು ಗದಗ ಜಿಲ್ಲೆಗಳಲ್ಲಿ ಅಧಿಕ ಸಂಖ್ಯೆಯಲ್ಲಿದ್ದಾರೆ. ಕರ್ನಾಟಕ ಮಹಾರಾಷ್ಟ್ರ ಗಡಿಯಲ್ಲಿ ವಿಶೇಷವಾಗಿ ಸೊಲ್ಲಾಪುರದಲ್ಲಿ ೧೮೦೦ ರಿಂದ ೨೦೦೦ ಜನಸಂಖ್ಯೆಯವರೆಗೆ ಕುಡವೊಕ್ಕಲಿಗರಿದ್ದಾರೆ. ಸುತ್ತಮುತ್ತಲಿನ ಹಳ್ಳಿಯ ಜನ ಯಾವುಯಾವುದೋ ಕಾರಣವಾಗಿ ಸೊಲ್ಲಾಪುರದಲ್ಲಿ ನೆಲೆಸಿದ್ದಾರೆ.

ಹೀಗೆಯೇ ಆಂದ್ರ-ಕರ್ನಾಟಕ ಗಡಭಾಗದಲ್ಲಿಯೂ ಕುಡವೊಕ್ಕಲಿಗರ ಅನೇಕ ಕುಟುಂಬಗಳಿವೆ. ಇವರೆಲ್ಲ ಪರಸ್ಪರ ವೈವಾಹಿಕ ಸಂಬಂಧಗಳನ್ನು ಬೆಳೆಸಿಕೊಂಡಿದ್ದಾರೆ. ಆಂಧ್ರ ಪ್ರದೇಶದಿಂದ ಬರುವ ಮುತ್ತುಗಾರರು ತಾವೂ ಕುಡವೊಕ್ಕಲಿಗರೆಂದು ಹೇಳಿಕೊಳ್ಳುತ್ತಾರೆ. ಇವರು ಶಾಖಾಹಾರಿಗಳು. ಒಕ್ಕಲುತನದ ಹಂಗಾಮು ಮುಗಿದ ನಂತರ ಬೇಸಿಗೆಯಲ್ಲಿ ಮುತ್ತು ಮಾರಲು ಬರುತ್ತೇವೆ ಎಂಬುದನ್ನು ಅವರ ಬಾಯಿಂದ ಕೇಳಿದ್ದೇನೆ ಎನ್ನುತ್ತಾರೆ ಎಂ.ಬಿ. ಬಿರಾದಾರ ಅವರು. ಬೀದರ್ ಜಿಲ್ಲೆಯ ಕುಡವೊಕ್ಕಲಿಗರಿಗೂ ಆಂಧ್ರಪ್ರದೇಶದ ಮುತ್ತುಗಾರರಿಗೂ ವೈವಾಹಿಕ ಸಂಬಂಧಗಳು ಬೆಳೆದಿವೆ.

ವಿಜಾಪುರ ಜಿಲ್ಲೆಯಲ್ಲಿ ಗೊಂಡ ಎಂಬುದರೊಂದಿಗೆ ಕೊನೆಗೊಳ್ಳುವ ಹೆಸರಿನವರಿದ್ದಾರೆ. ಕಾಮಗೊಂಡ, ಕನಗೊಂಡ, ಮನಗೊಂಡ, ಆದಿಗೊಂಡ, ಸಮಗೊಂಡ, ಪಟಗೊಂಡ, ಕೊಟಗೊಂಡ ಎಂಬ ಹೆಸರುಗಳನ್ನಿಲ್ಲಿ ಉದಾಹರಿಸಬಹುದು.

ಕುಡವೊಕ್ಕಲಿಗರಲ್ಲಿ ನಾಲ್ಕು ಪ್ರಭೇದಗಳಿವೆ. ೧. ಸಂಡೋತಿ (ದಂಡಾವತಿ) ೨. ತಬ್ದಾವಾಡಿ (ತದ್ದೋಡಿ) ೩. ಎತ್ತಿರಕ ೪. ಮಿಣಿಗಚಕ ಇವುಗಳ ವ್ಯುತ್ಪತ್ತಿ ಕುರಿತಾಗಿ ರೂಢಿಯಲ್ಲಿರುವ ತಿಳಿವಳಿಕೆ ಹೀಗಿದೆ. ಕುಡವೊಕ್ಕಲಿಗ ಸಮಾಜದಲ್ಲಿ ಮದುಮದುವೆ ಇರಲಿಲ್ಲ. ಆದರೆ ಕೆಲವು ಗುಂಪಿನ ಜನರು ಗಂಡ ತೀರಿಕೊಂಡ ಮೇಲೆ ಮಹಿಳೆಯರಿಗೆ ಮರುಮದುವೆ ಮಾಡಿದರು. ಆಗ ಸಮಾಜದವರೆಲ್ಲ ಕೂಡಿಕೊಂಡು ದಂಡಕಟ್ಟಿದರು. ಆಗ ಅವರಿಗೆ ದಂಡಾವತಿ ಅಂದರು. ತರ್ದವಾಡಿ ನಾಡಿನಲ್ಲಿ ಇದ್ದವರು ತದ್ದೋಡಿಗಳಾದರು. ಮದುವೆ ಸಂದರ್ಭದಲ್ಲಿ ಹಂದರದಲ್ಲಿ ಮಿಣಿ ಹಾಕುವುದರಿಂದ ಮಿಣಿಗಡಕ ಎಂಬ ಶಬ್ದ ಬಂದಿತು. ಇನ್ನು ಕೆಲವರು ಒಳ್ಳೆಯ ಜಾತಿ ಎತ್ತುಗಳನ್ನು ಕಟ್ಟಿದ್ದರಿಂದ ಇವು ಇರಕ ಇದ್ದದ್ದರಿಂದ ಅವರು ಎತ್ತಿರಕ ಆದರು.

ಸ್ವಾತಂತ್ರ್ಯ ಪೂರ್ವದಲ್ಲಿ ಈ ನಾಲ್ಕು ಪ್ರವೇಶಗಳಲ್ಲಿ ಪರಸ್ಪರ ವಿವಾಹ ಸಾಧ್ಯವಿರಲಿಲ್ಲ. ತುಂಬ ಕಟ್ಟುನಿಟ್ಟಿತ್ತು. ಸ್ವಾತಂತ್ರ್ಯಾನಂತರದಲ್ಲಿ ಸಮಾಜದ ಕೆಲವು ಸುಶಿಕ್ಷಿತರು ಕೂಡಿ ಮದುವೆಯ ಈ ನಿರ್ಬಂಧದಿಂದಾಗಿ ಸಮಸ್ಯೆಯಾಗುತ್ತಿದೆ. ಈ ಎಲ್ಲ ಒಳಪಂಗಡಗಳನ್ನು ಕೂಡಿಸಿ ಕುಡವೊಕ್ಕಲಿಗ ಎಂಬ ಒಂದೇ ಸಮಾಜವನ್ನು ಮಾಡಿದರೆ ವೈವಾಹಿಕ ಕೂಡಕೊಳ್ಳುವಿಕೆಗೆ ಅನುಕೂಲವಾಗುವುದೆಂದು ಯೋಚಿಸಿದರು. ೧೯೫೧-೫೨ ರಲ್ಲಿ ಕಾಖಂಡಗಿ ಗೌಡರು, ಮದಭಾವಿ ಗೌಡರು, ಜೇವರಗಿ ತಾಲೂಕಿನ ಅಂದೇನಿಗೌಡರು ಮುಂತಾದ ಸಮಾಜದ ಮುಖಂಡರು ಕುಡವೊಕ್ಕಲಿಗರಲ್ಲಿದ್ದ ನಾಲ್ಕು ಒಳಪಂಗಡಗಳನ್ನು ತೊಡೆದು ಹಾಕಿದ್ದರಿಂದ ನಾಲ್ಕು ಒಳಪಂಡಗಳಲ್ಲಿ ಪರಸ್ಪರ ವೈವಾಹಿಕ ಸಂಬಂಧಗಳು ಬೆಳೆಯುತ್ತಿವೆ.

ಜನನ-ಮದುವೆ-ಮರಣದಂಥ ಪ್ರಸಂಗಗಳಲ್ಲಿ ಇವರವೇ ಆದ ರೂಢಿಗತ ಸಂಪ್ರದಾಯ, ಆಚರಣೆಗಳಿವೆ.

ಜನನ: ಗಂಡುಮಗು ಹುಟ್ಟಿದ ಸರಿದಿನಕ್ಕೆ, ಹೆಣ್ಣುಮಗು ಹುಟ್ಟಿದ ಬೆಸದಿನಕ್ಕೆ ಹೆಸರಿಡುತ್ತಾರೆ. ಅನುಕೂಲವಾದ ದಿನ, ಸೋದರತ್ತೆ ನಾಮಕರಣ ಮಾಡುತ್ತಾಳೆ. ಹೆಸರಿಡುವಾಗ ಕೂಡಿದ ಮುತ್ತೈದೆಯರು ಅವಳ ಬೆನ್ನು ಚಪ್ಪರಿಸುತ್ತಾಳೆ. ನಾಮಕರಣ ಸಂದರ್ಭದಲ್ಲಿ ಗುಗ್ಗರಿ ಮಾಡಿ ಎಲ್ಲರಿಗೂ ಹಂಚುತ್ತಾರೆ. ಈಗಲೂ ಜೋಗುಳ ಹಾಡಲು ಹಳೆಯ ಜನ ಸಿಗುತ್ತಾರೆ. ಟಿ.ವಿ. ಬಂದ ಮೇಲೆ ಇವೆಲ್ಲ ಇಲ್ಲವಾಗಿವೆ. ಬಾಣಂತಿಯ ಕೈಯಲ್ಲಿಯ ಕೂಸನ್ನು ತೆಗೆದು ಕೊಂಡು ತೊಟ್ಟಿಲ ಕೆಳಗೆ ಒಂದು ಕಡೆಯಿಂದ ಇನ್ನೊಂದು ಕಡೆಗೆ ತೆಗೆದುಕೊಳ್ಳುತ್ತಾರೆ. ತೊಟ್ಟಿಲ ಕೆಳಗೆ ಜೋಳ ಹಾಕಿ ಅದರ ಮೇಲೆ ತುಂಬಿದ ತಂಬಿಗೆ ಇಡಲಾಗುತ್ತದೆ.

ಕಿರಣಿ ಉಡಿಸುವ ಸಂಪ್ರದಾಯ ಅನೇಕ ಸಮಾಜಗಳಲ್ಲಿರುವಂತೆ ಕುಡವೊಕ್ಕಲಿಗರಲ್ಲಿಯೂ ಇದೆ. ಹುಡುಗಿಯೊಬ್ಬಳು, ೭-೮ ವರ್ಷದವಳಾಗುತ್ತಿರುವಂತೆ  ಹುಡುಗಿಯ ತಾಯಿ ತವರು ಮನೆಯವರು ದಟ್ಟಿತಂದು ಉಡಿಸುತ್ತಾರೆ. ಇದಕ್ಕೆ ಹುಟ್ಟು ಕಿರಣಿ ಎಂಬ ಪರ್ಯಾಯ ಹೆಸರೂ ಇದೆ. ಹುಡುಗಿ ದೊಡ್ಡವಳಾದಾಗ ೫ ದಿನ ಕೂರಿಸುತ್ತಾರೆ. ಈಗಲೂ ತವರು ಮನೆಯವರು ಸೀರೆ ಉಡಿಸಿ ಮೈಲಿಗೆ ಕಳೆಯುವುದುಂಟು. ಅನುಕೂಲಸ್ಥರು ಬಂಗಾರ ಹಾಕುವುದು ಉಂಟು.

ಮುಂಚಿನ ದಿನಗಳಲ್ಲಿ ಮದುವೆಗಳು ಐದು ದಿನಗಳ ಕಾಲ ನಡೆಯುತ್ತಿದ್ದವು. ಆಮೇಲೆ ಮೂರು ದಿನಕ್ಕೆ ಇಳಿದು ತರುವಾಯ ಎರಡು ದಿನಕ್ಕೆ ಬಂದು ಈಗ ಒಂದು ದಿನಕ್ಕೆ ನಿಂತಿದೆ. ಮುಂಚಿನ ಐದು ದಿನಗಳ ಮದುವೆ ಒಳಕಲ್ಲು ಪೂಜೆಯಿಂದ ಪ್ರಾರಂಭಗೊಂಡ ಐದೂ ದಿನಗಳ ಕಾಲ ಮದುವೆಗೆ ಸಂಬಂಧಪಟ್ಟ ಬೇರೆ ಬೇರೆ ಆಚರಣೆ, ಸಂಪ್ರದಾಯಗಳು ನಡೆಯುತ್ತಿದ್ದವು. ಆದರೀಗ ಬದಲಾದ ಕಾಲಮಾನಕ್ಕನುಗುಣವಾಗಿ ಎಲ್ಲ ಮೊಟಕಾಗಿವೆ. ಮೂಲತಃ ಕುಡವೊಕ್ಕಲಿಗರಲ್ಲಿ ಉಡಕಿ ಪದ್ಧತಿಯಿಲ್ಲ. ಆದರೆ ಉಡಿಕಿಗೆ ಪೂರಕವಾದ ಪ್ರಯತ್ನವೊಂದು ಈ ಸಮಾಜದವರಿಂದ ನಡೆದದ್ದಿದೆ. ಚಿಕ್ಕವಯಸ್ಸಿನಲ್ಲಿ ಗಂಡನನ್ನು ಕಳೆದುಕೊಂಡಿರುವ ಒಂದು ದಿನ ಗಂಡನ ಮನೆಗೆ ಹೋಗದೆ ವಿಧವೆಯಾದ ಹೆಣ್ಣುಮಗಳು ಜೀವನ ಪರ್ಯಾಂತ ಮರುಗುವುದು ಬೇಡವೆಂದು ಕೆಲವು ಜನ ಸುಶಿಕ್ಷಿತರು ಮರುಮದುವೆಯ ವಿಷಯದಲ್ಲಿ ಆಲೋಚನೆ ಮಾಡಿದರು. ೧೯೯೮ ರಲ್ಲಿ ಜರುಗಿದ ಕುಡವೊಕ್ಕಲಿಗರ ಸಮಾವೇಶ ಸಂದರ್ಭದಲ್ಲಿ ಈ ವಿಚಯಕವಾದ ತಮ್ಮ ಪ್ರಗತಿಪರ ಆಲೋಚನೆಗಳನ್ನು ಸಮಾಜದ ಎದುರು ಮಂಡಿಸಿದರು. ಆದರೆ ಸಂಪ್ರದಾಯವಾದಿಗಳು ಹೊಸ ವಿಚಾರಗಳನ್ನು ಒಪ್ಪಿಸಿಕೊಳ್ಳಲು ಸಿದ್ಧರಾಗಲಿಲ್ಲ. ಸೀಮಂತ ಕಾರ್ಯಕ್ರಮ ಉಳಿದ ಜಾತಿ ಮತಸ್ಥರಲ್ಲಿ ನಡೆಯುವಂತೆಯೇ ನಡೆಯುತ್ತದೆ. ಮರಣ ಸಂದರ್ಭದಲ್ಲಿ ಹೆಣವನ್ನು ಹೂಳಲಾಗುತ್ತದೆ.

ಶ್ರೀಶೈಲದ ಮಲ್ಲಿಕಾರ್ಜುನನು ಕೊಡವೊಕ್ಕಲಿಗರ ಕುಲದೇವರು. ಸೊಲ್ಲಾಪುರದ ಸಿದ್ಧರಾಮೇಶ್ವರನಿಗೂ ಇವರು ನಡೆದುಕೊಳ್ಳುತ್ತಾರೆ.

ಕುಡವೊಕ್ಕಲಿಗ ಸಮುದಾಯ ಇಂದು ಕ್ರಮೇಣ ಆಧುನಿಕ ಬದುಕಿಗೆ ಒಗ್ಗಿಕೊಳ್ಳುತ್ತಿದೆ. ಈ ಸಮುದಾಯದ ಅನೇಕ ಜನ ವಿದ್ಯಾವಂತರು ಶಿಕ್ಷಣ, ರಾಜಕೀಯ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ. ಹಲವಾರು ಪ್ರತಿಷ್ಠಿತ ವಿನ್ಯಾಸ ಸಂಸ್ಥೆಗಳ ಮುನ್ನಡೆಗೆ ಇವರು ಕಾರಣರಾಗಿದ್ದಾರೆ. ಗ್ರಾಮೀಣ ಸ್ತರದಲ್ಲಿ ಈ ಜನಾಂಗದ ಜಾನಪದ ಸಂಸ್ಕೃತಿಯ ಬೇರುಗಳು ಇನ್ನೂ ಗಟ್ಟಿಯಾಗಿಯೇ ಉಳಿದಿವೆ. ಉಕ್ಕಲಿ ಬಸವನ ಬಾಗೇವಾಡಿ ತಾಲೂಕು ಜಾಲವಾಲ ಸಿಂದಗಿ ಹೊನವಾಡ ವಿಜಾಪುರ ಇಂಗಳೇಶ್ವರ ಬಸವನ ಬಾಗೇವಾಡಿ ತೊರವಿ, ವಿಜಾಪುರ ಮುಂತಾದ ಗ್ರಾಮಗಳಲ್ಲಿ ಬಹುಸಂಖ್ಯಾತರು ಕುಡವೊಕ್ಕಲಿಗರೇ ಆಗಿದ್ದಾರೆ. ಇಂದಿಗೂ ಕೃಷಿ ಪ್ರಧಾನ ಸಂಸ್ಕೃತಿಯಲ್ಲಿ ಬದುಕುತ್ತಿರುವ ಇವರು ತಮ್ಮ ಮೂಲಕ ಆಚಾರ ವಿಚಾರಗಳನ್ನು ಪ್ರತಿನಿಧಿಸುತ್ತಿದ್ದಾರೆ. ಇಂಥ ಗ್ರಾಮಗಳಲ್ಲಿ ಸಾಮಾಜಿಕ, ಧಾರ್ಮಿಕ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಕೈಗೊಳ್ಳಲು ಜನಾಂಗಿಕ ಅಧ್ಯಯನ ಎಷ್ಟೋ ಹೊಸ ವಿಷಯಗಳನ್ನು ಬೆಳಕಿಗೆ ತರಬಲ್ಲದು. ಇದು ಸಮೀಪವರ್ತಿಯಾದ ಅನ್ಯ ಸಮುದಾಯಗಳೊಂದಿಗಿನ ತೌಲನಿಕ ಅಧ್ಯಯನಕ್ಕೂ ಪ್ರೇರಣೆ ನೀಡಬಲ್ಲದು.

ಆಕರ ಗ್ರಂಥಗಳು

೧. ಹಾಲ್ಮತ್ತೋತ್ತೇಜಕ ಪುರಾಣ, ೧೯೮೨ (ಸಂ) ಭಾಗುತನಯ ನವಿಲೂ

೨. ತಗರ ಪವಾಡ, ೨೦೦೪, (ಸಂ) ಡಾ.ಎಂ.ಎಂ. ಕಲಬುರ್ಗಿ, ಸಿ.ಕೆ. ಪರಶುರಾಮಯ್ಯ, ಡಾ.ಎಫ್. ಟಿ. ಹಳ್ಳಿಕೇರಿ.

೩. ಭಾರತದೇಶದ ಕುರುಬರ ಚರಿತ್ರೆ, ೧೯೫೮, ವಿ.ಆರ್. ಹನುಮಂತಯ್ಯ.

೪. ಹೆಳವರು ಮತ್ತು ಅವರ ಕಾವ್ಯಗಳು ೨೦೦೫, ಎಚ್.ಎಲ್. ನಾಗೇಗೌಡ.

೫. ಮುಂಬಯಿ ಕರ್ನಾಟಕ ಗ್ಯಾಝೇಟೀಯರ್ ೧೯೪೮, (ಅನು) ವೆಂಕಟರಂಗೋಕಟ್ಟಿ.

೬. ಶಂಬಾಕೃತಿ ಸಂಪುಟ-೧, ೩. ೧೯೯೯, (ಸಂ) ಮಲ್ಲೇಪುರಂ ಜಿ. ವೆಂಕಟೇಶ್‌.

೭. ಮಧ್ಯಕಾಲೀನ ಕನ್ನಡ ಸಾಹಿತ್ಯ ಮತ್ತು ಅಸ್ಪೃಶ್ಯತೆ, ೧೯೮೫, ಡಾ. ಎಂ. ಚಿದಾನಂದಮೂರ್ತಿ.

೮. ಕವಿರಾಜಮಾರ್ಗಂ, ೧೯೭೫, (ಸಂ) ಎಂ.ವಿ. ಸೀತಾರಾಮಯ್ಯ.

೯. ತರ್ದವಾಡಿ ನಾಡು ಒಂದು ಅಧ್ಯಯನ. ೧೯೯೦, ಡಾ. ಎಸ್. ಕೆ. ಕೊಪ್ಪ.

೧೦. ಜಾನಪದ ಸಾಹಿತ್ಯ ದರ್ಶನ ಏಳು, ೧೯೮೩, (ಪ್ರ.ಸಂ.) ಎಸ್.ಎಂ. ವೃಷಬೇಂದ್ರಸ್ವಾಮಿ.

೧೧. ಸಮಗ್ರ ವಚನ ಸಂಪುಟ-೯, ೧೯೯೩, (ಸಂ). ಡಾ. ಎಂ.ಎಂ. ಕಲಬುರ್ಗಿ.

೧೨. ಸಕಲ ಪುರಾತನ ವಚನಗಳೂ ೧೯೭೯, (ಸಂ) ಡಾ. ಎಂ.ಎಸ್. ಸುಂಕಾಪುರ.

 

[1]ಹಾಲ್ಮತ್ತೋತ್ತೇಜಕ ಪುರಾಣ, ೩-೩

[2]ಅದೇ, ಪುಟ ೩-೧೯

[3]ತಗರಪವಾಡ, ೧-೭೦.

[4]ಅದೇ, ೨-೫೮.

[5]ಅದೇ, ೩-೮೬

[6]ಭಾರತ ದೇಶದ ಕುರುಬರ ಚರಿತ್ರೆ, ಪುಟ ೧೧೧

[7]ಹೆಳವರು ಮತ್ತು ಅವರ ಕಾವ್ಯಗಳು, ಪುಟ ೪.

[8]ಅದೇ, ಪುಟ ೯.

[9]ಮುಂಬಯಿ ಕರ್ನಾಟಕ ಗ್ಯಾಝೇಟೀಯರ್, ಪುಟ ೧೨೩.

[10]ಶಂಬಾ ಕೃತಿ ಸಂಪುಟ-೧, ಪುಟ ೧೫೦.

[11]ಅದೇ ಸಂಪುಟ-೩, ಪುಟ ೩೯೭.

[12]ಮಧ್ಯಕಾಲೀನ ಕನ್ನಡ ಸಾಹಿತ್ಯ ಮತ್ತು ಅಸ್ಪೃಶ್ಯತೆ, ಪುಟ ೩೮.

[13]ಕವಿರಾಜಮಾರ್ಗಂ, ೧-೬೫.

[14]ಮಧ್ಯಕಾಲೀನ ಕನ್ನಡ ಸಾಹಿತ್ಯ ಮತ್ತು ಅಸ್ಪೃಶ್ಯತೆ, ಪುಟ ೩೮.

[15]ತರ್ದವಾಡಿ ನಾಡು ಒಂದು ಅಧ್ಯಯನ, ಪುಟ ೧೫೭.

[16]ಜಾನಪದ ದರ್ಶನ, ಸಂಪುಟ-೭ ಗ್ರಂಥದಲ್ಲಿಯ ಡಾ. ಆರ್.ಎನ್. ಗುರುವ ಅವರ ‘ಎಂಟು ಹಿಟ್ಟು ಬಾರಾ ಬಲುತೆ’ ಎಂಬ ಲೇಖನವನ್ನು ನೋಡಿ.

[17]ಸಮಗ್ರ ವಚನ ಸಂಪುಟ-೬, ಪುಟ ೮೬.

[18]ಸಕಲ ಪುರಾತನ ವಚನಗಳು-೨, ಪುಟ ೬೮೧.