ಚಿತ್ರದುರ್ಗ-ತುಮಕೂರು ಜಿಲ್ಲೆಯ ಪೂರ್ವಭಾಗದಲ್ಲಿ ಕುಂಚಿಟಿಗರು ದಟ್ಟವಾಗಿ ನೆಲಸಿದ್ದಾರೆ. ಕುಂಚಿಟಿಗರು-ವಕ್ಕಲಿಗ ಸಮುದಾಯದ ಒಂದು ಪ್ರಮುಖ ಶಾಖೆ. ಕುಮಚಿಟಿಗರು ಮೂಲತಃ ಪಶುಪಾಲಕರು. ಪಶುಪಾಲನೆಯ ಕಾಲಘಟ್ಟದಲ್ಲಿ ಇವರ ಹಾಗೇ ಪಶುಪಾಲನೆಯಲ್ಲಿ ತೊಡಗಿದ್ದ ಕಾಡುಗೊಲ್ಲರು-ಮ್ಯಾಸಬೇಡರಲ್ಲಿ ಇರುವಂತೆ ಇವರಲ್ಲೂ ಪಶುಪಾಲಕ ಸಾಂಸ್ಕೃತಿಕ ವೀರರು ಇದ್ದಾರೆ. ಪಶುಪಾಲಕ ಸಂಸ್ಕೃತಿ ಅವನತವಾಗತೊಡಗಿದಂತೆ ಈ ಸಮುದಾಗಳು ಸಹಜವಾಗಿ ಕುರಿ ಸಾಕಾಣಿಕೆಗೆ ತೊಡಗಿದಂತೆ ಕಾಣುತ್ತವೆ. ವರ್ಷಕ್ಕೊಮ್ಮೆ ಕುರಿಯ ತುಪ್ಪಡ (ಉಣ್ಣೆ) ಕತ್ತರಿಸಬೇಕಾದ ಅನಿವಾರ್ಯತೆಯಿಂದ ಇವರು ಕುರುಬರ ಸಂಬಂಧಕ್ಕೆ ಬಂದಂತೆ ಕಾಣುತ್ತದೆ. ಜೊತೆಗೆ ಕಂಬಳಿ ಣೇಯುವ ಕುರುಬರಿಗೂ ಉಣ್ಣೆ ಅತ್ಯಗತ್ಯವಾದುದರಿಂದ ಸಹಜವಾಗಿ ಒಬ್ಬರಿಗೊಬ್ಬರು ಹತ್ತಿರವಾದಂತೆ ಕಾಣುತ್ತಾರೆ. ಇದರಲ್ಲಿ ಕುಂಚಿಟಿಗ-ಕುರುಬರ ಸಂಬಂಧಗಳು ಬೇರೆ ಸಮುದಾಯಗಳಿಗಿಂತ ಹೆಚ್ಚು ಆತ್ಮೀಯವಾಗಿರಬೇಕೆಂಬುದಕ್ಕೆ ಸಾಕಷ್ಟು ಆಧಾರಗಳು ದೊರೆಯುತ್ತವೆ. ಒಂದು ಭಾಷೆಯ ಮೂಲಚೂಲಗಳನ್ನು ಗುರುತಿಸಲು ಅದರ ವ್ಯಾಕರಣವನ್ನು ಗಮನಿಸಬೇಕು. ಅದು ಭಾಷೆಯ ಮೂಲ (origin)ವನ್ನು ತನ್ನೊಳಗೆ ಇಟ್ಟುಕೊಂಡಿರುತ್ತದೆ. ಹಾಗೆಯೇ ಯಾವುದೇ ಜಾತಿಯ ಮೂಲಗಳನ್ನು ಶೋಧಿಸಲು ಅದರ ಬಳಿಗಳು (ಬೆಡಗು/ ಕುಲ-ಗೋತ್ರ) ಸಹಾಯಕವಾಗುತ್ತವೆ. ಮುಂದೆ ಅಂಥ ಕೆಲವು ಬಳಿಗಳ ಮೂಲಕ ಕುರುಬ ಕುಂಚಿಟಿಗರ ಸಂಬಂಧಗಳನ್ನು ವಿಶ್ಲೇಷಿಸಲಾಗಿದೆ. ಇಂಥ ಕಡೆ ಶಬ್ಧನಿಷ್ಪತ್ತಿ. ಗಾದೆಗಳೂ ಸಹಾಯಕ್ಕೆ ಬರುತ್ತವೆ.

೧. ‘ಕುಂಚಿಟಿಗರು’ ಎಂಬ ಹೆಸರೇ ಕುರುಬರು ನೇಯ್ದ ಕಂಬಳಿಗೆ ಸರಿಹಾಕುವ ‘ಕುಂಚ’ ದಿಂದಲೇ ಬಂದಿದೆ ಎಂದು ಐತಿಹ್ಯಗಳು ಹೇಳುತ್ತವೆ. ಬಹುಶಃ ಕುರುಬರ ಕಂಬಳಿ ನೇಯುವ ಕಾಯಕದಲ್ಲಿ ‘ಸರಿ ಹಾಕುವ’ ಕಾರ್ಯದಿಂದ ಅವರ ವೃತ್ತಿಗೆ ಇವರು ಸಹಾಯಕರಾಗಿರಬೇಕು. ಆದ್ದರಿಂದಲೇ ‘ಕುಂಚ’ ಹಿಡಿದದ್ದರಿಂದ ‘ಕುಂಚಿಟಿಗರು’ ಆದರು ಎಂಬುದು ಒಂದು ಐತಿಹ್ಯ. ಅದರ ನಿಷ್ಪತ್ತಿ ಕುಂಚ + ಆಡಿಗ > ಕುಂಚಾಡಿಗ > ಕುಂಚಡಿಗ ಆದುದು. ನಂತರ ಕುಂಚ > ಕುಂಚಿ ಆಗತೊಡಗಿ ಕುಂಚಡಿಗ > ಕುಂಚಿಟಿಗ > ಕುಂಚಿಗ ಆಗಿರಬೇಕು. ಹಾಗಾದರೆ ಇವರನ್ನು ಕುಂಚಿಟಿಗರೆಂದು ಕರೆಯುವ ಮುನ್ನ ಇವರನ್ನು ಏನೆಂದು ಕರೆಯುತ್ತಿದ್ದರು ಎಂಬ ಪ್ರಶ್ನೆ ಉದ್ಭವಿಸುತ್ತದೆ. ಈ ವಾದವನ್ನು ನಿರಾಕರಿಸುವ ಪ್ರಯತ್ನಗಳೂ ನಡೆದಿವೆ. ಅದೇನೇ ಇರಲಿ ಅದು ಇಲ್ಲಿ ಅಪ್ರಸ್ತುತ.

೨. ಬಹುಶಃ ಮೇಲಿನ ವಾದಕ್ಕೆ ಪೂರಕವಾಗಿ ಮತ್ತೊಂದು ಅಂಶವನ್ನು ಇಲ್ಲಿ ಪರಿಶೀಲಿಸಬಹುದು. ಕುಂಚಿಟಿಗರ ೪೮ (ಕುಲ)ಗಳಲ್ಲಿ ‘ಕಂಬಳಿಯವರು’ ಎಂಬ ಒಂದು ಗೋತ್ರವಿದ (ಬೆಡಗು ಇದೆ). ಇವರು ಯಾರು? ಬಹುಶಃ ಕಂಬಳಿಗೆ ಸರಿ ಹಚ್ಚುವ ಕಾಯಕದಲ್ಲಿ ನೆರವಾದವರನ್ನೇ ‘ಕಂಬಳಿಯವರು’ ಎಂದು ಗುರುತಿಸಿರಬಹುದೇ? ಅಥವಾ ಕುಂಚಿಟಿಗರ ನಡಾವಳಿಗಳಲ್ಲಿ ಕಂಬಳಿ ಹಾಸುವ ಕೈವಾಡದ ಬಾಬು ಇವರದಾಗಿದ್ದರಿಂದ ಈ ಹೆಸರು ಬಂತೇ? ಕುಂಚಿಟಿಗರ ಎಲ್ಲ ಶುಭಕಾರ್ಯಗಳಲ್ಲಿ ಕಂಬಳಿಗೆ ತುಂಬಾ ಮಹತ್ವವಿದೆ. ಕರಿ ಕಂಬಳಿ ಗದ್ದಿಗೆಗೆ ಎಲ್ಲಿಲ್ಲದ ಪಾವಿತ್ಯ್ರವಿದೆ. ಪೂಜಾರಿ ಕೂರುವುದು ಕರಿ ಕಂಬಳಿ ಗದ್ದಿಗೆಯ ಮೇಲೆ. ಕಳಶ ಹೂಡುವುದೂ ಕೂಡಾ ಕರಿ ಕಂಬಳಿ ಗದ್ದಿಗೆಯ ಮೇಲೆಯೇ.

ಮದುವೆ ಸಂದರ್ಭದಲ್ಲಿ ವರನ ಹೆಗಲ ಮೇಲೆ ಕರಿಯ ಕಂಬಳಿ ಇರುವುದು ಕಡ್ಡಾಯ. ಕುರುಬ ಕುಂಚಿಟಿಗರ ಮೈತ್ರಿಯ ಸಂಕೇತವಾಗಿ ವರನ ಕೈಗೆ ‘ಕುರುಬ ಕಂಕಣ’ (ಉಣ್ಣೆ ಕಂಕಣ) ಕಟ್ಟುವ ಸಂಪ್ರದಾಯ ಜಾರಿಗೆ ಬಂತೇ? ಅಥವಾ ‘ಕಂಬಳಿಯವರು’ ಎಂಬ ಈ ಗುಂಪಿನವರೇ ಜನಾಂಗಕ್ಕೆ ಬೇಕಾದ ಕಂಬಳಿ ನೇಯ್ದು ಕೊಡುವ ಕಾಯಕದಲ್ಲಿ ತೊಡಗಿದ್ದರೇ? ಅಥವಾ ಜನಾಂಗದ ಕಾರ್ಯಗಳಲ್ಲಿ ಕಂಬಳಿ ಹಾಸುವ ಕೈವಾಡದ ಬಾಬು ಈ ಬಳಿಯವರಿಗೆ ಜನಾಂಗ ಬಿಟ್ಟು ಕೊಟ್ಟಿದೆಯೇ?

೩. ಕುರುಬರಲ್ಲಿ ‘ಅಂಡೆ ಕುರುಬ’ ಎಂಬ ಒಳಪ್ರಭೇದ ಇದೆ. ಕುಂಚಿಟಿಗರಲ್ಲೂ ಇದನ್ನೇ ಹೋಲುವ ‘ಅಂಡೇನವರು’ ಎಂಬ ಒಂದ ಬೆಡಗಿದೆ. ಕುರುಬರ ಒಂದು ಗುಂಪೇ ಕುಂಚಿಟಿಗರಲ್ಲಿ ಸೇರಿದುದರಿಂದ ಈ ಹೆಸರು ಬಂತೇ? ಹಾಗಾದರೆ ‘ಅಂಡೆ’ ಎಂದರೆ ಏನು? ಬಹುಶಃ ಅದು ‘ಹಂಡೆ’ ಎಂಬ ಪಾತ್ರೆಯನ್ನು ಸೂಚಿಸುತ್ತದೆಯೇ? ಕಿಟ್ಟೆಲ್ ಕೋಶದ ಪ್ರಕಾರ ಬೊಂಬಿನಿಂದ ಮಾಡಿದ ಪಾತ್ರಯನ್ನು  ಬಳಸುವವರು ಎಂಬ ಅರ್ಥವಿದೆ. ಲೋಹದ ಪಾತ್ರೆಗಳು ಬರುವ ಮುನ್ನ ಬಿದಿರಿನ ಬೊಂಬಿನಿಂದ ತಯಾರಿಸಿದುದನ್ನೇ ಪಾತ್ರೆಯಂತೆ ಬಳಸುತ್ತಿರಬೇಕು. ನಂತರವೂ ಬೊಂಬಿನ ಪಾತ್ರೆಯನ್ನೇ ಬಳಸುತ್ತಿದ್ದುದರಿಂದ ಈ ಹೆಸರು ಬಂತೇ? ಹುಲ್ಲು-ನೀರು ಹುಡುಕುತ್ತಾ ಸದಾ ಕಾವಲುಗಳನ್ನು ಸುತ್ತುವ ಪಶುಪಾಲಕರಾದ ಕುಂಚಿಟಿಗರು ಹಗುರಾಗಿರುವ ಕಾರಣಕ್ಕೆ ಬೊಂಬಿನ ಪಾತ್ರೆಯನ್ನು ಬಳಸುತ್ತಿದ್ದರೇ? ಅಥವಾ ಲೋಹದ ಆಗಮನದ ನಂತರ ಇವರೇನಾದರೂ ಪಾತ್ರೆ ತಯಾರಿಸುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದರಿಂದ ಈ ಹೆಸರು ಬಂದಿರಬಹುದೇ? ಇವರನ್ನು ‘ಉಂಡೇನವರು’ ಎಂಬ ಇನ್ನೊಂದು ಹೆಸರಿನಿಂದಲೂ ಕರೆಯುತ್ತಾರೆ. ‘ಅಂಡೆ’ನವರೇ ‘ಉಂಡೇ’ನವರಾಗಿದ್ದಾರೆಯೇ? ಇವರ ಕುಲದ ಮೂಲ ಪುರುಷ ‘ಉಂಡೇತ್ತರಾಯ’ ಈತನ ವಂಶದವರೇ ‘ಉಂಡೇ’ನವರಾದರೇ? ಕುಂಚಿಟಿಗರ ಮದುವೆಯಲ್ಲಿ ಈತನಿಗೆ ‘ವೀಳ್ಯದ ಗೌರವ’ ಇದೆ. ‘ಕಂಬಳಿಯವರು’ ಈ ಉಂಡೇನವರೊಂದಿಗೆ ಅಣ್ಣ-ತಮ್ಮಂದಿರಾಗಿ ನಡೆದುಕೊಳ್ಳುತ್ತಾರೆ. ಅಥವಾ ಈ ‘ಅಂಡೆ’ಯು ಕುಂಡೆ ಪಿರ‍್ರೆ ಯನ್ನು ಸೂಚಿಸುತ್ತಿದೆಯೇ? ಇದಕ್ಕೆ ಪೂರಕವಾಗಿ ‘ಅಂಡು ತೊಳೆದರೆ ಹಿಂಡು ಹೆಚ್ಚಲ್ಲ’ ಎಂಬ ಮಾತು ಕಾಡುಗೊಲ್ಲರಲ್ಲಿ ಪ್ರಚಾರದಲ್ಲಿದೆ. ಆದರೆ ಮಲ ವಿಸರ್ಜನೆ ಮಾಡಿದಾಗ ಕುಂಡೆ ತೊಳೆದರೆ ಕುರಿಗಳ ಹಿಂಡು ಹೆಚ್ಚುವುದಿಲ್ಲ ಎಂಬ ನಂಬಿಕೆ ಇದೆ. ಹಾಗೇ ಕುರಿಗಾಹಿಗಳಾದ ಇವರು ತ್ಮ ಹಿಂದು ಹೆಚ್ಚಲು ಕುಂಡೆ ತೊಳೆಯದ ಈ ಗುಂಪನ್ನು ‘ಅಂಡೇನವರು’ ಎಂದು ಕರೆದಿರಬಹುದೇ? ಕುರುಬರಲ್ಲಿ ಇದ್ದ ಈ ಗುಂಪಿನ ಕೆಲವರು ಕುಂಚಿಟಿಗರಲ್ಲಿ ಸೇರಿ ಹೋದರೇ? ಇವೆಲ್ಲ ಊಹೆಯ ಸಾದ್ಯತೆಗಳು ಅಷ್ಟೇ. ಆಯಾ ಕಾಲಘಟ್ಟದಲ್ಲಿ ನಡೆದಿರಬಹುದಾದ ಪ್ರಕ್ರಿಯೆಯನ್ನು ಇವು ಗರ್ಭೀಕರಿಸಿಕೊಂಡಿವೆಯೇ? ಈ ಒಗಟುಗಳನ್ನು ಒಡೆಯುವುದು ಕಷ್ಟ. ಕೇವಲ ಊಹಾಸಾಧ್ಯತೆಯ ಮೊರೆ ಹೋಗಬೇಕಷ್ಟೇ.

೪. ‘ಕುರುಬ ಕೆಟ್ಟು ಕುಂಚಿಗನಾದ’ ಎಂಬ ಒಂದು ಗಾದೆ ಕುಂಚಿಟಿಗರಲ್ಲಿ ಪ್ರಚಾರದಲ್ಲಿದೆ. ಇದು ಏನನ್ನು ಸಂಕೇತಿಸುತ್ತದೆ? ಹಿಂದೆ ಜನಾಂಗ ಯವನರ (ಮುಸಲ್ಮಾನರ) ಉಪಟಳದಿಂದ ಉತ್ತರ ಭಾರತದಿಂದ ದಕ್ಷಿಣಕ್ಕೆ ವಲಸೆ ಬಂದಾಗ ಅಡ್ಡ ಬಂದ ನದಿ ದಾಟಲು, ನದಿ ದೇವತೆ ನರಬಲಿ ಕೇಳುತ್ತದೆ. ಯಾರೂ ಮುಂದೆ ಬಾರದಿದ್ದಾಗ ಅಲ್ಲಿಯೇ ಕುರಿ ಕಾದುಕೊಂಡಿದ್ದ ಬಪ್ಪರಾಯ ಎಂಬ ಕುರುಬರವನು ‘ನನ್ನ ಮುಂಡಕ್ಕೆ ನಿಮ್ಮ ಹೆಣ್ಣು ಧಾರೆ ಎರೆದರೆ, ನಾನು ಗಂಗೆಗೆ ಶಿರ ಅರ್ಪಿಸಿ, ನಿಮ್ಮನ್ನು ತೊರೆ ದಾಟಿಸುತ್ತೇನೆ’ ಎನ್ನುತ್ತಾನೆ. ಅವನು ತೊರೆ ದಾಟಿಸುತ್ತಾನೆ. ಇವರು ಕೊಟ್ಟ ಮಾತಿನಂತೆ ಉಂಡೆತ್ತರಯನ ಮಗಳನ್ನು ಬಪ್ಪರಾಯನ ಮುಂಡಕ್ಕೆ ಕೊಟ್ಟು ಧಾರೆ ಎರೆಯುತ್ತಾರೆ. ಬಪ್ಪರಾಯ ಪವಾಡಸದೃಶವಾಗಿ ಬದುಕಿ ಬರುತ್ತಾನೆ. ಜನಾಂಗಕ್ಕೆ ಬಂದ ಆಪತ್ತಿನಿಂದ ಕಾಪಾಡಿ ‘ಜಲಧಿ’ಯಲ್ಲಿ ದಾರಿಕೊಡಿಸಿದ ಈತನ ವಂಶದವರು ಮುಂದೆ ‘ಜಲಧೇವನರು’ ಎಂಬ ಬೆಡಗಿನಿಂದ ಹೆಸರಾಗುತ್ತದೆ. ಇಂಥ ಅಪೂರ್ವ ತ್ಯಾಗ ಮಾಡಿದ ಬಪ್ಪರಾಯನಿಗೆ ಮೊದಲ ವೀಳ್ಯದ ಗೌರವ ಇಂದಿಗೂ ಸಲ್ಲುತ್ತಿದೆ. ಅವನಿಗೆ ಕೆಣ್ಣು ಕೊಟ್ಟ ಉಂಡೇತ್ತರಾಯನಿಗೆ ನಂತರದ ವೀಳ್ಯದ ಗೌರವ ಸಲ್ಲುತ್ತದೆ.

ಹಲವಾರು ಜನಾಂಗಗಳು ಒಟ್ಟಾಗಿ ಬಾಳುವಾಗ ಇಂಥ ತ್ಯಾಗ, ಬಲಿದಾನಗಳು, ವರ್ಣ ಸಂಕರಗಳು ಆಗುವುದು ಸಹಜ ಎಂಬುದನ್ನು ಈ ಘಟನೆಗಳು ಸಾದರಪಡಿಸುತ್ತವೆ.*

 

*ಹೆಚ್ಚಿನ ವಿವರಗಳಿಗೆ ಮ್ಯಾಸ ಮಂಡಲದಲ್ಲಿರುವ ‘ಕುರುಬ ಮೂಲದ ಕುಂಚಿಟಿಗರ ಸಾಂಸ್ಕೃತಿಕ ವೀರ’ ಎಂಬ ನನ್ನ ಲೇಖನ ಗಮನಿಸಿ.