ಪ್ರಾಚೀನ ಕಾಲದಿಂದಲೂ ಒಟ್ಟಿಗೆ ಇದ್ದ ಜನಸಮುದಾಯಗಳು ಬೆಳವಣಿಗೆಗೊಂಡಂತೆ, ಕವಲೊಡೆದು ಬೇರೆ ಬೇರೆಯಾಗಿ, ನೈಸರ್ಗಿಕ ಬದಲಾವಣೆಗಳಿಂದಲೋ, ಗುಳೆಕಟ್ಟಿ ತಿರುಗುವುದರಿಂದಲೋ, ಸಾಸಹ ಪ್ರವೃತ್ತಿಯಿಂದಲೋ, ವ್ಯಾಪಾರ ಮನೋವೃತ್ತಿಯಿಂದಲೋ ಹಲವಾರು ಜನಸಮುದಾಯಗಳು ಒಂದರೊಡನೊಂದು ಬೆರೆತುಕೊಂಡುದರಿಂದಲೋ, ತಮ್ಮ ಮೂಲ ಸ್ವರೂಪವನ್ನು ಕಳೆದುಕೊಂಡು ಕಾಲಕ್ಕೆ ತಕ್ಕಂತೆ ಹೊಸ ಹೊಸ ಆಯಾಮಗಳನ್ನು ತಮ್ಮಲ್ಲಿ ಅಳವಡಿಸಿಕೊಂಡ ಭಾರತೀಯ ಈ ಕುರುಬ ಸಮುದಾಯವನ್ನು ವಿದ್ವಾಂಸರು ಎರಡು ಬಗೆಯಾಗಿ ವಿಂಗಡಿಸುತ್ತಾರೆ. ಮೊದಲನೆಯದು ಆಸ್ಟ್ರೋ ಎಸಿಯಾಟಿಕ್‌ ಸಮುದಾಯವಾದರೆ ಎರಡನೆಯದು ದ್ರಾವಿಡ ಸಮುದಾಯ. ಮೊದಲನೆಯವರು ಆಗ್ನೇಯ ಏಷಿಯಾದವರೆಂದು ಇವರು ಉತ್ತರ ಭಾರತದಲ್ಲಿ ವಾಸಿಸುತ್ತಿದ್ದರೆಂದು ಎರಡನೆಯವರು ದಕ್ಷಿಣ ಭಾರತದಲ್ಲಿ ವಾಸಿಸುತ್ತಿದ್ದರೆಂದು ವಿದ್ವಾಂಸರು ಅಭಿಪ್ರಾಯಪಡುತ್ತಾರೆ. ಇವರಿಬ್ಬರ ಮೂಲ ಉದ್ಯೋಗ ಕುರಿ ಹಾಗೂ ಪಶು ಸಂಗೋಪನೆಯಾಗಿತ್ತು.

ಭಾರತದುದ್ದಕ್ಕೂ ಹಬ್ಬಿಕೊಂಡಿರುವ ಈ ಜನಸಮುದಾಯದವರನ್ನು ಉತ್ತರದಲ್ಲಿ ಗಡಾರಿ, ಗಡ್ಡಿ ಎಂತಲೂ ಪಶ್ಚಿಮದಲ್ಲಿ ಗುಜ್ಜರ್‌ ಎಂತಲೂ, ಮಧ್ಯಭಾರತದಲ್ಲಿ ಧನಗರರೆಂದು ದಕ್ಷಿಣದಲ್ಲಿ ಕುರುಬರೆಂದು ಪೂರ್ವದಲ್ಲಿ ಪಾಲಕ್ಷತ್ರಿಯರೆಂದು ಕರೆಯುವುದುಂಟು. ಭಾರತದ ಮಧ್ಯಭಾಗ ಮತ್ತು ಪಶ್ಚಿಮ ಭಾಗದ ನದಿತೀರ ಪ್ರದೇಶಗಳಲ್ಲಿ ಹಾಗೂ ನೀರಿನ ಆಶ್ರಯ ಸ್ಥಾನಗಳಲ್ಲಿ ಬೀಡುಬಿಟ್ಟು, ಕ್ರೂರ ಪ್ರಾಣಿಗಳಿಂದ ಹಾಗೂ ಕಳ್ಳಕಾಕರಿಂದ ತಮ್ಮ ಕುರಿ-ದನಗಳನ್ನು ಸಂರಕ್ಷಿಸಲು ದೊಡ್ಡ ದೊಡ್ಡ ಹಟ್ಟಿ (ದಡ್ಡಿ)ಗಳನ್ನು ನಿರ್ಮಿಸಿಕೊಂಡು ವಾಸಿಸುತ್ತಿದುದರಿಂದ ಇವರನ್ನು ಹಟ್ಟಿಕಾರ/ಧನಗಾರರೆಂದು ಕರೆದಿರುವುದು ರೂಢಿಯಲ್ಲಿದೆ.

ಚರಿತ್ರೆಯ ಪೂರ್ವ ಕಾಲದಲ್ಲಿ ಈ ಹಟ್ಟಿಕಾರ/ಧನಗಾರರು ವಿಂದ್ಯ ಮತ್ತು ದಂಡಕಾರಣ್ಯಗಳನ್ನು ಬಿಟ್ಟು ವರ್ಹಾಡ (ಮಹಾರಾಷ್ಟ್ರ) ಕ್ಕೆ ವಲಸಿ ಬಂದು ಇವರಲ್ಲಿಯೇ ಕೆಲವರು ಕುರಿ ಹಾಗೂ ಪಶುಸಂಗೋಪನೆಯ ಜೊತೆಗೆ ಕೃಷಿ ಕೆಲಸದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು. ಇದೇ ವೇಳಗೆ ತಾವು ಊಳುತ್ತಿದ್ದ ಭೂಮಿಯನ್ನು ಭೂಮಿತಾಯಿ ಎಂದು ಪೂಜಿಸಲು ಪ್ರಾರಂಭಿಸಿದರು, ಇವರ ಈ ಭೂಮಿತಾಯಿಯ ಆರಾಧನೆಯಿಂದಲೇ, ಮಣ್ಣು ಇಲ್ಲವೆ ಭೂಮಿ ಪೂಜೆಯ ಹಬ್ಬಗಳು ಪ್ರಾರಂಭವಾದವು. ಅದಕ್ಕೆ ಮಣ್ಣೆತ್ತಿನ, ಗುಳ್ಳವ್ವನ, ನಾಗಪ್ಪನ ಪೂಜೆಯನ್ನು ಹೆಸರಿಸಬಹುದು. ಹಟ್ಟಿಕಾರ/ಧನಗಾರರ ಕೆಲವು ಸಮೂಹಗಳು ನರ್ಮದಾ ಹಾಗೂ ಗೋಧಾವರಿ ನದಿ ತೀರಗಳಲ್ಲಿ ಬಂದು ನೆಲೆಸಿದರು. ಇನ್ನೂ ಕೆಲವು ಸಮೂಹಗಳು ವಿದರ್ಭ, ಇಂದೋರ, ನಾಸಿಕ, ಖಾನ, ಕಣಹ ದೇಶ ಮುಂತಾದ ಕಡೆಗಳಲ್ಲಿ ಬಂದು ನೆಲೆಸಿದರು. ಶಕ್ತಿಯುತರು, ನಂಬಿಗಸ್ತರು, ಸಾಹಸಿಗರು ಆದ ಇವರು ಜೀವನ ಹಂಗು ತೊರೆದು ಕುದುರೆಗಳನ್ನೇರಿ ಕೈಯಲ್ಲಿ ಝೆಂಡೇ ಧ್ವಜವನ್ನು ಹಿಡಿದುಕೊಂಡು ರಣಭೂಮಿಯನ್ನು ಪ್ರವೇಶಿಸಿ ಯುದ್ಧವನ್ನು ಮಾಡುವ ಇವರು ಝೆಂಡೇ ಧನಗರ, ಝೆಂಡೆ ರಾವುತ, ಝೆಂಡೆ ಕುರುಬ ಎಂಬ ಹೆಸರುಗಳಿಂದ ಗುರುತಿಸಿಕೊಂಡಿದ್ದಾರೆ. ಕ್ರಿಸಾಬದ ಆರಂಭದ ವೇಳೆಗೆ ಹೂಣರು, ಶಕರ, ಅರಬರ ಪಠಾಣರ ಹಾಗೂ ಮೊಗಲರ ದಾಳಿಗೆ ಸಿಕ್ಕು ನಲುಗಿದ ಇವರು  ತಾವು ವಾಸಿಸುತ್ತಿದ್ದ ನದಿಯ ಬಯಲು, ಹುಲ್ಲುಗಾವಲುಗಳನ್ನು ಹಾಗೂ ಕೃಷಿ ಭೂಮಿಗಳನ್ನು ಬಿಟ್ಟು ದಕ್ಷಿಣ ಭಾರತದ ಬಯಲು ಪ್ರದೇಶಕ್ಕೆ ಗುಡ್ಡ-ಬೆಟ್ಟಗಳ ನಡುವಿನ ಪ್ರದೇಶಕ್ಕೆ ಹಾಗೂ ದಕ್ಷಿಣ ಭಾರತದ ನದಿಗಳಾದ ಕೃಷ್ಣ, ಮಲಪ್ರಭಾ ಮುಂತಾದ ನದಿಗಳ ತೀರಪ್ರದೇಶಕ್ಕೆ ಮತ್ತು ಇನ್ನು ಕೆಲವರು ಪಶ್ಚಿಮ ಘಟ್ಟಗಳ ಪ್ರದೇಶಕ್ಕೆ ಬಂದು ತಮ್ಮ ತಮ್ಮ ನೆಲೆಗಳನ್ನು ಗುರುತಿಸಿಕೊಂಡು ವಾಸಿಸತೊಡಗಿದರು.

ಈ ಜನರು ಆರ್ಯ ಪೂರ್ವಕಾಲದಿಂದಲೂ ಪಂಜಾಬದವರೆಗೂ ವ್ಯಾಪಿಸಿಕೊಂಡಿದ್ದರು, ಕುರಿಗಾರರು, ಧನಗಾರರು, ವೀರರು, ವರ್ತಕರು ಹಾಗೂ ಪುರಪತಿಗಳು ಎಂಬ ಬಗೆಗಳು ವ್ಯವಸಾಯ ಭೇದದಿಂದ ಅವರಲ್ಲಿ ಒಳಪಂಗಡಗಳು ಆಗಿದ್ದು ಕಂಡುಬರುತ್ತದೆ.[1] ಇಲ್ಲಿ ಬರುವ ವೀರರು ಎಂಬ ಪಂಗಡ ಈ ಝೆಂಡೆ ರಾವುತರೆ ಆಗಿರಬಹುದೆಂಬುದು ಸ್ಪಷ್ಟವಾಗುತ್ತದೆ. ಮಹಾರಾಷ್ಟ್ರದ ಪ್ರಖ್ಯಾತ ಧನಗರ ವಿದ್ವಾಂಸರಲ್ಲಿ ಒಬ್ಬರಾದ ಶಂಕರ ಬಾಬುರಾವ್‌ ಲಾಂಡೆ ತಮ್ಮ ಅಧ್ಯಯನದಲ್ಲಿ ಒಟ್ಟು ಮೂವತ್ತೈದು ಉಪಜಾತಿಗಳನ್ನು ಹೆಸರಿಸುತ್ತ ಹತ್ಕರ್‌ > ಹಟ್ಕರ್‌ > ಝೆಂಡೆವಾಲಾ[2] ಎಂಬುದನ್ನು ಸಹ ಗುರುತಿಸುತ್ತಾರೆ. ಶಂ. ಭಾ. ಜೋಶಿಯವರು ಸಹ ಹಟ್ಕರ್‌ (ಧನಗರ) ಎಂದು ಉಲ್ಲೇಖಿಸುತ್ತಾರೆ. ಡಾ. ಶ್ಯಾಮ್‌ಸಿಂಗ್‌ಶಶಿಯವರು ತಮ್ಮ ಭಾರತದ ಕುರುಬರು ಎಂಬ ಕೃತಿಯಲ್ಲಿ ಅಸಲ್‌ ಧನಗರ್‌, ಹಟ್ಕರ್‌, ಅಹರ್‌ ಮತ್ತು ಖಿಲಕಾರಿ ಎಂಬ ನಾಲ್ಕು ರೀತಿಯ ಧನಗರರನ್ನು ಗುರುತಿಸುತ್ತಾ ಗೋತ್ರಗಳನ್ನು ತಿಳಿಸುವ ಪಟ್ಟಿಯಲ್ಲಿ ಝೇಂಡೆ (ಜಂಡೆ) ಗೋತ್ರವನ್ನು ಸಹ ಗುರುತಿಸುತ್ತಾರೆ.[3] ೧೯೯೭ ಬಾಂಬೆ ಗ್ಯಾಜೆಟಿಯರ್‌ನಲ್ಲಿ ಖೈಲಾರಿ (ಕಿಲಾರಿ) ಸನಗಾರ (ಸಲಗಾರ) ಹಟಗಾರ (ಹಟ್ಟಿಕಾರ್‌) ಹಂಡೆ (ಹಂಡೆ ರಾವುತ) ಎಂದು ಧನಗರರ ಪಂಗಡಗಳನ್ನು ಹೇಳುತ್ತ ಝೆಂಡೆ ಮತ್ತು ಉರಸಾಲಿಯವರು ಎಂಬ ಮತ್ತೆರಡು ಉಪಪಂಡಗಳನ್ನು ಸಹ  ಹೇಳಲಾಗಿದೆ. ಮಹಾರಾಷ್ಟ್ರದ ಗಣಪತರಾವ್ ಕುಳೆಕಾರ ಅವರು ಕುರುಬ (ಧನಗರ್‌) ಸಮಾಜದ ಗೋತ್ರಗಳ ಬಗೆಗೆ ನಿರಂತರ ಐವತ್ತು ವರ್ಷಗಳ ಅಧ್ಯಯನ ಮಾಡಿ ಝೆಂಡೆ, ಹಟ್ಕರ್‌, ಖಂಡೆ, ಹಂಡೆ ಮುಂತಾದ ಉಪಜಾತಿಗಳನ್ನು ಉಲ್ಲೇಖಿಸುತ್ತಾ, ಇವು ಮೂಲದಲ್ಲಿ ಆಗಿದ್ದು ಕಾಲಾಂತರದಲ್ಲಿ ಉಪಜಾತಿಗಳಾಗಿ ನಿರ್ಮಾಣಗೊಂಡಿವೆ.[4] ಈ ಮೇಲಿನ ಎಲ್ಲ ಉಲ್ಲೇಖಗಳನ್ನು ನೋಡಿದಾಗ ಝೆಂಡೆ ಎಂಬುದು ಧನಗರ ಸಮುದಾಯದ ಒಂದು ಪ್ರಮುಖ ಉಪ ಸಮುದಾಯವಾಗಿತ್ತು ಎಂಬುದು ಸ್ಪಷ್ಟವಾಗುತ್ತದೆ.

ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ಕರ್ನಾಟಕಗಳಲ್ಲಿ ಅಪಾರ ಸಂಖ್ಯೆಯಲ್ಲಿರುವ ಈ ಸಮುದಾಯದವರು ವತನದಾರರಾಗಿ, ಪಟೇಲರಾಗಿ, ದೇಶಮುಖರಾಗಿ ಹಿಂದಿನಿಂದಲೂ ಕಾರ್ಯಭಾರವನ್ನು  ಮಾಡುತ್ತಾ ಬಂದಿದ್ದಾರೆ. ಮಧ್ಯಪ್ರದೇಶದ ಇಂದೋರ್‌ ಈ ಜನಾಂಗ ಹಳೆಯ ವಾಸಸ್ಥಾನ ಎಂದು ತಿಳಿಸಲಾಗಿದೆ. ಅಲ್ಲಿ ಧನಗರ್‌ ಝೆಂಡೆ ಎಂಬ ಆಡಳಿತಗಾರರಿದ್ದು ಅವರಲ್ಲಿ ಮಹಾರಾಣಿ ಅಹಲ್ಯಾಬಾಯಿ ತುಂಬಾ ಜನಪ್ರಿಯರಾದವರು.[5] ಇವರು ಇಂದೋರದಿಂದ ಹಿಡಿದು ಮಲಪ್ರಭಾ ನದಿಯವರೆಗೆ ತಮ್ಮ ರಾಜ್ಯವನ್ನು ವಿಸ್ತರಿಸಿಕೊಂಡಿದ್ದರು. ಮುನವಳ್ಳಿಯ ಮಲಪ್ರಭಾ ನದಿಯ ದಂಡೆಯ ಮೇಲೆ ಕಟ್ಟಿದ ವಿಶಾಲವಾದ ಕೋಟೆ ಹಾಗೂ ಸಿಂಧೆ ಹೋಲ್ಕರ್‌ ಅವರ ಹೆಸರಿನಲ್ಲಿ ಕಟ್ಟಿದ ಸಿಂಧೋಗಿ ಎಂಬ ಊರನ್ನು ಸಹ ಹೆಸರಿಸಬಹುದು. ಹೀಗೆ ಝೆಂಡೆ ಸಮುದಾಯದವರು ತಮ್ಮ ರಾಜರ ಆಶ್ರಯವನ್ನು ಪಡೆದು ಇಂದೋರ್‌, ಗ್ವಾಲಿಯರ್‌ನಿಂದ ಹಿಡಿದು ಕೃಷ್ಣ ಮಲಪ್ರಭಾ ನದಿಯ ತೀರಗಳವರೆಗೂ ವ್ಯಾಪಿಸಿಕೊಂಡಿರುವುದು ಕಂಡುಬರುತ್ತದೆ. ಕಾಲಕ್ರಮೇಣ ಮಲಪ್ರಭಾ, ಕೃಷ್ಣ ನದಿಗಳ ತೀರವನ್ನು ಬಿಟ್ಟು ಕಾವೇರಿ ತೀರದವರೆಗೂ ಹಾಗೂ ಪಶ್ಚಿಮ ಘಟ್ಟ ಪ್ರದೇಶಗಳವರೆಗೂ ವ್ಯಾಪಿಸಿಕೊಂಡಿರುವರು. ಹೀಗೆ ವ್ಯಾಪಿಸಿಕೊಂಡಿರುವ ಈ ಸಮುದಾಯದ ಸಂಪ್ರದಾಯ, ಆಚರಣೆ, ವಿಚಾರಗಳ ಇತರ ಕುರುಬ ಸಮುದಾಯಗಳಿಗಿಂತ ತುಸು ಭಿನ್ನವಾಗಿ ಕಾಣುತ್ತವೆ.

ಆಹಾರ, ವಿಹಾರ, ಜೀವನ ವಿಧಾನ ಹಾಗೂ ನ್ಯಾಯ

ಈ ಸಮುದಾಯದ ಜನರು ಮೂಲತಃ ಸಸ್ಯಾಹಾರಿಗಳೆ ಆಗಿದ್ದು, ಹಬ್ಬಹರಿದಿನ ಹಾಗೂ ಮದುವೆಯ ಸಮಾರಂಭಗಳಲ್ಲಿ ಮಾಂಸಾಹಾರವನ್ನು ಸೇವಿಸುತ್ತಾರೆ. ಆದರೆ ಉಳಿದ ದಿನಗಳಲ್ಲಿ ಹಾಲು, ಮೊಸರು, ತುಪ್ಪ ಮುಂತಾದವುಗಳನ್ನು ಸೇವಿಸುವುದು ರೂಢಿಯಲ್ಲಿದೆ. ಮನೆಯಲ್ಲಿ ಏನಾದರೂ ಕಾಡಾಟಗಳು ಪ್ರಾರಂಭವಾದರೆ, ಇಲ್ಲವೆ ತಮ್ಮ ಮನೆದೇವರು, ಕುಲದೇವರುಗಳಿಗೆ ಬೇಡಿಕೊಂಡ ಇಷ್ಟಾರ್ಥಗಳು ಈಡೇರಿದಾಗ ದೇವರಿಗೆ ಬ್ಯಾಟಿಯನ್ನು ಮಾಡಿ ಬಂಧು ಬಾಂಧವರೆಲ್ಲರೂ, ಕೂಡಿಕೊಂಡು ಭೋಜನ ಮಾಡುತ್ತಾರೆ. ಬಸವ ಜಯಂತಿ ಮತ್ತು ದೀಪಾವಳಿ ಪಾಡ್ಯದಂದು ಹಿರಿಯರ ಹೆಸರಿನಲ್ಲಿ ಪಕ್ಷಮಾಸಗಳನ್ನು ಆಚರಿಸುತ್ತಾರೆ. ಬೀಗರಿಗೆ ಹಿರಿಯರ ಹೆಸರಿನಲ್ಲಿ ಒಂದ್ಹೋತ್ತಿಟ್ಟು ಬಂಧು-ಬಾಂಧವರಿಗೆ ಬಿನ್ನಾಯ ಹೇಳಿ ಮನೆಗಳಲ್ಲಿ ಕಡ್ಡಾಯವಾಗಿ ಹೋಳಿಗೆ ಊಟವನ್ನು ಮಾಡಿಸುತ್ತಾರೆ.

ಸಾಮಾನ್ಯವಾಗಿ ಈ ಸಮುದಾಯದ ಹಿರಿಯರಲ್ಲಿ ಕಂಡುಬರುವ ಉಡುಗೆ-ತೊಡುಗೆಗಳೆಂದರೆ, ಪುರುಷರು ತಲೆಗೆ ಬಿಳಿಯ ಇಲ್ಲವೆ ಅರಿಸಿಣ ವರ್ಣದ ದಪ್ಪನೆಯ ಪೇಟಾ, ಬಗಲಕಸಿ ಅಂಗಿ, ಧೋತರ, ಕಾಲಲ್ಲಿ ದಪ್ಪ ಅಟ್ಟೆಯುಳ್ಳ ಕಾಲ್ಮರಿಗಳನ್ನು ಧರಿಸುವುದು ರೂಢಿ. ಕಿವಿಗೆ ಬಂಗಾರದ ಮುರುವು ಮತ್ತು ಬಲಗಡೆಯ ಕಿವಿಯು ಮೇಲ್ಭಾಗದಲ್ಲಿ ಬಾವಲಿ, ಕೊರಳ್ಳಿ ಬಂಗಾರದ ತಾಯತ ಅಥವಾ ಅಡಕಿ ಸರವನ್ನು ಧರಿಸುತ್ತಾರೆ. ಇನ್ನು ಹೆಂಗಸರು ದಪ್ಪದಡೆಯ ಒಂಬತ್ತು ವಾರಿ ಅಥವಾ ಏಳು ವಾರಿಯ ಸೀರೆ ಕುಪ್ಪಸವನ್ನು ತೊಡುತ್ತಾರೆ. ಅಲ್ಲದೆ ಕೊರಳೊಳಗೆ ಗೋರಮಳ, ತೀಕೆ, ಮಾಂಗಲ್ಯ, ಕಿವಿಗೆ ಬೆಂಡವಾಲಿ, ಬುಗುಡಿ, ತಾಲುಕು, ಮೂಗಿಗೆ ಮೂಗುತಿ ಅಥವಾ ನತ್ತು ಕಡ್ಡಾಯ. ತೋಳಿಗೆ ತೊಳಬಂಧಿ, ಮುಂಗೈಯಲ್ಲಿ ಪಾಟ್ಲಿ, ಬಿಲವಾರಾ, ನಡಕ್ಕೆ ನಡಪಟ್ಟಿ, ಡಾಬು ಧರಿಸುವುದರೊಂದಿಗೆ ಕೆಲವರು ಎಡಗಾಲಕ್ಕೆ ಬೆಳ್ಳಿಯ ದಪ್ಪನೆಯ ತೋಡೆಯನ್ನು ಸಹ ಹಾಕಿಕೊಳ್ಳುತ್ತಾರೆ. ಹಣೆಗೆ ಮತ್ತು ಮುಂಗೈಗೆ ಹಚ್ಚಿ ಹಾಕಿಸಿಕೊಳ್ಳುವುದು ಸಾಮಾನ್ಯ. ಹೀಗೆ ಈ ರೀತಿಯ ಉಡುಗೆ ತೊಡುಗೆಗಳು ಹಳೆಯ ತಲೆಮಾರಿನ ಜನರಲ್ಲಿ ಕಂಡುಬರುತ್ತಿದ್ದವು. ಈಗ ಅವೆಲ್ಲವೂ ಮಾಯವಾಗಿ ಸಾಮಾನ್ಯ ಉಡುಗೆ-ತೊಡುಗೆಗಳನ್ನು ಧರಿಸುವುದನ್ನು ನಾವು ಕಾಣುತ್ತೇವೆ.

ಈ ಸಮುದಾಯದ ಸ್ತ್ರೀಯರು ಇತರೆ ಸಮುದಾಯದ ಸ್ತ್ರೀಯರಂತೆ ದುಂಡನೆಯ ಕುಂಕುಮವನ್ನು ಹಚ್ಚುವುದರ ಜೊತೆಗೆ ವಿಶಿಷ್ಟ ಸಂದರ್ಭಗಳಲ್ಲಿ ಅಂದರೆ ದೇವತಾಕಾರ್ಯ ಹಾಗೂ ಮದುವೆಯ ಸಮಾರಂಭದಲ್ಲಿ ಅಡ್ಡ ಕುಂಕುಮವನ್ನು ಹೆಚ್ಚುತ್ತಾರೆ. ಮದುವೆಯಾಗಿ ಸಂಸಾರವನ್ನು ಸಾಗಿಸುವಾಗ ಸಂಸಾರದಲ್ಲಿ ಯಾವ ಅಡೆ-ತಡೆಗಳು ಬಾರದಿರಲೆಂದು ಬಲವಾದ ನಂಬಿಕೆಯಿಂದ ಹೀಗೆ ಹಚ್ಚಿಕೊಳ್ಳುತ್ತಾರೆ. ಎಂಬುದು ನಿಷ್ಟಾವಂತ ಸೇನಾಧಿಪತಿಯಾಗಿದ್ದ ತಾನಾಜಿಯು ಈ ಝೆಂಡೆ ಕುರುಬರ ಸಮುದಾಯಕ್ಕೆ ಸೇರಿದ ವೀರ. ಒಮ್ಮೆ ತಾನಾಜಿಯ ಮನೆಯಲ್ಲಿ ಅವನ ಮತ್ತು ಅವನ ತಮ್ಮನ ಮದುವೆಯ ಕಾರ್ಯವನ್ನು ಹಮ್ಮಿಕೊಂಡಿದ್ದರು. ಶಿವಾಜಿ ಮಹಾರಾಜರ ಅಪ್ಪಣೆ ಪಡೆದು ಮನೆಗೆ ಬಂದ ತಾನಾಜಿ ರಾತ್ರಿ ಬೆಳತನಕ ನಡೆಯುವ ಮದುಮಗನಾದ ತಾನಾಜಿಯು ಸ್ವಲ್ಪವೂ ವಿಚಲಿತನಾಗದೆ, ಮದುವೆಯ ಕಾರ್ಯದಲ್ಲಿ ನಿರತನಾದ ಮನೆಯ ಹಿರಿಯರನ್ನು ಕರೆದು ರಾಜರ ಆದೇಶದಂತೆ ನಾನು ಸಿಂಹಗಡಕ್ಕೆ ದಂಡೆತ್ತಿ ಹೋಗುತ್ತೇನೆ. ನನ್ನಿಂದಾಗಿ ಮದುವೆಯ ಯಾವ ಕಾರ್ಯಗಳು ನಿಲ್ಲುವುದು ಬೇಡ, ನಾನು ನಾಳೆ ಬೆಳಗಿನ ಜಾವ ಮುಹೂರ್ತಕ್ಕೆ ಸರಿಯಾಗಿ ಬಂದು ಬಿಡುತ್ತೇನೆ ಎಂದು ಕರ್ತವ್ಯದ ಕರೆಗೆ ಓಗೊಟ್ಟು ಹೊರಟು ಹೋದ. ಇತ್ತ ಮನೆಯಲ್ಲಿ ರೂಢಿಯಂತೆ ಮದುಮಕ್ಕಳಿಗೆ ಅರಿಸಿಣ ಹಚ್ಚಿ ಏಳು ಸುರಗಿಯ ನೀರನ್ನು ಹಾಕಿ ಮುಗಿಸುತ್ತಿದ್ದಂತೆಯೇ, ಬೆಳಗಾಗುವಷ್ಟರಲ್ಲಿಯೇ ತಾನಾಜಿ ಸಿಂಹಗಡವನ್ನು ವಶಪಡಿಸಿಕೊಂಡು ಮರಳಿ ಮನೆಗೆ ಬರುವ ದಾರಿಯಲ್ಲಿ ಕೆಲವು ದುಷ್ಟರು ಅವನನ್ನು ಮೋಸದಿಂದ ಕೊಂದು ಅವನ ಕಳೆಬರವನ್ನು ಅವನ ಕುದುರೆಯ ಮೇಲೆ ಹೊರಿಸಿದರು. ಆ ಕುದುರೆಯು ಆ ಕಳೆಬರವನ್ನು ಹೊತ್ತು ಓಡುತ್ತಾ ಮನೆಯ ಮುಂದಿನ ಮದುವೆಯ ಮಂಟಪದ ಮುಂದೆ ಬಂದು ನಿಂತಿತು. ಕುದುರೆಯು ಹೊತ್ತು ತಂದ ತಾನಾಜಿಯ ಕಳೆಬರವನ್ನು ಕಂಡು ಮನೆಯ ಹಿರಿಯರು ದುಃಖಿತರಾದರೂ, ಧೈರ್ಯಗೆಡದೆ ಅವನನ್ನು ಅಡ್ಡ ಮಲಗಿಸಿ ಅವನಿಗೆ ಗೊತ್ತು ಮಾಡಿದ ಕನ್ನೆಯೊಂದಿಗೆ ಮದುವೆ ಮಾಡುತ್ತಾರೆ. ಹೀಗೆ ಅಡ್ಡ ಮಲಗಿದ ಶವದ ಸಂಕೇತವಾಗಿ ಕುಂಕುಮವನ್ನು ಅಡ್ಡ ಹಚ್ಚುತ್ತಾರೆ. ಇನ್ನು ಮುಂದೆ ಜೀವನದಲ್ಲಿ ಇಂತಹ ಪ್ರಸಂಗ ಬರದಿರಲಿ ಎಂಬ ಬಲವಾದ ನಂಬಿಕೆಯಿಂದ ಮುತ್ತೈದೆಯರು ಕುಂಕುಮವನ್ನು ದುಂಡಗೆ ಹಚ್ಚುವ ಬದಲು ಅಡ್ಡ ಕುಂಕುಮ ಹಚ್ಚಲು ಪ್ರಾರಂಭಿಸಿದರು. ಅಂದಿನಿಂದ ಇಂದಿನವರೆಗೂ ಈ ಸಂಪ್ರದಾಯ ರೂಢಿಯಲ್ಲಿದೆ.[6]

ಕುಟುಂಬ ವ್ಯವಸ್ಥೆಯಲ್ಲಿ ತಂದೆಯೇ ಯಜಮಾನ. ಮನೆಯ ಎಲ್ಲ ಕೆಲಸಗಳು ಅವನ ಒಪ್ಪಿಗೆಯಂತೆಯೇ ನಡೆಯಬೇಕು. ಒಂದು ವೇಳೆ ತಂದೆ ಮರಣ ಹೊಂದಿದರೆ ತಾಯಿ ಅವನ ಸ್ಥಾನವನ್ನು ಬರಿಸುವಳು. ಮನೆಯಲ್ಲಿ ತಂದೆ-ತಾಯಿ ಜೀವಿತ ಇರುವವರೆಗೂ ಅಣ್ಣ-ತಮ್ಮಂದಿರು ವಾಟ್ನಿ ಪಾಲು ಆಗುವ ಹಾಗಿಲ್ಲ. ಒಂದು ವೇಳೆ ಗಂಡುಮಕ್ಕಳಲ್ಲಿ ಯಾರಾದರು ಪಾಲು ಕೇಳಿದರೆ ಅವನ ಉಪಜೀವನಕ್ಕೆ ತುಸು ಹೊಲ ಮನೆಯನ್ನು ಕೊಟ್ಟು ಬೇರೆ ಇಡುತ್ತಾರೆ. ತಂದೆ-ತಾಯಿಯ ಮರಣದ ನಂತರ ಅವನಿಗೆ ಸಮಪಾಲು ಕೊಟ್ಟು ಸಹಕರಿಸುತ್ತಾರೆ. ಗಂಡು ಸಂತಾನ ಇಲ್ಲದವರು ಅಣ್ಣನ ಇಲ್ಲವೆ ತಮ್ಮನ ಗಂಡುಮಕ್ಕಳನ್ನು ದತ್ತಕ್ಕೆ ತೆಗೆದುಕೊಳ್ಳುವ ಪದ್ಧತಿ ಇದೆ.

ಮನೆಗಳಲ್ಲಿ ಏನಾದರೂ ತಂಟೆ-ತಕರಾರುಗಳು ಬಂದರೆ ಕಟ್ಟೆಕಾರ ಮನೆತನದ ಹಿರಿಯನು ನ್ಯಾಯಗಳನ್ನು ಬಗೆಹರಿಸುತ್ತಾನೆ. ಒಂದು ವೇಳೆ ಅವನ ಕೈ ಮೀರುವಂತಿದ್ದಲ್ಲಿ ಸಮುದಾಯದ ಗುರು-ಹಿರಿಯರ ದೈವವನ್ನು ತನ್ನ ಮನೆಯಲ್ಲಿಯೇ ಕೂಡಿಸಿ ತೀರ್ಮಾನವನ್ನು ಕೊಡಿಸುತ್ತಾನೆ. ಒಂದು ವೇಳೆ ಎರಡೂ ಪಕ್ಷದವರು ಒಪ್ಪದಿದ್ದರೆ ಅವರನ್ನು ಕುಲದಿಂದ ಹೊರಗೆ ಇಡುತ್ತಾರೆ. ಹೀಗೆ ಹೊರಗೆ ಹಾಕಿಸಿಕೊಂಡವರು ಸಮುದಾಯದ ಯಾವುದೇ ಮಂಗಲ ಕಾರ್ಯಗಳಲ್ಲಿ ಭಾಗವಹಿಸುವಂತಿಲ್ಲ. ಒಂದು ವೇಳೆ ತಮ್ಮ ತಪ್ಪಿನ ಅರಿವಾಗಿ ತಪ್ಪನ್ನು ಒಪ್ಪಿಕೊಂಡು ಕಟ್ಟೇಕಾರನ ತೀರ್ಪಿಗೆ ಬದ್ಧರಾಗಲು ಒಪ್ಪಿದರೆ ಅಂತಹವನ್ನು ಕುಲಕ್ಕೆ ಮತ್ತೆ ಸೇರಿಸಿಕೊಳ್ಳುತ್ತಾರೆ. ಸಾಂಪ್ರದಾಯಿಕವಾಗಿ ವಿವಾಹವು ಎರಡು ಮನೆತನದ ಗುರುಹಿರಿಯರಿಗೆ ಒಪ್ಪಿಗೆಯಾದ ಕನ್ಯೆ ಅಥವಾ ವರನೊಂದಿಗೆ ನಡೆಯುವ ಮಂಗಲಕಾರ್ಯ. ಒಂದು ವೇಳೆ ಯುವಕ ಬೇರೆ ಜಾತಿಯ ಯುವತಿಯನ್ನು ಪ್ರೀತಿಸಿ ಮದುವೆಯಾದರೆ ಅವನನ್ನು ಮತ್ತು ಅವನ ಹೆಂಡತಿಯನ್ನು ದೈವದ ಮುಂದೆ ನಿಲ್ಲಿಸಿ, ಸಂಸ್ಕಾರಗೊಳಿಸಿ ಅವರಿಬ್ಬರ ತುದಿನಾಲಿಗೆಯನ್ನು ಸುಟ್ಟು  ಕುಲದೊಳಗೆ ತೆಗೆದುಕೊಳ್ಳುತ್ತಾರೆ. ಯುವತಿಯರು ಬೇರೆ ಜಾತಿಯ ಯುವಕನೊಡನೆ ಓಡಿ ಹೋದರೆ ಅವಳನ್ನು ಮತ್ತೆ ಮನೆಗೆ ಸೇರಿಸಿಕೊಳ್ಳುವುದಿಲ್ಲ ಅವಳು ಸತ್ತೇ ಹೋದಳು ಎಂದು ದೇವರ ಮುಂದೆ ದೀಪವನ್ನು ಹಚ್ಚಿ ಆಕೆಯನ್ನು ಮರೆತು ಬಿಡುತ್ತಾರೆ.  ಆದರೆ ಈವತ್ತು ಈ ಯಾವ ಕಟ್ಟಳೆಗಳು ಅಷ್ಟೊಂದು ಕಡ್ಡಾಯವಾಗಿ ನಡೆಯುವುದಿಲ್ಲ.

ಆರಾಧಿಸುವ ದೈವ ಹಾಗೂ ಹಬ್ಬ ಹರಿದಿನಗಳು

ಪ್ರತಿಯೊಂದು ಜನ ಸಮುದಾಯಕ್ಕೆ ತಮ್ಮದೆ ಆದ ವಿಶಿಷ್ಟವಾದ ದೈವಗಳು ಹಾಗೂ ಅವುಗಳನ್ನು ಆರಾಧಿಸುವ ಕ್ರಮಗಳು ಭಿನ್ನವಾಗಿರುವಂತೆ ಝೆಂಡೇ ಕುರುಬರ ದೈವಗಳ ಹಾಗೂ ಆರಾಧಿಸುವ ಕ್ರಮಗಳು ಧನಗರ ಸಮುದಾಯಕ್ಕಿಂತ ತುಸು ಭಿನ್ನವಾಗಿಯೇ ಕಾಣುತ್ತವೆ. ಕುಲದೈವ ಹಾಗೂ ಮನೆ ದೈವಗಳನ್ನು ಆರಾಧಿಸುವ ಪದ್ಧತಿಯು ಪ್ರಾಚೀನ ಕಾಲದಿಂದಲೂ ಬಂದಿರುವಂತಹದು. ಧನಗಾರರು ಮತ್ತು ಝೆಂಡೇ ಕುರುಬರು ಒಂದೇ ಆಗಿದ್ದು. ಕಾಲಾನುಕ್ರಮದಲ್ಲಿ ಇವೆರಡು ಸಮುದಾಯಗಳು ಬೇರೆ ಬೇರೆಯಾದಂತೆ ಇವರು ಆರಾಧಿಸುವ ದೇವರುಗಳು ಸಹ ಬೇರೆಯಾದಂತೆ ತೋರುತ್ತದೆ. ಧನಗಾರರ ಮೂಲ ದೇವರುಗಳಾದ ವಿಠ್ಠಲ ಮತ್ತು ಬೀರಪ್ಪ ಈ ಎರಡು ದೇವರುಗಳನ್ನು ಝೆಂಡೇ ಕುರುಬರಲ್ಲಿ ಕುಳೆಕಾರ, ಕಟ್ಟೆಕಾರ, ಮುಡಸಿನಕಾರ ಮುಂತಾದ ಬೆಡಗಿನವರು ವಿಠ್ಠಲನನ್ನು, ತೌವಡೆ, ತಾಂದಳೆ ಮುಂತಾದ ಬೆಡಗಿನವರು ಬೀರಪ್ಪನನ್ನು ಆರಾಧಿಸುತ್ತಾರೆ. ಹಾಗೂ ಈ ಎರಡು ದೇವರುಗಳನ್ನು ಏಕರೂಪದಲ್ಲಿಯೇ ಆರಾಧಿಸುತ್ತಾ ಬಂದಿದ್ದಾರೆ. ಇನ್ನುಳಿದ ಕೆಲವು ಬೆಡಗಿನವರು ಖಂಡೋಬಾ, ಧರೋಬಾ, ಧೂಳೋಬಾ, ಮಾಳಿಂಗರಾಯನನ್ನು ಆರಾಧಿಸುವರು. ಅದರಂತೆ ಸ್ತ್ರೀ ದೇವತೆಗಳಾದ ಸವದತ್ತಿ ಯಲ್ಲಮ್ಮ, ಕಕ್ಕೇರಿಯ ಕರಿಯಮ್ಮ, ತುಳಜಾಪುರದ ತುಳಜಮ್ಮ, ಮುಚ್ಚಂಡಿ ಜಕ್ಕಮ್ಮ, ಚಿಂಚಲಿ ಮಾಯಮ್ಮ ಮುಂತಾದ ದೇವತೆಗಳನ್ನು ಆರಾಧಿಸುತ್ತಾರೆ.

ಯುಗಾದಿಯ ಪಾಡ್ಯೆಯ ದಿನವನ್ನು ಗುಡಿಪಾಡ್ಯ ಎಂದು ಕೂಡ ಕರೆಯುವರು. ಈ ದಿನದಂದು ಒಂದು ಉದ್ದನೆಯ ಗಳವನ್ನು ತೆಗೆದುಕೊಂಡು ಅದಕ್ಕೆ ಮಾವಿನ ಮತ್ತು ಬೇವಿನ ಸೊಪ್ಪನ್ನು ಒಂದರಂತೆ ಒಂದು ಮೇಲಿಂದ ಕೆಳಗಿನವರೆಗೆ ದಾರದಿಂದ ಕಟ್ಟಿ, ಗಳದ ಮೇಲೆ ತುದಿಗೆ ಮಳ ಉದ್ದದ ಕೇಸರಿ ಇಲ್ಲವೆ ಕೆಂಪು ಬಣ್ಣದ ಹೊಸ ಬಟ್ಟೆಯನ್ನು ತೆಗೆದುಕೊಂಡು ನೀರಿಗೆ ಮಾಡಿಕಟ್ಟಿ, ಅದರ ಮೇಲೆ ಒಂದು ಸಣ್ಣ ತಂಬಿಗೆ ಇಲ್ಲವೆ ಗಿಂಡಿಯನ್ನು ದಬ್ಬಮಾಡಿ ಗಳಗಕ್ಕೆ ಕಳಸದಂತೆ ಸಿಗಿಸಿ ಇಟ್ಟು, ಅರಿಸಿಣ ಕುಂಕುಮ ಹಚ್ಚಿ ಮುಂಬಾಗಿಲ ಮುಂದೆ ಗಳವನ್ನು ಹುಗಿದು ಪೂಜೆ ಮಾಡಿ ಮನೆಯಲ್ಲಿ ತಯಾರಿಸಿದ ಶಾವಿಗೆ ಪಾಯಸ ಇಲ್ಲವೆ ಹೋಳಿಗೆಯ ಎಡೆ ಹಿಡಿಯುವರು. ಇದಕ್ಕೆ ಇವರು ಗುಡಿ ಏರಿಸುವ ಸಂಪ್ರದಾಯ ಎನ್ನುವರು. ಹಿಂದೆ ತಮ್ಮ ಪೂರ್ವಜರು ಯುಗಾದಿಯ ಪಾಡ್ಯೆಯಂದು ತಮ್ಮ ಕುರಿ ಹಾಗೂ ಗೋವುಗಳನ್ನು ಮೇಯಿಸುವ ಗೋಮಾಳಗಳ ಸೀಮೆಯೆಲ್ಲಿಯವರೆಗೆ ಇದೆ ಎಂಬುದನ್ನು ಗುರುತಿಸಲು ಸೀಮೆಯ ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಗುಡಿ ಧ್ವಜ, ಝೆಂಡೆಗಳನ್ನು ನೆಡುತ್ತಿದ್ದರಂತೆ. ಒಂದು ವೇಳೆ ಬೇರೆಯವರು ಅದನ್ನು ಆಕ್ರಮಿಸಿಕೊಂಡರೆ ಅವರನ್ನು ಎದುರಿಸಿ ಸೀಮೆಯನ್ನು ಗುರುತಿಸಿಕೊಳ್ಳುವ ಸಂಪ್ರದಾಯದ ಹಿನ್ನೆಲೆಯೇ ಗುಡಿಯ ಸಂಪ್ರದಾಯ. ಪೌರಾಣಿಕ ಹಿನ್ನೆಲೆಯ ಪ್ರಕಾರ ಶ್ರೀ ರಾಮಚಂದ್ರನು ರಾವಣೇಶ್ವರನನ್ನು ಸೋಲಿಸಿ ಸೀತಾ ಮಾತೆಯನ್ನು ಕರೆದುಕೊಂಡು ಅಯೋಧ್ಯೆಯನ್ನು ಪ್ರವೇಶಿಸಿದ ಹಿನ್ನೆಲೆಯಾಗಿ ಪ್ರತಿ ಮನೆಮನೆಯ ಮುಂದೆಯೂ ಧ್ವಜ ಗುಡಿ ಹಾರಿಸಿ ಸ್ವಾಗತಿಸಲಾಯಿತು ಎಂಬುದು. ಅದು ಈಗಲೂ ಮುಂದುವರೆದುಕೊಂಡು ಬಂದಿದೆ ಎನ್ನಲಾಗಿದೆ.

ಪಂಚಮಿಯ ಹಬ್ಬದಂದು ಮನೆಯಲ್ಲಿ ಒಳಕಲ್ಲು ಮತ್ತು ಬೀಸುವ ಕಲ್ಲು ಇರುವ ಸ್ಥಳದ ಗೋಡೆಯ ಮೇಲೆ ಚೌಕಾಕಾರವಾಗಿ ಆಕಳ ಸಗಣಿಯಿಂದ ಸಾರಿಸಿ ಅದರ ಮೇಲೆ ಸುಣ್ಣದ ನೀರಿನಿಂದ ಗೋಪುರದ ಗುಡಿಯನ್ನು ಬರೆದು, ಅದರ ಮಧ್ಯದಲ್ಲಿ ಹೆಡೆ ಇರುವ ಐದು ಸುತ್ತಿನ ನಾಗರ ಹಾವಿನ ಚಿತ್ರ ಬರೆದು ಹುತ್ತಿನ ಮಣ್ಣಿನಿಂದ ಮಾಡಿದ ನಾಗಪ್ಪನನ್ನು ಅದರ ಮುಂದಿಟ್ಟು ಪೂಜೆ ಮಾಡಿ, ಮನೆ ಮಂದಿಯೆಲ್ಲ ನಾಗಪ್ಪನಿಗೆ ಹಾಲನ್ನೆರೆಯುವರು. ಅಲ್ಲದೆ ಗುಳ್ಳವ್ವನನ್ನು ಇಟ್ಟು ಪೂಜಿಸುವುದು. ಇದೇ ವೇಳೆಯಲ್ಲಿ ಹೊಸದಾಗಿ ಮದುವೆಯಾದ ಮಗಳು ಮತ್ತು ಅಳಿಯನನ್ನು ಅಳಿಯತನಕ್ಕೆ ಕರೆದು ತಮ್ಮ ಶಕ್ತ್ಯಾನುಸಾರ ಅಳಿಯನಿಗೆ ಬಂಗಾರ ಅಥವಾ ಬೆಳ್ಳಿಯ ಒಡವೆಗಳನ್ನು ಕೊಟ್ಟು ಮಗಳು ಮತ್ತು ಅಳಿಯನಿಗೆ ಹೊಸ ಬಟ್ಟೆಯನ್ನು ನೀಡಿ ಆರತಿ ಮಾಡಿ ಗೌರವಿಸುವರು. ಮಹಾನವಮಿಯ ಪಾಡ್ಯೆ ದಿನ ಮನೆಯ ಯಜಮಾನ ಮತ್ತು ಯಜಮಾನಿ ಕೂಡಿಕೊಂಡು ದೇವರ ಮನೆಯನ್ನು ಹಾಗೂ ದೇವರ ಜಗಲಿಯನ್ನು ಸ್ವಚ್ಛ ಮಾಡಿ ಅದಕ್ಕೆ ಸುಣ್ಣಬಣ್ಣ ಬಳಿದು ಶೃಂಗರಿಸಿ, ಅವತ್ತೆ ಜಗಲಿಯ ಮೇಲೆ ಲಕ್ಷ್ಮಿಯನ್ನು ಸ್ಥಾಪಿಸಿ, ಮಣ್ಣಿನ ಪಾತ್ರೆಯಲ್ಲಿ ಇರುವ ಹುತ್ತಿನ ಮಣ್ಣನ್ನು ಹಾಕಿ, ಅದರಲ್ಲಿ ಐದು ತೆರನಾದ ಧಾನ್ಯಗಳನ್ನು ಹಾಕಿ ಅದರ ಮೇಲೆ ನೀರು ಹಾಕಿ, ಅದನ್ನು ಲಕ್ಷ್ಮಿ ಕಳಸದ ಮುಂದೆ ಇಟ್ಟು ಅದರ ಪಕ್ಕದಲ್ಲಿಯೇ ನಂದಾ ದೀವಿಗೆಯನ್ನು ಇಟ್ಟು ನಿರಂತರ ಒಂಬತ್ತು ದಿನಗಳವರೆಗೆ ಪೂಜಿಸುತ್ತಾರೆ. ಇದನ್ನು ನವರಾತ್ರಿಯ ಘಟ್ಟಾ ಹಾಕುವುದು ಎನ್ನುವರು. ಈ ಘಟ್ಟ ಹಾಕುವ ಪದ್ಧತಿ ಝೆಂಡೆ ಕುರುಬರ ಕೆಲವೊಂದು ಬೆಡಗಿನವರು ಕಟ್ಟುನಿಟ್ಟಾಗಿ ಆಚರಿಸುತ್ತಾರೆ. ಮನೆಯ ಯಜಮಾನ ಮತ್ತು ಯಜಮಾನಿ ಒಂದ್ಹೊತ್ತು ಇದ್ದು ಲಕ್ಷ್ಮಿ ಮುಂದಿರುವ ನಂದಾದೀವಿಗೆ ಆರದಂತೆ ಹಗಲು ರಾತ್ರಿ ಕಾಯುತ್ತಾರೆ. ಕೆಲವು ಒಂಬತ್ತು ದಿನಗಳವರೆಗೆ ರಾತ್ರಿ ಬೆಳತನಕ ಡೊಳ್ಳಿನ ಹಾಡಿನ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಾರೆ. ಮಣ್ಣಿನ ಪಾತ್ರೆಯಲ್ಲಿದ್ದ ಸಸಿಗಳು ಎತ್ತರೆತ್ತರ ಬೆಳೆಯಲೆಂದು ಆಶಿಸುತ್ತಾರೆ. ನಂದಾದೀವಿಗೆ ಕೆಡಕಾಗುತ್ತದೆ ಎಂಬ ಬಲವಾದ ನಂಬಿಕೆಯಿಂದ ಹಗಲು ರಾತ್ರಿ ಒಂಬತ್ತು ದಿನಗಳವರೆಗೆ ಅದನ್ನು ಕಾಯುತ್ತಾರೆ.

ದೀಪಾವಳಿ ಪಾಡ್ಯೆ ಬರುವುದಕ್ಕಿಂತ ಮೊದಲನೆಯ ಐದು ದಿನ ಸೆಗಣಿಯಲ್ಲಿ ಪಾಂಡವರನ್ನು ಮಾಡಿ ಪೂಜಿಸಿ, ನರಕ ಚತುರ್ದಶಿಯ ದಿನದಂದು ಮನೆಯವರೆಲ್ಲರೂ ಎರೆದುಕೊಂಡು ಮನೆಯ ಒಳಗಡೆ ಇರುವ ಈ ಪಾಂಡವರನ್ನು ಮನೆಯ ಮಾಳಿಗೆಯ ಮೇಲೆ ಒಯ್ದು ಉತ್ತರಾಣಿಯ ಕಡ್ಡಿಗಳನ್ನು ಅವುಗಳ ತಲೆಯ ಮೇಲೆ ಚುಚ್ಚಿ ಹೊನ್ನಾವರಿಯ ಹೂವುಗಳಿಂದ ಶೃಂಗರಿಸಿ ಮನೆಯ ಕುಂಬಿಯ ಮೇಲೆ ಸಾಲಾಗಿ ಇಟ್ಟು ಪೂಜಿಸಿ ಎಡಿಯನ್ನು ಹಿಡಿದು ಸಂಭ್ರಮಿಸುತ್ತಾರೆ. ದೀಪಾವಳಿಯ ಪಾಡ್ಯೆಯಂದು ಮನೆಯಲ್ಲಿ ಕುರಿ ಇದ್ದವರು ತಮ್ಮ ಹಟ್ಟಿ (ದಡ್ಡಿ)ಯಲ್ಲಿ ಐದು ಜೋಳದ ದಂಟಿನ ಗುಡಿಸಲು ಹಾಕಿ, ಅದರ ಕೆಳಗೆ ಕರಿಕಂಬಳಿಯ ಗದ್ದುಗೆಯನ್ನು ಹಾಕಿ ಅದರ ಮೇಲೆ ಪಂಚ ಪಾಂಡವರಿಗೆ ಸುಣ್ಣಕ್ಯಾಮಿ ಮತ್ತು ಕರಿಬುಕಿಟನ್ನು ಹಚ್ಚಿ, ದಂಡೆಯ ಚೆಂಡು ಹೂವುಗಳಿಂದ ಶೃಂಗರಿಸಿ, ಹಟ್ಟಿಯ ಹೊರಗಡೆ ಬಯಲಲ್ಲಿದ್ದ ಕುರಿಗಳಿಗೆ ಬಂಡಾರ ಕುಂಕುಮ ಬೊಟ್ಟುಗಳನ್ನಿಟ್ಟು ಪೂಜಿಸುತ್ತಾರೆ. ಈ ಪೂಜೆ ಮುಗಿದ ನಂತರ ಕುರಿಕಾಯುವ ತಮ್ಮ ಅಥವಾ ಅಣ್ಣ  ಬಂದು ಗಂಗಾಳವನ್ನು ತೆಗೆದುಕೊಂಡು ಅದನ್ನು ಬಾರಿಸುತ್ತಾರೆ. ಆ ವೇಳೆಯಲ್ಲಿ ಹಬ್ಬಕ್ಕೆಂದು ಬಂದ ಅಕ್ಕ-ತಂಗಿಯರು ಬೆದರಿ ಓಡುವ ಕುರಿಗಳನ್ನು ಹಿಡಿಯುತ್ತಾರೆ. ಯಾರು ಎಷ್ಟು ಕುರಿಗಳನ್ನು ಹಿಡಿಯುತ್ತಾರೋ ಆ ಕುರಿಗಳು ಅವರಿಗೆ ಸೇರಿದ್ದು, ಆದರೆ ಆ ಕುರಿಗಳನ್ನು ಅವರು ತಮ್ಮ ಗಂಡನ ಮನೆಗೆ ಒಯ್ಯಲಾರದೆ ಅವುಗಳನ್ನು ಅವರ ಹಿಂಡಿನಲ್ಲಿಯೇ ಬಿಟ್ಟು ಹೋಗುತ್ತಾರೆ. ಮುಂದೆ  ಆ ಕುರಿಗಳಿಂದ ಬಂದ ಹಣವಾಗಲಿ ಇಲ್ಲ ಮರಿಗಳಾಗಲಿ ಎಲ್ಲವನ್ನು ನ್ಯಾಯವಾಗಿ ಅವರಿಗೆ ಒಪ್ಪಿಸಬೇಕು. ಒಂದು ವೇಳೆ ನಿಮ್ಮ ಕುರಿಗಳು ಬ್ಯಾನಿ ರೋಗ ಬಂದು ಸತ್ತು ಹೋದವು ಎಂದು ಸುಳ್ಳು ಹೇಳಿದರೆ ಅವರು ಏಳಿಗೆ ಆಗಲಾರರು ಎಂಬ ಬಲವಾದ ನಂಬಿಕೆ ಇವರಲ್ಲಿದೆ. ಕುರಿಗಾರರ ದಡ್ಡಿಯೆಂದರೆ ಲಕ್ಷ್ಮಿಯ ವಾಸವೆಂದು ನಂಬಿರುವ ಇವರು ದೀಪಾವಳಿಯ ಹಬ್ಬ ಮುಗಿಯುವವರೆಗೂ ಮನೆಯಲ್ಲಿಯ ಸೆಗಣಿಯನ್ನು ಹೊರಗೆ ಕೊಡುವುದಿಲ್ಲ. ಹಾಗೆ ಈ ಹಬ್ಬವನ್ನು ಹಟ್ಟಿ ಹಬ್ಬವೆಂತಲೂ ಕೂಡ ಕರೆಯುತ್ತಾರೆ. ಇನ್ನುಳಿದ ಹಬ್ಬಗಳನ್ನು ಇವರು ಇತರೆ ಸಮುದಾಯದವರಂತೆಯೇ ಆಚರಿಸುತ್ತಾರೆ.

ಜನನ, ಮರಣ, ಮದುವೆ ವಿಧಿ ಸಂಸ್ಕಾರ

ಮಗು ಹುಟ್ಟಿದ ಹನ್ನೆರಡರಿಂದ ಹದಿನೈದು ದಿನಗಳವರೆಗೆ ಸೂತಕವೆಂದು ಭಾವಿಸುವರು. ಮಗು ಹುಟ್ಟಿ ಐದನೆಯ ದಿವಸಕ್ಕೆ ಐದೇಸಿ ಎಂದು ಮಾಡುವರು. ಅಂದರೆ ಐದರಿಂದ ಎಂಟು ವರ್ಷ ತುಂಬಿದ ಐದು ಹುಡುಗರನ್ನು ಕರೆತಂದು ಮನೆಯ ಪಡಸಾಲೆಯಲ್ಲಿ ಕರಿಕಂಬಳಿ ಹಾಸಿ, ಅವರನ್ನು ಕುಳ್ಳಿರಿಸಿ ಅವರ ನೆತ್ತಿಗೆ ಕೊಬ್ಬರಿ ಎಣ್ಣೆಯನ್ನು ಹಾಕಿ, ಗಲ್ಲಕ್ಕೆ ನೀರಿನಲ್ಲಿ ಕೊಬ್ಬರಿ, ಅರಿಸಿಣ ಕೊಂಬು, ಬೆಲ್ಲದಚೂರು, ಉತ್ಪತ್ತಿ ಇವುಗಳಲ್ಲಿ ಯಾವುದಾದರೂ ಐದನ್ನು ಇಟ್ಟು ಉಡಿ ತುಂಬುವರು. ಹೀಗೆ ಉಡಿ ತುಂಬುವಾಗ ಮಗುವನ್ನು ಅವರ ಮುಂದೆ ಇಟ್ಟಿರುತ್ತಾರೆ. ನಂತರ ಅವರಿಗೆ ಊಟ ಮಾಡಿಸಿ ಕಳಿಸುವರು. ಇದನ್ನೇ ಶೆಟಿಗೆವ್ವನ ಪೂಜೆಯೆಂದು ಕೂಡ ಕರೆಯುವರು. ಈ ಪೂಜೆಯ ದಿನದಂದು ಶೆಟಿಗೆವ್ವ ಬಂದು ಆ ಮಗುವಿನ ಹಣೆ ಬರಹವನ್ನು ಬರೆಯುತ್ತಾಳೆ ಎಂಬ ಬಲವಾದ ನಂಬಿಕೆ ಇವರಲ್ಲಿದೆ. ಹನ್ನೆರಡು ಇಲ್ಲವೆ ಹದಿನೈದನೆಯ ದಿನಕ್ಕೆ ತಮ್ಮ ಕುಲಬಾಂಧವರೆಲ್ಲರನ್ನು ಕರೆದು ಮಗುವಿನ ನಾಮಕರಣ ಮಾಡುವರು. ನಾಮಕರಣವನ್ನು ಮಗುವಿನ ಸೋದರತ್ತೆಯೇ ಮಾಡಬೇಕು. ಒಂದು ಒಳ್ಳೆಯ ಶುಭದಿನದಂದು ತಮ್ಮ ಮನೆದೇವರ  ಎದುರಿನಲ್ಲಿ ಮಗುವಿಗೆ ಒಂದು ವರ್ಷ ತುಂಬುವುದರೊಳಗೆ ಜವಳವನ್ನು ತೆಗೆಸುತ್ತಾರೆ. ಹೀಗೆ ಜವಳವನ್ನು ತೆಗೆಯುವಾಗ ನೆತ್ತಿಯ ಮೇಲಿನ ಜವಳವನ್ನು ಬಿಟ್ಟು ಉಳಿದ ಹುಟ್ಟು ಕೂದಲನ್ನು ತೆಗೆಯುತ್ತಾರೆ. ಅಲ್ಲದೆ ಬ್ರಾಹ್ಮಣರಂತೆ ಜುಟ್ಟವನ್ನು ಸಹ ಬಿಡುವುದುಂಟು. ಈ ಜುಟ್ಟನ್ನು ಬಿಡುವ ಸಂಪ್ರದಾಯ ಕುಳೆಕಾರ ಬೆಡಗದವರಲ್ಲಿ ಮಾತ್ರ ಕಂಡುಬರುತ್ತದೆ.

ಕುರುಬರ ಇತರ ಸಮುದಾಯದಂತೆ ಇವರಲ್ಲಿಯೂ ಶವಸಂಸ್ಕಾರ ವಿಧಿಗಳು ಒಂದೇ ತೆರನಾಗಿದ್ದರೂ, ಇವರಲ್ಲಿ ಶವವನ್ನು ಸಿದಿಗೆಯ ಮೇಲೆ ಕುಳ್ಳಿರಿಸದೇ ಮಲಗಿಸಿಕೊಂಡು ಹೋಗಿ ಸುಡುತ್ತಾರೆ. ಸತ್ತವನ ಹಿರಿಯ ಮಗ ಇಲ್ಲವೆ ಅವನಿಗೆ ಗಂಡುಮಕ್ಕಳು ಇಲ್ಲದ ವೇಳೆಯಲ್ಲಿ ತಮ್ಮನ ಅಥವಾ ಅಣ್ಣನ ಗಂಡು ಮಗ ಬೆಂಕಿ ಇಡಬೇಕು. ಬೆಂಕಿ ಇಡುವವನ ಹೆಗಲ ಮೆಲೆ ನೀರು ತುಂಬಿದ ಬಿಂದಿಗೆ ಮತ್ತು ಬಲಗೈಯಲ್ಲಿ ಕಿಚ್ಚವನ್ನು ಹಿಡಿದುಕೊಂಡು ಕಟ್ಟಿಗೆಯ ಮೇಲೆ ಅಂಗಾತ ಮಲಗಿಸಿದ  ಶವವನ್ನು ಮೂರು ಸುತ್ತು ತಿರುಗಿ ಬೆಂಕಿ ಇಟ್ಟು ಮರಳಿ ನೋಡದೆ ಮುಂದೆ ಹೋಗಬೇಕು. ಮೂರು ಸುತ್ತು ಸುತ್ತುವಾಗ ಬಿಂದಿಗೆಗೆ ಒಂದೊಂದು ಸುತ್ತು ಸುತ್ತಿದಾಗಲು ಒಂದೊಂದು ಸಣ್ಣ ಕಲ್ಲಿನಿಂದ ತೂತನ್ನು ಮಾಡುತ್ತಾರೆ. ಕೊನೆಯ ಸುತ್ತಿಗೆ ಹೆಗಲ ಮೇಲಿನ ಬಿಂದಿಗೆಯನ್ನು ಹಿಂದಕ್ಕೆ ಬಿಟ್ಟು ಮುಂದೆ ಹೋಗಬೇಕು. ಅದರ ಮರುದಿನ ಬೂದಿಗೂಡಿಸುವ ಕಾರ್ಯ ಅಂದರೆ ಬಂಧು-ಬಾಂಧವರೆಲ್ಲರೂ ಕೂಡಿಕೊಂಡು ಬೆಳಗಿನ ಜಾವ ಶವ ಸಂಸ್ಕಾರ ಸ್ಥಳಕ್ಕೆ ಹೋಗಿ. ಮೃತನ ಅಸ್ಥಿಯನ್ನು ಸಂಗ್ರಹಿಸಿ ಮಡಿಕೆಯಲ್ಲಿ ಹಾಕಿ ಹೊಳೆಯಲ್ಲಿ ವಿಸರ್ಜಿಸುವುದಕ್ಕಿಂತ ಮುಂಚೆ, ಅದರಲ್ಲಿಯ ಕೆಲವು ಅಸ್ತಿಗಳನ್ನು ತೆಗೆದುಕೊಂಡು ಹೊಲದಲ್ಲಿರುವ ಆರಿ ಅಥವಾ ಬಣ್ಣಿಗಿಡದ ಬಡ್ಡಿಯ ಪಕ್ಕದಲ್ಲಿ ಹುಗಿದು, ಅದರ ಮೇಲೆ ಮೃತರ ಹೆಸರಿನಲ್ಲಿ ಒಂದು ಶ್ರಾದ್ಧದ ಕಲ್ಲನ್ನಿಟ್ಟು ಬರುತ್ತಾರೆ. ಮುಂದೆ ಆ ಶ್ರಾದ್ಧದ ಕಲ್ಲುಗಳನ್ನು ಅವರ ಹೆಸರಿನಲ್ಲಿ ಪಕ್ಷಮಾಳ ಮತ್ತು ಹಬ್ಬ-ಹರಿದಿನಗಳಲ್ಲಿ ಪೂಜಿಸುವರು. ನಂತರ ಪಿಂಡದಾನ ವಿಧಿ. ಇಲ್ಲಿ ಮೃತನು ಇಷ್ಟಪಡುತ್ತಿದ್ದ ಎಲ್ಲ ಆಹಾರ ಪದಾರ್ಥಗಳನ್ನು ಮಾಡಿಕೊಂಡು ಬಂದು ಎಡೆಯಲ್ಲಿ ಇಟ್ಟು ಶವಸಂಸ್ಕಾರದ ಸ್ಥಳದಲ್ಲಿಟ್ಟು ದೂಪ ಹಾಕಿ ಬಂದವರೆಲ್ಲ ದೂರ ಸರಿದು ನಿಂತು, ಮೃತನು ಕಾಗೆಯ ರೂಪದಲ್ಲಿ ಬಂದು ಭೋಜನವನ್ನು ಸ್ವೀಕರಿಸುವಂತೆ ವಿನಂತಿಸಿಕೊಳ್ಳುತ್ತಾರೆ. ಆ ವೇಳೆಯಲ್ಲಿ ಕಾಗೆಗಳು ಬಂದು ಎಡೆಯನ್‌ಉ ಸ್ವೀಕರಿಸಿದರೆ ಸತ್ತವನ ಆತ್ಮಕ್ಕೆ ಶಾಂತಿ ದೊರಕಿತು ಎಂದು ಭಾವಿಸುತ್ತಾರೆ. ಒಂದು ವೇಳೆ ಸ್ವೀಕರಿಸದಿದ್ದರೆ ಆತನ ಆತ್ಮಶಾಂತಿಗಾಗಿ ಅವನ ಇಷ್ಠಾರ್ಥಗಳಂತೆ ನಡೆದುಕೊಳ್ಳುವುದಾಗಿ ಬೇಡಿಕೊಂಡು ಧೂಪ ಹಾಕಲು ಕಾಗೆಗಳು ಬಂದು ಖಂಡಿತವಾಗಿಯೂ ಏಡೆಯನ್ನು ಸ್ವೀಕರಿಸಿ ಹೋಗುತ್ತವೆ. ಇದರಿಂದ ಮೃತನ ಆತ್ಮಕ್ಕೆ ಶಾಂತಿ ದೊರಕಿತು ಎಂದು ಭಾವಿಸುತ್ತಾರೆ. ನಂತರ ಐದು, ಒಂಬತ್ತು ಇಲ್ಲವೆ ಹನ್ನೊಂದನೆಯ ದಿನಕ್ಕೆ ದಿನಕರ್ಮವನ್ನು ಮಾಡುತ್ತಾರೆ. ಅಂದು ಸತ್ತ ವ್ಯಕ್ತಿಯ ಹೆಸರಿನಲ್ಲಿ ಬೆಳ್ಳಿಯ ಮುಖವನ್ನು ಮಾಡಿಸಿ, ಸತ್ತಾಗ ಶವವನ್ನು ಕುಳ್ಳಿರಿಸಿದ್ದ ಸ್ಥಳದಲ್ಲಿ ಇಟ್ಟು ಅದಕ್ಕೆ ಹೊಸ ಬಟ್ಟೆಗಳನ್ನು ಏರಿಸಿ ಅದರ ಮುಂದೆ ತುಂಬಿದ ಚರಿಗೆಯನ್ನಿಟ್ಟು ಪೂಜೆ ಮಾಡಿ ಎಡೆಯನ್ನಿಟ್ಟು ದೂಪವನ್ನು ಹಾಕಿ ಆರತಿಯನ್ನು ಮಾಡಿ ಮನೆಯವರೆಲ್ಲ ಮನೆಯಿಂದ ಹೊರಗೆ ಬರುತ್ತಾರೆ. ನಂತರ ಶವ ಹೊರಲು ಮೊದಲು ಹೆಗಲು ಕೊಟ್ಟವರು ಒಳಗೆ ಹೋಗಿ ಮುಖದ ಮುಂದಿಟ್ಟ ಒಂದೆ ಎಡೆಯನ್ನು ತೆಗೆದುಕೊಂಡು ನಾಲ್ವರು ಕೂಡಿಕೊಂಡು ಊಟಮಾಡಿ ಅದೇ ಎಡೆಯಲ್ಲಿ ಕೈ ಕಾಲು ತೊಳೆದುಕೊಂಡು ಎಲೆ ಅಡಿಕೆ ತಿಂದು ಅದರಲ್ಲಿ ಉಗುಳಿ ಹೊರಗೆ ಬರುವವರೆಗೂ ಮನೆಯವರಾಗಲಿ ಬಂಧು-ಬಾಂಧವರಾಗಲಿ  ಅವರೊಂದಿಗೆ ಮಾತನಾಡುವ ಹಾಗಿಲ್ಲ. ಇವರು ಉಂಡು ಹೋದ ನಂತರ ಉಳಿದ ಬಂದುಬಾಂಧವರು ದೂಪ ಹಾಕಿ ಊಟ ಮಾಡಿ ಹೋಗುತ್ತಾರೆ. ಕಿಚ್ಚ ಹಿಡಿದವನ ಮುಂಡನವನ್ನು ಅಂದೆ ಮಾಡಲಾಗುತ್ತದೆ. ಇದಕ್ಕೆ ತಲೆ ಕೊಡುವುದು ಎನ್ನುತ್ತಾರೆ. ಮರುದಿನ ಅವನ ಹೆಸರಿನಲ್ಲಿ ಮಾಡಿಸಿದ ಮುಖವನ್ನು ಜಗಲಿಯ ಮೇಲಿಟ್ಟು ಪೂಜಿಸಿ ದೇವರ ಸ್ಥಾನಮಾನವನ್ನು ನೀಡಿ ದೇವರಾದ್ನಪಾ ಎನ್ನುತ್ತಾರೆ. ಮುಂದೆ ಪ್ರತಿಮಾಳ ಪಕ್ಷಗಳಂದು ಅವರ ಹೆಸರಿನಲ್ಲಿ ಆ ಮುಖವನ್ನು ಪೂಜಿಸಿ ಪ್ರತ್ಯೇಕ ಎಡೆಯನ್ನು ನೈವೇದ್ಯ ಮಾಡುತ್ತಾರೆ. ಇವರ ಹೆಸರಿನಲ್ಲಿ ಒಂದ್ಹೊತ್ತಿಟ್ಟವರು ಈ ಎಡೆಯನ್ನು ಸ್ವೀಕರಿಸುತ್ತಾರೆ. ಹೀಗೆ ಈ ಎಲ್ಲ ಪ್ರಕ್ರಿಯೆಗಳು ವ್ಯಕ್ತಿಯ ಮರಣದ ನಂತರ ನಡೆಯುವ ವಿಧಿಗಳಾಗಿವೆ.

ಝೆಂಡೆ ಕುರುಬರು ತಮ್ಮನ್ನು ಉತ್ತಮ ವಂಶದವರು, ಉತ್ತಮ ಗೋತ್ರದವರು, ಉತ್ತಮ ವರ್ಣದವರು ಎಂದು ಹೇಳಿಕೊಳ್ಳುತ್ತಾರೆ. ಅಗ್ನಿ, ಸೂರ್ಯ, ಚಂದ್ರ, ಸೋಮ ಮತ್ತು ಯದು ವಂಶಗಳನ್ನು, ಪುಂಡಲೀಕ, ಭಾರದ್ವಾಜ, ಕಶ್ಯಪ, ಕೌಂಡಿಲ್ಯ, ಗೌತಮ ಮುಂತಾದ ಗೋತ್ರಗಳನ್ನು ತಮ್ಮ ವಂಶಗಳ ಜೊತೆಯಲ್ಲಿ ಹಚ್ಚಿಕೊಳ್ಳುತ್ತಾರೆ. ಅಲ್ಲದೆ ಲೌವಚರ, ಥೋರಾತ್‌, ಕೊಳೆಕರ, ಸೋಳಂಕರ, ದೇವಕತೆ, ಹಾಲಿನವರ, ಕೋಕರೆ, ಜಾನಕರ, ಕಾಳೆ, ಗಡದೆ, ಲೋಕರೆ, ದಾಯಗೋಡೆ ಮುಂತಾದ ಕುಳಿಗಳನ್ನು, ಈ ಕುಳಿಗಳಿಗೆ ಮತ್ತೆ ಉಪನಾಮಗಳನ್ನು ಸಹ ಹಚ್ಚಿಕೊಳ್ಳುತ್ತಾರೆ. ಈ ಉಪನಾಮಗಳನ್ನು ಇವರು ತಮ್ಮ ಬೆಡಗುಗಳೆಂದು ಹೇಳಿಕೊಳ್ಳುತ್ತಾರೆ.

ಮನೆ ದೇವರು ಹಾಗೂ ಬೆಡಗುಗಳು ಒಂದೇ  ಆದರೆ ಮದುವೆ ಮಾಡಲು ಅಂದರೆ ಸಂಬಂಧ ಬೆಳೆಸಲು ಬರುವುದಿಲ್ಲ. ಹೆಚ್ಚಾಗಿ ರಕ್ತ ಸಂಬಂಧದಲ್ಲಿಯೇ ಮದುವೆಗಳು  ನಡೆಯುವುದುಂಟು. ಸೋದರತ್ತೆಯ ಇಲ್ಲವೆ ಅಕ್ಕನ ಮಗಳನ್ನು ಮದುವೆ ಆಗುತ್ತಾರೆ. ಇಲ್ಲವೆ ಬೇರೆ ಬೆಡಗಿ ಹೆಣ್ಣು ಮಕ್ಕಳನ್ನು ಮದುವೆಯಾಗುತ್ತಾರೆ. ಮದುವೆಯ ಕಾರ್ಯವು ಮೊದಲು ಮೂರು ದಿನಗಳವರೆಗೆ ನಡೆಯುತ್ತಿದ್ದವು. ಮೊದಲನೆಯ ದಿನ ಬಷ್ಟಗಿ ಕಾರ್ಯ ಅಂದರೆ ನಿಶ್ಚಿತಾರ್ಥ, ನಂತರ ಮನೆದೇವರ ಆಧಾರದ ಮೇಲೆ ದೇವತಾ ಕಾರ್ಯಗಳನ್ನು ಮಾಡುತ್ತಾರೆ. ಮನೆದೇವರು ಯಲ್ಲಮ್ಮ, ತುಳಜಮ್ಮ, ಜಕ್ಕವ್ವ, ಎಕ್ಕವ್ವ, ಮಾಯವ್ವ ಆಗಿದ್ದರೆ ಗೊಂದಲ ಎನ್ನುವ ದೇವತಾ ಕಾರ್ಯವನ್ನು ಮಾಡುತ್ತಾರೆ. ಮದುವೆ ಮನೆಯ ಯಜಮಾನ ಗೊಂದಲಿಗರ ಮನೆಗೆ ಹೋಗಿ ಎಲೆಅಡಿಕೆ ವಿಳ್ಯೆ ಕೊಟ್ಟು ಅವರನ್ನು ಒಪ್ಪಿಸಿ ಅವರ ಮನೆಯಿಂದ ಒಂದು ಕವಡೆಯ ಸರವನ್ನು ಮನೆಗೆ ತರುತ್ತಾನೆ. ಅದರಂತೆ ಗೊಂದಲಿಗರು ಮದುವೆಯ ಮೊದಲ ದಿನ ಬಂದು ಸಂಜೆ ಸಾರಿಸಿದ ನೆಲದ ಮೇಲೆ ಚೌರಂಗ ಹಾಕಿ ಎಂಟು ದಿಕ್ಕುಗಳನ್ನು ಗೊತ್ತು ಮಾಡುತ್ತಾರೆ. ದಂಟು, ಕಬ್ಬು, ಬಾಳೆಗಿಡಗಳಿಂದ ಬನ ನಿರ್ಮಿಸಿ ಮಧ್ಯದಲ್ಲಿ ಚೌರಂಗದ ಮೇಲೆ ಮಣೆ ಹಾಕಿ ಕಲಶ ಇಡುತ್ತಾರೆ. ತಾಮ್ರದ ಚರಿಗೆಯಲ್ಲಿ ನೀರು ಹಾಕಿ, ನೀರಿನಲ್ಲಿ ಒಂದು ಗಟ್ಟಿ ನಾಣ್ಯವನ್ನು ಹಾಕಿ, ಚರಿಗೆಯ ಬಾಯಿಗೆ ಐದು ವೀಳ್ಯದೆಲೆಗಳನ್ನಿಟ್ಟು, ಟೆಂಗಿನಕಾಯಿಯನ್ನು ಇರುಸುವರು. ಈ ಕಾಯಿಗೆ ನತ್ತು ಇಡಿಸಿ, ಅರಿಸಿಣ ಕುಂಟುಮ ಹಚ್ಚಿ ಚರಿಗೆಯ ಕಂಠಕ್ಕೆ ಬಂಗಾರದ ಸರಗಳನ್ನು ಹಾಕುವರು, ಇದೇ ಕಲಶ. ಈ ಕಲಶವೆ ಶಕ್ತಿದೇವಿಯ ಪ್ರತೀಕ. ದೂರದಲ್ಲಿ ದೀವಟಿಗೆಯನ್ನು ಉರಿಸುತ್ತಾರೆ. ಅದೇ ವೇಳೆ ಆರತಿ ಉರಿಯುತ್ತಿರಬೇಕು.[7]ದೀವಟಿಗೆ ಮತ್ತು ಆರತಿಗೆ ಎಣ್ಣೆ ಹಾಕುವವನಿಗೆ ದೀವಟಿಗೆ ಮಾಮಾ ಎನ್ನುವರು. ಕಲಶಕ್ಕೆ ಹೂವು ಏರಿಸಿ ತಮ್ಮ ಸಂಬಾಳ, ತುಂತುಣಿ ವಾದ್ಯಗಳೊಂದಿಗೆ ದೇವಿಯ ಸ್ತುತಿಯ ಮಾಡಿ ರಾತ್ರಿ ಬೆಳತನಕ ದೇವಿ ಮಹಿಮೆಯ ಸುಂದರ ಕಥೆಗಳನ್ನು ಹೇಳುತ್ತಾರೆ. ಬೆಳಗಿನ ಜಾವದಲ್ಲಿ ಮಂಗರಾತಿಯ ಪದವನ್ನು ಹಾಡಿ ದೇವತ ಕಾರ್ಯವನ್ನು ಮುಗಿಸವರು.

ಮೈಲಾರ ಮನೆದೇವರು ಇರುವವರು ಬೆಳಕು ಹೊರಡಿಸುವ ಇಲ್ಲವೆ ಹಡ್ಡಲಗಿ ಹೊರಸು ತುಂಬುವ ದೇವತಾ ಕಾರ್ಯವನ್ನು ಮಾಡುತ್ತಾರೆ. ಮದುವೆಯ ಮೊದಲನೆಯ ದಿನ ಸಂಜೆ ಗೊರಪ್ಪಗಳು ಮದುವೆಯ ಮನೆಗೆ ಬಂದು ಮನೆಯ ದೇವರ ಕೋಣೆಯಲ್ಲಿರುವ ಜಗಲಿಯನ್ನು ಹೂವಿನಿಂದ ಶೃಂಗರಿಸಿ ಮೈಲಾರ ದೇವರ ಹಿತ್ತಾಳೆಯ ಪ್ರತಿಮೆಯನ್ನು ಪೂಜೆ ಮಾಡಿ ಅಲ್ಲಿಂದ ದೀವಟಿಗೆಯನ್ನು ಹಚ್ಚಿಕೊಂಡು ಏಳುಕೋಟೆ ಏಳುಕೋಟೆ ಅನ್ನುತ್ತ ಢಮರು ಮತ್ತು ಗಂಟೆಗಳನ್ನು ಬಾರಿಸುತ್ತಾ ಮನೆಯ ಮುಂದಿನ ಹಂದರದಲ್ಲಿಯ ಹೋಳಿಗೆ, ಕಡಬು ತುಂಬಿದ ಹೊರಸಿನ ಸಮೀಪಕ್ಕೆ ಬಂದು ಅದನ್ನು ಐದು ಸುತ್ತು ಹಾಕಿ ದೀವಟಿಗೆಯನ್ನು ಒಬ್ಬ ಗೊರಪ್ಪ ಹಿಡಿದುಕೊಂಡು ನಿಲ್ಲುತ್ತಾನೆ. ನಾಯಿಯಂತೆ ಬಾಗಿ ಹೊರಸಿನ ಮೆಲಿರುವ ಹೋಳಿಗೆ ಕಡಬುಗಳನ್ನು ತಿನ್ನುತ್ತಾರೆ. ತಿಂದ ನಂತರ ತೀವ್ರವಾಗಿ ಢಮರುಗಳನ್ನು ಬಾರಿಸುತ್ತಾ ಮೈಯಲ್ಲಿ ದೇವರು ತುಂಬಿದವರಂತೆ ಆವೇಶ ಭರಿತವಾಗಿ ಕುಣಿಯುತ್ತಾರೆ. ಆ ವೇಳೆಯಲ್ಲಿ ಅಕ್ಕ-ಪಕ್ಕದಲ್ಲಿ ನಿಂತವರು ಗಟ್ಟಿಯಾಗಿ ರೂಪಾಯಿಯನ್ನು ಅವರಿಗೆ ತೋರಿಸಿ ನೆಲದಲ್ಲಿ ಅದನ್ನು ಮುಚ್ಚಿಡುತ್ತಾರೆ. ಗೊರಪ್ಪಗಳು ಕುಣಿಯುತ್ತ ನೆಲದಲ್ಲಿದ್ದ ರೂಪಾಯಿಯನ್ನು ನಾಯಿಯಂತೆ ಬಾಗಿ ಮೂಸಿ ನೋಡಿ ಬಾಯಿಂದ ಅದನ್ನು ತೆಗೆದುಕೊಳ್ಳಬೇಕು. ಹೀಗೆ ಹೊರಸಿನ ಕಾರ್ಯ ಮುಗಿದ ನಂತರ ಗೊರಪ್ಪಗಳು ಢಮರು ಮತ್ತು ಗಂಟೆಯ ಲಯದೊಂದಿಗೆ ರಾತ್ರಿ ಬೆಳತನಕ ಮೈಲಾರ ದೇವರ ಮಹಿಮೆಯನ್ನು ಬಿಂಬಿಸುವ ರಸವತ್ತಾದ ಹಾಡುಗಳನ್ನು ಹಾಡುತ್ತಾರೆ.

ಧರೆದೇವರು, ರೇವಣಸಿದ್ದ, ಮಾಳಿಂಗರಾಯ ಮನೆದೇವರಾಗಿದ್ದರೆ. ‘ಜಕನೇರಿ ಕೊಡ’ದ ದೇವತಾ ಕಾರ್ಯವನ್ನು ಮಾಡುವರು. ಈ ದೇವತ ಕಾರ್ಯಕ್ಕೆ ಏಳು ಮಂದಿ ಮುತ್ತೈದೆಯರು ಮತ್ತು ಒಬ್ಬ ಗಂಡ ಸತ್ತವಳಿಗೆ (ವಿಧವೆಗೆ) ಒಂದ್ಹೊತ್ತಿಟ್ಟು, ಕುಂಬಾರನಿಗೆ ಹಣ ಕೊಟ್ಟು ಏಳು ಕೊಡಗಳನ್ನು ತೈಯಾರಿಡಲು ಹೇಳಿ, ಈರಗಾರರಿಗೆ ಮತ್ತು ಡೊಳ್ಳಿನ ಮೇಳದವರಿಗೆ ವೀಳ್ಯವ ಕೊಟ್ಟ ಮದುವೆಯ ಮೊದಲನೆಯ ದಿನ ನಡೆಯುವ ದೇವತಾ ಕಾರ್ಯಕ್ಕೆ ಇವರೆಲ್ಲರನ್ನು ಮದುವೆಯ ಮನೆಯವರು ಆಹ್ವಾನಿಸುತ್ತಾರೆ. ಅದರಂತೆ ಇವರೆಲ್ಲರೂ ಮದುವೆಯ ಹಂದರಕ್ಕೆ ಬಂದು ಊದಿಸುತ್ತ ಬಾರಿಸುತ್ತ ಕುಂಬಾರನ ಮನೆಗೆ ಹೋಗಿ ಮಣ್ಣಿನ ಏಳು ಕೊಡಗಳನ್ನು ಪೂಜಿಸಿ ಮದುವೆಯ ಮಂಟಪಕ್ಕೆ ತರುತ್ತಾರೆ. ಅಲ್ಲಿ ಏಳು ಜನ ಮುತ್ತೈದೆಯರು ತಮ್ಮ ಕೊಡಗಳನ್ನು ಸುಣ್ಣ ಕ್ಯಾಮಿಗಳಿಂದ ಚಿತ್ತಾರ ಬರೆದು ಶೃಂಗರಿಸುತ್ತಾರೆ. ಇದಾದ ನಂತರ ಏಳು ಮುತ್ತೈದೆಯರು ತಮ್ಮ ತಮ್ಮ ಕೊಡಗಳನ್ನು ತಲೆಯ ಮೇಲೆ ಹೊತ್ತುಕೊಂಡು ಮತ್ತೆ ಉದುತ್ತಾ, ಬಾರಿಸುತ್ತ ಹೊಳೆಗೆ ಬಂದು ಹೊಳೆಗಂಗವ್ವನ ಉಡಿತುಂಬಿ ಕೊಡದಲ್ಲಿ ನೀರನ್ನು ತುಂಬಿಕೊಂಡು ಮದುವೆಯ ಮಂಟಪಕ್ಕೆ ಬರಲು ಸಿದ್ಧರಾಗುತ್ತಾರೆ. ಅದೇ ವೇಳೆಯಲ್ಲಿ ಈರಗಾರರು ಮುಂದೆ ಬಂದು ಡೊಳ್ಳಿನ ಗತ್ತಿಗೆ ಕುಣಿಯುತ್ತಾ ಹರಿತವಾದ ಅಲಗನ್ನು ಎರಡೂ ಕೈಯಿಂದ ಹಿಡಿದು ಈರಾಡಲು ಪ್ರಾರಂಭಿಸುತ್ತಾರೆ. ಈ ದೃಶ್ಯ ತುಂಬಾ ಭಯಾನಕವಾಗಿರುತ್ತದೆ. ಈರಗಾರನು ಹರಿತವಾದ ಅಲಗಿನಿಂದ ಜೋರಾಗಿ ವೀರಾವೇಶದಿಂದ ತನ್ನ ಹೊಟ್ಟೆಗೆ ಬಡೆದುಕೊಳ್ಳುತ್ತಾನೆ. ಈರಗಾರನ ವೀರಾವೇಶ ಎಲ್ಲೆ ಮುಟ್ಟುತ್ತಿದ್ದಂತೆ ಮತ್ತೊಬ್ಬ ಈರಗಾರ ಬಂದು ಅವನನ್ನು ಹಿಡಿಯುತ್ತಾನೆ. ಹೀಗೆ ಈರಾಡುತ್ತ ಮದುವೆಯ ಮಂಟಪವನ್ನು ಪ್ರವೇಶಿಸುವ ವೇಳೆಯಲ್ಲಿ ಕರಾಮಾತಿ ಕಳೆಯಲೆಂದು ಈರಗತ್ತಿಯಿಂದಲೇ ಹರಿಮರಿಯನ್ನು ಹರಿದು ನಂತರ ಕೊಡಗಳನ್ನು ಹೊತ್ತ ಮುತ್ತೈದೆಯರು ಮದುವೆಯ ಮಂಟಪವನ್ನು ಪ್ರವೇಶಿಸಿ ದೇವರ ಮನೆಯ ಜಗಲಿಯ ಮುಂದೆ ತಮ್ಮ ಕೊಡಗಳನ್ನಿಡುತ್ತಾರೆ. ಈ ಕೊಡದಲ್ಲಿರುವ ನೀರನ್ನೇ ಮದುಮಕ್ಕಳಿಗೆ ಸುರಗಿಯ ನೀರನ್ನಾಗಿ ಬಳಸುತ್ತಾರೆ. ಈ ಎಲ್ಲ ಕಾರ್ಯ ಮುಗಿದಿ ನಂತರ ಮುತ್ತೈದೆಯರಿಗೆ ಹೋಳಿಗೆ ಊಟವನ್ನು ಹಾಕಿಸುತ್ತಾರೆ.

ಜಿಜೂರಿ ಖಂಡೋಬಾ ಮನೆದೇವರಿರುವವರು ಈರಮುಖದ ದೇವತಾ ಕಾರ್ಯವನ್ನು ಆಚರಿಸುತ್ತಾರೆ. ಮದುವೆಯ ಮನೆಯವರು ಮೊದಲೆ ಈರಮುಖದ ಸಂಪ್ರದಾಯ ಇರುವವರ ಮನೆಗೆ ಹೋಗಿ ಬೊಟ್ಟು ಕೊಟ್ಟು ಬರುತ್ತಾರೆ. ಅದರಂತೆ ಮದುವೆಯ ಮೊದಲನೆಯ ದಿನ ಸಂಜೆಯ ಹೊತ್ತಿಗೆ ಮದುವೆಯ ಮನೆಗೆ ಎಲ್ಲರೂ ಬರುವಾಗ ಉದ್ದನೆಯ ಬೆತ್ತದ ಬಡಗಿಯನ್ನು ತಂದು ದೇವರ ಜಗಲಿಯ ವೇಳೆ ತಂದಿಟ್ಟು ಮದುವೆಯ ಮಂಟಪದಲ್ಲಿ ಕುಳಿತುಕೊಂಡಿರುತ್ತಾರೆ. ಅಷ್ಟರಲ್ಲಿಯೇ ಮದುಮಗನಿಗೆ ಸ್ನಾನ ಮಾಡಿಸಿ ಧೋತರವನ್ನು ಉಡಿಸಿ ದೇವರ ಮನೆಯ ಜಗಲಿಗೆ ಕರೆದುಕೊಂಡು ಹೋಗಿ ನಿಲ್ಲಿಸುತ್ತಾರೆ. ಅಷ್ಟರಲ್ಲಿ ಬೆತ್ತದ ಬಡಿಗೆಗಳನ್ನು ತಂದವರು ತಮ್ಮ ತಮ್ಮ ಬಡಿಗೆಗಳನ್ನು ತೆಗೆದುಕೊಂಡು ಮನೆಯ ಬಾಗಿಲ ಎದುರು ನಿಲ್ಲುತ್ತಾರೆ. ಇತ್ತ ಮದುಮಗ ಜಗಲಿಯ ಮೇಲೆ ಪೂಜೆಗೊಂಡ ಈರಮುಖವನ್ನು ಹೊಸ ಮೊರದಲ್ಲಿ ಹೊಸ ವಸ್ತ್ರದ ಮೇಲೆ ಇಟ್ಟು, ಎಡಗೈಯ ಮುಂಗೈಯ ಮೇಲೆ ಹಿಡಿದು ಮನೆಯ ಮುಂಬಾಗಿಲಿಗೆ ಬರುವಷ್ಟರಲ್ಲಿ ಅಲ್ಲಿರುವ ಬೆತ್ತ ಹಿಡಿದವರೆಲ್ಲ ಇವನನ್ನು ತಡೆಯುತ್ತಾರೆ. ಆಗ ಇವರನ್ನು ತನ್ನ ಬೆತ್ತದಿಂದ ಹಿಂದೆ ಸರಿಸುತ್ತ ಮದುಮಗ ಮುಂದೆ ಸಾಗಬೇಕು. ಹೀಗೆ ಸಾಗುವಾಗ ಎಡಗೈಯಲ್ಲಿ ಇರುವ ಮೊರದಲ್ಲಿಯ ಈರಮುಖ ಕೆಳಗೆ ಬೀಳದಂತೆ ಕಾಳಜಿವಹಿಸಿ ತನ್ನ ಬೆತ್ತದಿಂದ ವೈರಿಗಳನ್ನು ಒಂದೇ ಕೈಯಿಂದ ಹಿಮ್ಮೆಟ್ಟುವಂತೆ ಬೆತ್ತವನ್ನು ಅವರ ಮೇಲೆ ಬೀಸುತ್ತಾ ಸಾಗಿ, ಊರ ಹನುಮಂತದೇವರ ಗುಡಿಯವರೆಗೆ ತರಬೇಕು. ಅಲ್ಲಿ ದೇವರಿಗೆ ಪೂಜೆ ಸಲ್ಲಿಸಿ ಮತ್ತೆ ವೀರಾವೇಶದಿಂದ ಅವರನ್ನು ಹಿಮ್ಮೆಟ್ಟುತ್ತ ಮನೆಯವರೆಗೆ ತರಬೇಕು. ಹೀಗೆ ನಡೆಯುವ ಈ ಪ್ರಕ್ರಿಯೆ. ಮದುಮಗ ವೈರಿಗಳನ್ನು ಹಿಮ್ಮೆಟ್ಟಿ ತಾನು ಮೆಚ್ಚಿದ ಕನ್ಯೆಯನ್ನು ಗೆದ್ದು ತಂದು ಮದುವೆಯಾದ ಹಿನ್ನೆಲೆಯನ್ನು ಈರಮುಖ ಸಂಪ್ರದಾಯ ಸೂಚಿಸುತ್ತದೆ.

ಬೀರದೇವರು ಅಥವಾ ವೀರಭದ್ರ ಮನೆದೇವರು ಇರುವವರು ಗುಗ್ಗಳ ಕಾರ್ಯವನ್ನು ಮಾಡುತ್ತಾರೆ. ಮದುವೆಯ ಮೊದಲನೆಯ ದಿನ ಬೆಳಗಿನ ಜಾವದಲ್ಲಿ ಮಡಿಯಿಂದ ಗುಗ್ಗಳದ ಎಲ್ಲ ಕಾರ್ಯವನ್ನು ಸಿದ್ಧಗೊಳಿಸಿಕೊಂಡು ಡೊಳ್ಳು ಬಾರಿಸುತ್ತ ಈರ ಹಾಯುತ್ತ ಹೊಳೆಗೆ ಹೋಗಿ ಗುಗ್ಗಳದ ಮಣ್ಣಿನ ಕೊಡಗಳನ್ನು ಪೂಜೆ ಮಾಡಿ ಅವುಗಳನ್ನು ಅಲ್ಲಿಯೆ ಬಿಟ್ಟು ಬಂದು ಹರಿಮರಿಗಳನ್ನು ಹರಿದು ಮತ್ತೆ ಊದಿಸುತ್ತ ಬಾರಿಸುತ್ತ ಮದುವೆಯ ಮಂಟಪಕ್ಕೆ ಬಂದು ಗುಗ್ಗಳ ಕಾರ್ಯವನ್ನು ಮುಗಿಸುತ್ತಾರೆ. ಆದರೆ ಆವತ್ತು ಬೀಗರುಬಿಜ್ಜರು ಬ್ಯಾಟಿಯನ್ನು ಮಾಡಿ ಊಟ ಮಾಡುತ್ತಾರೆ. ಹೀಗೆ ಝೆಂಡೆ ಕುರುಬರಲ್ಲಿ ತಮ್ಮದೇ ಆದ ಮನೆದೇವರ ಮೇಲೆ ವಿಶಿಷ್ಟ ದೇವತಾ ಕಾರ್ಯಗಳು ಕಂಡುಬರುತ್ತವೆ. ದೇವತಾ ಕಾರ್ಯ ಮುಗಿದ ಮರುದಿನ ಸುರಗಿಯನ್ನು ಸುತ್ತಿ ಸುರಗಿ ನೀರನ್ನು ಹಾಕಿ ಮದುಮಕ್ಕಳಿಗೆ ಹೊಸ ಬಟ್ಟೆಗಳನ್ನು ತೊಡಿಸಿ ದೇವರ ಮನೆಯ ದೇವರ ಎದುರಿಗೆ ಇಬ್ಬರಿಗೂ ಮೂರು ಮೂಲಿಯ ಬಾಸಿಂಗಗಳನ್ನು ಕಟ್ಟಿ, ಮನೆದೇವರಿಗೆ ನಮಸ್ಕರಿಸಿ ಮದುವೆಯ ಮಂಟಪಕ್ಕೆ ಕರೆತಂದು ಶಾಸ್ತ್ರೋಕ್ತವಾಗಿ ಅಕ್ಕಿಕಾಳು ಹಾಕುವರು. ಮರುದಿನ ಮದುಮಕ್ಕಳಿಗೆ ಅರಿಷಿಣ ಹಚ್ಚುವ ಕಾರ್ಯ ನಡೆಯುವುದು. ನಂತರ ಮದುಮಕ್ಕಳಿಗೆ ಮೋಜಿನ ಆಟಗಳನ್ನು ಆಡಿಸುವರು. ಆಟಗಳು ಮುಗಿದ ನಂತರ ಬೀಗರು ಮದುವೆಯ ಹಂದರವನ್ನು ತಿರುವಿ ಹಾಕುವುದರೊಂದಿಗೆ ಮದುವೆಯ ಕಾರ್ಯಗಳು ಮುಗಿಯುತ್ತವೆ. ಇತ್ತೀಚಿನ ದಿನಗಳಲ್ಲಿ ಮೂರು ದಿನಗಳವರೆಗೆ ನಡೆಯುವ ಮದುವೆಯ ಕಾರ್ಯಗಳು ಒಂದೆ ದಿನದಲ್ಲಿ ಮುಗಿಯುತ್ತವೆ.

ಉದ್ಯೋಗ ಮತ್ತು ಶಿಕ್ಷಣ

ಕುರಿಸಾಕಾಣಿಕೆ, ಪಶುಸಂಗೋಪನೆ ಹಾಗೂ ವ್ಯವಸಾಯ ಇವರ ಮೂಲ ಉದ್ಯೋಗವಾಗಿವೆ. ತಮ್ಮ ಪೂರ್ವಜರಿಂದ ಬಂದ ನೂರಾರು ಎಕರೆ ಜಮೀನಿನಲ್ಲಿ ತಲೆತಲಾಂತರದಿಂದ ವ್ಯವಸಾಯವನ್ನು ಮಾಡುತ್ತ ಬಂದಂಥ ಇವರು ಆಕಳು ಮತ್ತು ಎಮ್ಮೆಗಳನ್ನು ಸಾಕಿ ಹೈನುಗಾರಿಕೆಯನ್ನು ಮಾಡುತ್ತಿರುವರು. ಇನ್ನೂ ಕೆಲವು ತಮ್ಮ ಮೂಲ ಕಸುಬಾದ ಕುರಿ ಸಾಕಾಣಿಕೆಯನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ವ್ಯವಸಾಯ, ಕುರಿಸಂಗೋಪನೆ ಹಾಗೂ ಹೈನುಗಾರಿಕೆಗಳನ್ನು ನಂಬಿಕೊಂಡು ಬದುಕು ಸಾಗಿಸುವಷ್ಟು ಇವರಲ್ಲಿ ಕಲಿತವರು ತೀರ ಕಡಿಮೆ. ಇತ್ತಿತ್ತಲಾಗಿ ಬೆರಳೆಣಿಕೆಯಷ್ಟು ಜನ ಮಾತ್ರ ಪದವಿಗಳನ್ನು ಪಡೆದವರು, ನೌಕರಿಯಲ್ಲಿ ಇರುವವರು ಸಿಕ್ಕುತ್ತಾರೆ. ಹೀಗಾಗಿ ಇವರು ಶೈಕ್ಷಣಿಕವಾಗಿ ರಾಜಕೀಯವಾಗಿ ತೀರಾ ಹಿಂದುಳಿದವರಾಗಿದ್ದಾರೆ.

 

[1]ಹಾಲುಮತ ದರ್ಶನ, ಶಂಬಾ ಜೋಶಿ, ಪುಟ ೨೭

[2]ಭಾರತದ ಕುರುಬರು, ಡಾ. ಶ್ಯಾಮಸಿಂಗ್‌ ಶಶಿ, ಪುಟ ೫೩

[3]ಭಾರತದ ಕುರುಬರು, ಡಾ. ಶ್ಯಾಮಶಿಂಗ್‌ ಶಶಿ, ಪುಟ ೧೧೩

[4]ಅಹಲ್ಯಾ ಸಂದೇಶ, ಮರಾಠಿ ಪತ್ರಿಕೆ.

[5]ಭಾರತದ ಕುರುಬರು, ಡಾ. ಶ್ಯಾಮಸಿಂಗ್‌ ಶಶಿ, ಪುಟ ೨೬

[6]ಸಂದರ್ಶನ, ಶ್ರೀ ಸಿದ್ದಪ್ಪ ಕಾಶಪ್ಪ ಜಕಬಾಳ ಬೆಣಕಟ್ಟಿ ೧೯೭೫ ರಲ್ಲಿ

[7]ಜಾನಪದ ಜಯಂತಿ, ಡಾ. ನಿಂಗಣ್ಣ ಸಣ್ಣಕ್ಕಿ ಪುಟ ೧೪-೧೫.