. ಕತ್ತೆ ಬಿಡೋದು

ಭಾರತದ ಆರ್ಥಿಕತೆಯಲ್ಲಿ ವಿವಿಧ ಸಮುದಾಯಗಳು ತಮ್ಮ ಜೀವನೋಪಾಯಕ್ಕಾಗಿ ವಿವಿಧ ವೃತ್ತಿಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ವೃತ್ತಿಯನ್ನು ವಂಶಪರಂಪರೆಯಾಗಿ ಮುಂದುವರೆಸಿಕೊಂಡು ಬಂದ ಜನಸಮುದಾಯಗಳು ತಮ್ಮ ವೃತ್ತಿಯಲ್ಲಿ ನಿರೀಕ್ಷೆಗೆ ಮೀರಿ ಪ್ರತಿಫಲ ದೊರೆತಾಗ ಹರಕೆ ಅಥವಾ ಆಚರಣೆಗಳ ಮೂಲಕ ಆಪ್ತರೊಂದಿಗೆ ಹಾಗೂ ಬಂಧು ಬಳಗದವರೊಂದಿಗೆ ಸಂಭ್ರಮ ಸಂತೋಷವನ್ನು ಹಂಚಿಕೊಳ್ಳುತ್ತಾರೆ. ಹಾಗೆಯೇ ಅಲೆಮಾರಿ ಕುರುಬರು ತಮ್ಮ ಕುಲ ಕಸುಬಿನಲ್ಲಿ ಸಾಧನೆಗೈದಾಗ ಕುರಿಗಳಲ್ಲಿ ಕತ್ತೆ ಬಿಡುವ ಸಂಪ್ರದಾಯದಮೂಲಕ ಸಂಭ್ರಮಿಸುವರು. ಒಂದು ಕುಟುಂಬದ ಕುರಿಗಳ ಸಂಖ್ಯೆ ಒಂದು ಸಾವಿರ ದಾಟಿದ ನಂತರ ಈ ಆಚರಣೆ ಮಾಡುತ್ತಾರೆ. ಇದು ಅನಾದಿ ಕಾಲದಿಂದಲೂ ನಡೆದುಕೊಂಡು ಬಂದ ಸಂಪ್ರದಾಯ.

ಕುರಿಗಳ ಸಂಖ್ಯೆ ಒಂದು ಸಾವಿರ ದಾಟಿನಂತರ ಆಪ್ತರೊಂದಿಗೆ ಹಾಗೂ ಬಂಧುಗಳೊಂದಿಗೆ ಚರ್ಚಿಸುವರು. ನಂತರ ಪುರೋಹಿತರಲ್ಲಿಗೆ ಹೋಗಿ ಶುಭದಿನ ಕೇಳಿ ಕತ್ತೆ ಬಿಡುವ ದಿನ ನಿಗದಿ ಮಾಡುತ್ತಾರೆ. ದಿನ ನಿಗದಿ ಮಾಡಿದ ಮೇಲೆ ಅಗಸರಲ್ಲಿಗೆ ಹೋಗಿ ಒಂದು ಅಥವಾ ಎರಡು ಸೊಲ ಮರಿ ಹಾಕಿದ ಹೆಣ್ಣು ಕತ್ತೆಯನ್ನು ಕೊಂಡು ಅವರಲ್ಲಿಯೇ ಬಿಟ್ಟು ಬರುತ್ತಾರೆ. ಆಚರಣೆ ಒಂದೆರಡು ದಿನ ಬಾಕಿ ಇರುವಂತೆ ಕುರಿ ಮಂದೆಯ ಸ್ಥಳಕ್ಕೆ ಕತ್ತೆಯನ್ನು ಹೊಡೆದುಕೊಂಡು ಬರುವರು. ಆಚರಣೆಯ ದಿನದಂದು ಕತ್ತೆಗೆ ಬಟ್ಟೆಯನ್ನು ಉಡಿಸಲು ಅಥವಾ ಶೃಂಗಾರಗೊಳಿಸಲು ಬಣ್ಣ ಬಣ್ಣದ ಹೊಸ ಬಟ್ಟೆಯನ್ನು ತಂದು ಹೊಲಿಸುವರು. ಅಂದು ಕತ್ತೆಯನ್ನು ಮದುವಣಿಗಿತ್ತಿಯ ರೂಪದಲ್ಲಿ ಶೃಂಗಾರಗೊಳಿಸಲಾಗುವುದು.

ಕತ್ತೆ ಬಿಡುವ ವಿಚಾರವನ್ನು ಮನೆದೇವರ ಪೂಜಾರಿಗೆ, ಡೊಳ್ಳಿನವರಿಗೆ, ಆಪ್ತರಿಗೆ ಹಾಗೂ ಬಂಧು-ಬಳಗದವರಿಗೆ ತಿಳಿಸಿ ಆಹ್ವಾನಿಸುವರು. ಕುಟುಂಬದ ಸದಸ್ಯರಿಗೂ, ಅಳಿಯಂದಿರಿಗೆ, ಹೆಣ್ಣುಮಕ್ಕಳಿಗೆ ಹಾಗೂ ಹತ್ತಿರದ ಸಂಬಂಧಿಗಳಿಗೆ ಬಟ್ಟೆ ತರುವರು. ಕೆಲವರು ಹೆಣ್ಣು ಮಕ್ಕಳಿಗೆ ಖುಷಿಗಾಗಿ ಬಂಗಾರದ ಒಡವೆಗಳನ್ನು ತಂದು ಹಾಕುತ್ತಾರೆ. ಒಟ್ಟಾರೆಯಾಗಿ ಈ ಆವರಣೆಯು ಮದುವೆಯಂತೆಯೇ ಜರುಗುತ್ತದೆ.

ಈ ಸಂಭ್ರಮವು ಕುರಿ ಮುಂದೆ ತಬ್ಬಿದ ಗುಡಾರದ ಸ್ಥಳದಲ್ಲಿ ಜರುಗುವುದು. ಆ ದಿನದ ಆಚರಣೆಯ ಸಿಹಿ ಊಟವಾಗಿ ಲಡ್ಡು ಮಾಡುತ್ತಾರೆ. ಆದ್ದರಿಂದ ಮುಂಜಾನೆಯಿಂದಲೇ ಸಿದ್ಧತೆಗಳು ಪ್ರಾರಂಭವಾಗುತ್ತವೆ. ಸಾಯಂಕಾಲದೊಳಗೆ ಬೀಗರು, ಬಂಧುಗಳು, ಆಪ್ತರು, ಪೂಜಾರಿ ಹಾಗೂ ಡೊಳ್ಳಿನವರು ಬಂದು ಸೇರುತ್ತಾರೆ. ಅಂದು ಮಾತ್ರ ಕುರಿಗಳು ಸಾಯಂಕಾಲದೊಳಗೆ ಗುಡಾರಕ್ಕೆ ಆಗಮಿಸುತ್ತವೆ.

ನಂತರ ಕತ್ತೆ ಬಿಡುವ ಕಾರ್ಯಕ್ರಮವು ಡೊಳ್ಳು ಬಡಿಯುವ ಮೂಲಕ ಆರಂಭವಾಗುತ್ತದೆ. ಆ ದಿನದ ಕೇಂದ್ರ ಬಿಂದು ಕತ್ತೆಯಾಗಿದ್ದರಿಂದ ಅದಕ್ಕೆ ಸ್ನಾನ ಮಾಡಿಸುವರು. ನಂತರ ಪೂಜಾರಿಯು ಕತ್ತೆಗೆ ಬಟ್ಟೆ ತೊಡಿಸಿ, ಭಂಡಾರ ಹಚ್ಚಿ ಕುಲದೇವರು ಮತ್ತು ಮನೆದೇವರು ಹೆಸರು ಹೇಳಿ ಕತ್ತೆ ಬಿಟ್ಟ ಕುಟುಂಬದ ಕುರಿಗಳ ಸಂಖ್ಯೆ ಸಾವಿರದಿಂದ, ಐದು ಸಾವಿರವಾಗಲಿ, ಐದು ಸಾವಿರದಿಂದ ಹತ್ತು ಸಾವಿರವಾಗಲಿ ಎಂದು ಏರು ಧ್ವನಿಯಲ್ಲಿ ದೇವರನ್ನು ಪ್ರಾರ್ಥಿಸುವರು. ಈ ಸಮುದಾಯದಲ್ಲಿ ಐದು ಸಾವಿರ ಕುರಿಗಳಾದರೆ ಹಂದಿ ಬಿಡುವ ಸಂಪ್ರದಾಯವಿದೆ. ಬಿಟ್ಟ ಕತ್ತೆಯನ್ನು ವಾರ ಅಥವಾ ಹತ್ತು ದಿನಗಳವರೆಗೆ ಕಟ್ಟಿ ಹಾಕಿ ಗುಡಾರದ ಸಮೀಪ ಮೇಯಿಸುತ್ತಾರೆ. ನಂತರ ದಿನಗಳಲ್ಲಿ ಕುರಿಗಳ ಜೊತೆ ಮೇಯಲು ಹೊಡೆದುಕೊಂಡು ಹೋಗುವರು. ಕ್ಷೇತ್ರಕಾರ್ಯದ ಅವಧಿಯಲ್ಲಿ ಚಿಕ್ಕೋಡಿ ತಾಲೂಕಿನ ಅಪ್ಪನಹಟ್ಟಿ ಗ್ರಾಮದ ಅಪ್ಪಣನವರ ಸಾವಿರ ಕುರಿಗಳಲ್ಲಿ ಕತ್ತೆ ಇದ್ದುದು ಕಂಡುಬಂದಿತ್ತು.

ಮನೆಯವರು ಬೇರೆ ದೇವರಾಗಿದ್ದರೆ ಅಲಗ ಹಾಯುವ ಕಾರ್ಯಕ್ರಮವಿರುತ್ತಿತ್ತು. ಇಷ್ಟೆಲ್ಲ ಆದ ಮೇಲೆ ಬಂಧುಗಳಿಗೆ ಬಟ್ಟೆ ಬರೆಗಳನ್ನು ಕೊಟ್ಟ ನಂತರ ಎಲ್ಲರನ್ನು ಸಾಲಾಗಿ ಕೂಡಿಸಿ ಊಟಕ್ಕೆ ಬಡಿಸುತ್ತಾರೆ. ಬಂದ ಪೂಜಾರಿಯನ್ನು ಬರಿಗೈಯಲ್ಲಿ ಕಳುಹಿಸಬಾರದೆಂದು ಉದ್ದೇಶದಿಂದ ಅವನಿಗೊಂಡು ಕುರಿಮರಿ ಕೊಟ್ಟು ಆಶೀರ್ವಾದ ಪಡೆದುಕೊಳ್ಳುತ್ತಾರೆ. ಒಟ್ಟಾರೆಯಾಗಿ ಅಲೆಮಾರಿ ಕುರುಬರು ಮದುವೆಯ ರೀತಿಯಲ್ಲಿ ಒಂದೂವರೆ ಲಕ್ಷದವರೆಗೆ ಹಣವನ್ನು ವ್ಯಯ ಮಾಡುತ್ತೆವೆಂದು ಅಪ್ಪನಹಟ್ಟಿ ಅಪ್ಪಣ್ಣ ಹೇಳುತ್ತಾರೆ. ಈ ಸಂಪ್ರದಾಯದಿಂದ ಇವರ ಕೌಟುಂಬಿಕ ಆದಾಯದ ಮೇಲೆ ಎಷ್ಟರ ಮಟ್ಟಿಗೆ ಪರಿಣಾಮ ಬೀರುತ್ತದೆಂಬುದನ್ನು ಗ್ರಹಿಸಬಹುದಾಗಿದೆ.

ಕತ್ತೆ ಬಿಡುವ ವಿಚಾರವಾಗಿ ಅಲೆಮಾರಿ ಕುರುಬರ ಅಭಿಪ್ರಾಯಗಳು

ಕುರಿಗಳ ಸಂಖ್ಯೆ ಒಂದು ಸಾವಿರ ದಾಟುವವರೆಗೆ ಬಿಡುವುದಿಲ್ಲ. ಆ ಸಂಖ್ಯೆಗಿಂತ ಕಡಿಮೆ ಇರುವಾಗಲೇ ವಯಸ್ಸಾದ, ರೋಗಗ್ರಸ್ಥ ಹಾಗೂ ಕೆಲವು ಗಟ್ಟಿಮುಟ್ಟಾದ ಕುರಿಗಳನ್ನು ಮಾರಾಟ ಮಾಡುತ್ತೇವೆಂದು ಸೌಂದಲಗ ಅಪ್ಪಣ್ಣನವರು ಹೇಳುತ್ತಾರೆ. ಒಂದು ಸಾವಿರ ಕುರಿ ಆದ ನಂತರೆ ಕತ್ತೆ ಬಿಡಬೇಕು. ಕತ್ತೆ ಬಿಟ್ಟ ನಂತರ ಅದೃಷ್ಟ ಚೆನ್ನಾಗಿದ್ದರೆ ಮುಂದೆ ಒಳ್ಳೆಯದಾಗುತ್ತದೆ. ಇಲ್ಲವಾದರೆ ಕುರಿಗಳಿಗೆ ಮತ್ತು ನಮಗೆ ತೊಂದರೆಯಾಗುತ್ತದೆ. ಆದ್ದರಿಂದಲೇ ಕುರಿಗಳ ಸಂಖ್ಯೆ ೧೦೦೦ ದಾಟುವವರೆಗೆ ಬಿಡುವುದಿಲ್ಲವೆಂದು ಹೇಳುತ್ತಾರೆ ಮಾಹಿತಿದಾರ ಅಪ್ಪಣ್ಣ ಪೂಜಾರಿ ಸೌಂದಲಗ. ಈ ಹೇಳಿಕೆಯು ಅವರ ನಂಬಿಕೆ ಅಥವಾ ಕಲ್ಪನೆಯಿಂದ ಕೂಡಿದೆ. ಆದರೆ ಅವನ ನೈಜ ಬದುಕನ್ನು ಪ್ರಾಯೋಗಿಕವಾಗಿ ನೋಡಿದಾಗ ಹಗಲಿರುಳು ಕುರಿಗಳ ಜೊತೆಯಲ್ಲಿಯೇ ಕಾಲಕಳೆಯಬೇಕು. ವಾರಕ್ಕೊಮ್ಮೆ ಅಥವಾ ವಾರಕ್ಕೆರಡು ಸಲ ಕುರಿ ತಬ್ಬುವ ಹೊಲಗದ್ದೆಗಳನ್ನು ಬದಲಾಯಿಸಬೇಕು. ಮಳೆಗಾಲದಲ್ಲಿ ಅವುಗಳ ಸಂಗೋಪನೆ ಬಹಳ ಕಷ್ಟದಾಯವಾಗಿದೆ. ಇದು ಶ್ರಮ ಸಾಂದ್ರ ಉದ್ಯೋಗವಾದ್ದರಿಂದ ಅಷ್ಟೊಂದು ಕುರಿಗಳನ್ನು ಸಾಕಿ ಸಲಹಲು ಕುಟುಂಬದ ಸದಸ್ಯರನ್ನು ಹಾಗೂ ಆಳು ಮಕ್ಕಳನ್ನು ಸರಿದೂಗಿಸುವುದು. ರೋಗ-ರುಜಿನಗಳು ಬಂದಾಗ ಔಷಧೋಪಚಾರ ಮಾಡುವುದು ಇತ್ಯಾದಿ ಸಮಸ್ಯೆಗಳಿರುವುದರಿಂದಲೇ  ಕುರಿಗಳ ಸಂಖ್ಯೆಯನ್ನು ಸಾವಿರಕ್ಕೇರಿಸುವುದಿಲ್ಲ ಎಂದು ಕಾಣಿಸುತ್ತದೆ.

ಬೆಳಗಾವಿ ಜಿಲ್ಲೆಯ ಅಲೆಮಾರಿ ಕುರುಬರ ಪ್ರಭಾವಿ ನಾಯಕರಾದ ಲಕ್ಷ್ಮಣರಾವ್ ಚಂಗಳೆ ಪ್ರಕಾರ ಸುಂದರವಾದ ದೊಡ್ಡ ಕಟ್ಟಡ, ಕಾರ್ಖಾನೆ, ಮನೆ, ಅಂಗಡಿ ಇತ್ಯಾದಿಗಳಲ್ಲಿ ಬೆದರು ಗೊಂಬೆಯನ್ನು ಇಳಿಬಿಟ್ಟಿರುತ್ತಾರೆ. ಹಾಗೆಯೇ ಸುಂದರವಾದ ಸ್ತ್ರೀ-ಪುರುಷರು ಸಭೆ ಸಮಾರಂಭಗಳಲ್ಲಿ ಭಾಗವಹಿಸುವಾಗ ಮುಖದ ಯಾವುದಾದರೂ ಒಂದು ಭಾಗದಲ್ಲಿ ಕಪ್ಪು ಚುಕ್ಕೆಯನ್ನಿಟ್ಟಿರುತ್ತಾರೆ. ಈ ರೀತಿಯಾಗಿ ಗೊಂಬೆ ಇಳಿಬಿಡುವುದು. ಮುಖದ ಮೇಲೆ ಕಪ್ಪು ಚುಕ್ಕೆ ಇಡುವುದರ ಉದ್ದೇಶ ಜನರ ದೃಷ್ಟಿಯು ಗೊಂಬೆ ಅಥವಾ ಕಪ್ಪು ಚುಕ್ಕೆಯ ಕಡೆಗೆ ಹರಿಯುತ್ತದೆ. ಇಲ್ಲವಾದರೆ ಆಯುಷ್ಯ ಕಡಿಮೆಯಾಗುತ್ತದೆ. ಹಾಗೆಯೇ ಬಹಳಷ್ಟು ಕುರಿಗಳಲ್ಲಿ ಒಂದು ಕತ್ತೆ ಇದ್ದರೆ ಅಥವಾ ಒಳ್ಳೆಯದರಲ್ಲಿ ಒಂದು ಕೆಟ್ಟದಿದ್ದರೂ ಕತ್ತೆ-ಕುರಿಗಳನ್ನು ನೋಡುಗರ ದೃಷ್ಟಿ ಕತ್ತೆಯ ಕಡೆ ಹರಿಯುತ್ತದೆ. ಇದರಿಂದ ಕುರಿಗಳಿಗೆ ರೋಗರುಜಿನಗಳು ಬಾರದೆ ಕಷ್ಟ-ನಷ್ಟವಾಗುವುದಿಲ್ಲ ಎಂದು ಹೇಳುತ್ತಾರೆ.

ಇನ್ನೂ ಕೆಲವರು ಕತ್ತೆ ಬಿಡೋದು ಮೊದಲಿನಿಂದಲೂ ನಡೆದು ಬಂದಿದ್ದು ಆ ಸಂಪ್ರದಾಯವನ್ನು ಯಾವ ಕಾರಣಕ್ಕೂ ಮುಂದುವರಿಯುವುದಿಲ್ಲ. ಕುರಿಗಳ ಸಂಖ್ಯೆ ಹೆಚ್ಚಾಗುವುದು ಅಥವಾ ಕಡಿಮೆಯಾಗುವುದು ನಮ್ಮ ಕೈಯಲ್ಲಿ ಏನಿದೆ, ಆ ಎಲ್ಲಾ ಆ ಬೀರದೇವರದು ಎಂದು ಹೇಳುತ್ತಾರೆ.

ಈ ಮೇಲಿನ ಅಭಿಪ್ರಾಯಗಳು ಭಿನ್ನವಾಗಿವೆ. ಆದರೂ ಅಲೆಮಾರಿ ಕುರುಬರು ೧೦೦೦ ಕುರಿಗಳಾಗುವವರೆಗೆ ಅವುಗಳ ಸಂಖ್ಯೆಯನ್ನು ಇಂದಿನ ಕಾಲದಲ್ಲಿ ಹೆಚ್ಚಿಸುವುದೆಂದರೆ ಸಾಮಾನ್ಯ ಕೆಲಸವಲ್ಲ. ಏಕೆಂದರೆ ಬರುವ ರೋಗ-ರುಜಿನಗಳ ಸಂಖ್ಯೆ ಹೆಚ್ಚಾಗಿವೆ.

ಸಮಸ್ಯೆ ಮತ್ತು ಪರಿಹಾರೋಪಾಯಗಳು

ಪ್ರಸ್ತುತ ದಿನಗಳಲ್ಲಿ ಬಹುತೇಕ ಜನರು ನಗರ, ಪಟ್ಟಣ ಹಾಗೂ ಗ್ರಾಮಗಳಲ್ಲಿ ವಾಸಿಸುತ್ತಿರುವರು. ಇವರಲ್ಲಿಯೇ ಹಲವು ಜನರಿಗೆ ಮೂಲ ಅವಶ್ಯಕತೆಗಳು ಮತ್ತು ಸಾಮಾಜಿಕ ಸೌಲಭ್ಯಗಳು ದೊರೆಯದಿರುವುದು ತಿಳಿದಿರುವ ಸಂಗತಿ. ಸದಾ ನಿಸರ್ಗದ ಮಡಿಲಲ್ಲಿಯೇ ಅಲೆದಾಡುತ್ತಾ ಜೀವನ ಸಾಗಿಸುವ ಅಲೆಮಾರಿ ಕುರುಬರು ಇನ್ನಷ್ಟು ಸಮಸ್ಯೆಗಳನ್ನು ಎದುರಿಸುತ್ತಿರುವರು. ಈ ಕುರಿತು ಯೋಚಿಸಿದಾಗ ಉತ್ತರ ಸುಲಭವಾಗಿ ದೊರೆಯದು. ಕಾರಣ ಅವರ ಜೀವನಶೈಲಿ ವಿಶಿಷ್ಟವಾಗಿದೆ. ಅಲ್ಲದೆ ಇತರೆ ಅಲೆಮಾರಿ ಸಮುದಾಯಗಳಿಗಿಂತ ಭಿನ್ನ ಸಮಸ್ಯೆಗಳಿವೆ. ಆದ್ದರಿಂದ ಅಲೆಮಾರಿ ಕುರುಬರ ಹಿತರಕ್ಷಣೆ ಹಾಗೂ ಕುರಿ ಸಂಗೋಪನವೃತ್ತಿ ಮುಂದುವರಿಸಿಕೊಂಡು ಹೋಗಲು ವಿಶೇಷವಾದ ಮತ್ತು ಪ್ರತ್ಯೇಕವಾದ ಕ್ರಮಗಳನ್ನು ಸರ್ಕಾರ ಕೈಗೊಳ್ಳುವುದು ಜರೂರಾಗಿದೆ.

ಹುಲ್ಲುಗಾವಲು

ಕೃಷಿ ಮತ್ತು ಕೈಗಾರಿಕೆಗಳ ಅಭಿವೃದ್ಧಿ ಹೆಸರಿನಲ್ಲಿ ಹುಲ್ಲುಗಾವಲು ಅರಣ್ಯ ಪ್ರದೇಶ ಕ್ಷೀಣಿಸುತ್ತಲಿದೆ. ಸ್ವಾತಂತ್ರ್ಯಾನಂತರ ಭಾರತ ಸರ್ಕಾರ ಹಲವಾರು ಅಭಿವೃದ್ಧಿ ಯೋಜನೆ ಹಾಗೂ ಘೋಷಣೆಗಳ ಮೂಲಕ ಪ್ರಗತಿಯತ್ತ ಸಾಗಿದೆ. ಅಂಥವುಗಳಲ್ಲಿ ಒಂದಾದ. Grow more food rather than grow more wool ಎಂಬುದು ಕಾನೂನುಬಾಹಿರವಾಗಿ ಹುಲ್ಲುಗಾವಲು ಪ್ರದೇಶವನ್ನು ಒತ್ತುವರಿ ಮಾಡಿಕೊಳ್ಳಲು ಕೃಷಿಕರಿಗೆ ಅನುಕೂಲವಾಯಿತು. ಆದರೆ ಅದೇ ಘೋಷಣೆಯು ಕುರಿಗಾಯಿಗಳಿಗೆ ಮಾರಕವಾಗಿ ಪರಿಣಮಿಸಿದೆ. ಪ್ರಸ್ತುತ ದಿನಗಳಲ್ಲಿ ಹುಲ್ಲುಗಾವಲು ಪ್ರದೇಶ ಗೋಚರಿಸದ ಪರಿಸ್ಥಿತಿ ನಿರ್ಮಾವಾಗಿದೆ.

ಗಣಿಗಾರಿಕೆಯು ಬಂಡವಾಳದಾರರಿಗೆ ವರವಾದರೆ ಕುರಿಗಾಯಿಗಳಿಗೆ ಶಾಪವಾಗಿದೆ. ಮಳೆಗಾಲದಲ್ಲಿ ಅಂದರೆ ಆಗಸ್ಟ್ ನಿಂದ ನವ್ಹಂಬರ್ ತಿಂಗಳವರೆಗೆ ಕುರಿ-ಕುರುಬನ ಆಶ್ರಯತಾಣವಾಗಿದ್ದ ಗುಡ್ಡಗಾಡು ಗಣಿ ಪ್ರದೇಶ (ಬಳ್ಳಾರಿ ಜಿಲ್ಲೆ) ಇಂದು ಗಣಿಗಾರಿಕೆಯಿಂದ ಸಾವಿರಾರು ಎಕರೆ ಹುಲ್ಲುಗಾವಲು ಇಲ್ಲದಂತಾಗಿದೆ. ಗಣಿಗಾರಿಕೆಯು ಎರಡು ರೀತಿಯ ದುಷ್ಪರಿಣಾಮ ಬೀರಿದೆ. ಒಂದು ಮೇವಿನ ಪ್ರದೇಶ ಕಡಿಮೆಯಾದರೆ ಮತ್ತೊಂದು ಗಣಿಗಾರಿಕೆಯಿಂದ ಹರಿದು ಬಂದ ನೀರನ್ನು ಕುಡಿದ ಕುರಿಗಳು ಹಲವಾರು ರೋಗಗಳಿಗೆ ತುತ್ತಾಗುತ್ತಿವೆ. ಇನ್ನು ಅಲ್ಪಸ್ವಲ್ಪ ಹುಲ್ಲುಗಾವಲು ಪ್ರದೇಶವಿದ್ದರೂ ಗಣಿಮಾಲೀಕರು ತಂತಿ ಬೇಲಿಯನ್ನು ಹಾಕಿ ನಿರ್ಬಂಧಿಸಿದ್ದಾರೆ. ಸುಮಾರು ೧೦-೧೨ ವರ್ಷಗಳ ಹಿಂದೆ ಈ ಪ್ರದೇಶದಲ್ಲಿ ಉತ್ಕೃಷ್ಟವಾದ ಮೇವು, ಗಿಡಗಂಟೆಗಳ ತಪ್ಪಲು ದೊರೆಯುತ್ತಿತ್ತು. ಪ್ರಸ್ತುತ ದಿನಗಳಲ್ಲಿ ಗಣಿಗಾರಿಕೆಯು ಕುರಿಗಾಯಿಯನ್ನು ಆತಂಕದ ಸ್ಥಿತಿಯಲ್ಲಿ ಇಡುವುದರ ಜೊತೆಗೆ ಪ್ರಾಣಿ ಸಂತತಿಗಳ ಭವಿಷ್ಯ ಕುರಿತು ಚಿಂತಿಸುವಂತಾಗಿದೆ.

ಮೇವು ಅಥವಾ ಹುಲ್ಲುಗಾವಲಿನ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಸರ್ಕಾರ ಶಾಶ್ವತ ಪರಿಹಾರಗಳನ್ನು ಕಂಡುಕೊಳ್ಳುವುದು ಅನಿವಾರ್ಯವಾಗಿದೆ. ಇವರು ಅಲೆದಾಡುವ ಗ್ರಾಮಗಳಲ್ಲಿರುವ ಸರ್ಕಾರಿ ಒಡೆತನದ ಅರಣ್ಯ ಭೂಮಿ ರಾಜಸ್ವಭೂಮಿ, ಗೋಮಾಳ ಮತ್ತು ಇತರೆ ಭೂಮಿಯನ್ನು ಪ್ರತಿ ಹೋಬಳಿ ಮಟ್ಟದಲ್ಲಿ ಗುರುತಿಸುವುದು ಹಾಗೂ ಆ ಭೂಮಿಯನ್ನು ಅಲೆಮಾರಿ ಕುರುಬರ ಕುರಿಗಳಿಗೋಸ್ಕರ ಮೀಸಲಿಡುವುದು ಭೂಮಿಗೆ ಶಾಶ್ವತ ನೀರಾವರಿ ಸೌಲಭ್ಯಗಳನ್ನು ಒದಗಿಸುವುದು. ಆ ಭೂಮಿಯಲ್ಲಿ ಕುರಿ ಮೇಕೆಗಳಿಗೆ ಹಿತವೆನಿಸಿದ ಸುಧಾರಿತ ತಳಿಯ ಮೇವಿನ ಬೆಳೆಗಳನ್ನು ಬೆಳೆಯುವುದು. ಅದರ ನಿರ್ವಹಣೆಯನ್ನು ಅಲೆಮಾರಿ ಕುರುಬರ ಸಹಕಾರದೊಂದಿಗೆ ಸರ್ಕಾರ ಕೈಗೊಳ್ಳುವುದು.

ಮಾರುಕಟ್ಟೆ

ಉತ್ಪಾದನಾಕಾರನ ಉತ್ಪನ್ನವು ಉತ್ತಮ ಬೆಲೆ ಪಡೆಯಬೇಕಾದರೆ ಅದು ಮಾರುಕಟ್ಟೆ ಪ್ರವೇಶಿಸಿ ಮಾರಾಟವಾಗುವಂತಿರಬೇಕು. ಹಾಗಿದ್ದಾಗ ಮಾತ್ರ ಒಳ್ಳೆಯ ಬೆಲೆ ಬಂದು ಲಾಭಗಳಿಸಲು ಸಾಧ್ಯವಾಗುತ್ತದೆ. ಅಲೆಮಾರಿ ಕುರುಬನ ಬದುಕುಗಳು ಮಾರುಕಟ್ಟೆ ಪ್ರವೇಶಿಸದೆ ತಾನು ಅಲೆದಾಡುವ ಪ್ರದೇಶದಲ್ಲಿಯೇ ಮಾರಾಟ ಮಾಡುವುದರಿಂದ ಉತ್ತಮ ಬೆಲೆ ಪಡೆಯಲು ಸಾಧ್ಯವಾಗುತ್ತಿಲ್ಲ. ಅವನ್ನು ಮಾರುಕಟ್ಟೆಗೆ ಸಾಗಿಸುವುದು ಬಹಳ ಕಷ್ಟ. ಒಂದು ವೇಳೆ ಪ್ರಯತ್ನ ಪಟ್ಟು ಸಾಗಿಸಿದ ನಂತರ ಮಾರಾಟವಾಗದಿದ್ದ ಪಕ್ಷದಲ್ಲಿ ಮರಳಿ ಹಿಂದಕ್ಕೆ ಸಾಗಿಸುವುದು ಇನ್ನೂ ಕಷ್ಟಕರ. ಆದ್ದರಿಂದ ಅಲೆಮಾರಿ ಕುರುಬರು ತಾವು ಅಲೆದಾಡುವ ಪ್ರದೇಶದಲ್ಲಿಯೇ ಕಟುಕರು ಕುರಿ ವ್ಯಾಪಾರಸ್ಥರು ಕೇಳಿದ ಬೆಲೆಗೆ ಮಾರಾಟ ಮಾಡುತ್ತಾರೆ. ಮಾರಾಟ ಮಾಡುವಾಗ ಅವನ್ನು ತೂಕದ ಆಧಾರದಲ್ಲಿ ಮಾರಾಟ ಮಾಡದೆ ನಡುವನ್ನು ಹಿಚುಕಿ, ಕೈ ಇಟ್ಟು ಒಂದಕ್ಕೆ ಇಂತಿಷ್ಟು ಬೆಲೆ ನಿರ್ಧರಿಸಿ ಗುಂಪಾಗಿ ಮಾರಾಟ ಮಾಡಲಾಗುತ್ತದೆ. ಕುರಿಗಾರರಿಗೆ ಮಾರುಕಟ್ಟೆಯಲ್ಲಾಗುವ ಶೋಷಣೆ ಕುರಿತಂತೆ ಲಕ್ಷ್ಮಣರಾವ್ ಚಂಗಳೆ ಈ ರೀತಿ ಅಭಿಪ್ರಾಯಪಡುತ್ತಾರೆ. ವ್ಯಾಪಾರಸ್ಥರು ಕುರಿಮರಿಗಳನ್ನು ಕೊಳ್ಳುವಾಗ ಮರಿಗಳಿಗೆ, ವಯಸ್ಕ ಕುರಿಗಳಿಗೆ ಮತ್ತು ವಯಸ್ಸಾದ ಕುರಿಗಳಿಗೆ ವಿವಿಧ ಬೆಲೆ ನಿಗಧಿ ಮಾಡಿಕೊಳ್ಳುತ್ತಾರೆ. ಆದರೆ ತಾವು ಗ್ರಾಹಕರಿಗೆ ಮಾಂಸ ಮಾರಾಟ ಮಾಡುವಾಗ ಒಂದೇ ಬೆಲೆ ನಿಗದಿ ಮಾಡಿ ಮಾರಾಟ ಮಾಡುತ್ತಾರೆ. ಇದರಿಂದ ಉತ್ಪಾದಕ ಮತ್ತು ಅನುಭೋಗಿ ಇಬ್ಬರೂ ಶೋಷಣೆಗೆ ಒಳಗಾಗುತ್ತಿರುವುದನ್ನು ಕಾಣುತ್ತೇವೆ. ಇದಕ್ಕೆ ಉದಾಹರಣೆಯೆಂಬಂತೆ, ಹಕ್ಕಿಜ್ವರ (Bird flue) ಕೋಳಿಗಳಿಗೆ ಹರಡಿದೆ ಎಂಬ ವದಂತಿಯಿಂದ ಒಂದು ಕೆ.ಜಿ. ಕುರಿಗಳ ಮಾಂಸ ರೂ.೧೫೦ ರಿಂದ ೨೦ ರೂ. ಗಳಿಗೆ ಏರಿಕೆಯಾಗಿತ್ತು. ಆದರೆ ಕುರಿಮರಿಗಳ ಬೆಲೆಯಲ್ಲಿ ಮಾತ್ರ ಏರಿಕೆಯಾಗಿಲ್ಲ. ಇದರಿಂದ ಕುರಿ-ಮೇಕೆ ಮಾರುಕಟ್ಟೆಯು ಮಧ್ಯವರ್ತಿಗಳ ಬಿಗಿ ಹಿಡಿತದಲ್ಲಿದೆ ಎಂಬುದು ತಿಳಿದುಬರುತ್ತದೆ. ೨೦೦೩ ರ ಜಾನುವಾರು ಗಣತಿಯಂತೆ ಕರ್ನಾಟಕ ರಾಜ್ಯದಲ್ಲಿ ೭೨.೬೫ ಲಕ್ಷ ಕುರಿಗಳು ಹಾಗೂ ೪೪.೮೪ ಲಕ್ಷ ಮೇಕೆಗಳಿವೆ. ಇಷ್ಟೊಂದು ಸಂಖ್ಯೆಯಲ್ಲಿ ಕುರಿ-ಮೇಕೆಗಳಿದ್ದರೂ ಸಹ ಕ್ರಮಬದ್ಧ (Regulated) ಮಾರುಕಟ್ಟೆ ಇಲ್ಲದಿರುವುದು ಕುರಿಗಾರರ ಶೋಷನೀಯ ಸ್ಥಿತಿಯನ್ನು ವ್ಯಕ್ತಪಡಿಸುತ್ತದೆ.

ಭಾರತದಲ್ಲಿ ಅದರಲ್ಲೂ ವಿಶೇಷವಾಗಿ ಕರ್ನಾಟಕ ರಾಜ್ಯದಲ್ಲಿ ಅಗಾಧವಾದ ಕುರಿ-ಮೇಕೆಗಳ ಸಂಪತ್ತಿದೆ. ಇದು ರಾಜ್ಯದ ಆರ್ಥಿಕ ಅಭಿವೃದ್ಧಿಗೆ ಮೂಲ ಬಂಡವಾಳವಾಗಿದೆ. ಮಧ್ಯವರ್ತಿಗಳ ಬಂಡವಾಳದಾರರ ಹಿಡಿತದಿಂದ ತಪ್ಪಿಸಲು ಕೊತೆಗೆ ಕುರಿಗಾರರಿಗೆ ನ್ಯಾಯಯುತವಾದ ಬೆಲೆ ದೊರೆಯುವಂತೆ ಮಾಡಲು ಕೃಷಿ ಉತ್ಪನ್ನಗಳ ಮಾರುಕಟ್ಟೆ ಎಪಿಎಂಸಿ ಮಾದರಿಯಲ್ಲಿ ಕುರಿ-ಮೇಕೆ ಉತ್ಪನ್ನಗಳ ಮಾರುಕಟ್ಟೆ ಕಾಯಿದೆ ಜಾರಿಗೆ ಬರಬೇಕು. ಕುರಿಗಳ ನಡುವನ್ನು ಒತ್ತಿ ವ್ಯಾಪಾರ ಮಾಡುವುದನ್ನು ಬಿಟ್ಟು ತೂಕದ ಆಧಾರದಲ್ಲಿ ಬೆಲೆ ನಿರ್ಧಾರವಾಗಬೇಕು. ಅಲೆಮಾರಿ ಕುರುಬರು ಅಲೆದಾಡುವ ಪ್ರದೇಶಗಳಲ್ಲಿ ಉತ್ತಮ ಮಾರುಕಟ್ಟೆ ಸೌಲಭ್ಯ ಒದಗಿಸುವ ಸಲುವಾಗಿ ಹೊಸಪೇಟೆ, ದಾವಣಗೆರೆ, ಶಿವಮೊಗ್ಗ, ಬೆಳಗಾಂ ಮತ್ತು ಹಾವೇರಿಯಲ್ಲಿ ಸುಸಜ್ಜಿತ ಕಸಾಯಿಖಾನೆಗಳನ್ನು ಸ್ಥಾಪಿಸಬೇಕು.

ನೈಸರ್ಗಿಕ ವಿಕೋಪಗಳು

ಪ್ರಕೃತಿಯ ಮಡಿಲಲ್ಲಿ ಬದುಕುವ ಇವರು ಮತ್ತು ಇವರ ಬದುಕುಗಳು ಅನೇಕ ನೈಸರ್ಗಿಕ ವಿಕೋಪಗಳಿಗೆ ತುತ್ತಾಗುತ್ತವೆ. ಸಿಡಿಲು, ಆಲಿಕಲ್ಲು, ಅತಿವೃಷ್ಟಿ, ನೆರೆಹಾವಳಿ ಇತ್ಯಾದಿಗಳಿಂದ ಸಾವಿಗೀಡಾಗುವವರಲ್ಲಿ ಅಲೆಮಾರಿ ಕುರುಬರ ಸಂಖ್ಯೆಯೇ ಅಧಿಕವಾಗಿದೆ. ಸಾಕಷ್ಟು ಸಂಖ್ಯೆಯ ಕುರಿಗಳು ಸಿಡಿಲು ಮತ್ತು ಆಲಿಕಲ್ಲು ಮಳೆಗೆ ಬಲಿಯಾಗುತ್ತವೆ. ಅಷ್ಟೇ ಅಲ್ಲದೆ ದಿಡೀರ್‌ ಬಂದ ಪ್ರವಾಹದಲ್ಲಿ ಕೊಚ್ಚಿ ಹೋಗುವುದುಂಟು. ರಸ್ತೆ ಅಥವಾ ಒಳದಾರಿಗಳಲ್ಲಿ ಕುರಿಗಳನ್ನು ಸಾಗಿಸುವಾಗ ಯರ್ರಾಬಿರ್ರಿಯಾಗಿ ಓಡುವ ವಾಹನಗಳು ಡಿಕ್ಕಿ ಹೊಡೆದು ನೂರಾರು ಕುರಿಗಳು ಅಸು ನೀಗುತ್ತವೆ.

ಪ್ರಕೃತಿ ವಿಕೋಪಗಳಿಗೆ ತುತ್ತಾಗುವ ಕುರಿಗಳಿಗೆ ಹಾಗೂ ಅಲೆಮಾರಿ ಕುರುಬರಿಗೆ ರಾಜ್ಯಮಟ್ಟದ ಒಂದು ಸಮಗ್ರ ವಿಮಾ ಯೋಜನೆಯನ್ನು ಸಂಪೂರ್ಣವಾಗಿ ರಾಜ್ಯ ಸರ್ಕಾರದಿಂದಲೇ ಜಾರಿಗೊಳಿಸುವುದು ಜರೂರಾಗಿದೆ. ಏಕೆಂದರೆ ಕ್ಷಣಾರ್ಧದಲ್ಲಿ ತನ್ನದೆನ್ನುವ ಎಲ್ಲವನ್ನು ಕಳೆದುಕೊಂಡು ಬಿಡುತ್ತಾರೆ. ಇದಕ್ಕೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಜಮ್ಮು ಮತ್ತು ಕಾಶ್ಮೀರ ರಾಜ್ಯದ ಮಾದರಿಯಲ್ಲಿ ಜನಶ್ರೀ ವಿಮಾ ಯೋಜನೆಯನ್ನು ಇತ್ತೀಚೆಗೆ ರಾಜ್ಯ ಸರ್ಕಾರ ಆರಂಭಿಸಿದೆ. ಈ ವಿಮಾ ಸೌಲಭ್ಯವನ್ನು ನೈಸರ್ಗಿಕ ವಿಕೋಪದ ವೇಳೆ ಮರಣ ಹೊಂದುವ ಕುರಿಮೇಕೆಗಳಿಗೆ ಮಾತ್ರ ನೀಡಲಾಗಿದೆ. ಆದರೆ ವರ್ಷಗಟ್ಟಲೇ ಮನೆ-ಮಠಗಳನ್ನು ತೊರೆದು ಪ್ರಾವನ್ನು ಕೈಯಲ್ಲಿ ಹಿಡಿದು ಕುರಿಗಳೊಡನೆ ಅಲೆಯುವ ಅಲೆಮಾರಿ ಕುರುಬರೂ ವಿಮಾ ಸೌಲಭ್ಯ ಪಡೆಯುವುದರಿಂದ ಅನರ್ಹಗೊಳಿಸಲಾಗಿದೆ. ಬಡತನ ರೇಖೆ ಎಂಬ ಮಾನದಂಡ ಅಳವಡಿಸಿದ್ದರಿಂದ ನೂರರಿಂದ ಐದು ನೂರು ಕುರಿಗಳನ್ನು ಹೊಂದಿರುವ ಅಲೆಮಾರಿ ಕುರುಬರು ಈ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಪ್ರತಿ ಕುರಿ ಕನಿಷ್ಠ ರೂ. ೧,೫೦೦ ಬೆಲೆ ಇರುವುದರಿಂದ ನೂರಿನ್ನೂರು ಕುರಿಗಳ ಒಡೆಯರ ಆಸ್ತಿಯ ಮೌಲ್ಯ ಲಕ್ಷ ರೂಪಾಯಿ ದಾಟುತ್ತದೆ. ಅಂತಹ ಅಲೆಮಾರಿ ಕುರುಬರು ಬಡತನ ರೇಖೆಗಿಂತ ಕೆಳಗಿನ ವರ್ಗಕ್ಕೆ ಸೇರದಿರುವದರಿಂದ ವಿಮಾ ಸೌಲಭ್ಯ ವ್ಯಾಪ್ತಿಗೆ ಬರುವುದಿಲ್ಲ. ಆದ್ದರಿಂದ ಎಲ್ಲಾ ಕುರಿಗಾರರ ದುರಂತಮಯ ಸನ್ನಿವೇಶಗಳನ್ನು ತಡೆಗಟ್ಟಲು ಕುರಿಗಾರರಿಗೆ ಜನಶ್ರೀ ವಿಮಾ ಮತ್ತು ಕುರಿಗಳಿಗೆ ಸಮಗ್ರ ವಿಮಾ ಯೋಜನೆಗಳು ಜಾರಿಗೊಳಿಸಬೇಕಾಗಿದೆ.

ಕುರಿಗಳ ಭದ್ರತೆ

ಪ್ರಕೃತಿ ಮಡಿಲಲ್ಲಿಯೇ ಕುರಿ ಸಂಗೋಪನೆ ಮಾಡುವುದರಿಂದ ಚಿರತೆ, ತೋಳ, ನರಿ, ಕತ್ತೆ ಕಿರುಬ ಮೊದಲಾದ ಕಾಡು ಪ್ರಾಣಿಗಳು, ಕುರಿಗಳನ್ನು ತಿನ್ನಲು ಬಂದು ಬಹಳ ತೊಂದರೆ ಕೊಡುತ್ತವೆ. ಕುರಿಗಳನ್ನು ರಕ್ಷಿಸಿಕೊಳ್ಳಲು ಇಡೀ ರಾತ್ರಿ ಬ್ಯಾಟರಿ ಹಿಡಿದು ನಾಯಿಗಳ ಸಹಾಯದಿಂದ ಕುರಿಗಳ ಸುತ್ತ ತಿರುಗುತ್ತಿರಬೇಕು. ಕೆಲವೊಮ್ಮೆ ಎಷ್ಟೇ ಎಚ್ಚರದಿಂದ ಇದ್ದರೂ ಅಪಾಯ ತಪ್ಪಿದ್ದಲ್ಲ. ಇವರು ಕಳ್ಳರ ಕಾಟದಿಂದ ಮುಕ್ತರಾಗಿಲ್ಲ. ಕೆಲವರು ಹಗಲುಗಳ್ಳತನ ಮಾಡಿದರೆ ಇನ್ನೂ ಕೆಲವರು ರಾತ್ರಿ ಕಳ್ಳತನ ಮಾಡುತ್ತಾರೆ. ಗುಡ್ಡಗಾಡು ಪ್ರದೇಶದಲ್ಲಿ ಕುರಿ ಮೇಯಿಸುವಾಗ ಹಗಲುಗಳ್ಳಲು ಹಿಂದೆ ಬಿದ್ದ ಅಥವಾ ಹಿಂಡು ಬಿಟ್ಟು ದೂರ ಮೇಯುತ್ತಿರುವ ಕುರಿಗಳನ್ನು ಹಿಡಿದು ಕಾಲುಕಟ್ಟಿ ನಂತರ ಅರಚದಂತೆ ನಾಲಿಗೆಗೆ ಪಿನ್ನು ಅಥವಾ ಮುಳ್ಳು ಹಾಕುತ್ತಾರೆ. ಕುರಿಗಳು ಗುಡಾರಕ್ಕೆ ಮರಳಿದ ನಂತರ ರಾತ್ರಿ ಸಾಗಿಸಿ ಮಾರಾಟ ಮಾಡುತ್ತಾರೆ. ರಾತ್ರಿ ಕಳ್ಳತನ ಮಾಡುವವರು ಕುರಿಗಾರರು ಸಂಪೂರ್ಣ ನಿದ್ರೆ ಹೋಗಿದ್ದನ್ನು ಗಮನಿಸಿ, ಕುರಿಗಳನ್ನು ಹೊತ್ತುಕೊಂಡು ಹೋಗುತ್ತಾರೆ. ಇತ್ತೀಚಿನ ದಿನಗಳಲ್ಲಿ ಕುರಿ ಕಳವು ಹೆಗಲ ಮೇಲೆ ಹೊತ್ತು ಸಾಗಿಸುವುದರ ಬದಲು ಟೆಂಪೋ ಅಥವಾ ಲಾರಿಗಳಲ್ಲಿ ಹೇರಿಕೊಂಡು ಹೋಗುತ್ತಿದ್ದಾರೆ. ಉದಾಹರಣೆಗೆ ಅಕ್ಷಯ ತದಗಿ ಅಮವಾಸ್ಯೆಯ ದಿನ ಅಂದರೆ ೧೭.೪.೨೦೦೭ರ ದು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಸೌಂದಲಗೆ ಗ್ರಾಮದ ಮಂಜುನಾಥ ದುರಗಣ್ಣನವರ್, ಕಡಕಲಾಟ ಗ್ರಾಮದ ಖಾನಪ್ಪ ಪೂಜಾರಿ ಮತ್ತು ನಾಯಿಂಗಳಾಜ್ ಗ್ರಾಮದ ದೇವರಸಿ ಖಾನಪ್ಪನವರು ಬಳ್ಳಾರಿ-ಸಿರುಗುಪ್ಪ ಮುಖ್ಯ ರಸ್ತೆಯಲ್ಲಿರುವ ಶ್ರೀನಿವಾಸ ಕ್ಯಾಂಪ್ ಹತ್ತಿರ ಕುರಿಗಳನ್ನು ತಬ್ಬಿದಾಗ ೪೫ ಕುರಿ ಕಳ್ಳತನವಾಗಿವೆ. ಇದು ಒಂದು ಉದಾಹರಣೆ. ಇಂತಹ ಕಳ್ಳತನಗಳು ವರ್ಷದಲ್ಲಿ ಎಷ್ಟು ಆಗುತ್ತವೆ ಎಂಬುದನ್ನು ಸ್ಪಷ್ಟವಾಗಿ ಹೇಳಲು ಸಾಧ್ಯವಿಲ್ಲ. ಪೊಲೀಸ್ ಇಲಾಖೆಗೆ ದೂರು ನೀಡಿದರೂ ಪ್ರಯೋಜನವಾಗುತ್ತಿಲ್ಲ. ಪ್ರಸ್ತುತ ದಿನಗಳಲ್ಲಿ ಕಳ್ಳತನ ಹೆಚ್ಚಾಗುತ್ತಿರುವುದರಿಂದ ಕೆಲವರು ವೃತ್ತಿಯಿಂದ ದೂರ ಸರಿಯುತ್ತಿದ್ದಾರೆ.

ಪ್ರಕೃತಿ ಮಡಿಲಲ್ಲಿ ಜೀವಿಸುತ್ತಿರುವದರಿಂದ ಅವರಿಗೆ ಮತ್ತು ಕುರಿಗಳಿಗೆ, ವನ್ಯ ಮೃಗಗಳು ಹಾಗೂ ಆಗಂತುಕರಿಂದ ಜೀವ ಭಯವಿದೆ. ಆದ್ದರಿಂದ ಆತ್ಮರಕ್ಷಣೆಗಾಗಿ ಬಂದೂಕು ಹೊಂದುವ ಪರವಾನಗಿಯನ್ನು ಸೂಕ್ತ ಪ್ರಾಧಿಕಾರದಿಂದ ನೀಡುವುದು. ಸದರಿ ಬಂದೂಕನ್ನು ಯಾವುದೇ ಜಿಲ್ಲೆಗಳ ಗಡಿ ನಿರ್ಬಂಧವಿಲ್ಲದೆ ಇಡೀ ರಾಜ್ಯಾದ್ಯಂತ ತೆಗೆದುಕೊಂಡು ಹೋಗಲು ಪರವಾನಗಿ ನೀಡುವುದು ಅಗತ್ಯತೆ ಇದೆ.

ಮೂಲಸೌಕರ್ಯ

ಮಾನವನ ಬದುಕು ಸುಲಲಿತವಾಗಿ ನಡೆದುಕೊಂಡು ಹೋಗಲು ಮೂಲಸೌಕರ್ಯಗಳು ಬೇಕು. ಅವುಗಳಲ್ಲಿ ಸಾರಿಕೆ-ಸಂಪರ್ಕ, ಕುಡಿಯುವ ನೀರು, ಶಿಕ್ಷಣ, ಆರೋಗ್ಯ, ವಸತಿ ಇತ್ಯಾದಿ ಮುಖ್ಯವಾದವು. ಇವರು ಅಲೆದಾಡುವ ದಾರಿ ದುರ್ಗಮವಾದದು. ಅದು ಬೆಟ್ಟ-ಗುಡ್ಡ, ಕಲ್ಲು-ಮುಳ್ಳು, ತೆಗ್ಗು-ದಿನ್ನೆ, ನೀರು-ಕೆಸರುಗಳಿಂದ ಕೂಡಿರುತ್ತದೆ. ಇಂತಹ ಮಾರ್ಗಗಗಳ ಮೂಲಕವೇ ತಮ್ಮ ಕೌಟುಂಬಿಕ ಸಾಮಾನುಗಳನ್ನು ಕುದುರೆಗಳ ಮೇಲೆ ಹೇರಿಕೊಂಡು, ಇನ್ನೂ ಕೆಲವನ್ನೂ ತಲೆಯ ಮೇಲೆ ಹೊತ್ತುಕೊಂಡು ಸಾಗಿಸಬೇಕು. ಹೀಗೆ ಸಾಮಾನುಗಳನ್ನು ಸಾಗಿಸುವಾಗ ಅನುಭವಿಸುವ ಯಾತನೆಗಳನ್ನು ಶಬ್ದಗಳಲ್ಲಿ ಹೇಳಲು ಅಸಾಧ್ಯವೆನಿಸುತ್ತದೆ.

ಸಂತೋಷ ಅಥವಾ ದುಃಖದ ವಿಷಯವನ್ನು ಮುಟ್ಟಿಸಬೇಕು. ಅಥವಾ ಭೇಟಿಯಾಗಿ ತಿಳಿಸಬೇಕೆಂದರೆ ಪಡಬಾರದ ರಷ್ಟಪಡುತ್ತಾರೆ. ಯಾವ ದಿನ, ಯಾವ ಸ್ಥಳದಲ್ಲಿ ಕುರಿ ತಬ್ಬುತ್ತಾರೆ ಮತ್ತು ಯಾವ ದಿನ ಎಲ್ಲಿಗೆ ಗುಡಾರ ಬದಲಾಯಿಸುತ್ತಾರೆಂಬುದು ಯಾರಿಗೂ ಗೊತ್ತಾಗಿರುವುದಿಲ್ಲ. ಅದು ಆ ದಿನದಲ್ಲಿ ಬದಲಾಯಿಸುವವರಿಗೆ ಮಾತ್ರ ತಿಳಿದಿರುತ್ತದೆ. ಕೆಲವೊಂದು ಸಲ ಸ್ವಗ್ರಾಮದಿಂದ ಕಾಣಲು ಬಂದವರು ವಾರಗಟ್ಟಲೇ ಹುಡುಕಿ ಹಿಂತಿರುಗಿದ ಸಂದರ್ಭಗಳಿವೆ. ಆದರೆ ಇತ್ತೀಚೆಗೆ ಮೊಬೈಲ್‌ ಮತ್ತು ದೂರವಾಣಿ ಸೇವೆಗಳು ಅನುಕೂಲ ಸಿಂಧು ಮಾಧ್ಯಮವಾಗಿ ಲಭಿಸಿವೆ.

ಶುದ್ಧ ಕುಡಿಯುವ ನೀರು ಕನಸಿನ ಮಾತು. ಮಳೆಯಿಂದ ಅಥವಾ ಬಸಿಯುವಿಕೆ ಮೂಲಕ ಹರಿದು ಬಂದು ಕುಣಿ, ತಗ್ಗು, ಕೆರೆ, ಹಳ್ಳ ಇತ್ಯಾದಿ ಸ್ಥಳಗಳಲ್ಲಿ ನಿಂತ ನೀರನ್ನೇ ಕುಡಿಯಲು ಹಾಗೂ ದಿನಬಳಕೆ ಮಾಡಲು ಬಳಸುತ್ತಾರೆ. ಕೆಲವೊಮ್ಮೆ ನೀರಾವರಿ ಪ್ರದೇಶದಲ್ಲಿ ಸಿಂಪಡಿಸಿದ ಕ್ರಿಮಿನಾಶಕಗಳ ಮಿಶ್ರಣವುಈ ನೀರಿನಲ್ಲಿ ಬೆರೆತು ಅಥವಾ ಸಾಂಕ್ರಾಮಿಕ ರೋಗಾಣುಗಳು ಸೇರಿದ ನೀರನ್ನು ಕುಡಿದ ಕುರಿಗಳನ್ನು ಸಾವನ್ನಪ್ಪಿದ ಸಂಬರ್ಧಗಳುಂಟು. ಕುರಿಗಾರರು ವಾಂತಿ-ಭೇದಿಯಂತಹ ರೋಗಗಳಿಗೆ ತುತ್ತಾಗಿರುವ ಉದಾಹರಣೆಗಳಿರುವುದು ತಿಳಿದುಬಂದಿದೆ. ಕುರಿ-ಮೇಕೆಗಳನ್ನು ಕಾಡುತ್ತಿರುವ ದೊಡ್ಡ ರೋಗ ಪಿ.ಪಿ.ಆರ್., ಮೈಲಿಬೇನಿ, ನೀಲಿನಾಲಿಗೆ, ಸಿಡುಬು, ಕಾಲು-ಬಾಯಿಬೇನೆ ಇತ್ಯಾದಿ ರೋಗಗಳ ನಿಯಂತ್ರಣ ಮಾಡುವ ಸಲುವಾಗಿ ಪಲ್ಸ್‌ಪೋಲಿಯೋ ಅಭಿಯಾನ ಮಾದರಿಯಂತೆ ರೋಗ ನಿರೋಧಕ ಲಸಿಕೆ ಹಾಕುವ ಆಂದೋಲನವನ್ನು ಸರ್ಕಾರ ಕೈಗೊಳ್ಳಲೇಬೇಕು. ರಾಜ್ಯದಲ್ಲಿರುವ ಸಮಸ್ತ ಕುರಿ-ಮೇಕೆಗಳ ಆರೋಗ್ಯ ರಕ್ಷಣೆಗೆ ಸರ್ಕಾರ ಜಂತುನಾಶಕ ಔಷಧಗಳನ್ನು ಉಚಿತವಾಗಿ ಪೂರೈಕೆ ಮಾಡಬೇಕು. ಕುರಿ ಮತ್ತು ಕುರುಬನ ನೀರಿನ ಬವಣೆಯನ್ನು ಹೋಗಲಾಡಿಸಲು ಅವರು ಅಲೆದಾಡುವ ಮಾರ್ಗಗಳಲ್ಲಿ ಕೊಳವೆ ಬಾವಿಗಳನ್ನು ಕೊರೆದು, ನೀರಿನ ತೊಟ್ಟಿಗಳನ್ನು ನಿರ್ಮಿಸಿ, ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಬೇಕು. ಇದರಿಂದ ಕುರಿಗಳಿಗೆ ಹಾಗೂ ಕುರಿಗಾರರಿಗೆ ಕಾಣಿಸಿಕೊಳ್ಳುವ ರೋಗ-ರುಜಿನಗಳನ್ನು ಕಡಿಮೆಗೊಳಿಸಬಹುದು.

ಔಪಚಾರಿಕ ಶಿಕ್ಷಣ ಜಾರಿಗೆ ಬಂದ ಮೇಲೆ ರಾಜ್ಯದ ವಿವಿಧ ಸಮುದಾಯಗಳು ಅವರವರ ಸಾಮಾಜಿಕ-ಆರ್ಥಿಕ ಸ್ಥಿತಿಗಳಿಗೆ ತಕ್ಕಂತೆ ಶಿಕ್ಷಣ ಪಡೆದು ವಿದ್ಯಾವಂತರಾಗತೊಡಗಿದರು. ಆದರೆ ಇವರಿಗೆ ಔಪಚಾರಿಕ ಶಿಕ್ಷಣದ ಅವಕಾಶವೇ ಸಿಗಲಿಲ್ಲ. ಅತಿ ಹಿಂದುಳಿದಿರುವಿಕೆ ಮತ್ತು ತಮ್ಮ ಜೀವನೋಪಾಯಕ್ಕಾಗಿ ಕುಟುಂಬ ಕಟ್ಟಿಕೊಂಡು ಕುರಿಗಳ ಜೊತೆ ವರ್ಷವಿಡೀ ಅಲೆದಾಡುತ್ತಿರುತ್ತಾರೆ. ಇದು ಅವರ ಮಕ್ಕಳನ್ನು ಶಾಲೆಗೆ ಕಳುಹಿಸಲು ಅಡ್ಡಿ ಉಂಟುಮಾಡಿದೆ. ಜೊತೆಗೆ ಕುರಿ ಸಂಗೋಪನೆ ಶ್ರಮ ಸಾಂದ್ರ ಉದ್ಯೋಗವಾದ್ದರಿಂದ ಕುಟುಂಬದ ಎಲ್ಲ ಸದಸ್ಯರು ಅಂದರೆ ಚಿಕ್ಕವರಿದ್ದಾಗ ಮರಿಗಳ ಸಂಗೋಪನೆ, ಹತ್ತು-ಹದಿನೈದು ವರ್ಷಗಳಾದ ನಂತರ ಕುರಿ ಕಾಯಲು ಕಳುಹಿಸುತ್ತಾರೆ. ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಇಲಾಖೆ ಹಾಗೂ ರಾಜ್ಯ ಸರ್ಕಾರಗಳು ೧೪ ವರ್ಷಗಳವರೆಗಿನ ಮಕ್ಕಳಿಗೆ ಉಚಿತ ಹಾಗೂ ಕಡ್ಡಾಯ ಶಿಕ್ಷಣ ಘೋಷಣೆಗಳು ಅಲೆಮಾರಿ ಕುರುಬರ ಮಕ್ಕಳ ವ್ಯಾಪ್ತಿಯವರೆಗೆ ಸಾಗಿದರೆ ಅದಕ್ಕೊಂದು ಅರ್ಥ ಸಿಕ್ಕಂತಾಗುತ್ತದೆ. ಆದ್ದರಿಂದ ಬಿಹಾರ ಸರ್ಕಾರ ಮಾದರಿಯಲ್ಲಿ ಎಲ್ಲಿ ವಲಸೆಯೋ ಅಲ್ಲಿ ಶಾಲೆ ಎಂಬ ಯೋಜನೆಯನ್ನು ಜಾರಿಗೊಳಿಸುವುದು ಅಗತ್ಯವಾಗಿದೆ. ಈ ಯೋಜನೆಯಡಿ ಕ್ಷೇತ್ರ ಶಿಕ್ಷಣ ಸಂಪನ್ಮೂಲ ಕೇಂದ್ರಗಳಿಂದ ಅಲೆಮಾರಿ ಕುರುಬರ ಮಕ್ಕಳಿಗೆ ವರ್ಗಾವಣೆ ಪತ್ರವನ್ನು ವಿತರಿಸುವುದು. ವಲಸೆಯ ಸಮಯದಲ್ಲಿ ನೆಲಸಬಹುದಾದ ಗುಡಾರ ಹೂಡಿದ ಗ್ರಾಮದ ಭೂಪ್ರದೇಶಕ್ಕೆ ವಲಸೆ ಹೋಗುವ ಮುನ್ನ ವರ್ಗಾವಣೆ ಪತ್ರದಲ್ಲಿ ದಾಖಲಿಸಿ, ಮುಂದಿನ ಶಾಲೆಗೆ ವರ್ಗಾಯಿಸುವ ಪದ್ಧತಿಯನ್ನು ಅನುಸರಿಸುವುದು. ಹಾಗೆಯೇ ಮಕ್ಕಳನ್ನು ಕುರಿತಬ್ಬುವ ಸ್ಥಳದಿಂದ ಬೆಳಿಗ್ಗೆ ಶಾಲೆಗೆ ಕರೆತರಲುಮತ ತು ಸಂಜೆ ಕುರಿತಬ್ಬಿದ ಸ್ಥಳಕ್ಕೆ ಬಿಟ್ಟು ಬರಲು ವಾಹನದ ವ್ಯವಸ್ಥೆ ಮಾಡಬೇಕು.

ಕರ್ನಾಟಕ ರಾಜ್ಯದಲ್ಲಿ ಕುರಿ ಸಾಕಾಣಿಕೆಗೆ ವಿಪುಲ ಅವಕಾಶಗಳಿವೆ. ಇವರು ಹೆಚ್ಚಾಗಿ ಅಲೆದಾಡುವ ಜಿಲ್ಲಾ ಕೇಂದ್ರಗಳ ಸಮೀಪ ಕುರಿ ಸಾಕಾಣಿಕೆ ಫಾರ್ಮಗಳನ್ನು ಸ್ಥಾಪಿಸಬೇಕು. ಈಗಾಗಲೇ ದೇಶದಲ್ಲಿಯೇ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ‘ಜೈಪುರದ ಕುರಿ ಸಾಕಾಣಿಕೆ ಸಂಶೋಧನಾ ಕೇಂದ್ರ’ದ ಮಾದರಿಯಲ್ಲಿಯೇ ಕರ್ನಾಟಕ ರಾಜ್ಯದ ಹಾವೇರಿ ಅಥವಾ ದಾವಣಗೆರೆ ಜಿಲ್ಲೆಯಲ್ಲಿ ಸ್ಥಾಪನೆಯಾಗಬೇಕು.

ಉಪಸಂಹಾರ

ಸಮಾಜ ಎಂಬುದು ವಿಶಾಲತೆಯ ದೃಷ್ಟಿಯಿಂದ ಕೈಗೆಟುಕದಿರುವ ವ್ಯಾಪ್ತಿಯನ್ನು ಹೊಂದಿದೆ. ವಿಜ್ಞಾನವು ನಿಗೂಢ ವಿಸ್ಮಯಗಳ ತವರೂರಾಗಿದೆ. ಈ ಎರಡೂ ವಿಷಯಗಳು ಮನುಷ್ಯನನ್ನು ಹೊರತುಪಡಿಸಿ ನಿಲ್ಲುವುದಿಲ್ಲ. ಮಾನವನ ಬೌದ್ಧಿಕ ಶಕ್ತಿಯ ಫಲವಾಗಿ ಜಗತ್ತಿನಲ್ಲಿ ಎಷ್ಟೇ ಹೊಸ ಹೊಸ ಆವಿಷ್ಕಾರಗಳನ್ನು ಮಾಡಿದರೂ ಕೆಲವೊಂದು ಸಮುದಾಯಗಳ ಮೂಲ ವೃತ್ತಿಯನ್ನು ಬದಲಾಯಿಸಿಕೊಳ್ಳಲು ಸಾಧ್ಯವಿಲ್ಲ. ಅಲೆಮಾರಿ ಕುರುಬರು ಕುಲಮೂಲ ವೃತ್ತಿಯನ್ನು ಬದಲಾಯಿಸಿಕೊಳ್ಳದ, ಬದಲಾಯಿಸಿಕೊಂಡರೆ ಜೀವನಕ್ಕೆ ಬೇರೆ ಗತಿ ಇಲ್ಲದ ಸ್ಥಿತಿಯಲ್ಲಿರುವರು. ನೈಸರ್ಗಿಕ ವಿಜ್ಞಾನದೊಂದಿಗೆ ಹಾಗೂ ಸಮಾಜದ ವಿವಿಧ ಆಚರಣೆಗಳಿಗೆ ಹೊಂದಿಕೊಂಡು ಇಂದಿಗೂ ತಾವು ಬದುಕುವ ಪ್ರಾಣಿ ಸಂತತಿಗಳನ್ನು ಅಭಿವೃದ್ಧಿ ಪಡಿಸುತ್ತಾ ಮಾನವನ ಆಹಾರ ಸರಪಳಿಗೆ ಕೊಂಡಿಯಾಗಿದ್ದಾರೆ.ಅವ ರ ನಿತ್ಯದಬ ದುಕು, ಕೌಟುಂಬಿಕ ಪರಿಸರ, ದುಡಿಮೆಯ ಛಲ, ಸಾಧು ಪ್ರಾಣಿಗಳಿಗೆ ಕುರಿ-ಮೇಕೆ ವರವಾದರೆ, ಮನುಷ್ಯ ನಿರ್ಮಿತ ಮೂಲ ಸೌಕರ್ಯಗಳಿಂದ ದೂರವಾಗಿದ್ದಾರೆ.

ಜನವಸತಿ ಪ್ರದೇಶಗಳಲ್ಲಿ ಜೀವಿಸುವ ಅಕ್ಷರಸ್ಥ, ವಿದ್ಯಾವಂತ, ಜ್ಞಾನವಂತ, ಮನುಷ್ಯರ ಸೌಲಭ್ಯಗಳಿಲ್ಲವೆಂದು ಗೋಗರೆಯುವರು, ಯಾವುದೇ ನಿರ್ದಿಷ್ಟ ಸ್ಥಳದಲ್ಲಿ ವಾಸಿಸದೆ, ಅಕ್ಷರಲೋಕ ಕಾಣದ ಇವರ ಬದುಕಿನ ಸಮಸ್ತೆಗಳು ಅನಂತವಾಗಿವೆ. ಈ ಸಮಸ್ಯೆಗಳಿಗೆ ಸೂಚಿಸುವ ಪರಿಹಾರೋಪಾಯಗಳು ಕೂಡ ಅಷ್ಟೇ ಜಟಿಲವಾಗಿವೆ. ಆದರೂ ಸಹ ಸಮಸ್ಯೆಗಳ ನಡುವೆಯೂ ಪರರನ್ನು ಬಯಸದೆ, ವೃತ್ತಿ ಜೀವನವನ್ನು ಬಿಡದೆ, ಸಾಂಸ್ಕೃತಿಕ ವೈಶಿಷ್ಟ್ಯಗಳನ್ನು ಉಳಿಸಿಕೊಂಡು ಪರಿಸರ ಸ್ನೇಹಿಯಾಗಿದ್ದಾರೆ.

ಆಧಾರ ಗ್ರಂಥಗಳು

೧. ಶಿವಾನಂದ ಗುಬ್ಬಣ್ಣವರ, ಕರ್ನಾಟಕ ಕುರುಬರು, ಅಕ್ಷರ ಪ್ರಕಾಶನ, ಧಾರವಾಡ, ೧೯೯೩.

೨. ಹನುಮಂತಯ್ಯ ವ್ಹಿ.ಆರ್. (ಸಂ) ಪ್ರೊ. ಸುಧಾಕರ, ಕುರುಬರ ಚರಿತ್ರೆ, ಪ್ರತಿಭೆ ಪ್ರಕಾಶನ, ಮೈಸೂರು, ೧೯೯೬.

೩. ಮೈತ್ರಿ ಕೆ.ಎಂ., ಬುಡಕಟ್ಟು ಕುಲಕಸುಬುಗಳು, ಕನ್ನಡ ವಿಶ್ವವಿದ್ಯಾಲಯ ಹಂಪಿ, ವಿದ್ಯಾರಣ್ಯ, ೨೦೦೨.

೪. ಶಂ. ಬಾ. ಜೋಶಿ, ಕರ್ನಾಟಕ ವೀರಕ್ಷತ್ರಿಯರು, ಮನೋಹರ ಘಾಣೇಕರ ಪ್ರಕಾಶಕರು, ಸಮಾಜ ಬುಕ್ ಡಿಪೋ, ಧಾರವಾಡ.

೫. ಡಾ. ಗೋವಿಂದಯ್ಯ, ಎಂ.ಜಿ.ಡಾ. ಜಗನ್ನಾಥ, ಗ್ರಾಮೀಣ ಅಭಿವೃದ್ಧಿಯಲ್ಲಿ ಕುರಿಸಾಕಾಣಿಕೆ ಮಹತ್ವ, ಕೃಷಿ ವಿಶ್ವವಿದ್ಯಾಲಯ, ಬೆಂಗಳೂರು, ೨೦೦೫.

೬. ಬಸವರಾಜಪ್ಪ ಎಸ್., ಜೈವಿಕ ಗೊಬ್ಬರಗಳು, ಪ್ರಸಾರಾಂಗ ಕುವೆಂಪು ವಿಶ್ವವಿದ್ಯಾಲಯ, ಶಿವಮೊಗ್ಗ ೨೦೦೧.

ಪತ್ರಿಕಾ ವರದಿಗಳು

೧. ತುಂಗಭದ್ರಾ ಬಲದಂಡೆಯ ಅಕ್ಷರಜ್ಞಾನ ವಂಚಿತ ಕುರಿಗಾರ ಮಕ್ಕಳು, ಪ್ರಾದೇಶಿಕ ಸುದ್ದಿ ಪ್ರಜಾವಾಣಿ, ೧.೩.೨೦೦೫.

೨. ಕುರಿಗಾರರ ರಕ್ಷಣೆಗೆ ವಿಮಾ ಯೋಜನೆ, ಪ್ರಾದೇಶಿಕ ಸುದ್ದಿ, ಪ್ರಜಾವಾಣಿ ೧೧.೦೭.೨೦೦೫.

೩. ಕುರಿಗಾರರು (ಕೊಪ್ಪಳ, ರಾಯಚೂರು ಮತ್ತು ಬಳ್ಳಾರಿ ಜಿಲ್ಲೆಯ ನೋಡಿ)

೧. ಜಾನಪದ ಕ್ಷೇತ್ರದಲ್ಲಿ ಕುರಿಗಾರರ ಛಾಪು, ಲೇಖನ: ರುದ್ರಪ್ಪ ಭಂಡಾರಿ

೨. ಸಾಮಾಜಿಕ ಸೌಲಭ್ಯ ವಂಚಿತ ಅಲೆಮಾರಿ ಬದುಕು ಲೇಖನ: ಕೆ.ಎಂ. ಮಂಜುನಾಥ, ವಿಜಯ ಕರ್ನಾಟಕ, ೭.೧೧.೨೦೦೫, ಸಂಪುಟ ೧೨.

೪. ನಡೆದಾಡುವ ಬ್ಯಾಂಕುಗಳನ್ನು ಕಾಡುವ ರೋಗ, ಲೇ: ಡಾ. ಬುಳೂರು ಆರ್. ಹರೀಶ್, ಪ್ರಜಾವಾಣಿ, ಕೃಷಿ ಸಾಪ್ರಾಹಿತ, ೮.೨.೨೦೦೬, ಪುಟ ೪.

೫. ವಿಮೆ ಬಡ ಕುರಿಗಾರರನ್ನೇ ಮರೆತ ಜನಶ್ರೀ, ಲೇಖನ: ಸಿದ್ದಯ್ಯ ಹಿರೇಮಠ, ಪ್ರಜಾವಾಣಿ, ಕರ್ನಾಟಕ ದರ್ಶನ, ಪುರವಣಿ ೨೪.೧.೨೦೦೭, ಪುಟ ೧.

Reference

1. Banerjee G.C. A Text Book of Animal husbandry, 1969, oxford and IBH Publishing Co-Pvt. Ltd., Calcutta.

2. Basathakur (ARS) Sheep Research, Production & Marketing I India 1998-Inter-Inter-India Publication, New Delhi.

3. Bharara L.P. Socio economic aspects of Live Stock migration and Pastrol Nomedism in drought prone areas of Rajasthan in livestack economy of India. Oxford and IBH Publishing-Bombay 1989.

4. Devendra C. and G.B. Mclerely, Goat, and Sheep production I the Topics 1982, International Trepical Agricultureal series, New Delhi.

5. Pragya Sharma, Tribal society in a Flux (Raika) 2005, Panchasheela prakashan, Jaipur.

ಮಾಹಿತಿದಾರರು

೧. ಅಪ್ಪಣ್ಣ ಕಾಮಣ್ಣ ಪೂಜಾರಿ, ವಯಸ್ಸು ೫೨, ಸೌಂದಲಗ, ಚಿಕ್ಕೋಡಿ ತಾ., ಬೆಳಗಾವಿ ಜಿಲ್ಲೆ, ಮೊ. ೯೮೪೫೪ ೩೧೧೫೧.

೨. ಅಣ್ಣಪ್ಪ ಸತ್ಯಪ್ಪ ಪೂಜಾರಿ, ವಯಸ್ಸು ೫೫, ಅಪ್ಪನಹಟ್ಟಿ ಚಿಕ್ಕೋಡಿ ತಾ. ಬೆಳಗಾವಿ ಜಿಲ್ಲೆ, ಮೊ. ೯೪೪೮೬ ೩೨೯೩೭.

೩. ಮಂಜುನಾಥ, ಭೀಮ ದುರಗಣ್ಣನವರ್, ವಯಸ್ಸು ೩೨, ಸೌಂದಲಗ, ಚಿಕ್ಕೋಡಿ ತಾ. ಬೆಳಗಾವಿ ಜಿಲ್ಲೆ.

೪. ಲಕ್ಷ್ಮಣರಾವ್ ಚಿಂಗಳೆ, ವಯಸ್ಸು ೫೫, ಮಾಜಿ ಅಧ್ಯಕ್ಷರು ಕರ್ನಾಟಕ ಕುರುಬರ ಸಂಘ, ಬೆಂಗಳೂರು, ಸಾ.ನಿಪ್ಪಾಣಿ, ತಾ. ಚಿಕ್ಕೋಡಿ. ಬೆಳಗಾವಿ ಜಿಲ್ಲೆ, ಮೊ.೯೪೪೮೧ ೨೮೪೦೯.

೫. ಗಾದಿಲಿಂಗನಗೌಡ, ಸಹಾಯಕ ನಿರ್ದೇಶಕರು, ಪಶುವೈದ್ಯಕೀಯ ಆಸ್ಪತ್ರೆ, ಬಳ್ಳಾರಿ.