ಪೀಠಿಕೆ: ಇಂದು ಏನೆಲ್ಲಾ ಆಧುನಿಕ ಜ್ಞಾನವನ್ನು ಮಾನವ ಅರಿತವನಾಗಿದ್ದಾನೆ. ತಾನಿರುವ ಭೂಮಿಯನ್ನು ಮಾತ್ರವಲ್ಲದೆ, ಸೌರವ್ಯೂಹದಲ್ಲಿ ಇರುವ ಭೂಮಿಯ ಉಗ್ರಹವಾದ ಚಂದ್ರನಲ್ಲಿಗೆ ಹೋಗಿ ಬಂದಿದ್ದಾನೆ. ಹಾಗೆಯೇ ಮಂಗಳ ಗ್ರಹವನ್ನು ಅಧ್ಯಯನ ಮಾಡುವ ಸಲುವಾಗಿ ವಿಶ್ವದ ವಿಜ್ಞಾನಿಗಳೇ ಒಂದಾಗಿ ಕಾರ್ಯನಿರತರಾಗಿದ್ದಾರೆ. ಈ ಕೆಲವು ಸಂಗತಿಗಳು ಮಾನವದಲ್ಲಿ ಇರುವ ಅಗಾದ ಪ್ರತಿಭೆಯ ವಿರಾಟರೂಪವನ್ನು ಮನವರಿಕೆ ಮಾಡಿಕೊಡುತ್ತವೆ. ಆದರೆ ವಿಶ್ವದ ಸೃಷ್ಟಿಯನ್ನು ಕುರಿತು ಒಂದು ಊಹಾತ್ಮಕ ಸಿದ್ಧಾಂತವನ್ನು ನಂಬಿರುವುದು ಸರಿಯಾದರೂ ಅದೇ ಅಂತಿಮ ಸತ್ಯ ಎಂಬ ವಾದವೆಂದು ಹೇಳಲು ಬರುವುದಿಲ್ಲ. ಆ ಸತ್ಯವನ್ನು ಸಾಬೀತು ಪಡಿಸಿಕೊಳ್ಳುವ ಸಲುವಾಗಿ ೨೦೦೮ ರಲ್ಲಿ Big Bang Theory ಎಂಬ ಹೆಸರಿನಲ್ಲಿ ಈ ಸೌರ್ಯಮಂಡಲದ ಸೃಷ್ಟಿಯನ್ನು ಅರಿಯುವ ಸಲುವಾಗಿ ಭೂಮಿಯ ಆಳದಲ್ಲಿ ಒಂದು ಪ್ರಯೋಗಾಲಯವನ್ನು ಸೃಷ್ಟಿಸಿ ಅಂತಹ ಪ್ರಯತ್ನವೊಂದನ್ನು ಮಾಡಲಾಗಿತ್ತು. ಈ ಸಂಬಂಧ ಜಗತ್ತಿನಾದ್ಯಂತ ಕಾರ್ಯನಿರತರಾಗಿ ಶ್ರಮಿಸಿದ್ದಾರೆ. ಅದರ ಫಲಿತಾಂಶ ಮಾತ್ರ ಇನ್ನು ತಿಳಿಯಬೇಕಾಗಿದೆ. ಇದಕ್ಕಾಗಿ ಖರ್ಚಾದ ಮೊತ್ತವು ದುಬಾರಿಯಾಗಿತ್ತು.

ಮೇಲಿನ ಸಂಗತಿಯನ್ನು ವಿವರಿಸುವ ಮೂಲಕ ಮಾನವನ ಮಿತಿ ಏನು ಎಂಬುದನ್ನು ಅರಿತುಕೊಳ್ಳುವುದೇ ಆಗಿದೆ. ಹಲವಾರು ಸಂದರ್ಭಗಳಲ್ಲಿ ಊಹೆಯ ಮೂಲಕವಷ್ಟೆ ತನ್ನ ಅನುಮಾನ ಅಥವಾ ಸಮಸ್ಯೆಗಳಿಗೆ ಪರಿಹಾರ ಇಲ್ಲವೇ ಸಮಾಧಾನವನ್ನು ತಂದುಕೊಳ್ಳಬೇಕಾಗುತ್ತದೆ. ಪ್ರಸ್ತುತ ಸಮುದಾಯಗಳ ಅಧ್ಯಯನಗಳಿಗೆ ಸಂಬಂಧಿಸಿದಂತೆ ಬೇರೆ ಬೇರೆ ಶಿಸ್ತುಗಳ ಹಿನ್ನೆಲೆಯಲ್ಲಿ ಮಾನವನನ್ನು ಈಗಿನ ಅಧ್ಯಯನಗಳ ವೈಜ್ಞಾನಿಕ ತಳಹದಿಯ ಮೂಲಕ ಹೆಚ್ಚು ಹೆಚ್ಚು ನಿಖರವಾದ ಫಲಿತಾಂಶವನ್ನು ಪಡೆಯುವುದು ಸಾಧ್ಯವೆಂಬುದನ್ನು ಸಾಬೀತುಪಡಿಸಿವೆ. ಉದಾಹರಣೆಗೆ ವಿವಿಧ ಬುಡಕಟ್ಟುಗಳು ಬೇರೆ ಬೇರೆ ಹೆಸರುಗಳಿಂದ ಕರೆಯಲ್ಪಟ್ಟರೂ ಪ್ರಾದೇಶಿಕ ಭಿನ್ನತೆಯನ್ನು ಹೊಂದಿದ್ದರೂ ಅವರ ಮೂಲ ಒಂದೇ ಆಗಿರುವ ಸಾಧ್ಯತೆ ಇದೆ. ಆದರೆ ಅವರಲ್ಲಿ ಉಂಟಾಗಿರಬಹುದಾದ ಸ್ಥಳೀಯ ಸಂಸ್ಕೃತಿಯ ಪ್ರಭಾವದ ಕಾರಣ ಆ ಗುಂಪುಗಳು ತಾವು ಪ್ರತ್ಯೇಕವೆಂದೇ ಗುರುತಿಸಿಕೊಳ್ಳಬಯಸುತ್ತವೆ. ದಕ್ಷಿಣ ಕರ್ನಾಟಕದಲ್ಲಿ ಇದೇ ಮಾದರಿಯ ಒಂದು ಸಾಧ್ಯತೆ ಏರ್ಪಟ್ಟಿರುವುದನ್ನು ಕಾಡುಕುರುಬ, ಜೇನುಕುರುಬ ಮತ್ತು ಒಕ್ಕೈಕುರುಬ ಎಂಬ ಈ ಲೇಖನದಲ್ಲಿ ಚರ್ಚೆಗೆ ಒಳಪಡಿಸಲಾಗಿದೆ.

ಕರ್ನಾಟಕದ ಅನುಸೂಚಿತ (Denotified Tribes) ಬುಡಕಟ್ಟುಗಳು ಐವತ್ತು ಎಂದು ಗುರುತಿಸಲಾಗಿದೆ. ಅವುಗಳಲ್ಲಿ ಜೇನುಕುರುಬ ಮತ್ತು ಕೊರಗ ಎಂಬ ಎರಡು ಬುಡಕಟ್ಟುಗಳನ್ನು ‘ಅದಿಮ ಬುಡಕಟ್ಟು’ಗಳು (Premitive Tribes) ಎಂದು ವಿಶೇಷವಾಗಿ ಗುರುತಿಸಿದ್ದಾರೆ. ಕಾಡುಕುರುಬ ಅಥವಾ ಬೆಟ್ಟ ಕುರುಬ ಸಮುದಾಯವು ಒಂದು ಸಾಮಾನ್ಯ ಬುಡಕಟ್ಟು ಮಾತ್ರ. ಆದರೆ, ಪ್ರಸ್ತುತ ಅಧ್ಯಯನದಲ್ಲಿ ಸೇರ್ಪಡೆಯಾಗಿರುವ ಒಕ್ಕೈಕುರುಬ ಎಂಬುದು ಯಾವುದೇ ಜಾತಿಗೂ ಸೇರದೆ ಅಥವಾ ಬುಡಕಟ್ಟು ಅಲ್ಲದ ಒಂದು ಸಮುದಾಯವಾಗಿದೆ. ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ತಾಲೂಕಿನ ರಾಮಾಪುರ ಹೋಬಳಿಯಲ್ಲಿ ತಮಿಳುನಾಡಿಗೆ ಹೊಂದಿಕೊಂಡಂತೆ, ಪಶ್ಚಿಮಘಟ್ಟದ ಮುಂದುವರಿಕೆಯಾಗಿ ಹಬ್ಬಿರುವ ಬೆಟ್ಟಸಾಲುಗಳಲ್ಲಿ ವಾಸ್ತವ್ಯವನ್ನು ಕಂಡುಕೊಂಡಿರುವ ಹಲವಾರು ಸಮುದಾಯಗಳಲ್ಲಿ ಒಕ್ಕೈಕುರುಬ ಸಮುದಾಯವು ಒಂದು.

ಅಧ್ಯಯನ ದೃಷ್ಟಿಯಿಂದ ಈ ಸಮುದಾಯವನ್ನು ಒಕ್ಕೈಕುರುಬ ಎಂದು ಕರೆಯಲಾಗಿದೆ. ಸ್ಥಳೀಯವಾಗಿ ಇವರನ್ನು ಕೊಂಗನಾಡು ಕುಡುಬ ಎಂಬುದಾಗಿ ಕರೆಯವುದು ತಿಳಿದುಬರುತ್ತದೆ. ಇದಲ್ಲದೆ ಕಚ್ಚೆ ಕುರುಬರು ಎಂಬುದಾಗಿಯೂ ಕರೆಯುವುದು ವಾಡಿಕೆಯಲ್ಲಿದೆ. ಈ ಲೇಖನದಲ್ಲಿ ವಿಶಿಷ್ಟವಾದ ಹೆಸರನ್ನು ಹೊಂದಿರುವ ಒಕ್ಕೈಕುರುಬ, ಕೊಂಗಡನಾಡು ಕುರುಬ ಅಥವಾ ಕಚ್ಚೆಕುರುಬ ಸಮುದಾಯವನ್ನು ಸಾಹಿತ್ಯಲೋಕಕ್ಕೆ ಪರಿಚಯಿಸುವ ಪ್ರಯತ್ನವನ್ನು ಮಾಡಲಾಗಿದೆ. ಈ ಸಮುದಾಯವನ್ನು ಸ್ಥಳೀಯರು ಬೇರೆ ಬೇರೆ ಹೆಸರುಗಳಿಂದ ಕರೆಯುತ್ತಾರಾದರೂ ತಾವುಗಳು ಮಾತ್ರ ತಮ್ಮನ್ನು ಹುಲ್ಲುಮನೆ ಕುರುಬರು ಹಾಗೂ ಹತ್ತಿ ಕಂಕಣದವರು ಎಂಬುದಾಗಿ ಕರೆದುಕೊಳ್ಳುವುದುಂಟು.

ಪದನಿಷ್ಪತ್ತಿ: ಹಲವಾರು ಹೆಸರುಗಳಿಂದ ಕರೆಯಿಸಿಕೊಳ್ಳುವುದರ ಹಿಂದೆ ಅದರದೇ ಆದ ಅರ್ಥವಿದೆ. ಆಯಾ ಪದಗಳ ನಿಷ್ಪತ್ತಿಯನ್ನು ಇಲ್ಲಿ ನೀಡಲಾಗಿದೆ.

ಒಕ್ಕೈಕುರುಬ ಎಂಬ ಪದವನ್ನು ಒಂದು+ಕೈ+ಕುರುಬ= ಒಕ್ಕೈಕುರುಬ ಎಂದು ಅರ್ಥೈಸಿಕೊಳ್ಳಬಹುದಾದರೂ ಅದು ಕೇವಲ ವ್ಯಾಪಕರಣದ ಅರ್ಥವಷ್ಟೆ. ಆದರೆ ಅದರ ಹಿಂದಿರಬಹುದಾದ ವಾಸ್ತವ ಇಲ್ಲವೇ ಪ್ರಾಯೋಗಿಕ ಸನ್ನಿವೇಶವೇನಿರಬಹುದು ಎಂಬುದನ್ನು ತಿಳಿಯುವುದು ಬಹು ಮುಖ್ಯವಾದ ಅಂಶವಾಗಿದೆ. ನೂರಾರು ವರ್ಷಗಳ ಹಿಂದೆ ಐದಾರು ತಲೆಮಾರಿನ ಜನರಲ್ಲಿ ಘಟಿಸಿರುವ ಒಂದು ಆಕಸ್ಮಿಕ ಪರಿಸ್ಥಿತಿಯ ಕಾರಣ ಒಂದು ಪ್ರದೇಶದ ಜನರಿಕೆ ಒಕ್ಕೈಕುರುಬ ಎಂಬ ಹೆಸರು ಬಂದಿದ್ದಾದರು ಇದು ಜನರಲ್ಲಿ ಚಾಲ್ತಿಯಲ್ಲಿ ಇದ್ದಿರಲಿಲ್ಲ. ಬದಲಾಗಿ ಭಾಷೆಯನ್ನು ಆಧರಿಸಿ ಕೊಂಗನಾಡು ಕುರುಬ ಎಂಬ ಹೆಸರು ರೂಢಿಯಲ್ಲಿದ್ದರೇ ಅವರ ಉಡುಗೆಯನ್ನು ಪರಿಗಣಿಸಿ ಕಚ್ಚೆಕುರುಬ ಎಂಬ ಮತ್ತೊಂದು ಹೆಸರಿನಿಂದಲೂ ಸಂಬೋಧಿಸುತ್ತಿದ್ದುದುಂಟು.

ಬಹಳ ವಿಶಿಷ್ಟವಾಗಿ ಒಗಟಿನ ರೂಪದಲ್ಲಿರುವ ಒಕ್ಕೈಕುರುಬ ಎಂಬ ಹೆಸರು ಹೇಗೆ ಬಂತು ಎಂಬುದನ್ನು ಕುರಿತು ಇದೇ ಸಮುದಾಯದ ಹಲವಾರು ಹಿರಿಯರಿಂದ ತಿಳಿದುಕೊಳ್ಳುವ ಪ್ರಯತ್ನ ಮಾಡಿದಾಗ್ಯೂ ಯಾವುದೇ ಫಲ ಸಿಗಲಿಲ್ಲ. ಏಕೆಂದರೆ, ಯಾವುದೇ ಸಂದರ್ಭದಲ್ಲಿ ಅವರ ಹಿರಿಯರು ಈ ಹೆಸರಿನಿಂದ ಕರೆಸಿಕೊಂಡಿರುವುದು. ಈಗಿನ ತಲೆಮಾರಿನ ಜನರಿಗೆ ತಿಳಿಯುವುದಾದರೂ ಹೇಗೆ ಸಾಧ್ಯ ಎಂಬ ಸತ್ಯ ತಿಳಿಯಿತು. ಆದರೆ ಈ ಹೆಸರು ಬಂದಿರಲು ಒಂದು ಕಾರಣ ಇದ್ದಿರಲೇಬೇಕು ಎಂಬ ಅನುಮಾನ ಜೀವಂತವಾಗೇ ಉಳಿಯಿತು. ಈ ನಿಟ್ಟಿನಲ್ಲಿ ನನ್ನ ಪ್ರಯತ್ನವನ್ನು ಮುಂದುವರಿಸಿದಾಗ ಮಿಣ್ಯಂ ಗ್ರಾಮದ ಹಿರಿಯ ಯಜಮಾನರೊಬ್ಬರು ತಾವು ಬಹಳ ಹಿಂದೆ ಕೇಳಿಸಿಕೊಂಡಿದ್ದ ಒಂದು ಸ್ವಾರಸ್ಯಕರವಾದ ಕಥೆಯನ್ನು ಹೇಳಿದರು. ಕಾರಣಾಂತರಗಳಿಂದ ಬೇರೆ ಕಾಡಿನಿಂದ ವಲಸೆ ಬಂದ ಒಂದು ಗುಂಪಿನ ಜನರು, ಮಿಣ್ಯಂ, ಗಾಜನೂರು, ಲಕ್ಕುಂಡಿ ಮತ್ತು ಹೂಗ್ಯಂ ಪ್ರದೇಶದಲ್ಲಿ ತಮ್ಮ ವಾಸ್ತವ್ಯವನ್ನು ಕಂಡುಕೊಂಡ ಕಾಡಿನಲ್ಲಿ ಆಹಾರ ಉತ್ಪನ್ನಗಳನ್ನು ಸಂಗ್ರಹಿಸುವ ಮೂಲಕ ತಮ್ಮ ನಿತ್ಯದ ಬದುಕನ್ನು ಸಾಗಿಸುತ್ತಿದ್ದರು. ಮನೆಯಲ್ಲೇ ಉಳಿಯುತ್ತಿದ್ದ ಹೆಣ್ಣುಮಕ್ಕಳು ಮಳೆಗಾಲದಲ್ಲಿ ತಾವು ವಾಸವಿದ್ದ ಗುಡಿಸಲ ಸುತ್ತಲಿನ ನೆಲವನ್ನು ಹಸನುಮಾಡಿ ಅಲ್ಲಿ ತಮ್ಮ ಆಹಾರಕ್ಕೆ ಪೂರಕವಾದ ಕೆಲವು ಧಾನ್ಯದ ಬೀಜಗಳನ್ನು ನೆಟ್ಟು ಕೆತ್ತಲು ಬೇಸಾಯವನ್ನು ಆರಂಭಿಸಿದರು. ಹೀಗೆ ಕಡಿಮೆ ಪ್ರಮಾಣದಲ್ಲಿ ಆರಂಭವಾದ ಬೇಸಾಯವು ವರ್ಷಗಳು ಕಳೆದಂತೆ ವಿಸ್ತಾರವಾಗತೊಡಗಿತು. ಆಗ ಮನೆಯ ಹೆಣ್ಣುಮಕ್ಕಳೇ ಅಲ್ಲದೆ ಗಂಡಸರು ಸೇರ್ಪಡೆಯಾದರು. ಆದರೆ ಇದರಲ್ಲಿ ಹೆಣ್ಣು ಮಕ್ಕಳ ಪಾಲು ಅಧಿಕವಾಗಿತ್ತು. ಅದಕ್ಕಾಗಿ ಹೆಚ್ಚು ಸಮಯ ಬೇಸಾಯದ ಕೆಲಸದಲ್ಲಿ ನಿರತರಾಗುತ್ತಿದ್ದರು.

ಹೀಗೆ ಬೇರೆಡೆಯಿಂದ ಅನಿವಾರ್ಯ ಕಾರಣಗಳಿಂದ ವಲಸೆ ಬಂದ ಸಮಯದಾಯ ಭೌಗೋಳಿಕ ಪರಿಸರ ಹಾಗೂ ಪರಿಸ್ಥಿತಿಯ ಅನಿವಾರ್ಯತೆಗಳಿಂದ ಕೆತ್ತಲು ಬೇಸಾಯದಲ್ಲಿ ತೊಡಗಿಸಿಕೊಂಡರು. ಆಗ ಹೆಣ್ಣುಮಕ್ಕಳು ತಮ್ಮ ಎರಡು ಕೈಗಳಿಗೆ ಗಾಜಿನ ಬಳೆಗಳನ್ನು ತೊಡುವುದು ಕಡ್ಡಾಯ ಹಾಗೂ ಸಂಪ್ರದಾಯವೂ ಆಗಿತ್ತು. ಹೆಣ್ಣಿನ ಐದು ಭಾಗ್ಯಗಳಲ್ಲಿ ಬಳೆಯು ಒಂದು ಮುತ್ತೈದೆ ಭಾಗ್ಯ. ಆದರೆ ತಾವು ರೂಢಿಸಿಕೊಂಡಿದ್ದ ಕೆತ್ತಲು ಭೇಸಾಯ ಪದ್ಧತಿಗೆ ಆ ಬಳೆಗಳು ತೊಡಕಾಗುತ್ತಿದ್ದವು. ಅಂದರೆ ಬಿದಿರು ಅಥವಾ ಕಾರೆ ದಸಿಯಿಂದ ನೆಲವನ್ನು ಹಸನು ಮಾಡುವಾಗ ಇಲ್ಲವೇ ಕಳೆ ಕೀಳುವ ಸಂದರ್ಭದಲ್ಲಿ ವಿಶೇಷವಾಗಿ ಬಳೆಯಾಗುತ್ತಿದ್ದ ಬಲಗೈನ ಬಳೆಗಳಿಂದ ಕೆಲಸ ನಿಧಾನವಾಗುತ್ತಿದ್ದು. ಈ ತೊಂದರೆಯನ್ನು ತಾತ್ಕಾಲಿಕವಾಗಿ ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ಒಂದು ಉಪಾಯವನ್ನು ಕಂಡುಕೊಂಡರು. ಅಂಧರೆ ಕೆತ್ತನೆ ಕೆಲಸದಲ್ಲಿ ತೊಡಗಿಕೊಳ್ಳುವ ಮುಂಚೆ ಬಲಗೈಗೆ ತೊಟ್ಟಿರುವ ಬಳೆಗಳನ್ನು ಕಳಚಿ ಮನೆಯಲ್ಲಿ ಇರಿಸುವುದು. ಕೆಲಸವು ಮುಗಿದ ಬಳಿಕ ಆ ಬಳೆಗಳನ್ನು ಬಲಗೈಗೆ ತೊಟ್ಟುಕೊಳ್ಳುತ್ತಿದ್ದರು. ಇದು ಅವರಿಗೆ ಹೆಚ್ಚು ಅನುಕೂಲಕರವಾಗಿತ್ತು. ಕೆಲವು ಕಾಲ ಈ ಅಭ್ಯಾಸ ಮುಂದುವರಿಸಿದ ಅನಂತರ ಅವರಿಗೆ ಪ್ರತಿನಿತ್ಯ ಕೆಲಸ ಆರಂಭಿಸುವ ಮೊದಲು ಬಳೆಗಳನ್ನು ತೆಗೆದಿರಿಸಬೇಕು ಹಾಗೂ ಕೆಲಸ ಮುಗಿದ ಬಳಿಕ ಪುನಃ ಬಳೆಗಳನ್ನು ಕೈಗೆ ತೊಟ್ಟುಕೊಳ್ಳಬೇಕು. ಇದು ಒಂದು ರೀತಿ ಅನಗತ್ಯ ಶ್ರಮ ಹಾಗೂ ಬಳೆಗಳು ಈ ಸಂದರ್ಭದಲ್ಲಿ ಒಡೆದು ಹೋಗುತ್ತಿದ್ದವು. ಇದಲ್ಲಿ ತಪ್ಪಿಸುವ ಸಲುವಾಗಿ ಉತ್ತಮವಾದ ನಿರ್ಧಾರವನ್ನು ತೆಗೆದುಕೊಂಡು ಶಾಶ್ವತವಾಗಿ ಬಲಗೈಗೆ ಬಳೆಗಳನ್ನು ತೊಡುವುದನ್ನು ನಿಲ್ಲಿಸಿದರು. ಅಂದರೆ ಸಂಪ್ರದಾಯಕ್ಕೂ ಮಿಗಿಲಾಗಿ ಅನುಕೂಲ ಮತ್ತು ಸೂಕ್ತವೆಂದು ಕಂಡುಕೊಂಡ ಒಂದು ಹೊಸ ವ್ಯವಸ್ಥೆಯನ್ನು ರೂಢಿಸಿಕೊಳ್ಳುವುದಕ್ಕೆ ಅಂದಿನ ಪರಿಸ್ಥಿತಿಯಲ್ಲಿ ಸಮಸ್ಯೆಯೇ  ಆಗಿರಲಿಲ್ಲ. ಅಂತಹ ಒಂದು ಕ್ರಾಂತಿಕಾರಿ ಬದಲಾವಣೆಯನ್ನು ಒಕ್ಕೈಕುರುಬ ಎಂದು ಕರೆಯಲ್ಪಡುವ ಸಮುದಾಯ ನೂರಾರು ವರ್ಷಗಳ ಹಿಂದೆಯೇ ಮಾಡಿಕೊಂಡಿತ್ತು.

ಕಾಲಾನಂತರದಲ್ಲಿ ಇದೇ ಸಮುದಾಯಕ್ಕೆ ಸೇರಿದ್ದ, ಮೂಲನೆಲೆಯ ಜನರು ಇವರ ಬಳಿ ಬಂದು ಸಂಬಂಧ ಬೆಳೆಸುವ ಉದ್ದೇಶದೊಂದಿಗೆ ಮಾತುಕತೆ ನಡೆಸಲು ಪ್ರತ್ನಿಸಿದರು. ಆದರೆ ಅವರಿಗೆ ಇಲ್ಲಿನ ಹೆಣ್ಣುಮಕ್ಕಳು ಒಂದೇ ಕೈಗೆ (ಎಡಗೈಗೆ) ಮಾತ್ರ ಬಳೆಯನ್ನು ತೊಟ್ಟಿರುವುದು ಗಮನಕ್ಕೆ ಬಂದಿತು. ಆಶ್ಚರ್ಯ ಮತ್ತು ಆತಂಕದಿಂದ ಏನಿದು ಒಂದೇ ಕೈಗೆ ಬಳೆ ಎಂದು ಉದ್ಗರಿಸಿದ್ದಾರೆ. ಹಾಗೂ ಇವರು ನಮ್ಮ ಕಟ್ಟು ಕಟ್ಟಳೆಯಂತೆ ಇಲ್ಲ ಆದ್ದರಿಂದ ಇವರ ಜೊತೆ ಯಾವುದೇ ಸಂಬಂಧ ಬೆಳೆಸುವುದು ಸೂಕ್ತವಲ್ಲವೆಂದು ತಿಳಿದು ಶಾಶ್ವತವಾಗಿ ಬೇರ್ಪಡುತ್ತಾರೆ. ಅಂದಿನಿಂದ ಒಂದೇ ಮೂಲಕ ಸಮುದಾಯವು ಎರಡಾಗುತ್ತವೆ. ಹಾಗೂ ಪ್ರತ್ಯೇಕ ಹೆಸರಿನಿಂದಲೇ ಗುರುತಿಸಿಕೊಳ್ಳುತ್ತವೆ.

ಹಾಗಾದರೆ ಈ ಸಮುದಾಯದ ಮೂಲ ಹೆಸರು ಯಾವುದು ಎಂಬ ಪ್ರಶ್ನೆ ಎದುರಾಗುತ್ತದೆ. ಇದಕ್ಕೆ ಉತ್ತರ ಈ ಜನರನ್ನು ಸ್ಥಳೀಯರು ಕರೆಯುತ್ತಿದ್ದ ಹೆಸರುಗಳಿಂದ ಗುರುತಿಸುವುದು ಸಾಧ್ಯವಿದೆ. ಕೊಂಗನಾಡು ಕುರುಬ, ಕಚ್ಚೆಕುರುಬ, ಮತ್ತು ಹಲ್ಲುಮನೆ ಕುರುಬ ಈ ಮೂರು ಹೆಸರಿನಲ್ಲಿ ಕುರುಬ ಎಂಬ ಪದವು ಸಾಮಾನ್ಯವಾಗಿದೆ. ಆದ್ದರಿಂದ ಇದೇ ಬೆಟ್ಟಸಾಲಿನಲ್ಲಿ ವಾಸವಿದ್ದ ಬೆಟ್ಟಕುರುಬ ಕಾಡುಕುರುಬ ಅಥವಾ ಜೇನುಕುರುಬ ಸಮುದಾಯಕ್ಕೆ ಸೇರಿದವರಾಗಿದ್ದರು. ಕಾರಣಾಂತರಗಳಿಂದ ಈ ಸಮುದಾಯದ ಒಂದೆರಡು ಕುರುಂಬಗಳು ಪರ್ಯಾಯ ಬದುಕನ್ನು ಹುಡುಕಿಕೊಂಡು ಹೆಗ್ಗಡದೇವನಕೋಟೆಯ ಕಾಡಿನಿಂದ ಈಗಿನ ಪ್ರದೇಶಕ್ಕೆ ವಲಸೆ ಹೋಗಿರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಆದರೆ ಇವರ ಹೆಸರುಗಳ ಹಿಂದೆ ಇದ್ದ ಕೊಂಗನಾಡು, ಕಚ್ಚೆ ಮತ್ತು ಹುಲ್ಲುಮನೆ ಎಂಬುದು ಏನನ್ನು ಸೂಚಿಸುತ್ತವೆ. ಈ ಪ್ರಶ್ನೆಗೂ ಉತ್ತರವನ್ನು ಕಂಡುಕೊಂಡಾಗ ಒಕ್ಕೈಕುರುಬರ ಕುರಿತು ಒಂದಿಷ್ಟು ವಾಸ್ತವಾಂಶಗಳನ್ನು ತಿಳಿದುಕೊಳ್ಳುವುದು ಸಾಧ್ಯವಿದೆ.

ಕೊಂಗನಾಡು ಕುರುಬ ಕನ್ನಡ ಪ್ರಾಂತ್ಯವಾದ ಮೈಸೂರು ಪ್ರದೇಶದಲ್ಲಿ ಎಚ್.ಡಿ.ಕೋಟೆ ಕಾಡಿನಲ್ಲಿ ನೆಲೆಯನ್ನು ಹೊಂದಿದ್ದ ಒಕ್ಕೈಕುರುಬರು ಈಗಾಗಲೇ ಕೇಳಿರುವಂತೆ, ಅಂದಿನ ತಮಿಳುನಾಡನ ಪ್ರಾಂತ್ಯವಾಗಿದ್ದ ಕೊಳ್ಳೆಗಾಲ ತಾಲೂಕಿನ ರಾಮಾಪುರ ಹೋಬಳಿಯ ದಕ್ಷಿಣ ದಿಕ್ಕಿನಲ್ಲಿ ಹಬ್ಬಿರುವ ಇಂದಿನ ಕರ್ನಾಟಕ ಮತ್ತು ತಮಿಳುನಾಡಿನ ಗಡಿಯಾಗರುವ ಬೆಟ್ಟ ಸಾಲಿನಲ್ಲಿ ಒಂದು ವಾಸ್ತವ್ಯ ಕಂಡುಕೊಂಡರು. ಸಹಜವಾಗಿ ಇಲ್ಲಿನ ಭಾಗದ ಜನರ ಮಾತೃಭಾಷೆಯಾಗಿದ್ದ ತಮಿಳನ್ನು ಇವರು ಕಲಿತುಕೊಂಡರು. ಇದಲ್ಲದೆ ತಮಿಳಿನ ಜನರ ಜೊತೆಯಲ್ಲಿ ವ್ಯಾಪಾರ ಹಾಗೂ ವೈವಾಹಿಕ ಸಂಬಂಧವನ್ನು ಮಾಡಿಕೊಂಡಿರುವ ಕಾರಣಕ್ಕೆ ಇವರನ್ನು ಸ್ಥಳೀಯರು ಅಂದರೆ ಕನ್ನಡ ಮಾತೃಭಾಷಿಕರು ಕೊಂಗನಾಡ ಕುರುಬರು ಎಂದು ಕರೆದಿರುವುದು ಸಾಮಾನ್ಯ ಸಂಗತಿಯೇ ಸರಿ. ಆದರೆ ಈ ಹೆಸರನ್ನು ಸದರಿ ಸಮುದಾಯದವೂ ವಿರೋಧಿಸದೆ ಹಾಗೂ ಪ್ರತಿಕ್ರಿಯಿಸದೆ ಇದ್ದಾಗ ಹಲವಾರು ಹೆಸರಲ್ಲಿ ಆ ಹೆಸರು ಸಹ ಒಂದಾಗಿರುತ್ತದೆ.

ಕಚ್ಚೆ ಕುರುಬ: ಸ್ವಾತಂತ್ರಪೂರ್ವ ಹಾಗೂ ಅನಂತರದಲ್ಲಿಯೂ ಕಾಡಿನ ಹಲವು ಸಮುದಾಯಗಳೂ, ಕೃಷಿಕರು ಮತ್ತು ಕಾಡು ಉತ್ಪನ್ನಗಳ ಸಂಗ್ರಹಕಾರರು ಆಗಿದ್ದ ಬುಡಕಟ್ಟು ಸಮುದಾಯಗಳ ಗಂಡಸರು ಎರಡು ಮೊಳ ಉದ್ದ ಮತ್ತು ಒಂದು ಮೊಳ ಅಗಲದ ಒಂದು ತುಂಡು ಬಟ್ಟೆಯಲ್ಲಿ ಕಚ್ಚೆ ಕಟ್ಟಿಕೊಳ್ಳುವುದು ರೂಢಿಯಲ್ಲಿತ್ತು. ದುಡಿಮೆ ಮಾಡುವಾಗ, ಕಾಡಲ್ಲಿರುವಾಗ ಈ ಉಡುಗೆ ಸಾಮಾನ್ಯವಾಗಿತ್ತು. ಆದ್ದರಿಂದ ಗಂಡಸರು ಉಡುವ ಕಚ್ಚೆಯನ್ನು ಸಮುದಾಯವನ್ನು ಗುರುತಿಸುವ ಹೆಸರಾಗಿಸಿಕೊಂಡಿರುವುದು ಸ್ಪಷ್ಟವಾಗುತ್ತದೆ.

ಹುಲ್ಲುಮನೆ ಕುರುಬ: ಹೆಸರಿನ ಪೂರ್ವಪದವೇ ಹೇಳುವಂತೆ ಕಾಡಿನ ಸೊಪ್ಪು, ಬಿದಿರು ಮತ್ತು ಹುಲ್ಲನ್ನು ಬಳಸಿ ಕಟ್ಟಿರುವ ಗುಡಿಸಲಿನಲ್ಲಿ ವಾಸಿಸುತ್ತಿದ್ದ ಸಮುದಾಯವನ್ನು ಹುಲ್ಲುಮನೆ ಕುರುಬ ಎಂದು ಕರೆದಿರುವುದು ಬೇರೆ ಬೇರೆ ಕಾಲಘಟ್ಟದಲ್ಲಿ ಅಂದಿನ ಸಮುದಾಯವು ಮಾತನಾಡುತ್ತಿದ್ದ ಭಾಷೆ, ಉಡುತ್ತಿದ್ದ ಬಟ್ಟೆ ಮತ್ತು ವಾಸಿಸುತ್ತಿದ್ದ ಗುಡಿಸಲು ಮಾದರಿಯನ್ನು ಪರಿಗಣಿಸಿ ಕರೆಯುತ್ತಿದ್ದ ಹೆಸರುಗಳು ಎಂಬುದು ಸ್ಪಷ್ಟವಾಗುತ್ತದೆ. ಅದಕ್ಕೆ ಒಕ್ಕೈಕುರುಬ ಎಂಬುದು ಬಹಳ ವಿಶಿಷ್ಟವಾದ ಹಿನ್ನೆಲೆಯನ್ನು ಹೊಂದಿರುವ ಹೆಸರು ಎಂಬುದರಲ್ಲಿ ಸಂದೇಹವೇ ಇಲ್ಲ.

ಈ ಲೇಖನದಲ್ಲಿ ಒಂದು ಸಮುದಾಯದ ಹೆಸರಿನ ಹಿಂದಿರಬಹುದಾದ ಹಲವಾರು ಅಂಶಗಳನ್ನು ಕಂಡುಕೊಳ್ಳುವ ಪ್ರಯತ್ನವನ್ನು ಮಾಡಲಾಗಿದೆ. ಒಕ್ಕೈಕುರುಬರ ಮೂಲವೆನ್ನಬಹುದಾದ ಕಾಡುಕುರುಬ ಬೆಟ್ಟಕುರುಬ ಅಥವಾ ಜೇನುಕುರುಬ  ಸಮುದಾಯವನ್ನು ತೌಲನಿಕವಾಗಿ ಅವರಲ್ಲಿ ರೂಢಿಯಲ್ಲಿರಬಹುದಾದ ಹಲವಾರು ಆಚರಣೆಗಳ ಹಿನ್ನೆಲೆಯಲ್ಲಿ ನೋಡುವ ಪ್ರಯತ್ನವನ್ನು ಮಾಡಬಹುದಾಗಿದೆ. ಆದರೆ ಈ ಸಮುದಾಯವು ಬೇರ್ಪಟ್ಟ ನೂರಾರು ವರ್ಷಗಳೇ ಸಂದಿರುವುದು ಹಾಗೂ ನಾಡಿನ ಹತ್ತು ಹಲವಾರು ಸಮುದಾಯಗಳೊಂದಿಗೆ ಒಡನಾಟವನ್ನು ಇಟ್ಟುಕೊಂಡಿರುವ ಪ್ರಯುಕ್ತ ಈ ಅಂಶಗಳು ಕಣ್ಮರೆಯಾಗಿರುವ ಸಾಧ್ಯತೆಯಿದೆ. ಇದಲ್ಲದೆ ಪಾರಂಫರಿಕ ಕಸುಬನ್ನು ಬಿಟ್ಟು ಕೃಷಿಯನ್ನು ಜೀವನ ಮೂಲ ಕಸುಬಾಗಿ ಆಯ್ಕೆ ಮಾಡಿಕೊಂಡಿರುವುದು ಸಹಾ ಮತ್ತೊಂದು ಕಾರಣವಾಗಿದೆ. ಇಂದು ಸದರಿ ಸಮುದಾಯದ ಯಾವುದೇ ಹೆಸರು ಅಧಿಕೃತವಾಗಿ ದಾಖಲೆಯಲ್ಲಿರುವುದಿಲ್ಲ. ಬರಹದ ಆರಂಭದಲ್ಲೇ ಪ್ರಸ್ತಾಪಿಸಿರುವಂತೆ ಕರ್ನಾಟಕ ರಾಜ್ಯದಲ್ಲಿರುವ ೫೦ ಅನುಸೂಚಿತ (denotified Tribes) ಪಂಗಡಗಳಲ್ಲಿ ಕೇವಲ ಎರಡು ಬುಡಕಟ್ಟು ಸಮುದಾಯಗಳನ್ನು ಆದಿಮ ಬುಡಕಟ್ಟು ಎಂದು ಗುರುತಿಸಲಾಗಿದೆ. ಅವುಗಳಲ್ಲಿ ಒಂದು ಜೇನುಕುರುಬ ಮತ್ತೊಂದು ಕೊರಗ. ಈ ಆದಿಮ ಬುಡಕಟ್ಟುಗಳೆರಡರಲ್ಲಿ ಇರುವ ವ್ಯತ್ಯಾಸ ಮತ್ತು ವಿಶೇಷವೆಂದರೆ ಮೂಲತಃ ಇವರು ಅರಣ್ಯವಾಸಿಗಳು ಹೌದು. ಆದರೆ ಕೊರಗ ಅಸ್ಪಶ್ಯರಲ್ಲಿ ಅಸ್ಪಶ್ಯರಾಗಿ ಅತ್ಯಂತ ಕೆಳಗಿನ ಸ್ಥಾನಮಾನವನ್ನು ಹೊಂದಿದ್ದಾರೆ. ಕ್ರಮೇಣ ಕಾಡನ್ನು ತೊರೆದು ನಾಡಿಗೆ ಬಂದು ಪೌರಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಜೇನು ಕುರುಬರು ಮಾತ್ರ ಇಂದಿಗೂ ಕಾಡಲ್ಲೇ ಇದ್ದು ನಿಧಾನವಾಗಿ ಆಧುನಿಕತೆಗೆ ಅಂಜುತ್ತಾ, ಅಳುಕುತ್ತಾ ಅನಿವಾರ್ಯವಾಗಿ ಒಗ್ಗಿಕೊಳ್ಳುತ್ತಿದ್ದಾರೆ.

ಜನಸಂಖ್ಯೆ ಮತ್ತು ವಾಸ್ತವ್ಯ: ಮೈಸೂರು ಜಿಲ್ಲೆಯ ಹೆಗ್ಗಡದೇವನಕೋಟೆ ಹುಣಸೂರು ತಾಲೂಕುಗಳಲ್ಲಿ ಕೊಡಗು ಜಿಲ್ಲೆಯ ಕುಶಾಲನಗರ, ಸೋಮವಾರಪೇಟೆ ಮತ್ತು ಮಡಿಕೇರಿ ತಾಲೂಕುಗಳಲ್ಲಿ ವಾಸ್ತವ್ಯ ಹೊಂದಿದ್ದಾರೆ. ಅಲ್ಲದೆ ತಮಿಳುನಾಡಿನ ನೀಲಗಿರಿಯ ನಡುಮಲೆ, ಮಸಣಿಗುಡಿಗಲ್ಲೂ ಕೇರಳದ ಮಾನಂದವಾಡಿಯಲ್ಲೂ ಇದ್ದಾರೆ. ೨೦೦೧ ರ ಜನಗಣತಿಯ ಪ್ರಕಾರ ಇವರ ಸಂಖ್ಯೆ ೨೧೨೭ ಮಾತ್ರ, ಕರ್ನಾಟಕ, ತಮಿಳುನಾಡು ಮತ್ತು ಕೇರಳ ಈ ಮೂರು ರಾಜ್ಯಗಳ ಸುಮಾರು ೨೦೦೦ ಚದರ ಕಿಲೋಮೀಟರ್ ವ್ಯಾಪ್ತಿಯಲ್ಲಿ ಇತರೆ ಬುಡಕಟ್ಟು ಸಮುದಾಯಗಳಾದ ಬೆಟ್ಟಕುರುಬ, ಯರವ, ಪಣಿಯನ್, ಪಳಿಯನ್ ಅಡಿಯನ್ ಸೋಲಿಗರು ಮುಂತಾದವರ ಜೊತೆ ಸಹಬಾಳ್ವೆಯನ್ನು ನಡೆಸುತ್ತಾ ಬಂದಿದ್ದಾರೆ. ಇವರ ಮೂಲದ ಬಗ್ಗೆ ಖಚಿತ ಮಾಹಿತಿ ದೊರೆಯುವುದಿಲ್ಲ. ಆದರೆ ಆನೆಗಳನ್ನು ಹಿಡಿದು ಪಳಗಿಸುವುದರಲ್ಲಿ ನಿಪುಣರೆಂಬುದು ತಿಳಿದುಬರುತ್ತದೆ. ರಾಜ-ಮಹಾರಾಜರ ಕಾಲದಲ್ಲಿ ಬೇರೆ ಬೇರೆ ರಾಜರಿಗೆ ಆನೆಗಳನ್ನು ಖೆಡ್ಡದ ಮೂಲಕ ಹಿಡಿದು ಪಳಗಿಸಿಕೊಡುತ್ತಿದ್ದರೆಂಬುದಕ್ಕೆ ಪುರಾವೆಗಳಿವೆ. ಇಂದಿಗೂ ಮೈಸೂರಿನಲ್ಲಿ ಜರುಗುವ ವಿಶ್ವವಿಖ್ಯಾತ ದಸರೆಗೆ ವಿಜಯದಶಮಿಯಂದು ಆನೆ ಅಂಬಾರಿ ನಡೆಸುವುದು ಇವರೇ ಆಗಿದ್ದಾರೆ. ಮೈಸೂರು ರಾಜರು ಆನೆಯನ್ನು ಹೆಗ್ಗಡದೇವನ ಕೋಟೆ ಕಾಡಿನಿಂದಲೇ ಪಡೆಯುತ್ತಿದ್ದರು ಎಂಬುದು ಖಚಿತವಾದರೆ ಅಂದಿನಿಂದಲೂ ಜೇನುಕುರುಬರಿಗೆ ಮಹಾರಾಜರಿಂದ ಮಾನ್ಯತೆ ಇತ್ತು ಎಂದು ತಿಳಿಯುತ್ತದೆ.

೧೯೯೧ರ ಜನಗಣತಿಯ ಜೇನು ಕುರುಬರ ಜನಸಂಖ್ಯೆ ೨೬೫೭೬ ರಷ್ಟಿತ್ತು. ಈಗ ಈ ಸಂಖ್ಯೆ ಹೆಚ್ಚಾಗಿರುವ ಸಾಧ್ಯತೆಯಿದೆ. ಜೇನನ್ನು ಸಂಗ್ರಹಿಸುವುದು ಇವರ ಪ್ರಧಾನ ಕಸುಬಾಗಿದ್ದ ಕಾರಣದಿಂದ ಇವರಿಗೆ ಈ ಹೆಸರು ಬಂದಿದೆಯಲ್ಲದೆ ಕ್ರಮೇಣ ಕುಮರಿ ಬೇಸಾಯವನ್ನು ರೂಢಿಸಿಕೊಂಡು ರಾಗಿ, ಅವರೆ, ಅಲಸಂದಿ ಇತರೆ ಬೆಳೆಯನ್ನು ತೆಗೆದು ಆಹಾರವಾಗಿ ಬಳಸುತ್ತಿದ್ದರು. ಆರಂಭದಲ್ಲಿ ಕಾಡಿನ ಮಧ್ಯದಲ್ಲಿಯೇ ಹತ್ತು-ಹದಿನೈದು ಗುಡಿಸಲುಗಳನ್ನು ಕಟ್ಟಿಕೊಂಡು ವಾಸಿಸುತ್ತಿದ್ದರು. ಇವರು ವಾಸಿಸುವ ತಾಣವನ್ನು ಹಾಡಿ ಎಂದು ಕರೆಯುವರು. ಈ ಹಾಡಿಯ ವಿಶೇಷವೆಂದರೆ ಆ ಹತ್ತು ಅಥವಾ ಹದಿನೈದು ಗುಡಿಸಲುಗಳು ಅಂಡಾಕಾರದಲ್ಲಿ ರಚಿತವಾಗಿದ್ದು ಮಧ್ಯೆದಲ್ಲಿ ಅಗ್ನಿಕುಂಡವಿರುತ್ತದೆ. ಈ ಅಗ್ನಿಕುಂಡವು ಜೇನು ಕುರುಬ ಸಮುದಾಯಕ್ಕೆ ಮಹತ್ವದ್ದಾಗಿದೆ. ಅವರ ಎಲ್ಲಾ ಆಗು-ಹೋಗುಗಳೆಲ್ಲಾ ಅಲ್ಲೆ ನಡೆಯುತ್ತವೆ.

ಇವರು ಗುಡಿಸಲುಗಳಿಗೆ ಬಿದಿರನ್ನು ಬಳಸಿ ನಿರ್ಮಿಸುವರು. ಆಯಾತಾಕಾರದ ಈ ಗುಡಿಸಲುಗಳ ಹೊರಭಾಗದಲ್ಲಿ ನೆಲದಿಂದ ಮೂರು ಅಡಿಯವರೆಗೆ ಮಣ್ಣನ್ನು ಮೆತ್ತಿ ನಿರ್ಮಿಸುವರು. ಮೇಲ್ಛಾವಣಿಗೆ ಆನೆ ಹುಲ್ಲನ್ನು ಬಳಸುವರು. ಗುಡಿಸಲಿನ ಬಾಗಿಲು ಅತ್ಯಂತ ಚಿಕ್ಕದಿದ್ದು, ಒಳಹೋಗಲು ಮೆಲ್ಲನೆ ನುಸುಳಿ ಹೋಗಬೇಕಾಗುತ್ತದೆ. ಸಾಮಾನ್ಯವಾಗಿ ಬೆಳೆದ ಮಕ್ಕಳು ಗುಡಿಸಲಿನ ಹೊರಭಾಗದಲ್ಲಿ ಬೆಂಕಿ ಕುಂಡದ ಹತ್ತಿರ ಮಲಗುತ್ತಾರೆ. ಹಾಡಿಯ ಮಧ್ಯದಲ್ಲಿರುವ ಅಗ್ನಿಕುಂಡದ ಬಗ್ಗೆ ಪ್ರತಿಯೊಬ್ಬನಿಗೂ ಗೌರವ ಇರುತ್ತದೆ. ಅಗ್ನಿಕುಂಡದ ಬೆಂಕಿ ನಂದದಂತೆ ನೋಡಿಕೊಳ್ಳುತ್ತಾರೆ. ಸಂಜೆಯ ವೇಳೆಯಲ್ಲಿ ಹಾಡಿಯ ಜನರು ಬೆಂಕಿಯ ಸುತ್ತ ಕುಳಿತು ಲೋಕಾಭಿರಾಮವಾಗಿ ಮಾತನಾಡುತ್ತಾರೆ. ಸಾಮಾನ್ಯವಾಗಿ ಹಿರಿಯರಿಗೆ ಈ ಅಗ್ನಕುಂಡವು ಮಾತುಕತೆಗಳ ತಾಣವಾಗುತ್ತದೆ. ಹೊಸದಾಗಿ ಗುಡಿಸಲು ನಿರ್ಮಿಸಿಕೊಂಡಿರುವ ಬೆಳದ ಮಕ್ಕಳು ಆಹಾರವನ್ನು ಬೇಯಿಸಿಕೊಳ್ಳುವುದು ಈ ಅಗ್ನಿಕುಂಡದಲ್ಲಿಯೇ.

ಇದೇ ಅಗ್ನಿಕುಂಡದ ಸುತ್ತಲಿನ ಪ್ರದೇಶವನ್ನು ನ್ಯಾಯ ನಿರ್ಣಯಕ್ಕಾಗಿ ಬಳಸಿಕೊಳ್ಳುವುದರಿಂದ ಇದು ನ್ಯಾಯ ನೀಡುವ ನ್ಯಾಯ ಸ್ಥಾನವೂ ಹೌದು. ಹಾಡಿಯ ಅಥವಾ ಸಮುದಾಯದ ಮುಖ್ಯಸ್ಥನ ಪತ್ರ ನ್ಯಾಯ ನಿರ್ಣಯಕ್ಕೆ ಬಹಳ ಮಹತ್ವದ್ದಾಗಿರುತ್ತದೆ. ನ್ಯಾಯ ನಿರ್ಣಯದ ಸಂದರ್ಭದಲ್ಲಿ ಅಪಾದಿತ ಕೇಳುಗರಾಗಲಿ ನೇರವಾಗಿ ಮುಖ್ಯಸ್ಥನೊಡನೆ ಮಾತನಾಡಬಹುದಾಗಿದೆ. ಹಾಗೆಯೇ ನ್ಯಾಯ ನಿರ್ಣಯ ಇಬ್ಬರು ಹೆಂಗಸರ ನಡುವೆ ಆಗುತ್ತಿದ್ದರೆ ಮಾತ್ರ ಹೆಣ್ಣು ಮಕ್ಕಳು ತಮ್ಮ ಅಭಿಪ್ರಾಯಗಳನ್ನು ಹೇಳಲು ಅವಕಾಶವಿದೆ.

ಜೇನುಕುರುಬದಲ್ಲಿ ದೇವರುಗುಡ್ಡನಾಗುವವನಿಗೆ ಕನಸಿನಲ್ಲಿ ಆತನ ಶಕ್ತ ಗೋಚರವಾಗುವುದು. ಆಗ ಅದ ಅಯ್ಯನಚೇತನ ಅಂಧರೆ ಮೂಲ ಪುರುಷನ ಆತ್ಮ ಅವನ ಮನದುಂಬಿ ಕೆಲವು ವಿಷಯಗಳನ್ನು ಬೋಧಿಸುತ್ತದೆ. ಉದಾಹರಣೆಗೆ ದೈಹಿಕ, ಮಾನಸಿಕ, ಖಾಯಿಲೆಯನ್ನು ಗುಣಪಡಿಸುವುದಾಗಲಿ, ಸಾಮಾಜಿಕ ಕಟ್ಟಳೆಗಳ ಬಗ್ಗೆಯಾಗಲೀ, ಸಾಂಸ್ಕೃತಿಕ ರೀತಿ ನೀತಿ ನಡೆವಳಿಗಳ ಬಗ್ಗೆಯಾಗಲಿ, ಗುಡ್ಡನು ನ್ಯಾಯ ತೀರ್ಮಾನ ತೆಗೆದುಕೊಳ್ಳುವ ಶಕ್ತಿಯನ್ನು ಆದಿಶಕ್ತಿ ಚೇತನವು ಕರುಣಿಸುತ್ತದೆ. ಅನಂತರ ಅವನ ದೇಹಕ್ಕೆ ಹಿರಿಯನ ಆತ್ಮ ಸೇರುತ್ತದೆ. ಇದನ್ನು ಸೂಕ್ಷ್ಮವಾಗಿ ಹಾಡಿಯ ಜನರು ಗಮನಿಸುತ್ತಾರೆ. ಮೈದುಂಬಿ ಬರುತ್ತದೆ ಎಂದು ಖಚಿತಪಡಿಸಿಕೊಂಡು ಹಿರಿಯ ಗುಡ್ಡನ ಸಹಾಯಕನನ್ನಾಗಿಬಿಡುತ್ತಾರೆ. ಮುಂದೆ ಅವರವರ ಶಕ್ತಾನುಸಾರ ಯಾವ ರೀತಿಯ ಶಕ್ತಿಯನ್ನು ಪಡೆದಿರುತ್ತಾರೆ ಎಂಬುದನ್ನು ಅವಲಂಬಿಸಿ ಅವರು ಬೇರೆ ಬೇರೆ ಉದ್ದೇಶಕ್ಕೆ ಗುಡ್ಡರಾಗುತ್ತಾರೆ. ಒಟ್ಟಾರೆ ಈ ಗುಡ್ಡದಿಂದ ಸಮುದಾಯಕ್ಕೆ ಬಂದೊದಗುವ ಯಾವುದೇ ಕಷ್ಟಕಾರ್ಪಣ್ಯಗಳನ್ನು ಪರಿಹರಿಸುವುದೇ ಆಗಿರುತ್ತದೆ.

ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದ ಅನಂತರವೂ ಇವರ ಜೀವನ ಕ್ರಮದಲ್ಲಿ ಯಾವುದೇ ವ್ಯತ್ಯಾಸ ಕಂಡು ಬರುತ್ತಿದ್ದಿಲ್ಲ. ೧೯೭೩ ರಲ್ಲಿ ಕಬಿನಿ ನದಿಗೆ ಅಡ್ಡಲಾಗಿ ಅಣೆಕಟ್ಟು ಕಟ್ಟಿದ್ದರಿಂದ ಸಾವಿರಾರು ಎಕರೆ ಕಾಡು ಹಿನ್ನೀರಿನಲ್ಲಿ ಮುಳುಗಡೆಯಾಗುವುದರ ಜೊತೆಗೆ ನಿರಾಶ್ರಿತರಾದ ಜನರಿಗೆ ವಸತಿಯನ್ನು ನಿರ್ಮಿಸಿಕೊಡಲು ಪುನಃ ಕಾಡನ್ನು ಕಡಿಯಬೇಕಾಯಿತು. ಆಗ ಕಾಡುವಾಸಿಗಳಾದ ಜೇನುಕುರುಬರಿಗೆ ಸಹಾ ನಾಡಿನ ಜನರ ಹತ್ತಿರವೇ ಮನೆಗಳನ್ನು ಕಟ್ಟಿಕೊಡಲಾಯಿತು. ಅಂದಿನಿಂದ ಜೇನು ಕುರುಬರ ಪಾರಂಪರಿಕ ಬದುಕು ನಿಧಾನವಾಗಿ ಬದಲಾವಣೆಗೆ ಒಳಗಾಗಬೇಕಾಯಿತು. ಕಾಡಲ್ಲಿ ಕಾಲಕಾಲಕ್ಕೆ ಬದಲಾಯಿಸುತ್ತಿದ್ದ ವಾಸ್ತವ್ಯ ಈಗ ಖಾಯಂ ಆಯಿತು. ತಮ್ಮ ಹೆತ್ತಯ್ಯ ಮುತ್ತಯ್ಯರು ಇದ್ದ ಜಾಗವೆಂದು ಬಲವಾಗಿ ನಂಬಿದ್ದವರಿಗೆ ಪೆಟ್ಟು ಬಿತ್ತು.

ಅರಣ್ಯವನ್ನು ಸಂಪೂರ್ಣವಾಗಿ ಅವಲಂಬಿಸಿ ಬದುಕುತ್ತಿದ್ದ ಜೇನು ಕುರುಬರಿಗೆ ಆಕಸ್ಮಿಕವಾಗಿ ಎದುರಾದ ಸ್ಥಳಾಂತರದ ಸಮಸ್ಯೆ ತುಂಬಾ ಆಘಾತವನ್ನು ಉಂಟುಮಾಡಿತು. ಪರ್ಯಾಯ ಕಸುಬನ್ನೇ ಅರಿಯದ ಅವರ ಬದುಕು ಅತಂತ್ರವಾಯಿತು. ಆಗ ಕುಡುಂಬದ ಗಂಡಸರು ಕೇರಳರಾಜ್ಯ ಮತ್ತು ಕೊಡಗಿನ ಚಹಾ ತೋಟ, ಕಾಫಿ ತೋಟಗಳಿಗೆ ಕೂಲಿಗಳಾಗಿ ದುಡಿಯಲು ವಲಸೆ ಹೋಗಬೇಕಾಯಿತು. ಒಟ್ಟಾರೆ ಬದಲಾದ ವ್ಯವಸ್ಥೆಗೆ ಒಗ್ಗಿಕೊಳ್ಳುವುದು ಜೇನು ಕುರುಬರಿಗೆ ಅನಿವಾರ್ಯವಾಯಿತು.

ಜೇನು ಕುರುಬರು ಆದಿಮ ಬುಡಕಟ್ಟು ಎಂದು ಗುರುತಿಸಲ್ಪಟ್ಟಿರುವುದರಿಂದ ಇವರಿಗೆ ‘PTG’ (Primitive Tribal Group) ಎಂಬ ಹೆಸರಿನ ಅಡಿಯಲ್ಲಿ ವಿಶೇಷವಾದ ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದರಾದರೂ ಅವುಗಳು ಪೂರ್ಣ ಪ್ರಮಾಣದಲ್ಲಿ ಸಂಬಂಧಿಸಿದ ಸಮುದಾಯಗಳಿಗೆ ತಲುಪುವುದಿಲ್ಲ. ತಲುಪುವ ಸಹಾಯವು ಸಕಾಲಿಕವಾಗಿರುವುದಿಲ್ಲ. ಆದ್ದರಿಂದ ಇವರ ಅಭಿವೃದ್ಧಿ ಯಾವುದೇ ಕ್ಷೇತ್ರದಲ್ಲಿಯೂ ಸಮಗ್ರವಾಗಿ ಆಗಿರುವುದಿಲ್ಲ ಎಂದು ಹೇಳಿದರೆ ಸೂಕ್ತವೆನಿಸುತ್ತದೆ. ಅದೇನೇ ಇರಲಿ, ಇಂದು ಜೇನುಕುರುಬರು ಹಿಂದಿಗಿಂತ ಅತ್ಯಂತ ಹೀನಾಯ ಬದುಕನ್ನು ಸಾಗಿಸುತ್ತಿರುವುದು ಕಂಡುಬರುತ್ತದೆ. ಅನಕ್ಷರತೆ  ಅವರನ್ನು ಈ ಸ್ಥಿತಿಯಲ್ಲಿ ಇರಲು ಕಾರಣವಾಗಿ. ಶೇಕಡ ಮೂರರಷ್ಟು ಮೀಸಲಾತಿಯಲ್ಲಿ ಇವರು ಸಹ ಸವತ್ತುಗಳನ್ನು ಪಡೆದುಕೊಳ್ಳಲು ಅರ್ಹರಾಗಿದ್ದರೂ, ಅದಕ್ಕೆ ಬೇಕಾದ ಶೈಕ್ಷಣಿಕ ಅರ್ಹತೆಯ ಕೊರತೆಯಿಂದ ಅದು ಸಾಧ್ಯವಾಗುತ್ತಿಲ್ಲ.

ಜೇನು ಕುರುಬರಂತೆಯೇ ಬೆಟ್ಟ ಕುರುಬ ಅಥವಾ ಕಾಡುಕುರುಬರು ಸಹ ಅರಣ್ಯವಾಸಿಗರೇ ಆಗಿದ್ದರು. ಒಂದು ಕಾಲಘಟ್ಟದಲ್ಲಿ ಈ ಎರಡು ಸಮುದಾಯಗಳು ಒಂದೆ ಆಗಿದ್ದು ಕಸುಬು ಅಥವಾ ಯಾವುದೋ ಒಂದು ಬಲವಾದ ಕಾರಣದಿಂದ ಬೇರೆ ಬೇರೆಯಾಗಿ ಗುರ್ತಿಸಿಕೊಂಡಿರುವ ಸಾಧ್ಯತೆ ಇದೆ. ಜೇನು ಕುರುಬರು ಕೇವಲ ಅರಣ್ಯದಲ್ಲಿ ಲಭ್ಯವಿದ್ದ ಆಹಾರ ಉತ್ಪನ್ನಗಳನ್ನು ಸಂಗ್ರಹಿಸಿ ಅದನ್ನು ಆಹಾರವಾಗಿ ಬಳಸುತ್ತಾ ಬದಲಿ ಕಸುಬನ್ನು ರೂಢಿಸಿಕೊಳ್ಳುವ ಕಾರಣ ಸಮಾಜಮುಖಿಯಾಗದೇ ದೂರ ಉಳಿದಿರುವ ಕಾರಣ ಜೇನು ಕುರುಬರೆಂಬ ಹೆಸರಿನಿಂದ ಕರೆಯಲಾಗಿದೆ. ಬೆಟ್ಟ ಕುರುಬರು ಬಿದಿರನ್ನು ಬಳಸಿಕೊಂಡು ಅದರಿಂದ ಸಾರ್ವಜನಿಕರ ನಿತ್ಯದ ಬಳಕೆಗೆ ಬೇಕಾದ ಸಾಧನ ಸಾಮಗ್ರಿಗಳನ್ನು ಸಿದ್ಧಪಡಿಸಿ ಹತ್ತಿರದ ಗ್ರಾಮೀಣ ವಾರದ ಸಂತೆಗಳಲ್ಲಿ ಮಾರಾಟಮಾಡಿ ಅದರಿಂದ ಬಂದ ಹಣದಿಂದ ಬದುಕು ಸಾಗಿಸುವುದು ಕಂಡು ಬಂದಿದೆ. ಹೆಸರೇ ಸೂಚಿಸುವಂತೆ ಇವರು ಅರಣ್ಯವಾಸಿಗಳು. ಕೊಡಗು ಹಾಗೂ ಮೈಸೂರು ಜಿಲ್ಲೆಗಳಲ್ಲಿ ಮಾತ್ರ ಕಂಡು ಬರುತ್ತಾರೆ. ಮುಖ್ಯವಾಗಿ ಕೊಡಗು ಜಿಲ್ಲೆಯ ವಿರಾಜಪೇಟೆ ಹಾಗೂ ಸೋಮವಾರ ಪೇಟೆ ತಾಲ್ಲೂಕುಗಳಲ್ಲಿ ಮತ್ತು ಮೈಸೂರು ಜಿಲ್ಲೆಯ ಗುಂಡ್ಲುಪೇಟೆ, ನಂಜನಗೂಡು, ಹೆಗ್ಗಡದೇವನಕೋಟೆ, ಹುಣಸೂರು ಹಾಗೂ ಪಿರಿಯಾಪಟ್ಟಣ ತಾಲೂಕುಗಳಲ್ಲಿ ಕಾಡುಕುರುಬರ ನೆಲೆಗಳನ್ನು ಕಾಣಬಹುದಾಗಿದೆ. ಕುರುಬರಲ್ಲೇ ಇರುವ ಮುಳ್ಳುಕುರುಬ ಬುಡಕಟ್ಟು ಕರ್ನಾಟಕದಲ್ಲಿ ಕಾಣಬರುವುದೇ ವಿರಳ. ಅವರ ಸಂಖ್ಯೆ ಅತ್ಯಲ್ಪವಾಗಿದೆ.

ಕಾಡು ಕುರುಬರ ವಾಸದ ನೆಲೆಗಳನ್ನು ಹಾಡಿ ಎಂಬುದಾಗಿ ಕರೆಯುವರು ಇದರ ಅರ್ಥ ಗ್ರಾಮ ಎಂಬ ಅರ್ಥವನ್ನೇ ನೀಡುತ್ತದೆ. ಇವರ ಗುಡಿಸಲುಗಳು ಬಹಳ ಚಿಕ್ಕದಾಗಿರುತ್ತಿದ್ದವು. ಸಾಮಾನ್ಯವಾಗಿ ಹಳ್ಳಕೊಳ್ಳಗಳ ಸಮೀಪ ಅಥವಾ ನೀರು ಸಿಗುವ ಪ್ರದೇಶದಲ್ಲಿ ಹಾಡಿ ನಿರ್ಮಿಸುತ್ತಿದ್ದರು. ಅದರ ನಿರ್ಮಾಣವು ಬಹಳ ಸರಳವಾಗಿರುತ್ತಿತ್ತು. ಬಿದಿರು ಹುಲ್ಲು ನಾರು ಮತ್ತು ಗರಿಗಳನ್ನು ಹಾಗೂ ಮಣ್ಣು ನೀರು ಬಳಸಿ ಗುಡಿಸಲನ್ನು ನಿರ್ಮಿಸುತ್ತಿದ್ದರು. ಹಾಡಿ ನಿರ್ಮಾಣಕ್ಕೆ ಮೊದಲು ಒಂದು ವಿಶೇಷ ಪೂಜೆ ಸಲ್ಲಿಸುವುದು ರೂಢಿಯಲ್ಲಿತ್ತು. ಅವರು ಆಯ್ದುಕೊಂಡ ಸ್ಥಳದಲ್ಲಿ ಕಲ್ಲುಗಳನ್ನು ಒಂದರ ಮೇಲೊಂದನ್ನು ಇಟ್ಟು ಪೂಜೆ ಮಾಡಿ ಹಿಂತಿರುಗಿ ಹೋಗುತ್ತಾರೆ. ಮರುದಿನ ಬಂದು ನೋಡಿದಾಗ ಒಂದರ ಮೇಲೊಂದು ಇಟ್ಟಿದ್ದ ಕಲ್ಲುಗಳು ಉರುಳದೆ ಇಟ್ಟಿದ್ದಂತೆಯೇ ಇದ್ದರೆ ಆ ಸ್ಥಳ ವಾಸಕ್ಕೆ ಯೋಗ್ಯವೆಂದು ತಿಳಿಯುತ್ತಾರೆ. ಹಾಡಿ ನಿರ್ಮಾಣ ಸುಗಮವಾಗಿ ಸಾಗುತ್ತದೆ. ಒಂದು ವೇಳೆ ಕಲ್ಲುಗಳು ಉರುಳಿ ಬಿದ್ದಿದ್ದರೆ ಆ ಸ್ಥಳದಲ್ಲಿ ಹಾಡಿ ನಿರ್ಮಾಣಕ್ಕೆ ಅಪಾಯ ಎಂದು ನಂಬುತ್ತಾರೆ.

ನಿರ್ಮಿಸಿದ ಗುಡಿಸಲು ಕೇವಲ ೮ x ೧೦ ಅಡಿ ಅಗಲವಿದ್ದರೆ ಒಂದು ಬಿದಿರ ತಡಿಕೆಯಿಂದ ಎರಡು ಭಾಗಗಳಾಗಿ ಮಾಡಿ ಒಂದನ್ನು ಅಡುಗೆಮನೆಗೆ ಬಳಸಿದರೆ ಉಳಿದ ಭಾಗ ವಿಶ್ರಾಂತಿಗೆ, ಒಟ್ಟಾಗಿ ಕುಳಿತು ಮಾತನಾಡಲು ಉಪಯೋಗುತ್ತವೆ. ಈ ಗುಡಿಸಲಿನ ಬಾಗಿಲು ಬಹಳ ಚಿಕ್ಕದ್ದು, ಅಂದರೆ ಮನುಷ್ಯರು ನುಸುಳಿಕೊಂಡು ಹೋಗುವಂತಿರುತ್ತದೆ. ಕಿಟಕಿಗಳಿಲ್ಲ. ಇತ್ತೀಚೆಗೆ ಈ ಮಾದರಿ ಗುಡಿಸಲು ಕಡಿಮೆಯಾಗಿದ್ದು ವಿಶಾಲವಾಗಿರುತ್ತದೆ. ಸರ್ಕಾರದ ಬೇರೆ ಬೇರೆ ಯೋಜನೆ ಅಡಿಯಲ್ಲಿ ಮನೆಕಟ್ಟಿಸಿಕೊಟ್ಟಿರುವುದು ಸಾಮಾನ್ಯವಾಗಿ ಕಂಡುಬರುತ್ತದೆ. ಕೆಲವು ಕಡೆ ಬಿದಿರಿನ ಚಾಪೆಗಳನ್ನು ಅಥವಾ ದಬ್ಬೆಗಳನ್ನು ಚಾಪೆಯಂತೆ ಹೆಣೆದು ಚೌಕಾಕಾರದ ತಡಿಕೆ, ತೊಪ್ಪು, ಜೊಂಡು ಹುಲ್ಲನ್ನು ಬಳಸಿ ಕಟ್ಟಿರುತ್ತಾರೆ. ಕೋಳಿ ಗೂಡನ್ನು ಪ್ರತ್ಯೇಕವಾಗಿ ನಿರ್ಮಿಸುವವರು ಮನೆ ಮುಂಭಾಗದಲ್ಲಿ ಜಗಲಿ ಅಥವಾ ಪಡಸಾಲೆಯನ್ನು ಕಟ್ಟಿ ಅದನ್ನು ಸಗಣಿಯಿಂದ ಸಾರಿಸುತ್ತಾರೆ. ಗುಡಿಸಲಿನಲ್ಲಿ ತಾವೇ ಸಿದ್ಧ ಪಡಿಸಿರುವ ಚಾಪೆಗಳನ್ನು ಹೊರತು ಪಡಿಸಿ ಬೇರಾವುದೇ ಪೀಠೋಪಕರಣಗಳಿರುವುದಿಲ್ಲ. ಅಗತ್ಯವಾದ ಮಣ್ಣಿನ ಮಡಕೆ ಕೆಲವು ಕಂದು, ಅಲ್ಯೂಮಿನಿಯಂತ ಹಾಗೂ ಸ್ಟೇನ್‌ಲೆಸ್‌ ಸ್ಟೀಲ್‌ ಪಾತ್ರೆಗಳು ಇತ್ತೀಚೆಗೆ ಮಿತವಾಗಿ ಬಳಸುತ್ತಿರುವುದು ಕಾಣಬರುತ್ತದೆ.

ಹಾಡಿನ ಮಧ್ಯದಲ್ಲಿನ ಬಯಲಿನಲ್ಲಿ ನಾಲ್ಕು ಕಂಬಗಳ ಆಧಾರದ ಮೇಲೆ ಒಂದು ತೆರೆದ ಗುಡಿಸಲು ನಿರ್ಮಿಸುವರು. ಇದನ್ನು ಅಂಬಾಲ ಎಂದು ಕರೆಯುವರು. ಈ ತೆರೆದ ಗುಡಿಸಲನ್ನು ವಿಶೇಷ ಸಾಮಾಜಿಕ ಮತ್ತು ಸಾಂಪ್ರದಾಯಿಕ ಸಂದರ್ಭಗಳಲ್ಲಿ ಹಾಗೂ ಹಾಡಿಯ ಸಮಸ್ಯೆ ಇತ್ಯಾದಿಗಳನ್ನು ಚರ್ಚಿಸಲು ಬಳಕೆಯಾಗುತ್ತದೆ. ಸಾಮಾನ್ಯ ದಿನಗಳಲ್ಲಾದರೆ ವಿವಾಹಿತ ಪುರುಷರು ಒಟ್ಟಾಗಿ ಕಲೆತು ಹರಟೆ ಮಾತುಗಳನ್ನಾಗಲು ಅಥವಾ ಮಲಗುವುದಕ್ಕೆ ಅಂಬಾಲವನ್ನು ಬಳಸಿಕೊಳ್ಳುವುದುಂಟು. ಈ ಪ್ರದೇಶಕ್ಕೆ ಚಪ್ಪಲಿ ನಿಷೇಧ. ರಾತ್ರಿಯ ವೇಳೆಯಲ್ಲಿ ಅವಿವಾಹಿತ ಗಂಡುಮಕ್ಕಳೂ ಈ ಅಂಬಾಲದಲ್ಲಿ ಮಲಗುವುದುಂಟು. ಬೇಸಿಗೆಯಲ್ಲಿ ಜೇನುಕುರುಬರು ತಮ್ಮ ತಮ್ಮ ಗುಡಿಸಲ ಮುಂದೆ ಮಲಗುವರು. ಚಳಿಗಾಲದಲ್ಲಿ ಮಾತ್ರ ಗುಡಿಸಲ ಮುಂದೆ ಬೆಂಕಿಯನ್ನು ಹಾಕಿಕೊಂಡು ಅದರ ಸುತ್ತ ಮಲಗುವರು.

ಕಾಡುಕುರುಬರ ಉಡುಪು ಮತ್ತು ಆಹಾರವನ್ನು ಕುರಿತು ಒಂದಿಷ್ಟು ಮಾಹಿತಿಯನ್ನು ಹೇಳುವುದಾದರೆ, ಸಾಮಾನ್ಯವಾಗಿ ಅವರ ಉಡುಪನ್ನು ನೋಡಿದ ತಕ್ಷಣವೇ ಇವರು ಅರಣ್ಯವಾಸಿಗಳು ಹಾಗೂ ಒಂದು ಬುಡಕಟ್ಟಿಗೆ ಸೇರಿದವರು ಎಂಬುದನ್ನು ಗುರುತಿಸಿ ಬಿಡಬಹುದು. ಪುರುಷರಿಗೆ ಲಂಗೋಟಿ ಅಥವಾ ಪಂಚೆತುಂಡು ಮತ್ತು ಅರೆತೋಳಿನ ಅಂಗಿ ಹಾಕಿಕೊಳ್ಳುತ್ತಿದ್ದರು. ತಲೆಯಲ್ಲಿ ಉದ್ದವಾಗಿ ಬೆಳೆದ ಕೂದಲನ್ನು ಹಿಂದಕ್ಕೆ ಎತ್ತಿ ತುರುಬು ಕಟ್ಟಿಕೊಳ್ಳುತ್ತಿದ್ದರು. ಓಲೆ, ಕೈಬಂದಿ ಧರಿಸುತ್ತಿದ್ದರು. ಸ್ತ್ರೀಯರು ನಾಲ್ಕು ಗಜದ ಸೀರೆಯನ್ನು ಸರಳವಾಗಿ ಉಡುತ್ತಿದ್ದರು. ಭುಜದಿಂದ ಕೆಳಗೆ ಎರಡು ಕಂಕುಳಗಳಿಂದ ಮಂಡಿಯವರೆಗೆ ಬರುವ ರೀತಿಯಲ್ಲಿ ಸೀರೆಯನ್ನು ಸುತ್ತಿ ಬೆನ್ನಿನ ಹಿಂದಕ್ಕೆ ತಂದು ಗಂಟುಹಾಕಿ ಬಿಗಿದುಕಟ್ಟಿಕೊಳ್ಳುತ್ತಿದ್ದರು. ಕಿವಿಗೆ ಓಲೆ, ಗಾಜಿನ ಬಳೆಗಳು, ಕರಿಮಣಿ ಸರ ಧರಿಸುವುದು ರೂಢಿಯಲ್ಲಿತ್ತು. ಅವಿವಾಹಿತ ಸ್ತ್ರೀಯರು ತಾಳಿಯ ಜೊತೆಗೆ ಕರಿಮಣಿ ಸರ ಕಾಲುಂಗುರ, ಕೈಬೆರಳಿನಲ್ಲಿ ಉಂಗುರ, ಕಿವಿಓಲ ಇವೆ ಆಭರಣ ಹಾಕಿಕೊಳ್ಳುತ್ತಿದ್ದರು. ಬಗೆಬಗೆಯ ಮಣಿಯ ಸರಗಳನ್ನು ಅಲಂಕಾರಕ್ಕಾಗಿ ಧರಿಸುತ್ತಿದ್ದರು. ಗಂಡು ಮಕ್ಕಳು ಚಡ್ಡಿ, ಅಂಗಿ, ಹೆಣ್ಣು ಮಕ್ಕಳು ಲಂಗ ಮತ್ತು ಕುಪ್ಪಸ ಧರಿಸುತ್ತಿದ್ದರು. ಆದರೆ ಇಂದು ನಾಗರಿಕರ ನಡುವೆ ಸಂಪರ್ಕ ಹೊಂದಿದ ಅನಂತರ ಅವರ ಉಡುಗೆತೊಡುಗೆಯಲ್ಲಿ ಮಹತ್ತರವಾದ ಬದಲಾವಣೆಗಳಾಗಿವೆ.

ಕಾಡುಕುರುಬರ ಆಹಾರ ಕ್ರಮ ಹಾಗೂ ಸರಳವಾದುದು. ರಾಗಿ ಇವರ ಪ್ರಧಾನ ಆಹಾರ. ರಾಗಿ ಮುದ್ದೆ ಸೊಪ್ಪಿನಸಾರು ನಿತ್ಯದ ಆಹಾರ, ವಿಶೇಷ ಸಂದರ್ಭದಲ್ಲಿ ಮಾತ್ರ ಅಕ್ಕಿ ಬಳಸುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ನ್ಯಾಯಬೆಲೆ ಅಂಗಡಿಗಳ ಮೂಲಕ ಅಕ್ಕಿ ಮತ್ತು ಇತರೆ ಧಾನ್ಯಗಳನ್ನು ಸುಲಭ ಬೆಲೆಗೆ ನೀಡುತ್ತಿರುವುದರಿಂದ ಅವರ ಆಹಾರ ಕ್ರಮದಲ್ಲಿ ಅಪಾರ ಬದಲಾವಣೆಯನ್ನು ಕಾಣುತ್ತೇವೆ. ಗೋದಿಯಿಂದ ಚಪಾತಿ, ಜೋಳದ ಮುದ್ದೆ ಮತ್ತು ರೊಡ್ಡಿ ತಯಾರಿಸಿ ತಿನ್ನುವುದುಂಟು. ಜೊತೆಗೆ ಕಾಡಿನಲ್ಲಿ ಸಿಗುವ ಗೆಡ್ಡೆ, ಗೆಣಸು, ಅಣಬೆ ನಾರುಬೇರು, ಸೊಪ್ಪುಸೊದೆ ಇತ್ಯಾದಿಗಳು ಆಹಾರವಾಗಿ ಬಳಕೆಯಾಗುತ್ತವೆ.

ಇವರು ಮಾಂಸಾಹಾರಿಗಳು ಹೌದು. ಹಿಂದೆ ಕಾಡಿನಲ್ಲಿದ್ದ ಕಡವೆ, ಹಂದಿ, ಜಿಂಕೆ, ಹಕ್ಕಿ ಮೊದಲಾದವುಗಳನ್ನು ಹಿಡಿದು ಅವುಗಳ ಮಾಂಸವನ್ನು ತಿನ್ನುತ್ತಿದ್ದರು. ಇತ್ತೀಚೆಗೆ ಅರಣ್ಯ ಕಾಯಿದೆಯನ್ವಯ ಪ್ರಾಣಿಗಳನ್ನು ಬೇಟೆಯಾಡುವುದನ್ನು ನಿಷೇಧಿಸಲಾಗಿದ್ದು, ಮಾಂಸಕ್ಕಾಗಿ ಕೋಳಿಸಾಕುವ ಪರ್ಯಾಯ ಮಾರ್ಗ ಕಂಡುಕೊಂಡಿದ್ದಾರೆ. ಇಂದಿಗೆ ಕೋಣ ಮತ್ತು ದನದ ಮಾಂಸ ನಿಷಿದ್ಧ. ಬೆಲ್ಲದ ಬಳಕೆಯಿದೆ. ಪುರುಷರು ಹೆಂಡ, ಸರಾಯಿ ಕುಡಿಯುವುದು, ಹೊಗೆಸೊಪ್ಪು ಮತ್ತು ಬೀಡಿ ಸೇದುವುದು ಸಾಮಾನ್ಯ. ಸ್ತ್ರೀಯರು ವಿಶೇಷ ಸಂದರ್ಭಗಳಲ್ಲಿ ಮಧ್ಯಪಾನ ಮಾಡುವರು. ಎಲೆ, ಅಡಿಕೆ ಮಾತ್ರ ಸಾಮಾನ್ಯ. ಇತ್ತೀಚೆಗೆ ನಾಗರಿಕ ಸಂಪರ್ಕ ಎಲ್ಲಾ ರೀತಿಯಲ್ಲಿಯೂ ಬದಲಾವಣೆಯನ್ನು ಉಂಟುಮಾಡಿದೆ.

ಕಾಡಿನ ವಾಸಿಗಳಾದ ಇವರು ತಾವು ಸ್ವಯಂ ವೈದ್ಯನನ್ನು ರೂಢಿಸಿಕೊಂಡರುವುದನ್ನು ಕಾಣಬಹುದಾಗಿದೆ. ಬೇರೆ ಬೇರೆ ಗಿಡಗಳ ಬೇರು, ನಾರು, ಹಣ್ಣುಕಾಯಿ ಎಲೆ ಇತ್ಯಾದಿಗಳಿಂದ ಸಿದ್ಧಪಡಿಸಿದ ಔಷಧಿ ನೀಡುವುದನ್ನು ಸಮುದಾಯದ ಕೆಲವರು ಪರಿಣತಿ ಹೊಂದಿರುತ್ತಾರೆ.

ಕಸುಬನ್ನು ಕುರಿತು ಹೇಳುವುದಾದರೆ, ಎಲ್ಲಾ ಅರಣ್ಯವಾಸಿ ಬುಡಕಟ್ಟುಗಳಂತೆ ಕಾಡುಕುರುಬರಲ್ಲಿಯೂ ಮೂಲ ಕಸುಬಿನೊಂದಿಗೆ ಉಪಕಸುಬನ್ನು ಅವಲಂಬಿಸಬೇಕಾಗಿದೆ. ಬಿದಿರು ಇವರ ಕುಸುಬಿಗೆ ಮೂಲ ಕಚ್ಚಾವಸ್ತು. ಇತ್ತೀಚೆಗೆ ಅದರ ಕೊರತೆ ಮತ್ತು ನಿಯಂತ್ರಣವಿರುವುದರಿಂದ ಅದು ಲಾಭದಾಯಕವಾಗಿಲ್ಲ. ಆದ್ದರಿಂದ ಕೊಡುಗು ಮತ್ತು ಕೇರಳದ ಗಡಿಭಾಗದ ಚಹಾತೋಟಾ, ಕಾಫಿ ತೋಟಗಳಿಗೆ ವಲಸೆ ಹೋಗಿ ಕೂಲಿಗಳಾಗಿ ಕೆಲವರು ಜೀತದಾಳುಗಳಾಗಿ ದುಡಿಯುತ್ತಿದ್ದಾರೆ. ವಯಸ್ಸಾದ ಮತ್ತು ಮಕ್ಕಳು ಅವರ ನೆಲೆಗಳಲ್ಲೇ ಉಳಿಯುತ್ತಾರೆ. ಒಟ್ಟಾರೆ ಬದಲಾದ ಬದುಕಿಗೆ ಭವಿಷ್ಯವನ್ನು ಬರೆಯುವ ನಿಟ್ಟಿನಲ್ಲಿ ಬುಡಕಟ್ಟುಗಳು ಪರ್ಯಾಯ ಕಸುಬು ಕೂಲಿ ಅನಿವಾರ್ಯವಾಗಿದೆ. ಕೂಲಿ ಸ್ಥಳೀಯವಾಗಿ ಸಿಗುವುದು ದುಸ್ತರ. ಆದ್ದರಿಂದ ಮೇಲೆ ಹೇಳಿದಂತೆ ಬೇರೆಡೆಗೆ ವಲಸೆ ಹೋಗುತ್ತಿದ್ದಾರೆ.

ಮೂಲತಃ ಕಾಡುಕುರುಬ ಕುಟುಂಬದಲ್ಲಿ ಗಂಡಹೆಂಡತಿ, ಮಕ್ಕಳು ಎಲ್ಲರೂ ಒಂದಲ್ಲ ಒಂದು ಕೆಲಸದಲ್ಲಿ ನಿರತರಾಗುತ್ತಾರೆ. ಅದರಲ್ಲಿಯೂ ಮಹಿಳೆ ಮನೆಕೆಲಸದ ಜೊತೆಗೆ ಕೃಷಿ ಕೆಲಸದಲ್ಲಿ ಗಂಡನಿಗೆ ಸಹಾಯ ಮಾಡುವಳು. ಹಾಗೂ ಆಹಾರ ಸಿದ್ಧತೆಗೆ ಬೇಕಾದ ಉರುವಲು ಮತ್ತು ಕುಟುಂಬ ನಿರ್ವಹಣೆಗೆ ಬೇಕಾದ ಇತರೆ ಸಾಮಗ್ರಿಗಳನ್ನು ತನ್ನ ಸ್ವಂತ ಪ್ರಯತ್ನದಿಂದ ಹೊಂದಿಸಿಕೊಳ್ಳುವಳು. ಆದ್ದರಿಂದ ಕಾಡುಕುರುಬ ಮಹಿಳೆಯು ಕುಟುಂಬದಲ್ಲೇ ಅತಿ ಹೆಚ್ಚು ಜವಾಬ್ದಾರಿ ಹೊಂದಿದವರು. ಈಚಿನ ದಿನಗಳಲ್ಲಿ ಬೀಡಿ ಕಟ್ಟುವ ಕೆಲಸದಲ್ಲಿ ಮಹಿಳೆಯರು ನಿರತರಾಗಿದ್ದಾರೆ. ಈ ಸಂಬಂಧ ಅವರು ಸಂತೆ ಅಥವಾ ಮಾರುಕಟ್ಟೆಗೆ ಹೋಗುವುದು ಮತ್ತು ಪದಾರ್ಥಗಳನ್ನು ಮಾರುವ ಕೆಲಸವನ್ನು ಮಾಡುತ್ತಾರೆ. ಈ ನಿಟ್ಟಿನಲ್ಲಿ ಹೇಳುವುದಾದರೆ ಸ್ತ್ರೀ ಮನೆಯ ಅಮೂಲ್ಯ ಆಸ್ತಿಯೂ ಆಗಿರುತ್ತಾಳೆ.

ವಿವಾಹ ಪದ್ಧತಿಯು ಸೋಲಿಗ ಬುಡಕಟ್ಟುಗಳಲ್ಲಿದ್ದಂತೆ ಪಲಾಯನ ವಿವಾಹ ಪದ್ಧತಿ ರೂಢಿಯಲ್ಲಿತ್ತು. ಅಂದರೆ ಪ್ರಾಯಕ್ಕೆ ಬಂದ ಹುಡುಗ ಒಬ್ಬ ಹುಡುಗಿಯನ್ನು ಹೇಳದೆ ಕೇಳದೆ ಕರೆದೊಯ್ಯುವುದು. ಸ್ವಲ್ಪದಿನಗಳು ಇಬ್ಬರು ಮರೆಯಾಗಿದ್ದು ಅನಂತರ ಹಾಡಿಗೆ ಬರುವುದು. ಆಗ ಹಾಡಿಯ ಯಜಮಾನ ವಿಧಿಸುವ ದಂಡ ಶುಲ್ಕವನ್ನು ಸಲ್ಲಿಸಿ ವಿವಾಹವಾಗುತ್ತಿದ್ದು. ಇತ್ತೀಚೆಗೆ ನಾಡಿನ ಜನರ ವಿವಾಹ ಕ್ರಮವನ್ನು ಗಮನಿಸಿ ಸ್ವಲ್ಪ ಬದಲಾವಣೆಯನ್ನು ತಂದುಕೊಂಡಿದ್ದಾರೆ. ಅಂದರೆ ತಂದೆ-ತಾಯಿಗಳೇ ತಮ್ಮ ಮಕ್ಕಳ ವಿವಾಹವನ್ನು ಏರ್ಪಾಡು ಮಾಡುವ ಕ್ರಮ ಹೆಚ್ಚಾಗಿ ರೂಢಿಗೆ ಬಂದಿದೆ. ಎಲ್ಲರಲ್ಲೂ ಇರುವಂತೆ ಇವರಲ್ಲಿಯೂ ಒಂದೇ ಕುಲಕ್ಕೆ ಸೇರಿರುವ ಹುಡುಗ ಹುಡುಗಿಯ ಮದುವೆ ನಿಷಿದ್ಧ. ಕಾರಣ ಅವರು ಸೋದರಸೋದರಿ ಸಂಬಂಧ ಎಂದು ಹೇಳುತ್ತಾರೆ. ಒಂದು ಪಕ್ಷ ಅಂತಹ ಸಂಬಂಧಗಳು ಏರ್ಪಟ್ಟರೆ ಅವರನ್ನು ಕುಲದಿಂದ ಬಹಿಷ್ಕರಿಸಿ ಹೊರಗಟ್ಟುವರು. ವಿಶೇಷವೆಂದರೆ ಇವರಲ್ಲಿ ವರದಕ್ಷಿಣೆ ಬದಲಿಗೆ ವಧುದಕ್ಷಿಣೆ ಇದೆ. ಅಂದರೆ ವರನ ಕಡೆಯವರು ವಧುವಿನ ಮನೆಯವರಿಗೆ ಮದುವೆಯ ಖರ್ಚಿನಲ್ಲಿ ಅರ್ಧ ಖರ್ಚು ಕೊಡಬೇಕು. ಒಟ್ಟಾರೆ ಯಾರಿಗೂ ಹೊರೆಯಾಗದಂತೆ ಪ್ರತಿಯೊಂದು ಸಂದರ್ಭದಲ್ಲೂ ಪರಸ್ಪರ ಸಹಕಾರದ ಬದುಕು ಬುಡಕಟ್ಟುಗಳಲ್ಲಿ ಕಂಡುಬರುತ್ತದೆ. ಅದಕ್ಕೆ ಈ ಬುಡಕಟ್ಟು ಹೊರತಾಗಿಲ್ಲ.

ಪ್ರಕೃತಿಯನ್ನು ಆರಾಧಿಸುವ ಅರಣ್ಯವಾಸಿ ಬುಡಕಟ್ಟುಗಳಿಗೆ ಗಿಡಮರ, ನಾರುಬೇರು, ಕಲ್ಲುಮಣ್ಣು ಎಲ್ಲವೂ ಮಹತ್ವವಾದುವು. ಆದರೆ ಒಂದೊಂದು ಬುಡಕಟ್ಟಿನ ದೃಷ್ಟಿಯಲ್ಲಿ ಅವರವರ ಭಾಷೆಗೆ ಅನುಗುಣವಾಗಿ ಬೇರೆ ಬೇರೆ ಹೆಸರುಗಳಿಂದ ಕರೆಯುವುದುಂಟು. ಅಲ್ಲದೇ ಹಿರಿಯರ ಆತ್ಮ ಅಥವಾ ಪೂರ್ವಜರು ಇವರಿಗೆ ಎಲ್ಲಾ ಸಂದರ್ಭದಲ್ಲಿ ಸ್ಮರಣೀಯರು. ಅವರ ಆತ್ಮಗಳು ನಮ್ಮನ್ನು ಕಾದು ಕಾಪಾಡಿ ಮುನ್ನಡೆಸುತ್ತಿವೆ ಎಂಬ ನಂಬಿಕೆ ಇದೆ.

ಉಪಸಂಹಾರ: ಒಕ್ಕೈಕುರುಬ, ಜೇನುಕುರುಬ ಮತ್ತು ಕಾಡುಕುರುಬ (ಬೆಟ್ಟಕುರುಬ) ಈ ಮೂರು ಬುಡಕಟ್ಟುಗಳನ್ನು ಕುರಿತ ಕೆಲವು ವಿಚಾರಗಳನ್ನು ಚರ್ಚೆಗೆ ಒಳಪಡಿಸುವುದರೊಂದಿಗೆ ಒಕ್ಕೈ ಕುರುಬ ಎಂಬ ಹೆಸರಿನ ಒಂದು ಸಮುದಾಯವನ್ನು ಸಾಹಿತ್ಯಲೋಕಕ್ಕೆ ಮೊದಲಬಾರಿಗೆ ಪರಿಚಯಿಸುವ ಪ್ರಯತ್ನ ಮಾಡಲಾಗಿದೆ. ಈಗಾಗಲೇ ಈ ಸಮುದಾಯವನ್ನು ಕುರಿತು ಕರ್ನಾಟಕ ಇತಿಹಾಸ ಕಾಡೆಮಿ ಬೆಂಗಳೂರು, ಇವರು ನಡೆಸುವ ವಾರ್ಷಿಕ ವಿಚಾರ ಸಂಕಿರಣ (ಬದಾಮಿ)ದಲ್ಲಿ “ಇತಿಹಾಸವಿಲ್ಲದವರ ಇತಿಹಾಸ” ಎಂಬ ಶೀರ್ಷಿಕೆಯಲ್ಲಿ ಪ್ರಬಂಧವನ್ನು ಮಂಡಿಸಲಾಗಿತ್ತು. ಆದರೆ ಹೆಚ್ಚಿನ ವಿಚಾರ ತಿಳಿದು ಬಂದಿರಲಿಲ್ಲ. ತದನಂತರದಲ್ಲಿ ಈ ಸಮುದಾಯವನ್ನು ಕುರಿತು ಹೆಚ್ಚಿನ ಆಸಕ್ತಿಯನ್ನು ಹೊಂದಿ ಅಧ್ಯಯನ ಕೈಗೊಂಡಾಗ ಮೌಖಿಕ ಹೇಳಿಕೆಯಲ್ಲಿ ಕೆಲವು ವಿಷಯಗಳು ತಿಳಿದು ಬಂದುದನ್ನು ಇಲ್ಲಿ ಪರಿಚಯಿಸಿದ್ದೇನೆ.

ಸಾಮಾನ್ಯವಾಗಿ ನಮಗೆಲ್ಲರಿಗೂ ತಿಳಿದಿರುವಂತೆ ಒಂದೇ ಗುಂಪಿಗೆ ಸೇರಿದ ಸಮುದಾಯವೊಂದು ಬದಲಾದ ಪರಿಸ್ಥಿತಿ ಹಾಗೂ ಅಸ್ತಿತ್ವಕ್ಕಾಗಿ ಭಿನ್ನ ಗುಂಪುಗಳಾಗಿ ಪ್ರತ್ಯೇಕವಾಗುವ ಸಾಧ್ಯತೆಗಳು ಇತ್ತು. ಹಾಗೆಯೇ ಅವರು ಅನುಸರಿಸುವ ಕಸುಬು, ಧರಿಸುವ ಉಡುಗೆ, ತೊಡುಗೆ, ಮಾತನಾಡುವ ಭಾಷೆಯನ್ನು ಆಧರಿಸಿ ಅವರನ್ನು ಭಿನ್ನ ಹೆಸರುಗಳಿಂದ ಕರೆಯುವುದು ರೂಢಿಯಲ್ಲಿ ಬಂದಾಗ ಹತ್ತಾರು ವರ್ಷಗಳಲ್ಲಿ ಆ ಗುಂಪುಗಳು ಸಂಪೂರ್ಣ ಬೇರೆಯೇ ಆಗಿ ಗುರ್ತಿಸಿಕೊಂಡಿರುವುದು ಕರ್ನಾಟಕದಲ್ಲಿ ಕಾಣಸಿಗುವ ಹತ್ತು ಹಲವಾರು ಕುರುಬ ಸಮುದಾಯಗಳನ್ನು ಗಮನಿಸಬಹುದು. ಉದಾಹರಣೆಗೆ ಕಾಡುಕುರುಬ / ಬೆಟ್ಟಕುರುಬ, ಜೇನುಕುರುಬ, ಮುಳ್ಳುಕುರುಬ, ಕೊಂಗನಾಡಕುರುಬ, ಕಚ್ಚೆಕುರುಬ, ಒಕ್ಕೈಕುರುಬ, ಹಂಡೆಕುರುಬ, ಕಲ್ಲುಮನೆಕುರುಬ, ಹುಲ್ಲುಮನೆಕುರುಬ, ಊರುಕುರುಬ, ಗೊಂಡಕುರುಬ, ಬುಂಡೇ ಕುರುಬ, ಅಲೆಮಾರಿ ಕುರುಬ, ಹತ್ತಿಕಂಕಣ ಕುರುಬ, ಉಣ್ಣೆಕಂಕಣ ಕುರುಬ, ಕುರಿಕುರುಬ ಇವೇ ಮುಂತಾದ ಹೆಸರುಗಳು ಇರುವುದು ಸಾಧ್ಯವಿದೆ. ಕುರುಬ ಪದವನ್ನು ಹೊರತು ಪಡಿಸಿ ಅದರ ಪೂರ್ವಪದ ಮಾತ್ರ ಬದಲಾಗಿದೆ. ಅವುಗಳೆಲ್ಲವು ಆ ಕುರುಬ ಸಮುದಾಯದ ವಿಶೇಷತೆಯನ್ನು ಐಡೆಂಟಿಟಿ (ಚಹರೆ)ಯನ್ನು ತಿಳಿಸುತ್ತದೆ. ಸಾವಿರಾರು ವರ್ಷಗಳ ಹಾದಿಯಲ್ಲಿ ಅವರು ಒಬ್ಬೊಬ್ಬರು ಭಿನ್ನ ಎಂಬುದು ಗೋಚರವಾದರೂ ಆಶ್ಚರ್ಯಪಡಬೇಕಿಲ್ಲ. ಅದಕ್ಕೆ ಮೊತ್ತ ಮೊದಲ ಅಂಶ ಭಾಷೆ. ಭಾಷೆಯೊಂದು ಬದಲಾದರೆ ಸಂಸ್ಕೃತಿ ಮತ್ತು ಇತರೆ ಅಂಶಗಳೆಲ್ಲವೂ ಬದಲಾಗುವ ಸಾಧ್ಯತೆಯಿದೆ. ಬದಲಾವಣೆ ಅಂದ ಮಾತ್ರಕ್ಕೆ ಅವರು ಮನುಷ್ಯತ್ವ ಕಳೆದುಕೊಂಡು ಬೇರೊಂದು ಜೀವಿಯಾಗುವುದಿಲ್ಲ. ಆದರೆ ಆಚಾರ ವಿಚಾರ, ಉಡುಗೆ ತೊಡುಗೆ ಕಸುಬು ಮತ್ತು ಆಹಾರ ಪದ್ಧತಿಯಲ್ಲಿ ಅಲ್ಪ ಸ್ವಲ್ಪ ವ್ಯತ್ಯಾಸವಾದರೂ ಅದು ಆಯಾ ಸಮುದಾಯಗಳಿಗೆ ಅನನ್ಯ ಎಂದು ಗುರ್ತಿಸಲಾಗುವುದು.

ಅರಣ್ಯವಾಸಿಗಳಾದ ಬುಡಕಟ್ಟು ಜನರನ್ನು ಗಮನಿಸಿದಾಗ ಅವರ ಎತ್ತರವೂ ಒಂದೇ ಆಗಿರುವುದನ್ನು ಕಾಣಬಹುದಾಗಿದೆ. ಸಾಮಾನ್ಯವಾಗ ಎಲ್ಲಾ ಬುಡಕಟ್ಟುಗಳು ಅರಣ್ಯವಾಸಿ ಅತಿ ಚಿಕ್ಕದಾದ ಗುಡಿಸಲನ್ನು ನಿರ್ಮಿಸುವರು. ಒಳಗೆ ಹೋಗಲು ನಿರ್ಮಿಸುವ ಬಾಗಿಲು ಸಹ ಅತಿ ಚಿಕ್ಕದು ಅಂದರೆ ಮನುಷ್ಯರು ನುಸುಳಿಕೊಂಡು ಹೋಗಬೇಕು. ಒಟ್ಟಾರೆ ಕ್ರೂರಮೃಗಗಳ ಪ್ರದೇಶವಾದ ಅರಣ್ಯದಲ್ಲಿ ತಮ್ಮನ್ನು ತಾವು ಕುಗ್ಗಿಸಿಕೊಂಡು ಕಂಡು ಕಾಣದಂತೆ ಬಚ್ಚಿಟ್ಟುಕೊಂಡು ಬರುಕುವ, ಅವರೆಂದು ಎದೆಚಾಚಿ ನೆಟ್ಟಗೆ ನಡೆದಾಡುವುದು ಸಾಧ್ಯವಿಲ್ಲ. ಒಟ್ಟಾರೆ  ಈ ಅನಿವಾರ್ಯದ ಹುಚ್ಚತನದ ಬದುಕು ಅವರ ಕನಿಷ್ಟ ಎತ್ತರಕ್ಕೆ ಕಾರಣವಾಗಿದೆ. ಒಂದು ವ್ಯವಸ್ಥೆಗೆ ಒಗ್ಗಿಕೊಂಡು ಬದುಕಿನ ಶೈಲಿಯೂ ಸಹ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಕಾರಣವಾಗಬಲ್ಲದು ಎಂಬುದು ವೈಜ್ಞಾನಿಕವಾಗಿ ಸಾಬೀತಾದ ವಿಷಯವೇ ಆಗಿದೆ.

ಇತ್ತೀಚೆಗೆ ಬುಡಕಟ್ಟು ಸಮುದಾಯಗಳು ನಾಡಿನ ಜನರ ಜೊತೆ ಸಂಪರ್ಕವನ್ನು ಪಡೆದ ಕಾರಣ ತಿಳಿದೋ ತಿಳಿಯದೆಯೋ ವರ್ಣಸಂಕರಗಳು ನಡೆದು ಹೋಗಿವೆ. ಆದರೆ ಇದನ್ನು ಬುಡಕಟ್ಟುಗಳು ಒಪ್ಪಿಕೊಂಡಿವೆಯೇ ವಿನಃ ಅದನ್ನು ಯಾವುದೇ ರೀತಿಯಲ್ಲಿ ತಿರಸ್ಕರಿಸುತ್ತಿಲ್ಲ ಎಂಬುದು ಬುಡಕಟ್ಟು ಸಮುದಾಯಗಳ ವಿಶಾಲ ಮನೋಭಾವನೆಯನ್ನು ಸೂಚಿಸುತ್ತದೆ. ಏಕೆಂದರೆ ಅರಣ್ಯದಲ್ಲಿ ಹತ್ತು ಹಲವಾರು ಕ್ರೂರ ಪ್ರಾಣಿಗಳು ಹಾಗೂ ವಿಷಜಂತುಗಳೊಂದಿಗೆ ಯಾವುದೇ ಅಪಾಯವಿಲ್ಲದೆ ಯಶಸ್ವಿಯಾಗಿ ಪ್ರತಿಯೊಬ್ಬರು ಪೂರ್ಣಾಯುಷಿಗಳಾಗಿ ಬಾಳಿ ಬದುಕುವುದನ್ನು ಕಾಣಬಹುದಾಗಿದೆ. ಇದರಲ್ಲಿ ಆಕಸ್ಮಿಕ ಒಂದೆರಡು ಸಾವುನೋವುಗಳು ಸಾಮಾನ್ಯ ಅಂದರೆ ಅಂತಹ ಪರಿಸ್ಥಿತಿಯನ್ನು ಬಹಳ ನಾಜೂಕಾಗಿ ನಿಭಾಯಿಸುವ ರೀತಿ, ಯಾರೊಂದಿಗೂ, ಯಾವುದೋ ಕಾರಣಕ್ಕೂ ಸಂಘರ್ಷವನ್ನು ಬಯಸದ ಅವರ ಮನಸ್ಸು ಆರೋಗ್ಯಪೂರ್ಣವಾಗಿರುವುದು. ಅಲ್ಲದೆ ವಿಶ್ವಕ್ಕೆ ಮಾದರಿಯೂ ಹೌದು ಎಂಬುದನ್ನು ನಾವು ಅರ್ಥೈಸಿಕೊಳ್ಳಬೇಕಾಗಿದೆ.

ಮೇಲೆ ಹೇಳಿದ ಬುಡಕಟ್ಟುಗಳು ದೈಹಿಕ ರಚನೆಯಲ್ಲಿ ಅಷ್ಟೇನು ವ್ಯತ್ಯಾಸವನ್ನು ಹೊಂದಿಲ್ಲ. ಹೆಸರು, ಭಾಷೆ, ಪ್ರವೇಶ, ಸ್ವಲ್ಪ ಆಹಾರದ ವ್ಯತ್ಯಾಸ ಇದೆ. ಆದರೆ ವೈಜ್ಞಾನಿಕವಾಗಿ ಡಿ.ಎನ್.ಎ. ಪರೀಕ್ಷೆಯೊಂದಿಗೆ ಇವರ ಮೂಲ ಹಾಗೂ ಇತರೆ ಮಹತ್ವದ ಸಂಗತಿಗಳನ್ನು ಕಂಡುಕೊಳ್ಳುವುದು ಸಾಧ್ಯವಿದೆ. ಆದ್ದರಿಂದ ಅಧ್ಯಯನಕಾರರು ಹಲವಾರು ಸಂಗತಿಗಳ ಸಾಮ್ಯತೆಯನ್ನು ಒದಗಿಸುವ ಮೂಲಕ ಅವರ ಮೂಲವನ್ನು ಕುರಿತು ವಕಾಲತ್ತುವಹಿಸುವುದು ಈ ಸಂದರ್ಭದಲ್ಲಿ ಸೂಕ್ತವಲ್ಲ ಎಂಬ ವಿಚಾರವನ್ನು ಹೇಳಬೇಕಾಗುತ್ತದೆ. ಇದು ಕೇವಲ ಸಾಧ್ಯತೆಯೇ ಹೊರತು ಇದೇ ಅಂತಿಮ ಸತ್ಯ ಎಂದೇನೂ ಅಲ್ಲ. ಒಟ್ಟಾರೆ ನಮಗೆ ತಿಳಿದಿರುವ ಬೇರೆ ಬೇರೆ ಕುರುಬರಂತೆ ನಿಗೂಢವಾಗಿ ಅಪರಿಚಿತವಾಗಿ ಉಳಿದಿರುವ ಒಕ್ಕೈಕುರುಬ ಸಮುದಾಯವನ್ನುಪರಿಚಯಿಸುವುದಕ್ಕೆ ಸಂತಸವಾಗುತ್ತದೆ.

ಗ್ರಥಋಣ

ಕನ್ನಡ

೧. ಲಕ್ಕಪ್ಪಗೌಡ (ಪ್ರ.ಸಂ). ಕರ್ನಾಟಕ ಬುಡಕಟ್ಟುಗಳು ಸಂಪುಟ-೧, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ, ಬೆಂಗಳೂರು ೧೯೯೮.

೨. ಲಲಿತ ಎ.ಸಿ. ಕಾಡುಕುರುಬರ ಮತ್ತು ಜೇನು ಕುರುಬರ ಸಂಸ್ಕೃತಿ. ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು, ೧೯೯೮.

೩. ಕೃಷ್ಣ ಅಯ್ಯಂಗಾರ್ ಡಿ., ಕನ್ನಡನಾಡಿನ ಆದಿವಾಸಿಗಳು, ೧೯೫೬.

೪. ಜೇನುನುಡಿ, ಭಾರತೀಯ ಭಾಷಾ ಸಂಸ್ಥಾನ, ಮೈಸೂರು, ೧೯೮೨.

೫. ಕೇಶವನು ಪ್ರಸಾದ ಕೆ. ಬುಡಕಟ್ಟು ವಿಸ್ಮಯ ಅಭಿರುಚಿ ಪ್ರಕಾಶನ, ಮೈಸೂರು ೨೦೦೫.

English

1. Aiyappa-A Report on the Socio Economic Condition of the Aboriginal Tribes of the Province of Madras, Madras 1948.

2. Bose-Nirmal Kumar, Tribal Life of India, Newdelhi-1971.

3. Nanjudiah, H.V. & Ananthakrishna Iyer K. The Mysore Tribes & Castes Vol. IV, Mysore-1931.

4. Nanjunda Rao- Tribals in Heggadadevanakote Taluk. Bangalore-1988.

5. Oppert- Gustava- On the original Inhabitans of Bharatavarsha, De;hi- 1988.

6. Rice B. Lewis, Mysore Gazetter- Vol I, 1897.

7. Singh K.S. The scheduled Tribes, Descriptive Data, People of India, National Series 1992.

8. Thurston E-Castes & Tribes of Sauthern India Vol IV, 1909.