ಪ್ರವೇಶ

ಭೂಮಿಯ ಮೇಲೆ ಅವತರಿಸಿದ ಮಾನವ ತನ್ನ ಮೊದಲ ಕಾಲಘಟ್ಟದಲ್ಲಿ ಕಾಡು ಸ್ಥಿತಿಯಲ್ಲಿದ್ದು ಅಲೆಮಾರಿ ಬದುಕು ನಡೆಸುತ್ತಿದ್ದನೆಂಬುದು ಸರ್ವವೇದ್ಯವಾದ ಸಂಗತಿ. ಕಾಡು ಸ್ಥಿತಿಯಲ್ಲಿದ್ದಾಗ ಮಾನವನು ಆಹಾರಕ್ಕಾಗಿ ನಿಸರ್ಗದ ಮಡಿಲಲ್ಲಿ ದೊರೆಯುವ ಪ್ರಾಣಿ, ಪಕ್ಷಿ, ಗೆಡ್ಡೆ-ಗೆಣಸು, ಹಣ್ಣು-ಹಂಪಲುಗಳನ್ನು ತಿಂದು ಜೀವಿಸುತ್ತಿದ್ದ. ಇವನ್ನು ಹುಡುಕಿಕೊಂಡು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಅಲೆದಾಡುತ್ತಿದ್ದ. ಈ ಸಂದರ್ಭದಲ್ಲಿ ಬೆಟ್ಟ-ಗುಡ್ಡ, ಗವಿಗಳು, ಕಾಡಿನಲ್ಲಿರುವ ಮರಗಳ ಪೊಟರೆಗಳು ಆತನ ವಾಸಸ್ಥಳಗಳಾಗಿದ್ದವು. ಅಂದರೆ ಆಹಾರ ಮತ್ತು ಆಶ್ರಯಗಳೆರಡಕ್ಕೂ ನಿಸರ್ಗವನ್ನೇ ಅವಲಂಬಿಸಿದ್ದ, ಜೊತೆಗೆ ಕಾಲದ ಬದಲಾವಣೆಗಳಿಂದಾಗುವ ಏರು-ಪೇರುಗಳನ್ನು ಚೆನ್ನಾಗಿ ಅರಿತಿದ್ದ.

ಬೇಟೆ ಸಂಸ್ಕೃತಿಯ ಕಾಲಘಟ್ಟದಲ್ಲಿ ಮುಂದುವರೆದಾಗ ಪ್ರಾಣಿಗಳ ಮಾಂಸವೇ ಆತನ ಆಹಾರವಾಯಿತು. ಪ್ರಾಣಿಗಳ ಚರ್ಮವು ಅವನ ಹೊದಿಕೆಯಾಯಿತು. ಅಲೆಮಾರಿ ಜೀವನದಿಂದ ಸ್ಥಾನಿಕ ಜೀವನಕ್ಕೆ ಮುಂದುವರಿದಾಗ ಕಾಡಿನಲ್ಲಿ ಕಂಡ ಪ್ರಾಣಿಗಳನ್ನು ಬೇಡೆಯಾಡಿ ತರುವ ಬದಲು ತನ್ನ ಬುದ್ಧಿವಂತಿಕೆಯಿಂದ ಅವನ್ನು ಹಿಡಿದು ಪಳಗಿಸಿ ಸಾಕಿ ತಳಿ ಬೆಳೆಸುವ ವಿದ್ಯೆಯನ್ನು ಕಂಡುಕೊಂಡನು.

ಭೌತಿಕವಾಗಿ ವಿಕಾಸವಾದಂತೆ ಭೌದ್ಧಿಕ ಮಟ್ಟದಲ್ಲಿ ಕೆಲವೊಂದು ಪರಿವರ್ತನೆಗಳು ಕಂಡುಬಂದವು. ಪರಿಣಾಮವಾಗಿ ಕಾಡಿನಲ್ಲಿರುವ ಕಾಡುಪ್ರಾಣಿಗಳನ್ನು ಪಳಗಿಸಿ ಅಲೆದಾಡಿ ಸಾಕಿ ಸಲುಹುದರ ಜೊತೆಗೆ ಬದುಕಿನ ನೆಲೆ-ಬೆಲೆಯನ್ನು ಕಂಡುಕೊಂಡನು. ಕಾಲಾಂತರದಲ್ಲಿ ಭೌದ್ಧಿಕ ವಿಕಾಸವಾದಂತೆ ಕೃಷಿ ಸಂಸ್ಕೃತಿಗೆ ಬಂದನು. ಅಲೆಮಾರಿ ಜೀವನದ ಬದಲಾಗಿ ಒಂದು ನಿರ್ದಿಷ್ಟ ಪ್ರದೇಶದಲ್ಲಿ ನೆಲೆಗೊಳ್ಳಲು ಆರಂಭಿಸಿದನು. ತನ್ನ ವಾಸಕ್ಕೆ ಹಾಗೂ ಆಹಾರ ಬೆಳೆಯಲು ಯೋಗ್ಯವಾದ ಸ್ಥಳಗಳನ್ನು ಆಯ್ಕೆ ಮಾಡಿಕೊಂಡು ಹಟ್ಟಿಗಳನ್ನು ನಿರ್ಮಿಸಿಕೊಂಡನು. ಹಟ್ಟಿಗಳು ಗ್ರಾಮಗಳ ರೂಪಂತರಕ್ಕೆ ನಾಂದಿಯಾಯಿತು. ಹಾಗೂ ವೈವಿದ್ಯಮಯ ಸಂಸ್ಕೃತಿಯ ಬೆಳವಣಿಗೆಗೆ ಹಾಗೂ ಹಲವು ಶೋಧನೆಗಳಿಗೆ ಪ್ರೇರಣೆಯಾಯಿತು.

ಕೃಷಿ ಮತ್ತು ಪಶುಪಾಲನೆಯು ಮಾನವನ ಮೂಲ ವೃತ್ತಿಗಳಾಗಿದ್ದು, ನಿಸರ್ಗದೊಡನೆ ನೇರ ಸಂಬಂಧ ಹೊಂದಿವೆ. ಈ ಮೂಲ ವೃತ್ತಿಗಳನ್ನು ಅವಲಂಬಿಸಿಕೊಂಡು ಇತರ ವೃತ್ತಿಗಳು ಬೆಳೆಯುತ್ತವೆ. ಮೂಲವೃತ್ತಿಯ ನಾಗರಿಕ ಮಾನವನು ಪ್ರಥಮವಾಗಿ ಕೈಗೊಂಡಂತಹ ಕೆಲಸವಾಗಿರುತ್ತದೆ. ಸಾಮಾನ್ಯವಾಗಿ ಮೂಲ ವೃತ್ತಿ ಅಥವಾ ಪ್ರಥಮ ವೃತ್ತಿಯ ಮಾನವನಿಗೂ ಮತ್ತು ನಿಸರ್ಗಕ್ಕೂ ನೇರವಾದ ಸಂಬಂಧವನ್ನು ಕಲ್ಪಿಸುತ್ತದೆ. ಹಾಗೆಯೇ ಮೂಲ ವೃತ್ತಿಗಳಾದ ಕೃಷಿ ಮತ್ತು ಪಶುಪಾಲನೆಯು ಅವಿನಾಭಾವ ಸಂಬಂಧ ಹೊಂದಿದೆ. ಅಂದರೆ ಕೃಷಿಯು ಪಶುಪಾಲನೆಯನ್ನು ಒಳಗೊಂಡಿರುವುದರಿಂದ ಪಶುಪಾಲನೆಯನ್ನು ಬಿಟ್ಟು ಕೃಷಿ ಉಳಿಯಲಾರದು. ಅದೇ ರೀತಿ ಕೃಷಿಯನ್ನು ಬಿಟ್ಟು ಪಶುಪಾಲನೆ ಇರಲಾರದು. ಈ ಅವಿನಾಭಾವ ಸಂಬಂಧಕ್ಕೆ ನೈಸರ್ಗಿಕ ಸಂಪನ್ಮೂಲಗಳೇ ಕಾರಣವಾಗಿವೆ. ಆದಿಕಾಲದ ಮಾನವ ಸಾದು ಪ್ರಾಣಿಗಳಾದ ಕುರಿ ಮೇಕೆಗಳನ್ನು ಸಂಗೋಪನೆ ಮಾಡುತ್ತಾ ತನ್ನ ಹೊಟ್ಟೆಯನ್ನು ತುಂಬಿಸಿಕೊಳ್ಳುತ್ತಿದ್ದ. ಪ್ರಸ್ತುತ ದಿನಗಳಲ್ಲಿ ಜಾಗತೀಕರಣದ ಪರಿಣಾಮವಾಗಿ ಇಡೀ ಜಗತ್ತು ವಿಶ್ವಗ್ರಾಮದ ಸ್ವರೂಪ ಮತ್ತು ಮಾನವ ಸಂಸ್ಕೃತಿ ಏಕೀಕರಣಗೊಳ್ಳುತ್ತಿದೆ. ಇಂತಹ ಸಂದರ್ಭದಲ್ಲಿಯೂ ಸಹ ಈ ಭೂಮಂಡಲದ ಮೂಲಿಗರಾದ ಕುರುಬ (ಹಾಲುಮತ) ಸಮುದಾಯದ ಬಹಳಷ್ಟು ಕುಟುಂಬಗಳು ಅಲೆಮಾರಿ, ಅರೆಅಲೆಮಾರಿ ಮತ್ತು ಸ್ಥಾನಿಕ ವಿಧಾನಗಳನ್ನು ಅನುಸರಿಸಿ ಕುರಿಸಂಗೋಪನೆ ಮಾಡುತ್ತಿದ್ದಾನೆ. ಜೊತೆಗೆ ನಿಸರ್ಗದ ಸಂಪನ್ಮೂಲಗಳನ್ನು ಅಭಿವೃದ್ಧಿ ಪಡಿಸುತ್ತಾ ತಾನು ಬದುಕುತ್ತಿದ್ದಾನೆ.

ಜೀವನ ನಿರ್ವಹಣೆಗೋಸ್ಕರ ಮೂಲವೃತ್ತಿಯನ್ನು ತೊರೆಯದೆ, ಕುಟುಂಬ ಸಮೇತ ವಲಸೆ ಬಂದು ಕುರಿ ಮೇಕೆಗಳಿಗೆ ವೇವು-ನೀರು ಹುಡುಕಿಕೊಂಡು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ವರ್ಷವಿಡೀ ಅಲೆದಾಡುತ್ತಾ ಕುರಿಸಂಗೋಪನೆ ಮಾಡುವವರೇ ಅಲೆಮಾರಿ ಕುರುಬರು. ಹೀಗೆ ಕುರಿಸಂಗೋಪನೆ ಮಾಡುವವರನ್ನು ಅಲೆಮಾರಿ ಕುರುಬರು, ಸಂಚಾರಿ ಕುರುಬರು, ಬೆಳಗಾಂ ಕುರೇರು, ಕೊಲ್ಲಾಪುರ ಕುರೇರು ಇತ್ಯಾದಿ ಹೆಸರುಗಳಿಂದ ಕರೆಯುತ್ತಾರೆ.

ಇವರು ಬೆಳಗಾಂ ಜಿಲ್ಲೆಯವಾಗಿದ್ದು ಹೆಚ್ಚಾಗಿ ಚಿಕ್ಕೋಡಿ ತಾಲ್ಲೂಕಿನ ವಿವಿಧ ಗ್ರಾಮಗಳಿಂದ ವಲಸೆ ಬಂದಿರುವವರು. ಹಾಗೆಯೇ ಕೆಲವೊಂದು ಕುಟುಂಬಗಳು, ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯಿಂದಲೂ ವಲಸೆ ಬಂದವರಿದ್ದಾರೆ. ವಲಸೆ ಬಂದಿರುವ ಇವರು ಯಾವುದೇ ಒಂದು ನಿರ್ದಿಷ್ಠ ಭೂ ಪ್ರದೇಶದಲ್ಲಿ ನೆಲೆನಿಂತು ಕುರಿಸಂಗೋಪನೆ ಮಾಡದೆ ತಮ್ಮ ಬದುಕುಗಳಿಗೆ ಕುರಿ-ಮೇಕೆ ವೇವು ನೀರು ಸಮಗ್ರವಾಗಿ ಎಲ್ಲಿ ದೊರೆಯುತ್ತದೆಯೋ ಮತ್ತು ಅವುಗಳ ಜೀವನ ಎಲ್ಲಿ ಚೆನ್ನಾಗಿರುತ್ತದೆಯೋ ಆ ಭೂ ಪ್ರದೇಶಗಳಲ್ಲಿ ಅಲೆದಾಡುತ್ತಿದ್ದಾರೆ. ಕುರಿ ಮತ್ತು ಕುಟುಂಬದೊಂದಿಗೆ ವಲಸೆ ಬಂದಿರುವ ಅಲೆಮಾರಿ ಕುರುಬರು ಕರ್ನಾಟಕ ರಾಜ್ಯದ ಬಳ್ಳಾರಿ, ರಾಯಚೂರು, ಕೊಪ್ಪಳ, ದಾವಣಗೆರೆ, ಚಿಕ್ಕಮಗಳೂರು, ಶಿವಮೊಗ್ಗ, ಹಾವೇರಿ, ಧಾರವಾಡ ಹಾಗೂ ಆಂಧ್ರಪ್ರದೇಶದ ಅನಂತಪುರ ಮತ್ತು ಕರ್ನೂಲ ಜಿಲ್ಲೆಗಳ ಭೂ ಪ್ರದೇಶಗಳಲ್ಲಿ ಅಲೆದಾಡುತ್ತಿದ್ದಾರೆ. ಅಲೆದಾಡುವಿಕೆಯು ಋತುಮಾನಕ್ಕನುಗುಣವಾಗಿರುತ್ತದೆ. ಅಂದರೆ ಮಳೆಗಾಲದಲ್ಲಿ ಬೆಟ್ಟ-ಗುಡ್ಡ ಅಥವಾ ಗಟ್ಟಿ ಪ್ರದೇಶಗಳಲ್ಲಿ ಗುಡಾರ ಹೂಡಿ ಕುರಿ ಸಂಗೋಪನೆ ಮಾಡಿದರೆ, ಮಳೆಗಾಲದ ನಂತರ ನೀರಾವರಿ ಮತ್ತು ವೇವು-ನೀರು ದೊರೆಯುವ ಪ್ರದೇಶಗಳಲ್ಲಿ ಅಲೆದಾಡುತ್ತಿದ್ದಾರೆ. ಪ್ರಾದೇಶಿಕವಾಗಿ ಭಿನ್ನ ಹೆಸರುಗಳಿಂದ ಕರೆಯುವ ಹಿಮಾಚಲ ಪ್ರದೇಶದ ಗಡ್ಡಿ ಸಮುದಾಯವು ಕುಲು ಮತ್ತು ಕಾಂಗ್ರ ನದಿಗಳ ಸುತ್ತಮುತ್ತಲಿನ ಭೂ ಪ್ರದೇಶಗಳಲ್ಲಿ ಹಾಗೂ ಚಾಂಬಾ ಮತ್ತು ಮಂಡಿ ಜಿಲ್ಲೆಗಳಲ್ಲಿ ಹಾಗೆಯೇ ರಾಜಸ್ಥಾನದ ರೈಕ (ರೇಬಾರಿ) ಸಮುದಾಯವು ಅಲೆಮಾರಿ ಕುರುಬ ಸಮುದಾಯದಂತೆಯೇ ಕುರಿಸಂಗೋಪನೆಗಾಗಿ ಕುಟುಂಬ ಸಮೇತ ಅಲೆದಾಡುತ್ತಿದ್ದಾರೆ.

ವಲಸೆ ಬರುವ ಮೊದಲು ಬೆಳಗಾವಿ ಕುರೇರು ಅರೆಅಲೆಮಾರಿಗಳಾಗಿದ್ದರು. ಅಂದರೆ ಮಳೆಗಾಲದಲ್ಲಿ ಕಾರಹುಣ್ಣಿಮೆಯಿಂದ ದೀಪಾವಳಿವರೆಗೆ ನಾಲ್ಕು-ಐದು ತಿಂಗಳುಗಳ ಕಾಲ ಕೆಲವೊಂದು ಕುಟುಂಬಗಳು ಮಹಾರಾಷ್ಟ್ರದ ಸಾಂಗ್ಲಿ, ಕೊಲ್ಹಾಪುರ ಭೂ ಪ್ರದೇಶದ ಕಡೆ ಇನ್ನೂ ಕೆಲವು ಕುಟುಂಬಗಳು ಬಾಗಲಕೋಟೆ, ಬಿಜಾಪುರ ಮತ್ತು ಧಾರವಾಡ ಜಿಲ್ಲೆಯ ಭೂಪ್ರದೇಶದ ಕಡೆ ವಲಸೆ ಹೋಗಿ ಹಿಂದಿರುಗುತ್ತಿದ್ದರು. ಈ ಅವಧಿಯಲ್ಲಿ ವಲಸೆ ಹೋಗಲು ಕಾರಣ ಕುರಿ ಸಂಗೋಪನೆಗೆ ಯೋಗ್ಯ ಎನ್ನುವುದಕ್ಕಿಂತ (ಯೋಗ್ಯ ಮಳೆ ೫೪೫ ರಿಂದ ೭೦೦ ಮಿ.ಮೀ.) ಹೆಚ್ಚು ಮಳೆ ಬೀಳುತ್ತದೆ. ಬೆಳಗಾವಿ ಜಿಲ್ಲೆಯ ವಾರ್ಷಿಕ ಮಳೆ ೮೦೮ ಮಿ.ಮೀ. ಆದರೆ ಕೆಲವೊಂದು ವರ್ಷಗಳಲ್ಲಿ ಇದಕ್ಕಿಂತ ಹೆಚ್ಚು ಮಳೆ ಬೀಳುತ್ತದೆ. ಉದಾ ೨೦೦೫-೦೬ನೆಯ ಸಾಲಿನಲ್ಲಿ ೧೨೬೬ ಮಿ.ಮೀ. ಮಳೆ ಬಂದಿರುವುದು ತಿಳಿದುಬಂದಿದೆ.

ಅರೆಅಲೆಮಾರಿತನಕ್ಕೆ ಸೀಮಿತವಾಗಿದ್ದ ಇವರ ಬದುಕು ಕ್ರಿ.ಶ. ೧೯೬೦ರ ನಂತರದ ದಿನಗಳಲ್ಲಿ ಅಲೆಮಾರಿತನವಾಗಿ ಪರಿವರ್ತನೆಗೊಂಡಿತ್ತು. ಕಾರಣ ತುಂಗಭದ್ರ ಅಣೆಕಟ್ಟಿನಿಂದ ಬಳ್ಳಾರಿ, ರಾಯಚೂರು, ಕೊಪ್ಪಳ ಜಿಲ್ಲೆಯ ಕೆಲವು ತಾಲ್ಲೂಕುಗಳು ನೀರಾವರಿ ಸೌಲಭ್ಯ ಪಡೆದವು. ಹಾಗೆಯೇ ತುಂಬ ಮತ್ತು ಭದ್ರ ಜಲಾಶಯಗಳಿಂದ ದಾವಣಗೆರೆ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳೂ ಸಹ ನೀರಾವರಿ ಸೌಲಭ್ಯ ಪಡೆದಿವೆ. ಪರಿಣಾಮವಾಗಿ ಈ ಜಿಲ್ಲೆಗಳ ಭೂ ಪ್ರದೇಶದಲ್ಲಿ ಅಲೆದಾಡುತ್ತಾ ಕುರಿ ಸಂಗೋಪನೆ ಮಾಡುತ್ತಿದ್ದಾರೆ. ಹೀಗೆ ಅಲೆದಾಡುತ್ತಾ ಕುರಿಸಂಗೋಪನೆ ಮಾಡುವ ಅಲೆಮಾರಿ ಕುರುಬರು ತಾವು ಹೂಡಿದ ಗುಡಾರವನ್ನು ಹೊಲಗದ್ದೆಗಳಿಂದ ಹೊಲಗದ್ದೆಗಳಿಗೆ ವರ್ಗಾಯಿಸುತ್ತಾರೆಯೇ ವಿನಃ ಕುರಿ-ಕುದರೆ ಮತ್ತು ಗುಡಾರವನ್ನು ಸ್ವಗ್ರಾಮಗಳಿಗೆ ವರ್ಗಾಯಿಸುವುದಿಲ್ಲ.

ವಲಸೆ ಕಾರಣಗಳು

ಬೆಳಗಾವಿ ಜಿಲ್ಲೆ ಅರೆಮಲೆನಾಡು ಭೂ ಪ್ರದೇಶವಾಗಿದೆ. ಮಳೆಗಾಲದಲ್ಲಿ ಅತಿ ಹೆಚ್ಚು ಅಂದರೆ ಕುರಿಸಂಗೋಪನೆಗೆ ಯೋಗ್ಯ ಎನ್ನುವುದಕ್ಕಿಂತ ಹೆಚ್ಚು (೨೦೦೫ ರಲ್ಲಿ ೧೩೬೬ ಮಿ.ಮೀ. ಮಳೆ ಬಿದ್ದಿದೆ) ಮಳೆ ಬೀಳುತ್ತದೆ. ಆ ಪ್ರದೇಶದಲ್ಲಿ ಮಳೆ ಬೀಳಲು ಪ್ರಾರಂಭಿಸಿದರೆ ವಾರ, ಹದಿನೈದು ಅಥವಾ ತಿಂಗಳು ಗಟ್ಟಲೆ ನಿರಂತರವಾಗಿ ಮಳೆ ಬೀಳುತ್ತಿರುತ್ತದೆ. ಇಂಥ ಸಂದರ್ಭದಲ್ಲಿ ಕುರಿಗಳನ್ನು ಮೇಯಿಸುವುದು ಹಾಗೂ ಆರೈಕೆ ಮಾಡುವುದು ತುಂಬಾ ಕಷ್ಟವಾಗುತ್ತದೆ.

ಬೆಳಗಾವಿ ಜಿಲ್ಲೆಯು ೩,೭೨,೪೯೨ ಹೆಕ್ಟೇರ್ ಭೂಪ್ರದೇಶ ನೀರಾವರಿ ಸೌಲಭ್ಯ ಹೊಂದಿದೆ. ಆ ಪ್ರದೇಶದಲ್ಲಿ ನೀರಾವರಿ ಹಾಗೂ ಇತರೆ ಬೆಳೆಗಳನ್ನು ಬೆಳೆದರೂ ಕಬ್ಬು ಮತ್ತು ಹೊಗೆಸೊಪ್ಪನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ಕಬ್ಬು ವಾರ್ಷಿಕ ಬೆಳೆಯಾದ ಕಾರಣ ವರ್ಷದಲ್ಲಿ ಕೆಲವೇ ದಿನಗಳು ಮಾತ್ರ ಕುರಿಗಳಿಗೆ ಮೇವು ದೊರೆಯುತ್ತದೆ. ಹೊಗೆಸೊಪ್ಪು ಬೆಳೆಯುವ ಹೊಲ-ಗದ್ದೆಗಳಲ್ಲಿ ಹುಲ್ಲು ಅಥವಾ ಕಳೆ ಬೆಳೆಯುವುದಿಲ್ಲ, ಪರಿಣಾಮವಾಗಿ ಮೇವಿನ ಕೊರತೆ ಉಂಟಾಗಿದೆ.

ವಲಸೆ ಬಂದು ಅಲೆದಾಡುವ ಭೂಪ್ರದೇಶಗಳಲ್ಲಿ ಅಂದರೆ ಬಳ್ಳಾರಿ (೬೩೫ ಮಿ.ಮೀ), ರಾಯಚೂರು (೬೩೧ ಮಿ.ಮೀ), ಕೊಪ್ಪಳ (೫೭೨ ಮಿ.ಮೀ), ದಾವಣಗೆರೆ (೬೪೯ ಮಿ.ಮೀ), ಗರಗ (೬೧೨ ಮಿ.ಮೀ), ಹಾವೇರಿ (೭೫೩ ಮಿ.ಮೀ) ಜಿಲ್ಲೆಗಳಲ್ಲಿ ಮಳೆ ಪ್ರಮಾಣ ಕಡಿಮೆ ಇದೆ. ಹವಾಮಾನ ಉಷ್ಣತೆಯಿಂದ ಕೂಡಿರುವುದರಿಂದ ಕುರಿ ಸಂಗೋಪನೆಗೆ ಯೋಗ್ಯವಾಗಿದೆ. ಈ ಪ್ರದೇಶದಲ್ಲಿ ವಾರ್ಷಿಕ ಬೆಳೆಗಳನ್ನು ಬೆಳೆಯದೆ ಅಲ್ಪಕಾಲಿಕ ಬೆಳೆಗಳನ್ನು ಬೆಳೆಯಲಾಗುತ್ತದೆ. ಈ ಬೆಳೆಗಳು ನಾಟಿ ಮಾಡಿದ ೩ ರಿಂದ ೬ ತಿಂಗಳೊಳಗೆ ಕಟಾವು ಆಗುತ್ತವೆ. ಇವು ಹಿಂಗಾರು ಮತ್ತು ಮುಂಗಾರು ಬೆಳೆಗಳಾದ್ದರಿಂದ ಮೇಯಿಸಲು ವಿಶಾಲ ಭೂಪ್ರದೇಶ ದೊರೆಯುತ್ತದೆ. ಬೇಡರು ಅಲೆಮಾರಿ ಕುರುಬರ ಕುರಿಮೇಕೆಗಳ ಕದ್ದು ತಿನ್ನುತ್ತಿದ್ದರು.

ಗುರುತಿಸುವಿಕೆ

ಪರಂಪರಾಗತವಾಗಿ ಬಂದ ಕುಲವೃತ್ತಿ ಮತ್ತು ಉಡುಪುಗಳಿಂದ ಗುರುತಿಸಲಾಗುವುದು. ಋತುಮಾನಕ್ಕನುಗುಣವಾಗಿ ಬೆಟ್ಟ-ಗುಡ್ಡ, ಹೊಲ-ಗದ್ದೆಗಳಲ್ಲಿ ೩-೪ ಕುಟುಂಬಗಳು ಗುಡಾರ ಹೂಡಿ ಕುರಿಸಂಗೋಪನೆ ಮಾಡುತ್ತಾ ಜೀವನ ಸಾಗಿಸುತ್ತಿರುತ್ತಾರೆ. ಸ್ತ್ರೀ-ಪುರುಷರು ಶಾರೀರಿಕವಾಗಿ ಗಟ್ಟಿಮುಟ್ಟಾಗಿದ್ದು ಮರಾಠಿ ಮಿಶ್ರಿತ ಕನ್ನಡ ಅಥವಾ ಮರಾಠಿ ಭಾಷೆಯನ್ನು ಮಾತನಾಡುತ್ತಾರೆ.

ಪುರುಷರನ್ನು ತಲೆಗೆ ಸುತ್ತಿರುವ ಪೇಟಾ ಅಥವಾ ಗಾಂಧಿ ಟೋಪಿ, ಹೆಗಲ ಮೇಲಿರುವ ಕರಿಕಂಬಳಿ ಅಥವಾ ಶಾಲು, ನಡುವಿಗೆ ಮೇಲೆಳೆದು ಕಟ್ಟಿರುವ ಕಚ್ಚೆ ಪಂಜೆ, ಕಾಲಲ್ಲಿ ದಪ್ಪನೆಯ ದೇಶಿ ಮಾದರಿ ಮೆಟ್ಟು ಚಪ್ಪಲಿ, ಕಿವಿಯಲ್ಲಿ ಮುರುವು, ಕೊರಳಲ್ಲಿ ತಾಯಿತ, ನಡುವಿನಲ್ಲಿ ಎಲೆ ಅಡಿಕೆ ಚೀಲ, ಮುಖದ ಮೇಲೆ ಕೋರೆ ಮೀಸೆ, ಹಣೆಯ ತುಂಬಾ ಹಚ್ಚಿರುವ ಭಂಡಾರ ಮೊದಲಾದ ಕುರುಹುಗಳಿಂದ ಗುರುತಿಸಲಾಗುವುದು.

ಗುಡಾರ (ವಸತಿ)

ಗಾಳಿ, ಮಳೆ, ಚಳಿ ಮತ್ತು ಬಿಸಿಲುಗಳಿಂದ ರಕ್ಷಿಸಲು ಹಾಗೂ ದಿನನಿತ್ಯದ ಆಹಾರ ಸಾಮಗ್ರಿಗಳನ್ನು ಸಂರಕ್ಷಿಸಿಕೊಳ್ಳಲು ಎಂಟು ಅಡಿ ಅಗಲದ ಹಾಗೂ ಹನ್ನೆರಡು ಅಡಿ ಉದ್ದದ ಗುಡಾರವೇ ಇವರ ವಸತಿ. ಆ ಗುಡಾರದಲ್ಲಿ ಇಡೀ ಕುಟುಂಬದ ಸದಸ್ಯರು ಮತ್ತು ಆಗ ತಾನೆ ಜನಿಸಿದ ಕುರಿಮರಿಗಳು ಜೊತೆ ಕಾಲದೂರಬೇಕು. ಹೆಸರಿಗೆ ಮಾತ್ರ ಗುಡಾರವಾಗಿದ್ದು ಜೀವನ ಪೂರ್ತಿ ನಿಸರ್ಗದ ಮಡಿಲಲ್ಲಿಯೇ ಬದುಕಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ. ಸ್ಥಳದಿಂದ ಸ್ಥಳಕ್ಕೆ ವಲಸೆ ಹೋಗುವಾಗ ಕುದುರೆಯ ಮೇಲೆ ತಮ್ಮ ದೈನಂದಿನ ಸರಕು, ಸರಂಜಾಮುಗಳನ್ನು ಹೇರಿಕೊಂಡು ಹೋಗುತ್ತಾರೆ. ಹೀಗೆ ಹೇರಿಕೊಂಡು ಹೋಗುವಾಗ ಕುದುರೆಯ ಮೇಲೆ ತಮ್ಮ ಮಗುವನ್ನು ಆಗ ತಾನೆ ಜನಿಸಿದ ಕುರಿಮರಿಗಳನ್ನು ಹಾಗೂ ನಡೆಯುವ ಅಸಾಧ್ಯವಾದ ನಾಯಿಮರಿಗಳನ್ನು ಒಂದೇ ಕಡೆ ಕೂಡಿಸಿ ವಲಸೆ ಹೋಗುವುದನ್ನು ಕಾಣುತ್ತೇವೆ. ಇಲ್ಲಿ ಗಮನಿಸುವ ಪ್ರಮುಖ ಅಂಶವೆಂದರೆ ಮಗು, ನಾಯಿಮರಿ ಮತ್ತು ಕುರಿಮರಿಗಳಿಗೆ ಸಮಾನ ಪ್ರಾಮುಖ್ಯತೆ ನೀಡುತ್ತಾರೆ. ಕಾರಣ ಈ ಮೂರು ಮರಿಗಳು ಅವನ ಬದುಕಿಗೆ ಆಧಾರ ಸ್ಥಂಭಗಳಾಗಿವೆ. ವಲಸೆ ಹೋಗುವಾಗ ಸ್ತ್ರೀಯರು ೨೫ ರಿಂದ ೩೦ ಕೆ.ಜಿ. ಭಾರವಿರುವ ಪುಟ್ಟಿಯನ್ನು ತಲೆಯ ಮೇಲೆ ಹೊತ್ತುಕೊಂಡು ಕುದುರೆಯ ಲಗಾಮನ್ನು ಎಡಗೈಯಲ್ಲಿ ಹಿಡಿದುಕೊಂಡು ಸಾಗುತ್ತಿರುವ ದೃಶ್ಯ ನೋಡಿದಾಗ ಕಠೋರ ವ್ಯಕ್ತಿಯ ಕರುಳು ಸಹ ಚುರ್ ಎನ್ನದೆ ಇರಲಾರದು. ಏಕೆಂದರೆ ವಲಸೆ ಹೋಗುವಾಗ ಬೆಟ್ಟ-ಗುಡ್ಡಗಳನ್ನು ಹತ್ತಿ ತಗ್ಗು-ದಿಣ್ಣೆ, ನದಿ-ಕಾಲುವೆಗಳನ್ನು ದಾಟುವಾಗ ಪಡುವ ಕಷ್ಟ ಅಕ್ಷರಗಳಲ್ಲಿ ಹೇಳಲು ಅಸಾಧ್ಯ. ಈ ರೀತಿಯ ಬದುಕನ್ನು ಭೂಮಂಡಲದ ಮೂಲಿಗರು ಅಥವಾ ಬುಡಕಟ್ಟು ಸಮುದಾಯಗಳು ಮಾತ್ರ ಮುಂದುವರಿಸಿಕೊಂಡು ಬರಲು ಸಾಧ್ಯ. ಆದರೆ ಇವರಿಗೆ ಸಂವಿಧಾನ ಬದ್ದವಾದ ಸ್ಥಾನಮಾನ ನೀಡದಿರುವುದು ಮನುಕುಲಕ್ಕೆ ಮಾಡಿದ ದ್ರೋಹವೆನಿಸುತ್ತದೆ.

ಆದಾಯ

ಅಲೆಮಾರಿ ಕುರುಬರು ತಮ್ಮ ಜೀವನಾವಶ್ಯಕ ಬಯಕೆಯಗಳನ್ನು ತೃಪ್ತಿಪಡಿಸಿಕೊಳ್ಳಲು ಅಂದರೆ ಆಹಾರ, ಬಟ್ಟೆ ವಸತಿ, ಗುಡಾರ ಪಡೆಯಲು ಮತ್ತು ಕುರಿಗಳ ಔಷಧ, ಹಬ್ಬ ಹರಿದಿನಗಳು, ಜಾತ್ರೆ, ಮದುವೆ ಇತ್ಯಾದಿಗಳಿಗೆ ಖರ್ಚು ಮಾಡುವ ಹಣವನ್ನು ಮರಿಗಳು ಹಾಗೂ ಕುರಿ-ಮೇಕೆಗಳ ಮಾರಾಟದಿಂದಲೇ ನಿರ್ವಹಿಸಬೇಕಿದೆ. ಕುರಿ-ಮೇಕೆ ಹಾಗೂ ಮರಿಗಳ ಮಾರಾಟದಿಂದ ಬರುವ ಆದಾಯದ ಪ್ರಮಾಣವು ಹಲವಾರು ಅಂಶಗಳನ್ನು ಅವಲಂಬಿಸಿದೆ. ಉದಾಹರಣೆಗೆ ಕುರಿ-ಮೇಕೆಗಳಿಗೆ ಬರುವ ರೋಗ-ರುಜಿನಗಳು, ಮೇವು-ನೀರು ದೊರೆಯುವಿಕೆ, ಕುರಿಗಳ ಮಾರುಕಟ್ಟೆ ಮೌಲ್ಯ, ಉಣ್ಣೆ ಬೆಲೆ ಇತ್ಯಾದಿಯಾಗಿವೆ.

ಆದಾಯದ ಪ್ರಮುಖ ಮೂಲವೆಂದರೆ ಮರಿಗಳ ಮಾರಾಟ. ಮಾರಾಟ ಮಾಡುವಾಗ ಜನಿಸಿದ ಎಲ್ಲಾ ಮರಿಗಳನ್ನು ಮಾರದೆ ಕೇವಲ ಗಂಡು ಮರಿಗಳನ್ನು ಮಾತ್ರ ಮಾರುತ್ತಾರೆ. ಇವುಗಳಲ್ಲಿಯೇ ಕೆಲವು ಮೂರ್ನಾಕು ದೃಡಕಾಯವಾದ ನಲುವಾದ ಚಟುವಟಿಕೆಯಿಂದ ಕೂಡಿದ ಗಂಡುಮರಿಗಳನ್ನು ಬೀಜದ ಟಗರನ್ನಾಗಿ ಹಿಂಡಿನಲ್ಲಿಯೇ ಉಳಿಸಿಕೊಳ್ಳುತ್ತಾರೆ. ಸಾಮಾನ್ಯವಾಗಿ ಹೆಣ್ಣುಮರಿಗಳನ್ನು ಮಾರುವುದಿಲ್ಲ. ಕಾರಣ ಅವು ಸಂಗೋಪನೆಗೊಳಗಾಗಿ ಮುಂದೆ ದೊಡ್ಡವಾಗಿ ಬೆಳೆದು ಮರಿಹಾಕಿ ಅಲೆಮಾರಿ ಕುರುಬರ ಜೀವನ ನಿರ್ವಹಣೆಗೆ ನೆರವಾಗುತ್ತವೆ. ಮರಿಗಳನ್ನು ಮಾರಾಟ ಮಾಡುವಾಗ ಒಂದೆರಡು ಮರಿಗಳನ್ನು ಮಾರಾಟ ಮಾಡದೆ ಒಂದು ಋತುವಿನಲ್ಲಿ ಜನಿಸಿದ ಮರಿಗಳನ್ನು ಗುಂಪಾಗಿ ಅಥವಾ ಹಿಂಡಾಗಿ ಮೂರು ತಿಂಗಳೊಳಗೆ ಮಾರಾಟ ಮಾಡಲಾಗುತ್ತದೆ. ಸಾಮಾನ್ಯವಾಗಿ ಆಗಸ್ಟ್-ಸೆಪ್ಟೆಂಬರ್ ತಿಂಗಳ ಗಣೇಶನ ಹಬ್ಬ ಅವಧಿಯಲ್ಲಿ ಜನಿಸಿದ ಮರಿಗಳನ್ನು ಡಿಸೆಂಬರ್-ಜನವರಿ (ಎಳ್ಳು ಅಮವಾಸ್ಯೆ) ತಿಂಗಳಲ್ಲಿ ಹಾಗೂ ಡಿಸೆಂಬರ್ –ಜನವರಿ ತಿಂಗಗಳಲ್ಲಿ ಜನಿಸಿದ ಮರಿಗಳನ್ನು ಮಾಚ್‌-ಏಪ್ರಿಲ್‌(ಯುಗಾದಿ) ತಿಂಗಳಲ್ಲಿ ಮಾರುತ್ತಾರೆ.

ಆದಾಯದ ಎರಡನೆಯ ಮೂಲವೆಂದರೆ ವಯಸ್ಸಾದ ಕುರಿ ಮೇಕೆಗಳ ಮಾರಾಟ. ಇದನ್ನು ಅಲೆಮಾರಿ ಕುರುಬರು ಹಳೆಕುರಿ ಮಾರಾಟ ಎನ್ನುವರು. ಸಾಮಾನ್ಯವಾಗಿ ಕುರಿಯ ಜೀವಿತಾವಧಿ ೧೦ ರಿಂದ ೧೨ ವರ್ಷಗಳಾಗಿವೆ. ಈ ಅವಧಿಯವರೆಗೆ ಕುರಿಗಳನ್ನು ಉಳಿಸಿಕೊಳ್ಳುವುದಿಲ್ಲ. ಸಾಮಾನ್ಯವಾಗಿ ೭-೮ ವರ್ಷಗಳಲ್ಲಿ ಮಾರಾಟ ಮಾಡಲಾಗುವುದು. ನಂತರದ ದಿನಗಳಲ್ಲಿ ಅವುಗಳ ಉತ್ಪಾದಕತೆ ಕಡಿಮೆಯಾಗುತ್ತದೆ. ವಯಸ್ಸಾದ ಕುರಿಗಳ ಮಾರಾಟದಲ್ಲಿ ಹಲ್ಲುಗಳು ಗಣನೆಗೆ ಒಳಗಾಗುತ್ತವೆ. “The health of a sheep has considerable influence on the growth, strength and wearability of teeth, if well maintained, a sheep from blocks kept under hard conditions of life may lose teeth when they are 7-8 years old” ಮುಂದಿನ ಅಥವಾ ಬಾಚಿ ಹಲ್ಲುಗಳು ಕಳವಲು ಆರಂಭವಾದಾಗ ವಯಸ್ಸಾಯಿತೆಂದು ಅರಿತು ಮಾರಾಟ ಮಾಡಲಾಗುತ್ತದೆ. ಇವನ್ನು ಕಾರಹುಣ್ಣಿಮೆ (ಜೂನ್) ತಿಂಗಳು ಅವಧಿಯಲ್ಲಿ ಮಾರಾಟ ಮಾಡುವರು. ಏಕೆಂದರೆ ಹೊಲ-ಗದ್ದೆಗಳಲ್ಲಿ ಜನವರಿಯಿಂದ ಮೇ ತಿಂಗಳವರೆಗೆ ಸಾಕಷ್ಟು ಮೇವು ದೊರೆಯುವುದರಿಂದ ಕುರಿ ದುಂಡಾಗಿರುತ್ತದೆ. ಕಾರಹುಣ್ಣಿಮೆ ನಂತರ ಮಳೆಗಾಲ ಆರಂಭವಾಗುವುದರಿಂದ ವಯಸ್ಸಾದ ಕುರಿ-ಮೇಕೆಗಳು ಬೆಟ್ಟ-ಗುಡ್ಡ ಏರಲು, ಮಳೆ ಹಾಗೂ ಶೀತ ಗಾಳಿಯನ್ನು ಸಹಿಸಿಕೊಳ್ಳಲು ಆಗುವುದಿಲ್ಲ. ಆದ್ದರಿಂದ ಜೂನ್ ತಿಂಗಳಲ್ಲಿ ವಯಸ್ಸಾದ ಎಲ್ಲಾ ಕುರಿಗಳನ್ನು ಗುಂಪಾಗಿ ಮಾರಾಟ ಮಾಡಲಾಗುವುದು.

ಕುರಿ ತುಬ್ಬುವಿಕೆ (ಗೊಬ್ಬರ) ಭತ್ಯೆ

ಕುರಿ-ಮೇಕೆಗಳಿಗೆ ಮೇವು-ನೀರು ಅರಸಿಕೊಂಡು ವಲಸೆ ಹೋಗುವುದು ಇವರ ಕಾಯಕವಾಗಿದೆ. ವಲಸೆ ಹೋದ ಪ್ರದೇಶದ ರೈತರ ಹೊಲ-ಗದ್ದೆಗಳಲ್ಲಿ ರಾತ್ರಿಯ ಸಮಯದಲ್ಲಿ ಕುರಿಗಳನ್ನು ತಬ್ಬಲಾಗುತ್ತದೆ. ಕುರಿ ತಬ್ಬಿದ್ದಕ್ಕೆ ಪ್ರತಿಫಲವಾಗಿ ಇಂತಿಷ್ಟು ಹಣವನ್ನಾಗಲಿ ಅಥವಾ ದವಸ-ಧಾನ್ಯಗಳನ್ನಾಗಲಿ ಪಡೆಯಲಾಗುತ್ತದೆ. ಅದಕ್ಕೆ ಭತ್ಯೆ ಎನ್ನುವರು. ಇತ್ತೀಚಿನ ದಿನಗಳಲ್ಲಿ ಜಮೀನಿನ ರೈತರು ಹಣವನ್ನೇ ನೋಡುತ್ತಾರೆ. ಕುರಿ ತಬ್ಬಿದ್ದಕ್ಕಾಗಿ ಪಡೆಯುವ ಪ್ರತಿಫಲ ಕುರಿಗಳ ಸಂಖ್ಯೆ ಮತ್ತು ಕಾಲವನ್ನು ಅವಲಂಬಿಸಿರುತ್ತದೆ. ಉದಾಹರಣೆಗೆ ಸಂಖ್ಯೆ ೫೦೦ ರಿಂದ ೮೦೦ ಇದ್ದರೆ ೨೦೦ ರಿಂದ ೨೫೦ ರೂ. ಗಳವರೆಗೆ ಭತ್ಯೆ ನೀಡಲಾಗುತ್ತದೆ. ಕೆಲವೊಂದು ರೈತರು ದೌರ್ಜನ್ಯ ಮಾಡಿ ಕುರಿತುಬ್ಬಿದ್ದಕ್ಕೆ ಹಣವನ್ನು ನೀಡದಿರುವ ಪ್ರಸಂಗಗಳುಂಟು. ತಬ್ಬುವಿಕೆಯು ಭತ್ಯೆವನ್ನು ಅವಲಂಬಿಸಿರುತ್ತದೆ ಈ ರೀತಿ ಬರುವ ಆದಾಯವು ಕುಟುಂಬದ ದೈನಂದಿನ ಸಣ್ಣಪುಟ್ಟ ಖರ್ಚು ವೆಚ್ಚಗಳನ್ನು ನಿರ್ವಹಿಸಲು ಬಳಕೆಯಾಗುತ್ತದೆ.

ಗೊಬ್ಬರದ ಹಿಕ್ಕೆ (ಮೂತ್ರ) ಮಹತ್ವ

ಕುರಿ-ಮೇಕೆಗಳ ಹಿನ್ನೆ ಮತ್ತು ಮೂತ್ರವು ಕೃಷಿ ಉತ್ಪಾದನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದರ ಮಹತ್ವ ಅರಿತ ರೈತರು ತಪ್ಪದೇ ತಮ್ಮ ಜಮೀನಿನಲ್ಲಿ ಕುರಿತುತುಬ್ಬಿಸುತ್ತಾರೆ. ಕುರಿ-ಮೇಕೆಗಳ ಹಿಕ್ಕೆ ಹಾಗೂ ದನಗಳ ಸಗಣಿಯ ಮಹತ್ವವನ್ನು ಹೋಲಿಕೆ ಮಾಡಿ ನೋಡಿದಾಗ ಕುರಿ-ಮೇಕೆಗಳ ಹಿಕ್ಕೆಗಳಲ್ಲಿ ಹೆಚ್ಚಿನ ಪ್ರಮಾಣ ನೈಟ್ರೋಜನ್ ಮತ್ತು ಪಾಸ್ಪರಸ್ ಆಸಿಡ್ ಇರುವುದು ದೃಡಪಟ್ಟಿದೆ. ಮೂತ್ರದಲ್ಲಿ ನೂಟ್ರೋಜನ್ ಮತ್ತು ಪೋಟ್ಯಾಸಿಯಂ ಶ್ರೀಮಂತವಾಗಿದೆ. ಆಧುನಿಕ ಕೃಷಿ ಬೇಸಾಯ ಪದ್ಧತಿಯಲ್ಲಿ ಬಹಳಷ್ಟು ರೈತರು ತಮ್ಮ ಜಮೀನಿಗೆ ನೈಟ್ರೋಜನ್‌, ಪಾಸ್ಪರಸ್ ಮತ್ತು ಪೋಟ್ಯಾಸಿಯಂ ಎನ್.ಪಿ.ಕೆ. ಪಡೆಯಲು ರಾಸಾಯನಿಕ ಗೊಬ್ಬರ ಉತ್ಪನ್ನ ಮಾಡುವ ಕಾರ್ಖಾನೆಗಳಿಗೆ, ಅವುಗಳನ್ನು ಮಾರಾಟ ಮಾಡುವ ಸಗಟು ಅಥವಾ ಚಿಲ್ಲರೆ ವ್ಯಾಪಾರಸ್ಥರಿಗೆ ಬಹಳಷ್ಟು ಹಣ ಸುರಿಯುತ್ತಾರೆ. ಒಂದು ವೇಳೆ ಮಳೆ ಕೈ ಕೊಟ್ಟಾಗ, ಅಥವಾ ಹವಾಮಾನದಲ್ಲಿ ವೈಪರಿತ್ಯದಿಂದಾಗಿ ಬೆಳೆ ಬರದೆ ರೈತನು ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಾನೆ. ಕೆಲವೊಂದು ರೈತರು ಆರ್ಥಿಕ ಸಂಕಷ್ಟದಿಂದ ಹೊರಬರದೆ ಆತ್ಮಹತ್ಯೆಗೆ ಶರಣು ಹೋಗಿರುವ ಎಷ್ಟೋ ಉದಾಹರಣೆಗಳಿವೆ. ರೈತರ ಆತ್ಮಹತ್ಯೆ ತಡೆಯಲು ಸರ್ಕಾರ ಕೆಲವೊಂದು ವಿಶೇಷ ಯೋಜನೆಗಳನ್ನು ಹಾಕಿಕೊಂಡರೂ ಫಲ ನೀಡುತ್ತಿಲ್ಲ. ಉದಾಹರಣೆಗೆ ಕರ್ನಾಟಕ ಸರ್ಕಾರವು ೨೦೦೬-೦೭ನೆಯ ಸಾಲಿನಲ್ಲಿ ಸಹಕಾರಿ ಪತ್ತಿನ ಕೃಷಿ ಬ್ಯಾಂಕುಗಳಿಂದ ೨೫,೦೦೦ ರೂ.ಗಳವರೆಗೆ ಸಾಲ ತೆಗೆದುಕೊಂಡ ರೈತರ ಸಾಲ ಮನ್ನಾ ಮಾಡಿದೆ. ಈ ತರಹದ ಸಾಲ ಮನ್ನಾವು ಒಂದು ವರ್ಷದವರೆಗೆ ರೈತರ ಆತ್ಮಹತ್ಯೆ ತಡೆಯಬಹುದು. ಮುಂದಿನ ವರ್ಷ ರೈತ ತನ್ನ ಜಮೀನಿನಲ್ಲಿ ಬೆಳೆ ಬೆಳೆಯಬೇಕಾದರೆ ಆಧುನಿಕ ಮಿಶ್ರತಳಿಯ ಬೀಜ ಮತ್ತು ರಸಗೊಬ್ಬರಗಳ ಮೊರೆ ಹೋಗಲೇಬೇಕಾಗುತ್ತದೆ. ಆ ವರ್ಷವು ಕೂಡ ಬೆಳೆ ಕೈಕೊಟ್ಟರೆ ಅಥವಾ ಕೃಷಿ ಉತ್ಪನ್ನಗಳ ಬೆಲೆ ಕಡಿಮೆಯಾದರೆ ರೈತರ ಆತ್ಮಹತ್ಯೆಗಳನ್ನು ತಡೆಯಲು ಸಾಧ್ಯವಾಗುವುದಿಲ್ಲ. ಈ ತರಹದ ಆತ್ಮಹತ್ಯೆಗಳು ಪ್ರತಿವರ್ಷ ಮುಂದುವರಿಯುತ್ತ ಹೋಗುತ್ತವೆ. ರೈತರು ಹೆಚ್ಚಿನ ಇಳುವರಿ ಪಡೆಯುವ ದಿಶೆಯಲ್ಲಿ ಗರಿಷ್ಠ ಪ್ರಮಾಣದಲ್ಲಿ ರಾಸಾಯನಿಕ ಗೊಬ್ಬರ ಹಾಗೂ ಕ್ರಿಮಿನಾಶಕಗಳನ್ನು ಬಳಕೆ ಮಾಡುತ್ತಿದ್ದಾರೆ. ಇವುಗಳ ಬಳಕೆಯಿಂದ ಕೃಷಿ ಭೂಮಿ ಕಲ್ಮಶಗೊಂಡು ವಿಷಮಿಶ್ರಿತವಾಗಿ ಭೂ ಫಲವತ್ತತೆ ನಿಷ್ಕ್ರಿಯವಾಗಿದೆ. ಇನ್ನೊಂದೆಡೆ ನಾವು ಸೇವಿಸುವ ಪ್ರತಿಯೊಂದು ಆಹಾರದಲ್ಲಿ ವಿಷಯುಕ್ತ ರಾಸಾಯನಿಕಗಳಿವೆ. ಪರಿಣಾಮವಾಗಿ ನಾವು ಬಳಸುವ ಆಹಾರ ಧಾನ್ಯಗಳು ವಿಷಮಿಶ್ರಿತವಾಗಿವೆ. ಮಾನವನ ರಕ್ತದಲ್ಲಿ ತಾಯಿಯ ಎದೆಹಾಲಿನಲ್ಲಿ ಜಾನುವಾರುಗಳ ಹಾಲಿನಲ್ಲಿ, ತಾಯಿಯ ಗರ್ಭದಲ್ಲಿ ಬೆಳೆಯುವ ಭ್ರೂಣದಲ್ಲಿಯೂ ಸಹ ಕೃಷಿ ಭೂಮಿಯಲ್ಲಿ ಉಪಯೋಗಿಸುವ ವಿಷಯುಕ್ತ ರಾಸಾಯನಿಕಗಳ ಬಗ್ಗೆ ತಜ್ಞರು ವರದಿ ಮಾಡಿದ್ದಾರೆ. ಮನುಕುಲದ ರೋಗಗಳನ್ನು ಕಡಿಮೆ ಮಾಡಲು ರೈತರ ಆತ್ಮಹತ್ಯೆಗಳನ್ನು ತಡೆಯಲು ಮತ್ತು ಭೂಫಲವತ್ತತೆಯನ್ನು ಹೆಚ್ಚಿಸಲು ಸರ್ಕಾರ ಹಾಗೂ ಸಂಘ-ಸಂಸ್ಥೆಗಳು ಕುರಿ ಹಿಕ್ಕೆ ಹಾಗೂ ಮೂತ್ರದ ಮಹತ್ವವನ್ನು ಅರಿತು ಕುರಿಸಂಗೋಪನೆ ಅಭಿವೃದ್ಧಿಗೆ ಸಹಕಾರಿಯಾಗುವಂತೆ ನೀತಿ-ನಿಯಮಗಳನ್ನು ರೂಪಿಸಬೇಕಾಗಿರುವುದು, ಜರೂರಾಗಿದೆ.

ಹಬ್ಬ-ಆಚರಣೆಗಳು

ಪ್ರಕೃತಿಯ ಮಡಿಲಲ್ಲಿ ಬದುಕುವ ಅಲೆಮಾರಿ ಕುರುಬರು ಮರ, ಬಳ್ಳಿ, ಜಲ, ಕಲ್ಲು, ಮಣ್ಣು ಇತ್ಯಾದಿಗಳಲ್ಲಿ ಒಂದಲ್ಲ ಒಂದು ಶಕ್ತಿ ಅಡಗಿದೆಯೆಂದು ನಂಬಿದ್ದಾರೆ. ಈ ನಂಬಿಕೆಗಳಿಂದಲೇ ಕೆಲವೊಂದು ವಾರ್ಷಿಕ ಮತ್ತು ವಿಶೇಷ ಆಚರಣೆಗಳನ್ನು ಆಚರಿಸುತ್ತಾರೆ.

. ಯುಗಾದಿ

ಪ್ರತಿವರ್ಷ ಚೈತ್ರಮಾಸದ ಆರಂಭದ ಅಮವಾಸ್ಯೆಯ ಮರುದಿನದಂದು ಬರುವ ಯುಗಾದಿಯನ್ನು ಹೊಸವರ್ಷವೆಂದು ಕರೆಯುತ್ತಾರೆ. ಬಹುತೇಕವಾಗಿ ಹಿಂದೂಗಳೆಲ್ಲರೂ ಸಂತೋಷ ಸಂಭ್ರಮದಿಂದ ಆಚರಿಸುವ ಹಬ್ಬ ಇದಾಗಿದೆ. ಅಂದು ಅಲೆಮಾರಿ ಕುರುಬರ ವಿಶೇಷತೆಯೆಂದರೆ ಕುರಿ-ಮೇಕೆಗಳ ಮರಿಗಳಿಗೆ ಗುರುತು ಅಥವಾ ಲಾಕು ಹಾಕುವುದಾಗಿದೆ. ಲಾಕು ಹಾಕುವುದರಿಂದ ತಮ್ಮ ಕುರಿಗಳನ್ನು ಗುರುತಿಸಲು ಸುಲಭವಾಗುತ್ತದೆ. ಆದ್ದರಿಂದ ಯುಗಾದಿ ಹಬ್ಬದ ದಿನದಂದು ಶುಭ್ರಗೊಂಡ ಮುಂಜಾನೆಯೇ ತಮ್ಮ ಬದುಕುಗಳಿಗೆ ಪೂಜೆ ಸಲ್ಲಿಸುತ್ತಾರೆ. ಪೂಜೆ ಸಲ್ಲಿಸಲು ನಂತರ ಒಂದು ವರ್ಷದೊಳಗಿನ ಗಂಡು ಮರಿಗಳಿಗೆ ಬಾಲದ ತುದಿಯನ್ನು, ಹೆಣ್ಣು ಮರಿಗಳಿಗೆ ಬಾಲದ ತುದಿ ಮತ್ತು ಕಿವಿಯ ಮೇಲೆ ಚರ್ಮದ ಸ್ವಲ್ಪ ಭಾಗವನ್ನು ಕತ್ತರಿಸುವರು. ಈ ರೀತಿ ಕತ್ತರಿಸುವಾಗ ಅಥವಾ ಬರೆಹಾಕುವಾಗ ತಮ್ಮ ಹಿರಿಯರು ಹಾಕಿಕೊಟ್ಟ ಅಥವಾ ಮುಂದುವರಿಸಿಕೊಂಡು ಬಂದ ಗುರುತನ್ನೇ ಹಾಕುತ್ತಾರೆ. ಇದಕ್ಕೆ ಲಾಖು ಹಾಕುವುದು ಎಂದು ಕರೆಯುತ್ತಾರೆ. ಅಂತಹ ಲಾಖು ಅಥವಾ ಗುರುಗಳೆಂದರೆ ಬುಗುಡೆ ಸೀಳ್‌ಗಿವಿ, ಅರೆಗಿವಿ, ಉಂಗುರ, ಮುಂಗವಿ, ಹಿಂಗಿವಿ ಇತ್ಯಾದಿ ರೀತಿಯ ಗುರುತುಗಳನ್ನು ಹಿಕ್ಕಳ ಅಥವಾ ಚಿಮುಟಿಗೆಯಿಂದ ಹಾಕುತ್ತಾರೆ. ಇನ್ನೂ ಕೆಲವರು ಕಬ್ಬಿಣದ ಸಲಾಕೆಯನ್ನು ಬೆಂಕಿಯಲ್ಲಿ ಖಾಯಿಸಿ ಹಣೆ ಅಥವಾ ಬೆನ್ನಿನ ಮೇಲೆ ಕತ್ರಿ ಬರೆ (X), ಜೋಡುಬರೆ (||), ಒಂಟಿ ಬರೆ (|) ಅಡ್ಡಬರೆ (-) ಅಂದರೆ =, +, X, | T, V ಇತ್ಯಾದಿ ಚಿಹ್ನೆಗಳನ್ನು ಹೊಂದಿರುವ ಗುರುತು ಅಥವಾ ಬರೆ ಹಾಕುತ್ತಾರೆ. ಈ ತರಹದ ಚಿಹ್ನೆಗಳ ಆಧಾರದ ಮೇಲೆ ತಮ್ಮ ಕುರಿಗಳನ್ನು ಗುರುತಿಸುತ್ತಾರೆ. ಗಂಡು ಮರಿಗಳಿಗೆ ಕಿವಿ, ಹಣೆ ಅಥವಾ ಬೆನ್ನಿನ ಮೇಲೆ ಗುರುತು ಅಥವಾ ಬರೆ ಹಾಕುವುದಿಲ್ಲ. ಏಕೆಂದರೆ ೨೩ ಬೀಜಕ್ಕೆ ಬಿಟ್ಟು ಉಳಿದೆಲ್ಲವನ್ನು ಮಾರಾಟ ಮಾಡುತ್ತಾರೆ. ಆದ್ದರಿಂದ ಬಹಳ ಕುಟುಂಬಗಳು ಗುಂಪಾಗಿ ಕುರಿ ತಬ್ಬಿದಾಗ ಸಾವಿರಾರು ಕುರಿಗಳಲ್ಲಿ ತಮ್ಮ ಕುರಿ ತಪ್ಪಿಸಿಕೊಂಡಾಗ, ಬೇಗನೆ ಗುರುತು ಹಚ್ಚಲು ಚಿಹ್ನೆ ಅಥವಾ ಲಾಖು ಸಹಾಯಕವಾಗುತ್ತದೆ. ಒಂದೇ ಗುರುತನ್ನು ಎರಡು ಅಥವಾ ಮೂರು ಕುಟುಂಬದವರು ಹಾಕಿದಾಗ ಹೇಗೆ ಗುರುತು ಹಿಡಿಯುತ್ತೀರಿ ಎಂದು ಪ್ರಶ್ನಿಸಿದಾಗ ನನ್ನ ಪ್ರಶ್ನೆಗೆ ಉತ್ತರಿಸುತ್ತಾ “ಸಾಹೇಬ್ರ ಸಾಲಿ ಕಲಿತ ನೀವು ಒಂದೇ ರೀತಿಯ ಅಕ್ಷರ ಬರೆಯುತ್ತೀರಿ. ಸಾವಿರ ಪೇಪರ ತಂದು ನಿಮ್ಮ ಮುಂದಿಟ್ಟರೆ ಇದೇ ನನ್ನ ಪೇಪರ್, ಇದೇ ನನ್ನ ಬರವಣಿಗೆ ಎಂದು ಹೇಗೆ ನಿಮ್ಮದೇ ಎಂದು ಗುರುತು ಹಿಡಿಯುತ್ತಿರೋ ಹಾಗೆಯೇ ನಾವು ಎದ್ದರೂ, ಬಿದ್ದರೂ ಕುರಿಯಲ್ಲಿರುವುದರಿಂದ ನಮ್ಮ ಕುರಿಯನ್ನು ಗುರುತಿಸುವುದು ಕಷ್ಟವಾಗುವುದಿಲ್ಲ” ಎನ್ನುತ್ತಾರೆ. ಹೌದು, ಈ ಮಾತು ಸತ್ಯವೆನಿಸುತ್ತದೆ. ಜೀವನವಿಡಿ ಕುರಿ ಸಂಗೋಪನೆಯಲ್ಲಿ ತೊಡಗಿರುವುದರಿಂದ ಸುಲಭವಾಗಿ ಗುರುತಿಸಬಹುದಾಗಿದೆ. ಲಾಕು ಹಾಕಿದ ನಂತರ ಬಾಲದ ತುದಿ ಕಿವಿಯ ಚರ್ಮದ ತುಂಡುಗಳನ್ನು ವಿಭಾಗಿಸಿ ಎಣಿಸುವರು. ಇದರಿಂದ ಹೆಣ್ಣು ಮರಿಗಳು ಹಾಗೂ ಗಂಡುಮರಿಗಳು ಎಷ್ಟಿವೆ ಎಂಬುದು ತಿಳಿಯುತ್ತದೆ. ಹೆಣ್ಣು ಮರಿಗಳು ಮುಂದಿನ ಅಭಿವೃದ್ಧಿಯನ್ನು ಸೂಚಿಸಿದರೆ, ಗಂಡುಮರಿಗಳು ಕುಟುಂಬದ ವಾರ್ಷಿಕ ಖರ್ಚು-ವೆಚ್ಚಗಳನ್ನು ಹೇಗೆ ಸರಿದೂರಿಸಬೇಕೆಂಬುದನ್ನು ಸ್ಪಷ್ಟಪಡಿಸುತ್ತವೆ . ಹಿಂದಿನ ವರ್ಷ ಎಷ್ಟು ಗಂಡು ಮತ್ತು ಹೆಣ್ಣು ಮರಿಗಳಿದ್ದವು, ಈ ವರ್ಷ ಎಷ್ಟಿವೆ ಎಂಬುದನ್ನು ಹೋಲಿಕೆ ಮಾಡಿ ನೋಡುತ್ತಾರೆ. ಇವರ ದೃಷ್ಟಿಯಲ್ಲಿ ಈ ಹಬ್ಬ ಹೀಗೆ ಸಮೃದ್ಧಿಯ ಸಂಕೇತವೆನಿಸುತ್ತದೆ. ಏಕೆಂದರೆ ಇಡೀ ವರ್ಷ ಯುಗಾದಿಯಿಂದ ಯುಗಾದಿಯವರೆಗೆ ತಮ್ಮ ಬದುಕುಗಳನ್ನು ಸಾಕಿ ಸಲುಹಿ, ಸಂಗೋಪನೆ, ಮಾಡಿ ದುಡಿಮೆಯ ಪ್ರತಿಫಲವಾಗಿ ಲೆಕ್ಕ ಹಾಕುವರು. ಮರಿಗಳ ಸಂಖ್ಯೆಯಲ್ಲಿ ಹೆಚ್ಚಳವಾದರೆ ಅಭಿವೃದ್ಧಿ ಎಂದು ತೀರ್ಮಾನಿಸುವರು. ಕಡಿಮೆಯಾದರೆ ಅನಭಿವೃದ್ಧಿ ಎಂದು ತಿಳಿದುಕೊಳ್ಳಬೇಕು. ಅಭಿವೃದ್ಧಿ ಅಥವಾ ಅನಭಿವೃದ್ಧಿ ನಿರ್ಧಾರವಾಗುವುದು ಇವರ ಶ್ರಮದ ಜೊತೆಗೆ ತಾವು ಅಲೆದಾಡುವ ಪ್ರದೇಶದಲ್ಲಿ ಕುರಿ-ಮೇಕೆಗಳಿಗೆ ದೊರೆಯುವ ಮೇವು-ನೀರು ಹಾಗೂ ಅವುಗಳಿಗೆ ಬರುವ ರೋಗರುಜಿನಗಳನ್ನು ಅವಲಂಬಿಸಿರುತ್ತದೆ.

. ದೀಪಾವಳಿ

ದೀಪಾವಳಿ ಹಬ್ಬವು ಇವರ ಪಾಲಿಗೆ ಅಂಧಕಾರವನ್ನು ಹೋಗಲಾಡಿಸಿ ಬೆಳಕನ್ನು ತಂದುಕೊಡುವ ಹಬ್ಬವಾಗಿದೆ. ಕುರಿಗಳನ್ನು ಲಕ್ಷ್ಮಿ ಎಂದು ಭಾವಿಸಿ ಕುರಿಗಳಿಗೆ ಪೂಜೆ ಸಲ್ಲಿಸುವ ಮೂಲಕ ಕುರಿಲಕ್ಷ್ಮಿಯನ್ನು ಆಚರಿಸುತ್ತಾರೆ. ಲಕ್ಷ್ಮಿ ಎಂದು ಭಾವಿಸಿರುವುದರಿಂದ ಹಾಲು ಹಿಂಡುವಾಗ, ಮರಿ ಉಣಿಸುವಾಗ, ಕುರಿಮಂದಿ ಉಬ್ಬಿಸುವಾಗ ಕಾಲಿನಿಂದ ಮುಟ್ಟಿಸುವುದು ಅಥವಾ ಒದೆಯುವುದಾಗಲಿ ಮಾಡುವುದಿಲ್ಲ. ಒಂದು ವೇಳೆ ಕಾಲು ತಗುಲಿದರೆ ಅವುಗಳಿಗೆ ನಮಸ್ಕಾರ ಮಾಡುತ್ತಾರೆ. ಈ ಹಬ್ಬವನ್ನು ಆಚರಿಸುವಾಗ ಗುಡ್ಡಗಾಡು ಪ್ರದೇಶದಲ್ಲಿ ನಾಗರಪಂಚಮಿಯಿಂದ ದೀಪಾವಳಿವರೆಗೆ ಅಲೆದಾಡುತ್ತಿರುತ್ತಾರೆ.

ಈ ಹಬ್ಬದ ಆಚರಣೆಯ ನಂತರ ಹೊಲ-ಗದ್ದೆಗಳ ಕಡೆ ವಲಸೆ ಹೋಗುತ್ತಾರೆ. ವಲಸೆ ಹೋಗುವಿಕೆಯು ಯಾವ ದಿಕ್ಕಿನ ಕಡೆ ಹೋಗಬೇಕೆಂದು ಆಚರಣೆಯಿಂದಲೇ ಕಂಡುಕೊಳ್ಳುತ್ತಾರೆ.

ಒಂದು ಕಡೆ ಗುಡಾರ ಹೂಡಿ ಕುರಿತಬ್ಬಿದ ಕುಟುಂಬಗಳೆಲ್ಲಾ ಸೇರಿಕೊಂಡು ಸಾಮೂಹಿಕವಾಗಿ ಈ ಹಬ್ಬವನ್ನು ಆಚರಿಸುತ್ತಾರೆ. ಹಬ್ಬರ ಸಲುವಾಗಿ ಹೆಣ್ಣು ಮಕ್ಕಳನ್ನು ಗಂಡನ ಮನೆಯಿಂದ ತವರು ಮನೆಗೆ ಅದರಲ್ಲೂ ಹೊಸದಾಗಿ ಮದುವೆಯಾದವರನ್ನು ಕಡ್ಡಾಯವಾಗಿ ಕರೆದುಕೊಂಡು ಬಂದು ಸೀರೆ ಉಡಿಸುತ್ತಾರೆ. ಸ್ಥಿತಿವಂತರಿದ್ದರೆ ಬಂಗಾರದ ಒಡವೆಗಳನ್ನು ತಂದು ಕೊಡುತ್ತಾರೆ. ಈ ಹಬ್ಬದ ಆಚರಣೆಯನ್ನು ಬೆಳಿಗ್ಗೆ ಕುರಿಗಳು ಅಡವಿಗೆ ಹೋಗುವುದರೊಳಗೆ ಮಾಡಬೇಕಾಗಿರುವುದರಿಂದ ರಾತ್ರಿಯಿಂದಲೇ ಸಿದ್ಧತೆ ಶುರುವಾಗುತ್ತದೆ. ಹಬ್ಬಕ್ಕೆ ತಗಲುವ ಖರ್ಚು-ವೆಚ್ಚಗಳನ್ನು ಸಮಾನವಾಗಿ ಹಂಚಿಕೊಳ್ಳುತ್ತಾರೆ.

ಲಕ್ಷ್ಮಿ ಪೂಜೆ ಮಾಡುವ ಸ್ಥಳವು ಎಲ್ಲಾ ಗುಡಾರಗಳಿಗೆ ಹತ್ತಿರವಿರುವಂತೆ ಮಧ್ಯದ ಸ್ಥಳವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಆ ಸ್ಥಳದಲ್ಲಿ ವೃತ್ತಾಕಾರದಲ್ಲಿ ಕುರಿ ಹಿಕ್ಕೆಯಿಂದ ಸಾರಿಸಿ ಶುಭ್ರಗೊಳಿಸುತ್ತಾರೆ. ಅದರ ಮೇಲೆ ಕುರಿ ಹಿಕ್ಕಿಯಿಂದ ೫ ಪಾಂಡವರ ಮೂರ್ತಿಗಳನ್ನು ಮಾಡಿ ಇಡುವರು. ಇವುಗಳ ಗಾತ್ರವು ಇಳಿಕೆಯ ಕ್ರಮದಲ್ಲಿರುತ್ತದೆ. ಕುರಿ ಹಿಕ್ಕಿಯಿಂದ ಸಾರಿಸಿ ಶುಭ್ರಗೊಳಿಸಿದ ಸ್ಥಳ್ಕಕೆ ಅಂಟಿಕೊಂಡಂತೆ ಕಬ್ಬಿನ ಅಥವಾ ಜೋಳದ ಹಸಿರು ದಂಟುಗಳನ್ನು ನಾಲ್ಕು ಕಡೆ ನೆಟ್ಟು ದೇವರ ಗುಡಿಯ ಗೋಪುರದ ಆಕಾರದಂತೆ ಮೇಲ್‌ತುದಿಯಲ್ಲಿಯ ಎಲ್ಲಾ ದಂಟುಗಳನ್ನು ಕೂಡಿಸಿ ಕಟ್ಟುವರು. ಹಾಗೆಯೇ ಮುಖದ್ವಾರದ ದಂಟುಗಳಿಗೆ ಎರಡು ಬಾಳೆದಿಂಡುಗಳನ್ನು ಕಟ್ಟುವರು. ಅದನ್ನು ಹೂಗಳಿಂದ ಶೃಂಗಾರಗೊಳಿಸುವರು. ಗುಡಿಯಾಕಾರದ ಕಬ್ಬಿನ ದಂಟಿನ ಮುಂದೆ ಕಂಬಳಿ ಹಾಸಿ, ಅಕ್ಕಿಯನ್ನು ಹಾಕಿ ಗದ್ದುಗೆ ತಯಾರು ಮಾಡುತ್ತಾರೆ. ಆ ಗದ್ದುಗೆಯು ಯಾವ ದಿಕ್ಕಿನಿಂದ ನೋಡಿದರೂ ಶಿವನ ತ್ರಿಶೂಲಾಕಾರವಾಗಿ ಕಾಣಿಸುತ್ತದೆ. ಗದ್ದುಗೆಯ ಮೇಲೆ ಯಾವುದಾದರೊಂದು ಆರಾಧ್ಯ ದೇವರಾದ ಬೀರ, ಮಾಳಿಂಗರಾಯ ಭಾವಚಿತ್ರವನ್ನು (ಫೋಟೋ) ಇಟ್ಟು ಅದಕ್ಕೆ ಬಂಗಾರದ ಬೋರಾಮಣಿ ಸರ ಹಾಕಲಾಗುತ್ತದೆ. ಆ ಗದ್ದುಗೆಯ ಪಕ್ಕದಲ್ಲಿ ಮತ್ತೊಂದು ಕಂಬಳಿ ಹಾಸಿ ಅದರ ಮೇಲೆ ನೀರು ತುಂಬಿದ ತಂಬಿಗೆ ಇಟ್ಟು, ತಂಬಿಗೆಯ ಮೇಲೆ ತೆಂಗಿನಕಾಯಿ ಇಟ್ಟು, ಹೂವುಗಳಿಂದ ಶೃಂಗಾರಗೊಳಿಸುವರು. ಇದೇ ಲಕ್ಷ್ಮಿ ಹಬ್ಬ.

ಕಂಬಳಿ ಗದ್ದುಗೆಯ ಮುಂದೆ ಸ್ವಲ್ಪ ಅಂತರದಲ್ಲಿ ಕುರಿಯ ಹಿಕ್ಕೆಯಿಂದ ತಯಾರಿಸಿದ ಒಣಗಿದ ಕುಳ್ಳನ್ನು ದಪ್ಪವಾಗಿ ಹಾಕಿ ಅದರ ಮೇಲೆ ಕರಿಯ ಕುರಿಗಳ ಹಾಲಿನ ಮಗಿಯನ್ನು ಸಮವಾಗಿಟ್ಟು ಕುಳ್ಳಿಗೆ ಬೆಂಕಿ ಹಚ್ಚುವರು. ಮಗಿಯಲ್ಲಿರುವ ಹಾಲು ಯಾವ ಕಡೆ ಉಕ್ಕುತ್ತದೆಯೋ ಆ ದಿಕ್ಕಿನಲ್ಲಿ ಮಳೆ-ಬೆಳೆ ಚೆನ್ನಾಗಿರುವುದಲ್ಲದೆ, ಕುರಿಗಳಿಗೆ ಮೇವು ನೀರು ದೊರೆಯುತ್ತದೆ. ಆದ್ದರಿಂದ ಕುರಿಗಳನ್ನು ಆ ದಿಕ್ಕಿನ ಕಡೆ ಹೊಡೆದುಕೊಂಡು ವಲಸೆ ಹೋದರೆ ತಮಗೆ ಹಾಗೂ ತಮ್ಮ ಬದುಕುಗಳಿಗೆ ಒಳ್ಳೆಯದಾಗುತ್ತದೆಂಬುದನ್ನು ಈ ಹಬ್ಬದಿಂದ ತಿಳಿದುಕೊಳ್ಳುತ್ತಾರೆ. ಕ್ಷೇತ್ರಕಾರ್ಯ ಸಂದರ್ಭದಲ್ಲಿ ಉತ್ತರ ದಿಕ್ಕಿನ ಕಡೆ ಹಾಲು ಉಕ್ಕಿತು. ಈ ಪ್ರಕಾರವೇ ಅಲೆಮಾರಿ ಕುರುಬರು ವಲಸೆ ಹೋಗುತ್ತಾರೆ.

ಆ ದಿನದಂದು ಸ್ತ್ರೀ-ಪುರುಷರು ಹಾಗೂ ಮಕ್ಕಳು ಶುಭ್ರ ಅಥವಾ ಹೊಸ ಬಟ್ಟೆಗಳನ್ನು ಧರಿಸಿ ಹಣೆಗೆ ಭಂಡಾರವನ್ನು ಹಚ್ಚಿಕೊಳ್ಳುವರು. ಪೂಜೆ ಮಾಡಲು ಎಲ್ಲಾ ಸಿದ್ಧತೆಯಾದ ನಂತರ ಕುಟುಂಬಕ್ಕೊಂದರಂತೆ ಕುರಿ ಅಥವಾ ಟಗರನ್ನು ಲಕ್ಷ್ಮಿಗಳನ್ನು ಹಿಡಿದುಕೊಂಡು ಬಂದು ಗುಡಿಯಾಕಾರದ ಕಬ್ಬಿನ ದಂಟಿನ ಅಕ್ಕಪಕ್ಕದಲ್ಲಿ ನಿಲ್ಲಿಸುವರು. ಕುರಿ ಮತ್ತು ಟಗರುಗಳಿಗೆ ಭಂಡಾರ ಹಚ್ಚಿ ಹೂವಿನ ಹಾರ ಹಾಕುವರು.

ಅಂದು ದೇವರಿಗೆ ನೈವೇದ್ಯ ಮಾಡಿದ ಹೋಳಿಗೆ, ತುಪ್ಪ, ಹಾಲು, ಅನ್ನ, ಸೆಂಡಿಗೆ, ಇತ್ಯಾದಿಗಳನ್ನು ಬಾಳೆಯ ಎಲೆ ಅಥವಾ ಪತ್ರಾಳಿ ಮೇಲಿಟ್ಟು ಊದಿನಕಡ್ಡಿ ಹಚ್ಚಿ, ಕಾಯಿ ಒಡೆಯುವರು. ನಂತರ  ಹೂವಿನ ಮಾಲೆ ಹಾಕಿ ನಿಲ್ಲಿಸಿದ ಕುರಿ, ಟಗರನ್ನು ಗುಡಿಯ ಸುತ್ತ ಐದು ಸುತ್ತ ತಿರುಗಿಸುವರು. ತಿರುಗಿಸುವಾಗ ಮರಾಠಿ ಭಾಷೆಯಲ್ಲಿ “ಅಡಿಪಿಡಿ ಜಾಂದೆ ಬಾಡ್ರ ಜಾ ಯಾವುಂಡೆ” ಎಂದು ಜೋರಾಗಿ ಕೂಗುವರು. ತಮ್ಮಲ್ಲಿರುವ ಎಲ್ಲಾ ಪೀಡೆಗಳು ನದಿ ಅಥವಾ ಹೊಳೆ ಆ ಕಡೆ ಹೋಗಲಿ ಎಂದು ಸಂಬೋಧಿಸುತ್ತಾರೆ. ಇದಾದ ನಂತರ ದೇವರ ನೈವೇದ್ಯಕ್ಕಿಟ್ಟಿರುವ ಎಲ್ಲಾ ಎಡೆಯನ್ನು ಕಲಿಸಿ ಪ್ರತಿಯೊಂದು ಕುಟುಂಬದ ಕುರಿಗಳಲ್ಲಿ ಚರಗ ಚೆಲ್ಲುತ್ತಾರೆ. ಚರಗ ಚೆಲ್ಲುವವನ ಹಿಂದೆ ಇನ್ನೊಬ್ಬ ತಂಬಿಗೆಯಲ್ಲಿರುವ ನೀರು ಚಿಮುಕಿಸುತ್ತಾರೆ. ಕುರಿಗಳ ಸಂಖ್ಯೆ ಚಗರ ಚೆಲ್ಲಿದ ಹಾಗೆ ಮುಂದಿನ ವರ್ಷದೊಳಗೆ ಬೆಳೆಯಬೇಕು ಎಂಬ ನಂಬಿಕೆಯಿಂದ  ಈ ರೀತಿಯಾಗಿ ಮಾಡುತ್ತಾರೆ.

ಇದಾದ ಮೇಲೆ ತವರು ಮನೆಗೆ ಬಂದ ಹೆಣ್ಣು ಮಕ್ಕಳು ಕುರಿಗಳಿಗೆ ಆರತಿ ಬೆಳಗಿ ತಮ್ಮ ತಂದೆಯ ಕುರಿಯ ಸಂಖ್ಯೆ ಸಮೃದ್ಧಿಯಾಗಿ ಬೆಳೆಯಲಿ ಎಂದು ಹಾರೈಸುವರು. ಹಾಗೆಯೇ ಅಪ್ಪ, ಅಣ್ಣ, ತಮ್ಮನಿಗೂ ಆರತಿ ಬೆಳಗಿ ಅವರಿಗೆ ಮತ್ತು ಅವರ ಕುಟುಂಬಕ್ಕೆ ಒಳ್ಳೆಯದಾಗಲೆಂದು ಹಾರೈಸುತ್ತಾರೆ. ಆರತಿ ಬೆಳಗಿದ್ದಕ್ಕೆ ಆರತಿಯ ತಟ್ಟೆಯಲ್ಲಿ ಖುಷಿಗಾಗಿ ೧೦, ೫೦, ೧೦೦ ರೂ. ಗಳವರೆಗೆ ನೀಡುವರು. ಇವೆಲ್ಲಾ ಕಾರ್ಯಗಳು ಮುಗಿದ ನಂತರ ಸಾಮೂಹಿಕವಾಗಿ ಕುಳಿತುಕೊಂಡು ಊಟ ಮಾಡುವರು.

. ಮಲಪುರಿ ಹಬ್ಬ

ಪ್ರತಿ ವರ್ಷ ಶ್ರಾವಣ ಮಾಸದಲ್ಲಿ ಸೋಮವಾರ ಅಥವಾ ಶುಕ್ರವಾರ ದಿನಗಳಂದು ಗಂಗಾ ಪೂಜೆಯನ್ನು ಆಚರಿಸುತ್ತಾರೆ. ಇದನ್ನು ಮಲಪುರಿ ಹಬ್ಬ ಎಂದು ಕರೆಯುತ್ತಾರೆ.

ಇದು ನಿಸರ್ಗ ಮತ್ತು ಅಲೆಮಾಡಿ ಕುರುಬರಿಗೆ ಇರುವ ಸಂಬಂಧವನ್ನು ವ್ಯಕ್ತಪಡಿಸುತ್ತದೆ. ಈ ಹಬ್ಬವನ್ನು ಆಚರಿಸುವ ಹಿನ್ನಲೆಯೆಂದರೆ ಶ್ರಾವಣ ಮಾಸದಲ್ಲಿ ಅತಿಹೆಚ್ಚು ಮಳೆಯಾಗಿ ಬಹಳ ದಿನಗಳವರೆಗೆ ಮಲಪ್ರಭ ನದಿ ತುಂಬಿ ಎರಡು ದಡಸೇರಿ ಹರಿಯುತ್ತಿತ್ತು. ಆ ಸಮಯದಲ್ಲಿ ಕುರಿಗಳಿಗೆ ಮೇವು ಹಾಗೂ ತಮಗೆ ಆಹಾರ ದೊರೆಯದೆ ಕ್ಲಿಷ್ಟ ಪರಿಸ್ಥಿತಿ ನಿರ್ಮಾಣವಾಯಿತು. ಅಲೆಮಾರಿ ಕುರುಬರು ತಮ್ಮ ಬದುಕುಗಳನ್ನು ಹೊಡೆದುಕೊಂಡು ಗುಡ್ಡಗಾಡು ಪ್ರದೇಶಕ್ಕಾಗಿ ಅಥವಾ ಬಯಲು ಪ್ರದೇಶ್ಕಕಾಗಿ ವಲಸೆ ಹೋಗುವುದು ಅಸಾಧ್ಯವಾಯಿತು. ಆಗ ಪ್ರಕೃತಿ ದೇವಿಯಾದ ಗಂಗಾದೇವಿಯನ್ನು ಪ್ರಾರ್ಥಿಸಿ ನಮಗೆ ದಾರಿ ತೋರಿಸಿ. ನಿನಗೆ ಪ್ರತಿವರ್ಷ ಶ್ರಾವಣ ಮಾಸದಲ್ಲಿ ಪೂಜೆ ಸಲ್ಲಿಸುತ್ತೇವೆಂದು ಬೇಡಿಕೊಂಡರು. ಅವರ ಬೇಡಿಕೆಗೆ ಮನ್ನಿಸಿದ ಗಂಗಾದೇವಿ ತಕ್ಷಣ ಹರಿಯುವ ನೀರು ಎರಡು ಭಾಗವಾಗಿ ನಿಂತು ಕುರಿಗಳು ಹೋಗಲಿಕ್ಕೆ ದಾರಿ ಮಾಡಿಕೊಟ್ಟಳು. ಆದ್ದರಿಂದ ಅಂದಿನಿಂದ ಇಂದಿನವರೆಗೆ ಮಲಪ್ರಭ ನದಿಯ ಹೆಸರಿನಲ್ಲಿ ಗಂಗಾದೇವಿಗೆ ಪೂಜೆ ಸಲ್ಲಿಸುವುದನ್ನು ಮಲಪ್ರಭ ಹಬ್ಬ ಎನ್ನುವ ಬದಲಾಗಿ ‘ಮಲಪುರಿ ಹಬ್ಬ’ ವೆಂದು ಕರೆಯುತ್ತಾರೆ.

ಶ್ರಾವಣ ಮಾಸ ಮಳೆಗಾಲವಾದ್ದರಿಂದ ಕುರಿಮಂದೆಗಳು ಗುಡ್ಡಗಾಡು ಪ್ರದೇಶದಲ್ಲಿರುತ್ತವೆ. ಈ ಹಬ್ಬವನ್ನು ಒಂದೇ ಕಡೆ ತಬ್ಬಿದ ಕುಟುಂಬಗಳು ಸೇರಿಸಾಮೂಹಿಕವಾಗಿ ಆಚರಣೆ ಮಾಡುತ್ತವೆ. ಆದ ಖರ್ಚು-ವೆಚ್ಚಗಳನ್ನು ಸಮನಾಗಿ ಹಂಚಿಕೊಳ್ಳುವರು. ಕ್ಷೇತ್ರಕಾರ್ಯದ ಸಂದರ್ಭದಲ್ಲಿ ಪಾಪಿನಾಯಕನಹಳ್ಳಿ ಮತ್ತು ಕಮಲಾಪುರ ಮಧ್ಯದಲ್ಲಿ ಬರುವ ಗುಡ್ಡದಲ್ಲಿ ಚಿಕ್ಕೋಡಿ ತಾಲೂಕು ಅಪ್ಪನ ಹಟ್ಟಿ ಅಪ್ಪನ ಗುಂಪಿನವರು ಈ ಹಬ್ಬವನ್ನು ಆಚರಣೆ ಮಾಡಿದರು.

ಈ ಆಚರಣೆಗೆ ಮಹಿಳೆಯರು ಉಪವಾಸ ಇರುವುದು. ಕುರಿಮಂದೆಗಳು ವೇವು ಮೇಯಲು ಅಡವಿಗೆ ಹೋದನಂತರ ತಲೆ ಸ್ನಾನ ಮಾಡಿ ಅನುಕೂಲವೆನಿಸಿದ ಗುಡಾರದ ಸ್ಥಳಕ್ಕೆ ಸೇರಿಕೊಳ್ಳುತ್ತಾರೆ. ಆ ದಿನದ ಗಂಗಾದೇವಿಯ ನೈವೇದ್ಯಕ್ಕೆ ಹಾಗೂ ತಮಗೂ ವಿಶೇಷ ಅಡುಗೆಯನ್ನಾಗಿ ಹೋಳಿಗೆ ಮಾಡುತ್ತಾರೆ. ಕುಟುಂಬದ ಸಂಖ್ಯೆ ಹೆಚ್ಚು ಇರುವುದರಿಂದ ಮಾಡಿದ ಹೋಳಿಗೆಗಳನ್ನು ಕಟ್ಟೆಗೆ ಮತ್ತು ಕಂಬಳಿಗಳ ಸಹಾಯದಿಂದ ತಯಾರು ಮಾಡಿದ ಮಂಚದ ಮೇಲೆ ಹಾಕಿರುತ್ತಾರೆ. ಅದು ನೋಡುಗರಿಗೆ ವಿಶೇಷ ಹಾಗೂ ಹೊಸತನವಾಗಿ ಕಾಣಿಸುತ್ತದೆ. ಕುರಿಹಿಂಡುಗಳು ಸಾಯಂಕಾಲ ಗುಡಾರಕ್ಕೆ ಮರಳಿದ ನಂತರ ಪುರುಷರೆಲ್ಲರು ಸೇರಿ ಪರಡಗಿ ಬಾಗೀನಾ ತಯಾರು ಮಾಡುತ್ತಾರೆ. ಕೆಳಗಡೆ ಕರಿಯ ಕಂಬಳಿ ಹಾಸಿ ಅದರ ಮೇಲೆ ಗದ್ದುಗೆ ಚೌಕಾಕಾರದಲ್ಲಿ ತಂದ ೫ ಬಾಳೆ, ಜೋಳದ ಅಥವಾ ಸಜ್ಜೆ ದಂಟುಗಳನ್ನಿಟ್ಟು, ದಾರದಿಂದ ಕಟ್ಟುತ್ತಾರೆ. ಪರಡಗಿ ತಯಾರು ಮಾಡಿದ ನಂತರ ಅದಕ್ಕೆ ಭಂಡಾರ ಕುಂಕುಮ ಹಚ್ಚಿ ಹೋಳಿಗೆ ಇಟ್ಟು ಪೂಜೆ ಮಾಡುವರು.

ಗುಡಾರದಲ್ಲಿ ಪೂಜೆ ಮುಗಿದ ನಂತರ ಯಾರಾದರೊಬ್ಬರು ತಲೆಗೆ ಪೇಟಾ ಸುತ್ತಿಕೊಂಡು, ತಲೆಯ ಮೇಲೆ ಕರಿ ಕಂಬಳಿ ಹಾಕಿಕೊಳ್ಳುವರು. ನಂತರ ಪರಡಗಿಯನ್ನು ತಲೆಯ ಮೇಲೆ ಹೊತ್ತು, ನದಿ, ಹಳ್ಳ, ಹಗರಿ, ಹೊಳೆ ಅಥವಾ ಕಾಲುವೆ ಇರುವ ಸ್ಥಳಕ್ಕೆ ಪುರುಷರೆಲ್ಲರು ಹೋಗುವರು. ಹೊತ್ತು ತಂದ ಪರಡಗಿ ಹಾಗೂ ಉಣ್ಣಲು ತಂದ ಬುತ್ತಿಯನ್ನು ಕಾಲುವೆ ದಡದಲ್ಲಿ ಇಳಿಸುವರು. ಗಂಗಾದೇವಿಯ ಪೂಜೆಗೆಂದು ತಂದ ೫ ಬಳೆಹಣ್ಣು, ೫ ನಿಂಬೆಹಣ್ಣು, ೫ ಹಸಿರುಬಳೆ, ೫ ಉತ್ತುತ್ತಿ ಹಾಗೂ ಬೆಲ್ಲವನ್ನು ಪರಡಗಿಯ ಮೇಲಿಟ್ಟು ಭಂಡಾರ, ಕುಂಕುಮ ಹಚ್ಚುವರು. ನಂತರ ಪರಡಗಿ ಸುತ್ತ ಮೇಣದ ಬತ್ತಿ, ದೀಪ ಹಚ್ಚಿ ಊದಿನಕಡ್ಡಿ ಬೆಳಗಿಸಿ, ಕಾಯಿ ಒಡೆಯುವರು. ಇದಾದ ಮೇಳೆ ೫ ಜನರು ಪರಡಗಿಯನ್ನು ಎತ್ತಿಕೊಂಡು ಹರಿಯುವ ನೀರಿಗೆ ಬಿಡುವರು. ಜೈ ಗಂಗಮ್ಮ ಜೈ ಗಂಗಮ್ಮ ಎಂದು ಜೋರಾಗಿ ಹೇಳುವರು. ಅಲೆಮಾರಿ ಕುರುಬರು ಗಂಗಾದೇವಿಗೆ ಅರ್ಪಿಸಿದ ಪರಡಗಿ ಮುಣುಗದೆ ಹಾಗೂ ಮುಣಬತ್ತಿಯ ದೀಪಗಳು ನಂದದೆ ಬಹಳ ದೂರದವರೆಗೆ ಹರಿದು ಹೋದರೆ ಆ ವರ್ಷ ತಮಗೆ ಮತ್ತು ತಮ್ಮ ಕುರಿಮಂದೆಗೆ ಯಾವ ರೋಗರುಜಿನ ಬಾರದೆ ಸಮೃದ್ಧಿಯಾಗುತ್ತದೆ ಎಂಬ ನಂಬಿಕೆ ಇಂದಿಗೂ ಬಲವಾಗಿ ಬೇರೂರಿದೆ. ಒಂದು ವೇಳೆ ಪರಡಗಿ ಮುಣಗಿ ಮುಂಬತ್ತಿ ದೀಪಗಳು ನಂದಿದರೆ ಕೆಡುಕು ಸಂಭವಿಸುತ್ತದೆಂದು ನಂಬುವರು. ಆ ವರ್ಷ ಅತಿವೃಷ್ಟಿ, ಅನಾವೃಷ್ಟಿ ಅಥವಾ ನೆರೆಹಾವಳಿಗಳು ಸಂಭವಿಸುವುದರ ಜೊತೆಗೆ ಕುರಿಗಳಿಗೆ ಹೆಚ್ಚು ರೋಗರುಜಿನಗಳು ಬಂದು ಆರ್ಥಿಕ ನಷ್ಟ ಸಂಭವಿಸುತ್ತವೆಂಬ ನಂಬಿಕೆ ಇದೆ.

ಗಂಗಾದೇವಿಗೆ ಪರಡಗಿ ಅರ್ಪಿಸಿದ ನಂತರ ಗುಡಾರದಿಂದ ತಂದ ಹೋಳಿಗೆ ಬುತ್ತಿಯನ್ನು ಕಾಲುವೆ ದಂಡೆಯ ಮೇಲೆ ಊಟ ಮಾಡುತ್ತಾರೆ. ಒಂದು ವೇಳೆ ಊಟ ಮಾಡಲಾಗಿಯೂ ಬುತ್ತಿ ಉಳಿದರೆ ಅದನ್ನು ಗುಡಾರದ ಸ್ಥಳಕ್ಕೆ ತರದೆ ಗಂಗಾದೇವಿಗೆ ಬಿಟ್ಟು ಬರುತ್ತಾರೆ. ಕಾರಣ ತಮಗೂ ಮತ್ತು ಕುರಿಗಳಿಗೂ ಬರುವ ರೋಗರುಜಿನಗಳನ್ನು ಗಂಗಾದೇವಿಗೆ ಅರ್ಪಿಸಿರುತ್ತಾರೆ. ಬುತ್ತಿಯನ್ನು ಹಿಂದಕ್ಕೆ ತಂದರೆ ಬುತ್ತಿಯ ಜೊತೆಗೆ ರೋಗಗಳು ಬಂದು, ಕುರಿಗಳನ್ನು ಕಾಡುತ್ತವೆಂಬ ಭಯವಿದೆ. ಗುಡಾರಕ್ಕೆ ಬಂದ ನಂತರ ಮಹಿಳೆಯರು ಊಟ ಮಾಡುತ್ತಾರೆ. ೭ ಗಂಟೆಯಿಂದ ೧೦ ಗಂಟೆಯವರೆಗೆ ಜರುಗುತ್ತದೆ.