ಭಾರತೀಯ ಸಾಮಾಜಿಕ ವ್ಯವಸ್ಥೆಯೇ ಸಂಕೀರ್ಣವಾದುದು. ಸಮುದಾಯಗಳು, ಪಂಗಡಗಳು, ಒಳಪಂಗಡಗಳು ಪುರಾತನ ಕಾಲದಿಂದಲೂ ಅಸ್ತಿತ್ವದಲ್ಲಿರುವುದು ಸ್ಪಷ್ಟವಾಗಿದೆ. ದ್ರಾವಿಡರು ಇಲ್ಲಿನ ಮೂಲ ನಿವಾಸಿಗಳಾದರೂ ಆರ್ಯರು ಮತ್ತು ಆರ್ಯೇತರರ ಸಂಗಮದಿಂದಾಗಿ ಸಾಂಕೃತಿಕ ಸಂಘರ್ಷ ಮತ್ತು ಸಾಮರಸ್ಯಗಳ ಅನುಸಂಧಾನವು ನಿರಂತರವಾಗಿ ತನ್ನ ಉಳಿವನ್ನು ಪಡೆದುಕೊಳ್ಳುತ್ತಲೇ ಬಂದಿದೆ.

ಪ್ರಪಂಚದ ಪ್ರಥಮ ವೃತ್ತಿ ಪಶುಪಾಲನೆ ಆರಂಭಗೊಂಡಿದ್ದು ಆದಿಮಾನವನ ಸಂಸ್ಕೃತಿಯ ಉತ್ತರಾರ್ಧದಲ್ಲಿ. ಮನುಕುಲದ ವಿಕಾಸವು ಆರಂಭವಾದದು ಹಟ್ಟಿಗಳಲ್ಲಿ ಎಂದು ವಿದ್ವಾಂಸರ ಅಧ್ಯಯನ ಶೋಧಗಳಿಂದ ದೃಢಪಟ್ಟಿದೆ. ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿ ಕಂಡುಬರುವ ಕುರುಬ ಸಮುದಾಯದ ಪ್ರಮುಖ ಪಂಗಡಗಳಲ್ಲಿ ಹತ್ತಿಕಂಕಣ ಕುರುಬರು ಒಂದು. ಆದಿಮಾನವನು ಆಹಾರ ಹುಡುಕಾಟಕ್ಕಾಗಿ ಅಲೆಮಾರಿ ಜೀವನವನ್ನು ಆಯ್ಕೆ ಮಾಡಿಕೊಂಡು ಮೂಲತಃ ಬೇಟೆ ಕಾಯಕವನ್ನು, ಕಾಲಾಂತರದಲ್ಲಿ ಪಶುಪಾಲನೆಯನ್ನು, ಮುಂದುವರೆದು ಕೃಷಿಯತ್ತ ವಾಲಿದರು ಎಂದರೆ ಅತಿಶಯೋಕ್ತಿಯಾಗದು ಎಂದು ಎಮ್.ಎಮ್. ಕಲ್ಬುರ್ಗಿಯವರು ಅಭಿಪ್ರಾಯಪಡುತ್ತಾರೆ.

ಶ್ರಮ ಸಂಸ್ಕೃತಿಯ ಪ್ರತೀಕವೆನಿಸುವ ಕುರುಬ ಸಮುದಾಯವು ಸಂಸ್ಕೃತಿಯೊಂದರ ನಿರ್ಮಾಣಕ್ಕೆ ಕಾರಣೀಭೂತರಾದವರು. ಸಂಸ್ಕೃತಿಗೆ ಪೂರಕವೆನಿಸುವ ವೃತ್ತಿಯನ್ನು ಕೈಗೊಂಡವರು. ಪಶುಪಾಲಕರಾದ ಕುರುಬರು ಶಿವನ ಆರಾಧಕರೂ ಹೌದು. ಕರ್ನಾಟಕ ಸಾಂಸ್ಕೃತಿಕ ಚರಿತ್ರೆಯನ್ನು ಅನಾವರಣಗೊಳಿಸಿದರೆ ಹಲವು ಸಮುದಾಯಗಳಂತೆ ಕುರುಬ ಸಮುದಾಯಕ್ಕೂ ವಿಶೇಷ ಶಕ್ತಿ ಮತ್ತು ಸಂಸ್ಕೃತಿಯೊಂದು ಹುದುಗಿಕೊಂಡಿರುವುದು ಗೋಚರಿಸುತ್ತದೆ. ಪ್ರಾಚೀನ ಕಾಲದಿಂದಲೂ ಕುರಿ ಸಾಕಾಣಿಕೆ, ಕಂಬಳಿ ನೇಯ್ಗೆ, ಕೃಷಿಯನ್ನು ಮುಖ್ಯ ಕಸುಬುಗಳನ್ನಾಗಿ ರೂಢಿಸಿಕೊಂಡವರು.

ಆರ್ಯರು ಭಾರತಕ್ಕೆ ಕಾಲಿಟ್ಟ ಕ್ಷಣದಿಂದಲೇ ಶೂದ್ರ ಸಂಸ್ಕೃತಿಯು ಚೆಲ್ಲಾಪಿಲ್ಲಿಯಾಗಿ ಒಟ್ಟು ಭಾರತೀಯ ಸಂಸ್ಕೃತಿಯು ಪರಿವರ್ತನಾ ಹಾದಿ ಹಿಡಿದಿದ್ದು ಈಗ ಇತಿಹಾಸ. ಇಂತಹ ಸಂಸ್ಕೃತಿ ಸಂಘರ್ಷದ ಮಧ್ಯದಲ್ಲಿಯೂ ಕುರುಬರು ತಮ್ಮ ಮೂಲ ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಂಡು ಬಂದಿದ್ದಾರೆ. ಸಂಸ್ಕೃತಿಯೆಂಬುದು ಮನುಷ್ಯನ ಉಸಿರಾಗಿದ್ದು, ಇದಕ್ಕೆ ತಾರತಮ್ಯದ ಲೇಪನವಂತೂ ಇರಲಾರದು. ಮನುಷ್ಯನ ವಾಸಸ್ಥಾನವಿದ್ದ ಕಡೆಯಲ್ಲಿ ಸಂಸ್ಕೃತಿಯೊಂದು ಇದ್ದು ಅದು ಅವರದೇ ಆಗಿರುತ್ತದೆ. ಸಂಸ್ಕೃತಿಯೊಂದು ಸಮುದಾಯವೊಂದರ ಆಸ್ತಿಯಾಗಿ ಸಂವಹನಗೊಳ್ಳುತ್ತಾ ಬಂದರೂ ಪ್ರಾದೇಶಿಕ ವೈವಿಧ್ಯತೆ, ವೈಪರೀತ್ಯ ಕೂಡಿರಲೂ ಸಾಧ್ಯ. ವ್ಯಕ್ತಿಯೊಬ್ಬನ ಬಾಹ್ಯ ಮತ್ತು ಆಂತರಿಕ ಸ್ತರಗಳಲ್ಲಿ ರೂಪುಗೊಳ್ಳುವ ನಡೆನುಡಿ, ಉಡುಗೆ ತೊಡುಗೆ, ಆಚಾರ ವಿಚಾರಗಳೆಲ್ಲವೂ ಸಾಮಾಜಿಕ ವಿನ್ಯಾಸದ ಬೇರೆ ಬೇರೆ ಆಯಾಮಗಳಲ್ಲಿ ಒಳಮೂಡುತ್ತದೆ.

ಜನಾಂಗವೊಂದರ ಪ್ರಾದೇಶಿಕತೆಯು ಸೀಮಿತವಾದ ಚೌಕಟ್ಟನ್ನು ನಿರ್ಮಿಸಿಕೊಂಡಿದ್ದರೂ ಕೂಡ ಪರಂಪರಾಗತ ಸಂಸ್ಕೃತಿಯ ಅಭಿವ್ಯಕ್ತಿಯ ಪ್ರಕ್ರಿಯೆಯನ್ನು ಗ್ರಹಿಸಬೇಕಾಗುತ್ತದೆ. ಪ್ರಕೃತಿ ಆರಾಧಕರಾದ ಕುರುಬ ಜನಾಂಗವು ಭಾರತದ ಮೂಲನಿವಾಸಿಗಳು ಮಾತ್ರವಲ್ಲ, ಕರ್ನಾಟಕದ ಬಹುಸಂಖ್ಯಾತ ಜನಾಂಗಗಳಲ್ಲೊಂದು. ಬುಡಕಟ್ಟು ಜನಾಂಗದ ಲಕ್ಷಣಗಳಿದ್ದರೂ ನಾಗರೀಕತೆಯ ಸೋಂಕು ತಗುಲಿ ಹತ್ತಿ ಕಂಕಣದಂತಹ ಪಂಗವೊಂಡರ ಗಮನಕ್ಕೆ ಕಾರಣವಾಗಿದ್ದಾರೆ.

ಮೂಲದಲ್ಲಿ ಒಂದೇ ಆಗಿದ್ದ ಕುರುಬ ಜನಾಂಗವು ಕಾಲಾನಂತರದಲ್ಲಿ ಹಲವಾರು ಉಪಪಂಗಡಗಳಾಗಿ ವಿಭಜನೆಗೊಂಡಂತೆ ಕಂಡುಬರುತ್ತದೆ. ಇದಕ್ಕೆ ಸ್ಥಳದಿಂದ ಸ್ಥಳಕ್ಕೆ ವಲಸೆ ಹೋಗುವುದು, ಉದ್ಯೋಗದಲ್ಲಾದ ಬದಲಾವಣೆ, ಆಯಾ ಪ್ರದೇಶದಲ್ಲಿ ರೂಪಿಸಿಕೊಂಡ ಆಚಾರ-ವಿಚಾರಗಳಲ್ಲಿಯೂ ಭಿನ್ನತೆಯೂ ಕಾರಣವಿರಬಹುದು.

ಕುರುಬರಲ್ಲಿ ಉಣ್ಣೆ ಕಂಕಣ ಮತ್ತು ಹತ್ತಿಕಂಕಣ ಕುರುಬರೆಂದು ಎರಡು ಪ್ರಮುಖವಾದ ಪಂಗಡಗಳಿವೆ. ಉಣ್ಣೆ ಕಂಕಣ ಕುರುಬರು ಮದುವೆಯ ಸಂದರ್ಭದಲ್ಲಿ ವಧುವರರ ಕೈಗಳಿಗೆ ಉಣ್ಣೆ ನೂಲಿನಿಂದ ಮಾಡಿದ ಎಳೆಯನ್ನು ಕಟ್ಟುತ್ತಾರೆ. ಹೀಗಾಗಿ ಇವರಿಗೆ ಉಣ್ಣೆ ಕಂಕಣ ಕುರುಬರು ಎಂದು ಹೆಸರಾಯಿತು. ಮದವೆಯ ವೇಳೆಯಲ್ಲಿ ಮದುಮಕ್ಕಳಿಗೆ ಹತ್ತಿಯ ನೂಲಿನಿಂದ ಕಂಕಣವನ್ನು ಕಟ್ಟಿದರೆ ಇವರು ಹತ್ತಿ ಕಂಕಣದವರೆಂದು ಹೆಸರು ಪಡೆದುಕೊಂಡಿದ್ದಾರೆ. ಈ ಕಂಕಣ ಭೇದವನ್ನು ಬಿಟ್ಟರೆ ಈ ಎರಡೂ ಪಂಗಡಗಳ ನಡುವೆ ಮತ್ತಾವುದೇ ವ್ಯತ್ಯಾಸಗಳಿಲ್ಲ. ಇವೆರಡೂ ಪಂಗಡಗಳಲ್ಲಿ ನೀರುಬಳಕೆ ಅಂದರೆ ಊಟ ಉಪಚಾರಗಳು ಯಾವುದೇ ಭೇದವಿಲ್ಲದೆ ನಡೆಯುತ್ತವೆ. ಆದರೆ ಹೆಣ್ಣು-ಗಂಡಿನ ಕೂಡು-ಕೊಳ್ಳುವಿಕೆಯ ವ್ಯವಹಾರ ಮಾತ್ರ ಕಂಡುಬರುವುದಿಲ್ಲ. ಕಾರಣ ಈ ಎರಡು ಪಂಗಡಗಳಲ್ಲಿ ನಾವು ಅಣ್ಣತಮ್ಮಂದಿರೆಂಬ ಭಾವನೆ ಮನೆ ಮಾಡಿದೆ. ಹೀಗೆ ಕುರುಬರಲ್ಲಿ ಉಂಟಾಗಿರುವ ಕಂಕಣ ಭೇದಗಳಿಗೆ ಮೂಲವನ್ನು ಹುಡುಕಿದರೆ ಹಲವಾರು ಕಟ್ಟು ಕಥೆಗಳು ಕುರುಬ ಜನಾಂಗದಲ್ಲಿಯೂ ಮತ್ತು ಹಾಲುಮತ ಪುರಾಣಗಳಲ್ಲಿಯೂ ದೊರೆಯುತ್ತವೆ.

ಸಮಾಜವು ಯಾವತ್ತೂ ವಿಕಸನಶೀಲವಾಗಿದ್ದು, ಅಪೂರ್ಣತೆಯಿಂದ ಪೂರ್ಣತೆಯೆಡೆಗೆ ಸಾಗುವುದು ಅದರ ವೈಶಿಷ್ಟ್ಯ. ಕೆಲವೊಮ್ಮೆ ಆ ಸಮಾಜವು ಪೂರ್ಣವಾಗಿದ್ದರೂ ಪ್ರತಿಷ್ಠೆಯತ್ತ ಸಾಗುವುದು ಸ್ವಾಭಾವಿಕವಾಗಿದೆ. ಜಗತ್ತಿನ ಹಲವೆಡೆ ಹಲವು ಹೆಸರುಗಳಿಂದ ಕರೆಸಿಕೊಳ್ಳುವ ಈ ಸಮುದಾಯವು ಆಧುನಿಕ ಕಾಲದವರೆಗೆ ತನ್ನ ಹಾದಿಯನ್ನು ವಿಸ್ತರಿಸಿಕೊಳ್ಳುವಾಗ ಕಂಡುಬಂದ ಏರಿಳಿತಗಳಲ್ಲಿ ಒಳಪಂಗಡಗಳಾಗಿ ವಿಭಜನೆಗೊಳ್ಳುವುದು ಅತಿಮುಖ್ಯವಾದುದು.

ಉಂಡಾಡು ಪದ್ಮಣ್ಣನ ಇಬ್ಬರು ಹೆಂಡರಿಯರಿಂದ ಹುಟ್ಟಿದ ಸಂತಾನದಲ್ಲಿ ಒಂದು ಹತ್ತಿಕಂಕಣವಾಗಿ, ಮತ್ತೊಂದು ಉಣ್ಣೆಕಂಕಣವಾಗಿ ಹೆಸರು ಪಡೆದು ವಿಭಜಿತವಾಗಿದೆ. ಹತ್ತಿಕಂಕಣ ಮತ್ತು ಉಣ್ಣೆ ಕಂಕಣ ಈ ಭಿನ್ನತೆಯು ಅವರು ಲಗ್ನದ ಸಂದರ್ಭದಲ್ಲಿ ಕಟ್ಟಿಕೊಳ್ಳುವ ಕಂಕಣದ ಆಧಾರದ ಮೇಲೆ ಆಯಾಯಾ ಒಳಪಂಗಡಕ್ಕೆ ಹೆಸರು ಬರುತ್ತದೆ. ಈ ಎರಡೂ ಪಂಗಡಗಳಲ್ಲಿ ಒಂದರೊಳಗೊಂದು ಕೊಟ್ಟು ತರುವ ಸಂಬಂಧ ನಿಷಿದ್ಧ. ಕಾರಣ ಮೇಲು ಕೀಳು ಎಂಬ ಭಾವನೆ, ಒಂದು ನಿರ್ಧಿಷ್ಟ ಒಳಪಂಗಡಕ್ಕೆ ಸೇರಿದ ಕುರುಬರು ಎಲ್ಲಿಗೇ ಹೋದರೂ ಅಣ್ಣ-ತಮ್ಮಂದಿರೇ ಹೊರತು ನೆಂಟರಾಗುವುದಿಲ್ಲ.

ಹತ್ತಿಕಂಕಣವೆಂದು ಹೆಸರು ಪಡೆದುದಕ್ಕೆ ತಗರ ಪವಾಡದಲ್ಲಿ ಈ ಪದ್ಯಗಳನ್ನು ಅವಲೋಕಿಸಬಹುದು.

ಕಂದಯ್ಯ ನಿನ್ನ ಹಿರಿಹೆಂಡತಿ ಲಿಂಗಮ್ಮಗೆ
ಕಂದರು ಹದಿಮೂರು ಮಂದಿ
ಚೆಂದದಿ ಹತ್ತಿಕಂಕಣದ ಕುರುಬರೆಂದು
ನಿಂದು ಶಿವನು ನಿರೂಪಿಸಿದ

ನಿನ್ನ ಸಂತತಿಯವರುಗಳೆಲ್ಲರು ಚೊಕ್ಕ
ಚಿನ್ನ ಹತ್ತಿಯ ಕಂಕಣದ
ಬಿನ್ನಾಣಕಾರರೆನಿಸಿ ಬಾಳುವರು ಚೊಕ್ಕ
ಚಿನ್ನಕ್ಕೆ ಸಮನಾಗಿ ಮಗನೆ (ತಗರ ಪವಾಡ, ಸಂಧಿ-೨)

ಅಂದರೆ ಪದ್ಮ ಗೊಂಡನ ಹಿರಿಯ ಹೆಂಡರಿ ಲಿಂಗಮ್ಮನ ಹೊಟ್ಟೆಯಲ್ಲಿ ಜನಿಸಿದ ೧೩ ಜನ ಗಂಡುಮಕ್ಕಳೂ ಹತ್ತಿಕಂಕಣದ ಕುರುಬರೆಂದು ಹೆಸರು ಪಡೆದು ಶ್ರೇಷ್ಟತೆಯ ಸೂಚನೆಯಾಗಿಯೂ ಕಂಡುಬರುತ್ತಾರೆ.

ಸಿದ್ಧಮಂಕ ಚರಿತೆಯ ಪ್ರಕಾರ ಉಂಡಾಡು ಪದ್ಮಣ್ಣನಿಗೆ ಇಬ್ಬರು ಮಡದಿಯರು. ಹಿರಿಯಾಕೆ ಚಿಮ್ಮಲಬ್ಬೆ. ಕಿರಿಯಾಕೆ ಜಿಂಕಬ್ಬೆ (ಜಿಂಕಾದೇವಿ) ಜಿಂಕಬ್ಬೆಯ ಮದುವೆಯಲ್ಲಿ ಸುರಗ, ಕಂಕಣ, ಬಾಸಿಂಗ, ದಂಡೆ ಹಾಗೂ ಮಂಗಳಸೂತ್ರಗಳೆಂಬ ಪಂಚವಿಧಿಗಳಿಗೆ ಹತ್ತಿಯ ಎಳೆಗಳನ್ನು ಬಳಸಿದ್ದರಿಂದ ಈಕೆಯ ಸಂತತಿಯವರೆ ಮುಂದೆ ಹತ್ತಿಕಂಕಣ ಕುರುಬರು ಇಲ್ಲವೆ ಬಿಳಿಯಕಂಕಣ ಕುರುಬರು ಅಥವಾ ಹೊಸಕುರುಬರು ಎಂದು ಕರೆಯುತ್ತಾರೆ.

ಕುರುಬರ ಮೂಲಪುರುಷನಾದ ಉಂಡಾಡು ಪದ್ಮಣ್ಣನಿಂದ ಶಾಸ್ತ್ರೋಕ್ತವಾಗಿ ಮದುವೆಯಾದ ಹೆಂಡತಿಯ ಮಕ್ಕಳಿಗೆ ಹತ್ತಿಕಂಕಣ ಕುರುಬರೆಂದು ಹೆಸರಾಯಿತು. ಇವರು ಪ್ರಮುಖವಾಗಿ ಕೃಷಿಯಾಧಾರಿತ ಸಮುದಾಯ. ಎಲ್ಲಿ ಫಲವತ್ತಾದ ಕೃಷಿಗೆ ಯೋಗ್ಯವಾದ ಭೂಮಿ ಹೆಚ್ಚು ಕಂಡುಬರುತ್ತದೋ ಅಂತಹ ಕಡೆಗಳಲ್ಲಿ ಹತ್ತಿಕಂಕಣ ಕುರುಬರು ಕಂಡುಬರುತ್ತಾರೆ. ಹತ್ತಿಕಂಕಣ ಕುರುಬರು ಕರ್ನಾಟಕದಲ್ಲಿ ಬಿಜಾಪುರ, ಬಾಗಲಕೋಟೆ, ಧಾರವಾಡ, ಗದಗ, ಬಳ್ಳಾರಿ, ಗುಲ್ಬರ್ಗಾ, ಮೈಸೂರು, ಚಿಕ್ಕಮಗಳೂರು ಹಾಗೂ ಬೆಂಗಳೂರು ಜಿಲ್ಲೆಗಳಲ್ಲಿ ಕಂಡುಬರುತ್ತಾರೆ. ಕೃಷಿಯ ಜೊತೆಗೆ ಕಂಬಳಿ ನೇಕಾರಿಕೆ, ಕುರಿ ಸಂಗೋಪನೆ ಈ ಎಲ್ಲಾ ಸುಬುಗಳನ್ನು ಮಾಡುವುದರ ಜೊತೆಗೆ ಆಹಾರ ಪದ್ಧತಿಯಲ್ಲಿ ಲಿಂಗಾಯತ ಧರ್ಮದ ಪ್ರಭಾವಕ್ಕೊಳಗಾಗಿ ಬಹುಪಾಲು ಸಸ್ಯಹಾರಿಗಳಾಗಿದ್ದರೆ, ಇನ್ನು ಕೆಲವರು ಮಾಂಸಹಾರಿಗಳಾಗಿದ್ದಾರೆ.

ಈ ಎರಡೂ ಪಂಗಡಗಳವರು ನೂರಾರು ವರ್ಷಗಳಿಂದ ಅಣ್ಣ ತಮ್ಮಂದಿರೆಂಬ ಭಾವನಾತ್ಮಕ ಸಂಬಂಧದ ಹಿಂದಿನ ನಿಗೂಢತೆಯ ಅರಿವಾಗುತ್ತದೆ.

೧೮೮೪ ರಲ್ಲಿ ಮುಂಬಯಿ ಕರ್ನಾಟಕ ಪ್ರದೇಶದಲ್ಲಿ ಕುರುಬರ ಬಗ್ಗೆ ಸಂಶೋಧನೆ ಕೈಗೊಂಡ ಜೇಮ್ಸ್ ಕ್ಯಾಂಬೆಲ್ ಅವರು ಹೀಗೆ ಹೇಳುತ್ತಾರೆ.

ಪ್ರಾಚೀನ ಕಾಲದಿಂದಲೂ ಕುರುಬರು ಉಣ್ಣೆಯ ಕಂಕಣ ಧರಿಸುತ್ತ ಬಂದಿದ್ದರೂ ಹತ್ತಿ ಕಂಕಣದ ಪ್ರವೇಶ ಯಾವಾಗ ಆಯಿತು ಎಂಬ ಪ್ರಶ್ನೆಗೆ ಉತ್ತರ ಹುಡುಕಿದಾಗ ಮಾತ್ರ ಈ ಕಂಕಣ ಭೇದದ ಕತೆಯ ಹಿಂದಿನ ನಿಗೂಢತೆಯ ನಿಜಾಂಶ ತಿಳಿಯಲು ಸಾಧ್ಯ. ಇದಕ್ಕಾಗಿ ಹತ್ತಿಯ ಇತಿಹಾಸದ ಕಡೆಗೆ ಗಮನ ಹರಿಸಿದರೆ ಪ್ರಪಂಚದಲ್ಲಿ ಹತ್ತಿ ಗಿಡಿದ ಅವಿಷ್ಕಾರ ಕ್ರಿ.ಪೂ.೧೨೦೦-೧೦೦೦ ರಲ್ಲಿ ಆಗಿರಬಹುದಾದ ಸಾಧ್ಯತೆ ಇರುವುದಾಗಿ ವಿಜ್ಞಾನಿಗಳ ವಾದ. ಹತ್ತಿಯ ಗಿಡಕ್ಕೆ ಮೊದಲು ಕುರಿಯಗಿಡ ಎಂದೇ ಕರೆಯಲಾಗುತ್ತಿತ್ತು. ಇದರಿಂದ ಮೊದಲು ಕುರಿಯ ತುಪ್ಪಳದಿಂದ ನೇಕಾರಿಕೆ ಇತ್ತು ಎಂಬುದು ಸ್ಪಷ್ಟ.

ಇಂದಿನ ಹತ್ತಿಕಂಕಣ ಕುರುಬರಾರೂ ನೇಕಾರರಲ್ಲ. ಇವರ ವೃತ್ತಿ ಕುರಿಗಾರಿಕೆ ಮತ್ತು ಕೃಷಿಯಾಗಿದೆ. ಹತ್ತಿಕಂಕಣದಲ್ಲಿ ಹಟಗಾರ, ಖಿಲ್ಲಾರಿ ಹಾಗೂ ಸನಗರ ಎಂದು ಮೂರು ಒಳಪಂಗಡಗಳು ಇವೆ. ಖಿಲ್ಲಾರಿಗಳು ಅರೆಅಲೆಮಾರಿ ಕುರುಬರಾದರೆ, ಹಟಗಾರರು ಕುರಿಗಾರಿಕೆಯೊಂದಿಗೆ ಕೃಷಿಕರು, ಸನಗಾರರು ಮಹಾರಾಷ್ಟ್ರದ ಗಡಿಭಾಗದಲ್ಲಿರುವ ಕಂಬಳಿನೇಕಾರರು. ಇವರೆಲ್ಲರೂ ಹತ್ತಿ ಕಂಕಣವನ್ನು ಧರಿಸುತ್ತಾರೆ. ಕರ್ನಾಟಕದಲ್ಲಿ ಬಳ್ಳಾರಿ ಜಿಲ್ಲೆಯನ್ನು ಕೂಡಿಕೊಂಡು ಉತ್ತರಕ್ಕೆ ಬಂದಂತೆಲ್ಲ ಹತ್ತಿ ಕಂಕಣಕ್ಕೆ ಸೇರಿದ ಕುರುಬರೇ ಹೆಚ್ಚು. ಇವರಲ್ಲಿಯೂ ಬಹಳಷ್ಟು ಒಳಪಂಗಡಗಳಿವೆ. ಬನ್ನಿ ಎಲ್ಲವರು, ಗೌಡರು, ಎಡವೆಲ್ಲೋರು, ಮಲ್ಲಿಎಲ್ಲವರು, ಕಡ್ಲೆ ಎಲ್ಲವರು, ಸೊಂಟಿ ಎಲ್ಲವರು, ಬಸರಿ ಎಲ್ಲವರು, ಅಕ್ಕಿಎಲ್ಲವರು, ಎಕ್ಕೆ ಎಲ್ಲವರು, ಜಮ್ಮೆಲ್ಲವರು, ಬಂಡಾರದೋರು, ಇತ್ಯಾದಿ ಇವುಗಳಿಗೆ ಬೆಡಗು ಎಂದು ಕರೆಯುತ್ತಾರೆ. ಇವರಲ್ಲಿಯೂ ಒಂದು ನಿರ್ಧಿಷ್ಟ ಬೆಡಗಿಗೆ ಸೇರಿದವರು ಎಲ್ಲದ್ದರೂ ಅಣ್ಣ-ತಮ್ಮಂದಿರು ಹೊರತು ನೆಂಟರಾಗುವುದಿಲ್ಲ.

ಹತ್ತಿಕಂಕಣದವರಲ್ಲಿಯೂ ಬೀರೇಶ್ವರ, ಮಲ್ಲೇಶ್ವರ, ಮೈಲಾರಲಿಂಗ, ಕರಿಸಿದ್ಧೇಶ್ವರ, ಗಂಗರಾಯ, ಅಸಬೇಡಪ್ಪ, ಯಲ್ಲಮ್ಮ ಮುಂತಾದ ದೇವರುಗಳಿಗೆ ನಡೆದುಕೊಳ್ಳುವ ಒಕ್ಕಲುಗಳಿವೆ. ಆದರೆ ಉಣ್ಣೆ ಕಂಕಣ ಕುರುಬರಿಗೆ ರೇವಣಸಿದ್ದೇಶ್ವರ ಸಮಾನ ದೈವವಾದಂತೆ ಇವರಿಗೆ ಆಗಿಲ್ಲ. ಇವರಲ್ಲಿ ಕೆಲವರಿಗೆ ರೇವಣಸಿದ್ದೇಶ್ವರೂ ಬೇರೆ ದೈವಗಳಂತೆ ಒಬ್ಬ ಮನೆದೇವರಾಗಿದ್ದಾನೆ. ಹತ್ತಿಕಂಕಣ ಕುರುಬರಿಗೆ ಒಡೆಯರುಗಳು ಗುರುಗಳಾದರೂ ಮನೆಯ ಸಾಂಸ್ಕೃತಿಕ ಆಚರಣೆಗಳಲ್ಲಿ ಪುರೋಹಿತರಂತೆ ಭಾಗಿಯಾಗುವ ನಿಯಮ ಇಲ್ಲ. ಇವರಿಗೆ ಮದುವೆಯ ಸಂದರ್ಭದಲ್ಲಿ ಗುರುವಿನ ಎಲೆಯನ್ನು ಕೊಡುತ್ತಾರೆ. ಕೆಲವರು ಮನೆಗೆ ಕರೆದುಕೊಂಡು ಹೋಗಿ ಬಟ್ಟೆಬರೆಯನ್ನು ಗುರುವಿಗೆ ಮಾಡುತ್ತಾರೆ. ಆಗ ರೊಕ್ಕವನ್ನು ದಕ್ಷಿಣೆಯಾಗಿ ಕೊಡುತ್ತಾರೆ. ಇದೇನಿದ್ದರೂ ಸಂತೋಷಕ್ಕಾಗಿ ಕೊಡುವುದೇ ಹೊರತು ನಿಯಮ ಪಾಲನೆಯಿಲ್ಲ.

ಸಿಂಧನೂರು, ರಾಯಚೂರು ಭಾಗಗಳಲ್ಲಿ ಹತ್ತಿ ಕಂಕಣ ಕುರುಬರ ಮದುವೆಯ ಕಾರ್ಯಕ್ಕೆ ವೀರಶೈವ ಜಂಗಮರು ಅಥವಾ ಬ್ರಾಹ್ಮಣ ಆಚಾರಿಗಳು ಪುರೋಹಿತರು ಬರುತ್ತಾರೆ. ಮತ್ತೊಂದು ಗಮನಾರ್ಹ ಅಂಶವೆಂದರೆ ಈ ಸುತ್ತಿನಲ್ಲಿ ಇರುವ ಒಡೆಯರುಗಳೆಲ್ಲ ಕೊಟ್ಟು ತರುವ ಸಂಬಂಧವನ್ನು ಕುರುಬರ ಕೂಡ ನಡೆಸದೆ ತಮ್ಮ ತಮ್ಮಲ್ಲಿಯೇ ನಡೆಸಿದ್ದಾರೆ. ಆದರೆ ಹಳೆ ಮೈಸೂರಿನ ಕಡೆ ಒಡೆಯರುಗಳು ತಮಗೆ ತಾವು ಅಣ್ಣ ತಮ್ಮಂದಿರೇ ಹೊರತು ನೆಂಟರಾಗುವುದಿಲ್ಲ.

ಹತ್ತಿಕಂಕಣದ ಕೆಲವು ಬಣದವರ ಪ್ರಕಾರ ಇವರ ಪೂರ್ವಜರೆಲ್ಲ ಮೊದಲಿಗೆ ಲಿಂಗವಂತರಾಗಿದ್ದರಂತೆ, ಆದರೆ ತಿನ್ನುಣ್ಣುವುದನ್ನು ಬಿಡಲಾರದ್ದಕ್ಕೆ ತಮ್ಮ ಲಿಂಗಗಳನ್ನೆಲ್ಲ ತಮ್ಮ ತಮ್ಮ ಮನೆ ದೇವರುಗಳಿಗೆ ಅರ್ಪಿಸಿ ತಾವು ಯಥಾರೀತಿ ತಿನ್ನುಣ್ಣುವುದಕ್ಕೆ ಪ್ರಾರಂಭಿಸಿದರಂತೆ. ಹತ್ತಿಕಂಕಣ ಕುರುಬರಲ್ಲೂ ಕೆಲವು ಗುಂಪುಗಳಿವೆ. ಇವುಗಳಿಗೆ ಬೆಡಗುಗಳ ನಿಧಿಷ್ಟತೆಯೇನಿಲ್ಲ. ಎಲ್ಲ ಬೆಡಗಿನವರೂ ಸೇರಿಕೊಂಡು ತಮ್ಮ ಸಾಂಸ್ಕೃತಿಕ ಕಾರ್ಯಗಳ ಸಂಗ ನೇರವೇರಿಕೆ ಅನುಕೂಲಕ್ಕಾಗಿ ತಮ್ಮ ತಮ್ಮಲ್ಲಿಯೇ ಗುಂಪುಗಳನ್ನು ಮಾಡಿಕೊಂಡಿದ್ದಾರೆ. ಇದಕ್ಕೆ ಪಣ ಅಥವಾ ಬಣ ಎಂದು ಕರೆಯಲಾಗುತ್ತದೆ. ಮದುವೆಯ ಸಂದರ್ಭದಲ್ಲಿ ಒಂದೇ ಬಣಕ್ಕೆ ಸೇರಿದ ವಧೂ ವರರಾದರೆ ಗಂಡು-ಹೆಣ್ಣಿನ ಕಡೆಯವರಿಬ್ಬರೂ ಕೂಡಿಕೊಂಡು ಲಗ್ನದ ಎಲ್ಲಾ ಕೆಲಸ ಕಾರ್ಯಗಳನ್ನು ನಡೆಸಿಕೊಡುತ್ತಾರೆ. ಹೀಗಲ್ಲದೆ ಬೇರೆ ಬಣ ಕನ್ಯೆಯನ್ನು ಎತ್ತಿಕೊಡುತ್ತಾರೆ. ಅಂದರೆ ಲಗ್ನದ ಶಾಸ್ತ್ರದ ವಿಧಿಗಳನ್ನು ನೆರವೇರಿಸುವುದಕ್ಕಾಗಿ ಕನ್ಯೆಯನ್ನು ಗಂಡಿನವರ ವಶಕ್ಕೆ ಒಪ್ಪಿಸುವುದು. ಇಂಥ ಸಂದರ್ಭದಲ್ಲಿ ಕನ್ಯೆಯ ಬಳಗದವರು ಲಗ್ನದ ಯಾವುದೇ ಕಾರ್ಯದಲ್ಲಿ ಪಾಲ್ಗೊಳ್ಳುವಂತಿಲ್ಲ. ಅವರೇನಿದ್ದರೂ ಕರೆದಾಗ ಊಟ ಮಾಡುವುದು ಮತ್ತು ಧಾರೆಯ ಕಾಲದಲ್ಲಿ ಹೆಣ್ಣು ಗಂಡಿನ ಮೇಲೆ ಅಕ್ಕಿ ಕಾಳು ಹಾಕುವುದು. ಅದು ತಪ್ಪಿ ಇನ್ನಾವುದೇ ಶಾಸ್ತ್ರ ಕಾರ್ಯ ಮಾಡಿದರೂ ದೊಡ್ಡ ಜಗಳವೇ ನಡೆಯುತ್ತದೆ. ಇದನ್ನು ನೋಡಿಯೇ ಕುರುಬ ಕೂಡಿ ಕೆಟ್ಟ ದೊಂಬ ಅಗಲಿ ಕೆಟ್ಟ ಎಂಬ ಗಾದೆ ಹುಟ್ಟಿಕೊಂಡಿರಬಹುದು.

ಹತ್ತಿಕಂಕಣ ಕುರುಬರಲ್ಲಿಯೂ ಕೆಲವು ಆಚರಣೆ ಸಂಪ್ರದಾಯಗಳನ್ನು ಕಾಣಬಹುದು. ಎಲ್ಲ ಸಮುದಾಯಗಳಂತೆ ಕುರುಬ ಸಮುದಾಯದ ಉಪ ಪಂಗಡವಾದ ಹತ್ತಿಕಂಕಣ ಕುರುಬರು ಆರಿಸುವ ಆವರಣೆ ಉದ್ದೇಶ ಒಂದೇ ಆಗಿದ್ದರೂ ಆಚರಣೆಗಳು ಮಾತ್ರ ಒಂದೇ ತೆರನಾಗಿಲ್ಲ. ಸಮಾಜ ನೆಲೆಗೊಂಡ ಸ್ಥಿತಿಗತಿ, ಸಾಮಾಜಿಕ ಮನೋಧರ್ಮ, ನಂಬಿಕೆ ಇತ್ಯಾದಿ ಅಂಶಗಳ ಗುಣವಾಗಿ ಆಚರಣೆ ರೂಪ ತಾಳುತ್ತದೆ. ಕಾಲಾಂತರದಲ್ಲಿ ಹಲವು ಪ್ರಭಾವಗಳಿಗೆ ಒಳಗಾಗದಂತೆ ಈ ಆಚರಣೆಗಳಲ್ಲಿ ಬದಲಾಗುವುದೂ ಸಹಜ.

ಹತ್ತಿಕಂಕಣ ಕುರುಬರಲ್ಲಿ ಗಂಡುಮಕ್ಕಳಿಗೆ ಮದುವೆಗೆ ಮುನ್ನ ಪಟ್ಟ ಮಾಡುವ ಆಚರಣೆ ಇದೆ. ಈ ಪಟ್ಟವನ್ನು ಮರು ತಿಂಗಳ ಮಗುವಿನಿಂದ ಹಿಡಿದು ಮದುವೆಯಾಗುವ ವಯೋಮಾನದ ಹುಡುಗರಿಗೆಲ್ಲ ಮಾಡುತ್ತಾರೆ. ಖರ್ಚು ಕಡಿಮೆ ಮಾಡುವ ಉದ್ದೇಶ ಇದಾಗಿರಬಹುದು. ಹೀಗೆ ಸಾಮೂಹಿಕವಾಗಿ ನಡೆಯುವಾಗಲೂ ನಿರ್ಧಿಷ್ಟ ಬೆಡಗಿನ ಅಣ್ಣ ತಮ್ಮಂದಿರು ಮಾತ್ರ ಗುಂಪಾಗಿ ಸೇರಿ ಆಚರಿಸುತ್ತಾರೆ. ಈ ಸಮಯದಲ್ಲಿ ಮನೆದೇವರಾದ ಬೀರಲಿಂಗೇಶ್ವರ, ಗಂಗರಾಯನನ್ನು ಹೊರಡಿಸಿಕೊಂಡು ಡೊಳ್ಳಿನ ಸಮೇತ ಹೊಳೆಗೆ ಹೋಗುತ್ತಾರೆ. ಅಲ್ಲಿ ದೇವರಿಗೆ ಗಂಗಾಸ್ನಾನ ಮಾಡಿಸುತ್ತಾರೆ. ಅನಂತರ ಕುರಿ ಬಲಿಕೊಟ್ಟು ಅಡಿಗೆ ಮಾಡಿ ಬಂದ ಜನರಿಗೆ ಉಣಬಡಿಸುತ್ತಾರೆ. ಅಲ್ಲಿಂದ ಮುಂದೆ ಗುಡಿಗೆ ದೇವರನ್ನು ಕರೆತಂದು ಗುಡಿದುಂಬಿಸುತ್ತಾರೆ.

ಗುಡಿಗೆ ಬಂದ ಮೇಲೆ ನಾಲ್ಕು ಗಡಿಗೆಗಳಲ್ಲಿ ನೀರು ತಂದು  ಚಚ್ವೌಕಾಕಾರದಲ್ಲಿ ಇಟ್ಟು ಅದಕ್ಕೆ ಸುತ್ತಲೂ ಐದು ಸುತ್ತು ಹತ್ತಿ ನೂಲು ಸುತ್ತುತ್ತಾರೆ. ಇದಕ್ಕೆ ಸುರಿಗೆ ಸುತ್ತುವುದು ಎಂದು ಹೆಸರು. ಹೀಗೆ ಕೂರಿಸುವುದಕ್ಕೆ ಮುಂಚೆ ಸುರಿಗೆಯಿಂದ ಏಳಿಸಿ ಅವರ ತಂದೆ ತಾಯಿಗಳನ್ನು ಕೂಡಿಸಿ ಬಂಊ ಬಳಗವನ್ನು ಸೇರಿಸಿಕೊಂಡು ಅವರಿಗೆ ಬಂಡಾರ ದೇವರ ಅರಿಶಿನ ಹೊಯ್ಯುತ್ತಾರೆ. ಈ ಆಚರಣೆಯುದ್ದಕ್ಕೂ ಡೊಳ್ಳಿನ ಸೇವೆ ನಡೆಯುತ್ತಿರಬೇಕು. ಇವರಿಗೆ ಹಿರೇ ಕುರುಬರು ಎಂದು ಕರೆಯಲಾಗುತ್ತದೆ.

ಹತ್ತಿಕಂಕಣ ಕುರುಬರು ಮದುವೆಗೆ ಸಿದ್ಧವಾಗಿರುವ ಹುಡುಗನಿಗೆ ಕನ್ಯೆಯನ್ನು ನೋಡುವುದಕ್ಕೆ ಮುಂಚೆ ಕೆಲವು ಸಂಪ್ರದಾಯಗಳನ್ನು ಆಚರಿಸುತ್ತಾರೆ. ಈ ಆಚರಣಾ ವಿಧಿಗೆ ‘ಮನೀರ್ಲು’ ಎಂದು ಕರೆಯುತ್ತಾರೆ. ಬಲಿಕೊಟ್ಟು ಕುರಿಯ ರಕ್ತವನ್ನು ಮದುವೆಯಾಗಲಿರುವ ಹುಡುಗನ ಗಣೆಗೆ ಹಚ್ಚುವ ವಿಧಿ ಇದಾಗಿದೆ. ಇದಾದ ನಂತರ ಕನ್ಯೆಯು ತಮ್ಮ ಬಳಗದಲ್ಲಿರಲಿ ಬೇರೆ ಬಳಗದ ಹೆಣ್ಣಾಗಿರಲಿ ತಂದುಕೊಳ್ಳಬೇಕೆಂಬ ಮನಸು ಮಾಡಿದರೆ ಐನೋರಿಂದ ಜೋತಿಷ್ಯ ಕೇಳಿಸಿ ಆನಂತರ ಮೂರಕ್ಕಿಂತ ಹೆಚ್ಚು ಜನ ಹೋಗಿ ಕನ್ಯೆಯನ್ನು ನೋಡಿಕೊಂಡು ಬರುತ್ತಾರೆ. ಅದಕ್ಕೆ ದಾರಿ ಶಕುನ ಅತೀ ಮುಖ್ಯ. ಶುಭ ಅಶುಭ ಶಕುನಗಳಲ್ಲಿ ಅಶುಭ ಶಕುನಗಳೇನಾದರೂ ಆದರೆ ಹೆಣ್ಣು ನೋಡುವ ಶಾಸ್ತ್ರ ನಿಲ್ಲಿಸುತ್ತಾರೆ.

ಹೆಣ್ಣಿನ ಲಕ್ಷಣ ಪರೀಕ್ಷೆ ನಡೆಸುವಾಗಲೂ ಗಂಡಿನವರಿಗೆ ಒಪ್ಪಿಗೆಯಾದರೆ ಅದೇ ದಿನ ಕೊಬ್ಬರಿ ಹೋಳು, ಉತ್ತುತ್ತಿ, ಕಲ್ಲುಸಕ್ಕರೆ, ಎಲೆಅಡಿಕೆ, ಬಾಳೆಹಣ್ಣುಗಳಿಂದ ಹೆಣ್ಣಿನ ಉಡಿಯನ್ನು ತುಂಬುತ್ತಾರೆ. ಹೆಣ್ಣಿನವರು ವರನ ಮನೆಗೆ ಬಂದಾಗ ಅಲ್ಲಿ ವಧುವನ್ನು ಲಕ್ಷಣ ಪರೀಕ್ಷೆ ಈಡು ಮಾಡಿದಂತೆ ಗಂಡನ್ನು ಪರೀಕ್ಷಿಸುವುದಿಲ್ಲ. ಗಂಡಿನ ಮನೆತನ ಒಪ್ಪಿತವಾದರೆ ಮಾತುಕತೆ ಆಡಿಮುಗಿಸುತ್ತಾರೆ. ಈ ಮಾತುಕತೆಗಳೆಲ್ಲ ಹೆಣ್ಣಿನವರು ಗಂಡಿಗೆ ಕೊಡಬಹುದಾದ ವಸ್ತುಗಳಿಗೆ ಸಂಬಂಧಿಸಿದ್ದಾಗಿರುತ್ತದೆ. ಇದಾದ ಸ್ವಲ್ಪ ದಿನಗಳಲ್ಲಿಯೇ ನಿಶ್ವಯ ಕಾರ್ಯ ಜರುಗುತ್ತದೆ. ಒಪ್ಪಿಗೆಯ ಸಿಹಿ ಊಟವನ್ನು ಉಂಡ ನಂತರ ಗಂಡಿನ ಕಡೆಯವರು ಒಳ್ಳೆಯ ದಿನ ನೋಡಿ ಕನ್ಯೆಯ ಮನೆಗೆ ಹೋಗಿ ವೀಳ್ಯ ತಿದ್ದಿ ನಿಶ್ಚಯ ಕಾರ್ಯಮಾಡುತ್ತಾರೆ. ಈ ನಿಶ್ಚಯ ಕಾರ್ಯವಾದ ಮೇಲೆ ಗಂಡಿನವರಾಗಲಿ ವಧುವಿನ ಕರೆಯವರಾಗಲಿ ಈ ಸಂಬಂಧವನ್ನು ಮುಡಿಯಬಾರದು.

ಮದುವೆಗೆ ಮುಂಚೆ ಐದು ಅಥವಾ ಒಂಭತ್ತು ದಿನ ಮುಂಚಿತವಾಗಿ ವರನ ಮನೆಯಲ್ಲಿ ಲಕ್ಷ್ಮೀ ಪೂಜೆ ನಡೆಯುತ್ತದೆ. ಆ ದಿನ ಮನೆಯಲ್ಲಿ ಎಲ್ಲರೂ ಶುಚಿರ್ಭೂತರಾಗಿ ತುಂಬಿದ ಬಿಂದಿಗೆಯನ್ನು ಬಂಗಾರದಿಂದ ಅಲಂಕರಿಸಿ ಅದರ ಮುಂದೆ ಲಕ್ಷ್ಮೀ ಸೀರೆ ತಾಂಬೂಲಿಟ್ಟು ಪೂಜಿಸುತ್ತಾರೆ. ಹೀಗೆ ಪೂಜಿಸುವ ಬಿಂದಿಗೆಯೇ ಲಕ್ಷ್ಮೀಯಾಗಿರುತ್ತದೆ. ಲಕ್ಷ್ಮಿ ಪೂಜೆಯ ಮರುದಿನವೇ ಲಗ್ನ ಕಟ್ಟುವ ಆಚರಣೆ, ಈ ಕಾರ್ಯಕ್ಕೆ ಐನೋರು, ಕುಲದ ಹಿಡಿಯರು, ಪೂಜಾರಿಗಳು ಸೇರುತ್ತಾರೆ. ಪುರೋಹಿತರು ಕೈಯಿಂದ ಬರೆಸಿದ ಲಗ್ನ ಪತ್ರಿಕೆಯನ್ನು ಕುಳಿತ ಸಭೇ ಎದುರಿಗೆ ಓದಿ ನಂತರ ಅರಿಶಿನ ಕುಂಕುಮ ಹಚ್ಚಿ ಪೂಜಿಸುತ್ತಾರೆ. ಲಗ್ನ ಪತ್ರಿಕೆಯಾದ ಮೇಲೆ ಕನ್ಯೆಯ ಮನೆಯಲ್ಲಿ ತುಪ್ಪದ ಊಟ ನಡೆಸಿದರೆ, ಹೆಣ್ಣಿನ ಮನೆಯಲ್ಲಿ ತುಪ್ಪದ ಊಟ ಮುಗಿಸಿಕೊಂಡು ವಾಪಸ್ಸು ಬಂದ ಮಾರನೆಯ ದಿನವೇ ಗಂಡಿನ ಮನೆಯಲ್ಲಿ ದೇವರೂಟ. ದೇವರೂಟ ಯಾವಾಗಲು ತಾಳಿಕಟ್ಟುವ ಹಿಂದಿನ ದಿವಸ. ಇದು ನಿಯಮ. ಊರಿನ ಹಿರಿಯರನ್ನು ಕರೆದು ಊಟ ಹಾಕಿದರೆ ದೈವಸಮಾನ ಎಂಬ ಭಾವನೆ ಇರಬಹುದು. ದೇವರ ಊಟದ ದಿನವೇ ಮುತ್ತೈದೆಯರ ಪೂಜೆ. ಇದಕ್ಕೆ ಗೌರಿಪೂಜೆ ಎನ್ನಲಾಗುತ್ತದೆ.

ಮದುವಣಿಗೆ ಶಾಸ್ತ್ರ ದಿನ ಗಂಡು ಹೆಣ್ಣಿನ ಊರಿಗೆ ಬಂದರೆ ಗಂಡು ಊಳಿದುಕೊಳ್ಳಲು ಬಿಡದಿ ಮನೆ ನೀಡುವುದು. ಕಂಕಣ ಕಟ್ಟುವಿಕೆಯೊಂದಿಗೆ ನಿಜವಾದ ಆಚರಣೆಗಳು ಆರಂಭವಾಗುತ್ತವೆ, ಕುಲದ ಪೂಜಾರಿಗಳು ವೀಳ್ಯೆದೆಲೆ ಮತ್ತು ಅರಿಶಿನ ಕೊನೆಯಿಂದ ಹತ್ತಿದಾರ ಉಪಯೋಗಿಸಿ ಕೈಗೆ ಕಟ್ಟುವ ಕಂಕಣವನ್ನು ತಯಾರಿಸುತ್ತಾರೆ. ಇವುಗಳನ್ನು ಈ ಲಗ್ನ ಕಾರ್ಯದಲ್ಲಿ ನಿರತರಾಗುವ ಕಾರ್ಯಕರ್ತರುಗಳಾದ ಮುತ್ತೈದೆಯರು ಮತ್ತು ಗಂಡು ಮಕ್ಕಳ ಬಲಗೈಗೆ ಕಟ್ಟುತ್ತಾರೆ. ಈ ಕಂಕಣ ಕಟ್ಟಿಸಿಕೊಳ್ಳುವವರು ಗಂಡಿನ ಕಡೆಯವರೆ ಆಗಿರುವುದು ರೂಢಿ. ಕಂಕಣ ಕಟ್ಟಿಸಿಕೊಂಡ ಇಬ್ಬರು ಹೆಣ್ಣು ಮಕ್ಕಳು ಇಬ್ಬರು ಗಂಡಸರು ಐನೀರು ತರುವುದು ನಂತರ ಮನೆಮುಂದಿನ ಕೆಳಗೆ ನೀರು ತುಂಬಿ ತಂಡ ಕೊಡಗಳನ್ನು ಇಟ್ಟುಕೊಂಡು ಅಲ್ಲಿಯೇ ಕುಳಿತುಕೊಳ್ಳಬೇಕು. ಆ ನಾಲ್ಕೂ ಕೊಡಗಳಿಗೆ ಹತ್ತಿ ನೂಲಿನಿಂದ ಐದು ಸುತ್ತ ಸುತ್ತುತ್ತಾರೆ. ಇದಕ್ಕೆ ಸುರಿಗೆ ಸುತ್ತುವುದು ಎನ್ನಲಾಗುತ್ತದೆ.

ಇದಾದ ನಂತರ ಮೀಯುವ ಶಾಸ್ತ್ರ. ದೇವರ ಕೋಣೆಯಲ್ಲಿ ಬಾಸಿಂಗ ಕಟ್ಟುವುದು. ತಾಳಿ ಕಟ್ಟುವ ಮುಹೂರ್ತ ಮೊದಲೇ ನಿಗಧಿಯಾಗಿರುತ್ತದೆ. ಉಣ್ಣೆಕಂಕಣ ಕುರುಬರ ಆಚರಣೆಗಳಲ್ಲಿ ಒಡೆಯರನ್ನು ಬಿಟ್ಟರೆ ಬೇರೆ ಯಾರಿಂದಲೂ ಮೂಡಿಸುವಂತಿಲ್ಲ. ಆದರೆ ಹತ್ತಿ ಕಂಕಂಣ ಕುರುಬರಲ್ಲಿ ಪುರೋಹಿತರು ಪ್ರಮುಖ ಪಾತ್ರ ವಹಿಸುತ್ತಾರೆ.

ಮನೆಯ ತಲೆ ಬಾಗಿಲಿನಲ್ಲಿ ನೆಟ್ಟಿದ್ದ ಸಣ್ಣ ಚಪ್ಪರದ ಕೆಳಗೆ ಬಲಭಾಗದಲ್ಲಿ ಒಂದು ತೂರುವ ತಟ್ಟಿಯಲ್ಲಿ ಜೋಳದ ಹಕ್ಕಿಯನ್ನು ಇಡುತ್ತಾರೆ. ಮತ್ತೊಂದೆಡೆಯಲ್ಲಿ ತಪ್ಪರದ ಎಡಭಾಗದಲ್ಲಿ ಬೀಸುವ ಕಲ್ಲನ್ನು ಇಟ್ಟಿರುತ್ತಾರೆ. ತೂರುವ ತಟ್ಟಿಯಲ್ಲಿ ವರನನ್ನು ಬೀಸುವ ಕಲ್ಲಿನಲ ಮೇಲೆ ವಧುವನ್ನು ನಿಲ್ಲಿಸುತ್ತಾರೆ. ಇಷ್ಟಾದ ಮೇಲೆ ಪುರೋಹಿತರು ಸಂಸ್ಕೃತ ಶ್ಲೋಕ ಪಠಿಸಿ ಮಾಂಗಲ್ಯ ಕಟ್ಟಿಸುತ್ತಾರೆ.

ಹತ್ತಿಕಂಕಣ ಆಹಾರ ಪದ್ಧತಿಯನ್ನು ಗಮನಿಸಿದರೆ ಇವರು ಹೆಚ್ಚು ಶಾಖಾಹಾರಿಗಳು. ಕಾರಣ ಲಿಂಗಾಯತ ಧರ್ಮದ ಪ್ರಭಾವಕ್ಕೆ ಒಳಗಾಗಿರಬಹುದು. ಕಡಿಮೆ ಮಾಂಸಾಹಾರಿಗಳಾಗಿ ಕಂಡುಬರುತ್ತಾರೆ. ತುಮಕೂರು ಜಿಲ್ಲಾ ಸಿರಾ ತಾಲೂಕಿನ ಕೆಲವು ಪ್ರದೇಶಗಳಲ್ಲಿ ಕಂಡುಬರುವಂತೆ ಹತ್ತಿಕಂಕಣ ಕುರುಬರಲ್ಲಿ ಮದುವಣಿಗೆ ಶಾಸ್ತ್ರದ ದಿವನ ಮದುವೆಯ ಮುಂಚೆ ಅಂದರೆ ಒಂಬತ್ತು ದಿನ ಮುಂಚೆ ಗೋಧಿ, ಹತ್ತಿಕಾಳು, ರಾಗಿಯನ್ನು ನೆನೆಹಾಕಿ ಮೊಳಕೆ ಬಂದ ಧಾನ್ಯಗಳನ್ನು ಗಂಗಾಪೂಜೆ ಮಾಡುವ ಮೂಲಕ ಧಾನ್ಯಗಳ ಪೂಜೆಯನ್ನು ವಧುವಿನ ಕೈಯಲ್ಲಿ ಮಾಡಿಸುವ ವಿಶೇಷ ಆಚರಣೆಯೊಂದು ಕಂಡುಬರುವುದು ಈ ಪ್ರದೇಶದ ವೈಶಿಷ್ಟ್ಯ. ಇದು ಮುಂದೆ ವಂಶಾಭಿವೃದ್ಧಿಯ ಸಂಕೇತವೆನಿಸುತ್ತದೆ.

ಹಬ್ಬ-ಹರಿದಿನಗಳ ಹಿನ್ನೆಲೆಯಲ್ಲಿ ಅವಲೋಕಿಸಿದಾಗ ಈ ತಾಲೂಕಿನಲ್ಲಿ ಮಾತ್ವೇ ಕಂಡುಬರುವ ಗೌರಮ್ಮ ಕೊಂತಮ್ಮ. ಇದನ್ನು ವಿಶೇಷವಾಗಿ ದೀಪಾವಳಿ ಆದ ಹದಿನೈದು ದಿನಗಳ ನಂತರ ಆಚರಿಸುವರು. ಮೊದಲನೆ ದಿನ ಗೌರಮ್ಮನನ್ನು ಪೂಜಿಸಿ ಸಿಹಿ ಅಡುಗೆ ಮಾಡಿದರೆ, ಎರಡನೆ ದಿನ ಮಾಂಸದೂಟವನ್ನು ಮಾಡಿ ನೆಂಟರಿಷ್ಟರನ್ನು ಆಹ್ವಾನಿಸಿ ಸಂಭ್ರಮಿಸುವರು. ಹತ್ತಿಕಂಕಣ ಕುರುಬರ ಮನೆಯ ಅಳಿಯಂದಿರು ಹೋದಾಗ ಆತನನ್ನು ಕುರಿತು ಹಾಡುಗಳನ್ನು ಕಾಡಿ ಕಳುಹಿಸುತ್ತಾರೆ. ಇದು ಬೇರೆ ಎಲ್ಲಿಯೂ ಕಾಣದಿರುವ ಸಂಗತಿಯಾಗಿದೆ.

ತುರುವೇಕೆರೆ ತಾಲೂಕಿನ ದಂಡಿನಶಿವರದ ಹತ್ತಿಕಂಕಣ ‘ಹರಿಣಿ’ ಮದುವೆ ಎಂಬ ಆಚರಣೆಯು ರೂಢಿಯಲ್ಲಿದ್ದು, ಇದರ ವೈಶಿಷ್ಟವೆಂದರೆ ಎಲ್ಲ ಮದುವೆ ಶಾಸ್ತ್ರಗಳನ್ನು ವಿಧವೆಯರು ನೆರವೇರಿಸುತ್ತಾರೆ. ಧಾರೆ ಮಹೂರ್ತದ ಚಪ್ಪರಕ್ಕೆ ಇವರು ಕಳ್ಳಿಕಡ್ಡಿ ಮತ್ತು ಹತ್ತ ಟೊಂಗೆಯನ್ನು ಕಟ್ಟುವ ಮೂಲಕ ಗಂಡು ಹೆಣ್ಣಿನ ಕೈಗಳಿಗೆ ಹಾಲು ಹಾಕಲಾಗುತ್ತದೆ. ಈ ಆಚರಣೆ ಮತ್ತೆಲ್ಲಿಯೂ ಕಂಡುಬರದು. ಒಟ್ಟಿನಲ್ಲಿ ಕುರುಬ ಸಮುದಾಯದಲ್ಲಿ ಹತ್ತಿಕಂಕಣ ಕುರುಬರದು ಪ್ರಮುಖವಾದ ಉಪಪಂಗಡವಾಗಿದೆ.

ಗ್ರಂಥ ಋಣ

೧. ಕುರುಬರ ಹೆಜ್ಜೆಗಳು, ಚಂದ್ರಕಾಂತ ಬಿಜ್ಜರಗಿ.

೨. ಕುರುಬರ ಗುರು ಒಡೆಯರು, ಡಾ. ಎಫ್. ಟಿ. ಹಳ್ಳಿಕೇರಿ.

೩. ಯಡೆಕುಂಟೆ ಗೆಣೆಸಾಲು, ಪೊ. ಎಸ್. ಜಿ. ಸಿದ್ದರಾಮಯ್ಯ.

೪. ಹೊಳೆದಂಡೆ ಕರಿಕೆ, ಡಾ. ಚಿಕ್ಕಣ್ಣ ಯಣ್ಣೆಕಟ್ಟೆ.